ಈ ಮುಂಚೆ ಹರಪನಹಳ್ಳಿಯಯು ಬಳ್ಳಾರಿ ಜಿಲ್ಲೆಯಲ್ಲಿತ್ತು. ನಂತರ ನೂತನವಾಗಿ ರಚಿತವಾದ ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿದ್ದು, ದಾವಣಗೇರಿಯಿಂದ ಉತ್ತರಕ್ಕೆ ೫೦ ಕಿ.ಮೀ. ದೂರದಲ್ಲಿದೆ. ದಾವಣಗೆರೆ ಜಿಲ್ಲೆಯು ಒಂದು ತಾಲೂಕಿನ ಕೇಂದ್ರ. ಈ ತಾಲೂಕನ್ನು ಉತ್ತರದಲ್ಲಿ ಹಡಗಲಿ. ಪೂರ್ವದಲ್ಲಿ ಕೂಡ್ಲಿಗಿ ಮತ್ತು ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕುಗಳು, ದಕ್ಷಿಣದಲ್ಲಿ ದಾವಣಗೆರೆ ಜಿ‌ಲ್ಲೆಯ ಹರಿಹರ ಮತ್ತು ದಾವಣಗೆರೆ ತಾಲೂಕುಗಳು ಪಶ್ಚಿಮದಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕುಗಳು ಸುತ್ತುವರೆದಿವೆ. ಚಿಗಟೇರಿ, ಅರಸಿಕೇರಿ, ಹರಪನಹಳ್ಳಿ, ತೆಲಗಿ, ಉಚ್ಚಂಗಿದುರ್ಗ ಪ್ರಮುಖ ಹೋಬಳಿ ಕೇಂದ್ರಗಳಾಗಿವೆ. ಉತ್ತರಕ್ಕೆ ಇಳಿಜಾರಾಗಿರುವ ಈ ತಾಲೂಕಿನ ಕಲ್ಲಹಳ್ಳಿ ಗುಡ್ಡ ಶ್ರೇಣಿಯಿಂದ ಕಲ್ಲಹಳ್ಳಿ ಶಿಖರ ೮೫೩ ಮೀ.ಎತ್ತರವಿದೆ. ಮುಂದೆ ಈ ಶ್ರೇಣಿಯು ಕವಲೊಡೆದು ತೆಲಿಗಿ ಗುಡ್ಡ ಸಮೂಹ ದಕ್ಷಿಣ ಭಾಗದಲ್ಲಿ ಉಚ್ಚಂಗಿದುರ್ಗದವರೆಗೂ ಮುಂದುವರೆದಿದೆ. ತಾಲೂಕಿನ ಪಶ್ಚಿಮದ ಎಲ್ಲೆಯಲ್ಲಿ ತುಂಗಭದ್ರಾ ನದಿ ಗಡಿಯಾಗಿ ಸ್ವಲ್ಪದೂರ ಹರಿದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕನ್ನು ಬೇರ್ಪಡಿಸಿದೆ. ತಾಲೂಕಿನ ಪೂರ್ವದಲ್ಲಿ ಚಿಕ್ಕಹಗರಿ ನದಿ ಉತ್ತರಾಭಿಮುಖವಾಗಿ ಹರಿಯುವುದು. ಸಹ್ಯವೆನಿಸುವ ಉತ್ತಮ ಹವಾಗುಣವಿದೆ. ಈ ಪ್ರದೇಶದ ವಾರ್ಷಿಕ ಸರಾಸರಿ ಮಳೆ ೭೩೦.೨೦ ಮಿ.ಮೀ.ಇದೆ.

