ಕರಡಿದುರ್ಗ ಇರುವ ಹರಪನಹಳ್ಳಿ ತಾಲ್ಲೂಕು ಮೊದಲು ಬಳ್ಳಾರಿ ಜಿಲ್ಲೆಯಲ್ಲಿದ್ದು, ಇತ್ತೀಚಿಗಷ್ಟೇ ಪುನರ್ ರಚಿತ ದಾವಣಗೇರಿ ಜಿಲ್ಲೆಗೆ ಸೇರಿರುತ್ತದೆ. ಇದು ಹರಪನಹಳ್ಳಿ ದಕ್ಷಿಣ ದಿಕ್ಕಿಗೆ ೨೯ ಕಿ.ಮೀ. ದೂರದ ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗದ ಹಿಂಭಾಗದಲ್ಲಿದೆ. ಇದೊಂದು ಸುಮಾರು ೧೦೦ ಮನೆಗಳಿರುವ ಕುಗ್ರಾಮ. ಇದರ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮೇಲೆ ಕೋಟೆ ಇದೆ.

ಇತಿಹಾಸ

ಈ ಪ್ರದೇಶ ಶಿಲಾಯುಗಗಳ ಕಾಲದಿಂದಲೂ ಮಾನವನಿಗೆ ತಾಣವಾಗಿ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಪ್ರಸಿದ್ಧ ಹೊಂದಿರುವುದು ಸತ್ಯಸಂಗತಿಯಾಗಿದೆ. ಅಂತೆಯೇ ಹಲವಾರು ಕೋಟೆಗಳನ್ನು ಈ ಸುತ್ತಮುತ್ತಲಿನ ಪರಿಸರದಲ್ಲಿ ಪರಿಸರದಲ್ಲಿ ಕಾಣಬಹುದು. ಅವುಗಳಲ್ಲಿ ವೀರನದುರ್ಗ, ಹರಪನಹಳ್ಳಿ, ಚಿಗಟೇರಿ, ಬಂಡ್ರಿ, ದೇವಲಾಪುರ, ಉಚ್ಚಂಗಿದುರ್ಗದ ಕೋಟೆಗಳು ಮುಖ್ಯವಾಗಿವೆ. ಇವುಗಳಂತೆಯೇ ಇದುವರೆಗೂ ಬೆಳಕಿಗೆ ಬಾರದ ಹಾಗೂ ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಕೋಟೆಗಳಲ್ಲಿ ಕರಡಿದುರ್ಗವು ಒಂದು. ಈ ಕೋಟೆಯನ್ನು ಕುರಿತು ಇದುವರೆಗೆ ಯಾವುದೇ ಅಧ್ಯಯನ ನಡೆದಿಲ್ಲ. ಸ್ಥಳೀಯರು ಕೋಟೆ ಮತ್ತು ಗ್ರಾಮವನ್ನು ಒಳಗೊಂಡ ಬೆಟ್ಟವನ್ನು ಹೆಸರಿಸುತ್ತಿರುವುದು ಕರಡಿದುರ್ಗವೆಂದು. ಇಲ್ಲಿ ದಟ್ಟವಾದ ಕಾಡು ಗಿರಿ – ಕಂದಕಗಳಿರುವುದರಿಂದ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಡಿಗಳು ವಾಸಿಸುತ್ತಿದ್ದವಂತೆ. ಈ ಕಾರಣವಾಗಿಯೇ ಆ ಗ್ರಾಮಕ್ಕೆ ಕರಡಿದುರ್ಗವೆಂದು ಕರೆಯಲಾಗಿದೆ. ಎನ್ನುವುದು ಇಲ್ಲಿಯ ಪ್ರತೀತಿ. ಕನ್ನಡ ನಿಘಂಟುವಿನಲ್ಲಿ ಬರುವ ಕರಡಿಗೆ ಎಂಬುದರ ಶಬ್ದ ಅರ್ಥವು ಪೆಟ್ಟಿಗೆ, ಚಿಕ್ಕದು ಎಂಬ ಪದಗಳನ್ನು ನಿರ್ದೆಶಿಸುತ್ತಿದ್ದು, ಈ ಕೋಟೆಯು ಚಿಕ್ಕದಿದ್ದು, ಪೆಟ್ಟಿಗೆಯಾಕಾರದಲ್ಲಿರುವುದನ್ನು ಕಂಡಾಗ ಅಲ್ಲಿಯ ಕೋಟೆಯನ್ನು ಸೂಚಿಸಲು ಕರಡಿಗೆ ಎಂಬ ವಿಶೇಷಣವನ್ನು ಸೇರಿಸಿಕೊಂಡಿರಬೇಕು. ಹಾಗಾಗಿ ಈ ಗ್ರಾಮಕ್ಕೆ ಕರಡಿದುರ್ಗ ಎಂಬ ಹೆಸರು ಪ್ರಾಪ್ತವಾಗಿರಬಹುದು. ಪ್ರಾಯಶಃ ಇಲ್ಲಿಯ ಪಾಳೆಯಗಾರರು ನಶಿಸಿದ ನಂತರ ಈ ಕೋಟೆಯು ಕರಡಿಗಳ ವಾಸಸ್ಥಾನವಾಗಿರಬೇಕು. ಈ ಹಿನ್ನೆಲೆಯಲ್ಲಿಯೂ ಕರಡಿದುರ್ಗ ಎಂಬ ನಾಮವು ಪ್ರಚಲಿತದಲ್ಲಿದೆ.

