ಕಾನಾಡೀ ವಿಠಲ

ಇಂದಿನ ಪಂಢರಪುರದ ಪಾಂಡುರಂಗವಿಠಲ ಒಂದು ಕಾಲದಲ್ಲಿ ಕನ್ನಡಿಗರ ವಿಠಲನೇ ಆಗಿದ್ದ. ಕನ್ನಡದ ಹರಿದಾಸರೆಲ್ಲ ಪಂಢರಪುರದ ಅಧಿದೇವತೆ ವಿಠ್ಠಲನ ಅಭಿಮಾನಿಗಳು. ಹೀಗಾಗಿ ಹರಿದಾಸ ಪಂಥದಲ್ಲಿ ವಿಠ್ಠಲನಿಗೆ ವಿಶೇಷ ಮನ್ನಣೆ. ವಿಠ್ಠಲ ಸಂಪ್ರದಾಯದ ಉಗಮ (ಕ್ರಿ.ಶ. ೭ನೇ ಶತಮಾನ) ದ ಕಾಲಕ್ಕಾಗಲೇ ಇಂದಿನ ಮಹಾರಾಷ್ಟ್ರದ ಬಹುಪಾಲು ಕನ್ನಡದ ದೊರೆಗಳ ಆಳ್ವಿಕೆಗೆ ಒಳಪಟ್ಟಿತ್ತು. ಶಾತವಾಹನರು, ವಾಕಾಟಕರು, ಬದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು ಹಾಗೂ ದೇವಗಿರಿಯ ಯಾದವರು – ಈ ಐದು ರಾಜಮನೆತನಗಳು ಇಂದಿನ ಮಹಾರಾಷ್ಟ್ರ ರಾಜ್ಯವನ್ನು ಆಳಿದ ಕನ್ನಡ ರಾಜಮನೆತನಗಳಾಗಿವೆ. ರಾಷ್ಟ್ರಕೂಟರ ಕಾಲ (ಕ್ರಿ.ಶ. ೬ನೇ ಶತಮಾನ) ದಲ್ಲಿ ಪಂಢರಪುರವು ಕನ್ನಡ ನಾಡಿನ ಭಾಗವೇ ಆಗಿತ್ತು. ಈ ದೊರೆಗಳ ಕಾಲದಿಂದಲೇ ವಿಠ್ಠಲನ ಆರಾಧನಾ ಸಂಪ್ರದಾಯ ನೆಲೆಗೊಂಡಿರಬೇಕು. ರಾಷ್ಟ್ರಕೂಟ ದೊರೆಗಳು ಈ ದೇವಾಲಯಕ್ಕೆ ದತ್ತಿ ಬಿಟ್ಟುಕೊಟ್ಟ ಶಾಸನಗಳಿವೆ. ಪಂಢರಪುರದ ಅತಿ ಪ್ರಾಚೀನ ಉಲ್ಲೇಖ ಏಳನೆಯ ಶತಮಾನದ ತಾಮ್ರಪಟವಾಗಿದ್ದು ಅದರಲ್ಲಿ ವಿಠ್ಠಲ ಎಂಬ ಬ್ರಾಹ್ಮಣನಿಗೆ ಪಂಡರಂಗಪಳ್ಳಿಯನ್ನು ದಾನವಾಗಿ ಕೊಟ್ಟ ಉಲ್ಲೇಖವಿರುವುದಾಗಿ ಹೇಳಲಾಗಿದೆ. (ಚಿದಾನಂದಮೂರ್ತಿ ೨೦೦೫: ೧೦೨) ಕ್ರಿ.ಶ. ೧೯೩೬ರ ಹೊಯ್ಸಳ ಸೋಮೇಶ್ವರನ ಶಾಸನದಲ್ಲಿ (ಕನ್ನಡ ಮತ್ತು ಸಂಸ್ಕೃತಿ ಭಾಷೆ) ಭೀಮರಥೀ ನದಿತೀರಸಂವಿಷ್ಟಂ ಪಂಡರಗೆ ನಾಮಾನಾಂ ಮಹಾಗ್ರಾಮಮಧಿವಸತೇ ಪುಂಡರೀಕ ಮುನಿಮನಃ ಕುಮುದ ವಿಕಾಸ ಸುಧಾರಣಕಾಯ ಭಗವತ್ ಶ್ರೀ ವಿಠ್ಠಲ ದೇವಾಯ ಎಂದು ತೀರ್ಥ, ಕ್ಷೇತ್ರ, ಭಕ್ತ ಹಾಗೂ ದೇವ – ಈ ನಾಲ್ಕರ ಉಲ್ಲೇಖವಿದೆ. ಈ ಶಿಲಾಲೇಖದ ಕನ್ನಡ ಭಾಗದಲ್ಲಿ ಪಂಡರಗೆಯ ಶ್ರೀ ವಿಠ್ಠಲದೇವ ಎಂದಿದೆ. ಮೂಲತಃ ವಿಷ್ಣು ಸಹಿತ ಶಿವನಾಗಿರುವ ವಿಠ್ಠಲನಿಗೆ ಹೊಯ್ಸಳ ಸೋಮೇಶ್ವರನು ನೀಡಿದ ದಾನಗಳ ವಿವರ ಈ ಶಾಸನದಲ್ಲಿ ಇದೆ.

