ಸುಮಾರು ೪೦-೫೦ ವರ್ಷಗಳ ಹಿಂದೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡ ಈ ಆಟ ಈಗ ಸುಳಿವು ಕಾಣದ ರೀತಿಯಲ್ಲಿ ನಶಿಸಿ ಹೋಗುತ್ತಿದೆ. ಮನೆಮನಗೆಳಲ್ಲಿ, ಗುಡಿಗಾರರಿದ್ದರು. ಈಗ ಆಟ ಬಲ್ಲ ಜನ ಊರಿಗೊಬ್ಬರು ಸಿಕ್ಕರೆ ಪುಣ್ಯ. 

ತಾಬ್ಲಮಣೆಯನ್ನು ತಾಬ್ಲ ಪೆಟ್ಟಿಗೆಯೆಂತಲೂ ಕರೆಯುತ್ತಾರೆ. ಅಂದವಾದ ನಕ್ಷೆ ಬಣ್ಣಗಳಿಂದ ಶೃಂಗರಿಸಿ ತಾಬ್ಲಮಣೆಗೆ ಹೊಂದಿ, ಕೆಳಗೆ ಪೆಟ್ಟಿಗೆಯಂತೆ ಮಾಡಿರುತ್ತಾರೆ. ಪೆಟ್ಟಿಗೆಯಲ್ಲಿ ತಾಬ್ಲದ ಕಾಯಿ, ಕೊಚ್ಚುಗಳನ್ನು ಸುರಕ್ಷಿತವಾಗಿಡುವಂತೆ ರಚಿಸುತ್ತಾರೆ. ಇದರಲ್ಲಿಯೇ ಚಿನ್ನಮಣೆಯಿಡುವ ವ್ಯವಸ್ಥೆ ಇದ್ದು ಚೆನ್ನ ಕಾಳುಗಳನ್ನು ಅಲ್ಲಿಯೇ ಇಟ್ಟುಕೊಳ್ಳುವಂತೆಯೂ ಪೆಟ್ಟೆಗೆ ತಯಾರಿಸುತ್ತಿದ್ದರಂತೆ. ತಾಬ್ಲಮಣೆಗೆ ಕಾಯಿ ನಡೆಸಲು ಸಾಧ್ಯವಾಗುವಂತೆ ೪೮ ಚಿಕ್ಕ ರಂಧ್ರಗಳನ್ನು ಮಾಡುತ್ತಾರೆ. ತಾಬ್ಲಕಾಯಿಗಳ ಬುಡ ಚೂಪಾಗಿದ್ದು ಅವು ರಂಧ್ರದಲ್ಲಿ ಸರಿಯಾಗಿ ನಿಂತುಕೊಳ್ಳುತ್ತವೆ. ಮೇಲ್ಭಾಗ ಕೈಯಿಂದ ಎತ್ತಲು, ನೆಡಲು ಅನುಕೂಲವಾಗುವಂತಿರುತ್ತದೆ. ಕಾಯಿಗಳು ೨೪ ಇದ್ದು ಪ್ರತಿ ೧೨ಕ್ಕೆ ಒಂದೊಂದು ಬಣ್ಣ ಬೇಕು. ಹಸರು,ಕೆಂಪು, ಅಥವಾ ಬಿಳಿ ಕಪ್ಪು ಬಣ್ಣ ಹೆಚ್ಚು ಯೋಗ್ಯ. ತಾಬ್ಲ ಕೊಚ್ಚುಗಳು ಸುಮಾರು ೬”ಉದ್ದ ೧” ಅಗಲವಿದ್ದು ಅವು ನಾಲ್ಕು ಬೇಕು. ಅವು ಒಂದು ಬದಿಗೆ ಚಪ್ಪಟೆಯಾಗಿದ್ದು ಆ ಬದಿಗೆ ಅಲ್ಲಲ್ಲಿ ಬಣ್ಣ ಬಳೆದು’ ಗೆರೆ ಎಳೆದು ನಕ್ಷಿ ಬಿಡಿಸುತ್ತಾರೆ. ಬೆನ್ನ ಬದಿ ತುಸು ಉಬ್ಬಿದ್ದು ನುಣುಪಾಗಿರುತ್ತದೆ.

ಇಲ್ಲಿ ಆಟಗಾರರು ಇಬ್ಬರು. ಒಬ್ಬರಿಗೆ ಒಂದೇ ಬಣ್ಣದ ಕಾಯಿಗಳು, ಪ್ರತಿಯೊಬ್ಬರು ತಮ್ಮ ಕಾಯಿ ತೆಗೆದುಕೊಂಡು ತಮ್ಮ ಬದಿಯ ಮೊದಲ ಸಾಲಿನಲ್ಲಿ ನೆಟ್ಟು ಕೊಳ್ಳುತ್ತಾರೆ. ಈ ಸಾಲಿನಲ್ಲಿರುವ ಇನ್ನೊಬ್ಬನ ಕಾಯಿಗಳನ್ನು ಓಡಿಸಿ ತನ್ನ ಕಾಯಿಗಳನ್ನು ಅಲ್ಲಿಗೆ ತಂದು ಸ್ಥಾಪಿಸುವುದು ಆಟದ ಗುರಿ. ಆಟ ಪ್ರಾರಂಭಿಸಿದವರು ಎಲ್ಲ ತಾಬ್ಲ ಕೊಚ್ಚುಗಳನ್ನು ಬಲಗೈಯಲ್ಲಿ ಹಿಡಿದು ಕು‌ಟ್ಟಿ, ಹಾರಿಸಿ ನೆಲಕ್ಕೆ ಚೆಲ್ಲುವರು. ಪ್ರತಿಯೊಬ್ಬರು ಪ್ರತಿ ಆಟದಲ್ಲಿಯೂ ಹೀಗೆ ಎರಡು ಸಾರೆ ಚೆಲ್ಲಬೇಕು. ಈ ಎರಡೂ ಸಾರೆ ದೊರೆತ ಅಂಕದ ಮೊತ್ತದಷ್ಟು ಮನೆಯನ್ನೂ ದಾಟಿ ಕಾಯಿ ನೆಡುವರು. ಅಂದರೆ ಮೊದಲನೆಯ ಸಾಲಿನ ಕಾಯಿ ತೆಗೆದು ಬಲದಿಂದ ಎರಡನೆಯ ಸಾಲಿನಲ್ಲಿ ನೆಡುವರು. ಮುಂದೆ ಮೂರನೆಯ ಸಾಲಿಗೆ, ಕೊನೆಗೆ ಎದುರಾಳಿಯ ಮನೆಗೆ ಕಾಯಿ ಹೋಗುವುದು.

ತಾಬ್ಲಗಳು ನೆಕ್ಕನೆ ಅಂದರೆ ಬಣ್ಣದ ಬದಿ ಮೇಲಾಗಿ ಬಿದ್ದರೆ ೧೨ ಅಂಕ ನುಣುಪು ಮೈ ಮೇಲಾಗಿ ಬಿದ್ದರೆ ೮ ಅಂಕ. ಈ ಎರಡು ಅಂಕಗಳನ್ನು ಕೂಡಿಸಿದಷ್ಟು ಮನೆ ದಾಟಬೇಕು. ಒಂದೇ ಆಟದಲ್ಲಿ ೮,೧೨ ದೊರೆತಾಗ, ೮ ಮತ್ತು ಬೇರೊಂದು ಅಂಕ ದೊರೆತಾಗ ಅಥವಾ ೧೨ ಹಾಗೂ ಬೇರೊಂದು ಅಂಕ ದೊರೆತಾಗ ಎದುರಾಳಿಯ ಕಾಯಿ ಕೊಂದರೆ ಆಟಗಾರನಿಗೆ ಇನ್ನೊಂದು ಅವಕಾಶವಿರುತ್ತದೆ. ಇಂತಹ ಅವಕಾಶಗಳು ಒಟ್ಟಿಗೆ ಮೂರು ಮಾತ್ರ. ಎದುರಾಳಿ ಕೊಂದ ಕಾಯಿಗಳು ಹಿಂದಿರುಗಿ ಮೊದಲ ಮನೆಗೆ ಬರಬೇಕು. ಅಲ್ಲಿಗೂ ಎದುರಾಳಿಯ ಕಾಯಿ ಬಂದರೆ ಕಾಯಿ ತೆಗೆದು ಕೆಳಗಿಡಬೇಕು. ಹೀಗೆ ಇನ್ನೊಬ್ಬ ಎಲ್ಲ ಕಾಯಿಗಳನ್ನು ಉರುಳಿಸಿದವನು ರಾಜ ಎರಡನೆಯವ ಮಂತ್ರಿ. ಕೆಲವೊಮ್ಮೆ ಎಲ್ಲ ಕಾಯಿಗಳನ್ನು ಒಬ್ಬನೇ ಉರುಳಿಸಲಾರ. ಆಗ ಹೆಚ್ಚು ಕಾಯಿ ಉರುಳಿಸಿದವ ರಾಜ. ಆತನು ಮಂತ್ರಿಗಿಂತ ಎಷ್ಟು ಹೆಚ್ಚು ಕಾಯಿಗೆ ಎದುರು ಮನೆಯಲ್ಲಿ ಸ್ಥಾನ ಪಡೆದಿದ್ದಾನೆಂಬುದನ್ನು ಲೆಕ್ಕ ಮಾಡಿ, ಇಂತಿಷ್ಟು ಕಾಯಿಗಳಿಂದ ರಾಜ ಗೆದ್ದಿದ್ದಾನೆ ಎನ್ನತಾರೆ.