ಹಾಡಿಕೆಯ ಹನುಮವ್ವನನ್ನು ಹುಡುಕಿಕೊಂಡು ಕಂಬಾಗಿಗೆ ಹೋಗಿದ್ದೆನು. ಹಿಂದಿನ ದಿನ ಬಬಲೇಶ್ವರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಕಂಬಾಗಿ ಹನುಮವ್ವನಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಲು ತಮ್ಮ ಕಾಲೇಜಿನ ಕಂಬಾಗಿ ಊರಿನ ಹುಡುಗನನ್ನೇ ಒಪ್ಪಿಸಿದ್ದರು. ಹುಡುಗನು ಹೇಳಿದ ಜಾಗದಲ್ಲಿ ಕಂಬಾಗಿಯ ಬಸ್‌ಸ್ಟ್ಯಾಂಡಿನಲ್ಲಿ ಆತನಿಗಾಗಿ ಅರ್ಧಗಂಟೆಯವರೆಗೆ ಕಾಯ್ದೆನು. ತಟ್ಟನೆ ನನಗೆ ಪಾತರದವರು ಅಧ್ಯಯನ ಸಂದರ್ಭದಲ್ಲಿನ ಕ್ಷೇತ್ರಕಾರ್ಯಾನುಭವ ನೆನಪಿಗೆ ಬಂದಿತು. ಬನವಾಸಿಯಲ್ಲಿ, ತೇರದಾಳದಲ್ಲಿ ಪಾತರದವರ ಓಣಿಯೇ ಇತ್ತು. ಅದನ್ನು ತೋರಿಸಲು ಯಾರೂ ಮುಂದೆ ಬರಲೇ ಇಲ್ಲ. ಮಾರು ದೂರದಲ್ಲಿಯೇ ನಿಂತು ಕೈ ಮಾಡಿ, “ಅದು ಪಾತರದವರ ಓಣಿ. ನೀವೇ ಹೋಗಿ. ನಾವು ಬಂದರೆ ಜನ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡು ಆಡಿಕೊಳ್ಳುತ್ತಾರೆ” ಎನ್ನುತ್ತಿದ್ದರು. ಅಕ್ಷರಶಃ ಪಾತರದವರು ಇರುವ ಜಾಗ ಅಸ್ಪೃಶ್ಯ ಜಾಗವಾಗಿಯೇ ಜನ ಪರಿಗಣಿಸುತ್ತಿದ್ದರು. ಯಾರ ಸಹಾಯ ಪಡೆದುಕೊಂಡು ಪಾತರದವರ ಮನೆಗೆ ಹೋಗುತ್ತಿದ್ದೆನೋ ಆ ಮನೆಯ, ಇಲ್ಲವೆ ಆ ಊರಿನ ಪುರುಷರು ಪಾತರದವರ ಮನೆಯನ್ನು ತೋರಿಸಲು ಬರುತ್ತಿರಲಿಲ್ಲ. ಜೊತೆಯಲ್ಲಿ ತಮ್ಮ ಮನೆಯ ಮಹಿಳೆಯರನ್ನಾಗಲಿ, ಹುಡುಗಿಯರನ್ನಾಗಲಿ ಕಳುಹಿಸುತ್ತಿರಲಿಲ್ಲ. ಪಾತರದವರ ಮನೆಗೆ ‘ಕುಟುಂಬಸ್ತ’ (ಮದುವೆ ಚೌಕಟ್ಟಿಗೆ ಒಳಪಡುವವರು) ಹುಡುಗಿಯರು, ಮಹಿಳೆಯರು ಹೋಗುವುದು ಗೌರವವಲ್ಲವಂತೆ, ಹೋದರೆ ಅವರ ಕುಟುಂಬದ ಹೆಸರು ಕೆಡುತ್ತದೆಯಂತೆ. ಹುಡುಗಿಯಾಗಿದ್ದರೆ ಆಕೆಯ ಕನ್ಯತ್ವ, ಮದುವೆಯಾದವಳಿದ್ರೆ ಆಕೆಯ ಪಾತಿವ್ರತ್ಯ ಸಂದೇಹಕ್ಕೆ ಒಳಗಾಗುತ್ತದೆಯಂತೆ. ಪುರುಷರು ಪಾತರದವರ ಓಣಿಯತ್ತ ಸುಳಿದರೆ ಅವರೊಂದಿಗೆ ಸಂಬಂಧವಿದೆ ಎಂದು ಜನ ಆಡಿಕೊಳ್ಳುತ್ತಾರಂತೆ.

‘ದೇವದಾಸಿ’ ಹಿನ್ನೆಲೆಯುಳ್ಳ ಕಲಾವಿದೆಯರನ್ನು ಭೆಟ್ಟಿಯಾಗಲು ಹೋದಾಗ ಸ್ಥಳೀಯರು, ಅವರ ಮನೆಯನ್ನು ತೋರಿಸಲು ಬರುವುದಿಲ್ಲ. ಹಾಗೆ ತೋರಿಸಲು ಬಂದ ಪುರುಷರ ಕುರಿತು ಊರಿನವರು ತಪ್ಪು ತಿಳಿಯುತ್ತಾರಂತೆ. ಕಂಬಾಗಿ ಹನುಮವ್ವನ ಮನೆಯನ್ನು ಹುಡುಗ ತೋರಿಸುತ್ತೇನೆಂದದ್ದು ಪ್ರಾಂಶುಪಾಲರ ಹೆದರಿಕೆಯಿಂದ. ಕಂಬಾಗಿಯ ಹನುಮವ್ವ ಮನೆಯನ್ನು ತೋರಿಸಲಾಗದೆ ತಲೆ ಮರೆಸಿಕೊಂಡದ್ದು ಸಾಮಾಜಿಕ ಹೆದರಿಕೆಯಿಂದ. ಹುಡುಗನ ಮನಸ್ಥಿತಿ ಅರ್ಥವಾದ ತಕ್ಷಣ ನಾನೇ ಆಕೆಯ ಮನೆಯನ್ನು ಹುಡುಕಲು ಪ್ರಾರಂಭಿಸಿದೆ. ಕಂಬಾಗಿ ಅಪರಿಚಿತ ಊರಾಗಿದ್ದರಿಂದ ಆಕೆಯ ಮನೆಯನ್ನು ಹುಡುಕಲು ಆ ಊರಿನವರ ಸಹಾಯ ಅಗತ್ಯವಾಗಿತ್ತು. ಪುರುಷರನ್ನು ಕೇಳಿದರೆ ಮೀಸೆಯಲ್ಲಿಯೇ ಮುಸಿ ಮುಸಿ ನಕ್ಕು “ಆಕಿ ಮನಿ ಗೊತ್ತಿಲ್ಲ. ನಾವು ಅಂಥಾ ಜಾಗಾಕ ಹೋಗೂದಿಲ್ಲರಿ” ಎನ್ನುತ್ತಿದ್ದರು. ಮಹಿಳೆಯರು “ಕೇರ್ಯಾಗಿನ ಹೆಣ್ಣಮಕ್ಕಳ ಮನಿ ನಮಗ್ಹ್ಯಾಂಗ ಗೊತ್ತಾಗಬೇಕ್ರಿ”? ಎಂದು ನನ್ನನ್ನೇ ಪ್ರಶ್ನಿಸುತ್ತಿದ್ದರು. ಒಬ್ಬ ವಯಸ್ಸಾದ ಪುರುಷನು “ಹಾಡ್ಕಿ ಹನುಮವ್ವರಾ? ತ್ವಾಟದಾಗೆ ಮನಿ ಮಾಡಿಕೊಂಡ ಅದಾಳ್ರಿ. ಅಲ್ಲಿ ನಾ ಬರಾಕಾಗೂದಿಲ್ಲರಿ. ಏಯ್‌ದುರ್ಗಪ್ಪಾ ನಿಮ್ಮ ಹಾಡ್ಕಿ ಹನುಮವ್ವ ಕೇಳ್ಕೊಂಡ ಬಂದಾರು. ಕರಕೊಂಡ ಹೋಗಪ್ಪಾ. ಇಂವಾ ನಿಮಗ ಹನುಮವ್ವನ ತ್ವಾಟಾ ತೋರಿಸ್ತಾನು ಹೋಗ್ತಿ” ಎಂದನು.

ಹನುಮವ್ವ ತಲೆಮೇಲೆ ಸೆರಗನ್ನು ಹೊದ್ದುಕೊಳ್ಳುತ್ತ ಕೈ ಮುಗಿದು ಮುಗುಳ್ನಗೆಯಿಂದಲೇ ನಮ್ಮನ್ನ ಸ್ವಾಗತಿಸಿದಳು. ತನ್ನನ್ನು ಹಾಡಿಕೆಗಾಗಿ ಕರೆಯಲು ಬಂದಿದ್ದೇನೆಂದು ಆಕೆಯು ಭಾವಿಸಿದ್ದಳು. ನಾನು ಹಾಡಿಕೆಗೆ ಕರೆಯಲು ಬಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದಾಗ ನನಗಿನ್ನು ಪೆನ್‌ಷನ್‌ಗೆ ವಯಸ್ಸಾಗಿಲ್ಲರಿ ಎಂದಳು. ನಾನು ಕಲಾ ಪಿಂಚಣಿ ಕೊಡಿಸುವಳಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಕಲೆ ಹಾಗೂ ಕಲಾವಿದರ ಬದುಕಿನ ಅಧ್ಯಯನಕ್ಕಾಗಿ ಬಂದವಳೆಂದು ಹೇಳಿದೆ. ಹಾಗೆ ಹೇಳಿದ ತಕ್ಷಣ ಹಾಡಲು ಹೋದಲ್ಲಿ ಕೊಟ್ಟಿದ್ದ ಪ್ರಶಸ್ತಿ ಪತ್ರಗಳನ್ನು ಎದುರಿಗೆ ತಂದಿಟ್ಟಳು. ಖಾಸಗಿಯವರು ಹಾಗೂ ಸರಕಾರದವರು ನೀಡಿದ ಪ್ರಶಸ್ತಿ ಪತ್ರಗಳ ರಾಶಿ ಅದಾಗಿತ್ತು. ಏನೇ ಕೇಳಿದರೂ ‘ಅಲ್ಲೇ ಅದಾವಲ್ಲ್ರಿ. ಅವ್ನ ಬರಕೊಂಡು ಹೋಗಿಬಿಡ್ರಿ’ ಎಂದು ಪ್ರಶಸ್ತಿ ಪತ್ರವನ್ನು ತೋರಿಸಿ ಹೇಳುತ್ತಿದ್ದಳು. ನಾನು ಅವಳ ಅಂತರಂಗವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಆಕೆ ನಾನು ಅವಳೊಳಗೆ ಪ್ರವೇಶಿಸದಂತೆ ಪ್ರಜ್ಞಾಪೂರ್ವಕವಾಗಿಯೇ ಅಂತರಂಗದ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಂಡಿದ್ದಳು. ಅಧ್ಯಯನ ವಿಷಯವನ್ನು ಬದಿಗೊತ್ತಿ ಅವಳೊಂದಿಗೆ ಹರಟಲು ಕುಳಿತೆ. ನಿಧಾನಕ್ಕೆ ನನ್ನನ್ನು ಅವಳು ತನ್ನ ಅಂತರಂಗದ ಹೊರ ಪದರಿಗೆ ಕರೆದುಕೊಂಡಂತೆ ಅನಿಸಿತು. ಹನುಮವ್ವನು ತೋಟದ ಮನೆ ಬಾಗಿಲು ತೆಗೆದು ಒಳಗೆ ಬೆಳಿಗ್ಗೆ ಏಳು ಗಂಟೆಗೆ ಕರೆದುಕೊಂಡಿದ್ದರೆ, ಸಾಯಂಕಾಲ ನಾಲ್ಕು ಗಂಟೆಗೆ ಅಂತರಂಗದ ಕಿಟಕಿಯನ್ನು ತೆಗೆದು ಮಾತನಾಡತೊಡಗಿದಳು.

