ಅದ್ಯಾಕೋ ಬರೆ ಉಮ್ಮಳಿಕೆಗಳೇ ಬರಾಕತ್ತ್ಯಾವು. ಮಗ-ಸೊಸೆ ಯವ್ವಾ ಊಟಕ್ಕ ಬಾ ಅಂತ ಕರಿಯಾಕತ್ತಾರ. ಆದ್ರೂ ಊಟ ಮಾಡಾಕ ಮನಸ್ಸs ಬರಾಕತ್ತಿಲ್ಲ. “ತರಾಸು ತರಾಸು ಅಂತ ಮಲಗೆ ಇರ್ತಿಯಾ. ಸುಮ್ನ ಮಲಕೊಂಡಾದ್ರೂ ಇರ್ತಿಯಾ? ಅದು ಇಲ್ಲಾ. ದಿನಾ ತುಂಬಿದ ಹೆಂಗ್ಸಿನಂಗ ಏಳೂದು, ಕೂಡೂದು, ಮಲಗೋದು ಮಾಡ್ತೀಯಾ. ವಯಸ್ಸ್ನಾಗ ಹಾಡ್ಕಿ ಅಂತ ತಿನ್ನಲಿಲ್ಲ. ಈಗ್ಲಾದ್ರೂ ತಿನ್ನವ್ವ ಅಂದ್ರ ಆಗೂದಿಲ್ಲ ಅಂತಿಯಾ. ತಿಳಿದಕ್ಯಾಗಿ ನೀ ನಮ್ಗ ಬುದ್ದಿ ಹೇಳ್ಬೇಕು. ನೀನs ಸಣ್ಣ ಪಾರಾಗಳಂಗ ಮಾಡಾಕತ್ತಿದ್ರ ನಂಗಂತೂ ದಿಕ್ಕ ಕಾಣಂಗಿಲ್ಲ ನೋಡವ್ವಾ” ಹಿಂಗs ದಿನಾಲೂ ರಮೇಶ ಅಂತಿರತಾನ. ಅಂವಗ ನನ್ನ ಸಂಕಟಾ ಏನs ಗೊತ್ತೈತಿ. ಮೊನ್ನಿ ಮೊನ್ನಿ ಇವ್ನ ಕಾಟಕ್ಕ ಹತ್ತಿಕಾಯಿ (ಈರುಳ್ಳಿ ಬಜ್ಜ) ಚೂಡಾ (ಒಗ್ಗರಣೆ ಹಚ್ಚಿದ ಒಣ ಮಂಡಕ್ಕಿ) ತಿಂದದ್ದಕ್ಕ ಎಂಥಾ ಅನೂಲಿ ಅನುಭವಿಸಿದ್ಯಾ? ಹೊಟ್ಟಿ ತೊಳ್ಸಿದ್ಹಂಗ ಆಗ್ತಿತ್ತು. ಇಲ್ಲೆ ಎಲ್ಲಾರು ಕುಂತು ಹೊಟ್ಟಿ ಹಗುರ ಮಾಡ್ಕೊಳ್ಳಾನ ಅಂದ್ರ ಎಲ್ಲಾ ರಂಗ ನಂಗ ಕೊಕ್ಕರ‍್ಲೆ (ಕೊಕ್ಕರೆ ಪಕ್ಷಿಯ ಹಾಗೆ) ಕೂಡಾಗ ಬರಲ್ಲ. ಅದಕ್ಕಂತ ಹೆಣ್ಣ ಮಕ್ಳು, ಗಂಡಮಕ್ಕ್ಳು ಯಾರೂ ಕಾಣ್ಲಾರ‍್ದಂಗ ಮೂರ ಹರದಾರಿ ದೂರ, ಇದs ಸಂಕಟಾನ ಹೊಟ್ಟ್ಯಾಗ ತುಂಬಿಕೊಂಡು ಹೋಗಬೇಕಾಗೈತಿ. ನಿಂತ ಹಾಡ್ಕಿ ಮಾಡಿ ಮಾಡಿ ಕೂಡಾಕಾ ಬರ‍್ಲಾರ‍್ದಂಗಾಗೈತಿ. ಅದರಾಗ ಕೊಕ್ಕರ‍್ಲೆ ಕುಂತ ಸಂಡಾಸ ಮಾಡೂದು ಈ ಜನ್ಮಕ್ಕ ಆಗ್ಲಾರ‍್ದ ಕೆಲ್ಸ. ಹಂಗಂತ ಎಲ್ಲಾರೆದ್ರಿಗೆ ಸೀರಿ ಎತ್ಕೊಂಡು ಇಂತ ಮಾಡಾಕಾಗತೈತಾ? ಅನ್ನಾಕಾಗಲ್ಲ, ನುಂಗಾಕಾಗಲ್ಲ. ಅಂಥಾ ಸಂಕಟ ಹಾಡ್ಕಿ ಹೆಣ್ಣಮಕ್ಕಳ್ದು. ಹಾಡ್ಕಿ ಹಾಡೂದಂದ್ರ ಹೊಲದಾಗಿನ ಕಳೆ ಕಿತ್ತಿದಂಗಂತ ಮಗಾ ಅನ್ಕೊಂಡಾನು. ಹಾಡ್ಕಿಗಿ ನಾನ ಏಟ ಪತಾ ತೆಗೆದನು ಏನೇನ ಕಳಕೊಂಡೇನಿ ಅಂತ ಅವನಿಗೇನು ಗೊತ್ತೈತಿ?

ನಮ್ಮವ್ವರ, ನಮ್ಮಪ್ಪರ ಇದ್ದಿದ್ದರ ಆಟು ಇಟು ಪ್ರೀತಿ ಸಿಗತಿತ್ತೇನೋ? ನನ್ನ ಹಾಡು ನಾಯಿ ಪಾಡು ಆಗ್ತಿರ್ಲಿಲ್ಲ. ದೇವಿಗಿ ಬಿಟ್ಟದಂತ ಹಾಡ್ಕಿಗಿ ಕಲಿಯಾಕ ಗುರುಗೋಳ ಮನಿಯಾಗಬಿಟ್ಟ್ರು. ಗುರುವಿಗೆ ಕೊಡಾಕ ಪಗಾರ ಇರ್ಲಿಲ್ಲ. ಅವ್ನ ಹೊಲಾ ಮನಿ ದಗ್ದಾ ಮಾಡಿ ಕಲ್ತರಾತು ಅಂತ ಹೋಗಿದ್ನಿ. ಹಾಡ್ಕಿ ವ್ಯಾಳಾ ಬಿಟ್ಟ ಅಲ್ಲಾ ವ್ಯಾಳಾದಾಗ ಹಗಲು ರಾತ್ರಿ ಕತ್ತೆ ದುಡ್ಡಂಗ ದುಡಿದ್ರೂ ಅದು ಅಂವಗ ದುಡಿಕಿ ಅಲ್ಲ ಅಂತ. ದೊಡ್ಡೆಕಿ ಆಗಿ ಮೂರು ಮುಟ್ಟು ಆಗಿತ್ತಷ್ಟs. ದಿನಾ ರಾತ್ರಿನೂ ನನ್ನ ತ್ವಾಳಾ ತಿಂದ ಹಾಕಿದ್ಹಂಗ ಹಾಕ್ತಿದ್ದಾ. ಯಾರ ಮುಂದsರ ಉಸರ ಬಿಟ್ಟ್ರ ಹಾಡ್ಕಿ ಕಲ್ಸೂದಿಲ್ಲಂತಿದ್ದಾ. ಹಸಿವಿನ ಸಂಕಟಾ ತಾಳ್ದ ಯಾವ್ದಾದ್ರೂ ಸೊಪ್ಪ ಕುದ್ಸಿ, ಅದ್ನ ಅಂಬಲಿ ಅಂತ ಕುಡದದ್ದನ್ನ ಹ್ಯಾಂಗ ಮರಿಯಾಕಾಗುತ್ತ? ತಿನ್ನು-ಉಣ್ಣು ಎಳಿ ವಯಸ್ಸಿನ್ಯಾಗ ಹಸ್ವಿ ಕಟ್ಟಿದ್ದ ಸಂಕಟಾ, ಇನ್ನs ಹಸ್ವಿನ್ಯಾಗ ಒದ್ದಾಡೋ ಅಣ್ಣ-ತಮ್ಮದೇರು, ತಂಗಿದೇರು ನೆಪ್ಪಾಗೋದು. ಈ ಎಲ್ಲಾ ಸಂಕಟಾ ನೆಪ್ಪಾಗಿ ರಾತ್ರಿ ಮುದಕ ಮನಿಷ್ಯಾ ಹಾಡ್ಕಿ ಕಲ್ಸು ಹೆಸರ‍್ಲೆ ನನ್ನ ಮ್ಯಾಗ ನಡ್ಸೊ ಅತ್ಯಾಚಾರ ನುಂಗಿಕೊಂಡಿದ್ನಿ. ಇದರ ಮ್ಯಾಗ ಗುರು ನಮ್ಮಜ್ಜಿ ಜೋಡಿ ಮಾತಾಡಿದಂಗ ನಾಕ ವರ್ಷ ನನ್ನ ಹಾಡ್ಕಿಗಿ ಬಂದ ಭಕ್ಷೀಸು ತಗೊಂಡಾ. ಹಾಡ್ಕಿಗಿ ಹೋದಲ್ಲಿ ಚಾರು-ಚೂರು ಕೊಟ್ಟ ಪಗಾರಾನೂ ಕಿತಕೊಂಡಾ.