ಪಂಢರಪುರವನ್ನು ಶಾಸನಗಳಲ್ಲಿ ಪಂಡರಗೆ ಎಂದು ಕರೆದಿದೆ. ಪಂಡ ಎಂಬ ಹೆಸರಿನ ಜನಸಮುದಾಯದ ನೆಲೆಯೇ ಪಂಡರಗೆ. ಪಂಡರ + ಕೆಯ್ (= ನೆಲೆ) ಎಂಬುದೇ ಪಂಡರಗೆ ಆಗಿದೆ ಎಂದು ಡಾ. ಎಂ.ಎಂ. ಕಲಬುರ್ಗಿಯವರು ಅಭಿಪ್ರಾಯಪಡುತ್ತಾರೆ (೧೯೮೮ : ೧೮೭) ಹೀಗೆ ವಿಠ್ಠಲ ನೆಲೆಸಿದ ಗ್ರಾಮನಾಮದ ವ್ಯುಪ್ಪತ್ತಿ ಕನ್ನಡದಿಂದಲೇ ಸಾಧಿತವಾಗಿರುವುದು ಗಮನಾರ್ಹ ಸಂಗತಿ. ಹಾಗೆಯೇ ಪಾಂಡುರಂಗ ವಿಠ್ಠಲ ಎಂಬುದು ಪಂಡರಗೆ ವಿಠ್ಠಲ ಎಂಬುದರ ಪಂಡಿತರೂಪವಿರಬೇಕು.

ವಿಠ್ಠಲ ಪದದ ಮೂಲ ಏನಿರಬಹುದು? ಈ ಪದ ಸಂಸ್ಕೃತಿ ಸಾಹಿತ್ಯದಲ್ಲೆಲ್ಲೂ ಬಳಕೆಯಾದಂತಿಲ್ಲ ವಿಠ್ಠಲ ಭಗವಂತನ ರೂಪವನ್ನು ಯಾವ ಪುರಾಣವೂ ಹೇಳುತ್ತಿಲ್ಲ. ಶ್ರೀ ವಾದಿರಾಜರು ಗೋಪಬಾಲಕನಾದ ಪಾಂಡುರಂಗ ವಿಠ್ಠಲನು ಕೃಪೆಯಿಂದ ನಮ್ಮ ಮೇಲೆ ಪ್ರಸನ್ನನಾಗಲಿ ಎಂದು ಹೇಳಿರುವುದನ್ನು ಕಂಡರೆ ಬಾಲರೂಪವೇ ವಿಠ್ಠಲ. ವಿಠ್ಠಲದ ಮೂಲ ವಿಷ್ಣು ಆಗಿರಬೇಕೆಂದೂ ವಿಷ್ಣು > ವಿಟ್ಟ > ವಿಟ್ಟಣ > ವಿಟ್ಟಳ > ವಿಠ್ಠಲ ಆಗಿರುವ ಸಾಧ್ಯತೆಯಿದೆ ಎಂದು ಡಾ. ಕಲಬುರ್ಗಿಯವರು ಬರೆಯುತ್ತಾರೆ (೧೯೮೮-೧೫೯) ಇಟ್ಟಿಗೆಯ ಮೇಲೆ ನಿಂತಿದರಿಂದ ಈ ದೇವರಿಗೆ ವಿಠ್ಠಲ. ವಿಠೋಬಾ ಎಂಬ ಹೆಸರಾಗಿ ಬಂದಿರಬಹುದು ಎಂಬ ಅಭಿಪ್ರಾಯವನ್ನು ಪುಂಡರೀಕನ ಹಿನ್ನೆಲೆಯಲ್ಲಿ ಹೇಳಲಾಗಿದೆ (ಗಾಯಕ್ವಾಡ್ ೨೦೦೫ : ೩)

ಮಹಾರಾಷ್ಟ್ರದ ಸಂತರೂ ಕರ್ನಾಟಕದ ಹರಿದಾಸರೂ ವಿಠಲೋಪಾಸಕರು. ಕನ್ನಡದ ಹರಿದಾಸ ಸಾಹಿತ್ಯ ಪರಂಪರೆ ಹದಿನೈದನೆಯ ಶತಮಾನದಿಂದ ಖಚಿತಗೊಂಡರೂ ಅದಕ್ಕಿಂತ ಮೊದಲೇ ಕನ್ನಡಿಗರು ವಿಠಲೋಪಾಸಕರಾದುದಕ್ಕೆ ಅನೇಕ ಉದಾಹರಣೆಗಳಿವೆ. ವಿಠ್ಠಲ ಮೂಲತಃ ಕರ್ನಾಟಕದವನು. ಅನಂತರ ಪಂಢರಪುರಕ್ಕೆ ಹೋದನು ಎಂದು ಮರಾಠಿ ಸಂತರು ತಮ್ಮ ಅಭಂಗಗಳಲ್ಲಿ ಹೇಳಿದ್ದುಂಟು.

