ಹರಪನಹಳ್ಳಿ ತಾಲೂಕಿನಲ್ಲಿರುವ ಬಂಡ್ರಿಯ ಹರಪನಹಳ್ಳಿಯಿಂದ ಹಡಗಲಿಗೆ ಹೋಗುವ ದಾರಿ ಮಧ್ಯದಲ್ಲಿ ೯ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ವಾಯುವ್ಯ ದಿಕ್ಕಿಗಿರುವ ಬೆಟ್ಟದ ಮೇಲೆ ಕೋಟೆ ಇದೆ.

ಹರಪನಹಳ್ಳಿ ಪಾಳೆಯಗಾರರು ತಮ್ಮ ಸೈನ್ಯದ ತುಕಡಿಗಳನ್ನು ಇಡುವುದಕ್ಕಾಗಿ ಕೆಲವು ಆಯಾಕಟ್ಟಿನ ಸ್ಥಳಗಳಲ್ಲಿ ಕೋಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಈ ಬಂಡ್ರಿಯ ಕೋಟೆಯು ಒಂದು. ಇದುವರೆಗೆ ಬೆಳಕಿಗೆ ಬಾರದ ಹಾಗೂ ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಕೋಟೆಗಳ ಸಾಲಿಗೆ ಇದು ಸೇರ್ಪಡೆಯಾಗುತ್ತದೆ. ಸ್ಥಳೀಯರು ಕೋಟೆಯನ್ನು ಒಳಗೊಂಡ ಬೆಟ್ಟವನ್ನು ಹೆಸರಿಸುತ್ತಿರುವುದು ಬಂಡ್ರಿ ಎಂದು. ಕನ್ನಡ ನಿಘಂಟುವಿನಲ್ಲಿ ಬಂಡೆ ಎಂದರೆ ಹಾಸುಗಲ್ಲು, ದೊಡ್ಡಕಲ್ಲು, ದೊಡ್ಡ, ಅಡೆ ತಡೆ ಎಂಬಿತ್ಯಾದಿ ಅರ್ಥಗಳಿವೆ. ಈ ಗ್ರಾಮವನ್ನು ಸೇರಿದಂತೆ ಕೋಟೆಯ ಬೃಹದಾಕಾರದ ಹಾಸುಬಂಡೆಯ ಮೇಲಿದೆ. ಬಂಡೆ ಜನರ ಆಡುಭಾಷೆಯಲ್ಲಿ ಬಂಡ್ರಿ, ಬಂಡ್ರಿಯಾಗಿದೆ.

ಕೋಟೆಯ ನಿರ್ಮಾಣ

ಬಂಡ್ರಿಯ ಕೋಟೆಯನ್ನು ಗೋಣಿ ಬಸಪ್ಪ ಮತ್ತು ಚಿಗಟೇರಿ ಶಿವಪ್ಪನಾಯಕರು ಸೇರಿ ನಿರ್ಮಿಸಿದರೆಂದು ಪ್ರತೀತಿ. ಚಿಗಟೇರಿ ಶಿವಪ್ಪನಾಯಕ ಬಂಡ್ರಿಗೆ ಆಗಾಗ ಬಂದು ಹೋಗುತ್ತಿದ್ದ. ಈ ಕಾರಣವಾಗಿಯೇ ಕೂಲಹಳ್ಳಿಯ ಗೋಣಿ ಬಸಪ್ಪ ಹಾಗೂ ಶಿವಪ್ಪನಾಯಕರ ಮಧ್ಯೆ ಸಂಬಂಧ ಬೆಳೆಯಿತು. ಇವರ ನೆನಪಿಗಾಗಿ ಅವರು ಕಟ್ಟಿಸಿದ ಕೋಟೆ ಮಾತ್ರ ಉಳಿದುಕೊಂಡಿದೆ ಎಂಬುದು ಗ್ರಾಮದ ಹಿರಿಯರ ಹೇಳಿಕೆಯಾಗಿದೆ.

ಕೂಲಹಳ್ಳಿ ಗೋಣಿ ಬಸವೇಶ್ವರನ ಜಾತ್ರೆಯ ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಜರುಗುತ್ತದೆ. ಇದರಲ್ಲಿ ಶ್ರೀ ಗೋಣಿ ಬಸವೇಶ್ವರನನ್ನು ಕ್ರೂರವಾಗಿ ನಡೆಸಿಕೊಳ್ಳುವ ಪ್ರಸಂಗಗಳಿವೆ. ಬಂಡ್ರಿ ಗ್ರಾಮಸ್ಥರ ಹೇಳಿಕೆಗೂ ಮತ್ತು ಈ ಮೇಲಿನ ಪ್ರಸಂಗಕ್ಕೂ ಪರಸ್ಪರ ವಿರುದ್ಧವಾಗಿದೆ. ಗೋಣಿ ಬಸವೇಶ್ವರ ಯಾರು, ಎಲ್ಲಿಂದ ಬಂದ ಏಕೆ ಬಂದ, ಈತನ ಕಾಲಾವಧಿ ಏನು ಈತನ ಜೀವನ ಹೇಗಿತ್ತು ಇತ್ಯಾದಿಗಳ ಬಗ್ಗೆ ಸರಿಯಾದ ದಾಖಲೆಗಳಿಲ್ಲ.