ಹರಪನಹಳ್ಳಿಯು ಈ ಹಿಂದೆ ಒಂದು ಅಗ್ರಹಾರವಾಗಿದ್ದಿರಬೇಕು. ಅದರ ಮೂಲ ಹೆಸರು ಬ್ರಹ್ಮಪುರಿ ಹೊಮ್ಮನಹಳ್ಳಿ ಹರಿಯಪ್ಪ ಪರ್ಗಡೆಯ ಹೆಸರಿನಲ್ಲಿ ಬದಲಾವಣೆ ಹೊಂದಿ ‘ಹರಪನಹಳ್ಳಿ’ ಎಂದಾಯಿತು. ಕೊಟ್ಟೂರಿನ ಉಡುಕೇಶ್ವರ ದೇವಾಲಯದ ಶಾಸನದಲ್ಲಿ ಈ ಹರಿಯಪ್ಪನ ಪ್ರಸ್ತಾಪವಿದೆ. ಪ್ರಾಚೀನ ಕಾಲದ ಗ್ರಾಮಗಳ ಸ್ಥಳನಾಮಗಳು ಹೆಚ್ಚಾಗಿ ಆಳುವ ಅರಸರ, ಇಲ್ಲವೆ ದೇವ ದೇವತೆಗಳ ಹೆಸರುಗಳಿಂದ ಉಂಟಾಗಿರುವುವು. ಮುತ್ತಿಗೆ ಗ್ರಾಮದಲ್ಲಿ ದೊರೆತ ದಾಖಲೆಯಂತೆ ಮುತ್ತಿಗೆ ಗ್ರಾಮದ ಕಟ್ಟೆ ಮನೆಗೆ ಸಂಬಂಧಿಸಿದಂತೆ ಒಂದು ವಿವಾದವನ್ನು ಈ ಹರಿಯಪ್ಪ ಪೆರ್ಗಡೆ ವಂಶಕ್ಕೆ ಸೇರಿದವರು ವಿಚಾರಿಸಿ ತೀರ್ಮಾನ ಕೊಟ್ಟಿದ್ದು ಕಂಡುಬಂದಿದೆ. ಅದು ಈಗಲೂ ಮುತ್ತಿಗೆ ಗ್ರಾಮದಲ್ಲಿ ದೊರಕುವುದು. ಮುತ್ತಿಗೆ ಶಾನುಭೋಗರು ಹರಪನಹಳ್ಳಿ ಪಣ್ಣಣದವರೇ ಆಗಿರುವರು. ಹದಿಮೂರನೇ ಶತಮಾನದಲ್ಲಿ ಹರಪನಹಳ್ಳಿ, ಮೂವತ್ತರ ಮುತ್ತಿಗೆ ರಾಜ್ಯದಿಂದ ಬಾಗಳಿ ರಾಜ್ಯಕ್ಕೆ ಸೇರಿದ್ದು ಎಂದು, ಒಂದು ಕಂಚಿನ ಪತ್ರದಿಂದ ತಿಳಿಯುತ್ತದೆ. ‘ಹರಿಯಪ್ಪನಹಳ್ಳಿ’ ಶ್ರೀ ಸಾಮಾನ್ಯರ ಆಡುಮಾತಿನಲ್ಲಿ ಹರಿಯಾತನಹಳ್ಳಿ ಕಾಲಾಂತರದಲ್ಲಿ ಹರಪನಹಳ್ಳಿ ಎಂದು ಕರೆಯಿಸಿಕೊಂಡಿದೆ ಎಂಬ ವಿಷಯವನ್ನು ಕುಂ.ಬಾ. ಸದಾಶಿವಪ್ಪನವರು ವ್ಯಕ್ತಪಡಿಸುತ್ತಾರೆ. ಹರಪನಹಳ್ಳಿಯ ಇತಿಹಾಸವು ನಮಗೆ ಸ್ಪಷ್ಟವಾಗಿ ತಿಳಿಯುವುದು ವಿಜಯನಗರೋತ್ತರ ಪಾಳೆಯಗಾರರ ಆಳ್ವಿಕೆಯಿಂದ. ಆದರೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಬರುವ ಬಹುತೇಕ ಗ್ರಾಮಗಳು ತುಂಬಾ ಪ್ರಾಚೀನ ಇತಿಹಾಸವನ್ನು ಹೊಂದಿರುವುದು ಶಾಸನಗಳಿಂದ ಬರುವ ಬಹುತೇಕ ದೃಢಪಡುತ್ತದೆ. ಆದರೆ ಈ ಯಾವ ಶಾಸನಗಳಲ್ಲಿಯೂ ಹರಪನಹಳ್ಳಿಯ ಉಲ್ಲೇಖ ಇರುವುದಿಲ್ಲ.

