ಹರಪನಹಳ್ಳಿ ತಾಲೂಕಿನಲ್ಲಿರುವ ಈ ಗ್ರಾಮವು ಹರಪನಹಳ್ಳಿಯಿಂದ ನೈರುತ್ಯಕ್ಕೆ ೨೮ ಕಿ.ಮೀ ದೂರದಲ್ಲಿದೆ. ಪ್ರಾಚೀನ ಮಾನವನ ಆವಾಸಸ್ಥಾನವಾದ ಹಲುವಾಗಿಲನ್ನು ಕಲ್ಯಾಣ ಚಾಳುಕ್ಯರು, ಯಾದವರು, ವಿಜಯನಗರದ ಅರಸರು, ಹರಪನಹಳ್ಳಿ ಪಾಳೆಯಗಾರರು ಇಲ್ಲಿ ಆಳ್ವಿಕೆ ನಡೆಸಿದಂತೆ ಶಾಸನ ಹಾಗೂ ಸಾಹಿತ್ಯಾಧಾರಗಳು ದೃಢಪಡಿಸುತ್ತವೆ.

ನೊಳಂಬವಾಡಿ ೩೩ ಸಾವಿರ, ಕದಂಬಳಿಕೆ ಸಾವಿರ, ಕೋಗಳಿ ಐದುನೂರು ಇದರಲ್ಲಿ ಉಚ್ಚಂಗಿ ೩೦ ಸೇರುತ್ತದೆ. ಉಚ್ಚಂಗಿ ಮೂವತ್ತರಲ್ಲಿ ಹಲುಬಾಗಿಲು ೧೨ ಒಂದು. ಈ ಹಲುಬಾಗಿಲು ಗ್ರಾಮವು ಹೆಚ್ಚಾಗಿ ಉಚ್ಚಂಗಿ ಮೂವತ್ತರ ಪಟ್ಟಣಕ್ಕೆ ಪ್ರವೇಶದ್ವಾರವಾಗಿತ್ತು. ಹಲುವಾಗಿಲು ಬಳಿಯ ತುಂಗಭದ್ರಾ ನದಿಯ ದಂಡೆಯಲ್ಲಿ ಕಟ್ಟಿದ ಪ್ರವೇಶದ್ವಾರಕ್ಕೆ ಆನೆಯ ದಂತಗಳಿಂದ ಕೊರೆದು ಮಾಡಿದ ಬಾಗಿಲುಗಳಿದ್ದ ಕಾರಣದಿಂದಲೇ ಸಂಸ್ಕೃತ ಭಾಷೆಯಲ್ಲಿ ಈ ಹಳ್ಳಿಗೆ ದಂತದ್ವಾರವೆಂದು ಹೆಸರಿಟ್ಟರು. ಅದೇ ಹಲುವಾಗಿಲು ಎಂಬುದಾಗಿ ಚಿಕ್ಕೇರೂರು ಗೋವಿಂದಚಾರ್ಯರು ಪ್ರಸ್ತಾಪಿಸಿರುವರು.

ಈ ಗ್ರಾಮದ ವಾಯುವ್ಯ ದಿಕ್ಕಿಗೆ ತುಂಗಭದ್ರಾ ನದಿ ಇದೆ. ಈ ನದಿಗೆ ಹೊಂದಿಕೊಂಡು ಪೂರ್ವಕ್ಕೆ ಹಬ್ಬಿರುವ ಪರ್ವತದ ಸಾಲು ಇದೆ. ಈ ಪರ್ವತದ ಸಾಲಿನಲ್ಲಿಯೇ ಕೋಟೆ ಕಂಡುಬರುತ್ತದೆ. ಪೂರ್ವಪಶ್ಚಿಮವಾಗಿ ಹಬ್ಬಿರುವ ಈ ಬೆಟ್ಟವನ್ನು ಬಳಸಿಕೊಂಡು ಕೋಟೆ ನಿರ್ಮಿಸಲಾಗಿದೆ. ಪಶ್ಚಿಮ ದಿಕ್ಕಿಗೆ ನದಿ ಹರಿಯುವುದರಿಂದ ಶತ್ರುಗಳಿಗೆ ಈ ಕೋಟೆ ತಲುಪಲು ಕಷ್ಟಸಾಧ್ಯ. ಬೆಟ್ಟದ ದಕ್ಷಿಣ ಹಾಗೂ ಉತ್ತರ ಭಾಗಗಳಲ್ಲಿ ಅಲ್ಲಲ್ಲಿ ಕೋಟೆ ಗೋಡೆ ಕಂಡುಬರುತ್ತದೆ. ಒಳಭಾಗದಲ್ಲಿ ಕೊತ್ತಳಗಳಿದ್ದ ಅವಶೇಷಗಳಿವೆ. ಪ್ರಾಯಶಃ ಹಲುವಾಗಿಲು ಗ್ರಾಮದ ದಕ್ಷಿಣಕ್ಕಿರುವುದರಿಂದ ಕೋಟೆ ದ್ವಾರವೂ ಸಹ ಈ ಭಾಗಕ್ಕೆ ಇದ್ದಿರಬಹುದು. ಪೂರ್ಣ ಶಿಥಿಲಾವಸ್ಥೆಯಲ್ಲಿರುವ ಕೋಟೆಯನ್ನು ಮಧ್ಯಮಗಾತ್ರದ ಕಣಶಿಲೆಯಿಂದ ಕಟ್ಟಲಾಗಿದೆ. ಕ್ರಿ.ಶ.೧೩ನೆಯ ಶತಮಾನದ ವೀರಗಲ್ಲಿನಲ್ಲಿ ಹಲುವಾಗಿಲು ಬಡಗಮಟ್ಟಿ ಪುಣೋಜನು ಕದಿರು ಮಿಡಿಯ ಕಾಳಗದಲ್ಲಿ ಸತ್ತ ಉಲ್ಲೇಖವಿದೆ. ಬಡಗ ಎಂದರೆ ಉತ್ತರ. ಮಟ್ಟಿ ಎಂದರೆ ಎತ್ತರ, ದಿನ್ನೆ ಪ್ರದೇಶವೆಂದು ಅರ್ಥವಾಗುತ್ತದೆ. ಅಂದರೆ ಹಲುವಾಗಿಲು ಕೋಟೆ ಪ್ರದೇಶವನ್ನು ಈ ವೀರಗಲ್ಲು ಗುರುತಿಸುತ್ತದೆ. ಯಾದವ ರಾಮಚಂದ್ರರಾಯನು ಹೊಯ್ಸಳರ ರಾಜ್ಯವನ್ನು ಗೆದ್ದು ಮುಸ್ಲಿಂರಿಂದ ಈ ಭೂಮಿಯನ್ನು ಕಾಪಾಡಿದಂತೆ ಇಲ್ಲಿಯ ಕಲ್ಲೇಶ್ವರ ದೇವಾಲಯದ ಶಾಸನವು ತಿಳಿಸುತ್ತದೆ. ಯಾದವ ರಾಮಚಂದ್ರರಾಯನ ಈ ರಾಜ್ಯದಲ್ಲಿ ರಕ್ಷಣೆಗಾಗಿ ಹೋರಾಡಿ ಸೆಜೆಯ ಮಲ್ಲಯ್ಯನನ್ನು ಉಲ್ಲೇಖಿಸುವ ವೀರಗಲ್ಲು ಕಲ್ಲೇಶ್ವರ ದೇವಾಲಯದ ಬಳಿ ಇದೆ. ಶಾಸನಗಳನ್ನು ಗಮನಿಸಲಾಗಿ ಇಲ್ಲಿಯ ಕೋಟೆ ೧೨ ರಿಂದ ೧೩ನೇ ಶತಮಾನದಲ್ಲಿಯೇ ಅಸ್ತಿತ್ವದಲ್ಲಿರಬಹುದಾದದ್ದು ಎಂದು ತಿಳಿದುಬರುತ್ತದೆ. ಕೋಟೆಯ ಮುಂದಣ ಪ್ರದೇಶ ಯುದ್ಧಭೂಮಿಯಾಗಿತ್ತು. ಏಕೆಂದರೆ, ಸ್ಥಳವು ವಿಶಾಲವಾಗಿದ್ದು, ಈ ನೆಲದಲ್ಲಿ ಮಾನವನ ಅಸ್ಥಿಪಂಜರಗಳು ಕಂಡುಬಂದಿದೆ. ಸದ್ಯ ಕೋಟೆ ಶಿಥಿಲಾವಸ್ಥೆಯನ್ನು ತಲುಪಿದೆ. ವಿಜಯನಗರೋತ್ತರರ ಕಾಲದಲ್ಲಿ ನಿರ್ಮಾಣವಾಗಿದ್ದರೆ ಬೆಟ್ಟದ ಮೇಲಿರುವುದರಿಂದ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಎರಡನೆಯದಾಗಿ ವಿಜಯನಗರ ಪೂರ್ವದ ಕೋಟೆಗಳಾದ ದೊರವಡಿ ಹಾಗೂ ಹೊಸಮಲೆದುರ್ಗಗಳು ಹಲುವಾಗಿಲು ಕೋಟೆಯ ಅವಸ್ಥೆಯನ್ನೇ ತಲುಪಿವೆ. ಈ ಎಲ್ಲಾ ಕಾರಣಗಳಿಂದ ಯಾದವ ರಾಮಚಂದ್ರರಾಯನು ಹೊಯ್ಸಳರನ್ನು ಸೋಲಿಸಿ, ತನ್ನ ರಾಜ್ಯವನ್ನು ಹಲುವಾಗಿಲುವರೆಗೆ ವಿಸ್ತರಿಸಿದನು. ತನ್ನ ಅವಧಿಯನ್ನು ಶತ್ರುಗಳಿಂದ ರಾಜ್ಯದ ಗಡಿಯನ್ನು ರಕ್ಷಿಸಲು ಹಲುವಾಗಿಲು ಕೋಟೆ ನಿರ್ಮಾಣ ಮಾಡಿರಬಹುದು.

ಕೋಟೆಯ ದಕ್ಷಿಣದ ಭೂಭಾಗದಲ್ಲಿ ನೂತನ ಶಿಲಾಯುಗದ ಅವಶೇಷಗಳು ದೊರೆತಿರುವುದರಿಂದ ಇಲ್ಲಿಯ ಪ್ರಾಚೀನತೆಯ ಅರಿವಾಗುತ್ತದೆ. ಇತ್ತೀಚಿಗೆ ಕ್ರಿ.ಶ. ೮ ನೆಯ ಶತಮಾನದ ಶಾಸನವು ಈ ಪ್ರದೇಶದಲ್ಲೇ ದೊರೆತಿದೆ. ಗ್ರಾಮದಲ್ಲಿ ಕಲ್ಲೇಶ್ವರ ಮತ್ತು ಆಂಜನೇಯ ದೇವಾಲಯಗಳಿವೆ. ಕಲ್ಲೇಶ್ವರ ದೇವಾಲಯವು ಕಲ್ಯಾಣ ಚಾಳುಕ್ಯರ ಕಾಲದ್ದು. ಈ ದೇವಾಲಯಕ್ಕೆ ೧೩ ನೇ ಶತಮಾನದಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ಯಾದವ ರಾಮಚಂದ್ರರಾಯನ ಅಧಪತ್ಯದಲ್ಲಿ ನಾಚರಸನು ಈ ದೇವಾಲಯಕ್ಕೆ ದಾನ ಬಿಟ್ಟಂತೆ ತಿಳಿಸುತ್ತದೆ. ವಿಜಯನಗರದ ಬುಕ್ಕರಾಯನ ಶಾಸನವು ಈ ಗ್ರಾಮದ ಆಂಜನೇಯ ದೇವಾಲಯದ ಬಳಿ ಇದೆ. ಕೋಟೆಯ ಸಂಪೂರ್ಣ ನಾಶವಾಗಿರುವುದರಿಂದ ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಹೀಗಾಗಿ ಇದು ಐತಿಹಾಸಿಕ ಮಹತ್ವದ ಸ್ಥಳ ಎಂಬುದು ಸ್ಪಷ್ಟ.

ಟಿಪ್ಪಣಿಗಳು

೧. ಗೋವಿಂದಚಾರ್ಯ ಚಿಕ್ಕರೂರು. ಅಪ್ರಕಟಿತ ಹಸ್ತಪ್ರತಿ

೨. ದೇವಕೊಂಡಾರೆಡ್ಡಿ ಮತ್ತು ಇತರರು. ೧೯೯೮. ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ಬಳ್ಳಾರಿ ಜಿಲ್ಲೆ ೧ ಪು. ೫೨೩. ಹಂಪಿ ಕನ್ನಡ ವಿಶ್ವವಿದ್ಯಾಲಯ

೩. ಅದೇ, ಪು. ೫೧೯

೪. ಅದೇ, ಪು. ೫೧೭

೫. ಅದೇ, ಪು.೫೧೯

೬. ಅದೇ, ಪು. ೫೨೧

೭. ಅದೇ, ಪು.೫೨೨