“ದಪ್ಪ ಬಾರಿಸುವ ಹೆಣ್ಣು ಮಕ್ಕಳು, ಚೌಡಿಕಿ ಬಾರಿಸುವ ಹೆಣ್ಣ ಮಕ್ಕಳು ಮದುವೆಯಾಗಾಕ ಬರೂದಿಲ್ಲ. ಮದುವಿಯಾದ್ರ ಯಲ್ಲಮ್ಮ ಕಾಡತಾಳು. ಆಕಿ ಹೆಸರ್ಲಿ ಸೂಳೆತನ ಮಾಡಬಾರದು. ಆಕೇನು ಸೂಳಿತನ ಮಾಡಂತ ಹೇಳ್ತಾಳೇನು? ಆಕಿ ಹೆಸರ್ಲಿ ಕಲಾದಾಗ ಬದುಕ್ತೀವಿ” ಎಂದು ಪಾತಾಳ ಮಾಯವ್ವ ಹಾಗೂ ಕಂಬಾಗಿ ಹನುಮವ್ವ ಹೇಳಿದರೆ, ಮದನ ಹಳ್ಳಿ ಭೀಮಬಾಯಿ ಹೇಳಿದ್ದು ಹೀಗೆ: “ನಮ್ಮದು ವಾದಾ ಬೀದಿ ಹಾಡ್ಕಿ. ನಮ್ಮವರ ಚೌಡಕಿನೂ ಹಾಡ್ತಾರ. ಕೈಯಾಗ ದಪ್ಪು ಬಂತಂದ್ರ, ಚೌಡಕಿ ಬಂತಂದ್ರ ಮದುವೆಯಾಗಂಗಿಲ್ಲ. ಗಂಡಂದಿರು ಅಷ್ಟ ಜನಾ ಪಬ್ಲಿಕ್ನಾಗ ಹ್ಯಾಂಗ ಹಾಡಗೊಡತಾರು? ನಾವು ಹಾಡು ಹಕ್ಕಿ ಇದ್ದಂಗ. ಹಾಡ್ಕಿ ಇದ್ದಲ್ಲಿಗಿ ಹಾರಕೋಂತ ಹೋಗೋರು. ಹಾಡ್ಕಿ ಸುಮ್ನ ಬರತದೇನು? ಅದಕ್ಕ ಹಗಲಿ ರಾತ್ರಿ ತಾಲೀಮು ಮಾಡಬೇಕಾಗುತೈತಿ. ತಾಲೀಮು ಒಬ್ಬರ ಮಾಡಾಕ ಬರಲ್ಲ. ಇಡೀ ಮ್ಯಾಳಾನ ತಾಲೀಮು ಮಾಡಬೇಕಾಗತೈತಿ. ಹಿಮ್ಮೇಳದವರು ಗಣಸೂರು ಇರತಾರು. ಇವರ ಕೂಡಾನs ತಾಲೀಮು ಮಾಡಬೇಕಾಗತೈತಿ. ಇದನ್ನೆಲ್ಲಾ ಗಂಡ ಅನ್ನುವನು ಹ್ಯಾಂಗ ಸಹಸ್ಕೋತಾನು? ಅಡಗಿ ಮಾಡಿ ಹಾಕು, ಮಕ್ಳು ನೋಡ್ಕೋ ಅಂತಾನು. ಹಿಂಗಾಗಿ ಮದ್ವಿಯಾದವರು ಈ ಉದ್ಯೋಗ ಮಾಡುವಂಗಿಲ್ಲ”.

ಮೇಲಿನ ಈ ಎರಡೂ ಹೇಳಿಕೆಗಳು ಕಲೆಯನ್ನು ಹಾಗೂ ಮದುವೆಯನ್ನು ಬೇರ್ಪಡಿಸಿ ನೋಡುತ್ತವೆ. ಮದುವೆಯನ್ನು ಹಂಗಾಗಿ, ಬಂಧನವಾಗಿ ನೋಡಿದರೆ; ಕಲೆಯನ್ನು ಮುಕ್ತವಾಗಿ, ಬಿಡುಗಡೆಯಾಗಿ ಹಾಗೂ ಸ್ವಾತಂತ್ರ್ಯದ ನೆಲೆಯಲ್ಲಿಟ್ಟು ನೋಡುತ್ತವೆ. ‘ಕಲೆ’ ಎನ್ನುವುದು ಈ ಕಲಾವಿದೆಯರಿಗೆ ಗೌರವ ಹಾಗೂ ಸ್ವಾತಂತ್ರ್ಯದ ದಾರಿಯಾಗಿದೆ ಎನ್ನುವ ಅರ್ಥವನ್ನೇ ಎರಡೂ ಹೇಳಿಕೆಗಳು ನೀಡುತ್ತವೆ. ಪಾತರದವರ ಅಧ್ಯಯನ ಸಂದರ್ಭದಲ್ಲಿಯೂ ಹಾಡಿಕೆಯು ಪಾತಾಳ ಮಾಯವ್ವ, ಕಂಬಾಗಿ ಹನುಮವ್ವ ಮೊದಲಾದವರು ಹೇಳಿದ ಅಭಿಪ್ರಾಯಗಳೇ ಎದುರಾಗಿದ್ದವು.

ನಮ್ಮ ಸಮಾಜ ಯಾವುದನ್ನು ‘ಜ್ಞಾನ’ ಎಂದು ಗುರುತಿಸಿ ಗೌರವಿಸುತ್ತದೆಯೋ ಅದನ್ನು ಕಲಿಯಲು ಹಾಗೂ ಅದರೊಳಗೆ ನೈಪುಣ್ಯತೆ ಸಾಧಿಸಲು ಸಮಯ ಮತ್ತು ಸ್ಥಳ ಎರಡರ ಅಗತ್ಯವಿದೆ. ಮದುವೆಯ ಚೌಕಟ್ಟಿನೊಳಗಡೆ ಬರುವ ಮಹಿಳೆಯರಿಗೆ ಅವರದ್ದೇ ಆದ ಸಮಯ ಮತ್ತು ಸ್ಥಳ ಎರಡೂ ಇರುವುದಿಲ್ಲ. ‘ಖಾಸಗಿ’ ಎಂದು ನಿರ್ವಚಿಸಿಕೊಂಡ ಪಿತೃ ಪ್ರಧಾನ ಕುಟುಂಬದಲ್ಲಿನ ಮಹಿಳೆಯರಿಗೆ ಖಾಸಗಿತನ ಎನ್ನುವುದು ಇರುವುದೇ ಇಲ್ಲ. ಯಾವುದೇ ಕಲೆಯಲ್ಲಿ ಸಾಧನೆ ಮಾಡಲು ಸಮಯ ಮತ್ತು ಸ್ಥಳ ಎರಡೂ ಅಗತ್ಯವಾಗಿರುತ್ತದೆ. ಕಲಾವಿದೆಯರ ಪ್ರಕಾರ ಮದುವೆ ಎನ್ನುವುದು ಮಹಿಳೆಯ ಸಮಯ ಮತ್ತು ಸ್ಥಳ ಎರಡನ್ನೂ ಕಿತ್ತುಕೊಳ್ಳುತ್ತದೆ. ಕಲಾವಿದೆಯರ ಈ ನಿಲುವು ಅವರವರ ವ್ಯಕ್ತಿ ಮೂಲದಿಂದ ಬಂದದ್ದಲ್ಲ; ಸಮಾಜ ಮೂಲದಿಂದಲೇ ಬಂದದ್ದು. ಮದುವೆಯ ಚೌಕಟ್ಟಿನಲ್ಲಿರುವ ಬಹುತೇಕ ಮಹಿಳೆಯರಿಗೆ ಸಾಮಾಜಿಕ ಚಹರೆಯಿಲ್ಲ. ಮದುವೆ ಎನ್ನುವ ಚಿಪ್ಪು ಮಹಿಳೆಯರನ್ನು ತನ್ನೊಳಗೆ ಸೆಳೆದುಕೊಂಡು ಅಸ್ತಿತ್ವ ರಹಿತಳನ್ನಾಗಿ, ಚಹರೆ ರಹಿತಳನ್ನಾಗಿ ಮಾಡುತ್ತದೆ ಎನ್ನುವ ಸಂದೇಶ ಸಮಾಜ ರವಾನಿಸಿಬಿಟ್ಟಿದೆ. ಸಮಾಜವು ರವಾನಿಸಿದ ಈ ಸಂದೇಶದಿಂದಾಗಿಯೇ ಚೌಡಕಿ ಬಾರಿಸುವವರು, ಹಾಡಿಕೆಯವರು, ಪಾತರದವರು ಮದುವೆಯಾಗಿಲ್ಲ ಎನ್ನುವ ಸರಳ ನಿರ್ಧಾರಕ್ಕೆ ಬರಬಾರದು. ಮದುವೆಯಾಗುವುದು ಇಲ್ಲವೆ ‘ಜೋಗತಿ’ಯರಾಗುವುದು, ಪಾತರದವರಾಗುವುದು ಇವರ ಆಯ್ಕೆಯಾಗಿರುವುದಿಲ್ಲ; ಅಥವಾ ಎಲ್ಲ ಮಹಿಳೆಯರ ಆಯ್ಕೆಯಾಗಿರುವುದಿಲ್ಲ. ಕೆಲವೇ ಕೆಲವು ಸೀಮಿತ ಕೆಳಜಾತಿಯ ಹಾಗೂ ಕೆಳವರ್ಗದ ಮಹಿಳೆಯರು ದೇವರಿಗೆ ಬಿಡುವ ಸಂಪ್ರದಾಯಕ್ಕೆ ಒಳಗಾಗುತ್ತಾರೆ. ‘ಪಾತರದವರು’, ‘ಜೋಗತಿಯರು’ ಈ ಮಹಿಳೆಯರಾರೂ ಕಲಾ ಸಾಧನೆಯ ಅಪೇಕ್ಷೆಗಾಗಿಯೇ ‘ಜೋಗತಿ’ಯರಾಗಿಲ್ಲ; ಪಾತರದವರಾಗಿಲ್ಲ. ಕಲೆಯ ಹೆಸರಿನಲ್ಲಿ ಅವರನ್ನು ‘ಜೋಗತಿ’ಯರನ್ನಾಗಿಸಿದೆ; ಪಾತರದವರನ್ನಾಗಿಸಿದೆ. ತಮ್ಮ ಜೀವನದ ಹಗಲು-ರಾತ್ರಿಯ ಬಹುತೇಕ ಸಮಯವನ್ನು ಕಲೆಗಾಗಿಯೇ ಮೀಸಲಿರಿಸಿ ಅದಕ್ಕಾಗಿಯೇ ಜೀವ ತೇಯ್ದ ಇವರು ತಮ್ಮನ್ನು ಕಲಾಕಾರರೆಂದೇ ಗುರುತಿಸಿಕೊಳ್ಳಲು ಅಪೇಕ್ಷಿಸುತ್ತಾರೆ; ಹಪ-ಹಪಿಸುತ್ತಾರೆ. ಆದರೆ ಕಲಾಕಾರರೆಂದು ಪ್ರದರ್ಶನಕ್ಕೆ ಕರೆಯುವ ಹಾಗೂ ಅವರ ಪ್ರದರ್ಶನವನ್ನು ಕಲೆಯೆಂದು ನೋಡುವ ಪ್ರೇಕ್ಷಕ ಸಮುದಾಯವೇ ಅವರನ್ನು ‘ದೇವದಾಸಿ’ಯೆಂದು ಕರೆಯುತ್ತದೆ. ಹೀಗಾಗಿ ಈ ಕಲಾಕಾರರು ನೂರಾರು ಮಾನಸಿಕ ಹಾಗೂ ದೈಹಿಕ ಕಿರಿ-ಕಿರಿಗಳನ್ನು ಅನುಭವಿಸುತ್ತಾರೆ. ಮುಖ್ಯವಾಗಿ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಎದುರಿಸುವ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಸಾಮಾಜಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳೆಂದು ಎರಡು ನೆಲೆಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ.

ಸಾಮಾಜಿಕ ಸಮಸ್ಯೆಗಳು

ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಎದುರಿಸಿದ ಸಾಮಾಜಿಕ ಸಮಸ್ಯೆಗಳನ್ನು ಒಟ್ಟು ಮೂರು ನೆಲೆಗಳಲ್ಲಿ ಗುರುತಿಸಲಾಗಿದೆ. ಅವುಗಳೆಂದರೆ ಭಾವನಾತ್ಮಕ ದೌರ್ಜನ್ಯಗಳು, ಲೈಂಗಿಕ ದೌರ್ಜನ್ಯಗಳು ಹಾಗಗೂ ಬೌದ್ಧಿಕ ದೌರ್ಜನ್ಯಗಳು. ಈ ಮೂರು ಬಗೆಯ ದೌರ್ಜನ್ಯಗಳ ಸ್ವರೂಪಗಳನ್ನು ವಕ್ತೃಗಳ ನಿರೂಪಣೆಗಳೊಂದಿಗೆ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಲೈಂಗಿಕ ದೌರ್ಜನ್ಯಗಳಲ್ಲಿ ಮತ್ತೆ ಎರಡು ಒಳ ವಿಂಗಡಣೆಗಳನ್ನು ಮಾಡಿಕೊಳ್ಳಲಾಗಿದೆ: ೧. ರಂಗದ ಮೇಲಿನವು ೨. ರಂಗದ ಹಿಂದಿನವು. ರಂಗದ ಮೇಲೆ ಸನ್ಮಾನದ ಹೆಸರಿನಲ್ಲಿ ಸಾರ್ವಜನಿಕರ ಎದುರಿನಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ರಂಗದ ಮೇಲಿನವು ಎಂದು ಗುರುತಿಸಿಕೊಂಡರೆ, ತೆರೆಯ ಹಿಂದೆ ನಡೆಯುವ ಲೈಂಗಿಕ ಹಲ್ಲೆಗಳನ್ನು ರಂಗದ ಹಿಂದನವು ಎಂದು ಗುರುತಿಸಲಾಗಿದೆ. ಹಾಗೆ ನೋಡಿದರೆ ಮಹಿಳಾ ಹಾಡುಗಾರರ ಮೇಲಿನ ದೌರ್ಜನ್ಯಗಳು ಬಿಡಸಲಾರದಷ್ಟು ಒಂದರೊಳಗೊಂದು ಮಿಳಿತಗೊಂಡಿವೆ. ಅಧ್ಯಯನದ ಅನುಕೂಲಕ್ಕಾಗಿ ಹಾಗೂ ಶೋಷಣೆಯ ಸೂಕ್ಷ್ಮ ಸ್ತರಗಳನ್ನು ಶೋಧಿಸುವ ಉದ್ದೇಶಕ್ಕಾಗಿ ಮಹಿಳಾ ಹಾಡುಗಾರರು ಎದುರಿಸುವ ಕ್ರೌರ್ಯಗಳನ್ನು ಮೇಲೆ ಹೇಳಿದಂತೆ ಮೂರು ನೆಲೆಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಇವುಗಳ ಜೊತೆಯಲ್ಲಿಯೇ ಮಹಿಳಾ ಹಾಡುಗಾರರು ರೂಪಿಸಿಕೊಂಡ ನೀತಿಗಳ ಕುರಿತು ಚರ್ಚಿಸಲಾಗಿದೆ.

ಭಾವನಾತ್ಮಕ ದೌರ್ಜನ್ಯಗಳು

ಬಬಲೇಶ್ವರದ ಬಂಗಾರವ್ವನ ಮಾತುಗಳೊಂದಿಗೆ ಈ ಸಮಸ್ಯೆಗಳ ಪ್ರವೇಶ ಮಾಡುತ್ತೇನೆ. “ಹರದೇಶಿ-ನಾಗೇಶಿ ಹಾಡಂದ್ರ ಶಿವ-ಶಕ್ತಿಯರ ಹಾಡುಗಳು, ಅವರು ಶಿವನ ಹೆಚ್ಚು ಮಾಡಿ ಹಾಡಿದ್ರ, ನಾವು ಶಕ್ತಿ ಹೆಚ್ಚ ಮಾಡಿ ಹಾಡ್ತೇವಿ. ಹರದೇಶಿಯವರಿಗೆ ತಾವು ಸೋಲ್ತೀವಿ ಅನಿಸಿದಾಗ ‘ಗಂಡ ಇಲ್ದಾಕಿ ನೀನು, ಗಂಡನ್ನ ಮಹತ್ವ ಏನು ಗೊತ್ತು? ಸೂಳಿ-ಬೋಳೀ-ಗರತ್ಯಾರ‍್ನ ಎಲ್ಲಾರ‍್ನೂ ಒಟ್ಟಿಗೆ ನೋಡಕಿ ನೀನು. ಗಂಡ ಅನ್ನುವನು ಇಲ್ಲದಿದ್ರ ಎಲ್ಲರೂ ನಿನ್ನಂಗ ಭಂಡಾರ ಇಟಕೊಂಡು ಊರೂರು ತಿರಗಬೇಕಾಗ್ತಿತ್ತು’. ಅಂತ ಅನ್ನುವ್ರು. ನಂಗಂತೂ ಅಲ್ಲೆ ಕುಸಿದು ಬೀಳುವಂಗ ಅನಸ್ತಿತ್ತು. ಕುಂತ ಜನಾನೂ ಹೋ ಅಂತ ಕೂಗಾಡೋರು. ಯಾರ ಶೆಲ್ಲೆ ಹಾರಸ್ತಿದ್ರು? ಯಾರ ಟವಲ್ಲ ಹಾರಿಸ್ತಿದ್ರು? ಯಾರ ಸೀಟಿ ಹೊಡಿತಿದ್ರು? ಅವಾಗೆಲ್ಲಾ ಜೀವ ಯಾಕ ಹೋಗವಲ್ತು ಅಂತ ಅನಸ್ತಿತ್ತು” ಇವು ಕೇವಲ ಬಬಲೇಶ್ವರದ ಬಂಗಾರವ್ವನ ಮಾತುಗಳಲ್ಲ. ನಾನು ಸಂದರ್ಶಿಸಿದ ಬಹುತೇಕ ಹೆಣ್ಣು ಮಕ್ಕಳು ಇದೇ ಸಂಕಟವನ್ನು ತೋಡಿಕೊಂಡಿದ್ದಾರೆ. ಮನೆಯಲ್ಲಿ ಇದ್ದರೆ ‘ದೇವದಾಸಿ’ ಎಂದು ಹೀಗಳೆಯುತ್ತಾರೆ. ಅದರಿಂದ ಬಿಡುಗಡೆ ಹೊಂದಲು ಕಲಾ ಕ್ಷೇತ್ರಕ್ಕೆ ಬಂದರೆ ಅಲ್ಲಿಯೂ ‘ದೇವದಾಸಿ’, ‘ಸೂಳೆ’ ಎನ್ನುವ ಹೀಗಳಿಕೆ ತಪ್ಪುವುದಿಲ್ಲ. ಬಂಗಾರವ್ವನಿಗೆ ನಾಗೇಶಿ ಹಾಡುಗಾರಿಕೆ ಎನ್ನುವುದು ಕಲಾ ಕ್ಷೇತ್ರ, ಸಮಾಜಕ್ಕೆ ಹರದೇಶಿ-ನಾಗೇಶಿ ಹಾಡುವ ಮಹಿಳೆಯರೆಲ್ಲ ‘ದೇವದಾಸಿಯರು’, ಯಾಕೆಂದರೆ ಈ ಕ್ಷೇತ್ರದಲ್ಲಿ ಹಾಡುವ ಬಹುತೇಕ ಮಹಿಳೆಯರೆಲ್ಲ ‘ಜೋಗತಿ’ಯರೇ. ಹೀಗಾಗಿ ಯಾವ ಅವಮಾನದಿಂದ ಮುಕ್ತಿ ಹೊಂದಬೇಕೆಂದು ಕೆಲ ‘ಜೋಗತಿಯರು’ ಹರದೇಶಿ-ನಾಗೇಶಿ ಹಾಡುಗಾರಿಕೆಯ ಕ್ಷೇತ್ರಕ್ಕೆ ಬಂದರೋ, ಅದೇ ಕ್ಷೇತ್ರ ಸಾರ್ವಜನಿಕರೆದುರಿಗೆ ‘ಸೂಳೆ’ ‘ದೇವದಾಸಿ’ಯೆಂದು ಅಪಮಾನಿಸಿತು.

ಅಂದು ಬಂಗಾರೆವ್ವನ ಎದರು ಹಾಡಿದವನು ಕುರುಬ ಜನಾಂಗಕ್ಕೆ ಸೇರದವನಾಗಿದ್ದನು. ಹರದೇಶಿ-ನಾಗೇಶಿ ಎರಡೂ ಹಾಡುಗಳನ್ನು ‘ಜೋಗತಿ’ಯರೇ ಹಾಡುತ್ತಿದ್ದರೂ ಅವರು ನಾಗೇಶಿ ಹಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಅಂದರೆ ನಾಗೇಶಿ ಹಾಡುವವರೆಲ್ಲ ಹೆಚ್ಚಾಗಿ ಮಹಿಳೆಯರೇ ಆಗಿರುತ್ತಾರೆ. ಹರದೇಶಿ-ನಾಗೇಶಿ ಹಾಡುಗಾರರನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಿಕೊಳ್ಳಬಹುದು.

೧. ನಾಗೇಶಿ ಹಾಡುವ ಮಹಿಳಾ ಹಾಡುಗಾರರು
೨. ಹರದೇಶಿ ಹಾಡುವ ಮಹಿಳಾ ಹಾಡುಗಾರರು
೩. ನಾಗೇಶಿ ಹಾಡುವ ಪುರುಷ ಹಾಡುಗಾರರು
೪. ಹರದೇಶಿ ಹಾಡುವ ಮಹಿಳಾ ಹಾಡುಗಾರರು

ಹರದೇಶಿ ನಾಗೇಶಿ ಹಾಡುವ ಮಹಿಳಾ ಹಾಡುಗಾರರು ‘ಜೋಗತಿ’ಯರಾಗಿದ್ದು, ಅವರು ಹೊಲೆಯ ಇಲ್ಲವೆ ಮಾದಿಗ ಜಾತಿಗೆ ಸೇರಿದವರಾಗಿರುತ್ತಾರೆ. ನಾಗೇಶಿ ಹಾಡುವ ಹಾಡುಗಾರರು ಪುರುಷರಾಗಿದ್ದರೆ ಸಾಮಾನ್ಯವಾಗಿ ಅವರೂ ಕೂಡ ಹೊಲೆಯ ಇಲ್ಲವೆ ಮಾದಿಗ ಜಾತಿಗೆ ಸೇರಿದವರಾಗಿರುತ್ತಾರೆ. ಆದರೆ ಹರದೇಶಿ ಹಾಡುವ ಹಾಡುಗಾರರು ಪ್ರಧಾನವಾಗಿ ಕುರುಬರು, ಮುಸ್ಲಿಮರು, ತಳವಾರರು, ಮಾಲಗಾರರು, ಲಿಂಗಾಯಿತರು ಆಗಿರುತ್ತಾರೆ. ಅಪರೂಪಕ್ಕೆ ಹರದೇಶಿ ಹಾಡುವ ಹಾಡುಗಾರರಲ್ಲಿ ಹೊಲೆಯ ಮತ್ತು ಮಾದಿಗ ಜಾತಿಗೆ ಸೇರಿದವರಾಗಿರುತ್ತಾರೆ. ಇವರು ನಾಗೇಶಿ ಹಾಡುವ ಮಹಿಳೆಯರನ್ನು ‘ದೇವದಾಸಿ’ಯರೆಂದು, ಗಂಡ ಇಲ್ಲದ ‘ಸೂಳೆ’ ಯರೆಂದು ಅಪಮಾನಿಸುವುದಿಲ್ಲ. ಗಂಡ್ಹೆಚ್ಚು ಎನ್ನುವದನ್ನು ಈಗಾಗಲೇ ರಚಿತವಾದ ಸಾಹಿತ್ಯವನ್ನು ಹಾಡುವ ಮೂಲಕವೇ, ಎದುರಿಗಿರುವ ಹಾಡುಗಾರರನ್ನು ಸೋಲಿಸಲು ಪ್ರಯತ್ನಿಸುತ್ತಾರೆ. ಗಂಡನ ಮತ್ತು ಗಂಡಿನ ಮಹತ್ವವನ್ನು ಎತ್ತಿ ಹಿಡಿಯುತ್ತಾರಾದರೂ ನೇರವಾಗಿ “ದೇವದಾಸಿ”ಯೆಂದು “ಸೂಳೆ”ಯೆಂದು ಆಕ್ರಮಣ ಮಾಡುವುದಿಲ್ಲ. “ನಮ್ಮ ಮನಿಯಾಗೂ ನಮ್ಮ ತಾಯಿ, ಅಕ್ಕ-ತಂಗೇರು ಎಲ್ಲವ್ವನ ಸೇವಾ ಮಾಡತಾರು, ನಾಗೇಶಿ ಹಾಡೋರಿಗೆ ‘ದೇವದಾಸಿ’, ‘ಸೂಳೆ’ ಅಂತಂದ್ರ ಅದು ಹೊಡಮಳ್ಳಿ ತಮ್ಮ ತಾಯಿಗಿ, ಅಕ್ಕ-ತಂಗೇರಿಗಿ ಬರತದ. ಈ ಮಾತು ಅನ್ನದ ಎದುರಿನವರ್ಗೆ ಸವಾಲ್ ಹಾಕಾಕ ಬರತೈತಿ” ಎಂದು ಬೆಳಗಲಿ ದುರ್ಗಪ್ಪ ಹೇಳಿದರು. ಯಾರು ಮಾಧ್ಯಮ ಮತ್ತು ಕೆಳ ಮಧ್ಯಮ ಜಾತಿಗೆ ಸೇರಿರುತ್ತಾರೋ, ಯಾರಾ ಜಾತಿಗಳಲ್ಲಿ “ದೇವದಾಸಿ” ಪದ್ಧತಿ ಇಲ್ಲವೋ ಆ ಜಾತಿಗೆ ಸೇರಿದ ಪುರುಷರು ತಮ್ಮ ಎದುರು ಹಾಡುಗಾರ್ತಿಯರಿಗೆ ಸುಲಭವಾಗಿ “ದೇವದಾಸಿ’ ಎಂದು ಜರಿಯುತ್ತಾರೆ. ಅಂದರೆ ಎದುರು ಹಾಡುಗಾರರ ಸಾಮಾಜಿಕ ಹಿನ್ನೆಲೆಗೆ ಅನುಗುಣವಾಗಿಯೇ ನಾಗೇಶಿ ಹಾಡುಗಾರ್ತಿಯರು ಮಾನಾಪಮಾನಗಳಿಗೆ ಒಳಗಾಗುತ್ತಿರುತ್ತಾರೆ.

ಜಮಖಂಡಿಯ ದುರ್ಗವ್ವನು ಹೆಣ್ಣ್ಹೆಚ್ಚು ಎಂದು ಹಾಡುವ ಸಂದರ್ಭದಲ್ಲಿ ಬಬಲೇಶ್ವರದ ಬಂಗಾರವ್ವ ಎದುರಿಸಿದ ಸಮಸ್ಯೆಯನ್ನೇ ಎದುರಿಸಿದಳು. ಅದಕ್ಕೂ ಅವಳು ಎದೆಗುಂದದೆ ಇದ್ದಾಗ.

“… ಕಳೆ ಕಮಲದಂಗ ನೇತ್ರ ಹೊಳಿತಾವ ಎಳಿಯ ಚಂದ್ರನಂತಾಕಿ
ಗಲ್ಲ ಹೊಳಿತಾವ ಹಲ್ಲ ದಾಳಿಂಬರ ಅಥಣಿ ಬೆಲ್ಲದಂಥ ||ಜೀಜೀ||
ಎಲ್ಲಿ ಇಲ್ಲೋ ಇಂಥಾಕಿ
ಚಿಗರಿ ಹಂಗ ನಾರಿ ನಿಗಿ ನಿಗರಿ ಕೇರಿ ತಿರುಗಿ ನೋಡತಾಳೋ ಕಕಬಿಕಿ ||ಜೀಜೀ||
ಇಳುವು || ನಡಸಣ್ಣ ಸಿಂಹನಾಂಗ ಮಾಟಾ ಏನ ಘಾಟಾ |
ಮೊಲಿ ಮೊಗ್ಗಿ ಚಂಡಿನಂಗ ಥೇಟ ನೇಟಾ|
ಜರತರದ ಕುಪ್ಪಸ ತೊಟ್ ಲಕ್ಕಟ್ಟಾ
ಬಿಗಿದಾವ ಎರಡುಮಲಿಕಟ್ಟಾ ತಿಟಿಮಿಟಾ
ಚಳ್ಳಪಿಳ್ಳಿ ನಿಲಿಗಿ ಒದುತಾಳ ಪಿತಾಂಬರ ಉಟ್ಟಾ ||ಜೀ ಜೀ||”

ಈ ಹಾಡು ಅಸಹ್ಯಕರವಾದ ಭಾವ-ಭಂಗಿಯಲ್ಲಿ ಎದುರು ಹಾಡುಗಾರನು ಹಾಡಿದ್ದರಿಂದ ಪ್ರೇಕ್ಷಕರು ಹೋ ಎಂದು ಗಲಾಟೆ ಮಾಡಿದರು. ಈ ಘಟನೆಯನ್ನು ಜಮಖಂಡಿಯ ದುರ್ಗವ್ವ ಹೀಗೆ ವಿವರಿಸಿದಳು: “ನನ್ನ ನೋಡಲಾಕಂತ, ನನ್ನ ದನಿ ಕೇಳಾಕಂತ ಬಾಳ ದೂರದಿಂದ ಬರೂರು. ವಯಸ್ಸಿನಾಗ ನಾನು ಬಾಳ ರೂಪವಂತಿ. ಎದಿ ಬಗ್ಗೆ ನನ್ನ ಕಡೆ ನೋಡಿಕೊಂಡ ಕೈಮಾಡಿ, ಕಣ್ಣು ಮಿಟಕಿಸಿ ಹಾಡಿದಾಗ ನನ್ನ ಸೀರಿ ಕುಬುಸಾ ಉಚ್ಚಿ ಬಯಲಾಗ ಎಲ್ಲಾರೆದುರು ಬೆತ್ತಲೆ ನಿಲ್ಲಿಸಿದಂಗಾಯ್ತು. ಹಾಢ ಒಪ್ಪಿಕೊಂಡಿದ್ದಕ ಅವತ್ತ ಪೂರ್ಣ ಹಾಡಿದೆ. ಮನಸ್ಸು ಸೋಗಸಿರಲಿಲ್ಲ. ಹಾಡ್ಕಿ ಮುಗಿಸಿಂದ ಅವತ್ತ ದಪ್ಪ ಇಟ್ಟಕಿ ಇವೊತ್ತಿಗೂ ಮುಟ್ಟಿಲ್ಲ” ಎಂದಳು. ಈ ಘಟನೆಯನ್ನು ಹೇಳುವಾಗ ಜಮಖಂಡಿಯ ದುರ್ಗವ್ವನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಬಿಕ್ಕಳಿಕೆ ಒತ್ತರಿಸಿ ಬರುತ್ತಿತ್ತು. ಆಕೆಯ ಇಪ್ಪತ್ತನೆಯ ವಯಸ್ಸಿನಲ್ಲಿ ನಡೆದ ಈ ಘಟನೆಯನ್ನು ನೆನೆಸಿಕೊಂಡು ದುರ್ಗವ್ವ ೬೦ ವರ್ಷಗಳಷ್ಟು ಹಿಂದೆ ವಾಪಸ್ಸು ಹೋಗಿದ್ದಳು. ೮೦ರ ಅಂಚಿನಲ್ಲಿಯ ದುರ್ಗವ್ವನ ಕಣ್ಣಾಲಿಗಳನ್ನು ತುಂಬುವ, ಬಿಕ್ಕಳಿಕೆಯನ್ನು ಒತ್ತರಿಸುವ ಈ ಘಟನೆ ಆಕೆಯ ಸೂಕ್ಷ್ಮ ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.

ದುರ್ಗವ್ವನನ್ನು ನೋಯಿಸಿದ ಮೇಲಿನ ಹಾಡನ್ನೇ ನಾಗೇಶಿ ಪಂಥದ ಹಾಡುಗಾರನಾದ ಇಂಗಳಗಿ ಹಸನಸಾಬನು ಹಾಡಿದಾಗ; ಹರದೇಶಿ ಹಾಡುಗಾರನಾದ ಹಲಸಂಗಿ ಖಾಜಾ ಸಾಹೇಬನು “ಖರ ಕವಿ ಪುಂಡ ನುಡಿ ಬಾಯಲ್ಲಿ ಹೊರಟರ ಭೂಮಿ ಮ್ಯಾಲ ಚಂಡ ಪುಟದಂಗ” ಎನ್ನುವ ಖ್ಯಾಲಿ ಹೇಳುತ್ತ ಹಸನಸಾಹೇಬನನ್ನು ಕೊಂಡಾಡಿದನಂತೆ. ಇದಕ್ಕೆ ಸಮ್ಮೋಹಿತನಾದ ಹಲಸಂಗಿ ಖಾಜಾ ಸಾಹೇಬನು ನಾಗೇಶಿ ಪಂಥದ ಹಾಡುಗಾರನಾದ ಇಂಗಳಗಿ ಹಸನ ಸಾಹೇಬನಿಗೆ

“ಇಲ್ಲಿ ತನಕ ನನ್ನ ಗಂಡ ಸಿಕ್ಕಿರಲಿಲ್ಲ
ಮುಪ್ಪಿನ ಕಾಲಕ್ಕೆ ಖಾಜಾ ನನ್ನ ತಕ್ಕ ಗಂಡ
ವಿದ್ಯೆಕಿಲ್ಲ ಸರಿ ಜೋಡಿ
ಮತ್ಸರ ಬುದ್ಧಿಗೆ ಮುಚ್ಚಲಿ ಹೊಡಿ”

ಎಂದು ಕೊಂಡಾಡಿದನಂತೆ. ಮೇಲೆ ಉಲ್ಲೇಖಿಸಿದ ಹಾಡು ನಾಗೇಶಿ ಪಂಥಕ್ಕೆ ಸೇರಿದೆ. ಅದನ್ನು ನಾಗೇಶಿ ಪಂಥದ ಹಾಡುಗಾರನೆಂದು ಗುರುತಿಸಿಕೊಂಡ ಹಸನ ಸಾಹೇಬ ಹಾಡಿದ್ದು. (ವಿವರಣೆಗೆ ಗಮನಿಸಿ: ಕೋಟ್ಯಾಳರ “ಗೀಗೀ ಸಂಪ್ರದಾಯದ ಹರಿಕಾರ ಬೀಬೀ ಇಂಗಳಿಗಿ ಹಸನ ಸಾಹೇಬ) ಎನ್ನುವ ಕೃತಿಯನ್ನು ಆದರೆ ಇದೇ ಹಾಡನ್ನು ಹರದೇಶಿ ಪಂಥದ ಹಾಡುಗಾರನು ಜಮಖಂಡಿಯ ದುರ್ಗವ್ವನ ಯೌವ್ವನವನ್ನು ಬೆತ್ತಲುಗೊಳಿಸಿ ಅವಳ ಮಾನಸಿಕ ಸ್ಥೈರ್ಯವನ್ನು ಕುಸಿಯಲು ಬಳಸಿಕೊಂಡನು. ಸಾಮಾನ್ಯವಾಗಿ ಹರದೇಶಿ ಪಂಥದ ಹಾಡುಗಳನ್ನು ಹರದೇಶಿ ಹಾಡುಗಾರರೇ ಹಾಡುತ್ತಾರೆ; ನಾಗೇಶಿ ಪಂಥದ ಹಾಡುಗಳನ್ನು ನಾಗೇಶಿ ಹಾಡುಗಾರರೇ ಹಾಡುತ್ತಾರೆ. ಹರದೇಶಿ ಹಾಡುಗಾರ ಪುರುಷನಾಗಿದ್ದು ನಾಗೇಶಿ ಹಾಡುವವರು ಮಹಿಳೆಯರಾಗಿದ್ದರೆ, ನಾಗೇಶಿ ಪಂಥದೊಳಗಿನ ಹೆಣ್ಣಿನ ದೇಹ ವರ್ಣಿಸುವ ಹಾಡುಗಳನ್ನು ಹಾಡುತ್ತಾರೆ. ಎದುರು ಹಾಡುಗಾರ್ತಿಯರ ಆತ್ಮ ವಿಶ್ವಾಸ ಕುಗ್ಗಿಸಲು ಪ್ರಯತ್ನಿಸುತ್ತಾರೆ. ಒಂದೇ ಹಾಡಿನ ಸುತ್ತ ನಡೆದ ಈ ಎರಡು ಘಟನೆಗಳು ಇದನ್ನೇ ಸ್ಪಷ್ಟಪಡಿಸುತ್ತವೆ. ಹರದೇಶಿ ಹಾಡುಗಾರನಾದ ಹಲಸಂಗಿ ಖಾಜಾ ಸಾಹೇಬನಿಗೆ ಉಲ್ಲೇಖಿತ ಮೇಲಿನ ಘಟನೆ ಆತನ ಹಾಡಿಕೆ ಜೀವನಕ್ಕೆ ಹೊಸ ತಿರುವು ನೀಡಿದರೆ; ಜಮಖಂಡಿಯ ದುರ್ಗವ್ವನಿಗೆ ಹಾಡಿಕೆ ಜೀವನಕ್ಕೆ ಶಾಶ್ವತವಾಗಿ ವಿದಾಯ ಹೇಳುವಂತೆ ಮಾಡಿದೆ. ನಂತರ ನಾಟಕ ಜೀವನಕ್ಕೆ ಕಾಲಿಟ್ಟ ಆಕೆ ಮತ್ತೊಂದು ಹಾಡಿಕೆ ವೃತ್ತಿಗೆ ಕಾಲಿಡಲೇ ಇಲ್ಲ.

ಮಾದರ ಪೀರವ್ವನೂ ಹರದೇಶಿಯವರಿಂದ ಅನೇಕ ಅಪಮಾನಗಳನ್ನು ಎದುರಿಸಿದವಳು. ಗಂಡ ಸತ್ತ ನಂತರ ಉಪಜೀವನಕ್ಕೆ ಹಾಡಿಕೆ ಕ್ಷೇತ್ರಕ್ಕೆ ಬಂದವಳು. ಹರದೇಶಿ ಹಾಡುಗಾರರು ಆಕೆಗೆ ಹೀಗೆ ಹೇಳಿದರಂತೆ:

“ಹರಕೆಯ ಇರುತನಕ ಮಾಡs ಹಾದರ
ಮಾದರ ಹೆಂಗಸ
ಕತ್ತಲಾಗ ಕೂಡತದ
ಸೀರಿ ಕಳಕೊಂಡು ಬೆತ್ತಲ ಬೀಳತದ
ಕುಡಿಯಾಕ ಸೇಂಧಿ ಬೇಡತದ”

೭೫ರ ಆಸುಪಾಸಿನಲ್ಲಿರುವ ಮಾದರ ಪೀರವ್ವ ಈಗಲೂ ಈ ಘಟನೆಯನ್ನು ಹೃದಯ ಹಿಂಡಿಕೊಂಡೇ ಚುಟುಕಾಗಿ ಹೇಳುತ್ತ ಕಣ್ಣಾಲಿ ತುಂಬಿಕೊಳ್ಳುವಳು. ಮಕ್ಕಳನ್ನು ಜೀವನದ ದಡಕ್ಕೆ ಎಳೆದುಕೊಂಡು ಹೋಗಲು ಹಾಡಿಕೆಯಿಂದ ಘೋರವಾದ ಅಪಮಾನಗಳನ್ನು ಎದುರಿಸಿದರೂ; ಆ ನಂಜನ್ನು ನುಂಗಿಕೊಂಡು ಜೀವನ ಸಾಗಿಸಬೇಕಾಯಿತು. “ನನ್ನ ಜಾತಿ ಹಿಡಕೊಂಡು ಹಾದರಾ ಮಾಡು ಮಾದರ ಹೆಂಗ್ಸು ಅಂದಕೂಡ್ಲೆ ನೋವಾಗೋದು. ಎಲ್ಲಾ ನಮ್ಮ ಜಾತಿ ಹೆಣ್ಣಮಕ್ಕಳನ್ನ ನನ್ನ ಕಣ್ಣೆದರೆ ಉಗುಳಿದರೂ, ಹಾದರಾ ಮಾಡೋರು ಅಂತ ಅಂದ್ರೂ ಸುಮ್ನ ಇರಬೇಕಾಗಿತ್ತು. ನಮ್ಮ ಜಾತಿ ಹೆಣ್ಣು ಮಕ್ಕಳಿಗೆ ಹಂಗೆಲ್ಲ ಮಾತಾಡಿದ್ರೆ ಹೊಟ್ಯಾಗ ಬೆಂಕಿ ಬಿದ್ದಂಗ ಆಗೂದು. ನೀವು ಶಕ್ತಿ ಇದ್ದವರೆವ್ವಾ, ಏನ ಅಂದ್ರೂ ಅನಿಸ್ಕೊಳ್ಳಬೇಕು. ಇಂಥಾ ಮಾತನ್ಯಾಗ ಆಧ್ಯಾತ್ಮ ಐತಿ ಅಂತಾರ. ಎಂಥಾ ಆಧ್ಯಾತ್ಮನೋ ಏನೋ? ನನಗಂತೂ ಈ ಹಾಡಿನ್ಯಾಗ ಮ್ಯಾಲಿನ ಅರ್ಥ ಬಿಟ್ಟು, ಒಳಾರ್ಥ ಆಗಿಲ್ಲ” ಎಂದು ನಿಟ್ಟುಸಿರುಬಿಟ್ಟಳು. ಹಾಡಿಕೆಯು ಜಾತಿ ಶ್ರೇಣೀಕರಣವನ್ನು ಮತ್ತು ಜಾತಿಗನುಗುಣವಾಗಿರುವ ಮಹಿಳೆಯರ ಕುರಿತ ಪೂರ್ವಗ್ರಹಗಳನ್ನು ಕೆಳ ಮಧ್ಯಮ ಜಾತಿಗಳಿಂದಲೇ ಪೋಷಿಸಿಕೊಂಡು ಮುನ್ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಸಮಾಜಗಳು ಜಾತಿ ಪ್ರಧಾನವಾಗಿವೆ; ಪುರುಷ ಪ್ರಧಾನವಾಗಿವೆ. ಹೀಗಾಗಿಯೇ ಸಂವಿಧಾನ ವಿರೋಧಿಯಾದ, ಕಾನೂನು ವಿರೋಧಿಯಾದ ಜಾತಿ ತಾರತಮ್ಯ ಮತ್ತು ಲಿಂಗ ತಾರತಮ್ಯದಂತಹ ಸಂಗತಿಗಳು ಹಾಡಿಕೆಯ ಮೂಲಕ ಸಾರ್ವಜನಿಕ ವೇದಿಕೆಗಳಲ್ಲಿ ಜನ ಬೇಡಿಕೆಯೊಂದಿಗೆ ಪ್ರದರ್ಶನಗೊಳ್ಳುತ್ತದೆ. ಒಳ ಅರ್ಥ ಮತ್ತು ಹೊರ ಅರ್ಥ ಎಂದು ಅಲೌಕಿಕ ಮತ್ತು ಲೌಕಿಕ ನೆಲೆಯಲ್ಲಿ ಅರ್ಥ ವಿವರಣೆಯನ್ನು ಹೇಳುವ ಈ ಬಗೆಯ ಹಾಡುಗಳನ್ನು ಹೊರ ಅರ್ಥದಲ್ಲಿಯೇ ಅಂದರೆ ಲೌಕಿಕದಲ್ಲಿಯೇ ಮಾದರ ಪೀರವ್ವನಂತೆ ಅರ್ಥ ಮಾಡಿಕೊಳ್ಳಬೇಕಿದೆ. ಈ ಬಗೆಯ ಹಾಡುಗಳನ್ನು ಲೌಕಿಕ ಅರ್ಥದಲ್ಲಿಯೇ, ಅರ್ಥ ಮಾಡಿಕೊಂಡರೆ ನೋವಾಗುತ್ತದೆ. ಈ ನೋವು ಜಾಗೃತಾವಸ್ಥೆಯನ್ನು ಹೇಳುತ್ತದೆ. ಜಾತಿ ಶ್ರೇಣೀಕರಣಗಳನ್ನು, ವರ್ಣ ಶ್ರೇಣೀಕರಣಗಳನ್ನು ಬಹಳ ಹಿಂದಿನಿಂದಿಲೂ ಅಲೌಕಿಕ ನೆಲೆಯಲ್ಲಿಯೇ ಪೋಷಿಸಿ ಸಮರ್ಥಿಸಿಕೊಂಡು ಬರಲಾಗಿದೆ. ಸಾಮಾಜಿಕವಾದ ಯಾವುದೇ ಸಂಗತಿಗಳನ್ನು ಅಲೌಕಿಕ ನೆಲೆಗೆ ಕೊಂಡೊಯ್ಯುವುದೆಂದರೆ ಕತ್ತಲೆ ಲೋಕಕ್ಕೆ ಕೊಂಡೊಯ್ಯುವುದೆಂದೇ ಅರ್ಥ. ಜಾತಿ ಶ್ರೇಣೀಕರಣಕ್ಕೆ ಅನುಗುಣವಾಗಿ ರೂಪಗೊಂಡ ನಂಬಿಕೆಗಳನ್ನು ಹಾಗೂ ಆಚರಣೆಗಳನ್ನು ಅಲೌಕಿಕ ನೆಲೆಗಳಿಗಿಂತಲೂ ಲೌಕಿಕ ನೆಲೆಗಳಲ್ಲಿ ಅರ್ಥ ಮಾಡಿಕೊಂಡಿರೆ ನಷ್ಟಕ್ಕಿಂತ ಲಾಭವೇ ಜಾಸ್ತಿ. ಜನರ ಆಸಕ್ತಿಗಳು, ಅಧ್ಯಯನಕಾರರ ಆಸಕ್ತಿಗಳು ಜಾತಿಯಂತಹ, ಸ್ತ್ರೀ-ಪುರುಷರಂತಹ ವಿಷಯಗಳನ್ನು ಲೌಕಿಕ ನೆಲೆಗಳಲ್ಲಿಯೇ ಅರ್ಥೈಸಿಕೊಳ್ಳುವುದರ ಕಡೆಗೆ ಸಾಗಿದರೆ ಸಾಮಾಜಿಕ ಬದಲಾವಣೆ ಸಾಧ್ಯ.

ಕಂಬಾಗಿ ಹನುಮವ್ವನ ಅನುಭವ ಸಮಾಜದ ಮತ್ತೊಂದು ಕ್ರೂರ ಲೋಕವನ್ನು ತೆಗೆದಿಡುತ್ತದೆ. “ಜನಾ ನಮ್ಮ ನೋಡಿದ ಕೂಡ್ಲೆ ದಂಗಾಲು(ಗಲಾಟೆ) ಮಾಡ್ತಿದ್ದರು. ನಮ್ಮನ್ನು ಕರಿಸಿದ ಕೆಲವು ದೊಡ್ಡವರು ವಸ್ತಿ ಮಾಡು ಅಂತಾರೆ, ಕುಡಿ ಅಂತಾರೆ. ನಮಗ ಕಂಪನಿ ಕೊಡು ಅಂತಾರೆ. ಯಾಕಂದ್ರ ನಾವು ದೇವದಾಸೇರು. ನಮ್ಮ ಹಾಡಿಕೆ ಸಲವಂದ ಎಲ್ಲ ಗಂಡಸರ ಜೊತೆ ಚೆಂದಾಗಿಯೇ, ಅಂದ್ರ ವ್ಯವಹಾರ ಕೆಡಿಸಿಕೊಳ್ಳಲಾರದಂಗ ಇರಬೇಕಾಗತೈತಿ. ಅದನ್ನ ಈ ತರಾ ಗಂಡಸರು ತಪ್ಪ ತಿಳಕೋಂತಾರ, ಹೀಗಾಗಿ ನಾವು ಏಟ ತ್ರಾಸಾದ್ರೂ ವಸ್ತಿ ಉಳಿಯುವಂಗಿಲ್ಲ. ವಸ್ತಿ ಉಳಿದ್ರ ನಮಗ ಕೆಡಕ ಆಗೂದು ತಪ್ಪಿದ್ದಲ್ಲ”. ನೂರರ ಆಸುಪಾಸಿನಲ್ಲಿರುವ ತಿಗಣಿ ಬಿದರಿ ಯಮನವ್ವ ಯೌವ್ವನದಲ್ಲಿ ಹಾಡಿಕೆ ಸಂದರ್ಭಗಳನ್ನು ಹಿಮ್ಮಿಂಚಿನಂತೆ ತಂದುಕೊಂಡ ಅಕೆಯ ಕಣ್ಣಾಲಿಗಳು ತುಂಬಿಕೊಂಡಿದ್ದವು. “ಹೆಣ್ಣ ಮಕ್ಕಳು ಕೆಳಜಾತ್ಯಾಗ ಹುಟ್ಟಬಾರದು. ಬಡತನದ ಮನಿಯಾಗ ಹುಟ್ಟಬಾರದು. ಹುಟ್ಟಿದ್ರೂ ನೋಡಾಕ ಚಂದಂಗ ಇರಬಾರದು. ದೇವ್ರು ನಂಗ ಬಣ್ಣ, ರೂಪ ಕೊಟ್ಟು ಹೊಲಿ ಜಾತ್ಯಾಗ ಹುಟ್ಟಿಸಿ ದೇವದಾಸಿ ಮಾಡಬಾರದಿತ್ತು. ದೇವದಾಸಿಯಾದ್ರೂ ನಾವು ಸೂಳೆತನ ಮಾಡಿದವರಲ್ಲ. ಜನಕ್ಕೆ ಸೂಳಿತನ ಮಾಡೂದಕ್ಕೂ ದೇವದಾಸಿಯಾಗಿರುದಕ್ಕೂ ವ್ಯಾತ್ಯಾಸ ಗೊತ್ತಿಲ್ಲ. ದೇವದಾಸಿಯರ‍್ನೆಲ್ಲ ಸೂಳೇರು ಅಂತ ಅನಕೋತಾರು. ಸೂಳಿತನ ಮಾಡುದಾದ್ರು ಹಾಡ್ಕಿಯಂತಹ ಉದ್ಯೋಗ ನಾವ್ಯಾಕ ಮಾಡ್ಬೇಕು? ಸೂಳಿತನ ಮಾಡಾಕ ಹಾಡ್ಕಿ ಹೆಸರ‍್ಲೆ ಊರ ಊರ ಯಾಕ ಸುತ್ತಬೇಕು?. ಇದ್ದೂರಾಗ ಮಾಡ್ಬಹುದಲ್ಲಾ? ನಮ್ಮ ಗಂಗಿ ನೀಡರಲ್ಲ? ಆಕಿನಗಿಂತ ನಾ ಬಣ್ಣದಾಗ ಕಣ್ಣಾ ಮೂಗಿನಾಗ ನೀಟ ಇದ್ದದಕ ನನ್ನ ಹತ್ರ ಬಂದು ತಾಳಾ ಬಾಳಾ ಚೆಂದ ಬಾರಿಸಿದ್ರಿ ಬಾಳ ಕೇಳುವಂಗಿತ್ತು ಅನ್ನೋರು. ಖರೇವಂದ್ರ ಹರದೇಶಿ-ನಾಗೇಶಿ ಹಾಡಿಕ್ಯಾಗ ಹಾಡವರ‍್ದ ಮುಖ್ಯ ಪಾತ್ರ. ಆಕಿಗಿ ಬಿಟ್ಟು ನನ್ನ ಮಾತಾಡ್ಸೋರು. ನೀಲಿ ಬಣ್ಣದ ಸೀರೆ ನಿಮಗೆ ಒಪ್ಪೈತಿ, ನಿಮಗಂತ ಒಂದ ಸೀರಿ ತಂದಿಟ್ಟೀನಿ ತಗೋಳ್ರಿ ಅನ್ನೋರು, ನಮಗ ಚಾ ಕುಡಿಯಾಕ ಹೇಳುವರು. ಕುಡಿಯುವಾಗ ಮಾತಾಡ್ಸೋರು. ಕಪ ಕೆಳಗೆ ಇಟ್ಟು ಮಾತಾಡಕ ಹೋಗುದಕ. ನಾನು ಅರ್ಧ ಕುಡಿದ್ದಿಟ್ಟ ಚಾನ ತಾವು ಕುಡುದು ಒಂಥರಾ ನಗುವ್ರು. ಅನ್ನುವಂಗಿಲ್ಲ ಅಡುವಂಗಿಲ್ಲ. ಇಂಥಾವು ಹೇಳಕೂತ ಹೋದ್ರ ವರ್ಷ ಆದ್ರೂ ಮುಗಿಯುದಿಲ್ಲ. ನೀಚ ಗಂಡಸರು ಅವ್ರು. ಹಂಗ ಮಾಡೂದ್ರಿಂದ ನಮಗ ಏಟ ನೋವಾಗುತ್ತಂತ ಅರ್ಥ ಮಾಡಿಕೊಳ್ಳುವುದಿಲ್ಲ. ಯಾರಿಗೇನಾದ್ರೇನು? ತಮ್ಮ ಚಟಾ ತೀರಿದ್ರ ಸಾಕು ಅವ್ರಿಗೆ. ಅವನ್ನೇನು ಕೇಳ್ತಿ ಬಿಡ ತಂಗಿ” ಎಂದು ತಿಗಣಿಬಿದರಿಯ ಯಮನವ್ವ ನಿಟ್ಟುಸಿರು ಬಿಟ್ಟಳು.

ಹಾಡಿಕೆಯಂತಹ ಸಾರ್ವಜನಿಕ ಕ್ಷೇತ್ರಕ್ಕೆ ‘ಜೋಗತಿಯರು’, ಗಂಡ ಸತ್ತ ಕೆಳಜಾತಿಯ ಮಹಿಳೆಯರು ಕಾಲಿಡುವುದರಿಂದ ಅವರನ್ನು ಸಾರ್ವಜನಿಕರ ಸ್ವತ್ತಿನಂತಿಯೇ ಪರಿಗಣಿಸುವರು. ಕೆಳಜಾತಿಯ ಅತ್ಯಂತ ಬಡತನದ ಕೆಳ ರೇಖೆಯಲ್ಲಿರುವ ಪುರುಷರಿಂದ ಹಿಡಿದು ಶ್ರೀಮಂತ ಹಾಗೂ ಮೇಲ್ಜಾತಿಯ ಪುರುಷರವರೆಗೆ ಎಲ್ಲರೂ ಹಾಡಿಕೆಯವರನ್ನು ಬಳಸಿಕೊಳ್ಳಬೇಕೆಂದು ಬಯಸುವವರೇ. ಕೆಳಜಾತಿಯ ಶಿವಣ್ಣ “ಎಲ್ಲಾರಂಗ ನಾವೂನು ಜಾತ್ರಿಗಿ ಪಟ್ಟಿ ಕೊಟ್ಟಿರತೀವಿ. ಆದs ಪಟ್ಯಾಗಿನ ರೊಕ್ಕದಿಂದ ಹಾಡ್ಕಿಯವರಿಗಿ ಕೂಲಿ ಕೊಡತಾರ. ದೊಡ್ಡವರಷ್ಟs ಹಾಡ್ಕಿಯವ್ರ ಮ್ಯಾಗ ಮನಸ್ಸ ಮಾಡ್ಬೇಕೇನು? ಹಾಡ್ಕಿಯವರಿಗಿ ಕೊಡು ಕೂಲ್ಯಾಗ ನಮ್ಮದೂ ಪಾಲೈತಿಲ್ಲೊ?” ಎಂದು ಹೇಳಿದ ಮಾತನ್ನು ಗಮನಿಸಬೇಕು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ತಮ್ಮಲ್ಲಿನ ಕಂಠಕ್ಕೆ ಹಾಗೂ ಜ್ಞಾನಕ್ಕೆ ಸಂಬಳ ಪಡೆಯುತ್ತಿದ್ದೇವೆ ಎಂದು ಹೆಮ್ಮೆ ಪಡುತ್ತಿರುತ್ತಾರೆ. ಶಿವಣ್ಣನಂತಹ ಕೆಲವರು ಇವರ ದೇಹದ ಮೇಲೆಯೇ ಹಣ ಹೂಡಿಕೆ ಮಾಡಿದವರಂತೆ, ಅವರನ್ನು ಖರೀದಿಸಿದಂತೆ ವರ್ತಿಸುತ್ತಿರುತ್ತಾರೆ. ಹಾಡಿಕೆಯನ್ನೇ ವೃತ್ತಿಯಾಗಿಸಿಕೊಂಡಿರುವ ಮಹಿಳಾ ಹಾಡುಗಾರರು ಯಾವುದನ್ನು ಹೆಮ್ಮೆ ಎಂದು ಪರಿಭಾವಿಸಿಕೊಂಡಿರುತ್ತಾರೋ ಅದು ಭ್ರಮೆಯಾಗಿರುತ್ತದೆ. ಲೈಂಗಿಕ ದುರ್ಬಳಕೆಯ ನೆಲೆಯಲ್ಲಿಯೇ ಅವರನ್ನು ಗ್ರಹಿಸುವುದು ಸಾಮಾಜಿಕ ವಾಸ್ತವವಾಗಿದೆ. ಸಮಾಜವು ಈ ಮಹಿಳಾ ಹಾಡುಗಾgರರನ್ನು ಕಲಾ ಗೌರವದ ಭ್ರಮೆಯಲ್ಲಿಯೇ ಇಟ್ಟು ವಾಸ್ತವದ ಅರಿವು ಮೂಡದಂತೆ ನೋಡಿಕೊಳ್ಳುತ್ತದೆ. ವಸ್ತು ಸ್ಥಿತಿಯ ಜ್ಞಾನೋದಯವಾದರೆ ಅವರಲ್ಲಿ ಪ್ರಬಲ ಸಮಾಜದ ಅಶಯಕ್ಕೆ ವಿರುದ್ದವಾದಂತಹ ಬದಲಾವಣೆಗಳಾಗಬಹುದು. ಈ ಬದಲಾವಣೆ ‘ದೇವದಾಸಿ’ ಪದ್ಧತಿಯನ್ನು ಕ್ಷೀಣಗೊಳಿಸಿದರೆ, ಪುರುಷನ ಲೈಂಗಿಕ ಸ್ವೇಚ್ಛಾಚಾರದ ಅವಕಾಶಗಳು ಮೊಟಕುಗೊಳ್ಳಬಹುದು, ಹೀಗಾಗಿ ಮಹಿಳಾ ಹಾಡುಗಾರರನ್ನು ಕಲಾ ಗೌರವದ ಭ್ರಮೆಯಲ್ಲಿ ಇಡಲಾಗಿದೆ. ಮಹಿಳಾ ಹಾಡುಗಾರರು ಈ ಭ್ರಮೆಯಲ್ಲಿಯೇ ಅವರು ಬದುಕು ಕಟ್ಟಿಕೊಳ್ಳಲು ಬಯಸುತ್ತಾರೆ. ಮಹಿಳಾ ಹಾಡುಗಾರರು ಎದುರಿಸಿದ ನೂರಾರು ಕಹಿ ಘಟನೆಗಳು ಅವರನ್ನು ಜೀವನದಿಂದ ವಿಮುಖವಾಗಲು ಪ್ರೇರೇಪಿಸಿದರೆ; ಅವರೇ ಕಟ್ಟಿಕೊಂಡ ಇಲ್ಲವೆ ಅವರ ಕಲಾ ಬದುಕಿನ ಕುರಿತು ಸಮಾಜವು ಸೃಷ್ಟಿಸಿದ ಭ್ರಮೆಗಳು ಅವರನ್ನು ಜೀವನ್ಮುಖಿಯಾಗುಸುತ್ತವೆ; ಕನಸುಗಳನ್ನು ಹುಟ್ಟಿಸುತ್ತವೆ; ಅಸೆಗಳನ್ನು ಚಿಗುರಿಸುತ್ತವೆ. ಹಾಗಂತ ಅವರು ಕಲಾ ಗೌರವದ ಭ್ರಮೆಯಲ್ಲಿರಬೇಕೆಂದು ಹೇಳುತ್ತಿಲ್ಲ. ವಾಸ್ತವದ ಅರಿವು ಅವರಲ್ಲಿ ಈಗಾಗಲೇ ಇದ್ದರೂ, ಇನ್ನಷ್ಟು ಸಾಮಾಜಿಕ ಸತ್ಯಗಳು ಅವರಿಗೆ ಅರ್ಥವಾಗಬೇಕು. ಈ ಅರ್ಥ ಅವರಲ್ಲಿನ ಭ್ರಮೆಯನ್ನು ಒಡೆದು ಬಿನ್ನ ಬದುಕು ಕಟ್ಟಿಕೊಳ್ಳುವ ಛಲವನ್ನು ಸೃಷ್ಟಿಸಬೇಕು.

ಜಾತಿ ತಾರತಮ್ಯವನ್ನು ಜಾತಿಗನುಗುಣವಾಗಿರುವ ಮಹಿಳೆಯರ ಕುರಿತ ಗ್ರಹಿಕೆಗಳನ್ನು ಯಥಾವತ್ತಾಗಿ ಒಪ್ಪಿಕೊಂಡಿರುವ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿನ ಜನರು ಆ ನೆಲೆಗಳಲ್ಲಿಯೇ ಮಹಿಳೆಯರನ್ನು ಪರಿಭಾವಿಸುವರು. ಈ ಪ್ರದೇಶದ ಜನರ ಪ್ರಕಾರ ಕೆಳಜಾತಿಯ ಗಂಡ ಇಲ್ಲದ ಮಹಿಳೆ, ಒಡೆಯನಿಲ್ಲದ ಅಸ್ತಿಯಂತೆ, ಸಾರ್ವಜನಿಕರೆಲ್ಲರೂ ಆ ಆಸ್ತಿಯನ್ನು ಬಳಸಿಕೊಳ್ಳಬಹುದು, ಹಾಗೆಯೇ ‘ದೇವದಾಸಿಯರು’ ಸಾರ್ವಜನಿಕರ ಲೈಂಗಿಕ ಸೇವೆಗೆಂದೇ ಮೀಸಲಿದ್ದವರು. ಗಂಡ ಇಲ್ಲದ ಕೆಳಜಾತಿಯ ಅದರಲ್ಲೂ ಹೊಲೆಯ ಮತ್ತು ಮಾದಿಗ ಜಾತಿಗೆ ಸೇರಿದ ಮಹಿಳೆಯರ ಮತ್ತು ‘ಜೋಗತಿ’ಯರ ಕುರಿತ ಸಾಮಾಜಿಕ ಗ್ರಹಿಕೆಗಳು ಭಿನ್ನವಾಗಿಯೇನು ಇಲ್ಲ, ಮೇಲ್ಜಾತಿಯ, ಮಧ್ಯಮ ಜಾತಿಯ, ಹಿಂದುಗಳಲ್ಲದವರು ಎಂದು ಗುರುತಿಸಿಕೊಂಡ ಮಹಿಳೆಯರು ಈ ಹಾಡಿಕೆ ಕ್ಷೇತ್ರದಲ್ಲಿ ಇಲ್ಲ, ಅಪವಾದವಾಗಿ ಶಕುಂತಲಾ ರಾಠೋಡನಂತಹ ಬಡ ಲಂಬಾಣಿ ಮಹಿಳೆಯರು ಈ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಇದ್ದವರೆಲ್ಲರೂ ‘ಜೋಗತಿಯರು”, ಕೆಳಜಾತಿಯ ಅದರಲ್ಲಿಯೂ ‘ಹೊಲೆ’, ಮಾದಿಗ’ ಜಾತಿಗಳಲ್ಲಿನ ಗಂಡ ಇಲ್ಲದ ಮಹಿಳೆಯರು ನನ್ನ ಕ್ಷೇತ್ರಕಾರ್ಯಾಧ್ಯಯನದಲ್ಲಿ ವಿಧವೆ ಪಟ್ಟ ಹೊತ್ತುಕೊಂಡ ಸಿದ್ಧವ್ವ ಮಾತ್ರ ಎದುರಾದಳು, ಹೀಗಾಗಿಯೇ, ಹಾಡಿಕೆಗೆಂದು ಹೋದ ಕಡೆಗಳಲ್ಲಾ ಹಸಿದ ಹದ್ದುಗಳಂತೆ ನೋಡುವ ದೃಷ್ಟಿಗಳನ್ನು, ಕಾಮ ತುಂಬಿದ ಹಸಿ ಹಸಿ ಮಾತುಗಳನ್ನು ಹಾಗೂ ಲೈಂಗಿಕತೆಯನ್ನು ಬಯಸುವ ಹಾವ-ಭಾವಗಳನ್ನು ಈ ಮಹಿಳೆಯರು ಎದುರಿಸಬೇಕಾಗುತ್ತದೆ, ‘ಕೆಳಜಾತಿ’ಗಳಲ್ಲಿನ ಸಾಮಾಜಿಕ ಮೌಲ್ಯಗಳು ಬಲಾಢ್ಯ ಸಮಾಜಗಳು ಪರಿಭಾವಿಸಿದ ರೀತಿಯಲ್ಲಿ ಇರುವುದಿಲ್ಲ. ಬಲಾಢ್ಯ ಸಮಾಜಗಳು ‘ದೇವದಾಸಿ’ಯರನ್ನೆಲ್ಲ ‘ಸೂಳೆ’ಯರೆಂದು ಭಾವಿಸುತ್ತವೆ. ಕೆಳಜಾತಿಗಳಲ್ಲಿನ ಗಂಡ ಇಲ್ಲದ ಮಹಿಳೆಯರನ್ನು ಸಾರ್ವಜನಿಕ ಸ್ವತ್ತಿನಂತೆ ಪರಿಭಾವಿಸುತ್ತವೆ. ಆದರೆ ಕೆಳಜಾತಿಗಳಲ್ಲಿ ಸಾಮಾಜಿಕ ಸ್ಥಿತಿಗತಿಗಳು ಭಿನ್ನವಾಗಿರುತ್ತವೆ. ‘ಜೋಗತಿ’ಯರನ್ನು ‘ಸೂಳೆ’ಯರು ಎಂದು ಪರಿಭಾವಿಸುವುದಿಲ್ಲ. ಕೆಳಜಾತಿಗಳಲ್ಲಿನ ಮೌಲ್ಯಗಳ ಪ್ರಕಾರ ಎಲ್ಲಮ್ಮನ ಸೇವೆ ಹಿಡಿದವರು ‘ಜೋಗತಿ’ಯರೇ ಹೊರತು ‘ದೇವದಾಸಿ’ಯರಲ್ಲ ‘ಸೂಳೆ’ಯರಲ್ಲ. ಕೆಳಜಾತಿಗಳಲ್ಲಿನ ಬಹುತೇಕರು ಮೇಲ್ಜಾತಿಗಳಲ್ಲಿನ ಮದುವೆಯ ಮೌಲ್ಯಗಳನ್ನೇ ಮಾದರಿಯಾಗಿಸಿಕೊಂಡಿದ್ದರಿಂದ ಅವರಲ್ಲಿ ಮರುಮದುವೆಯ ಆಯ್ಕೆ ಮಹಿಳೆಯರಿಗೆ ಇರುವುದಿಲ್ಲ. ತಳ ಸಮುದಾಯಗಳಲ್ಲಿ ಗಂಡನ ಮನೆಯವರಾಗಲಿ, ತವರು ಮನೆಯವರಾಗಲಿ, ಇಬ್ಬರೂ ಸ್ಥಿತಿವಂತರಾಗುವುದಿಲ್ಲ, ಇವರಲ್ಲಿ ಬಹುತೇಕ ಮಹಿಳೆಯರು ಅಶಿಕ್ಷಿತರಾದ ಕಾರಣ ಉಪಜೀವನಕ್ಕಾಗಿ ಕೂಲಿ ಕೆಲಸಗಳನ್ನೋ, ಹಾಡಿಕೆ ವೃತ್ತಿಯನ್ನೋ ಅವಲಂಬಿಸಿದವರು. ಗಂಡಸರನ್ನು ಅಕರ್ಷಿಸಲು ಹಾಗೂ ಅವರಿಂದ ಹಣ ಮಾಡಿಕೊಳ್ಳಲು ಹಾಡಿಕೆ ಕ್ಷೇತ್ರಕ್ಕೆ ಬಂದವರಲ್ಲ. ಆದರೂ ಬಲಾಢ್ಯ ಜಾತಿಗಳ ಪುರುಷರು, ಮಧ್ಯಮ ಜಾತಿಗಳ ಪುರುಷರು ಕೆಳಜಾತಿಗಳ ಮೌಲ್ಯಗಳನ್ನು ತಮ್ಮ ಬಯಕೆಗೆ ಅನುಗುಣವಾಗಿಯೇ ಸೃಷ್ಟಿಸಿಕೊಂಡು, ಆ ಹಿನ್ನಲೆಯಲ್ಲಿ ಹಾಡಿಕೆಯವರೊಂದಿಗೆ ಸಂಬಂಧ ಬೆಳೆಸಲು ಹಾತೊರೆಯುವರು. ಇನ್ನು ಕೆಳಜಾತಿಗಳಲ್ಲಿನ ಕೆಲ ಪುರುಷರು ಹೆಣ್ಣನ್ನು ಭೋಗದ ನೆಲೆಯಲ್ಲಿಯೇ ನೋಡುವರು. ಹೊಲೆ ಮಾದಿಗರಲ್ಲಿ ‘ದೇವದಾಸಿ ಪದ್ಧತಿ’ ಇದೆ ಮದುವೆ ಪದ್ಧತಿಯು ಇದೆ ‘ದೇವದಾಸಿ ಪದ್ಧತಿ’ಯನ್ನು ಆಚರಣೆಯಾಗಿಸಿಕೊಂಡಿರದ ಜಾತಿಯವರು ಹೊಲೆಮಾದಿಗ ಮಹಿಳೆಯರನ್ನು ‘ದೇವದಾಸಿ’ ನೆಲೆಯಲ್ಲಿಟ್ಟೆ ಅರ್ಥೈಸುತ್ತಾರೆ. ಅವರು ಮದುವೆಯಾಗಿದ್ದಾರೆ ಎನ್ನುವುದೇ ಈ ಜಾತಿಯವರಿಗೆ ತಮಾಷೆಯ ಸಂಗತಿಯಾಗಿರುತ್ತದೆ. ಈ ಮಹಿಳೆಯರು ಮದುವೆ ಆಗಲಿ, ಆಗದಿರಲಿ ಸಾರ್ವಜನಿಕರಿಗೆ ಸೇರಿದವರು ಎನ್ನುವ ಅಧಿಕಾರ ಭಾವನೆ, ಜಾತಿ ಶ್ರೇಣೀಕರಣ ಸಮಾಜವು ಸೃಷ್ಟಿಸಿದೆ. ಹೀಗಾಗಿ ಹಾಡಿಕೆ ಕ್ಷೇತ್ರದಲ್ಲಿರುವ ಮಹಿಳೆಯರು, ಮೇಲ್ಜಾತಿ ಹಾಗೂ ಮಧ್ಯಮ ಜಾತಿಯ ಪುರುಷರಿಂದ ತಮ್ಮ ಸಮಾಜದ ಪುರುಷರಿಂದ ಅಪಮಾನಗಳನ್ನು ಹಾಗೂ ಅಪಾಯಗಳನ್ನು ಎದುರಿಸಿರುವರು.

ಲೈಂಗಿಕ ದೌರ್ಜನ್ಯ

ರಂಗವು ಮೇಲಿನವು: “ಹಾಡು ಕೇಳಿದ ಜನ ನಮ್ಮ ಮ್ಯಾಗ ಕುಸುಬಿಗೊಳ್ಳೋ, ಚುರುಮರಿನೋ, ಪೇಪ್ಪರಮೆಂಟೋ, ಮಿಠಾಯಿನೋ ಒಗಿಯೋರು. ಹೀಗಂದ್ರ ನಮ್ಮ ಹಾಡ್ಕಿಗಿ ಮೆಚ್ಚಗಿ ಸಿಕ್ಕಂಗ, ಮರ್ಯಾದಿ ಸಿಕ್ಕಂಗ, ಸನ್ಮಾನ ಮಾಡಿದಂಗ. ಬೆಳಗಾಂವದಾಗ ಹಲಗಿ ಬಸ್ತಾಳದಾಗ ಹಾಡ್ಕಿಗೆ ಹೋಗಿದ್ದ್ಯಾ. ನನ್ನ ಹಾಡ್ಕಿ ಪಾಳಿ ಬಂದಾಗೊಮ್ಮೆ ಆ ಊರಿನ ಗ್ರಾಮ ಪಂಚಾಯಿತಿ ಚೆರಮನ್ ಮುಖಕ್ಕೆ ಕುಸುಬಿ ಗೊಳ್ಳು ತಂದು ಒಗಿತಿದ್ದ. ಕುಸುಬಿ ಎಣ್ಣಿ ತಗದಿಂದ ಉಳಿತದಲ್ಲಾ ಆ ಗೊಳ್ಳ ನಮ್ಮ ಮ್ಯಾಗ ಒಗಯೋರು. ಕುಸುಬಿ ಗೊಳ್ಳು ಹಾಕು ನೆಪದಾಗ ಮೈಮ್ಯಾಲ ಬಂದ್ಹಂಗ ಮಾಡಿ ನನ್ನ ಕಾಲು ತುಳಿಯಾದು, ಎದಿಗಿ ಕೈ ಬಡುಸೂದು ಮಾಡ್ತಿದ್ದಾ. ನಂಗ ಅನುಮಾನ ಕಾಣ್ತು. ಅವನ ಅಂಗಿ ಹಿಡಿದು “ಹಾರಿಸ್ಪೇಕಂತಿದ್ರ ಒಂದಾಣಿ ಕೊಡತಿನಿ. ಅದ್ರಾಗ ಚುರುಮುರಿ ತಂದು ನನ್ನ ಮ್ಯಾಲ ಹಾರಿಸು, ಈ ಕುಸುಬಿ ಗೊಳ್ಳ ಹಾರಿಸಬ್ಯಾಡ. ಈ ಕುಸುಬಿ ಗೊಳ್ಳ ನನ್ನ ಗಂಟಲಕ ಸಿಕ್ಕೋತು ಅಂತಂದ್ರ ನನ್ನ ಅನ್ನ ಕಿತ್ಕೋತದ” ಅಂತ ಅಂದ್ಯಾ ಅಂವ ನನ್ನ ಮ್ಯಾಲ ಬಂದದ್ದನ್ನು, ಬೇಕಂತಲೆ ಎದೆಗಿ ಕೈ ತಾಗಿಸಿದ್ದನ್ನ ಹೇಳಾಕ ಅಗ್ಲಿಲ್ಲ, ಹೆಂಗ ಹೇಳಾಕ ಆಗತ್ತ? ಒಂದ ವ್ಯಾಳಾಕ ನಾ ಹೇಳಿದ್ರೂ ಕೇಳಿದ ಜನಾ ಅದ್ನ ತಾವು ಅನುಭವಿಸಿದ್ದಂಗ ವಿಚಾರ ಮಾಡತೈತಿ. ಚೆರ್‌ಮನ್ ಪಬಿಕ್ಕಾನಾಗ ಮಾಡದ್ದರಿಂದ ಜನಕ್ಕೋ ಗೊತ್ತಾಗಿತ್ತು. ನಾ ಇಷ್ಟ ಅಂದದ್ದಕ ಊರಿನ ಜನಾ ಬಂಗಾರವ್ವ ಚೆರ್‌ಮನ್‌ಗೆ ಹೊಡದ್ಲು ಅಂತ ಸುದ್ದಿ ಹಬ್ಬಿಸಿದ್ರು” ಎಂದು ಬಬಲೇಶ್ವರ ಬಂಗಾರವ್ವ ಹೇಳಿದಳು.

ಸೊಲ್ಲಾಪುರದ ಬಳಿಯ ಮಂದರೂಪದ ರಾಣವ್ವ ‘ತಾಯಿ, ಹಾಡ್ಕಿಗ ಮೆಚ್ಚಿಗೆ ಅಗೈತಂತ ನೋಟಿನ ಹಾರ ಹಾಕು ನೆಪದಾಗ ಬೇಕಂತ ಎದಿಗಿ ಕೈ ಬಡಿಸಿ ನಗತಾರ. ಎಲ್ಲಾ ಗಣಸರೂ ಹೀಂಗs ಇರತಾರಂತಲ್ಲ. ಆದ್ರ ಬಾಳಪ್ಪ ಗಂಡಸರು ನಮ್ಮನ್ನ ಕೆಟ್ಟದಾಗೆ ನಡಸ್ಕೊತಾರ. ಹಾಡುವಾಗ ಸಣ್ಣ ಸಣ್ಣ ಹಳ್ಯಾ ಒಗೀತಾರ. ಹೋದ ಕೂಡ್ಲೆ ಹಾಡ್ಕಿಗೆ ತಯಾರಾಗಾಕಂತ ನಮಗಂತ ಇಳಕೊಳ್ಳಾಕ ಒಂದು ರೂಮು (ಶಾಲೆಯದು, ಪಂಚಾಯಿತಿ ಅಫೀಸು) ಕೊಟ್ಟಿರತಾರ. ಆ ರೂಮಿನ್ಯಾಗಿಂದ್ಲ ನಮಗ ಹಳ್ಳಾ ಬೀಳಾಕ ಚಾಲೂ ಆಗ್ತಾವು. ಹಾಡ್ಕ್ಯಾಗೂ ಹಳ್ಳಾ ಒಗೀತಾರು. ಹೀಂಗ ಗಣಸರು ನಮ್ಯಾಗ ಹಳ್ಳಾ ಒಗದ ಹಿಂಸೆ ಮಾಡೋದನ್ನ ಬಂದ ಪಬ್ಲಿಕ್‌ನಾಗ ಹೇಳ್ಕೊತೀವಿ. ನೀವ ಹಿಂಗ ಹಳ್ಳಾ ಒಗದ್ರ ನಾವು ಹಾಡ್ಕಿ ನಿಲ್ಲಸ್ತೀವಿ’ ಅಂತ ಹೇಳ್ತೀವಿ. ನಮ್ಮ ಮೈ ಮುಟ್ಟಿದ್ದನ್ನು ಕೈ ಹಿಡಕೊಳ್ಳಾಕ ಬಂದದ್ದನ್ನು ಹೇಳೂದಿಲ್ಲ. ಹೇಳಿಕೊಂಡ್ರ ನಮ್ಮ ಮರ್ಯಾದಿನ್ನ ಹೋಗುದಲ್ಲಾ?” ಎಂದಳು ಬಬಲೇಶ್ವರ ಬಂಗಾರವ್ವನ ಜೊತೆಗಾರ ರಾಮಣ್ಣ ಹೇಳಿದ್ದು ಹೀಗೆ. “ಬಂಗಾರವ್ವ ವಯಸ್ಸಿನ್ಯಾಗ ತಾಜಾ ತಮಾಟಿ ಹಣ್ಣ ಇದ್ದಂಗಿದ್ಲು. ಜನಾ ಈಕಿನ ನೋಡಿದ ಕೂಡ್ಲೆ ಹುಯ್ಯ ಅನತಿದ್ರು. ಒಬ್ಬೊಬ್ರು ಈಕಿಗಿ ನೂರು ನೂರು ರೂಪಾಯಿ ಭಕ್ಷೀಸು ಮಾಡುವರು, ಹೆಚ್ಚ ಹೆಚ್ಚ ಭಕ್ಷೀಸು ಬಂದ್ಹಂಗೆಲ್ಲಾ ನನಗೂ ಆಕಿಗೂ ಬಾಳ ಹೆದರಿಕೆ ಆಗೂದು. ರೊಕ್ಕದ ಹೆಸರಿನಲ್ಲಿ ಬಂಗಾರವ್ವನ ಮ್ಯಾಲೆ ಹಕ್ಕು ಸಾಧಿಸಬಾರ್ದು. ಭಕ್ಷೀಸು ಹೆಚ್ಚ ಕೊಟ್ಟ ಊರ್ಯಾಗ ಹೆಚ್ಚ ಹೊತ್ತು ಇರಾಕ ಹೆದರಿಕೆ ಆಗ್ತಿತ್ತು. ಬಿದಾಯಿ ಕೊಡಾಕ ಆಟಾ ಆಡಿಸ್ಲಾಕ ಹತ್ತಿದರಂದ್ರ ಅದನ್ನೂ ಇಸ್ಕೋಳಾರ್ದ ನಮ್ಮ ಊರಿಗಿ ಯಾರ್ಗೂ ಹೇಳ್ದಂಗ ಬರತಿದ್ವಿ.”

ಜನವಾಡದ ಬುದ್ದವ್ವ “ ನಮ್ಮ ಮಾನಾ-ಸಮ್ಮಾನದ ಬಗ್ಗೆ ಏನ ಕೇಳತಿರಿ? ನಮ್ಮ ಹಾಡಿಕೆ ಹೆಚ್ಚಾಗಿ ಇರೂದ ರಾತ್ರಿ ಹೊತ್ತಿನ್ಯಾಗ ರಾತ್ರಿ ಬೆಳಗ್ಯಾನ ನಡಿಯೋ ಈ ಪ್ರೋಗ್ರಾಮಕ ಕುಡಿಯೂ ಗಣಸರ ಹೆಚ್ಚಿಗಿ ಬರತಾರ. ನಿಶೇದಾಗ ನಮ್ಮ ಕಪಾಳಿಗಿ, ಮುಖಕ್ಕ ಗುಲಾಲ್ ಅರಿಷನಾ ಹಚ್ಚಾಕ ಬರತಾರ. ಗುಲಲ್, ಅರಿಷಣ ಬರೆ ಹಚ್ಚಿ ಬಿಡಂಗಿಲ್ಲ. ಅದs ನೆಪದಾಗ ಗಲ್ಲಾ ಸವರತಾರ. ಕಿಸಕ್ಕನ ನಗತಾರು. “ಗಲ್ಲಾನ ಇಷ್ಟ ಹೋಳಿಗಿ ಆಗಾವ ಅಂತಂದ್ರ….” ಅಂತ ಅರ್ಧ ಮಾತನಾಡಿ ಕೆಳಗ ಇಳಿತಾರು. ಹೀಂಗ ಮಾಡ್ದ ಕೂಡ್ಲೆ. ಇಂಥಾ ಮಾತು ಕೇಳಿದ ಕೂಡ್ಲೆ ಮೈಯಾಗ ಚೇಳ ಹರಿದಾಡದ್ಹಂಗ ಆಗತೈತಿ. ಆದ್ರ ನಮ್ಗೆ ಏನು ಮಾಡು ತಾಕತ್ತು ಐತಿ ಹೇಳು? ಇತ್ತೀಚಿಗೆ ಜಾತ್ರಾಗ ಪಲೀಸರು ಇರಾಕತ್ತಾರು, ನಿಶೆದಾಗ ಗಣಸರು ಏನರ ಮಾಡಿದ್ರ ಅವ್ರಿಗಿ ಹೇಳ್ತಿವಿ. ಒಮ್ಮಿ ಹೀಂಗ ಆಯ್ತು. ಆಯೇರಿ ಕೊಡ ನೆಪದಾಗ ನನ್ನ ಮೈಮ್ಯಾಲಿ ಬಂದವ್ನ ಪೋಲಿಸರು ಅರೆಸ್ಟ್ ಮಾಡಿದ್ರು, ಅವನ ಮ್ಯಾಗ ಕಂಪ್ಲೆಂಟು ಮಾಡ್ತೀವಿ ಅಂತಂದ್ರು. ನಾವು ಪಲೀಸರ‍್ಗಿ ‘ಸಾರು ನಾವು ಜಗದ ಮಕ್ಕಳು, ಕಹಿತನ ಕಟ್ಟಿಕೊಳ್ಳದು ಬ್ಯಾಡಾ ಬಿಟ್ಟ ಬಿಡ್ರಿ’ ಅಂತ ಕೇಳಕೊಂಡು ಕಂಪ್ಲೆಂಟ್ ಆಗೂದನ್ನು ಬಿಡಿಸಿದೆವು” ಎಂದು ಹೇಳಿದಳು.

ಹೀಗೆ ಸನ್ಮಾನದ ಹೆಸರಿನಲ್ಲಿ ನಡೆಯುವ ಹಲವಾರು ಕಹಿ ಘಟನೆಗಳನ್ನು ನಾನು ಸಂದರ್ಶಿಸಿದ ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರೆಲ್ಲರೂ ಹೇಳಿದರು. ಪಾತರದವರಿಗೂ ಕಲಾ ಸನ್ಮಾನಗಳು ನಡೆಯುತ್ತಿದ್ದವು. ಇವರ ಮಾನಾಪಮಾನಗಳು ಹಾಡಿಕೆ ಮಹಿಳೆಯರಿಗಿಂತ ಭಿನ್ನವಾಗಿದ್ದವು. ಪಾತರದವರ ಕಲಾ ಸೇವೆಯು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಹಗಲಿನಲ್ಲಿಯೇ ಇರುತ್ತಿತ್ತು, ಶೈವ ಮತ್ತು ವೈಷ್ಣವ ದೇವಸ್ಥಾನಗಳಲ್ಲಿ ನಡೆಯುತ್ತಿತ್ತು. ಇಂತಹ ಗುಡಿಗಳಿಗೆ ಕ್ಷತ್ರಿಯ, ಶೈವ, ವೈಷ್ಣವ ಸಮುದಾಯದವರೇ ಹೆಚ್ಚಾಗಿ ಬರುತ್ತಿದ್ದರು. ಮುಟ್ಟ ಬಹುದಾದ ಜಾತಿಗೆ ಸೇರಿದ ಲಿಂಗಾಯುತರೂ ಗುಡಿಯ ಭಕ್ತರಾಗಿರುತ್ತಿದ್ದರು. ಆದರೂ ಇಂತಹ ದೇವಸ್ಥಾನಗಳಲ್ಲಿ ವೈದಿಕ ಮೌಲ್ಯಗಳೇ ಪ್ರಧಾನವಾಗಿರುತ್ತಿದ್ದವು. ಜಮೀನನ್ನು ಬಂಗಾರವನ್ನು ಭಕ್ಷೀಸಾಗಿ ಕೊಡುತ್ತಿದ್ದರು. ಗುಡಿಯ ಸ್ಥಳದ ಬಗ್ಗೆ ಇರುವ ಪವಿತ್ರ ಭಾವನೆಯು ಪಾತರದವರ ಸನ್ಮಾನವನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಮಾಡಿರಬೇಕು. ಜಮಾದಾರರು, ಕುಲಕರ್ಣಿಗಳು, ಸುಭೇದಾರರು, ನ್ಯಾಯಾಧೀಶರು ಮೊದಲಾದವರೆಲ್ಲ ಸಂಗೀತ ಬಯಸಿ, ನಾಟ್ಯ ಬಯಸಿ ಮನೆಗೆ ಹೋದರೆ, ಪಾತರದವರು ಪ್ರದರ್ಶನ ನೀಡುತ್ತಿದ್ದರು. ಕಲಾ ಪ್ರದರ್ಶನದ ಅವಧಿ ಸಾಯಂಕಾಲ ಎಂದರೆ ಆರರಿಂದ ಏಳರವರೆಗೆ ಮಾತ್ರ. ಪಾತರದವರ ಕಲಾ ಆರಾಧಕರು ಸಮಾಜದಲ್ಲಿ ಗಣ್ಯ ವ್ಯಕ್ತಿಗಳೆಂದು ಗುರುತಿಸಿಕೊಂಡವರು, ಹೀಗಾಗಿ ಅವರು ತಮ್ಮ ಗೌರವನ್ನು ಕಾಪಾಡಿಕೊಳ್ಳುವುದಕ್ಕಾದರೂ ಪಾತರದವರೊಂದಿಗೆ ಘನತೆಯನ್ನು ವರ್ತಿಸಬೇಕಾಗುತ್ತಿತ್ತು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರ ಕಲಾ ಪ್ರದರ್ಶನ ಹೆಚ್ಚಾಗಿ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದೆ. ಊರ ಹೊರಗಿನ ಪಂಚಾಯಿತಿ ಕಟ್ಟೆ ಆಲದ ಮರದಡಿಯಲ್ಲಿ ಸ್ಥಳ, ಸಮುದಾಯ ಭವನದ ಮುಂದಿನ ವಿಶಾಲವಾದ ಜಾಗ ಮೊದಲಾದ ಕಡೆಗಳಲ್ಲಿ ಹರದೇಶಿ-ನಾಗೇಶಿ ಹಾಡುಗಾರರು ಕಲಾ ಪ್ರದರ್ಶನವನ್ನು ನೀಡುವರು. ಕಲೆಯನ್ನು ಕೇಳುವವರು ಎಲ್ಲ ಜಾತಿ-ಧರ್ಮಗಳಿಗೂ ಸೇರುತ್ತಾರಾದರೂ, ಈ ಪ್ರದರ್ಶನಗಳನ್ನು ಬ್ರಾಹ್ಮಣಗಾರರು ನೋಡುವುದಿಲ್ಲ. ಹೆಚ್ಚಾಗಿ ಲಿಂಗಾಯುತರು, ಕಂಬಾರರು, ಕುಂಬಾರರು, ಮುಸ್ಲಿಮರು ಹೀಗೆ ಮಧ್ಯಮ ಜಾತಿಯ, ಕೆಳ ಕಾತಿಗಳ ಜನರು ಮಾತ್ರ ಪ್ರದರ್ಶನವನ್ನು ವೀಕ್ಷಿಸುತ್ತಾರೆ. ನೈತಿಕ ಮೌಲ್ಯಗಳು ಇರುತ್ತವಾದರೂ ಅವುಗಳು ಕಡ್ಡಾಯವಾಗಿರುವುದಿಲ್ಲ. ಈ ನೀತಿ ಮೌಲ್ಯಗಳನ್ನು ಪಾಲಿಸುವುದರೊಟ್ಟಿಗೆ ಅವುಗಳನ್ನು ಮೀರುವ, ಮುರಿಯುವ ಪ್ರಕ್ರಿಯೆಗಳೆಲ್ಲವೂ ಪ್ರೇಕ್ಷಕ ವರ್ಗದವರಲ್ಲಿ ನಡೆಯುತ್ತಿರುತ್ತವೆ.