ಸೋಲಾಪುರದ ಬಳಿಯ ಮಂದರೂಪದಲ್ಲಿ ಮಲ್ಲಿಕಾರ್ಜುನನು ಸ್ವತಃ ಹಾಡುಗಾರನಲ್ಲದಿದ್ದರೂ ನಾಗೇಶಿ ಹಾಡುಗಳನ್ನು ಕಲಿಯ ಬಯಸಿದವರಿಗೆ ಕಲಿಸಿದವನು. ಇಂತಿಂಥ ಕಾರಣಕ್ಕಾಗಿ ನಿಮ್ಮನ್ನು ಸಂದರ್ಶಿಸಲು ಬಂದಿದ್ದೇನೆ ಎನ್ನುವುದನ್ನು ಮಲ್ಲಿಕಾರ್ಜುನನಿಗೆ ಹೇಳಿದೆನು. ನಾನು ಅವನೊಂದಿಗೆ ಮಾತನಾಡುವಾಗ ಅವನು ಧೋತುರ ಉಟ್ಟಿದ್ದನು, ಬನಿಯನ್ ತೊಟ್ಟಿದ್ದನು. ‘ಸ್ವಲ್ಪ ನಿಲ್ಲ್ರಿ’ ಎಂದು ಒಳ ಹೋದವನೇ ರೇಷಿಮೆಯ ಜುಬ್ಬ, ತಲೆಯ ಮೇಲೆ ಟೋಪಿ ಹಾಕಿಕೊಂಡು ಬಂದು ಕುಳಿತನು. ನಾನು ಅವನೊಂದಿಗೆ ಮಾತನಾಡಲು ಹೋದಾಗ “ನೀವು ಯಾನೂ ಮಾತನಾಡ್ರಿ” ಎಂದನು. ಪಿಟೀಲು ಬಾರಿಸಲು ಕುಳಿತನು. ಏನೋ ಐದ್ಹತ್ತು ನಿಮಿಷ ಪಿಟೀಲು ಬಾರಿಸಬಹುದು ಎಂದಿದ್ದೆ. ಒಂದು ಗಂಟೆಯಾದರೂ ನಿಲ್ಲುವ ಲಕ್ಷಣಗಳು ಕಾಣಲಿಲ್ಲ. ‘ಮಾತನಾಡೋಣ’ ಎಂದು ನಾನು ಹೇಳಿದಾಗಲೆಲ್ಲ ಅವನಿಗೆ ಕಲಾ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಿದಂತೆ ಎನಿಸುತ್ತಿತ್ತೋ ಏನೋ! ಕಣ್ಣು ಕೆಂಪಗೆ ಮಾಡಿ ಕೈ ಸನ್ನೆಯಿಂದ ಸುಮ್ಮನಿರಲು ಸೂಚಿಸುತ್ತಿದ್ದನು. ಹೀಗೆ ಅವನು ಪಿಟೀಲು ಕುಯ್ಯುವುದು ಮೂರು ಗಂಟೆಗಳವರೆಗೆ ಹಾಗೆಯೇ ಮುಂದುವರೆದಿತ್ತು. ಹಸಿದ ಹೊಟ್ಟೆ ತಾಳ ಹಾಕುತ್ತಿತ್ತು. ನಿರಂತರ ಮೂರುವರೆ ಗಂಟೆಯವರೆಗೆ ಪಿಟೀಲು ಕುಯ್ಯುವುದನ್ನು ಕೇಳಿ ತಲೆನೋವು ಸೇರಿಕೊಂಡಿತ್ತು. ಮಲ್ಲಿಕಾರ್ಜುನನೊಂದಿಗೆ ಸಂಭಾಷಿಸಲು ಸಾಧ್ಯವಿಲ್ಲವೆನಿಸಿತು. ಹೊರಡಲು ಎದ್ದು ನಿಂತೆ. ತಾಳಗಳನ್ನು ಹಿಡಿದುಕೊಂಡು ಮಲ್ಲಿಕಾರ್ಜುನನ ಪಕ್ಕದಲ್ಲಿ ಒಬ್ಬನು ಕುಳಿತಿದ್ದನು. ಅವನು ನಾನು ಹೊರಡುತ್ತಿರುವ ಸೂಚರಣೆಯನ್ನು ಮಲ್ಲಿಕಾರ್ಜುನನ ಕಿವಿಯಲ್ಲಿ ಉಸುರಿದನು. ಧ್ಯಾನಸ್ಥ ಸ್ಥಿತಿಯಿಂದ ಎಚ್ಚರಗೊಂಡವರಂತೆ ಕಣ್ಣು ತೆರೆದನು. ಎದ್ದು ನಿಂತ ನನಗೆ ಕೈ ಸನ್ನೆಯಿಂದಲೆ ಕೂಡಲು ಹೇಳಿದನು. ಗಂಟಲು ಸರಿಪಡಿಸಿಕೊಂಡು “ಬರಕೊಳ್ಳಾಕ ಪೆನ್ನಾ, ಪೇಪರೂ ತಂದಿಯಲ್ಲವ್ವಾ” ಎಂದರು. ‘ಹೌದು’ ಎನ್ನುವಂತೆ ತಲೆಯಲ್ಲಾಡಿಸಿದೆ. ಅವುಗಳನ್ನು ಕೈಗೆತ್ತಿಕೊಳ್ಳಲು ಹೇಳಿದನು. ಹಾಗೆಯೇ ಮಾಡಿದೆ. ಗಂಟಲು ಸರಿಪಡಿಸಿಕೊಂಡನು. ನಾನು ಅವನೊಂದಿಗೆ ಮಾತನಾಡಲು ಹೋದರೂ ಹಿಂದಿನ ಗತ್ತಿನಲ್ಲಿಯೇ ಸುಮ್ಮನಿರಲು ಸೂಚಿಸಿದನು. “ಬರ್ಕೊ ತಂಗಿ, ಹರದೇಶಿ -ನಾಗೇಶಿ ಹಾಡುವ ಪದ್ಧತಿ ಪುರಾತನ ಕಾಲದಿಂದಲೂ ಇದೆ” ಎಂದನು. “ಹಾಡಿಕೆಯ ಪ್ರಕ್ರಿಯೆ ಕುರಿತು ಮಾತಾಡೋಣ. ಇಲ್ಲವಾದರೆ ಯಾರು ನಿಮ್ಮ ಬಳಿ ಕಲಿತಿರುವವರು, ಹೊಸದಾಗಿ ಹಾಡಿಕೆ ಕಲಿಯ ಬಯಸುವವರಿಗೆ ಆಚರಣೆಗಳು ಏನಾದರೂ ಇವೆಯಾ ಹೀಗೆ ಬೇರೆ ಬೇರೆ ಸಂಗತಿಗಳ ಬಗ್ಗೆ ಮಾತಾಡೋಣ. ಹಾಡಿಕೆ ಹುಟ್ಟಿನ ಕುರಿತು ಕಥನಗಳೇನಾದರೂ ಇದ್ದರೆ ಹೇಳಿ” ಎಂದೆ. ನನ್ನೊಂದಿಗೆ ಮಾತನಾಡಲು ಕುಳಿತಾಗ ಅವನು ಎಲೆ ಅಡಿಕೆ ಹಾಕಿಕೊಂಡಿದ್ದನು. ಒಂದು ನಿಮಿಷ ಎನ್ನುವಂತೆ ಕೈ ಸನ್ನೆ ಮಾಡಿ ಹೊರಗಿನ ಅಂಗಳದಲ್ಲಿ ತಂಬಾಕಿನ ಎಲೆ ಅಡಿಕೆಯನ್ನು ಉಗುಳಿ ಬಂದನು. “ನೋಡ ತಂಗಿ ಹಾಡ್ಕಿ ಕಲ್ಸೂದರಾಗ ನನ್ನ ತಲಿಕೂದ್ಲು ಬಿಳಿಯಾಗ್ಯಾವ. ನೀನು ನನ್ನೇನೂ ಕೇಳಬ್ಯಾಡ. ನಾನು ಹೇಳಿದ್ದಷ್ಟ ಬರ್ಕೊಂಡು ಹೋಗು. ಅದನ್ನ ನೀನು ಬರ‍್ದ ಬಿಟ್ಟ್ರ ಬೇಕಾದಷ್ಟು ಪ್ರಸಿದ್ಧಿ ಬರ್ತಿ” ಎಂದು ಮತ್ತೆ ಹೀಗೆ ಹೇಳಲು ಪ್ರಾರಂಭಿಸಿದನು. “…ಹರದೇಶಿಯವರು ಶಿವ ಹೆಚ್ಚೆಂದರೆ, ನಾಗೇಶಿಯವರು ಪಾರ್ವತಿ ಹೆಚ್ಚೆನ್ನುತ್ತಾರೆ. ಜಗತ್ತಿಗೆ ತಾಯಿಯೂ ಬೇಕು, ತಂದೆಯೂ ಬೇಕು. ಎಷ್ಟೇ ಆದರೂ ತಂದೆಯೇ ತಾಯಿಗಿಂತ ಗುಲಗಂಜಿ ತೂಕದಷ್ಟಾದರೂ ಹೆಚ್ಚಿರುತ್ತಾನೆ. ಬರ್ದ ಇಲ್ಲs ತಂಗಿs? ಸುಮ್ಮನ ಹಂಗs ಕುಂತಿಯಲ್ಲವ್ವಾ. ಒಮ್ಮಿ ಇಚಾರಾ ಬಂದಿದ್ದ ಮತ್ತೊಮ್ಮಿ ಬರೂದಿಲ್ಲ. ಹೇಳೂದು ಜರಾ (ಸ್ವಲ್ಪ) ಅವಸ್ರಾ ಆಗತ್ತೇನೋ. ಬರ್ಕೊ ಹಂಗಾದ್ರ ಹ…ರ..ದೇ..ಶಿ..” ಹೀಗೆ ಏನು ಬರೆದುಕೊಳ್ಳಬೇಕು ಎನ್ನುವುದನ್ನು ಅವನೇ ಸೂಚಿಸಲು ಪ್ರಾರಂಭಿಸಿದನು. ಮಲ್ಲಿಕಾರ್ಜುನನು ಮೂರುವರೆ ಗಂಟೆಗಳ ವರೆಗೆ ಪಿಟೀಲು ನುಡಿಸಿದ್ದನ್ನು ಕೇಳಿ ಆಯಾಸಗೊಂಡಿದ್ದೆ. ಬರೆಯಲು ಅವನೇ ನಿರ್ದೇಶಿಸುತ್ತಿದ್ದ ರೀತಿ, ನನ್ನಲ್ಲಿ ತುಂಬ ಮಾನಸಿಕ ಬಳಲಿಕೆಯನ್ನು ಉಂಟುಮಾಡಿತು. “ಹಾಡಿಕೆ ಈರಮ್ಮ ರಾತ್ರಿ ೯ ಗಂಟೆಗೆ ಬರುತ್ತೇನೆ ಎಂದಿದ್ದಾಳೆ. ಮೊದಲು ಹೋಗಿ ಊಟ ಮಾಡಿ ಬರುತ್ತೇನೆ. ಹಸಿವೆ ಆಗಿದೆ” ಎಂದು ಅಲ್ಲಿಂದ ಕಾಲ್ಕಿತ್ತೆ.

ರಾತ್ರಿ ಒಂಬತ್ತು ಗಂಟೆಗೆ ಈರಮ್ಮ ಹೇಳಿದಂತೆ ಬಂದಿದ್ದಳು. ಮಲ್ಲಿಕಾರ್ಜುನ ಮನೆಯೂ ಈರಮ್ಮನ ಮನೆಯೂ ಸ್ವಲ್ಪ ಅಂತರದಲ್ಲಿ ಇತ್ತು. ಆಕೆ ತುಂಬ ಆಯಾಸಗೊಂಡಿದ್ದಳು. ನಾಳೆ ಬರುತ್ತೇನೆ ಎಂದೆ. “ಇಲ್ಲ್ರಿ ಈಗs ಮಾತಾಡೂನು. ಹಗಲ್ಯಾದ್ರ ಅಂವಾ ನಮ್ಮಿಬ್ರ ನಡಬರಕ ಬಂದು ಕೂಡತಾನು” ಎಂದಳು. ನಾನು ಈರಮ್ಮನೊಂದಿಗೆ ಆಕೆಯ ಮನೆಯ ಒಳಗೆ ಕುಳಿತುಕೊಂಡಿದ್ದೆನು. ಹೊರಗಡೆ ಮಲ್ಲಿಕಾರ್ಜುನನು ಶಿವ ತಾಂಡವ ನರ್ತನದಂತೆ ಅತ್ತಿಂದಿತ್ತ, ಇತ್ತಿಂದಿತ್ತ ತಕಧಿಂ, ತಕಧಿಂ ಎನ್ನುವಂತೆ ಹೆಜ್ಜೆ ಹಾಕುತ್ತಿದ್ದನು. ಅವನನ್ನು ನೋಡಿದ ಈರಮ್ಮ ‘ಜರಾ ಈಕಾಡಿ ಬರ್ರಿ’ ಎಂದು ನನ್ನನ್ನು ಮತ್ತೆ ಒಳರೂಮಿಗೆ ಕರೆದುಕೊಂಡು ಹೋದಳು. ಹಿಂದುರುಗಿ ಅಂಗಳದಲ್ಲಿನ ಮಲ್ಲಿಕಾರ್ಜುನನ್ನು ನೋಡಿದೆ. ಅವನು ಕಾದ ಹಂಚಿನಲ್ಲಿನ ಅರಳಿನಂತೆ ಚಟಪಟನೆ ಚಡಪಡಿಸುತ್ತಿದ್ದನು. ಆತನ ಮುಖದ ಮೇಲೆ ಅಸಹನೆ ಎದ್ದು ಹೊಡೆಯುತ್ತಿತ್ತು. ಯಾಕೋ ವಿಷಯ ಬಹಳ ಸೂಕ್ಷ್ಮವಿದೆ ಎನಿಸಿತು. ಹೊರಗಡೆ ನಿಂತುಕೊಂಡಿದ್ದ ನನ್ನ ವಿದ್ಯಾರ್ಥಿ ಪಂಪಾಪತಿಯನ್ನು ಒಳ ಕರೆದು ಮಲ್ಲಿಕಾರ್ಜುನನ್ನು ಆಚೆ ಕರೆದುಕೊಂಡು ಹೋಗುವಂತೆ ಸೂಚಿಸಿದೆನು.

ಬಹಳ ಬೇಗನೆ ಈರಮ್ಮ ಆಪ್ತಳಾದಳು. ನನ್ನಂತಹ ಗೆಳತಿಯೊಬ್ಬಳ ನಿರೀಕ್ಷಣೆಯಲ್ಲಿ ಆಕೆ ಇದ್ದಳೋ ಏನೋ?! ನಿಧಾನಕ್ಕೆ ಹಾಡಿಕೆಯ ಅನೂಹ್ಯ ಲೋಕದೊಳಗೆ ಭೀಕರ ಅನುಭವಗಳನ್ನು ಬಿಚ್ಚಿಡುತ್ತ ಹೋದಳು. ನಾನೆಂದೂ ಕೇಳದ ಹಾಗೂ ಊಹಿಸಿಕೊಳ್ಳದ ಕ್ರೂರ ಅನಭವಗಳು ಅವು. ಮಲ್ಲಿಕಾರ್ಜುನನ ಚಡಪಡಿಕೆ ಅರ್ಥವಾಯ್ತು. ಆಕೆಗೆ ತನ್ನ ಒಳಗುದಿಯನ್ನು ಕೇಳಿಸಿಕೊಳ್ಳುವವರು ಬೇಕಾಗಿತ್ತು. ಆರಂಭದಲ್ಲಿ ಮಾತ್ರ ನಾನು ಆಕೆಯೊಂದಿಗೆ ಮಾತನಾಡಿದೆ. ನಂತರ ಆಕೆಯೇ ಬಿಕ್ಕುತ್ತ, ನಿಟ್ಟುಸಿರಿಡುತ್ತ ಎಲ್ಲವನ್ನು ಮಾತನಾಡತೊಡಗಿದಳು. ರಾತ್ರಿ ಸರಿ ಸುಮಾರು ೧೧.೩೦ ಆಗಿತ್ತು. ಆಗ ನಮ್ಮೆದುರಗೆ ದಪ್ಪೆಂದು ಕಲ್ಲು ಬಿದ್ದಿತು. ನಾನು ಗಾಭರಿಯಾದೆ. ಆಕೆ ನನ್ನನ್ನು ಸುಮ್ಮನಿರುವಂತೆ ಕೈಸನ್ನೆ ಮಾಡಿದಳು. “ಯಾನ?” ಎಂದಳು. “ಯಾನ ಹೇಳಾಕ್ಹತ್ತಿದಂಗಿತ್ತು? ಏನದು? ಪೇಪರಿನವ್ರು ಅವ್ರು. ಹುಷಾರಾಗಿ ಮಾತಾಡು” ಎನ್ನುವ ಗಂಡು ಧ್ವನಿ ಬಂದಿತ್ತು. ಅದು ಮಲ್ಲಿಕಾರ್ಜುನನದೇ ಆಗಿತ್ತು. “ಎಲ್ಲಾ ಗೊತ್ತೈತಿ ಸುಮ್ನ ಹೋಗು” ಎಂದಳು. “ಮುಕುಳಿ ಸುಟ್ಟ ಬೆಕ್ಕಿನಂಗ ಹ್ಯಾಂಗ ಒಡಾಡಾಕ್ಹತ್ತ್ಯಾನು ನೋಡ್ರಿ” ಎಂದು ವ್ಯಂಗ್ಯವಾಗಿ ಹೇಳಿದಳು.

“ತುಂಬ ರಾತ್ರಿಯಾಯ್ತು. ನಾಳೆ ಬರುತ್ತೇನೆ” ಎಂದೆನು. “ಇಂಥಾ ವ್ಯಾಳ್ಯಾ ನಾಳಿ ಸಿಗತೈತೋ ಇಲ್ಲೋ ಗೊತ್ತಿಲ್ಲ. ಇವತ್ತs ನನ್ನ ಹೊಟ್ಟಾಗ ಇದ್ದದ್ದು ಬಿದ್ದದ್ದು ಎಲ್ಲಾ ಕಕ್ಕಿ ಬಿಡ್ತೇನು. ನಾಳೆ ಹೊತ್ತ ಹೊಂಡೂದ್ಕ ಮತ್ತ ಹಾಡ್ಕಿಗಿ ಹೋಗ್ತೇನು” ಎಂದಳು. ಹೊಟ್ಟೆ ಹಿಡಿದುಕೊಂಡು ಅತ್ತಳು. ಗೋಡೆಗೆ ತಲೆ ಜಜ್ಜಿಕೊಂಡಳು. ಇನ್ನೇನು ಜೀವವೇ ಹೋಗಿ ಬಿಡುತ್ತದೆ ಎನ್ನುವ ಆಯಾಸವನ್ನು ಅನುಭವಿಸಿದಳು. ಬಾಯಿಗೆ ಅಡ್ಡ ಸೆರಗು ಹಿಡಿದುಕೊಂಡು ಅತ್ತಳು, ಅತ್ತಳು, ಸುಮ್ಮನೆ ಅಳುತ್ತಲೇ ಇದ್ದಳು. ಅವಳ ದುಃಖವನ್ನು ತಡೆಯುವ ಪ್ರಯತ್ನವನ್ನು ಮಾಡಲಿಲ್ಲ. ಅದೇಸು ವರ್ಷಗಳಿಂದ ಸಮಾಜ ಉಣಿಸಿದ ಯಾವ್ಯಾವ ವಿಷಗಳನ್ನು ಒಡಲೊಳಗೆ ಇಟ್ಟುಕೊಂಡಿದ್ದಾಳೋ!? ಕಕ್ಕಿ ಮನಸ್ಸು ಹಗುರಮಾಡಿಕೊಳ್ಳಲಿ ಎಂದು ಸುಮ್ಮನಾಗಿ ಬಿಟ್ಟೆನು. ಹೇಳುವುದನ್ನು ನಿಲ್ಲಿಸಲಿಲ್ಲ. ಹೇಳುತ್ತಲೇ ಹೋದಳು. ಸರಿಸುಮಾರು ರಾತ್ರಿ ಒಂದು ಗಂಟೆಯಾಗಿರಬೇಕು. “ಇವತ್ತು ಮನಸ್ಸು ನಿರಾಳ (ಹಗುರ) ಅನಸಾಕತ್ತೈತಿ ನೋಡ್ರಿ. ನನ್ನ ಹಡದ ಅವ್ವನಿಂದ ಹಿಡ್ದು ಯಾರೊಬ್ಬರೂ ನಿಂದೇನ ಕಷ್ಟ ತಂಗಿ ಅಂತ ಇಚಾರಾ (ವಿಚಾರ) ಮಾಡಿರ್ಲಿಲ್ಲ. ದೇವ್ರು ನಿನ್ನ ಚಂದಾಗಿ ಇಟ್ಟಿರ್ಲಿ” ಎಂದು ಹರಸಿ ಕಳುಹಿಸಿದಳು. ಕೊನೆಯಲ್ಲಿ “ಇವತ್ತ ರಾತ್ರಿ ಇಲ್ಲೆ ವಸ್ತಿ ಮಾಡಬ್ಯಾಡಾ. ಕರ್ನಾಟಕಕ್ಕ ಹೋಗಿ ವಸ್ತಿ ಮಾಡು. ಇಲ್ಲಿ ಇನ್ನೊಮ್ಮೆ ಬರಾಕ ಹೋಗಬ್ಯಾಡಾ. ಬಂದ್ರೂ ಗುಂಪಗೂಡಿ ಬರ್ರಿ. ನಿನ್ನ ಒಳ್ಳೆ ಮನಸ್ಸಿಗೆ ದೇವ್ರುs ನಿನ್ನ ಕಾದಾನು. ನಮಸ್ಕಾರಾ ಹೋಗಿ ಬಾ ತಾಯಿ” ಎಂದಳು. ಅವಳ ಕೊನೆಯ ಮಾತು ಯಾಕೋ ನನ್ನಲ್ಲಿ ನಡುಕ ಹುಟ್ಟಿಸಿತು. ಮಲ್ಲಿಕಾರ್ಜುನ ಆ ಅಪರಾತ್ರಿಯಲ್ಲಿ ಮುಖ ಸಿಂಡರಿಸಿಕೊಂಡು ಅಂಡ ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಇತ್ತಿಂದತ್ತ ಅಲೆದಾಡುತ್ತಿದ್ದನು. “ಸರ್ ನಾನು ನಿಮನ್ನ ಸಂದರ್ಶನಾ ಮಾಡ್ತೇನು. ಆಕಾಡಿ ಹೋಗೂನು ಬರ್ರಿ ಸರ್” ಎನ್ನುತ್ತಿದ್ದ ಪಂಪಾಪತಿ. ನನ್ನನ್ನು ನೋಡಿದ ಪಂಪಾಪತಿ ಸಮಾಧಾನದ ನಿಟ್ಟುಸಿರು ಬಿಟ್ಟ. ದುಮುದುಮು ಉರಿಯುತ್ತಿದ್ದ ಮಲ್ಲಿಕಾರ್ಜುನನು “ನಾಳಿ ನಿನ್ನ ಜೋಡಿ ಮಾತಾಡ್ತೇನು” ಎಂದು ಈರಮ್ಮನಿಗೆ ಹೇಳುತ್ತ, ಬಯಲಾಟದ ಪಾತ್ರಧಾರಿಗಳಂತೆ ಧಕ್ ಧಕ್ ಎಂದು ಕುಣಿಯುತ್ತ ಹೋದನು. ಹೊರಗಡೆ ಜೋರಾಗಿ ಗಾಳಿ ಬೀಸುತ್ತಿತ್ತು. ಅಂಥದರಲ್ಲಿಯೂ ಪಂಪಾಪತಿ ಸಂಪೂರ್ಣ ಬೆವತು ಹೋಗಿದ್ದನು. ಮಲ್ಲಿಕಾರ್ಜುನನನ್ನು ಹಿಡಿದಿಡಲು ಆತನು ಪಟ್ಟ ಹರಸಾಹಸದ ಕಥೆಯನ್ನು ಪಂಪಾಪತಿ ಮುಖದಲ್ಲಿನ ಬೆವರು ಹನಿಗಳೇ ಹೇಳುತ್ತಿದ್ದವು. ಈರಮ್ಮ ಹೇಳಿದಂತೆ ನಾವು ಕರ್ನಾಟಕಕ್ಕೆ (ಇಂಡಿ) ಬಂದು ವಸತಿ ಮಾಡಿದೆವು.

