ಉಚ್ಚಂಗಿದುರ್ಗವು ದಾವಣಗೇರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿದ್ದು, ಹರಪನಹಳ್ಳಿಯಿಂದ ದಕ್ಷಿಣಕ್ಕೆ ದಾವಣಗೇರಿಯಿಂದ ಉತ್ತರಕ್ಕೆ ೨೮ ಕಿ.ಮೀ ಸಮಾನ ಅಂತರದಲ್ಲಿದೆ. ಉಚ್ಚಂಗಿದುರ್ಗದ ಬೆಟ್ಟವು ಸಮುದ್ರ ಮಟ್ಟದಿಂದ ೨೬.೭೫ ಅಡಿ ಎತ್ತರವಾಗಿದೆ. ಈ ಬೆಟ್ಟವನ್ನು ಸುತ್ತುವರೆದಿರುವ ಕೋಟೆಯ ಗಿರಿದುರ್ಗಗಳ ಸಾಲಿಗೆ ಸೇರುವುದು.

ಉಚ್ಚಂಗಿದುರ್ಗದ ಹಾಲಮ್ಮ ನಗುಡಿ ಮುಂದಿರುವ ಶಾಸನವೊಂದರಲ್ಲಿ[1] ಉಚ್ಚಂಗಿದುರ್ಗಕ್ಕೆ ಕೃತುಯುಗದಲ್ಲಿ ಮೇಘನಾದ, ತ್ರೆತಾಯುಗದಲ್ಲಿ ಕನಕಗಿರಿ, ದ್ವಾಪರಯುಗದಲ್ಲಿ ಉತ್ತುಂಗ ಪರ್ವತ, ಕಲಿಯುಗದಲ್ಲಿ ಉಚ್ಚಂಗಿ ಎಂಬ ಹೆಸರು ಬಂದಿರುವ ಉಲ್ಲೇಖವಿದೆ. ಉಚ್ಚಂಗಿ ಎಂಬಲ್ಲಿ ಕೊನೆಗೆ ಬರುವ ‘ಗಿ’ಕಾರ ಹಚ್ಚಿಕೊಂಡು ಬರುವ ಗ್ರಾಮನಾಮಗಳು ಉತ್ತರ ಕರ್ನಾಟಕದಲ್ಲಿ ಅನೇಕ ಕಡೆ ದೊರೆಯುತ್ತವೆ. ನಿದರ್ಶನಕ್ಕಾಗಿ ಕೆಲವನ್ನು ನೀಡಲಾಗದೆ. ಗೊಣಸಗಿ, ತೆಲಗಿ, ಉತ್ತಂಗಿ, ಹುಣಸಗಿ, ಮೆಣಸಗಿ, ಅಸಂಗಿ, ಇತ್ಯಾದಿ ‘ಗಿ’ ಗಾರ ಗ್ರಾಮ ಹೃಸ್ವರೂಪ ಕೆಯ್ > ಗೆಯ್, ಕೆಯ್, ಹೊಲ – ಸ್ಥಳದ ಅರ್ಥವನ್ನು ನೀಡುತ್ತದೆ. ಗ್ರಾಮದ ಚರಿತೆಗೆ ಭಾಷಿಕ ಅಧ್ಯಯನ ಒಂದು ಮುಖ್ಯ ಆಕರವಾಗಿದೆ. ಜಗಳೂರಿನ ತಾಲ್ಲೂಕಿನ ಹುಚ್ಚಂಗಿಪುರ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನಲ್ಲಿ ಉಚ್ಚಂಗೇರಿ ಇದೆ. ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನಲ್ಲಿ ಉಚಗೇರಿ ಎಂಬ ಊರುಗಳಿವೆ.

ಉಚ್ಚ – ಎತ್ತರ, ಶ್ರೇಷ್ಠ, ಉಚ್‌ಶೃಂಗಿ – ಉಚ್ಛಶೃಂಗಿ, ಉಚ್ – ಎತ್ತರವಾದ ಶೃಂಗ – ಕೋಡು, ಶಿಖರ ಎಂದಾಗಿರಬೇಕು. ಉಚ್ಛಶೃಂಗಿ ಉಚ್ಚಂಗಿಯಾಗಿ ಈ ರೂಪ ಪಡೆದುಕೊಂಡಿರಬಹುದಾಗಿದೆ. ಇದು ಸಂಸ್ಕೃತ ಪದವಾದರೂ ಸಧ್ಯಕ್ಕೆ ಈ ಮೂಲವನ್ನು ಒಪ್ಪಲಾಗಿದೆ.

ಈ ಪ್ರದೇಶದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಮಧ್ಯಕಾಲೀನ ಚರಿತ್ರೆಯಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿ ನಿರ್ಣಾಯಕ ಕಾಲಘಟ್ಟವಾಗಿದೆ ಎನ್ನಬಹುದು. ಈ ಕುರಿತು ಪ್ರಾದೇಶಿಕ ಸಂಶೋಧನೆಗಳು ಸಾಕಷ್ಟು ನಡೆದಿದ್ದು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ವಿಜಯನಗರಕ್ಕಿಂತ ಮೊದಲು ಉಚ್ಚಂಗಿದುರ್ಗವು ಬನವಾಸಿ ಕದಂಬರಿಗೆ, ಕಲ್ಯಾಣ ಚಾಳುಕ್ಯರಿಗೆ, ನೊಳಂಬರಿಗೆ, ಪಾಂಡ್ಯರಿಗೆ, ಹೊಯ್ಸಳರಿಗೆ ಪ್ರಮುಖ ಕೇಂದ್ರವಾಗಿತ್ತು. ಅಲ್ಲದೆ ಬಳ್ಳಾರಿ, ದಾವಣಗೇರಿ, ಚಿತ್ರದುರ್ಗ, ಧಾರವಾಡ ಮತ್ತು ಕರ್ನಾಟಕದ ದಕ್ಷಿಣ ಭಾಗದ ಕೆಲವು ಪ್ರದೇಶಗಳನ್ನೊಳಗೊಂಡ ನೊಳಂಬವಾಡಿ ೩೨೦೦೦ಕ್ಕೆ ಉಚ್ಚಂಗಿದುರ್ಗವು ರಾಜಧಾನಿಯಾಗಿತ್ತು. ಆಗ ಪಾಂಡ್ಯರು ಇಲ್ಲಿ ರಾಜ್ಯವಾಳುತ್ತಿದ್ದರು. ವಿಜಯನಗರದ ನಂತರ ಉಚ್ಚಂಗಿದುರ್ಗ ಪಾಳೆಯಗಾರರ ಪ್ರಮುಖ ನೆಲೆಯಾಗಿದ್ದಿತು. ಒಂದು ಕಾಲಕ್ಕೆ ರಾಜಕೀಯ ಶಕ್ತಿ ಕೇಂದ್ರವಾಗಿದ್ದ ಉಚ್ಚಂಗಿದುರ್ಗವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತಿರುವ ಕಾರಣ ಇದರ ರಾಜಕೀಯ ಚರಿತ್ರೆ ಮಸುಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇದರ ರಾಜಕೀಯ ಇತಿಹಾಸದೊಂದಿಗೆ ಇಲ್ಲಿಯ ರಕ್ಷಣಾ ಸ್ಮಾರಕಗಳಾದ ಕೋಟೆ ಕೊತ್ತಳಗಳ ಬಗ್ಗೆ ಅಧ್ಯಯನ ಮಾಡುವುದು ಇಲ್ಲಿ ಪ್ರಮುಖವೆನಿಸುತ್ತದೆ.

ಮನುಷ್ಯ ಜೀವನದ ಅವಶ್ಯಕತೆಗಳಾದ ಹಿತಕರವಾದ ವಾಯುಗುಣ, ಫಲವತ್ತಾದ ಭೂ ಪ್ರದೇಶ, ಜಲಸಮೃದ್ಧಿ ಈ ಅನುಕೂಲಗಳು ಇವುಗಳ ಜೊತೆಗೆ ವಾಸಿಸಲು ಗಿರಿ ಕಂದರಗಳು ಉಚ್ಚಂಗಿದುರ್ಗದಲ್ಲಿ ಇರುವುದರಿಂದ ಈ ಪ್ರದೇಶದಲ್ಲಿ ಅತೀ ಪ್ರಾಚೀನ ಕಾಲದಿಂದಲೂ ಜನರು ನೆಲೆಸಿರುವುದಕ್ಕೆ ಕುರುಹುಗಳಿವೆ.

ಶಾತವಾಹನ ಸಾಮಂತರಾದ ಕಂಚಿಯ ಪಲ್ಲವರು ಸ್ವಲ್ಪಕಾಲ ಇಲ್ಲಿ ಆಳ್ವಿಕೆ ಮಾಡಿದ್ದಾರೆ.[2] ಉಚ್ಚಂಗಿದುರ್ಗಕ್ಕೆ ಸಂಬಂಧಿಸಿದಂತೆ ಪಲ್ಲವರ ಯಾವ ಕುರುಹುಗಳೂ ದೊರಕುವುದಿಲ್ಲ. ಆದರೆ ಕೈಫಿಯತ್ತುಗಳು ಮತ್ತು ಕೆಲವು ದಾಖಲೆಗಳಲ್ಲಿ ಈ ಕೋಟೆಯ ಬಗ್ಗೆ ಕೆಲವು ಮಾಹಿತಿಗಳಿವೆ. ಕಂಚಿಯ ಪಲ್ಲವರು ಮಧುರೆಯ ಅರಸರು ಒಂದಾಗಿ ಪ್ರಬಲತರ ಗಿರಿದುರ್ಗವೆಂದು ಹೆಸರಾಗಿದ್ದ ಉಚ್ಚಂಗಿದುರ್ಗವನ್ನು ತಮ್ಮ ಸೈನ್ಯದೊಡನೆ ಮುತ್ತಿಗೆ ಹಾಕಿದರು.[3] ಸಂಗ್ರಾಮವಾದ ನಂತರ ದುರ್ಗವು ಶತ್ರುಗಳ ವಶವಾಯಿತು. ಆದರೂ ರಾಜ್ಯ ಲೋಲಪರವಾದ ಕಾಂಚಿಯ ರಾಜರು ಮತ್ತು ಮಧುರೆಯ ಅರಸರು ತಮ್ಮಲ್ಲಿಯೇ ಸಂಧಾನ ಮಾಡಿಕೊಂಡು ದುರ್ಗದ ಕೋಟೆಯನ್ನು ವಶಪಡಿಸಿಕೊಂಡು ನೀರಾವರಿ ಯೋಜನೆಳಿಂದದ ವೃದ್ಧಿ ಮಾಡಿ[4] ಉಭಯತ್ರಯರು ಸೇರಿ ಒಂದು ಕೆರೆಯನ್ನು ನಿರ್ಮಿಸಿದರು. ಅದಕ್ಕೆ ಮೂರು ಕಡೆ ಕಟ್ಟೆಯನ್ನು ಕಾಂಚಿ ಮತ್ತು ಮಧುರೆಯ ಪಲ್ಲವರು ಕಟ್ಟಿಸಿದರು. ಕಾಂಚಿಯವರು ಗುಡ್ಡದ ಕೆಳಭಾಗದಲ್ಲಿ ಕೋಟೆಯನ್ನು ನಿರ್ಮಿಸಿ ಇಲ್ಲಿ ಹನುಮಂತನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಉಚ್ಚಂಗಿದುರ್ಗದ ವಾಯುವ್ಯಕ್ಕೆ ೨ ಮೈಲು ದೂರದಲ್ಲಿ ಕಂಚಿ ಪಲ್ಲವರ, ಮಧುರೆಯರ ಸೈನ್ಯ ಬಿಡಾರ ಮಾಡಿ ಜಯ ಸಂಪಾದಿಸಿತು.[5] ಕದಂಬ ವಂಶದ ಉಚ್ಚಂಗಿ ದೊರೆಗಳು ಸಿಂಹ ವಿಷ್ಣುವಿನ ವಂಶದ ಪಲ್ಲವರಿಂದ ನೆರವು ಪಡೆದರು. ಉಚ್ಚಂಗಿ ವಿಷ್ಣುಶರ್ಮ ಕದಂಬನಿಗೆ ಶಾಂತಿವರ್ಮ ಪಲ್ಲವನು ಪಟ್ಟಿ ಕಟ್ಟಿದ್ದು ವಿಷ್ಣುವರ್ಧನ ಮಗನಾದ ಸಿಂಹವರ್ಮನಿಗೂ ಪಲ್ಲವರು ನೆರವು ನೀಡಿದರು. ನಂತರ ಕಾಡುವೆಟ್ಟಿಯನ್ನು ಚಾಳುಕ್ಯರು ಸೋಲಿಸಿದರು.[6]

ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದ ಕದಂಬರು ಕ್ರಿ.ಶ. ೪ನೆಯ ಶತಮಾನದಿಂದ ೬ನೆಯ ಶತಮಾನದವರೆಗೆ ಆಳಿದುದನ್ನು ಚರಿತ್ರೆಯಿಂದ ತಿಳಿಯಬಹುದು.[7] ಮಯೂರವರ್ಮನಿಂದ ಕ್ರಿ.ಶ. ೩೪೫ರಲ್ಲಿ ಕದಂಬವಂಶ ಆರಂಭವಾಯಿತು.[8] ಕದಂಬವಂಶದ ದೊರೆಗಳೆಂದರೆ ಕೊಂಗವರ್ಮ, ಭಗೀರಥವರ್ಮ, ರಘುವರ್ಮ, ಕಾಕುತ್ಸವರ್ಮ, ಶಾಂತಿವರ್ಮ,ಕುಮಾರವರ್ಮ, ಮೊದಲನೆ ಕೃಷ್ಣ, ಮೃಗೇಶವರ್ಮ, ಮುಂತಾದವರು. ಮುಂದೆ ಕಾಕುತ್ಸವರ್ಮನಿಗೆ ಕುಮಾರವರ್ಮ (ಮಂಧಾತ) ಮತ್ತು ಕೃಷ್ಣವರ್ಮ ಎಂಬ ಎರಡು ಮಕ್ಕಳಾಗಿ ಉಚ್ಚಂಗಿಯ ಅಧಿಪತಿಯಾದ ಕೃಷ್ಣ ವರ್ಮನು ತನ್ನ ಹಿರಿಯಣ್ಣನ ಮಗ ಮೃಗೇಶನಿಗೆ ವಿರುದ್ಧವಾಗಿ ಪಲ್ಲವರ ಬೆಂಬಲ ಪಡೆದರು. ಹೀಗೆ ಕದಂಬರ ರಾಜ್ಯವು ಇಬ್ಭಾಗವಾಯಿತು.[9] ಒಂದು ಭಾಗವು ತಲಕಾಡಿನ ಗಂಗರ ಬೆಂಬಲ ಪಡೆದು ಬನವಾಸಿ ಶಾಖೆ ಆರಂಭಿಸಿತು.[10] ಮತ್ತೊಂದು ಪಲ್ಲವರ ಹಾಗೂ ಪಾರವಿ ಗಂಗರ ಬೆಂಬಲ ಪಡೆದು ಉಚ್ಚಂಗಿ ಶಾಖೆ ಆರಂಭಿಸಿ ಇವರು ಸುಮಾರು ೧೧೭ ವರ್ಷಗಳವರೆಗೆ ಆಳ್ವಿಕೆ ಮಾಡಿದರು.[11]

ಗಂಗರು ಮತ್ತು ರಾಷ್ಟ್ರಕೂಟರ ಕುರುಹುಗಳು ಇಲ್ಲಿ ಅಲಭ್ಯ. ನೊಳಂಬ ಪಲ್ಲವರು ಪಲ್ಲವ ವಂಶದ ಕಿರುಶಾಖೆಗೆ ಸೇರಿದವನು. ಸುಮಾರು ಕ್ರಿ.ಶ. ೭೦೦ರಲ್ಲಿ ಈ ಶಾಖೆ ಆರಂಭವಾಗಿ ಕೊನೆಗೆ ಹೊಯ್ಸಳ ಹಾಗೂ ಕಲ್ಯಾಣ ಚಾಳುಕ್ಯರಲ್ಲಿ ಐಕ್ಯವಾಯಿತೆಂದು ತಿಳಿದುಬರುತ್ತದೆ.[12] ಕ್ರಿ.ಶ. ೧೦ನೆಯ ಶತಮಾನದಲ್ಲಿ ಇವರ ಆಡಳಿತ ಪ್ರದೇಶವು ನೊಳಂಬವಾಡಿ ೩೨೦೦೦ದ ಪ್ರಾಂತವಾಯಿತು. ಹಾಗಾಗಿ ನೊಳಂಬರಿಗೆ ೩೨೦೦೦ಕ್ಕೆ ಬಳ್ಳಾರಿ, ಕೋಲಾರ, ಬೆಂಗಳೂರು ಜಿಲ್ಲೆಯ ಕೆಲವು ಭಾಗಗಳು ಸೇರಿಕೊಂಡವು. ಈ ವಂಶದ ಸ್ಥಾಪಕ ತ್ರಿನಯನ ಪಲ್ಲವ. ಆಗ ಉಚ್ಚಂಗಿದುರ್ಗವು ನೊಳಂಬರ ಆಡಳಿತಕ್ಕೆ ಒಳಗಾದ ಪ್ರದೇಶವಾಗಿದೆ. ಇದೇ ಸಮಯದಲ್ಲಿ ನೊಳಂಬರು ತಮ್ಮ ನಿಷ್ಟೆಯನ್ನು ಕಲ್ಯಾಣ ಚಾಳುಕ್ಯರಿಗೆ ವರ್ಗಾಯಿಸಿದಂತೆ ಕಂಡುಬರುತ್ತದೆ.[13] ಉಚ್ಚಂಗಿ ೩೦ ಇದೊಂದು ಪ್ರಮುಖ ಆಡಳಿತ ನೆಲೆಯಾಗಿ ಇವರಿಗೆ ರಾಜಧಾನಿಯಾಯಿತು.[14] ಪಾಂಡ್ಯರು ಈ ಸಂಪ್ರದಾಯವನ್ನು ಮುಂದುವರೆಸಿದರು.

ಪಾಂಡ್ಯರು ಸುಮಾರು ಕ್ರಿ.ಶ. ೧೧ನೇ ಶತಮಾನದಿಂದ ೧೩ನೇ ಶತಮಾನದ ಆರಂಭದವರೆಗೆ ಸುಮಾರು ೧೨ ಜನಪಾಂಡ್ಯ ಅರಸರು ಉಚ್ಚಂಗಿದುರ್ಗವನ್ನು ರಾಜಧಾನಿ ಮಾಡಿಕೊಂಡು ಇಲ್ಲಿ ಆಳ್ವಿಕೆ ಮಾಡಿದರು.[15] ಆ ಸಮಯದಲ್ಲಿ ಉಚ್ಚಂಗಿದುರ್ಗದ ಮೇಲಿರುವ ತೈಲೇಶ್ವರ ದೇವರಿಗೆ ನೊಳಂಬ ಪಲ್ಲವ ಪೆರ್ಮಾಡಿ ದೇವನು ಗಂಟಿಗನ ಕೆರೆಯನ್ನು ದಾನಬಿಟ್ಟಂತೆ ಕ್ರಿ.ಶ. ೧೧೭೦ ರ ಶಾಸನ ತಿಳಿಸುತ್ತದೆ.[16] ಕ್ರಿ.ಶ. ೧೧೬೫ರ ಶಾಸನವು[17] ವಿಜಯ ಪಾಂಡ್ಯದೇವನು ಉಚ್ಚಂಗಿ ಪಟ್ಟಣದ ತೆರಿಗೆಯನ್ನು ದೇವರಿಗೆ ದತ್ತಿ ಬಿಟ್ಟಂತೆ ತಿಳಿಸುತ್ತದೆ.

ಕ್ರಿ.ಶ. ೧೧೦೦ ಶಾಸನವೊಂದು[18] ತ್ರಿಭುವನಮಲ್ಲ ಪಾಂಡ್ಯದೇವನು ಉಚ್ಚಂಗಿ ದೇವಿಗೆ ದತ್ತಿ ನೀಡಿದ ವಿವರ ನೀಡುತ್ತದೆ. ಕ್ರಿ.ಶ. ೧೦೬೪ ರ ಶಾಸನವು ವಿಜಯಾದಿತ್ಯದೇವನು ಆಡಳಿತ ಅವಧಿಯಲ್ಲಿ ಸೂಳೆಮಾಳ ಮಾರಮಯ್ಯನ ಮಾರೇಶ್ವರ ದೇವರಿಗೆ ಗದ್ದೆ, ತೋಟ ದಾನಬಿಟ್ಟಂತೆ ತಿಳಿಸುತ್ತದೆ.[19] ಹೀಗೆ ಉಚ್ಚಂಗಿದುರ್ಗದಲ್ಲಿ ಪಾಂಡ್ಯ ಅರಸರು ದೇವಸ್ಥಾನಗಳಿಗೆ ದಾನ ದತ್ತಿಗಳನ್ನು ನೀಡುವುದರೊಂದಿಗೆ ವೈಭವ ಆಳ್ವಿಕೆ ಮಾಡಿದರು. ಇವರು ಯುದ್ಧ ನಿಪುಣರು, ಶೂರರು ಆಗಿದ್ದರು. ಪಾಂಡ್ಯರಲ್ಲಿ ವಿಜಯಪಾಂಡ್ಯದೇವರು ಅತ್ಯಂತ ಪರಾಕ್ರಮದ ದೊರೆಯಾಗಿದ್ದನು. ಇವನ ಬಗ್ಗೆ ಶಾಸನವೊಂದರಲ್ಲಿ

ಚಿಂತಾಃತಃ ಕರಣಂ ಯಾಧವಾಭರಣಂ ಪಾಂಡ್ಯ ಕುಳಕಮಳ ಮಾರ್ತ್ತಂಡಂ
ಪರಿಚ್ಛೇದಗಂಡಂ ರಾಜಿಗ ಚೋಳ ಮನೋಭಂಗಂ ಸಾಹಸೋತ್ತುಂಗಂ
ನಿಖಿಳ ನಾಮಾವಳೀ ವಿರಾಜಿತಮಪ್ಪ ಶ್ರೀ ಮನ್ಮಹಾಮಂಡಳೇಶ್ವರ

ವಿಜಯಪಾಂಡ್ಯದೇವರು ಎಂದಿದೆ.[20] ಅಂದರೆ ವಿಜಯ ಪಾಂಡ್ಯನು ಚೋಳರನ್ನು ಗೆದ್ದ ಬಗೆಯನ್ನು ವರ್ಣಿಸಿದೆ. ಹೊಯ್ಸಳರ ೩ನೇ ಬಲ್ಲಾಳನು ಕ್ರಿ.ಶ. ೧೧೭೭ ರಲ್ಲಿ ಪ್ರಯಾಸ ಮಾನವಾಗಿ ಉಚ್ಚಂಗಿದುರ್ಗವನ್ನು ವಿಜಯಪಾಂಡ್ಯನನ್ನು ಸೋಲಿಸುವುದರೊಂದಿಗೆ ಹೊಯ್ಸಳರು ವಶಪಡಿಸಿಕೊಂಡರು.[21] ಮುಂದೆ ಕಾಲಾಂತರದಲ್ಲಿ ಉಚ್ಚಂಗಿದುರ್ಗವು ಹೊಯ್ಸಳರಿಗೆ ಸೇರಿದ್ದು ಕಂಡುಬರುತ್ತದೆ. ಚಾಳುಕ್ಯರ ಪತನದ ಹಾದಿ ಮತ್ತು ಚಾಳುಕ್ಯರ ರಾಜ್ಯದಲ್ಲಿ ಹೊಯ್ಸಳರ ಪ್ರವೇಶವು ಪ್ರಮುಖವಾದ ಹಂತವಾಗಿದ್ದರಿಂದ ಹೊಯ್ಸಳರಿಗೆ ಉಚ್ಚಂಗಿದುರ್ಗವನ್ನು ವಶಪಡಿಸಿಕೊಂಡಿದ್ದು ಒಂದು ಪ್ರತಿಷ್ಠೆಯ ಸಂಗತಿಯು ಆಗಿರಬಹುದಾಗಿದೆ.