ಹಾಡ್ಕ್ಯಾಗ ನನ್ನ ಹೆಸರ ಬರಾಕತ್ತಿಂದ ಅಜ್ಜಿ ಮನಿಗಿ ಕರಕೊಂಡ ಬಂತು. ಒಬ್ಬ ಅಣ್ಣಾ, ಸುರುತಿ ಬಾರ‍್ಸೋದು ಕಲ್ಕೊಂಡಿದ್ದಾ. ಅಜ್ಜ ತಾಳಾ ಹಾಕ್ತಿದ್ದಾ. ಹಾಡ್ಕಿ ಶುರು ಹಾಚ್ಕೊಂಡ್ಯಾ. ಹಾಡ್ಕಿಗಿ ಕರ‍್ದ ಗಣಸೂರು ಥೇಟ ಹುಚ್ಚ ಮಾಡಿದಂಗ ಮಾಡ್ತಿದ್ವು. ಹಾಡ್ಕಿ ಚಂದಾತು ಅಂತ ಯಾವ ಗೊಳ್ಳ ಒಗಿತಿದ್ವೊ! ಪೆಪ್ಪರಮಂಟಾ ಹಾರಿಸ್ತಿದ್ವೊ! ಚುರಮರಿ ಸುರಿತಿದ್ವೊ! ಹಾಡ ಚಂದಾತು ಅಂತ ಮಕಕ್ಕೆಲ್ಲಾ ಗುಲಾಲ ಹಚ್ಚತಿದ್ವು. ಕೆಲವೊಂದು, ಜಂಪರ‍್ಗಿ ನೋಟ ಸಿಗಸಾಕ ಬಂದಂಗ ಮಾಡಿ ಎದಿಗಿ ಕೈ ತಾಗ್ಸಿ ನಗತಿದ್ವು. ರಾತ್ರಿ ಒಂದಕ್ಕ ಯಾರೂ ಇಲ್ದ ಜಾಗಾ ಅಂತ ಹೋದ್ರೆ, ಎಲ್ಲಿರ್ತಿದ್ವೊ ಏನೋ ನೀಚ ಗಣಸೂರು, ಅಲ್ಲೂ ಮೈಮ್ಯಾಲ ಬಂದ ಬಿಳ್ತಿದ್ವು. ಮನ್ಯಾಗಿನ ಹಸ್ವಿನ ಸಂಕಟಾ ಇವ್ನೆಲ್ಲಾ ತಡಕೊಳ್ಳುವಂಗ ಮಾಡ್ತಿದ್ವು. ಕೊಟ್ಟ-ಕೊಂಡ ಹೆಣಮಕ್ಕಳ ಖರ್ಚು ಹಂಗs ಇರ್ತಿತ್ತು. ಮದಿವಿಯಂತ, ಬಸರಂತ, ಹಡಿಯೂದಂತ, ಬಾಣಂತೆಂತ, ಹೆಸರ ಇಡೂದಂತ, ಹೀಂಗs ಒಂದಿರ‍್ಹಿಂದ ಒಂದ ಖರ್ಚ ಇದ್ದs ಇರೂದು. ಇದರಾಗ ನಾನು ಹೊಟ್ಟಿಲಾದ್ನಿ. ನಾ ಮನಿಯಾಗ ಕುಂತ್ರ ನಡಿಯಾದಿಲ್ಲಂತ ನಿಂದ್ರಾಕಾಗ ಲಾಕಂದ್ರೂ ದಿನಾ ತುಂಬುತನಾ ಹಾಡ್ಕಿ ಮಾಡೇನಿ. ಎಲ್ಲಾರ‍್ಹಂಗ ನಾನು ಅಸರ ಅದಿನಿ, ಬಾಣಂತಿ ಅದೆನಿ ಅಂತ ಕೂಡಾಕ ಆಗಲ್ಲ. ರಗತದ ಕಣ್ಣಿಯಂಗಿದ್ದ ಕೂಸುಗಳ್ನ ಹಂಗs ಉಡಿಯಾಗ ಕಟಗೊಂಡ ಹಾಡ್ಕಿಗಿ ಹೋಗ್ತಿದ್ದ್ಯಾ. ಬೆಂಕಿ ಬಿಸ್ನೀರು ಅನ್ನೂದ ಗೊತ್ತ ಆಗ್ಲಿಲ್ಲ. ಈ ವ್ಯಾಳಾದಾಗ ಸೂರ ತಗದ ಹಾಡಬೇಕಿದ್ರ ಹೊಟ್ಟಿ ಎಷ್ಟ ನೂಸ್ತಿತ್ತು? ಬಸಿರಿದ್ದಾಗ ಬಾಣ್ತೆಯಿದ್ದಾಗ ಕಂಡಂಗ ಹಸ್ವು ಆಗೋದು. ಹೊಟ್ಟ್ಯಾಗ ಹೆಗ್ಗಣ ಗೆಬರಿದ್ಹಂಗ ಆಗೂದು. ಈ ಸಂಕಟಾ ನಂಗs ಗೊತ್ತು, ಪರಮಾತ್ಮಗs ಗೊತ್ತು. ನನ ಕೂಟಾ ನನ್ನ ನಾಕೂ ಮಕ್ಕ್ಳೂ, ಅನೂಲಿ (ಕಷ್ಟ) ಸೊಸ್ಯಾವು. ಒಂದಿವ್ಸ ಮಕ್ಕಳರ್ನ ಪಿರೂತಿ ಮಾಡಾಕ ಆಗ್ಲಿಲ್ಲ. ದಣಿಕಿ ಅನ್ನೂದು, ಮಲಗೋದು.

ಜಾತ್ರಿ, ತಿಥಿ ಇಂಥಲ್ಲೆಲ್ಲಾ ಹಾಡಾಕ ಹೋದಾಗ ಹೋಳಿಗಿ, ಹುಗ್ಗಿ ಇರೋದು. ಹಪ್ಪಳಾ ಸಂಡಗಿನೂ ಇರೋದು. ಖೋಡಿ ಜೀವಕ್ಕ ತಿನ್ನಬೇಕಂತ ಆಸೆ ಆಗೂದು. ಇವ್ನೆಲ್ಲಾ ತಿಂದ್ರ ಸೂರ ಕೆಡ್ತದ ಅಂತಿದ್ರು. ಸಣ್ಣವರಿದ್ದಾಗ ಹೋಳಿಗಿ, ಹುಗ್ಗಿ, ಹಪ್ಪಳಾ, ಸಂಡಗಿ, ಹಣ್ಣು ಎಲ್ಲಾ ನಮಗ ಕನಸಾಗಿದ್ವು. ಈಗ ಅವು ಎದುರಿದ್ರೂ ತಿನ್ನುವಂತಿಲ್ಲ, ಎಂಥಾ ಖೊಟ್ಟಿ ಜನ್ಮ ನೋಡು ನಮ್ಮದು.

ಹಾಡ್ಕಿ ಬಿಟ್ಟು ಕೂಲಿಗಿ ಹೋಗುನು ಅಂದ್ರ, ಅದೂ ಒಗ್ಗೂದಿಲ್ಲ ಈ ಜನ್ಮಕ್ಕ. ಬಿಸ್ಲಿಗಿ ಹೋದ್ರ ತ್ರಾಸ ಆಗ್ತೈತಿ. ಕೆಲ್ಸಕ್ಕ ಹೋದ್ರ ತೇಕ ಹತ್ತತ್ತ. ಹೊಲ-ಮನಿ ಕೆಲ್ಸಾ ಎಲ್ಲನೂ ಕೊಕ್ಕರ‍್ಲೆ ಕುಂತ ಮಾಡ್ಬೇಕು. ಇಲ್ಲಾ ಬಗ್ಗಿ ಮಾಡ್ಬೇಕು. ದಪ್ಪ ಬಡ್ದ ಬಡ್ದ ಎರಡೂ ಕೈಯಾ, ಹೆಡಕಾ (ಕತ್ತಿನ ಹಿಂಭಾಗ) ಟ್ಟೀ… ಟ್ಟೀ… ಅಂತ ಮೀಟತಿರತಾವು. ನಡ ಸೂಲಿ, ಹೊಟ್ಟಿ ಸೂಲಿ, ಕಾಲ ಸೂಲಿ ಇರ್ತದ. ಇದರಾಗ ತ್ರಾಸ ತಗೊಂಡು ದುಡದ್ರೂ ಸಿಗೋ ಕೂಲಿ ಎಷ್ಟು? ಹಾಡ್ಕಿಯಂಗ ಕೈತುಂಬಾ ಪಗಾರ ಬರಾಂಗಿಲ್ಲ. ಹೊಲ-ಮನಿ ಕೂಲಿ ನಂಬಿದ್ರ ನಮ್ಮ ಮಕ್ಕ್ಳು ಹಸ್ವಿನಿಂದ ಸಾಯ್ಬೇಕಾಗ್ತೈತಿ.

ಇಷ್ಟೆಲ್ಲಾ ಸಂಕಟದಾಗೂ ಕೆಲ್ವು ಖುಷಿ ಕೊಡೋ ಇಚಾರಾನ್ನ ಎದಿಗೂಡಿನ್ಯಾಗ ಬಚ್ಚಿ ಇಡ್ಕೊಂಡೇನಿ. ಹಾಡ್ಕಿಗಿ ಹೋದಾಗ ಕೆಲವೂರಾಗ ಚೇರಮನ್‌ರ್ದು, ಗೌಡರ್ದು ಕಾಟಾ ನಮಂಥಾ ಹೆಣ್ಣ ಮಕ್ಕಳಿಗಿ ಇದ್ದದ್ದ. ಅಂಥವ್ರಿಗಿ “ನೀವು ಕೊಡು ರೊಕ್ಕರೂಪಾಯಿ ಬ್ಯಾಡಾ, ಹೊಲಾಮನಿ ಬ್ಯಾಡಾ, ಸರಸೋತಿ ಹೆಸರ‍್ಲೆ ಪ್ರಸಾದ ತಿನ್ನು ಭಾಗ್ಯ ಸಿಕ್ಕೈತಿ ನಂಗ. ಊರಿಗಿ ಏಣರ ಸಾಲಿಗಿಲಿ ಕಟ್ಟಿಸ್ತಿದ್ರ ಹೇಳ್ರಿ. ನನ್ನ ಶಕ್ತಿಯಿದ್ದಷ್ಟ ದೇನಗಿ ಕೊಡ್ತೇನು” ಅಂತಿದ್ನಿ. ಹಂಗ ಅಂದಾಗ ಅವ್ರ ಮುಖಾ ಹೆಂಗಾಗಿತ್ತು? ಬ್ಯಾಸ್ಗಿ ಬಿಸಿಲಾ! ಮ್ಯಾಲ ನನ್ನ ಮಾತಿನ ಪೆಟ್ಟಾ! ಮಾನಗೇಡ್ಯಾಗಿ ಬೆವ್ರು ಇಳ್ಸಿಕೊಂಡು ಹೋಗ್ತಿದ್ರು. ಇದ್ಕೂ ಬಗ್ಗಲಾರ‍್ದವ್ರಿಗಿ ಚಪ್ಪಲಿ ತೋರ‍್ಸೇವಿ. ಆಗ ಥೇಟ ಊರ ಹೊರ‍್ಗಿನ ಹನುಮಂತಪ್ಪನ ಮಖಾ ಆಗಿತ್ತು ಅವ್ರದು. ತಮಗಷ್ಟ ಮಾನಾ ಮರ್ಯಾದಿ ಐತಿ ಅನ್ಕೊಂಡಿದ್ರು. ನಮ್ಗೂ ಇಜ್ಜತ ಅನ್ನೂದು ಇರ‍್ತೈತಿ ಅಂತ ತಿಳಿಸಿ ಕಳ್ಸೇನು. ಊರಿಗೆ ಉಪದೇಶಾ ಮಾಡೋರ‍್ಗಿ ನಾನು ಉಪದೇಶಾ ಮಾಡಿದ್ದು ಸುಮ್ನ ಏನು? ಇಲ್ಲಾದದ್ದನ್ನ ಹೊರಗ ಹೇಳಿ ಮಾನಾ ತಗಿಬ್ಯಾಡವ್ವಾ, ಅಂತ ನನ್ನ ಕೈಮುಗಿದ್ದ ಹೇಳಿದ್ದು ಹ್ಯಾಂಗ ಮರಿಯಾಕ ಆಗತ್ತ? ನನ್ನ ಸಾಕಿದ ನಮ್ಮ ಆಯಿ ಮುತ್ತ್ಯಾನ ಹೂವಿನಂಗ ನೊಡ್ಕೊಂಡೇನಿ. ಇಟು ಇಟು ಕೋಳಿ-ಮರಿಯಂಗಿದ್ದ ತಂಗಿ-ತಮ್ಮಂದೆರ್ನ ಜ್ವಾಪಾನ ಮಾಡೇನಿ. ನಮ್ಮ ತಮ್ಮದೇರ್ದು, ತಂಗಿದೇರ್ದು ಅಷ್ಟs ಅಲ್ಲ, ನಮ್ಮ ಅಣ್ಣಂದೂ ನಾನs ಮದ್ವಿ ಮಾಡೇನಿ. ಅವ್ರ‍್ನಷ್ಟs ಅಲ್ಲ. ಅವ್ರಿಗುಟ್ಟಿದ ಮಕ್ಕಳ್ನ ಬೆಳಸೇನಿ. ಇವು ಒಮ್ಮೊಮ್ಮಿ ವಜ್ಜಿ ಅನ್ಸಿದ್ರೂ, ಮತ್ತೊಂದ ಗಳಿಗ್ಯಾಕ ಯಜಮಾನಿಕಿ ಖುಷಿ ಕೊಡ್ತಿದ್ವು. ಇಂಥಾ ಖುಷಿ ಕೊಡೋ ನೆಪ್ಪು ಇದಾವ. ಆದ್ರ ಬಾಳs ಕಮ್ಮಿ ಅದಾವು.