ಉಚ್ಚಂಗಿದುರ್ಗದಂತೆ ಕರಡಿದುರ್ಗದ ಪ್ರದೇಶವೂ ಮೌರ್ಯರಿಗೆ, ಕದಂಬರಿಗೆ, ಕಲ್ಯಾಣ ಚಾಳುಕ್ಯರಿಗೆ, ನೊಳಂಬರಿಗೆ, ಪಾಂಡ್ಯರಿಗೆ, ಹೊಯ್ಸಳರಿಗೆ, ವಿಜಯನಗರದರಸರ ಆಳ್ವಿಕೆಗೆ ಒಳಪಟ್ಟಿದ್ದಲ್ಲದೆ ಹರಪನಹಳ್ಳಿಯ ಪಾಳೆಗಾರರಿಗೆ ಪ್ರಮುಖ ಸೈನಿಕ ನೆಲೆಯಾಗಿತ್ತು. ಹರಪನಹಳ್ಳಿ ಪಾಳೆಯಪಟ್ಟು ಕ್ರಿ.ಶ. ೧೫೬೫ ರಲ್ಲಿ ದಾದಯ್ಯ ನಾಯಕನಿಂದ ಆರಂಭವಾಯಿತು. ಕ್ರಿ.ಶ. ೧೭೯೯ ರಲ್ಲಿ ಇಮ್ಮಡಿ ಸೋಮಶೇಖರ ನಾಯಕನ ಪತ್ನಿ ನೀಲಮ್ಮಾಜಿಯವರಿಗೆ ನಡೆಸಿದ ಈ ಮನೆತನದ ಆಳ್ವಿಕೆ ಬ್ರಿಟಿಷರಿಂದ ಕೊನೆಗೊಂಡಿದೆ.[1] ಸುಮಾರು ೨೫೦ ವರ್ಷಗಳ ಅವಧಿಯಲ್ಲಿ ಹರಪನಹಳ್ಳಿ ಪಾಳೆಯಗಾರರು ರಾಜ್ಯ ವಿಸ್ತರಿಸುವ ನಿಟ್ಟಿನಲ್ಲಿ ತಮ್ಮ ಸೈನಿಕ ನೆಲೆಗಳನ್ನು ಹಲವೆಡೆ ಸ್ಥಾಪಿಸಿದರು. ಅವುಗಳಲ್ಲಿ ಬಂಡ್ರಿ, ಚಿಕ್ಕಹಳ್ಳಿ, ಬೂದುನೂರು, ವೀರನದುರ್ಗ, ಉಚ್ಚಂಗಿದುರ್ಗ, ಚಿಗಟೇರಿ, ತಂಬ್ರಹಳ್ಳಿ, ಕುರದಗಡ್ಡೆ, ಹೊಳಲು, ಹ್ಯಾರಡ ಮತ್ತು ಕರಡಿದುರ್ಗಗಳು ಮುಖ್ಯವಾಗಿವೆ. ಕರಡಿದುರ್ಗದಲ್ಲಿ ಸೈನ್ಯದ ಒಂದು ಭಾಗವನ್ನು ಇಡಲಾಗಿದ್ದಿತೆಂಬುದು ಕೋಟೆಯ ಅವಶೇಷಗಳಿಂದ ಮತ್ತು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ.[2]