ಲಭ್ಯವಿರುವ ಕೆಲವು ದಾಖಲೆಗಳು, ಸ್ಮಾರಕಾವಶೇಷಗಳು ಮತ್ತು ಭೌಗೋಳಿಕ ಹಿನ್ನೆಲೆಯಲ್ಲಿ ಆಧಾರವಾಗಿಟ್ಟುಕೊಂಡು ಈ ಕೋಟೆಯ ನಿರ್ಮಾಣ ಮತ್ತು ರಚನೆಯನ್ನು ಊಹಿಸಲಾಗಿದೆ.

ಗೋಡೆಯೂ ಸರಾಸರಿ ೧೫ ರಿಂದ ೧೮ ಅಡಿ ಎತ್ತರವಾಗಿದ್ದರೂ, ಕೆಲವು ಕಡೆ ಹೆಚ್ಚು ಕಡಿಮೆ ಇದೆ. ಇದರ ಅಗಲ ಸುಮಾರು ೨ ರಿಂದ ೩ ಅಡಿಗಳಾಗಿದ್ದು ಇನ್ನು ಹಲವಡೆ ಹೆಚ್ಚು ಕಡಿಮೆ ಇದೆ. ಕೋಟೆಯ ಗೋಡೆಯ ಕೆಳಭಾಗದಲ್ಲಿ ಸ್ಥಳೀಯವಾಗಿ ದೊರೆಯುವ ಮಧ್ಯಮ ಗಾತ್ರದ ಕಣಶಿಲೆಯಲ್ಲಿ ಬಳಸಿದ್ದು, ಮೇಲ್ಭಾಗದಲ್ಲಿ ಈ ಶಿಲೆಯಗಾತ್ರ ಚಿಕ್ಕದಾಗಿದೆ. ಮೆಲ್ತುದಿಯಲ್ಲಿ ಬಂದೂಕು ಕಿಂಡಿಗಳಿದ್ದು ಅವುಗಳಿಗೆ ಗಾರೆಯ ಲೇಪನ ಮಾಡಲಾಗಿದೆ. ಈ ಕೋಟೆಯ ಆಯಾ ಕಟ್ಟಿನ ಸ್ಥಳಗಳಲ್ಲಿ ಒಟ್ಟು ೧೨ ಕೊತ್ತಳಗಳಿದ್ದವೆಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪೂರಕವಾಗಿ ಮೂರು ಕೊತ್ತಳಗಳು, ಒಂದು ಕೋಟೆಯ ಮಧ್ಯಭಾಗದಲ್ಲಿ ಎತ್ತರಸ್ಥಳದಲ್ಲಿದೆ. ಇದು ವೃತ್ತಾಕಾರವಾಗಿದ್ದು, ಸುಮಾರು ೫೦ ಅಡಿ ಸುತ್ತಳತೆ ಹಾಗೂ ೧೫ ಅಡಿ ಎತ್ತರವಾಗಿದ್ದು, ಮೇಲ್ಭಾಗದಲ್ಲಿ ಬಂದೂಕು ಕಿಂಡಿಗಳು ಮತ್ತು ಕೊತ್ತಳದ ಮೇಲೆರಲು ವ್ಯವಸ್ಥೆ ಮಾಡಲಾಗಿದೆ. ಇದನ್ನು ಸ್ಥಳೀಯರು ಕರಡಿ ಹುಡೇವು ಎನ್ನುತ್ತಾರೆ. ಉಳಿದ ಕೊತ್ತಳಗಳು ಭಾಗಶಃ ಹಾಳಾಗಿವೆ.

ಹಿಂದೆ ಬಂಡ್ರಿ ಗ್ರಾಮವು ಕೋಟೆಯೊಳಗೆ ಇತ್ತು. ಅಲ್ಲಿ ಆನೆಹೊಂಡ, ದೊಡ್ಡ ಹೊಂಡ, ತುಪ್ಪದ ಕೊಳ, ಕುಂಬಾರರ ಹಾವಗಿ ಮತ್ತು ನುಪ್ಪಣ್ಣನ ಗದ್ದುಗೆಗಳಿದ್ದವೆಂದು ಸುಮಾರು ೮೦ ವರ್ಷದ ವೃದ್ಧ ಬಣಕಾರ ತಿಂದಪ್ಪ ನೆನಪು ಮಾಡಿಕೊಳ್ಳುತ್ತಾರೆ. ಈಗ ಅವೆಲ್ಲ ನಾಶವಾಗಿವೆ. ಸರಕಾರವೇ ಕೋಟೆಯೊಳಗಿನ ಕಲ್ಲು ಗುಡ್ಡಗಳನ್ನು ಗುತ್ತಿಗೆದಾರರಿಗೆ ನೀಡಿದೆ ಎಂಬ ತಮ್ಮ ಮನದಾಳದ ಆಳಲನ್ನು ನಮ್ಮುಂದೆ ಹೇಳಿಕೊಳ್ಳುವರು.