ಕೈಯಾಗ ರೊಕ್ಕ ಓಡಾಡ್ತಿದ್ರೂ ಮಕ್ಕಳಿಗೆ ಓದ್ಸಾಕ ಆಗ್ಲಿಲ್ಲ. ಹಾಡ್ಕಿ ಸಲ್ವಂದ ಊರಿಂದೂರಿಗೆ ಹಾರ್ಕೊಂಡು ಹೇಗೊ ಜಿವನಾ ನಮ್ದು. ಮಕ್ಕಳು ಕಲ್ತುವೊ ಬಿಟ್ಟವೋ ಎಲ್ಲಿ ನೋಡಾಕ ಆಗ್ತೈತಿ? ಎಲ್ಲಾರಂಗ ಚಂದಂಗ ಜೀವ್ನಾ ಮಾಡ್ಬೇಕಂತ ಹಾಡ್ಕಿಗಿ ಬಂದ್ಯಾ. ಗುಡ್ಡಾ ಸುತ್ತಿ ಮೈಲಾರ‍್ಕ ಬಂ‌ದ್ಹಂಗ ಹೊಡುಮಳ್ಳಿ ಅದs ಬಡತನದಾಗ ಬಂದ ಬಿದ್ದೇನಿ. ಹಾಡ್ಕಿಗಿ ಹೊಟ್ಟಿ ಕಟ್ಟಿ-ಕಟ್ಟಿ ಊಟಾ ಮಾಡ್ಲಾರ‍್ದಂಗ ಆಗೇನಿ. ಕೈ ಕಾಲೆಲ್ಲಾ ಬಳ ಬಳ ಅಂತಾವು. ಕುಂತ್ರೂ ನಿಂತ್ರೂ ಯಾವುದಕ್ಕು ಜೀಂವಾ ಸಮಾಧಾನ ಆಗೂದಿಲ್ಲ. ಹೊಡ್ಸಿಕೊಂಡ ಹಾವಿನ್ಹಂಗ ಹೊರಳಾಡಿ ಹೊರಳಾಡಿ ಸಾಯೂದು ತಪ್ಪುದಿಲ್ಲ. ಕಲಾ ಪೆನ್‌ಶನ್ ಕೊಡ್ಸತೀನಿ ಅಂತ್ಹೇಳಿ ಹತ್ತು ಸಾವಿರ ರೂಪಾಯಿ ಇಸ್ಕೊಂಡು ಹೋದಾಂವಾ ಅತ್ತ ಹ್ವಾದಾ. ಅದರ ಸಾಲಾ ಬಗಿಹರಿಸಾಕಂತ ನಿಲ್ಲಾಕಾಗ್ಲಾಕಂದ್ರೂ ಹಾಡ್ಕಿ ಮಾಡ್ಬೇಕಾಯ್ತು. ದಪ್ಪ ನೋಡಿದ್ಕೂಡ್ಲೆ ಹಾಡ್ಕ್ಯಾಗಿನ ಸಂಕಟಗಳು ದೆವ್ವಗಾಳಿ ಬಂದ್ಹಂಗ ಬರ್ತಾವು.

ಊರಾಗಿನ ಹಿರೇರು, ನಮ್ಮ ಜನಾ ಹಾಡ್ಕಿ ಸಕ್ಕೂಬಾಯಿ ಬಂದ್ಲು ಅಂತ ಮರ್ಯಾದಿ ಕೊಡ್ತಾರು. ಇದು ಬ್ಯಾಸ್ಗಿ ಬಿಸ್ಲಾಗ ಬಾಯಾರಿ ಬಂದವರ್ಗೆ ಮಜ್ಗಿ ಕೊಟ್ಟಂಗ ಆಗ್ತಿತ್ತು. ಇಂಥಾ ನೆಪ್ಪ (ನೆನಪು) ಇನ್ನೂ ನನ್ನ ಜೀಂವಾ ಹಿಡ್ಕೊಳ್ಳುವಂಗ ಮಾಡ್ಯಾವು. ನಮ್ಮಂಥಾ ಹಾಡ್ಕಿಯವ್ರಿಗೆ ನಮ್ಮ ಸುಖಾ ಯಾವ್ದು, ಕಷ್ಟಾ ಯಾವ್ದು ಅಂತ ಕೇಳಿದ್ರ ಸುಖಾ ಅಂತ ಹೇಳಿದ್ದನ್ನ ಕಷ್ಟಾ ಅಂತ ಹೇಳ್ತೀರ‍್ತೀವಿ; ಕಷ್ಟ ಅಂತ ಹೇಳಿದ್ದನ್ನ ಸುಖಾ ಅಂತ ಹೇಳ್ತಿರ‍್ತೀವಿ.

ಇದು ಹಾಡಿಕೆ ಸಕ್ಕೂಬಾಯಿ ಒಬ್ಬಳ ಕಥೆಯಲ್ಲ, ಹಾಡಿಕೆಯಲ್ಲಿನ ಬಹುತೇಕ ಹೆಣ್ಣುಮಕ್ಕಳ ಕಷ್ಟ-ಸುಖದ ದ್ವಂದ್ವಗಳಿವು. “ದೇವದಾಸಿಯರಾಗಿದ್ದರೆ ಮರ್ಯಾದೆ ಇರಲ್ಲ, ಹಾಡಿಕೆ ಬನ್ನಿ” ಎಂದು ಗಂಡಸರೇ ಕರೆದರು. ಆ ಗಂಡಸರಲ್ಲಿ ಈಗಾಗಲೇ ಹರದೇಶಿ-ನಾಗೇಶಿ ಹಾಡುತ್ತಿದ್ದ ತಳ ಸಮುದಾಯಗಳ ಗಂಡಸರಿದ್ದರು. ನಾಗೇಶಿ ಹಾಡುಗಳನ್ನು ಮಹಿಳೆಯರೇ ಹಾಡಿದರೆ ಹಾಡಿಕೆಗೆ ಮತ್ತಷ್ಟು ಸೊಬಗು ಬರುತ್ತದೆ ಎನ್ನುವ ಹರದೇಶಿ-ನಾಗೇಶಿ ಹಾಡಿಕೆಗೆ ಸಾಹಿತ್ಯ ಬರೆಯುತ್ತಿದ್ದ ಗಂಡಸರಿದ್ದರು. ನಾಗೇಶಿ ಹಾಡುಗಾರರು ಮಹಿಳೆಯರೇ ಆಗಿರಬೇಕೆಂಬ ಪ್ರೇಕ್ಷಕರ ಒತ್ತಡಗಳೂ ಇದ್ದವು. “ಹಾಡ್ಕಿ ಕಲಿಲಾಕಂದ್ರ ಹೆಸರಿಲ್ದ ಸಾಯ್ತಿ, ಹೆಸರು ಉಳಿಬೇಕಂದ್ರ ಹಾಡ್ಕಿ ಕಲೀಬೇಕು” ಎಂದು ಹಾಡಿಕೆ ವೃತ್ತಿಗೆ ನಿವೃತ್ತಿ ಘೋಷಿಸಿಕೊಂಡ ತಾಯಂದಿರು ಹಾಡಿಕೆ ಕಲಿಸಿದ್ದು ಇದೆ. ಇನ್ನು ಕೆಲವು “ಸಾಯುವ ಕಾಲಕ್ಕೆ ನಾ ಸತ್ತರೂ ನನ್ನ ಕಲಿ ಮುಳಗಬಾರ್ದು” ಎಂದು ಹಾಡಿಕೆ ಕಲಿಸಿದ್ದೂ ಉಂಟು. ಮತ್ತೆ ಕೆಲವರು ಹಾಡಿಕೆ ಎಲ್ಲವ್ವ, ಮಲ್ಲವ್ವ ಎಂದು ಗುರುತಿಸಿಕೊಳ್ಳಲು ಹಾಡಿಕೆಯನ್ನು ಪ್ರವೇಶಿಸಿದ್ದೂ ಇದೆ. ಬಡತನದಲ್ಲಿ ನರಳುತ್ತಿದ್ದ ಕುಟುಂಬದವರನ್ನು ಮೇಲೆತ್ತುವುದಕ್ಕಾಗಿ, ನಿತ್ಯ ಹೆಡೆ ಎತ್ತಿ ಆಟವಾಡಿಸುತ್ತಿದ್ದ ಹಸಿವನ್ನು ಸಮಾಧಾನ ಪಡಿಸುವುದಕ್ಕಾಗಿ ದಪ್ಪನ್ನು ಎತ್ತಿಕೊಂಡಿದ್ದು ಇದೆ. ತಳ ಸಮುದಾಯಗಳು ನಚ್ಚಿಕೊಂಡಂತಹ ಚಾಪಿ ಹೆಣಿಯುವುದು, ಚೌಡಕಿ ಬಾರಿಸುವುದು, ಹಾಡುವುದು, ಹೊಲ-ಮನೆ ಕೆಲಸ ಮಾಡುವುದು ಮೊದಲಾದ ಕೆಲಸಗಳು ಬಡತನವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿಲ್ಲ. ಮನೆ ಕೆಲಸಕ್ಕೆ ಇವರನ್ನು ಯಾರೂ ಕರೆಯುವುದಿಲ್ಲ. ಇದು ಪ್ರತ್ಯೇಕ ಚರ್ಚೆಯನ್ನು ಬಯಸುತ್ತದೆಯಾದ್ದರಿಂದ ಅದನ್ನು ಕೈ ಬಿಡಲಾಗಿದೆ. ಹಾಗಂತ ಬಡತನದ ಕಾರಣಕ್ಕಾಗಿ ಊರು ಬಿಟ್ಟು ಕೆಲಸಕ್ಕಾಗಿ ವಲಸೆ ಹೋಗಲು ಮನಸ್ಸಿಲ್ಲ. ‘ದೇವದಾಸಿ’ಯಾದರೆ ದುಡಿಯಬೇಕಿಲ್ಲ ಎಂದುಕೊಂಡವರೇ ಹೆಚ್ಚು. ‘ದೇವದಾಸಿಯರು’ ಸೆಕ್ಸನ್ನು ವೃತ್ತಿಯಾಗಿ ಸ್ವೀಕರಿಸಿದವರಲ್ಲ. ಹಾಗೆ ಸ್ವೀಕರಿಸಿದ ಅನೇಕರು ಪೂನಾ, ಗೋವಾ, ಬಾಂಬೆಯಿಂದ ಮದ್ದಿಲ್ಲದ ಕಾಯಿಲೆಯನ್ನು ಅಂಟಿಸಿಕೊಂಡು ನರಳಿ-ನರಳಿ ಸತ್ತದ್ದಿದೆ. ಹಾಡಿಕೆಗೆ ಮಹಿಳೆಯರು ಯಾಕೆ ಬಂದರು ಎನ್ನುವುದಕ್ಕೆ ವಕ್ತೃಗಳೇ ಹೇಳಿದ ಕಾರಣಗಳಿಷ್ಟು. ಹೇಳಲಾರದೆ ಅವರ ಒಡಲೊಳಗೆ ಉಳಿದ ಕಾರಣಗಳು ಇನ್ನೆಷ್ಟೋ?