ಚೋಳರು ಮತ್ತು ಚಾಳುಕ್ಯರು ನಡುವೆ ಈ ಭಾಗದಲ್ಲಿ ಸದಾ ಯುದ್ಧಗಳು ಜರುಗುತ್ತಿದ್ದವು. ಇಂತಹ ಸನ್ನಿವೇಶದಲ್ಲಿ ಹೊಯ್ಸಳರು ಬೆಳಕಿಗೆ ಬಂದರು. ಒಂದನೇ ಬಲ್ಲಾಳ, ಎರಡನೇ ಬಲ್ಲಾಳ, ಮೂರನೇ ಬಲ್ಲಾಳ, ಒಂದನೇ ನರಸಿಂಹ, ಸೋಮೇಶ್ವರ ಎರಡನೇ ನರಸಿಂಹ ಮತ್ತು ಮೂರನೇ ನರಸಿಂಹ ಹೊಯ್ಸಳ ದೊರೆಗಳಲ್ಲಿ ಪ್ರಮುಖರು. ಇವರು ಕ್ರಿ.ಶ.೧೦ನೇ ಶತಮಾನದಿಂದ ೧೪ನೇ ಶತಮಾನದ ಮಧ್ಯಭಾಗದವರೆಗೆ ಅಂದರೆ ೩ ಶತಕಗಳ ಕಾಲ ಇಲ್ಲಿ ಆಳ್ವಿಕೆ ಮಾಡಿದರು. ಕ್ರಿ.ಶ. ೧೧೧೭ರ‍ಲ್ಲಿ ಚಾಳುಕ್ಯರು ಸಾಮಂತರಾಗಿದ್ದ ಉಚ್ಚಂಗಿಯ ಪಾಂಡ್ಯರನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ದುಮ್ಮೆ ಎಂಬ ಸ್ಥಳದಲ್ಲಿ ಸೋಲಿಸಿದರು.[22] ಉಚ್ಚಂಗಿದುರ್ಗವು ಹೊಯ್ಸಳರ ಕ್ಷೀಣಾವಸ್ಥೆಯ ನಂತರ ವಿಜಯನಗರದ ಆಡಳಿತಕ್ಕೆ ಒಳಪಟ್ಟಿತ್ತು. ಆಗಲೇ ವಿಜಯನಗರಕ್ಕೆ ಸಹಾಯಕವಾದ ಕಾವ್ಯವೊಂದು ಬಾಗಳಿಯಲ್ಲಿ ಉದಯಿಸಿತು. ವಿಜಯನಗರದ ಪತನಾನಂತರ ಪಾಳೆಯಗಾರ ದಾದನಾಯಕ ಸ್ವತಂತ್ರ ರಾಜನಾದ. ಕ್ರಮೇಣ ಹರಪನಹಳ್ಳಿಯಲ್ಲಿ ಕೋಟೆ ಕಟ್ಟಿಕೊಂಡು ರಾಜ್ಯ ವಿಸ್ತರಿಸಿದ. ಚಿತ್ರದುರ್ಗ ಅರಸರಿಗೆ ಯುದ್ಧದಲ್ಲಿ ಸಹಾಯ ಮಾಡಿದ್ದರಿಂದ ಉಚ್ಚಂಗಿದುರ್ಗವು ಹರಪನಹಳ್ಳಿ ಪಾಳೆಯಗಾರರಾದ ದಾದನಾಯಕನಿಗೆ ದೊರಕಿತು.[23] ಉಚ್ಚಂಗಿದುರ್ಗ ಭದ್ರ ಹಾಗೂ ವ್ಯವಸ್ಥಿತ ಆಯಕಟ್ಟು ಪ್ರದೇಶವಾದ್ದರಿಂದ ತಮ್ಮ ರಾಜಧಾನಿಯನ್ನು ಹರಪನಹಳ್ಳಿಯಿಂದ ಉಚ್ಚಂಗಿದುರ್ಗಕ್ಕೆ ವರ್ಗಾಯಿಸಿ ದಾದನಾಯಕ ಇಲ್ಲಿ ಆಳ್ವಿಕೆ ಮಾಡಿದ. ಮುಂದೆ ರಂಗಣ್ಣ ನಾಯಕ, ಭರಮಣ್ಣ ನಾಯಕ, ಬಸವಂತ ನಾಯಕ, ಹರಿಯಾಮ್ಮಾಜಿ, ಮುಮ್ಮಡಿ ಬಸಪ್ಪ ನಾಯಕ, ಸೋಮಶೇಖರ ನಾಯಕ ಇವರು ಆಳ್ವಿಕೆ ಮಾಡಿದರು. ಇದರ ಕಾಲದಲ್ಲಿ ಉಚ್ಚಂಗಿದುರ್ಗದ ಕೋಟೆಯ ಜೀರ್ಣೋದ್ಧಾರ ಕಾರ್ಯವು ನಡೆಯಿತು. ನಂತರ ಉಚ್ಚಂಗಿದುರ್ಗ ಟಿಪ್ಪುಸುಲ್ತಾನ ಮತ್ತು ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.

ಕೋಟೆಯ ನಿರ್ಮಾಣದ ಕಾಲ

ಪ್ರಾಚೀನ ಕಾಲದ ದೇವಾಲಯ ಮತ್ತು ಕೋಟೆಯ ಕಾಲವನ್ನು ನಿರ್ಣಹಿಸುವುದು ಕಠಿಣವಾದದು. ಆಧಾರಗಲ ಕೊರತೆಯೇ ಇದಕ್ಕೆ ಕಾರಣ. ಬನವಾಸಿ ಕದಂಬರ ಒಂದು ಶಾಖೆ ಉಚ್ಚಂಗಿಯಿಂದ ಆಳ್ವಿಕೆ ನಡೆಸಿತು.[24] ಆದರೆ ಅವರ ಕಾಲದಲ್ಲಿ ಇಲ್ಲಿ ಕೋಟೆ ಇದ್ದಿರಬಹುದಾದರೂ ಸ್ಪಷ್ಟವಾದ ಆಧಾರಗಳು ಲಭ್ಯವಿಲ್ಲ. ಕದಂಬರ ಆಳ್ವಿಕೆಯ ನಂತರ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ ಬಾದಾಮಿಯ ಚಾಳುಕ್ಯರು ಮತ್ತು ರಾಷ್ಟ್ರಕೂಟರ ಕಾಲದ ಯಾವುದೇ ಶಾಸನಗಳಾಗಲೀ ಅವಶೇಷಗಳಾಗಲೀ ಇಲ್ಲಿ ಕಂಡುಬರುವುದಿಲ್ಲ. ಮುಂದೆ ಕಲ್ಯಾಣ ಚಾಳುಕ್ಯರ ಕಾಲದ ಶಾಸನಗಳಲ್ಲಿ ಅವಶೇಷಗಳಾಗಲೀ ಇಲ್ಲಿ ಕಂಡುಬರುವುದಿಲ್ಲ. ಮುಂದೆ ಕಲ್ಯಾಣ ಚಾಳುಕ್ಯರ ಕಾಲದ ಶಾಸನಗಳಲ್ಲಿ ಶಾಸನಗಳಲ್ಲಿ ಉಚ್ಚಂಗಿ ಕೋಟೆಯ ಬಗೆಗೆ ಉಲ್ಲೇಖಗಳಿವೆ.

ಶ್ರೀಮತ್ರಿಭುವನಮಲ್ಲ ಪಾಂಡ್ಯದೇವ ಪಾಧಾರಾದಕಂ ವೈರಿಬಳಸಾಧಕಂ ಸಮಾದಿ ಸಮಸ್ತ ಪ್ರಶಸ್ತಿ ಸಂಹಿತಂ ಮನ್ಮಹಾ ಸಾಮನ್ತಂ ಒಳನಾಡಳ್ವರು ಶ್ರೀ ಪಾಂಡ್ಯ ದೇವರ್ಗೆ ಭಿನ್ನಪಮ ಗೈಯ್ಯಲು ಅನಾದಿ ಸಂಸಿದ್ಧಿಯ ಪಟ್ಟಣಂ ಉಚ್ಚಂಗಿ ಕೋಟೆಯ[25] ಎಂದು ಒಂದು ಶಾಸನವು ಹೇಳಿದರೆ ಮತ್ತೊಂದು ಶಾಸನವು ಉಚ್ಚಂಗಿ ಕೋಟೆ ಉಲ್ಲೇಖವನ್ನು ಈ ರೀತಿ ವಿವರಿಸಿದೆ. ವೆಂಗೀಯ ಮಂಡಳೇಶ್ವರ ಶ್ರೀ ವಿಷ್ಣುವರ್ಧನ ವಿಜಯಾದಿತ್ಯ ದೇವರು ನೊಳಂಬವಾಡಿ ೩೨೦೦೦ವನ್ನು ಆಳುವಾಗ ಮಾರೇಶ್ವರ ದೇವರ್ಗೆ ಉಚ್ಚಂಗಿ ಕೋಟೆಯ ನೈರುತ್ಯ ದೆಸೆಯಂ.[26]

ಚಾಳುಕ್ಯ ಚೂಡಾಮಣಿಯೆಂದು ಕರೆಸಿಕೊಂಡ ರಾಜಾಧಿತ್ಯರು ಆಳುತ್ತಿದ್ದಾಗ ಗಂಗ ವಂಶದ ೨೧ನೇ ಮಾರಸಿಂಹನು ಕ್ರಿ.ಶ. ೯೭೧ರಲ್ಲಿ ಕೋಟೆಯನ್ನು ಮುತ್ತಿ ವಶಪಡಿಸಿಕೊಂಡನು.[27] ಉಚ್ಚಂಗಿದುರ್ಗದ ಕೋಟೆಯ ಈ ಮೇಲಿನ ಆಧಾರಗಳ ಹಿನ್ನೆಲೆಯಲ್ಲಿ ಕ್ರಿ.ಶ. ೯೭೧ ಕ್ಕಿಂತ ಮೊದಲೇ ನಿರ್ಮಾಣವಾಗಿರುವುದು ಕಂಡುಬರುತ್ತದೆ.

ಕೋಟೆಯ ಲಕ್ಷಣಗಳು

ಶತೃಗಳಿಂದ ರಕ್ಷಣೆಯನ್ನು ಪಡೆಯುವುದೇ ಕೋಟೆಗಳ ನಿರ್ಮಾಣದ ಮೂಲ ಉದ್ದೇಶ. ಶತೃಗಳ ಹಾವಳಿ, ಅವಶ್ಯಕತೆಗಳ ಹೆಚ್ಚಳ ಮತ್ತು ರಾಜ್ಯವು ವಿಸ್ತಾರವಾಗುತ್ತಾ ಹೋದಂತೆ ಕೋಟೆಯ ಸುತ್ತುಗಳು ಬೆಳೆದಿವೆ. ಆಡಳಿತದ ಪ್ರಮುಖ ಕೇಂದ್ರವಾಗಿದ್ದ ಉಚ್ಚಂಗಿ ಕೋಟೆಯು ಹಲವು ಬಾರಿ ದುರಸ್ತಿಯೊಂದಿಗೆ, ಹೊಸ ಸುತ್ತುಗಳನ್ನು ಹೊಂದಿದೆ. ಪಾಳೆಯಗಾರರ ಅವಧಿಯಲ್ಲಿ ದಾದಯ್ಯ ನಾಯಕನು ಉಚ್ಚಂಗಿದುರ್ಗದ ಕೋಟೆಯನ್ನು ಬಲಪಡಿಸಿಕೊಂಡು ಪ್ರಬಲವಾಗಿದ್ದನು.[28] ಸ್ಥಳೀಯರು ಇದು ಏಳು ಸುತ್ತಿನ ಕೋಟೆ ಎಂದು ಅಭಿಪ್ರಾಯ ಪಟ್ಟರೆ ಡಾ. ಸಿ.ಎಸ್. ಪಾಟೀಲರ ರೀತ್ಯಾ ಇದು ಹಲವು ಸುತ್ತುಗಳನ್ನು ಒಳಗೊಂಡಿತ್ತು.[29] ಎಂದಿದ್ದಾರೆ. ಕದಂಬರಿಂದ ಮೊದಲುನುಡಿ ವಿಜಯನಗರದ ಅರಸರವರೆಗೆ ಕೋಟೆಯನ್ನು ಭದ್ರಪಡಿಸಿಕೊಂಡಿರುವುದಕ್ಕೆ ಆಧಾರಗಳು ಲಭ್ಯವಾಗಿಲ್ಲ. ಉಚ್ಚಂಗಿ ಕೋಟೆಯು ವಿಸ್ತಾರವಾಗಿದ್ದು ಹಲವು ಸುತ್ತುಗಳನ್ನು ಒಳಗೊಂಡಿರಬಹುದಾದುದಕ್ಕೆ ಈ ಕೆಳಗಿನ ಅಂಶಗಳು ಗಮನಾರ್ಹ.

ಒಂದನೆಯದಾಗಿ ಜನಸಾಮಾನ್ಯರಿಗೆ ಕೋಟೆಯ ಪಕ್ಕದಲ್ಲಿ ಊರುಗಳು ನಿರ್ಮಾಣವಾಗುತ್ತಿದ್ದವು. ರಾಜಸಂತತಿ ಮತ್ತು ಪ್ರಮುಖ ವರ್ಗದವರು ಕೋಟೆಯೊಳಗಿರುತ್ತಿದ್ದರು. ಉಚ್ಚಂಗಿದುರ್ಗದ ಆಗ್ನೇಯ ಭಾಗಕ್ಕೆ ಊರಿದ್ದಿರಬಹುದು. ಅದರ ಅವಶೇಷಗಳು ಇಂದಿಗೂ ಇದ್ದು, ಪಕ್ಕದಲ್ಲಿ ಗೋಡೆಗಳಿರುವುದರಿಂದ ಹೊರ ಕೋಟೆಯ ವಿಸ್ತಾರ ಈಗಿರುವುದಕ್ಕಿಂತಲೂ ದೊಡ್ಡದಾಗಿತ್ತು. ಕೋಟೆಯ ಒಳಗೆ ಪ್ರವೇಶಿಸಲು ಮೂರು ಬಾಗಿಲುಗಳನ್ನು ದಾಟಬೇಕಾಗಿದ್ದು ಕ್ಷೇತ್ರ ವೀಕ್ಷಣೆಯ ಅವಧಿಯಲ್ಲಿ ಗಮನಿಸಿದಂತೆ ಉಚ್ಚಂಗಿ ಕೋಟೆಯು ಸಧ್ಯದಲ್ಲಿ ಹರಿದ, ಮುರುಕಲಾದ ಮೂರು ಸುತ್ತುಗಳನ್ನು ಒಳಗೊಂಡಿದ್ದು ಈ ಸುತ್ತುಗಳು ದಕ್ಷಿಣಭಾಗಕ್ಕೆ ವಿಸ್ತರಿಸಿವೆ.

ದಕ್ಷಿಣೋತ್ತರವಾಗಿ ಹಬ್ಬಿರುವ ಎರಡು ಬೆಟ್ಟಗಳನ್ನು ಬಳಸಿ ಹೊರಕೋಟೆಯನ್ನು ಕಟ್ಟಿದ್ದು, ಇದೊಂದು ಗಿರಿದುರ್ಗವಾಗಿದೆ. ಇದನ್ನು ತಳಪಾಯದ ಆಧಾರವಿಲ್ಲದೆ ಹಾಸು ಬಂಡೆಯ ಮೇಲೆ ನಿರ್ಮಿಸಿದಂತಿದೆ. ಬೆಟ್ಟದ ತುದಿಯನ್ನು ತಲುಪಲು ಶತೃಗಳಿಗೆ ಸಾಧ್ಯವಾಗದಂತೆ ಕೋಟೆ ಭದ್ರವಾಗಿದೆ. ಕೋಟೆಯ ಗೋಡೆಯು ೧೦ ಅಡಿ ಎತ್ತರವಾಗಿದ್ದು ಕೆಲವು ಭಾಗದಲ್ಲಿ ಹೆಚ್ಚು ಕಡಿಮೆ ಇದೆ. ಇದರ ಅಗಲ ಸುಮಾರು ೫ ಅಡಿಗಳಾಗಿದ್ದು ಕೆಲವು ಸ್ಥಳಗಳಲ್ಲಿ ೧೦ ಅಡಿಯವರೆಗೂ ಇದೆ. ಕೋಟೆ ಗೋಡೆಯ ಕೆಳಭಾಗದಲ್ಲಿ ಆಯತಾಕಾರದ ಕಲ್ಲುಗಳನ್ನು ಬಳಸಿದ್ದು ಮೇಲ್ಭಾಗದಲ್ಲಿ ಮಧ್ಯಮ ಗಾತ್ರದ ಕಲ್ಲುಗಳ ಬಳಕೆಯಾಗಿದೆ. ಸೂಕ್ಷ್ಮವಾಗಿ ಇದನ್ನು ಅವಲೋಕಿಸಿದರೆ ಮೂರು ವಿವಿಧ ಹಂತಗಳನ್ನು ಗುರುತಿಸಬಹುದು ಮತ್ತು ಮೇಲ್ಭಾಗದ ಗೋಡೆಯಲ್ಲಿ ಗಾರೆಯ ಉಪಯೋಗವಿದ್ದು ಬಂದೂಕನ್ನು ಬಳಸಲು ಕಿಂಡಿಗಳನ್ನು ಅಳವಡಿಸಲಾಗಿದೆ. ಕೋಟೆಯ ಆಯಕಟ್ಟಿನ ಸ್ಥಳಗಳಲ್ಲಿ (ಬತೇರಿ)ಕೊತ್ತಳಗಳಿದ್ದು, ಅವು ೧೨೦ಕ್ಕೂ ಹೆಚ್ಚಿವೆಯೆಂದು ಊರಿನವರು ಅಭಿಪ್ರಾಯಪಟ್ಟರೂ, ಪ್ರಸ್ತುತ ಸುಮಾರು ೩೦ ಕೊತ್ತಳಗಳು ಮಾತ್ರ ಗೋಚರಿಸುತ್ತವೆ. ಇವುಗಳನ್ನು ಶಸ್ತ್ರಗಳ ಸಹಿತ ಮೇಲೇರಲು ಅನುಕೂಲವಾಗದಂತೆ ಚೌಕಾಕಾರ ಮತ್ತು ವರ್ತುಲಾಕಾರದಲ್ಲಿ ನಿರ್ಮಿಸಲಾಗಿದೆ.

ಶತೃಗಳ ಬರುವಿಕೆಯನ್ನು ಗ್ರಹಿಸುವುದು ಮತ್ತು ಕೋಟೆಯ ರಕ್ಷಣೆ ಮಾಡಿಕೊಳ್ಳುವುದು ಇವುಗಳ ನಿರ್ಮಾಣದ ಮೂಲ ಉದ್ದೇಶವಾಗಿದೆ. ಉಚ್ಚಂಗಿ ಕೋಟೆಗೆ ಆರು ಪ್ರಮುಖ ಬಾಗಿಲುಗಳಿದ್ದು, ದಿಡ್ಡಿ ಮತ್ತು ಉಪಬಾಗಿಲುಗಳೂ ಇವೆ. ಕೋಟೆಯ ಪೂರ್ವದಿಂದ ಒಳ ಪ್ರವೇಶಿಸಲು ಇರುವುದೇ ಮಳಿಬಾಗಿಲಾಗಿದ್ದು ದೂರದಿಂದ ಗೋಚರಿಸುವುದಿಲ್ಲ. ಇದರ ಬಾಗಿಲವಾಡದಲ್ಲಿ ಲಿಂಗವನ್ನು ಕೆತ್ತಿದ್ದು, ಅದಕ್ಕೆ ಎರಡು ಆನೆಗಳು ನೀರನ್ನು ಸುರಿಯುವ ದೃಶ್ಯವಿದೆ. ಇದರ ಪಾರ್ಶ್ವಗಳಲ್ಲಿ ಬೃಹದಾಕಾರದ ಗೋಡೆಗಳಿದ್ದು ಇದಕ್ಕೆ ೨೦ ಮೀಟರ್ ಅಂತರದಲ್ಲಿ ಎರಡನೇ ಬಾಗಿಲಿದೆ. ಇದು ಉತ್ತರಾಭಿಮುಖವಾಗಿರುವುದಲ್ಲದೆ ಇದರ ಮೇಲ್ಭಾಗದಲ್ಲಿ ಗಣೇಶನ ಶಿಲ್ಪವನ್ನು ಕೆತ್ತಲಾಗಿದ್ದು, ಪಾರ್ಶ್ವಗೋಡೆಯಲ್ಲಿ ದೊಡ್ಡಗಾತ್ರದ ತೆನೆಗಳನ್ನು ಕಾಣಬಹುದಾಗಿದೆ.

