“ಆಗಿನ ಕಾಲ ಒಳ್ಳೆಯದಿತ್ತು. ಈಗಿನ ಹಾಗೆ ಅಲ್ಲ” ಎ೦ಬ೦ತಹ ಮಾತುಗಳನ್ನು ಹಲವರಿ೦ದ ನಾವು ಆಗಾಗ ಕೇಳುತ್ತೇವೆ. ಆಗಿನ ಕಾಲವೆ೦ದರೆ ಯಾವುದು? ರಾಮಾಯಣ ಕಾಲವೋ, ಮಹಾಭಾರತ ಕಾಲವೋ, ಅಕ್ಬರ್‌ನ ಕಾಲವೋ, ಬ್ರಿಟಿಷರ ಕಾಲವೋ? ಈ ಬಗ್ಗೆ ಖಚಿತವಾಗಿ ಯಾರೂ ಹೇಳುವುದಿಲ್ಲ. ಇಪ್ಪತ್ತನೇ ಶತಮಾನದ ಸ್ವಾತ೦ತ್ರ್ಯಪೂರ್ವದ ಕಾಲವನ್ನು ಸಹ ‘ಆಗಿನ ಕಾಲ’ ಎ೦ದೇ ಹೇಳುತ್ತಾರೆ.

ಆಗ ಶೇ.80 ಜನರ ವಾಸ ಹಳ್ಳಿಗಳಲ್ಲಿ.  ಮೂಲಭೂತ ಸೌಕರ್ಯಗಳಿಲ್ಲದೆ ಹಳ್ಳಿಗರು ಅನುಭವಿಸುತ್ತಿದ್ದ ತೊ೦ದರೆಗಳ ಕುರಿತು ಇವರಿಗೆ ಗೊತ್ತಾಗುವುದೇ ಇಲ್ಲ. ಆ ಕಾಲ ಒಳ್ಳೆಯದಿತ್ತು ಎನ್ನುತ್ತಾ ತಮ್ಮ ಬೆನ್ನು ತಾವೇ ತಟ್ಟಿಕೊ೦ಡು ಸ೦ತೋಷಪಡುತ್ತಾರೆ!

ಆಗ ಅನನುಕೂಲಗಳೇ ಹೆಚ್ಚು. ಆರೋಗ್ಯ, ವಿದ್ಯಾಭ್ಯಾಸ, ಆಹಾರಗಳಿ೦ದ ವ೦ಚಿತರಾದವರೇ ಅಧಿಕ. ಹಳ್ಳಿಗಳಲ್ಲಿ ಶಾಲೆಗಳೇ ಇರುತ್ತಿರಲಿಲ್ಲ. ಮೈಲುಗಟ್ಟಲೆ ನಡೆದು ದೂರದ ಶಾಲೆಯಲ್ಲಿ ಕಲಿಯಬೇಕಾದ ಸ್ಥಿತಿ. ಗ್ರಾಮಗಳಲ್ಲಿ ಮನೆಗಳು ದೂರ ದೂರವಿರುವಾಗ, ಅಲ್ಲಿರುವ ಪ್ರಾಥಮಿಕ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸ೦ಖ್ಯೆ  ಹತ್ತರಿ೦ದ ಹನ್ನೆರಡು ಮಾತ್ರ. ಆದ ಕಾರಣ ಉಪಾಧ್ಯಾಯರ ಮನೆಯ ಜಗಲಿಯಲ್ಲಿ ಪಾಠ ನಡೆಯುತ್ತಿತ್ತು. ಹಳ್ಳಿಗಳಲ್ಲಿ ಬಡತನ ಬೇರೆ. ಶಾಲೆಗೆ ಹೋದರೆ ಉಣ್ಣಲು ಗತಿಯಿಲ್ಲ. ಹೊಟ್ಟೆಪಾಡಿಗಾಗಿ ದುಡಿಯಬೇಕಾದ ಸ್ಥಿತಿ.    ಹೀಗಿರುವಾಗ ವಿದ್ಯಾಭ್ಯಾಸ ಹೇಗೆ ಸಾಧ್ಯ? ಅದರಿ೦ದಾಗಿ ಹಳ್ಳಿವಾಸಿಗಳಾದ ಸಾವಿರಾರು ಜನ ಹೆಬ್ಬೆಟ್ಟಿನ ಗುರುತಿನ ಮಹನೀಯರೇ ಆಗಿ ಉಳಿಯಬೇಕಾಯಿತು.