ನನ್ನ ಕ್ಷೇತ್ರಕಾರ್ಯಾಧ್ಯಯನದಲ್ಲಿ ತರಾವರಿ ಕಲಾವಿದರು ಎದುರಾಗಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿದ್ದ ೧೦೪ ವರ್ಷ ವಯಸ್ಸಿನ ಅಜ್ಜಿಯರಿಂದ ಹಿಡಿದು ಕನಸು ಚಿಗುರಿಸಿ ಕೊಳ್ಳುತ್ತಿದ್ದ ೧೬ ವರ್ಷ ವಯಸ್ಸಿನ ಹದಿ ಹರೆಯದ ಹುಡುಗಿಯರಿದ್ದಾರೆ. ಯಾರೂ ಶೋಷಣೆಗಳನ್ನು, ಸಮಸ್ಯೆಗಳನ್ನು ಬದುಕಿನ ಬಟ್ಟೆಯಾಗಿಸಿಕೊಳ್ಳಲು ಬಯಸುವುದಿಲ್ಲ. ನೋವಿನಲ್ಲಿಯೇ ಹುಟ್ಟಿ; ನೋವು, ಅಪಮಾನಗಳನ್ನು ಉಂಡು ಬೆಳೆದ ಕಲಾವಿದರನ್ನು ಅದರಲ್ಲಿಯೂ ಮಹಿಳಾ ಕಲಾವಿದರನ್ನು ಸಂದರ್ಶಿಸಿ ಮಾಹಿತಿ ಪಡೆಯುವುದು ಅಷ್ಟು ಸುಲಭವಲ್ಲ. ಹತ್ತಾರು ಬಾರಿ ಅವರನ್ನು ಭೇಟಿ ಮಾಡಿ ಸಂದರ್ಶಿಸಿದರೂ ಹಲವಾರು ಬಾರಿ ಫೋನು ಮಾಡಿ ಮಾತನಾಡಿದರೂ, ಅವರೆಲ್ಲರ ಬದುಕಿನ ಸಮಗ್ರ ಎಳೆಗಳು ಈ ಪುಸ್ತಕದಲ್ಲಿ ನೇಯ್ಗೆಯಾಗಿದೆ ಎಂದು ಹೇಳಲಾರೆ. ಹರದೇಶಿ-ನಾಗೇಶಿ ಹಾಡುಗಾರರು ಅದರಲ್ಲಿಯೂ ಮಹಿಳಾ ಹಾಡುಗಾರರು ಎದೆಗೂಡಿನಲ್ಲಿ ಹೆಪ್ಪು ಗಟ್ಟಿಸಿದ ಎಷ್ಟು ಸಂಗತಿಗಳು ಮಾತಾಗಿ ಕರಗಿವೆಯೋ ಗೊತ್ತಿಲ್ಲ. ಅವರೊಳಗೆ ಹೆಪ್ಪು ಗಟ್ಟಿದ ವಿಷಯಗಳೆಲ್ಲವೂ ಕೇವಲ ಮಾತಿನಲ್ಲಿ ಕರಗಿ ನನ್ನೆದುರು ಜಿನುಗಿಕೊಂಡಿವೆ ಎಂದು ಹೇಳಲಾರೆ. ಕೆಲವು ಕರಗಿ ಮಾತಿನಲ್ಲಿ ಮೂಡಿಬಂದರೆ, ಮತ್ತೆ ಕೆಲವು ಕಣ್ಣೀರಿನಲ್ಲಿ ಮೂಡಿಬಂದಿವೆ. ಸಿಟ್ಟು, ಮೌನ, ನಿಟ್ಟುಸಿರು ಅತಿಯಾಗಿ ಮಾತನಾಢುವುದು, ಹತಾಶೆ ಹೀಗೆ ಅವು ವ್ಯಕ್ತಗೊಂಡಿದ್ದು ಹಲವು ಬಗೆಗಳಲ್ಲಿ. ನೆನಪಿನ ಭಾರದಿಂದ ಕುಸಿದ ಕೆಲವರು ಮನೆಯಲ್ಲಿಯೇ ಅಳುತ್ತ ಮಲಗಿದರೆ, ಮತ್ತೆ ಕೆಲವರು ನೆನಪಿನ ಕಾಟದಿಂದ ಮುಖ ಗಂಟಿಕ್ಕಿ ಇಲ್ಲೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು, ಮತ್ತೆ ಹಿಂತಿರುಗದ್ದಿದ್ದು ಇದೆ. ಇಂತಹ ಸಂದರ್ಭದಲ್ಲಿ ಅವರಿಗಾಗಿ ಎರಡು, ಮೂರು ಗಂಟೆಗಳವರೆಗೆ ಕಾದು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹಿಂದಿರುಗಿದ್ದೇನೆ. ಅವರ ಬಾಲ್ಯವನ್ನು, ಅವರ ಯೌವನವನ್ನು ಹುರಿದು ಮುಕ್ಕಿದ ಘಟನೆಗಳನ್ನು ನೆನೆಪಿಸಿಕೊಳ್ಳುವುದೆಂದರೆ ಪಯಣಿಸಿ ಬಂದ ಲಾವಾರಸದ ದಾರಿಯನ್ನು ಮರು ಪ್ರವೇಶಿಸಿದಂತೆ. ‘ದೇವದಾಸಿ’ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆಂದರೆ ಹಾಡಿಕೆಗೆ ಪ್ರವೇಶಿಸಬೇಕೆಂದು ಕವಿಗಳು ಹೇಳಿದ್ದನ್ನು, ಬೋಧಿಸಿದ್ದನ್ನು ನಿಜವೆಂದು ನಂಬಿದರು. ಪರ್ಯಾಯ ಬದುಕು ಕಟ್ಟಿಕೊಳ್ಳುವುದಕ್ಕಾಗಿಯೇ ಹಾಡಿಕೆಯನ್ನು ಪ್ರವೇಶಿಸಿದರು. ಪರ್ಯಾಯವೆಂದುಕೊಂಡದ್ದು ಕುಣಿಕೆಯಾಗಿ ಅವರ ಕೊರಳ ಸುತ್ತಿಕೊಂಡಾಗ ಅದರಿಂದ ಬಿಡಿಸಿಕೊಂಡು ಮೂಲ ವೃತ್ತಿಯಾದ ಚೌಡಕಿ ಹಾಡಿಕೆ ವಾಪಸ್ಸಾದದ್ದಿದೆ. ಮತ್ತೆ ಕೆಲವರು ಹವ್ಯಾಸಿ ರಂಗಭೂಮಿಯನ್ನು ಸೇರಿ ಕೊಂಡದ್ದಿದೆ. ಇನ್ನು ಕೆಲವರು ಹಾಡಿಕೆ ವೃತ್ತಿಯಲ್ಲಿ ಮುಂದುವರೆಯಲಾಗದೆ ಕೂಲಿಯನ್ನು ಮಾಡಿ ಬದುಕು ಸಾಗಿಸಲು ಅವಕಾಶ ಸಿಗದೆ ಇದ್ದುದಕ್ಕಾಗಿ ವಯಸ್ಸಾದ ತಾಯಂದಿರನ್ನು ಬಿಟ್ಟು, ಎಳೆಯ ಹೆಣ್ಣು ಕೂಸುಗಳನ್ನು ಮಡಿಲಿಗೆ ಕಟ್ಟಿಕೊಂಡು ಪೂನಾ, ಗೋವಾದಲ್ಲಿ ಮನಸ್ಸಿಲ್ಲದೆಯೇ ಲೈಂಗಿಕ ವೃತ್ತಿ ನಡೆಸುತ್ತಿರುವುದೂ ಇದೆ. ಹೊಲ-ಮನೆಗಳಲ್ಲಿ ದೊರೆಯುವ ಕೂಲಿಗಿಂತ ಇಲ್ಲಿ ಹೆಚ್ಚು ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಹಾಡಿಕೆ ವೃತ್ತಿಯನ್ನು ಮುಂದುವರೆಸಿದ್ದು ಇದೆ. ಕೌಟುಂಬಿಕ ಹಾಗೂ ಸಾಮಾಜಿಕ ಹೊಡೆತದಿಂದ ಅಲೌಕಿಕತೆಯೆಡೆಗೆ ಮುಖ ಮಾಡಿ ದೇವಿಯರ ಧ್ಯಾನದಲ್ಲಿ ತಾವು ಲೀನರಾಗಿ, ಹೊರಗಿನ ನೋವನ್ನು ಮರೆಯಲು ಪ್ರಯತ್ನಿಸಲು ಈ ಹಾಡಿಕೆಯಲ್ಲಿ ಉಳಿದಿದ್ದು ಇದೆ. ಹಾಡಿಕೆಯಲ್ಲಿದ್ದವರು ಹಾಡಿಕೆಯಿಂದ ಚೌಡಕಿಗೆ, ನಾಟಕಕ್ಕೆ ಮುಖ ಮಾಡಿದವರು; ಹಾಡಿಕೆ ಬಿಟ್ಟು ಲೈಂಗಿಕ ವೃತ್ತಿಯನ್ನು ಆಯ್ದುಕೊಂಡವರು-ಹೀಗೆ ಹತ್ತು ಹಲವರನ್ನು ಸಂದರ್ಶಿಸಲಾಗಿದೆ.

