ಇದಕ್ಕೆ ಹಳ್ಳಾಟ, ಗಜಗೆ ಆಟ ಎಂದೂ ಹೆಸರಿದೆ. ಐದು ಹರಳು ಹಾಗೂ ಸಮಸಂಖ್ಯೆಯ ಆಟಗಾರರು ಬೇಕು, ನಾಲ್ಕು ಅಥವಾ ಆರು ಆಟಗಾರರು ಸಾಕು. ಎರಡು ಪಕ್ಷ. ಬಲದಿಂದ ಎಡಕ್ಕೆ ಆಟ ಸಾಗಬೇಕು. ಹರಳು ಹೆಕ್ಕುವಾಗ ನಮ್ಮ ಕೈ ಇನ್ನೊಂದು ಹರಳಿಗೆ ತಾಗಬಾರದು. ಮೇಲೆ ಹಾರಿಸಿದ ಹರಳು ನೆಲಕ್ಕೆ ಬೀಳುವದರೊಳಗೆ ಹಿಡಿಯಬೇಕು. ಮೊದಲು ಆಟ ಮುಗಿಸಿದವರು ಎದುರು ಪಕ್ಷದ ಮೇಲೆ ಹಂಡಿ ಮಾಡಿದಂತೆ. ಆಟದ ಪ್ರತಿಯೊಂದು ಹಂತವೂ ಒಂದೊಂದು ತೆರ. ಪ್ರತಿಯೊಂದಕ್ಕೂ ಒಂದೊಂದು ಹೆಸರು. ಪ್ರತಿ ಹಂತದಲ್ಲಿಯೂ ಆಟವನ್ನು ಆರು ಸಾರೆ ಆಡುವರು, ಆರನೆಯ ಬಾರಿಗೆ ತಪ್ಪಿದರೆ ಆಟ ಮುಂದುವರಿಸಬಹುದು. ಕೆಲವು ಆರಕ್ಕಿಂತ ಹೆಚ್ಚು ಬಾರಿ ಆಡುವ ಆಟಗಳೂ ಇವೆ. ನೆಲದ ಮೇಲೆ ಎದುರು ಬದುರಾಗಿ ಕುಳಿತು ಆಡುವರು.

ದೋಸೆ ಅಥವಾ ಅಚ್ಚು :

ಹರಳುಗಳನ್ನೆಲ್ಲ ಅಂಗೈಯಲ್ಲಿಟ್ಟು ತುಸು ಮೇಲಕ್ಕೆ ಹಾರಿಸಿ ಬೆಂಗೈಮೇಲೆ ಹಿಡಿಯಬೇಕು. ಹೀಗೆ ಒಮ್ಮೆ ಹಿಡಿದರೆ ದೋಸೆ ಒಂದು ಎನ್ನಬೇಕು. ಹೀಗೆ ದೋಸೆ ಒಂದು ದೋಸೆ ಎರಡು ಎನ್ನಬೇಕು ಹರಳು ಕೆಳಗೆ ಬಿದ್ದರೆ ಔಟು.

ಒಂದನೆಯ ಗಿಲ್ಲಿ :

ನಾಲ್ಕು ಹರಳುಗಳನ್ನು ಮುಷ್ಟಿಯೊಳಗಿಟ್ಟು ಒಂದನ್ನು ಹೆಬ್ಬೆರಳು, ತೋರ ಬೆರಳುಗಳ ನಡುವೆ ಇಟ್ಟು ಅದನ್ನು ತುಸು ಎತ್ತರಕ್ಕೆ ಹಾರಿಸಿ, ತಕ್ಷಣ ಮುಷ್ಟಿಯ ಹರಳುಗಳನ್ನು ನೆಲದ ಮೇಲೆ ಬಿಟ್ಟು ಈಗಾಗಲೇ ಮೇಲೆ ಹಾರಿಸಿದ್ದ ಹರಳನ್ನು ಹಿಡಿಯಬೇಕು. ಮತ್ತೆ ಕೈಯಲ್ಲಿರುವ ಹರಳನ್ನು ಮೇಲೆ ಹಾರಿಸಿ ಕೆಳಗಿದ್ದ ಒಂದು ಹರಳನ್ನು ಎತ್ತಿ ಮೇಲೆ ಹಾರಿಸಿದ ಹರಳನ್ನು ಹಿಡಿಯಬೇಕು. ಎತ್ತಿದ ಹರಳನ್ನು ಎಡಗೈಯಲ್ಲಿಟ್ಟುಕೊಂಡು ಇನ್ನೊಂದು ಎತ್ತಲು ಮೇಲಿನಂತೆ ಆಡಬೇಕು. ಹೀಗೆ ಕೆಳಗಿದ್ದ ನಾಲ್ಕೂ ಹರಳನ್ನು ಎತ್ತಿಕೊಂಡ ಮೇಲೆ ಒಂದು ಗಿಲ್ಲಿ ಮುಗಿಯಿತು. ಹೀಗೆ ಆರು ಸಾರೆ ಆಡಿದರೆ ಒಂದನೆಯ ಗಿಲ್ಲಿ ಮುಗಿಯಿತು.

ಎರಡನೆಯ ಗಿಲ್ಲಿ :

ಒಂದನೆಯ ಗಿಲ್ಲಿಯಂತೆ ಒಂದು ಹರಳು ಮೇಲೆ ಹಾರಿಸಿ ನಾಲ್ಕು ಹರಳು ಕೆಳಗೆ ಬಿಡಬೇಕು. ಇಲ್ಲಿ ಎರಡೆರಡು ಹರಳುಗಳನ್ನು ಒಮ್ಮೆಲೆ ಎತ್ತಬೇಕು. ಎತ್ತಿದ ಹರಳನ್ನು ಒಂದೆಡೆ ಇಟ್ಟು,  ಉಳಿದೆರಡು ಹರಳುಗಳನ್ನು ಎತ್ತಬೇಕು. ಹೀಗೆ ಆರು ಬಾರಿ ಹರಳು ಚೆಲ್ಲಿ ಎರಡೆರಡರಂತೆ ಎತ್ತಬೇಕು.

ಮೂರನೆಯ ಗಿಲ್ಲಿ:

ಹರಳು ಚೆಲ್ಲುವದು ಮೇಲಿನಂತೆ. ಇಲ್ಲಿ ಒಮ್ಮೆ ಮೂರು, ಇನ್ನೊಮ್ಮೆ ಒಂದು ಹರಳೆತ್ತಿಕೊಳ್ಳುತ್ತ ಆರು ಸಾರೆ ಆಡಬೇಕು.

ನಾಲ್ಕನೆಯ ಗಿಲ್ಲಿ :

ಮೇಲಿನಂತೆ ಚೆಲ್ಲಿ ಒಮ್ಮೆಲೇ ನಾಲ್ಕೂ ಹರಳುಗಳನ್ನು ಎತ್ತಿಕೊಳ್ಳುತ್ತ ಆಡುವದು.

ಹತ್ತರ ದೋಸೆ ಅಥವಾ ಅಚ್ಚು :

ಮೊದಲನೆಯ ದೋಸೆಯಂತೆ ಆದರೆ ಅದೇ ರೀತಿ ಹನ್ನೊಂದು ಸಾರೆ ಆಡಬೇಕು. ಕೊನೆಯ ಆಟ ಹೋದರೆ ತಪ್ಪಲ್ಲ. ದೋಸೆ ಬದಲಿಗೆ ಈ ಹಂತದಲ್ಲಿ ಗೆರ್ಸಿ ಆಡುತ್ತಾರೆ. ಇದರಲ್ಲಿ ಎರಡೂ ಕೈ ಬೇಕು. ದೋಸೆಯಂತೆ ಆಡಿ ಎಡಗೈಯನ್ನು ಅನಿಸಿ ಹಿಡಿಯುತ್ತಾರೆ. ಎಡಗೈ ಇದ್ದ ಸ್ಥಿತಿಯಲ್ಲಿಯೇ ಇರುತ್ತದೆ. ಹರಳು ಒಮ್ಮೆ ಬೊಗಸೆಯಲ್ಲಿ ಇನ್ನೊಮ್ಮೆ ಬೆಂಗಯ ಮೇಲೆ ಬೀಳುತ್ತದೆ. ಆರು ಸಾರೆ ಆಟ.

ಅಪ್ಪಪ್ಪ ರಾಣಿ:

ಎಲ್ಲ ಹರಳುಗಳನ್ನು ಮೇಲಕ್ಕೆ ಹಾರಿಸಿ ತುದಿ ಬೆರಳಿನಿಂದ ನೆಲಮುಟ್ಟಿ ಮೇಲಕ್ಕೆ ಹಾರಿಸಿದ ಹರಳನ್ನು ಅವು ನೆಲಮುಟ್ಟುವ ಮೊದಲೇ ಹಿಡಿಯುವದು. ಹೀಗೆ ಒಮ್ಮೆ ಆಡಿದರೆ ಅಪ್ಪಪ್ಪ ರಾಣೊ. ಮುಂದೆ ಇದೇ ರೀತಿ ಅಡಿ ಈ ಶಬ್ದಮಾಲೆಯ ಶಬ್ದಗಳಿಂದ ಎಣಿಸಬೇಕು.

ಅಪ್ಪಪ್ಪ ರಾಣಿ
ಕಲ್ಬು ಜಾಣಿ
ಕಂಚ್ನ ತಟ್ಟೆ
ಕಾಶ್ಮೀ(ರ್) ದಾರಾ
ಅಣ್ಬೈಲ ಅತ್ಗೆ
ಆಣ್ಬೈಲ ಆರ.

ಇಟ್ಟುಗಂಬಾ:

ಐದು ಅಥವಾ ಮೂರು ಹರಳುಗಳನ್ನು ಎತ್ತಿಕೊಂಡು ನಾಲ್ಕು ಅಥವಾ ಎರಡು ಹರಳುಗಳನ್ನು ಮುಷ್ಟಿಯಲ್ಲಿಟ್ಟುಕೊಂಡು ಒಂದನ್ನು ತೋರ್‌ಬೆರಳು ಮತ್ತು ಹೆಬ್ಬೆರಳಗಳ ನಡುವೆ ಹಿಡಿದು ಮೇಲಕ್ಕೆ ಹಾರಿಸಿ ಉಳಿದ ಹರಳುಗಳನ್ನು ಕೆಳಗೆ ಬಿಡಬೇಕು. ಹಾರಿದ ಹರಳು ಕೆಳಗೆ ಬರುವುದರೊಳಗೆ ಹಿಡಿದು ಮೇಲೆ ಹಾರಿಸಿ ಕೆಳಗಿದ್ದ ಹರಳುಗಳನ್ನು ಬಾಚಿ, ಅಲ್ಲಿಯೇ ಇಟ್ಟು ಮೇಲಿನಿಂದ ಬರುತ್ತಿರುವ ಹರಳನ್ನು ಹಿಡಿಯಬೆಕು. ಆಗ ಒಂದು ಭಾಗ ಮುಗಿಯಿತು. ಇದೇ ರೀತಿ ಆಟ ಮುಂದುವರಿಸಿ ಪ್ರತಿಭಾಗ ಮುಗಿದೊಡನೆ ಕೆಳಗಿನಂತೆ ಅನುಕ್ರಮವಾಗಿ ಎಣಿಸಬೇಕು.

ಇಟ್ಟುಗಂಬ ಒಂದು
ಸೃಷ್ಟಿನೆ (ಗೆ) ರಡು ಬಟ್ಟು
ಬಟ್ಟಾವಳಿ ಮೂರು
ಜಾಯ್‌ಕಾಯ್‌ನಾಕು
ಚಿಕ್ಕ ನಾಟಕಯ್ದು
(ಚಿಕ್ಕ ನಡ್ಕಯ್ದು)
ಕುಸ್ನ ಕುಪ್ಪಾರು

ಕಳ್ಳಾ ಒಂದು :

ಆಡುವವರು ಎದುರು ಪಕ್ಷದವರ ಹತ್ತರ ‘ಬಿಡುವದೋ ಕಟ್ಟುವದೋ” ಎಂದು ಪ್ರಶ್ನಿಸುತ್ತಾರೆ. ಬಿಡಬೇಕು ಎಂದರೆ ಒಂದೊಂದೇ ಹರಳನ್ನು ಕೆಳಗೆ ಬಿಡುತ್ತಾ ಇನ್ನೊಂದನ್ನು ಹಿಡಿಯಬೆಕು. ಕುಟ್ಟುವುದಾದರೆ ಬಿಡುವ ಹರಳನ್ನು ಒಮ್ಮೆ ಕುಟ್ಟಿ ಬಿಡಬೆಕು.

ಕೈಯಲ್ಲಿಯ ಮೂರು ಹರಳುಗಳಲ್ಲಿ ಒಂದನ್ನು ಮೇಲೆ ಹಾರಿಸಿ,ಕ ಇನ್ನೊಂದನ್ನು ಕೆಳಗೆ ಬಿಡಬೇಕು. ಕೈಯಲ್ಲಿದ್ದ ಹಾಗೂ ಮೇಲಿಂದ ಕೆಳಗೆ ಬೀಳುತ್ತಿರುವ ಹರಳು ಹಿಡಿಯಬೆಕು. ಮತ್ತೆ ಒಂದು ಹರಳು ಮೇಲೆ ಹಾರಿಸಿ ಕೆಳಗಿನ ಹರಳನ್ನು ಎತ್ತುತ್ತ ಕೈಯಲ್ಲಿರುವ ಹರಳನ್ನು ಇನ್ನೊಂದು ಬದಿಯಿಂದ ಬಿಡಬೆಕು ಹಾಗೂ ಮೇಲಿನ ಹರಳು ಹಿಡಿಯಬೆಕು. ಆಗ ಎರಡೇ ಹರಳಿನಿಂದ ಆಡುತ್ತಿರುವಂತೆ ಭಾಸವಾಗುತ್ತದೆ. ಆಡವಾಗ ಆಟದ ಪ್ರತಿಭಾಗವನ್ನು ಮುಗಿಸುತ್ತ ಕೆಳಗಿನಂತೆ ಎನಿಸಬೇಕು:

ಕಳ್ಳಾ ಒಂದು
ಸುಳ್ಳಾ ಎರಡು
ಕಳ್ಳಾ ಮೂರು
ಸುಳ್ಳಾ ನಾಲ್ಕು
ಕಳ್ಳಾ ಅಯ್ದು
ಸುಳ್ಳಾ ಆರು

ಬೋರೆಗಂಬಾ :

ಎದುರಾಳಿಯ ಹತ್ತರ ಮುಚ್ಚೊ? ತೆರೆದೊ? ಕೇಳಬೆಕು. ಮುಚ್ವು ಎಂದರೆ ನೆಲದ ಮೇಲೆ ಅಂಗೈ ಕವಚಿ ಅದರಲ್ಲಿ ಎರಡು ಹರಳನ್ನು ಮುಚ್ಚಬೇಕು. ತೋರಿಸು ಎಂದರೆ ಬಲಗೈ ಕ್ರಿಯೆಗನುಗುಣವಾಗಿ ಎಡಗೈಯಿಂದಲೂ ಎತ್ತಿ ಇಡುತ್ತಿರಬೆಕು. ‘ಇಟ್ಟುಗಂಬ’ ಆಡಿದಂತೆ ಕೆಳಗಿನಂತೆ ಎಣಿಸಬೇಕು.

ಬೋರೆಗಂಬಾ ಒಂದು
ಹೀರೆನೆರಡು ಗಾಯಿ
ಮೂರು ಬೋರೆಗಂಬಾ
ನಾಲ್ಕು ಹೀರೆ ಕಾಯಿ
ಆಯ್ದು ಬೋರೆಗಂಬಾ
ಆರು ಹೀರೆಕಾಯಿ

ಅಲ್ಕು ಮಿಲ್ಕು ಒಂದು

ಆಡುವ ವಿಧಾನ ಬೋರೆಗಂಬದಂತೆ, ಮೇಲಿನ ಹರಳು ಕೆಳಗೆ ಬೀಳುವ ಮೊದಲು ಎರಡು ಕೈಗಳಲ್ಲಿ ಹರಳನ್ನು ಪ್ರತಿಯೊಂದು ಕೈಯಲ್ಲಿ ಎರಡರಂತೆ ಹಿಡಿದು ಕತ್ತರಿಯಾಕಾರದಲ್ಲಿ ಇಟ್ಟು ಮೇಲಿನ ಹರಳು ಹಿಡಿಯಬೆಕು. ಮತ್ತೆ ಹರಳು ಹಾರಿಸಿ ಕೆಳಗಿರುವ ಎರಡು ಗುಂಪನ್ನು ಎತ್ತಿ ಸ್ಥಳ ಬದಲಿಸಿ ಅಂದರೆ ಆಚೆ ಹರಳು ಈಚೆ, ಈಚೆ ಹರಳು ಆಚೆ ಇಡಬೇಕು, ಎರಡು  ಗುಂಪುಗಳ ನಡುವೆ ಒಂದು ಗೇಣಿಗಿಂತ ಕಡಿಮೆ ಅಂತರವಿರಬಾರದು. ಆಟಕ್ಕೊಮ್ಮೆ ಕೆಳಗಿನಂತೆ ಹೇಳಬೆಕು.

ಆಲ್ಕು ಮಿಲ್ಕು ಒಂದು
ಮಿಲ್ಕನೆರಡು ತೋಟಾ
ಬಾಳೆ ಮೂರಾಟಾ
ಬದ್ನೆ ನಾಲ್ಕು ತೋಟಾ
ಹಶಿಗಯ್ದೂಟಾ
ಬಿ | ಮಿ | ಸಿ  ನಾರಾಟಾ

ನೆಲಾ ತೊಟ್ಲು :

ಆಡುವ ಹೆಚ್ಚಿನ ವಿಧಾನ ಮೇಲಿನಂತೆಯೇ ಇರುತ್ತದೆ. ಎಡಗೈಯಲ್ಲಿ ಎರಡು ಬಲಗೈಯಲ್ಲಿ ಮೂರು ಹರಳು ಇರುತ್ತವೆ. ಬಲಗೈಯ ಒಂದು ಹರಳನ್ನು ಮೇಲೆ ಹಾರಿಸಿ ಉಳಿದೆರಡನ್ನು ಕೆಳಕ್ಕಿಟ್ಟು ಕೆಳಗೆ ಬೀಳುತ್ತಿರುವ ಹರಳನ್ನು  ಹಿಡಿಯಬೇಕು, ಎಡಗೈಯಲ್ಲಿದ್ದ ಹರಳನ್ನು ನೆಲಕ್ಕೆ  ಇಟ್ಟು ಒಂದು ಹರಳು ಮೇಲೆ ಹಾರಿಸಿ ಬಲಗಡೆ ಇರುವ ಹರಳನ್ನು ಎತ್ತಿ ಎಡಗೈಯಲ್ಲಿಡಬೇಕು. ಮತ್ತು ಮೇಲಿನ ಹರಳನ್ನು ಹಿಡಿಯಬೆಕು. ಇದೇ ರೀತಿ ಆಟ ಮುಂದುವರಿಯುತ್ತಿದ್ದಂತೆ ಕೆಳಗಿನಂತೆ ಎಣಿಸಬೇಕು :

ನೆಲಾ ತೊಟ್ಲ ೧
ಕಯ್ಯ ಬಟ್ಲ ೨
ನೆಲಾ ತೊಟ್ಲು ೩
ಕಯ್ಯ ಬಟ್ಲ ೪
ನೆಲಾ ತೊಟ್ಲ ೫
ಕಯ್ಯ ಬಟ್ಲ ೬

ತೊಟ್ಲೊಂದ್ :

ಎಡಗೈಯಲ್ಲಿ ಎರಡು, ಬಲಗೈಯಲ್ಲಿ ಮೂರು ಹರಳು, ಎಡಗೈ ಮಣಿಕಟ್ಟಿನ ಬತ್ತಿರ ಬಲಗೈ ತುದಿ ತಾಗಿಸಿಕೊಂಡು ಎರಡು ಕೈಯಲ್ಲಿ ಹರಳನ್ನು ಒಂದೇ ಸಾರೆ ಮೇಲೆ ಹಾರಿಸಿ ಎಡಗೈ ಹರಳನ್ನು ಬಲಗೈಯಲ್ಲೂ, ಬಲಗೈ ಹರಳನ್ನು ಎಡಗೈಯಲ್ಲೂ ಹಿಡಿಯಬೆಕು. ಹೀಗೆ ಆಡುತ್ತ ಕೆಳಗಿನಂತೆ ಆಟವನ್ನು ಎಣಿಸಬೆಕು :

ತೊಟ್ಲೊಂದ್
ಬಟ್ಲೆರ್ಡ್
ತೊಟ್ಲ ಮೂರ್‌
ಬಟ್ಲ್ ನಾಕು
ತೊಟ್ಲ್ ಅಯ್ದು
ಬಟ್ಲಾರ್.

ಮಾರೊಂದ್‌:

ಎರಡು  ಕೈಯನ್ನು ಬೊಗಸೆಯಾಗಿ  ಹಿಡಿದು ಬೊಗಸೆಯಲ್ಲಿ ಐದು ಹರಳುಗಳನ್ನಿಟ್ಟುಕೊಂಡು ಎಲ್ಲ ಹರಳನ್ನೂ ಮೇಲೆ ಹಾರಿಸಿ, ಆ ಹರಳು ಬೀಳುವುದರೊಳಗೆ ಒಂದು ಕೈಯನ್ನು  ಕವಚಿ ಹಿಡಿದು ಬೊಗಸೆ ಮಾಡಿ ಅಲ್ಲಿ ಹರಳನ್ನು ಬೀಳಿಸಬೆಕು. ಮತ್ತೆ ಹಾರಿಸಿ, ಬೆಂಗಯಯಾಗಿದ್ದ ಕೈಯನ್ನು ಮೇಲೆ ಮಾಡಿ ಇನ್ನೊಂದು ಕೈಯನ್ನು ಬೆಂಗೈ ಮಾಡಿ ಬೆರಳು ಜೋಡಿಸಿ ಹರಳು ಬೀಳಿಸಿಕೊಳ್ಳಬೇಕು. ಮತ್ತೆ ಹರಳು ಮೇಲೆ ಹಾರಿಸಿ ಎರಡು ಕೈಯನ್ನು ಬೆಂಗೈ ಮಾಡಿ, ಅಲ್ಲಿ ಹರಳು ಹಿಡಿದು ಮೇಲೆ ಹಾರಿಸಿ ಬೊಗಸೆಯಲ್ಲಿ ಹಿಡಿಯಬೇಕು. ಈಗ ಆಟದ ಒಂದು ಭಾಗ ಮುಗಿಯಿತು. ಇದರಂತೆ ಕೆಳಗಿನ ಶಬ್ದಗಳನ್ನು ಎಣಿಸುತ್ತ ಆಟ ಮುಂದುವರಿಸಬೇಕು :

ಮಾರೊಂದ್‌
ಮುಟ್ಟೆರ್ಡ್
ಮಾರ್ ಮೂರ್‌
ಮುಟ್‌ನಾಕ್‌
ಮರ ಆಯ್ದ್
ಮುಟ್ಟಾರ್‌.

ಎದುರಾಳಿಗಳು ಮುಷ್ಟಿಯಲ್ಲಿ  ಹಿಡಿಯಬೇಕು. ಎಂದರೆ ಬೊಗಸೆಯಲ್ಲಿ ಹಿಡಿಯದೆ ಒಂದೇ ಅಂಗೈಯಲ್ಲಿ ಹಿಡಿಯಬೇಕು. ಎರಡು ಕೈಯಲ್ಲಿ ಎಂದರೆ ಎರಡೂ ಅಂಗೈಗಳು ಪ್ರತ್ಯೇಕವಾಗಿದ್ದಾಗ ಹರಳು ಹಿಡಿಯಬೇಕು ಎಂದು ಅರ್ಥ.

ಶೇಡಿ ಮೀಡಿ :

ಒಂದೇ ಕೈಯಲ್ಲಿ ಐದು ಹರಳುಗಳನ್ನು ಹಿಡಿದುಕೊಂಡು ಒಂದು ಹರಳನ್ನು ಮೇಲಕ್ಕೆ ಹಾರಿಸಿ , ಕೈಯನಲ್ಲ ಉಳಿದ ನಾಲ್ಕು ಹರಳುಗಳಲ್ಲಿ ಎರಡನ್ನು ಕೆಳಗಿಟ್ಟು ಹಾರಿಸಿ ಮೇಲೆ ಹೋದ ಹರಳನ್ನು ಹಿಡಿಯಬೇಕು. ಮತ್ತೆ ಒಂದು ಹರಳನ್ನು ಎತ್ತಿ ಮೇಲಿನ ಹರಳನ್ನು ಹಿಡಿಯಬೆಕು. ಇದು ಈ ಆಟದ ಒಂದು ಭಾಗ. ಪ್ರತಿ ಭಾಗವನ್ನೂ ಕೆಳಗಿನಂತೆ ಎಣಿಸಬೇಕು.

ಶೇಡಿ ಮೀಡಿ ಒಂದು
ಒಂದು ಕಲ್ಲ ಕಂಭ
ಕಸ್ಕಿನೆರಡು ತುಂಡು
ಮೂರು ಮುತ್ನ ಚೆಂಡು
ನಾಲ್ಕು ಮಲ್ಗೆ ದಿಂಡು
ಐದು ಸೃಷ್ಟಿ ಬಟು
ಆರೊಂದಬ್ಳಾರೊ.

ಅಕ್ಕಕ್ಕ ಚೆಂಡು

ಒಂದು ಕೈಯಲ್ಲಿ ಐದು ಹರಳುಗಳನ್ನು ಇಟ್ಟುಕೊಂಡು ಮೂರು ಹರಳನ್ನು ಮೇಲಕ್ಕೆ ಹಾರಿಸಿ ಎರಡು ಹರಳನ್ನು  ಕೆಳಕ್ಕಿಟ್ಟು ಮೇಲಿನ ಹರಳನ್ನು ಹಿಡಿಯಬೆಕು. ಉಳಿದ ಮೂರು ಹರಳುಗಳಲ್ಲಿ ಒಂದು ಹರಳನ್ನು ಮೇಲಕ್ಕೆ ಹಾರಿಸಿ, ಎರಡು ಹರಳುಗಳನ್ನು  ಕೆಳಗೆ ಇಟ್ಟು ಮೇಲೆ ಹಾರಿಸಿದ ಹರಳನ್ನು ಹಿಡಿಯಬೇಕು. ಮುಂದೆ ಇಟ್ಟು ಗಂಬಿದಂತೆ ಕುಟ್ಟಬೇಕು. ಅಂದರೆ ಒಂದು ಹರಳು ಮೇಲೆ ಹಾರಿಸಿ ಅದು ಬೀಳುವುದರೊಳಗೆ ಒಂದು ಗುಂಪನ್ನು ಹೆಕ್ಕಿ, ಕುಟ್ಟಿ ಕೆಳಗಿಟ್ಟು ಮೇಲಿನ ಹರಳನ್ನು ಹಿಡಿಯಬೇಕು. ನಂತರ ಇನ್ನೊಂದನ್ನೂ ಹಾಗೆ ಮಾಡಬೇಕು. ಇಲ್ಲಿಗೆ ಈ ಆಟದ ಒಂದು ಭಾಗ ಮುಗಿಯಿತು. ಹೀಗೆ ಹದಿನೆಂಟು ಸಾರೆ ಆಡಬೇಕು. ಕೆಳಗಿನಂತೆ ಎಣಿಸಬೇಕು :

ಅಕ್ಕಕ್ಕ ಚೆಂಡು
ಮುತ್ತಿನ ದಂಡು
ಮಲ್ಲರೆ (ರಿ)ಮತೆಕ
ಕಲ್ಲಂಡಿ (ಗ್ಡಿ) ಜೇನು
ಕಂಚು ಕಣಿಕಣಿ
ಮಿಂಚು ಮೀಣಿಮೀಣಿ
ಪತ್ರೆ ಪರಮಳ
ಮಿತ್ರೆ ಶನಿವಾರ
ಗಂಧ
ಶ್ರೀಗಂಧ
ಆಚ್‌ಗಂಧ
ಪುಚ್‌ಗಂಧ
ಕಾಲ್‌ಗಂಧ
ಅರ್ಧಗಂಧ
ಇಡೀಗಂಧ್‌
ಎಲ್ಲಾ ಗಂಧ
ಪೂರ್ಣ ಗಂಧ
ಸಂಪೂರ್ಣ ಗಂಧ

ಒಂದಿಲಿಗ :       

ಬಲಗೈಯಲ್ಲಿದ್ದ ಐದು ಹರಳಿನಲ್ಲ ಒಂದು ಹರಳನ್ನು ತೋರಬೆರಳು, ಹೆಬ್ಬರಳುಗಳ ನಡುವೆ ಇಟ್ಟು ಮೇಲೆ ಹಾರಿಸಿ ಎಡಗೈಯಿಂದ ಹಿಡಿಯಬೇಕು.

ಉಳಿದ ನಾಲ್ಕರಲ್ಲಿ ಎರಡನ್ನು ಮೇಲೆ ಹಾರಿಸಿ, ಉಳಿದೆರಡನ್ನು ಕೆಳಗಿಟ್ಟು ಮೇಲಿನದನ್ನು ಹಿಡಿಯಬೇಕು. ಎಡಗೈಯಲ್ಲಿದ್ದ  ಹರಳನ್ನು ಎಡಗೈ ಅಂಗೈ ಮೇಲಿರುವಾಗಲೇ ಮೇಲೆ ಹಾರಿಸಿ, ಬಲಗೈಯಲ್ಲಿದ್ದ  ಹರಳನ್ನು ಕೆಳಗಿಡಬೇಕು. ಮೇಲೆ ಹಾರಿಸಿದ ಹರಳನ್ನು ಬಲಗೈಯಲ್ಲಿ ಹಿಡಿಯಬೇಕು. ಮುಂದೆ ಇಟ್ಟುಗಂಬ ಆಡಿದಂತೆ ಆಡಬೆಕು. ಬಲಗೈಯಿಂದ ಒಂದು ಹರಳನ್ನು ಎಡಗೈಯಿಂದ ಒಂದು  ಹರಳನ್ನು ಎಡಗೈಗೆ ಎತ್ತಿಕೊಳ್ಳುವ ಕ್ರಿಯೆಯಿಂದ ಹಿಡಿದು ಮುಂದಿನ ಪ್ರತಿಯೊಂದು ಕ್ರಿಯೆಯನ್ನೂ ಕೆಳಗಿನಂತೆ ಎಣಿಸುತ್ತಾ ಹೋಗಬೇಕು :

ಒ(ಅ)ಂದಿಲಿಂಗ
ತಂದಿಲಿಗ
ತಾ ಕೊಟ್ಟ
ತಲೆ ಮಂದೆ
ಯಾಕ್‌ಬಂದೆ
ಎಲ್ಲಾ ಬದಿಗೆ
ತಾಳಾ
ತೋಟ್ಯಾ
ಯೋಳೊ
ಎಂಟೊ,
ಅರಿಶಿನ (ಬಂಬತ್‌)  ] ಕೆಲವರು ಹೇಳುವುದಿಲ್ಲ
ದರುಶನ (ಹತ್‌) ] ಕೆಲವರು ಹೇಳುವುದಿಲ್ಲ
ಸಂಪ್ಲೆ
ಆಚಾರಿ
ಬಿಚಾರಿ
ಹಲಗತ್ತಿ
ಬಾಯ್‌ಗತ್ತಿ
ಮೆಟ್‌ಗತ್ತಿ
ಹತ್ತೊಂಬತ್ತು
ಇಪ್ಪತ್ತು
ಇಪ್ಪತ್ತೊಂದು
ಇಪ್ಪತ್ತೆರಡು
ಇಪ್ಪತ್ತ್‌ಮೂರು

ಗೋಸು (ರ್ಸು) ತ್ತೆ :

ಇದರಲ್ಲಿ ಒಂದನ್ನು ಮೇಲೆ ಹಾರಿಸಿ, ಉಳಿದವನ್ನು ಕೆಳಗಿಟ್ಟು ಮೇಲಿನದನ್ನು ಹಿಡಿಯಬೇಕು ಮತ್ತೆ ಇಟ್ಟು ಗಂಬದಂತೆ. ಆದರೆ ಇಲ್ಲಿ ನಾಲ್ಕೂ ಕಲ್ಲುಗಳನ್ನು ಒಮ್ಮೆಲೆ ಎತ್ತಿ  ಕುಟ್ಟಿ ಇಡಬೇಕು :

ಗೋಸುತ್ತೆ
ಗೋಸುತ್ತೆ ಒಂದು
ಮಾಸುತ್ತೆ ಮಲ್ಲಾರೆ
ಸಾವಿತ್ರಿ ಮೂರೊ
ಗಾಯತ್ರಿ ನಾಲ್ಕೊ
ಸರಸ್ವತ್ತೈದೊ
ಮೊಲಕ್ಷ್ಮಯ್ದು
(ಮಂಕಾಳಯ್ದು)
ಅಕ್ಕಮ್ಮಜ್ಜಾರು

ಕೂರ್‌(ಳ್‌) ಬಿದ್ರೆ ಕುಂಬಾರ :

ಒಂದು ಕೈಯಲ್ಲಿ ಐದು ಹರಳನ್ನು ತೆಗೆದುಕೊಂಡು, ಒಂದು ಹರಳನ್ನು ಹಾರಿಸಿ ನಾಲ್ಕು ಹರಳನ್ನು  ನೆಲಕ್ಕೆ ತುಸು ಎತ್ತರದಿಂದ ಬಿಡಬೇಕು. ನಂತರ ಕೈಯಲ್ಲಿದ್ದ ಹರಳನ್ನು ಹಾರಿಸುತ್ತಾ ಒಂದೊಂದರಂತೆ ಹೆಕ್ಕಬೇಕು. ಇದು ಒಂದನೆಯ ಗಿಲ್ಲಿ.

೨ನೆಯ ಗಿಲ್ಲಿಗೆ  ಎರಡೆರಡರಂತೆ, ಮೂರನೆಯ ಗಿಲ್ಲಿಗೆ ಒಂದು ಹಾಗೂ ಮೂರರಂತೆ, ನಾಲ್ಕನೆಯದಕ್ಕೆ ನಾಲ್ಕರಂತೆ ಹೆಕ್ಕಬೇಕು. ಪ್ರತಿ ಗಿಲ್ಲಿಯನ್ನೂ ಆರು ಸಾರೆ ಆಡಬೇಕು. ಅಂದರೆ ೨೪ ಸಾರೆ ಆಡಬೇಕು. ಪ್ರತಿ ಗಿಲ್ಲಿಗೆ ಕೆಳಗಿನಂತೆ ಹೇಳಬೇಕು :

ಕೂರ್‌ಬಿದ್ರೆ ಕುಂಬಾರ ಒಂದ್ವಾರ
ಕೂರ್‌ಬಿದ್ರೆ ಕುಂಬಾರ ಎರಡ್ವಾರಾ

ಹೀಗೆಯೇ ಮೂರ್‌ವಾರಾ, ನಾಲ್ಕವಾರ್‌, ಐದ್‌ವಾರಾ – ಎಂದು ಹೀಗೆ ನಾಲ್ಕು ಸಾರೆ ಹೇಳಬೇಕು.

ಗುಡ್ಡೆ :

ಕೂರ್‌ಬಿದ್ರೆ ಕುಂಬಾರದ ನಾಲ್ಕನೆಯ ಗಿಲ್ಲಿಯಂತೆ ಅಥವಾ ಗೋಸುತ್ತೆಯಂತೆ ಆಡಬೇಕು.  ಆಯ್ಕೆ ವಿರುದ್ದ ಪಕ್ಷದವರ ಹೇಳಿಕೆಯನ್ನು ಅವಲಂಬಿಸಿರುತ್ತದೆ. ವಿರುದ್ದ ಪಕ್ಷದವರು ಹೇಳಿದಷ್ಟು ಸಾರೆ ಇಪ್ಪತ್ತೈದೋ, ಐವತ್ತೋ ಸಾರೆ ಆಡಬೇಕು. ಗುಡ್ಡೆ ಒಂದು, ಬೆಟ್ಟಾ ಎರಡು, ಗುಡ್ಡೆ ಮೂರು ಬೆಟ್ಟಾ ನಾಲ್ಕು – ಎಂದು ಎಣಿಸಬೇಕು.

ಬುಳ್ಳಾ :

ಕೈಯಲ್ಲಿದ್ದ ನಾಲ್ಕು ಹರಳು ಮೇಲೆ ಹಾರಿಸಿ ಕೆಳಗೆ ಒಂದು ಹರಳು ಇಡಬೇಕು. ಮೇಲೆ ಹಾರಿಸಿದ ಹರಳು ಹಿಡಿಯಬೇಕು. ಮತ್ತೆ ಹರಳು ಹಾರಿಸಿ ಕೆಳಗಿದ್ದ ಹರಳನ್ನು ಎತ್ತಿ ಮೇಲಿನ ಹರಳನ್ನು ಹಿಡಿಯಬೇಕು. ಒಮ್ಮೆ ಹಾರಿಸಿ ಹಿಡಿದಾಗ ಒಂದು ಎಣಿಕೆ.

ಬುಳ್ಳಾ ಒಂದು, ಬುಳ್ಳಾ ಎರಡು, ಬುಳ್ಳಾ ಮೂರು -ಹೀಗೆ ಏರಿಕೆ ಕ್ರಮದಲ್ಲಿ ಎಣಿಸಬೇಕು.

ಚು(ಜು)ಟ್ಕ :

ಹಳ್ಳಾಟಕ ಕೆಳತಿರ್ಪಿಯಂತೆ ಎದುರಾಳಿ ಬಯಸಿದರೆ ಹಳ್ಳಾಟದ ’ಮೇಲ್’ ತಿರ್ಪಿಯಂತೆಯೂ ಆಡಬಹುದು :

ಜುಳ್ಕಂದ್‌
ಜುಳ್ಕೆರ್ಡ್

ಹೀಗೆ ಆರು ಸಾರೆ ಎಣಿಸಬೆಕು. ಅಥವಾ ಜುಳ್ಳೊಂಡೆ ಒಳ್ಳೆರ್ಡೆ, ಜುಳ್ಮೂರ್‌, ಒಳ್ನಾಲ್ಕು ಹೀಗೆ . . .

ಅಲೊಂದ್ :

’ಅಪ್ಪಪ್ಪ ರಾಣಿ’ಯಂತೆ ಆಡಬೇಕು. ಆದರೆ ಕಿರುಬೆರಳನ್ನು  ನೆಲಕ್ಕೆ ಮುಟ್ಟಿಸಬಾರದು. ಹೆಬ್ಬೆರಳು ತೋರಬೇರಳುಗಳನ್ನು ನೆಲಕ್ಕೆ ಮುಟ್ಟಿಸಬೇಕು.

ಅಲೊಂದ್‌ ಅಪ್ಪೆರ್ಡ್ , ಅಲ್‌ಮೂರ್‌ ಅಪ್‌ನಾಲ್ಕ್ – ಹೀಗೆ ಹದಿನಾರು ಸಾರೆ ಆಡಬೇಕು.

ಸತ್ಯ ಕೊಡುವುದು :

ಐದು ಹರಳುಗಳನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಎರಡೂ ಮುಷ್ಟಿಯಲ್ಲಿಟ್ಟು ಎದುರು ಪಕ್ಷದವರ ಮುಂದೆ ಹಿಡಿಯಬೇಕು. ಎದುರು ಪಕ್ಷದವರು ಒಂದು ಕೈ ಆರಿಸಿ ಕೊಳ್ಳುವುರು. ಅದರಲ್ಲಿದ್ದ ಹರಳುಗಳನ್ನು ಎಣಿಸಿಕೊಳ್ಳುವರು. ಹೀಗೆ ಮೂರು ಸಾರೆ  ಎಣಿಸಿಕೊಂಡಾದ ಮೇಲೆ ಎಣಿಕೆಯ ಒಟ್ಟು ಮೊತ್ತದಷ್ಟು ಸಾರೆ ಸತ್ಯ ಕೊಡಲು ಕೇಳುವು . ಒಟ್ಟು ಮೊತ್ತ ೩+೧+೪ = ೮ ಹೀಗೆ ಬಂದರೆ ಎಂಟು ಸಾರೆ ಮಾತ್ರ ಜಾಟಾಗಲು ವಿರುದ್ದ  ಪಕ್ಷದವರಿಗೆ ಅವಕಾಶವಿದೆ. ಇಷ್ಟರೊಳಗೆ ತಮ್ಮ ಆಟವನ್ನು ಪೂರ್ಣಗೊಳಿಸಬೇಕು.

ಇಲ್ಲಿಗೆ ಆಟ ಮುಗಿಸುವುದುಂಟು, ಮತ್ತೆ ಕೆಲವರು ಮರು ಆಟ ಪ್ರಾರಂಭಿಸುತ್ತಾರೆ. ಇದು ಎರಡನೆಯ ಆಟವಲ್ಲ. ಮೊದಲ ಆಟದ ಮುಂದಿನ ಭಾಗ. ಮರು ಆಟದಲ್ಲಿ  ಹಿಂದಿನ ಪದ್ಯವನ್ನೇ ಬಳಸುತ್ತಾರೆ.  ಆದರೆ ಅದರ ಹಿಂದೆ ಪ್ರತಿ ಸಾರಿಗೆ ’ಮರ್’ (ಮರಾಟಾ) ಎಂಬ ಶಬ್ದ ಜೋಡಿಸುತ್ತಾರೆ.

ಮರಿಟ್ಟುಗಂಬ:

ಇಟ್ಟುಗಂಬಂದಂತೆ ಹರಳು ಬಿಡುವಾಗ ಕಟ್ಟುವದಿಲ್ಲ. ಬಿಡುವದು ಹಡಿಯುವದು ಮಾತ್ರ ನಡೆಯುತ್ತದೆ. ಪದ್ಯಕ್ಕೆ ಮರ್‌ಎಂಬ ಶಬ್ದ ಹಿಂದೆ ಜೋಡಿಸಿಕೊಳ್ಳುತ್ತಾರೆ.

ಮರ್ಕಳ್ಳಾ ಒಂದು

ಕಳ್ಳಾ ಒಂದು ಸುಳ್ಳಾ  ಎರಡರಂತೆ ಕುಟ್ಟುವದಿಲ್ಲ.

ಮರ್ಬಟ್ಲೊಂದ್

ಕೈಗೆ ಕೈ ತಾಗಿಸುವುದಿಲ್ಲ.

ಮರ್ಮಾರೊಂದ್

ಒಂದು ಕೈಯಿಂದ ಹಾರಿಸಿದ ಹರಳನ್ನು ಇನ್ನೊಂದು ಕೈಯಿಂದ  ಹಿಡಿಯುವುದು. ಈ ರೀತಿ ಮೂರು ಸಾರೆ ಆಚೆ ಈಚೆ ಮಾಡಿದ ಮೇಲೆ, ಆರು ಸಾರೆ ಚಪ್ಪಾಳೆ ತಟ್ಟುತ್ತ ಹರಳು ಹಿಡಿಯಬೇಕು.

ತಗಣಿ ಉಕ್ಕಾ:

ಗಿಲ್ಲಿ ಆಡಿದಂತೆ ೫ ಬಗೆಯ ಗಿಲ್ಲಿಗಳನ್ನು ಆಡಬೇಕು. ಪ್ರತಿಸಾರೆ ತಗಣಿ ಉಕ್ಕಾ ಓಂದು ತಗಣಿ ಉಕ್ಕಾ ಎರಡು ಹೀಗೆ ಎಣ್ಣಿಸಬೇಕು. ತಗಣಿ ಉಕ್ಕಾ ಎನ್ನುವಾಗಲೆಲ್ಲ ತೋರಬೆಳಿನಿಂದ ತಗಣಿ ಒರೆದಂತೆ ನೆಲಕ್ಕೆ ಒರೆಸಬೇಕು.

ಕುದ್ರೆ ಕಣ್ಕ :

ಒಂದು ಮೇಲೆ, ನಾಲ್ಕು ಹರಳನ್ನು ಕೆಳಗೆ ಜಪ್ಪಿಬಿಡುವದು. ನಂತರ ಒಂದೊಂದಾಗಿ ಕುಟ್ಟುತತಾ ಹೆಕ್ಕುವದು. ಕುದ್ರೆಕಣ್ಕ ಒಂದು, ಕುದ್ರೆಕಣ್ಕ ಎರಡು ಎಂದು ಎಣಿಸುವುದು. ಹೀಗೆ ೫ ಬಗೆಯಲ್ಲಿ ಆಡಬೇಕು.

ಎದೆ ಉಕ್ಕಾ :

ಒಂದು ಮೇಲೆ, ಕೈಯಲ್ಲಿದ್ದ ಹರಳನ್ನು ಎದೆಗೆ ಬಡಿದು ಕೆಳಗೆ ಬಿಡಬೇಕು. ಹೆಕ್ಕುವಾಗಲೂ ಹೆಕ್ಕಿ  ಎದೆಗೆ ಬಡಿಯಬೇಕು. ಹೀಗೆ ೫ ಬಗೆಯ  ಗಿಲ್ಲಿಯನ್ನು ಆಡಬೇಕು.

ಹೂಕೊಯ್ದೆ :

ಒಂದನ್ನು ಮೇಲೆ ಹಾರಿಸಿ, ನಾಲ್ಕನ್ನು ಒಳಗೆ ಬಿಟ್ಟು, ಒಂದೊಂದೇ ಆರಿಸಿ ಕೈಯಲ್ಲಿಟ್ಟು ಹೂ ಕೊಯ್ದಂತೆ ನಟಿಸಬೇಕು. ಒಮ್ಮೆ ಕೈಗೆ ಕೈ ಜಪ್ಪಿ ಹೂ ಕೆಳಗೆ ಬಿಟ್ಟಂತೆ ಬಿಡಬೇಕು. ಹೂ ಕೊಯ್ದೆ ಒಂದು . . . ಎನ್ನಬೇಕು.

ಬಳ್ಳಿ ಸಿಗ್ದೆ :

ಮೇಲಿನಂತೆ ಬಳ್ಳಿ ಸಿಗಿದಂತೆ ನಟಿಸುತ್ತ ಬಳ್ಳಿ ಸಿಗ್ದೆ ಒಂದು . . . ಹೀಗೆ ಅನ್ನಬೇಕು

ದಂಡೆಕಟ್ಟೆ :

ಹಳ್ಳಾಟದ ದಪ್ಪೆಯಂತೆ ಎಡಗೈ ಬೆರಳನ್ನು ನೆಲದಲ್ಲಿ ಪಸರಿಸಿ ಹೂ ಕಟ್ಟಿದಂತೆ ಆಡಿಸಬೇಕು. ದಂಡೆಕಟ್ಟಿ ೧

ಮಂಡೆಕಟ್ಟು:

ಮೇಲಿನಂತೆ ಎರಡೂ ಕೈಯಿಂದ  ಮಂಡೆ ಮುಟ್ಟುತ್ತಿರಬೇಕು. ಮಂಡೆಕಟ್ದೆ ಒಂದು .. .

ಜಡೆಹೊಯ್ದೆ :

ಮೇಲಿನಂತೆ ಜಡೆ ಮುಟ್ಟಿಕೊಳ್ಳಬೇಕು. ಜಡೆಹೊಯ್ದೆ ಒಂದು ಮುಂತಾಗಿ.

ಇಡಿಹೊಯ್ದೆ :

ಹಳ್ಳಾಟದ ‘ಬಾವಿ’ಯಂತೆ ಕಾಲಹೆಜ್ಜೆಯನ್ನು ಒಂದಕ್ಕೊಂದು ಜೋಡಿಸಿ ನಡುವೆ ಬಾವಿಯಂತೆ ಮಾಡಿ ಹೆಜ್ಜೆಯ ಮೇಲೆ ನಾಲ್ಕು  ದಿಕ್ಕಿಗೆ ನಾಲ್ಕು ಹರಳಿಟ್ಟು ಮೇಲೆ ಹರಳು ಹಾರಿಸಿ ಪ್ರತಿಸಾರೆ ಒಂದೊಂದನ್ನೇ ಕೆಳಗೆ ತುಂಬಿ ಕಾಲು ತೆಗೆದು ಒಟ್ಟಿಗೆ ಎಲ್ಲವನ್ನು ಹಿಡಿಯಬೇಕು. ಇಡ್ಲಿ ಹೊಯ್ದೆ ೧ . . .

ಬಡಿಸುವದು, ನೀರು ತುಂಬುವದು, ಬಾಯನ್ನು ಉಬ್ಬಿಸಿ ಕಸ ತೆಗೆಯುವದು ಹೀಗೆ ಹತ್ತಾರು ಮನೆವಾರ್ತೆಯ ಕೆಲಸವನ್ನು ನಟಿಸುತ್ತ ದಣಿಯುವವರೆಗೂ ಆಡುವರು.

ಪ್ರತಿಕ್ರಿಯೆ ನಡೆಯುವಾಗ ಹರಳು ಮೇಲೆ ಇದ್ದು ಅದು ಕೆಳಗೆ ಬೀಳುವುದರೊಳಗೆ ಕೆಳಗಿನ ಕೆಲಸ ಮುಗಿಸುವುದು ಅತಿ ಮುಖ್ಯ. ಇದಕ್ಕೆ ತಪ್ಪಿದರೆ ಹರಳಿಗೆ ಹರಳು ತಾಗಿದರೆ, ಹರಳು ಕೈತಪ್ಪಿ ಬಿದ್ದರೆ ಆಟ ಬಿಡಬೇಕು.