ಕೋಟೆಯ ನಿರ್ಮಾಣ

ವಿಜಯನಗರೋತ್ತರ ಕಾಲದಲ್ಲಿ ತಲೆ ಎತ್ತಿ ಪ್ರಸಿದ್ಧಿ ಹೊಂದಿದ ಪಾಳೆಯಪಟ್ಟುಗಳಲ್ಲಿ ಹರಪನಹಳ್ಳಿಯು ಒಂದು. ಈ ಪಾಳೆಯಗಾರರು ತಮ್ಮ ರಾಜ್ಯದ ವಿಸ್ತರಣೆಯ ದಾಹದಿಂದ ತಮ್ಮ ಸೈನಿಕ ನೆಲೆಗಳಾಗಿ ಬಹುತೇಕ ಕಡೆ ಕೋಟೆಗಳನ್ನು ಕಟ್ಟಿಸಿದರು. ಅಂಥವುಗಳಲ್ಲಿ ಈ ಕರಡಿದುರ್ಗವು ಮುಖ್ಯವಾದುದು. ಈ ಕೋಟೆಯನ್ನು ಹರಪನಹಳ್ಳಿ ಪಾಳೆಯಗಾರ ಮುಮ್ಮಡಿ ಬಸಪ್ಪ ನಾಯಕನು ಕಟ್ಟಿಸಿರಬಹುದೆಂದು ಸ್ಥಳೀಯರ ಪ್ರತೀತಿ ಇದೆ. ಇದಕ್ಕೆ ಪೂರಕವೆಂಬಂತೆ ಕರಡಿದುರ್ಗದ ಕೋಟೆಯೊಳಗೆ ಇರುವ ಆಂಜನೇಯನ ಗುಡಿಯಲ್ಲಿರುವ ಶಾಸನವು ಮುಂಮಡಿ ಬಸಪ್ಪನಾಯಕನದು. ಈ ಶಾಸನದ ಪಾಠವು ಪೂರ್ಣವಾಗಿ ಲಭ್ಯವಿಲ್ಲ. ಈಗ ಲಭ್ಯವಿರುವ ಪಾಠವನ್ನು ಕೆಳಗೆ ಕೊಡಲಾಗಿದೆ.

ಸ್ವಸ್ತಿ ಶ್ರೀ ಜಯಾಭ್ಯುದಯ ಶಾಲಿವಾಹನ ಶಕವರುಷಂ
ಗಳು ೧೬೨೨ ನೆಯ ವಿಕ್ರಮ ಸಂವತ್ಸರದ
ಆಶ್ವಿಜ ಶುದ್ಧ ೧ ಲು ಮುಂಮಡಿ ಬಸಪ್ಪ ನಾಯಕೈಯ್ಯನವರು
ಹನುಮಂಥ ದೇವರ…………………………..
ಮೈದೂರು………………………

ಈ ಅಪ್ರಕಟಿತ ಶಾಸನದಲ್ಲಿ ಒಟ್ಟು ಹದಿನೈದು ಸಾಲುಗಳಿವೆ. ದೊರೆತಿರುವ ಪಾಠದಲ್ಲಿ ಕ್ರಿ.ಶ. ೧೭೦೦ ರಲ್ಲಿ ಮುಮ್ಮಡಿ ಬಸಪ್ಪ ನಾಯಕನು ಹನುಮಂತ ದೇವರ ಗುಡಿಗೆ ಎಂಬುವುದು ಮಾತ್ರ ಇದೆ. ದೇವಾಲಯಕ್ಕೆ ಏನಾದರೂ ಮಾಡಿಸಿರಬಹುದೇ? ಅಥವಾ ಕೋಟೆ ಕಟ್ಟಿಸಿದ ಉಲ್ಲೆಖವಿದೆಯೇ? ಏನೂ ತಿಳಿಯದು ಆದರೆ ಮುಮ್ಮಡಿ ಬಸಪ್ಪ ನಾಯಕನು ಈ ರೀತಿಯ ದೇವಾಲಯಗಳಿಗೆ ದಾನ – ದತ್ತಿ ನೀಡಿದಂತೆ ಉಲ್ಲೆಖಿಸುವ ಹಲವಾರು ಶಾಸನಗಳಿವೆ. ಕೆಲವನ್ನು ಉದಾಹರಣೆಗಾಗಿ ಇಲ್ಲಿ ನೀಡಲಾಗಿದೆ.