ಮೂರನೇ ಬಾಗಿಲು, ಎರಡು ಚೌಕಾಕಾರದ ಕೊತ್ತಳಗಳ ಮಧ್ಯದಲ್ಲಿದ್ದು ಕಂಬಗಳ ಕಟ್ಟೆಯ ಮೇಲಿರುವುದು ಕಾಣುವುದು. ಇದರ ಎಡಬಲಕ್ಕೆ ಒಳಗೋಡೆಯಲ್ಲಿ ೧೨ನೇ ಶತಮಾನಕ್ಕೂ ಮೊದಲೇ ನಿರ್ಮಾಣಗೊಂಡಿರಬಹುದಾದ ಕಂಬಗಳ, ಶಿಲ್ಪಗಳ ಅವಶೇಷಗಳನ್ನು ಕಾಣಬಹುದಾಗಿದೆ. ನಾಲ್ಕನೆಯದು ಹರಿಹರದ ದಿಕ್ಕಿಗೆ ಮುಖವಾಗಿರುವುದರಿಂದ ಹರಿಹರ ಬಾಗಿಲೆಂದು ಕರೆಯಲ್ಪಟ್ಟಿದ್ದು ಇದು ವೈರಿಗಳಿಗೆ ಗೋಚರಿಸದಂತಿರಲು ಇಂಗ್ಲೀಷಿನ ‘L’ ಅಕ್ಷರದಾಕಾರದಲ್ಲಿ ಗೋಡೆಯನ್ನು ಕಟ್ಟಲಾಗಿದೆ. ಪಶ್ಚಿಮ ಭಾಗದಿಂದ ಉಚ್ಚಂಗಿ ಕೋಟೆಯನ್ನು ಪ್ರವೇಶಿಸಲು ಈ ಬಾಗಿಲನ್ನು ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ. ಐದನೆಯ ತುಂಬಾ ಇಕ್ಕಟ್ಟಾದ ಬಾಗಿಲಾಗಿದ್ದು ೮ ಅಡಿ ಎತ್ತರವಾಗಿದೆ. ಈ ಬಾಗಿಲಿಗೆ ಇಂದಿಗೂ ಬಾಳೆಹಣ್ಣನ್ನು ತಿಕ್ಕುವ ಪದ್ಧತಿ ರೂಢಿಯಲ್ಲಿದೆ. ಮತ್ತು ಉಚ್ಚಂಗೆಮ್ಮ ದೇವಿ ಯ ದರ್ಶನಕ್ಕೆ ಈ ಮಾರ್ಗವನ್ನು ಬಳಸಲೇಬೇಕು. ಆರನೆಯದು ಮುಖ್ಯವಾದುದು ಈ ಬಾಗಿಲು ಎರಡು ಚೌಕಾಕಾರದ ಕೊತ್ತಳಗಳ ಮಧ್ಯದಲ್ಲಿದ್ದು ಬಾಗಿಲಿನ ಮೇಲೆ ಗಣೇಶನನ್ನು ಕೆತ್ತಲಾಗಿದೆ. ಇದು ಆರು ಅಂಕಣಗಳನ್ನು ಮತ್ತು ಪಾರ್ಶ್ವಗಳಲ್ಲಿ ಕಟ್ಟೆಗಳನ್ನು ಹೊಂದಿದೆ. ಬಾಗಿಲಿನ ಒಳ ಮೈಯನ್ನು ಕಮಾನಿನಿಂದ ಅಲಂಕರಿಸಲಾಗಿದ್ದು, ಕಮಾನಿನ ಕಲ್ಲುಗಳನ್ನು ಮುಂದೆ ಚಾಚಿ ಸ್ವಲ್ಪಭಾಗ ತುಂಡರಿಸಿದಂತಿದೆ.

ಮೂರನೇ ಬಾಗಿಲಿನ ದಕ್ಷಿಣದ ಗೋಡೆಯ ಪೂರ್ವಭಾಗಕ್ಕೆ ದಿ‌ಡ್ಡಿಯ ಬಾಗಿಲಿದ್ದು, ಇದು ಸುಮಾರು ೫ ಅಡಿ ಎತ್ತರ ೪ ಅಡಿ ಅಗಲವಾಗಿದ್ದು ಬೇರೆ ಬಾಗಿಲುಗಳಗಿಂತ ಭಿನ್ನವಾಗಿದೆ. ಇಲ್ಲಿಂದ ಕೋಟೆಯ ದಕ್ಷಿಣಭಾಗಕ್ಕೆ ಹೋಗಲು ಇದು ಹತ್ತಿರದ ಮಾರ್ಗವಾಗಿದೆ. ಇದು ಗುಪ್ತದ್ವಾರವೆಂತಲೂ ಸ್ಥಳೀಯರಿಂದ ಗುರುತಿಸಲ್ಪಟ್ಟಿದೆ.

ಎರಡನೆಯ ಬಾಗಿಲಿನ ಬಲಕ್ಕಿರುವುದೇ ಅದರ ಉಪಬಾಗಿಲು. ಇದನ್ನು ದೊಡ್ಡಬಾಗಿಲು ಮುಚ್ಚಿದಾಗ ಉಪಯೋಗಿಸುತ್ತಿದ್ದರು. ಉಚ್ಚಂಗಿ ಕೋಟೆಯ ದಕ್ಷಿಣಭಾಗದ ಹಿರೇಹೊಂಡದಿಂದ ಮಾರ್ಗವೊಂದು ಅದೇ ದಿಕ್ಕಿನಿಂದ ಕೋಟೆಯ ಒಳ ಪ್ರವೇಶಿಸುತ್ತದೆ. ಮತ್ತು ಮಾರ್ಗದ ಉದ್ದಕ್ಕೂ ಹಾಕಿರುವ ಕಲ್ಲುಗಳು ತುಂಬಾ ಸವೆದಿರುವುದು ಕಂಡುಬರುತ್ತದೆ. ಪ್ರಾಚೀನ ಕಾಲದಿಂದಲೂ ಈ ಕೋಟೆಗೆ ನೀರಿನ ಸರಬರಾಜು ಇಲ್ಲಿಂದ ಆಗಿರಬಹುದು. ಈ ಭಾಗದಲ್ಲಿ ಪ್ರಾಚೀನ ದೇವಾಲಯವಿದ್ದಿರಬಹುದಾದ ಕುರುಹುಗಳನ್ನು ಕಾಣಬಹುದು.

ಕೋಟೆಯ ಮಹತ್ವ

ಒಂದು ರಾಜ್ಯದ ಅಳಿವು ಉಳಿವಿಗೆ ರಾಜನ ಪಾತ್ರ ಎಷ್ಟು ಮುಖ್ಯವೋ ಕೋಟೆಗಳ ಪಾತ್ರವು ಅಷ್ಟೆ ಮುಖ್ಯವಾದುದು. ಕೋಟೆ ನೀರನ್ನು ಸಂಗ್ರಹಿಸುವ ಕೊಡ ಇದ್ದ ಹಾಗೆ. ಕೊಡಕ್ಕೆ ತೂತುಬಿದ್ದರೆ ನೀರು ಉಳಿಯಬಾರದು. ಹಾಗೆಯೇ ಕೋಟೆಯು ಸಡಿಲವಾದರೆ ರಾಜ್ಯ ಉಳಿಯಲಾರದು. ಕೋಟೆಯನ್ನು ಗೆದ್ದುದಾದರೆ ಇಡೀ ರಾಜ್ಯವೇ ಸಿಕ್ಕಂತೆ. ಅಂದು ಕೋಟೆಯನ್ನು ಕಟ್ಟಿಸುವುದು ಮತ್ತು ಗೆಲ್ಲುವುದು ಪ್ರತಿಷ್ಠೆಯ ವಿಷಯವಾಗಿತ್ತು.

ಉಚ್ಚಂಗಿ ಕೋಟೆಯು ಮಹತ್ವದ ಮತ್ತು ಅಭೇದ್ಯವಾದ ಕೋಟೆಯಾಗಿದ್ದು, ಕಾಡುವೆಟ್ಟಿ ಎಂಬ ಪಲ್ಲವ ದೊರೆಯು ಇದನ್ನು ದೀರ್ಘಕಾಲದವರೆಗೆ ಮುತ್ತಿ ತನ್ನ ಶೌರ್ಯದಿಂದ ಸ್ಥಳೀಯರನ್ನು ದಂಗುಬಡಿಸಿದರೂ ಅವನಿಂದ ಕೋಟೆಯನ್ನು ಗೆಲ್ಲಲಾಗಲಿಲ್ಲ.29 ಗಂಗವಂಶದ ಎರಡನೇ ಮಾರಸಿಂಹನು ಕ್ರಿ.ಶ. ೯೭೧ ರಲ್ಲಿ ಚಾಳುಕ್ಯರಿಂದ ಇದನ್ನು ವಶಪಡಿಸಿಕೊಂಡನಲ್ಲದೆ ಈ ಕೋಟೆಯನ್ನು ಜಯಿಸುವುದರಲ್ಲಿ ಚಾವುಂಡರಾಯನ ಪಾತ್ರ ಮಹತ್ವದ್ದಾಗಿದ್ದುದರಿಂದ ಅವನಿಗೆ ರಣರಂಗ ಸಿಂಹ ಎಂಬ ಬಿರುದು ಬಂದಿದೆ.[30] ಹೊಯ್ಸಳ ಬಲ್ಲಾಳರ ಇವು ಉಚ್ಚಂಗಿಯ ಅಭೇದ್ಯವಾದ ಕೋಟೆಯನ್ನು ಭೇದಿಸಲು ತಂಡೋಪ ತಂಡ ಆನೆಗಳನ್ನು ಉಪಯೋಗಿಸಿದನು. ಇವು ಕ್ರೂರವಾಗಿ ಕೋರೆಗಳಿಂದ ಅಗೆದು ಕೋಟೆಯ ಗೋಡೆಗಳನ್ನು ಕೆಡಹಿದ ನಂತರ ಸೈನ್ಯವು ಒಳಹೊಕ್ಕು ಸ್ತ್ರೀಯರು, ಕುದುರೆ ಸವಾರ, ಸೈನ್ಯವನ್ನು ಮತ್ತು ಖಜಾನೆಯನ್ನು ಸುಲಿಗೆ ಮಾಡಲಾಯಿತು.

ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳನ್ನೆತ್ತಿ ಸದ್ಯ ಚರ್ಚಿಸಲಾಗಿದೆ.

೧. ಉಚ್ಚಂಗಿ ದುರ್ಗವನ್ನು ಗೆಲ್ಲಲು ಕಷ್ಟಕರವಾಗಿರಬಹುದೇಕೆ?
೨. ಇದನ್ನು ಗೆಲ್ಲುವುದರ ಮಹತ್ವವೇನು?
೩. ಗೆದ್ದವರ ಪ್ರತಿಷ್ಠೆ ಏಕೆ ಹೆಚ್ಚುತ್ತಿತ್ತು?