ಸಂದರ್ಶಿಸಿದ ಮಹಿಳಾ ಹಾಡುಗಾರರು ತಮ್ಮ ವೃತ್ತಿ ಜೀವನದ ವಿವರಗಳನ್ನು ನಕ್ಕು, ನೆಮ್ಮದಿಯಿಂದ ಹಂಚಿಕೊಂಡಿದ್ದು ಕಡಿಮೆ. ಹಾಗಂದರೆ ಅವರು ಸಂತೋಷದ ಸಂಗತಿಗಳನ್ನು ಹಂಚಿಕೊಳ್ಳಲು ಬಯಸಲಿಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ. ಸಂತೋಷವನ್ನು ಮನಸ್ಸಿನಾಳದಿಂದ ಹೆಕ್ಕಿ ತೆಗೆಯಬೇಕಾಗಿಲ್ಲ. ಸೋಜಿಗದ ಸಂಗತಿಯೆಂದರೆ ನಾನು ಸಂದರ್ಶಿಸಿದ ಬಹುತೇಕ ಮಹಿಳಾ ಕಲಾವಿದರು ಸಂತೋಷದ ಘಟನೆಗಳನ್ನು, ಹೆಮ್ಮೆಗಳನ್ನು ಸರಳವಾಗಿ ಹೇಳಲಿಲ್ಲ. ಸಮಸ್ಯೆಗಳು ಹಾಗೂ ಶೋಷಣೆಗಳ ಅಡಿಯಲ್ಲಿಯೇ ಅವರನ್ನು ನೋಡುವುದರಿಂದ, ಅವರೊಳಗಿನ ಬೆಳಕು ನನ್ನ ಅಧ್ಯಯನದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ನಾನೇ ಅವರಿಗೆ ಹೆಮ್ಮೆಯ ಘಟನೆಗಳನ್ನು, ಕಂಡುಕೊಂಡ ಪರ್ಯಾಯಗಳನ್ನು ಹೇಳಲು ಒತ್ತಾಯಿಸಿದ್ದೇನೆ. ಹೀಗೆ ಒತ್ತಾಯಿಸಿದಾಗ ಅವರು ಹೇಳಿಕೊಂಡದ್ದು ಕೆಲವೇ ಕೆಲವು ಹೆಮ್ಮೆಯ ಘಟನೆಗಳನ್ನು. ಅಂದರೆ ಹೆಮ್ಮೆಯ ಸಂಗತಿಗಳು, ಸಂತೋಷದ ಕ್ಷಣಗಳು ಅವರಿಗೆ ಬೇಕಿಲ್ಲವೆಂದರ್ಥವಲ್ಲ. ಅವರು ಪಡೆದುಕೊಂಡ ಸಂತೋಷದ ನೆನಪುಗಳು ಹಿಡಿಯಷ್ಟು ಎನ್ನಲಾರೆ; ಬೆರಳೆಣಿಕೆಯಷ್ಟು ಎನ್ನುವುದೇ ಸೂಕ್ತ. ಹೀಗಾಗಿ ಅವರಿಂದ ಅನುಭವಗಳನ್ನು ಕಲೆ ಹಾಕುವುದು, ಕಲೆ ಹಾಕಿದ ನೆನಪುಗಳನ್ನು ಬರಹಕ್ಕಿಳಿಸುವುದು ಎರಡೂ ಸವಾಲಾಗಿಯೇ ಪರಿಣಮಿಸಿತು. ನನ್ನ ಉಡಿಯಲ್ಲಿ ಹಾಡುಗಾರರ ಹಾಕಿದ ಅನುಭವ ಕಥನಗಳನ್ನು ಆಧರಿಸಿಯೇ ಈ ಕೃತಿ ರಚಿಸಲಾಗಿದೆ. ನನ್ನ ಉಡಿಯೊಳಗೆ ಹಾಕಲಾರದೆ ತಮ್ಮ ಒಡಲೊಳಗೆ ಗಂಟು ಕಟ್ಟಿಕೊಂಡ ಕಥನಗಳು ಇನ್ನೆಷ್ಟಿವೆಯೋ? ಹಾಗಾಗಿ ಈ ಕ್ಷೇತ್ರದಲ್ಲಿ ಇನ್ನೂ ಅಧ್ಯಯನ ಮಾಡುವುದಕ್ಕೆ ವಿಷಯಗಳಿವೆ.