ಕಾನಡಾ ಹೋ ವಿಠ್ಠಲು ಕರ್ನಾಟಕೂ
ತ್ಯಾನೆ ಮಜ ಲಾವಿಲಾ ವೇದು
(ಕನ್ನಡದ ವಿಠ್ಠಲ ತನ್ನ ಮನಸ್ಸನ್ನು ಸೆಳೆದುಕೊಂಡನು )

ಸಂತ ಜ್ಞಾನೇಶ್ವರನು ಪಂಢರಿರಾಯ ವಿಠ್ಠಲನಿಗೆ ಮನಸೋತು ಒಂದು ಚಿಕ್ಕ ಹಾಡನ್ನು ಕಟ್ಟಿದ್ದಾನೆ.

ಆ ……. ಆ ….. ನೀ ಕೇಳೆ ಮಾತು ಕೇಳೆಲೆ ಘನಿಗೆ ಮರುಳಾದೆನೆ
ಚೆಲುವನೇ ಚೆಲುವನೇ ಪಂಢರಿರಾಯಾ ಚೆಲುವನೇ
ಎಲ್ಲೆ ದೊರೆಕ್ಯಾನೆ ಎಲ್ಲೆ ಬಾ ರನ್ನೆ
ಪುಂಡಲೀಕನ ಭಕ್ತಿಗೆ ಬಂದಾ
ರಖುಮಾದೇವಿ ವರ ವಿಠ್ಠಲನೆ

ಸಂತ ಏಕನಾಥನ ಅಭಂಗವೊಂದರಲ್ಲಿ ವಿಠ್ಠಲನ ವರ್ಣನೆ ಹೀಗಿದೆ

ತೀರ್ಥ ಕಾನಡೆ, ದೇವ ಕಾನಡೆ
ಕ್ಷೇಮ ಕಾನಡೆ, ಪಂಡರಿಯೆ
ವಿಠ್ಠಲ ಕಾನಡೆ, ಭಕ್ತ ಕಾನಡೆ
………………………………….

ವಿಠ್ಠಲ ಕಾನಾಡಾ ವೀಠೆವರಿ

ಮಧ್ವಮತ ಸ್ಥಾಪಕರಾದ ಶ್ರೀ ಮಧ್ವಾಚಾರ್ಯ (೧೩ನೇ ಶತಮಾನ) ಉಡುಪಿಯ ಅಷ್ಟಮಠಗಳಲ್ಲಿ ಮೂವರು ಯತಿಗಳಿಗೆ ತಮ್ಮ ಉಪಾಸ್ಯಮೂರ್ತಿಗಳಾಗಿ ವಿಠಲನ ಮೂರ್ತಿಗಳನ್ನು ನೀಡಿದರು. ಈ ಮೂರ್ತಿಗಳು ಮೂಲಪುರುಷರ ಹೆಸರಿನೊಂದಿಗೆ ಇಂದಿಗೂ ಪೂಜೆಗೊಳ್ಳುತ್ತಿವೆ.

ಪೇಜಾವರ ಮಠ – ಅಧೋಕ್ಷಜ (ತೀರ್ಥ) ವಿಠಲ
ಪುತ್ತಿಗೆ ಮಠ – ಉಪೇಂದ್ರ (ತೀರ್ಥ) ವಿಠಲ
ಶೀರೂರ ಮಠ – ವಾಮನ (ತೀರ್ಥ) ವಿಠಲ

ಮಧ್ವಚಾರ್ಯರ ಮಾಧ್ವ ಪರಂಪರೆಗೆ ಸೇರಿದ ಉತ್ತರಾದಿ ಮಠದಲ್ಲಿಯೂ ಮೂಲರಾಮನ ಜತೆಗೆ ವಿಠಲಮೂರ್ತಿಯ ಆರಾಧನೆ ನಡೆಯುತ್ತಿದೆ.

ದಾಸ ಸಾಹಿತ್ಯದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಹಂಪಿಯಲ್ಲಿ ವಿಜಯ ವಿಠ್ಠಲ ಗುಡಿಯಿದೆ. ದಾಸ ಸಾಹಿತ್ಯದ ಆದ್ಯರಲ್ಲಿ ಒಬ್ಬರಾದ ಶ್ರೀಪಾದರಾಜರಿಗೆ ಪಂಢರಪುರದಲ್ಲಿ ವಿಠ್ಠಲಮೂರ್ತಿ ದೊರೆತ ಬಗ್ಗೆ ಮಾಧ್ವ ಪರಂಪರೆಯಲ್ಲಿ ಬಲವಾದ ನಂಬಿಕೆಯಿದೆ. ಶ್ರೀಪಾದರಾಜರು ತಮ್ಮ ಕೀರ್ತನೆಗಳಲ್ಲಿ ಮೊದಲ ಬಾರಿಗೆ ರಂಗವಿಠ್ಠಲ ಎಂಬ ಅಂಕಿತವನ್ನು ಬಳಸಿದ್ದಾರೆ ಹಾಗೂ ‘ಶ್ರೀರಂಗ ವಿಠಲನ ಶ್ರೀ ಮುಕುಟಕೆ ಶರಣು’ ಎಂಬ ಕೀರ್ತನೆಯನ್ನು ಬರೆದಿದ್ದಾರೆ.

