ಆಟ   – ಐದು ಹಳ್ಳಾಟ :

ಐದು ಹರಳುಗಳನ್ನು ಅಂಗೈಯಲ್ಲಿಟ್ಟು ಹಾರಿಸಿ  ಬೆಂಗೈ ಮೇಲೆ ಹಿಡಿಯಬೇಕು. ಹರಳನ್ನು ಮತ್ತೆ ಹಾರಿಸಿ ಅಂಗೈಯಲ್ಲಿ ಹಿಡಿಯಬೇಕು. ಹೀಗೆ ಹರಳನ್ನು  ಬೆಂಗೈ ಮೇಲೆ ಅಂಗೈ ಮೇಲೆ ಹಿಡಿಯುತ್ತ ಐದು ಸಾರೆ ಆಡಬೇಕು. ಹರಳು ಬೆಂಗೈ ಮೇಲಿಂದ ಕೆಳಗೆ ಬಿದ್ದರೆ ಒಂದು ಹರಳು ಹಾರಿಸಿ ಕೆಳಗಿನದನ್ನು ಎತ್ತಿ ಮೇಲಿನದನ್ನು ಹಿಡಿಯಬೇಕು.

ಒಂದ್ಹಳ್ಹಿಡಿಯಕ್ಕಾ :

ಹರಳುಗಳನ್ನೆಲ್ಲಾ ನೆಲಕ್ಕೆ ಚೆಲ್ಲಿ, ಒಂದನ್ನು ಎತ್ತಿ ಮೇಲೆ ಹಾರಿಸಿ, ಕೆಳಗಿರುವ ಒಂದು ಹರಳನ್ನು ಕೈಯಲ್ಲಿ ತೆಗೆದುಕೊಳ್ಳಬೇಕು. ಅಲ್ಲದೆ ಮೇಲೆ ಹಾರಿಸಿದ ಹರಳನ್ನು ಹಿಡಿಯಬೆಕು. ಹೀಗೆ ನಾಲ್ಕು ಹರಳುಗಳನ್ನು ಎತ್ತಿಕೊಳ್ಳುವವರೆಗೂ ಆಡಬೇಕು. ಪ್ರತಿಸಾರ ಹಿಡಿದ ಹರಳನ್ನು ಎಡಗೈಯಲ್ಲಿಟ್ಟುಕೊಳ್ಳಬಹುದು.

ಎರಡ್ಹಳ್ಳಿಡಿಯಕ್ಕಾ
ಮೇಲಿನಂತೆ ಆಡುತ್ತ ಒಮ್ಮೆ ಎರಡೆರಡು ಹರಳು ಹಿಡಿಯಬೇಕು

ಮೂರ್ಹಳ್ಳಡಿಯಕ್ಕ:

ಮೇಲಿನಂತೆ ಈ ಆಟ ಒಮ್ಮೆ ಮೂರು ಇನ್ನೊಮ್ಮೆ ಒಂದರಂತೆ ಹರಳು ಹಿಡಿಯಬೇಕು.

ನಾಕ್ಹಳ್ಳಿಡಿಯಕ್ಕಾ :

ಒಮ್ಮೆಲೆ ನಾಲ್ಕನ್ನು ಕೈಯಲ್ಲೆತ್ತಿ ಮೇಲಿನ ಹರಳನ್ನು ಹಿಡಿಯಬೇಕು.

ಕೆಳಗನ ಹೊಜ್ಯಾ :

ಎಲ್ಲ ಹರಳನ್ನು ಕೆಳಕ್ಕೆ ಇಟ್ಟು  ಅದರಿಂದ ಒಂದನ್ನು ತೆಗೆದು ಮೇಲಕ್ಕೆ ಹಾರಿಸಿ, ಕೆಳಗಿದ್ದ ಹರಳುಗಳನ್ನು ಎತ್ತಿ ಮೇಲಿದ್ದ ಹರಳನ್ನು ಹಿಡಿಯಬೇಕು.

ಕೆಳಗಿನ ತಿರ್ಪ್ಯಾ

ಅಂಗೈಯಲ್ಲಿದ್ದ ಹರಳನ್ನು ಹಾರಿಸಿ ಬೆಂಗೈ ಮೇಲೆ ಹಿಡಿದುಕೊಂಡು ಹರಳು ಮತ್ತೆ ಹಾರಿಸಿ ಅಂಗೈ ಕೆಳಮುಖವಾಗುವಂತೆ ಕೈಯನ್ನು ಹಾರಿಸಿ ಹರಳು ಹಿಡಿಯಬೇಕು.

ಮುಂದೆ ಮೇಲಿನ ಐದೂ ಆಟಗಳನ್ನು ತುಸು ಭಿನ್ನ ರೀತಿಯಲ್ಲಿ ಆಡುವದುಂಟು ಹೀಗೆ : –

ಮೇಲಿನ ಐದ್ಹಳ್ಳಿಡಿಯಾಕಾ :

ಆಟ ೧ ರಂತೆ, ಆದರೆ ಆಡುವಾಗ ಒಂದು ಹರಳೂ ಕೆಳಗೆ ಬೀಳಬಾರದು. ಹೀಗೆ ಒಂದೇ ಸಲ ತಪ್ಪದೆ ಐದು ಬಾರಿ ಆಡಿ ಮುಗಿಸಬೇಕು

ಮೇಲಿನ ಒಂದ್ಹಳ್ಳಿಡಿಯಾಕಾ :

ಒಂದು ಹರಳನ್ನು ಮೇಲೆ ಹಾರಿಸಿ ಉಳಿದ ನಾಲ್ಕನ್ನು ತುಸು ಎತ್ತರದಿಂದಲೇ ಕೆಳಗೆ ಚೆಲ್ಲಿ ಮೇಲೆ ಹಾರಿಸಿದ ಹರಳು  ಹಿಡಿಯಬೇಕು. ನಂತರ ಒಂದೊಂದೇ ಹರಳನ್ನು ಹಿಡಿಯಬೇಕು. ಹಿಡಿದ ಹರಳನ್ನು ಎಡಗೈಯಲ್ಲಿಟ್ಟುಕೊಳ್ಳಬಾರದು. ಎಲ್ಲ ಹರಳುಗಳು ಒಂದೇ ಕೈಯಲ್ಲಿರಬೇಕು.

ಮೇಲಿನ ಎರಡ್ಹಳ್ಳಿಡಿಯಾಕಾ :

ಮೇಲಿನಂತೆ ಎರಡೆರಡು ಹರಳು ಒಂದು ಬಾರಿಗೆ ಹಿಡಿಯಬೇಕು

ಮೇಲಿನ ಮೂರ್ಹಳ್ಳಿಡಿಯಾಕಾ:

ಮೇಲಿನಂತೆ ಒಮ್ಮೆ ಮೂರು ಇನ್ನೊಮ್ಮೆ ಹಿಡಿಯಬೇಕು.

ಮೇಲಿನ ನಾಕಳ್ಳಿಡಿಯಾಕಾ :

ನಾಲ್ಕು ಹರಳುಗಳನ್ನು ಒಮ್ಮೆಲೆ ಹಿಡಿಯಬೇಕು.

ಮೇಲಿನ ಹೊಜ್ಯಾ :

ಒಂದು ಹರಳನ್ನು ಮೇಲೆ ಹಾರಿಸಿ, ಉಳಿದ ಹರಳುಗಳನ್ನು ಜಪ್ಪಿ ಕೆಳಗಿಟ್ಟು, ಹಾರಿಸಿದ ಹರಳನ್ನು ಹಿಡಿಯಬೇಕು. ಮತ್ತೆ ಹಿಡಿದ ಹರಳನ್ನು ಮೇಲೆ ಹಾರಿಸಿ ಕೆಳಗಿದ್ದ ಹರಳನ್ನು ಕೈಯಲ್ಲೆತ್ತಿಕೊಂಡು ಮೇಲೆ ಹಾರಿಸಿದ ಹರಳನ್ನು ಹಿಡಿಯಬೆಕು.

