ಹರಪನಹಳ್ಳಿಯ ಬಳ್ಳಾರಿಗೆ ನೈರುತ್ಯಕ್ಕೆ ೧೨೭ ಕಿ.ಮೀ. ಬೆಂಗಳೂರಿಗೆ ೩೧೪ ಕಿ.ಮೀ. ದೂರದಲ್ಲಿದೆ. ಈಗ ದಾವಣಗೆರೆ ಜಿಲ್ಲೆಗೆ ಸೇರಿದ ತಾಲೂಕು ಕೇಂದ್ರವಾಗಿದೆ. ಹರಪನಹಳ್ಳಿ ಪಾಳೆಯಗಾರರಿಂದ ಈ ಪ್ರದೇಶವು ಪ್ರಸಿದ್ಧಿಗೆ ಬಂದು ಕ್ರಿ.ಶ.೧೬ನೆಯ ಶತಮಾನದಿಂದ ಕ್ರಿ.ಶ.೧೯ ಶತಮಾನದವರೆಗೆ ಅಂದರೆ ಮುಂದೆ ಬ್ರಿಟಿಷರ ವಶವಾಗುವವರೆಗೂ ಹರಪನಹಳ್ಳಿ ಪಾಳೆಯಗಾರರ ಬಲಿಷ್ಠ ಆಡಳಿತ ಕೇಂದ್ರವಾಗಿತ್ತು. ಪಾಳೆಯಗಾರರೇ ಇಲ್ಲೊಂದು ಕೋಟೆಯೊಂದನ್ನು ಕಟ್ಟಿಕೊಂಡಿದ್ದರು.

ಇತಿಹಾಸ

ವಿಜಯನಗರ ಅರಸ ಸಂತತಿ ಆನೆಗೊಂದಿ ಮತ್ತು ಚಂದ್ರಗಿರಿ ನೆಲೆವೀಡುಗಳಿಂದ ಸುಮಾರು ಒಂದು ಶತಮಾನಕ್ಕೂ ಹೆಚ್ಚುಕಾಲ ರಾಜ್ಯ ಭಾರ ಮಾಡಿದರು. ಈ ಅವಧಿಯಲ್ಲಿ ವಿಜಯನಗರದ ಅರಸರು ಹೆಸರಿಗೆ ಮಾತ್ರ ಅರಸರಾಗಿದ್ದರು. ಇವರ ಸೇನೆಯಲ್ಲಿ ಸೇವೆ ಸಲ್ಲಿಸಿದ ದಳವಾಯಿಗಳು, ಸರದಾರರು, ಕೆಲಸದವರು ಚಿಕ್ಕ ಚಿಕ್ಕ ಸ್ವತಂತ್ರ ರಾಜ್ಯಗಳನ್ನು ಸ್ಥಾಪಿಸಿದರು. ಅಂಥವುಗಳಲ್ಲಿ ಬಳ್ಳಾರಿ, ಸಂಡೂರು, ಗುಡೇಕೋಟೆ, ಜರಿಮಲೆ ಮತ್ತು ಹರಪನಹಳ್ಳಿ ಈ ಐದು ರಾಜ್ಯಗಳು ಸೇರಿದ್ದವು. ಇವುಗಳಲ್ಲಿ ಹರಪನಹಳ್ಳಿ ಪಾಳೆಯಪಟ್ಟು ಪ್ರಮುಖವಾದುದು.

ಹರಪನಹಳ್ಳಿಯು ಮೊದಲು ಅಗ್ರಹಾರವಾಗಿದ್ದರೂ, ಪ್ರಸಿದ್ಧಿಗೆ ಬಂದದ್ದು ಪಾಳೆಯಗಾರರ ಅವಧಿಯಲ್ಲಿ. ಹರಪನಹಳ್ಳಿ ಸಂಸ್ಥಾನವನ್ನು ಆಳಿದ ಪಾಳೆಯಗಾರರಲ್ಲಿ ದಾದಾನಾಯಕ, ಓಬಣ್ಣನಾಯಕ, ರಂಗಣ್ಣನಾಯಕ, ಮುಮ್ಮಡಿ ಬಸಪ್ಪನಾಯಕ, ವೀರಮುಮ್ಮಡಿನಾಯಕ, ಮೊದಲ ಹಾಗೂ ಎರಡನೆಯ ಸೋಮಶೇಖರ ನಾಯಕ, ಎರಡನೇ ವೀರಬಸಪ್ಪ ನಾಯಕರುಗಳು ಪ್ರಮುಖರಾಗಿದ್ದರು.

ಈ ಪಾಳೆಯಗಾರರು ನೆರೆಹೊರೆಯ ರಾಜ್ಯಗಳಾದ ಜರಿಮಲೆ, ಗುಡೇಕೋಟೆ, ರಾಯದುರ್ಗ, ತರೀಕರೆ ಮತ್ತು ಸವಣೂರು ಇವುಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಇದಕ್ಕೆ ಪೂರಕವೆಂಬಂತೆ ಜರಿಮಲೆ, ಗುಡೇಕೋಟೆ ಮತ್ತು ತರೀಕೆರೆ ಪಾಳೆಯಗಾರರೊಂದಿಗೆ ವೈವಾಹಿಕ ಸಂಬಂಧಗಳು ಏರ್ಪಟ್ಟಿದ್ದವು.

ಹರಪನಹಳ್ಳಿಯವರು ಚಿತ್ರದುರ್ಗದ ಪಾಳೆಯಗಾರರೊಂದಿಗೆ ಆರಂಭದಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಹರಪನಹಳ್ಳಿ ದಾದನಾಯಕ ದುರ್ಗದ ತಿಮ್ಮಣ್ಣನಾಯಕರ ಮಗಳಾದ ಸಮತಟ್ಟಾದ ಸುಮಾರು ೩೦ ಏಕರೆ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಿದೆ. ಇದರ ಸುತ್ತಲೂ ಕಡಿದಾದ ಕಂದಕಗಳಿದ್ದವು. ಕೋಟೆಗೆ ಮಧ್ಯಮ ಗಾತ್ರದ ಕಲ್ಲು ಹಾಗೂ ಮಣ್ಣನ್ನು ಬಳಸಲಾಗಿದೆ. ಕೋಟೆ ಆಂಜನೇಯನ ಗುಡಿಯ ಬಳಿ ಇರುವುದೇ ಮುಖ್ಯ ಪ್ರವೇಶದ್ವಾರ. ಈಗ ಯಾವುದೇ ಅವಶೇಷಗಳು ಉಳಿದಿಲ್ಲ. ಸಾಮಾನ್ಯವಾಗಿ ಆಂಜನೇಯನ ದೇವಾಲಯಗಳು ಕೋಟೆಯ ಪ್ರವೇಶದ್ವಾರದ ಬಳಿಯೇ ಇರುತ್ತವೆ.

ಈ ಕೋಟೆಯನ್ನು ಸ್ಥಳೀಯರು ಎರಡು ಸುತ್ತಿನಕೋಟೆ ಎಂದು ಕರೆಯುತ್ತಾರೆ. ಇದಕ್ಕೆ ಪೂರಕವೆಂಬಂತೆ ಆ ಕೋಟೆ ಸುತ್ತುಗಳಿಗೆ ಇಟ್ಟಿರುವ ಹೆಸರುಗಳು ಇಂದಿಗೂ ರೂಢಿಯಲ್ಲಿವೆ. ಒಂದನೆಯದು ಹೊನ್ನವ್ವ ನಾಗತಿಯದ್ದಾದರೆ, ಎರಡನೆಯದು ಸಂಜೀವನಾಯಕನದು. ಹೊನ್ನವ್ವನಾಗತಿ ಹರಪನಹಳ್ಳಿಯ ಮೊದಲ ಪಾಳೆಯಗಾರನಾದ ದಾದಯ್ಯನಾಯಕನ ಪ್ರೀತಿಯ ಪತ್ನಿ. ಈಕೆ ಚಿತ್ರದುರ್ಗದ ತಿಮ್ಮಣ್ಣ ನಾಯಕನ ಮಗಳು. ಯುದ್ಧದಲ್ಲಿ ಸಹಾಯ ಮಾಡಿದ್ದಕ್ಕಾಗಿ ತಿಮ್ಮಣ್ಣನಾಯಕ ಮಗಳನ್ನು ದಾದಾನಾಯಕನಿಗೆ ಕೊಟ್ಟು ಮದುವೆ ಮಾಡಿದ್ದ. ಇವಳ ಅಕಾಲಿಕ ಮರಣ ಇವರಿಗೆ ತುಂಬಲಾರದ ಮಾನಸಿಕ ನಷ್ಟವಾಯಿತು. ಹಾಗಾಗಿ ಕೋಟೆಯ ಮೊದಲ ಸ್ತುತಿಗೆ ದಾದಯ್ಯನಾಯಕ ಅವಳ ಹೆಸರನ್ನೆ ಇಟ್ಟನೆಂಬುದು ಪ್ರತೀತಿ.

ಸಂಜೀವನಾಯಕ ಹರಪನಹಳ್ಳಿ ಸಂಸ್ಥಾನದ ಸೋಮಶೇಖರ ನಾಯಕನ ಸೇನೆಯಲ್ಲಿದ್ದನು. ಅರಸರ ಅಂಗರಕ್ಷಕ ಪಡೆಯ ಮುಖ್ಯಸ್ಥನು, ಪರಾಕ್ರಮಿಯು ಆದ ಸಂಜೀವನಾಯಕನು ಅನ್ಯ ಅರಸರು ಯುದ್ಧಕ್ಕೆ ಸೈನ್ಯದೊಂದಿಗೆ ಬಂದು ದಾಳಿ ಮಾಡಿದಾಗ ಸೈನ್ಯದ ಮೇಲೆ ಪ್ರತಿದಾಳಿ ಮಾಡಿ ಅವರನ್ನು ಹಿಮ್ಮೆಟ್ಟಿಸುತ್ತಿದ್ದನು. ಮೊದಲ ಸೋಮಶೇಖರ ನಾಯಕನು ಮಾಡಿದ ಅನೇಕ ಯುದ್ಧಗಳಲ್ಲಿ ಅವರಿಗೆ ನೆರಳಿನಂತೆ ಇದ್ದು ಯುದ್ಧಮಾಡಿ ಜಯ ಸಂಪಾದಿಸಿ ಕೊಟ್ಟಿದ್ದನು. ಸಂಜೀವನಾಯಕನು ಬೇಟೆಗಾಗಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಚಿತ್ರದುರ್ಗದ ಸೈನಿಕರು ಬಂದು ಕಲ್ಲಾಗಿನ ದುರುಗವ್ವನ ಗುಡಿಯ ತಗ್ಗುಪ್ರದೇಶದಲ್ಲಿ ಅಡಗಿದ್ದು, ಸಂಜೆ ಹೊತ್ತಿಗೆ ಕೂಲಹಳ್ಳಿ ಬಯಲಿಗೆ ಬಂದು ದಂಗೆ ಎಬ್ಬಿಸಿದರು. ಆಗ ಸಂಜೀವ ನಾಯಕನ ಮಡದಿ ವೀರಗಚ್ಛೆ ಹಾಕಿ ಶತ್ರು ಸೈನ್ಯವನ್ನು ಎದುರಿಸಿದಳು. ಅವಳ ಜೊತೆಯಲ್ಲಿ ಕೆಲ ಮಹಿಳಾ ವೀರಮಾತೆಯರೂ ಇದ್ದರು. ಈ ಯುದ್ಧದಲ್ಲಿ ಸಂಜೀನಾಯಕನ ಮಡದಿ ಸಾವನ್ನಪ್ಪಿದಳು. ಬೇಟೆಯಿಂದ ಹಿಂದಿರುಗಿದ ಸಂಜೀನಾಯಕ ತನ್ನ ಪೌಜುನೊಂದಿಗೆ ಯುದ್ಧ ಆರಂಭಿಸಿ ಹೋರಾಟ ಮಾಡಿ ವೀರಾಗ್ರಣಿ. ಹಾಗಾಗಿ ಈ ಸಂಜೀವ ನಾಯಕನ ಹೆಸರನ್ನು ಈ ಕೋಟೆಯ ಎರಡನೆಯ ಸುತ್ತಿಗೆ ಇಡಲಾಯಿತೆಂಬುದು ಇಲ್ಲಿಯ ಜನರಲ್ಲಿರುವ ನಂಬಿಕೆ.

ಪ್ರಸ್ತುತ ಹರಕಲು ಮುರುಕಲು ಗೋಡೆಯ ಅವಶೇಷಗಳು ಮಾತ್ರ ಅಲ್ಲಲ್ಲಿ ಗೋಚರಿಸುತ್ತವೆ. ಕೋಟೆಯ ಆಗ್ನೇಯ ದಿಕ್ಕಿನಲ್ಲಿ ಕೊತ್ತಳವಿರುವುದು ಇನ್ನುಳಿದ ಕೊತ್ತಳಗಳು ಸಂಪೂರ್ಣ ನಾಶವಾಗಿದೆ. ಕೋಟೆಯ ಮಧ್ಯಭಾಗದಲ್ಲಿ ವಿಶಾಲವಾದ ಬಯಲಿದೆ. ಇಲ್ಲಿ ಸೈನಿಕರಿಗೆ ತರಬೇತಿ ನೀಡಲಾಗುತ್ತಿತ್ತೆಂದು, ಹಾಗೂ ಇಲ್ಲಿಂದ ಪಶ್ಚಿಮಕ್ಕೆ ಸೈನಿಕರ ವಸತಿಗಳಿದ್ದವೆಂದು ಸ್ಥಳೀಯ ಮೂಲಗಳು ತಿಳಿಸುತ್ತವೆ. ಇದಕ್ಕೆ ಪೂರಕವೆಂಬಂತೆ ವಸತಿಗೃಹಗಳ ತಳಪಾಯಗಳು ಇಲ್ಲಿ ಕಂಡುಬಂದಿವೆ. ಇತ್ತೀಚಿಗೆ ಇದರ ಪಕ್ಕದಲ್ಲಿ ಪದವಿ ಕಾಲೇಜನ್ನು ಕಟ್ಟಲಾಗಿದೆ.

ಡಾ. ಎಸ್ ಕೆ. ಜೋಶಿಯವರು ಈ ಕೋಟೆಯ ವಿನ್ಯಾಸ, ರಚನಾ ಕ್ರಮ ಹಾಗೂ ಅವಶ್ಯಕತೆಗಳಲ್ಲಿ ಹಿಂದೂ ಪದ್ಧತಿಯಿದ್ದು ಇದನ್ನು ಹಿಂದೂ ವಾಸ್ತುಕೋಟೆ ಎಂದಿದ್ದಾರೆ. ಈ ಕೋಟೆಯನ್ನು ಉಳಿದಿರುವ ಏಕೈಕ ಪಾಳೆಯಗಾರರ ವಾಸ್ತುಕೃತಿ ಎಂದರೆ ಆಂಜನೇಯ ದೇವಾಲಯ. ಇದು ದಕ್ಷಿಣಾಭಿಮುಖವಾಗಿದ್ದು, ಗರ್ಭಗೃಹ ಹಾಗೂ ಸಭಾಮಂಟಪಗಳನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಆಂಜನೇಯನ ಉಬ್ಬುಶಿಲ್ಪವಿದೆ. ಇಂದಿಗೂ ಕೂಡ ಕೋಟೆ ಆಂಜನೇಯನೆಂದೇ ಆರಾಧನೆಗೊಳ್ಳುತ್ತಿದೆ. ಇಲ್ಲಿ ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಜಾತ್ರೆ ಜರುಗುತ್ತದೆ.

ಟಿಪ್ಪಣಿಗಳು

೧. ಪುಟ್ಟಣ್ಣ, ಎಂ.ಎಸ್.೧೯೨೪. ಚಿತ್ರದುರ್ಗ ಪಾಳೆಗಾರರು, ಪು.೧೭. ಬೆಂಗಳೂರು

೨. ಅದೇ, ಪು.೨೭

೩. ಅದೇ, ಪು.೪೯೪.

೪. ಶಾಮಶಾಸ್ತ್ರಿ, ಆರ್.ಸಂ., ೧೯೭೩. ಕೆಳಿದಿನೃಪವಿಜಯ ಲಿಂಗಣ್ಣ ಕವಿ ಮೈಸೂರು ಮೈಸೂರು ವಿಶ್ವವಿದ್ಯಾಲಯ

೫. ಗೋವಿಂದಚಾರ್ಯ ಚಿಕ್ಕನೂರ. ಅಪ್ರಕಟಿತ ಹಸ್ತಪ್ರತಿ

೬. ಜೋಶಿ, ಎಸ್.ಕೆ.೨೦೦. ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ, ಸೂರ್ಯಕೀರ್ತಿ ಸಂ.ಕೃಷ್ಣಮೂರ್ತಿ ಪಿ.ವಿ, ಮತ್ತು ಕೆ.ವಸಂತಲಕ್ಷ್ಮಿ, ಪು. ೧೪೮ ೫೧ ಬೆಂಗಳೂರು ಸೂರ್ಯನಾಧ ಕಾಮತ್ ಅಭಿನಂದನಾ ಸಮಿತಿ

೭. ಸದಾಶಿವಪ್ಪ, ಕುಂ.ಬಾ.೧೯೯೬. ಹರಪನಹಳ್ಳಿ ಪಾಳೆಯಗಾರರು, ಪು.೧೩. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು

೮. ಕರ್ನಾಟಕದ ಪ್ರಾಚೀನ ಕೋಟೆಗಳು ಮತ್ತು ಇತಿಹಾಸ, ಪೂರ್ವೋಕ್ತ. ಪು. ೧೪೮ ೫೧