ಶ್ರೀಪಾದರಾಜರಿಂದ ತೊಡಗಿ ಇಂದಿನವರೆಗೂ ಅನೇಕ ದಾಸರ ಅಂಕಿತದಲ್ಲಿ ಪರಪದವಾಗಿ ವಿಠಲ ಬಳಕೆಯಾಗುತ್ತಿರುವುದು ಗಮನಾರ್ಹ. ಮಹಾರಾಷ್ಟ್ರದ ವಿಠಲ ಸಂಪ್ರದಾಯ ಅಧ್ವೈತಪರವಾದರೆ ಕರ್ನಾಟಕದ ಹರಿದಾಸರದು ಧ್ವೈತಪರವಾದುದು. ಮಹಾರಾಷ್ಟ್ರದ ಸಂತರಲ್ಲಿ ಜ್ಞಾನದೇವ, ನಾಮದೇವರು ವಿಠಲೋಪಾಸಕರಲ್ಲಿ ಮೊದಲಿಗರು.

ಕರ್ನಾಟಕದಲ್ಲಿ ವಿಠ್ಠಲ ಸಂಪ್ರದಾಯ ಮೊದಲಾದುದರಲ್ಲಿ ಅಚಲಾನಂದ ದಾಸರೇ ಪ್ರೇರಕರು ಎಂಬ ಅಭಿಪ್ರಾಯವಿದೆ. ಡಾ. ಜಿ. ವರದರಾಜರಾವ್ ಅವರು ತುಖೇಕರಿ ಎಂಬ ಊರಲ್ಲಿ ದೊರೆತ ಹಸ್ತಪ್ರತಿಯ ಆಧಾರದ ಮೇಲೆ ಅಚಲಾನಂದದಾಸ (೯ನೇ ಶತಮಾನ) ರಿಗೆ ಪಂಢರಪುರದ ಚಂದ್ರಭಾಗ ನದಿ ದಂಡೆಯಲ್ಲಿ ಶ್ರೀ ವಿಠ್ಠಲನ ದರ್ಶನವಾಯಿತಂತೆ. ಆ ಬಳಿಕ ಭಾಗವತ ಧರ್ಮಾನುಸಾರಿ ಅಚಲಾನಂದ ದಾಸರು ವೈಷ್ಣವರಾದುದಾಗಿ ತಿಳಿದು ಬಂದಿದೆ. ಶ್ರೀ ಪಾದರಾಜರಿಗೆ ಪಂಢರಪುರದ ಚಂದ್ರಭಾಗ ನದೀದಡದಲ್ಲಿ ರಂಗವಿಠ್ಠಲನ ಪ್ರತಿಮೆ ದೊರೆತ ಬಗ್ಗೆ ವಿವರಗಳು ದೊರೆಯುತ್ತವೆ (ಬೇಲೂರು ಕೇಶವದಾಸ ೧೯೭೪ : ೨೮, ನಾಗರತ್ನ ಟಿ. ಎನ್. ೨೦೦೪: ೧೫-೧೬) ಮುಂದೆ ಬಂದ ಪುರಂದರದಾಸರು ಪುರಂದರ ವಿಠಲ ಎಂಬ ಅಂಕಿತವನ್ನೇ ಬಳಸಿದರಲ್ಲದೆ ಪಂಢರಪುರದ ವಿಠಲನನ್ನು ಕುರಿತ ನಾಲ್ಕು ಕೀರ್ತನೆಗಳನ್ನು ಬರೆದಿರುವದು ಕಂಡು ಬರುತ್ತದೆ. ಮುಂದೆ ಕನ್ನಡ ದಾಸ ಪರಂಪರೆಯಲ್ಲಿ ವಿಠ್ಠಲ ಪ್ರೀತಿ ಮುಂದುವರಿಯುವುದು. ಜಗನ್ನಾಥ ದಾಸರಿಗಂತೂ ಅಂಕಿತ ಪ್ರದಾನವಾದದ್ದು ಪಂಢರಪುರದಲ್ಲಿ.