ಕಲಾವಿದರನ್ನು ಸಂದರ್ಶಿಸಲು ಹೋದಾಗಲೆಲ್ಲಾ ಅವರು ದೊರೆತರು ಎಂದು ಹೇಳಲಾರೆ. ಇಂಡಿ ತಾಲೂಕಿನ ನೀವರಗಿಗೆ ಹೋಗಿ ನಂತರ ನಿಂಬಾಳಕ್ಕೆ ಬಂದರಾಯಿತು ಎಂದು ಹೋದೆವು. ಆದರೆ ನೀವರಗಿ ಸೊಲ್ಲಾಪುರದ ಹತ್ತಿರಕ್ಕಿದೆ ಎಂದು ಗೊತ್ತಿರಲಿಲ್ಲ. ನಾವು ಹುಡುಕಿಕೊಂಡು ಹೋದ ಗುರುಬಾಯಿ ಹರಿಜನ ಅಲ್ಲಿರಲಿಲ್ಲ. “ಕೊಕ್ಕಟನೂರು ಜಾತ್ರೆಗೆ ಹೋಗಿದ್ದಾಳೆ. ಇನ್ನೆರಡು ದಿನ ಬಿಟ್ಟು ಬರುವಳು” ಎಂದು ಆಕೆಯ ತಾಯಿ ಹೇಳಿದರು. “ನಿಮ್ಮ ಜೊತೆ ಮಾತಾನಾಡುತ್ತೇನೆ” ಎಂದರೂ ಆಕೆ ಸಹಕರಿಸಲಿಲ್ಲ. ಹಾಡಿಕೆಗೆ ಕರೆಯಲು ಬಂದಿರುವವರು ಎಂದು ಆಕೆ ನನ್ನನ್ನು ಗ್ರಹಿಸಿದ್ದಳು. “ಮಗಳೊಂದು, ನಾನೊಂದು ಚಾಜಾ ಮಾತಾಡಿದ್ಹಂಗ ಆಗ್ತೈತ್ರಿ, ನೀವು ಆಕಿನs ಕೇಳ್ರಿ” ಎಂದಳು. ನಾನು ಹಾಡಿಕೆಗೆ ಕರೆಯಲು ಬಂದವಳಲ್ಲ ಎಂದು ಎಷ್ಟು ಹೇಳಿದರೂ ಆಕೆ ಅದನ್ನು ನಂಬಿದಂತೆ ಕಾಣಲಿಲ್ಲ. ಬೇರೆ ದಾರಿಯಿಲ್ಲದೆ ಉಮ್ರಾಣಿಗೆ ಹರದೇಶಿ-ನಾಗೇಶಿ ಕಲಾವಿದರನ್ನು ಹುಡುಕಿಕೊಂಡು ಹೋದೆನು. ಉಮ್ರಾಣಿಗೆ ಹೋದಾಗ ಅಲ್ಲಿ ಹೊಸ ಉಮ್ರಾಣಿ, ಹಳೆ ಉಮ್ರಾಣಿ ಮತ್ತು ಗಾಡಿ ಉಮ್ರಾಣಿ ಇರುವುದಾಗಿ ತಿಳಿದುಬಂದಿತು. ಹಳೆಯ ಮತ್ತು ಹೊಸ ಉಮ್ರಾಣಿಗಳೆರಡಕ್ಕೂ ಹೋಗಲಾಯಿತು. ಅಲ್ಲಿ ಕಲಾವಿದರಿರಲಿಲ್ಲ. “ಗಾಡಿ ಉಮ್ರಾಣಿಯಲ್ಲಿ ಡಪ್ಪಿನ ಹಾಡಿನ ಕಲಾವಿದರು ಇರಬಹುದು. ಅದು ವಿಜಾಪುರ ಹತ್ತಿರಕ್ಕಿದೆ” ಎಂದರು. ನಾವು ಕಲಾವಿದರನ್ನು ಹುಡುಕಿಕೊಂಡು ಯಾವುದೇ ಊರಿಗೆ ಹೋದರೂ ಹಳೆಯ ಹಾಗೂ ಹೊಸ ಊರುಗಳು ಇರುತ್ತಿದ್ದವು. ಮತ್ತೆ ಕೆಲವು ಊರುಗಳು ಗಾಡಿ ಉಮ್ರಾಣಿಯಂತೆ ನಾವು ಹುಡುಕಿಕೊಂಡು ಹೋದ ಊರಿನ ವಿರುದ್ಧ ದಿಕ್ಕಿನಲ್ಲಿ ಸುಮಾರು ೧೫೦, ೨೦೦ ಕಿಲೋಮೀಟರ್‌ಅಂತರದಲ್ಲಿ ಇರುತ್ತಿದ್ದವು. ಇಂತಹ ಸಮಸ್ಯೆಗಳು ಕ್ಷೇತ್ರಕಾರ್ಯ ಅಧ್ಯಯನದ ಉದ್ದಕ್ಕೂ ಎದುರಾದವು. ಕಲಾವಿದರನ್ನು ಹುಡುಕಿಕೊಂಡು ಸರಿಯಾದ ಊರಿಗೆ ಹೋದರೂ, ಅವರು ಕೊಕಟನೂರು ಇಲ್ಲ ಸವದತ್ತಿ ಎಲ್ಲಮ್ಮನ ಜಾತ್ರೆಗೆ ಹೋಗಿರುತ್ತಿದ್ದರು. ಮತ್ತೆ ಕೆಲವರು ಹಾಡಿಕೆಗೆ ಹೋಗುತ್ತಿದ್ದರು. ಅವರು ಹಾಡಿಕೆಗೆ ಹೋದ ಊರುಗಳು ನಾವು ಹುಡುಕಿಕೊಂಡು ಹೋದ ಊರಿನ ಆಚೆ-ಈಚೆ ಇರುತ್ತಿರಲಿಲ್ಲ. ಬಹುತೇಕ ೨೫೦, ೩೦೦ ಕಿಲೋಮೀಟರ್ ದೂರದ ಊರಿಗೆ ಹೋಗಿರುತ್ತಿದ್ದರು. ಬಾಗಲಕೋಟೆಗೆ ಹೋದರೆ ಕಲಾವಿದರು ಹಾಡಿಕೆಗಾಗಿ ಹುಮನಾಬಾದಿಗೆ ಹೋಗಿದ್ದಾರೆ ಎನ್ನುವ ಉತ್ತರ ಎದುರಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕಲಾವಿದರ ತಂದೆ-ತಾಯಿಯರನ್ನು, ಕಲಿಸಿದ ಗುರುಗಳನ್ನು, ಕವಿಗಳನ್ನು, ಊರಿನ ಪ್ರಮುಖರನ್ನು, ಊರಿನ ಜನರನ್ನು (ಊರೊಳಗಿನ ಹಾಗೂ ಕೇರಿಯೊಳಗಿನ) ಕಂಡು ಕಲಾವಿದರ ಬಗ್ಗೆ, ಕಲೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆ. ಜೊತೆಯಲ್ಲಿ ಬೇರೆ ಊರಿನಲ್ಲಿರುವ ಹರದೇಶಿ-ನಾಗೇಶಿ ಕಲಾವಿದರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದೆ. ನಾನು ಸಂದರ್ಶಿಸಿದ ಕಲಾವಿದರಲ್ಲಿ ಬಹುತೇಕರು ತಮ್ಮಂತೆಯೇ ಇರುವ ಇತರ ಕಲಾವಿದರ ವಿಳಾಸಗಳನ್ನು ನೀಡಲು ನಿರಾಕರಿಸುತ್ತಿದ್ದರು. ಶಂಕರಪ್ಪ ಮಾದಾರ, ದುರ್ಗಪ್ಪ ಚೆನ್ನಾಳ ಹಾಗೂ ಹಾಡಿಕೆ ಎಲ್ಲವ್ವನನ್ನು ಹೊರತುಪಡಿಸಿದರೆ ಇನ್ನ್ಯಾವ ಕಲಾವಿದರು ಇತರ ಕಲಾವಿದರ ವಿಳಾಸವನ್ನು, ಫೋನ್ ನಂಬರನ್ನು ನೀಡಲಿಲ್ಲ. ವೃತ್ತಿ ಜೀವನದಲ್ಲಿ ನಿತ್ಯ ಎದುರು-ಬದುರಾಗುವ ಸಹ ಕಲಾವಿದರು ಗೊತ್ತಿಲ್ಲ ಎಂದು ಹೇಳಿದರೆ ನಂಬುವುದು ಕಷ್ಟ. ನಾನು ಸಂದರ್ಶನ ಮುಗಿಸಿ ಹೊರಬರುವಾಗ ಪ್ರತಿಯೊಬ್ಬ ಕಲಾವಿದರು ತಮ್ಮನ್ನು “ಹಾಡ್ಕಿಗೆ ಕರೆಯಿರಿ” ಎಂದು ವಿನಂತಿಸಿಕೊಂಡಿದ್ದಾರೆ; “ನಾನು ಅಧ್ಯಯನಕ್ಕಾಗಿ ಬಂದವಳು. ಹಾಡಿಕೆಗೆ ಆಹ್ವಾನಿಸಲು ಬಂದವಳಲ್ಲ” ಎಂದು ಹೇಳಿದಾಗ್ಗೂ ಹಾಡಿಕೆ ವೃತ್ತಿ ಜೀವನ ಅವರನ್ನು ಹಾಗೆ ಹೇಳುವಂತೆ ಒತ್ತಾಯಿಸುತ್ತಿತ್ತು.

ಹಾಡಿಕೆ ಮಹಿಳೆ: ರಾಜಕೀಯ: ಪರ್ಯಾಯ?

ಜಮಖಂಡಿ ಬಳಿಯ ಹುಣೂರಿನ ಸೋನುಬಾಯಿಯ ಹತ್ತಿರ ನಾಲ್ಕು ಬಾರಿ ಹೋಗಿದ್ದೆ. ಒಮ್ಮೆ ಮನೆಯ ಒಳಗಡೆ ಇದ್ದರೂ ಇಲ್ಲ ಎಂದು ಹೇಳಿ ಕಳುಹಿಸಿದಳು. ಎರಡು ಬಾರಿ ಚುನಾವಣೆಯ ಪ್ರಚಾರದ ಗಲಾಟೆಯಲ್ಲಿದ್ದಳು. ಮತ್ತೊಂದು ಬಾರಿ ‘ಮಣ್ಣಕೊಟ್ಟ ಬಂದೇನ್ರಿ. ಅದಕ್ಕ ತಲಿ ಮ್ಯಾಕ ನೀರು ಹಾಕೋಬೇಕ್ರಿ ಚಂಜಿಕ (ಸಂಜೆ) ಬರ್ರಿ” ಎಂದಳು ಮತ್ತೆ ಎಲ್ಲಿ ತಪ್ಪಿಸಿಕೊಳ್ಳುವಳೋ ಎಂದು ಅರ್ಧ ಗಂಟೆ ಹೊರಗಡೆ ಕಾಯುತ್ತೇನೆ ಎಂದೆ. ‘ಎಣ್ಣಿ ಹಚ್ಕೋಬೇಕು, ಶೀಗಿಕಾಯಿ ಹಚ್ಕೋಬೇಕು, ಎಣ್ಣಿ ಹೋಗುಗಂಟ ಶೀಗೇಕಾಯಿ ಹಚ್ಕೋಬೇಕು, ಜಳಕಾ ಮಾಡಾಕ ಎರಡು ಮೂರು ತಾಸು ಬೇಕಾಗ್ತೈತಿ. ನೀವು ಬ್ಯಾರೆ ಕೆಲ್ಸಾ ಮುಗಿಸ್ಕೊಂಡು ಚಂಜಿಕಡೆ (ಸಾಯಂಕಾಲ) ಬರ್ರಿ” ಎಂದಳು. ನಾವು ಹೋದದ್ದು ಬೆಳಿಗ್ಗೆ ೭ ಗಂಟೆಗೆ. ಸರಿ ಎಂದು ಜಮಖಂಡಿಯ ಸುತ್ತ-ಮುತ್ತ ಬರುವ ಒಂದೆರಡು ಹಳ್ಳಿಗಳಲ್ಲಿನ ಕಲಾವಿದೆಯರನ್ನು ಸಂದರ್ಶಿಸಿಕೊಂಡು ಪುನಃ ಆಕೆ ಹೇಳಿದ ವೇಳೆಗೆ ಹುಣೂರಿಗೆ ಹೋದೆನು. ಸೋನು ಬಾಯಿಯ ಮಗ ಬಂದು ಅಮ್ಮ ಹಾಡಿಕೆಗೆ ಹೋಗಿರುವುದಾಗಿ ಹೇಳಿದನು. ಯಾವ ಸ್ಥಳ ಹೇಳು, ಅಲ್ಲಿಗೆ ಹೋಗುತ್ತೇವೆ ಎಂದಿದ್ದಕ್ಕೆ ಅಲ್ಲಿಂದ ಮತ್ತೊಂದೂರಿಗೆ ಹಾಡಿಕೆಗೆ ಹೋಗುವವಳಿದ್ದಾಳೆ ಎಂದನು. ಸಾಮಾನ್ಯವಾಗಿ ಹಾಡಿಕೆ ಏಳರಿಂದ ಎಂಟು ಗಂಟೆಯವರೆಗೆ ನಡೆಯುತ್ತದೆ. ಎಲ್ಲಿಯೂ ಎರಡು ಮೂರು ಗಂಟೆಗಳ ಅವಧಿಯವರೆಗಿನ ಹಾಡಿಕೆ ಇರುವುದಿಲ್ಲ ಎನ್ನುವುದು ಗೊತ್ತಿತ್ತು. ಅವಳು ತನ್ನ ರಾಜಕೀಯ ಮತ್ತು ಸಾಮಾಜಿಕ ಜೀವನಕ್ಕೆ ನನ್ನ ಬರಹ ಕಪ್ಪು ಚುಕ್ಕೆಯಾಗಬಹುದು ಎನ್ನುವ ಆತಂಕ ಎದುರಿಸುತ್ತಿದ್ದಂತೆ ಕಂಡುಬಂದಿತು. ಹಾಡಿಕೆಯ ಜೊತೆ ಜೊತೆಯಲ್ಲಿಯೇ ರಾಜಕೀಯ ಹಾಗೂ ಸಮಾಜ ಸೇವಾ ಕಾರ್ಯಕರ್ತಳಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಹೀಗಾಗಿ ಅವಳ ಕುರಿತು ಕುತೂಹಲವಿತ್ತು.

ರಾಜಕೀಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗುರುತರವಾದ ಹೆಸರು ಪಡೆದು ಕೊಂಡು ಜೊತೆ-ಜೊತೆಯಲ್ಲಿಯೇ ಹಾಡಿಕೆ ವೃತ್ತಿಯಲ್ಲಿಯೂ ಖ್ಯಾತಿಯನ್ನು ಪಡೆದು ಕೊಳ್ಳುವುದು ಸುಲಭವೇನಲ್ಲ. ‘ದೇವದಾಸಿ’ ಎನ್ನುವ ಸಾಮಾಹಿಕ ಚಹರೆಯಿಂದ ಬಿಡಿಸಿಕೊಳ್ಳಲು ಹಾಡಿಕೆ ವೃತ್ತಿಗೆ ಪ್ರವೇಶಿಸಿದರೂ ಅದು ಪರ್ಯಾಯವಾಗದೇ ಹೋದಾಗ ರಾಜಕೀಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರವೇಶಿಸಿರಬೇಕು. ರಾಜಕೀಯ ಇಲ್ಲವೆ ಸಮಾಜ ಸೇವಾ ಕ್ಷೇತ್ರ ಪರ್ಯಾಯ ಎನಿಸಿದೆಯೇ ಎನ್ನುವ ಕುತೂಹಲವಿತ್ತು.

ಹಾಡಿಕೆಯ ಗಣಿಯಾರದ ರೇಣುಕಾ ಒಂದು ಬಾರಿ ಗ್ರಾಮ ಪಂಚಾಯತಿ ಸದಸ್ಯಳಾಗಿ ಮತ್ತೊಂದು ಬಾರಿ ಗ್ರಾಮಪಂಚಾಯತಿಯ ಅಧ್ಯಕ್ಷಳಾಗಿ ಕಾರ್ಯ ನಿರ್ವಹಿಸಿದ್ದರ ಸಂಗತಿ ತಿಳಿದುಬಂದಿತು. ಹಾಡಿಕೆಯಲ್ಲಿಯೇ ಬಿಡುವಿಲ್ಲದೆ ಕಾರ್ಯನಿರತವಾಗಿರುವ ಗಣಿಯಾರದ ರೇಣುಕಾಳನ್ನು ಕೊನೆಗೂ ಸಂದರ್ಶಿಸಿದೆ. ಅವಳು ತನ್ನ ರಾಜಕೀಯ ಜೀವನದ ಕಾರ್ಯವೈಖರಿಯ ಬಗ್ಗೆ ಹೇಳಿದ್ದು ಹೀಗೆ: “ಹಾಡಕ್ಯಾಗ ವ್ಯಾಳ್ಯಾ ಎಲ್ಲಿ ಸಿಗ್ತೈತಿ? ಹಾಡ್ಕಿ ಮುಗಿಸ್ಕೊಂಡು ಊರಿಗಿ ಬಂದಾಗೊಮ್ಮೆ ಎಲ್ಲಿ ಸೈ ಮಾಡು ಅಂತಿದ್ರು, ಅಲ್ಲಿ ಸೈ ಮಾಡ್ತಿದ್ದ್ಯಾ. ಅದ್ದಕ್ಷಳಿದ್ದಾಗೂ (ಅಧ್ಯಕ್ಷ) ಅಷ್ಟs. ಸದಸ್ಯಳಾಗಿದ್ದಾಗ್ಯೂ ಅಷ್ಟs. ಹೇಳಿದ್ದಲ್ಲಿ ಸೈ ಮಾಡ್ತಿದ್ನಿ. ಹಿಂಗಾಗಿ ಊರಾಗಿನ ಹಿರೇರು ನನಗ ಬಾಳs ಕಿಮ್ಮತ್ತ ಕೊಡ್ತಾರು” ಎಂದಿದ್ದಳು. ಅಧಿಕಾರ ವಿಕೇಂದ್ರೀಕರಣ ಆಶಯವುಳ್ಳ ರಾಜಕೀಯ ಮೀಸಲಾತಿಯು, ದಮನಿತರಿಗೆ ಅಧಿಕಾರ ದಕ್ಕಲು ಒತ್ತಾಯಿಸಿದರೂ, ಗ್ರಾಮದೊಳಗಿನ ಜಾತಿ, ವರ್ಗ ಹಾಗೂ ಲಿಂಗ ರಾಜಕಾರಣವು, ದಕ್ಕಿದ್ದನ್ನು ಅನುಭವಿಸಿದಂತೆ ನೋಡಿಕೊಳ್ಳುತ್ತವೆ; ಅಥವಾ ಅಧಿಕಾರ ತಮ್ಮಲ್ಲಿಯೇ ಉಳಿಸಿಕೊಳ್ಳುವ ರಾಜಕಾರಣದ ಭಾಗವಾಗಿ ಗಣಿಯಾರದ ರೇಣುಕಾ ಅಂತವರನ್ನು ದಾಳಗಳಾಗಿ ಬಳಸಿಕೊಳ್ಳುತ್ತಿರುತ್ತವೆ.