ತಲಬಾಗಿ ಶೆಟ್ಟೆವ್ವನ ಭೇಟಿ ಮತ್ತೊಂದು ಭಿನ್ನ ಅನುಭವ. ಆಕೆ ಹಾಡಿಕೆ ಮಾಡಿದ್ದು ೪೦ ವರ್ಷ ವಯಸ್ಸಿನವರೆಗೆ. ಎರಡನೆಯ ಮಗ ಕಾಲೇಜು ಉಪನ್ಯಾಸಕನಾದ. ತಾಯಿಗೆ ಹಾಡಿಕೆ ಮಾಡದಿರುವಂತೆ ಸೂಚಿಸಿದನು. ನಂತರ ಮನೆಯಲ್ಲಿ ಎಲ್ಲ ತಮ್ಮಂದಿರಿಗೆ, ತಂಗಿಯರಿಗೆ ತಾನೇ ಶಿಕ್ಷಣ ಕೊಡಿಸಿದನು. ಒಬ್ಬನು ಹೈಸ್ಕೂಲ್ ಮಾಸ್ತರನಾಗಿ ಕೆಲಸ ನಿರ್ವಹಿಸುತ್ತಿದ್ದರೆ, ಮತ್ತೊಬ್ಬನು ಬ್ಯಾಂಕಿನಲ್ಲಿ ಕಾರಕೂನನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಆಕೆಯ ಮನೆಯನ್ನು ಕೇಳಿಕೊಂಡು ಹೋದಾಗ, ಊರಿನವರು ಶೆಟ್ಟವ್ವನ ಕುರಿತು ಹೀಗೆ ಹೇಳಿದರು: “ಶೆಟ್ಟೆವ್ವ ಈಗ ಹಾಡ್ಕಿ ಬಿಟ್ಟಾಳ. ಮಕ್ಕಳೆಲ್ಲಾ ಈಗ ದೊಡ್ಡ ದೊಡ್ಡ ಕೆಲ್ಸದಾಗ ಅದಾರು. ಅವ್ರ ಮನಿ ಅಲ್ಲಿ ಐತಿ ನೋಡ್ರಿ” ಶೆಟ್ಟವ್ವ ಹಾಡಿಕೆ ಬಿಟ್ಟ ಕಾರಣಕ್ಕಾಗಿಯೇ ಅಥವಾ ಆಕೆಯ ಮಕ್ಕಳು ಸರಕಾರಿ ಹುದ್ದೆಯಲ್ಲಿದ್ದ ಕಾರಣಕ್ಕಾಗಿಯೋ ಆಕೆಯ ಕುರಿತು ಗೌರವಯುತವಾಗಿಯೇ ಮಾತನಾಡಿದರು.

ಕಲಿತ ಮಕ್ಕಳು ತಮ್ಮ ತಾಯಿ ಹಾಡಿಕೆ ಮಾಡಿಯೇ ಇಲ್ಲ ಎಂದರು; ತಾಯಿ ಹಾಡಿಕೆ ಮಾಡಿದ್ದಳು ಎಂದು ಒಪ್ಪಿಕೊಂಡರೆ ಅವಳು ‘ದೇವದಾಸಿ’ ಎಂದು ಒಪ್ಪಿಕೊಂಡಂತೆ. “ನಮ್ಮವ್ವ ಮದ್ವಿಯಾದಾಕಿ, ಹಾಡ್ಕಿ ಹ್ಯಾಂಗ ಮಾಡಾಕ ಬರತೈತ್ರಿ? ಯಾರೋ ನಿಮಗ ಸುಳ್ಳು ಮಾಹಿತಿ ಕೊಟ್ಟಿದ್ದಾರೆ” ಎಂದು ಹೇಳಿದರು. ಒಕ್ಕಲುತನವನ್ನು ಮಾಡಿಕೊಂಡು ಹೋಗುತ್ತಿದ್ದ ಮಗನಿಗೆ ಏನ್ನಿಸಿತೋ ಏನೋ? ‘ಅಷ್ಟ ದೂರದಿಂದ ಬಂದಾರು. ಎಲ್ಲಾರು ಹಂಗ್ಯಾಕ ಕೌಬೌ ಮಾಡ್ತೀರಿ? ನಮ್ಮವ್ವ ನಮ್ಮನ್ನೆಲ್ಲಾ ಜ್ವಾಪಾನು ಮಾಡಿದ್ದು ಹಾಡ್ಕಿಯಿಂದ. ಇವತ್ತ ಆವು ಹೀಂಗ ಅದೀವಿ ಅಂದ್ರ, ಅದು ನಮ್ಮವ್ವನ ಹಾಡ್ಕಿಯಿಂದ. ಏನು ಕೇಳಿ ಬರಕೊಂಡು ಹೋಗ್ತಾರೋ ಹೋಗ್ಲಿ” ಎಂದನು. ಮನೆಯ ಮೂಲೆಯಲ್ಲಿ ಹಣೆ ಗಂಟಕ್ಕಿಕೊಂಡೇ ಶೆಟ್ಟೆವ್ವ ಕುಳಿತಿದ್ದಳು. ನನ್ನ ಆಗಮನ ಆಕೆಗೆ ಪ್ರಿಯವಾಗಿರಲಿಲ್ಲ. ನನ್ನ ಜೊತೆ ಶೆಟ್ಟವ್ವನ ಕುಟುಂಬದವರು ಆಕ್ರೋಶದಿಂದ ನಡೆದುಕೊಂಡರು. ಸುಮ್ಮನೆ ಕುಳಿತುಕೊಂಡಿದ್ದೆ. “ಇಲ್ಲೆ ಕುಂತಾಳ ನೋಡ್ರಿ. ಅದೇನು ಕೇಳ್ಕೊತಿರೋ ಕೇಳ್ರಿ” ಎಂದರು. ಶೆಟ್ಟೆವ್ವನದು ಕೂಡು ಕುಟುಂಬ. ಮನೆಯಲ್ಲಿ ಏನಿಲ್ಲೆಂದರೂ ಇಪ್ಪತ್ತು, ಇಪ್ಪತ್ತೈದು ಜನ ಇದ್ದರು. ಕೆಲವರು ನಾನು ಕುಳಿತ ಪಡಸಾಲೆಯಲ್ಲಿ ಕುಳಿತಿದ್ದರೆ, ಮತ್ತೆ ಕೆಲವರು ಬೆಡ್‌ರೂಮಿನಿಂದ, ಅಡುಗೆ ಮನೆಯಿಂದ ಇಣುಕಿ ನೋಡುತ್ತಿದ್ದರು. ಯಾವಾಗಿನಿಂದ ಹಾಡು ಕಲಿಯಲು ಪ್ರಾರಂಭಿಸಿದಿರಿ, ನಿಮ್ಮ ಗುರು ಯಾರು, ಹಾಡಿಕೆ ಕಲಿಯಲು ಎಷ್ಟು ಅವಧಿ ತೆಗೆದುಕೊಂಡಿರು… ಹೀಗೆ ಯಾಂತ್ರಿಕವಾಗಿ ಪ್ರಶ್ನೆ ಕೇಳುತ್ತ ಹೋದೆನು. ಆಕೆಯೂ ಯಾಂತ್ರಿಕವಾಗಿ ಉತ್ತರಿಸುತ್ತ ಹೋದಳು. ಹಾಡಿಕೆಗೆ ಕರೆದವರು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಹಾಡಿಕೆಯಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆ ಏನು, ಹಾಡಿಕೆಯಲ್ಲಿ ಕಷ್ಟಗಳು ಎದುರಾದವೆ, ಎಂತಹ ಕಷ್ಟಗಳು ಎಂದು ಕೇಳಲು ಪ್ರಾರಂಭಿಸಿದಾಗ ಪಡಸಾಲೆಯಲ್ಲಿ ಕುಳಿತವರು, ಬೇರೆ-ಬೇರೆ ರೂಮುಗಳಿಂದ ಇಣುಕುತ್ತಿದ್ದವರ ಮುಖಗಳಲ್ಲಿ ಒಂದು ಬಗೆಯ ಕಸಿವಿಸಿ, ಅಸಮಾಧಾನ, ಸಿಟ್ಟು, ಅಪಮಾನ ಕಾಣತೊಡಗಿದವು, “ನಿಮ್ಗೆ ಇವೆಲ್ಲಾ ಯಾಕ್ರಿ ಬೇಕು? ಕಷ್ಟಾನೋ ಸುಖಾನೋ ಅನುಭವಿಸಿದ್ದಾಳೆ ನಮ್ಮವ್ವ. ಇವನ್ನೆಲ್ಲಾ ಕೇಳ್ಕೊಂಡು ಬರ್ದು ನಮಗ್ಯಾಕ ಮುಖಾ ಎತ್ತ್ಲಾರ್‍ದಂಗ ಮಾಡ್ತೀರಿ? ನೀವು ಯುನಿವರ್ಸಿಟಿಯವ್ರು ಅಂದದ್ದಕ್ಕ ಮರ್ಯಾದಿ ಕೊಟ್ಟೇವ್ರಿ. ಹೋಗ್ರಿ ಆತ್ಲಾಗೆ. ನಮ್ಮವ್ವ ಹಾಡ್ಕಿ ಮಾಡೇ ಇಲ್ಲ. ನೀವು ನಮ್ಮವ್ವನ ಹಾಡ್ಕಿ ಬಗ್ಗೆ ಕೇಳಿ ಬರ್ದು ಕಲಾ ಪಿಂಚಣಿ ಕೊಡಿಸ್ತೀರಿ ಅಂದಿದ್ರ ಅದು ಬ್ಯಾರೆ ಮಾತು. ಇಗಾ ಈಗಾಗ್ಲೆ ನಮ್ಮವ್ವ ಕಲಾ ಪಿಂಚಣಿ ತಗೊಳ್ಳಾಕತ್ತಾಳು. ನೀವು ಆಕಿ ಬಗ್ಗೆ ಬರಿಯೂ ಜರೂರತ್ತೇನು ಇಲ್ಲ. ಬರ್ದು ನಮ್ಮನ್ನ, ನಮ್ಮವ್ವನ ಅಪಮಾನಾ ಮಾಡಬ್ಯಾರಿ. ದೂರ‍್ದಿಂದ ಬಂದೇರಿ, ಚಾ ಕುಡಿರಿ, ನಡ್ರಿ” ಎಂದನು. ನಾನು ಅಲ್ಲಿಂದ ಜಾಗ ಖಾಲಿ ಮಾಡದೆ ಬೇರೆ ದಾರಿ ಇರಲಿಲ್ಲ.

ಶೆಟ್ಟೆವ್ವ, ಹಾಡಿಕೆಯಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದಳು. ಆಕೆಯ ಅನುಭವ ಲೋಕದ ಮೂಲಕ ಹಾಡಿಕೆ ಜಗತ್ತನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವೆನಿಸಿತ್ತು. ಶೆಟ್ಟೆವ್ವನ ಮಕ್ಕಳ ಆಕ್ರೋಶದಿಂದೇನೂ ನಾನು ವಿಚಲಿತಳಾಗಿರಲಿಲ್ಲ. ಇಂತಹ ಆಕ್ರೋಶಗಳನ್ನು ನನ್ನ ಅಧ್ಯಯನದಲ್ಲಿ ಹಲವಾರು ಬಾರಿ ಎದುರಿಸಿದ್ದೇನೆ. ಏನು ಮಾಡುವುದು ಎನ್ನುವ ಚಿಂತನೆಯಲ್ಲಿಯೇ ಊರ ಹೊರಗಿನ ಆಲದ ಮರದ ಕೆಳಗಡೆ ಕುಳಿತು ಆಕಾಶ ದಿಟ್ಟಿಸುತ್ತ, ಹಾರಿ ಹೋಗುವ ಹಾಗೂ ಬರುವ ಹಕ್ಕಿಗಳನ್ನು ಎಣಿಸತೊಡಗಿದೆ. ಗಿಡದೊಳಗಿನ ಹಕ್ಕಿಗಳ, ಅಳಿಲುಗಳ ಪೀಕಲಾಟವನ್ನು ಕೇಳುತ್ತ, ನೋಡುತ್ತ ಕುಳಿತಿದ್ದೆ. ಕಟ್ಟೆಯ ಮೇಲೆ ಕುಳಿತ ಅಜ್ಜಂದಿರ ಮೂಲಕ ಶೆಟ್ಟೆವ್ವನ ಹಾಡಿಕೆಯ ಕುರಿತು ಮಾಹಿತಿ ಕಲೆಹಾಕಲು ಪ್ರಾರಂಭಿಸಿದೆ. ಐದಾರು ಗಂಟೆಗಳು ಕಳೆದರೂ ಹಾಗೆಯೇ ಅದೇ ಕಟ್ಟೆಯ ಮೇಲೆ ಕುಳಿತಿದ್ದೆ.

