ಒಬ್ಬನು ಸಾಗುವ ವಿಧಾನವನ್ನು ಅಂಕೆ ಬರೆದು ತೋರಿಸಲಾಗಿದೆ. ಇದೆ ರೀತಿ ೪೯ ಮನೆಯಿದ್ದಾಗಲೂ ಸಾಗಬೇಕು. 

ಜಿಬ್ಬಿ ಮನೆ (೨೫ ಮನೆ)

ಈ ಆಟಕ್ಕೆ ಚವೆಯಾಟ, ಕವಡೆಯಾಟ, ಚೌಕಬಾರ ಇತ್ಯಾದಿ ಹೆಸರುಗಳಿವೆ. ಆಟಗಾರರು ನಾಲ್ಕು ಜನ, ಮನೆಗಳು ೨೫ ಅಥವಾ ೪೯. ನಾಲ್ಕು ಅಥವಾ ಆರು ಕವಡೆ ಬೇಕು. ಕವಡೆ ಬದಲಿಗೆ ಚಿಪ್ಪಿಗಳನ್ನು ಉಪಯೋಗಿಸುವುದುಂಟು. ಪ್ರತಿಯೊಬ್ಬ ಆಟಗಾರನೂ ಒಂದೊಂದು ಬಗೆಯ ನಾಲ್ಕು ಅಥವಾ ಎಂಟು ವಸ್ತುಗಳನ್ನು ಕಾಯಿಗಳೆಂದು ಬಳಸಬೇಕು. ಕಡಲೆಕಾಳು, ಚನ್ನೆಕಾಳು, ಬಳೆಚೂರು, ಕಲ್ಲುಹರಳು, ಕಡ್ಡಿ (ಬಳಪ) ಮುಂತಾದವುಗಳನ್ನು ಬಳಸುವುದುಂಟು. ಒಬ್ಬರ ಕಾಯಿ ಇನ್ನೊಬ್ಬರಂತೆ ಇರಬಾರದು.

ನಾಲ್ಕು ಆಟಗಾರರಿಗೆ ನಾಲ್ಕು ಮನೆಗಳು: ಇವಕ್ಕೆ ಕಟ್ಟೆಯೆನ್ನುವರು. ೨೫ ಮನೆಯ ಆಟದಲ್ಲಿ ಮತ್ತೆ ನಾಲ್ಕು ಸುರಕ್ಷಿತ ಮನೆಗಳು ಇರುವುದಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಕಟ್ಟೆಯಿಂದ ಆಟ ಪ್ರಾರಂಭಿಸುತ್ತಾರೆ. ನಡುವಿನ ಮನೆಗೆ  ಹಣ್ಣು ಮನೆಯಿಂತಲೂ, ಗಂಗೆ ಪೆಟ್ಟಿಗೆಯೆಂತಲೂ ಹೇಳುವರು. ಕಾಯಿಗಳು ಗಂಗೆ ಪೆಟ್ಟಿಗೆಗೆ ಮೀಯಲು ಹೋಗುತ್ತವೆ ಎನ್ನುವರು. ಆಟದ ಕಟ್ಟೆ ಹಾಗೂ ಸುರಕ್ಷಿತ ಕಟ್ಟೆಗಳಲ್ಲಿ ಎಲ್ಲರ ಕಾಯಿಗಳು ಸುರಕ್ಷಿತ. ಅಲ್ಲಿ ಯಾರೂ ಕಾಯಿ ಕೊಲ್ಲಲಾರರು.ಪ್ರತಿಯೊಬ್ಬರು ಆಡುವ ಮೊದಲು ಒಂದು ಅವಕಾಶ ಪಡೆದು ತಾವು ನಡೆಸಬೇಕಾದ ಮನೆಗಳೆಷ್ಟೆಂಬುದನ್ನು ಕವಡೆ ಚೆಲ್ಲಿ ಕಂಡುಕೊಳ್ಳುವರು. ಆರು ಕವಡೆಗಳು ನೆಕ್ಕನೆ ಅಂದರೆ ಮೇಲ್ಮುಖವಾಗಿ ಬಿದ್ದರೆ ಆರು ಅಂಕ: ನಾಲ್ಕು ಇದ್ದಾಗ ನಾಲ್ಕು. ಆರು ಕವಡೆಗಳು ಕೆಳಮುಖವಾಗಿ ಕವಚಿಬಿದ್ದರೆ ಹನ್ನೆರಡು ಅಂಕ. ನಾಲ್ಕು ಇದ್ದಾಗ ಎಂಟು. ಕೆಲವು ಕವಚಿ ಕೆಲವು ನೆಕ್ಕನೆ ಬಿದ್ದರೆ, ಕವಚಿ ಬಿದ್ದವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನೆಕ್ಕನೆ ಬಿದ್ದ ಪ್ರತಿಯೊಂದು ಕವಡೆಗೆ ಒಂದು ಅಂಕ. ಮೊದಲು ಆಡಿದ ಪ್ರತಿಯೊಬ್ಬನ ಎಲ್ಲ ಕವಡೆಗಳೂ ಕವಚಿ ಅಥವಾ ನೆಕ್ಕನೆ ಬೀಳಲೇಬೇಕು. ಇಲ್ಲವಾದರೆ ಆಟ ಬಿಡಬೇಕು. ೮ ಕಾಯಿಯಿಟ್ಟು ಆಡುವವರು ಪ್ರತಿಸಾರೆ ಎರಡು ಅವಕಾಶ ಪಡೆದು ನೆಕ್ಕನೆ ಬಿದ್ದ ಕವಡೆಗಳ ಮೊತ್ತದಷ್ಟು ಮನೆ ನಡೆಸುತ್ತಾರೆ. ನಾಲ್ಕು ಕಾಯಿ ನಡೆಸುವವರಾಗಲೀ, ಎಂಟು ಕಾಯಿ ನಡೆಸುವವರಾಗಲೀ ಎಲ್ಲ ಕವಡೆಗಳನ್ನು ನೆಕ್ಕನೆ ಅಥವಾ ಕವಚಿ ಬೀಳಿಸಿದಾಗ ಅವರಿಗೆ ಇನ್ನೊಂದು ಅವಕಾಶವಿದೆ. ಕಾಯಿ ಕೊಂದವರಿಗೆ ಆಡಲು ಒಂದು ಆಟದಲ್ಲಿ ೮ ಮತ್ತು ೧೨ ಅಂಕ ಪಡೆದರೂ ಅವರಿಗೆ ಒಂದೇ ಅವಕಾಶ. ಹೀಗೆ ಯಾರಿಗೂ ಮೂರು ಅವಕಾಶಕ್ಕಿಂತ ಹೆಚ್ಚಿಗೆ ಕೊಡುವುದಿಲ್ಲ. ನಾಲ್ಕು ಕವಡೆ ಆಡುವಾಗ ಕೆಲವರು ಮೂರು ಕವಡೆ ಕಳಚಿ ಬಿದ್ದಾಗ ’ಮುಕ್ಕಿ’ ಎಂದು ಹೇಳಿ ಆಟ ಬಿಡುವರು. ನಾಲ್ಕು ಕವಡೆಯಿಂದ ಆಡುವಾಗ ಎರಡು ಕವಚಿ ಎರಡು ನೆಕ್ಕನೆ ಬಿದ್ದರೆ ಲೆಕ್ಕದಂತೆ ಎರಡು ಅಂಕ ದೊರೆಯಬೇಕೆಷ್ಟೇ. ಆದರೆ ಅದನ್ನು ಜೋಡಿಗೆ ಹೊಡೆದು ಗೆಲ್ಲಬೇಕಾಗುತ್ತದೆ. ನೆಕ್ಕನೆ ಬಿದ್ದ ಒಂದು ಕವಡೆಗೆ ನೆಕ್ಕನೆ ಬಿದ್ದ ಇನ್ನೊಂದು ಕವಡೆಯಿಂದಲೂ, ಕವಚಿಬಿದ್ದ ಕವಡೆಗೆ ಕವಚಿಬಿದ್ದ ಇನ್ನೊಂದು ಕವಡೆಯಿಂದಲೂ, ಗೋಲಿ ಆಡುವಾಗ ಹೊಡೆಯುವಂತೆ ಬೆರಳಿನಿಂದ ಹೊಡೆಯಬೇಕು. ಒಂದಕ್ಕೆ ಇನ್ನೊಂದು ತಾಗಿದರೆ ಪ್ರತಿಬಾರಿ, ಒಂದು ಅಂಕ ದೊರೆಯುತ್ತದೆ. ಹೊಡೆಯುವಾಗ ಕೆಲವೊಮ್ಮೆ ಕವಡೆ ಇನ್ನೊಂದು ಕವಡೆಗೆ ತಾಗದೆ ಸಮೀಪ ಬೀಳುವುದುಂಟು. ಆಗ ಎದುರು ಪಕ್ಷದವರೊಬ್ಬರು ಅದನ್ನು ಜೀಕುವರು. ಜೀಕುವುದೆಂದರೆ ಸಮೀಪ ಬಿದ್ದ ಎರಡು ಕವಡೆಗಳ ನಡುವೆ ಕಿರಿಬೆರಳು. ಹಾಯಿಸುವರು. ಹಾಯಿಸುವಾಗ ಹಂದಿದರೆ (ಅಲುಗಾಡಿದರೆ) ಹಿಂದೆ ಆಡಿದ ಮನೆಯೆಲ್ಲವೂ ಹೋಯಿತು. ಅಂದರೆ ಕಾಯಿ ತನ್ನ ಕಟ್ಟೆಗೆ ತಿರುಗಬೇಕು.

ಆರು ಕವಡೆಯಿಂದ ಆಡುವಾಗ ಜೀಕುವ ಪದ್ಧತಿಯಾಗಲೀ, ಒಂದಕ್ಕೆ ಇನ್ನೊಂದು ಹೊಡೆದು ಅಂಕ ಗೆಲ್ಲುವುದಾಗಲೀ, ಆರು ಕವಡೆಯಿಂದ ಆಡುವಾಗ ಒಂದರ ಮೇಲೊಂದು ಕವಡೆ ಬಿದ್ದು ಕವಡೆ ನಿಶ್ಚಿತ ಸ್ಥಿತಿ ತಿಳಿಯದಂತಾದಾಗ ಇನ್ನೊಬ್ಬ ಆಟಗಾರ ಒಂದು ಕವಡೆ ಎತ್ತಿ ಅದರ ಮೇಲೆ ಬಡಿದು, ಅವು ಒಂದನ್ನೊಂದು ಅಗಲುವಂತೆ ಮಾಡಿ ನಿಜಸ್ಥಿತಿ ಗುರುತಿಸುವನು.

ಸಾಮಾನ್ಯವಾಗಿ ಒಂದು ಕಾಯಿಯಿಂದ ಇನ್ನೊಂದು ಕಾಯಿ ಹೊಡೆಯುತ್ತ, ತಮ್ಮ ರಕ್ಷಣೆ ಮಾಡಿಕೊಳ್ಳುತ್ತ ಹೆಣ್ಣು ಮನೆಗೆ ಬರುತ್ತಾರೆ. ಎರಡು ಕಾಯಿ-ಜೋಡಿಯಿಂದ ಇನ್ನೊಂದು ಜೋಡಿ ಕೊಲ್ಲುವ ಅವಕಾಶವೂ ಇದೆ. ಪ್ರಾರಂಭದಿಂದ ೧೨ ಮನೆ ದಾಟಿದ ಮೇಲೆಯೇ ಜೋಡಿ ಹೊಡೆಯುವ ಅವಕಾಶವಿದೆ. ಅಂದರೆ ಒಳ ಮನೆಯಲ್ಲಿ ಮಾತ್ರ ಸಾಧ್ಯ. ಸಮಸಂಖ್ಯೆಯಲ್ಲಿ ಅಂಕ ದೊರೆತಾಗ ಮಾತ್ರ ಜೋಡಿ ಮಾಡಬೇಕು. ಜೋಡಿ ಬಿಡಿಸಬೇಕು. ಜೋಡಿ ನಡೆಸಬೇಕು. ಜೋಡಿ ನಡೆಸುವಾಗ ೨ ಅಂಕ ದೊರೆತರೆ ಒಂದು ಮನೆ, ೪ ಅಂಕ ದೊರೆತರೆ ೨ ಮನೆ ನಡೆಸಬಹುದು ೩ ಅಂಕ ದೊರೆತರೆ ಬೇರೆ ಒಂಟಿ ಕಾಯಿ ನಡೆಸಬಹುದು. ಜೋಡಿಯನ್ನು ಕಟ್ಟೆಯಲ್ಲಿಯೇ ಮಾಡಬೇಕು. ಕಟ್ಟೆಯಲ್ಲಿಯೇ ಬಿಡಿಸಬೇಕು. ಒಳಗಿನ ಮನೆಯ ಕಟ್ಟೆಯಲ್ಲಿ ಜೋಡಿ ಮಾಡಿದರೆ ಅದನ್ನು ಬಿಡಿಸುವಂತಿಲ್ಲ. ಕೊನೆಯವರೆಗೂ ಅದನ್ನು ಜೋಡಿಯಾಗಿಯೇ ನಡೆಸಬೇಕು. ಸುರಕ್ಷಿತ ಮನೆಯ ಹಿಂದೆ ಜೋಡಿ ಮಾಡಿದರೆ, ಅದನ್ನು ಒಂದು ಮನೆ ಚಲಿಸಿದ ನಂತರ ಬಿಡಿಸಬಹುದು.

ನಡುಮನೆ ಮುಟ್ಟಲು ಸಮೀಪವಿದ್ದಾಗ ಅದನ್ನು ಮುಟ್ಟಲು ಬೇಕಾಗುವ ಅಂಕಕ್ಕಿಂತ ಒಂದು ಹೆಚ್ಚು ಅಂಕ ದೊರಕಬೇಕು. ಹೆಚ್ಚು ಅಂಕ ದೊರೆತರೆ ಸುಟ್ಟು ಕೊಳ್ಳಬೇಕು. ಅಂದರೆ ಆಟಬಿಡಬೇಕು. ಅಥವಾ ಹಿಂದೆ ಬೇರೆ ಕಾಯಿಯಿದ್ದರೆ ನಡೆಸಬಹದು.’ ನಾಲ್ವರಲ್ಲಿ ಮೊದಲು ಎಲ್ಲ ಕಾಯಿಯನ್ನು ಹಣ್ಣು ಮಾಡಿದವ ರಾಜ, ಎರಡನೆಯವ ಮಂತ್ರಿ, ಮೂರನೆಯವ ಸೇನಾಪತಿ, ನಾಲ್ಕನೆಯವ ಸೈನಿಕ. ಮೊದಲು ಆಡಿ ಮುಗಿಸಿದವ ತನ್ನ ಕಾಯಿ ತೆಗೆದುಕೊಳ್ಳುತ್ತಾನೆ. ಕ್ರಮೇಣ ಮಂಡಲ ಆಟಗಾರರ ಸಂಖ್ಯೆ ಕಡಿಮೆಯಾಗುತ್ತದೆ. ಒಬ್ಬರು ಆಟ ಮುಗಿಸಿದ ಮೇಲೆ ಉಳಿದವರಷ್ಟೇ ಆಟ ಮುಂದುವರಿಸುತ್ತಾರೆ. ಕೊನೆಗೆ ಉಳಿದವನಿಗೆ ಮೂರು ಅವಕಾಶ ಕೊಡಲಾಗುತ್ತದೆ. ಅಷ್ಟರಲ್ಲಿ ಆಟ ಮುಗಿಸದಿದ್ದರೆ ಅವನಿಗೆ ಉಳಿದವರು ಗುದ್ದು ಕೊಡುವುದುಂಟು. ಹೀಗಾಗಿ ಇದಕ್ಕೆ ಗುದ್ದಿನ ಆಟವೆಂತಲೂ ಕರೆಯುವರು.