ಮುಂಮಡಿ ಬಸಪ್ಪ ನಾಯಕನ ಕ್ರಿ.ಶ. ೧೭೦೮ರ ಶಾಸನವು[3] ಉಚ್ಚಂಗೆಮ್ಮ ದೇವಾಲಯದ ಗಂಟೆಯ ಮೇಲಿದೆ. ಇದು ಈ ನಾಯಕ ಗಂಟೆಯನ್ನು ಸಮರ್ಪಿಸಿದಂತೆ ತಿಳಿಸುತ್ತದೆ. ಅಲ್ಲೇ ಇನ್ನೊಂದು ಗಂಟೆಯಲ್ಲಿ ಕ್ರಿ.ಶ. ೧೭೦೦ರಲ್ಲಿ ಮುಂಮಡಿ ಬಸಪ್ಪ ನಾಯಕನು ಇನ್ನೊಂದು ಗಂಟೆಯನ್ನು ಉಲ್ಲೇಖವಿದೆ.[4] ಕ್ರಿ.ಶ. ೧೭೩೪ರ ಶಾಸನದಲ್ಲಿ ಮುಂಮಡಿ ಬಸಪ್ಪ ನಾಯಕರು ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ನಡೆಯುವ ದಾಸೋಹಕ್ಕೆ ಕಂನಾಯಕನಕಟ್ಟೆ ಗ್ರಾಮವನ್ನು ದತ್ತಿಯಾಗಿ ನೀಡಿದ ಉಲ್ಲೇಖವಿದೆ.[5] ಈ ಮೇಲಿನ ಯಾವ ಶಾಸನಗಳಲ್ಲಿಯೂ ಕರಡಿದುರ್ಗದ ಕೋಟೆಯ ಪ್ರಸ್ತಾಪ ಬಂದಿಲ್ಲ. ಆದರೆ ಈತನ ಆಡಳಿತಾವಧಿಯಲ್ಲಿ ಅನೇಕ ಕೋಟೆಗಳನ್ನು ಗೆದ್ದು ಹರಪನಹಳ್ಳಿ ಸೀಮೆಯನ್ನು ವಿಸ್ತರಿಸಿದ್ದನಲ್ಲದೆ ೪೬೦ ಕಂದಾಯದ ಹಳ್ಳಿಗಳನ್ನು ತನ್ನ ವ್ಯಾಪ್ತಿಯಲ್ಲಿಟ್ಟುಕೊಂಡಿದ್ದ. ಈ ವ್ಯಾಪ್ತಿಗೆ ಗಡಿಗಳಾಗಿ ಪಶ್ಚಿಮಕ್ಕೆ ಹಿರೇಕುರುವತ್ತಿ, ಮೈಲಾರ, ಉತ್ತರಕ್ಕೆ ನಾರಾಯಣದೇವರ ಕೆರೆ, ದಕ್ಷಣಕ್ಕೆ ಉಚ್ಚಂಗಿದುರ್ಗ ಮತ್ತು ಕರಡಿದುರ್ಗಗಳಾಗಿದ್ದವು. ದಕ್ಷಿಣದ ರಾಜ್ಯದ ರಕ್ಷಣೆಗಾಗಿ ಹಾಗೂ ವಿಸ್ತರಣೆಗಾಗಿ ಕರಡಿದುರ್ಗದಲ್ಲಿ ತನ್ನ ಸೈನ್ಯದ ತುಕಡಿಯನ್ನು ಇಡುವುದಕ್ಕಾಗಿ ಮುಂಮಡಿ ಬಸಪ್ಪ ನಾಯಕನು ಕೋಟೆಯನ್ನು ಕಟ್ಟಿಸಿರಬಹುದು.