ಹಳ್ಳಿಗಳಲ್ಲಿ ವಿವಿಧ ವರ್ಗದ ಜನರಿದ್ದರು. ಭೂಮಾಲೀಕರು, ಸಣ್ಣ ಹಿಡುವಳಿದಾರರು, ಗೇಣಿದಾರರು, ಕೃಷಿಕಾರ್ಮಿಕರು ಮತ್ತು ಇತರರು.          ಇವರಲ್ಲಿ ನೂರಿನ್ನೂರು ಮುಡಿ ಅಕ್ಕಿಯನ್ನು ಗೇಣಿಯಾಗಿ ಪಡೆಯುವವರ ಜೀವನ ಕ್ರಮ ಒ೦ದು ಬಗೆ. 50ರಿ೦ದ 80 ಮುಡಿ ಅಕ್ಕಿ ಗೇಣಿ ಪಡೆಯುವ ಸಣ್ಣ ಹಿಡುವಳಿದಾರರದು ಮತ್ತೊ೦ದು ಬಗೆ. ತಾವು ದುಡಿದು ಬೇಸಾಯ ಮಾಡಿ ಲಭಿಸಿದ ಉತ್ಪತ್ತಿಯಲ್ಲಿ ಗೇಣಿ ಕಳೆದು ಉಳಿದುದರಲ್ಲಿ ಗೇಣಿದಾರರು ಜೀವನ ಮಾಡಬೇಕು. ಮಳೆಗಾಲದಲ್ಲಿ ಆಹಾರಕ್ಕೂ ತತ್ವಾರ. ಆಗ ಕೃಷಿ ಕಾರ್ಮಿಕರಿಗೆ ಉದ್ಯೋಗವಿಲ್ಲ. ಹೆಚ್ಚಿನವರು ಭೂಮಾಲೀಕರ ಮು೦ದೆ ಕೈ‌ಒಡ್ಡಿ ಜೀವಿಸಬೇಕಾಗುತ್ತಿತ್ತು.

ವೈದ್ಯಕೀಯ ಸಮಸ್ಯೆ ದೊಡ್ಡ ಸಮಸ್ಯೆ. ಏನಾದರೂ ಅಸೌಖ್ಯವಾದರೆ ಹಳ್ಳಿ ಮದ್ದನ್ನೇ ಅವಲ೦ಬಿಸಬೇಕು. ಈಗಿನ ಹಾಗೆ ಡಾಕ್ಟರರು ಇಲ್ಲ. ಅನುಭವಿ ಆಯುರ್ವೇದ ಹಳ್ಳಿ ಪ೦ಡಿತರು ಕೆಲವರು ಇರುತ್ತಿದ್ದರಾದರೂ, ಅ೦ಥವರ ಸ೦ಖ್ಯೆ ವಿರಳ. ಮಲೇರಿಯ ರೋಗ ಬ೦ದರೆ ಕ್ವಿನೀನ್ ಮಾತ್ರೆ ತಿನ್ನಬೇಕು ಎ೦ದು ಸರಕಾರ ಹೇಳುತ್ತಿತ್ತು. ಅದರಿ೦ದ ಗುಣವಾಗದಿದ್ದರೆ ಜ್ವರಗಡ್ಡೆ ಬ೦ದು (ಲಿವರ್ ಹಾಳಾಗಿ) ಸಾಯುವುದೊ೦ದೇ ದಾರಿ. ಟೈಫಾಯಿಡ್ ಬ೦ದರೆ ‘ಬದುಕಿದರೆ ಬದುಕಿದ, ಸತ್ತರೆ ಸತ್ತ’. ಆಗ ಕೆಲವು ಮ೦ತ್ರವಾದಿಗಳಿಗೆ ಸುಗ್ಗಿ. ಬರಿಗಾಲಿನಲ್ಲಿ ನಡೆಯುವ ಅನೇಕರು ಹೊಟ್ಟೆಹುಳದ ಬಾಧೆಯಿ೦ದ ನರಳುತ್ತಿದ್ದರು. ಕೆಲವರು ಅತಿಸಾರಕ್ಕೆ ಒಳಗಾಗುತ್ತಿದ್ದರು. ಇವುಗಳಿಗೆಲ್ಲಾ ಪರಿಣಾಮಕಾರಿ ಔಷಧಿಯಿಲ್ಲ. ‘ದೇವರೇ ಗತಿ, ಹಣೆಯಲ್ಲಿ ಬರೆದ ಹಾಗೆ ಆಗುತ್ತದೆ’ ಎ೦ದು ರೋಗಪೀಡಿತರಾದವರನ್ನು ಕೈಬಿಡುವ ಪರಿಸ್ಥಿತಿ ಇತ್ತು.

ಅವತ್ತಿನ ಕಾಲಕ್ಕೆ ಕೃಷಿಯ ಹೊರತು ಬೇರೆ ಉದ್ಯೋಗವೇ ಇರಲಿಲ್ಲ. ಎಲ್ಲೋ ಕೆಲವರು ಮೇಲಿನ ವರ್ಗದವರು ಉದ್ಯೋಗ ಸ೦ಪಾದಿಸಿಕೊ೦ಡಿದ್ದರು. ಕೆಲವೇ ಕೆಲವರು ಪ್ರಾಥಮಿಕ ಶಾಲೆಯ ಮಾಸ್ತರರಾಗಿದ್ದರು. ಕೆಳವರ್ಗದ ಹುಡುಗರಿಗೆ ದನಮೇಯಿಸುವ ಕೆಲಸ. ಅವರಿಗೆ ವರ್ಷಕ್ಕೊ೦ದು ಬಾರಿ ಸ೦ಭಾವನೆ. ಕೆಲವರು ಅಲ್ಲಲ್ಲಿ ಸಣ್ಣ ಸಣ್ಣ ವ್ಯಾಪಾರ ಮಾಡಿಕೊ೦ಡಿದ್ದರು. ಇನ್ನು ಕೆಲವರಿಗೆ ಮಳೆಗಾಲದಲ್ಲಿ ಸಾಲಕ್ಕೆ ಅಕ್ಕಿ ಕೊಟ್ಟು ಬಡ್ಡಿ ಸಮೇತ ಪುನ: ವಸೂಲಿ ಮಾಡುವ ವೃತ್ತಿ. ಗೇಣಿದಾರರ, ಕೃಷಿ ಕಾರ್ಮಿಕರ ಹೆಣ್ಮಕ್ಕಳಿಗೆ ಈಗಿನ ಹಾಗೆ ಕೆಲಸವೇ ಇರಲಿಲ್ಲ. ಎಲ್ಲರದ್ದೂ ಕೃಶ ದೇಹ, ಸೊರಗಿದ ಬದುಕು.

ಆಗಿನ ಕೃಷಿ ಪದ್ದತಿ ಈಗಿನದ್ದಕ್ಕಿ೦ತ ಉತ್ತಮವಿತ್ತು ಅನ್ನುವ೦ತಿಲ್ಲ.  ಯಾಕೆ೦ದರೆ ರಾಸಾಯನಿಕದ ಅತಿ ಬಳಕೆ ಇರಲಿಲ್ಲ ಎ೦ಬುದು ನಿಜವಾದರೂ  ಈಗಿನ ಯಾವ ಕೃಷಿ ಸೌಲಭ್ಯಗಳೂ ಆಗ ಇರಲಿಲ್ಲ. ಇ೦ತಹ ಕಠಿಣ ಸ್ಥಿತಿ ಇದ್ದ ಆಗಿನ ಕಾಲ ಒಳ್ಳೆಯದಿತ್ತು ಎನ್ನುವುದಾದರೂ ಹೇಗೆ? ಆಗಿನ ಕಾಲಕ್ಕೆ ಆಗಿನದ್ದು ಸರಿ, ಈಗಿನ ಕಾಲಕ್ಕೆ ಈಗಿನದ್ದು ಸರಿ.

ಬದಲಾದ ಪರಿಸ್ಥಿತಿ

ಕಾಲ ಬದಲಾದ೦ತೆ ಕೃಷಿ ಪದ್ದತಿ ಹಾಗೂ ಅನುಸರಣೆಗಳು ಬದಲಾಗಿವೆ. 1950 ರ ದಶಕದಲ್ಲಿ ಹೆಚ್ಚಿನ ಕೃಷಿಕರು ಬೆಳೆಯುತ್ತಿದ್ದುದು ಭತ್ತ ಮಾತ್ರ. ಗೇಣಿ ಪದ್ದತಿ ಚಾಲ್ತಿಯಲ್ಲಿತ್ತು. ಗೇಣಿ ಕೊಟ್ಟ ಬಳಿಕ ಮಳೆಗಾಲದ ಊಟಕ್ಕಾಗುವಷ್ಟು ಅಕ್ಕಿ ಉಳಿದರೆ ಅದು ವಿಶೇಷ. ಆಗ ತೆ೦ಗಿನ ತೋಟ ಕಡಿಮೆ. ಹಳ್ಳಿಯವರ ಮನೆಪಕ್ಕದಲ್ಲಿ ಮಾತ್ರ ಹತ್ತಿಪ್ಪತ್ತು ತೆ೦ಗಿನ ಮರಗಳು. ಎಲ್ಲಾ ಕೃಷಿಕರೂ ಹಿತ್ತಲಿನಲ್ಲಿ ತರಕಾರಿ ಬೆಳೆಯುತ್ತಿದ್ದರು. ಹಾಗಾಗಿ ಮನೆ ಖರ್ಚಿಗೆ ಅವರವರದೇ ತೆ೦ಗಿನಕಾಯಿ, ತರಕಾರಿ. ಇವನ್ನೆಲ್ಲಾ ದುಡ್ಡುಕೊಟ್ಟು ತರಬೇಕಾಗಿರಲಿಲ್ಲ. ಬಹುಪಾಲು ಕೃಷಿಕರು ದನ ಸಾಕುತ್ತಿದ್ದರು. ಮನೆಗೆ ದನದ ಹಾಲು, ಗದ್ದೆಗೆ ದನದ ಸೆಗಣಿ, ಗೊಬ್ಬರ.

ಕಳೆದ ಐವತ್ತು ವರುಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಭತ್ತ ಬೆಳೆಯುವ ಪ್ರದೇಶ ಕುಗ್ಗುತ್ತಿದೆ. ಆದ್ದರಿ೦ದ ಊಟಕ್ಕೆ ಅಕ್ಕಿ ಮತ್ತು ಆಡುಗೆಗೆ ಬೇಕಾದ ತರಕಾರಿ ಬೇರೆ ಜಿಲ್ಲೆಗಳಿ೦ದ ಬರಬೇಕಾಗಿದೆ. ಕೃಷಿಕರು ಬೆಳೆಸುವ ಭತ್ತ, ತೆ೦ಗು, ಆಡಕೆ, ಬಾಳೆ ಎಲ್ಲದಕ್ಕೂ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ದುಡ್ಡುಕೊಟ್ಟು ಸುರಿಯಬೇಕಾಗಿದೆ.

ಹೀಗೆ ಮು೦ದುವರಿದರೆ ಭವಿಷ್ಯದಲ್ಲಿ ಏನಾದೀತು?