ಕ್ರಿ.ಶ. ೯೩೧ರ ರಾಷ್ಟ್ರಕೂಟರ ಶಾಸನವು ಗೋವಿಂದ ವಲ್ಲಭನ ಕಾಲದಲ್ಲಿ ಪಡಿಗನೊಂಬಾ ಎಂಬ ವೀರನು ಊರ ದಾಳಿಯಲ್ಲಿ ಸತ್ತಂತೆ ಉಲ್ಲೇಖಿಸುತ್ತದೆ. ಕ್ರಿ.ಶ. ೯೫೬, ಕ್ರಿ.ಶ.೯೪೪, ಕ್ರಿ.ಶ. ೯೭೬,ಕ್ರಿ.ಶ.೯೯೧ರ ರಾಷ್ಟ್ರಕೂಟರ ಶಾಸನಗಳು[1] ಬಾಗಳಿಯಲ್ಲಿ ಕಂಡುಬರುತ್ತವೆ. ಇವು ರಾಷ್ಟ್ರಕೂಟರ ಕನ್ನರದೇವನ ದೊರೆಯ ದಾನ – ದತ್ತಿಗಳನ್ನು ತಿಳಿಸುತ್ತವೆ. ಬಾಗಳಿ ಮತ್ತು ಉಚ್ಚಂಗಿದುರ್ಗಗಳಲ್ಲಿ ರಾಷ್ಟ್ರಕೂಟದ ದೇವಾಲಯಗಳೂ ಕಂಡುಬಂದಿದೆ. ಕೋಟೆಗಳ ವಿಷಯವಾಗಿ ರಾಷ್ಟ್ರಕೂಟರ ಶಾಸನಗಳು ಮೌನವಾಗಿವೆ.

ಕಲ್ಯಾಣ ಚಾಳುಕ್ಯರ ಸಾಮಂತರಾದ ನೊಳಂಬರು, ನೊಳಂಬವಾಡಿ ೩೨೦೦೦ ದ ಮಹಾ ಮಂಡಳೇಶ್ವರರಾಗಿ ಆಳ್ವಿಕೆ ಮಾಡಿದಂತೆ ಉಲ್ಲೇಖಿಸುವ ನೂರಾರು ಕಲ್ಯಾಣ ಚಾಲುಕ್ಯರ ಶಾಸನಗಳು ಈ ಭಾಗದಲ್ಲಿ ಕಂಡುಬರುತ್ತವೆ. ಹಿಂದೆ ಬಳ್ಳಾರಿ ಜಿಲ್ಲೆಯು ಸಮಗ್ರವಾಗಿ ನೊಳಂಬವಾಡಿ ೩೨೦೦೦ ವಿಭಾಗದಲ್ಲಿತ್ತು. ನೊಳಂಬವಾಡಿ ಎಂದರೆ ದೊಡ್ಡ ವಿಭಾಗ ಎನ್ನುವ ಅರ್ಥವುಂಟು. ಹಿಂದೆ ಈ ಪ್ರದೇಶವನ್ನು ಪಲ್ಲವರು ಆಳುತ್ತಿದ್ದರು.[2] ಈ ನೊಳಂಬವಾಡಿ ೩೨೦೦೦ ದಲ್ಲಿ ಕೋಗಳಿ ೫೦೦ ಬರುತ್ತದೆ. ಇದಕ್ಕೆ ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ತಾಲ್ಲೂಕುಗಳ ಕೆಲವು ಗ್ರಾಮಗಳು ಒಳಗೊಂಡಿದ್ದವು. ಕೋಗಳಿ ೫೦೦ ರ ಉಪವಿಭಾಗವಾಗಿ ಹಾಲ್ವೊಳ – ೧೨, ಬಿಕ್ಕಿಗ – ೭೦, ಹಲುವಾಗಿಲು – ೧೨, ಬೆಣ್ಣೆವೂರು – ೧೨, ಕಂಪಣ ಮೊಗೆ – ೧೨, ಒರ್ವಾಯಿ – ೧೨, ಮೊಳವಾಡ – ೧೨, ಮುತ್ತಗಿ – ೩೦, ಕೊಟ್ಟೂರು – ೧೨, ಬೆಣ್ಣಿಕಲ್ಲು – ೧೨, ದುಗ್ಗವತ್ತಿ – ೧೨, ಸೇರುತ್ತವೆ. [3] ಇದರಲ್ಲಿ ಬಿಕ್ಕಿಗ – ೭೦, ಹಲುವಾಗಿಲು – ೧೨, ಮುತ್ತುಗೆ – ೩೦, ಇವು ಅಲ್ಲದೆ ಕದಂಬಗಳಿಗೆ ೧೦೦೦ ರಲ್ಲಿ ಉಚ್ಚಂಗಿದುರ್ಗ ೩೦ ಕೂಡ ಸೇರುತ್ತದೆ. ಈ ಮೇಲಿನ ಆಡಳಿತ ಕೇಂದ್ರದಲ್ಲಿ ಉಚ್ಚಂಗಿದುರ್ಗ – ೩೦ ಹಲುವಾಗಿಲು ೧೨, ಮುತ್ತುಗೆ ೩೦, ಬೆಣ್ಣಿಕಲ್ಲು ೧೨ ಇವು ಹರಪನಹಳ್ಳಿ ತಾಲ್ಲೂಕಿಗೆ ಒಳಪಡುತ್ತವೆ. ಹರಪನಹಳ್ಳಿ ತಾಲ್ಲೂಕಿನ ದುಗ್ಗತ್ತಿ,ಮಾಡಲಗೇರಿ, ಬಾಗಳಿಗಳಲ್ಲಿ ಜೈನ ಬಸದಿಗಳು ಇದ್ದ ಉಲ್ಲೇಖವನ್ನು ಈ ಪ್ರದೇಶದ ಕಲ್ಯಾಣ ಚಾಳುಕ್ಯರ ಶಾಸನಗಳಲ್ಲಿ ಕಾಣಬಹುದು. ಅರಸಿಕೇರಿಯನ್ನು ನೊಣಬನ ಅರಸಿಕೇರಿ ಎಂದು ಕೆರೆಗುಡಿಹಳ್ಳಿಯಲ್ಲಿರುವ ಕ್ರಿ.ಶ. ೧೫೨೭ರ ಶಾಸನವೊಂದು ತಿಳಿಸುತ್ತದೆ. ಪಾಂಡ್ಯರಂತು ಉಚ್ಚಂಗಿದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ಮಾಡಿದರು.[4] ಹಾಗಾಗಿ ಇವರಿಗೆ ಉಚ್ಚಂಗಿಯ ಪಾಂಡ್ಯರೆಂದೇ ಗುರುತಿಸಲಾಗಿದೆ. ಕಲ್ಯಾಣ ಚಾಳುಕ್ಯರ ಅವಧಿಯ ಪೂರ್ವದಲ್ಲಿಯೇ ಉಚ್ಚಂಗಿದುರ್ಗದಲ್ಲಿ ಕೋಟೆಯೊಂದು ಕೋಟೆಯೊಂದು ನಿರ್ಮಾಣವಾಗಿದ್ದ ಉಲ್ಲೇಖಗಳು ಅಂದಿನ ಶಾಸನಗಳಿಂದ ತಿಳಿದುಬರುತ್ತದೆ.

ಕಡತಿ, ಹಲುವಾಗಿಲು, ಕುಂಚೂರುಗಳಲ್ಲಿ ಯಾದವರ ಶಾಸನಗಳಿವೆ.[5] ಉಚ್ಚಂಗಿದುರ್ಗ, ಅಲಗಿಲವಾಡ, ನೀಲಗುಂದ, ಬಾಗಳಿಯಲ್ಲಿ ಹೊಯ್ಸಳರ ಶಾಸನಗಳು ಕಂಡುಬರುತ್ತವೆ.[6] ಕ್ರಿ.ಶ. ೧೨೨೪ರ ನೀಲಗುಂದದ ಶಾಸನವೊಂದು ೨ನೇ ನರಸಿಂಹನ ತಂದೆ ಬಲ್ಲಾಳನು ಸೇವುಣರ ಸೈನ್ಯವನ್ನು ಸೊರಟೂರಿನಿಂದ ಕೃಷ್ಣವೇಣಿ ನದಿಯವರೆಗೆ ಏಕಾಂಗಿಯಾಗಿ ತಳ್ಳಿದನೆಂದು ತಿಳಿಸುತ್ತದೆ.[7] ಚಿರಸ್ತಹಳ್ಳಿ, ಉಚ್ಚಂಗಿದುರ್ಗ, ಹಲುವಾಗಿಲುಗಳಲ್ಲಿ ವಿಜಯನಗರದ ಶಾಸನಗಳು ಸಿಗುತ್ತವೆ. ಈ ಎಲ್ಲಾ ಶಾಸನಗಳಲ್ಲಿ ಹರಪನಹಳ್ಳಿ ಹೆಸರು ಕಂಡುಬರುವುದಿಲ್ಲ. ಹಾಗಾಗಿ ಹರಪನಹಳ್ಳಿ ಎಂಬ ಹೆಸರು ಹರಪನಹಳ್ಳಿ ಪಾಳೆಯಗಾರರ ಕಾಲದ್ದು. ಹರಪನಹಳ್ಳಿ ಹಾಗೂ ಹರಿಹರ ತಾಲೂಕಿನ ಎಲ್ಲಾ ಶಾಸನಗಳನ್ನು ಗಮನಿಸಲಾಗಿ ಉಚ್ಚಂಗಿದುರ್ಗದ ಕೋಟೆಯ ಕ್ರಿ.ಶ.೧೦ನೇ ಶತಮಾನಕ್ಕೆ ಮುಂಚನದೆಂದು ಅಂದಾಜಿಸಬಹುದು. ಹರಪನಹಳ್ಳಿ ಪಾಳೆಯಗಾರ ಶಾಸನ, ಹಸ್ತಪ್ರತಿಗಳಲ್ಲಿ ಮತ್ತು ಕೆಳದಿನೃಪ ವಿಜಯದಲ್ಲಿ ಹರಪನಹಳ್ಳಿ, ಬಾಗಳಿ, ಹಲುವಾಗಿಲು, ಚಿಗಟೇರಿ ಮತ್ತು ಬಂಡ್ರಿ ಕೋಟೆಗಳ ಪ್ರಸ್ತಾಪಗಳಿವೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಇರುವ ಮೇಲಿನ ಕೋಟೆಗಳ ಕುರಿತಾಗಿ ಮುಂದೆ ಚರ್ಚಿಸಲಾಗಿದೆ.

ಕೋಟೆಯ ಅರ್ಥ ವಿವರಣೆ

ಕೋಟೆ ಎಂದರೆ ಆವರಣವುಳ್ಳ ಪ್ರದೇಶ ಎಂದರ್ಥ. ಕೋಟೆ ಅಥವಾ ರಕ್ಷಾವರಣ ಇದನ್ನು ಸಂಸ್ಕೃತದಲ್ಲಿ ದುರ್ಗ ಎಂದು ಹೇಳುತ್ತಾರೆ. ದುರ್ಗ – ದುಗ್ಗ ಕಾವ್ಯದಲ್ಲಿ ಭಾಗಸಿಯುಗ್ಗಡದ ಘನವರ್ಗ ಮೂಲವನೆರೆದೊಡೀ ಭವದಾಹಗ ಹರೇ ದೇರುವನೆ ಮುಕ್ತಿಯ ದುಗ್ಗವನು ಎಂದಿದೆ. ಕೋಟೆಗೆ ಪುರ, ಪ್ರಕಾರ, ಕಿಲ್ಲೆ ಎಂಬ ಅರ್ಥಗಳು ಉಂಟು. “ಸೈನಿಕರುಗಳಿಂದ ಆವರಿಸಲ್ಪಟ್ಟ ರಕ್ಷಿತವಾದ ಮತ್ತು ರಕ್ಷಣೆಗೆ ಮುಡುಪಾಗಿರುವ ಗಟ್ಟಿಯಾದ ಸ್ಥಳವೇ ಕೋಟೆ ಎಂದೆನಿಸಿಕೊಳ್ಳುತ್ತದೆ.” ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ‘ಪುರ’ಗಳ ಉಲ್ಲೇಖವಿದೆ. ಪುರ ಅಂದರೆ ಭದ್ರವಾದಂತಹ ಕೋಟೆಯನ್ನು ಹೊಂದಿರುವ ಪಟ್ಟಣ ಎಂದರ್ಥ.

ಮಾನವನ ತನ್ನ ನಾಗರಿಕತೆಯ ಪ್ರಗತಿಯ ಪಥದಲ್ಲಿ ನಡೆದಂತೆ ತನ್ನ ಮತ್ತು ತನ್ನ ಸಮುದಾಯದ ಲೌಕಿಕ ಸಂಪತ್ತನ್ನು ಬೆಳೆಸುತ್ತಾ ನಡೆದನು. ಹಲವು ಕಿರು ಸಮುದಾಯಗಳು ಒಂದೆಡೆಯಲ್ಲಿ ನೆಲೆಗೊಂಡಾಗ ವಿವಿಧ ವಿಶಿಷ್ಟ ಹಿತಾಸಕ್ತಿಯ ಸಮಾಜಗಳು ನಿರ್ಮಾಣಗೊಂಡವು. ರಾಜ್ಯಗಳು – ಸಾಮ್ರಾಜ್ಯಗಳು ಉದಯವಾಗುದಕ್ಕಿಂತ ಮೊದಲು ಸಮಾಜದ ಜನರು ಸಣ್ಣ ಸಣ್ಣ ಗುಂಪುಗಳಾಗಿ ವಾಸಿಸುತ್ತಿದ್ದರು. ಕಾಲಕ್ರಮೇಣ ಈ ಗುಂಪುಗಳಲ್ಲಿ ಜನಸಂಖ್ಯೆ ಹೆಚ್ಚಾಗಿ ಅಥವಾ ಬೇರೆ ಗುಂಪುಗಳ ಜೊತೆಗೂಡಿ ಊರುಗಳಾದವು. ಈ ಪ್ರಕ್ರಿಯೆಗೆ ಮೂಲ ಕಾರಣ ಮನುಷ್ಯನ ಸಮಾಜ ಜೀವಿತ ಪ್ರಜ್ಞೆ. ಪ್ರಜ್ಞೆಯ ಪರಿಣಾಮವಾಗಿ ತನ್ನ ಸುತ್ತಲಿನ ಪರಿಸರದ ಅಭದ್ರತೆ ಬಗ್ಗೆ ಯೋಚಿಸಿದ. ಅಂತೆಯೇ ನೆಲೆ ನಿಂತಿದ್ದ ಊರಿನ ರಕ್ಷಣೆಗಾಗಿ ಕೋಟೆ ಕಟ್ಟಿಕೊಳ್ಳುವ ಅವಶ್ಯಕತೆ ಕಂಡುಬಂದಿತು. ಊರುಗಳು ಬೆಳೆದು ಹಲವಾರು ಊರುಗಳು ಒಟ್ಟುಗೂಡಿ ರಾಜ್ಯಗಳು ಸ್ಥಾಪನೆಯಾದ ಮೇಲೆ ಆಳುವ ಅರಸರು ತಮ್ಮ ರಾಜ್ಯಗಳನ್ನು ಸಂರಕ್ಷಿಸಿಕೊಳ್ಳಲು ರಾಜಧಾನಿಗಳಲ್ಲಿ ಹಾಗೂ ಗಡಿ ಪ್ರದೇಶಗಳಲ್ಲಿ ಬೃಹತ್ ಆಕಾರದ ಕೋಟೆಗಳನ್ನು ಕಟ್ಟಿಸಿದರು. ಹೀಗಾಗಿ ಪ್ರಾಚೀನ ಕಾಲದ ಮಾನವರ ರಕ್ಷಣೆಯ ಕಾರ್ಯದಲ್ಲಿ ಕೋಟೆ ಮಹತ್ತರ ಪಾತ್ರವಹಿಸಿದೆ. ಹಿಂದೆ ಯುದ್ಧಗಳು ನಡೆದಾಗ ಹೊರಗಿನ ಆಕ್ರಮಣ ತಡೆಯಲು ಕೋಟೆ ಕಟ್ಟಿಸಿಕೊಳ್ಳುವುದು ಅವಶ್ಯವಾಗಿತ್ತು. ಕೋಟೆಯು ರಾಜಕೀಯವೆಂಬ ದೇಹದ ಪ್ರಮುಖ ಹಾಗೂ ಅನಿವಾರ್ಯವಾದ ಅಂಗವಾಗಿದ್ದಿತು. ಯಾವುದೇ ರಾಜ್ಯದ ರಾಜಧಾನಿಯು ದೇಹದಲ್ಲಿನ ಹೃದಯವಿದ್ದಂತೆ ರಾಜಧಾನಿಯನ್ನು ವಶಪಡಿಸಿಕೊಂಡರೆ, ಸಾಮಾನ್ಯವಾಗಿ ಒಂದು ರಾಜ್ಯವು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಿತು. ಆದುದರಿಂದ ಕೋಟೆ ಅಥವಾ ದುರ್ಗದ ನಿರ್ಮಾಣವು ರಕ್ಷಣೆಯ ದೃಷ್ಟಿಯಿಂದ ಅತ್ಯವಶ್ಯವಾಗಿತ್ತು. ಜಿ.ಟಿ.ಡಾಟೆ ಪ್ರಕಾರ (Times of yore the Fortress was a capital means of defence) “ಪ್ರಾಚೀನ ಕಾಲದಲ್ಲಿ ಈ ಕೋಟೆಗಳು ರಾಜಧಾನಿಯ ರಕ್ಷಣೆಯ ಸಲುವಾಗಿ ಇರುವಂತಹವು.” ಯಕ್ಟ್‌ರಂ ಸ್ಟ್ರೇಟ್‌ಪ್ರಕಾರ (Treatise on Fortification and Artil – lery observes Forts are equally usefull in offensive as defencive warfare) : ವಿರೋಧಿಗಳಿಂದ ಯುದ್ಧ ತಡೆಯುವುದಕ್ಕಾಗಿ ಮತ್ತು ರಕ್ಷಣೆಗಾಗಿ ಕೋಟೆಗಳ ತುಂಬಾ ಅನುಕೂಲಕರವಾಗಿದ್ದವು.”

ಕೋಟೆ ರಚನೆಯ ಕುರಿತಾಗಿ ಪ್ರಸಿದ್ಧ ಕವಿಯಾದ ಹರಿಹರನು ‘ಗಿರಿಜಾ ಕಲ್ಯಾಣ’ ಎಂಬ ಕಾವ್ಯದಲ್ಲಿ ಕೊಟ್ಟಿರುವ ವಿವರ ಈ ಕೆಳಗಿನಂತಿದೆ.

ಪಳಕಿನ ಕೋಂಟೆ ಬಟ್ಟದನೆ ಬೇವಿನದಂಡೆ ನಭಕ್ಕೆ ಮೀರುವ
ಟ್ಟಳೆ ನಿರ್ಮಿರ್ದೇರು ಪಾರುವ ವಿರಾಜಿತ ಗೊಂಟು ಗೊಂಟಿನೊಳ್
ಬಳಸಿದ ಕೊತ್ತಳಂ ಸೊಗಯಿ ಪಾಳ್ವೆರಿ ಡೆಂಕಣಿ ಸಾರಮಾರಿಯ
ಗ್ಗಳಲಿಸುವ ಗೋಪುರಂ ಪುಲಿಮೊಗಂ ಮೆರುಗುಂ ಪುರದೊಳು ನಿರಂತರ ||

ಹಳೇಗನ್ನಡದ ಕೋಂಟೆಯೇ ಹೊಸಗನ್ನಡದ ಕೋಟೆ. ಪಳಕಿನ (ಸ್ಫಟಿಕದ) ಕೋಟೆ ಎಂಬುದು ಕವಿಯ ಕಲ್ಪನೆ.

ಕಂಪಿಲರಾಯನ ದಂಡನಾಯಕನಾದ ಬೈಚಪ್ಪನು ಕೋಟೆಯನ್ನು ಸಿದ್ಧಮಾಡಿದ ಬಗೆಯನ್ನು ನಂಜುಂಡನು ರಾಮನಾಥ ಚರಿತೆಯಲ್ಲಿ ಈ ಕೆಳಗಿನಂತೆ ಹೇಳಿದ್ದಾನೆ.

ದಳವಾಡ ಸಹಿತ ಬೈಚಪ್ಪ ದುರ್ಗವ ಹೊಕ್ಕು
ತಳದವರ ಬಲಿಕೆಯನು
ಬಳಸಿ ಬಳಸಿ ನೋಡಿ ದುರ್ಗ ಸೌರಣೆಯನಂ
ದಲಸದೆ ಮಿಗೆ ಮೂಡಿಸಿದನು
ಅಗಳಾಳ್ವೇರಿ ಕೋಟೆ ಕೊತ್ತಳ ನೆಲದಿಡ್ಡಿ
ಮುಗಿಲಟ್ಟಣೆ ನೆಲಗಮ್ಮ
ಪ್ರಗಿಸಿ ಕೊಯೊಳಗಾಗಿಸಿಕೊಂಬ ಪಲಪುಲಿ
ಮೊಗಗಳನನು ಮೂಡಿಸಿದನು

ರಾಜರ ಮತ್ತು ಚಿಕ್ಕ ಸಂಸ್ಥಾನದ ಮುಖ್ಯಸ್ಥರ ಅತಿ ಹೆಚ್ಚಿನ ಬಲ ಈ ಕೋಟೆಗಳೇ. ಕೋಟೆಯಿಂದ ರಕ್ಷಿತವಾಗಿಲ್ಲದ ಪಟ್ಟಣಗಳನ್ನು ಶತ್ರುಗಳು ಬಹು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳಬಲ್ಲರು. ಆದ್ದರಿಂದ ಆಳುವವರು ಅತ್ಯವಶ್ಯಕವಾಗಿ ಕೋಟೆಯನ್ನು ಕಟ್ಟಬೇಕೆಂದು ಸಾಮ್ರಾಜ್ಯ ಲಕ್ಷ್ಮಿ ಪೀಠಿಕಾದಲ್ಲಿ ಪ್ರಸ್ತಾಪವಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] SII IX (pt.1)No. 66 ಬಾಗಳಿ

[2] ದೇವರೊಂಡಾರೆಡ್ಡಿ ಮತ್ತು ಇತರರು, ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ – ೧, ಪು.೧೮ ಹಂಪಿ. ಕನ್ನಡ ವಿಶ್ವವಿದ್ಯಾಲಯ

[3] ಅದೇ, ಪು.೨೫

[4] ಕೊಟ್ರೇಶ್,ಎಂ.೧೯೯೬, ಉಚ್ಚಂಗಿದುರ್ಗ ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎಂ.ಫಿಲ್.ಪ್ರಬಂಧ, ಪು.೧೮ ಹಂಪಿ ಕನ್ನಡ ವಿಶ್ವವಿದ್ಯಾಲಯ

[5] ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ – ೧, ಪೂರ್ವೋಕ್ತ, ಪು.೩೨

[6] ಅದೇ, ಪು.೩೧

[7] ಅದೇ, ಪು.೩೨