ಕೋಟೆಯ ಲಕ್ಷಣಗಳು

ಕರಡಿದಗುರ್ಗದ ಬೆಟ್ಟವು ಸುತ್ತಲೂ ಕಿರಿದಾದ ಕಂದಕವನ್ನು ಹೊಂದಿ ಕೊಡದ ರೂಪದಲ್ಲಿದೆ. ಈ ಬೆಟ್ಟವನ್ನು ಬಳಸಿ ಕೋಟೆಯನ್ನು ಕಟ್ಟಲಾಗಿದೆ. ಈ ಗಿರಿದುರ್ಗವು ಆಕಾರದಲ್ಲಿ ಬಹು ಚಿಕ್ಕದಿದ್ದರೂ ಬಲಿಷ್ಟವಾಗಿರುವುದು. ಈ ಭಾಗವೆಲ್ಲವೂ ಬೆಟ್ಟ – ಗುಡ್ಡಗಳಿಂದ ಸುತ್ತವರೆದಿದ್ದು, ಪ್ರಕೃತಿದತ್ತವಾದ ಕಂದಕಗಳಿರುವುದರಿಂದಲೇ ಈ ಕೋಟೆ ಬಲಿಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಥಳವನ್ನು ಕೋಟೆ ಕಟ್ಟಲು ಆಯ್ಕೆ ಮಾಡಿಕೊಂಡಿರಬೇಕು.

ಈ ಕೋಟೆಗೆ ದಕ್ಷಿಣ (ಗ್ರಾಮ ಇರುವ ದಿಕ್ಕಿನಿಂದ) ಪ್ರವೇಸವಿದೆ. ಇದೇ ಮುಖ್ಯದ್ವಾರ. ಸ್ವಲ್ಪ ಶಿಥಿಲವಾಗಿದೆ. ಇದರ ಎರಡೂ ಬದಿಗೆ ೩೦ ರಿಂದ ೪೦ ಅಡಿ ಎತ್ತರವಿರುವ ವೃತ್ತಾಕಾರದ ಕೊತ್ತಳಗಳಿವೆ. ಪ್ರವೇಶದ್ವಾರದ ಎದುರಿಗೆ ಆಂಜನೇಯರ ದೇಗುಲವಿರುವುದು. ಇದರ ಹಿಂಭಾಗದಲ್ಲಿ ನೂರಾರು ವಾಸದ ಮನೆಗಳು ಗುಂಪು ಗುಂಪಾಗಿದೆ. ಚೌಕಾಕಾರದಲ್ಲಿ ನಿರ್ಮಿಸದ ಕೆಲವು ಮನೆಗಳಿಗೆ ನಾಲ್ಕು, ಇನ್ನು ಕೆಲವು ಮನೆಗಳಿಗೆ ಐದು, ಚಿಕ್ಕ ಮನೆಗಳಿಗೆ ಎರಡು ಕೋಣೆಗಳಿವೆ. ಕೋಣೆಗಳ ಗೋಡೆಗಳಲ್ಲಿ ಚಿಕ್ಕ ಚಿಕ್ಕ ಗೂಡುಗಳಿವೆ. ಇವುಗಳನ್ನು ಮನೆ ಬಳಕೆಯ ವಸ್ತುಗಳನ್ನಿಡುವುದಕ್ಕಾಗಿ ಮಾಡಿರಬಹುದು. ಮುಖ್ಯವಾಗಿ ಕೋಷ್ಠಕದಲ್ಲಿ ದೇವರನ್ನು ಇಟ್ಟು ಪೂಜಿಸುವುದಕ್ಕಾಗಿ ನಿರ್ಮಿಸಿದ್ದರು. ಕೋಣೆಗಳ ಮುಂಭಾಗದಲ್ಲಿ ಹಜಾರ ಅಥವಾ ಪಡಸಾಲೆಗಳಿವೆ. ಕೋಟೆ ತುಂಬಾ ಕಿರಿದಾಗಿದ್ದು ಇದರ ತುಂಬಾ ಮನೆಗಳಿರುವುದರಿಂದ ವಿಶಾಲವಾದ ಬೀದಿಗಳಿಲ್ಲ. ಮನೆಗಳನ್ನು ಬಹಳ ಹತ್ತಿರ ಹತ್ತಿರವಾಗಿ ನಿರ್ಮಿಸಿದ್ದು, ಓಡಾಡಲು ಐದು ಅಡಿಗಳಷ್ಟು ಸ್ಥಳವನ್ನು ಮಾತ್ರ ಬಿಡಲಾಗಿದೆ. ಅಲ್ಲಿಯೇ ಹೇರಳವಾಗಿ ದೊರೆಯುವ ಕಣಶಿಲೆಯಿಂದ ಈ ಮನೆಗಳನ್ನು ನಿರ್ಮಿಸಲಾಗಿದೆ. ಇವುಗಳ ಛಾವಣಿಗಳು ಮಾತ್ರ ಉಳಿದಿಲ್ಲ. ಈ ಮನೆಗಳ ಮಧ್ಯದಲ್ಲಿ ಅಲ್ಲಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಉಗ್ರಾಣಗಳನ್ನು ಕಣಜಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಮಧ್ಯಮ ಗಾತ್ರದ ಕಲ್ಲು ಮತ್ತು ಮಣ್ಣಿನಿಂದ ಕಟ್ಟಲಾಗಿದೆ. ಕೆಲವು ವರ್ತುಲಾಕಾರ ಮತ್ತು ಕೆಲವು ಆಯತಾಕಾರವನ್ನು ಹೊಂದಿದೆ.

ಕೋಟೆಯ ಮಧ್ಯಭಾಗದಲ್ಲಿ ಸುಮಾರು ೫೦ ಅಡಿ ಎತ್ತರದ ಬೃಹದಾಕಾರದ ಕೊತ್ತಳವಿದೆ. ಇದು ಸುಮಾರು ೫೦ ಅಡಿ ಸುತ್ತಳತೆಯನ್ನು ಹೊಂದಿದೆ. ಇದರ ಮೇಲ್ತುದಿಗೆ ಹೋಗಲು ಮೆಟ್ಟಿಲುಗಳಿವೆ. ಈ ಕೊತ್ತಳದ ಮೇಲ್ಭಾಗದಿಂದ ನೋಡಿದರೆ ಸಂಪೂರ್ಣ ಕೋಟೆ ಭಾಗವಲ್ಲದೆ ಗುಡ್ಡದ ಸುತ್ತಲಿನ ಪರಿಸರವೆಲ್ಲವೂ ಗೋಚರಿಸುತ್ತದೆ. ಕೋಟೆಯ ಆಯಕಟ್ಟಿನ ಸ್ಥಳಗಳಲ್ಲಿ ಕೊತ್ತಳಗಳನ್ನು ನಿರ್ಮಿಸಲಾಗಿದೆ.

ಕೋಟೆಯ ಗೋಡೆಯು ಸರಾಸರಿ ೧೫ ಅಡಿ ಎತ್ತರವಾಗಿದೆ. ಕೆಲವು ಕಡೆ ಹೆಚ್ಚು ಕಡಿಮೆ ಇದೆ. ಇದು ಸರಾಸರಿ ೨ ರಿಂದ ೪ ಅಡಿಗಳವರೆಗೆ ಅಗಲವಾಗಿದೆ. ಕೋಟೆಯ ಗೋಡೆಯು ತಳಪಾಯವಿಲ್ಲದೆ ಹಾಸುಬಂಡೆಯ ಮೇಲೆ ನಿಂತಿದೆ. ಇದನ್ನು ಕೆಳಭಾಗದಲ್ಲಿ ಆಯತಾಕಾರದ ಕಲ್ಲುಗಳನ್ನು ಬಳಸಿ, ಮೇಲ್ಬಾಗದಲ್ಲಿ ಮಧ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಲಾಗಿದೆ. ಈ ಗೋಡೆಯ ಸುತ್ತಲೂ ಮೇಲ್ಭಾಗದಲ್ಲಿ ಬಂದೂಕು ಕಿಂಡಿಗಳಿವೆ.

ಕೋಟೆಯಲ್ಲಿ ನೀರು ಪೂರೈಕೆ

ಕೋಟೆಯಲ್ಲಿ ಕುಡಿಯುವ ನೀರಿಗೆ ಈ ಪಾಳೆಯಗಾರರು ಸಾಕಷ್ಟು ಗಮನಹರಿಸಿರುವುದು ಕಂಡುಬಂದಿದೆ. ಬಂಡೆಗಳ ಸಂದುಗಳಿಗೆ ಗೋಡೆಗಳನ್ನು ಕಟ್ಟಿ ಮಳೆಯ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಇಂತಹ ಮಳೆಯ ನೀರಿನ ಸಂಗ್ರಹದ ಹೊಂಡಗಳು ಇಂದಿಗೂ ಇವೆ.