ಒಕ್ಕಲುತನವನ್ನು ಮಾಡುತ್ತಿದ್ದ ಶೆಟ್ಟವ್ವನ ಮಗ ಆಗಾಗ ಬಂದು ನಾನು ಹೋದೆನೋ ಇಲ್ಲವೋ ಎಂದು ನೋಡಿಕೊಂಡು ಹೋಗುತ್ತಿದ್ದ. ಕಲಿತ ಮಕ್ಕಳು ತಮ್ಮವ್ವನ ಬಗ್ಗೆ ಏನು ಮಾಹಿತಿ ಸಂಗ್ರಹಿಸುತ್ತಿದ್ದೇನೆ ಎನ್ನುವ ಸಿಐಡಿ ಕೆಲಸ ಮಾಡುತ್ತಿದ್ದರು. ನಾನು ಯಾರೊಂದಿಗೋ ಮಾತನಾಡುವಾಗ ಅವರ ಪಕ್ಕದಲ್ಲಿಯೇ, ಅಥವಾ ನಮ್ಮ ಹಿಂದುಗಡೆಯೋ ನಿಂತು ಕೇಳಿಸಿಕೊಳ್ಳುತ್ತಿದ್ದರು. ತಮ್ಮ ಮನೆಯಲ್ಲಿಂದ ಎದ್ದು ಹೋಗಿ ಎಂದಂತೆ, ಊರಲ್ಲಿಂದ ಎದ್ದು ಹೋಗಿ ಎನ್ನುವಂತಿಲ್ಲ. ಸುಮ್ಮನೆ ದೊಡ್ಡ ಆಲದ ಮರದ ದೊಡ್ಡ ಕಟ್ಟೆಯ ಆಚೀಚೆ ಕುಳಿತು, ನಿಂತು ಊರಿನವರೊಂದಿನ ನನ್ನ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರು. ಕೊನೆಗೂ ನಾನು ಕಾರು ಏರಿದಾಗ ನಿರಾಳತೆಯಿಂದ, ಶೆಟ್ಟೆವ್ವನ ಕಲಿತ ಮಕ್ಕಳು ಮನೆಯತ್ತ ಹೆಜ್ಜೆ ಹಾಕಿದರು. ಕಾರು ಇನ್ನೇನು ಹೊರಡುತ್ತದೆ ಎಂದಾಗ ಒಕ್ಕಲುತನವನ್ನು ಮಾಡುತ್ತಿದ್ದ ಶೆಟ್ಟೆವ್ವನ ಮಗ ಓಡಿ ಬಂದು “ಇವ್ರೆಲ್ಲಾ ಬ್ಯಾಸಿಗ್ಗಿ ಸೂಟಿಗಿ ಬಂದಾರಿ. ಇನ್ನೊಂದು ತಿಂಗಳ ಬಿಟ್ಟ ಬರ್ರಿ. ಆವಾಗ ಯಾರೂ ಇರೂದಿಲ್ಲರಿ. ನಮ್ಮವ್ವನ ಕೂಡಾ ನಿಮ್ಮನ್ನ ಮಾತಾಡಿಸ್ತೀನಿ. ನಮ್ಮವ್ವನ ಹಾಡ್ಕಿಗಿ ನಾನs ಸುರುತಿ ಹಾಕ್ತಿದ್ದ್ಯಾ. ನಮ್ಮವ್ವನ ಸಲವಂದ ಬಂದು ಕೂಳ ಇರ್ಲಾರ್ದ್, ನೀರ ಇರ್ಲಾರ್ದ್ ಹಂಗs ಹೊಂಟೇರಿ” ಎಂದು ಮರಗುತ್ತ ತಾಯಿ ಜೊತೆ ಮಾತನಾಡಿಸುವ ಭರವಸೆ ನೀಡಿ ನನಗೆ ವಿದಾಯ ಹೇಳಿದನು.

ಮುಧೋಳದಲ್ಲಿ, ಚೌಡಕಿಯಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವ ಮಹಿಳಾ ಹಾಡುಗಾರರನ್ನು ಸಂದರ್ಶಿಸಲು ಹೋಗಿದ್ದೆ. ಅಂದು ಸಾಬವ್ವ, ಎಲ್ಲವ್ವ ಹಾಡಿಕೆಯನ್ನು ಮುಗಿಸಿಕೊಂಡು ಬಂದಿದ್ದರು. ರಾತ್ರಿ ನಿದ್ರೆಗೆಟ್ಟ ಅವರ ಮುಖದಲ್ಲಿ ಆಯಾಸ ಹೊಡೆದುಕಾಣುತ್ತಿತ್ತು. ಆಕಳಿಸುತ್ತ ಮಾತನಾಡಿಕೊಂಡು ಕುಳಿತ ಅವರೊಂದಿಗೆ ನಾನೂ ಮಾತನಾಡಲು ಕುಳಿತೆ. ನನ್ನ ಪರಿಚಯ ಹಾಗೂ ಅವರಲ್ಲಿಗೆ ಬಂದ ಉದ್ದೇಶವನ್ನು ಹೇಳಿದೆ. ‘ನಮಗೀಗ ಇಪ್ಪತ್ತೈದು ವರ್ಷ ವಯಸ್ಸಾಗೈತ್ರಿ. ೫೫ನೇ ವಯಸ್ಸಿಗಿ ಕಲಾ ಪಿಂಚಣಿ ಕೊಡ್ತಾರು. ಮೂವತ್ತು ವರ್ಷ ಆದಿಂದ ಬರ್ರಿ. ಆಮ್ಯಾಲಿ ಹೇಳ್ತೀವಿ” ಎಂದು ಮುಖದ ಮೇಲೆ ಸೆರಗು ಹೊದ್ದುಕೊಂಡು ಮಲಗಿ ಬಿಟ್ಟರು. ನಾನು ಅವರೊಂದಿಗೆ ಮಾತನಾಡಲು ಬಡ ಬಡಿಸುತ್ತಿದ್ದೆ. ಹತ್ತು ನಿಮಿಷಗಳ ನಂತರ ಗೊರಕೆ ಸದ್ದು ಕೇಳಲು ಪ್ರಾರಂಭಿಸಿತು. ಆಯಾಸಗೊಂಡಾಗ ಮಾತನಾಡಿಸಬಾರದಿತ್ತೆಂದು ಪರಿತಪಿಸುತ್ತ ಮುಧೋಳದ ಅಕ್ಕ-ಪಕ್ಕದ ಊರಿಗೆ ಕ್ಷೇತ್ರಕಾರ್ಯಕ್ಕೆ ತೆರಳಿದೆ. ಮತ್ತೆ ಮರುದಿನ ಅವರ ಮನೆಗೆ ಹೋದೆ. ಅವರಲ್ಲಿ ಒಬ್ಬಳು ನನ್ನನ್ನು ನೋಡಿದವಳೆ “ಐಯ್ ತಾಯಿ, ಕಲ್ತೇಕಿ ಅದಿ. ಒಂದ್ಸಾರಿ ಹೇಳಿದ್ರ ತಿಳಿಯೂವಂಗಿಲ್ಲೇನು? ನಮ್ಮ ಬಗ್ಗಿ ಬರಿಯಾ ಜರೂರತ್ತರಿಲ್ಲ. ಇನ್ನು ಮೂವತ್ತು ವರ್ಷ ಆಗಿಂದಾ ಬೇಕಾದ್ರ ಬರಿ. ಈಗ ನಿನ್ನ ಕಟಕೊಂಡ್ರ ನಮಗೇನಾಗ್ಬೇಕಾಗೈತಿ? ನಡಿ-ನಡಿ ಅತ್ಲಾಗೆ” ಎಂದು ಭಿಕ್ಷುಕರನ್ನು ಅಟ್ಟುವಂತೆ ಅಟ್ಟಲು ಪ್ರಯತ್ನಿಸಿದಳು. ಅವಳ ಮಾತನ್ನು ಕೇಳಿಯೂ ಕೇಳಿಸದಂತೆ ಸುಮ್ಮನೆ ಅವರ ಮನೆ ಅಂಗಳದಲ್ಲಿ ಕುಳಿತೆ. ಅವರದು ಅತ್ಯಂತ ಪುಟ್ಟ ಮನೆ. ಅದರಲ್ಲಿಯೇ ಚಿಕ್ಕ ಪಡಸಾಲೆ, ಅಡಿಗೆ ಮನೆ, ಒಂದು ಮಲಗಿಕೊಳ್ಳುವ ಕೋಣೆ. ಅಂಗಳದಲ್ಲಿಯೇ ಕುಳಿತುಕೊಂಡು ಅವರ ಮನೆಯನ್ನು ವೀಕ್ಷಿಸುತ್ತಿದ್ದೆ. ಅಡುಗೆ ಮಾಡಿಕೊಂಡರು. ಊಟ ಮಾಡಿದರು. ಟಿ.ವಿ. ನೋಡುತ್ತ ಹರಟೆ ಹೊಡೆಯಲು ಪ್ರಾರಂಭಿಸಿದರು. ನಾನು ಹೋದೆನೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮನೆಯ ಒಳಗಿನಿಂದಲೇ ಇಣುಕಿ-ಇಣುಕಿ ಹೊರಗೆ ನೋಡುತ್ತಿದ್ದರು. ಒಳ ಕರೆಯಬಹುದು ಎನ್ನುವ ನಿರೀಕ್ಷೆಯಿಂದ ನಾನೂ ಆಗಾಗ ಅವರ ಮನೆಯ ಒಳಗಡೆ ಇಣುಕುತ್ತಿದ್ದೆ. ನನ್ನ ನಿರೀಕ್ಷಣೆ ಹುಸಿಯಾಯಿತು.

