ಅರಳು ಕಂಗಳಲ್ಲಿ ಹೊಳಪಿತ್ತು. ಆತ್ಮ ಗೌರವವಿತ್ತು. ಮೊನಚಾದ ಮೂಗು. ಮುದ್ದಾದ ಬಾಯಿ. ತೊಂಬತ್ತರ ವಯಸ್ಸಿನಲ್ಲಿಯೂ ಮಿಂಚುತ್ತಿದ್ದ ಮೈ ಬಣ್ಣ. ನಾನು ಹೇಳುತ್ತಿರುವುದು ರಾಮದುರ್ಗ ದ್ರೌಪದಿಯ ಬಗ್ಗೆ. ತೊಂಬತ್ತರ ಇಳಿವಯಸ್ಸಿನಲ್ಲಿಯೂ ಇಪ್ಪತ್ತರ ಹರೆಯದ ಮನಸ್ಸು ಹೊಂದಿದವಳು. ದ್ರೌಪದಿಯನ್ನು ನೋಡಿದ ತಕ್ಷಣ ಸಾಕ್ಷಾತ್ ಕಲಾ ಸರಸ್ವತಿಯನ್ನೇ ಕಂಡಷ್ಟು ಸಂತೋಷವಾಯಿತು. ತನ್ನ ಇಡೀ ಕಲಾ ಬದುಕನ್ನು ತೆರೆದುಕೊಳ್ಳಲು, ಆಕೆ ಉತ್ಸುಕಳಾಗಿದ್ದರೆ, ಅವಳ ಮಗನಿಗೆ ತಾಯಿ ತನ್ನ ಬದುಕು ಬಿಚ್ಚಿಡುವುದು ಬೇಡವಾಗಿತ್ತು. ಹೀಗಾಗಿ ಅವನು ತನ್ನ ತಾಯಿಯು ನೀಡುವ ನಿರೂಪಣೆಯನ್ನು ನಿಯಂತ್ರಿಸಲು ತನ್ನ ಹೆಣ್ಣು ಮಗಳೊಬ್ಬಳಿಗೆ ಜವಾಬ್ದಾರಿ ನೀಡಿ ತನ್ನ ಕೆಲಸಕ್ಕೆ ಹೊರಟು ಹೋದನು. ದ್ರೌಪದಿ, ತನ್ನ ಕಲಾ ಬದುಕಿನ ಬಗ್ಗೆ ಹೇಳಿಕೊಳ್ಳಲು ಆತುರಳಾಗಿದ್ದಳು. ತನ್ನ ಕಲಾ ಬದುಕನ್ನು ಹಂಚಿ ಕೊಳ್ಳುವಾಗ ತಾನು ಮಾಡಿದ ಸಾಧನೆಗಳೊಂದಿಗೆ, ತಾನೆದುರಿಸಿದ ಅಪಮಾನಗಳನ್ನು ಹೇಳಿಕೊಳ್ಳಲು ಬಯಸುತ್ತಿದ್ದಳು. ಈ ಕಲಾವಿದರಿಗೆ ಸಮ್ಮಾನ-ಅಪ ಮಾನಗಳು ಒಂದೇ ನಾಣ್ಯದ ಎರಡು ಮುಖಗಳು. ಅಪಮಾನದಂತಹ ವಿಷಯಗಳು ಬಂದಾಗ ದ್ರೌಪದಿಯ ಪಕ್ಕದಲ್ಲಿಯೇ ಕೂತ ಮೊಮ್ಮಗಳು ತನ್ನಜ್ಜಿಯ ತೊಡೆ ಚೂಟಿ ಹೇಳದಂತೆ ನಿಯಂತ್ರಿಸುತ್ತಿದ್ದಳು. ಭಾವವೇಷದಲ್ಲಿ ಹೇಳುತ್ತಿದ್ದ ಅಜ್ಜಿ, ಮೊಮ್ಮಗಳ ಸೂಚನೆಯಿಂದಾಗಿ ಪೇಲವವಾಗಿ ಬಿಡುತ್ತಿದ್ದುಳು. ಹೇಳಿ ಹಗುರವಾಗಲು ಬಯಸಿದ ದ್ರೌಪದಿಗೆ ಮೊಮ್ಮಗಳ ಸೂಚನೆ ಹೃದಯ ಭಾರವಾಗುವಂತೆ ಮಾಡುತ್ತಿತ್ತು. “ಅಜ್ಜಿಯ ಕಲಾ ಬದುಕು ನನಗೆ ಬೇಕು, ಇನ್ನೇನಲ್ಲ, ಅಜ್ಜಿ ಮೂಲಕ ಇಡೀ ಕಲಾ ಲೋಕದ ಬೆಳವಣಿಗೆಯನ್ನು ಅರ್ಥ ಮಾಡಿ ಕೊಳ್ಳುವುದು ನನ್ನ ಉದ್ದೇಶ ಅಷ್ಟೇ” ಎಂದು ಹಲವು ರೀತಿಯಲ್ಲಿ ಅರ್ಥೈಸಲು ಪ್ರಯತ್ನಿಸಿ ನಾನು ಸೋತು ಹೋದೆ. ಅಜ್ಜಿಯು ಹಂಚಿಕೊಳ್ಳಲು ಬಯಸಿದ ಬಹುತೇಕ ಕಲಾ ಅನುಭವಗಳು ಆಕೆಯ ಹಾಗೂ ಆಕೆಯಂತವರ ನೋವು ಅಪಮಾನಗಳನ್ನು ಅನಾವರಣಗೊಳಿಸುವಂಥವುಗಳು. ಹೀಗಾಗಿ ಆಕೆಯ ಮೊಮ್ಮಗಳು ನಿಯಂತ್ರಿಸುತ್ತಿದ್ದಳು. ಆಧುನಿಕ ಶಿಕ್ಷಣಕ್ಕೆ ಮುಖಾಮುಖಿಯಾದ ಆಕೆಗೆ ಜಾತಿ ನೆಲೆಯಿಂದ, ಕಲಾ ನೆಲೆಯಿಂದ ನಡೆಯುವ ಅಪಮಾನಗಳು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ದ್ರೌಪದಿಯು ತನ್ನ ಕಲಾ ಬದುಕಿನಲ್ಲಿಯ ಅಪಮಾನಗಳನ್ನು ಗುರುತಿಸಿಕೊಂಡಿದ್ದರೂ, ಅದನ್ನು ಸಮಸ್ಯೀಕರಿಸಿಕೊಳ್ಳದೇ, ಪೂರ್ವಜನ್ಮದ ಕರ್ಮ ಎಂದೇ ಒಪ್ಪಿಕೊಂಡಿದ್ದಳು. ದ್ರೌಪದಿಯ ಕಲಾ ಬದುಕಿನ ಕುರಿತ ಜ್ಞಾನವನ್ನು, ಆ ಹುಡುಗಿ ಹೇಳಲು ಬಿಡುವುದಿಲ್ಲವೆನಿಸಿದಾಗ “ಬರುತ್ತೇನೆ ಅಜ್ಜಿ” ಎಂದು ಕೈ ಮುಗಿದು ಹೊರಡಲು ಸಿದ್ಧಳಾದೆ, ಆಗ ದ್ರೌಪದಿ “ತಂಗಿ ನನಗೆ ಪೆನ್‌ಶನ್ ಆಗಿಲ್ಲ. ಮಾಡಿಸಿ ಕೊಡ್ತೀಯಾ” ಎಂದಳು. ಯಾಕೆ ಸಿಕ್ಕಿಲ್ಲ? ಎಂದಾಗ ದ್ರೌಪದಿ ಉತ್ತರಿಸಿದ್ದು ಹೀಗೆ. “ದೇವದಾಸೇರ ಪೆನ್‌ಶನ್ ಕೊಡತೇವು ಅಂದ್ರು, ಅದನ್ನ ಬ್ಯಾಡಾ ಅಂದೆ. ದೇವದಾಸೇರು ಅಂದ್ರ ಸೂಳಿತನ ಮಾಡವ್ರು ಅಂತಾರಲ್ಲ; ಅಂಥಾ ದಗದ ನಾ ಮಾಡಿಲ್ಲ ತಂಗಿ. ನಾನ್ಯಾಕ ದೇವದಾಸಿ ಪೆನ್‌ಶನ್ ತಗೋಬೇಕ್ಹೇಳು? ಎಪ್ಪತ್ತು ವರ್ಷಗಂಟಲೆ ಈ ಕಲಾದಾಗ ದುಡದೇನು. ಸರಸತಿ ನನಗೆ ಕಲಿಸ್ಯಾಳ; ಸಲುವ್ಯಾಳ, ಸಾಯುವದರಾಗ ಆಕಿ ಹೆಸರ್ಲಿ ಪೆನ್‌ಶನ್ ತಗೋಬೇಕಂತ ಆಸಿ. ಕನ್ನಡ ಸಂಸ್ಕೃತಿ ಇಲಾಖೆ ಅವರು ನನ್ನ ಕಡಿಲಿಂದ(ನನ್ನಿಂದ) ಹಾಡಿಸಿದ್ರು, ನಾಟಕ ಮಾಡಿಸಿದ್ರು, ಕಲಾವಂತಿ ಅಂತ ಒಂದು ಸರ್ಟಿಪಿಕೇಟ್ ಮಾಡಿ, ಅದರ ಮ್ಯಾಗ ಪೆನ್‌ಶನ್ ಕೊಡತೇವಿ ಅಂತ ಹೇಳಿ ಹೋದ್ರು. ಇದುವರೆಗೂ ಏನೂ ಕಳಿಸಿಲ್ಲ. ಅವ್ರು ಕರದಲ್ಲಿಗೆ ಮೂರ ಸಲ ಹೋಗೇನಿ, ಆದ್ರೂ ಪೆನ್‌ಶನ್ ಬಂದಿಲ್ಲ. ಕನ್ನಡ ಸಂಸ್ಕೃತಿ ಇಲಾಖಾದವೊಬ್ಬ ಈ ಪೆನ್‌ಶನ್‌ಗೆ ಯಾಕ ಕಾಯ್ತಿ? ದೇವದಾಸಿ ಪೆನ್‌ಶನ್ ಬರುತ್ತಲ್ಲಾ? ತಗೋಬೇಕು ಅಂದಾ. ಬಾಳ ಸಿಟ್ಟ ಬಂದಿತ್ತ ತಂಗಿ. ಅಂವಗ ಅದು ಬ್ಯಾಡಪಾ, ಕಲಾ ಪೆನ್‌ಶನ್ ಬೇಕು ಎಂತ ಹೇಳಿ ಬಂದಿದ್ನಿ. ನನಗೆ ರೊಕ್ಕಾ (ಹಣ) ಬೇಕಂತ ಪೆನ್‌ಶನ್ ಕೇಳಾಕ್ಹತ್ತಿಲ್ಲ. ನನಗ ಮಗಾ ಬೇಕಾದ್ಹಾಂಗ ದುಡಿದು ತಂದ ಹಾಕ್ತಾನ. ಆದ್ರ ಖೋಡಿ ಜೀಂವಾ ತಾನ ದುಡದ-ದುಡದ ಕುಟುಂಬಾನ ನೋಡ್ಕೋಂಡೈತಲ್ಲಾ. ಹೀಂಗಾಗಿ ಮಗನ ಋಣಾ ಬ್ಯಾಡ ಅನಸ್ತದ. ಮಗನ ಋಣದಿಂದ ಮುಕ್ತ ಆದಂಗೂ ಅಗ್ತೈತಿ. ಸಾಯುತನಕ ಕಲಾ ಗೌರವದಾಗ ಬದುಕಿದ್ದಂಗೂ ಆಗ್ತದ, ನನಗ ನೀನು ಮಾಡ್ಸೂದಿದ್ರ ಕಲಾ ಪೆನ್‌ಶನ್ ಮಾಡ್ಸು” ಎಂದಳು. ದ್ರೌಪದಿಯ ಮಾತುಗಳು ಸ್ವಾಭಿಮಾನದ ಮಾತುಗಳಾಗಿದ್ದವು. ಆ ಮಾತುಗಳು ಸಮಾಜದ ಘನತೆಯನ್ನು ಪ್ರಶ್ನಿಸುವಂತವುಗಳಾಗಿದ್ದವು. ‘ಕಲಾ ಪಿಂಚಣಿ’ ಎನ್ನುವುದು ಕೇವಲ ಹಣಕಾಸಿನ ಸೌಲಭ್ಯಕ್ಕೆ ಸಂಬಂಧಿಸಿದ್ದಲ್ಲ. ಅದರಲ್ಲಿ ಸಾಮಾಜಿಕ ಮೌಲ್ಯದ ಸ್ವಾವಲಂಬಿ ಬದುಕಿನ ಪ್ರಶ್ನೆಯೂ ಇದೆ. ‘ದೇವದಾಸಿ’ ಎನ್ನುವ ಪದದಲ್ಲಿಯೇ ಸಾಮಾಜಿಕ ಶೋಷಣೆ ಇದೆ. ಬಳಸಿ ಬಿಸಾಡುವುದು ಎನ್ನುವ ಅರ್ಥವನ್ನೇ ಸಮಾಜ ಹೇರಿ ಒಪ್ಪಿಸಿದೆ. ಹೀಗಾಗಿ ದ್ರೌಪದಿ ಕಲಾ ಪಿಂಚಣಿಯನ್ನು ನಿರೀಕ್ಷಿಸುತ್ತಿದ್ದಳು. ಸಾಯುವುದರೊಳಗೆ ಒಂದು ಸಲವಾದರೂ ಪಿಂಚಣಿಯನ್ನು ತೆಗೆದುಕೊಳ್ಳ ಬಯಸುವ ಆಕೆಗೆ, ಕಲಾ ಪಿಂಚಣಿ ಅನ್ನುವುದು ಕೇವಲ ಪಿಂಚಣಿ ಆಗಿರಲಿಲ್ಲ; ಇಡೀ ಜೀವನವನ್ನು ಕಲೆಗಾಗಿ ತೇಯ್ದಿದ್ದಕ್ಕಾಗಿ ಸಿಗುವ ಜೀವಮಾನದ ಸಾಧನೆಯ ಪ್ರಶಸ್ತಿ ಆದಾಗಿತ್ತು. ದ್ರೌಪದಿ ಒಬ್ಬಳೆ ‘ದೇವದಾಸಿ’ ಪಿಂಚಣಿಯನ್ನು ನಿರಾಕರಿಸಿ, ಕಲಾ ಪಿಂಚಣಿಯನ್ನು ಬಯಸುತ್ತಾಳಾ ಅಥವಾ ಇಡೀ ಹರದೇಶಿ-ನಾಗೇಶಿ ಹಾಡುವ ಮಹಿಳಾ ಹಾಡುಗಾರರೆಲ್ಲರೂ ಬಯಸುತ್ತಾರಾ ಎನ್ನುವ ಕುತೂಹಲ ಮೊಳಕೆಯೊಡೆಯಿತು. ಮತ್ತೆ ನಾನು ಅಧ್ಯಯನ ನಡೆಸಿ ಬಂದ ಕ್ಷೇತ್ರಗಳಿಗೆ ಹೋಗಿ ಪಿಂಚಣಿ ಕುರಿತು ಪ್ರಶ್ನಿಸಿದಾಗ ಕುತೂಹಲಕರವಾದ ಲೋಕವೊಂದು ತೆರೆದುಕೊಂಡಿತು.

ಮಹಿಳಾ ಹಾಡುಗಾರರು: ಕಲಾ ದೀಕ್ಷೆ?

ಪಾತರದವರ ಕುಟುಂಬದಲ್ಲಿನ ಹುಡುಗಿ “ಗಂಡಾ ಕಟ್ಟುವುದು” (ವಿವರಣೆಗೆ ಶೈಲಜ ಹಿರೇಮಠ ಅವರು ಬರೆದ ‘ಪಾತರದವರು’ ಪುಸ್ತಕವನ್ನು ಗಮನಿಸಿ) ಆಚರಣೆಗೆ ಒಳಗಾದ ನಂತರ ಪಾತರದವಳಾಗುತ್ತಾಳೆ. ಹರದೇಶಿ-ನಾಗೇಶಿ ಮಹಿಳಾ ಹಾಡುಗಾರರಿಗೆ ಕಲಾ ದೀಕ್ಷೆ ಇರಬಹುದೇನೋ ಎನ್ನುವ ಕುತೂಹಲದಿಂದ ಅದಕ್ಕೆ ಸಂಬಂಧಿಸಿದ ಜ್ಞಾನವನ್ನು ಸಂಗ್ರಹಿಸಲು ಹೊರಟೆ, ಪಾತರದವರಲ್ಲಿ ಕೇವಲ ಹೆಣ್ಣು ಮಕ್ಕಳು ಕಲಾ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರದೇಶಿ-ನಾಗೇಶಿ ಹಾಡುಗಾರರಲ್ಲಿ ಮಹಿಳೆ ಹಾಗೂ ಪುರುಷರಿಬ್ಬರೂ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಇಬ್ಬರಿಗೂ ಕಲಾ ದೀಕ್ಷೆ ಇರಬಹುದೇನೋ ಎನ್ನುವ ಕುತೂಹಲ, ಅಧ್ಯಯನದ ಮತ್ತೊಂದು ಮಗ್ಗಲನ್ನು ತೆರೆದು ತೋರಿತು.

“ನಮ್ಮ ಕಲಾ ದೀಕ್ಷೆ ಅನ್ನೂದು ಥೇಟ ಲಗ್ನದ ತರಾ ಇರ್ತಿತ್ತು. ಸೂರ್ಯ ಹುಟ್ಟುವ ಮುಂಚೆ ನಾನೂ ಸ್ನಾನಾ ಮಾಡಿದ್ಯಾ. ಗುರುಗಳೂ ಮಾಡಿದ್ದರು. ಗುರುಗಳಿಗೆ ನಮಸ್ಕಾರಾ ಮಾಡಿದ್ಯಾ. ಗುರು ಎಡಕ್ಕ ಕುಂತ್ರು. ನಾನು ಬಲಕ್ಕ ಕುಂತ್ಯಾ. ನಾನಾಗ ಹೊಸಾ ಬಟ್ಟಿ ಹಾಕ್ಕೊಂಡಿದ್ಯಾ, ಅವ್ರಿಗಿ ಹೊಸಾ ಬಟ್ಟಿ ಜೋಡಿ ಗೋಧಿ ಹಿಟ್ಟು, ಬೆಲ್ಲ, ಕೊಬ್ಬರಿ, ರೊಕ್ಕ, ಉತ್ತುತ್ತಿ, ಎಲ್ಲಾನೂ ಕೊಟ್ಟ್ರು. ಎಲಿ ಅಡಕಿ ಜೋಡಿ ಗುರುಗಳಿಗೆ ಕಲಸಾಕ ಚಾಜಾ ಕೊಟ್ಟ್ರು. ಗುರುಗಳು ಎಲ್ಲಾರನ್ನೂ ಶಿಷ್ಯರ‍್ನ ಮಾಡ್ಕಿತಿರಲಿಲ್ಲ. ಅವ್ರಿಗೆ ನಮ್ಮನ್ನ ಶಿಷ್ಯಾ ಮಾಡ್ಕೋ ಬಹುದು ಅಂತ ಅನಿಸಿದ್ರೆ ಮಾತ್ರ ಮಾಡ್ಕೊತಿದ್ರು. ನಮ್ಮಿಬ್ಬರಿಗೂ ಮನಿ ಹೆಣ್ಣ ಮಕ್ಳು ಆರ್ತಿ ಮಾಡಿದ್ರು. ಆಮ್ಯಾಲೆ ಗುರುಗಳು ಅರ್ಧ ಹಾಲು ಕುಡ್ದು ನನಗ ಕೊಟ್ಟರು. ಆಗ ನಾನು ಅವ್ರ ಶಿಷ್ಯಾನಾದ್ಹಂಗ. ನಾನು ಕಲಿಯೋ ದಪ್ಪಿಗೂ ಪೂಜೆ ಮಾಡಿ, ನಮಸ್ಕಾರ ಮಾಡಿದ್ಯಾ. ಆಮ್ಯಾಲಿ ಹಾಡಿಕೆ ಕಲಿಸಾಕ ಚಾಲೂ ಮಾಡಿದ್ರು” ಎಂದು ಕಾಶಿನಾಥ ಚೌವ್ಹಾಣ ಹೇಳಿದರೆ ರಾಮದುರ್ಗದ ದ್ರೌಪದಿಯ “ಕಲಾಕ್ಕ ದೀಕ್ಷಾ ಅಂತ ಏನೂ ಇರ್ಲಿಲ್ಲ. ಒಂದು ಒಳ್ಳೆಯ ದಿನಾ ನೋಡಿ ದಪ್ಪ ಪೂಜೆ ಮಾಡಿ ಹಾಡಿಕೆ ಕಲಿಸಾಕ ಚಾಲೂ ಮಾಡ್ತಾರೆ” ಎಂದು ಹೇಳಿದಳು.

“ಕಲಾ ದೀಕ್ಷಾ ನಮಗಷ್ಟು ಕೊಡತಾರು, ಹೆಣ್ಣಮಕ್ಕಳಗಿ ಇಲ್ಲ. ಒಂದ ಛಲೋ ದಿನಾ ನೋಡಿ ನಮ್ಮಪ್ಪ ನನಗ ಹೊಸಾ ಬಟ್ಟಿ ತಂದು ಅರುಣಾ ಉದಯ ಆಗೂ ವ್ಯಾಳ್ಯಾದಾಗ ಸ್ನಾನಾ ಮಾಡಕ ಹೇಳಿ ಹೊಸ ಬಟ್ಟಿ ಹಾಕಿಸಿದಾ. ಗುರುಗಳ ಪಕ್ಕಕ್ಕ ಕೂಡಿಸಿದಾ. ಒಳ್ಳೆಯದು ಮಾತಾಡಬೇಕು, ಒಳ್ಳೆಯದು ನಡೀಬೇಕು. ಶಬ್ದಾರ್ಥ ನುಡಿ ಸರಿ ಇರಬೇಕು ಅಂತ ನನಗ ಗುರುಗಳು ಬೋಧಾ ಕೊಟ್ಟ್ರು. ದಪ್ಪು ಪೂಜೆ ಮಾಡ್ಸಿದ್ರು. ಆಮೇಲೆ ಗುರುಪ್ಯಾಲಾ ಕೊಡತಾರು. ಗುರುಪ್ಯಾಲ ತಗೊಂಡ್ರ ಮಾತ್ರ ಕಲಾವಂತರು ಆಗತಾರ” ಎಂದು ಹಿರೇಸಾವಳಗಿಯ ಗುಂಡಪ್ಪ ಹೇಳಿದರೆ; ಗಣಿಯಾರದ ರೇಣುಕಬಾಯಿಯು “ನಾನು ದೊಡ್ಡೇಕಿ ಆಗಿಂದ ನಮ್ಮ ಮನಿಗೆ ನಮ್ಮ ಜಾತಿ ಗುರುಗಳನ್ನ ಕರಕೊಂಡು ಬಂದ್ರು; ಹಾಡ್ಕಿಗಿ ಹಚ್ಚಿದ್ರು. ದಪ್ಪು ಪೂಜೆ ಮಾಡಿಂದ ಹಾಡ್ಕಿ ಕಲಿಸಾಕ ಚಾಲು ಮಾಡಿದ್ರು. ಆವತ್ತ ದಪ್ಪು ಪೂಜಾ ಮಾಡಾಕ್ಹತ್ತಿದಕಿ ಇವೊತ್ತಿಗೂ ದಪ್ಪಿಗಿ ಪೂಜೆ ಇಲ್ದ ಊಟ ಮಾಡಂಗಿಲ್ಲ. ಹೊರಗೆ ಹೋಗಂಗಿಲ್ಲ” ಎಂದು ಹೇಳಿದಳು.

ಆಳಂದ ತಾಲೂಕಿನ ಮುನವಳ್ಳಿಯ ತಳವಾರ ಜಾತಿಗೆ ಸೇರಿದ ವಿಲಾಸ ಜಮಾದಾರ್ ತನ್ನ ಕಲಾ ದೀಕ್ಷೆಯ ಕುರಿತು ವಿವರಿಸಿದ್ದು ಹೀಗೆ. “ನನಗೆ ಗುರು, ಹಜರತ್‌ಸಾಬ್. ಕರಿ ಕಂಬಳಿ ಹಾಲಿ, ಸ್ಯಾಸಕ್ಕಿ ಹಾಕಿ, ಅದರಾಗ ನನ್ನ ಮತ್ತು ಗುರಗಳ್ನ ಕೂಡಿಸಿದ್ರು, ಕಲಾ ಪವಿತ್ರವಾದುದು. ಅದಕ್ಕಂತೆ ನಾವು ತಲಿ ಸ್ನಾನಾ ಮಾಡಿ ಕುಂತಿರತಿವಿ. ಹೆಣ್ಣಿಗಾಗಿ ಕೋಟ್ಯಾನುಕೋಟಿ ಜನಾ ಹಾಳಾಗ್ಯಾರು. ಅದಕ್ಕೆ ಹೆಣ್ಣಿನ ಸಂಗಾ ಮಾಡಬ್ಯಾಡ್ರಿ, ಕುಡಿಬ್ಯಾಡ್ರಿ, ಗರೀಬ ಮಕ್ಕಳಿಗೆ ದಾನಾ ಮಾಡಬೇಕು. ಹೊಟ್ಟಿಗಿ ಕೂಳ ಸಿಗಲಿಕಂದ್ರ ಪ್ರೇಮದಿಂದ ಕೇಳಿ ತಿನ್ರ್ನಿ, ಕಿತಕೊಂಡ ತಿನಬ್ಯಾಡ್ರಿ, ಗರೀಬ ಮಕ್ಕಳಿಗಿ ದಾನಾ ಮಾಡ್ರಿ, ಅಂತೆಲ್ಲಾ ಬೋಧಾ ಮಾಡಿ, ಕಡೀಕ ನಮ್ಮ ಕೀಂವ್ಯಾಗ ಮಂತ್ರ ಹೇಳತಾರು. ಅದನ್ನ ನಾವು ನಿಮಗ ಹೇಳಬಾರದು. ನೀವು ನಿಮ್ಮ ಗಂಡನ್ನ ಜೊತೆ ಗುರುಬೋಧಾ ತಗೊಂಡ್ರ ಗುರುಗಳ ಏನು ಹೇಳತಾರ ಅಂತ ಗೊತ್ತಾಗ್ತದ. ಒಬ್ಬ ಹೆಣ್ಣ ಮಗಳಿಗಷ್ಟ್ಯ ಗುರುಬೋಧಾ ಕೊಡಾಕ ಬರೂದಿಲ್ಲ. ನಮ್ಮ ದೀಕ್ಷಾ ಪದ್ಧತಿ ಹ್ಯಾಂಗ ಇರ‍್ತದ. ಅಂದ್ರ ಗುರು ಗಂಡ ಆದ್ರ ನಾವು ಹೇಣ್ತಿ ಆದಂಗ. ಅದಕ್ಕ ಒಬ್ಬ ಹೆಣ್ಣ ಮಕ್ಕಗಳಿಗಿ ನಮ್ತರಾ ದೀಕ್ಷೆ ಕೊಡಂಗಿಲ್ಲ” ಎಂದರೆ, ಗುಲ್ಬರ್ಗಾದ ಕೊಳ್ಳೂರಿನ ನಸರುದ್ದೀನ್ ಇಸ್ಮಾಯಿಲ್ ಸಾಬ್” ಹಿಂದೂ ಮದುವಿ ಪದ್ಧತಿ ಹ್ಯಾಂಗ ಇರ‍್ತದೋ ಹಾಂಗ ನಮ್ಮದು ಗುರು ದೀಕ್ಷಾ ನಡೀತದ. ಹೆಣ್ಣಿನ ಹುಚ್ಚು ಹಿಡಸ್ಕೋಬ್ಯಾಡ್ರಿ, ಕಳ್ಳತನ ಮಾಡಬ್ಯಾಡ್ರಿ, ಸುಳ್ಳು ಹೇಳಬ್ಯಾಡ್ರಿ ಅಂತ ಗುರುಬೋಧಾ ಕೊಡತಾರು. ನಾವು ಯಾವ್ಯಾಗ ಹಸ್ತಿಕ್ (ಶಿಷ್ಯ) ಆಗ್ತೀವಿ ಅಂದ್ರ ಗುರುಪ್ಯಾಲಾ ತಗೊಂಡ ಮ್ಯಾಲ. ಗುರುಪ್ಯಾಲಾ ಕೊಡೂದು ಅಂದ್ರ ಮಡಿ ಆಕಳ ಹಾಲಿನ್ಯಾಗ ಕಲ್ಲಸಕ್ಕರಿ, ಕರ್ಜುರ, ಬಾದಾಮಿ ಹಾಕಿರತಾರ. ಇದನ್ನು ಒಂದು ಗ್ಲಾಸಿನಾಗ ಹಾಕಿ ಕೊಡತಾರು. ಗುರುಗಳೂ ಏನೋ ಮಂತ್ರ ಹೇಳಕೋಂತ ಉಫ್ ಅಂತ ಹಾಲು ಊದಿ, ತಾವು ಮೊದಲು ಅರ್ಧ ಕುಡಿದು ಶಿಷ್ಯಂಗೆ ಕೊಡತಾರು. ಹೀಂಗಾದ್ರ ನಾವು ಹಾಡ್ಕಿ ಕಲಿಯಾಕ ಶಿಷ್ಯರಾದ್ಹಂಗ. ಇದ್ಯಾದ ಮ್ಯಾಲೆ ಗುರುಗಳು ಕ್ರಿಯಾಚಾರ ಹೇಳ್ತಾರ. ಹಿಂದೂ ಗುರುಗಳಾದ್ರ ಅಷ್ಟಾಕ್ಷರ ಮಂತ್ರ ಹೇಳ್ತಾರ. ಮುಸ್ಲಿಂ ಗುರುಗಳಾದ್ರ “ದರೂದೆ ಷರೀಫ್ ಆಯಪ್ಪ ನಾಮ, ಆಯಪ್ಪ ಕರೀಂ, ಬಿಸ್ಮಿಲಾ ಇರ್ರಹಮಾನಿರ್ರಹಿಂ” ಅಂತಾರ. ಹೀಗ್ಹಂದ್ರ ನಿಮ್ಮಂದ್ಯಾಗ ಓಂ ನಮಃ ಶಿವಾಯ ಅಂದಂಗ” ಎಂದು ಹೇಳಿದನು.

ರಾಠೋಡ ಬಾನುಬಾಯಿಯು “ನಾನು ಕಲಾದೀಕ್ಷೆ ತಗೊಂಡೇನಿ. ನಾನು ನನ್ನ ಗಂಡನ ಜೊತೇಗ ತಗೊಂಡೇನಿ. ಒಬ್ಬಕೀಗ ದೀಕ್ಷಾ ತಗೋಳ್ಳಾಕ ಬರಲ್ಲ. ಗಂಡಸರಿಗಿ ಕೊಟ್ಟಂಗ ನಮಗ ಗುರುಪ್ಯಾಲಾ ಕೊಡಾಕ ಬರಲ್ಲ.” ಎಂದರೆ, ಒಬಲೇಶ್ವರದ ಬಂಗಾರವ್ವನು ಹೇಳಿದ್ದು ಹೀಗೆ: “ಗುರುಪ್ಯಾಲಾ ಕೊಡು ಪದ್ಧತಾ ಗುಲ್ಬರ್ಗಾ ಕಡಿಗಿ ಐತ್ರಿ, ನಮ್ಮ ಕಡಿಗಿ ಇಲ್ಲ. ದಪ್ಪ ಪೂಜಿ ಮಾಡ್ಸಿಂದ ಹಾಡಕಿ ಕಲ್ಯಾಕ ಚಾಲೂ ಮಾಡತಾರ. ರೊಕ್ಕಾ ಇದ್ದವ್ರು ಗುರುಗಳನ್ನ ಮನಿಗಿ ತಂದ ಇಟಕೊಂಡರ; ಬಡವ್ರು ಗುರುಗಳು ಇದ್ದಲ್ಲಿಗೆ ಹೋಗುತಾರು. ಹಾಡಕಿ ಕಲಿಯಾ ಮೊದ್ಲ ನನಗೆ ದೇವ್ರಿಗೆ ಬಿಟ್ಟಿದ್ರು. ತಾಯಿಗೆ ಬಿಟ್ಟ ಹೆಣ್ಣ ಮಕ್ಕಳೇ ಈ ಹಾಡಕಿ ಕಲಿತಾರು. ಕಲಿಯಾಕಂತ ನಮಗೇನು ವಿಶೇಷವಾದ ದೀಕ್ಷಾ ಇರಂಗಿಲ್ಲ.”

ಉಲ್ಲೇಖಿತ ವಕ್ತೃಗಳ ಹೇಳಿಕೆಗಳಲ್ಲಿ ಎರಡು ವಿಷಯಗಳಿವೆ. ಒಂದು, ಗುರುಪ್ಯಾಲಾ ಆಚರಣೆಯ ಪುರುಷ ಕೇಂದ್ರಿತವಾಗಿರುವುದು; ಎರಡು, ಗುರುಪ್ಯಾಲಾ ಆಚರಣೆಯ ಉತ್ತರ ಕರ್ನಾಟಕದಲ್ಲಿ ಇಲ್ಲದೆ ಇರುವುದು. ಇವೆರಡೂ ವಿಷಯಗಳು ಸ್ವತಂತ್ರ ಚರ್ಚೆಯನ್ನು ಬಯಸುತ್ತವೆ.

ಗುರುಪ್ಯಾಲಾ ಆಚರಣೆ ಪುರುಷ ಕೇಂದ್ರಿತವಾಗಿರುವುದು

ಮೊದಲಿಗೆ ಗುರುಪ್ಯಾಲಾ ಆಚರಣೆಯು ಪುರುಷ ಕೇಂದ್ರಿತವಾಗಿ ಬೆಳೆದುಬಂದಿರುವುದಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಕಂಡುಕೊಂಡ ಕಾರಣಗಳನ್ನು ಐದು ನೆಲೆಗಳಲ್ಲಿ ವಿಂಗಡಿಸಲಾಗಿದೆ: ೧. ಜೋಗತಿ, ಬಸವಿ: ಗಂಡ ಪರಿಕಲ್ಪನೆ ೨. ಎಂಜಲು ಸೇವನೆ ೩. ಹಾಡಿಕೆ: ಅಲೆಮಾರಿ ವೃತ್ತಿ. ೪. ಹಾಡಿಕೆ: ಏಕಾಗ್ರತೆ: ಹೆಣ್ಣು ೫. ರಾತ್ರಿ ಹಾಡಿಕೆ.

ಜೋಗತಿ, ಬಸವಿ: ಗಂಡ ಪರಿಕಲ್ಪನೆ

ಹಾಡಿಕೆ ಮಹಿಳೆಯರಲ್ಲಿ ಬಾನುಬಾಯಿ ರಾಠೋಡನಂಥವರು ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಹರದೇಶಿ-ನಾಗೇಶಿ ಹಾಡಿಕೆ ಕ್ಷೇತ್ರದಲ್ಲಿನ ಮಹಿಳಾ ಹಾಡುಗಾರರಲ್ಲಿ ಬಾನುಬಾಯಿ ರಾಠೋಡ, ಹಾಡಿಕೆ ಸಿದ್ದವ್ವನಂಥ ಬೆರಳೆಣಿಕೆಯ ಹಾಡುಗಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಜೋಗತಿಯರು, ಬಿಟ್ಟರೆ ಮುರುಳಿಯರು. ಇವರು ಹರದೇಶಿ-ನಾಗೇಶಿ ಪುರುಷ ಹಾಡುಗಾರರಂತೆ ಸಂಗೀತ ದೀಕ್ಷೆ ತೆಗೆದುಕೊಳ್ಳಲು ಆಗುವುದಿಲ್ಲ. ಯಾಕೆಂದರೆ ಗುರುಪ್ಯಾಲಾ ದೊರೆಯುವುದು ಕೇವಲ ಪುರುಷ ಹಾಡುಗಾರರಿಗೆ ಮಾತ್ರ. ಈ ಪದ್ಧತಿಯಲ್ಲಿ ಗುರು ಗಂಡನಾದರೆ, ಶಿಷ್ಯ ಹೆಂಡತಿಯಾಗುತ್ತಾನೆ. ಜೋಗತಿ ಸಂಪ್ರದಾಯದಲ್ಲಿ ‘ಗಂಡ’ ಎನ್ನುವ ಪರಿಕಲ್ಪನೆಗೆ ಸ್ಥಾನವಿಲ್ಲ. ಹೀಗಾಗಿ ಜೋಗತಿ ಸಂಪ್ರದಾಯಕ್ಕೊಳಗಾಗುವ ಮಹಿಳೆಯರಿಗೆ ಎಲ್ಲವ್ವನ ಪಾದಗಳನ್ನು ಹಾಗೂ ಕೆಂಪು, ಬಿಳಿ ಮುತ್ತುಗಳನ್ನು ಕಟ್ಟಿರುತ್ತಾರೆ. ಇವರನ್ನು ‘ದೇವಿಯ ಮಕ್ಕಳು’ ಎಂದು ಗುರುತಿಸಲಾಗುತ್ತಿದೆ. ‘ಗಂಡ’ ಪರಿಕಲ್ಪನೆಯನ್ನೇ ಜೋಗತಿ ಆಚರಣೆಯ ತಾತ್ವಿಕತೆಯು ತಿರಸ್ಕರಿಸುತ್ತದೆ. ಗುರುಪ್ಯಾಲಾದ ಆಚರಣೆಯು ಗುರುವನ್ನು ಗಂಡನನ್ನಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತದೆ. ದೇವಿಯ ಮಕ್ಕಳೆಂದು ಗುರುತಿಸಿಕೊಳ್ಳುವ ‘ಜೋಗತಿಯರು’ ಕಲಾ ದೀಕ್ಷೆಯ ಹೆಸರಿನಲ್ಲಿ ಹೆಂಡತಿಯಾಗಲಾರದ ಸಾಂಸ್ಕೃತಿಕ ಇಕ್ಕಟ್ಟನ್ನು ಎದುರಿಸುತ್ತಿರುತ್ತಾರೆ. ಲೌಕಿಕದ ಯಾವ ಆಚರಣೆಯೂ ಅವರನ್ನು ಹೆಂಡತಿಯಾಗಿಸುವುದಿಲ್ಲ. ಬೆರಳೆಣಿಕೆಯಲ್ಲಿ ಮಲ್ಲಯ್ಯನ ಮುರುಳಿಯುರು, ಬಸವಿಯರು ಇದ್ದಾರೆ. ಆದರೆ ಅವರು ಮಲ್ಲಯ್ಯ ಹಾಗೂ ಹನುಮದೇವರ ಹೆಂಡಂದಿರಾಗಿದ್ದರಿಂದ ಸಾವ, ಕೇಡ ಗುರುಗಳನ್ನು ಗುರುಪ್ಯಾಲಾದಂತಹ ಆಚರಣೆಯ ಹೆಸರಿನಲ್ಲಿ ‘ಗಂಡ’ನೆಂದು ಸ್ವೀಕರಿಸಲಾಗುವುದಿಲ್ಲ.

. ಎಂಜಲು ಸೇವನೆ

‘ಗುರುಪ್ಯಾಲಾ’ ಆಚರಣೆಯಲ್ಲಿ ಗುರು ಕುಡಿದು ಕೊಟ್ಟ ಹಾಲನ್ನು ಶಿಷ್ಯನು ಕುಡಿಯಬೇಕು ಎನ್ನುವ ಮುಖ್ಯವಾದ ಆಚರಣೆಯಿದೆ. ಗಂಡನ ಎಂಜಲನ್ನು ಊಟ ಮಾಡುವುದು ಸಂಸ್ಕೃತಿಯ ಭಾಗವಾಗಿಯೇ ನಿರ್ವಚನಗೊಂಡಿದೆ. ಭೀಮನ ಅಮವಾಸ್ಯೆಯಲ್ಲಿ ಗಂಡನು ಉಂಡು ಬಿಟ್ಟು ಎಲೆಯಲ್ಲಿಯೇ ಊಟ ಮಾಡುವ ಆಚರಣೆಯಿದೆ. ಈ ಆಚರಣೆ ‘ಮೇಲ್ಜಾತಿ’ಗಳಿದ್ದರೂ ಕೇಳಜಾತಿಗಳಲ್ಲಿಯೂ ಇದರ ಅನುಕರಣೆ ಕಂಡುಬರುತ್ತದೆ. ‘ಜೋಗತಿಯರು’, ‘ಬಸವಿಯರು’ ಯಾರ ಎಂಜಲನ್ನೂ ತಿನ್ನುವ ಹಾಗಿಲ್ಲ. ಎಂಜಲು ಊಟ ಮಾಡಿದರೆ ಮತ್ತೆ ಅವರು ‘ಜೋಗತಿ’ ಇಲ್ಲವೆ ‘ಬಸವಿ’ ದೀಕ್ಷೆಯನ್ನು ಪಡೆಯಬೇಕಾಗುತ್ತದೆ. ‘ಜೋಗತಿಯರು’ ದೇವಿಯ ಮಕ್ಕಳು ಇಲ್ಲವೆ ದೇವಿಯೇ ಆಗಿದ್ದರಿಂದ ಅವರು ಮತ್ತೊಬ್ಬರ ಎಂಜಲನ್ನು ಸೇವಿಸುವ ಹಾಗಿಲ್ಲ. ‘ಬಸವಿಯರು’, ಹನುಮಂತ ದೇವರ ಹಾಗೂ ಮಲ್ಲಯ್ಯನ ಹೆಂಡಂದಿರಾಗಿರುವುದರಿಂದ ಅವರ ಸಾವು ನೋವು ಅನುಭವಿಸುವ ಪುರುಷರು ಹಾಗೂ ಸ್ತ್ರೀಯ ಬಿಟ್ಟ ಅಥವಾ ಕೊಟ್ಟ ಎಂಜಲನ್ನು ಸೇವಿಸಲು ಬರುವುದಿಲ್ಲ. ಇನ್ನು ಮದುವೆಯ ಚೌಕಟ್ಟಿನ ಒಳಗಿರುವ ಮಹಿಳೆಯರು ಪರ ಪುರುಷರು ಬಿಟ್ ಎಂಜಲನ್ನು ತೆಗೆದುಕೊಳ್ಳುವ ಹಾಗಿಲ್ಲ. ಯಾಕೆಂದರೆ ಗಂಡನ ಎಂಜಲು ತಿನ್ನುವುದು ಗಂಡನಿಗೆ ನಿಷ್ಠವಾಗಿರುವುದನ್ನು ಸೂಚಿಸುತ್ತದೆ. ‘ಜೋಗತಿ’ಯರ ಎಂಜಲನ್ನು ‘ಜೋಗತಿ’ ತಿನ್ನುವುದು, ‘ಜೋಗತಿ’ ಮೌಲ್ಯಗಳಿಗೆ ನಿಷ್ಠವಾಗಿರುವುದೇ ಆಗಿರುತ್ತದೆ. ಹೀಗಾಗಿಯೇ ಗುರುಪ್ಯಾಲಾದಂತಹ ಆಚರಣೆಯ ಪುರುಷ ಕೇಂದ್ರಿತವಾಗಿರಬೇಕು. ಈ ಆಚರಣೆಯ ಪುರುಷ ಕೇಂದ್ರಿತವಾಗಿದ್ದರಿಂದ ಹಾಡಿಕೆ ವೃತ್ತಿಯ ಪುರುಷ ಪ್ರಧಾನವಾದುದಾಗಿದೆ. ಹೀಗಾಗಿ ಹರದೇಶಿ-ನಾಗೇಶಿ ಹಾಡುಗಾರಿಕೆ ಸಂಬಂಧಿಸಿದ ಗುರುಪ್ಯಾಲಾದಂತಹ ಆಚರಣೆಯಲ್ಲಿ ಮಹಿಳೆಯರು ನಿರಾಕರಿಸಲ್ಪಟ್ಟಿರಬೇಕು.

. ಹಾಡಿಕೆ: ಅಲೆಮಾರಿ ವೃತ್ತಿ

ಇದರಲ್ಲಿ ಎರಡು ವಿಷಯಗಳಿವೆ. ಒಂದು, ವೃತ್ತಿ; ಮತ್ತೊಂದು, ಅಲೆಮಾರಿತನ.

ಹರದೇಶಿ-ನಾಗೇಶಿ ಹಾಡುಗಾರಿಕೆಯು ವೃತ್ತಿಯಾಗಿ ಗುರುತಿಸಿಕೊಂಡಿದೆ. ಕಮ್ಮಾರಿಕೆ, ಚಮ್ಮಾರಿಕೆ, ವ್ಯಾಪಾರ ಹೀಗೆ ಯಾವುವು ವೃತ್ತಿಗಳೆಂದು ಪರಿಗಣಿಸಲ್ಪಟ್ಟಿವೆಯೋ ಅವುಗಳೆಲ್ಲವೂ ಪುರುಷ ಕೇಂದ್ರಿತವಾಗಿಯೇ ಗುರುತಿಸಲ್ಪಟ್ಟಿವೆ. ಹರದೇಶಿ-ನಾಗೇಶಿ ಹಾಡುಗಾರಿಕೆಯು ವೃತ್ತಿ ಪ್ರಧಾನವಾದ ನೆಲೆಯಲ್ಲಿಯೇ ಗುರುತಿಸಲ್ಪಟ್ಟಿದ್ದರಿಂದ ಇದರ ಕಲಿಕೆಗೆ ಸಂಬಂಧಿಸಿದ ಆಚರಣೆಗಳೆಲ್ಲವೂ ಪುರುಷಕೇಂದ್ರಿತವಾಗಿದೆ. ಪುರುಷಕೇಂದ್ರಿತವಾದ ಆಚರಣೆ ಮಹಿಳಾ ಪ್ರವೇಶವನ್ನು ನಿರಾಕರಿಸುತ್ತದೆ.

ಹಾಡಿಕೆಯನ್ನು ಅವಲಂಬಿಸಿದವರು ಊರೂರು ಅಲೆಯಬೇಕಾಗುತ್ತದೆ. ಕರೆದಲ್ಲಿಗೆ ಅಪರಿಚಿತ ಊರುಗಳಿಗೆ ಹಾಡಲು ಹೋಗಬೇಕಾಗುತ್ತದೆ. ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವ ಚೌಡಿಕೆ, ಸಂಗೀತ, ನೃತ್ಯ ಮೊದಲಾದ ಕಲೆಗಳಲ್ಲಿ ಮಹಿಳೆಯರು ಇರುವರಾದರೂ ಅವರು ಕೆಳ ಜಾತಿಗಳಿಗೆ, ಅತ್ಯಂಜ ಜಾತಿಗಳಿಗೆ ಸೇರಿದವರಾಗಿರುತ್ತಾರೆ. ತಳ ಸಮುದಾಯಗಳ ಮಹಿಳೆಯರಿಂದ ಪ್ರದರ್ಶನಗೊಳ್ಳುವ ಚೌಡಿಕೆ, ಸಂಗೀತ, ನೃತ್ಯ ಕಲೆಗಳು ಅವರಿರುವ ಊರಿನಲ್ಲಿಯೇ ಪ್ರದರ್ಶನಗೊಳ್ಳುತ್ತಿರುತ್ತವೆ. ರಾಜರು ಇಲ್ಲವೆ ದೇವಾಲಯದವರು ವಿಶೇಷವಾದ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಅಲ್ಲಿ ಪ್ರದರ್ಶನ ನೀಡಲು ‘ಪಾತರದವರು’ ಹೋಗುತ್ತಿದ್ದರು. ಚೌಡಿಕೆ ಹಾಡು ಕೂಡ ಸ್ಥಳೀಯರ ಅಪೇಕ್ಷೆಯ ಮೇರೆಗೆ, ಇಲ್ಲವೆ ದೇವಿಯ ವಿಶೇಷ ಆರಾಧನಾ ಸಂದರ್ಭಗಳಲ್ಲಿ ಸವದತ್ತಿಯಂತಹ ಕ್ಷೇತ್ರದಲ್ಲಿ ಅಥವಾ ಗ್ರಾಮಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಇವರಾರೂ ಹಾಡುವುದನ್ನೇ ವೃತ್ತಿ ಮಾಡಿಕೊಂಡು ಊರೂರು ಅಲೆಯುವುದಿಲ್ಲ. ಚೌಡಿಕೆ, ನೃತ್ಯ, ಸಂಗೀತದಂತಹ ಕ್ಷೇತ್ರಗಳಲ್ಲಿ ‘ಪಾತರದವರು’, ‘ಜೋಗತಿಯರು’ ಇದ್ದಾರೆ ಎಂದ ತಕ್ಷಣ, ಇವರ ಚಲನವಲನ ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿಲ್ಲ ಎನ್ನಲಾಗುವುದಿಲ್ಲ. ಇವರು ಸಾರ್ವಜನಿಕ ಸ್ಥಳಗಳಲ್ಲಿ ಕಲಾ ಪ್ರದರ್ಶನವನ್ನು ನೀಡುತ್ತಾರಾದರೂ ತಮ್ಮ ಕಲಾ ಪ್ರದರ್ಶನಕ್ಕಾಗಿ ಊರೂರಿಗೆ ಅಲೆಯುವುದಿಲ್ಲ. ಹಾಗೂ ಇವರು ರಾತ್ರಿಯೆಲ್ಲ ಕಲಾ ಪ್ರದರ್ಶನ ನೀಡುವುದಿಲ್ಲ. ಹರದೇಶಿ-ನಾಗೇಶಿ ಹಾಡುಗಾರಿಕೆಯು ಅಲೆಮಾರಿ ವೃತ್ತಿಯಾಗಿದೆ. ಜೊತೆಯಲ್ಲಿ ಈ ಕಲೆಯಲ್ಲಿ ಹೆಚ್ಚಾಗಿ ರಾತ್ರಿಯಲ್ಲಿ ಪ್ರದರ್ಶನಗೊಳ್ಳುತ್ತದೆ. ಆದ್ದರಿಂದ ಇಲ್ಲಿ ತಳ ಸಮುದಾಯದ ಮಹಿಳೆಯರಿಗೂ ಅವಕಾಶವಿರಲಿಲ್ಲವೇನೋ?!

. ಹಾಡಿಕೆ: ಏಕಾಗ್ರತೆ: ಹೆಣ್ಣು

‘ಗುರುಪ್ಯಾಲಾ’ ನೀಡುವ ಸಂದರ್ಭದಲ್ಲಿ ಗುರುಗಳು ಹೆಣ್ಣನ್ನು ನಾಶದ ನೆಲೆಯಲ್ಲಿಯೇ ಅರ್ಥೈಸಿದ್ದಾರೆ. ವಿಲಾಸ ಜಮಾದಾರ್ ಹಾಗೂ ನಸರುದ್ದೀನ್‌ರಂತೆ ಅನೇಕ ಪುರುಷ ಹಾಡುಗಾರರು ‘ಗುರುಬೋಧ’ ಸಂದರ್ಭದಲ್ಲಿ ಹೆಣ್ಣಿನ ಆಕರ್ಷಣೆಯಿಂದ ದೂರ ಉಳಿಯುವಂತೆ ಉಪದೇಶ ಮಾಡಿದ್ದನ್ನು ಹೇಳಿಕೊಂಡಿದ್ದಾರೆ. ಜ್ಞಾನ, ಸನ್ಯಾಸ ಹಾಗೂ ಯುದ್ಧ ವಲಯಗಳು ಹೆಣ್ಣನ್ನು ಅಪನಂಬಿಕೆಯಿಂದ ನೋಡುತ್ತವೆ.

ಜ್ಞಾನವನ್ನು ಬೌದ್ಧಿಕ ಶಕ್ತಿ ಕೇಂದ್ರವಾಗಿ ಗುರುತಿಸಲಾಗಿದೆ. ಹೆಣ್ಣನ್ನು ಪ್ರಜನನಶಕ್ತಿ ಮೂಲಕ ಗುರುತಿಸಲಾಗುತ್ತದೆ. ‘ಹೆಂಗಸರ ಬುದ್ಧಿ ಮೊಣಕಾಲು ಕೆಳಗೆ’ ಎನ್ನುವ ಗಾದೆ ಮಾತು ಸ್ತ್ರೀಯರನ್ನು ಜ್ಞಾನ ವಲಯದಿಂದ ಹೊರಹಾಕಿದ ಸಾಮಾಜಿಕ ಸತ್ಯವನ್ನೇ ಅನಾವರಣಗೊಳಿಸುತ್ತದೆ. ಜ್ಞಾನಕ್ಕೂ ಅಧಿಕಾರಕ್ಕೂ ನೇರವಾದ ಸಂಬಂಧವಿದೆ. ಜ್ಞಾನ ವಲಯದಲ್ಲಿ ಮಹಿಳಾ ಪ್ರವೇಶವಾಯಿತೆಂದರೆ ಅಧಿಕಾರದಲ್ಲಿ ಅವಳು ಪ್ರವೇಶಳಾದಳೆಂದೇ ಅರ್ಥ. ಜ್ಞಾನ ಮತ್ತು ಅಧಿಕಾರಗಳು ಸಾಮಾಜಿಕ ನೀತಿ ನಿರೂಪಣೆಯನ್ನು ಮಾಡುತ್ತಿರುತ್ತವೆ. ಮಾಡಿದ ನೀತಿ ನಿರೂಪಣೆಯಂತೆ ನಡೆಯಲು ಸಮಾಜದವರನ್ನು ಒತ್ತಾಯಿಸುತ್ತಿರುತ್ತವೆ; ನಿರ್ದೇಶಿಸುತ್ತಿರುತ್ತವೆ ಹಾಗೂ ಆಜ್ಞೆ ಮಾಡುತ್ತಿರುತ್ತವೆ. ಇಂತಹ ಜ್ಞಾನ ವಲಯಕ್ಕೆ ಮಹಿಳೆ ಪ್ರವೇಶಳಾದಳೆಂದರೆ ಸಹಜವಾಗಿಯೇ ಅಧಿಕಾರ ವಲಯಕ್ಕೆ ಪ್ರವೇಶ ಪಡೆದುಕೊಳ್ಳುತ್ತಾಳೆ. ಜ್ಞಾನದ ಮೂಲಕ ಚಾಲ್ತಿಯಲ್ಲಿರುವ ಮೌಲ್ಯಗಳಲ್ಲಿ ಜಾತಿ ತಾರತಮ್ಯ ಹಾಗೂ ಜಾತಿಗನುಗುಣವಾಗಿರುವ ಲಿಂಗ ತಾರತಮ್ಯವನ್ನು ಗುರುತಿಸುತ್ತಾಳೆ. ಇದುವರೆಗಿನ ಸಾಮಾಜಿಕ ನೀತಿ ನಿರೂಪಣೆಗಳನ್ನು ಪ್ರಶ್ನಿಸುತ್ತಾಳೆ; ಪಲ್ಲಟಗೊಳಿಸುತ್ತಾಳೆ. ಹೀಗಾದರೆ ಪುರುಷನ ರಾಜಕೀಯ ನೀತಿಯಿಂದ ರಚಿತವಾದ ಕುಟುಂಬಗಳು ಛಿದ್ರಗೊಳ್ಳುತ್ತವೆ. ಹೀಗಾಗಿಯೇ ಆಕೆಯನ್ನು ಜ್ಞಾನ ವಲಯದಿಂದ ದೂರವಿಡಲಾಗಿದೆ.

ಸನ್ಯಾಸವು ಬದುಕಿನ ವಿಮುಖತೆಯನ್ನು ಹೇಳುತ್ತದೆ. ಹೆಣ್ಣು ಕಾಣುವ ಲೋಕವನ್ನು, ಲೌಕಿಖತೆಯನ್ನು ಪ್ರೀತಿಸುತ್ತಾಳೆ. ಗಂಡು ಕಾಣದ ಲೋಕದ ಬಗ್ಗೆ, ಅಲೌಕಿಕತೆಯ ಬಗ್ಗೆ ಆಸಕ್ತಿ ಹೊಂದಿರುತ್ತಾನೆ. ಅದರರ್ಥ ಅವನು ಲೋಕವನ್ನು ನಿರಾಕರಿಸುತ್ತಾನೆ ಎಂದಲ್ಲ. ಕಾಣದ ಲೋಕದ ಮೂಲಕ ಕಾಣುವ ಲೋಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ರಾಜಕಾರಣ ಸನ್ಯಾಸದಲ್ಲಿದೆ. ಇಂತಹ ಸನ್ಯಾಸ ಕ್ಷೇತ್ರದಲ್ಲಿ ಮಹಿಳೆ ಪ್ರವೇಶಿಸಿದರೆ ಸತ್ಯವೆಂದು ನಂಬಿಸಲ್ಪಟ್ಟ ಮೌಲ್ಯಗಳು ಬಿದ್ದುಹೋಗುತ್ತವೆ. ಅಲೌಕಿಕ ಮೌಲ್ಯಗಳು ಶಕ್ತಿ ಹೀನವಾಗುತ್ತವೆ ಅಥವಾ ತಾನು ಯಾವುದನ್ನು ಸತ್ಯ ಎಂದು ನಂಬಿಕೊಂಡಿರುತ್ತಾನೋ ಅದು ಅಸತ್ಯವಾಗುತ್ತದೆ; ಯಾವುದನ್ನು ಶ್ರೇಷ್ಠ ಎಂದು ಪ್ರತಿಬಿಂಬಿಸಿರುತ್ತಾನೋ ಅದು ಕನಿಷ್ಠವಾಗಿಬಿಡುತ್ತದೆ; ಅರ್ಥಹೀನ ಎನಿಸಿಬಿಡುತ್ತದೆ. ಮಹಿಳಾ ಪ್ರವೇಶವು ಆತನನ್ನು ಬದುಕಿಗೆ ಕೊಂಡೊಯ್ಯುತ್ತದೆ. ಮಹಿಳಾ ಗ್ರಹಿಕೆಯಂತೆ ಲೋಕವನ್ನು ಪ್ರೀತಿಸಲು ಹೇಳುತ್ತದೆ. ಅವಳ ಲೌಕಿಕತೆಯನ್ನು ಒಪ್ಪಿಕೊಳ್ಳುವುದೆಂದರೆ ತನ್ನ ಅಲೌಕಿಕತೆಯನ್ನು ನಿರಾಕರಿಸಿದಂತೆ.

ಮಡಿ-ಮೈಲಿಗೆ, ಶ್ರೇಷ್ಠ-ಕನಿಷ್ಠ, ಪಾವಿವ್ರತ್ಯ, ಮೊದಲಾದ ಮೌಲ್ಯಗಳನ್ನು ಅಲೌಕಿಕತೆಯ ನೆಲೆಯಲ್ಲಿಯೇ ರೂಪಿಸಲಾಗಿದೆ. ಈ ನೆಲೆಯಲ್ಲಿಯೇ ಲಿಂಗ ಶ್ರೇಣೀಕರಣ ಸೃಷ್ಟಿಯಾಗಿದೆ. ಲಿಂಗ ಶ್ರೇಣಿಕರಣದಲ್ಲಿ ಹುಟ್ಟಿದ ಮೌಲ್ಯಗಳು ಯಾವಾಗಲೂ ಪುರುಷ ಹಿತಾಸಕ್ತಿಯನ್ನು ಪೋಷಿಸುತ್ತದೆ. ಮಹಿಳೆಯಲ್ಲಿನ ಲೋಕ ಪ್ರೀತಿಯನ್ನು ಒಪ್ಪಿಕೊಂಡರೆ ಅಲೌಕಿಕದ ಮೂಲಕ ಕಟ್ಟಿಕೊಂಡ ಲಿಂಗಾಧಾರಿತ ಮೌಲ್ಯಗಳು ಬಿದ್ದು ಹೋಗುತ್ತವೆ. ಕಾಣುವ ಲೋಕದ ಕುರಿತು ಮಾತನಾಡುವ ಮಹಿಳೆಯಲ್ಲಿ ಯಾವ ರಾಜಕಾರಣವೂ ಇಲ್ಲ. ಲೌಕಿಕ ನಿಯಂತ್ರಣದ ರಾಜಕಾರಣವನ್ನು ಹೊಂದಿದ ಅಲೌಕಿಕತೆಯು ಮಹಿಳಾ ಪ್ರವೇಶವನ್ನು ಉದ್ದೇಶಪೂರ್ವಕವಾಗಿಯೇ ನಿರಾಕರಿಸುತ್ತದೆ.

ಯುದ್ಧ ವಲಯಗಳು ಶಕ್ತಿ ಪ್ರಧಾನವಾಗಿ, ಬುದ್ಧಿ ಪ್ರಧಾನವಾಗಿ ಗುರುತಿಸಿಕೊಂಡಿವೆ. ಮಹಿಳೆಯನ್ನು ಅಬಲೆಯಾಗಿ ಗುರುತಿಸಲಾಗಿದೆ. ಬುದ್ದಿಹೀನಳಾಗಿ ಗುರುತಿಸಲಾಗಿದೆ. ಹೀಗಾಗಿ ಯುದ್ಧ ವಲಯದಲ್ಲಿ ಮಹಿಳೆಯನ್ನು ನಿರಾಕರಿಸಲಾಗುತ್ತಿದೆ. ಲೋಕವನ್ನು ಪ್ರೀತಿಸುವ, ಬದುಕನ್ನು ಪ್ರೀತಿಸುವ ಮಹಿಳೆ ಬದುಕನ್ನು, ಲೋಕವನ್ನು ಪೋಷಿಸುತ್ತಾಳೆ; ಪೊರೆಯುತ್ತಾಳೆ. ಆಕೆ ಮಕ್ಕಳಿಗೆ ಜನ್ಮ ನೀಡುತ್ತಾಳೆ; ಅವುಗಳನ್ನು ಪ್ರೀತಿಯಿಂದ ಸಲಹುತ್ತಾಳೆ. ಅವಳಲ್ಲಿ ವಿನಾಶದ ಮಾತೇ ಇಲ್ಲ. ಹೆಣ್ಣನ್ನು, ಹೊನ್ನನ್ನು, ಭೂಮಿಯನ್ನು ಗೆಲ್ಲುವ ಹಠದಲ್ಲಿ ಪುರುಷನು ತನ್ನ ನಷ್ಟ ಹಾಗೂ ಪರರ ನಷ್ಟವನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ತನಗೆ ಬೇಕಾದುದನ್ನು ಪಡೆಯುವ ಹಠದಲ್ಲಿ ಪ್ರಾಣಗಳನ್ನು ಬಲಿ ನೀಡುತ್ತಾನೆ. ತನ್ನ ಪ್ರಾಣಕ್ಕೆ ಬೆಲೆ ನೀಡದವನು, ಗೌರವ ನೀಡದವನು ಪರರ ಪ್ರಾಣಕ್ಕೆ ಬೆಲೆ ಕೊಡುವುದಿಲ್ಲ; ಗೌರವ ಕೊಡುವುದಿಲ್ಲ. ವ್ಯಕ್ತಿಗಳ ಮೇಲೆ, ಸಮುದಾಯದ ಮೇಲೆ, ಭೂಮಿಯ ಮೇಲೆ, ಚರಾಸ್ತಿಯ ಮೇಲೆ, ಹಿಡಿತ, ಒಡೆತನ ಹಾಗೂ ಹಕ್ಕು ಸ್ಥಾಪಿಸುವದನ್ನು ಪುರುಷನು ಗೆಲುವು, ವಿಜಯ ಎಂದು ನಿರ್ವಚಸಿಕೊಂಡಿದ್ದಾನೆ. ಈ ಬಗೆಯ ಗೆಲುವು ಅಥವಾ ವಿಜಯವನ್ನು ಪಡೆದುಕೊಳ್ಳಲು ತನ್ನ ಹಾಗೂ ಸಮಾಜದ ನಷ್ಟವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಯಾವುದು ಪುರುಷನಿಗೆ ಗೆಲುವಾಗಿರುತ್ತದೆಯೋ, ಅದು ಮಹಿಳೆಗೆ ಸೋಲಾಗಿರುತ್ತದೆ. ಬದುಕಿಗೆ ಮುಖಾ-ಮುಖಿಯಾಗಿರುವ ಆಕೆ ತನ್ನ ಜೀವಿತಾವಧಿಯ ಉದ್ದಕ್ಕೂ ಮಕ್ಕಳನ್ನು, ಪರಿಸರವನ್ನು ಹಿರಿಯ ವಯಸ್ಸಿನವರನ್ನು ಪೋಷಿಸುತ್ತಾಳೆ. ಜೀವಿಗಳಿಗೆ ಜನ್ಮ ಕೊಡುವ, ಅವುಗಳನ್ನು ಪೋಷಿಸುವ ಮಹಿಳೆ ತಾನೂ ಬದುಕಿ, ಬಾಳಿ ಇತರರನ್ನು ಬದುಕಿಸಿ, ಬಾಳಿಸುತ್ತಾಳೆ. ಹೀಗೆ ಬದುಕಿ ಬಾಳುವುದನ್ನೇ ಗೆಲುವು ಎಂದು ಅರ್ಥೈಸಿಕೊಂಡಿದ್ದಾಳೆ. ಜೀವನ್ಮುಖಿಯಾದ ಮಹಿಳೆಯು ಯುದ್ಧರಂಗದಲ್ಲಿ ಪ್ರವೇಶಿಸಿದರೆ; ಯುದ್ಧರಂಗ ಭೂಮಿಯ ಚಹರೆಯೇ ಬದಲಾಗಿ ಬಿಡುತ್ತದೆ. ಯುದ್ಧ ಮೌಲ್ಯಗಳು ಸೋಲನ್ನು ಹಾಗೂ ಶರಣಾಗತಿಯನ್ನು ನರಕದೊಂದಿಗೆ ಸಮೀಕರಿಸಿದರೆ; ಗೆಲುವನ್ನು ಹಾಗೂ ಯುದ್ಧರಂಗದಲ್ಲಿನ ಮರಣವನ್ನು ಸ್ವರ್ಗದೊಂದಿಗೆ ಸಮೀಕರಿಸಿದೆ. ನರಕ ಹಾಗೂ ಸ್ವರ್ಗ ಇವೆರಡೂ ಕಾಣದ ಲೋಕಗಳೇ. ಕಾಣುವ ಲೋಕಕ್ಕೆ ಮಹತ್ವ ಕೊಡುವ ಮಹಿಳೆಯಿಂದಾಗಿ ಯುದ್ಧರಂಗದಲ್ಲಿನ ಪುರುಷ ಬದುಕಿನೆಡೆಗೆ, ಲೋಕದೆಡೆಗೆ ಆಕರ್ಷಿತನಾಗುತ್ತಾನೆ. ತಾನು ಯಾವುದನ್ನು ಸಾಧನೆ ಎಂದು ನಂಬಿಕೊಂಡಿರುತ್ತಾನೋ ಅದು ವ್ಯರ್ಥ, ಜೀವ ವಿನಾಶಕ ಎನಿಸುತ್ತದೆ. ಯುದ್ಧರಂಗದಲ್ಲಿ ಮಹಿಳಾ ಪ್ರವೇಶವು ಪುರುಷ ನಂಬಿದ ಮೌಲ್ಯಗಳನ್ನು ಬುಡಮೇಲು ಮಾಡುತ್ತದೆ. ಹೀಗಾಗಿಯೇ ಲೌಕಿಕವನ್ನು ಪ್ರಧಾನವಾಗಿಸುವ, ಬದುಕಿನ್ನು ಮುಖ್ಯ ಕೇಂದ್ರಕ್ಕೆ ತರುವ ಮಹಿಳೆಯನ್ನು ಯುದ್ಧ ವಿರೋಧಿಯಾಗಿ ಪರಿಗಣಿಸಲಾಗಿದೆ.

ಯುದ್ಧ, ಜ್ಞಾನ ಹಾಗೂ ಸನ್ಯಾಸ ವಲಯಗಳನ್ನು ಪವಿತ್ರ ವಲಯಗಳನ್ನಾಗಿ ಗುರುತಿಸಲಾಗಿದೆ. ಮುಟ್ಟು, ಹೆರಿಗೆಯಂತ ಜೈವಿಕ ಸಹಜ ಕ್ರಿಯೆಗಳನ್ನು ನೆಪವಾಗಿಟ್ಟುಕೊಂಡು ಹೆಣ್ಣನ್ನು ಮೈಲಿಗೆಯಾಗಿಸಲಾಗಿದೆ; ಅಪವಿತ್ರಗೊಳಿಸಲಾಗಿದೆ. ಮಡಿ-ಮೈಲಿಗೆ, ಪವಿತ್ರತೆ-ಅಪವಿತ್ರತೆ, ಶುದ್ಧ-ಅಶುದ್ಧತೆಗಳನ್ನು ನಮ್ಮ ಸಮಾಜವು ವಿರುದ್ಧ ಸಂಗತಿಗಳೆಂದು ಭಾವಿಸಿದ್ದರಿಂದ, ಇವೆರಡರ ಹೊಂದಾಣಿಕೆಗೆ ಅಥವಾ ಇವೆರಡೂ ಒಂದೆಡೆ ಇರುವುದು ಅಸಾಧ್ಯವಾಗುತ್ತದೆ. ಮಡಿ ಮೈಲಿಗೆಯೆಡೆಗೆ; ಪವಿತ್ರತೆ ಅಪವಿತ್ರತೆಯೆಡೆಗೆ; ಶುದ್ಧತೆ ಅಶುದ್ಧತೆಯೆಡೆಗೆ ಚಲಿಸುವುದಿಲ್ಲ. ಮೈಲಿಗೆಯು ಮಡಿಯೆಡೆಗೆ ಅಥವಾ ಮಡಿಯು ಮೈಲಿಗೆಯೆಡೆಗೆ ಚಲಿಸಕೂಡದು; ಚಲಿಸಿದರೆ ಮಡಿ ಮೈಲಿಗೆಯಾಗುತ್ತದೆ; ಪವಿತ್ರತೆ ಅಪವಿತ್ರವಾಗುತ್ತದೆ; ಶುದ್ಧವು ಅಶುದ್ಧವಾಗುತ್ತದೆ.

ಜ್ಞಾನ, ಸನ್ಯಾಸ ಹಾಗೂ ಯುದ್ಧ – ಈ ಮೂರು ವಲಯಗಳು ಏಕಾಗ್ರತೆಯನ್ನು ಬಯಸುತ್ತವೆ; ಚಂಚಲತೆಯನ್ನು ನಿರಾಕರಿಸುತ್ತವೆ. ಧ್ಯಾನವನ್ನು, ಏಕಾಗ್ರತೆಯನ್ನು ಬಯಸುವ ಈ ವಲಯಗಳು ಮಹಿಳೆಯರನ್ನು ತಮ್ಮ ದಾರಿಯ ಶತೃಗಳೆಂದೇ ಪರಿಭಾವಿಸುತ್ತವೆ.

ಪುರುಷ ನೆಲೆಯ ಧ್ಯಾನವು ಅಥವಾ ಏಕಾಗ್ರತೆ ನಶ್ವರತೆಯನ್ನು ಹಾಗೂ ಅಲೌಕಿಕತೆಯನ್ನು ಕೇಂದ್ರವಾಗಿರಿಸಿಕೊಂಡರೆ; ಮಹಿಳಾ ನೆಲೆಯ ಧ್ಯಾನವು ಅಥವಾ ಏಕಾಗ್ರತೆಯು ಲೌಕಿಕತೆಯನ್ನು, ಬದುಕನ್ನು ಹಾಗೂ ಕುಟುಂಬವನ್ನು ಕೇಂದ್ರವಾಗಿಸಿಕೊಂಡಿವೆ. ಸಮಾಜದಲ್ಲಿ ಪುರುಷ ಕೇಂದ್ರಿತ ಮೌಲ್ಯಗಳೆ ಢಾಳಾಗಿರುವುದರಿಂದ ಅಥವಾ ಧ್ಯಾನ ಅಥವಾ ಏಕಾಗ್ರತೆ ಕುರಿತಂತೆ ಪುರುಷ ನೆಲೆಯಲ್ಲಿನ ಅರ್ಥಗಳೇ ಚಾಲ್ತಿಯಲ್ಲಿವೆ; ಈ ಪದಗಳಿಗೆ ಇರುವ ಮಹಿಳಾ ನೆಲೆಯ ಅರ್ಥಗಳು ಮರೆಯಾಗಿವೆ. ಅದಕ್ಕಾಗಿಯೇ ಪುರುಷ ನಿರ್ವಚಿತ ಅರ್ಥಗಳನ್ನೇ ಧ್ಯಾನ, ಏಕಾಗ್ರತೆ ಪದಗಳು ಧ್ವನಿಸುತ್ತದೆ. ಮಹಿಳೆಯ ಆಸಕ್ತಿಗಳು, ಬದುಕಿನ ಅರ್ಥ ನಿರ್ವಚನಗಳು ಪ್ರಾಯೋಗಿಕ ಆಯಾಮಗಳನ್ನು ಹೊಂದಿದ್ದರೆ. ಪುರುಷನ ಆಸಕ್ತಿಗಳು, ಬದುಕಿನ ಅರ್ಥ ನಿರ್ವಚನಗಳು ತನ್ನ ಹಿತಾಸಕ್ತಿಗನುಗುಣವಾಗಿ ಸಿದ್ಧಾಂತಗಳನ್ನು ರೂಪಿಸುವುದರೆಡೆಗೆ ಆಸಕ್ತವಾಗಿರುತ್ತದೆ. ಮಹಿಳೆಯು ಕಂಡುಕೊಂಡ ಪ್ರಾಯೋಗಿಕ ಸತ್ಯಗಳು ಪುರುಷ ನಿರ್ವಚಿತ ಸಿದ್ಧಾಂತಗಳಿಗೆ ಎದುರಾದರೆ, ಆ ಕ್ಷಣದಲ್ಲಿಯೇ ಅವು ನಿರ್ವಿಣ್ಯವಾಗುತ್ತವೆ. ತಾನು ಹಾಗೂ ತನ್ನ ಸಿದ್ಧಾಂತವು ಯಾವುದೇ ಹೋರಾಟವಿಲ್ಲದೆ ಕ್ಷಣ ಮಾತ್ರದಲ್ಲಿ ಕುಸಿದು ಬೀಳುವುದನ್ನು ಕಲ್ಪಿಸಿಯೂ ಕೊಳ್ಳಲಾರ. ಹೀಗಾಗಿಯೇ ಜ್ಞಾನ, ಸನ್ಯಾಸ ಹಾಗೂ ಯುದ್ಧ ವಲಯದಿಂದ ಮಹಿಳೆಯನ್ನು ದೂರವಿಡಲಾಗಿದೆ; ಅವಳ ಪ್ರವೇಶವನ್ನು ನಿರಾಕರಿಸಲಾಗಿದೆ; ಈ ಮೂರು ವಲಯಗಳನ್ನು ‘ಪವಿತ್ರ’ ವಲಯಗಳೆಂದು ಪರಿಭಾವಿಸಲಾಗಿದೆ. ‘ಮೈಲಿಗೆ’ಯಾಗಿ, ‘ಚಂಚಲೆ’ಯಾಗಿ ಮಹಿಳೆ ಪರಿಗಣಿಸಲ್ಪಟ್ಟಿದ್ದರಿಂದ ಅವಳ ಸಹಭಾಗಿತ್ವವನ್ನು ಅಪನಂಬಿಕೆಯಿಂದಲೇ ನೋಡಲಾಗುತ್ತದೆ. ಹೆಣ್ಣನ್ನು ಲೈಂಗಿಕ ಪ್ರಧಾನವಾಗಿ ಉಪಭೋಗದ ನೆಲೆಯಲ್ಲಿ ಅರ್ಥೈಸಿದ್ದರಿಂದ ಅವಳ ಬೌದ್ಧಿಕತೆಯನ್ನು, ಆಧ್ಯಾತ್ಮಿಕ ಶಕ್ತಿಯನ್ನು ಹಾಗೂ ದೈಹಿಕ ಪ್ರಬಲತೆಯನ್ನು ನಿರಾಕರಿಸಲಾಗಿದೆ.

ಆರಂಭದ ಹರದೇಶಿ-ನಾಗೇಶಿ ಹಾಡುಗಳು ಅನುಭಾವ ಕೇಂದ್ರಿತವಾಗಿದ್ದವು. ಅನುಭಾವವು ಧ್ಯಾನವನ್ನೇ ಕೇಂದ್ರವಾಗಿಟ್ಟುಕೊಂಡಿದೆ. ಪರಮಾತ್ಮನ ಇಲ್ಲವೆ ಪಾರ್ವತಿಯನ್ನು ತಲುಪುವ ಇಲ್ಲವೆ ಅವರೊಳಗೆ ಒಂದಾಗುವ, ಆಧ್ಯಾತ್ಮಿಕ ಉನ್ನತಿಯ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿಯೇ ಹರದೇಶಿ-ನಾಗೇಶಿ ಸಾಹಿತ್ಯ ರಚಿತವಾಗಿವೆ. ಇಂತಹ ಸಾಹಿತ್ಯ ಕಲಿಕೆಗೆ ಪುರುಷರಿಗೆ ಮಾತ್ರ ಪ್ರವೇಶವಿದ್ದುದಕ್ಕೆ ಗುರುಪ್ಯಾಲಾದಂತಹ ಆಚರಣೆ ಸಾಕ್ಷಿಯಾಗಿದೆ. ಈ ಆಚರಣೆಯ ಭಾಗವಾಗಿ ಬರುವ ಗುರುಬೋಧವು ಹೆಣ್ಣನ್ನು ಅಪನಂಬಿಕೆಯಿಂದ ಕಾಣುತ್ತದೆ.

. ರಾತ್ರಿ ಹಾಡಿಕೆ

ಹಾಡಿಕೆಯು ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿಯೇ ನಡೆಯುತ್ತದೆ. ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾದರೆ ಬೆಳಗಿನ ಜಾವ ೫ ಗಂಟೆಗೆ ಇಲ್ಲಿವೆ ೬ ಗಂಟೆಗೆ ಮುಕ್ತಾಯವಾಗುತ್ತದೆ. ಪಾತರದವರು ದೇವಾಲಯದಲ್ಲಿ ಸಂಗೀತ ಹಾಗೂ ನೃತ್ಯ ಸೇವೆಯನ್ನು ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಸಲ್ಲಿಸುತ್ತಾರೆ. ಪೂರ್ಣ ರಾತ್ರಿ ಅವರೆಂದೂ ಹಾಡಿಲ್ಲ; ನೃತ್ಯ ಮಾಡಿಲ್ಲ. ಬೌಡಿಕೆ ಹಾಡನ್ನೂ ಕೂಡಾ ರಾತ್ರಿಯೆಲ್ಲ ಹಾಡುವುದಿಲ್ಲ. ಸಾಮಾನ್ಯವಾಗಿ ಇವುಗಳು ಹಗಲಿನಲ್ಲಿಯೇ ಪ್ರದರ್ಶನಗೊಳ್ಳುತ್ತವೆ. ವಿಶೇಷ ಸಂದರ್ಭಗಳಲ್ಲಿ ಸಾಯಂಕಾಲದ ಹೊತ್ತಿನಲ್ಲಿ ಪ್ರದರ್ಶಿಸಲ್ಪಡುತ್ತವೆ. ಮದುವೆಯ ಚೌಕಟ್ಟಿನೊಳಗೆ ಬರುವ ಮಹಿಳೆಯರಾಗಿರಬಹುದು, ಮದುವೆಯ ಚೌಕಟ್ಟಿನ ಹೊರಗೆ ಬರುವ ಮಹಿಳೆಯರಾಗರಬಹುದು-ಇವರೆಲ್ಲರಿಗೂ ಹಗಲು ಹೊತ್ತಿನಲ್ಲಿದ್ದಂತೆ ರಾತ್ರಿ ಹೊತ್ತಿನಲ್ಲಿಯೂ ಚಲನವಲನದ ನಿರ್ಬಂಧಗಳಿವೆ. ಮದುವೆಯ ಚೌಕಟ್ಟಿನ ಒಳಗಿರುವವರು ಮದುವೆಯ ಚೌಕಟ್ಟಿನ ಹೊರಗಿರುವವರನ್ನು ಕುಟುಂಬ ರಹಿತರನ್ನಾಗಿಯೇ ಗುರುತಿಸುವುದರಿಂದ ಅವರಿಗೆ ಯಾವುದೇ ನಿರ್ಬಂಧಗಳಿರುವುದಿಲ್ಲವೆಂದು ಗ್ರಹಿಸುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲ. ‘ಜೋಗತಿಯರು’, ‘ಪಾತರದವರು’, ‘ಬಸವಿಯರು’, ಇವರು ಕುಟುಂಬಗಳಿಂದಲೇ ಬಂದವರಾಗಿರುತ್ತಾರೆ. ಕುಟುಂಬ ಒಂದರಲ್ಲಿ ಒಬ್ಬರು ಇಲ್ಲವೆ ಇಬ್ಬರು ‘ಜೋಗತಿ’, ‘ಬಸವಿ’, ‘ಪಾತರ’ದವರಾಗಿರುತ್ತಾರೆ. ಆ ಕುಟುಂಬದಲ್ಲಿ ಎಲ್ಲಾ ಹೆಣ್ಣು ಮಕ್ಕಳು ‘ಜೋಗತಿ’, ‘ಬಸವಿ’, ‘ಪಾತರ’ದವರಾಗಿರುವುದಿಲ್ಲ. ‘ಬಾಲಬಸವಿ’ಯರ ಕುಟುಂಬದಲ್ಲಿ ಮಾತ್ರ ಹುಟ್ಟಿದ ಎಲ್ಲಾ ಹೆಣ್ಣಮಕ್ಕಳೂ ‘ಬಾಲಬಸವಿ’ಯಾಗಿರುತ್ತಾರೆ. ಇದು ಬೇರೆ ಚರ್ಚೆಯನ್ನು ಬಯಸುತ್ತದೆ. ಮಹಿಳಾ ಹಾಡುಗರರಿಗೆ ತಾಯಿ ಇಲ್ಲವೆ ತಂದೆ. ತಾಯಿ ಹಾಗೂ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಎಲ್ಲರೂ ಇರುತ್ತಾರೆ. ಅವರು ಮದುವೆಯ ಚೌಕಟ್ಟಿನೊಳಗಿನ ಮಹಿಳೆಯರಂತೆಯೇ ಬೆಳೆದು ಬಂದಿರುತ್ತಾರೆ. ಅವರಿಗೂ ದೈನಂದಿನ ಚಲನವಲನಗಳೀಗೆ ಹಾಗೂ ಮಾತನಾಡುವುದಕ್ಕೆ ಕುಟುಂಬದಿಂದ ನಿರ್ಬಂಧಗಳಿರುತ್ತವೆ. ಹೀಗಾಗಿ ಮೊದಮೊದಲು ರಾತ್ರಿಯಲ್ಲಿ ಪ್ರದರ್ಶನಗೊಳ್ಳುವ ಹಾಡಿಕೆಯಲ್ಲಿ ಭಾಗಿಯಾಗುವ ಅವಕಾಶವರಿಲಿಲ್ಲವೇನೋ?

. ಗುರುಪ್ಯಾಲಾ ಆಚರಣೆ ಉತ್ತರ ಕರ್ನಾಟಕದಲ್ಲಿ ಇಲ್ಲದೆ ಇರುವುದು

ಗುರುಪ್ಯಾಲಾ ಆಚರಣೆ ಕೇವಲ ಹೈದರಾಬಾದ್ ಕರ್ನಾಟಕದಲ್ಲಿ ಮಾತ್ರ ಇರುವುದು ಕಂಡುಬಂದಿದೆ. ಉತ್ತರ ಕರ್ನಾಟಕದಲ್ಲಿ ಈ ಆಚರಣೆ ಇಲ್ಲ. ಗುರುಪ್ಯಾಲಾ ಆಚರಣೆಯು ಹೈದರಾಬಾದ್ ಕರ್ನಾಟಕದಲ್ಲಿ ಮಾತ್ರ ಯಾಕೆ ಚಾಲ್ತಿಯಲ್ಲಿದೆ? ಉತ್ತರ ಕರ್ನಾಟಕದಲ್ಲಿ ಯಾಕೆ ಅಪರಚಿತವಾಗಿ ಉಳಿದಿದೆ ಎನ್ನುವುದನ್ನು ವಿಶ್ಲೇಷಿಸಬೇಕಿದೆ.

ಹೈದರಬಾದ್ ಕರ್ನಾಟಕದಲ್ಲಿ ಹರದೇಶಿ ಹಾಡುವ ಮೇಳಗಳೇ ಜಾಸ್ತಿ ಇವೆ; ಈ ಹಾಡುಗಳನ್ನು ಪುರುಷರೇ ಹಾಡುತ್ತಾರೆ. “ಹರದೇಶಿಯವನು ಬಿಜಾಪುರಕ್ಕೆ ಹೋಗಿ ನಾಗೇಶಿ ಕಾಡುಗಾರ್ತಿಯರನ್ನು ಕರೆದುಕೊಂಡು ಬಂದ ಉದಾಹರಣೆಗಳಿವೆ. ಇಂತಹ ಸ್ಥಾನವನ್ನು ಕಲುಬುರ್ಗಿ ಜಿಲ್ಲೆಯಲ್ಲಿ ಹೆಂಗಸರು ಇತ್ತಿತ್ತಲಾಗಿ ತುಂಬುತ್ತಿರುವವರು. ಶಕುಂತಲ ಅಲ್ದಿಹಾಳ, ಭಾನುಪ್ರಿಯ, ಗಿರಿಜಮ್ಮ ಮುಂತಾದವರು ಸಾವಳಗಿ ಊರಿನಲ್ಲಿ ನಾಲ್ಕು ಹರದೇಶಿ ತಂಡವಿದ್ದು, ಒಂದು ನಾಗೇಶಿ ತಂಡಕ್ಕೆ ಮಹಿಳೆಯನ್ನು ತಯಾರು ಮಾಡಬೇಕೆಂದು ಮಹಮ್ಮದ್ ಸಾಬನ ಬಯಕೆ ಫಲಿಸಲಿಲ್ಲ (ಹರಿಶ್ಚಂದ್ರ ದಿಗ್ಸಂಗಿಕರ್, ೨೦೦೮ ಪುಟ ೪೨) ಎಂದು ಅಧ್ಯಯನ ಕಾರರಾದ ಹರಿಶ್ಚಂದ್ರ ಅವರು ಹೇಳಿದರೆ, ಹಾಡುಗಾರ ಶಾಂತಪ್ಪ ಬಿದನೂರ ಅವರು ಹೀಗೆ ಹೇಳಿರುವರು. “…ನಾಗೇಶಿ ವತಿಯಿಂದ ಹಾಡು ಹಾಡಲು ಹೆಂಗಸರು ಮುಂದೆ ಬಂದಿರಲಿಲ್ಲ. ಆ ಸ್ಥಾನ ತುಂಬಬೇಕಾದವರು ಗಂಡಸರು… ಗುರುಗಳು ನನ್ನನ್ನು ನಾಗೇಶಿಗೆ ಅರ್ಪಿಸಿದರು… ನಂತರದಲ್ಲಿ ವಿಜಾಪುರದ ಹೆಣ್ಣು ಮಕ್ಕಳು ನಾಗೇಶಿ ಹಾಡಿನೊಳಕ್ಕೆ ಹೆಜ್ಜೆ ಹಾಕತೊಡಗಿದರು. (ಶಾಂತಪ್ಪ ಬಿದನೂರ. ಉದೃತ: ಹರಿಶ್ಚಂದ್ರ ದಿಗ್ಸಂಗಿಕರ್, ೨೦೦೮, ಪು .೪೩) ಹೀಗೆ ಅಧ್ಯಯನ ಕಾರರಾದ ಹರಿಶ್ಚಂದ್ರ ಅವರು ಹಾಗೂ ಹಾಡುಗಾರ ಶಾಂತಪ್ಪ ಬಿದನೂರು ಇವರಿಬ್ಬರ ಹೇಳಿಕೆಗಳೂ ಹೈದರಾಬಾದ್ ಕರ್ನಾಟಕದಲ್ಲಿ ಪುರುಷ ಹಾಡುಗಾರರೇ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುತ್ತಿರುವುದನ್ನು ನಿರೂಪಿಸುತ್ತವೆ; ಉತ್ತರ ಕರ್ನಾಟಕದಲ್ಲಿ ನಾಗೇಶಿ ಹಾಡುಗಾರಿಕೆಯಲ್ಲಿ ಮಹಿಳೆಯರೇ ಹೆಚ್ಚಾಗಿರುವುದನ್ನು ತಿಳಿಸುತ್ತವೆ.

ನನ್ನ ಕ್ಷೇತ್ರಕಾರ್ಯಾಧ್ಯಯನ ಸಂದರ್ಭದಲ್ಲಿ ಹರಿಶ್ಚಂದ್ರ ಅವರು ಹೇಳಿರುವ ಶಕುಂತಲ ಅಲ್ದಿ ಹಾಳ, ಭಾನುಪ್ರಿಯ, ಗಿರಿಜಮ್ಮ ಇವರ್ಯಾರೂ ಸಿಗಲಿಲ್ಲ. ಇವರು ಬೇರೆ ಊರಿಗೆ ವಲಸೆ ಹೋಗಿರಬಹುದು; ಇಲ್ಲವೆ ಅಧ್ಯಯನಕಾರರಾದ ಹರಿಶ್ಚಂದ್ರ ಅವರು ಹಾಡುಗಾರರ ಹೆಸರನ್ನು ಬದಲಾಯಿಸಿರಬಹುದು. ಸೊಲ್ಲಾಪುರ ಜಿಲ್ಲೆಯ ಮಂದರೂಪದ ರಾಣವ್ವ, ಮಂದರೂಪದಿಂದ ಗುಲ್ಬರ್ಗಾಕ್ಕೆ ವಲಸೆ ಬಂದಿರುವಳು. ಬಾನುಬಾಯಿ ರಾಠೋಡ, ಸಕ್ಕೂಬಾಯಿ ರಾಠೋಡ ಹಾಗೂ ಹಲಸ್ಯಾಬಾಯಿ ರಾಠೋಡ ಇವರು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಿಂದ ವಲಸೆ ಬಂದವರು. ಹೈದರಾಬಾದ್ ಕರ್ನಾಟಕದಲ್ಲಿ ನಾಗೇಶಿ ಹಾಡುಗಳನ್ನು ಹಾಡುವ ಮಹಿಳಾ ಕಲಾಕಾರರು ಬೆರಳೆಣಿಕೆಯಷ್ಟು ಇದ್ದಾರೆ. ಗುಲ್ಬರ್ಗಾದಲ್ಲಿ ಈ ಮಹಿಳಾ ಹಾಡುಗಾರರಾರೂ ಮೂಲತಃ ಗುಲ್ಬರ್ಗಾದವರಲ್ಲ. ಅಥವಾ ಹೈದರಾಬಾದ್ ಕರ್ನಾಟಕದವರಲ್ಲ; ಇವರೆಲ್ಲರೂ ವಿಜಾಪುರ ಇಲ್ಲವೆ ಸೊಲ್ಲಾಪುರ ಜಿಲ್ಲೆಗಳಿಂದ ಗುಲ್ಬರ್ಗಾಕ್ಕೆ ವಲಸೆ ಬಂದವರು.

ವಿಜಾಪುರ, ಬಾಗಲಕೋಟೆ, ಬೆಳಗಾಂವ, ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಗಳಲ್ಲಿ ನಾಗೇಶಿ ಹಾಡುಗಳನ್ನು ಹಾಡುವ ಮಹಿಳಾ ಹಾಡುಗಾರರು ಹೇರಳವಾಗಿದ್ದಾರೆ; ಹಾಗೆಯೇ ಹರದೇಶಿ ಹಾಡುಗಳನ್ನು ಹಾಡುವ ಮಹಿಳಾ ಹಾಡಾಗಾರರೂ ಇದ್ದಾರೆ. ಎರಡು ಬಗೆಯ ಹಾಡಿಕೆ ಮಹಿಳೆಯರಿದ್ದಾರೆ. ೧. ಹರದೇಶಿ-ನಾಗೇಶಿ ಈ ಎರಡೂ ಪಂಥಗಳ ಹಾಡುಗಳನ್ನು ಮೇಳ ಕಟ್ಟಿಕೊಂಡು ಚೌಡಕಿಯಲ್ಲಿ ಹಾಡುವ ಮಹಿಳಾ ಹಾಡುಗಾರರಿದ್ದಾರೆ. ೨. ಹಾಗೆಯೇ ದಪ್ಪಿನಲ್ಲಿ ಹರದೇಶಿ-ನಾಗೇಶಿ ಹಾಡುಗಳನ್ನು ಹಾಡುವವರೂ ಇದ್ದಾರೆ. ಹೀಗಾಗಿಯೇ ಏನೋ ಉತ್ತರ ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದ ಭಾಗಗಳಲ್ಲಿ ಹರದೇಶಿ-ನಾಗೇಶಿ ಹಾಡುವ ಮಹಿಳೆಯರು ಅಧಿಕವಾಗಿದ್ದಾರೆ. ಅದಕ್ಕಾಗಿಯೇ ಗುರುಪ್ಯಾಲಾ ಆಚರಣೆಯಲ್ಲಿ ಇಲ್ಲವೇ ಇಲ್ಲ. ಹೈದರಬಾದ್ ಕರ್ನಾಟಕದಲ್ಲಿ ಹರದೇಶಿ ಹಾಡುವ ಮೇಳಗಳೇ ಹೆಚ್ಚಾಗಿವೆ; ಪುರುಷ ಹಾಡುಗಾರರೇ ಹರದೇಶಿ ಹಾಡುಗಳನ್ನು ಹಾಡುತ್ತಿದ್ದಾರೆ. ಹೀಗಾಗಿ ಪುರುಷ ಕೇಂದ್ರಿತವಾಗಿರುವ ಗುರುಪ್ಯಾಲಾ ಆಚರಣೆಯಲ್ಲಿದೆ.

ಗುಲ್ಬರ್ಗಾ ಭಾಗದಲ್ಲಿ ಮಾತ್ರ ಲಂಬಾಣಿ ಜನಾಂಗದ ನಾಲ್ವರು ಹೆಣ್ಣುಮಕ್ಕಳು ಈ ಹಾಡಿಕೆಯಲ್ಲಿದ್ದಾರೆ. ಇವರಲ್ಲಿ ಇಬ್ಬರಿಗೆ ಗಂಡ ಇದ್ದರೆ, ಇನ್ನಿಬ್ಬರಿಗೆ ಗಂಡ ಇಲ್ಲ. ಹೀಗೆ ಈ ನಾಲ್ವರನ್ನು ಹೊರತುಪಡಿಸಿದರೆ ಹೈದರಾಬಾದ್ ಕರ್ನಾಟಕದಲ್ಲಿರುವ ಉಳಿದೆಲ್ಲ ಮಹಿಳಾ ಹಾಡುಗಾರರು ಜೋಗತಿ ಸಂಪ್ರದಾಯಕ್ಕೆ ಸೇರಿದವರೆ. ಆದರೆ ಉತ್ತರ ಕರ್ನಾಟಕದಲ್ಲಿ ಬಿಜಾಪುರದ ಹಾಡಿಕೆ ಸಿದ್ದವ್ವ ವಿಧವೆಯಾಗಿದ್ದು ಮಾದರ ಜಾತಿಗೆ ಸೇರಿದವಳಾಗಿದ್ದಾಳೆ. ಈ ಭಾಗದಲ್ಲಿ ಹಾಡಿಕೆ ಸಿದ್ದವ್ವನನ್ನು ಹೊರೆತುಪಡಿಸಿದರೆ ಉಳಿದ ದಪ್ಪಿನ ಮಹಿಳಾ ಹಾಡುಗಾರರೆಲ್ಲರೂ ‘ಜೋಗತಿಯರು’ ಹಾಗೂ ಮಲ್ಲಯ್ಯನ ‘ಮುರುಳಿಯರು’ ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ ಗಂಡ ಇದ್ದೂ ಹಾಡುವ ಇಲ್ಲವೆ ಗಂಡ ಸತ್ತ ನಂತರ ಹಾಡುವ ಮಹಿಳಾ ಹಾಡುಗಾರರು ಬೆರಳೆಣಿಕೆಯಷ್ಟು ಇರುವರು. ಇವರಲ್ಲಿ ಹಾಡಿಕೆ ಸಿದ್ದವ್ವನಂತವರು ಸಮಾಜದಲ್ಲಿ ಜಾತಿ ಶ್ರೇಣೀಕರಣದ ಪ್ರಕಾರ ಅಂತ್ಯಜ ಜಾತಿಗೆ ಸೇರಿದವರಾಗಿದ್ದಾರೆ.

ದೇವರಿಗೆ ಹೆಣ್ಣುಮಕ್ಕಳನ್ನು ಬಿಡುವ ಪದ್ಧತಿ ಅಪರಾಧವೆಂದು ಪರಿಗಣಿಸಲ್ಪಟ್ಟಾಗ ಹರದೇಶಿ-ನಾಗೇಶಿ ಹಾಡುಗಾರರು ತಮ್ಮ ಕುಟುಂಬದಲ್ಲಿನ ದೇವರಿಗೆ ಬಿಟ್ಟ ಹೆಣ್ಣುಮಕ್ಕಳಿಗೆ ತಮ್ಮ ವಿದ್ಯೆಯನ್ನು ಕಲಿಸಿರಬೇಕು. ೭೦ರ ಆಸು-ಪಾಸಿನಲ್ಲಿರುವ ಕಾಶಿನಾಥ ಚೌವ್ಹಾಣ ಅವರು ಹಾಡಿಕೆಯಲ್ಲಿ ಮಹಿಳೆಯರು ಪ್ರವೇಶಿಸಿದ್ದರ ಬಗೆಗೆ ಹೇಳಿದ್ದು ಹೀಗೆ; “ಹೆಣ್ಣು ಮಕ್ಕಳಿಗಿ ಪ್ಯಾಲಾ ಕೊಡಾಕ ಬರಲ್ಲ. ಈ ಕಲಾದಾಗ ಸ್ತ್ರೀಯರಿಗೆ ಆಸ್ಪದನ್ಯ ಇರಲಿಲ್ಲ. ಸರಕಾರ ದೇವರಿಗಿ ಬಿಟ್ಟ ಹೆಣ್ಣಮಕ್ಕಳನ್ನು ಹಿಡಿಯಾಕ ಚಾಲು ಮಾಡಿದ ಮ್ಯಾಲೆ ದೇವದಾಸೇರು ಗೀಗಿ ಪದಕ್ಕ ಬಂದರು”. ಗೀಗೀ ಪದಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶ ಮೂಲದಿಂದ ಇಲ್ಲ. ಉಪಜೀವನಕ್ಕಾಗಿ ಈ ವೃತ್ತಿರಂಗ ಪ್ರವೇಶಿಸಿರಬೇಕು. ಹಾಡುವ ಈ ಮಹಿಳೆಯರನ್ನು ‘ದೇವದಾಸಿ’, ‘ಜೋಗತಿ’, ಇಲ್ಲವೆ ‘ಬಸವಿ’ ಎಂದು ಕರೆಯುವುದಿಲ್ಲ. ಹಾಡಿಕೆ ಎಲ್ಲವ್ವ, ಶಾವರಿಕೆ ಬಂಗಾರವ್ವ ಎಂದೇ ಗುರುತಿಸುತ್ತಾರೆ. ಈ ವೃತ್ತಿಯಿಂದಾಗಿ ‘ದೇವದಾಸಿ’ ಎಂದು ಕರೆಯಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಬಿಡುಗಡೆಗೊಂಡರು. ಈ ಕುರಿತಂತೆ ನಾನು ಸಂದರ್ಶಿಸಿದ ಅನೇಕ ಹಿರಿಯ ಮಹಿಳಾ ಹಾಡುಗಾರರು ಹೇಳಿದ್ದೇನೆಂದರೆ ತಾವು ಈ ವೃತ್ತಿಯಿಂದಾಗಿ ‘ದೇವದಾಸಿ’ ಎಂದು ಕರೆಯಿಸಿಕೊಳ್ಳುವ ಅನಿವಾರ್ಯತೆಯಿಂದ ಬಿಡುಗಡೆಗೊಂಡು ಹಾಡಿಕೆ ಯಲ್ಲವ್ವ, ಹಾಡಿಕೆ ಸತ್ಯವ್ವ, ಶಾವಿರಕಿ ಯಮನವ್ವ ಎಂದು ಕರೆಯಿಸಿಕೊಳ್ಳುವ ಮೇಲ್ ಹಂತದ ಪದವಿಗೇರಿದ್ದೇವೆ. “ಊರಾಗ ತಿರುಗಾಡಬೇಕಾದರೆ ಮೊದಲು ‘ದೇವದಾಸಿ’ ಬಂದ್ಳು ನೋಡು, ಸೂಳೆ ಬಂದ್ಲು ನೋಡು ಅಂತಿದ್ರು. ಜೀಂವಾ ಚುರ್ರ್ ಅಂತಿತ್ತು. ಈಗ ಹಾಂಗ ಅನ್ನಂಗಿಲ್ಲ. ಹಾಡ್ಕಿ ಯಲ್ಲವ್ವ ಬಂದ್ಲು ಅಂತಾರ. ಆದ ನಮ್ಮ ಮನಸ್ಸಿಗೆ ಬಾಳ ಸಮಾಧಾನ ತಂದೈತಿ. ಕಾನೂನಿನ ಹೆಸರಿನ್ಯಾಗ ನೀವು ನನ್ನ ಹಿಡಿಯಾಕ ಬರಂಗಿಲ್ಲ. ಯಾಕಂದ್ರ ನಾನು ಈಗ ದೇವದಾಸಿ ಯಲ್ಲವ್ವ ಅಲ್ಲ, ಹಾಡ್ಕಿ ಯಲ್ಲವ್ವ ಆಗೇನಿ” ಎಂದ ಯಲ್ಲವ್ವನ ಮಾತುಗಳನ್ನು ಗಮನಿಸಬೇಕು. ಕಾನೂನಿನ ಒತ್ತಡದಿಂದಾಗಿ ಅವರ ಬದುಕಿನಲ್ಲಿ ಕಾಣಿಸಿಕೊಂಡ ಸ್ಥಿತ್ಯಂತರ, ಅವರಿಗೆ ನೆಮ್ಮದಿಯನ್ನು ನೀಡಿದೆ ಕಲೆಯ ಮೂಲಕ ಗುರುತಿಸಿಕೊಳ್ಳುವ ಅವರು ‘ದೇವದಾಸಿ’ ಎಂದು ಹೆಸರಿನಡಿ ಗುರುರಿಸಿಕೊಳ್ಳಲು ಬಯಸುವುದಿಲ್ಲ.