ವ್ಯಾಸತೀರ್ಥರು ವಿಜಯನಗರದ ರಾಜಗುರುಗಳಾದ ಬಳಿಕ ಹಂಪಿಯಲ್ಲಿ ವಿಠ್ಠಲನ ಮುಂದಿರದ ಸ್ಥಾಪನೆ ಆಯಿತು (೧೬ನೇ ಶತಮಾನ). ಅದು ವಿಜಯ ವಿಠ್ಠಲ ಗುಡಿಯೆಂದೇ ಪ್ರಸಿದ್ದವಾಯಿತು. ಈ ಗುಡಿಯಲ್ಲಿ ರಾಜಕೀಯ, ಮತ್ತೀಯ ಕಾರಣಕ್ಕಿಂತ ಅಂದಿನ ವಿಠ್ಠಲ ಭಕ್ತ ಸಮುದಾಯದ ಮನೋಧರ್ಮವೇ ಕಾರಣವಾಗಿರಬೇಕೆಂದು ಡಾ. ಶಂಬಾ ಜೋಶಿಯವರು ಅಭಿಪ್ರಾಯ ಪಡುತ್ತಾರೆ.

ಸಂತ ಭಾನುದಾಸನು ಆ ಪ್ರತಿಮೆಯನ್ನು ಮರಳಿ ತಂದನೆಂಬ ಐತಿಹ್ಯವು ಮಹಾರಾಷ್ಟ್ರದಲ್ಲಿದೆ. ವಾದಿರಾಜರ ‘ ತೀರ್ಥ ಪ್ರಬಂಧ’ದಲ್ಲಿ ‘ತುಂಗಾತೀರ ಗತೋಸಿ ವಿಠ್ಠಲ’ ಎಂಬ ಉಲ್ಲೇಖನವಿದೆ. ಈ ಕಾರಣದಿಂದ ಭಾನುದಾಸರು ವಿಠ್ಠಲನನ್ನು ಮರಳಿ ಒಯ್ದು ಕಥೆ ವಾಸ್ತವವಿರಬೇಕು. ಆದರೆ ವಿಠ್ಠಲನು ಚಂದ್ರಭಾಗ ತೀರಬಿಟ್ಟು ತುಂಗಾತೀರಕ್ಕೆ ಬಂದ ನಿಜವಾದ ಕಾರಣವೇನು? ಕರ್ಜಿಗಿಯ ದಾಸರ ಒಂದು ಹಾಡಿನ ಮೂಲಕ ಬೆಳಕಿಗೆ ಬರುವ ಕಾರಣವು ವಾಸ್ತವ ಸ್ವರೂಪದ್ದಾಗಿ ಕಾಣುತ್ತದೆ. ಆ ಹಾಡು ಹೀಗಿದೆ.

ಏನಿದು ಕೌತುಕವೊ ಪಂಡರಿಯನೆ ಬಿಟ್ಟು
ನೀನಿಲ್ಲಿಗೆ ಬಂದ್ಯಾ ವಿಠ್ಠಲ
ಮಿಥ್ಯಾವಾದಿಗಳು ನಿನ್ನ ಸುತ್ತುಮುತ್ತಿಕೊಂಡು
ಅತ್ತು ಕರೆದು ಕೂಗುತ್ತಿರೆ ಬಹುಬ್ಯಾಸತ್ತು ಬಂದೆಯಾ ವಿಠಲಾ
ಮಧ್ವ ದ್ವೇಷಿಗಳು ಮಾಡುವ ಪದ್ದತಿಯನು ಕಂಡು
ಹೃದ್ಯವಾಗದೆ ಕದ್ದ ಕಳ್ಳನಂತೆದ್ದು ಇಲ್ಲಿಗೆ ಬಂದ್ಯಾ ವಿಠಲಾ
ಶ್ರೀದ ವಿಠಲ ನಿಮ್ಮ ಸದ್ಗುಣ ವೇದಶಾಸ್ತ್ರದಲ್ಲಿ
ಶೋಧಿಸಿ ನೋಡುವ ಭೂದೇರಿಗೊಲಿದಾದರಿಸಲು ಬಂದ್ಯಾ ವಿಠಲಾ

ಇದರ ಕೊನೆಯ ನುಡಿಯಲ್ಲಿ ‘ಭೂ ದೇವರಿಗೆ ಒಲಿದು ಆದರಿಸ ಬಂದ್ಯಾ ವಿಠ್ಠಲ’ ಎಂಬ ಇನ್ನೊಂದು ಮಹತ್ವದ ಕಾರಣ ಹೇಳಲಾಗಿದೆ. (ಜೋಶಿ ಸಂ. ೩, ೧೯೯೯ : ೪೬೭)

ಈ ಹಾಡಿನ ಆಶಯಗಳನ್ನು ಹೀಗೆ ಸಂಗ್ರಹಿಸಬಹುದು :-

೧.   ೧೩ನೆಯ ಶತದಲ್ಲಿ ಸಂತಜ್ಞಾನೇಶ್ವರನ ನೇತೃತ್ವದಲ್ಲಿ ಮರಾಠಿ ಸಂತ ಪರಂಪರೆಗೆ ಬಂದ ಜನಪ್ರಿಯತೆ ಹಾಗೂ ಸೈದ್ದಾಂತಿಕ ಮನ್ನಣೆ ೧೬ನೆ ಶತಕದವರೆಗೆ ಮುಂದುವರಿದು ಆ ಹೊತ್ತಿಗಾಗಲೇ ಪಂಢರಿಪುರವು ಸಂಪೂರ್ಣವಾಗಿ ಮಹಾರಾಷ್ಟ್ರೀಯರ ಹಿಡಿತಕ್ಕೆ ಬಂದಿತ್ತು.