ದನ್ಯಾಳದ ದುರಗವ್ವ ಮೊದಲ ಭೆಟ್ಟಿಯಲ್ಲಿಯೇ ನನ್ನ ಜೊತೆ ನಗುತ್ತಲೇ ಆತ್ಮೀಯವಾಗಿ ಮಾತನಾಡಿದಳು. ಅವಳು ಅಂತರಂಗದೊಳಗೆ ದಡಬಡನೆ ಹೆಜ್ಜೆ ಇಡಲು ಪ್ರಾರಂಭಿಸಿದೆ. ನಾನು ಅಧ್ಯಯನಕ್ಕೆ ಹಾಕಿಕೊಂಡ ಕಾಲ ಮಿತಿಯೂ ನನ್ನನ್ನು ಅವಸರಿಸುವಂತೆ ಒತ್ತಾಯಿಸಿತ್ತು. ನಾನು “ಯಾಕ್ರಿ ಬಾಯಿಯರ? ಕಲ್ತವರು ಅಂತ ಮರ್ಯಾದಿ ಕೊಟ್ಟು ಮಾತಾಡಿದ್ರ, ಹ್ಯಾಂಗೆಂಗೋ ಪ್ರಶ್ನಾ ಕೇಳಾಕತ್ತಿರಲ್ಲಾ? ನಮಗ ಏನಾರ ಆಗಿರ‍್ಲಿ, ಅದನ್ನ ಕಟಕೊಂಡು ನಿಮಗೇನ ಆಗಬೇಕಾಗೈತ್ರಿ?” ಎಂದವಳೇ ಒಳ ಹೋದಳು. ಕ್ಷಣ ಹೊತ್ತಿನಲ್ಲಿಯೇ ಹೊರಬಂದಳು. ಅವಳ ಕೈಯಲ್ಲೊಂದು ಟೈಪ್ಡ ಪೇಪರ್ ಇತ್ತು. ಅದನ್ನು ನನಗೆ ಕೊಟ್ಟವಳೇ “ಇದರಾಗ ನನ್ನ ಕಲಾ ಜೀವನ್ದ ಬಗ್ಗೆ ಬರದದ್ದು ಐತ್ರಿ. ಇದರ ಮ್ಯಾಗ ಮತ್ತೇನೂ ಕೇಳಬ್ಯಾಡ್ರಿ” ಎಂದಳು. ಅವಳು ಹುಟ್ಟಿದ್ದು, ಅವಳ ಕಲಾ ಜೀವನ ಪ್ರಾರಂಭಿಸಿದ್ದು,. ಖಾಸಗಿ ಹಾಡಿಕೆಯಲ್ಲಿ ಹಾಗೂ ಸರಕಾರಿ ಹಾಡಿಕೆಯಲ್ಲಿ ಹಾಡಿದ್ದರ ವಿವರವಿತ್ತು. ಬೇಗ ಬೇಗನೆ ಕ್ಷೇತ್ರಾಧ್ಯಯನ ಮಾಡಿ ಮುಗಿಸಬೇಕು ಎನ್ನುವ ಅವಸರದಲ್ಲಿ ಅವಳ ಆತ್ಮೀಯ ನಗುವನ್ನೇ ತಪ್ಪಾಗಿ ಅರ್ಥೈಸಿಕೊಂಡು ಅಂತರಂಗಕ್ಕೆ ಕೈ ಹಾಕಲು ಪ್ರಯತ್ನಿಸಿದ್ದೆ. ತಕ್ಷಣವೇ ಜಾಗ್ರತಳಾದೆ. ನನ್ನ ಅವಸರವು ಆಕೆಯ ಅಂತರಂಗದಿಂದ ನನ್ನನ್ನು ಬಹು ದೂರ ತಳ್ಳಿತ್ತು. ನಾನು ಏನೇ ಕೇಳಿದರೂ “ಎಲ್ಲಾ ಬರಿಸಿ ಇಟ್ಟೇನಿ ನೋಡ್ರಿ. ಅದನ್ನ ಬರ್ಕೊಂಡು ಹೋಗ್ರಿ. ಇಲ್ಲಾ ತಗೊಂಡು ಹೋಗ್ರಿ. ನನ್ನ ಮಗಾ ಟೈಪ್ ಮಾಡಿಸಿಟ್ಟಾನ. ಇನ್ನ ಇಂಥಾವು ಮನ್ಯಾಗ ಜಗ್ಗಿ (ಬಹಳ) ಅದಾವ್ರಿ” ಎನ್ನುತ್ತಿದ್ದಳು. ಊಟದ ವೇಳೆಯಾಯಿತು. ಊಟಾ ಮಾಸ್ರಿ ಎಂದಳು. ಅರೆರೆ ದುರುಗವ್ವ ನನ್ನ ಅಂತರಂಗದ ಅಗಸಿ ಬಾಗಿಲನಾಚೆ ಎತ್ತಿ ಎಸೆದಳಲ್ಲ ಎನಿಸಿತು ಅಥವಾ ನಾನೇ ಹಾಗೆ ನಡೆದುಕೊಂಡೆನೊ ಗೊತ್ತಿಲ್ಲ. “ನಿಮ್ಮ ಅಡ್ರೆಸ್ ಬರದಕೊಡ್ರಿ. ನಾನs ಮತ್ತ್ಯಾವಾಗರ ಬರಾಕ ಹೇಳ್ತೀನಿ. ಈಗ ನೀವು ಊಟಾ ಮಾಡ್ರಿ” ಎಂದಳು. ಹಸಿದ ಹೊಟ್ಟೆ ಅವಳ ಕರೆಯನ್ನು ದುಸರಾ ಮಾತಿಲ್ಲದೆ ಒಪ್ಪಿಕೊಳ್ಳುವಂತೆ ಮಾಡಿತು. ದುರುಗವ್ವ ಹೇಳಿದಂತೆ ನನ್ನ ವಿಳಾಸ ಬರೆದಿಟ್ಟು ಊಟಕ್ಕೆ ಕುಳಿತೆ. ನನ್ನ ಜೊತೆ ಬಂದಿದ್ದ ವಿದ್ಯಾರ್ಥಿ ಪಂಪಾಪತಿ ಹಾಗೂ ಕಾರ್ ಡ್ರೈವರ್‌ಊಟಕ್ಕೆ ಕುಳಿತರು. ಆಕೆಯ ಕರೆಯನ್ನು ನಿರಾಕರಿಸಿದರೆ ಆ ಹಳ್ಳಿಯಲ್ಲಿ ಹಣ ಕೊಡುತ್ತೇವೆ ಎಂದರೂ ಊಟ ಸಿಗುತ್ತಿರಲಿಲ್ಲ. ಕೆಲವೊಮ್ಮೆ ದಾರಿ ಪಕ್ಕದಲ್ಲಿನ ಬಾರಿ ಹಣ್ಣಿನ ತೋಟವನ್ನು ಕಂಡು, ತೋಟದ ಮಾಲಿಕನಿಂದ ಹಣ್ಣು ಪಡೆದು, ಇಡೀ ದಿನ ಆ ಹಣ್ಣನ್ನು ತಿನ್ನುತ್ತಲೇ ಕ್ಷೇತ್ರ ಕಾರ್ಯಾಧ್ಯಯನ ನಡೆಸಿದ ದಿನಗಳು ನೆನಪಿಗೆ ಬಂದವು. ತಟ್ಟೆಯಲ್ಲಿದ್ದುದನ್ನು ಎಳೆದು ತಿನ್ನುವ ತೀವ್ರ ಹಸಿವು ಇದ್ದರೂ, ತೋರಿಕೆಗೆ ಗಾಂಭೀರ್ಯದಿಂದ ಕೈ ಕಟ್ಟಿ ಊಟ ಬಡಿಸುವ ತನಕ ಹಸಿವು ಕಾಯ್ದಿಟ್ಟುಕೊಂಡೆ. “ಊಟ ತುಂಬಾ ಚೆನ್ನಾಗಿದೆ” ಎಂದು ಮೂರು ಬಾರಿ ತಟ್ಟೆ ತುಂಬ ಬಡಿಸಿದ ಶಾವಿಗೆ ಪಾಯಸ, ರೊಟ್ಟಿ, ಅನ್ನ ಎಲ್ಲವನ್ನು ಹೊಟ್ಟೆಯ ಗುಡಾಣದಲ್ಲಿ ಸೇರಿಸಿಕೊಂಡೆ. ನನಗೆ ಊಟಕ್ಕೆ ಬಡಿಸುತ್ತ ದುರುಗವ್ವ ನಿಜಕ್ಕೂ ಅವ್ವನಾಗಿ ಹೋದಳು.

ಅವಳ ಮನೆಯಲ್ಲಿ ನಾನು ಊಟ ಮಾಡಿದ್ದು ಅವಳಿಗೆ ಪ್ರಿಯವಾಗಿತ್ತು. ಅವಳು ಮಾಡಿದ ಅಡುಗೆಯನ್ನು ಹೊಗಳುವ ಮೂಲಕವೇ ಅವಳ ಅಂತರಂಗದ ಅಡುಗೆ ಮನೆಯನ್ನು ನಿಧಾನಕ್ಕೆ ಪ್ರವೇಶಿಸಿದ್ದೆ. ನಿಧಾನಕ್ಕೆ ತನ್ನಂತರಂಗವನ್ನು ತೆರೆದುಕೊಂಡ ಆಕೆ ಹೇಳಿದ್ದು ಕಡಿಮೆ. ಎಳೆಯ ವಯಸ್ಸಿನಿಂದಲೂ ಹೂತಿಟ್ಟ ಅದೆಷ್ಟೋ ಕಹಿ ನೆನಪುಗಳನ್ನು ಹೊಟ್ಟೆಯಿಂದ ಹೊರ ಹಾಕಲು ದುರುಗವ್ವ ಪ್ರಯತ್ನಿಸಿದರೂ ಅವುಗಳು ಹೊಟ್ಟೆಯ ಪಕ್ಕೆಯಲ್ಲಿಯೇ ಸಿಕ್ಕಿಕೊಂಡು ಆಕೆಯನ್ನು ನರಳಿಸಿದ್ದೆ ಹೆಚ್ಚು.

ಮಂದರೂಪದ ಈರಮ್ಮ, ರಾಣವ್ವ, ತಿಗಣಿ ಬಿದರಿಯ ಯಮನವ್ವ, ಗಂಗವ್ವ, ಜನವಾಡದ ಬುದ್ದವ್ವನಂತಹ ಹಾಡಿಕೆ ಮಹಿಳೆಯರು ಮೊದಲು ನನ್ನನ್ನು ಮನೆಯ ಒಳಗೆ ಕರೆದುಕೊಂಡರೂ ಅವರ ಅಂತರಂಗದ ಅಂಗಳದಲ್ಲಿ ನಾನು ಸುಳಿದಾಡದಂತಹ ಎಚ್ಚರಿಕೆಯನ್ನು ತೆಗೆದುಕೊಂಡಿದ್ದರು. ಅವರು ನನ್ನನ್ನು ಅಂತರಂಗದ ಅಂಗಳದಿಂದ ಮಾರು ದೂರ ಇಟ್ಟರೂ ಅವರಿಟ್ಟ ಅಂತರದಿಂದಲೇ ಅವರ ಮನ ಗೆದೆಯಲು ಪ್ರಯತ್ನಿಸಿದೆ. ಹಂತ-ಹಂತವಾಗಿ ಅವರು ನನ್ನನ್ನು ಅಂತರಂಗದ ಪಡಸಾಲೆಗೆ ಕರೆದುಕೊಂಡರು. ಅನಂತರದಲ್ಲಿ ಅಂತರಂಗದ ಅಡುಗೆ ಮನೆಗೆ ಕರೆದುಕೊಂಡರು. ಮಹಿಳಾ ಹಾಡುಗಾರರು ಅಂತರಂಗದ ಅಡುಗೆ ಮನೆಯಲ್ಲಿ ಬದುಕಿನಲ್ಲಿ ತಾವುಂಡ ನೋವು, ಅಪಮಾನಗಳನ್ನು ಒಂದೊಂದೇ ಗಡಿಗೆಯ ಮುಚ್ಚಳವನ್ನು ತೆಗೆದು ತೋರಿಸಿದರು. ಬಹಿರಂಗಪಡಿಸಲಾಗದ ಅದೆಷ್ಟೋ ಅಂತರಂಗದ ಗಡಿಗೆಗಳನ್ನು ಅಡುಗೆಯ ಮನೆಯ ಕತ್ತಲೆಯ ಮೂಲೆಯಲ್ಲಿ ಇಟ್ಟರು. ಅಂತರಂಗದಲ್ಲಿ ಹೂತಿಟ್ಟ ನೋವು ಅಪಮಾನಗಳಿಗೆ ನೆನಪಿನ ಬೆಂಕಿ ಕಡ್ಡಿಯಿಂದ ಗೀರಿದಾಗ ಅದರಲ್ಲಿ ಕೆಲವು ಹೊಗೆಯಾಗಿ ಹೊಗೆ ಚೆಟ್ಟಿನಲ್ಲಿ ಹಾದು ಹೋದವು. ಹಾಳು ನೆನಪಿನ ಹೊಗೆ ಕೇವಲ ಕಣ್ಣೀರು ಉಕ್ಕಿಸಿತು. ಮತ್ತೆ ಕೆಲವು, ಹೊಗೆ ಚಟ್ಟಿನಲ್ಲಿ ಹಾಯ್ದು ಹೋಗದೆ ಅಂತರಂಗದ ಅಡುಗೆ ಮನೆಯನ್ನೆಲ್ಲಾ ಆವರಿಸಿ ಅವರಿಗೆ ನಾನು, ನನಗೆ ಅವರು ಕಾಣದಂತೆ ಮಾಡಿದವು. ನಾನು ಅವರ ಕಷ್ಟ-ಸುಖಗಳನ್ನು ವಿಚಾರಿಸಿದಾಗ ಖುಷಿ ಪಟ್ಟಿದ್ದರು. “ಇಷ್ಟ ಜನಾ ಬಂದಿದ್ರು, ಅವ್ರಾರೂ ನಿಮ್ಮಂಗ ಕಾಳಜಿ ತಗೊಂಡ ಮಾತಾಡಿಲ್ಲರಿ. ಹಾಡಕಿ ಹಾಡು ಅನ್ನವ್ರು. ಇರ್ಲಾಕಂದ್ರ ನಿನ್ನ ಬಲ್ಲಿ ಇರೋ ಹಾಡಾ ಕೊಡು ಅನ್ನಾವ್ರು. ಒಬ್ಬರೂ ನಿನಗೆ ನೋವಾಗದೇನವ್ವಾ, ಅಪಮಾನವಾಗೆದೇನವ್ವಾ ಅಂತ ಕೇಳಿರಲಿಲ್ಲರಿ” ಎಂದರು. ಅದೆಷ್ಟೂ ವಿಷಯಗಳನ್ನು ಕಣ್ಣು ತುಂಬಿ ಹೇಳಿದರು. ಒಮ್ಮೊಮ್ಮೆ ಹೇಳಲಾಗದೆ ಗಂಟಲ ಕಟ್ಟಿ ಅರ್ಧಕ್ಕೆ ನಿಲ್ಲಿಸಿ ಬಿಡುತ್ತಿದ್ದರು. ಮತ್ತೊಂದು ದಿನ ಬರಲು ಹೇಳುತ್ತಿದ್ದರು. ಆಗಲೂ ಕೂಡ ಹೇಳಲಾಗದೆ ಸಂಕಟವನ್ನು ಅನುಭವಿಸುತ್ತಿದ್ದರು. ಪದೇ ಪದೇ ಭೇಟ್ಟಿಯಿಂದ ನಾನವರ ಅಂತರಂಗದ ಗೆಳತಿಯಾಗಿದ್ದೆ. ಹೀಗಾಗಿಯೇ ಎದೆಗೂಡಿನೊಳಗೆ ಯಾರಿಗೂ ಕಾಣದ ಹಾಗೆ, ಕೇಳದ ಹಾಗೆ ಮುಚ್ಚಿಟ್ಟ ಅನೇಕ ಹೇಳಲಾಗದ ವಿಷಯಗಳನ್ನು ಹೇಳಿಕೊಂಡರು. ಇನ್ನೂ ಕೆಲವನ್ನು ಹೇಳಲಾಗದೆ ಬಿಕ್ಕಳಿಸಿದರು, ನಿಟ್ಟುಸಿರಿಟ್ಟರು. ಕೆಲವರು ನಗುನಗುತ್ತಲೇ ಎದುರುಗೊಂಡವರು, ಹಿಮ್ಮಿಂಚಾಗಿ ತಂದುಕೊಂಡ ನೆನಪುಗಳಿಂದ ಅಕ್ಷರಶಃ ತಲೆಗೆ ಬಟ್ಟೆ ಕಟ್ಟಿಕೊಂಡು ತಲೆ ನೋವೆಂದು ಬಳಲಿದರು. ಎದೆ ನೋವೆಂದು ಎದೆ ಒತ್ತಿಕೊಂಡು ಕುಳಿತರು. ಅಕ್ಷರದಲ್ಲಿ ಹಿಡಿದಿಡಲಾಗದ ಆಯಾಸದಿಂದ ಬಳಲಿ ಮಲಗಿದರು.

