ಬೆಳಗಲಿ ದುರ್ಗಪ್ಪನೊಂದಿಗಿನ ಸಂದರ್ಶನದ ಅನುಭವ ಮತ್ತೊಂದು ಬಗೆಯದು. ದುರ್ಗಪ್ಪನು ನನ್ನ ಮಾತನ್ನು ಪೂರ್ಣ ಕೇಳಿಸಿಕೊಳ್ಳದೆ ಹಾಡಿಕೆ ಹಾಡುಗಳನ್ನು ಸಂಗ್ರಹಿಸಲು ಬಂದವಳೆಂದೇ ಗ್ರಹಿಸಿದನು. ತಕ್ಷಣವೇ ವ್ಯಾಪಾರಕ್ಕೆ ಇಳಿದುಬಿಟ್ಟನು. “ನೋಡ್ರಿ ಒಂದ ರಾತ್ರಿ, ಒಂದ ಹಗಲಿ ಹಾಡಕಿಗಿ ಪದಾ ತರಾಕ ಕವಿಗಿ ಹತ್ತರಿಂದ ಹದಿನೈಂದು ಸಾವಿರಾ ಕೊಡ್ತೇವು. ನೀವು ಅಷ್ಟ ಕೊಟ್ಟಕೆಸಿಂದ ಪದಾ ತಗೊರಿ” ಎಂದನು. ನಾನು ಬಂದ ಉದ್ದೇಶವನ್ನು ಹೇಳಬೇಕೆನ್ನುವುಷ್ಟರಲ್ಲಿಯೇ ಆತನೇ ಮಾತು ಮುಂದುವರೆಸಿದನು. “ನಿಮ್ಮಂಥವರು ಅಭ್ಯಾಸಾ ಮಾಡಾಕಂತ ಪದಾ ಕೇಳ್ತಾರ. ನಾವು ಏಸೊರ್ಸಿಂದ ಗ್ವಾಳೆ ಮಾಡಿಟ್ಟ ಪದಗಳ್ನ “ಜಿರಾಕ್ಸ ಮಾಡಿಕೊಂಡು ತಂದುಕೊಡ್ತೇನಿ” ಅಂತ ಹೇಳಿ ತಗ್ಹೊಂಡ ಹೋಗ್ತಾರಿ. ಏನೋ ದೊಡ್ಡ ಮನಷೇರು ಕೇಳ್ತಾರು, ಕೊಡೂನು ಅಂತ ಕೊಟ್ಟ್ರ, ತಗೊಂಡು ಹೋದವ್ರು, ಹೊಡಮಳ್ಳಿ (ವಾಪಸ್ಸು) ಬರೂದಿಲ್ಲ. ಅವ್ರು ಅತ್ಲಾಗರಿ, ನಮ ಪದಗೋಳು ಅತ್ಲಾಗರಿ ಅದಕ್ಕ ನಾನೂ ಹುಸಾರಾಗೇನ್ರಿ” ಎಂದು ಒಳಗೆ ಹೋದವನೇ ಒಂದು ದೊಡ್ಡ ಗೋಣಿಯ ಚೀಲವನ್ನು ತಂದು ನನ್ನ ಮುಂದೆ ಇಟ್ಟನು. “ಇದರಾಗ ಯಾವ ಬೇಕೊ ಆಯ್ಕೋರಿ (ಆಯ್ಕೆ ಮಾಡಿಕೊಳ್ಳಿ) ನಿಮ್ಮ ಕಾರ್ನಾಗ ನಾನs ಬರ್ತೇನ್ರಿ. ಜೆರಾಕ್ಸ್ ಮಾಡಿಸ್ಕೋರಿ” ಎಂದನು. “ನನಗ ಹಾಡಿಕೆ ಪದ ಬೇಕಾಗಿಲ್ಲರಿ, ನಿಮ್ಮ ಹಾಡ್ಕಿ ಜೀವನಾ ಬೇಕಾಗೈತ್ರಿ” ಎಂದಾಗ ‘ಹೀಂಗ್ರಾ’? ಎಂದು ಸೂರ್ಯಾಪಾನ ಹೂವಿನಳತೆಯಲ್ಲಿ ಬಾಯರಳಿಸಿ ನಕ್ಕನು. ‘ನಿಮ್ಮಂಗ ನಮ್ಮನ್ನ್ಯಾರು ಕೇಳ್ಕೊಂಡ ಬಂದಿಲ್ಲರಿ” ಎಂದು ತನ್ನ ಜೀವನ ಡೈರಿಯ ಒಂದೊಂದೇ ಪುಟಗಳನ್ನು ತೆಗೆದಿಡುತ್ತ ಹೋದನು. ಹಾಡಿಕೆಯ ಮಹಿಳೆಯರಲ್ಲಿನ ಆತಂಕ, ಭಯ, ಮುಜುಗರ, ಹೇಳಿಕೊಳ್ಳಲಾಗದ ಸಂಕಟಗಳು, ತಳಮಳಗಳು ಆತನಲ್ಲಿ ಕಾಣಲೇ ಇಲ್ಲ. ಬಡತನದಲ್ಲಿಯೂ ಹಾಡಿಕೆಯನ್ನು ಕಲಿತು ಹೇಗೆ ಸಾಧನೆಯ ಮೆಟ್ಟಿಲೇರುತ್ತ ಬಂದನು ಎನ್ನುವ ವಿವರವೇ ತುಂಬಿಕೊಂಡಿತ್ತು. ಹಾಡಿಕೆಯ ಮಹಿಳೆಯರ ಹಾಗೆ ದುರ್ಗಪ್ಪನು “ಇನ್ನೊಮ್ಮೆ ಬನ್ನಿ, ಮನಸ್ಸು ಸರಿಯಿಲ್ಲ” ಎಂದು ನಿಟ್ಟುಸಿರಿಟ್ಟು ಹೇಳಲಿಲ್ಲ.

ಹರದೇಶಿ-ನಾಗೇಶಿ ಅಧ್ಯಯನ ಸಂದರ್ಭದಲ್ಲಿನ ನೂರಾಹತ್ತು ಕಲಾವಿದರನ್ನು ಭೆಟ್ಟಿಯಾಗಿದ್ದೇನೆಂದರೆ, ಅಷ್ಟೂ ಬಗೆಯ ಭಿನ್ನ ಭಿನ್ನ ಅನುಭವಗಳು ಎದುರಾಗಿವೆ ಎಂದರ್ಥ. ಅವುಗಳನ್ನು ದಾಖಲಿಸುತ್ತ ಹೋದರೆ ಅದೇ ಕಾದಂಬರಿಯಾದೀತು. ಅಧ್ಯಯನ ಜಗತ್ತಿಗೂ, ವಸ್ತು ಜಗತ್ತಿಗೂ ಇರುವ ಅಂತರ್‌ಸಂಬಂಧಗಳನ್ನು ಗುರುತಿಸಿಕೊಳ್ಳುವ ಕಾರಣಗಳಿಗಾಗಿ ಕೆಲವು ಅನುಭವಗಳನ್ನು ಉಲ್ಲೇಖಿಸಲೇಬೇಕಾಯ್ತು, ಅಷ್ಟೆ. ಅಧ್ಯಯನ ಜಗತ್ತಿಗೆ ನಿರ್ದಿಷ್ಟವಾದ ಹಾಗೂ ಸ್ಪಷ್ಟವಾದ ಸಾಮಾಜಿಕ ಧೋರಣೆಗಳು ಇರುತ್ತವೆ. ಅಧ್ಯಯನ ನಡೆಸಬೇಕೆನ್ನುವ ಖಚಿತತೆ ಇರುತ್ತದೆ. ಅಧ್ಯಯನದ ಕುರಿತಂತೆ ಕೆಲವು ನಿರೀಕ್ಷೆಗಳು ಹಾಗೂ ಅಪೇಕ್ಷೆಗಳು ಇರುತ್ತವೆ. ಇವೆಲ್ಲವೂ ಅಧ್ಯಯನ ಪೂರ್ವದ ಅಪೇಕ್ಷೆಗಳಾಗಿರುತ್ತವೆ. ಅಧ್ಯಯನ ಪೂರ್ವದ ಎಲ್ಲ ಅಪೇಕ್ಷೆಗಳು ಖಚಿತವಾಗಿರುತ್ತವೆ ಹಾಗೂ ಸ್ಪಷ್ಟವಾಗಿರುತ್ತವೆ.

ಅಧ್ಯಯನ ಜಗತ್ತಿನಂತೆ ವಸ್ತು ಜಗತ್ತು ನನ್ನ ಕುರಿತು ಅಧ್ಯಯನ ನಡೆಯಬೇಕು; ನಾನು ಬರೆಯಿಸಿಕೊಳ್ಳಬೇಕು ಎಂದೇನೂ ಬಯಸುವುದಿಲ್ಲ. ನಮ್ಮ ಅಧ್ಯಯನ ಜಗತ್ತಿನ ವೈಚಾರಿಕ ತುಡಿತ, ಅಪೇಕ್ಷೆಗಳ ಹಾಗೆ ವಸ್ತು ಜಗತ್ತು ಇರಬೇಕೆಂದೇನೂ ಇಲ್ಲ. ಮೇಲೆ ಉಲ್ಲೇಖಿಸಿದ ಕ್ಷೇತ್ರಕಾರ್ಯಾನುಭವಗಳನ್ನು ಗಮನಿಸಿ ಹೇಳುವುದಾದರೆ ಅಧ್ಯಯನ ಜಗತ್ತಿನ ನಿರೀಕ್ಷೆಗಳೆಲ್ಲ ವಸ್ತು ಜಗತ್ತಿನ ಎದುರು ತಿರುಗು ಮುರುಗಾಗುತ್ತವೆ. ಅಧ್ಯಯನ ಜಗತ್ತನ್ನು ಅವರು ಭಯ, ಅನುಮಾನದಿಂದ ನೋಡುತ್ತಾರೆ; ನಮ್ಮ ಬಗ್ಗೆ ಅವರಲ್ಲಿ ಅಕ್ಷರದಲ್ಲಿ ಹಿಡಿದಿಡಲಾಗದ ತಿರಸ್ಕಾರ ಇರುತ್ತದೆ; ಆ ತಿರಸ್ಕಾರದೊಳಗೆ ಆಳವಾದ ಉಪೇಕ್ಷೆ ಇರುತ್ತದೆ; ಆ ಉಪೇಕ್ಷೆಯೊಳಗೆ ಆಳವಾದ ಸಿಟ್ಟಿರುತ್ತದೆ; ಆ ಸಿಟ್ಟಿನೊಳಗೆ ಹರಿತವಾದ ಆಕ್ರೋಶ ಇರುತ್ತದೆ.

ವಸ್ತು ಜಗತ್ತಿನಿಂದ ಸಾಮಾನ್ಯವಾಗಿ ಮೂರು ಬಗೆಯ ಪ್ರತಿಕ್ರಿಯೆಗಳು ಎದುರಾಗಬಹುದು. ಅವುಗಳೆಂದರೆ ೧. ಸಹಜವಾಗಿ ತಾವು ದಾಖಲಾಗಬೇಕೆಂದು ಹಂಬಲಿಸುವುದು. ೨. ಅವರೊಳಗಿನ ನಂಬಿಕೆ ಹಾಗೂ ನಿಗೂಢತೆಗಳು ಹೇಳಿದಂತೆ ಮಾಡಬಹುದು ೩. ‘ನೀತಿ ಬಾಹಿರರು’ ಎಂದು ಗುರುತಿಸಿದ್ದರಿಂದ ಪ್ರತಿಕ್ರಿಯಿಸಬಹುದು ಅಥವಾ ಪ್ರತಿಕ್ರಿಯಿಸದೇ ಇರಬಹುದು.

೧. ಸಹಜವಾಗಿ ತಾವು ದಾಖಲಾಗಬೇಕೆಂದು ಹಂಬಲಿಸುವವರು ಸಾಮಾನ್ಯವಾಗಿ ಮೇಲ್ಜಾತಿ, ಮೇಲ್ವರ್ಗದವರಾಗಿರುತ್ತಾರೆ ಅಥವಾ ಮಧ್ಯಮ ಜಾತಿ, ಮಧ್ಯಮ ವರ್ಗದವರಾಗಿರುತ್ತಾರೆ. ಅವರು ಸಾಮಾಜಿಕ ಪ್ರತಿಷ್ಠೆಯಲ್ಲಿ ಬದುಕುತ್ತಿರುತ್ತಾರೆ. ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ನೀತಿ-ನಿರೂಪಣೆಗಳನ್ನು ಮಾಡುತ್ತಿರುತ್ತಾರೆ. ತಾವು ನಿರೂಪಿಸಿದ ಮೌಲ್ಯಗಳ ಜೊತೆಯಲ್ಲಿಯೇ ತಮ್ಮ ವರ್ಚಸ್ಸು ದಾಖಲಾಗಬೇಕೆಂದು ಬಯಸುತ್ತಿರುತ್ತಾರೆ. ಅಧ್ಯಯನಕಾರರ ಅಧ್ಯಯನದ ಹಿನ್ನೆಲೆಯಲ್ಲಿ ದಾಖಲಾಗಬೇಕೆಂದು ಇವರು ಬಯಸುವುದಿಲ್ಲ. ಬದಲಾಗಿ ಅವರ ಅಪೇಕ್ಷೆಗೆ ಅನುಗುಣವಾಗಿಯೇ ದಾಖಲಾಗಬೇಕೆಂದು ಬಯಸುತ್ತಿರುತ್ತಾರೆ.

೨. ಕೇವಲ ಸಮುದಾಯಗಳು ತಮ್ಮ ನಂಬಿಕೆಗಳನ್ನು ತಮ್ಮಂತರಂಗದಲ್ಲಿಯೇ ಇಟ್ಟುಕೊಳ್ಳುತ್ತವೆ. ಅವುಗಳನ್ನು ಬಹಿರಂಗಗೊಳಿಸಬಾರದೆಂಬ ಕಟ್ಟಳೆಗಳನ್ನು ತಾವೇ ವಿಧಿಸಿಕೊಂಡಿರುತ್ತವೆ. ಹೀಗಾಗಿ ಅವುಗಳು ನಿಗೂಢವಾಗಿ ಉಳಿಯಬಯಸುತ್ತವೆ. ಉದಾ. ಮಾಟ, ಮಂತ್ರ

೩. ಸಮಾಜದಲ್ಲಿ ಪ್ರಬಲವಾಗಿರುವವರು ನೀತಿ-ನಿಯಮಗಳನ್ನು ಸೃಷ್ಟಿಸಿದ್ದಾರೆ: ಸೃಷ್ಟಿಸುತ್ತಲೂ ಇರುತ್ತಾರೆ. ಈ ನೀತಿ-ನಿಯಮಗಳು ಕೆಲವರನ್ನು ನೈತಿಕ ಆಯಾಮದಲ್ಲಿಟ್ಟು ಅರ್ಥೈಸಿದರೆ, ಮತ್ತೆ ಕೆಲವರನ್ನು ಅನೈತಿಕ ಆಯಾಮದಲ್ಲಿಟ್ಟು ಅರ್ಥೈಸುತ್ತಿರುತ್ತವೆ. ಅವರವರು ಅರ್ಥೈಸಲ್ಪಡುವ ನೈತಿಕ-ಅನೈತಿಕ ನೆಲೆಗಟ್ಟುಗಳೇ ಕೆಲವರಿಗೆ ಬಲವನ್ನು, ಶಕ್ತಿಯನ್ನು ನೀಡಿದರೆ; ಇನ್ನು ಕೆಲವರಿಗೆ ಅಸಹಾಯಕತೆಯನ್ನು, ಕೀಳರಿಮೆಯನ್ನು ಸೃಷ್ಟಿಸುತ್ತಿರುತ್ತದೆ. ‘ನೀತಿ ಬಾಹಿರರು’ ಎಂದು ನಿರೂಪಿಸಿಲ್ಪಟ್ಟ ಸಮುದಾಯದವರಿಂದ ಪ್ರತಿಕ್ರಿಯೆ ಬರಬಹುದು; ಬರದೆಯೂ ಇರಬಹುದು. ಪ್ರತಿಕ್ರಿಯಿಸಿದವರ ಪ್ರತಿಕ್ರಿಯೆಗಳು ಏಕ ಸ್ವರೂಪವನ್ನು ಹೊಂದಿರುವುದಿಲ್ಲ; ಪ್ರತಿಕ್ರಿಯೆ ಬಂದರೂ ಅವುಗಳು ಬಹು ಭಿನ್ನತೆಗಳನ್ನು, ಬಹು ಸಾಧ್ಯತೆಗಳನ್ನು ಒಳಗೊಂಡಿರುತ್ತವೆ.

ಪ್ರಸ್ತುತ ಅಧ್ಯಯನ ಮೂರನೆಯ ಗುಂಪಿಗೆ ಸೇರುತ್ತದೆ. ಮೇಲೆ ಉಲ್ಲೇಖಿಸಿದ ಕೆಲವು ಪ್ರಕರಣ ಅಧ್ಯಯನಗಳನ್ನು ಆಧಾರವಾಗಿ ಇಟ್ಟುಕೊಂಡು ಹಾಡಿಕೆಯವರ ಪ್ರತಿಕ್ರಿಯೆಗಳನ್ನು ಪುರುಷ ಹಾಡುಗಾರರು, ಮಹಿಳಾ ಹಾಡುಗಾರರು ಎನ್ನುವ ಎರಡು ಪ್ರಧಾನ ನೆಲೆಗಳಲ್ಲಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ಈ ಪ್ರಧಾನ ನೆಲೆಗಳಲ್ಲಿಯೇ ಹಾಡಿಕೆಯವರ ಪ್ರತಿಕ್ರಿಯೆಗಳನ್ನು ವಿಂಗಡಿಸಿಕೊಳ್ಳಲಾಗಿದೆ.

ಮಹಿಳಾ ಹಾಡುಗಾರರ ಪ್ರತಿಕ್ರಿಯೆಗಳು

ಮಹಿಳಾ ಹಾಡುಗಾರರ ಪ್ರತಿಕ್ರಿಯೆಗಳನ್ನು ಐದು ನೆಲೆಗಳಲ್ಲಿ ಗುರುತಿಸಬಹುದು ಅವುಗಳೆಂದರೆ ೧.ಪಿಂಚಣಿ ನಿರೀಕ್ಷೆಯಲ್ಲಿ, ೨. ಅವಕಾಶ ನಿರೀಕ್ಷಣೆಗಾಗಿ ದಾಖಲಾಗಬಯಸುವವರು ೩, ಕೀಳರಿಮೆಯಿಂದ ಮೌನ, ೪. ಕಲಿತ ಮಕ್ಕಳ ಕಾರಣಕ್ಕಾಗಿ ಪ್ರತಿಕ್ರಿಯೆಯ ನಿರಾಕರಣೆ, ೫. ಕೇಳಿಸಿಕೊಳ್ಳುವ ಹೃದಯಕ್ಕಾಗಿ ಕಾಯ್ದವರು.

.ಪಿಂಚಣಿ ನಿರೀಕ್ಷೆಯಲ್ಲಿ

ನಾನು ಸಂದರ್ಶಿಸಿದ ೫೫ರ ಗಡಿ ದಾಟಿದ ಅನೇಕ ಮಹಿಳೆಯರು ನನ್ನ ಜೊತೆ ಮನ ತೆರೆದು ಮಾತನಾಡಲು ಬಯಸಿದ್ದು ಪಿಂಚಣಿ ಪಡೆಯುವ ಹಂಬಲದಿಂದ. ನಾನು ಹಲವಾರು ಬಾರಿ ಪಿಂಚಣಿ ಕೊಡಿಸುವುದಕ್ಕಾಗಿ ಬಂದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದರೂ “ಯಾಕ ತಾಯಿ, ಹೀಂಗಾಡ್ತಿ? ನೀನು ಮನಸ್ಸು ಮಾಡಿದ್ರ ನಮಗ ಪಿಂಚಣಿ ಕೊಡ್ಸೂದು ದೊಡ್ಡ ಮಾತೇನವ್ವಾ?” ಎಂದು ನನ್ನನ್ನೇ ಪ್ರಶ್ನಿಸುತ್ತಿದ್ದರು. ನಾನೇನೆ ಕೇಳಿದರೂ ಪಿಂಚಣಿ ಬರಬೇಕಿದ್ದರೆ ಇವೆಲ್ಲ ಹೇಳಬೇಕೇನೋ ಎಂದು ಮುಗ್ಧತೆಯಿಂದ ಮಹಿಳಾ ಹಾಡುಗಾರರು ಹೇಳುತ್ತಿದ್ದರು. ‘ಸರಿಯಾಗಿ ಬರಕೊಂಡೆ ಇಲ್ಲ, ತಾಯಿ’ ಎಂದು ಮರಳಿ ನನ್ನನ್ನೇ ವಿಚಾರಿಸಿಕೊಳ್ಳುತ್ತಿದ್ದರು. ಒಂದಂತೂ ಸ್ಪಷ್ಟ, ತಮಗೆ ಸೌಲಭ್ಯ ಲಭ್ಯವಾಗಬೇಕಿದ್ದರೆ ತಾವು ದಾಖಲುಗೊಳ್ಳುವುದು ಅನಿವಾರ್ಯ ಹಾಗೂ ಅಗತ್ಯ ಎನ್ನುವ ಅರಿವು ಅವರಲ್ಲಿ ಅರಳಿತ್ತು.

ಮಾತನಾಡುತ್ತ-ಮಾತನಾಡುತ್ತ ಬೆಕ್ಕಿನ ಹೆಜ್ಜೆಯಲ್ಲಿ ಅವರಂತರಂಗವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದೆ. “ಅಲ್ಲs ತಂಗಿ, ಪಿಂಚಣಿ ಬರಾಕ ಇವೆಲ್ಲಾ ಹೇಳ್ಬೇಕಾಗತೈತೇನವ್ವಾ? ಎಲ್ಲಾ ಶಿವನಾಟ! ಆಯ್ತು ಬರ‍್ಕೊ ತಂಗಿ. ಬರೇ ನಾವು ಹಾಡ್ಕಿ ಮಾಡೇವಿ ಅಂದ್ರ ನಡಿಯೂವಂಗಿಲ್ಲ ಕಾಣ್ತದ. ನಾವು ಸೋಸಿದ್ದ ಕಷ್ಟ ಹ್ಯಾಂಗ ಗೊತ್ತಾಗ್ಬೇಕು” ಎಂದು ನನ್ನನ್ನು ಪ್ರಶ್ನಿಸುತ್ತ ತಮಗೆ ತಾವೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದರು.

ಇನ್ನು ಕೆಲವು ಬಾರಿ ಎದೆಯಿಂದ ಹೊರಬಂದ ಮಾತು ಗಂಟಲಲ್ಲಿಯೇ ಸಿಕ್ಕಿಕೊಳ್ಳುತ್ತಿತ್ತು. “ಪಿಂಚಣಿ, ಗಿಂಚಣಿ ಏನೂ ಬ್ಯಾಡಾ ಬಿಡು. ಈಗೇಟು ಹೇಳಿನಿ ಆಟು ಬರ್ಕೊಂಡು ಹೋಗು. ಮನಸ್ಸ ತಿಳಿದ್ರ ಕೊಡ್ಲಿ, ಇರ‍್ಲಾಕಂದ್ರ ಬಿಡ್ಲಿ” ಎನ್ನುತ್ತಿದ್ದರು. “ಈಗ ನಿನಗೇನು ಹೇಳೇನಲ್ಲಾ ಚಾರಣೆ (೨೫ ಪೈಸೆ) ಭಾಗಾ ಹೇಳಿನಿ. ಇನ್ನ ಬಾರಣೆ ಭಾಗ ಹೇಳಬೇಕಂದ್ರೂ ಹೇಳಾಕಾಗೂದಿಲ್ಲ. ಅವೆಲ್ಲಾ ಹೊಟ್ಟ್ಯಾಗ ಹುಣ್ಣ ಆದಂಗ ಆಗ್ಯಾವು. ಹೇಳಾಕ ಹೊಂಟ್ರ ಜೀವ ತಗಿಯೂವಂಗ, ಬಾಯಿ ಬಿಡಲಾರ್ದಂಗ ನೋಯಿಸ್ತಾವು” ಎಂದು ಒದ್ದಾಡುತ್ತಿದ್ದರು.

ಕಲಾವಿದೆಯರ ಜೊತೆಯಿದ್ದ ಅವಧಿಯಲ್ಲಿ ಏನಿಲ್ಲವೆಂದರೂ ಕನಿಷ್ಠ ಹದಿನೈದು ಇಪ್ಪತ್ತು ಸಲವಾದರೂ ನಾನು ಪಿಂಚಣಿ ಕೊಡಿಸಲು ಬಂದಿಲ್ಲ’ ಎಂದು ಹೇಳಿದ್ದೆ. ಆದರೂ ಅವರು ನನ್ನ ಮಾತನ್ನು ಕೇಳಿಸಿಕೊಂಡಂತೆ ಕಂಡುಬರಲಿಲ್ಲ. ಪದೇ ಪದೇ ಪಿಂಚಣಿ ವಿಚಾರ ಮಾತನಾಡುತ್ತ ನನ್ನೊಳಗೆ ಅವರಿಗೆ ಪಿಂಚಣಿ ಕೊಡಬೇಕೆನ್ನುವ ಅಭಿಲಾಷೆಯನ್ನು ಚಿಗುರಿಸುವ ಪ್ರಯತ್ನ ಮಾಡುತ್ತಿದ್ದರು ಅಥವಾ ಅವರೊಂದಿಗಿನ ನನ್ನ ಪ್ರತಿ ಮಾತನ್ನು ಪಿಂಚಣಿ ಕೊಡಿಸುವ ವಿಷಯಕ್ಕೆ ಭಾಷಾಂತರಿಸಿಕೊಳ್ಳುತ್ತಿದ್ದರು.

ಪಿಂಚಣಿ ಬಯಸುತ್ತಿದ್ದ ಮಹಿಳಾ ಹಾಡುಗಾರರ ಸ್ಥಿರಾಸ್ತಿಯನ್ನಾಗಲಿ, ಚರಾ‌ಸ್ತಿಯನ್ನಾಗಲಿ ಮಾಡಿಕೊಂಡವರಲ್ಲ, ಬದುಕಿನ ಸಾಯಂಕಾಲದಲ್ಲಿದ್ದ ಅವರಿಗೆ ಹಾಡಿಕೆಯ ದುಡಿಮೆಯನ್ನು ನಡೆಸಿಕೊಂಡು ಹೋಗುವ ಚೈತನ್ಯ ಇರಲಿಲ್ಲ. ಇವರ ಹಾಡಿಕೆಗೆ ಸೂರು ಹಾಕುತ್ತಿದ್ದವರು ತಾಳ ಬಾರಿಸುತ್ತಿದ್ದವರು ಇವರ ಸೋದರ ಮಾವಂದಿರು, ಅಣ್ಣಂದಿರು. ಇವರೆಲ್ಲ ಹಾಡುವ ಮಹಿಳೆಯ ವಯಸ್ಸಿಗಿಂತ ಹದಿನೈದು ಇಪ್ಪತ್ತು ವರ್ಷ ದೊಡ್ಡವರು. ಹಿಮ್ಮೇಳದವರು ವಯಸ್ಸಾಗಿಯೋ, ಅನಾರೋಗ್ಯದ ಕಾರಣದಿಂದಾಗಿಯೋ ಇಹಲೋಕಕ್ಕೆ ವಿದಾಯ ಹೇಳಿದ್ದರು. ಬದುಕಿನ ಮುಸ್ಸಂಜೆಯಲ್ಲಿ ಹೊಸ ಮೇಳ ಕಟ್ಟಿಕೊಂಡು ಹಾಡಿಕೆ ಮಾಡುವ ದೈಹಿಕ ಶಕ್ತಿಯನ್ನು, ಮಾನಸಿಕ ಚೈತನ್ಯವನ್ನು ವಯಸ್ಸಾದ ಮಹಿಳಾ ಹಾಡುಗಾರರು ಕಳೆದುಕೊಂಡಿದ್ದರು. ವಯಸ್ಸಿನಲ್ಲಿ ನಿದ್ದೆಗೆಟಟು, ಅಲೆಮಾರಿಯಾಗಿ ಹಾಡಿಕೆ ಮಾಡಿ ಮನೆಯ ಸದಸ್ಯರನ್ನು ಸಲುಹಿದರೂ ಮನೆಯ ಯಾವ ಸದಸ್ಯರೂ ಕುಳಿತು ಉಣ್ಣು ಎನ್ನುತ್ತಿಲ್ಲ. ಕೇರಿಯ ಕುಟುಂಬಗಳಿಗೆ ಬಡತನವೇ ಉಸಿರಾಗಿದೆ. ಹೀಗಾಗಿ ಮನೆಯ ಆರ್ಥಿಕ ಮುಗ್ಗಟ್ಟು, ವಿರಾಮ ಬಯಸುವವರನ್ನು ಕುಟುಂಬಕ್ಕೆ ಭಾರ ಎಂದೇ ಪರಿಗಣಿಸುವಂತೆ ಒತ್ತಾಯಿಸುತ್ತಿತ್ತು. ಹಾಡಿಕೆಯನ್ನು ಬಿಟ್ಟು ಕುಟುಂಬಕ್ಕೆ ಹೊರೆಯಾಗದಂತೆ ಬದುಕಬೇಕೆಂದರೆ ಕಲಾ ಪಿಂಚಣಿ ಅಗತ್ಯವಾಗಿತ್ತು. ಹಾಗಾಗಿಯೇ ಏನೋ ಬಹುತೇಕ ಮಹಿಳಾ ಹಾಡುಗಾರರು ಪಿಂಚಣಿ ಅಪೇಕ್ಷೆಯೊಂದಿಗೆ ನನ್ನ ಜೊತೆ ಮಾತಿಗಿಳಿಯುತ್ತಿದ್ದರು. ಇಲ್ಲವೆ ಮುಧೋಳದ ಸಾಬವ್ವ, ಎಲ್ಲವರಂತೆ ಪಿಂಚಣಿ ಪಡೆಯುವ ವಯಸ್ಸು ತಮಗಾಗಿಲ್ಲವೆಂದು ಮಾತನಾಡಲು ನಿರಾಕರಿಸುತ್ತಿದ್ದರು.

. ಅವಕಾಶ ನಿರೀಕ್ಷಣೆಗಾಗಿ ದಾಖಲಾಗಬಯಸುವವರು

ಇನ್ನು ಕೆಲವು ಇಪ್ಪತ್ತು ಆಸುಪಾಸಿನ ವಯಸ್ಸಿನ ಹಾಡುವ ಹುಡುಗಿಯರು ಮಾತನಾಡಿದರೂ ವಯಸ್ಸಾದ ಮಹಿಳೆಯರಲ್ಲಿನ ಮುಕ್ತತೆ ಅವರಲ್ಲಿ ಕಂಡುಬರಲಿಲ್ಲ. ರಕ್ಷಣೆಗಾಗಿ ತಾಯಿ ಮನೆಯಲ್ಲಿದ್ದ ಕಾರಣಕ್ಕಾಗಿ ತಮಗೆ ರೇಷನ್ ಕಾರ್ಡ್‌ ಕೊಟ್ಟಿಲ್ಲ ಎನ್ನುವುದು ಇವರ ಮುಖ್ಯ ತಕರಾರಿತ್ತು. ಇತರ ದುಡಿಮೆಯ ಹಾಗೆಯೇ ಹಾಡಿಕೆಯೂ ಒಂದು ದುಡಿಮೆ ಎನ್ನುವುದ ಅವರ ನಿಲುವು. ಹಾಡುವ ಸಾಹಿತ್ಯದಲ್ಲಿ ಏನಾದರೂ ಇರಲಿ, ಅದನ್ನು ತೆಗೆದುಕೊಂಡ ಏನು ಮಾಡಬೇಕಾಗಿದೆ? “ನಾವು ಹಾಡಿಕೆ ಮಾಡುತ್ತೇವೆ. ಮಾಡಿದ ಹಾಡಿಕೆಗೆ ದುಡ್ಡು ಪಡೆಯುತ್ತೇವೆ” ಎನ್ನುವ ಸರಳ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು. ವೃತ್ತಿ ಸಂಕೀರ್ಣತೆಯ ಕುರಿತು ಆಲೋಚಿಸಲು, ಮಾತನಾಡಲು ಅವರು ಇಷ್ಟಪಡಲಿಲ್ಲ.

ತಾವು ಒಳ್ಳೆಯ ಹಾಡುಗಾರ್ತಿಯರು. ಈ ಚಿಕ್ಕ ವಯಸ್ಸಿನಲ್ಲಿಯೇ ದಿನದ ಹಾಡಿಕೆಗೆ ಎರಡೂವರೆ ಸಾವಿರದಿಂದ ಮೂರು ಸಾವಿರದವರೆಗೆ ದುಡಿಯುತ್ತೇನೆ ಎನ್ನುವ ಹೆಮ್ಮೆ ಅವರಲ್ಲಿತ್ತು. ನಮ್ಮ ಕೈಯಲ್ಲಿನ ವಿಡಿಯೋ ರೆಕಾರ್ಡಿಂಗ್‌ ನೋಡಿ ಟಿ.ವ್ಹಿಯವರು ಎಂದು ಭಾವಿಸಿದ್ದರು. ಸಂದರ್ಶನ ಮಾಡುವಾಗ ರೇಕಾರ್ಡಿಂಗ್‌ ‌ನಾನೇ ಅನುಮತಿ ನೀಡುತ್ತಿರಲಿಲ್ಲ. ನನ್ನ ಇದುವರೆಗಿನ ಕ್ಷೇತ್ರಕಾರ್ಯಾಧ್ಯಯನದಲ್ಲಿನ ಅನುಭವವನ್ನು ಆಧರಿಸಿ ಹೇಳುವುದಾದರೆ ವಿಡಿಯೋ, ಆಡಿಯೋ ರೆಕಾರ್ಡಿಂಗ್ ಕಂಡ ತಕ್ಷಣ ಅವರು ಒಳಮುಚ್ಚುಗದ (ಮುಟ್ಟಿದರೆ ಮುನಿ) ಹಾಗೆ ಒಳಮುಚ್ಚಿಕೊಳ್ಳುತ್ತಿದ್ದರು. ಹೀಗಾಗಿಯೇ ನಾನು ಧ್ವನಿ ಮುದ್ರಣ ಮುಕ್ತ ಮಾತುಕತೆ ನಡೆಸುತ್ತಿದ್ದೆನು. ಅವರು ವೃತ್ತಿ ತಾಂತ್ರಿಕತೆಗೆ ಸಂಬಂಧಿಸಿದ್ದನ್ನು ನಿರೂಪಿಸುವಾಗ, ಹಾಡುವಾಗ, ಜೀವನದಲ್ಲಿ ಅಪರೂಪಕ್ಕೆ ಎದುರಾದ ಸನ್ಮಾನಗಳನ್ನು, ಹೇಳುವಾಗ ವಕ್ತೃಗಳ ಒಪ್ಪಿಗೆ ತೆಗೆದುಕೊಂಡು ಧ್ವನಿ ಮುದ್ರಣ ಇಲ್ಲವೆ ವಿಡಿಯೋ ಮಾಡಿಕೊಳ್ಳುತ್ತಿದ್ದೆ.

ಹಾಡಿಕೆಯಲ್ಲಿದ್ದ ತರುಣಿಯರು, ವೀಡಿಯೋ ರೆಕಾರ್ಡಿಂಗ್‌ ಮಾಡಿಕೊಳ್ಳಬೇಕೆಂದು ಬಯಸಿ ಬರುತ್ತಿದ್ದರು. ವೃತ್ತ ಪತ್ರಿಕೆಗಳು ಹಾಗೂ ದೂರದರ್ಶನ ಚಾನಲ್‌ಗಳು ಅವರನ್ನು ಹಾಗೆ ತರಬೇತುಗೊಳಿಸಿವೆ. ಟಿ.ವ್ಹಿ.ಯಲ್ಲಿ ಕಾಣಿಸಿಕೊಳ್ಳುವುದೆಂದರೆ ಸ್ಟಾರ್‌ಗಳಾದಂತೆ ಎಂದು ಭಾವಿಸುತ್ತಿದ್ದರು. “ಟೀವ್ಯಾಗ ನಮ್ಮನ್ನ ತೋರ್ಸಿಬಿಟ್ಟ್ರ ಇನ್ನು ಹಾಡಕಿಗೆ ಜಗ್ಗಿ ಎಲಿ ಬರ್ತಾವೆ” ಎನ್ನುವುದು ಅವರ ನಿಲುವು. ಒಟ್ಟಿನಲ್ಲಿ ಬರಹದಲ್ಲಾಗಿರಬಹುದು, ಟಿ.ವ್ಹಿ.ಯಲ್ಲಾಗಿರಬಹುದು, ಸ್ಟಾರ್‌ಗಳಂತೆ ದಾಖಲಾಗಲು ಬಯಸುತ್ತಿದ್ದರು. ಅವರ ಕಲ್ಪನೆಯಲ್ಲಿನ ‘ಸ್ಟಾರ್’ ಚೌಕಟ್ಟಿನ ಒಳಗಡೆಯೇ ವೃತ್ತಿ ಜೀವನದ ಹಾಗೂ ಕೌಟುಂಬಿಕ ಜೀವನದ ಮಾಹಿತಿ ನೀಡುತ್ತಿದ್ದರು.

೩. ಕೀಳರಿಮೆಯಿಂದ ಮೌನ

ಬಹುತೇಕ ಮಹಿಳಾ ಹಾಡುಗಾರರು ನನ್ನನ್ನು ಕಂಡ ತಕ್ಷಣ ಮೊದಲು ಹೇಳುತ್ತಿದ್ದ ವಿಷಯ “ನಾನು ಮದುವಿಯಾದೋರು. ನಮ್ಮ ಯಜಮಾನ್ರ ಹೆಸರು ರಾಮಚಂದ್ರಪ್ಪ. ೨೫ ವರ್ಷಗಳಿಂದ ಹಾಡ್ಕಿ ಮಾಡ್ಕೊಂಡು ಬಂದೇವಿ. ಹಾಡ್ಕಿಗಿ ಹ್ವಾದ ಕಡಿಯೆಲ್ಲಾ ನಮಗ ಚಂದ ಹಾಡ್ತೀರಿ ಅಂತ್ಹೇಳಿ ಸರ್ಟಿಫಿಕೇಟ್ ಕೊಟ್ಟಾರು. ಎರಡು ರಾತ್ರಿ ಒಂದ ಹಗಲಿಗಿ ಹತ್ತ ಸಾವಿರತನಾ ಪಗಾರಾ ತಗೋತೇವ್ರಿ. ಇಸ ವಯಸ್ಸಾದ್ರು ಹಗ್ಲು ರಾತ್ರಿ ಹಾಡ್ಕಿಗಿ ಹೋಗತೇವ್ರಿ” ಎನ್ನುತ್ತಿದ್ದರು. ನಾನು ಹೋದಲ್ಲೆಲ್ಲಾ ಇದೇ ಬಗೆಯ ಪ್ರತಿಕ್ರಿಯೆಗಳು ಎದುರಾಗುತ್ತಿದ್ದವು. ಕೇವಲ ಗಂಡನ ಹೆಸರು ಮಾತ್ರ ಬದಲುಗೊಳ್ಳುತ್ತಿತ್ತು. ನಿಮಗೆ ಮದುವೆಯಾಗಿದೆಯಾ, ದೇವರಿಗೆ ಬಿಟ್ಟಿದೆಯಾ ಎನ್ನುವ ಪ್ರಶ್ನೆಗಳನ್ನು ನಾನು ಅವರಿಗೆ ಕೇಳದೇ ಇದ್ದರೂ ನನ್ನ ಕಂಡ ತಕ್ಷಣ ಮೇಲೆ ಉಲ್ಲೇಖಿಸಿದಂತೆ ಹೇಳುತ್ತಿದ್ದರು. ನಾನು ಮದುವೆಯಾದವಳು; ಕಲಿತವಳು; ಸರಕಾರಿ ಕೆಲಸದಲ್ಲಿದ್ದವಳು; ಕಾರಿನಲ್ಲಿ ಹೋದ ನನ್ನನ್ನು ಅವರು ಇನ್ನೂ ಮೇಲ್ ಅಂತಸ್ತಿಗೆ ತಂದುಕೊಂಡು ನೋಡುತ್ತಿದ್ದರು. ಜೊತೆಯಲ್ಲಿ ಬಂದ ವಿದ್ಯಾರ್ಥಿಗಳು “ನಮ್ಮ ಮೇಡಂ ಬಂದ್ರು, ಚೇರ್ ಹಾಕಿ” ಎಂದು ಅವರ ಮನೆಯಲ್ಲಿ ನನ್ನನ್ನು ಉಪಚರಿಸುತ್ತಿದ್ದರು. ವಿದ್ಯಾರ್ಥಿಗಳ ಈ ಉಪಚಾರ ಅವರು ನನ್ನಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ಕಾರಣವಾಗುತ್ತಿತ್ತು. ನನ್ನನ್ನು ಕಾನೂನಿನ ಪ್ರತಿನಿಧಿಯಂತೆ ಪರಿಭಾವಿಸುತ್ತಿದ್ದರು. ದೇವದಾಸಿ ನಿಷೇಧ ಕಾನೂನು ಹಾಗೂ ಸಮಾಜ ಢಾಳಾಗಿ ರೂಪಿಸುವ ನೈತಿಕ ಚೌಕಟ್ಟು ಇವೆರಡೂ ಅವರಲ್ಲಿ ಭಯ, ಕೀಳರಿಮೆ, ಅಪರಾಧಿ ಮನೋಭಾವವನ್ನು ಉಂಟುಮಾಡಿರಬೇಕು. ಹೀಗಾಗಿಯೆ ಏನೋ ಮಾತಿಗೆ ಕುಳಿತಾಗ ನಾನು ಮಾತನಾಡುವ ಮೊದಲು ಅವರೇ ತಾವು ಮದುವೆಯಾದವರೆಂದು ಹೇಳುತ್ತಿದ್ದರು; ಹಾಡಿಕೆಯಲ್ಲಿನ ಸನ್ಮಾನಗಳನ್ನು ಹೇಳುತ್ತಿದ್ದರು. ನನಗೆ ಸಮೀಪವಾಗಲು ಮೊದಲು ಪ್ರಸ್ತಾಪಿಸುತ್ತಿದ್ದ ವಿಷಯಗಳೆಂದರೆ ಇವೆರಡೇ. ಇಂತಹ ಸಂದರ್ಭಗಳೆಲ್ಲಾ ನಾನು ಮೌನವಾಗಿರುತ್ತಿದ್ದೆ. ಅವರ ಕಲಾ ವಾದ್ಯದ ಬಗೆಗೆ ಕೇಳುತ್ತಲೆ ಅವರೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ‘ದಪ್ಪು ಕೊಡಿ, ನಾನೂ ಒಂದಿಷ್ಟು ಬಾರಿಸುತ್ತೇನೆ. ಚೌಡಿಕೆ ಕೊಡಿ ನಾನೂ ಒಂದಿಷ್ಟು ನುಡಿಸುತ್ತೇನೆ” ಎಂದಾಗ ಬೆಚ್ಚಿಬೀಳುವ ಸರದಿ ಅವರದು. ತಕ್ಷಣವೇ ಅವರೊಳಗಿನ ತಾಯಿ ಕರಳು ಜಾಗೃತವಾಗಿ ಬಿಡುತ್ತಿತ್ತು. “ತಾಯಿ, ಮದುವಿಯಾದ ಹೆಣಮಗಳು ನೀನು, ನೋಡಾಕ ಚಲೋ ಜಾತ್ಯಾಗ ಹುಟ್ಟಿದಕಿ ಅನಸ್ತದ. ನಿನ್ಗ ನಮ್ಮ ಹಣಿಬರಾ (ಹಣೆಬರಹ) ಯಾಕ ತಂಗಿ? ತಗಿ, ಕೈ ಬಿಡ. ಅದನ್ನ ಗಂಡ ಇದ್ದ ಹೆಣಮಕ್ಕಳು ಮುಟ್ಟಬಾರ್ದು. ಇವ್ನೆಲ್ಲಾ ನುಡಿಸಬೇಕಿದ್ರ ಒಂದು ದೇವ್ರಿಗೆ ಬಿಟ್ಟಿರಬೇಕು, ಇಲ್ಲಾ ಗಂಡ ಸತ್ತಿರಬೇಕು” ಎಂದು ಒಂದೇ ಉಸುರಿನಲ್ಲಿ ಹೇಳಿಬಿಡುತ್ತಿದ್ದರು. ಹೇಳಿ ಮುಗಿಸಿದ ತಕ್ಷಣ ತಾವು ಮೊದಲು ಹೇಳಿದ್ದು ನೆನಪಾಗುತ್ತಿತ್ತೋ ಏನೋ?! ತಕ್ಷಣವೇ ತುಟಿ ಇಲ್ಲವೆ ನಾಲಿಗೆ ಕಚ್ಚಿಕೊಳ್ಳುತ್ತಿದ್ದರು. ‘ಗುಲ್ಬರ್ಗಾದ ಬಾನಾಬಾಯಿ ಗಂಡ ಇದ್ದವಳು. ಅವಳು ನಾಗೇಶಿ ಹಾಡಿಕೆ ಮಾಡುತ್ತಾಳಲ್ಲಾ’ ಎಂದದ್ದಕ್ಕೆ “ಅದು ಯಾವುದೋ ಅಡ್ನಾಡಿ ತಂಗಿ. ಇವನ್ನ ಮುಟ್ಟಬೇಕಿದ್ದ್ರ ದೇವರ್ಗೆ ಬಿಟ್ಟಿರಬೇಕು; ಇಲ್ಲಾ ಗಂಡ ಸತ್ತಿರಬೇಕು. ನಿಮ್ಮ ಜನಾ, ಅದರಾಗ ಹೆಣ್ಣಮಕ್ಕಳು ಮುಟ್ಟಬಾರ್ದು. ಅದು ಸಂಪ್ರದಾಯ. ಇದನ್ನ ನಾ ನೀ ಮಾಡಿದ್ದಲ್ಲ. ಅನಾದಿ ಕಾಲ್ದಿಂದ ಬಂದದ್ದು. ಹುಚ್ಚಗೊಟ್ಟಿ ಕೆಳಗಿಡು” ಎನ್ನುತ್ತಿದ್ದರು. “ಇದರಾಗ ಲಾಭ ಇದ್ರ, ದೊಡ್ಡ ಹೆಸರು ಬರ್ತಿದ್ರ ಬಕ್ಕಳಂಗ ಲಕ್ಷಗಂಟಲೆ ರೊಕ್ಕ ಬರ್ತಿದ್ರ, ಎಲ್ಲಾ ಜಾತಿಯವ್ರು ಹಾಡಿಕೆ ಮಾಡ್ತಾರ. ಹೆಣ್ಣ ಮಕ್ಕಳೂ ಹಾಡ್ತಾರ. ಗಣ ಮಕ್ಕಳೂ (ಪುರುಷರು) ಹಾಡ್ತಾರ. ಇದು ಜಾತಿ ಸಮಸ್ಯಾ ಅಲ್ಲ. ದೇವರಿಗಿ ಬಿಟ್ಟ ಹೆಣಮಕ್ಕಳು ಆಗಿರಬೇಕು ಅನ್ನು ಸಮಸ್ಯಾ ಅಲ್ಲ. ಇದೆಲ್ಲಾ ದೊಡ್ಡವರ ರಾಜಕಾರಣ ಅಮ್ಮ…” ಎನ್ನುತ್ತಿದ್ದೆ. “ಹೌದು ತಾಯಿ ನೀ ಅನ್ನೂದು ಒಂದು ರೀತಿ ಖರೇವ (ನಿಜ) ಐತಿ” ಏನೋ ತಿಳಿದವರಂತೆ ತಲೆ ಅಲ್ಲಾಡಿಸಿ ಹೂವರಳುವಂತೆ ಬಾಯಿ ಅರಳಿಸಿ ನಗುತ್ತಿದ್ದರು.

“ನಾನು ಏನs ಹೇಳಿದ್ರೂ, ತೆಪ್ಪು ನಮ್ದ ಅಂತ ಸಮಾಜಾ ನೋಡ್ತದಲ್ಲ; ಅದs ಸಂಕಟಾ ನಮಗ ನಿನ್ನೆ ನನ್ನ ಮೊಮ್ಮಗಳು “ಅಪ್ಪಾ ಒಂದು ಹುಡುಗಾ ಬೆನ್ನ ಹತಕೊಂಡು ತಿರಗಾಕತ್ತ್ಯಾನು. ಬರೆ ನನ್ನ ನೋಡತಿರತಾನು. ಒಂಥರಾ ಮಾಡ್ತಾನು’ ಅಂತ ಅವರಪ್ಪಗ ಹೇಳ್ತು. “ಆಯ್ತು, ಅಂವಾ ಯಾರು ತೋರ್ಸು, ನೋಡ್ಕೋತೇನಿ ಒಂದ ಕೈ’ ಅಂತ ಅನಬೇಕಲ್ಲವ್ವಾ? ಅದು ಬಿಟ್ಟು “ಅಂವಾ ನಿನ್ನ ನೋಡ್ತಾನು ಅಂತ ಅದ್ಹೆಂಗ ಗೊತ್ತಾಯ್ತು? ನೀನೂ ಅಂವ್ನ ನೋಡಿರಬೇಕಲ್ಲಾ?” ಅಂದು ಮಗಳ್ನ ಬೈದು ಮೂಲಿಗಿ ಕೂಡ್ಸಿದಾ. ಮನಿಯವ್ರs ಇರಬೋದು, ಸಮಾಜದವ್ರ ಇರಬೋದುs ಹೆಣ್ಣಿನ ಬಗ್ಗಿ ಯೋಚ್ನಿ ಮಾಡೂದು ಹೀಂಗ ತಾಯಿ. ಅದು ನನ್ನ ಹೊಟ್ಟ್ಯಾಗ ಹುಟ್ಟಿದ ಮಕ್ಕಳ ಆಗಿರಬೋದು, ನಿನ್ನಂತವರ ಆಗಿರಬೋದು, ಸಂಕ್ಟಾ ಹೇಳ್ಕೊಳ್ಳುವಾಗ ಹತ್ತೆಂಟು ಬಾರಿ ಯೋಚ್ನೆ ಮಾಡ್ಬೇಕಾಗ್ತೈತಿ ತಾಯಿ. ಅಂಗೈ ತೋರ್ಸಿ ಅವಲಕ್ಷಣಾ ಅಂತ ಅನಸ್ಕೊಬಾರ್ದು ನೋಡ್ರಿ” ಎಂದು ಮಾರ್ಮಿಕವಾಗಿ ನುಡಿದಳು. ಮಹಿಳೆಯರು ಅದರಲ್ಲಿಯೂ ‘ಅನೈತಿಕ’ ಚೌಕಟ್ಟಿನಲ್ಲಿ ಅಪಮಾನಕ್ಕೆ ಒಳಗಾಗುವ ಮಹಿಳೆಯರು ಎದುರಿಸುವ ಅಪಮಾನಗಳು ಹಂಚಿಕೊಳ್ಳುವಂತವಲ್ಲ. ಹಂಚಿಕೊಳ್ಳುವ ಹೋದರೆ ಅವರ ಸಮಸ್ಯೆಗಳಿಗೆ ಅವರನ್ನೇ ಹೊಣೆಗಾರನನ್ನಾಗಿಸಲಾಗುತ್ತದೆ. ಹೀಗಾಗಿಯೋ ಏನೋ ಹಾಡಿಕೆ ಜೀವನದ ಅನುಭವಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ನೆನಪು ಸಿಹಿಯಾಗಿದ್ದರೆ ಮೆಲುಕು ಹಾಕಿದರೂ ಅದು ಪೆಪ್ಪರಮೆಂಟ್ ಚೀಪಿದ ಅನುಭವವಾಗುತ್ತದೆ. ಇವರ ಅನುಭವಗಳು ಹಾಗಲ್ಲ; ನೆನೆಸಿಕೊಂಡರೆ, ಹೊಟ್ಟೆ ನೋವು, ಎದೆ ನೋವು, ತಲೆ ನೋವು ತರುತ್ತವೆ. ಹಿಮ್ಮಿಂಚಾಗಿ ಬಂದ ನೆನಪುಗಳು ಕೆರಳಿದ ಜೇನಹುಳುಗಳಂತೆ ಮನಸ್ಸೆಲ್ಲಾ ಕಚ್ಚಿ ಘಾಸಿಗೊಳಿಸುತ್ತವೆ. ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವುದೆಂದರೆ ಹಳೆಯ ಗಾಯಗಳನ್ನು ಹಸಿಗೊಳಿಸಿಕೊಂಡಂತ ಹಿಂಸೆ ಅದು.

. ಕಲಿತ ಮಕ್ಕಳ ಕಾರಣಕ್ಕಾಗಿ ಪ್ರತಿಕ್ರಿಯೆಯ ನಿರಾಕರಣೆ

ಹಾಡಿಕೆ ಮಹಿಳೆಯರ ಮಕ್ಕಳ ಶಿಕ್ಷಣಕ್ಕೆ ಮುಖಾಮುಖಿಯಾದದ್ದು ಕಡಿಮೆ. ಶಿಕ್ಷಣ ಪಡೆದರೂ ಎಸ್.ಎಸ್.ಎಲ್.ಸಿ. ಇಲ್ಲವೆ ಪಿ.ಯು.ಸಿ. ಪಾಸು ಇಲ್ಲವೆ ಫೇಲು. ಅಬ್ಬಬ್ಬಾ ಎಂದರೆ ಪದವಿಯ ವರೆಗೆ ಓದಿದ ಗಂಡು ಮಕ್ಕಳು, ಕೆಲಸವಿಲ್ಲದೆ ಮನೆಯಲ್ಲಿ ಕುಳಿತವರಿದ್ದರು. ಒಂದು ಕುಟುಂಬದಲ್ಲಿ ಪದವಿ ಮುಗಿಸಿದ, ಸೂಕ್ಷ್ಮ ಮನಸ್ಸಿನ ಇಬ್ಬರು ಮಕ್ಕಳಿದ್ದರು. ಮತ್ತೊಂದು ಕುಟುಂಬದಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಉನ್ನತ ಹುದ್ದೆಯಲ್ಲಿ ಇದ್ದವರಿದ್ದರು. ಇವರು ಪ್ರಬಲ ಸಮಾಜದವರ ಜೊತೆ ಗುರುತಿಸಿಕೊಳ್ಳಲು ಬಯಸುತ್ತಿದ್ದರು. ತನ್ನ ತಾಯಿ ಹಾಡಿಕೆ ಮಾಡುತ್ತಿದ್ದಳು ಎಂಬುದನ್ನು ನಿರಾಕರಿಸುತ್ತಿದ್ದರು. ಅವರ ಈ ನಿರಾಕರಣೆಗೆ ಸ್ಪಷ್ಟವಾದ ಕಾರಣವಿತ್ತು. ತಾಯಿ ಹಾಡಿಕೆ ಮಾಡುತ್ತಿದ್ದಳು ಎಂದು ಒಪ್ಪಿಕೊಂಡರೆ, ತನ್ನ ತಾಯಿ ‘ದೇವದಾಸಿ’ ಎಂದು ಒಪ್ಪಿಕೊಂಡಂತೆ. ಬಾಲ್ಯದಲ್ಲಿ, ಶಾಲಾ ಕಾಲೇಜಿನ ದಿನಗಳಲ್ಲಿ ತಾಯಿ ‘ದೇವದಾಸಿ’ ಎನ್ನುವ ಕಾರಣಕ್ಕಾಗಿಯೇ ಸಹಪಾಠಿಗಳಿಂದ ಹಾಗೂ ಇತರ ವಿದ್ಯಾರ್ಥಿಗಳಿಂದ ಎದುರಿಸಿದ ಅಪಮಾನಗಳಿಗೆ ಲೆಕ್ಕವಿಲ್ಲ. ಈ ಅಪಮಾನಗಳನ್ನು ಮೀರುವುದಕ್ಕಾಗಿಯೇ ಹಠಕ್ಕೆ ಬಿದ್ದು ಓದಿದವರು ಇವರು. ಜಮಖಂಡಿಯ ಹಾಡಿಕೆ ಮಹಿಳೆಯ ಮಗ ಈಗ ಸಮಾಜ ಸೇವಾ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. “ಸರ್ಕಾರಿ ಕೆಲ್ಸಾ ಸಿಕ್ಕರೂ ನಾನೂ ಹೋಗ್ಲಿಲ್ಲ. ನಾನು ಬ್ಯಾರೆ ಊರಿಗೆ ಕೆಲ್ಸಕ್ಕೆ ಹೋದಾಗ ನಮ್ಮವ್ವ ಹಾಡ್ಕಿಗಿ ಹೋದ್ರ ಅಂತ ನಾನೂ ನಮ್ಮ ಊರು ಬಿಡ್ಲೆ ಇಲ್ಲ. ಇಲ್ಲೆ ಸಮಾಜ ಸೇವೆ ಮಾಡ್ಕೊಂಡು ಅದೇನಿ. ನಮಗ ಬುದ್ಧಿ ಬರೂದಕ ನಮ್ಮವ್ವ ನಮ್ಮಕ್ಕನ್ನ ದೇವಿಗೆ ಬಿಟ್ಟಿದ್ದಳು. ನನಗ ತಿಳವಳಿಕೆ ಬಂದಿದ್ದ ನಮ್ಮನ್ಯಾನ ಹೆಣ್ಣಮಕ್ಕಳ್ನ ಹೊರಗ ಬಿಟ್ಟಿಲ್ಲ. ಹಿಂದಿನ ಯಾವ ಪದ್ಧತಿಯೂ ನಾವು ಮಾಡೂದಿಲ್ಲ. ಇಷ್ಟಾದರೂ ಕೆಲವು ದೋಸ್ತರು ಒಂಥರಾ ನಕ್ಕೊಂತ “ನಿಮ್ಮವ್ವ, ನಿಮ್ಮಕ್ಕ ವಯಸ್ಸಿನಾಗ ಜಗ್ಗಿ ದುಡದಾರು ಬಿಡಲೆ” ಅಂತ ಮೀಸ್ಯಾಗ ನಗತಾರು. ಬ್ಯಾಸರ ಆಗತೈತ್ರಿ. ನಮ್ಮವ್ವ ದೇವದಾಸಿ ಆಗಿದ್ದಕ್ಕ ನಾವ ಅನುಭವಿಸಿದ ಕಷ್ಟಾನs ಸಾಕು. ದೇವದಾಸಿ ಪದ್ಧತಿ ಬಗ್ಗೆ, ಹಾಡ್ಕಿ ಬಗ್ಗೆ ನಾನು ಮಾತಾಡಾಕನs ಇಷ್ಟಾ ಪಡೂದಿಲ್ಲ. ನಮ್ಮವ್ವನ ಹೆಸರು ಎಲ್ಲೂ ನಮೂದಾ ಮಾಡಬ್ಯಾಡ್ರಿ. ನಮ್ಮವ್ವ ಏನು ಹೇಳ್ತಾಳು ಕೇಳ್ಕೊಂಡು ಹೋಗಿ” ಎಂದು ಹೇಳಿದನು. ಕಣ್ಣ ಸನ್ನೆಯಿಂದ ತನ್ನ ತಾಯಿಯ ಪಕ್ಕಕ್ಕೆ ಮಗಳಿಗೆ ಕುಳಿತುಕೊಳ್ಳಲು ಹೇಳಿದರು. ಅಜ್ಜಿಗೆ ಮನ ತೆರೆದು ಮಾತನಾಡುವಾಸೆ. ಮೊಮ್ಮಗಳಿಗೆ ಅಜ್ಜಿಯನ್ನು ಮೌನಕ್ಕೆ ತಳ್ಳುವಾಸೆ. ಪದವಿ ಓದಿದ ಮೊಮ್ಮಗಳು ಅಜ್ಜಿಯ ಮಾತನಾಡಲು ಬಾಯಿ ತೆಗೆದಾಗಲೊಮ್ಮೆ ತೊಡೆ ಚಿವುಟುತ್ತಿದ್ದಳು. ಅಜ್ಜಿ ೯೦ರ ಗಡಿಯಲ್ಲಿದ್ದಳು. ಆಕೆಯದು ಹಣ್ಣು-ಹಣ್ಣು ತೊಗಲು. ಮೊಮ್ಮಗಳಿಂದ ಪ್ರತಿ ಮಾತಿಗೂ ಚಿವುಟಿಸಿಕೊಳ್ಳುತ್ತಿದ್ದ ಅಜ್ಜಿಯ ಸಂಕಟವನ್ನು ನೋಡಲಾಗದೆ ನಾನೇ ಅವರ ಮನೆಯಿಂದ ಕಾಲ್ಕಿತ್ತೆ. ತೊಗಲಬಾಗಿಯಲ್ಲಿ ಹಾಡಿಕೆಯವಳನ್ನು ಭೆಟ್ಟಿಯಾಗಲು ಹೋದಾಗ ಆಕೆಯ ಮಕ್ಕಳು ಸಂದರ್ಶನಕ್ಕೆ ಅವಕಾಶ ನೀಡಲೇ ಇಲ್ಲ.

. ಕೇಳಿಸಿಕೊಳ್ಳುವ ಹೃದಯಕ್ಕಾಗಿ ಕಾಯ್ದವರು

ಯಾರೇ ಆಗಲಿ ಅಪರಿಚಿತರೊಂದಿಗೆ ಅಂತರಂಗ ಬಿಚ್ಚಿ ಮಾತನಾಡುವುದಿಲ್ಲ. ಕುಟುಂಬದವರಾಗಿಬಹುದು, ಸಮಾಜದವರಾಗಿರಬಹುದು – ಶೋಷಿತರಿಗೆ ಅದರಲ್ಲಿಯೂ ಮಹಿಳೆಯರಿಗೆ ಶೋಷಣೆಯ ಕುರಿತು ಮಾತನಾಡದಂತೆ ನಿರ್ದೇಶನ ನೀಡುತ್ತಿರುತ್ತಾರೆ. ಹೆಣ್ಣು ಜನ್ಮ ಹುಟ್ಟಿ ಬಂದದ್ದೆ ಕಷ್ಟ ಅನುಭವಿಸುವುದಕ್ಕೆ ಎಂಬುದನ್ನು ಒಪ್ಪಿಸಿಬಿಟ್ಟಿರುತ್ತಾರೆ. ಹೀಗಾಗಿಯೇ ಕುಟುಂಬದಲ್ಲಿ ಆಗಿರಬಹುದು, ಸಮುದಾಯಗಳಲ್ಲಿ ಆಗಿರಬಹುದು – ಮಹಿಳೆ ತನ್ನ ಕಷ್ಟ ಹಾಗೂ ಶೋಷಣೆಯ ಕುರಿತು ಚರ್ಚಿಸುವುದೇ ಇಲ್ಲ. ಚರ್ಚಿಸಿದರೂ ತಾನೆಲ್ಲ ತಪ್ಪಿದೆನು ಅಥವಾ ಆಕೆಯಲ್ಲಿ ತಪ್ಪಿದಳು ಎನ್ನುವುದರ ಸುತ್ತಲೇ ಚರ್ಚೆ ಬೆಳೆಯುತ್ತದೆಯೆ ಹೊರತು, ವ್ಯವಸ್ಥೆಯ ನೆಲೆಯಲ್ಲಿ ಅಲ್ಲ. ವ್ಯವಸ್ಥೆಯ ನೆಲೆಯಲ್ಲಿ ಸಮಸ್ಯೆಗೆ, ಶೋಷಣೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ, ಹುಡುಕುವ ಪಾಠವನ್ನು ನಮಗೆ ಕುಟುಂಬವಾಗಲಿ, ಸಮುದಾಯವಾಗಲಿ ಅಥವಾ ಸಮಾಜವಾಗಲಿ ಕಲಿಸಿಯೇ ಇಲ್ಲ. ಯಾವುದೇ ತಪ್ಪು ಘಟಿಸಿದರೂ ಮಹಿಳಾ ಮೂಲದಿಂದಲೇ ಅದಕ್ಕೆ ಕಾರಣಗಳನ್ನು ಹುಡುಕುತ್ತಾರೆ. ಹೀಗಾಗಿಯೇ ಏನೋ ಮಹಿಳೆಯರು ಅವರೆದುರಿಸಿದ ಇಕ್ಕಟ್ಟಿನ ಕುರಿತು ಕಷ್ಟಗಳ ಕುರಿತು ಬೇರೆಯವರೊಂದಿಗೆ ಹಂಚಿಕೊಳ್ಳಲು ಹಿಂದೇಟು ಹಾಕುತ್ತಾರೆ.

ನನ್ನ ಅವ್ವ, ಚಿಕ್ಕಮ್ಮ ಇವರಿಬ್ಬರೂ ತಮ್ಮ ಅವ್ವನಿಗೆ ಅಂದರೆ ನನ್ನಜ್ಜಿಗೆ ತಮ್ಮ ತಮ್ಮ ಗಂಡನ ಮನೆಯ ಕಷ್ಟಗಳ ಸರಮಾಲೆಯನ್ನೇ ಬಿಚ್ಚಿಡುತ್ತಿದ್ದರು. ನಾನು ಅಲ್ಲಿಯೇ ಅಜ್ಜಿಯ ತೊಡೆಯ ಮೇಲೆ ಉರುಳಿಕೊಂಡಿದ್ದೆ. ನನ್ನ ಅಜ್ಜಿ ಕೇಳಿಸಿಕೊಳ್ಳುವ ತನಕ ಕೇಳಿಸಿಕೊಂಡು, ನಂತರ ಅವರ ಮಾತನ್ನು ಅರ್ಧಕ್ಕೆ ತಡೆದಳು. “ಹೆಣ್ಣು ಮಕ್ಕಳು ಕಷ್ಟ ಅನಿಸಿದ್ದನ್ನು ಯಾರ ಮುಂದೂ ಹೇಳಬಾರ್ದು. ನಿಮ್ಮ ಕಷ್ಟಾನ ಯಾರೂ ಬಗಿಹರ್ಸೂದಿಲ್ಲ. ಬಗಿಹರ‍್ಸಾಕ ಬರದೂ ಇಲ್ಲ. ನಮ್ಮ ಮಗಳಿಗ್ಯಾಕ ಹೀಂಗ ಮಾಡ್ತೇರಿ ಅಂತ ಕೇಳು ಹಕ್ಕು ಹೆಣ್ಣಿನ ಕಡೆವರ್ಗೆ ಇಲ್ಲ. ನಾನಾರs ನಿಮ್ಮ ಕಷ್ಟಾನ ಕೇಳಿಸಿಕೊಂಡೇನಿ. ನಮ್ಮವ್ವ ಹಂಗಲ್ಲ. “ಗಂಡನ ಮನಿ ಬಗ್ಗಿ ಹಂಗೆಲ್ಲಾ ಚಾಡಿ ಹೇಳಬಾರ್ದು. ಹಂಗೇನಾರ ಹೇಳೂದಿದ್ರ ಮರದ ಮುಂದ ಹೋಗಿ ಹೇಳು. ಅದು ಯಾರಿಗೂ ಹೇಳೂದಿಲ್ಲ. ಹೊಳ್ಳಿ ನಿಂದs ತಪ್ಪು ಅಂತ ಬೆಳ್ಳು (ಬೆರಳು) ಮಾಡೂದಿಲ್ಲ” ಅಂತಿದ್ಲು. ಹೆಣ್ಣಿನ ಕಷ್ಟಾನ ಹಂಗs. ಹೇಳೂವಂಗ ಇರೂದಿಲ್ಲ. ಹೇಳ್ಕೊಬಾರ್ದು” ಎಂದಿದ್ದಳು. ಕೌಟುಂಬಿಕ ಪರಿಸರವಾಗಿರಬಹುದು, ಸಾಮಾಜಿಕ ಪರಿಸರವಾಗಿರಬಹುದು- ಮಹಿಳೆಯರಲ್ಲಿನ ಹೇಳುವ ಕೇಳುವ ಶಕ್ತಿಯನ್ನು ಜೀವಸಮೇತ ಹೊಸಕಿ ಹಾಕುತ್ತವೆ. ಮಹಿಳೆಯರು ಹೇಳುವ-ಕೇಳುವ, ಕೇಳಿಸಿಕೊಳ್ಳುವ ಸ್ವಾತಂತ್ರ‍್ಯದಿಂದಲೇ ವಂಚಿತರಾಗಿದ್ದಾರೆ. ಕಷ್ಟ ಹೇಳಿಕೊಳ್ಳಲು ಬಂದ ಮಗಳಿಗೆ ಹಡೆದವ್ವನೂ ಮರದೊಂದಿಗೆ ಹಂಚಿಕೊಳ್ಳಲು ಸೂಚಿಸುತ್ತಾಳೆ. ಕಷ್ಟಗಳನ್ನು ಹೇಳುವುದು, ಕೇಳಿಸಿಕೊಳ್ಳುವುದು, ಸಲಹೆ ನೀಡುವುದು ಇವೆಲ್ಲವೂ ‘ಮನೆ ಮುರುಕ’ ಕೆಲಸಗಳಾಗಿ ಗುರುತಿಸಿಕೊಂಡಿವೆ. ಇದು ಮದುವೆಯ ಚೌಕಟ್ಟಿನೊಳಗಡೆ ಬರುವ ಮಹಿಳೆಯರ ಇಕ್ಕಟ್ಟುಗಳಾದರೆ, ಮದುವೆಯ ಚೌಕಟ್ಟಿನ ಹೊರಗಡೆ ಬರುವ ಮಹಿಳೆಯರ ಇಕ್ಕಟ್ಟುಗಳು ಮತ್ತೊಂದು ಬಗೆಯವು. ಒಂದು ಕಾಲದಲ್ಲಿ ಅಥವಾ ಆಗಾಗ ಅಲ್ಪಸ್ವಲ್ಪ ಸುಖವನ್ನು ಅನುಭವಿಸಿದವರು ಅಥವಾ ಅನುಭವಿಸುತ್ತಿರುವವರು ಮಾತ್ರ, ಕಷ್ಟಗಳ ಕುರಿತು ಮಾತನಾಡುತ್ತಾರೆ. ಕಷ್ಟಗಳ ಕುರಿತು ಮಾತನಾಡುವವರಿಗೆ ಸುಖದ ಪರಿಚಯ ಇರಲೇಬೇಕು. ಸುಖದ ಅನುಭವಕ್ಕೆ ಹೊರತಾದ ಅನುಭವಗಳನ್ನು ಕಷ್ಟ ಎಂದು ಅರ್ಥೈಸಿಕೊಳ್ಳುತ್ತಾರೆ. ಅಥವಾ ಕಷ್ಟಕ್ಕೆ ಹೊರತಾದ ಅನುಭವಗಳನ್ನು ಸುಖವೆಂದು ಅರ್ಥೈಸಿಕೊಳ್ಳುತ್ತಾರೆ. ಮದುವೆಯ ಚೌಕಟ್ಟಿನ ಹೊರಗಡೆ ಬರುವ ಮಹಿಳೆಯರು ತಳ ಸಮುದಾಯಗಳಿಗೆ ಸೇರಿದವರು. ತಳ ಸಮುದಾಯದವರೆಲ್ಲರೂ ಹಕ್ಕುಗಳಿಂದ ವಂಚಿಸಲ್ಪಟ್ಟವರು. ತಳ ಸಮುದಾಯದ ಪುರುಷರು ದಮನಿತರಾದರೆ, ತಳ ಸಮುದಾಯದ ಮಹಿಳೆಯರು ಅದರಲ್ಲಿಯೂ ‘ದೇವದಾಸಿಯರು’ ದಮನಿತರಲ್ಲಿ ದಮನಿತರು. ಕಷ್ಟಗಳೇ ಅವರ ಬದುಕಿನ ಉಸಿರು. ಶೋಷಿತ ಬದುಕನ್ನು ಸಹಜಗೊಳಿಸಿದ್ದರಿಂದ ಅವರಿಗೆ ಕಷ್ಟಗಳು, ಸಮಸ್ಯೆಗಳು ಅಸಹಜ ಎಂದೆನಿಸುವುದೇ ಇಲ್ಲ. ನೋವುಗಳು, ಅಪಮಾನಗಳು ಅವರ ಉಸಿರ ಲಯದೊಂದಿಗೆ ಬೆರೆತುಕೊಂಡಿರುತ್ತದೆ. ಹೀಗಾಗಿಯೋ ಏನೋ ನಾನು ಸಂದರ್ಶಿಸಿದ ಬಹುತೇಕ ಮಹಿಳಾ ಹಾಡುಗಾರರು ತಮ್ಮ ಬದುಕಿನ ಅನುಭವಗಳನ್ನು ಸಹಜವೆನ್ನುವಂತೆ ನಿರೂಪಿಸಿದರು. “ಹೌದಾ? ಇಷ್ಟೊಂದು ತೊಂದರೆ ಅನುಭವಿಸಿದರೆ? ತುಂಬಾ ನೋವಾಗಿರಬೇಕು, ಈ ಗಂಡಸರೇ ಹೀಗೆ” ಎಂದು ಬೇರೆ ಬೇರೆ ಬಗೆಗಳಲ್ಲಿ ಪ್ರತಿಕ್ರಿಯಿಸುತ್ತಿದ್ದೆ. ನನ್ನ ಪ್ರತಿಕ್ರಿಯೆಗಳನ್ನು ಕೇಳುತ್ತ ಹೋದ ಅವರ ನಿರೂಪಣೆಯಲ್ಲಿ ನಿಧಾನಗತಿಯಲ್ಲಿ ಬದಲಾವಣೆ ಕಂಡುಬಂದಿತು. “ನಾವು ಸೋಸಿದ್ದು ಅಂತಿಂಥಾ ಕಷ್ಟ ಅಲ್ಲರಿ” ಎನ್ನಲು ತೊಡಗಿದರು. ಒಬ್ಬೊಬ್ಬ ಕಲಾವಿದರನ್ನು ಹಲವಾರು ಬಾರಿ ಸಂದರ್ಶಿಸಲಾಗಿದೆ. ಮೊದಲ ಭೇಟಿಯಲ್ಲಿ, ಎರಡನೆಯ ಭೇಟಿಯಲ್ಲಿ ತಮ್ಮ ಸಮಸ್ಯೆಗಳನ್ನು ಸಹಜವೆನ್ನುವಂತೆ ನಿರೂಪಿಸುತ್ತಿದ್ದ ಅವರು, ನಂತರ ಭೇಟಿಯಲ್ಲಿ ಸಮಸ್ಯೆಗಳನ್ನು, ಸಮ್ಮಾನಗಳನ್ನು ಬೇರ್ಪಡಿಸಿಕೊಂಡು ಮಾತನಾಡಿದ್ದು ಕಂಡುಬಂದಿತು. ಅವರ ನಿರೂಪಣೆಯಲ್ಲಿನ ಈ ಬಗೆಯ ಪಲ್ಲಟಕ್ಕೆ ನನ್ನ ಪ್ರತಿಕ್ರಿಯೆ ಹಾಗೂ ನಾನು ಅವರೊಂದಿಗೆ ನಡೆಸುವ ಸಂವಾದಗಳು ಪ್ರಭಾವಿಸಿದ್ದವು ಎನ್ನವುದು ಖಚಿತ ತಿಳುವಳಿಕೆ. ಯಾಕೆಂದರೆ ಬಹುತೇಕ ಮಹಿಳಾ ಹಾಡುಗಾರರು “ತಾಯಿ ನಿನ್ನ ಜೋಡಿ ಮಾತಾಡ್ತಾ ಮಾತಾಡ್ತಾ ನಾವು ಕಷ್ಟ ಸೋಸಾಕತ್ತೀವಿ ಅನ್ನೂದು ಅರವಿಗೆ (ತಿಳುವಳಿಕೆ) ಬಂತು. ಕಷ್ಟ ಸೋಸೂದು ನಮಗ ಬದುಕು ಅನಿಸಿಬಿಟ್ಟಿತ್ತು. ಅದು ನಮ್ಮ ಬದಕಲ್ಲ. ನಾವು ಸಮಸ್ಯೆದಾಗ ಅದಿವಿ ಅನ್ನೋದು ನಿನ್ನಿಂದ ಗೊತ್ತಾಯ್ತು. ತಾಯಿ ನೀನು ಸಾಕ್ಷಾತ್ ಎಲ್ಲವ್ವನೇ” ಎಂದು ಗಲ್ಲಗಲ್ಲ ಬಡಿದುಕೊಂಡು ಕಣ್ಣತುಂಬ ನೀರು ತಂದುಕೊಂಡು ಗದ್ಗದಿತರಾಗಿ ಹೇಳಿದರು. ಮದುವೆಯ ಚೌಕಟ್ಟಿನ ಒಳಗಡೆ ಬರುವ ಮಹಿಳೆಯರಿಗೆ ಕಷ್ಟ ಯಾವುದು, ಸುಖ ಯಾವುದು ಎನ್ನುವ ವಿವೇಚನೆ ಉಳಿಸಿಕೊಳ್ಳುಷ್ಟು ಬದುಕು ಸಹ್ಯವಾಗಿರುತ್ತವೆ. ಮದುವೆಯ ಚೌಕಟ್ಟಿನ ಹೊರಗಡೆ ಬರುವವರಿಗೆ ಅದರಲ್ಲಿಯೂ ಹಾಡಿಕೆಯಲ್ಲಿರುವ ಮಹಿಳೆಯರು ಕಷ್ಟ ಯಾವುದು, ಸುಖ ಯಾವುದು ಎನ್ನುವುದನ್ನು ಖಚಿತವಾಗಿ ಗುರುತಿಸಲಾಗದಷ್ಟು ಭೀಕರ ಜೀವನವನ್ನು ಸಾಗಿಸುತ್ತಾರೆ. ಹೀಗಾಗಿ ಇವರಲ್ಲಿ ‘ಮರದ ಮುಂದೆ ಹೋಗಿ ಹೇಳು’ ಎನ್ನುವ ತಾಯಿ ಬುದ್ದಿವಾದ ಚಾಲ್ತಿಯಲ್ಲಿ ಇಲ್ಲ, ‘ದೇವದಾಸಿ ಪದ್ಧತಿ’ ಯೇ ‘ದೇವದಾಸಿ’ ಮಹಿಳೆಯರನ್ನು ಪಾತಾಳಕ್ಕೆ ತಳ್ಳಿರುತ್ತದೆ. ಇಂತಹ ಮಹಿಳೆಯರು ಹಾಡಿಕೆಯನ್ನು ಪರ್ಯಾಯವೆಂದುಕೊಂಡು ಬರುತ್ತಾರೆ. ಹಾಡಿಕೆ ಪ್ರವೇಶಿಸಿದ ಈ ಮಹಿಳೆಯರು ಪಾತಾಳದಿಂದ ಮತ್ತಷ್ಟು ಕೆಳಗೆ ತಳ್ಳಲ್ಪಡುತ್ತಾರೆ. ಅಪಾರ ಆಳದಲ್ಲಿನ ಇವರ ಆಕ್ರಂದನ ಭೂಮಿಯ ಮೇಲಿರುವವರಿಗೆ ಕೇಳುವುದೇ ಇಲ್ಲ. ಇವರ ಆಕ್ರಂದನ ಕೇಳಿಸಿಕೊಳ್ಳಲು ಪಾತಾಳದ ಆಳದಲ್ಲಿ ಯಾವ ಗಿಡ ಮರಗಳೀರುವುದಿಲ್ಲ; ಹಕ್ಕಿಗಳಿರುವುದಿಲ್ಲ; ಹಿರಯುವ ನದಿ ಇರುವುದಿಲ್ಲ. ಅಲ್ಲಿರುವುದು ಬರೀ ಕತ್ತಲು. ಅವರು ಬೇರೆಯವರಿಗೆ ಕಾಣದಷ್ಟು ಕತ್ತಲು. ಅಷ್ಟೇ ಅಲ್ಲ ಅವರಿಗೆ ಅವರೇ ಕಾಣದಂತಹ ಕತ್ತಲು. ಹಾಡಿಕೆ ಮಹಿಳೆಯರಿಗೆ ಹಾಡಿಕೆ ಮಹಿಳೆಯರೇ ಕಾಣದಂತಹ ಕತ್ತಲದು. ಹೀಗಾಗಿಯೋ ಏನೋ ಮದುವೆಯ ಚೌಕಟ್ಟಿನೊಳಗಡೆ ಬರುವ ಮಹಿಳೆಯರ ಹಾಗೆ ಮರದೆದುರಿಗೆ, ಹಕ್ಕಿಗಳೆದುರಿಗೆ, ನದಿಯೆದುರಿಗೆ ಹೇಳಿಕೊಳ್ಳುವಂತಹ ಕಥನಗಳು ಹಾಡಿಕೆ ಮಹಿಳೆಯರಲ್ಲಿ ದೊರೆಯಲೇ ಇಲ್ಲ.

ಅದೆಷ್ಟೋ ಅಧ್ಯಯನಕಾರರು ಬಂದಿದ್ದರೂ, ಅವರ್ಯಾರೂ ಇವರ ಬದುಕಿನ ಕಥನಗಳನ್ನು ಕೇಳಿಯೇ ಇರಲಿಲ್ಲವಂತೆ. ಕೇವಲ ಹಾಡುಗಳನ್ನು ಸಂಗ್ರಹಿಸುವುದು ಹಾಗೂ ಹಾಡುಗಾರರ ಹೆಸರು, ವಿಳಾಸ ಬರೆದುಕೊಳ್ಳುವುದನ್ನು ಮಾತ್ರ ಮಾಡುತ್ತಿದ್ದರಂತೆ. ನಾನು ಅವರೊಡನೆ ನಡೆಸುವ ಸ್ನೇಹ ಸಂಬಂಧವೇ ಆಪ್ತವಾಗಿ ಬಿಡುತ್ತಿತ್ತೇನೋ? ಮಾತನಾಡಲು ಮೊದಲಮೊದಲು ಹಿಂಜರಿಯುತ್ತಿದ್ದ ಅವರು ನಂತದಲ್ಲಿ ತಮ್ಮ ಬದುಕಿನ ಕಥನಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದರು. ಮತ್ತೇನೋ ಹೇಳುವುದಿದೆ ಬರಬೇಕೆಂದು ಅವರೇ ಫೋನಾಯಿಸಿ ಆಹ್ವಾಣಿಸಿದ್ದಾರೆ. “ಖರೇವಂದ್ರ ನೀನು ನನ್ನ ತಾಯಿ ಎಲ್ಲವ್ವನs. ಲೋಕದಾಗ ಕುಡ್ದ ಇಷಾ ಅದೇಸು ವರ್ಷ ಇಟ್ಕೋತಿರಿ? ಕಕ್ಕರಲೆ ನನ್ಮುಂದ. ಎಲ್ಲಾನೂ ಬಳ್ಕೊಂಡು ಹೋಗ್ತೀನಿ ಅಂತ ತಾಯಿ ಎಲ್ಲವ್ವ ನಿನ್ನ ರೂಪದಾಗ ಬಂದಾಳು ನೋಡವ್ವಾ. ಉಳಾಗಡ್ಡಿ ರವ್ದಿಯಂಗ ಈಗ ಮನಸ್ಸು ಹಗುರಾಯ್ತು ತಾಯಿ” ಎಂದವರೇ ಹೆಚ್ಚು. ಹಾಡಿಕೆಯ ಲೋಕದಲ್ಲಿ ಅನಾಥವಾಗಿ ಅಳುವ ಈ ಮಹಿಳೆಯರಿಗೆ ಕಷ್ಟ ಕೇಳಿದವರು ತಾಯಿಯಾಗಿ ಬಿಡುತ್ತಾರೆ.

ಪುರುಷ ಹಾಡುಗಾರರ ಪ್ರತಿಕ್ರಿಯೆಗಳು

ಪುರುಷ ಹಾಡುಗಾರರ ಪ್ರತಿಕ್ರಿಯೆಗಳನ್ನು ಐದು ನೆಲೆಗಳಲ್ಲಿ ಗುರುತಿಸಬಹುದು. ೧. ಕೀರ್ತಿಗಾಗಿ ದಾಖಲಾಗ ಬಯಸುವವರು. ೨. ದಾಖಲಾತಿ ಯಾರಿಗೆ ಲಾಭ? ೩. ಪಿಂಚಣಿ ಬಯಸುವವರು ೪. ಕಲಾ ಪರಂಪರೆಯನ್ನು ಉಳಿಸುವುದಕ್ಕಾಗಿ ಧನ ಸಹಾಯ ಯಾಚಿಸುವವರು ೫. ಹಣಕ್ಕಾಗಿ ಹಾಡುಗಳನ್ನು ಮಾರ ಬಯಸುವವರು.

. ಕೀರ್ತಿಗಾಗಿ ದಾಖಲಾಗ ಬಯಸುವವರು.

ಯಾವ ಪುರುಷ ಹಾಡುಗಾರರೂ, ಮಹಿಳಾ ಹಾಡುಗಾರರ ಹಾಗೆ ತಾವು ಹಾಡಿಕೆಯವರು ಎಂದು ಹೇಳಿಕೊಳ್ಳಲು ಹಿಂದೇಟು ಹಾಕಲಿಲ್ಲ. ನಾನಿದ್ದಲ್ಲಿಗೆ ಅವರಾಗಿಯೇ ಬಂದು ಪರಿಯ ಮಾಡಿಕೊಂಡರು. ತಾವು ‘ಸರಸ್ವತಿ ಪುತ್ರ’ರು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಂಡರು. ಹಾಡಿಕೆ ಪುರುಷರಲ್ಲಿ ಹಾಡಿಕೆ ಮಹಿಳೆಯರಲ್ಲಿ ಇದ್ದ ಹಾಗೆ ‘ನಾಗ ಕನ್ಯೆ’ಯರು ಎನ್ನುವ ಪರಿಕಲ್ಪನೆ ಇಲ್ಲ; ‘ಪದಮ ಜಾತಿಯ ಹೆಣ್ಣಿಗೆ ಮಾತ್ರ ಹಾಡಿಕೆ ವಿದ್ಯೆ ಹತ್ತುತ್ತದೆ’ ಎನ್ನುವ ನಂಬಿಕೆ ಇಲ್ಲ. ಮಹಿಳಾ ಹಾಡುಗಾರರು ನಾವು ‘ಸರಸ್ವತಿಯ ಸುಪುತ್ರಿಯರು’ ಇಲ್ಲವೆ ‘ಸರಸ್ವತಿ ಮಕ್ಕಳು’ ಎಂದು ಹೇಳಿಕೊಂಡದ್ದು ಕಂಡು ಬರಲಿಲ್ಲ. ಅವರು ‘ಸರಸೋತಿ ಹೆಸರ್ನಿಂದ ಅನ್ನಾ ತಿಂತೀವಿ’ ಎಂದು ಮಾತ್ರ ಹೇಳಿದರು. ಜ್ಞಾನವನ್ನು ಪುರುಷ ಮೂಲದಿಂದ ಗುರುತಿಸುವ ಪರಂಪರೆಯೇ ಇದಕ್ಕೆ ಕಾರಣವಾಗಿರಬೇಕು. ಜ್ಞಾನವು ಹೆಣ್ಣು ದೇವತೆಯನ್ನು ಪ್ರತಿಮೆಯಾಗಿಸಿಕೊಂಡರೂ ಜ್ಞಾನದ ವಕ್ತಾರರಾಗಿ ಪುರುಷರನ್ನೇ ಗುರುತಿಸಲಾಗುತ್ತದೆ.

ಪುರುಷ ಹಾಡುಗಾರರು ದಾಖಲಾಗುವ ವಿಷಯದಲ್ಲಿ ನಾ ಮುಂದು, ತಾ ಮುಂದು ಎಂದು ಪೈಪೋಟಿಯನ್ನೇ ನಡೆಸಿದರು. ಸಂದರ್ಶಿಸಿದ ಪುರುಷ ಹಾಡುಗಾರರಲ್ಲಿ ಕೆಲವರು ಕೇವಲ ಹಾಡುಗಾರರಾಗಿದ್ದರೆ, ಮತ್ತೆ ಕೆಲವರು ಹಾಡುಗಾರರು ಹೌದು, ಕವಿಗಳು ಹೌದು. ನಿರಂತರ ಹತ್ತು ದಿನಗಳು ಇಲ್ಲವೆ ಇಪ್ಪತ್ತು ದಿನಗಳವರೆಗೆ ರಾತ್ರಿ ಮತ್ತು ಹಗಲು ಎರಡು ಹೊತ್ತು, ಹಾಡಿದ ಯಾವ ಹಾಡುಗಳೂ ಪುನರಾವರ್ತನೆಯಾಗದಂತೆ ಹಾಡುತ್ತೇವೆ ಎನ್ನುವುದನ್ನು ಅತ್ಯಂತ ವಿಶ್ವಾಸದಿಂದ ಹೇಳಿಕೊಂಡರು. ಹೀಗೆ ಹೇಳಿಕೊಳ್ಳಲು ಅವರಲ್ಲಿ ಹಾಡಿಕೆ ಕ್ಷೇತ್ರದಲ್ಲಿ ತಾವು ಪಂಡಿತರು ಎನ್ನುವುದನ್ನು ನಿರೂಪಿಸುವ ಆಶಯ ಢಾಳಾಗಿ ಕಾಣುತ್ತಿತ್ತು. ದಾಖಲಾಗುವಾಗಲೂ ಹೇಗೆ ದಾಖಲಾಗಬೇಕೆಂಬುದರ ಬಗ್ಗೆ ಖಚಿತತೆ ಇತ್ತು. ಪಂಡಿತರಾಗಿಯೇ ದಾಖಲಾಗಬೇಕೆಂಬ ಆಶಯ ಮಹಿಳಾ ಹಾಡುಗಾರರಲ್ಲಿ ಮೂವರಲ್ಲಿ ಮಾತ್ರ ಕಂಡುಬಂದಿತು; ಉಳಿದವರಲ್ಲಿ ಕಂಡುಬರಲಿಲ್ಲ. ಪುರುಷ ಹಾಡುಗಾರರ ಒಲವು ಕೀರ್ತಿಯೆಡೆಗೆ, ಪ್ರಶಸ್ತಿಯೆಡೆಗೆ ವಾಲುತ್ತಿತ್ತು.

ಎಷ್ಟು ದಿನಗಳವರೆಗೆ ನಿರಂತರ ಹಾಡುತ್ತೇನೆ ಎನ್ನುವುದು ಕೂಡ ಹಾಡಿಕೆ ಕ್ಷೇತ್ರದಲ್ಲಿ ಹಾಡುಗಾರ ಜ್ಞಾನವನ್ನು ನಿರ್ಣಯಿಸುವುದಾಗಿರುತ್ತದೆ. ಪ್ರತಿಯೊಬ್ಬ ಪುರುಷ ಹಾಡುಗಾರರ ಹೆಸರಿನ ಮುಂದೆ ‘ಶಾಹಿರ್’ ಎನ್ನುವ ಬಿರುದು ಜೋಡಣೆಯಾಗಿರುತ್ತದೆ. ಹಾಡಿಕೆ ಕ್ಷೇತ್ರದಲ್ಲಿ ಪಾಂಡಿತ್ಯ ಸಾಧಿಸಿದವರಿಗೆ ‘ಶಾಹಿರ್’ ಎಂದು ಗುರುತಿಸುತ್ತಾರೆ. ನಾನು ಸಂದರ್ಶಿಸಿದ ಬಬಲೇಶ್ವರದ ಬಂಗಾರವ್ವ, ಕಂಬಾಗಿ ಹನುಮವ್ವ, ದನ್ಯಾಳದ ದುರುಗವ್ವ ಇವರು ಮಾತ್ರ ತಮ್ಮ ಹೆಸರಿನ ಮುಂದೆ ‘ಶಾಹಿರ್’ ಎಂದು ಪ್ರಜ್ಞಾಪೂರ್ವಕವಾಗಿಯೇ ಹೇಳಿಕೊಳ್ಳುತ್ತಿದ್ದರು. ಹಾಗೆಯೇ ದಾಕಲಾಗಲು ಇಷ್ಟಪಡುತ್ತಿದ್ದರು. ಉಳಿದ ಮಹಿಳಾ ಹಾಡುಗಾರರು ‘ಶಾಹಿರ್’ ಎಂದು ಗುರುತಿಸಿಕೊಳ್ಳುವತ್ತ ಒಲವು ತೋರಿದ್ದು ಕಂಡುಬರಲಿಲ್ಲ. ಹೀಗಾಗಿಯೇ ಪುರುಷ ಹಾಡುಗಾರರು ತಮ್ಮನ್ನು ‘ಸರಸ್ವತಿ ಪುತ್ರ’ರು ಎಂದು ಕರೆದುಕೊಂಡಂತೆ ಮಹಿಳಾ ಹಾಡುಗಾರರು ಕರೆದುಕೊಂಡದ್ದು ಕಂಡುಬರಲಿಲ್ಲ.

ದಾಖಲಾಗುವ ಸಂದರ್ಭದಲ್ಲಿ ಹಾಡಿಕೆ ಮಹಿಳೆಯರಿಗೆ ಎದುರಾಗುವ ಸಾಂಸ್ಕೃತಿಕ ಹಿಂದೇಟುಗಳು, ಪುರುಷ ಹಾಡುಗಾರರಿಗೆ ಎದುರಾಗಲಿಲ್ಲ.ಯಾಕೆಂದರೆ ಪುರುಷ ಹಾಡುಗಾರು ಸರಸ್ವತಿ ಪುತ್ರರಾದರೆ; ಮಹಿಳಾ ಹಾಡುಗಾರರು ‘ಗೌರಿಯ ಮಕ್ಕಳು’ ಇಲ್ಲವೆ ‘ದೇವಿಯ ಮಕ್ಕಳು’ ಆಗಿರುತ್ತಾರೆ. ಅಂದರೆ ‘ದೇವದಾಸಿ’ಯರಾಗಿರುತ್ತಾರೆ. ಪುರುಷ ಹಾಡುಗಾರರು ಜ್ಞಾನ ಮೂಲದಿಂದ ಗುರತಿಸಲ್ಪಟ್ಟರೆ, ಮಹಿಳಾ ಹಾಡುಗಾರರು ಲೈಂಗಿಕ ಸೇವಾ ನೆಲೆಯಿಂದ ಗುರಿತಿಸಲ್ಪಡುತ್ತಾರೆ. ಹೀಗಾಗಿಯೇ ಪುರುಷ ಹಾಡುಗಾರರು ಜ್ಞಾನ ನೆಲೆಯಿಂದ ತಮ್ಮ ಚಹರೆಯನ್ನು ಕಟ್ಟಿಕೊಂಡರು. ಕೇವಲ ಮೂವರು ಮಹಿಳಾ ಹಾಡುಗಾರರನ್ನು ಹೊರತುಪಡಿಸಿದಂತೆ ಉಳಿದ ಮಹಿಳಾ ಹಾಡುಗಾರರು ಜ್ಞಾನದ ನೆಲೆಯಿಂದ ತಮ್ಮ ಚಹರೆಯನ್ನು ಕಟ್ಟಿಕೊಳ್ಳಲಿಲ್ಲ. ಎಲ್ಲ ಮಹಿಳಾ ಹಾಡುಗಾರರು ‘ಭೋಗಕ್ಕೆ ಅರ್ಹಳು’ ಎನ್ನುವ ನಿರ್ವಚನದಿಂದ ಬಿಡಿಸಿಕೊಳ್ಳಲು ಜ್ಞಾನಕ್ಕೆ ಹೊರಳಿಕೊಂಡಿದ್ದಾರೆ. ಜ್ಞಾನಕ್ಕೆ ಹೊಳಿಕೊಂಡರಷ್ಟೇ ಸಾಲದು, ‘ಭೋಗಕ್ಕೆ ಅರ್ಹರು’ ಎಂದು ತಮ್ಮ ಕುರಿತಿರುವ ನಿರ್ವಚನವನ್ನು ಅಸ್ತಿತ್ವವಿಲ್ಲದಂತೆ ಚೂರು ಚೂರು ಮಾಡಬೇಕು; ಪ್ರಜ್ಞಾಪೂರ್ವಕವಾಗಿಯೇ ತಾವು ‘ಸರಸ್ವತಿಯರು’ ಅಥವಾ ‘ಸರಸ್ವತಿ ಪುತ್ರಿಯರು’ ಎಂದು ದಾಖಲುಗೊಳ್ಳಬೇಕೆನ್ನುವ ರಾಜಕಾರಣ ಅವರಲ್ಲಿ ಕಂಡುಬರಲೇ ಇಲ್ಲ.