ರಾಜಕೀಯ ಆಸಕ್ತಿಯು ಕುರಿತು ಮದನ್ಹಳ್ಳಿ ಭೀಮಾಬಾಯಿ ಬಿಚ್ಚಿಟ್ಟಿದ್ದು ಮತ್ತೊಂದು ಕಥೆ. ಆಕೆಗೆ ಗ್ರಾಮ ಪಂಚಾಯಿತಿಯ ಸದಸ್ಯಳಾಗಿ, ಅಧ್ಯಕ್ಷಳಾಗಿ ಕಾರ್ಯ ನಿರ್ವಹಿಸುವ ಆಸೆ. ರಾಜಕೀಯ ಜೀವನಕ್ಕೆ ಪ್ರವೇಶ ಸಿಕ್ಕರೆ ಹಾಡಿಕೆ ವೃತ್ತಿಗೆ ವಿದಾಯ ಹೇಳುವ ನಿರ್ಧಾರವನ್ನು ಹೊಂದಿದವಳು. ಸರಿಯಾಗಿ ಓದಲು ಬರದೇ ಇದ್ದರೂ ಎಲ್ಲವನ್ನು ತಕ್ಷಣವೇ ಗ್ರಹಿಸುವ ತೀಕ್ಷ್ಣಮತಿ ಅವಳು. ಪ್ರಸ್ತುತದ ತನ್ನ ಜನಾಂಗದ ಹಾಗೂ ಹಾಡಿಕೆ ಸಮುದಾಯದವರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರ ಅಗತ್ಯವೆಂದು ತಿಳಿದವಳು. “ಗ್ರಾಮ ಪಂಚಾಯ್ತಿ ಇಲೆಕ್ಷನ್‌ಗೆ ನೀವು ನಿಂತಿದ್ದಿರೇನು?” ಎನ್ನುವ ಚುಟುಕು ಪ್ರಶ್ನೆಗೆ ಆಕೆ ಬಿಚ್ಚಿಟ್ಟಿದ್ದು ಒಂದು ಚಲನಚಿತ್ರ ಕಥೆಗಾಗುವಷ್ಟು ಮಾಹಿತಿಯನ್ನು, ಮದನ್ಹಳ್ಳಿ ಭೀಮಾಬಾಯಿ ಕಥನ ಅಥವಾ ಆಕೆಯಂತವರ ಕಥನಗಳು ರಾಜಕೀಯ ಮತ್ತು ಮಹಿಳೆ ಎನ್ನುವ ಪ್ರತ್ಯೇಕ ಹಾಗೂ ಸ್ವತಂತ್ರ ಅಧ್ಯಯನಕ್ಕೆ ಕೊಂಡೊಯ್ಯುತ್ತದೆ. ಹೀಗಾಗಿ ಆಕೆಯ ಕೆಲವು ಮಾತುಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. “ಹಾಡಕಿ ಮಾಡಿ-ಮಾಡಿ ಸಾಕಾಗೈತಿ. ನಂಗೂ ಗ್ರಾಮ ಪಂಚಾಯ್ತಿ ಇಲಿಕ್ಷಿನ್ನಗೆ (ಇಲೆಕ್ಷನ್) ನಿಲ್ಲಬೇಕು, ಗೆದಿಬೇಕು ಅಂತ ಆಸೆ ಐತಿ. ಇಲ್ಲಿತನಾ ಆರ್ಸಿ ಬಂದ ಯಾರ್ಗೂ ಗ್ರಾಮ ಸುದರಾಸ (ಸುಧಾರಣೆ) ಬೇಕಿದ್ದರ ಏನು ಮಾಡಬೇಕಂತ ಗೊತ್ತs ಇಲ್ಲ. ನಾನೇನು ಸಾಲಿಗಿ ಹೋಗಿಲ್ಲ. ಒಂದು ವರ್ಷ ಏನು ಮಾಡಿದ್ನಿ ಅಂದ್ರ ನಮ್ಮ ಕೇರ್ಯಾಗಿನ ಎಲ್ಲಾರ ಮನಿಗಿ ತಿರುಗಿ ಮಕ್ಕಳ್ನ ಸಾಲಿಗಿ ಕಳ್ಸಿರ್ರಿ ಅಂತ ಹೇಳಿಕೊಂತ ಬಂದ್ಯಾ. “ನೀನ್ಗ ಹಾಡಕಿ ಇಲ್ಲಂತ ಕಾಣ್ತೈತಿ. ಅದಕ್ಕ ಇಂಥಾ ದಗದಾ (ಕೆಲಸ) ಸುರು ಹಚ್ಚಕೊಂಡಿಯೇನು?” ಅಂತ ಕೆಲವ್ರು ನಕ್ಕ್ರು. ಇನ್ನ ಕೆಲವ್ರು ಬೈದ್ರು. ಅದ್ನ್ಯಾವುದನ್ನು ನಾ ತಲಿಗಿ ಹಚ್ಚಿಕೊಳ್ಳಲಿಲ್ಲ. ಸಣ್ಣ ಸಣ್ಣ ಪಾರಾಗೊಳ್ನ (ಮಕ್ಕಳನ್ನು) ಸಾಲಿಗಿ ಕಳ್ಸೂದ ಬಿಟ್ಟು ದಗದಕ್ಕ ಕಳಸ್ತಾರಂತ ಮ್ಯಾಲಿನವ್ರಿಗಿ ಕಂಪ್ಲೆಂಟ್ ಕೊಡ್ತೇನಿ ಅಂತ ಅಂಜಿಸಿದ್ನಿ. ಅದಕ್ಕ ಅಂಜಿಕೆಸಿಂದ ಸಾಲಿಗಿ ಕಳಸಾಕ ಚಾಲು ಮಾಡಿದ್ರು. ನಮ್ಮೂರಿನ ಹಿರ್ಯಾರೂ ರಾಜಕೀಯ ಸುರು (ಪ್ರಾರಂಭ) ಹಚ್ಚಕೊಂಡಿಯಲ್ಲಾ ಅಂತ ಅನ್ನಾ ಚಾಲೂ ಮಾಡಿದ್ರು. ನನ್ಗೊತ್ತಿಲ್ಲ, ಯಾಕೋ ಅವರು ನನ್ನ ಇರ್ಷಾ (ಅಸೂಯೆ) ಮಾಡಾಕ ಚಾಲೂ ಮಾಡಿದ್ರು. ಮಳ್ಳಾ (ಮರು) ವರ್ಷ ನಮ್ಮೂರಾಗ ಪಂಚಾಯ್ತಿ ಇಲಿಕ್ಷನ್ನು ಇತ್ತು. ನಾನು ಒಂದು ಅರ್ಜಿ ಹಾಕಿದಾ. ಇಲಿಕ್ಷನ್‌ಗೆ ನಿಂತ್ಯಾ. ಊರಿನ ಜನಾ ಪಿಲ್ಯಾನಾ ಮಾಡಿ ನನ್ನ ವಿರುದ್ಧ ನಮ್ಮ ಜಾತಿಕೇನ (ಮಾದರ) ನಿಲ್ಸಿದ್ರು. ವೋಟು ಒಡುದು ಹೋದ್ವು. ನಾವಿಬ್ಬರೂ ಆರಿಸಿ ಬರ್ಲಿಲ್ಲ. ಬಾರಿಕರಕಿ ಆರ್ಸಿ ಬಂದ್ಲು. ನನ್ನ ಗೆದಿಲಾರ‍್ದಂಗ ನೋಡ್ಕೊಳ್ಳೂದs ಊರಾಗಿನ ಹಿರೇರ ಉದ್ದೇಶಾ ಆಗಿತ್ತು. ಅದರಾಗ ಅವ್ರ ಗೆದ್ದ್ರು ನಾ ಸೋತ್ಯಾ. ಆದ್ರು ನನ್ನೊಳ್ಗ ಒಂದು ಕುಸಿ (ಖುಷಿ) ಇತ್ತು. ಊರಿನ ಹಿರೇರು ನನ್ನ ಒಬ್ಬ ಹೆಣ್ಣಮಗ್ಳು ಅಂತ ಹಗುರಾಗಿ ತಗೊಂಡಿರ್ಲಿಲ್ಲ. ಅವ್ರಿಗಿ ನಿದ್ದಿ ಕೆಡಿಸಿದ್ನಿ. ನಾನೂ ತಾಕತ್ತಿನ ಹೆಣಮಗಳ ಅಂತ ನಂಗ ಗೊತ್ತಾಯ್ತು. ಒಳ್ಳಾ ತೋರ್ಸಿದ್ರ ಕೈ ಕಡಿಯೂ ಹೆಂಗ್ಸ ಆಕಿ ಅಂಥಾರ ನಂಗ. ಹಂಗಂದ್ರ ಏನ ತಂಗಿ? ನಾನು ಅವ್ರಿಗಿಂತ ತಾಕತ್ತವಾನಿ ಅಂದಂಗ. ಹೌದಲ್ಲೊ?” ಎಂದಳು. ಆಕೆಯಲ್ಲಿನ ಸ್ವತಂತ್ರ ಮನೋಭಾವ ಹಾಗೂ ತೀಕ್ಷ್ಣ ಗ್ರಹಿಕೆ ಸ್ಥಳೀಯ ಪುರುಷ ರಾಜಕಾರಣಿಗಳಿಗೆ ಸವಾಲೆನಿಸಿರಬೇಕು. ಹೀಗಾಗಿ ಭೀಮಾ ಬಾಯಿಯನ್ನು ರಾಜಕೀಯ ಪ್ರವೇಶಿಸಿದಂತೆ ಸ್ಥಳೀಯ ಮುಖಂಡರು ಪ್ರಯತ್ನಿಸಿದರು. ಸ್ಥಳೀಯ ರಾಜಕಾರಣವೇ ಆಗಿರಬಹುದು-ರಾಜಕೀಯ ಆಗು-ಹೋಗುಗಳನ್ನು ತೀಕ್ಷ್ಣವಾಗಿ ಗ್ರಹಿಸುವ; ಕಾಲದ ಅಗತ್ಯದ ತಕ್ಕಂತೆ ರಾಜಕೀಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಸ್ವತಂತ್ರ ಮನೋಭಾವವುಳ್ಳ ಮಹಿಳೆಯರನ್ನು ಇಷ್ಟಪಡುವುದಿಲ್ಲ. ಅವರನ್ನು ಪುರುಷ ಪ್ರಧಾನವಾದ ರಾಜಕೀಯ ಕೋಟೆಯನ್ನು ಕೆಡವುವ ವೈರಿಗಳಂತೆ ಕಾಣಲಾಗುತ್ತಿದೆ. ಹೀಗಾಗಿಯೇ ಭೀಮಾಬಾಯಿಯಂತೆ ಸ್ವತಂತ್ರ ಮನೋಭಾವವುಳ್ಳ ಮಹಿಳೆಯರು ರಾಜಕೀಯ ಪ್ರವೇಶಿಸಬೇಕೆಂದರೂ ನಿರಾಕರಣೆಗೆ ಒಳಪಡುತ್ತಾರೆ; ಹೇಳಿದಲ್ಲಿ ಸಹಿ ಮಾಡುವ ಗಣಿಯಾರದ ರೇಣುಕಾನಂಥವರನ್ನು ಪುರುಷ ರಾಜಕಾರಣವು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತದೆ. ದಲಿತ ಜನಾಂಗದ ಕುರಿತ ಹಾಗೂ ತನ್ನಂತೆ ಇರುವ ಹಾಡುಗಾರರ ಕುರಿತು ಸಹಾಯ ಮಾಡುವ ಯೋಜನೆಗಳು ಭೀಮವ್ವನ ತಲೆಯಲ್ಲಿವೆ. ಆದರೆ ಅವುಗಳನ್ನು ಕಾನೂನುಗಳಾಗಿ ರೂಪಿಸಲು, ರೂಪಿಸಿದ ಕಾನೂನುಗಳನ್ನು ಜಾರಿಗೊಳಿಸಲು ಆಕೆಯ ಬಳಿ ಅಧಿಕಾರವಿಲ್ಲ. “ನನ್ನ ಕಣ್ಣೆದ್ರುಗೆ ಎಷ್ಟೋ ಕಲಾವಿದರಿಗೆ ಕಲಾ ಪಿಂಚಣಿ ಮಾಡಿಸ್ತೇವು ಅಂತ ಅವ್ರ ಕಡೆಯಿಂದ ಐದ ಸಾವಿರಾ, ಹತ್ತು ಸಾವಿರಾ ಇಸ್ಕೊಂಡ ಹೋಗ್ತಾರು. ನಮ್ಮ ಕಲಾಕಾರ‍್ರು ಪಿಂಚ್ನಿ ಆದ್ರ ಸಾಕಂತ ಸಾಲಾ ಸೂಲಾ ಮಾಡಿ ರೊಕ್ಕಾ ಜ್ವಾಡ್ನಿ (ಕೂಡಿಸಿ) ಮಾಡಿ ಕ್ವಾಣನಂಗ (ದಡ್ಡತನ) ಕೊಡ್ತಾವು. ಯಾವ ಪಿಂಚಣಿಗೂ ಆಗೂದಿಲ್ಲ. ಹೊಟ್ಟಿ ಉರಿತೈತಿ ತಂಗಿ. ನಮ್ಮ ಪಂಚಾಯ್ತಾಗ ನಾನು ಆರ್ಸಿ ಬಂದಿದ್ರ ಎಂ.ಎಲ್.ಎ. ಸಾಹೇಬ್ರನ್ನ ಹಿಡ್ದು ಅವ್ರಿಂದ ಮುಕ್ಕಮಂತ್ರಿ (ಮುಖ್ಯಮಂತ್ರಿ) ಹಿಡ್ದು ಯಾವ ತಂಟಿ ಇಲ್ದ ನಮಂಥಾ ಕಲಾಕಾರರಿಗೆ ಪಿಂಚಣಿ ಬರೂವಂಗ ಮಾಡಸ್ತಿದ್ದೆ. ಏನೂ ಮಾಡೂದು? ಹಂಗ ಹಕ್ಕಿಲೇ ಬಡಿದಾಡೋ ಅಧಿಕಾರಾ ಜನಾ ನಂಗ ಕೊಟ್ಟಿಲ್ಲ, ಏನು ಮಾಡಾಕಾಗತೈತಿ ತಂಗಿ?” ಎನ್ನುವುದು ಭೀಮಾಬಾಯಿಯ ತೊಳಲಾಟ.

ಗಣಿಯಾರದಾ ರೇಣುಕಾ ರಾಜಕೀಯದಲ್ಲಿ ಇದ್ದರೂ ಹಾಡಿಕೆಯಲ್ಲಿ ಏಕೆ ತೊಡಗಿಸಿ ಕೊಂಡಿದ್ದಾಳೆ, ರಾಜಕೀಯವನ್ನೇ ಯಾಕೆ ಪರ್ಯಾಯವಾಗಿಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮದನ್ಹಳ್ಳಿ ಭೀಮಾಬಾಯಿ ರಾಜಕೀಯವನ್ನು ಪರ್ಯಾಯವಾಗಿಸಿಕೊಳ್ಳಬೇಕೆಂದರೂ, ಊರ ಜನರು ಅದಕ್ಕೆ ಅವಕಾಶ ಕೊಡುತ್ತಿಲ್ಲ. ಗಣಿಯಾರದ ರೇಣುಕಾ, ಮದನಳ್ಳಿ ಭೀಮಾಬಾಯಿ ಅವರಂತೆ ಹಾಡಿಕೆ ಮಹಿಳೆಯರಲ್ಲಿ ರಾಜಕೀಯದ ಕುರಿತು ಆಸೆ, ಕುತೂಹಲ ಗಳಿವೆ. ರಾಜಕೀಯದಲ್ಲಿ ಅವಕಾಶ ಸಿಗುತ್ತಾ, ಗೆಲ್ಲುತ್ತೇವೆಯೆ, ಎಷ್ಟು ದಿವಸ ಉಳಿಸಿಕೊಳ್ಳುತ್ತದೆ ಎನ್ನುವ ಸಂದೇಹ, ಅನುಮಾನಗಳು ಹಾಡಿಕೆ ಮಹಿಳೆಯರಲ್ಲಿದೆ. ಅವರಲ್ಲಿನ ಈ ರಾಜಕೀಯ ಪ್ರಜ್ಞೆ ಎಚ್ಚರದಿಂದ ಬಂದದ್ದಲ್ಲ; ಬಹಳ ಮುಗ್ಧತೆಯಿಂದ ಬಂದದ್ದು.