ಒಂದನೇ ಪ್ರಶ್ನೆಗೆ ಪೂರಕವಾದಂತೆ ಉಚ್ಚಂಗಿದುರ್ಗವು ಭೌಗೋಳಿಕವಾಗಿ ಇದರ ಸುತ್ತಮುತ್ತಲಿನ ಪ್ರದೇಶಗಳಿಗಿಂತಲೂ ಎತ್ತರವಾಗಿದ್ದು, ಸುತ್ತಲೂ ಆಳವಾದ ಕಂದಕಗಳು ಮತ್ತು ಕಡಿದಾದ ಬೆಟ್ಟವನ್ನು ಹೊಂದಿದ್ದು ಕೋಟೆಯೊಳಗೆ ಪ್ರವೇಶಿಸಲು ಸುಲಭವಾಗಿರಲಿಲ್ಲ. ಎರಡನೆಯದಾಗಿ ಈ ಕೋಟೆಯು ೨೫ ಕಿ.ಮೀ. ಉದ್ದವಾಗಿದ್ದು ಉತ್ತರದಿಂದ ದಕ್ಷಿಣಭಾಗದ ಮಧ್ಯಭಾಗಕ್ಕೆ ಇಳಿಮುಖವಾಗಿದ್ದು ಮತ್ತೆ ಇದೇ ಇಳಿಮುಖವನ್ನು ಪುನಃ ದಕ್ಷಿಣಭಾಗಕ್ಕೆ ಕಾಣಲಾಗುವುದು ತುಂಬಾ ಅಗಲ ಮತ್ತು ಎತ್ತರವಾದ ಗೋಡೆಗಳ ರಚನೆಯಿದ್ದು ಗಾರೆಯನ್ನು ಬಳಸಿ ಭದ್ರಪಡಿಸಲಾಗಿದೆ. ಕೋಟೆಯ ಬಾಗಿಲುಗಳನ್ನು ಪತ್ತೆಹಚ್ಚಿ ಮೊದಲ ಐದು ಬಾಗಿಲುಗಳನ್ನು ದಾಟಿ ಒಳಬರುವುದು ಕಠಿಣತರ ಕೆಲಸವೇ ಸರಿ. ಬೆಟ್ಟದ ಮೇಲಿನ ಕೋಟೆಗೆ ಆನೆಗಳಾಗಲೀ ಕುದುರೆ ಮತ್ತು ಶಸ್ತ್ರಗಳನ್ನು ತೆಗೆದುಕೊಂಡು ಹೋಗಲು ಸಶಕ್ತವಾದ ಸೈನ್ಯವಿರಲೇಬೇಕಾಗುವುದು. ಮೂರನೆಯದಾಗಿ ಕೋಟೆ ಒಳಗಡೆ ನೀರಿನ ಸೌಲಭ್ಯವಿದ್ದುದರ ಗುರುತುಗಳನ್ನು ಕಂಡುಬರುತ್ತವೆ ಮತ್ತು ಪೂರ್ವದ ಬಾಗಿಲು ಆಕ್ರಮಿಸಲ್ಪಟ್ಟರೂ ಪಶ್ಚಿಮದ ಹರಿಹರದ ಬಾಗಿಲಿನಿಂದ ಹೊರಬರುವ ಸೌಲಭ್ಯವಿರುವುದು ಕಾಣಬಹುದಾಗಿದೆ. ಎರಡನೆಯ ಪ್ರಶ್ನೆಯನ್ನು ಗಮನಿಸಿದರೆ ಉಚ್ಚಂಗಿದುರ್ಗ ಒಂದು ಪಟ್ಟಣವಾಗಿದ್ದು ವಿಶಾಲ ಪ್ರದೇಶಗಳನ್ನು ಒಳಗೊಂಡಿತ್ತು ನೊಳಂಬವಾಡಿ ೩೨೦೦೦ವನ್ನು ವೆಂಗಿಮಂಡಳೇಶ್ವರ ವಿಷ್ಣುವರ್ಧನ ವಿನಯಾದಿತ್ಯ ದೇವನು ಆಳುವಾಗ ಉಚ್ಚಂಗಿದುರ್ಗ ಪ್ರಮುಖ ಕೇಂದ್ರವಾಗಿದ್ದಿರಬೇಕು. ಆಗ ಉಚ್ಚಂಗಿ ಮೂವತ್ತನ್ನು ದೇವಪ್ಪಯ್ಯ ಆಳುತ್ತಿದ್ದ. ಮೂವತ್ತು ಗ್ರಾಮಗಳಿಗೆ ಉಚ್ಚಂಗಿ ಕೇಂದ್ರವಾಗಿರಬಹುದು ಮತ್ತು ಅದು ನೊಳಂಬವಾಡಿ ೩೨೦೦೦ ಕ್ಕೆ ಪಾಂಡ್ಯರ ಕಾಲದಲ್ಲಿ ರಾಜಧಾನಿಯಾಗಿತ್ತು. ಮತ್ತು ದಕ್ಷಿಣದಿಂದ ಗಂಗಾ ಹೊಯ್ಸಳರಿಗೆ ಉತ್ತರದಿಂದ ರಾಷ್ಟ್ರಕೂಟ ಚಾಳುಕ್ಯರಿಗೆ ಗಡಿಭಾಗವಾಗಿಲಿಕ್ಕೂ ಸಾಧ್ಯತೆಯಿರುವುದರಿಂದ ಉಚ್ಚಂಗಿ ಕೋಟೆಯನ್ನು ಗೆಲ್ಲುವುದು ಒಂದು ಪ್ರತಿಷ್ಠೆಯ ವಿಷಯವಾಗಿದ್ದುದಲ್ಲದೆ ಮಹತ್ವದ ಭಾಗವೂ ಆಗಿತ್ತು ಎಂದೆಲ್ಲ ಹೇಳಬಹುದು. ಪಾಳೆಯಗಾರ ಅವಧಿಯಲ್ಲಿ ಈ ಕೋಟೆಯ ಪ್ರಮುಖವಾದ ದುರಸ್ತಿಕಾರ್ಯ ನಡೆದಿರುವುದು ಕಂಡುಬರುತ್ತದೆ.

ಕೋಟೆಯಲ್ಲಿರುವ ಸ್ಮಾರಕಗಳು

ಈ ಕೋಟೆ ಪ್ರದೇಶದಲ್ಲಿ ಆ ಕಾಲದ ಹತ್ತಾರು ಗುಡಿಗೋಪುರಗಳು, ಬಾವಿಹೊಂಡಗಳು, ಕಲಾಸ್ಮಾರಕಗಳು ಕಂಡುಬರುತ್ತವೆ. ಅವುಗಳ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ.

ಬನಶಂಕರಿ ದೇವಾಲಯ : ಬಾದಾಮಿ ಚಾಳುಕ್ಯರ ಆರಾಧನಾ ದೇವತೆ ಈಕೆ. ಬಾದಾಮಿ ಚಾಳುಕ್ಯರ ಕಾಲಾವಧಿಯಿಂದ ವಿಜಯನಗರದ ಅರಸರಾದಿಯಾಗಿ ಬನಶಂಕರಿಯು ನೂರಾರು ದೇವಾಲಯಗಳನ್ನು ನಿರ್ಮಿಸಿದ ನಿದರ್ಶನಗಳಿವೆ. ಕಾಡಿನ ಮಧ್ಯ ವಾಸಿಸುವ ಬುಡಕಟ್ಟು ಜನರ ಪ್ರಮುಖ ದೇವತೆಗಳಲ್ಲಿ ಈ ದೇವತೆಯು ಒಬ್ಬಳು. ಉಚ್ಚಂಗಿ ದುರ್ಗದ ಆಗ್ನೇಯಕ್ಕೆ ಅರಸನ ಬಾವಿ ಇದೆ. ಇದರ ಬಳಿ ಇರುವುದೆ ಬನಶಂಕರಿ ದೇವಾಲಯ. ಇದರಲ್ಲಿ ಗರ್ಭಗೃಹ, ಅಂತರಾಳ ಹಾಗೂ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಚೇಳು, ರುಂಡಮಾಲೆ ಮತ್ತು ಪತ್ರಕುಂಡಲಗಳಿಂದ ಕೂಡಿದ ಪೀಠದ ಬಿಲ್ಲು, ತ್ರಿಶೂಲ, ಖಡ್ಗ ಮತ್ತು ಢಮರುಗಳನ್ನು ಹಿಡಿದಿರುವ ಬನಶಂಕರಿಯ ವಿಗ್ರಹವಿದೆ. ಜಟಾ ಮುಕುಟಧಾರಿಯಾದ ಈ ಶಿಲ್ಪವು ಶಿಥಿಲವಾಗಿದೆ.

ಗರ್ಭಗೃಹ ಮತ್ತು ಅಂತರಾಳದ ಪ್ರವೇಶ ದ್ವಾರಗಳು ಸಾದಾ ಕೆತ್ತನೆಯಿಂದ ಕೂಡಿವೆ. ಸಭಾಮಂಟಪದ ಮಧ್ಯಭಾಗದಲ್ಲಿ ೬x೬ ಅಳತೆಯ ಹಾಸುಬಂಡೆಯಿದೆ. ಇದರಲ್ಲಿ ೧೪ ಕಂಬಗಳಿವೆ. ಇವುಗಳು ವೃತ್ತಾಕಾರದ ೮ ಮೂಲೆಯ ಪಟ್ಟಿಕೆಯಿಂದ ಕೂಡಿದ್ದು ಕೆಳಭಾಗಗಳಲ್ಲಿ ಕುಂಭ ಮೇಲ್ಬಾಗದಲ್ಲಿ ಮುಚ್ಚಳ, ಫಲಕ ಮತ್ತು ಬೋದಿಗೆಗಳಿವೆ. ಸಭಾಮಂಟಪವು ಜೀರ್ಣೋದ್ಧಾರವಾಗಿದ್ದು ಇದರ ಗೋಡೆಯಲ್ಲಿ ವೀರಗಲ್ಲನ್ನು ಸೇರಿಸಿ ನಿರ್ಮಿಸಲಾಗಿದೆ.

ಪೂರ್ವಾಭಿಮುಖವಾಗಿರುವ ಈ ದೇವಾಲಯವು ಸುಮಾರು ೩೦ ಅಡಿ ಉದ್ದ ೧೫ ಅಡಿ ಅಗಲವಾಗಿದೆ. ಇದನ್ನು ಕಪ್ಪು ಮಿಶ್ರಿತ ನೀಲಿಛಾಯೆಯ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಇಲ್ಲಿರುವ ಶಿಲ್ಪಗಳು, ವೀರಗಲ್ಲು ಹಾಗೂ ದೇವಾಲಯದ ರಚನೆಯು ಕಲ್ಯಾಣ ಚಾಳುಕ್ಯರ ಶೈಲಿಯನ್ನು ಹೋಲುತ್ತದೆ.

ತವಕ್ಲೇಶ್ವರ ದೇವಾಲಯ : ಗ್ರಾಮದ ಆಗ್ನೇಯದ ಕೋಟೆ ಹೊರಭಾಗಕ್ಕೆ ಈ ದೇಗುಲವಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ ಹಾಗೂ ಸಭಾಮಂಟಪಗಳಿಂದ ಕೂಡಿದೆ. ಐವತ್ತು ಅಡಿ ಉದ್ದ ಮೂವತ್ತು ಅಡಿ ಅಗಲವಾಗಿರುವ ಇದು ವಿಶಾಲವಾಗಿದೆ. ಗರ್ಭಗೃಹದಲ್ಲಿ ಸುಮಾರು ಒಂದೂವರೆ ಅಡಿ ಎತ್ತರದ ಶಿವಲಿಂಗವು ಬ್ರಹ್ಮಸೂತ್ರವನ್ನು ಹೊಂದಿರುವುದಿಲ್ಲ. ಇದರ ಪ್ರವೇಶದ್ವಾರದ ಲಲಾಟಬಿಂಬ ಹಾಗೂ ಅಂತರಾಳದ ಪ್ರವೇಶದ್ವಾರದ ಲಲಾಟಬಿಂಬಗಳಲ್ಲಿ ಗಜಲಕ್ಷ್ಮಿ ಶಿಲ್ಪಗಳಿವೆ. ಇವುಗಳ ಭುವನೇಶ್ವರಿಯಲ್ಲಿ ಪದ್ಮಾಲಂಕೃತ ಕೆತ್ತನೆಗಳಿವೆ. ಅಂತರಾಳ ಪ್ರವೇಶದ ಪಾರ್ಶ್ವಗಳಲ್ಲಿ ಸುಮಾರು ಆರು ಅಡಿ ಎತ್ತರದ ಶೈವ ದ್ವಾರಪಾಲಕರ ಶಿಲ್ಪಗಳಿವೆ. ಸಭಾಮಂಟಪ ಮಧ್ಯಭಾಗದ ನೆಲಕ್ಕೆ ೧೦x೧೦ ಚದುರಡಿಯ ಒಂದೇ ಕಲ್ಲಿನ ಚಪ್ಪಡಿಯನ್ನು ಹಾಸಲಾಗಿದೆ. ಇದರಲ್ಲಿ ಕಲ್ಯಾಣ ಚಾಳುಕ್ಯ ಮಾದರಿಯ ೨೦ ಕಂಬಗಳಿದ್ದು, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೂ ಪ್ರವೇಶದ್ವಾರಗಳಿವೆ.

ಈ ದೇವಾಲಯವನ್ನು ಕಪ್ಪುಶಿಲೆಯಲ್ಲಿ ನಿರ್ಮಿಸಿದ್ದು, ಶಾಸನಗಳು ಈ ದೇವಾಲಯವನ್ನು ಗಳಗೇಶ್ವರ ದೇವರೆಂದು ಉಲ್ಲೇಖಿಸುತ್ತವೆ.

ಹಾಲಮ್ಮನ ದೇವಾಲಯ : ಗ್ರಾಮದ ಆಗ್ನೇಯದ ಕೋಟೆ ಹೊರಮುಖಕ್ಕೆ ಈ ದೇವಾಲಯವಿದೆ. ನಾಗರಪಂಚಮಿಯಲ್ಲಿ ಇಲ್ಲಿಯ ಹುತ್ತಕ್ಕೆ ಹಾಲು ಹಾಕುವುದರಿಂದ ಇದಕ್ಕೆ ಹಾಲಮ್ಮನಗುಡಿ ಎಂದು ಹೆಸರು ಬಂದಿದೆ. ಇದು ೧೦x೧೦ ಅಡಿ ಸುತ್ತಳತೆ ಹೊಂದಿದ್ದು, ಗರ್ಭಗೃಹ ಮಾತ್ರ ಕಂಡುಬರುತ್ತದೆ. ಗರ್ಭಗೃಹದಲ್ಲಿ ಆಯತಾಕಾರದ ಆರು ಅಡಿ ಎತ್ತರದ ನಾಲ್ಕುಕಂಬಗಳು, ಬ್ರಾಹ್ಮಣ ಕನ್ಯೆಯರ ಮೂರು – ವಿಗ್ರಹಗಳು ಸಪ್ತಮಾತೃಕಾ ವಿಗ್ರಹ ಹಾಗೂ ಕುದುರೆಯ ಮೇಲೆ ಆಸೀನರಾದ ಜೋಡಿ ಪುರುಷರ ವೀರಗಲ್ಲು ಇದೆ. ಈ ವೀರಗಲ್ಲನ್ನು ಮೈಲಾರ ದೇವರೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಈ ದೇವಾಲಯವನ್ನು ಕಪ್ಪುಮಿಶ್ರಿತ ನೀಲಿಛಾಯೆ ಬಳಪದ ಕಲ್ಲು ಬಳಸಿ ೧೨ನೆಯ ಶತಮಾನದಲ್ಲಿ ಉಚ್ಚಂಗಿ ದೇವಿಯ ಹೆಸರಿನಲ್ಲಿ ಕಟ್ಟಲಾಗಿದೆ.

ಬಸವಣ್ಣ ದೇವಾಲಯ : ಕೋಟೆ ಆಂಜನೇಯನ ಬಲಭಾಗದಲ್ಲಿ ಈ ದೇಗುಲವಿದೆ. ದಕ್ಷಿಣಾಭಿಮುಖವಾಗಿರುವ ಇದರಲ್ಲಿ ಗರ್ಭಗೃಹ ಮಾತ್ರ ಗೋಚರಿಸುತ್ತದೆ. ಗರ್ಭಗೃಹದ ಮಧ್ಯಭಾಗದಲ್ಲಿ ಖಾಲಿ ಪೀಠವಿದ್ದು, ಇದರ ಪಕ್ಕದಲ್ಲಿ ನಂದಿಯ ಶಿಲ್ಪವಿದೆ. ಪ್ರವೇಶದ್ವಾರವು ಮೂರು ಶಾಖೆಗಳಿಂದ ಕೂಡಿದ. ಶಾಖೆಗಳು ಶಿಲಾಬಾಲಿಕೆಯರು ಮತ್ತು ಸುಂದರೆ ಕೆತ್ತನೆಗಳಿಂದ ಕೂಡಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಅಂತರಾಳ ಹಾಗೂ ಸಭಾಮಂಟಪಗಳಿದ್ದಿರಬಹುದಾದ ಕುರುಹುಗಳು ಮಾತ್ರ ಗೋಚರಿಸುತ್ತವೆ. ಈ ದೇವಾಲಯದ ಲಕ್ಷಣಗಳಿಂದ ಹೊಯ್ಸಳರ ಕಾಲದ್ದೆಂದು ದೃಢಪಡುತ್ತದೆ.

ಕೆಳಕೋಟೆ ಆಂಜನೇಯ ದೇವಾಲಯ : ಗ್ರಾಮದ ಪೂರ್ವದ ಹೊಲವೊಂದರಲ್ಲಿರುವ ಈ ದೇವಾಲಯವು ದಕ್ಷಿಣಕ್ಕೆ ಮುಖವಾಗಿದೆ. ಕೋಟೆಯ ಕೆಳಭಾಗದಲ್ಲಿರುವುದರಿಂದ ಕೆಳಕೋಟೆ ಆಂಜನೇಯನೆಂಬ ಹೆಸರು ಈ ದೇವಾಲಯಕ್ಕೆ ಬಂದಿದೆ. ಇದರಲ್ಲಿ ಗರ್ಭಗೃಹ ಹಾಗೂ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಸುಮಾರು ಆರು ಅಡಿ ಎತ್ತರದ ಆಂಜನೇಯನ ಶಿಲ್ಪವಿದೆ. ಸಭಾಮಂಟಪದಲ್ಲಿ ಸಾದಾ ಕೆತ್ತನೆಯ ಆರು ಕಂಬಗಳಿವೆ. ದೇವಾಲಯವನ್ನು ಕಣಶಿಲೆಯಿಂದ ನಿರ್ಮಿಸಲಾಗಿದ್ದು, ಇದರ ಸುತ್ತಲೂ ಪ್ರಾಕಾರ ಹಾಗೂ ಗರುಡಗಂಬವಿದೆ. ಉಚ್ಚಂಗಿದುರ್ಗದ ಪಾಳೆಯಗಾರರ ಅವಧಿಯಲ್ಲಿ ಇದು ನಿರ್ಮಾಣವಾಗಿದ್ದಿರಬೇಕು.

ವೀರಭದ್ರ ದೇವಾಲಯ : ಗ್ರಾಮದಿಂದ ದಾವಣಗೇರಿಗೆ ಹೋಗುವ ರಸ್ತೆಯ ಎಡಬದಿಯಲ್ಲಿ ಕೋಟೆ ಗೋಡೆಗೆ ಹೊಂದಿಕೊಂಡು ಈ ದೇವಾಲಯವಿದೆ. ಪೂರ್ವಾಭಿಮುಖವಾಗಿರುವ ಇದು ಗರ್ಭಗೃಹ ಹಾಗೂ ಸಭಾಮಂಟಪಗಳಿಂದ ಕೂಡಿದೆ. ಸುಮಾರು ಮುವತ್ತು ಅಡಿ ಉದ್ದ ಮತ್ತು ಹತ್ತು ಅಡಿ ಅಗಲವಾಗಿದ್ದು, ಎತ್ತರದ ಸ್ಥಳದಲ್ಲಿದೆ. ಗರ್ಭಗೃಹದಲ್ಲಿ ಬಿಲ್ಲು, ಬಾಣ, ಖಡ್ಗ ಹಾಗೂ ಗುರಾಣಿಗಳನ್ನು ಹಿಡಿದಿರುವ ವೀರಭದ್ರನು ತ್ರಿಭಂಗಿಯಲ್ಲಿದ್ದಾನೆ. ವೀರಭದ್ರನ ಪಾರ್ಶ್ವದಲ್ಲಿ ಗಣೇಶನ ಶಿಲ್ಪವಿದೆ. ವೀರಭದ್ರನ ಶಿಲ್ಪವನ್ನು ಹೊಯ್ಸಳರ ಕಾಲದ ಶಾಸನವನ್ನು ಉಪಯೋಗಿಸಿ ನಿರ್ಮಿಸಲಾಗಿದೆ. ತಿಪ್ಪನಕೆರೆ ಮತ್ತು ಈಶ್ವರ ದೇವಾಲಯಗಳ ಉಲ್ಲೇಖಗಳು ಈ ಶಾಸನದಲ್ಲಿ ಬರುತ್ತವೆ. ಸಭಾಮಂಟಪವನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ದೇವಾಲಯದ ಸುತ್ತಲೂ ಪ್ರಾಕಾರವಿದೆ. ಇದರಲ್ಲಿ ಸಪ್ತಮಾತೃಕಾ ಹಾಗೂ ಕಲ್ಲುಗಳಿವೆ.

ಈ ದೇವಾಲಯವು ವಿಜಯಗರೋತ್ತರ ಕಾಲದ್ದು, ಇದರ ನಿರ್ಮಾಣಕ್ಕೆ ಕಣಶಿಲೆಯನ್ನು ಬಳಸಲಾಗಿದೆ.

ನೊಣಬೇಶ್ವರ ದೇವಾಲಯ ಗ್ರಾಮದ ದಕ್ಷಿಣ ಭಾಗಕ್ಕೆ ಚಿಕ್ಕಹೊಂಡದ ಪೂರ್ವದಂಡೆಯ ಮೇಲಿರುವ ಕೋಟೆಗೆ ಹೊಂದಿಕೊಂಡಿರುವ ದೇಗುಲವಿದು. ಇದು ಪಶ್ಚಿಮಾಭಿಮುಖವಾಗಿದೆ. ಇದರಲ್ಲಿ ಗರ್ಭಗೃಹ ಹಾಗೂ ಅಂತರಾಳಗಳು ಮಾತ್ರ ಗೋಚರಿಸುತ್ತಿದ್ದು, ಸಭಾಮಂಟಪದ ಅವಶೇಷಗಳು ಕಂಡುಬರುತ್ತವೆ. ಗರ್ಭಗೃಹದಲ್ಲಿ ಉದ್ಭವ ಶಿವಲಿಂಗವಿದೆ. ಗರ್ಭಗೃಹ ಹಾಗೂ ಅಂತರಾಳಗಳ ಭುವನೇಶ್ವರಿಯಲ್ಲಿ ಪದ್ಮಗಳಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ನಕ್ಷತ್ರಾಕಾರದ ಅಧಿಷ್ಠಾನದ ಮೇಲಿರುವ ದೇವಾಲಯದ ಹೊರಗೋಡೆಯಲ್ಲಿ ಹೊಯ್ಸಳ ಶೈಲಿಯ ದೇವಕೋಷ್ಠಕಗಳಿವೆ. ಕ್ರಿ.ಶ. ೧೨೮೫ ರ ಕಾಲ ಸೂಚಿಸುವ ಶಾಸನ ಹಾಗೂ ತುಂಡಾದ ಶಿಲಾಬಾಲಿಕೆ ಹಾಗೂ ವೀರಗಲ್ಲುಗಳಿವೆ. ಶಾಸನ ಅಸ್ಪಷ್ಟವಾಗಿದೆ. ೧೩ನೆ ಶತಮಾನದಲ್ಲಿ ನೊಣಬೇಶ್ವರ, ನೊಣಬೇಶ್ವರ ದೇವ, ನೊಯ್ಯೇಶ್ವರ ದೇವ, ನೊಳಂಬೇಶ್ವರ, ನೊಳಂಬೇಶ್ವರ ದೇವರ ಹೆಸರಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾಗಿವೆ. ಈ ದೇವಾಲಯವು ೧೩ನೇ ಶತಮಾನದ ಆದಿಭಾಗದಲ್ಲಿ ನಿರ್ಮಾಣಾವದಂತೆ ಭಾಸವಾಗುತ್ತದೆ.

ಇತರೆ ದೇವಾಲಯಗಳು : ಉಚ್ಚಂಗಿ ದುರ್ಗದ ಕೋಟೆಯ ಮಧ್ಯ ಎತ್ತರ ಪ್ರದೇಶದಲ್ಲಿ ಉಚ್ಚಂಗೆಮ್ಮ ದೇವತೆಯ ದೇಗುಲವಿದೆ. ಇದು ಪ್ರಾಚೀನ ಕಾಲದ ವಾಸ್ತುವಾದರೂ ಕಾಲಾಂತರದಲ್ಲಿ ಜೀರ್ಣೋದ್ಧಾರವಾಗುತ್ತಾ ಬಂದಿದೆ. ಕೋಟೆಯೊಳಗೆ ಹರಿಹರದ ಬಾಗಿಲ ಬಳಿ ದಕ್ಷಿಣಾಭಿಮುಖವಾದ ಆಂಜನೇಯ ದೇವಾಲಯವಿದೆ. ಸಿದ್ಧೇಶ್ವರ ಮಠ ಒಳ ಕೋಟೆ ಗೋಡೆಗೆ ಹೊಂದಿಕೊಂಡ. ಇದು ಪ್ರಾಚೀನ ಕಾಲದ ದೇಗುವಾಗಿದ್ದು ಇತ್ತೀಚೆಗೆ ಮಠವಾಗಿ ಪರಿವರ್ತನೆ ಹೊಂದಿದೆ. ಕುಷ್ಟದ ಎಲ್ಲಮ್ಮ ಇಲ್ಲಿಯ ಜನರ ಕುಷ್ಟ ನಿವಾರಕ ದೇವತೆಯಾಗಿದ್ದಾಳೆ. ಈ ಕೋಟೆಯ ೩ನೇ ಬಾಗಿಲುವಾಡದ ಹಿಂಬದಿಯಲ್ಲಿ ಬಸವಣ್ಣ ದೇವಾಲಯ ಕಂಡುಬರುತ್ತದೆ. ವಿರೂಪಾಕ್ಷ ದೇವಾಯವು ರಾಣಿ ಅರಮನೆಯ ಕೆಳಗಿಳಿಯುವ ಮಾರ್ಗ ಮಧ್ಯದಲ್ಲಿ ಬಟ್ಟಲಬಾವಿ ಬಲಭಾಗದಲ್ಲಿದೆ. ಕೋಟೆಯ ಒಳಗೆ ಹಾಗೂ ಗೋಡೆಗೆ ಹೊಂದಿಕೊಂಡಿರುವ ದೇಗುಲಗಳೆಂದರೆ ಶಿವ, ರಾಮಲಿಂಗೇಶ್ವರ, ಜೈನ, ಹಾಲಮ್ಮ ದೇವಾಲಯಗಳು.

ಅರಮನೆಗಳು : ಸಾಮಾನ್ಯವಾಗಿ ಅರಮನೆಗಳೆಂದರೆ ಅರಸರು ವಾಸಿಸುತ್ತಿದ್ದ ಮನೆಗಳೆಂದು ಗುರುತಿಸುತ್ತೇವೆ. ದೊಡ್ಡ ಕಟ್ಟಡವನ್ನು ಹೊಂದಿರುವ ಮನೆಗಳಿಗೆ ಅರಮನೆ ಎಂದು ಕರೆಯುವ ವಾಡಿಕೆಯುಂಟು.

ಉಚ್ಚಂಗಿದುರ್ಗದ ಬೆಟ್ಟದ ಮೇಲಿನ ಕೋಟೆಯೊಳಗೆ ರಾಜ ಮತ್ತು ರಾಣಿಯ ಎರಡು ಅರಮನೆಗಳಿವೆ. ರಾಜನ ಅರಮನೆಗೆ ಉತ್ತರದಿಂದ ಪ್ರವೇಶದ್ವಾರವಿದೆ. ಇದರ ಮುಖಭಾಗದಲ್ಲಿ ಉಚ್ಚಂಗೆಮ್ಮ ದೇವತೆಯ ಗುಡಿಯಿದೆ. ಈ ಅರಮನೆ ಚೌಕಾಕಾರದಲ್ಲಿದ್ದು, ನಾಲ್ಕು ಮೂಲೆಗಳಿಂದ ಕೂಡಿದೆ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸುಮಾರು ೧೦೦ ಅಡಿ ಅಂತರವಿದೆ. ನಾಲ್ಕು ಮೂಲೆಗಳ ಮೇಲೆ ಚೌಕಾಕಾರದ ಬುರುಜುಗಳಿವೆ.

ಈ ಬುರುಜುಗಳು ಮೂರು ಅಂತಸ್ತುಗಳಿಂದ ಕೂಡಿದೆ. ಮೇಲಿನ ಅಂತಸ್ತಿಗೆ ಹೋಗಲು ಕೆಳಮಟ್ಟದಿಂದ ಮೆಟ್ಟಿಲುಗಳನ್ನು ಜೋಡಿಸಲಾಗಿದೆ. ಈ ಬುರುಜುಗಳ ಸುತ್ತಲೂ ಕಿಂಡಿಗಳಿವೆ. ಶತ್ರುಗಳ ಚಲನವಲನ ಗಮನಿಸಲೆಂದು ಮತ್ತು ಅರಮನೆಯ ರಕ್ಷಣೆಗೆ ಈ ಕಿಂಡಿಗಳಿರಬಹುದು. ಸುತ್ತೂಲ ಗೋಡೆಗಳು ಮಾತ್ರ ಉಳಿದುಕೊಂಡಿವೆ. ಇದೇ ಸ್ಥಿತಿಯನ್ನು ಹೋಲುವ ರಾಣಿಯ ಅರಮನೆಯ ರಾಜನ ಅರಮನೆಯ ಹಿಂಭಾಗಕ್ಕೆ ಇದೆ, ಗೋಡೆಗಳಲ್ಲಿ ಉಬ್ಬು ಚಿತ್ರಗಳಿವೆ, ಇಲ್ಲಿ ಅರಸನ ಬಾವಿ, ಅರಸಿಯ ಹೊಂಡ, ಹಿರೇ ಹೊಂಡ, ಚಿಕ್ಕ ಹೊಂಡ, ಆನೆ, ಬಟ್ಟಲ ಬಾವಿ, ತೊಟ್ಟಿಲ ಬಾವಿಗಳು ಕಂಡುಬರುತ್ತವೆ.

[1] ಉಚ್ಚಂಗಿದುರ್ಗದ ಹಾಲಮ್ಮನ ದೇವಾಲಯದ ಗೋಡೆಗೆ ಒರಗಿಸಿರುವ ಶಾಸನ.

[2] ಕೊಟ್ರೇಶ್, ಎಂ. ೧೯೯೬ (ಉಚ್ಚಂಗಿದುರ್ಗ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಯಯನ), ಎಂ.ಫಿಲ್ ಪ್ರಬಂಧ, ಪು. ೧೭ ಹಂಪಿ: ಕನ್ನಡ ವಿಶ್ವವಿದ್ಯಾಲಯ

[3] ಅದೇ, ಪು. ೧೭

[4] ಅದೇ, ಪು. ೧೭

[5] ಗೋವಿಂದಾಚಾರ್ಯ ಚಿಕ್ಕೆರೂರು, ಅಪ್ರಕಟಿತ ಹಸ್ತಪ್ರತಿ

[6] ಉಚ್ಚಂಗಿದುರ್ಗ (ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಯಯನ), – ಪೂರ್ವಕ್ತ, ಪು. ೧೬

[7] ಪಂಚಮುಖಿ, ಆರ್.ಎಸ್.೧೯೬೭, ಕರ್ನಾಟಕ ಇತಿಹಾಸ ಪು.೧೦೫, ಧಾರವಾಡ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ.

[8] ಅದೇ, ಪು.೧೦೬

[9] ಅದೇ, ಪು. ೧೩೪

[10] ಉಚ್ಚಂಗಿದುರ್ಗ (ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಯಯನ), ಪೂರ್ವೋಕ್ತ ಪು.೧೮

[11] ಅದೇ, ಪು.೧೮

[12] ದೇವರಕೊಂಡಾರೆಡ್ಡಿ, ಮತ್ತು ಇತರರು, ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧, ಪು. ಹಂಪಿ ಕನ್ನಡ ವಿಶ್ವವಿದ್ಯಾಲಯ

[13] ಅದೇ, ಪು. ೩೫

[14] ಅದೇ, ಪು. ೩೮

[15] Zakia Khanum Ansari. 1998. Some Feudatory Families of medieval Karnataka – A Study. pp.148 – 152. Dharwad : Shrihariu Prakashana

[16] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೧, ಪೂರ್ವೋಕ್ತ, ಪು.೪೭೩

[17] ಅದೇ, ಪ.೪೭೩

[18] ಅದೇ, ಪು. ೪೬೫

[19] ಅದೇ, ಪು. ೪೬೭

[20] SII IX (pt.1)No 572 ಉಚ್ಚಂಗಿದುರ್ಗ

[21] ಸೂರ್ಯನಾಥ, ಯು.ಕಾಮತ್, ೧೯೮೯, ಕರ್ನಾಟಕದ ಇತಿಹಾಸ, ಪು.೪೪೧, ಬೆಂಗಳೂರು ಪ್ರಕಾಶನ ಸಾಹಿತ್ಯ

[22] ಅದೇ, ಪು.೪೪೫

[23] ಸದಾಶಿವಪ್ಪ, ಕುಂ.ಬಾ.೧೯೯೬, ಹರಪನಹಳ್ಳಿ ಪಾಳೆಯಗಾರರು, ಪು ೭ ೧೪, ಬಾಂಗಳೂರು ಕನ್ನಡ ಸಾಹಿತ್ಯ ಪರಿಷತ್ತು

[24] ಉಚ್ಚಂಗಿದುರ್ಗ (ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಯಯನ), ಪೂರ್ವಕ್ತ, ಪು. ೧೭ – ೧೮

[25] SII IX (pt.1) No. 126 ಉಚ್ಚಂಗಿದುರ್ಗ

[26] SII IX (pt.1)No. 575 ಉಚ್ಚಂಗಿದುರ್ಗ

[27] EC, Vol – 2 ಶ್ರವಣಬೆಳಗೋಳ

[28] ಹರಪನಹಳ್ಳಿ ಪಾಳಯಗಾರರು, ಪೂರ್ವೋಕ್ತ, ಪು.೭ ೫೦

[29] ಚನ್ನಬಸಪ್ಪ,ಎಸ್, ಪಾಟೀಲ, ೧೯೯೫, ಹೊಯ್ಸಲರಿಗೆ ಗಿರಿದುರ್ಗಮಲ್ಲ ಮತ್ತು ಶನಿವಾರಸಿದ್ದ ಬಿರುದುಗಳನ್ನಿತ್ತ ಉಚ್ಚಂಗಿದುರ್ಗ, ಇತಿಹಾಸ ದರ್ಶನ ೧೦, ಪು. ೧೫೭ – ೧೬೦

[30] ಉಚ್ಚಂಗಿದುರ್ಗ (ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಯಯನ), ಪೂರ್ವಕ್ತ, ಪು.೮೨