ಕೋಟೆಯಲ್ಲಿರುವ ದೇವಾಲಯ

ಕೋಟೆಯ ಪ್ರವೇಶದ ಎದುರು ಭಾಗದಲ್ಲಿಯೇ ಆಂಜನೇಯ ದೇವಾಲಯ. ಇದು ಗರ್ಭಗೃಹ, ಸಭಾಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ೬ ಅಡಿ ಎತ್ತರದ ಆಂಜನೇಯನ ಉಬ್ಬು ಶಿಲ್ಪವಿದೆ. ಪಾಳೆಯಗಾರರ ಆರಾಧ್ಯದೇವ ಇಂದಿಗೂ ದೊಡ್ಡ ಪ್ರಮಾಣದಲ್ಲಿ ಪೂಜೆ, ಜಾತ್ರೆ ಜರುಗುತ್ತವೆ. ಇಲ್ಲಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ದೇವರ ಹೇಳಿಕೆ. ನಡೆಯುತ್ತದೆ. ಅದಕ್ಕಾಗಿ ನೂರಾರು ಭಕ್ತರೂ ದೂರ ದೂರದ ಸ್ಥಳಗಳಿಂದ ಬರುತ್ತಾರೆ. ಇಂದಿಗೂ ಕರಡಿದುರ್ಗದ ಆಂಜನೇಯನೆಂದರೆ ಬಹಳ ಖ್ಯಾತಿ. ಈ ದೇವಾಲಯದ ಸಭಾಮಂಟಪದಲ್ಲಿರುವ ಮುಂಮಡಿ ಬಸಪ್ಪ ನಾಯಕನ ಶಾಸನಕ್ಕೂ ಎಣ್ಣೆ ಅಭಿಷೇಕ ನಡೆಯುತ್ತದೆ.

ಸಮೀಕ್ಷೆ

ಕರಡಿದುರ್ಗದ ಕೋಟೆಯು ಉಚ್ಚಂಗಿ ದುರ್ಗದ ಕೋಟೆಗೆ ಬಹು ಸಮೀಪವಿದೆ. ಉಚ್ಚಂಗಿದುರ್ಗದ ಪಶ್ಚಿಮ ದಿಕ್ಕಿನಲ್ಲಿರುವ ಹರಿಹರದ ಬಾಗಿಲು ಕರಡಿದುರ್ಗದ ಕಡೆಯಿಂದ ಬರುವವರೆಗೆ ಬಹು ಸಮೀಪದ ಮಾರ್ಗವಾಗಿದೆ. ಹರಿಹರದ ಬಾಗಿಲಿನಿಂದ ಇಳಿದು ಪಶ್ಚಿಮಕ್ಕೆ ಸಣ್ಣ, ಬೆಟ್ಟಗಳನ್ನು ದಾಟಿಕೊಂಡು ಕರಡಿದುರ್ಗದವರೆಗೆ ನಡೆದುಕೊಂಡು ಹೋಗುವುದಕ್ಕೆ ಅಂದಿನ ಕಾಲದಲ್ಲಿ (ಪಾಳೆಯಗಾರರ) ನಿರ್ಮಿಸಿದ ದಾರಿ ಇದೆ. ಇದರ ಮೂಲಕ ಗದ್ದೆಗಳ ಬಯಲಿನಿಂದ ಕರಡಿದುರ್ಗದ ಕೆಳಭಾಗಕ್ಕೆ ಬಂದರೆ ಕೋಟೆಯೊಳಗೆ ಹೋಗಲು ಸಹಾಯಕವಾಗುವಂತೆ ಸವೆದ ಕಲ್ಲುಹಾಸಿನ ದಾರಿ ಕಂಡುಬರುತ್ತದೆ. ಉಚ್ಚಂಗಿದುರ್ಗದ ಕೋಟೆಗಿಂತ ಇದು ಬಹು ಚಿಕ್ಕದು. ಉಚ್ಚಂಗಿದುರ್ಗದ ಕೋಟೆಯನ್ನು ಜೀರ್ಣೋದ್ಧಾರ ಮಾಡಿಕೊಂಡು ಹರಪನಹಳ್ಳಿ ಪಾಳೆಯಗಾರರು ಆಳ್ವಿಕೆ ಮಾಡಿದರು. ಇಂತಹ ಐದು ಸುತ್ತಿನ ಬಹುದೊಡ್ಡ ಕೋಟೆ ಇದ್ದರೂ ಇದಕ್ಕೆ ಸಮೀಪದಲ್ಲಿಯೇ ಇನ್ನೊಂದು ಚಿಕ್ಕ ಕೋಟೆಯನ್ನು ಕಟ್ಟುವ ಉದ್ದೇಶವಾದರೂ ಏನಿತ್ತು?