ಪುರುಷ ಹಾಡುಗಾರರೊಂದಿಗಿನ ಅನುಭವ ಮತ್ತೊಂದು ಬಗೆಯದು. ತಮಗೆ ಬಿಡುವಿಲ್ಲ ಎನ್ನುವಂತೆ ಅವರು ವರ್ತಿಸುತ್ತಿದ್ದರು. ಮೊಬೈಲ್ ನಂಬರ್ ಕೊಟ್ಟು “ಜರಾ (ಸ್ವಲ್ಪ) ಕೆಲ್ಸ ಐತ್ರಿ. ಮಾರ್ಕೆಟ್ಟಿಗೆ ಹೊಂಟೇನ್ರಿ. ಈ ನಂಬರ‍್ಗೆ ಚಂಜಿಗಿ (ಸಾಯಂಕಾಲ) ಫೋನ ಮಾಡ್ರಿ ವ್ಯಾಳ್ಯಾ ಇದ್ದ್ರ ನಿಮ್ಗ ಬರಾಕ ಹೇಳ್ತಿನ್ರೆವ್ವಾ” ಎನ್ನುತ್ತಿದ್ದರು. ಅವರು ಹೇಳಿದ ವೇಳೆಗೆ ಫೋನಾಯಿಸಿದರೆ ಮೊದಲು ಅವರೆ ‘ಅಲೋ’ (ಹಲೊ) ಎನ್ನುತ್ತಿದ್ದರು. ನನ್ನ ಧ್ವನಿ ಕೇಳಿದ ತಕ್ಷಣ ಮನೆಯಲ್ಲಿನ ಸದಸ್ಯರ ಕೈಯಲ್ಲಿ ಕೊಡುತ್ತಿದ್ದರು. ಫೋನು ತೆಗೆದುಕೊಂಡವರು ಸಾಮಾನ್ಯವಾಗಿ ಮಹಿಳೆಯರೇ ಆಗಿರುತ್ತಿದ್ದರು. “ಅವ್ರಿಗಿ ಒಟ್ಟಾ ಸಡುವ (ಬಿಡುವು) ಇಲ್ಲ್ರಿ ಬಾಯಿರ. ನಾಳಿ ಹೊತ್ತು ಹೊಂಟಿಂದ ಬರ್ರಿ. ಅವ್ರನ್ನ ನಾನು ಕೂಡಿಸಿ ಮಾತನಾಡಿಸ್ತೇನು” ಎನ್ನುತ್ತಿದ್ದರು. ಅವರು ಹೇಳಿದಂತೆ ಮರುದಿನ ಹೋದರೆ “ಏನು ಕೇಳೂದು ಪಟ-ಪಟ ಒಂದ ತಾಸಿನ್ಯಾಗ ಕೇಳ್ಬೇಕ್ರಿ. ಜರಾ ಹೊರ್ಗ ಕೆಲ್ಸ ಐತ್ರಿ. ಹೋಗಬೇಕ್ರಿ” ಎನ್ನುತ್ತಿದ್ದರು. ನಾನು ಮಾತನಾಡಬೇಕೆನ್ನುವಷ್ಟರಲ್ಲಿ ಅವರೇ ಮಾತಿಗಿಳಿಯುತ್ತಿದ್ದರು.

“ನಮ್ಮ ಹಾಡ್ಕಿ ಬರ್ಕೊಂಡ ಹೋಗಾಕ ಬಂದಿರೇನ್ರಿ?” ಎಂದು ನಾನು ಮಾತಿಗಿಳಿಯುವ ಮುಂಚೆಯೇ ವಿಲಾಸನು ನನ್ನನ್ನು ಪ್ರಶ್ನಿಸಿದ್ದನು. ಹಾಗೇನೂ ಇಲ್ಲ ನಿಮ್ಮ ಬದುಕಿನ ಬಗ್ಗೆ ನಿಮ್ಮ ಕಲೆಯ ಬಗ್ಗೆ ತಿಳಿದುಕೊಳ್ಳಲು ಬಂದಿದ್ದೆ ಎಂದು ಹೇಳಿದೆ. ಅದನ್ನು ಕೇಳಿಯೂ ಕೇಳಿಸದಂತೆ ತನ್ನದೇ ದಾಟಿಯಲ್ಲಿ ಮಾತನಾಡತೊಡಗಿದನು. “ನಿಮ್ಮ ಬಗ್ಗೆನs ಪಿ.ಎಚ್.ಡಿ. ಮಾಡ್ತೇನಿ ಅಂತ ಗುಲ್ಬರ್ಗಾ ಇನಿವರ್ಸಿಟಿಯಿಂದ ಒಬ್ಬ ಬಂದಿದ್ದ. ನನ್ನ ಬಲ್ಲೆ (ಹತ್ತಿರ) ಇದ್ದ ಹಾಡ್ಕಿ ಇಸ್ಕೊಂಡ. ರಾತ್ರಿ ನನಗ ಕುಡಿಯೂ ಚಟಾ ಐತಿ. ಕುಡಿಸಿ ಈ ಹಾಡಿನ ಅರ್ಥ ಏನ್ರಿ, ಈ ಹಾಡಿನ ಅರ್ಥ ಏನ್ರಿ ಅಂತ ಕೇಳ್ಕೊತಿದ್ದಾ. ಸಾಣ್ದೊಂದು ಟೇಪ ತಂದಿದ್ದಾ. ನಾ ಹೇಳೂದೆಲ್ಲಾ ರೇಕಾರ್ಡು ಮಾಡ್ಕೊಂಡು ತಾನ ಅಭ್ಯಾಸ ಮಾಡೆನಿ ಅಂತ ಬರ್ದ್. ಪಿಎಚ್.ಡಿ. ಡಿಗರಿ ತಗೊಂಡಾ. ಇಗ ಯಾವ್ದೊ ಕಾಲೇಜಿನ್ಯಾಗ ಬಕ್ಕಳಂಗ (ಬಹಳಷ್ಟು) ಪಗಾರ ತಗೊಂಡು, ಜಮ್ಮಂತ ಗಾಡಿಮ್ಯಾಗ ತಿರಗಾ ಕತ್ತಾನು. ಇಷ್ಟೆಲ್ಲಾ ಪಾಂಡಿತ್ಯ ಇದ್ರೂನು ಪತ್ರಾಸ ಮನ್ಯಾಗ ಗುಲ್ಬರ್ಗಾ ಬಿಸಲಾಗ ಕೊಳಿಯಾಕತ್ತೇನ್ರಿ. ನೀವು ನಮ್ಮ ಬಗ್ಗೆ ನಮ್ಮಿಂದ ಮಾಹ್ತಿ ತಗೊಂಡು ಬರ್ದು ನೀವು ದೊಡ್ಡವರಾಗ್ತೇರಿ. ಫಾಯದಾ (ಲಾಭ) ತಗೋತಿರಿ. ನಾವು ಇದs ತಿಪ್ಪ್ಯಾಗ ಕೊಳಿತಿರತೇವ್ರಿ” ಎಂದನು.

ಕಾಶಿನಾಥ ಚೌವ್ಹಾಣನದು ವ್ಯಾಪಾರಿ ಮನೋಭಾವವೇ ಆದರೂ ಅದು ಮತ್ತೊಂದು ಬಗೆಯದ್ದು. “ಹೆಂಡಿಯವ್ರು ನಿಮ್ಮನ್ನೆಲ್ಲಾ ಪ್ರಸಿದ್ಧಿ ಮಾಡ್ತೇನು ಅಂತ ಹೇಳಿ ನಮ್ಮ ಬಲ್ಲಿ ಇರೊಬಿರೊ ಹಾಡೆಲ್ಲ ಗ್ವಾಳೆ ಹಾಡ್ಕೊಂಡು ತಗೊಂಡ್ಹೋಗಿ, ಪ್ರಕಟಾ ಮಾಡ್ಕೊಂಡು ಜಗ್ಗಿ (ಬಹಳ) ರೊಕ್ಕಾ ದುಡ್ದಾರಿ ಅವ್ರು” ಎನ್ನುವ ಪೂರ್ವ ಪೀಠಿಕೆಯೊಂದಿಗೆ ನನ್ನೊಂದಿಗೆ ಕಾಶಿನಾಥ ಚೌವ್ಹಾಣ ಮಾತು ಪ್ರಾರಂಭಿಸಿದನು. ಅವನು ನನ್ನೊಂದಿಗೆ ಆಡಿದ ಪ್ರತಿ ಮಾತೂ ತನಗೇನು ಲಾಭ, ತನಗೇನು ನಷ್ಟ ಎನ್ನುವದನ್ನೇ ತೂಗಿ ನೋಡುತ್ತಿತ್ತು. ಹಾಗೆ ನೋಡಿದರೆ ಕಾಶಿನಾಥ ಚೌವ್ಹಾಣ ಹರದೇಶಿ-ನಾಗೇಶಿ ಹಾಡುಗಳನ್ನು ಬರೆದವನಲ್ಲ. ಹರದೇಶಿ ಹಾಡುಗಾರರಾಗಿದ್ದರಿಂದ ತಮ್ಮ ಹಾಡಿಕೆಗೆ ಸಂಬಂಧಿಸಿದಂತೆ ಹಾಡುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದನು. ಹೀಗೆ ತಾನು ಸಂಗ್ರಹಿಸಿಟ್ಟುಕೊಂಡ ಹಾಡುಗಳಲ್ಲಿ ಕೆಲವು ಹಾಡುಗಳನ್ನು ಆಯ್ದು ಪ್ರಕಟಿಸಿಕೊಂಡಿದ್ದನು. ಕನ್ನಡದಲ್ಲಿ ಯಾವ ಲೇಖಕರೂ ಸಂಪಾದನಕಾರರೂ ಬರಹದ ಮೂಲಕ, ಸಂಪಾದನೆಯ ಮೂಲಕ ಹಣ ಸಂಪಾದನೆ ಮಾಡಿಲ್ಲ ಎನ್ನುವುದನ್ನು ತಿಳಿಸುವ ಪ್ರಯತ್ನ ಮಾಡಿದ್ದೆ. ಅಧ್ಯಯನದಿಂದ ಹಣ ಸಂಪಾದನೆ ಮಾಡಲು ನಾನು ಬಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದೆನು. ‘ನೀವು ಹರದೇಶಿ-ನಾಗೇಶಿ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಿರಲ್ಲಾ, ಅದರಿಂದ ನಿಮಗೆಷ್ಟು ಲಾಭವಾಯ್ತು” ಎಂದು ಪ್ರಶ್ನಿಸಿದೆ. “ಏನೂ ಇಲ್ಲ” ಎಂದನು. “ನಿಮ್ಮ ಹಾಗೆಯೇ ಹೆಂಡಿಯವರು, ಹರಿಶ್ಚಂದ್ರ ಅವರು ನಿಮ್ಮ ಬಳಿಯಲ್ಲಿದ್ದ ಹಾಡುಗಳನ್ನು ಕಲೆಹಾಕಿ ಪ್ರಕಟಿಸಿದರೂ ಅದರಿಂದ ಯಾವ ಹಣಕಾಸಿನ ಲಾಭವನ್ನು ಪಡೆದಿಲ್ಲ” ಎನ್ನುವುದನ್ನು ಮನದಟ್ಟು ಮಾಡಲು ಪ್ರಯತ್ನಿಸಿದೆ. ಆದರೆ ಅದು ಅವನಿಗೆ ರುಚಿಸುತ್ತಿರಲಿಲ್ಲ. ನನ್ನಿಂದ ದೊಡ್ಡ ಮೊತ್ತದ ಹಣವನ್ನು ಜಗ್ಗುವ ಉದ್ದೇಶದಲ್ಲಿಯೇ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದನು. ಮಾತೆತ್ತಿದ್ದರೆ ಆರ್ಥಿಕ ಮುಗ್ಗಟ್ಟನ್ನೇ ಮುಂದಿಡುತ್ತಿದ್ದನು. ನಿಜವಾಗಲೂ ಆರ್ಥಿಕ ಸಮಸ್ಯೆಯಿದ್ದರೆ ಹಂಚಿಕೊಳ್ಳಲಿ ತಪ್ಪೇನಿಲ್ಲ.

ಕಾಶಿನಾಥ ಚೌವ್ಹಾಣ ಗುಲ್ಬರ್ಗಾದಲ್ಲಿ “ಕೊತ್ತಲ ಬಸವೇಶ್ವರ ಹೈದರಾಬಾದ್ ಕರ್ನಾಟಕದ ಗೀಗೀ ಪದದವರ ಸಂಸ್ಥೆ”ಯನ್ನು ನಡೆಸಿಕೊಂಡು ಹೋಗುತ್ತಾನೆ. ಇದಕ್ಕೆ ಕೇಂದ್ರ ಸರಕಾರದವರು ಧನ ಸಹಾಯ ನೀಡುತ್ತಾರಂತೆ. ಗೀಗೀ ಹಾಡುಗಳನ್ನು ಕಲಿಸುವವರಿಗೆ ತಿಂಗಳಿಗೆ ನಾಕೈದು ಸಾವಿರ ರೂಪಾಯಿಗಳ ಸಂಬಳ ಕೊಡುತ್ತಾರಂತೆ. ಕಲಿಯುವವರಿಗೆ ಊಟದ ಖರ್ಚು ನೋಡಿಕೊಂಡು ತಿಂಗಳಿಗೆ ಒಂದೂವರೆ ಸಾವಿರ ಶಿಷ್ಯ ವೇತನ ಕೊಡುತ್ತಾರಂತೆ. ಗುಲ್ಬರ್ಗಾ ಸುತ್ತ ಮುತ್ತಲಿನ ಹಾಡುಗಾರರ ಪ್ರಕಾರ ಈ ಸಂಸ್ಥೆಯಲ್ಲಿ ಕಲಿಸುವವರೂ ಇಲ್ಲ, ಕಲಿಯುವವರೂ ಇಲ್ಲ. ಸುಮ್ಮ-ಸುಮ್ಮನೆ ಯಾರ್ಯಾರದ್ದೊ ಹೆಸರು ಬರೆದು ಬೇರೆ-ಬೇರೆ ರೀತಿ ಸಹಿ ಮಾಡಿಸಿ, ಇಲ್ಲವೆ ಕುಟುಂಬದ ಸದಸ್ಯರ ಕಡೆಯಿಂದಲೇ ಹೆಬ್ಬೆಟ್ಟು ಒತ್ತಿಸಿ ಕೇಂದ್ರ ಸರಕಾರ ಕಳುಹಿಸಿದ ಹಣವನ್ನು ಕಾಶಿನಾಥನೊಬ್ಬನೇ ತಿನ್ನುತ್ತಾನೆನ್ನುವ ಆರೋಪವನ್ನು ಮಾಡಿದ್ದರು.

ಕೇಂದ್ರ ಸರಕಾರದವರ ಸಹಾಯದಿಂದ ನಡೆಸುವ ಗೀಗೀ ಪದದವರ ಸಂಸ್ಥೆ ಮೂರು ಅಂಕಣದ ಒಂದು ಕಟ್ಟಡವಾಗಿದೆ. ಕಟ್ಟಡವೇ ಸಂಸ್ಥೆಯ ಬಡತನಕ್ಕೆ ಕನ್ನಡಿ ಹಿಡಿಯುವಂತೆ ಇದೆ. ಈ ಸಂಸ್ಥೆಯ ಹಿಂದುಗಡೆಯೇ ಆಕರ್ಷಕವಾದ ಒಂದಂತಸ್ತಿನ ಬಂಗಲೆಯಿದೆ. ಹೊರಗಡೆ ನೋಡಲು ಅತಿ ಆಧುನಿಕ ಮನೆ ಎನಿಸುತ್ತದೆ. ಇದು ಕಾಶಿನಾಥ ಚವ್ಹಾಣ ಮನೆ. ಕಾಶಿನಾಥ ಚವ್ಹಾಣ ತಪ್ಪಿಯೂ ಅದು ತಮ್ಮ ಮನೆಯೆಂದು ಹೇಳಲಿಲ್ಲ; ಮನೆ ಒಳಗಡೆ ಕರೆಯಲಿಲ್ಲ. ಆತನ ಸಿರಿವಂತಿಗೆಯ ವಾಸನೆ ಒಂದಿಷ್ಟು ಬಡಿಯದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದನು.

ಹಾಡಿಕೆಯ ಕುರಿತು, ಹಾಡಿಕೆಯನ್ನು ಅವಲಂಬಿಸಿದವರ ಜೀವನ ಕುರಿತು ಕೇಳಿದಾಗ ಆಸಕ್ತಿಯಿಲ್ಲದೆ ಏನೋ ಉತ್ತರಿಸುತ್ತಿದ್ದನು. ನನ್ನ ಮಾತನ್ನು ತನಗೆ ಬೇಕೆಂದಿದ್ದ ವ್ಯಾಪಾರದ ದಿಕ್ಕಿನೆಡೆಗೆ ಹೊರಳಿಸಿಕೊಳ್ಳುತ್ತಿದ್ದನು. “ನನ್ನ ಬಳಿ ಸಾವಿರಾರು ಹರದೇಶಿ-ನಾಗೇಶಿ ಹಾಡುಗಳಿವೆ. ಅವನ್ನು ಪ್ರಕಟಿಸಲು ದುಡ್ಡಿಲ್ಲ, ಅಂದಾಜು ಮೂವತ್ತು ನಲವತ್ತು ಸಾವಿರಾದ್ರೂ ಬೇಕಾಗುತ್ತದೆ” ಎಂದನು. “ಸಂಗ್ರಹಿಸಿ ಕೊಡಿ, ನಮ್ಮ ವಿಶ್ವವಿದ್ಯಾಲಯದವರಿಗೆ ಪ್ರಕಟಿಸಲು ಕೇಳಿ ನೋಡುತ್ತೇನೆ” ಎಂದರೆ ತಕ್ಷಣ ಮತ್ತೊಂದು ದಿಕ್ಕಿಗೆ ಹೊರಳಿಕೊಳ್ಳುತ್ತಿತ್ತು. “ನಮ್ಮ ಸಂಸ್ಥಾ ಬಿಲ್ಡಿಂಗ್ ಸರಿಯಿಲ್ಲ. ಹಾಡ್ಕಿ ಕಲಿತೀನಂತ್ಹೇಳಿ ನೂರಾರು ಶಿಷ್ಯರು ಬರುತಾರ. ಅವ್ರಿಗಿ ಕುಂತ ಕಲಿಸಾಕ ನೆಟ್ಟಗ ಒಂದು ರೂಮಿಲ್ಲ” ಎನ್ನುತ್ತಿದ್ದನು. “ಸ್ಥಳೀಯ ಎಂ.ಎಲ್.ಎ.ಗಳನ್ನು ಕೇಳಬಹುದಲ್ಲ” ಎಂದರೆ, “ನಮ್ಮ ಹಾಡ್ಕಿ ರೇಣುಕಾಳ ಮಗಳ ಮದಿವಿ ಐತ್ರಿ. ರೊಕ್ಕ ಕೊಡಿಲ್ಲ ಅಂತ ಒದ್ದಾಡಾಕತ್ತ್ಯಾಳ. ಬಡವಿ ಮಗಳ ಮದ್ವಿ ಮಾಡ್ಸಿದ ಪುಣ್ಯಾ ಹತ್ತುತ್ತ ನಿಮಗ. ಜರಾ (ಸ್ವಲ್ಪ) ಏನಾರ ಸಹಾಯ ಮಾಡಾಕಾಗತ್ತ” ಎಂದು ಪ್ರಶ್ನಿಸಿದನು. ನಾನು “ಇಲ್ಲೇ ಹೇಗೋ ನಾಲ್ಕು ದಿನಗಳವರೆಗೆ ಇರ್ತೇನೆ. ನನ್ನ ಅಧ್ಯಯನಕ್ಕೆ ಅವಳನ್ನು ಕಾಣಬೇಕಿದೆ. ವಿಳಾಸ ಕೊಡಿ. ನಾನೇ ಅಲ್ಲಿಗೆ ಹೋಗುತ್ತೇನೆ. ಮಾತನಾಡಿ ಹಣ ಕೊಡುತ್ತೇನೆ” ಎಂದೆನು. ಹೀಗೆ ಕಾಶಿನಾಥ ಚೌವ್ಹಾಣ ಹಣ ಕೇಳುವ ವಿಷಯವನ್ನು ಭಿನ್ನ-ಭಿನ್ನ ಮಾದರಿಯಲ್ಲಿ ಮಂಡಿಸುತ್ತಿದ್ದ. ಆರ್ಥಿಕ ಧನ ಸಹಾಯದ ವಿಷಯವನ್ನು ಹೊರತುಪಡಿಸಿ ಆತನ ಹಾಡಿಕೆ ಜೀವನದೊಳಗೆ ಪ್ರವೇಶಿಸಲು ನಾನು ಪ್ರಯತ್ನಿಸುತ್ತಿದ್ದೆ. ನನ್ನ ಪ್ರತಿ ಮಾತನ್ನು ದೊಡ್ಡ ಮೊತ್ತದ ಹಣ ಪಡೆಯುವ ವಿಷಯಕ್ಕೆ ತಿರುಗಿಸಿಕೊಂಡು ಬಿಡುತ್ತಿದ್ದ. ಕೊನೆಗೂ ನನ್ನಿಂದ ಲಾಭವಿಲ್ಲ ಎನಿಸಿದಾಗ “ಎಂ.ಎಲ್.ಎ. ಸಾಹೇಬ್ರು ಕಾಣಾಕ ಹೇಳಾರ. ಆಯ್ತರಿ ಬಾಯಿ, ಮತ್ತೊಮ್ಮೆ ಸವುಡ ಇದ್ದಾಗ ಕಲಿ ಬಗ್ಗೆ ಕಲಾವಿದರ ಬಗ್ಗಿ ಮಾತಾಡೂನು. ಬರ್ತಿನ್ರಿ, ನಮಸ್ಕಾರಾ” ಎಂದು ಹೇಳಿದವನೇ ಟೋಪಿ ಸರಿ ಮಾಡಿಕೊಳ್ಳುತ್ತ ಹೊರಟು ಹೋದನು.