೨.   ಮಹಾರಾಷ್ಟ್ರದಲ್ಲಿ ಮಾಧ್ವ – ವೈಷ್ಣವ ಪಂಥಕ್ಕೆ ಅಳಿಗಾಲ ಬಂದಿತು. ‘ಮಧ್ವ ದ್ವೇಷಿಗಳು’. ಮಿಥ್ಯಾವಾದಿಗಳು – ಎಂಬ ಪದಗಳು ಇದಕ್ಕೆ ಪುಷ್ಟಿ ನೀಡುತ್ತವೆ.

೩.   ಕರ್ನಾಟಕದ ಮಡಿ ಮಾಧ್ವ ಪರಂಪರೆಯ ಜನಕ್ಕೆ (ಅವರೇ ತಮ್ಮನ್ನು ಕರೆದುಕೊಂಡಂತೆ ಭೂ ದೇವರು) ಪಂಢರಪುರದ ವಿಠಲ ಗುಡಿಯ ಪರಿಸರದಲ್ಲಿ ಜಾತಿ, ಲಿಂಗ ಸಮಾನತೆಯ ಆಲೋಚನೆ ಹುಟ್ಟಿಕೊಂಡುದು ಅಸಹನೀಯವಾಗಿರಬೇಕು. ಅವರ ದೃಷ್ಟಿಯಲ್ಲಿ ವಿಠ್ಠಲ ಭ್ರಷ್ಟನಾದನು. ಹೀಗಾಗಿ ಈ ಧ್ವೈತ ಮಹಾರಾಷ್ಟ್ರದ ಹೊರಕ್ಕೆ ಬರುವುದು ಅನಿವಾರ್ಯವಾಯಿತು. ಅಧ್ವೈತ ಪರವಾದ ವಿಠ್ಠಲ ಸಂಪ್ರದಾಯದಿಂದ ಹೊರಬಂದ ಕರ್ನಾಟಕದ ದಾಸರು ವಿಠ್ಠಲನನ್ನು ಪೂಜಿಸುವ ಕೆಲಸದಲ್ಲಷ್ಟೇ ನಿರತರಾದರು.

ಕೃಷ್ಣದೇವರಾಯನು ಹಂಪಿಯಲ್ಲಿ ವಿಜಯ ವಿಠ್ಠಲ ಮಂದಿರವನ್ನು ಕಟ್ಟಿಸಿದನಷ್ಟೇ! ತಾನು ಉದಯಗಿರಿಯಿಂದ ತಂದ ವಿಠ್ಠಲಮೂರ್ತಿಯನ್ನು ಅಲ್ಲಿ ಪ್ರತಿಷ್ಟಾಪಿಸಿದನೆಂಬ ಹೇಳಿಕೆಯಿದೆ. ಉದಯಗಿರಿಯಲ್ಲಿದ್ದುದು ಪಂಢರಪುರದಿಂದ ಕೊಂಡೊಯ್ದು ಮೂರ್ತಿಯೆಂದೂ ಮರಾಠಿ ಸಂತ ಏಕನಾಥನ ಅಜ್ಜ ಭಾನುದಾಸನ ಕೋರಿಕೆಯ ಮೇರೆಗೆ ಕೃಷ್ಣದೇವರಾಯನು ವಿಠ್ಠಲನಮೂರ್ತಿಯನ್ನು ಹಿಂದಿರುಗಿಸಿದನೆಂದೂ ಹೇಳುತ್ತಾರೆ (ರಾಮಚಂದ್ರರಾವ್ ೧೯೮೧: ೧೫) ಆದರೆ ಈ ಹಿಂದೆ ಪ್ರಸ್ತಾಪಿದಂತೆ ಪುರಂದರದಾಸ – ವಾದಿರಾಜರ ಕಾಲದಲ್ಲಿ ವಿಠ್ಠಲಮೂರ್ತಿ ಹಂಪಿಯಲ್ಲಿದ್ದಿರಬೇಕು. ಏನೇ ಇರಲಿ ವಿಠ್ಠಲ ವಿಜಯನಗರದ ಅರಸರ ಕಾಲದಲ್ಲಿ ಜನಪ್ರಿಯ ದೈವತನಾಗಿದ್ದ ಎಂಬುದು ಸತ್ಯ.

ವಿಠ್ಠಲನನ್ನು ಕುರಿತು ಪ್ರಸ್ಥಾಪಿಸುವ ಚೌಂಡರಸ (೧೩ನೇ ಶತಮಾನ) ನು ತನ್ನ ‘ದಶಕುಮಾರ ಚರಿತೆ’ಯಲ್ಲಿ ಪಂಢರಾಪುರವನ್ನು ‘ ಪಾಂಡುರಂಗ’ ಎಂದೇ ಕರೆದಿದ್ದಾನೆ. ಹಾಗೆಂದು ವಿಠ್ಠಲನನ್ನು ಎಲ್ಲೂ ಪಾಂಡುರಂಗ ಎಂದು ಕರೆದಿಲ್ಲ. ಆತ ವಿಠ್ಠಲನನ್ನು ‘ಪಂಡರೀರಾಯ’. ‘ಅಭಂಗ ವಿಠ್ಠಲ’ ಎಂದೇ ಕರೆದಿದ್ದಾನೆ. ಕೃಷ್ಣನು ದನ ಕಾಯುವ ಹುಡುಗರ ಜೊತೆ ಆಟ ಆಡುವ ಹವ್ಯಾಸವನ್ನು ಬಿಟ್ಟು ಅಲ್ಲಿ ವಿಠ್ಠಲ ಎಂದು ಕರೆಸಿಕೊಂಡಿದ್ದಾನೆ. ತಲೆಯ ಮೇಲೆ ಮುಕುಟ, ಮುಗುಳ್ನಗೆ ತುಳುತುವ ಮುದ್ದು ಮೊಗ, ಜಗನ್ಮೋಹಕವಾದ ಕುಂಡಲ, ಹೆಗಲ ಮೇಲೆ ಆಭರಣ, ಎದೆಯ ಮೇಲೆ ಹೊಳೆಯುವ ಪದಕ, ಜೋಡು ಕೈಗಳು, ಒಂದರಲ್ಲಿ ಹೊಸ ಗೋವಳ ಕೋಲು, ಎಡಗೈಯಲ್ಲಿ ಶಂಖ, ಎರಡೂ ಕೈಗಳೂ ಸೊಂಟದ ಮೇಲೆ, ಪಾದಗಳು ಇಟ್ಟಿಗೆಯ ಮೇಲೆ ಊರಿವೆ. ‘ನಳಚಂಪು’ ವಿನಲ್ಲೂ ವಿಠ್ಠಲನನ್ನು ಪಾಂಡುರಂಗ ಎಂದು ಕರೆದಿಲ್ಲ. ‘ಪಂಡರೀರಾಯ’ನು ‘ಪಾಂಡುರಂಗ’ ಎಂಬುದಾಗಿ ಪ್ರಾಮುಖ್ಯಕ್ಕೆ ಬಂದುದು ಆಮೇಲೆ (ಚಿದಾನಂದ ಮೂರ್ತಿ ೨೦೦೫ : ೧೦೧).

ಅಚಲಾನಂದ ದಾಸ (ಕ್ರಿ.ಶ. ೯ನೆ ಶತಮಾನ) ದ ಭಾಗವತ ಪಂಥದ ಚೌಕಟ್ಟಿನಲ್ಲಿ ಪಂಢರಪುರ ಸರಹದ್ದಿನಲ್ಲಿ ಉಗಮವಾದ ವಿಠ್ಠಲ ಸಂಪ್ರದಾಯವು ಧ್ವೈತ ಮತದಿಂದ ಪೋಷಣೆಯನ್ನು ಪಡೆದು ಕರ್ನಾಟಕದ ಹರಿದಾಸ ಸಾಹಿತ್ಯದ ಪ್ರಧಾನ ಧಾರೆಯಾಯಿತು.
ಬಡವರೊಡೆಯ ವಿಠ್ಠಲ

ಕರ್ನಾಟಕದ ಹರಿದಾಸರಿಗೆ ಪಾಂಡುರಂಗ ವಿಠಲ ಅತಿ ಪ್ರೀತಿಯ ದೈವ. ವಿಷ್ಣು ಪಾರಮ್ಯವನ್ನು ಸಾರುವ, ದ್ವೈತ ಮತ ನಿಷ್ಠೆಯ ಹರಿದಾಸರಿಗೆ ಪಂಢರಿರಾಯ ಆರಾಧ್ಯ ದೈವ. ಹೀಗಾಗಿಯೇ ಕನ್ನಡದ ಅನೇಕ ದಾಸರು ತಮ್ಮ ಅಂಕಿತವಾಗಿ ವಿಠ್ಠಲನನ್ನು ಆರಿಸಿಕೊಂಡರು ಪಂಢರಪುರದ ವಿಠ್ಠಲನನ್ನು ಕೀರ್ತನೆಗಳನ್ನು ರಚಿಸಿದವರಲ್ಲಿ ಅಂಬಾಬಾಯಿ (೧೮೭೦) ಭೂಪತಿ ವಿಠ್ಠಲ (೧೯೧೦) ವಿಜಯದಾಸ (೧೬೮೭ – ೧೭೫೫) ಜಗನ್ನಾಥ ದಾಸ (೧೮೮೦) ರು ಪ್ರಮುಖರು. ಪುರಂದರದಾಸರೂ ನಾಲ್ಕು ಕೀರ್ತನೆಗಳನ್ನು ರಚಿಸಿರುವುದು ದೊರೆಯುತ್ತವೆ.

ದಾಸರು ಪಾಂಡುರಂಗ ವಿಠ್ಠಲನನ್ನು ಈ ಕೆಳಗೆ ಕಂಡ ದೃಷ್ಟಿಕೋನದಿಂದ ಪರಿಶೀಲಿಸಿದ್ದಾರೆ.

೧. ಪಾಂಡುರಂಗ ವಿಠ್ಠಲನನ್ನು ವಿಷ್ಣು ಹಾಗೂ ಆತನ ದಶಾವತಾರದ ರೂಪವಾಗಿ ಚಿತ್ರಿಸಿರುವುದು.

೨. ತಿರುಪತಿ ತಿಮ್ಮಪ್ಪ, ಉಡುಪಿಯ ಕೃಷ್ಣ ಹಾಗೂ ಪಂಢರಾಪುರದ ವಿಠ್ಠಲ ಅಭೇದರು ಎಂಬ ನಿಲುಮೆ.

೩. ಪಂಢರಪುರದ ವಿಠ್ಠಲನೊಂದಿಗೆ ಭಕ್ತರ ವಿಶಿಷ್ಟ ಸಂಬಂಧ.

೪. ವಿಠ್ಠಲನ ಮೂರ್ತಿಯ ಸವಿವರ ವರ್ಣನೆ ಹಾಗೂ ಕ್ಷೇತ್ರದ ವರ್ಣನೆ.

೫. ವಿಠ್ಠಲನ ಹಿಂದಿರುವ ಐತಿಹ್ಯಗಳ ಚಿತ್ರಣ.

ದಾಸರಿಗೆ ವಿಠ್ಠಲ ಮತ್ತು ವಿಷ್ಣು ಅಭೇದರು. ವಿಷ್ಣುವೆಂದ ಮೇಲೆ ಆತನ ದಶಾವತಾರದ ರೂಪಗಳೆಲ್ಲವೂ ವಿಠಲನಿಗೆ ಅನ್ವಯಿಸುತ್ತದೆ.

ಅಚ್ಯುತಾನಂತನ ಕಂಡೆ
ಸಚ್ಚಿದಾನಂದೈಕ ಸರ್ವೋತ್ತಮನ ಕಂಡೆ
……………………………….
ನಿಚ್ಚಾ ಪಂಢರಿಪುರಿವಾಸಾ ರಂಗನ ಕಂಡೆ
……………………………..
ವಾಸುದೇವನ ಕಂಡೆ ವಾಮನನಾ ಕಂಡೆ
ಕ್ಷೇಶನಾಶನ ಕಂಡೆ ಕೇಶವನ ಕಂಡೆ
ವಾಸವಾನುಜನಾಗಿ ವಾಗೀಶಪಿತನ ಕಂಡೆ
………………………………….
ಗೋಪಿಯ ನಂದನ ಗೋಪಿಯರರಸ
ಗೋಪಾಲರಾ ಒಡೆಯ ಸಾಂದೀಪನಿ ಪ್ರಿಯಾ
ಕೋಪ ಕಾಳಿಂಗನ ತಾವನಾಶನ ಸಂ
………………………………
ಮನುಜನಾಗಿ ಧನುವನು ಮುರಿದು
ದನುಜನ ಕಾಲಿಲೆ ವರಸಿದೆ (ವಿಜಯದಾಸ ಪುಟ ೪)

ಕೃಷ್ಣಾವತಾರದ, ರಾಮಾವತಾರದ ಒಂದೊಂದೇ ಘಟನೆಯನ್ನು ನೆನಪು ಮಾಡುತ್ತಾ, ಅವುಗಳಿಗೆಲ್ಲಾ ಕಾರಣೀಭೂತನಾದವನು ಪಾಂಡುರಂಗ ಎಂದು ದಾಸರು ಹೇಳುತ್ತಾರೆ.

ಪುರಂದರದಾಸರಿಗೆ ಪಾಂಡುರಂಗ ವಿಠಲ ಕೂಸಾಗಿ ಕಂಡಿದ್ದಾನೆ. ಬಾಲಕೃಷ್ಣನ ಒಂದೊಂದು ರೂಪೂ ಪಾಂಡುರಂಗನಾಗಿ ಕಂಡಿದೆ.

ಅಂದಿಗೆ ಅರಳೆಲೆ ಇಟ್ಟಿತ್ತು ಕೂಸು
ಮುಂಗೈಯ ಬಾಪುರಿ ಇಟ್ಟಿತ್ತು ಕೂಸು
ಬಿಂದಲಿ ಸರಪಳಿ ಹಾಕಿತ್ತು ಕೂಸು
ಅಂಗಳದೊಳಗಿಂದ ಹೋಗ್ಯದೆ ಕೂಸು
ಕಾಲಿಗೆ ಕಿರುಗೆಜ್ಜೆ ಕಟ್ಟಿತ್ತು ