ಮರದಿಂದ ಮಾಡಿದ ಚೆನ್ನೆಮಣೆ ಇದ್ದರೆ ಈ  ಆಟಕ್ಕೆ ಚೆನ್ನ. ನೆಲದ ಮೇಲೆ ಮಸಿ ಇಲ್ಲವೆ ಸುಣ್ಣದ ಕಡ್ಡಿಯಿಂದಲೂ ಚೌಕು ಮನೆ ತಯಾರಿಸಿಕೊಳ್ಳಬಹುದು.  ದನ ಕಾಯುವ ಮಕ್ಕಳು ಬಂಡೆಗಲ್ಲಿನ ಮೇಲೆ ಕುತಿ ತೋಡಿ. ಆಡಲು ಉಪಯೋಗಿಸುತ್ತಿದ್ದರು. ಈಗಲೂ  ಅಂತಹ ಕುಳಿಗಳು ಊರ ಹೊರಗೆ ಕಾಣಸಿಗುತ್ತವೆ. ಚೆನ್ನೆಕಾಳು ಅಥವಾ ಚಿಕ್ಕ ಚಿಕ್ಕ ಕಲ್ಲುಗಳು ಆಟಕ್ಕೆ  ಸಾಕು. ಚೆನ್ನೆಮಣೆಯಲ್ಲಿ ಹದಿನಾಲ್ಕು ಕುಳಿಗಳಿರುತ್ತವೆ. ಪ್ರತಿಯೊಂದು ಕುಳಿಗೆ ನಾಲ್ಕರಂತೆ ೫೬ ಕಾಳುಗಳು ಬೇಕು. ಇಬ್ಬರು ಆಟಗಾರರಿರುವುದೇ ಹೆಚ್ಚು ಹೆಚ್ಚು ಜನರಿದ್ದಾಗ ಒಂದು ಪಕ್ಷದವರೆಲ್ಲ ಆಡಿದ ಮೇಲೆ ಇನ್ನೊಂದು ಪಕ್ಷದವರು ಆಡುತ್ತಾರೆ. ಎಡದಿಂದ ಹರಳೆತ್ತಿ ಬಲಕ್ಕಿಡುತ್ತ ಹೋಗಬೇಕು. ಒಂದು ಬದಿಯ ಏಳು ಮನೆಗಳು ಒಂದು ಪಕ್ಷಕ್ಕೆ, ಇನ್ನೊಂದು ಬದಿಯ ಏಳು ಮನೆಗಳು ಮತ್ತೊಂದು ಪಕ್ಷಕ್ಕೆ ಸೇರುತ್ತವೆ. ಆಟಗಾರನು ಆಟ ಪ್ರಾರಂಭಿಸುವಾಗ ತನ್ನ ಮನೆಯ ಹರಳೆತ್ತಿ ಪ್ರಾರಂಭಿಸಬೇಕು. ಆಡುವ ವಿಧಾನಭೇದದಿಂದ ಈ ಆಟಕ್ಕೆ ಬೇರೆ ಬೇರೆ ಹೆಸರುಗಳಿವೆ.