. ದಾಖಲಾತಿ ಯಾರಿಗೆ ಲಾಭ?

ಬಹುತೇಕ ಕಲಾವಿದರು ದಾಖಲಾಗುವಾಗ, ದಾಖಲಾಗುವಿಕೆ ಕಲಾವಿದರಿಗೆ ಲಾಭವೋ, ದಾಖಲು ಮಾಡಿಕೊಳ್ಳುವವರಿಗೆ ಲಾಭವೋ ಎನ್ನುವ ಲೆಕ್ಕಾಚಾರವನ್ನು ಮಾಡುತ್ತಿದ್ದರು. ನಾನು ಸಂದರ್ಶನ ಮಾಡಲು ಹೋದಾಗ ವಿಲಾಸನು ಇದೆ ಬಗೆಯ ಲೆಕ್ಕಾಚಾರವನ್ನು ನಡೆಸಿದ್ದನು. ತಾನು ಹಾಡುವ ಹಾಡುಗಳನ್ನು, ಬರೆದ ಹಾಡುಗಳನ್ನು ತನ್ನಿಂದಲೇ ಸಂಗ್ರಹಿಸಿ, ಅದರ ಭಾವಾರ್ಥಗಳನ್ನು ಕೂಡ ತನ್ನಿಂದಲೇ ಹೇಳಿಸಿ ಸಂಶೋಧನಾ ಗ್ರಂಥ ಬರೆದವನು ಡಾಕ್ಟರೇಟ್ ಪದವಿ ತೆಗೆದುಕೊಂಡನು. ಅದೇ ಪದವಿಯಿಂದಾಗಿಯೇ ಕಾಲೇಜಿನಲ್ಲಿ ಉಪನ್ಯಾಸ ನೌಕರಿ ಗಿಟ್ಟಿಸಿಕೊಂಡನು, ಈಗ ಕೈತುಂಬ ಸಂಪಾದಿಸುತ್ತಿದ್ದಾನೆ. ಸಂಶೋಧನಾ ವಿದ್ಯಾರ್ಥಿಗೆ ಜ್ಞಾನವನ್ನು ಧಾರೆಯೆರೆದ ತನ್ನಂತವನಿಗೆ ನೌಕರಿ ಇಲ್ಲ; ಕೈತುಂಬ ಸಂಬಳವಿಲ್ಲ ಎನ್ನುವುದು ವಿಲಾಸನಂತಹ ಪುರುಷ ಹಾಡುಗಾರರ ಕೊರಗು. ತಮ್ಮ ಸಹಾಯದಿಂದಲೇ ಅಧ್ಯಯನ ನಡೆಸಿದವರಿಗೆ ಇಲ್ಲವೆ ತಮ್ಮ ಕುರಿತೇ ಅಧ್ಯಯನ ನಡೆಸಿದವರಿಗೆ ಕೀರ್ತಿ, ಉದ್ಯೋಗ ಹಾಗೂ ಆಕರ್ಷಕ ಸಂಬಳ ದೊರೆಯುತ್ತದೆ. ಹಾಡಿಕೆಯನ್ನೇ ವೃತ್ತಿಯಾಗಿಸಿಕೊಂಡವರಿಗೆ ಸರಕಾರವಾಗಲಿ, ಅಕ್ಷರ ಸಂಸ್ಕೃತಿಯಲ್ಲಿ ಉನ್ನತ ಸ್ಥಾನ ಪಡೆದುಕೊಂಡವರಾಗಲಿ ಯಾವುದೇ ಪ್ರಶಸ್ತಿಯನ್ನು, ಹಣವನ್ನು ಕೊಡುವುದಿಲ್ಲ. ಹೀಗಾಗಿ ನಾನೇಕೆ ನಿಮಗೆ ಸಂದರ್ಶನ ನೀಡಬೇಕು ಎನ್ನುವುದು ಅಧ್ಯಯನಕಾರರಿಗೆ ವಿಲಾಸನಂತಹವರ ಸವಾಲು. “ನೀವು ನಮ್ಮವ್ವs ಕೇಳ್ಕೊಂಡ, ನಮ್ಮ ಬಗ್ಗಿ ಬರ್ದು, ಕೀತಿ ಪಡೀತಿರಿ, ಪ್ರಶಸ್ತಿ ಪಡಿತಿರಿ. ಅದರಿಂದ ನಮಗೇನು ಲಾಭ? ನಡಿರಿ ಅತ್ಲಾಗೆ” ಎಂದೇ ನನ್ನನ್ನು ಗದರಿಸಿದನು. ಈ ವ್ಯವಸ್ಥೆಯಲ್ಲಿ ತನ್ನಂತಹ ಹಾಡುಗಾರರು ಮೂಲ ಗುಂಪಾಗುತ್ತಾರೆ; ಆದರೆ ತನ್ನಂತವರ ಬಗ್ಗೆ ಬರೆದವರು ಸ್ಟಾರ್‌ಗಳಾಗಿ ಅಧ್ಯಯನ ಲೋಕದಲ್ಲಿ ಮಿಂಚುತ್ತಾರೆ. ಅಧ್ಯಯನ ಲೋಕವು ಅಧ್ಯಯನಕಾರರಿಗೆ ಮಾತ್ರ ಕೊಡುವ ಪ್ರಾಶಸ್ತ್ಯವು ಪುರುಷ ಹಾಡುಗಾರರನ್ನು ಕೆರಳಿಸಿದೆ. ಹೀಗಾಗಿ ವಿಲಾಸನಂತಹ ಹಾಡುಗಾರರು ಅಧ್ಯಯನಕ್ಕೆ ಸಹಕರಿಸಲಿಲ್ಲ. ಆದರೆ ಯಾವ ಮಹಿಳಾ ಹಾಡುಗಾರರೂ ಪುರುಷ ಹಾಡುಗಾರರಂತೆ ದಾಖಲಾತಿಯು ಯಾರಿಗೆ ಲಾಭ, ಯಾರಿಗೆ ನಷ್ಟ ಎಂದು ಲೆಕ್ಕಾಚಾರ ಹಾಕಿದ್ದು ಕಂಡುಬರಲೇ ಇಲ್ಲ.

. ಪಿಂಚಣಿ ಬಯಸುವವರು

ಮಹಿಳಾ ಹಾಡುಗಾರರಂತೆ ೫೫ರ ಗಡಿ ದಾಟಿದ ಪ್ರತಿ ಪುರುಷ ಹಾಡುಗಾರರೂ ಪಿಂಚಣಿ ಪಡೆಯಬೇಕೆಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಮಹಿಳಾ ಹಾಡುಗಾರರಂತೆ ಯಾವ ಪುರುಷ ಹಾಡುಗಾರರೂ ಪಿಂಚಣಿಯೊಂದನ್ನೇ ಅವಲಂಬಿಸಿರಲಿಲ್ಲ. ಕೆಲವರು ಚಿಕ್ಕ-ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿದ್ದರು. ಜೊತೆಯಲ್ಲಿ ಜಮೀನು ಹೊಂದಿದ್ದರು. ಕಷ್ಟ ಕಾಲಕ್ಕಿರಲಿ ಎಂದು ತಮ್ಮ ತಮ್ಮ ಶಕ್ತ್ಯಾನುಸಾರ ಬ್ಯಾಂಕಿನಲ್ಲಿ ಹಣವನ್ನು ಕೂಡಿಟ್ಟುಕೊಂಡಿದ್ದರು. ಎಲ್ಲ ಪುರುಷ ಹಾಡುಗಾರರಿಗೆ ಒಂದು ಸ್ವಂತ ಮನೆಯಿತ್ತು. ಬಬಲೇಶ್ವರದ ಬಂಗಾರೆವ್ವ, ಕಂಬಾಗಿ ಹನುಮವ್ವನನ್ನು ಹೊರತು ಪಡಿಸಿದಂತೆ ಉಳಿದ ಯಾವ ಮಹಿಳಾ ಹಾಡುಗಾರರಿಗೂ ಜಮೀನು, ಮನೆ ಇರಲಿಲ್ಲ. ಮಹಿಳಾ ಹಾಡುಗಾರರಂತೆ ಪುರುಷ ಹಾಡುಗಾರರು ಕೇವಲ ಹಾಡಿಕೆಯೊಂದನ್ನೇ ಪ್ರಧಾನವಾಗಿ ಅವಲಂಬಿಸಿರಲಿಲ್ಲ. ಒಕ್ಕಲುತನ, ಸಣ್ಣಪುಟ್ಟ ವ್ಯಾಪಾರ, ಮನೆ ಬಾಡಿಗೆ ಹೀಗೆ ಅನೇಕ ನೆಲೆಗಳಿಂದ ಆದಾಯವನ್ನು ಪುರುಷ ಹಾಡುಗಾರರು ಪಡೆಯುತ್ತಿದ್ದರು. ಇದೆಲ್ಲದರ ಜೊತೆಯಲ್ಲಿ ಪಿಂಚಣಿ ಬರಲಿ ಎಂದು ಅಪೇಕ್ಷಿಸುತ್ತಿದ್ದರು. ಪಿಂಚಣಿಯನ್ನು ಆದಾಯದ ನೆಲೆಯಲ್ಲಿ ಅಪೇಕ್ಷಿಸುತ್ತಿದ್ದರೇ ಹೊರತು ಮಹಿಳಾ ಹಾಡುಗಾರರ ಹಾಗೆ ಪಿಂಚಣಿ ಜೀವನ ನಿರ್ವಹಣೆಗೆ ಅಗತ್ಯವೆಂದು ಪರಿಭಾವಿಸಿರಲಿಲ್ಲ.

. ಕಲಾ ಪರಂಪರೆಯನ್ನು ಉಳಿಸುವುದಕ್ಕಾಗಿ ಧನ ಸಹಾಯ ಯಾಚಿಸುವವರು

ಕಾಶಿನಾಥ ಚೌವ್ಹಾಣ ಒಬ್ಬನೇ ಗೀಗೀ ಮೇಳಗಳ ಸಂಸ್ಥೆಯನ್ನು ಕಟ್ಟಿಕೊಂಡಿದ್ದು. ಈ ಸಂಸ್ಥೆ ಎಷ್ಟು ಜನ ಕಲಾಕಾರರಿಗೆ ಸಹಾಯವಾಗಿದೆ, ಎಷ್ಟು ಜನ ಕಲಾಕಾರರನ್ನು ಸೃಷ್ಟಿಸಿದೆ ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಕಾಶಿನಾಥ ಚೌವ್ಹಾಣ ತೋರಿಸಲಿಲ್ಲ. ಸಂಸ್ಥೆಯಿಂದ ಕಲಾಕಾರರಿಗೆ ಸಹಾಯವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಶಿನಾಥ್‌ನಿಗೆ ಲಾಭವಾಗಿದೆ. ಅವನು ಕಟ್ಟಿಸಿಕೊಂಡ ದೊಡ್ಡ ಬಂಗಲೆಯೇ ಇದಕ್ಕೆ ಸಾಕ್ಷಿಯಾಗಿದೆ. ಅಪ್ಪಿತಪ್ಪಿಯೂ ಆತ ನನ್ನನ್ನು ತನ್ನ ಬಂಗಲೆಗೆ ಕರೆಯಲಿಲ್ಲ. ಬಡತನದ ಪ್ರತೀಕವಾದ ಗೀಗೀ ಮೇಳಗಳ ಸಂಸ್ಥೆಯಲ್ಲಿಯೇ ಕೂಡಿಸಿ ಮಾತನಾಡಿದನು. ಬಂಗಲೆಯಲ್ಲಿ ತಾನು ಬಡವನೆಂದು ಹೇಳಿಕೊಳ್ಳಲಾಗುವುದಿಲ್ಲ. ಯಾಕೆಂದರೆ ಅವನ ಮಾತನ್ನು ಅವನ ಬಂಗಲೆಯೇ ನಿರಾಕರಿಸುತ್ತದೆ.

ನಾನು ಮಾಹಿತಿ ಪಡೆದುಕೊಳ್ಳುವುದರತ್ತ ಒಲವು ತೋರಿದರೆ, ಕಾಶಿನಾಥ ಚೌವ್ಹಾಣವು ನನ್ನಿಂದ ಹಣ ಪಡೆದುಕೊಳ್ಳುವತ್ತ ಒಲವು ತೋರುತ್ತಿದ್ದನು. ಹೆಂಡಿಯವರಿಗೂ ಗೀಗೀ ಪದಗಳ ಕುರಿತು ಏನೇನೂ ಗೊತ್ತಿಲ್ಲ ಎನ್ನುತ್ತಿದ್ದನು. ಗೀಗೀ ಹಾಡುಗಾರರಲ್ಲಿ ತನಗೊಬ್ಬನಿಗೆ ಮಾತ್ರ ಮೋಡಿ ಲಿಪಿ ಬರುತ್ತದೆ; ಗುಲ್ಬರ್ಗಾ ಭಾಗದಲ್ಲಿ ಹರದೇಶಿ-ನಾಗೇಶಿ ಹಾಡುಗಳೆಲ್ಲವೂ ಮೋಡಿ ಲಿಪಿಯಲ್ಲಿಯೇ ಇವೆ ಎನ್ನುತ್ತಿದ್ದನು. ಅವುಗಳಿಗೆ ವಿವರಣೆ ಪಡೆದುಕೊಳ್ಳಲು ಪ್ರಯತ್ನಿಸಿದಾಗ ಅವುಗಳನ್ನು ಬಿಟ್ಟು ಸಂಸ್ಥೆಯ ಬಡತನದ ವಿವರಣೆಯನ್ನು ನೀಡುತ್ತಿದ್ದನು. ಅವನು ಕೇಳಿದ ಮೂವತ್ತು ಸಾವಿರ ರೂಪಾಯಿಗಳನ್ನು ಕೊಟ್ಟಿದ್ದರೆ ಮಾಹಿತಿ ನೀಡುತ್ತಿದ್ದನೋ ಅಥವಾ ಇನ್ನಷ್ಟು ಹಣ ಪಡೆಯಲು ಮತ್ತೊಂದಷ್ಟು ಕಷ್ಟಗಳನ್ನು ಮುಂದಿಡುತ್ತಿದ್ದನೋ ಗೊತ್ತಿಲ್ಲ. ಉಳಿದ ಸಂಘ-ಸಂಸ್ಥೆಗಳ ಹಾಗೆ ಗೀಗೀ ಮೇಳಗಳ ಸಂಸ್ಥೆಯ ಮೂಲಕ ಕಾಶಿನಾಥ ಚೌವ್ಹಾಣ್‌ನು ಆದಾಯ ಪಡೆದುಕೊಳ್ಳಲು, ಸಂಸ್ಥೆಯ ಹಲವಾರು ಸಮಸ್ಯೆಗಳನ್ನು ಮುಂದಿಡುತ್ತಿದ್ದನು. ಸಂಸ್ಥೆಯ ಉದ್ಧಾರಕ್ಕಾಗಿ ಹಣ ಯಾಚಿಸುತ್ತಿದ್ದನು. ಹೀಗಾಗಿ ಇವನಿಂದ ಮಾಹಿತಿ ಸಂಗ್ರಹಿಸುವುದು ಬಹಳ ಕಷ್ಟವಾಯಿತು.

. ಹಣಕ್ಕಾಗಿ ಹಾಡುಗಳನ್ನು ಮಾರ ಬಯಸುವವರು

ಮಹಿಳಾ ಹಾಡುಗಾರರು ತಮ್ಮ ಬಳಿಯಿದ್ದ ಹರದೇಶಿ ಹಾಡುಗಳನ್ನು ಇಲ್ಲವೆ ನಾಗೇಶಿ ಹಾಡುಗಳನ್ನು ಯಾವ ಹಣ ನಿರೀಕ್ಷಣೆ ಇಲ್ಲದೆ ಅಥವಾ ಅಪೇಕ್ಷೆ ಇಲ್ಲದೆ ಕೊಡಲು ಮುಂದೆ ಬಂದಿದ್ದರು. ಆದರೆ ಪುರುಷ ಹಾಡುಗಾರರು ಹಾಗಲ್ಲ. ನನ್ನನ್ನು ನೋಡಿದ ತಕ್ಷಣ ಅವರು, ಹರದೇಶಿ-ನಾಗೇಶಿ ಹಾಡುಗಳನ್ನು ಸಂಗ್ರಹಿಸಲು ಬಂದವಳೆಂದೇ ತಿಳಿಯುತ್ತಿದ್ದರು. ನೇರವಾಗಿ ವ್ಯವಹಾರಕ್ಕೆ ಇಳಿಯುತ್ತಿದ್ದನು. “ನಾನು ನಿಮ್ಮ ಬಳಿಯಲ್ಲಿನ ಹಾಡುಗಳನ್ನು ಸಂಗ್ರಹಿಸಲು ಬಂದವಳಲ್ಲ” ಎಂದು ಪದೆ-ಪದೆ ಹೇಳಿದರೂ ಅವರು ಅದನ್ನು ನಂಬುತ್ತಿರಲಿಲ್ಲ. ನಾನು ತಮಾಷೆ ಮಾಡುತ್ತಿದ್ದೇನೆ ಎಂದೇ ಭಾವಿಸುತ್ತಿದ್ದರು. ಒಂದು ರಾತ್ರಿ ಹಾಡುಗಳಿಗೆ ಹತ್ತು ಸಾವಿರ ರೂಪಾಯಿ; ಎರಡು ರಾತ್ರಿಯ ಹಾಡುಗಳಿಗೆ ಇಪ್ಪತ್ತು ಸಾವಿರ ರೂಪಾಯಿ ಕೊಡಬೇಕೆಂದು ಹೇಳುತ್ತಿದ್ದರು. ಹಣ ಹೇಳುತ್ತಿರುವುದಕ್ಕೆ ಅವರೇ ಸಮರ್ಥನೆಯನ್ನು ಕೊಡುತ್ತಿದ್ದರು. “ನಮ್ಗೂ ಹಾಡಾ ಯಾರು ಪುಗಸಟ್ಟೆ ಕೊಟ್ಟಿರುದ್ದಿಲ್ಲರಿ. ಕವಿಗೊಳು (ಕವಿಗಳು) ಒಂದು ರಾತ್ರಿ ಹಾಡಾ ಕೊಡಾಕ ಹತ್ತು ಸಾವಿರ ರೂಪಾಯಿ ಕೇಳ್ತಾರಿ. ಒಂದ ಹಗಲಿ, ಒಂದ ರಾತ್ರಿಗಿ ಇಪ್ಪತ್ತ ಸಾವಿರ ರೂಪಾಯಿ ಕೇಳ್ತಾರಿ. ನಾವು ರೊಕ್ಕಾ ಕೊಟ್ಟ ತಂದಿರ್ತೇವ್ರಿ. ಅದಕ್ಕ ರೊಕ್ಕಾ ಕೇಳ್ತೇವ್ರಿ. ತಪ್ಪ ತಿಳ್ಕೊಬ್ಯಾಡ್ರಿ. ನನ್ನ ಬಲ್ಲಿ ಹಾಡಾ ಅದಾವಲ್ಲರಿ ಒಬ್ಬ ಕವಿಯಿಂದ ತಂದಿದ್ದಲ್ಲರಿ. ನೂರಾರು ಊರಾಗಿನ ನೂರಾರು ಕವಿಗಳಿಂದ ಸಂಗ್ರಹಾ ಮಾಡೇನ್ರಿ. ಅದಕ್ಕೆಲ್ಲಾ ಬಸ್‌ಚಾರ್ಜ್‌ ಹಾಕೊಂಡು ಹೋಗೇನ್ರಿ. ನೀವು ಅರಾಮ ನಮ್ಮತ್ರ ಬಂದು ತಗೊಂಡು ಹೋಗ್ತಿರಿ. ನಿಮಗ ಹಾದಿ ಹೈರಾಣ ಇಲ್ಲ. ಬಸ್‌ಚಾರ್ಜ್‌ ಖರ್ಚಿಲ್ಲ, ಹೋದ ಬಂದ ದಿನದ್ದ ಊಟದ ಖರ್ಚಿಲ್ಲ. ಹಾಡಾ ತಗೊಳ್ಳಾಕ ಕವಿಗಿ ಹತ್ತಿಪ್ಪತ್ತು ಸಾವಿರ ರೊಕ್ಕಾ ಕೊಡಬೇಕಾಗಿಲ್ಲ” ಎಂದು ಪುರುಷ ಹಾಡುಗಾರರು ಹೇಳುತ್ತಿದ್ದರು. ಹಾಡಿಕೆ ಸಂಗ್ರಹಣೆಗಾಗಿ ಅವರು ಹೂಡಿದ ಬಂಡವಾಳವನ್ನು ಲೆಕ್ಕಹಾಕಿ, ಹಾಡುಗಳನ್ನು ಸಂಗ್ರಹಿಸಲು ಬಂದವರಿಗೆ ಹಣ ಕೇಳುತ್ತಿದ್ದರು.