ಮೇಲಿನ ತಿರ್ಪ್ಯಾ:

ಕೆಳಗಿನ ತಿರ್ಪ್ಪಾದಂತೆ ಆಟ. ಆದರೆ ಆಡುವಾಗ ಒಂದು ಹರಳನ್ನೂ ಕೆಡವಬಾರದು.

ಕುಟುಕುಟ :

ಒಂದು ಹರಳನ್ನು ಮೇಲೆ ಹಾರಿಸಿ, ನೆಲಕ್ಕೆ ಕೆಡವಿ ಮೇಲಿನ ಹರಳನ್ನು ಕೈಯಲ್ಲಿ ಹಿಡಿಯಬೇಕು. ಮತ್ತೆ ಮೇಲೆ ಹಾರಿಸಿ ಅದು ಕೆಳಗೆ ಬೀಳುವುದರೊಳಗೆ ಒಂದು ಹರಳು ಎತ್ತಿ ನೆಲಕ್ಕೆ ಕುಟ್ಟಿ ಇಟ್ಟು, ಮೇಲಿನ ಹರಳನ್ನು ಹಿಡಿಯಬೇಕು. ಹೀಗೆ ಉಳಿದ ಹರಳುಗಳನ್ನು ಒಂದೊಂದೇ ಕುಟ್ಟಿ ಕುಟ್ಟಿ ಇಡಬೇಕು. ಕುಟ್ಟುವಾಗ ಅವನ್ನು ಒಂದೆಡೆ ತಂದಿಟ್ಟುಕೊಂಡಿರಬೇಕು. ಕೊನೆಗೆ ಎಲ್ಲವನ್ನು ಒಟ್ಟಿಗೆ ಕೈಗೆ ತಕ್ಕೊಂಡು ಮೇಲೆ ಹಾರಿಸಿದ ಹರಳು ಹಿಡಿಯಬೇಕು.

ಇನ್ನು ಮುಂದೆ ಒಂದೇ ಆಟ

ಕಿಟ್ಟಾಕ್ಕಾ :

ಒಂದು ಹರಳು ಮೇಲೆ ಹಾರಿಸಿ ಉಳಿದುವುಗಳನ್ನು ಕೆಳಗೆ ಬಿಟ್ಟು, ಮೇಲಿನ ಹರಳನ್ನು ಹಿಡಿದು, ಪ್ರತಿಸಾರ ಹರಳು ಹಾರಿಸಿ ಒಂದೊಂದೇ ಹರಳನ್ನು ತುಸು ತುಸು ಮುಟ್ಟು ಮೇಲೆ ಹಾರಿಸಿದ ಹರಳು ಹಿಡಿಯಬೆಕು. ೫ನೇಯ ಸಾರೆ ಮುಟ್ಟಿದ ಯಾವುದಾದರೂ ಹರಳನ್ನು ಮುಟ್ಟಬೇಕು. ಎಲ್ಲವನ್ನು ಒಟ್ಟುಗೂಡಿಸಿ ಹಿಡಿಯಬೇಕು. ಒಟ್ಟುಗೂಡಿಸಲು ಒಂದಕ್ಕಿಂತ ಹೆಚ್ಚು ಅವಕಾಶ ಪಡೆಯಬಹುದು.

ನಿಕ್ಕಕ್ಕಾ :

ಒಂದು ಹರಳನ್ನು ಮೇಲೆ ಹಾರಿಸಿ, ಉಳಿದವನ್ನು ಕೆಳಗೆ ಬಿಟ್ಟು ಹರಳು ಹಿಡಿಯಬೇಕು. ಹರಳೊಂದನ್ನು ಮೇಲೆ ಹಾರಿಸಿ ಅದು ಬೀಳುವುದರೊಳಗೆ ಒಂದು ಹರಳನ್ನು ನೆಲ್ಕೆ ಚಾಚಿದ್ದ ಅಂಗ್ಯಗೆ ಏರಿಸಬೆಕು. ಹೀಗೆ ಎಲ್ಲವನ್ನೂ ಎಡ ಅಂಗೈಗೆ ತುಂಬಿ ಕೊಳ್ಳಬೇಕು.

ಕೋಳಿಗೂಡು:

ಎಡಗೈಯನ್ನು ಡಬ್ಬು ಹಿಡಿದು, ತೋರಬೆರಳನ್ನು ಎತ್ತಿ ಬಾಗಿಲಿನಂತೆ ಮಾಡಿ, ನಿಕ್ಕಕ್ಕಾ ಆಟದಂತೆ ಕೆಳಗೆ ಚೆಲ್ಲಿದ ಹರಳುಗಳನ್ನು ಒಂದೊಂದಾಗಿ ಗೂಡಿಗೆ ಸೇರಿಸಬೇಕು.

ಪುಗ್ಗ :

ಹರಳನ್ನು ಮೇಲಿನಂತೆ ಚೆಲ್ಲಿ ಪ್ರತಿಯೊಂದು ಹರಳಿನ ಮೇಲೆ ಚಪ್ಪರದಂತೆ ಬಲಗೈ ಡಬ್ಬು ಹಾಕಬೇಕು.

ಮರಿಬಿಡಕ:

ಒಂದು ಹರಳನ್ನು ಮೇಲೆ ಹಾರಿಸಿ, ಮೂರು ಹರಳನ್ನು ಕೆಳಗೆ ಬಿಡಬೇಕು. ಮೇಲಿನ ಹರಳನ್ನು ಹಿಡಿಯಬೇಕು. ಈಗ ಕೈಯಲ್ಲಿ ಎರಡು ಹರಳುಗಳಿರುತ್ತವೆ. ಒಂದು ಹರಳನ್ನು ಮೇಲೆ ಹಾರಿಸಿ ಕೆಳಗಿದ್ದ ಒಂದು ಹರಳನ್ನು ಎತ್ತಿಕೊಳ್ಳುತ್ತ, ಕಿರಿ ಬೆರಳ ಸಂದಿಯಿಂದ   ಒಳಗಿದ್ದ ಹರಳನ್ನು ಬಿಡಬೆಕು. ಹೀಗೆ ಮೂರುಸಾರೆ ಆಡಿದ ಮೇಲೆ ಕೈಯಲ್ಲಿದ್ದ ಹರಳನ್ನು ಕೆಳಗಿರುವ ಹರಳಿನ ಮೇಲೆ ಬಿಡಬೇಕು. ಅವು ಒಂದಕ್ಕೊಂದು ಡಿಕ್ಕಿಯಾಗದಿದ್ದರೆ ಆಟಗಾರ ಸೋತಂತೆ. ನಂತರ ಎಲ್ಲವನ್ನು ಒಮ್ಮೆಲೆ ಹಿಡಿಯಬೇಕು.

ತೊಟ್ಟಿಲು:

ಒಂದು ಹರಳು ಹಾರಿಸಿ, ಕೆಳಗೆ ಮೂರು ಬಿಟ್ಟು ಕೈಯಲ್ಲೊಂದು ಇಟ್ಟುಕೊಳ್ಳಬೇಕು. ಮೇಲೆ ಇದ್ದ ಹರಳನ್ನು ಹಿಡಿಯಬೆರಕು. ಕೈಯಲ್ಲಿದ್ದ ಎರಡು ಹರಳನ್ನು ಹಾರಿಸಿ ಒಂದನ್ನು ಎಡಗಯಯಲ್ಲಿ. ಇನ್ನೊಂದನ್ನು ಬಲಗೈಯಲ್ಲಿ ಹಿಡಿಯಬೇಕು. ಬಲಗೈಯಲ್ಲಿ ಹರಳು ಹಿಡಿಯುವ ಮೊದಲು ಕೆಳಗಿನ ಒಂದು ಹರಳು ಎತ್ತಿಕೊಳ್ಳಬೆಕು. ಬಲಗೈಯಲ್ಲಿ ಹರಳು ಹಿಡಿಯುವ ಮೊದಲು ಕೆಳಗಿನ ಒಂದು ಹರಳು ಎತ್ತಿಕೊಳ್ಳಬೇಕು. ಹೀಗೆ ಕೆಳಗಿನ ಎಲ್ಲ ಹರಳು ಎತ್ತಿಕೊಳ್ಲುವವರೆಗೆ ಹೀಗೆ ಮಾಡಬೇಕು. ಕೊನೆಗೆ ಅಂಗೈಯಲ್ಲಿರುವ ಎರಡು ಹರಳುಗಳನ್ನು ಹಾರಿಸಿ ಬೆಂಗಯಯನ್ನು ನೆಲಕ್ಕೆ ತಟ್ಟಿ ಒಂದು ಹರಳನ್ನು ಬಲಗೈಯಲ್ಲಿ ಇನ್ನೊಂದನ್ನು  ಎಡಗೈಯಲ್ಲಿ ಹಿಡಿಯಬೇಕು. ಕೊನೆಯ ಹರಳನ್ನು ಮೇಲೆ ಹಾರಿಸಿ, ಎಡಗೈಯಲ್ಲಿ ಇನ್ನೊಂದನ್ನು ಎಡಗಯಯಲ್ಲಿ  ಹಿಡಿಯಬೇಕು. ಕೊನೆಯ ಹರಳನ್ನು  ಮೇಲೆ ಹಾರಿಸಿ, ಎಡಗೈಯಲ್ಲಿ ಹಿಡಿದು ಬೆಂಗೈ ತಟ್ಟಿ ಎಡಗಯ ಮುಚ್ಚಬೆಕು.

ಕೋಳ್ಗಂಬ:

ಮೇಲಿನ ಹೊಜ್ಯದಂತೆ. ಮೇಲೆ ಹಾರಿಸಿದ  ಹರಳು ಮಾತ್ರ ತಲೆಗಿಂತ ತುಸು ಹೆಚ್ಚು ಎತ್ತರಕ್ಕೆ ಹೋಗಬೇಕು.

ಎದೆ ಜಿಪ್ಪಕ್ಕ:

ಮೇಲಿನ ಹೊಜ್ಯದಂತೆ, ಹರಳನ್ನು ಕೆಳಗಿಟ್ಟು ಎದೆ ಮುಟ್ಟಿ ಮೇಲಿನ ಹರಳನ್ನು ಹಿಡಿಯಬೇಕು. ಮತ್ತೆ ಹರಳನ್ನು ಮೇಲೆ ಹಾರಿಸಿ ಕೆಳಗಿನ ಹರಳನ್ನು ಎತ್ತಿಕೊಂಡು ಎದೆ ಜಪ್ಪಿ ಮೇಲಿನ ಹರಳನ್ನು ಹಿಡಿಯಬೇಕು.

ಮುಷ್ಟಿ:

ಎಡ ಮುಷ್ಟಿ ಕಟ್ಟಿ ನೆಲದ ಮೇಲಿಟ್ಟು ಕಿರುಬೆರಳು, ನಡುಬೆರಳು, ಹೆಬ್ಬೆರಳು ಹಾಗೂ ಮುಷ್ಟಿಯ ಹಿಂದೆ ಮಣಿಕಟ್ಟಿನ ಹತ್ತರ ಒಂದೊಂದು ಹರಳಿಟ್ಟು ಉಳಿದೊಂದು ಹರಳನ್ನು ಮೇಲೆ ಹಾರಿಸಿ ಮುಷ್ಟಿ ಹೊರತೆಗೆದು ಕೆಳಗಿರುವ ಎಲ್ಲ ಹರಳನ್ನು ಹಿಡಿದು, ಮೇಲಿನ ಹರಳನ್ನು ಹಿಡಿಯಬೇಕು.

ಹಸ್ತ:

ಹಸ್ತವನ್ನು ನೆಲದ ಮೇಲಿಟ್ಟು ಬೆರಳ ತುದಿಗೆ ಮೇಲಿನಂತೆ ಮೂರು, ಮಣಿ ಕಟ್ಟಿನ ಹತ್ತರ ಒಂದು ಹರಳನ್ನು ಇಟ್ಟು ಮೇಲಿನಂತೆ ಎಲ್ಲವನ್ನು ಹಿಡಿಯಬೆಕು.

ಮುಂಗೈ ಮುಷ್ಟಿ:

ಮೇಲಿನಂತೆ ಹರಳಿಡಬೇಕು. ಮುಂಗೈ ನಡುಕಟ್ಟಿನ ಹತ್ತರ ಒಂದು ಹರಳು ಇಟ್ಟು ಮೇಲಿನಂತೆ ಹಿಡಿಯಬೇಕು.

ಮುಂಗೈ ಹಸ್ತ

ಮುಂಗೈ ಬೆರಳು ನೀಡಿ ನೆಲಕ್ಕೆ ಇಟ್ಟು ಮೇಲಿನಂತೆ ಹರಳಿಟ್ಟು ಹಿಡಿಯಬೇಕು.

ಪಾದ:

ಹಸ್ತದಂತೆ ಪಾದವನ್ನು ನೆಲದ ಮೇಲಿಟ್ಟು ಹಿಮ್ಮಡದ ಹತ್ತರ ಒಂದು ಹೆಬ್ಬರಳು, ನಡುವಿನ ಬೆರಳು, ಕಿರಿಬೆರಳುಗಳ ಹತ್ತರ ಮೂರು ಹರಳಿಟ್ಟು ಒಟ್ಟುಗೂಡಿಸಿ ಹಿಡಿಯುವುದು.

ಕಾಲು:

ಒಂದು ಕಾಲು ನೀಡಿ ಮಂಡಿಯ ಹತ್ತರ ಎರಡು ಪದದ ಇಬ್ಬದಿಗಳಲ್ಲಿ ಎರಡು ಇಟ್ಟು  ಕಾಲು ತೆಗೆದು ಹರಳನ್ನು ಒಮ್ಮೆಲೆ ಹಿಡಿಯುವದು.

ಮೇಲಿನ ಒಂದಳ್ಳಿಡಿಯಾದಿಂದ ಮುಂದೆಲ್ಲ  ಒಂದೊಂದು ಬಗೆಯ ಆಟದಲ್ಲಿ ಐಯ್ದು ಸಲ ಆಡಬೇಕಾದದ್ದನ್ನು ಒಮ್ಮೆಲೇ ಆಡಿ ಮುಗಿಸಬೇಕಾಗುತ್ತದೆ. ಒಂದು ಬಗೆಯ ಆಟವನ್ನು ಎರಡು ಸಲ ಆಡಿದ ಮೇಲೆ ಮುರನೆಯ ಸಲಕ್ಕೆ ಹರಳು ಹಿಡಿಯುವುದು ತಪ್ಪಿದರೆ, ಮತ್ತೊಮ್ಮೆ ಆ ಆಟ ಆಡುವಾಗ ಹೊಸತಾಗಿ ಮತ್ತೆ ಐದು ಸಲ ಆಟ ಆಡಬೇಕು.