ಆಧ್ಯಾತ್ಮಿಕ ಹೆಸರಿನಲ್ಲಿ ಲೈಂಗಿಕ ಲೇಪನವಿರುವ ಸಂವಾದಗಳು ನಡೆಯುತ್ತಿರುತ್ತವೆ. ಜನ ಕೇಕೆ ಹೊಡೆದು ಮುಕ್ತವಾಗಿ ಆಸ್ಪಾದಿಸುತ್ತಾರೆ ವೈದಿಕ ಮೌಲ್ಯಗಳಂತೆ ಇವರು ಮಹಿಳೆಯರನ್ನು ಅದರಲ್ಲೂ ತಳ ವರ್ಗದ ಮಹಿಳೆಯರನ್ನು ‘ಜೋಗತಿ’ಯರನ್ನು ಭೋಗ ವಸ್ತುಗಳೆಂದು ಪರಿಭಾವಿಸುತ್ತಾರೆ, ಹೀಗಾಗಿ ಅವರೊಟ್ಟಿಗೆ ಒರಟೊರಟಾಗಿ ನಡೆದುಕೊಳ್ಳುತ್ತಾರೆ. ಪಾತರದವರು ನಯವಾಗಿ, ಗೌರವಯುತವಾಗಿ ಶೋಷಣೆಗೆ ಒಳಗಾದರೆ, ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಒರಟೊರಟಾಗಿ ದೌರ್ಜನ್ಯಗಳಿಗೆ, ಹಿಂಸೆಗಳಿಗೆ ಒಳಗಾಗುತ್ತಿರುತ್ತಾರೆ. ಮಧ್ಯಮ ಜಾತಿಯ, ಕೆಳ ಮಧ್ಯಮ ಜಾತಿಯ ಸಮಾಜಗಳು ಯಾವುದನ್ನು ‘ಸನ್ಮಾನ’ ಎಂದು ಭಾವಿಸಿಕೊಂಡಿರುತ್ತದೆಯೋ ಅದನ್ನು ಹರದೇಶಿ-ನಾಗೇಶಿ ಹಾಡುಗಾರರು ‘ಶೋಷಣೆ ಮತ್ತು ಅಪಮಾನ’ ಎಂದು ಭಾವಿಸಿರುತ್ತಾರೆ, ಜಾತ್ರೆಯ ಸಮಯದಲ್ಲಿ ಹರದೇಶಿ-ನಾಗೇಶಿ ಹಾಡುಗಾರರನ್ನು ಕರೆಸುವ ಊರಿನ ಮುಖ್ಯಸ್ಥರನ್ನು ಕಂಡಾಗ ತಾವು ಈ ಕಲಾಕಾರರನ್ನು ಗೌರವದಿಂದ ನಡೆಸಿಕೊಳ್ಳುವುದಾಗಿ ಹೇಳಿದರು. “ಹಾಡಿಕೆಯನ್ನು ಗೊತ್ತು ಮಾಡಲು ಊರಿನ ತಳವಾರರನ್ನು ಕಳಸ್ತಿವಿ. ಅವರ ಉಪಚಾರಕ್ಕೆಂದು ಹಾಡುಗಾರರ ಜಾತಿಯವರನ್ನೇ ನೇಮಿಸಿರ್ತೀವಿ. ಒಂದು ರಾತ್ರಿ ಹಾಡಿದ್ರ ಮೂರು ಸಾವಿರ ನಾಲ್ಕು ಸಾವಿರದವರೆಗೆ ಒಂದೊಂದು ಮ್ಯಾಳದವರಿಗಿ ಕೊಟ್ಟ ಕಳಸ್ತೀವಿ. ಹಾಡಿಕೆ ಬಾಳ ಮನಸ್ಸಿಗಿ ಬಂತಂದ್ರ ಹಾಡು ಹೆಣ್ಣ ಮಕ್ಕಳಗಿ ಎಲ್ಲಾರೆದುರಿಗೆ ಹೆಣ್ಣ ಮಕ್ಕಳ ಕಡೆಯಿಂದ ದಂಡಿ ಕಟ್ಟಿಸಿ ಸೀರಿ, ಕುಬುಸಾ ಕೊಡ್ತೀವಿ, ಕೆಳಜಾತಿ ಹೆಣ್ಣು ಮಕ್ಕಳು ಕೆಳಾಕ ಬಂದಿರತಾರ. ಅವರ ಕಡೆಯಿಂದ್ಲೆ ಎಲ್ಲಾ ಸನ್ಮಾನಾ ಮಾಡಸ್ತೀವಿ. ನಮ್ಮ ಮನಿ ಮಕ್ಕಳ ಅಂದ್ರ ಗೌಡ್ರು, ಕುಲಕರ್ಣಿರು, ಲಿಂಗಾಯತರ ಹೆಣ್ಣು ಮಕ್ಕಳು ಹಾಡಿಕೆ ಕೇಳಾಕ ಬರಂಗಿಲ್ಲ. ಹಾಡು ಅಶ್ಲೀಲ ಇರತಾವು ಅದಕ್ಕ ನಾವು ನಮ್ಮ ಹೆಣ್ಣು ಮಕ್ಕಳನ್ನು ಕೇಳಾಕ ಕಳಸಂಗಿಲ್ಲ” ಎಂದ ಊರಿನ ಮುಖ್ಯಸ್ಥರ ಮಾತುಗಳನ್ನು ಗಮನಿಸಬೇಕು. ನಾನು ಸಂದರ್ಶಿಸಿದ ಬಹುತೇಕ ಊರ ಮುಖಂಡರು ಹೆಚ್ಚು-ಕಮ್ಮಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹಾಡಿಕೆಯವರನ್ನು ಕರೆಸುವವರ ಪ್ರಕಾರ ಹಾಡುಗಾರರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಹಾಡುಗಾರರು ಪಡೆಯುವ ಸಂಭಾವನೆ, ನೀಡುವ ಭಕ್ಷೀಸು, ಸೀರೆ ಮತ್ತು ಜಂಪರ್ ಪೀಸನ್ನು ಕೊಟ್ಟು ದಂಡಿಕಟ್ಟಿ ಆರತಿ ಮಾಡಿಕೊಡುವುದು, ಹಾಗೆಯೇ ಮಹಿಳಾ ಹಾಡುಗಾರರಿಗೆಂದು ಪರಿಚಾರಕರನ್ನು ನೇಮಿಸುವ ಪ್ರಕ್ರಿಯೆ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟು ಹಾಡುಗಾರರಿಗೆ ಗೌರವವಿದೆ ಎಂದು ಹೇಳುತ್ತಾರೆ. ಪ್ರಸಿದ್ದ ಹಾಡುಗಾರರೆಂದು ಗುರುತಿಸಿಕೊಂಡ ಹರದೇಶಿ-ನಾಗೇಶಿ ಹಾಡುಗಾರರು ಮೇಲೆ ಉಲ್ಲೇಖಿಸಿದ ಮುಖ್ಯಸ್ಥರ ದನಿಗೆ ಪರಕವಾಗುವಂತೆ ಹೇಳಿದರು. ಬಬಲೇಶ್ವರ ಬಂಗಾರವ್ವನು “ಕೆಲವು ಪ್ರೀತಿಯಿಂದ ನೆಪ್ಪ ಇಡುವಂಗ ಸನ್ಮಾನ ನಡದಾವು. ಕೆಸರಾಳ ದೇವಿ ಅವರು ನಲ್ವತ್ತು ವರ್ಷಗಳ ಹಿಂದಿನs ನಮ ಹಾಡ್ಕಿ ಮೆಚ್ಚಿಕೊಂಡ ಒಂದ ಸಾವಿರ ರೂಪಾಯಿ ಕೊಟ್ಟರು, ಆಗಿನ ಕಾಲಕ್ಕೆ ಒಂದು ಸಾವಿರ ರೂಪಾಯಿ ಬಾಳ ದೊಡ್ಡ ರೊಕ್ಕ. ಬೆಳಗಾಂವದ ಸಂಕೇಶ್ವರದಾಗ ಹೊಳೆಯವ್ವ ಗುಡಿ ಜಾತ್ರ್ಯಾಗ ಹಾಡ್ಕಿ ಮಾಡಿದಾಗ ಎಂಟ ತೊಲಿ ಬೆಳ್ಳಿ ಖಡಗಾ ಕೊಟ್ಟಿದ್ದರು. ಇಂಡಿಗಿ ಹಾಡ್ಕಿ ಹೋದಾಗೊಮ್ಮೆ ಎರಡ ಸೀರೆ, ಕುಬುಸಾ ಕೊಡತಾರು. ಕೆಲವು ಕಡೆ ನನ್ನ ಮನಿ ಮಗಳಂಗ ಕಾಳಜಿಯಿಂದ ನೋಡ್ಯಾರ. ಹೀಂಗಾಗೇ ಇನ್ನೂ ಹಾಡಿಕ್ಯಾಗ ಅದೇನಿ. ಇಲ್ಲಾಂದ್ರ ಎಲ್ಲಾ ಕಡೆ ನಮ್ಮನ್ನ ಕೆಟ್ಟದಾಗಿಯೇ ನಡೆಸಿಕೊಂಡಿದ್ರ ಹಾಡ್ಕಿ ಬಿಟ್ಟ ಬಾಳೊತ್ತು ಆಗಿರತ್ತಿತ್ತು” ಎಂದಳು. ಮಂದರೂಪದ ಈರಮ್ಮ ಕಾಂಬಳೆ “ನಮಗ ನೋಡಕೊಳ್ಳಾಕ ಆ ಊರಿನ ಗೌಡರು ಸೇವಕರ್ನ ಹಚ್ಚಿರತಾರ. ಇದು ಕಿಮ್ಮತ್ತು ಹೌದು ಅಲ್ಲೋ? ತೆಲಗ್ಯಾಗ ನನಗ ಶಾಲು ಹೊದಿಸಿದ್ರು, ಹಾಡ್ಕಿ ಮುಗದಿಂದ ಎರಡ ಜಂಪರ ಪೀಸು ಕೊಟ್ಟು, ಮ್ಯಾಲ ನೂರು ರೂಪಾಯಿ ಕೊಟ್ಟ್ರು, ಬಿದಾಯಿಗೂ ಇದಕ್ಕೂ ಸಂಬಂಧ ಇಲ್ಲ. ಕೆಲವು ಕಡಿ ರೊಕ್ಕದ ಮಾಲಿ (ಮಾಲೆ), ಹೂವಿನ ಮಾಲಿ ಹಾಕ್ಯಾರು, ಇಂಥಾ ಅಪರೂಪದ ಸನ್ಮಾನಗಳೂ ಹಾಡ್ಕಿ ಬಗ್ಗಿ ಇನ್ನೂ ಮೋಹಾ ಉಳಿಸ್ಯಾವ” ಎಂದು ಹೇಳಿದಳು. ಹೀಗೆ ತಮ್ಮ ಕಲಾ ಜೀವನದ ಅಪರೂಪದ ಕ್ಷಣಗಳನ್ನು ಬಬಲೇಶ್ವರದ ಬಂಗಾರವ್ವ, ಮಂದರೂಪದ ಈರಮ್ಮ ಕಾಂಬಳೆಯ ಹಾಗೆ ಕೆಲವು ಮಹಿಳಾ ಹಾಡುಗಾರರು ಹೇಳಿದರು. ಹಾಡಿಕೆ ಕ್ಷೇತ್ರದಲ್ಲಿನ ನಿಮ್ಮ ಅನುಭವವೇನು ಎಂದಾಗ ಅವರು ಕಣ್ಣು ತುಂಬಿಕೊಂಡಿದ್ದೇ ಹೆಚ್ಚು. ಆದ ಅಪಮಾನಗಳನ್ನು ಹೇಳಿಕೊಳ್ಳಲಾಗದೇ ನಲುಗಿದ್ದೇ ಹೆಚ್ಚು. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರು ಹಾಗೂ ಊರಿನ ಮುಖಂಡರು ಹೇಳಿದಂತೆ, ಕಲಾ ಪ್ರದರ್ಶನವನ್ನು ನೋಡಲು ಬರುವವರು ಹೆಚ್ಚಾಗಿ ಗಂಡಸರು ಮತ್ತು ತಳ ಸಮುದಾಯದ ಮಹಿಳೆಯರು, ಲಿಂಗಾಯುತ, ಬ್ರಾಹ್ಮಣ ಸಮುದಾಯಗಳಿಗೆ ಸೇರಿದ ಮಹಿಳೆಯರಿಗೆ, ಹಾಡಿಕೆಯನ್ನು ವೀಕ್ಷಿಸಲು ಅವರ ಕುಟುಂಬದ ಗಂಡಸರು ಅವಕಾಶ ನೀಡುವುದಿಲ್ಲ. ಈ ಕಾರ್ಯಕ್ರಮ ವೀಕ್ಷಣೆಗೆ ಕಳುಹಿಸದಿರಲು ಅವರೇ ನೀಡುವ ಕಾರಣ “ಹಾಡುಗಾರರು ಹೇಳುವ ಸಾಹಿತ್ಯ ಅಶ್ಲೀಲವಾಗಿರುತ್ತದೆ. ಕುಡುಕ ಗಂಡಸರು ಇರುತ್ತಾರೆ. ಕೆಳಜಾತಿ, ಕೆಳ ಸಮುದಾಯಗಳಿಗೆ ಸೇರಿದವರ ಜೊತೆಯಲ್ಲಿ ತಮ್ಮ ಕುಟುಂಬದ ಮಹಿಳೆಯರು ಕೂಡುವುದು ಶೋಭಾ ಅಲ್ಲ”. ಹೀಗೆ ಊರ ಜಾತ್ರೆಗೆಂದು ತಾವೇ ಮುಖಂಡತ್ವ ವಹಿಸಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ತಮ್ಮ ಕುಟುಂಬದ ಮಹಿಳೆಯರನ್ನೇ ಕಳುಹಿಸದಿರುವುದೇ ಕಲಾ ಪ್ರದರ್ಶನದ ಸ್ವರೂಪ ಮತ್ತು ಮಹಿಳಾ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ಸ್ಪಷ್ಟಪಡಿಸುತ್ತದೆ. ಹರದೇಶಿ-ನಾಗೇಶಿ ಹಾಡುವ ಕಲಾವಿದರಿಗೆ ಹಾಡುಗಾರಿಕೆಯು ಹೊಟ್ಟೆಪಾಡಾಗಿರುತ್ತದೆ, ಕಲೆಯಾಗಿರುತ್ತದೆ ಹಾಗೂ ಅಪಮಾನವಾಗಿರುತ್ತದೆ. ಹೀಗಾಗಿಯೇ ಕಲೆಯನ್ನು ಪ್ರೀತಿಯಿಟ್ಟು ಕಲಿಯುತ್ತಾರೆ. ಕಲಿಯುವ ಸಂದರ್ಭದಲ್ಲಿ ಹಾಗೂ ಕಲಾ ಪ್ರದರ್ಶನ ಸಂದರ್ಭದಲ್ಲಿ ಎದರಾಗುವ ಅಪಮಾನಗಳನ್ನು, ಹಿಂಸೆಗಳನ್ನು, ದೌರ್ಜನ್ಯಗಳನ್ನು ಹೊಟ್ಟೆಪಾಡಿಗಾಗಿ ಸಹಿಸಿಕೊಳ್ಳೂತ್ತಾರೆ. ಬಹುತೇಕ ಸಂದರ್ಭದಲ್ಲಿ ಅವರಿಗೆ ಮಾಡುವ ಸನ್ಮಾನಗಳು ಅಪಮಾನಿಸುವಂಥವುಗಳೇ ಅಗಿರುತ್ತವೆ. ಹಸಿವನ್ನು ತಣಿಸಿದ, ಮರ್ಯಾದೆ ಮುಚ್ಚಿಕೊಳ್ಳಲು ಮೈ ತುಂಬ ಬಟ್ಟೆ ನೀಡಿದ ಹರದೇಶಿ-ನಾಗೇಶಿ ಹಾಡುಗಾರಿಕೆಯು ಮಹಿಳಾ ಹಾಡುಗಾರರಿಗೆ ವೃತ್ತಿಯೂ ಹೌದು, ಕಲೆಯೂ ಹೌದು, ಅಪಮಾನಿಸುವ ಕ್ಷೇತ್ರವೂ ಹೌದು, ಬದುಕೂ ಹೌದು, ಹಾಡಿಕೆಯು ಅಪಮಾನಿಸುತ್ತದೆ ಎಂದು ಹಾಡುವ ಈ ವೃತ್ತಿಯನ್ನು ಬಿಟ್ಟರೆ ಬದುಕೇ ಬಿದ್ದು ಹೋಗುತ್ತದೆ. ಏಕೆಂದರೆ ಕೆಳಕಾಜಿಗಳ ಸಂದರ್ಭದಲ್ಲಿ ವೃತ್ತಿ ಬದುಕು, ಅಪಮಾನ ಒಟ್ಟೊಟ್ಟಿಗೆ ಸಮೀಕರಣಗೊಂಡಿರುತ್ತದೆ. ಅಪಮಾನ ರಹಿತವಾದ ಜೀವನ ಸಾಗಿಸುವ ಸಾಮಾಜಿಕ ಪರಿಸರ ಅವರಿಗೆ ಇಲ್ಲವೇ ಇಲ್ಲ. ಹಾಡಿಕೆ ವೃತ್ತಿಯಲ್ಲಿದ್ದರೂ ಅಪಮಾನ, ಹಾಡಿಕೆ ವೃತ್ತಿ ಬಿಟ್ಟರೂ ಅಪಮಾನ. ಏಕೆಂದರೆ ಇವರು ‘ದೇವದಾಸಿಯರು’ ಈ ಅಪಮಾನಗಳನ್ನು ಮರೆಯಲೆಂದೋ ಏನೋ ಸಮಾಜವು ಹೇಳಿದ ಹಾಗೆ ತಮ್ಮ ಹಾಡಿಕೆಯೇ ಮಹಾನ್ ಕಲೆಯೆಂದು, ತಾವು ಕಲಾಕಾರರೆಂದು ಭಾವಿಸಿಕೊಳ್ಳುತ್ತಾರೆ. ಶೋಷಕರು ನಿರ್ವಚಿಸಿದ್ದನ್ನು, ನಿರ್ದೇಶಿಸಿದ್ದನ್ನು ಶೋಷಿತರು ಒಪ್ಪಿಕೊಳ್ಳುತ್ತಾರೆ. ಅದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ. ಒಬ್ಬರನ್ನು ನಿಯಂತ್ರಿಸುವ ಹಕ್ಕು ಚಲಾಯಿಸುವ ರಾಜಕೀಯ ಅಜೆಂಡಾಗಳು ಶೋಷಕರಿಗಿದ್ದಂತೆ ಶೋಷಿತರಿಗೆ ಇರುವುದಿಲ್ಲ. ಶೋಷಕರು ನಿರ್ದೇಶಿಸಿದಂತೆ ನಡೆದುಕೊಳ್ಳುತ್ತಿರುತ್ತಾರಾದರೂ, ಅದರೊಳಗಡೆ ತಮ್ಮದೇ ಲೋಕವನ್ನು, ಆ ಲೋಕದ ಕುರಿತ ಪ್ರೀತಿಯನ್ನು ಕಟ್ಟಿಕೊಂಡಿರುತ್ತಾರೆ. ಕಲೆಯ ಕುರಿತ ಪ್ರೀತಿ ಹಾಗೂ ಹೊಟ್ಟೆಯ ಹಸಿವಿನ ಭಯ ಇವುಗಳು ಶೋಷಿತರಲ್ಲಿ ಎದುರಾಗಿರುವ ಅಪಮಾನಗಳನ್ನು ಧಾರಣ ಮಾಡಿಕೊಳ್ಳುವ ಶಕ್ತಿಯನ್ನು ನೀಡಿರುತ್ತದೆ. ಬದುಕಿನ ಇಕ್ಕಟ್ಟಿನಲ್ಲಿ, ಅನಿವಾರ್ಯತೆಯಲ್ಲಿ ಹುಟ್ಟಿಕೊಂಡ ಅವರ ಧಾರಣ ಶಕ್ತಿಯನ್ನು ಬಳಸಿಕೊಂಡು ಕಲೆಯ ಹೆಸರಿನಲ್ಲಿ ಅವರ ಅಪಮಾನಗಳನ್ನು ಪಷಿಸುತ್ತ ಅದರಲ್ಲಿ ವಿಕೃತ ಮನರಂಜನೆಯನ್ನು ಶೋಷಕರು ಪಡೆದುಕೊಳ್ಳುತ್ತಿರುತ್ತಾರೆ. ಕಲೆಯನ್ನು ಕಲಾವಿದರನ್ನು ನಾವು ಅರ್ಥೈಸಿಕೊಳ್ಳಬೇಕಾದುದು ಕಲೆಯನ್ನು ಅವಲಂಬಿಸಿದ ಕಲಾವಿದರ ಸಾಮಾಜಿಕ, ಆರ್ಥಿಕ ಹಿನ್ನೆಲೆಯಿಂದ ಹಾಗೂ ಕಲೆಯನ್ನು ಪೋಷಿಸುತ್ತೇವೆ ಎಂದು ಹೇಳುವವರ ಸಾಮಾಜಿಕ, ಆರ್ಥಿಕ ಹಿನ್ನೆಲೆಯಿಂದ.