ಉಚ್ಚಂಗಿದುರ್ಗದಿಮದ ಇಲ್ಲಿಗೆ ಪ್ರತ್ಯೇಕ ದಾರಿಯೆ ಇರುವುದರಿಂದ ಇವರೆಡು ದುರ್ಗಗಳ ಮಧ್ಯೆ ಇದ್ದಿರಬಹುದಾದ ಸಂಬಂಧವೂ ಖಚಿತವಾಗುತ್ತದೆ. ಉಚ್ಚಂಗಿದುರ್ಗದ ಮೇಲೆ ಶತ್ರುಗಳು ಆಕ್ರಮಿಸಿದಾಗ ಸಹಾಯವಾಗಲೆಂದೇ ಸೈನ್ಯದ ಒಂದು ತುಕಡಿಯನ್ನು ಗುಪ್ತವಾಗಿ ಇಡುವುದಕ್ಕಾಗಿಯೇ ಕರಡಿದುರ್ಗದ ಕೋಟೆಯನ್ನು ಹರಪನಹಳ್ಳಿ ಪಾಳೆಯಗಾರರು ನಿರ್ಮಿಸಿರಬೇಕು. ಅಥವಾ ಅರಸರ ಪರಿವಾರದವರು, ಸೈನಿಕರು, ಉನ್ನತವರ್ಗದವರು ವಾಸಿಸಲೆಂದೇ ಈ ಕೋಟೆ ಕಟ್ಟಿರಬೇಕು. ಈ ಹಿನ್ನೆಲೆಯಲ್ಲಿ ಪಾಳೆಯಗಾರರ ಕಾಲದ ಸಾಮಾಜಿಕ ಮತ್ತು ಆರ್ಥಿಕ ಚಿತ್ರಣವನ್ನು ಅರಿಯಲು ಈ ಕೋಟೆ ಬಹಳ ಮಹತ್ವದ್ದು. ಒಟ್ಟಿನಲ್ಲಿ ಕರಡಿದುರ್ಗವನ್ನು ಪರಿಶೀಲಿಸಿದಾಗ ಅಲ್ಲಿನ ಕೋಟೆ – ಕೊತ್ತಳಗಳು, ವಸತಿಗೃಹಗಳಿಂದ ಮಧ್ಯಯುಗೀನ ಕಾಲದ ಅಚ್ಚುಕಟ್ಟಾದ ಮನೆಗಳು ಹೇಗಿದ್ದವೆಂಬುದು ತಿಳಿದುಕೊಳ್ಳಬಹುದು. ಆದೂ ಅಲ್ಲದೇ ವಿಜಯನಗರ ಕಾಲದ ವಸತಿಗೃಹಗಳನ್ನು ಅಥವಾ ಪಾಳೆಯಗಾರರ ಕಾಲದ ಮನೆಗಳನ್ನು ಅಧ್ಯಯನ ಮಾಡುವವರಿಗೆ ಕರಡಿದುರ್ಗವು ಒಂದು ಅತ್ಯುತ್ತಮವಾದ ಆಕರವಾಗಬಲ್ಲದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಸೂರ್ಯನಾಥ, ಯು.ಕಾಮತ್ (ಸಂ.), ೧೯೮೬.ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ಭಾಗ – ೩, ಬೆಂಗಳೂರು, ಗ್ಯಾಸೆಟಿಯರ್ ಇಲಾಖೆ.

[2] ಕರಡಿದುರ್ಗದ ಆಂಜನೇಯ ದೇವಾಲಯದ ಸಭಾಮಂಟಪದಲ್ಲಿರುವ ಶಾಸನ (ಅಪ್ರಕಟಿತ)ದಲ್ಲಿ ಹಾಗೂ ಕೋಟೆಯಲ್ಲಿರುವ ವಾಸದ ಮನೆಗಳು

[3] ದೇವರಕೊಂಡಾರೆಡ್ಡಿ ಮತ್ತು ಇತರರು, ೧೯೯೮, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ (ಬಳ್ಳಾರಿ ಜಿಲ್ಲೆ) – ೧, ಪು.೪೭೩. ಹಂಪಿ : ಕನ್ನಡ ವಿಶ್ವವಿದ್ಯಾಲಯ

[4] ಅದೇ, ಪು. ೪೭೪

[5] ಸದಾಶಿವಪ್ಪ, ಕುಂ.ಬಾ. ೧೯೯೬, ಹರಪನಹಳ್ಳಿ ಪಾಳೆಯಗಾರರು, ಪು. ೧೦೭. ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು