ಸಾಂಗ್ಲಿಯ ಅನುಸೂಯಾ ಕೇವಲ ಮಕ್ಕಳನ್ನು ಪಡೆಯುವುದಕ್ಕಾಗಿ ಬಡ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಮೊದಲ ಮಗು ಹೆಣ್ಣಾಯಿತು. ಮಗಳಿಗೆ ಮದುವೆ ಮಾಡಿದರೆ ಆಕೆ ಗಂಡನ ಮನೆಗೆ ಹೊರಟು ಹೋಗುತ್ತಾಳೆ. ಮುಪ್ಪಿನ ಕಾಲದಲ್ಲಿ ತನ್ನನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದುಕೊಂಡಳು. ಗಂಡು ಮಗುವನ್ನೇ ಪಡೆಯಬೇಕೆಂದು ಮೊದಲು ಸಂಬಂಧವಿಟ್ಟುಕೊಂಡ ವ್ಯಕ್ತಿಯೊಂದಿಗೆ ಸಂಪರ್ಕಹೊಂದಿದಳು. ಅವಳ ಆಸೆಯಂತೆ ಗಂಡು ಮಗು ಹುಟ್ಟಿತು. ಮಗುವನ್ನು ನೋಡಲು ಬಂದ ಬಡ ಗೆಳೆಯನಿಗೆ “ಗಂಡ ಮಗಾ ಆಯ್ತು. ಇಲ್ಲಿಗಿ ನನ್ನ ನಿನ್ನ ಸಂಬಂಧ ಬಗೆಹರಿತು. ಮತ್ತಿನ್ನೆಂದೂ ನನ್ನ ಜೋಡಿ ಗೆಳೆತನ ಬಯಸಿ ಬರಬ್ಯಾಡ” ಎಂದು ತಾಕೀತು ಮಾಡಿ ಕಳುಹಿಸಿದ ಅನುಸೂಯಾ ಮತ್ತೆಂದೂ ಪುರುಷ ಸಂಬಂಧವನ್ನು ಬಯಸಲಿಲ್ಲ. ಮಕ್ಕಳನ್ನು ಬೆಳಸುವುದು ಹಾಗೂ ರಂಗ ತಾಲೀಮಿನಲ್ಲಿ ತೊಡಗಿ ಕೊಳ್ಳುವುದು ಆಕೆಯ ನಿತ್ಯದ ಕರ್ಮಗಳು. ಶಕ್ತಿ ಹೆಚ್ಚೆಂದು ಬೆಳೆಸುವ ಹಾಡುಗಳಲ್ಲಿನ ಆಧ್ಯಾತ್ಮಿಕತೆಯನ್ನು ಗೌರವಿಸುವ ಆಕೆ ನಿತ್ಯವೂ ಅದೇ ತನ್ಮಯತೆಯಲ್ಲಿಯೇ ಬಾಳುತ್ತಾಳೆ. ಎದುರು ಹಾಡುಗಾರರು ಇಲ್ಲವೆ ಪ್ರೇಕ್ಷಕರು ಲೌಕಿಕಾರ್ಥದಲ್ಲಿಯೇ ಆಕೆಯನ್ನು ಅಪಮಾನಿಸಿದರೂ ಅದನ್ನವಳು ಅಲೌಕಿಕ ನೆಲೆಯಲ್ಲಿಯೇ ಸ್ವೀಕರಿಸುತ್ತಾಳೆ; ತನಗೆ ಒಲವಿದ್ದ ಆಧ್ಯಾತ್ಮದೆಡೆಗೆ ಚಿತ್ತ ಕೇಂದ್ರೀಕರಿಸಿಕೊಳ್ಳುತ್ತಾಳೆ.

ಗಣಿಯಾರ ರೇಣುಕಾ ತನ್ನನ್ನು ತಾನು ಶರಣಮ್ಮ ಎಂದು ಕರೆದುಕೊಳ್ಳುತ್ತಾಳೆ. ಆಕೆಯದು ನಾನು ಸಂದರ್ಶಿಸಿದ ಎಲ್ಲ ಹಾಡುಗಾರ್ತಿಯರಿಗಿಂತ ಭಿನ್ನ ಬದುಕು. ಪೀರಪ್ಪನು ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯಂದಿರನ್ನು ಕಳೆದುಕೊಂಡ ಅನಾಥ. ಸೋದರ ಮಾವನ ಆಶ್ರಯದಲ್ಲಿ ಬೆಳೆದವನು. ಸೋದರ ಮಾವನೇ ನಿಂತು ಭೀಮಾಬಾಯಿಯೊಂದಿಗೆ ಪೀರಪ್ಪನ ಮದುವೆ ಮಾಡಿದರು. ಮೊದಲ ಮಗು ರೇಣುಕಾ. ಉಳಿದವರು ನಾಲ್ಕು ಗಂಡುಮಕ್ಕಳು. ಮುಂದಿನ ಕಥನವನ್ನು ರೇಣುಕೆಯ ಮಾತಿನಲ್ಲಿಯೇ ನಿರೂಪಿಸಲಾಗಿದೆ.

‘ನಮ್ಮದು ಬಾಳs ಬಡತನದ ಕುಟುಂಬಾ. ಇದ್ದೂರಾಗ ನಮ್ಮಪ್ಪ ರೈತಾಪಿ ಕೆಲಸ ಮಾಡ್ತಿದ್ದ. ರೊಟ್ಟಿ ಇದ್ದ್ರ ಪಲ್ಯೆ ಇರ್ತಿರ್ಲಿಲ್ಲ. ಕುಟುಂಬ ದೊಡ್ಡದಾದಂಗೆಲ್ಲ ಒಂದ್ಹೊತ್ತು ಗಂಜಿ ಸಿಗೂದೂ ಕಷ್ಟ ಆಯ್ತು. ಒದ ಬಡತನದಾಗ ನಮ್ಮಪ್ಪ ಓದಂತ ನನಗ ಶಾಲಿಗಿ ಸೇರಿಸಿದ್ದ. ನನ್ನ ಹಿಂದ ನಾಕ ಜನಾ ತಮ್ಮದೇರು ಹುಟ್ಟಿದ್ರು. ನಮ್ಮ ಕುಟುಂಬ ದೊಡ್ಡದಾಯ್ತು. ನಾನ ಮೊದಲ ಮಗಳು. ನನ್ನ ಮ್ಯಾಗ ಬಾಳ ಜೀಂವಾ. ನಮ್ಮಪ್ಪ ನಂಗ ಹೆಸರಗೊಂಡ ಎಂದೂ ಕರೀಲಿಲ್ಲ. ಅವ್ವಾ ಅಂತಿದ್ದಾ. ನಮ್ಮಪ್ಪ ತಂದಿ ತಾಯಿ ಕಳಕೊಂಡ ಅನಾಥಾಗಿದ್ದಾಗ ಅವ್ನ ಸೋದರಮಾಂವಾ ನಮ್ಮಪ್ಪನ್ನ ಜ್ವಾಪಾನ ಮಾಡಿದ್ದಾ. ನನ್ನ ಎರಡನೆ ತಮ್ಮ ಹುಟ್ಟಿದಾಗ ನಮ್ಮಪ್ಪನ ಸೋದರ ಮಾಂವಾ ತೀರಿಕೊಂಡಾ. ಹೀಂಗಾಗಿ ನಮ್ಮಪ್ಪನಿಗೆ ನಮ್ಮ ಜೋಡಿ ಆವ್ರ ಕುಟುಂಬದ ಆರ ಜನಾ ಸಾಕು ಜವಾಬ್ದಾರಿ ಬಂತು. ಇದ್ದೂರಿನ ಕೂಲಿಯಾಗ ನಮಗ ಗಂಜಿ ಸಿಗ್ತಿರಲಿಲ್ಲ. ಇದರಾಗ ಬರಗಾಲ ಬಂತು. ಕೂಲಿಗೂ ಕಲ್ಲ ಬಿತ್ತು. ಬರಗಾಲ್ದಾಗ ಎಂಥಾ ಕೆಲ್ಸ? ಹೀಂಗಾಗಿ ನಮ್ಮಪ್ಪ ಪುನಾಕ್ಕೆ ಕೂಲಿ ಕೆಲಸ ಹುಡಿಕ್ಕೊಂಡು ಹೋದ. ಅಲ್ಲಿ ಹೋದ್ರ ಕೂಲಿ ಜಾಸ್ತಿ ಸಿಗ್ತದ ಅಂತಿದ್ರು. ಕೂಲಿ ಕೆಲಸಕ್ಕಂತ ಹೋದ ನಮ್ಮಪ್ಪ ಗೌಂಡಿ ಕೆಲ್ಸ ಕಲ್ತ ಬಂದ. ನಮ್ಮಜ್ಜಿನ್ನ ಎಲ್ಲವ್ವಗ ಬಿಟ್ಟಿದ್ರಂತ. ಮನಿಯಾಗಿನ ಸಂಪ್ರದಾಯ ಬಿಡಬಾರ್ದು ಅಂತ ನನ್ನೂ ಎಲ್ಲವ್ವಗ ಬಿಟ್ಟ್ರು. ಎಲ್ಲವ್ವಗ ಬಿಟ್ಟಾಗ ನನಗ ಐದಾರು ವರ್ಷ ವಯಸ್ಸ ಇದ್ದೀತು. ಆಗ ನನಗ ಏನೇನ ಮಾಡಿದ್ರು ಅಂತ ನನಗ್ಯಾನೂ ನೆಪ್ಪ ಇಲ್ಲ. ಗಣಿಯಾರದಾಗ ನಾಕನೆಯತ್ತೆ ತನಕ ಸಾಲಿ ಕಲ್ತೇನು. ಮುಂಜಾನಿಯಿಂದ ಮಧ್ಯಾನ್ಹ ಮಟಾ ಸಾಲ್ಯಾಗ ಇರ್ತಿದ್ಯಾ. ಮಧ್ಯಾನ್ಹ ಆದಕೂಡ್ಲೆ ಮಾಸ್ತರಿಗಿ ಹೇಳ್ಕೊಂಡು ನಮ್ಮವ್ವನ ಹುಡಕ್ಕೊಂಡು ಹೊಲಕ್ಕೆ ಹೋಗ್ತಿದ್ದ್ಯಾ. ಅಲ್ಲಿ ಹೋಗಿ ತಮ್ಮದೇರ‍್ನ ಸಂಭಾಳಿಸಬೇಕಾಗಿತ್ತು. ನಾ ವಯಸ್ಸಿಗಿ ಬಂದಂಗ ಬಟ್ಟಿಬಗ್ಗಿ ಗ್ಯಾನಾ ಬಂತು. ಹುಡುಗಿಯಾದ್ರೂ ಮೈ ತುಂಬ ಬಟ್ಟಿ ಇರ್ತಿರಲಿಲ್ಲ. ನನಗ ಬಟ್ಟಿ ಇಲ್ಲ ಅಂತ ದೇಹಕ್ಕೇನು ಗೊತ್ತಾಗುತ್ತ? ದೊಡ್ಡೇಕಿ ಆಗ್ತಾ ಹೋದ್ಹಂಗ ಮೈ ತುಂಬಾ ಬಟ್ಟಿ ಬೇಕನಸಿತ್ತು. ಗಣಸರ ದೃಷ್ಟಿ ಸರಿಯಿರಂಗಿಲ್ಲ. ನಮ್ಮದು ಮೊದಲು ಜೋಪಡಿ ಮನಿ ಇತ್ತು. ಮಳಿ ಬಂದ ಕೂಡ್ಲೆ ಶಾಲಿಗಿ ಹೋಗ್ತಿದ್ವಿ. ಯಾಕಂದ್ರ ಮನಿಯಾಗ ಇರಬೇಕಂದ್ರ ನೀರs ತುಂಬಿರ್ತಿತ್ತು. ನಾನು ಹಾಕ್ಕೋಳದು ಮೊದಲs ಹರಕ ಬಟ್ಟಿ, ಅದರಾಗ ತೋಯ್ದರ ಕೇಳ್ತಿರೇನು? ಮೈಯೆಲ್ಲಾ ಕಾಣೂದು. ತೋಯ್ದು ಬಟ್ಟ್ಯಾಗ ದಗದಕ್ಕ ಹೋಗ್ತಿದ್ದ್ಯಾ. ಜನಾ ಒಂಥರಾ ನೋಡವ್ರು. ರೆಣವ್ವ ವಯಸ್ಸಿಗಿ ಬಂದ್ಲು ಅಂತ ಕೆಟ್ಟ ಗಣಸೂರು ಮಿಸ್ಯಾಗ ನಗೋರು. ಏನವ್ವಾ ಭೀಮಾಮಾಯಿ ಯಾವಾಗ ಮಗಳಿಗೆ ಉಡಿ ತುಂಬ್ತಿ ಅಂತ ಕೇಳೋರು. ನಾನು ದೊಡ್ಡೇಕಿ ಆಗಿಂದ ನನಗ ಜೋಗ್ತಿ ಮಾಡಿದ್ದು ಗೊತ್ತಾಯ್ತು. ಗಣಸೂರು ನನ್ನ ನೋಡೂ ರೀತನ್ನ ನನ್ನ ಮನಸ್ಸನ್ನು ಮುಪ್ಪಿಗಿ ತಳ್ತು. ದೇವದಾಸಿ ಅನ್ನವ್ರು, ಸೂಳಿ ಅನ್ನವ್ರು. ಹಿಂದಿನ್ನ ಜನ್ಮದಾಗ ಯಾ ಪಾಪಾ ಮಾಡಿದ್ನೋ ಏನೋ? ಈ ಜನ್ಮದಾಗ ಸೂಳಿನ್ನ ಮಾಡಿಬಿಟ್ಟಾನ ದೇವರು ಅನ್ನಸಿತ್ತು. ನನ್ನ ಗೆಳತೇರು ಗಂಡಾ ಮಕ್ಳು ಅಂತ ಸಂಸಾರ ಮಾಡಕೊಂಡು ಚಂದ್ಹಂಗ ತಮ್ಮ ಸಂಸಾರದಾಗ ಇದ್ದ್ರು. ಖೋಡಿ ನನ್ನ ಬದಕ ಬ್ಯಾರೆ ಐತಿ. ‘ಊರ ಗೌಡ್ರು ನಮ್ಮ ರೇಣುಕಾಗ ಉಡಿ ತುಂಬ್ತೇನಿ; ಚಂದ್ಹಂಗ ನೋಡ್ತಿನಿ ಅಂತಾರು. ಏನು ಮಾಡೂನು’ ಅಂತ ಅವ್ವನ್ನ ಅಪ್ಪ ವಿಚಾರಿಸ್ಕೋತಿದ್ದ. ನನ್ನ ಮೈಯೆಲ್ಲಾ ಬೆಂಕಿ ಹತ್ತಿ ಉರದಂಗಾಯ್ತು. ಯಾರ ಜೋಡಿನ್ನ ಆಗ್ಲಿ ನನ್ನ ಉಡಿ ತುಂಬಾಕ ಒಪ್ಪಕೊಂಡ್ರ ನಾನು ಉರ‍್ಲ ಹಾಕೊಂಡು ಸಾಯ್ತಿನಿ ಅಂತ ಅಂದ್ಯಾ. ಅಳಾಕ ಹತ್ತಿದ್ಯಾ. ನಮ್ಮವ್ವ ನಮ್ಮಪ್ಪನೂ ಅತ್ತ್ರು. ಹಂಗರ ಏನ ಮಾಡಂತಿ ಹೇಳು? ಮುಂದಿಂದ ಜೀವನಾ ನೋಡ್ಕೋಬೇಕೆಲ್ಲಾ ಅಂತಂದ್ರು. ನಾನು ನಾಗೇಶಿ ಹಾಡ್ಕಿ ಕಲಿತಿನಿ. ಗುರುಗಳ ತಂದು ಕಲ್ಸು. ನಾನು ಹಾಡ್ಕಿಯಿಂದ ದುಡ್ಡು ಮಾಡ್ತೇನಿ. ನಿನ್ನ, ಮನೀಯವರ‍್ನ ನೋಡ್ಕೋತೇನು ಅಂದ್ಯಾ. ನಮ್ಮಪ್ಪ ನಾನು ಕೇಳಿದ್ಹಂಗ ಯಲ್ಲಪ್ಪ ತೊದಲಬಾಗಿ ಅನ್ನು ಗುರುಗಳನ್ನ ಕರಕೊಂಡು ಬಂದ್ರು. ಮನ್ಯಾಗ ಮೂರು ತಿಂಗ್ಳು ಇಟ್ಟು ಕಲ್ಸಿದ್ರು. ಅವರಾಗಿಂದ ಮತ್ತ ಅಂದೇವಾಡಿ ಗೈಬಿಸಾಬ ಅನ್ನು ಗುರುಗಳನ್ನ ಕರಕೊಂಡು ಬಂದ್ರು. ಅವ್ರು ಒಂದು ವರ್ಷ ಕಲ್ಸಿದ್ರು. ನಾನೇನು ಲಕ್ಷಣವಂತಿ ಅಲ್ಲ. ನಿಮ್ಮ ಕಣ್ಣೀಗಿ ಕಾಣ್ತಿನಲ್ಲ. ಕರಿಬಣ್ಣ, ದಪ್ಪ ಮೂಗಾ. ವಯಸ್ಸಿಗಿ ಬಂದಿಂದ ಹಂದಿಮರಿನೂ ಛಂದ ಕಾಣ್ತದಂತ. ಹಂಗಾಗೋ ಏನೋ ಊರಾಗೂ ನನ್ನ ಮ್ಯಾಗ ಕಣ್ಣಿಟ್ಟಿದ್ರು. ಹಾಡ್ಕಿಗಿ ಹೋದಲ್ಲೂ ಗಣಸರು ಬೆನ್ನ ಹತ್ತವ್ರು. ಎಲ್ಲವ್ವ ಪಾದಾ ಕೊಳ್ಳಾಗ ಇರುತನಕಾ ನನಗ ಈ ಕಷ್ಟ ತಪ್ಪಿದ್ದಲ್ಲ ಅನಸ್ತು. ಹಂಗಂತ ಒಮ್ಮಿ ಮುತ್ತ ಕಟ್ಟಸ್ಕೊಂಡ ಮ್ಯಾಲೆ ತಗ್ಯಾಕ ಬರಲ್ಲ. ಬ್ಯಾರೆ ದಾರಿನ್ನ ನಾನs ಹುಡ್ಕೊಂಡ್ಯಾ. ಹಲಸಂಗಿ ಮಠದ ದಯಾನಂದ ಮಹಾರಾಜರಿಂದ ಗುರು ದೀಕ್ಷಾ ತಗೊಂಡ್ಯಾ. ಎಲ್ಲಮ್ಮನ ಮಗಳ ಮ್ಯಾಗ ನೀವು ಮನಸ ಮಾಡಬಹದು. ಆದ್ರ ಗುರುಪುತ್ರಿ ಆಗಿಂದ ಗುರುವಿನ ಮಗಳ ಮ್ಯಾಗ ಮನಸ ಮಾಡಿದ್ರ ನರಕಕ್ಕ ಹೋಗತಾರು. ನನ್ನ ಕೊಳ್ಳಾಗಿನ ರುದ್ರಾಕ್ಷಿ ನೋಡಿದ್ರ ನಾನು ಗುರು ಪುತ್ರಿ ಆಗೇನಿ ಅಂತ ಯಾರಿಗಾದ್ರೂ ಗೊತ್ತಾಗತೈತಿ. ಗುರುಪುತ್ರಿ ಆಗಿಂದ ನನ್ನ್ಯಾರು ಕೆಟ್ಟ ದೃಷ್ಟಿಯಿಂದ ನೋಡಿಲ್ಲ. ತಾಯಿ ನಾನು ಖರೆ ಹೇಳಿದ್ರೂ ಕೇಳತಿರಿ, ಸುಳ್ಳ ಹೇಳಿದ್ರೂ ಕೇಳತಿರಿ, ರುದ್ರಾಕ್ಷಿ ಮ್ಯಾಗ ಪ್ರಮಾಣಾ ಮಾಡಿ ಹೇಳ್ತೀನು. ನಾನು ಇದುವರೆಗೂ ಯಾವ ಗಣಸಿನೊಂದಿಗೂ ಸಂಬಂಧ ಬೆಳೆಸಿಲ್ಲ. ನನಗೀಗ ವಯಸ್ಸು ಹತ್ತಹತ್ರ ಐವತ್ತ ಆಗೇದ. ವಯಸ್ಸಿನ್ಯಾಗ ಯಾರ‍್ನೂ ಕೂಡಿಲ್ಲ. ಅಂದಮ್ಯಾಗ ಇನ್ನೇನು ಕೂಡತೇನು? ಸೂಳಿ ಆಗಿ ದೇಹ ಹಂಚಕೊಳ್ಳಕ ಮನಸ್ಸ ಒಪ್ಪಲಿಲ್ಲ. ಹೆಂಡ್ತಿ ಹಂಗ ಬಾಳೆ ಮಾಡಿರೂ ಜನ ನಮನ್ನ ಸೂಳಿ ಅನ್ನೂದು ಬಿಡಲ್ಲ. ಅದಕ್ಕ ನಾನು ಉಡಿ ತುಂಬಿಸ್ಕೊಂಡಿಲ್ಲ. ನಾ ಹೆಂಗ ಅದೀನು ಅಂತ ಊರಾಗಿನ ಜನಕ್ಕೆಲ್ಲಾ ಗೊತ್ತೈತಿ. ನಮ್ಮೂರ‍್ನ ಜನಕ್ಕ ನಾನು ಶರಣಮ್ಮs. ನಾನು ನಾಗೇಶಿ ಹೆಸರ‍್ನಾಗ ಅಂತಿಂಥಾ ಹಾಡು ಹಾಡುವಕಿಯಲ್ಲ. ಖರೆ ಶಕ್ತಿ ಹಾಡ ಹೇಳತೇನು. ನನ್ನ ಹಾಡ್ಕಿ ಕೂಡಾ ನನ್ನ ತಾಯಿ ಧ್ಯಾನದಾಗ ಇರುವಂಗ ಮಾಡೈತಿ” ಎಂದು ಹೇಳಿ ದೀರ್ಘವಾದ ನಿಟ್ಟುಸಿರು ಬಿಟ್ಟಳು. ತನ್ನಪ್ಪ ಅವ್ವ ಪಟ್ಟ ಕಷ್ಟ, ಯೌನದಲ್ಲಿ ಮೈತುಂಬ ಬಟ್ಟೆ ಇಲ್ಲದೆ ಹಿಂಸೆ ಅನುಭವಿಸಿದ್ದು ಹಾಗೂ ಗಂಡಸರ ಕೆಟ್ಟ ದೃಷ್ಟಿ ಎದುರಿಸಿದ್ದನ್ನು ವಿವರಿಸುವಾಗ ಅವಳ ಕಣ್ಣಾಲಿ ತುಂಬಿ, ಆಗಾಗ ನೀರು ತೊಟಕಿತ್ತು. ಅವಳು ತನ್ನೊಳಗೆ ಹೆಪ್ಪುಗಟ್ಟಿದ್ದ ಕಥನವನ್ನು ಹೇಳಿ ಮುಗಿಸುವಾಗ ಅವಳು ಪ್ರಶಾಂತವಾಗಿದ್ದಳು. ಹಣೆಯಲ್ಲಿನ ವಿಭೂತಿ, ಕೊರಳಲ್ಲಿನ ರುದ್ರಾಕ್ಷಿ, ಆಕೆಯಲ್ಲಿನ ನೆಮ್ಮದಿಯ ಮನಸ್ಸು, ಅರಳು ಕಂಗಳಲ್ಲಿ ಹೊಳೆಯತ್ತಿದ್ದ ಆತ್ಮವಿಶ್ವಾಸ ನಾನು ಮತ್ತಾರಲ್ಲೂ ಕಂಡಿರಲಿಲ್ಲ.

“ಜೋಗತಿ” ಇಲ್ಲವೆ ‘ಬಸವಿ’ ಹಿನ್ನೆಲೆ ಹೊಂದಿದ್ದ ಈ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರನ್ನು ಲೋಕವು ಲೈಂಗಿಕ ನೆಲೆಯಲ್ಲಿ ಗ್ರಹಿಸಿದ್ದರೂ; ಅವರು ಲೋಕ ಗ್ರಹಿಕೆಗಿಂತ ಭಿನ್ನವಾದ, ಲೋಕ ಗ್ರಹಿಕೆಗೂ ಮೀರಿದ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಈ ಲೋಕದಲ್ಲಿದ್ದೂ, ಲೋಕನಿಂದನೆಯನ್ನು ಮೀರಿ ತಮ್ಮ ವೃತ್ತಿಗೆಂದು ಕಲಿತುಕೊಂಡ ಹಾಡುಗಳಿಂದಲೇ ಅಲೌಕಿಕ ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ. ದೇವರ ಧ್ಯಾನದಲ್ಲಿ ಆಧ್ಯಾತ್ಮದ ಆನಂದವನ್ನು ಹೊಂದಲು ಪ್ರಯತ್ನಿಸುವ ಇವರು ನಿಂದನೆಗೆ ಕಿವುಡರಾಗಿ ಬಿಡುತ್ತಾರೆ.

ಅಧ್ಯಯನ

ನಾಲ್ಕನೆಯ ಇಯತ್ತೆವರೆಗೆ ಓದಿದ ರೇಣುಕಾ, ಬಂಗಾರವ್ವನಂಥವರು ಮನೆಯಲ್ಲಿದ್ದಾಗ ಬೆನಗಲ್ ರಾಮರಾವ್ ಅವರ ಪುರಾಣನಾಮ ಚೂಡಾಮಣಿ, ಸುಭೋಧಿ ರಾಮರಾಯರ ರಾಮಾಯಣ ಕಥಾಸಾರ, ಮಹಾಭಾರತ, ಬಂಡೋಲ ಮಲ್ಲಿಕಾರ್ಜುನ ಮಹಾತ್ಮೆ, ಮಹಾದಾಸೋಹಿ ಎಲ್ಲಾಲಿಂಗ ಪ್ರಭು, ದೇವಿ ಮಹಾತ್ಮೆ, ಲಕ್ಷ್ಮಿ ಕಥೆ, ದುರ್ಗಾ ಮಹಾತ್ಮೆ ಯಂತಹ ಪುಸ್ತಕಗಳನ್ನು ಓದುತ್ತಿರುತ್ತಾರೆ. ನಾಗೇಶಿ ಹಾಡುಗಾರರು ಕೇವಲ ನಾಗೇಶಿಗೆ ಸಂಬಂಧಿಸಿದ ಹಾಡುಗಳನ್ನು ಕಲಿತುಕೊಂಡರೂ ಹರದೇಶಿ ಪಂಥದ ತಾತ್ವಿಕತೆಯನ್ನು ತಿಳಿದುಕೊಳ್ಳಲು ಶಿವಕೇಂದ್ರಿತವಾದ ಸಾಹಿತ್ಯವನ್ನು ಓದುತ್ತಿರುತ್ತಾರೆ. ಈ ವೃತ್ತಿಯಲ್ಲಿ ಉಳಿಯಬೇಕಾದರೆ ನಾಗೇಶಿ ಹಾಡುಗಾರರು ನಾಗೇಶಿಯ ಜೊತೆ ಹರದೇಶಿಯ ತಾತ್ವಿಕತೆಯನ್ನು ತಿಳಿದುಕೊಳ್ಳುವ ಜರೂರಿರುತ್ತದೆ. ಹಾಗೇಯೇ ಹರದೇಶಿ ಹಾಡುಗಾರರು ಹರದೇಶಿಯ ಜೊತೆಯಲ್ಲಿ ನಾಗೇಶಿ ಪಂಥದ ತಾತ್ವಿಕತೆಯನ್ನು ಅರಿತುಕೊಳ್ಳಬೇಕಾಗುತ್ತದೆ. ಹಾಡಿಕೆ ವೃತ್ತಿಯಲ್ಲಿ ಅಧ್ಯಯನದ ಅಗತ್ಯತೆ ಇದೆ. ಹಾಗೆಯೇ ತಿಳುವಳಿಕೆ ಪಡೆದುಕೊಳ್ಳುವ ಅನಿವಾರ್ಯತೆಯು ಇದೆ. ಈ ಅನಿವಾರ್ಯತೆಯು ಅವರನ್ನು ನಿರಂತರ ಓದು ಇಲ್ಲವೆ ಅಧ್ಯಯನ ಕೇಳುವಿಕೆಯಲ್ಲಿ ಇಟ್ಟಿರುತ್ತದೆ.

“ತಂಗಿ ನಾನು ಶಿವಕುಮಾರಸ್ವಾಮಿ ಅಂಥವರ ಪುರಾಣ ಕೇಳಾಕ ಹೋಗ್ತಿನಿ. ಸಾಧ್ಯ ಆದ್ರ ಬ್ಯಾರೆ ಬ್ಯಾರೆ ಊರಿಗೂ ಹೋಗ್ತೀನು. ಶ್ರಾವಣದಾಗ ಹೆಚ್ಚು ಮಳಿ ಇರ್ತದ. ಆಗ ಹಾಡಕಿನೂ ಕಡಿಮಿ ಇರ್ತಾವ. ಈ ವ್ಯಾಳಾದಾಗ ನಾನು ಪುರಾಣ ಕೇಳಾಕ ಹೋಗ್ತಿರತೀನಿ. ಹಾಡಕಿಗಿ ಹೋದಾಗ ಕೇಳಿದ ಪುರಾಣಾನಾ ಕಳ್ಳತನ ಮಾಡತೇನಿ. ಓದಿದ್ದಕ್ಕಿಂತಲೂ ಕೇಳಬೇಕು. ಶಬ್ದಾರ್ಥ ಕಲಿತೇನು. ಅದನ್ನ ಮಸ್ತಕದಾಗ ಇಟಕೋತೇನು. ಪುಸ್ತಕದಾಗೂ ಬರದ ಇಟಕೊತೇನು. ನಮಂಥಾ ಕಲಾಕಾರರಿಗೆ ಕಲ್ತ ವಿದ್ಯಾ ತಲ್ಯಾಗ ಇರಬೇಕು. ಅವು ತಂತಾನ ಬರಬೇಕು. ಪುಸ್ತಕದಾಗ ಇದ್ರ ಹುಡುಕಬೇಕಾಗ್ತೈತಿ. ಮತ್ತ ಇದು ಅಲ್ದ ಹಾಡಕಿನೂ ಕೇಳಾಕ ಹೋಗ್ತೀನಿ. ನಮ್ಮ ಹಾಡಕ್ಯಾಗ ಪ್ರಸಿದ್ಧಿ ಪಡದವ್ರ ಎಲ್ಲಿ ಹಾಡತಾರು ಅಂತ ಗೊತ್ತ ಮಾಡ್ಕೊಂಡು ಅಲ್ಲಿನೂ ಕೇಳಾಕ ಹೋಗಿರತೇನು. ಹೊಸಾ ಸವಾಲ್ ಬಂದ್ರ ಉತ್ತರಾ ಹುಡುಕ್ಕೊಂಡು ಕವಿಗಳ ಹತ್ತರ ಹೋಗತೇನು. ಏಟ ಕಲ್ತರೇನು ಸರಸೋತಿ ನಮ್ಮ ಕೈಗೆ ಸಿಗ್ತಾಳೇನು? ನನಗ ಮಕ್ಕಳಾಗಿಲ್ಲ. ಓದಾಕ ವ್ಯಾಳಾ ಬೇಕಾದಂಗ ಸಿಗ್ತೈತಿ. – ಬಬಲೇಶ್ವರ ಬಂಗಾರೆವ್ವ

ತಂಗಿ ನಾ ಕಲ್ತೆಕಲ್ಲ. ನನ್ನ ಮನ್ಯಾಗ ಪುರಾಣ, ಮಹಾಭಾರತ, ಜ್ಞಾನ ಸಿಂಧು, ದೇವಿ ಮಹಾತ್ಮೆ ಎಲ್ಲಾ ಪುಸ್ತಕಗಳು ಅವ. ನಂಗ ಓದಾಕ ಬರಲ್ಲ. ಓದಾಕ ಬರು ನನ್ನ ಮಕ್ಕ್ಳು, ಮೊಮ್ಮಕ್ಕಳ ಕಡಿಯಿಂದ ದಿನಾ ಒಂದು ಎರಡು ಪ್ಯಾರಾ ಓದಿಸ್ಕೋತೇನು. ಅದನ್ನs ಪುಸ್ತಕದಾಗ ಇಟಕೋತೇನು. ಪುರಾಣಾನೊ ಕೇಳಾಕ ಹೋಗತೇನು. ಅಲ್ಲಿ ಬರುವ ಕೆಲ ವಿಷಯಗಳನ್ನು ಸಂದರ್ಭ ಬಂದಾಗ ಸವಾಲ್ಗೋ, ಹಾಡಿಕೆಗೋ ಹೊಂದಿಸಿಕೊಳ್ತೀನಿ. ಮೊದ ಮೊದಲು ಅಂದ್ರ ಮಕ್ಕಳು ಸಣ್ಣವ್ರು ಇರುವಾಗ ಅಕ್ಷರ ಬಂದವರ ಕಡಿಯಿಂದ ಓದಿಸಿಕೊಳ್ಳಾಕೂ ತ್ರಾಸು ಆಗ್ತಿತ್ತು. ವ್ಯಾಳ್ಯಾನ ಸಿಗ್ತಿರಲಿಲ್ಲ. ಈಗ ಇಬ್ರೂ ಮದುವಿ ಮಾಡ್ಕೊಂಡ ಮೆಟ್ಟಿಗಿ ಹತ್ತ್ಯಾರು, ಓದಿಸಿಕೊಳ್ಳಾಕ ಆಗ್ತೈತಿ. ಮೊಮ್ಮಕ್ಕಳು ಅವಾ, ಅವ್ನ ಸೊಸಿ ನೋಡ್ಕೋತಾಳು. – ಶಿರಬೂರದ ಮುತ್ತವ್ವ

ಅಕ್ಷರ ಅಂದ್ರ ಗುಡ್ಡಕ್ಕ ಬಣ್ಣಾ ಎಳದ್ಹಂಗ. ನಮ್ಮಂಥಾ ಹಾಡಿಕೆ ಮಾಡೋರು ಅಕ್ಷರ ಕಲ್ತರ ಇನ್ನೂ ಮುಂದಕ್ಕ ಬರ್ತೇವು. ನನಗ ಕನ್ನಡಾ ಬರ್ತದ. ಹಿಂದಿನೂ ಬರ್ತದ. ನಾನು ಮುಸ್ಲಿಂ ಆದ್ರೂ ನನಗ ಉರ್ದು ಬರಲ್ಲ. ನಾನು ಮುಸ್ಲಿಂ ಆದ್ರೂ ಪುರಾಣದವ ಆಗೇನಿ; ಖುರಾನದವ ಆಗಿಲ್ಲ. ನಾನು ಎಸ್.ಎಸ್.ಎಲ್.ಸಿ ಓದೇನು. ಈ ಹಾಡಕ್ಯಾಗ ಓದಕಿ ಬಾಳ ಬೇಕಾಗ್ತೈತಿ. ಪುರಾಣ ಕೇಳೂದ್ರಿಂದ್ಲೂ ಬಾಳಷ್ಟ ವಿಚಾರ ತಿಳಿತಾವು. ಇಲ್ಲ ಅನ್ನಂಗಿಲ್ಲ. ಆದ್ರ ಓದೂದ್ರಿಂದ ಛಂದಸ್ಸು, ಅಲಂಕಾರಾ ಗೊತ್ತಾಗ್ತಾವಲ್ಲ? ಛಂದಸ್ಸು ಅಲಂಕಾರಾ ಗೊತ್ತಾದ್ರ, ನಮ್ಮ ಸಾಹಿತ್ಯದಾಗ ಹೊಂದಿಸಿಕೊಳ್ಳಾಕ ಅನುಕೂಲ ಆಗ್ತೈತಿ. ಪುರಾಣದಾಗ ಹೇಳಿದ್ದೆಲ್ಲಾ ಪುಸ್ತಕದಾಗ ಬರದಿರುದಿಲ್ಲ. ಜನಮೆಚ್ಚಿಗಿಗಿ ಸುಳ್ಳ ಸುಳ್ಳ ಕಥೆಗಳ್ನ ಪುರಾಣಾ ಹೇಳವ್ರು ಹೇಳ್ತಿರತಾರು. ಅದಕ್ಕ ಓದಬೇಕಾಗ್ತೈತಿ. ಹಾಡಕ್ಯಾಗ ಇರು ಹೆಣ್ಣಮಕ್ಕ್ಳು ಶಾಲಿ ಕಲ್ತದ್ದು ಕಮ್ಮಿ. ಹೀಂಗಾಗಿ ಓದಿದವರ್ನ ಅವ್ರು ಅವಲಂಬಿಸಿರ್ತಾರು. – ನಸಿರುದ್ದೀನ್ ಇಸ್ಮಾಯಿಲ್ ಸಾಬ್

ಶ್ರಾವಣದಾಗ ನಡಿಯೋ ಶಿವಲೀಲಾಮೃತ, ಬಸವ ಪುರಾಣದಂತ ಪುರಾಣಗಳನ್ನು ಕೇಳಾಕ ಹೋಗ್ತೀನಿ. ಊರಾಗ ನಡಿಯೂ ಕೀರ್ತನಾನೂ ಕೇಳಾಕ ಹೋಗ್ತಿನಿ. ಪಂಚಕರ್ಮಿ, ಮುಳ್ಳಸ್ತಂಭ, ಸಿದ್ಧಾಂತ ಬೋಧ ಎಲ್ಲಾ ಓದ್ತೇನು. ನಮ್ಮ ಜೋಡಿ ಹಾಡೋ ಹರದೇಶಿ ಹಾಡುಗಳನ್ನು ಲಕ್ಷ ಕೊಟ್ಟ ಕೇಳ್ತೇನು. ಅವು ನಮಗ ಸಂಬಂಧಿಸಿದ್ದಲ್ಲ ಅಂತ ಕೂಡಲ್ಲ. ಸವಾಲ್ ಮೇಲೆ ನಮ್ಮೊಳಗಿನ ಶಕ್ತಿ ಹೊರಗ ಬರ್ತದ, ಕಲಿತದ್ದನ್ನು ಕಲಿಯದ್ದನ್ನು, ಎರಡೂ ಸೇರಿಸಿ ಹಾಡ್ತೇವು. ನನಗ ಮಕ್ಕಳಿಲ್ಲ. ಓದಿಗೇನು ತೊಂದ್ರಿ ಆಗಲ್ಲ. – ಮಂದರೂಪ ಈರಮ್ಮ ಕಾಂಬಳೆ

ಹೀಗೆ ಎಲ್ಲ ಮಹಿಳಾ ಹಾಡುಗಾರರು ನಿರಂತರ ಓದು, ಪುರಾಣ ಕೇಳುವುದು, ಕೀರ್ತನೆ ಕೇಳುವುದು ಈ ಪ್ರಕ್ತಿಯೆಯಲ್ಲಿಯೇ ತೊಡಗಿಕೊಂಡಿರುತ್ತಾರೆ. ಅಕ್ಷರ ಬರದೇ ಇದ್ದವರು ತಮ್ಮ ವೃತ್ತಿಗೆ ಸಹಾಯವಾಗುವ ಪುರಾಣಗಳು, ಮಹಾಭಾರತ ಹಾಗೂ ರಾಮಾಯಣ ಮೊದಲಾದವುಗಳನ್ನು ಬೇರೆಯವರಿಂದ ಓದಿಸಿಕೊಂಡು ಅರ್ಥೈಸಿಕೊಳ್ಳುತ್ತಾರೆ. ಹೊಸದಾದ ಸವಾಲ್ ಕಟ್ಟುವುದು, ಅದನ್ನು ಬಿಡಸಲು ಸಹ ಕಲಾವಿದರಿಗೆ ಹೇಳುವುದು; ಇದರಲ್ಲಿಯೇ ಹೊತ್ತು ಕಳೆಯುತ್ತಾರೆ. ಇದು ಅವರಿಗೆ ಹರಟೆಯೆಂದರೆ ಹರಟೆ. ಅಧ್ಯಯನವೆಂದರೆ ಅಧ್ಯಯನ. ನಿರಂತರ ಅಧ್ಯಯನದಲ್ಲಿರುವ ಇವರು ಓದಿದ್ದನ್ನು ಇಲ್ಲವೆ ಕೇಳಿದ್ದನ್ನು ನಿರಂತರ ಚರ್ಚೆಗೆ ಒಳಪಡಿಸಿಕೊಳ್ಳುತ್ತಿರುತ್ತಾರೆ. ಚರ್ಚೆಯ ಮೂಲಕ ತಮ್ಮ ತಿಳುವಳಿಕೆಯನ್ನು ಸ್ಪಷ್ಟಪಡಿಸಿಕೊಳ್ಳುತ್ತಿರುತ್ತಾರೆ; ಹಾಗೂ ವಿಸ್ತರಿಸಿಕೊಳ್ಳುತ್ತಿರುತ್ತಾರೆ. ಓದುವಿಕೆಯನ್ನು ಹಾಗೂ ಕೇಳುವಿಕೆಯನ್ನು ಅವರು ಬಹಳಷ್ಟು ಪ್ರೀತಿಸುತ್ತಾರೆ. ತಳ ಸಮುದಾಯಗಳಲ್ಲಿ ಅಕ್ಷರ ಕಲಿತವರು ಕಡಿಮೆ ಇದ್ದರೂ ಬಹುತೇಕ ಮಹಿಳೆಯರು ಅನಕ್ಷರಸ್ಥರಾಗಿರುತ್ತಾರೆ. ಹೀಗಾಗಿ ಅವರು ಓದಿನ ಸಹಾಯಕ್ಕೆ ಮನೆಯಲ್ಲಿನ ಮಕ್ಕಳು, ಮೊಮ್ಮೊಕ್ಕಳನ್ನು ಇಲ್ಲವೆ ಪುರುಷ ಕಲಾವಿದರನ್ನು ಅವಲಂಬಿಸಿರುತ್ತಾರೆ. ಅಕ್ಷರ ಓದನ್ನೇ ಮಾನದಂಡವಾಗಿಟ್ಟು ಇವರಲ್ಲಿ ಕಲಿತ ವಿದ್ಯೆಯ ಮೌಲ್ಯ ನಿರ್ಧಾರವಾಗುತ್ತದೆ. ಅಂದರೆ ಪುರುಷ ಹಾಡುಗಾರರಲ್ಲಿ ಅಕ್ಷರ ಕಲಿತವರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಅವರು ತಮ್ಮನ್ನು ವಿದ್ವಾಂಸರು ಎಂದು ಕರೆದುಕೊಳ್ಳುತ್ತಾರೆ. ಇನ್ನು ಅಕ್ಷರ ಕಲಿಯದ ಪುರುಷ ಹಾಡುಗಾರರು ದೂರದ ಊರುಗಳಿಗೆ ಪಯಣಿಸಿ ಹಾಡಿಕೆ, ಪುರಾಣ, ಕೀರ್ತನಗಳನ್ನು ಕೇಳುತ್ತಾರೆ. ಹೀಗೆ ಶ್ರವಣದ ಮೂಲಕ ಜ್ಞಾನ ಸಂಪಾದನೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಗುಲ್ಬರ್ಗಾದವರು ವಿಜಾಪುರಕ್ಕೆ; ವಿಜಾಪುರದವರು ಗುಲ್ಬರ್ಗಾಕ್ಕೆ; ಗುಲ್ಬರ್ಗಾದವರು ವಿಜಾಪುರ ಹಾಗೂ ಸೋಲಾಪುರಕ್ಕೆ; ಸೋಲಾಪುರುದವರು ಗುಲ್ಬರ್ಗಾ ವಿಜಾಪುರಕ್ಕೆ ಹೋಗಿ ಪ್ರಸಿದ್ಧ ಹಾಡುಗಾರರ ಹಾಡಿಕೆ ಆಲಿಸುತ್ತಾರೆ; ಹಾಗೂ ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತಾರೆ. ಹಾಡಿಕೆಯಲ್ಲಿನ ಹೆಣ್ಣು ಮಕ್ಕಳು ಹಾಡುವುದಕ್ಕಾಗಿ ಮಾತ್ರ ಊರೂರು ಅಲೆಯಬೇಕಾಗುತ್ತದೆ. ಉಳಿದ ಅವಧಿಯಲ್ಲಿ ಅವರು ಮನೆಯಲ್ಲಿಯೇ ಇರುತ್ತಾರೆ. ಬಹಳವೆಂದರೆ ಅವರು ತಮ್ಮ ಊರಿನಲ್ಲಿನ ಕೀರ್ತನ, ಪುರಾಣಗಳನ್ನು ಕೇಳುತ್ತಾರೆ. ನಾವು ಹಾಗಲ್ಲ. ಹಾಡಿಕೆ ಇಲ್ಲದಾಗ ನಿರಂತರ ಊರೂರು ಅಲೆದು ಶಾಸ್ತ್ರ ಪುರಾಣ ಕೇಳಿ ಜ್ಞಾನಾರ್ಜನೆ ಮಾಡುತ್ತಿರುತ್ತೇವೆ. ಹೀಗಾಗಿ ತಮ್ಮದೇ ಜ್ಞಾನ ಶ್ರೇಷ್ಠವೆಂದು ತಮ್ಮನ್ನು ಸಮರ್ಥಿಸಿ ಕೊಳ್ಳುತ್ತಿರುತ್ತಾರೆ. ಕಲಿತ ಪುರುಷ ಕಲಾವಿದರು ಅಕ್ಷರ ಜ್ಞಾನದ ಮಹತ್ವವನ್ನು ಎತ್ತಿ ಹಿಡಿದರೆ, ಕಲಿಯದ ಪುರುಷ ಕಲಾವಿದರು ಸಂಚಾರಿ ಜೀವನದಿಂದ ಸಂಗ್ರಹಿಸಿದ ಜ್ಞಾನವನ್ನು ಎತ್ತಿಹಿಡಿಯುತ್ತಾರೆ. ಪುರುಷರಾದ ಕಾರಣಕ್ಕಾಗಿಯೇ ಕುಟುಂಬ ಹಾಗೂ ಸಮಾಜದಲ್ಲಿ ಅವರ ಶೈಕ್ಷಣಿಕ ಜೀವನಕ್ಕೆ ಪ್ರೋತ್ಸಾಹ ದೊರೆತಿದೆ. ಕುಟುಂಬದಲ್ಲಿನ ತೀವ್ರ ಬಡತನವೂ ಅವರ ಶೈಕ್ಷಣಿಕ ಜೀವನಕ್ಕೆ ಮುಳುವಾಗಿಲ್ಲ. ಓದಲು ಅವಕಾಶ ದೊರೆಯದೇ ಇದ್ದ ಕೆಲವರು ತಮ್ಮ ವೃತ್ತಿಗೆ ಸಹಾಯವಾಗುವ ಪುರಾಣ, ಕೀರ್ತನೆ ಹಾಗೂ ಹಾಡಿಕೆಗಳನ್ನು ಕೇಳಲು ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸುತ್ತಾರೆ. ಈ ಬಗೆಯ ಸಂಚರಿಸುವಿಕೆ ಅವರಿಗೆ ಸಾಧ್ಯವಾದುದು ಪುರುಷರಾದ ಕಾರಣಕ್ಕೆ. ಹೆಣ್ಣಾಗಿದ್ದಕ್ಕೆ ಹಾಗೂ ಕೆಳಜಾತಿಗಳಲ್ಲಿ ಹುಟ್ಟಿದ ಕಾರಣಕ್ಕೆ ಓದು ಹಾಗೂ ಸಂಚರಿಸುವಿಕೆಯಿಂದ ವಂಚಿತರಾದ ಮಹಿಳಾ ಹಾಡುಗಾರರು ತಮ್ಮ ವೃತ್ತಿ ಜೀವನದ ಪುರುಷ ಕಲಾವಿದರ ಜ್ಞಾನಕ್ಕೆ ಮನ್ನಣೆ ನೀಡುತ್ತಾರೆ; ಗೌರವಿಸುತ್ತಾರೆ. ತಮ್ಮ ವೃತ್ತಿ ಜೀವನದ ಬೆಳವಣಿಗೆಗೆ ಪುರುಷರ ಬೆಂಬಲವನ್ನು ಅವಲಂಬಿಸಿರುತ್ತಾರೆ. ಅವರು ಅವಲಂಬಿಸಿದ ಪುರುಷ ತಂದೆಯಾಗಿರಬಹುದು, ಅಣ್ಣನಾಗಿರಬಹುದು, ತಮ್ಮನಾಗಿರಬಹುದು ಇಲ್ಲವೆ ಪುರುಷ ಸಂಗಾತಿ ಅಥವಾ ಸಹ ಇಲ್ಲವೆ ಎದುರು ಮೇಳದವನಾಗಿರಬಹುದು. ಎಲ್ಲ ಮಹಿಳಾ ಹಾಡುಗಾರರಲ್ಲಿ ಅವಲಂಬನೆ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಮದನಹಳ್ಳಿ ಭೀಮಾಬಾಯಿ ಬಹಳ ಸ್ವತಂತ್ರ ಮನೋಭಾವದವಳು. ಅವಳನ್ನು ಯಾವ ಚೌಕಟ್ಟಿನಲ್ಲಿ ಹೊಂದಿಸಿಕೊಂಡು ನೋಡಲಾಗುವುದಿಲ್ಲ. ಚೌಕಟ್ಟಿಗೆ ಸಿಗದ ಆಕೆ ಹಾಡುವಿಕೆಯಲ್ಲಿ. ಸೃಜನಶೀಲತೆಯಲ್ಲಿ ಎತ್ತಿದ ಕೈ.

ಕೌಟುಂಬಿಕ ಜವಾಬ್ದಾರಿಗಳು ಮತ್ತು ಅಧ್ಯಯನ ಅವಕಾಶಗಳು

“ನನಗೆ ಮಕ್ಕಳ ಹುಟ್ಟಿಲ್ಲ. ಹೀಂಗಾಗಿ ನನ್ನ ನೀವು ಯಾರೂ ಹಿಡಿದ ಹಾಕಾಕ ಬರಲ್ಲ. ದೂರದ ಊರಿಗಿ ಹಾಡ್ಕಿ ಕೇಳಬೇಕು ಅನಿಸಿದರ, ಪುರಾಣ ಕೇಳಬೇಕು ಅನಿಸಿದರೆ ಹೋಗಿಬಿಡ್ತೀನಿ. ನಾನು ಎಲ್ಲೇ ಹೋಗಬೇಕಾದ್ರೂ ಯಾರಿಗೂ ಹೇಳಿ ಕೇಳಿ ಹೋಗಂಗಿಲ್ಲ. ನನ್ನ ಮನಸ್ಸಿಗಷ್ಟ ನಾನು ಸಿಗಾಕಿ. ಪ್ರೇಕ್ಷಕರ ಅಭಿಲಾಷಾ ಮ್ಯಾಲೆ ಹಾಡ್ಕಿ ಹಾಡ್ತಿರತೀನಿ. ಹೀಂಗಾಗಿ ಓದಿ ಎಷ್ಟ ತಿಳಕೊಂಡಿರ್ತಿವೋ ಅಷ್ಟ ಒಳ್ಳೆಯದು. ಒಂದ ಹಾಡನ್ನು ಐದು ದಾಟಿಯಲ್ಲಿ ಹಾಡ್ತೇನು. ಸೋಬಾನ ಪದಾನ ಜೋಗಳ ಹಾಡಾಮಾಡಿ ಹಾಡ್ತೇನು. ಅದನ್ನ ಭಜನಾ, ಡೊಳ್ಳು ಮತ್ತು ದಪ್ಪಿನ ಪದಕ್ಕೆ ಬದಲಿಸಿಕೊಂಡು ಹಾಡ್ತೇನು” ಎಂದ ಭೀಮಾಬಾಯಿ ಒಂದು ಪದವನ್ನು ಐದು ದಾಟಿಯಲ್ಲಿ ಹಾಡಿ ತೋರಿಸಿದಳು. ನಾನು ಆಕೆಯ ಮನೆಗೆ ಹೋದಾಗ ಆಕೆಯ ಅಣ್ಣ ಬಸಪ್ಪ ಇದ್ದನು. ಮನೆಯಲ್ಲಿನ ಯಾರಿಗೂ ಭೀಮಬಾಯಿ ಎಲ್ಲಿಗೆ ಹೋಗಿದ್ದಾಳೆಂದು ಗೊತ್ತಿರಲಿಲ್ಲ. ಬಸಪ್ಪನ ಮಗಳೇ ದೂರವಾಣಿಯ ಮುಖಾಂತರ “ಅತ್ತೆ ಎಲ್ಲಿದ್ದಿಯಾ, ನಿನ್ನ ಹುಡ್ಕೊಂಡು ಯಾರೋ ಬಂದಾರ?” ಎಂದಾಗ ತಾನು ಸಿಂದಗಿಯಲ್ಲಿಯರುವುದನ್ನು ತಿಳಿಸಿದಳು. ನಿಜ ಮದನಹಳ್ಳಿ ಭೀಮಾಬಾಯಿಯೇ ಹೇಳಿಕೊಂಡಂತೆ ಆಕೆ ತನ್ನ ಮನಸ್ಸಿಗೆ ಮಾತ್ರ ದೊರೆಯುವಂತವಳು.

ಯಾರಿಗೆ ಮಕ್ಕಳಿಲ್ಲವೋ, ಯಾರ ಮಕ್ಕಳು ದೊಡ್ಡವರಾಗಿ ಸ್ವತಂತ್ರವಾಗಿ ದುಡಿಯುತ್ತಿರುವವರೋ ಅಂಥವರು ಮಾತ್ರ ಓದುವುದಕ್ಕ ಎಅಥವಾ ಓದಿದ್ದನ್ನು ಕೇಳುವುದಕ್ಕೆ ಸಮಯ ಸಿಗುತ್ತದೆ ಎಂದರು. ಹಾಡಿಕೆ ಮಹಿಳೆಯರಿಗೆ ಮಕ್ಕಳ ಜವಾಬ್ದಾರಿಯು ಓದುವುದಕ್ಕೆ ಅಥವಾ ಓದಿಸಿಕೊಳ್ಳುವುದಕ್ಕೆ ಸ್ಥಳ ಮತ್ತು ಸಮಯ ಎರಡೂ ದೊರೆಯದಂತೆ ಮಾಡುತ್ತದೆ. ಸಂಗಾತಿಯನ್ನು ಜಾಣತನದಿಂದ ಆಯ್ಕೆ ಮಾಡಿಕೊಂಡು ಓದಲು, ಓದಿಸಿಕೊಳ್ಳಲು ಹಾಗೂ ರಂಗ ತಾಲೀಮಿಗೆ ಸ್ಥಳ ಮತ್ತು ಸಮಯವನ್ನು ಹೊಂದಿಸಿಕೊಳ್ಳಬಹುದು. ಆದರೆ ಇದೇ ಜಾಣತನವನ್ನು ಮಕ್ಕಳ ಜವಾಬ್ದಾರಿಗೂ ಅನ್ವಯಿಸಿಕೊಳ್ಳಲಾಗುವುದಿಲ್ಲ. ಇವರಿಗೆ ಸಂಗಾತಿ ‘ಹೊರಗಿನವರಾದರೆ’ ಮಕ್ಕಳು ‘ಒಳಗಿನವರು’. ತಮ್ಮದೇ ಕರಳು ಬಳ್ಳಿಯ ಮಕ್ಕಳನ್ನು ಅತ್ಯಂತ ಜವಾಬ್ದಾರಿಯಿಂದಲೇ ನೋಡಬೇಕಾಗುತ್ತದೆ. ವೃತ್ತಿಗಾಗಿ ಊರೂರು ಅಲೆಯುವ ಇವರು ಮನೆಯಲ್ಲಿಯದ್ದಾಗ ಮಕ್ಕಳ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಾರೆ; ಅವರನ್ನು ಸಮಾಧಾನಗೊಳಿಸುತ್ತಾರೆ. ಮಕ್ಕಳು ಸಮಾಧಾನಗೊಂಡ ನಂತರವೇ ರಂಗ ತಾಲೀಮಿಗೆ ಇಳಿಯುತ್ತಾರೆ. ಮದುವೆಯಾಗದ ಇವರು ತಂದೆ-ತಾಯಿ ಇಬ್ಬರ ಪಾತ್ರಗಳನ್ನು ನಿಭಾಯಿಸ ಬೇಕಾದ ಒತ್ತಡದಲ್ಲಿರುತ್ತಾರೆ. ಹೀಗೆ ಇಬ್ಬರ ಪ್ರೀತಿಯನ್ನು ಮಕ್ಕಳಿಗೆ ಧಾರೆ ಎರೆಯಬೇಕಾದ ಒತ್ತಡದಲ್ಲಿರುವ ಕಲಾವಿದೆಯರಿಗೆ ಓದಿಗಾಗಿ ಅಥವಾ ಓದಿಸಿಕೊಳ್ಳುವುದಕ್ಕಾಗಿ ಸ್ಥಳ ಮತ್ತು ಸಮಯವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಬೆಳಗಿನ ಜಾವ ಐದರಿಂದ ಏಳರವರೆಗೆ, ರಾತ್ರಿ ಎಂಟರಿಂದ ಹತ್ತರವರೆಗೆ ರಂಗ ತಾಲೀಮಿಗೆ ಸಮಯವನ್ನು ಹೊಂದಿಸಿಕೊಳ್ಳುತ್ತಾರೆ. ರಂಗತಾಲೀಮಿಗೆ ವೇಳೆ ಹೊಂದಿಸಿಕೊಂಡಷ್ಟು ಸುಲಭವಾಗಿ ಓದಲು ಇಲ್ಲವೆ ಓದಿಸಿಕೊಳ್ಳಲು; ಪುರಾಣ, ಕೀರ್ತನ ಕೇಳಲು ಸಮಯ ಹೊಂದಿಸಿಕೊಳ್ಳುವುದು ಮಹಿಳಾ ಹಾಡುಗಾರರಿಗೆ ಸುಲಭವಾಗುವುದಿಲ್ಲ. ಮದುವೆಯ ಚೌಕಟ್ಟಿನ ಒಳಗೆ ಬರುವ ಮಹಿಳೆಯರಿಗೆ ಮಾತ್ರ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯಿದೆ. ಗಂಡನನ್ನು, ಗಂಡನ ಮನೆಯವರನ್ನು ಉಪಚರಿಸಬೇಕಾದ ಅನಿವಾರ್ಯತೆಯಲ್ಲಿ ಹಾಗೂ ಒತ್ತಡದಲ್ಲಿ ಆಕೆಯಿದ್ದಾಳೆ ಎಂದು ಪರಿಭಾವಿಸಲಾಗಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿರುವ ‘ಜೋಗತಿ’, ‘ಬಸವಿ’ ಮೊದಲಾದವರಿಗೆ ಗಂಡನನ್ನು ಹಾಗೂ ಮಕ್ಕಳನ್ನು ಉಪಚರಿಸುವ ಜವಾಬ್ದಾರಿಯೇ ಇಲ್ಲ ಎಂದು ಭಾವಿಸಲಾಗಿದೆ. ಸಮಾಜದಲ್ಲಿನ ಈ ಗ್ರಹಿತ ಸಿದ್ಧಾಂತಗಳನ್ನು ಮರು ವಿಮರ್ಶೆ ಗೊಳಪಡಿಸುವ ಅನಿವಾರ್ಯತೆಯಿದೆ ಎಂಬುದನ್ನು ಹಾಡಿಕೆ ಮಹಿಳೆಯರ ಬದುಕಿನ ಸ್ಥಿತಿ ಗತಿಗಳು ಸ್ಪಷ್ಟಪಡಿಸುತ್ತವೆ. ಈ ಕಲಾವಿದೆಯರು ಕೂಡಾ ಗಂಡನನ್ನು ನಿಯಂತ್ರಕ ಎಂದೇ ಪರಿಭಾವಿಸುತ್ತಾರೆ. ಮದುವೆಯಾಗದೇ ಉಳಿದರೆ ಮಾತ್ರ ಕಲೆಯಲ್ಲಿ ಬೆಳೆಯಲು ಸಾಧ್ಯ ಎಂದು ನಂಬುತ್ತಾರೆ. ಈ ಕಾರಣಕ್ಕಾಗಿಯೇ ಬಡ ಸಂಗಾತಿಯನ್ನು ಆಯ್ದುಕೊಳ್ಳುತ್ತಾರೆ. ಆದರೆ ಮಕ್ಕಳನ್ನು ತಮ್ಮ ಕಲಾ ಸಾಧನೆಯ ತಡೆಗೋಡೆಗಳೆಂದು ಭಾವಿಸುವುದಿಲ್ಲ. ಅಥವಾ ಮಕ್ಕಳು ತಮ್ಮ ಕಲಾ ಸಾಧನೆಗೆ ಅಡ್ಡ ಗೋಡೆಗಳಾಗುತ್ತವೆ ಎನ್ನುವ ಮಾತನ್ನು ಹೇಳುವುದೇ ಇಲ್ಲ. ಓದಿಗಾಗಿ, ಇಲ್ಲವೆ ಓದಿಸಿಕೊಳ್ಳುವುದಕ್ಕಾಗಿ, ಪುರಾಣ-ಕೀರ್ತನೆ ಕೇಳುವುದಕ್ಕಾಗಿ ಸ್ಥಳ ಮತ್ತು ಸಮಯ ಹೊಂದಿಸಿಕೊಳ್ಳುವುದಕ್ಕೆ ಪಡುವ ಪಡಿಪಾಟಲನ್ನು ವಿವರಿಸುವಾಗ ಮಾತ್ರ ಮಕ್ಕಳ ಪ್ರಸ್ತಾಪ ಬಂದಿತು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಅಧ್ಯಯನಕ್ಕೆಂದು ಸ್ಥಳ ಮತ್ತು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟವೆಂದು ಗುರುತಿಸಿಕೊಂಡಂತೆ, ಎದುರು ಹಾಡುವ ಪುರುಷ ಕಲಾವಿದರಾರೂ ಅಧ್ಯಯನದ ಸಮಸ್ಯೆಗಳನ್ನು ಗುರುತಿಸಿಕೊಂಡಂತೆ, ಎದುರು ಹಾಡುವ ಪುರುಷ ಕಲಾವಿದರಾರೂ ಅಧ್ಯಯನದ ಸಮಸ್ಯೆಗಳನ್ನು ಗುರುತಿಸಲಿಲ್ಲ. ಮಕ್ಕಳನ್ನು ನೋಡುವ ಜವಾಬ್ದಾರಿ, ಸಂಗಾತಿಯನ್ನು ನಿಭಾಯಿಸುವ ಜವಾಬ್ದಾರಿ ಇವ್ಯಾವುವೂ ಪುರುಷ ಕಲಾವಿದರ ಸಮಸ್ಯೆಗಳಾಗಿರಲಿಲ್ಲ. ಅವರ ಸಮಸ್ಯೆಗಳು ಭಿನ್ನವಾಗಿದ್ದವು.

“ನಮಗ ಅಭ್ಯಾಸ ಮಾಡಾಕ ಬೇಕಾದಷ್ಟ ವ್ಯಾಳ್ಯಾ ಸಿಗ್ತೈತಿ. ಮನಿಯಾಗ ನಾನು ತಂದ ಹಾಕಿದ್ರೇನು ಬಿಟ್ಟರೇನು. ಹೆಂಡ್ತಿ ಹೊಂದಿಸಿಕೊಂಡು ಹೋಗ್ತಾಳು. ಆಕಿ ಮನಿಯಾನ ಕಷ್ಟಾ ಗೊತ್ತ ಮಾಡಿಕೊಟ್ಟಿಲ್ಲ. ನಮ್ಮ ಚಂಚಲತೆಯ ಶುದ್ಧೀಕರಣಕ್ಕೆ ಚಟಾ ಮಾಡ್ತೇವು. ಹೆಂಡ್ತಿ ಅನ್ನುದು ಕಟ್ಟಿದ ದನಾ ಇದ್ದಂಗ. ದನಕ್ಕ ನೀರಾ, ಮೇವಾ ಹಾಕಿದ್ರ ಮುಗಿತು. ಹೆಂಡ್ತಿಗಿ ಉಣ್ಣಾಕ, ತಿನ್ನಾಕ ತಂದ ಹಾಕಿದ್ರ ಮುಗೀತು. ಹೆಂಡ್ತಿ ಬಿಟ್ಟು ಬ್ಯಾರೆ ಕಡೆ ಮನಸ್ಸಾಯ್ತು ಅಂದ್ರ ಹೆಂಡ್ತಿಗ್ಹೇಳಿ ಆಕಿ ಒಪ್ಪಿಗಿ ತಗೊಂಡು ನಮಗ ಬೇಕೆಂದವರ ಜೋಡಿ ಇರ್ತೇವು. ಒಮ್ಮಿ ಬೇಕು ಅನಿಸಿಂದ ಆಕಿನ ಕೂಡತನಾ ಮನಸ್ಸು ಸಮಾಧಾನ ಇರಲ್ಲ. ಕೂಡಿಂದ ಚಟಾ ತೀರ್ತದ. ಓದಾಕ ಅನುಕೂಲ ಆಗ್ತೈತಿ” ಎಂದು ಇಸ್ಮಾಯಿಲ್ ಸಾಬ್ ಅವರು ಹೇಳಿದರೆ, ಗುಂಡಪ್ಪ ‘‘ಓದಾಕ ಬರಿಯಾಕ, ಪುರಾಣ ಕೀರ್ತನಾ ಕೇಳಾಕ ಬೇಕಾದ್ಹಂಗ ವ್ಯಾಳ್ಯಾ ಸಿಗ್ತೈತಿ. ಮನಿಯಾಗ ಏನೂ ಮಾಡಾಕ ದಗದ ಇರಲ್ಲ. ಹೊಲದ ಕೆಲ್ಸ ಮುಗದಿಂದ ಓದುದ ಬಿಟ್ಟು ಬ್ಯಾರೆ ಕೆಲ್ಸ ಇರಲ್ಲ. ಹೆಣ್ಣ ಮಕ್ಕಳ ಚಟಾ ಮಾಡಿದ್ರ ವಿದ್ಯಾ ಹತ್ತುವಂಗಿಲ್ಲ. ನಮ್ಮ ಗುರು ಗೋಳು ಹೇಳಿದ್ಹಂಗ ಹೆಣ್ಣಿನ ಖಯಾಲಿ ಬೆಳ್ಸಿಕೊಂಡಿಲ್ಲ. ಮಕ್ಕಳು ಮರೀನ, ಬಂದು ಬಳಗದವರ್ನ ಹೀಂಗ ಮನಿಯಾಗ ಇರುವರ್ನ, ಬಂದು ಹೋಗೋರನ್ನ ಎಲ್ಲಾದೂ ನನ್ನ ಹೆಂಡ್ತಿ ನೋಡ್ತಾಳು. ಹೊಲದ ಜವಾಬ್ದಾರಿನೂ ನೋಡ್ಕೋತಾಳು. ನಂದ ಏನಿದ್ರೂ ಹಾಡಿಕೆ, ಮತ್ತ ಓದೋದು ಬಿಟ್ಟ್ರ ಬ್ಯಾರೆ ಕೆಲಸ ಇಲ್ಲ” ಎಂದು ಹೇಳಿದರು. ಹರದೇಶಿ-ನಾಗೇಶಿ ಹಾಡುಗಾರಿಕೆಯಲ್ಲಿ ಸ್ತ್ರೀ-ಪುರುಷರಿಬ್ಬರೂ ಇದ್ದರೂ ಓದಿಗೆ ಹಾಗೂ ಕೇಳುವಿಕೆಗೆ ಸ್ಥಳ ಮತ್ತು ಸಮಯ ಹೊಂದಿಸಿಕೊಳ್ಳಲು ಕಲಾವಿದೆಯರಂತೆ, ಪುರುಷ ಕಲಾವಿದರು ಪರದಾಡಬೇಕಿಲ್ಲ. ಪುರುಷರು ತಮ್ಮ ಕಲಾ ಸಾಧನೆಗಾಗಿ ವಿಶೇಷವಾಗಿ ಸ್ಥಳ ಮತ್ತು ಸಮಯವನ್ನು ಹೊಂದಿಸಿಕೊಳ್ಳಬೇಕಾಗಿಲ್ಲ. ಕಲಾ ಸಾಧನೆಗಾಗಿ ಸ್ಥಳವೂ ಇದೆ; ಸಮಯವೂ ಇದೆ. ಅಡುಗೆ, ಮನೆಗೆಲಸ, ಮಕ್ಕಳನ್ನು, ವಯಸ್ಸಾದವರನ್ನು ಉಪಚರಿಸುವುದು ಇದಾವುದನ್ನು ಮಾಡಬೇಕಾಗಿಲ್ಲ. ಪುರುಷ ಕಲಾವಿದರಿಗೆ ಬೇಕೆಂದಾಗ ಬೇಕಾದಷ್ಟು ವೇಳೆ ದೊರೆಯುತ್ತದೆ. ‘ಸಾಧನೆ’ಯನ್ನು ಪುರುಷ ಕೇಂದ್ರಿತವಾಗಿಯೇ ಗುರುತಿಸಿದ್ದರಿಂದ ಅವರು ಬಯಸಿದ ಸಾಧನೆಗೆ ಸಮಯ ಮತ್ತು ಸ್ಥಳ ದೊರೆಯುತ್ತದೆ. ಹರದೇಶಿ-ನಾಗೇಶಿ ಪುರುಷ ಹಾಡುಗಾರರು ಸಹ ಕಲಾವಿದೆಯರನ್ನು ಚಟ ಶುದ್ಧೀಕರಣದ ಪರಿಕರವಾಗಿ ಪರಿಗಣಿಸಿದ್ದಾರೆ. ಎದುರು ಹಾಡಲು ಬಂದ ಕಲಾವಿದರ ಬಗ್ಗೆ ಮೋಹಗೊಂಡರೆ ಅವರೊಂದಿಗೆ ಶಾಶ್ವತವಾಗಿ ಸಂಬಂಧ ಹೊಂದಲು ಬಯಸುತ್ತಾರೆ. ಕಲಾವಿದೆಯರು ಪುರುಷ ಕಲಾವಿದರನ್ನು ವೃತ್ತಿ ಸಂಬಂಧವಾಗಿ ಸಹಾಯವಾಗುತ್ತಾರೆಂದು ಸಂಬಂಧವನ್ನು ಇಟ್ಟುಕೊಂಡರೆ, ಪುರುಷ ಕಲಾವಿದರಿಗೆ ಕಲಾವಿದೆಯರು ಚಟ ಶುದ್ಧೀಕರಣದ ಪರಿಕರಗಳಾಗಿ ಕಂಡಿದ್ದಾರೆ.

“ಪುರಾಣಕಾರರು ಒಂದು ತಿಂಗಳು ಹೇಳಿದ್ದನ್ನು ನಾವು ಗೀಗೀ ಪದಕಾರರು ಒಂದು ತಾಸನ್ಯಾಗ ಹೇಳ್ತೇವು. ನಮ್ಮದು ಶ್ರೇಷ್ಠ ವೃತ್ತಿ” ಎಂದು ಹೇಳುವ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ತಮ್ಮ ಬದುಕಿನ ಬಹುತೇಕ ಅವಧಿಯನ್ನು ರಂಗ ತಾಲೀಮಿಗಾಗಿ, ಕಲಿಕೆಗಾಗಿ ಮೀಸಲಿಡುತ್ತಾರೆ. ಬೆಳಗಿನ ಜಾವದಲ್ಲಿ ಹಾಗೂ ರಾತ್ರಿ ವೇಳೆಯಲ್ಲಿ ಕಲಿಕಾ ಹಂತದ ತಾಲೀಮಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ವೃತ್ತಿಯಲ್ಲಿ ಪರಿಣತೆಯನ್ನು ಸಾಧಿಸಿದರೂ ಬೆಳಗಿನ ಹಾಗೂ ರಾತ್ರಿಯ ರಂಗ ತಾಲೀಮು ನಿಲ್ಲುವುದಿಲ್ಲ; ಮುಂದುವರೆದಿರುತ್ತದೆ. ವೃತ್ತಿ ನಿರಂತರತೆಯು ಅಧ್ಯಯನವನ್ನು ಮತ್ತು ರಂಗ ತಾಲೀಮನ್ನು ಬಯಸುತ್ತದೆ. ಆದ್ದರಿಂದ ಹಾಡುಗಾರರು ಇತ್ಯ ರಂಗತಾಲೀಮಿನಲ್ಲಿ ತಲ್ಲೀನರಾಗಬೇಕಾಗುತ್ತದೆ. ತಮ್ಮ ಕಲಾ ಜೀವನವನ್ನು ಕೇಂದ್ರವಾಗಿಟ್ಟುಕೊಂಡು ಅದಕ್ಕೆ ತೊಂದರೆ ನೀಡದಂತಹ ಸಂಗಾತಿಯನ್ನು ಆಯ್ದುಕೊಳ್ಳುತ್ತಾರೆ. ಅವರು ಲೈಂಗಿಕ ಜೀವನಕ್ಕೆ ಆದ್ಯತೆ ನೀಡಿಯೇ ಇಲ್ಲ. ಹಾಡಿಕೆ ಮಹಿಳೆಯರು ತಮ್ಮ ಸಂಗಾತಿಯನ್ನು ಸಂತಾನ ಪಡೆಯುವ ಪರಿಕರವಾಗಿ ಪರಿಭಾವಿಸುತ್ತಾರೆ. ಸಮಾಜವು ಗ್ರಹಿಸಿದ ಹಾಗೆ ಈ ಮಹಿಳೆಯರು ಮುಕ್ತ ಲೈಂಗಿಕತೆಯನ್ನು ಬೆನ್ನು ಹತ್ತಿದವರಲ್ಲ. ಅದು ಅವರ ಪ್ರಧಾನ ಆಶಯವೂ ಅಲ್ಲ. ನಿರಂತರ ಓದು, ರಂಗ ತಾಲೀಮು ಹಾಗೂ ಪುರಾಣ ಇಲ್ಲವೆ ಕೀರ್ತನೆ ಕೇಳಿಸಿಕೊಳ್ಳುವುದು ಇಲ್ಲವೆ ಓದಿಸಿಕೊಳ್ಳುವುದು ಇವುಗಳಲ್ಲಿಯೇ ಅವರ ಬದುಕಿನ ಪ್ರಧಾನ ಅವಧಿಯು ಕಳೆಯುತ್ತದೆ. ತಮ್ಮ ಜೊತೆಯಲ್ಲಿಯೇ ಕಲಾಸೇವೆ ನಡೆಸುವ ಪುರುಷ ಕಲಾವಿದರು ಕಲೆಯ ಹೆಸರಿನಲ್ಲಿಯೇ ಪಿಂಚಣಿ ಪಡೆಯುತ್ತಾರೆ. ಅದೇ ರೀತಿ ಪಿಂಚಣಿ ಪಡೆಯುವ ಆಶಯವನ್ನು ಮಹಿಳಾ ಕಲಾವಿದರು ವ್ಯಕ್ತಪಡಿಸಿದರು.

“ನಮ್ಮ ಜೋಡಿ ತಾಳಾ ಹಾಕುವರು, ಎದುರು ಹಾಡವರು ಎಲ್ಲಾರೂ ಕಲಾ ಪಿಂಚಣಿ ತಗೋಳ್ಳಾಕ್ಹತ್ಯಾರ. ನಮಗೆ ಪಿಂಚಣಿ ಬಂದಿಲ್ಲ. ಕನ್ನಡ ಸಂಸ್ಕೃತಿ ಇಲಾಖಾದವರು ಎಲ್ಲಿ ಕರದಲ್ಲಿ ಹೋಗಿ ಹಾಡಿ ಬಂದೇನಿ. ಪಿಂಚಣಿ ಮಾಡಸಾಕ ದುಡ್ಡು ಕೊಡಬೇಕಾಗುತ್ತಂತ ಹೇಳಿದ್ರು. ಅದನ್ನೂ ಕೈಗಡ(ಸಾಲ) ಮಾಡಿಕೊಂಡು ಐದು ಹತ್ತು ಸಾವಿರ ಕೊಟ್ಟೇನಿ. ಇಷ್ಟಾದ್ರೂ ಪಿಂಚಣಿ ಆಗಿಲ್ಲ. ನೀವು ‘ದೇವದಾಸೇರು’. ನಿಮಗೆ ಪಿಂಚಣಿ ಐತಲ್ಲಾ? ಹೊಲಾ ಕೊಡತಾರು, ಮನಿ ಕೊಡತಾರು, ಅದು ಸರಳ ಆಗ್ತೈತಿ. ಎಲ್ಲೋ ಒಂದು ಕಡೆ ಪಿಂಚಣಿ ತಗೊಂಡ್ರಾಯ್ತು ಅಂತ ನಿಮ್ಮಂಥಾ ಕಲಿತವ್ರು ನಮಗ ಬುದ್ಧಿವಾದಾ ಹೇಳ್ತಾರ. ನಾವ್ಯಾಕ ದೇವದಾಸೇರು ಅಂತ ಪಿಂಚಣಿ ತಗೊಬೇಕು ಹೇಳ್ರಿ? ನಮ್ಮ ಇಡೀ ಜೀವನಾನ ಕಲಾಕ್ಕಾಗಿ ತೇಯ್ದೀವಿ. ನಮ್ಮ ಜೋಡಿ ಹಾಡ್ಕಿ ಬಂದ ಗಣಸರು ಕಲಾ ಪಿಂಚಣಿ ತಗೋತಾರು. ನಮಗೂ ಕಲಾ ಪಿಂಚಣಿ ಬೇಕು” ಎಂದು ಕಂಬಾಗಿ ಹನುಮವ್ವನಂತೆ ಹಾಡಿಕೆ ಮಹಿಳೆಯರೆಲ್ಲರೂ ವ್ಯಕ್ತಪಡಿಸಿದರು. ತಮ್ಮ ಜೊತೆಯಲ್ಲಿರುವ, ತಾವು ಮಾಡುವ ವೃತ್ತಿಯನ್ನೇ ಮಾಡುವ ಪುರುಷರು ಕಲಾ ಪಿಂಚಣಿಯನ್ನು ಪಡೆಯಬಹುದಾದರೆ; ಅದು ತಮಗೇಕೆ ಇಲ್ಲ ಎನ್ನುವುದು ಸವಾಲಾಗಿದೆ. ಬದುಕಿನ ಕೆಲವು ಒತ್ತಡಗಳಿಂದಾಗಿ ಹಾಡಿಕೆಗೆ ಬರುವ ಮುಂಚೆಯೇ ‘ಜೋಗತಿ’ಯರಾಗಿರಬಹುದು, ‘ಬಸವಿ’ಯರಾಗಿರಬಹುದು. ಹಾಗಂತ ಅವರು ಲೈಂಗಿಕ ಸೇವೆ ಮಾಡಿದವರಲ್ಲ. ತಿಳುವಳಿಕೆ ಬಂದಾಗಿನಿಂದ ಹಾಡು, ಕಲಿಕೆ, ರಂಗ ತಾಲೀಮು ಬಿಟ್ಟರೆ ಬೇರೇನನ್ನೂ ಯೋಚಿಸಿದವರಲ್ಲ. ‘ದೇವದಾಸಿ’ ಎಂದು ಗುರುತಿಸುವುದನ್ನು ತಿರಸ್ಕಿರಿಸಿಯೇ ಕಲಾ ಜೀವನಕ್ಕೆ ಕಾಲಿಟ್ಟವರು. ಹಾಡಿಕೆ ಯಲ್ಲವ್ವ, ಶಾವರಿಕೆ ಬಂಗಾರವ್ವ ಎಂದು ಕರೆಯಲಿ ಎಂದು ಆಶಿಸಿದವರು. ಅದಕ್ಕಾಗಿ ತಮ್ಮ ಇಡೀ ಬದುಕನ್ನು ರಂಗತಾಲೀಮಿಗೆ ಮೀಸಲಿರಿಸಿದವರು. ತಮ್ಮ ಬಾಲ್ಯವನ್ನು ಒಳಗೊಂಡು ಮುಪ್ಪಿನವರೆಗೆ ಹಾಡಿಕೆ ಯಲ್ಲವ್ವ, ಶಾವರಿಕ ಸಿದ್ದವ್ವ ಎಂದು ಗುರುತಿಸಿಕೊಳ್ಳಲು ಕನವರಿಸಿದವರು; ಕನವರಿಕೆಗೆ ತಕ್ಕಂತೆ ದುಡಿದ ಈ ಕಲಾವಿದೆಯರು ‘ದೇವದಾಸಿ’ ಹೆಸರಿನಲ್ಲಿ ಪಿಂಚಣಿಯನ್ನು ಪಡೆಯಲು ನಿರಾಕರಿಸುತ್ತಾರೆ. ‘ದೇವದಾಸಿ’ ಎಂದು ಗುರುತಿಸಿಕೊಳ್ಳುವುದರಿಂದ ಸಾಮಾಜಿಕ ಅಪಮಾನಗಳನ್ನೇ ಎದುರಿಸಬೇಕಾಗುತ್ತದೆ. ಇಂತಹ ನೂರಾರು ಅಪಮಾನಗಳನ್ನು ಉಂಡುಟ್ಟೇ ಈ ಮಹಿಳೆಯರು ಬೆಳೆದಿದ್ದಾರೆ. ಅದಕ್ಕಾಗಿಯೇ ನೂರಾರು ಕಲಾವಿದೆಯರು ಕಲಾ ಪಿಂಚಣಿಗಾಗಿ ಕಾಯುತ್ತಿದ್ದಾರೆ. ಎಂಬತ್ತರ ಇಲ್ಲವೆ ತೊಂಬತ್ತರ ವಯಸ್ಸಿನ ಗಡಿ ದಾಟಿದ ಕಲಾವಿದೆಯರು ಜೀವಮಾನದಲ್ಲಿ ಒಮ್ಮೆಯಾದರೂ ಕಲಾ ಪಿಂಚಣಿ ಎನ್ನುವ ಬಹುಮಾನ ಪಡೆಯುವುದಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ‘ದೇವದಾಸಿ’ ಹೆಸರಿನಲ್ಲಿ ಬರುವ ಭೂಮಿಯನ್ನು, ಮನೆಯನ್ನು ಹಾಗೂ ಪಿಂಚಣಿಯನ್ನು ಎಲ್ಲವನ್ನು ತಿರಸ್ಕರಿಸಿ, ಕಲಾ ಪಿಂಚಣಿಗಾಗಿ ದೇಹವೆಲ್ಲ ಕಣ್ಣಾಗಿಸಿಕೊಂಡು ಕಾಯುತ್ತಲಿದ್ದಾರೆ. ಕಲಾ ಪಿಂಚಣಿಯನ್ನು ಪಡೆಯುವುದು ಅವರ ಸ್ವಾಭಿಮಾನದ ಪ್ರಶ್ನೆಯಾಘಿದೆ. ಯೌವನದಲ್ಲಿ ‘ಸರಸ್ವತಿ’ ಹೆಸರಿನಲ್ಲಿ ಗುರುತಿಸಿಕೊಂಡು ಮುಪ್ಪಿನಲ್ಲಿ ‘ದೇವದಾಸಿ’ ಹೆಸರಿನಲ್ಲಿ ಪಿಂಚಣಿ ತೆಗೆದುಕೊಳ್ಳುವುದು ಇವರ ಊಹೆಗೂ ಮೀರಿದ್ದು. ಹಾಡಲಿಕ್ಕೆ ಆಗದ ಅನೇಕ ಕಲಾವಿದೆಯರು, ಕಲಾ ಪಿಂಚಣಿಯನ್ನು ಅಪೇಕ್ಷಿಸುತ್ತಿದ್ದಾರೆ. ‘ಸೂಳಿತನ ಮಾಡ್ದ, ದೇವದಾಸಿ ಅಂತ ಪಿಂಚಣಿ ತಗೋ ಅಂದ್ರ ನಮ್ಮನ್ನ ಜೀವಂತವಾಗಿಯೇ ಪಾತಾಳಕ್ಕೆ ತಳಿದ್ಹಂಗ ಆಗುತ್ತೆವ್ವಾ” ಎನ್ನುವ ಅವರ ಮನದಾಳದ ಮಾತುಗಳು ಕಲಾ ಜೀವನದ ವಿವರಗಳನ್ನೇ ಬಿಚ್ಚಿಡುತ್ತದೆ. ನೂರು ಕಲಾವಿದೆಯರಲ್ಲಿ ಮೂವರು ಇಲ್ಲವೆ ನಾಲ್ವರಿಗೆ ಮಾತ್ರ ಕಲಾ ಪಿಂಚಣಿ ದೊರೆಯುತ್ತಿದೆ. ಉಳಿದವರಿಗೆ ಯಾರಿಗೂ ಕಲಾ ಪಿಂಚಣಿ ಇಲ್ಲ. ‘ದೇವದಾಸಿ’ ಪಿಂಚಣಿ ಸುಲಭವಾಗಿ ದೊರೆಯುತ್ತಿದ್ದರೂ ಇವರೆಲ್ಲರೂ ಅದನ್ನು ತಿರಿಸ್ಕರಿಸಿರುವರು. ಉಸಿರು ನಿಲ್ಲುವುದರೊಳಗಾಗಿ ಕಲಾ ಪಿಂಚಣಿ ಪಡೆದು ಸರಸ್ವತಿ ಋಣದಲ್ಲಿಯೇ ಸಾಯುವ ಆಸೆಯನ್ನು ವ್ಯಕ್ತಪಡಿಸಿದ ಎಲ್ಲ ಕಲಾವಿದೆಯರ ಮನಸ್ಥಿತಿಯನ್ನು ಸರಕಾರ ಮತ್ತು ಸಮಾಜ ಇಬ್ಬರೂ ಅರ್ಥೈಸಿಕೊಳ್ಳಬೇಕಿದೆ. “ನಮ್ಮ ಜೊತೆಯಲ್ಲಿರುವ ಪುರುಷ ಕಲಾವಿದರಿಗೆ ಕಲಾ ಪಿಂಚಣಿ ಕೊಡುವುದು ನಿಮಗೆ ಸುಲಭ ಸಾಧ್ಯವಾದರೆ, ನಮಗೆ ಪಿಂಚಣಿ ಕೊಡಲು ನಿಮ್ಮಿಂದ ಯಾಕೆ ಸಾಧ್ಯವಾಗುತ್ತಿಲ್ಲ?” ಎನ್ನುವ ಸವಾಲನ್ನು ಕಲಾವಿದೆಯರು ಹಾಕುತ್ತಿದ್ದಾರೆ. ಸರಕಾರವು ಪ್ರಬಲ ಸಮಾಜದಂತೆ ಈ ಕಲಾವಿದೆಯರನ್ನು ‘ದೇವದಾಸಿ’ಯೆಂದು ಮಾತ್ರ ಪರಿಗಣಿಸುತ್ತಿದೆ. ಹೀಗಾಗಿಯೇ ನೂರರಲ್ಲಿ ತೊಂಬತ್ತೇಳೂ ಕಲಾವಿದೆಯರಿಗೆ ಕಲಾ ಪಿಂಚಣಿ ದೊರೆತಿಲ್ಲ.

ಈ ಕುರಿತಂತೆ ನಾನು ಕೆಲ ಸರಕಾರಿ ಉದ್ಯೋಗಿಗಳನ್ನು ಸಂದರ್ಶಿಸಿದ. ಬಹುತೇಕರು ಹೇಳಿದ್ದು ಹೀಗೆ: “ಕಲೆ-ಪಿಲೆ ಏನೂ ಇಲ್ಲ್ರಿ ಅವ್ರ ಹತ್ರ. ರೊಕ್ಕದ ಸಲವಂದ ಆಸೆ ಪಡ್ತಾವ. ಅವ್ರ ಉದ್ಯೋಗನ ಅದ ಅಲ್ಲ್ರಿ, ಕಲಾ ಪೆನ್‌ಶನ್ ಆದ್ರ ತಿಂಗಳ ಒಂದ ಸಾವಿರಾ ಕೊಡ್ತಾರ. ದೇವದಾಸಿ ಪೆನ್‌ಶನ್ ಆದ್ರ ತಿಂಗಳಾ ನಾಕ ನೂರು ರೂಪಾಯಿ ಸಿಗ್ತೈತಿ. ಎದರೊಳಗೆ ರೊಕ್ಕ ಜಾಸ್ತಿ ಆಯ್ತು? ಅದಕ್ಕ ಕಲಾ ಪೆನ್‌ಶನ್ ಕೇಳ್ತಾವು. ಈಗ ಕಲಾ ಪೆನ್‌ಶನ್ ತಗೋಳಾಕ್ಹತ್ತವ್ರು ತಿಂಗಳಾ ಎರಡ ಸಾವಿರಾ ಕೇಳ್ತಾ ಇದ್ದಾರ. ಹೀಂಗಾದ್ರ ಇನ್ನು ಅರಾಮಲ್ಲರಿ ಅವರಿಗೆ. ಕಲಾ ಪೆನ್‌ಶನ್, ಕಲಾ ಪೆನ್‌ಶನ್ ಅಂತ ರೊಕ್ಕದ್ಹಿಂದ ಬೆನ್ನಹತ್ತು ಬದ್ಲು, ಸರಳವಾಗೇ ಸಿಗೋ ‘ದೇವದಾಸಿ’ ಪೆನ್‌ಶನ್ ತಗೊಂಡ್ತಾಯ್ತು, ಅವ್ರಿಗೂ, ಮನಿ ಕೊಡ್ತೀವಲ್ಲಾ? ಇವತ್ತ ಸೈಟ್ ಬೆಲೆ ಎಷ್ಟ ಕಾಸ್ಟಲಿ ಐತಿ? ದೇವದಾಸೇರ ಪೆನ್‌ಶನ್ ಕಮ್ಮಿ ಬರ್‌ಬೋದು. ಆದ್ರ ಸೈಟ್ ಅಂತಾ ಲಾಭ ಇದ್ದ ಇದೆಯಲ್ಲಾ? ಈಗ ದೇವದಾಸೇರು ಊಳಾಕ ಭೂಮಿ ಕೇಳಾಕತ್ತ್ಯಾರು? ಅದೂ ಬಂದ್ರ ಇನ್ನ ಲಾಭಲ್ಲಾ ಇವ್ರಿಗೆ? ಇವೆಲ್ಲಾ ಲೆಕ್ಕ ಹಾಕೂದೂ ಇವಕ್ಕ ಗೊತ್ತಾಗಲ್ಲರಿ? ರೊಕ್ಕ ಒಂದ ಅರ್ಥ ಆಗ್ತೈತಿ. ವಯಸ್ಸಿನಾಗ ಗಿರಾಕಿಗಳಿಂದ ರೊಕ್ಕಾ ತಗೊಂಡ ಅಭ್ಯಾಸ ಅವ್ರಿಗಿ, ಮುಪ್ಪಿನ್ಯಾಗೂ ರೊಕ್ಕ ಅಂತಾವು. “ವಯಸ್ಸಾದ ಕಲಾವಿದರ ಜೀವನ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಪಿಂಚಣಿ ಕೊಡುವ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ. ಮೊದಲು ನೀಡುವ ಆರು ನೂರು ರೂಪಾಯಿ ಪಿಂಚಣಿಯನ್ನೇ ಒಂದು ಸಾವಿರಕ್ಕೆ ವಿಸ್ತರಿಸಿದೆ. ಸರಕಾರದ ಯೋಜನೆಗಳು ಸಾಮಾಜಿಕ ಕಾಳಜಿಯನ್ನು ಹೊಂದಿರುತ್ತವೆ. ಕಲಾವಿದರಲ್ಲಿ ಆರ್ಥಿಕ ಅನಾಥತೆ ಸೃಷ್ಟಿಯಾಗದಂತೆ ನೋಡಿಕೊಳ್ಳವ ಉದ್ದೇಶವನ್ನೇ ಕಲಾ ಪಿಂಚಣಿ ಹೊಂದಿದೆ. ಸರಕಾರದ ಯೋಜನೆಗಳನ್ನು ರೂಪಿಸುವವರಿಗೆ ಎಷ್ಟು ಸಾಮಾಜಿಕ ಜವಾಬ್ದಾರಿ ಇರಬೇಕೋ; ಅಷ್ಟೇ ಜವಾಬ್ದಾರಿ ಅದನ್ನು ಜಾರಿಗೊಳಿಸುವವರಲ್ಲಿಯೂ ಇರಬೇಕಾಗುತ್ತದೆ. ಯೋಜನೆಯನ್ನು ರೂಪಿಸುವವರನ್ನು ಸಂದರ್ಶನ ಮಾಡಲಾಗಲಿಲ್ಲ. ಆದರೆ ಯೋಜನೆಯನ್ನು ಜಾರಿಗೊಳಿಸುವ ಸರಕಾರಿ ಉದ್ಯೋಗಿಗಳನ್ನು ಕಂಡಿದ್ದೇನೆ. ಬಹುತೇಕರು ಜಾತಿ ಶ್ರೇಣೀಕರಣಕ್ಕೆ ಅನುಗುಣವಾಗಿ ಸಾಮಾಜೀಕರಣಗೊಂಡಿದ್ದರು. ಹೀಗಾಗಿ ಹರದೇಶಿ-ನಾಗೇಶಿಯ ಬಹುತೇಕ ಮಹಿಳಾ ಹಾಡುಗಾರರು ಕಲಾ ಪಿಂಚಣಿಯಿಲ್ಲದೆ ಸಂಕಟ ಪಡುತ್ತಿದ್ದಾರೆ. ಸರಕಾರದ ಕೆಲ ಉದ್ಯೋಗಿಗಳು ಹೇಳಿದ ಹಾಗೆ ಕಲಾ ಪಿಂಚಣಿಯನ್ನೇ ಕೇಳುವುದಕ್ಕೆ, ಅದು ‘ದೇವದಾಸಿ’ ಪಿಂಚಣಿಗಿಂತ ಹೆಚ್ಚಾಗಿದ್ದುದು ಕಾರಣವಾಗಿರಬಹುದು. ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಅದಕ್ಕಾಗಿ ಹೆಚ್ಚು ಮೊತ್ತದ ಕಲಾ ಪಿಂಚಣಿಯನ್ನು ಹಾಡಿಕೆ ಮಹಿಳೆಯರು ಕೇಳಿರಬಹುದು. ಇವರ ಕಲಾ ಪಿಂಚಣಿ ನಿರೀಕ್ಷಣೆಯನ್ನು ಕೇವಲ ಆರ್ಥಿಕ ನೆಲೆಯಿಂದ ನೋಡಲಾಗದು. ಕಲಾ ಪಿಂಚಣಿಯನ್ನು ಬಯಸುವ ಅವರಲ್ಲಿ ಕಲೆಯ ಕುರಿತ ಪ್ರೀತಿಯಿದೆ. ಗೌರವವಿದೆ. ಹೀಗಾಗಿ ಕಲೆಯೊಂದಿಗಿನ ಅವರ ಭಾವನಾತ್ಮಕ ಸಂಬಂಧವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. “ದೇವದಾಸೇರು ಅಂತ ಪೆನ್‌ಶನ್ ಕೊಡೂದೂ ಬ್ಯಾಡಾ; ಮನಿ ಕೊಡೂದೂ ಬ್ಯಾಡಾ; ಹೊಲಾ ಕೊಡೂದೂ ಬ್ಯಾಡಾ. ನುಸ್ತಾ (ಕೇವಲ) ನಮಗ ಕಲಾವಿದವರು ಅಂತ ಪೆನ್‌ಶನ್ ಕೊಟ್ಟ್ರ ಸಾಕು” ಎನ್ನುವ ಹರದೇಶಿ-ನಾಗೇಶಿ ಮಹಿಳಾ ಕಲಾವಿದರ ಅಳಲನ್ನು ಸಮಾಜವೂ ಹಾಗೂ ಕಲಾ ಪಿಂಚಣಿ ನೀಡುವ ಸರಕಾರಿ ಅಧಿಕಾರಿಗಳು ಆಲಿಸಬೇಕಿದೆ. ಕಲಾ ಪಿಂಚಣಿ ಮೂಲಕ ಮಹಿಳಾ ಕಲಾವಿದರು ಸಾಮಾಜಿಕ ಗೌರವವನ್ನು ಬಯಸುತ್ತಿದ್ದಾರೆ. ಆದರೆ ಅವರು ‘ದೇವದಾಸಿ’ಯರಿಗೆ ಹಾಗೂ ಕಲಾವಿದರಿಗೆ ಸರಕಾರ ನೀಡುವ ಪಿಂಚಣಿಯಲ್ಲಿನ ಮೊತ್ತದ ವ್ಯತ್ಯಾಸವನ್ನು ಗಮನಿಸಿಲ್ಲ. ಪಿಂಚಣಿ ಕೊಡುವ ಸರಕಾರಿ ಉದ್ಯೋಗಿಗಳು ಹೇಳಿದಂತೆ ಯಾವ ಪಿಂಚಣಿ ಪಡೆದುಕೊಂಡರೆ ಲಾಭ ಎನ್ನುವ ಲೆಕ್ಕಾಚಾರ ಹಾಕಿಲ್ಲ. ಹಾಗೊಂದು ವೇಳೆ ಲೆಕ್ಕಾಚಾರ ಮಾಡಿದ್ದರೆ ತಪ್ಪೂ ಅಲ್ಲ. ಸರಕಾರ ‘ದೇವದಾಸಿ’ಯರ ಹೆಸರಲ್ಲಿ ನೀಡುವ ಪ್ಲಾಟನ್ನು, ಭೂಮಿಯನ್ನು ತಿರಸ್ಕರಿಸುವ ಇವರಲ್ಲಿ ನಾನು ಕಂಡದ್ದು ಕಲಾ ಗೌರವವನ್ನೇ ಹೊರತು ಬೇರೆನಲ್ಲ.

* * *