ಇದು ಚಿಕ್ಕಮಕ್ಕಳ ಆಟ. ಇಬ್ಬರೇ ಆಡಬಹುದು. ಕಾಳಿನ ಸಂಖ್ಯೆಗೆ ಮಿತಿ ಇಲ್ಲ. ಎಲ್ಲ ಕಾಳುಗಳನ್ನು ಒಂದೆಡೆ ಕೂಡಿಸಿಡಬೇಕು. ಬಾಯಿಂದ ಊಬಿ ಊಬಿ ಹರಡಿದ ಕಾಳುಗಳನ್ನು ಹೆಕ್ಕಬೇಕು. ಹೆಕ್ಕುವಾಗ ಕಾಳಿಗೆ ಕೈತಾಗಿ ಇನ್ನೊಂದು ಕಾಳಿಗೆ ತಾಗಿದರೆ ಆಟಗಾರ ಔಟು. ಔಟಾಗುವವರೆಗೂ ಕಾಳು ಸಂಗ್ರಹಿಸುತ್ತಿದ್ದು ಔಟಾದ ಮೇಲೆ ಇನ್ನೊಬ್ಬರು ಆಡುವರು. ಹೆಚ್ಚು ಕಾಳು ಸಂಗ್ರಹಿಸಿದ್ದವರು ಗೆದ್ದರು. ಚೆನ್ನೆ ಕಾಳು (ಹಂಗರಕನ ಕಾಳು) ಹಗುರ ಇರುವ ಕಾರಣ ಅವನ್ನೇ ಹೆಚ್ಚಿಗೆ ಈ ಆಟಕ್ಕೆ ಬಳಸುವರು.

ಚೆನ್ನೆ ಕಾಳ್ಅಚ್ಚು:

ನಾಲ್ಕು ಕಾಳಿಗೆ ಒಂದು ಅಚ್ಚು. ಕಾಳನ್ನೆಲ್ಲ ನೆಲದಲ್ಲಿ ಹರಡಿಕೊಳ್ಳಬೇಕು; ಆಟಕ್ಕೆ ೫-೬ ಜನ ಸಾಕು. ಹೆಚ್ಚು ಕಾಳಿದ್ದರೆ ಹೆಚ್ಚು ಜನ ಕುಳಿತುಕೊಳ್ಳಬಹುದು. ಆಟ ಪ್ರಾರಂಭವಾದ ಮೇಲೆ ಕಾಳುಗಳನ್ನು ಚದುರಿಸಬಾರದು. ಆಟ ಪ್ರಾರಂಭಿಸಿದಮೇಲೆ ಒಂದು ಮುಷ್ಟಿ ತುಂಬ ಹರಳುಗಳನ್ನು ಎತ್ತಿಕೊಳ್ಳಬೇಕು. ಆ ಕಾಳುಗಳನ್ನು  ತೊಮ್ಮೆ (ತಿರ್ಪ್ಯಾ) ಹಿಡಿಯಬೇಕು. ಅಂದರೆ ಅವುಗಳನ್ನೆಲ್ಲ ಹಾರಿಸಿ ಬೆಂಗೈ ಮೇಲೆ ಹಿಡಿಯಬೇಕು. ಕೆಲವು ಕಾಳುಗಳು ಕೆಳಗೆ ಬಿದ್ದು ಹೋಗಬಹುದು. ಬೆಂಗಯಮೇಲಿಂದಲೇ ಕಾಳುಗಳನ್ನು ಮೇಲೆ ಹಾರಿಸಿ ಹಾರಿ ಹಿಡಿದಂತೆ ಹಿಡಿಯಬೇಕು. ಹೀಗೆ ಹಿಡಿದಾಗ ಕಡಿಮೆಯೆಂದರೆ ೫ ಕಾಳುಗಳಾದರೂ ಕೈಯಲ್ಲಿರಬೇಕು. ಕಡಿಮೆಯಿದ್ದರೆ ಆಟ ಬಿಡಬೇಕು. ಇದೆಲ್ಲ ಆಟ ಬಲಗೈಯಿಂದಲೇ ನಡೆಯುತ್ತಿರುತ್ತದೆ. ಬಲಗೈಯಲ್ಲಿದ್ದ ಈ ಕಾಳುಗಳಲ್ಲಿ  ಒಂದನ್ನು ಹೆಬ್ಬೆರಳು ತೋರಬೆರಳುಗಳ ನಡುವಿಟ್ಟುಕೊಂಡು  ಕೈಯಲ್ಲಿದ್ದ ನಾಲ್ಕು ಕಾಳುಗಳನ್ನು ತುಸು ಮೇಲಕ್ಕೆ ಹಾರಿಸಿ ಎಡಗಯಯಲ್ಲಿ ಹಿಡಿಯಬೇಕು. ಆಗ ಉಳಿದ ಕಾಳುಗಳು ಬಲಗೈಯಲ್ಲಿಯೇ ಇರುತ್ತದೆ. ಮತ್ತೆ ನಾಲ್ಕನ್ನು  ಮೇಲಿನ ರೀತಿಯಲ್ಲಿಯೇ ಹಾರಿಸಿ ಎಡಗೈಗೆ ತೆಗೆದುಕೊಳ್ಳಬೇಕು. ನಾಲ್ಕರ ಅಚ್ಚು ಎಡಗೈಗೆ ಸಾಗುವಾಗ ಕಾಳು ಬಿದ್ದರೆ ಆಟವಿಲ್ಲ. ಎರಡನೆಯ ಬಾರಿ ಕಾಳು ಚಾಚುವದು ಸುಲಭವಲ್ಲ ನಾಲ್ಕರ ಅಚ್ಚಿಗೆ ಹೊಂದದ ಎರಡೋ ಮೂರೋ ಕಾಳುಗಳು ಕೈಯಲ್ಲಿರುವಾಗಲೇ ಒಂದು ಕಾಳು ಮೇಲೆ ಹಾರಿಸಿ ಕೆಳಗಿರುವ,ಸಾಧ್ಯವಾದಷ್ಟು ಹೆಚ್ಚು ಕಾಳುಗಳನ್ನು ಬಾಚಿಕೊಳ್ಳಬೇಕು. ಗುಡ್ನ ಆಟದ ಒಂದನೆಯ ಗಿಲ್ಲಿಯಂತೆ ಇದನ್ನು ಆಡುವರು. ಆದರೆ ಕೆಳಗಿನ ಕಾಳನ್ನು  ಎಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಹೀಗೆ ಎತ್ತುವಾಗ ಕೆಳಗಿರುವ ಕಾಳು ಒಂದಕ್ಕೊಂದು ತಾಗಬಾರದು. ಕೈ ಸೋಂಕಬಾರದು, ಮೇಲಿನಂತೆ ಆಟ ಮುಂದುವರಿಸಿ ಎಡಗೈಗೆ ಅಚ್ಚು ಸಾಗಿಸಬೇಕು. ಎಲ್ಲ ಕಾಳು ಮುಗಿದ ಮೇಲೆ  ಆಟಗಾರರಲ್ಲಿ  ಯಾರಿಗೆ ಕಡಿಮೆ ಅಚ್ಚು ಬಂದಿದೆಯೋ ಅಷ್ಟು ಅಚ್ಚು ನೆಲಕ್ಕಿಟ್ಟು ಆಟ ಮುಮದುವರಿಸುವರು. ಅಚ್ಚು ಇಲ್ಲದವರು ಆಟ ಬಿಡಬೇಕು. ಹೀಗೆ ಒಬ್ಬೊಬ್ಬರೇ ಕಡಿಮೆಯಾಗುತ್ತಾರೆ. ಕೊನೆಗೆ ಉಳಿದವ ಗೆದ್ದಂತೆ ಎರಡನೆಯ ಆಟದಲ್ಲಿ ಅಚ್ಚು ಕಡಿಮೆಯಾದರೆ ಹಿಂದಿನ ಅಚ್ಚು ಉಳಿಸಿಕೊಂಡಿದ್ದರೆ ಈಗ ಬಳಸಬಹುದು.