ಕೋಟೆಯಲ್ಲಿರುವ ದೇವಾಲಯಗಳು

ಊರಿಗೊಂದು ಆಂಜನೇಯನ ಗುಡಿಗಳಿರುವುದು ಸರ್ವ ಸಾಮಾನ್ಯವಾಗಿದೆ. ಹಾಗೆಯೇ ಪ್ರತಿ ಕೋಟೆಗೊಂದು ಆಂಜನೇಯನ ದೇಗುಲಗಳಿರುವುದು ವಿಶೇಷವೇನಲ್ಲ. ಈ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಎತ್ತರ ಸ್ಥಳದಲ್ಲಿದೆ. ಒಳಗೆ ಗರ್ಭಗೃಹ ಹಾಗೂ ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಆಂಜನೇಯನ ಉಬ್ಬುಶಿಲ್ಪವಿದೆ. ಸಭಾಮಂಟಪ ಈಗ ಗೋಚರಿಸದು. ಕೋಟೆಯ ನೈರುತ್ಯಕ್ಕೆ ನುಪ್ಪಿನಪ್ಪನ ಗುಡಿ ಇದೆ. ಇದು ಉತ್ತರಾಭಿಮುಖವಾಗಿದ್ದು, ಒಳಗಡೆ ಗದ್ದುಗೆಯನ್ನು ಹೊಂದಿದೆ. ಇದರ ಹತ್ತಿರದಲ್ಲಿಯೇ ದಾದಣ್ಣ ಮತ್ತು ರಂಗಣ್ಣರ ಚಿಕ್ಕ ಚಿಕ್ಕ ಗುಡಿಗಳಿವೆ. ಈ ಕೋಟೆಯ ಬೆಟ್ಟಕ್ಕೆ ಸಮಾನ ಎತ್ತರದಲ್ಲಿರುವ ಇನ್ನೊಂದರಲ್ಲಿ ಬಂಡಿ ಬಸಪ್ಪನ ದೇಗುಲವಿದೆ. ಉತ್ತರಾಭಿಮುಖವಾಗಿರುವ ಇದರಲ್ಲಿ ಗರ್ಭಗೃಹ, ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ನಂದಿಯ ಶಿಲ್ಪವಿದೆ. ಸಭಾಮಂಟಪದಲ್ಲಿ ವಿಜಯನಗರೋತ್ತರ ಕಾಲದ ೪ ಕಂಬಗಳಿವೆ. ಪ್ರತಿವರ್ಷವೂ ಇಲ್ಲಿ ಜಾತ್ರೆ ಜರುಗುತ್ತದೆ.

ಸಮೀಕ್ಷೆ

ಒಟ್ಟಿನಲ್ಲಿ ಬಂಡ್ರಿ ಕೋಟೆಯ ಹರಪನಹಳ್ಳಿ ಪಾಳೆಯಗಾರರ ಅವಧಿಯಲ್ಲಿ ನಿರ್ಮಾಣಗೊಂಡಿದ್ದು, ಆಗ ಮಹತ್ವದ ಪಾತ್ರವನ್ನು ವಹಿಸಿತ್ತು. ಹರಪನಹಳ್ಳಿ ಪಾಳೆಯಗಾರರ ಹಲವು ಸೈನಿಕ ನೆಲೆಗಳಲ್ಲಿ ಒಂದು. ಹರಪನಹಳ್ಳಿ ಪಾಳೆಯಗಾರರ ರಾಜಕೀಯ, ಆರ್ಥಿಕ, ಸಾಮಾಜಿಕ ಇತಿಹಾಸವನ್ನು ತಿಳಿಯಲು ಈ ಕೋಟೆಯ ಬಹು ಉಪಯುಕ್ತವಾಗಿದೆ.

ಟಿಪ್ಪಣಿಗಳು

೧. ಗಿರಿಜ, ಟಿ ೨೦೦೧. ದಾವಣಗೇರಿ ಜಿಲ್ಲಾ ದರ್ಶನ

೨. ಸದಾಶಿವಪ್ಪ, ಕು.ಬಾ. ೧೯೯೬. ಹರಪನಹಳ್ಳಿ ಪಾಳೆಯಗಾರರು, ಪು.೧೦೭.ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು

೩. ದೇವರಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧, ಪು.೪೭೪.ಹಂಪಿ: ಕನ್ನಡ ವಿಶ್ವವಿದ್ಯಾಲಯ

೪. ಸದಾಶಿವಪ್ಪ, ಕು.ಬಾ.೧೯೯೬. ಹರಪನಹಳ್ಳಿ ಪಾಳೆಯಗಾರರು, ಪು.೧೧೦. ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು

೫. ದೇವೀರಪ್ಪ, ಎಚ್‌.ಸಂ., ೧೯೯೪. ರಾಮನಾಥ ಚರಿತೆ ೨, ಪು.೩೭. ಮೈಸೂರು : ಮೈಸೂರು ವಿಶ್ವವಿದ್ಯಾಲಯ