ಪ್ರತಿ ಹಾಡುಗಾರರು ಹಾಡಿಕೆ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷತೆಯನ್ನು ಹೊಂದಿದ್ದರು. ಅವರ ವಿಶೇಷತೆಯು ಅವರು ಸಂಗ್ರಹಿಸಿದ ಹಾಡುಗಳನ್ನೇ ಅವಲಂಬಿಸಿರುತ್ತಿತ್ತು. ಇಂತಹ ಹಾಡುಗಳನ್ನು ನಮ್ಮಂತವರಿಗೆ ಕೊಡುವುದರಿಂದ ತಮ್ಮ ವಿಶೇಷತೆಯನ್ನು ಕಳೆದುಕೊಳ್ಳುತ್ತೇವೆ ಎನ್ನುವ ಆತಂಕ ಪುರುಷ ಹಾಡುಗಾರರಲ್ಲಿತ್ತು. ಯಾಕೆಂದರೆ ನಮ್ಮಂತಹ ಅಧ್ಯಯನಕಾರರು ಸಂಗ್ರಹಿಸಿದ ಹಾಡುಗಳನ್ನು ಪ್ರಕಟಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತೇವೆ. ಹಾಡುಗಾರರು ಹಾಗೆ ಮಾಡುವುದಿಲ್ಲ. ಜೋಪಾನವಾಗಿ ಕೂಡಿಟ್ಟು, ತಮ್ಮ ಮನೆಯಲ್ಲಿಯೇ ಹಾಡುಗಾರರನ್ನು ತರಬೇತುಗೊಳಿಸಿ, ಅವರಿಗೆ ಕೊಡುತ್ತಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ “ನಿಮ್ಮಂತಾ ಬರೆಯೋರಿಗೆ ಪುಸ್ತಕಾ ಆಸ್ತಿ ಆದ್ಹಂಗ, ನಮಂಥಾ ಹಾಡಿಕೆಯವ್ರಿಗೆ ನಾವು ಕೂಡಿಟ್ಟ ಪದಗಳs ಆಸ್ತಿ” ಎನ್ನುತ್ತಿದ್ದರು. ಹಾಡುಗಳ ಸಂಗ್ರಹಣೆಗೆ ಬಂಡವಾಳ ಹಾಕಿದ್ದರಿಂದ, ಅವುಗಳನ್ನು ಕೊಡುವಾಗಲೂ ಒಂದು ಹಂತದ ಆದಾಯವನ್ನು ನಿರೀಕ್ಷಿಸುತ್ತಿದ್ದರು.

ಕಾಶಿನಾಥ ಚೌವ್ಹಾಣ, ಮೊಹಮ್ಮದ್ ಸಾಬ್, ನಸಿರುದ್ದೀನ್ ಮೊದಲಾದವರು ಹಾಡು ಕೊಟ್ಟರೆ ಕೀರ್ತಿ ಬರುತ್ತದೆ ಎನ್ನುವ ಆಸೆಯಿಂದ ಯಾವ ಹಣಕಾಸಿನ ನಿರೀಕ್ಷಣೆ ಇಟ್ಟುಕೊಳ್ಳದೆ ಹರದೇಶಿ-ನಾಗೇಶಿ ಹಾಡುಗಳನ್ನು ಹೆಂಡಿಯವರಿಗೆ ಕೊಟ್ಟಿದ್ದರಂತೆ. ಆದರೆ ಅವರು ನಿರೀಕ್ಷಿಸಿದಂತೆ ಯಾವ ಕೀರ್ತಿಯೂ ವಿದ್ವತ್‌ ವಲಯದಿಂದ ಅವರನ್ನು ಹುಡುಕಿಕೊಂಡು ಬರಲಿಲ್ಲ. ಇವರು ಕೀರ್ತಿ ಬರುತ್ತದೆಂದು ಸ್ವತಂತ್ರವಾಗಿ ಆಲೋಚಿಸಿ ನಿರೀಕ್ಷಿಸಿದವರಲ್ಲ. ಇವರಿಂದ ಹಾಡು ಸಂಗ್ರಹಿಸಲು ಹೋದವರೇ ಕೀರ್ತಿ ಕನಸನ್ನು ತುಂಬಿದವರು. ಯಾವ ಕೀರ್ತಿಯೂ ಅರಸಿಕೊಂಡು ಬರದೇ ಇದ್ದಾಗ ಹಾಡುಗಳನ್ನು ಸಂಗ್ರಹಿಸಿಕೊಂಡು ಹೋದವರು ಅವುಗಳನ್ನು ಪ್ರಕಟಿಸಿ ಹಣ ಸಂಪಾದಿಸಿದ್ದಾರೆ ಎಂದು ಭಾವಿಸಿಕೊಳ್ಳುತ್ತಾರೆ; ಹಾಗೆಯೇ ಆರೋಪಿಸುತ್ತಾರೆ.

ನನ್ನನ್ನು ಕೂಡ ಅದೇ ತಕ್ಕಡಿಯಲ್ಲಿಟ್ಟು ಹಣ ಹಾಗೂ ಕೀರ್ತಿಯ ಲಾಭ-ನಷ್ಟದ ಲೆಕ್ಕಾಚಾರವನ್ನು ಮಾಡಿದರು. ನಾನು ಅವರ ಜೀವನ ವಿವರಣೆಗೆ ಹೊರಳಿಕೊಂಡಾಗ ಪುರುಷ ಹಾಡುಗಾರರು ಆಶ್ಚರ್ಯಪಟ್ಟದ್ದಂತೂ ಸತ್ಯ. ನಿರಾಳವಾಗಿ ಅವರು ಬದುಕಿನ ಅನುಭವಗಳನ್ನು ಹಂಚಿಕೊಂಡರು. ಹಂಚಿಕೊಳ್ಳುವಾಗ ಮಹಿಳಾ ಹಾಡುಗಾರರ ಹಾಗೆ ಬಿಕ್ಕಲಿಲ್ಲ; ಮುಲಗಲಿಲ್ಲ; ನನ್ನನ್ನು ಹೊರಗಟ್ಟಲಿಲ್ಲ. ಬಹಳ ಸಂತೋಷದಿಂದಲೆ ಮಾಹಿತಿ ಹಂಚಿಕೊಂಡರು. ಹಾಡಲು ಕರೆಯಿಸಿದವರು ತಮ್ಮನ್ನು ಜೀತದಾಳಿನಂತೆ ನಡೆಯಿಸಿಕೊಳ್ಳುವ ರೀತಿಯನ್ನು ಹೇಳುವಾಗ ಮಾತ್ರ ಅವರ ಕಣ್ಣಲ್ಲಿ ನೀರು ಜಿನುಗಿತ್ತು.

ಪುರುಷ ಹಾಡುಗಾರರು ವ್ಯಾಪಾರಿ ಮನೋಭಾವದಿಂದಲೇ ಪ್ರತಿಕ್ರಿಯಿಸಿದರು. ಜೊತೆಯಲ್ಲಿ ಕೀರ್ತಿ, ಪ್ರಶಸ್ತಿಗಳ ನಿರೀಕ್ಷಣೆ ಅವರಲ್ಲಿತ್ತು. ಇನ್ನು ಕೆಲವರು ನಾನು ಹೆಣ್ಣು ಮಗಳು, ನನಗೇನೂ ತಿಳಿಯದು ಎಂದು ಭಾವಿಸಿಕೊಂಡು ಹೇಗೆ ವಿಷಯವನ್ನು ಬರೆಯಬೇಕು ಎನ್ನುವುದನ್ನು ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತಿದ್ದರು. ಮತ್ತೆ ಕೆಲವರು ತಾವು ಹೀಗೆಯೇ ದಾಖಲಾಗಬೇಕೆಂದು ಬಯಸುತ್ತಿದ್ದರು. ಹಾಡಿಗೆ ಅನುಭವಗಳನ್ನು ಹಂಚಿಕೊಳ್ಳುವಾಗ ಯಾವ ಮುಜುಗರವಿಲ್ಲದೆ, ಹೆಮ್ಮೆಯಿಂದಲೇ ಹೇಳಿದರು. ಆದರೆ ಮಹಿಳಾ ಹಾಡುಗಾರರು ಪುರುಷ ಹಾಡುಗಾರರಿಗಿಂತ ಭಿನ್ನವಾಗಿ ಪ್ರತಿಕ್ರಿಯಿಸಿದರು. ಅವರಲ್ಲಿ ವ್ಯಾಪಾರಿ ಮನೋಭಾವವಿರಲಿಲ್ಲ. ಕೀರ್ತಿ-ಪ್ರಶಸ್ತಿಗಳ ನಿರೀಕ್ಷಣೆ ಇರಲಿಲ್ಲ. ನನ್ನ ತಿಳುವಳಿಕೆಯ ಬಗ್ಗೆ ಅನುಮಾನಗಳಿರಲಿಲ್ಲ. ಹಾಡಿಕೆಯಲ್ಲಿನ ಹದಿ ಹರೆಯದ ಹುಡುಗಿಯನ್ನು ಹೊರತುಪಡಿಸಿದರೆ, ಉಳಿದ ಮಹಿಳೆಯರು ಹೀಗೆಯೇ ದಾಖಲಾಗಬೇಕೆಂದು ಬಯಸುತ್ತಿರಲಿಲ್ಲ. ಅವರ ಬದುಕಿನ ಅನುಭವಗಳನ್ನು ಹೇಳಲು ಮೂರು ಕಾರಣಗಳಿಂದ ಹಿಂದೇಟು ಹಾಕುತ್ತಿದ್ದರು. ೧. ಬದುಕಿನ ಅನುಭವಗಳೇ ಹಂಚಿಕೊಳ್ಳಲಾರದಷ್ಟು ಕಹಿಯಾಗಿದ್ದು. ೨. ಅಪಮಾನಿ ಅನುಭವಗಳನ್ನು ಹೇಳಿದರೆ ತಾವೇ ಅನುಮಾನಕ್ಕೆ ಒಳಗಾಗುತ್ತೇವೆ ಎಂಬ ಹಿಂಜರಿಕೆ. ೩. ಕಲಿತ ಮಕ್ಕಳ ಒತ್ತಡದಿಂದ ಹೇಳಲು ಹಿಂದೇಟು. ಈ ಮೂರು ಬಗೆಯ ಅಳುಕುಗಳು ಮಹಿಳಾ ಹಾಡುಗಾರರಲ್ಲಿ ಕಂಡುಬಂದವು. ಸ್ತ್ರೀ-ಪುರುಷರಿಬ್ಬರೂ ಹಾಡಿಕೆ ವೃತ್ತಿಯಲ್ಲಿದ್ದರೂ, ಇಬ್ಬರ ಅನುಭವಗಳೂ ಭಿನ್ನ-ಭಿನ್ನವಾಗಿವೆ. ಹಾಡಿಕೆ ಕ್ಷೇತ್ರವು ಮಹಿಳೆಯರಿಗೆ ಹೇಳಿಕೊಳ್ಳಲಾಗದ, ಹಂಚಿಕೊಳ್ಳಲಾಗದ ಸಂಕಟ-ತಳಮಳವನ್ನು ಸೃಷ್ಟಿಸಿದರೆ; ಪುರುಷರಿಗೆ ಹಾಡಿಕೆ ಕ್ಷೇತ್ರವು ವಿದ್ವತ್ ಕ್ಷೇತ್ರವಾಗಿದೆ. ಹಾಡಿಕೆ ಕ್ಷೇತ್ರದಲ್ಲಿ ಹಾಡುವ ಪುರುಷರು ‘ಸರಸ್ವತಿ ಪುತ್ರ’ರಾಗಿ ಗೌರವಿಸಲ್ಪಟ್ಟರೆ, ಹಾಡುವ ಮಹಿಳೆಯರು ‘ನಾಗ ಕನ್ಯೆಯರಾಗಿ’, ‘ಗೌರಿ ಮಕ್ಕಳಾಗಿ’ ಗುರುತಿಸಲ್ಪಡುತ್ತಾರೆ. ಪುರುಷ ಹಾಡುಗಾರರನ್ನು, ಮಹಿಳಾ ಹಾಡುಗಾರರನ್ನು ಗುರುತಿಸುವ ಈ ಕ್ರಮಗಳೇ ಸಾಮಾಜಿಕ ಅಂತಸ್ತನ್ನು, ಕೀಳರಿಮೆಯನ್ನು ಸೃಷ್ಟಿಸಿವೆ. ಇವರಿಬ್ಬರಲ್ಲಿ ಯಾರು ಸಾಮಾಜಿಕ ಅಂತಸ್ತಿನಲ್ಲಿದ್ದಾರೆ. ಯಾರು ಸಮಾಜಿಕ ಕೀಳರಿಮೆಯನ್ನು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಬಹುತೇಕರು ಅಪಮಾನಗಳನ್ನು ಹೇಳಿಕೊಳ್ಳುವವರ ನೆಲೆಗಳಿಂದ, ಅಪಮಾನಗಳನ್ನು ಗ್ರಹಿಸುವುದಿಲ್ಲ. ಬದಲಾಗಿ ಅವಮಾನಿಸುವವರ ನೆಲೆಗಳಿಂದಲೇ ಗ್ರಹಿಸುತ್ತಾರೆ ಎನ್ನುವ ಅನುಮಾನ ಮಹಿಳಾ ಹಾಡುಗಾರರದು. ಸಾಮಾಜಿಕ ಅಪಮಾನಕ್ಕೊಳಗಾದವರು, ಅದರಲ್ಲಿಯೂ ಮಹಿಳೆಯರು ತಮ್ಮೊಳಗಿನ ತಲ್ಲಣಗಳನ್ನು, ತಳಮಳಗಳನ್ನು ಹೇಳುವಾಗ ನೂರಾರು ಬಾರಿ ಯೋಚಿಸುತ್ತಾರೆ. ಅವರ ಈ ಅನುಮಾನವು ಅವರ ಒಳಗಿನಿಂದಲೇ ಸ್ವತಂತ್ರವಾಗಿ ಸೃಷ್ಟಿಯಾದದ್ದಲ್ಲ. ಹೊಟ್ಟೆಯಲ್ಲಿನ ಸಂಕಟಗಳನ್ನು ಹಿಡಿದಿಡಲಾಗದೆ ಹೇಳಿಕೊಂಡಾಗ, ಕೇಳಿಸಿಕೊಂಡವರು ತಾಯಿಯಾಗದೆ ಗಂಡನಂತೆ ಅಥವಾ ಗಂಡಿನಂತೆ ಹೇಳಿಕೊಂಡವರನ್ನೇ ಅನುಮಾನಿಸಿದ್ದಾರೆ; ಅವಮಾನಿಸಿದ್ದಾರೆ. ಅನೇಕ ಮಹಿಳಾ ಹಾಡುಗಾರರು ಸಂಕಟಗಳನ್ನು ಹೇಳಿಕೊಳ್ಳಲು ಹೋಗಿ ಸಂಕಟಕ್ಕೆ ಈಡಾದ ಅನೇಕ ಪ್ರಸಂಗಗಳನ್ನು ನಿರೂಪಿಸಿದರು. “ಒಂದೂರಾಗ ಒಬ್ಬ ಗೌಡನ ಮಗ ಮರಿಗೌಡ ನಾವು ಇಳಕೊಂಡ ಶಾಲ್ಯಾಗ ಬಂದು ಕಾಟಾ (ತೊಂದರೆ) ಕೊಡತಿದ್ದ. ಕಿಡಿಕ್ಯಾಗಿಂದ ಹಳ್ಳಾ ಒಗಿತಿದ್ದ. ಹಾಡ್ಕಿಗಿ ಹೋಗು ವ್ಯಾಳ್ಯಾಕ್ಕ ಚಲೋ ಸೀರಿ ಉಡತೀವಿ. ಉಟ್ಟ ಸೀರಿ ಬದಲು ಮಾಡುವಾಗ ಕಿಡಿಕ್ಯಾಗ ಹಣಕಿ (ಇಣಕಿ) ಹಾಕೋನು. ಕಿಸಕ್ಕಂತ ನಕ್ಕು ಹಲ್ಕಟ್ಟ ಮಾತಾಡೋನು. ಮಳ್ಳಾ ದಿನಾ ಜಳಕಾ ಮಾಡಾಕ್ಕಂತ ಹೋದ್ರ ಅಲ್ಲಿ ನಮಕಾ ಮುಕ್ಕಟ (ಮುಂಚೆ) ಇರೋನು. ಬಾಂವಿ ಅಗಲಂಗ ಇತ್ತು. ಅದು ಸೇದಾ ಬಾವಿ ಅಲ್ಲ. ಅಲ್ಲಿ ನಮ್ಮಂತವ್ರು ಜಳಕಾ ಮಾಡ್ತಾರು. ಊರನ ಗಣಸೂರು ಅಲ್ಲೆ ಈಸ್ಯಾಡಾಕ (ಈಜುವುದು) ಬರ್ತಾರು. ಹೊತ್ತ ಹೊಂಡುದಕ ಜಳಕಾ ಮಾಡಿದ್ರಾಯ್ತು ಅಂತ್ಹೇಳಿ, ಹಾಡ್ಕಿ ಮುಗಿದ್ಕೊಡ್ಲೆ ಬಾಂವಿಗೆ ಹೋಗ್ತಿದ್ವಿ. ಅಲ್ಲೂ ನಮಗs (ನಮಗಿಂತ) ಮುಕ್ಕಟ (ಮೊದಲು) ಬರೆ ಲಂಗೋಟಿ ಮ್ಯಾಗ ಜಳಕ ಮಾಡ್ತಿದ್ದ. ಒಂಥರಾ ನೋಡ್ತಿದ್ದಾ. ಬಯಲಕಡಿಗಿ (ಬಹಿರ್ದೆಸೆ), ಕಾಲ್ಮಡಿಗಿ ನಮ್ಮ ಹಾಡ್ಕಿ ಗಂಡಸೂರ ಜೋಡಿನ ಹೋದ್ರು ಅಲ್ಲಿನೂ ಬರ್ತಿದ್ದ. ಒಂತರಾ ವಿಚಿತ್ರ ರೀತಿ ನೋಡ್ಕೋಂತ ಕೂಡ್ತಿದ್ದ. ಹಾಡ್ಕ್ಯಾಗ ನನ್ನ ಜೋಡಿ ನಮ್ಮ ಸಣ್ಣಪ್ಪನ ಇರ್ತಿದ್ದಾ. ಯಾಕ್ರಿ ಗೌಡ್ರ ಹೀಂಗ್ಯಾಕ ಮಾಡ್ತೀರಿ ಅಂತ ಕೇಳಿದ್ರ ನೀವು ಬಂದ್ಹಗ ಬಂದೇನಿ ಅನ್ತಿದ್ದಾ. ಆ ಊರಾಗ ನಮಗ ಹಾಡ್ಕಿಗಿ ಬಕ್ಕಳಂಗ ರೊಕ್ಕ ಬರೋದು. ಇವನಿಗಿ ಅಂಜಿ ಬಿಟ್ಟ್ರ, ಒಳ್ಳೆಪಗಾರಾ, ಭಕ್ಷೀಸು ತಪ್ಪಿಸಿಗೊಬೇಕಾಗ್ತಿತ್ತು. ಊರಾಗ ಇವ್ನ ಒಬ್ಬನ್ನ ಬಿಟ್ಟ್ರ ಉಳಿದವರು ನಮಗ ಬಾಳ ಮರ್ಯಾದಿನೂ ಕೊಡ್ತಿದ್ದ್ರು. ಪ್ರತಿ ವರ್ಷಾನೂ ಹಾಡ್ಗಿಗಿ ನಮ್ಮನ್ನ ಕರಿತಿದ್ದ್ರು. ಈ ಊರ ಹಾಡ್ಕಿ ಬಿಡೂದು ಬೇಕಾಗಿರ್ಲಿಲ್ಲ. ನಮ್ಗ. ಏನ ಮಾಡೂದಂತ ಯೋಚ್ನೆ ಮಾಡಿ-ಮಾಡಿ, ಹೆಣ್ಣಮಕ್ಕಳತ್ರ ಹೇಳಿದ್ರ ಅರ್ಥ ಮಾಡ್ಕೋತಾರ ಅಂತ್ಹೇಳಿ ಊರ ಹಿರಿ ಗೌಡ್ತಿ ಹತ್ತ್ರ ಹ್ವಾದಾ. ಹಿರಿ ಗೌಡ್ತಿ ಜೋಡಿ ಮಾತಾಡಾಗ ಮರಿಗೌಡನ ತಾಯಿ, ಅವನ ಹಾಣ್ತೆ (ಹೆಂಡತಿ) ಇಬ್ಬರೂ ಬಂದ್ರು. ಹಿಂಗೀಂದ್ಹಿಂಗರಿ ಮರಿ ಗೌಡರು ಹೀಂಗ ಮಾಡ್ತಾರು. ನೀವ ಜರಾ (ಸ್ವಲ್ಪ) ಬುದ್ಧಿ ಹೇಳ್ರಿ ಅಂತ ಅಂದ್ಯಾ. ಏನೇನ ಆಯ್ತೇಳು ಅಂದ್ರು. ಎಲ್ಲಾನೂ ಬಿಡ್ಸಿ ಬಿಡ್ಸಿ ಹೇಳಿದ್ಯಾ. ನೀನು ಹಾಡ್ಕಿ ಗಂಡಸೂರ ಜೋಡಿ ಜಳಕಾ ಮಾಡಿದ್ರ ಏನೂ ಅನ್ಸೂದಿಲ್ಲ. ಬಯಲ್ಕಡಿಗಿ ಹೋದ್ರ ಏನೂ ಅನ್ಸೂದಿಲ್ಲ. ಕಾಲ್ಮಡಿ (ಮೂತ್ರ ವಿಸರ್ಜನೆ)ಗೆ ಹೋದ್ರೆ ಏನೂ ಅನ್ಸೂದಿಲ್ಲ. ನನ್ನ ಮಗಾ ಬಂದ್ರ ಅಷ್ಟ ನಿನಗ ಚುಚ್ಚಿದ್ಹಂಗ ಆಗ್ತೈತೇನು? ಅವೇನು ನಿಂಗ ಕೈ ಹಿಡ್ದ ಏಳ್ದಾನಾ? ಮೈಮ್ಯಾಲ ಬಿದ್ದಾನಾ? ಏನೋ ಚಲೋ ಹಾಡ್ತಿ ಅಂತ ನಿನ್ನ ಕರ್ಸಿದ್ರ ನಮ್ಗ ಈ ಅಪವಾದಾ ಕೊಡ್ತಿಯೇನು? ನಮ್ಮ ಮನಿ ಮರ್ಯಾದಿ ತಗೀತಿಯೇನು? ಮರ್ಯಾದಿಗಿ ಅಂಜತಾಳಂತ ಇಕಿ. ಹೇಳಿ ಕೇಳಿ ನೀನs ಸೂಳಿ. ನಿನಗ್ಯಾವ ಮರ್ಯಾದಿ?” ಎಂದು ಊರ ಗೌಡತಿ ಹಾಡಿಕೆ ಗಂಗಮ್ಮನನ್ನೇ ಅಪಮಾನಿಸಿ ಕಳುಹಿಸಿದಳಂತೆ. ಬಹುತೇಕ ಮಹಿಳಾ ಹಾಡುಗಾರರು ಗಂಗಮ್ಮನಂತಹ ಅಪಮಾನಗಳನ್ನು ಎದುರಿಸಿದ್ದಾರೆ. ಹೀಗಾಗಿಯೇ ಅಂತರಂಗದ ವಿಷಯಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದರು.

ನಾನು ಅವರನ್ನ ತಲುಪಲು ನಡೆಸುವ ವಿಧಾನ ಪ್ರತಿ ಮಹಿಳಾ ಹಾಡುಗಾರರಿಗೂ ಅಚ್ಚರಿಯನ್ನು ಉಂಟುಮಾಡಿತ್ತು. “ಎಷ್ಟೋ ಜನ ಬಂದಾರ. ನಮ್ಮ ಕೂಟ (ಜೊತೆ) ಮಾತಾಡ್ಯಾರ. ಯಾರೂ ನಿಮ್ಮಂಗ ಮಾತಾಡಿಲ್ಲರಿ. ಹೆಸರು, ಜಾತಿ, ವಯಸ್ಸಾ ಕೇಳ್ತಿದ್ದರು. ಪ್ರಶಸ್ತಿ ಪತ್ರ ನೋಡತಿದ್ರು, ಸ್ಯಾಂಪಲ್ಲಿಗಿ ಒಂದೆರ್ಡು ಹಾಡಾ ಹಾಡಂತಿದ್ರು. ಎಲ್ಲೆಲ್ಲಿ ಪೋಗ್ರಾಂ (Program) ಕೊಟ್ಟೇರಿ, ನಿಮಗೆಷ್ಟು ಪಗಾರ ಸಿಗ್ತೈತಿ ಹೀಂಗೆಲ್ಲಾ ಪ್ರಶ್ನೆ ಮಾಡತಿದ್ರು. ನೀವು ಬ್ಯಾರೆನ ಕೇಳಾಕತ್ತಿರಲ್ಲಾ?” ನನ್ನನ್ನೇ ಪ್ರಶ್ನಿಸುತ್ತಿದ್ದರು. ಮಹಿಳಾ ಹಾಡುಗಾರರು ಆರಂಭದಲ್ಲಿ ನನ್ನ ಕುರಿತು ಅನುಮಾನಿಸಿದರೂ ನಂತರದಲ್ಲಿ ಆಪ್ತ ಗೆಳತಿಯಾಗಿ ಅಪ್ಪಿಕೊಂಡರು. ಆಕಸ್ಮಿಕವಾಗಿ ದೊರೆತ ತಾಯಿಯನ್ನು ತಬ್ಬಿಕೊಳ್ಳುವ ತಬ್ಬಲಿ ಮಕ್ಕಳಂತೆ ನನ್ನನ್ನು ತಬ್ಬಿಕೊಂಡರು. ಪುರುಷ ಹಾಡುಗಾರರು ಹಾಗಲ್ಲ; ಮನದ ಹೊಸ್ತಿಲಾಚೆ ನಿಲ್ಲಿಸಿ ಮಾತನಾಡಿದರು. ಪ್ರತಿ ಮಾತನ್ನು ತೂಗಿ, ಅಳೆದು ನೋಡಿಯೇ ಮಾತನಾಡುತ್ತಿದ್ದರು. ಕೆಲವು ಪ್ರಶ್ನೆಗಳು ಅವರಿಗೆ ತಲೆಹರಟೆ ಎನಿಸುತ್ತಿತ್ತೋ ಏನೋ? ಈ ಎಲ್ಲ ಸೂಕ್ಷ್ಮ ಸಂಗತಿಗಳನ್ನು ಮೀರಿ ಅವರೊಳಗೆ ಪ್ರವೇಶಿಸಿ ಪ್ರಸ್ತತ ಅಧ್ಯಯನ ರೂಪಿತವಾಗಿದೆ.

ಹರದೇಶಿ-ನಾಗೇಶಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಸ್ವಲ್ಪ ಮಟ್ಟಿಗಿನ ಅಧ್ಯಯನಗಳು ನಡೆದಿವೆ. ನಡೆದ ಅಧ್ಯಯನಗಳಲ್ಲಿ ಕೆಲವು ಹರದೇಶಿ-ನಾಗೇಶಿಯ ಚರಿತ್ರೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದರೆ; ಮತ್ತೆ ಕೆಲವು ಕವಿಗಳ ಮೂಲಕ ಹಾಡಿಕೆ ಕ್ಷೇತ್ರದ ವಿವರವನ್ನು ಕಟ್ಟಿಕೊಡುತ್ತದೆ. ಇನ್ನು ಕೆಲವು ಸಾಹಿತ್ಯವನ್ನು ಪರಗಣಿಸಿ ಅಧ್ಯಯನ ನಡೆಸಿವೆ. ಹೀಗೆ ನಡೆದ ಅಧ್ಯಯನಗಳಲ್ಲಿ ಕೆಲವು ನಾಥ ಪಂಥದ ನಾಗನಾಥ-ಗೋರಖನಾಥರ ಮೂಲಕ ಶಿವ-ಶಕ್ತಿಯ ಪಾರಮ್ಯವನ್ನು ಗುರುತಿಸಲು ಪ್ರಯತ್ನಿಸಿದರೆ; ಮತ್ತೆ ಕೆಲವು ಹರದೇಶಿ-ನಾಗೇಶಿಯು ಮರಾಠಿ ಮೂಲದ್ದೋ, ಕನ್ನಡ ಮೂಲದ್ದೊ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದರತ್ತ ಸಾಗುತ್ತವೆ. ಹರದೇಶಿ-ನಾಗೇಶಿ ಹಾಡುಗಳನ್ನು ರಚಿಸಿದ ಕವಿ ಪ್ರತಿಭೆಯನ್ನು ಕೇಂದ್ರವಾಗಿರಿಸಿಕೊಂಡು ಕೆಲವು ಅಧ್ಯಯನಗಳು ನಡೆದಿವೆ. ಇನ್ನು ಕೆಲವು ಹರದೇಶಿ-ನಾಗೇಶಿ ಹಾಡುಗಾರಿಕೆಯನ್ನು ‘ಕಲಾತ್ಮಕ’ ನೆಲೆಯಲ್ಲಿಯೇ ಅರ್ಥೈಸುತ್ತ ಸಾಗುತ್ತವೆ. ನಡೆದ ಅಧ್ಯಯನಗಳೆಲ್ಲವೂ ಹರದೇಶಿ-ನಾಗೇಶಿಯ ಕುರಿತ ಅಧ್ಯಯನ ಸಾಧ್ಯತೆಯನ್ನು ಹೇಳಿಕೊಟ್ಟಿವೆ. ಪ್ರಸ್ತುತ ಅಧ್ಯಯನ ನಡೆದ ಎಲ್ಲ ಅಧ್ಯಯನಗಳಿಗಿಂತ ಭಿನ್ನ. ಅಂಕಿ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಿ ನಡೆದ ತಳ ಸಮುದಾಯಗಳ ಅಧ್ಯಯನದ ಹಾಗೆ ಪ್ರಸ್ತುತ ಅಧ್ಯಯನವು ಸಮುದಾಯಗಳಿಗೂ ಸರಕಾರಕ್ಕೂ ಮಧ್ಯವರ್ತಿಯಾಗಿ ಕೆಲಸ ಮಾಡುವುದಿಲ್ಲ. ಹಾಡಿಕೆಯವರು ಬಯಸಿದ ಪಿಂಚಣಿ, ಪ್ರಶಸ್ತಿ, ಮನೆಗಳನ್ನು ಕೊಡಿಸಲು ಸಹಾಯವಾಗುವುದಿಲ್ಲ. ಕಲಾವಿದರಿಗೆ ಪಿಂಚಣಿ ಕೊಡಿಸುವುದಕ್ಕೆ, ಪ್ರಶಸ್ತಿ ಕೊಡಿಸುವುದಕ್ಕೆ, ಮನೆಯನ್ನು ಕೊಡಿಸಲು ಸಹಾಯವಾಗುವುದು ಅಧ್ಯಯನದ ಒಂದು ಉಪಯೋಗವಾಗಿರಬಹುದು. ಅಧ್ಯಯನದ ಉಪಯೋಗವನ್ನು ಯಾವ ನೆಲೆಯಲ್ಲಿ ನಿರ್ವಚಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಉಪಯೋಗದ ಅರ್ಥವಿನ್ಯಾಸಗಳು ಬಿಚ್ಚಿಕೊಳ್ಳುತ್ತವೆ. ಪಿಂಚಣಿ ಮೊದಲಾದವುಗಳನ್ನು ಪರಿಹಾರಗಳೆಂದು, ಪರ್ಯಾಯಗಳೆಂದು ಅಧ್ಯಯನಕಾರರು ಅಧ್ಯಯನಕ್ಕೊಳಗಾದವರಿಗೆ ನಂಬಿಸುತ್ತಾರೆ. ಹೀಗಾಗಿ ಶೋಷಿತರು ತಕ್ಷಣದ ಉಪಯೋಗವನ್ನು, ಫಲಗಳನ್ನು ಅಪೇಕ್ಷಿಸುತ್ತಾರೆ. ಬಹುತೇಕ ಅಧ್ಯಯನಕಾರರ ಅಪೇಕ್ಷೆ, ಕಷ್ಟದಲ್ಲಿರುವ ಸಮುದಾಯದವರ ಅಪೇಕ್ಷೆ ಸ್ಥೂಲವಾಗಿ ಭೌತಿಕ ನೆಲೆಯಲ್ಲಿಯೇ ಇರುತ್ತದೆ. ಇದು ತಪ್ಪೆಂದು ಪ್ರಸ್ತುತ ಅಧ್ಯಯನ ಹೇಳುತ್ತಿಲ್ಲ. ಸರಕಾರವಾಗಿರಬಹುದು, ದಮನಿತ ಸಮುದಾಯಗಳಾಗಿರಬಹುದು, ಬಹುತೇಕ ಅಧ್ಯಯನಕಾರರಾಗಿರಬಹುದು – ಸಮುದಾಯಗಳ ಕುರಿತು ಪರಿಹಾರಗಳಿರಬೇಕೆಂದು ಬಯಸುತ್ತಾರೆ; ಅವುಗಳನ್ನು ದಮನಿತ ಸಮುದಾಯದವರ ಪರ್ಯಾಯಗಳೆಂದು ಭಾವಿಸುತ್ತಾರೆ. ಯಾವುದನ್ನು ಪರಿಹಾರ, ಪರ್ಯಾಯಗಳೆಂದು ಭಾವಿಸಲಾಗಿರುತ್ತದೆಯೋ ಅವುಗಳ ರೆಡಿಮೇಡ್ ಪರಿಹಾರಗಳಾಗಿರುತ್ತವೆ. ಅವುಗಳು ದಮನಿತರ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡಿವೆ ಎಂದು ಹೇಳಲಾಗುವುದಿಲ್ಲ ಅಥವಾ ಅರ್ಥೈಸಿಕೊಂಡಿದ್ದರೂ ಕೇವಲ ಭೌತಿಕ ನೆಲೆಯಲ್ಲಿ ಅರ್ಥೈಸಿಕೊಂಡಿರುತ್ತವೆ. ಪರಿಹಾರಗಳನ್ನು, ಪರ್ಯಾಯಗಳನ್ನು ಗ್ರಹಿಸುವ ವೈಚಾರಿಕ ಆಕೃತಿಯಲ್ಲಿಯೇ ಸಮಸ್ಯೆಯಿದೆ. ‘ಪರಿಹಾರ’ ಎನ್ನುವುದು ಪದದ ಹಾಗೆ ಸರಳ ಅರ್ಥವನ್ನು ಹೊಂದಿರುವುದಿಲ್ಲ. ‘ಪರಿಹಾರ’ ಎನ್ನುವುದರಲ್ಲಿ ಅರ್ಥೈಸಲಾಗದ ಸಂಕೀರ್ಣ ಒಳವಿನ್ಯಾಸಗಳಿವೆ. ಅಧ್ಯಯನಗಳು ಸೂಚಿಸುವ ಭೌತಿಕ ಪರಿಹಾರಗಳನ್ನು ಸರಕಾರವು ಕೊಡುವುದಿಲ್ಲ; ಒಂದು ವೇಳೆ ಕೊಟ್ಟರೂ ಅವರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳೇನೂ ಆಗುವುದಿಲ್ಲ. ಸರಕಾರ ನೀಡಿದ ಪರಿಹಾರವು ದಮನಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದಿಲ್ಲ. ಹಾಗಿದ್ದರೆ ‘ಪರಿಹಾರ’ ಎಂದರೇನು? ಯಾರಿಗಾಗಿ ಪರಿಹಾರ ಸೂಚಿಸುತ್ತೇವೆಯೋ ಅವರ ಬದುಕಿನಲ್ಲಿ ಸ್ವಲ್ಪಮಟ್ಟಿಗಾದರೂ ನಿರೀಕ್ಷಿತ ಬದಲಾವಣೆಯನ್ನು ತಂದಿರಬೇಕು. ಸಮುದಾಯದೊಳಗಿನ ಯಾಂತ್ರಿಕ ಅಪೇಕ್ಷೆಗಳನ್ನು ಛಿದ್ರಗೊಳಿಸಲು ಪ್ರಯತ್ನಿಸಬೇಕು. ಇದೆಲ್ಲ ಸಾಧ್ಯವಾಗುವುದು ಸಮುದಾಯದ ಒಳ ತೋಟಿಗಳನ್ನು, ಜಾತಿ ಶ್ರೇಣೀಕರಣದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದಾಗ. ದಮನಿತ ಸಮುದಾಯಗಳನ್ನು ಅದರಲ್ಲಿಯೂ ಕತ್ತಲಲ್ಲಿ ಕರಗಿ ಹೋದ ‘ದೇವದಾಸಿ’ ಮಹಿಳೆಯರನ್ನು ಹಾಗೂ ಅವರು ಪರ್ಯಾಯವೆಂದು ನಂಬಿಕೊಂಡ ಕಲೆಯನ್ನು ಹೇಗೆ ಗ್ರಹಿಸಬೇಕು; ಇಂತಹ ವ್ಯವಸ್ಥೆಯನ್ನು ಪೋಷಿಸುತ್ತಿರುವ ಸಮಾಜವನ್ನು ಹೇಗೆ ಗ್ರಹಿಸಬೇಕು; ಹಾಡಿಕೆಯನ್ನು ಕಲೆಯೆಂದು ಪರಿಗಣಿಸಬೇಕೆ; ಮಹಿಳಾ ಹಾಡುಗಾರರು, ಪುರುಷ ಹಾಡುಗಾರರು ಹಾಡಿಕೆಯಂತಹ ಒಂದೇ ವೃತ್ತಿಯಲ್ಲಿದ್ದರೂ ಅವರ ಸಮಸ್ಯೆಗಳು ಭಿನ್ನವಾಗಿಯೇ; ಭಿನ್ನವಾಗಿದ್ದರೆ ಯಾಕೆ ಮತ್ತು ಹೇಗೆ ಭಿನ್ನವಾಗಿರುತ್ತವೆ; ಈ ಕಲೆಯ ಕುರಿತ ಸ್ಥಾಪಿತ ಧೋರಣೆಗಳೇನು; ಅದರ ಸ್ವರೂಪ ಹೇಗಿದೆ ಮೊದಲಾದ ಸಂಕೀರ್ಣತೆಗಳನ್ನು ಜಾತಿ ಶ್ರೇಣೀಕರಣಕ್ಕೆ ಅನುಗುಣವಾಗಿರುವ ಲಿಂಗ ಶ್ರೇಣೀಕರಣಗಳ ಮೂಲಕ; ಆಯಾ ಜಾತಿಗಳಲ್ಲಿಯೇ ಇರುವ ಲಿಂಗ ಶ್ರೇಣೀಕರಣಗಳ ಮೂಲಕ; ಹಾಡಿಕೆ ವೃತ್ತಿಯಲ್ಲಿರುವ ಲಿಂಗ ಶ್ರೇಣೀಕರಣಗಳ ಮೂಲಕ ಅರ್ಥೈಸಿಕೊಳ್ಳಬೇಕಿದೆ. ದಮನಿತ ಸಮುದಾಯಗಳ ಅದರಲ್ಲಿಯೂ ಕಲಾವಂತರು ಎಂದು ಗುರುತಿಸಿಕೊಳ್ಳಬಯಸುವ ಹಾಡಿಕೆ ಮಹಿಳೆಯರ ಜೀವನ ಸಂಕೀರ್ಣತೆಯನ್ನು, ಸಮಸ್ಯೆಯ ಸ್ವರೂಪಗಳನ್ನು, ಹಾಗೂ ಅದಕ್ಕಿರುವ ಕಾರಣಗಳನ್ನು ಗುರುತಿಸುವ ಪ್ರಯತ್ನವನ್ನು ಪ್ರಸ್ತತ ಅಧ್ಯಯನ ಮಾಡಿದೆ. ಪ್ರಸ್ತತ ಅಧ್ಯಯನವು ಎರಡು ಉಪಯೋಗ ಅಥವಾ ಪರಿಹಾರಗಳ ಕುರಿತು ಆಸಕ್ತಿ ವಹಿಸಿದೆ. ಒಂದು, ಕ್ಷೇತ್ರಕಾರ್ಯಾಧ್ಯಯನದ ಸಂದರ್ಭದಲ್ಲಿ ಅಧ್ಯಯನಕ್ಕೊಳಗಾಗುವವರ ಆಲೋಚನಾ ಕ್ರಮವನ್ನು ಬದಲಾಯಿಸಲು ಹಾಗೂ ರೂಪಿಸಲು ಪ್ರಯತ್ನಿಸಿದೆ. ಎರಡು, ಓದುಗರ ಚಿಂತನಾ ಕ್ರಮವನ್ನು ಬದಲಾಯಿಸಲು ಹಾಗೂ ರೂಪಿಸಲು ಪ್ರಯತ್ನಿಸಿದೆ. ಇವೆರಡು ಪ್ರಸ್ತತ ಅಧ್ಯಯನದ ನಿರೀಕ್ಷಿತ ಉಪಯೋಗವೆಂದು ಭಾವಿಸಲಾಗಿದೆ. ಪಿಂಚಣಿಯನ್ನು ಕೊಡಿಸುವುದು ಪ್ರಶಸ್ತಿಯನ್ನು ಕೊಡಿಸುವುದು ಪರಿಹಾರವೆಂದು, ಪರ್ಯಾಯವೆಂದು ಪ್ರಸ್ತುತ ಅಧ್ಯಯನವು ಭಾವಿಸಿಲ್ಲ. ಈ ಬಗೆಯ ಪರಿಹಾರಗಳು ಶೋಷಣೆಯನ್ನು ಮತ್ತಷ್ಟು ಸಮರ್ಥಿಸಬಹುದು; ಶೋಷಿತರನ್ನು ಮತ್ತಷ್ಟು ಆಳವಾದ ಭ್ರಮಾ ಲೋಕಕ್ಕೆ ತಳ್ಳಬಹುದು; ತಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಎನ್ನುವ ಅರಿವನ್ನೇ ಪಿಂಚಣಿ, ಪ್ರಶಸ್ತಿಗಳು ನುಂಗಿಹಾಕಬಹುದು.

ಹರದೇಶಿ-ನಾಗೇಶಿಯ ಮೂಲಕ ಚರಿತ್ರೆಯನ್ನು, ಶಿವ-ಶಕ್ತಿಯರ ಪಾರಮ್ಯವನ್ನು, ಕವಿಯ ಪ್ರತಿಭೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಪ್ರಸ್ತುತ ಅಧ್ಯಯನ ಮಾಡಿಲ್ಲ. ಈ ವಿಷಯಗಳು ಪ್ರತ್ಯೇಕ ಅಧ್ಯಯನವನ್ನೇ ಬಯಸುತ್ತವೆ. ಹಾಡಿಕೆ ಕ್ಷೇತ್ರದಲ್ಲಿ ಸಾಹಿತ್ಯವಿದೆ; ಹಾಡುಗಾರಿಕೆಯಿದೆ; ಅಂದರೆ ಇಲ್ಲಿ ಕವಿಗಳಿದ್ದಾರೆ; ಕಲಾವಿದರಿದ್ದಾರೆ. ಇದಕ್ಕೆ ಸ್ಥಳೀಯ ಮಾರುಕಟ್ಟೆಯಿದೆ. ಈ ಸ್ಥಳೀಯ ಮಾರುಕಟ್ಟೆಯ ಮೂಲಕ ಕವಿಗಳಿಗೆ, ಕಲಾವಿದರಿಗೆ ಆದಾಯವಿದೆ. ಕವಿಗಳು ಹಾಗೂ ಕಲಾವಿದರು; ಸ್ಥಳೀಯ ಮಾರುಕಟ್ಟೆ; ಕವಿಗಳಿಗೆ ಹಾಗೂ ಕಲಾವಿದರಿಗೆ ಬರುವ ಆದಾಯ-ಹೀಗೆ ಮೂರು ವಿಷಯಗಳನ್ನು ಪ್ರಸ್ತುತ ಅಧ್ಯಯನವು ಪ್ರಧಾನವಾಗಿ ಪರಿಗಣಿಸಿದೆ. ಅಧ್ಯಯನ ಸಂದರ್ಭದಲ್ಲಿ ಅಗತ್ಯವೆನಿಸಿದಲ್ಲಿ ಚರಿತ್ರೆಗೆ ಹಿಂದುರಿಗಿದರೂ, ವರ್ತಮಾನಕ್ಕೆ ಹೆಚ್ಚು ಒತ್ತುಕೊಟ್ಟಿದೆ. ಚರಿತ್ರೆಯಲ್ಲಿ ವರ್ತಮಾನವನ್ನು ಅಥವಾ ವರ್ತಮಾನದಲ್ಲಿ ಚರಿತ್ರೆಯನ್ನು ರೂಪಿಸುವ ಪ್ರಯತ್ನವನ್ನು ಪ್ರಸ್ತುತ ಮಾಡಿದೆ.

ಕ್ಷೇತ್ರಕಾರ್ಯಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋದಾಗ ಹರದೇಶಿ ಹಾಡುಗಾರರು ಎಲ್ಲಿ, ನಾಗೇಶಿ ಹಾಡುಗಾರರು ಎಲ್ಲಿ ಎಂದು ಪ್ರಶ್ನಿಸಿದಾಗ, ಹಾಗೆಂದರೇನು ಎಂದು ಜನರು ನನಗೆ ಮರುಪ್ರಶ್ನೆ ಹಾಕುತ್ತಿದ್ದರು. ಹಾಡಿಕೆಯವರನ್ನೇ ನೀವು ಹರದೇಶಿ ಹಾಡ್ತಿರಾ, ನಾಗೇಶಿ ಹಾಡ್ತಿರಾ ಎಂದು ಪ್ರಶ್ನಿಸಿದಾಗ ಕೆಲವರು ‘ಏಯ್‌ನಾವು ಅಂಥಾ ಹಾಡಾ ಹಾಡುದಿಲ್ಲರಿ’ ಎಂದರೆ ಮತ್ತೆ ಕೆಲವರು ‘ಅಂಥಾವು ನಮ್ಮ ಜನಾ ಹಾಡ್ತಾರೇನ್ರಿ’ ಎಂದು ನನ್ನನ್ನೇ ಪ್ರಶ್ನಿಸುತ್ತಿದ್ದರು. ಹರದೇಶಿ-ನಾಗೇಶಿ ಹಾಡುಗಳನ್ನು ಬರೆಯುವ ಕವಿಗಳು, ಹರದೇಶಿ ಹಾಡುಗಾರನಾಧ ಕಾಶಿನಾಥ ಚೌವ್ಹಾನು ಮಾತ್ರ ಹರದೇಶಿ-ನಾಗೇಶಿ ಪದಗಳನ್ನು ಬಳಸಿದರು. ನಾನು ಅವರೊಂದಿಗೆ ಮಾತನಾಡುವಾಗ ಹರದೇಶಿ-ನಾಗೇಶಿ ಪದಗಳನ್ನು ಬಳಸಿದ್ದು ಕಾರಣವಾಗಿರಬೇಕು. ಅವರಷ್ಟಕ್ಕೆ ಅವರು ಹಾಡಿಕೆಯ ಕುರಿತು ವಿವರಣೆ ನೀಡುವಾಗ ಹೆಣ್ಣ್ಹೆಚ್ಚು-ಗಂಡ್ಹೆಚ್ಚು ಪದಗಳು ಎನ್ನುವುದನ್ನು ಬಹಳ ಸಹಜವಾಗಿ ಬಳಸುತ್ತಿದ್ದರು. ಆದರೂ ಅವರಿಗೆ ಇತರ ಹಾಡುಗಾರರಂತೆ, ಜನ ಸಮುದಾಯದವರಂತೆ ಹರದೇಶಿ-ನಾಗೇಶಿ ಪದವು ಅಪರಿಚಿತವಾಗಿಯೇನೂ ಇರಲಿಲ್ಲ. ಜನ ಸಾಮಾನ್ಯರು, ಕಲಾವಿದರು ಹಾಗೂ ಕವಿಗಳು ಹೆಚ್ಚಾಗಿ ಬಳಸುವ ಪದಗಳೆಂದರೆ ಹಾಡಿಕೆ, ಹಾಡಕಿ, ಶಾವರಕಿ, ವಾದಾ-ಬೀದಿ ಹಾಡ್ಕಿ, ಗಂಡ್ಹೆಚ್ಚು-ಹೆಣ್ಣ್ಹೆಚ್ಚು ಹಾಡು, ಲಾವಣಿ ದಪ್ಪಿನ ಪದಗಳು ದಪ್ಪಿನ ಹಾಡುಗಳು, ಗೀಗೀ ಪದಗಳು, ಗೀಗೀ ಹಾಡುಗಳು. ಜನ ಸಮುದಾಯಗಳಲ್ಲಿ ಇವುಗಳಲ್ಲಿಯೇ ಅತಿ ಹೆಚ್ಚು ಪ್ರಚಲಿತವಾಗಿರುವ ಪದಗಳೆಂದರೆ ಹಾಡಿಕೆ, ಹಾಡ್ಕಿ ಹಾಗೂ ಹಾಡಕಿ ಈ ಮೂರು ಪದಗಳನ್ನು ವಕ್ತೃಗಳು ಹಾಡುಗಾರಿಕೆ ಎನ್ನುವ ಅರ್ಥದಲ್ಲಿಯೇ ಬಳಸಿದ್ದಾರೆ. ಪ್ರಸ್ತುತ ಅಧ್ಯಯನದಲ್ಲಿ ‘ಹಾಡುಗಾರಿಕೆ’ ಎನ್ನುವ ಅರ್ಥದಲ್ಲಿಯೇ ಹಾಡಿಕೆ ಪದವನ್ನು ಪರಿಭಾಷೆಯಾಗಿ ಬಳಸಲಾಗಿದೆ. ಇವುಗಳ ಜೊತೆಯಲ್ಲಿ ಜನ ಬಳಕೆಯಲ್ಲಿರುವ ದಪ್ಪಿನ ಪದಗಳು, ದಪ್ಪಿನ ಹಾಡುಗಳು, ಗೀಗೀ ಪದಗಳು, ಗೀಗೀ ಹಾಡುಗಳು, ಹರದೇಶಿ-ನಾಗೇಶಿ, ಲಾವಣಿ ಈ ಪದಗಳನ್ನು ಕೂಡ ಹಾಡಿಕೆಗೆ ಪರ್ಯಾಯ ಪದಗಳಾಗಿ ಅಧ್ಯಯನದಲ್ಲಿ ಬಳಸಲಾಗಿದೆ. ವಕ್ತೃಗಳು ನೀಡಿದ ವಿವರಗಳನ್ನು ಅವರ ಭಾಷೆಯಲ್ಲಿಯೇ ಹಿಡಿದಿಡುವಾಗ ಅವರು ಬಳಸಿದಂತೆ ಹಾಡಕಿ, ಹಾಡಿಕೆ, ಹಾಡ್ಕಿ, ಗೀಗೀ ಪದಗಳು, ಗೀಗೀ ಹಾಡುಗಳು, ದಪ್ಪಿನ ಪದಗಳು ಹಾಗೂ ದಪ್ಪಿನ ಹಾಡುಗಳನ್ನು ಉಳಿಸಿಕೊಳ್ಳಲಾಗಿದೆ. ಹಾಡಿಕೆ ಅನಂತ ಸಾಧ್ಯತೆಗಳ ಚಲನಶೀಲತೆಯನ್ನು ಹೊಂದಿದೆ. ಎಷ್ಟೇ ಎಚ್ಚರಿಕೆಯಿಂದ ಹಾಡಿಕೆಯ ಹಾಗೂ ಹಾಡುಗಾರರ ಜೀವನ ಚಲನಶೀಲತೆಯನ್ನು ಅಕ್ಷರದಲ್ಲಿ ಹಿಡಿದಿಡಲು ಪ್ರಯತ್ನಿಸಿದರೂ, ಅಕ್ಷರದಲ್ಲಿ ದಕ್ಕಿದ್ದು ಕೆಲವಾದರೆ, ದಕ್ಕದೇ ಹೋದದ್ದು ಅನಂತವಾಗಿರುತ್ತವೆ. ಅಕ್ಷರದಲ್ಲಿ ದಕ್ಕಿದಂತವುಗಳು ಜೀವನದಲ್ಲಿ ಎದುರಾಗುವ ಸಂದರ್ಭಗಳಿಗೆ ಅನುಸಾರವಾಗಿ ಬದಲಾಗುತ್ತಲೇ ಇರುತ್ತವೆ. ಹಾಡಿಕೆಯ ಹಾಗೂ ಹಾಡುಗಾರರ ಜೀವಂತ ಕಥನವು ಅಕ್ಷರ ಸಂಸ್ಕೃತಿಗೆ ಒಳಗಾದಾಗ ಅನಂತ ಸಾಧ್ಯತೆಗಳ ಚಲನಶೀಲತೆಯನ್ನು ಕಳೆದುಕೊಂಡು ಪಠ್ಯವಾಗಿ ಬಿಡುತ್ತವೆ. ಹೀಗಾಗಿಯೇ ‘ಹಾಡಿಕೆ’ ಪದವನ್ನು ಕೃತಿಯ ಶೀರ್ಷಿಕೆಯಲ್ಲಿ ಕೈ ಬಿಡಲಾಗಿದೆ. ಹಾಡಿಕೆಯು ಅಕ್ಷರ ಸಂಸ್ಕೃತಿಗೆ ಒಳಗಾಗುವುದನ್ನು ಅಥವಾ ಪಠ್ಯವಾಗುವುದನ್ನು ಹರದೇಶಿ-ನಾಗೇಶಿ ಎಂದು ಗುರುತಿಸಲಾಗಿದೆ. ಈ ಅರ್ಥದಲ್ಲಿಯೇ ಹರದೇಶಿ-ನಾಗೇಶಿ ಪದಗಳನ್ನು ಕೃತಿಯ ಶೀರ್ಷಿಕೆಯಲ್ಲಿ ಬಳಸಲಾಗಿದೆ.

* * *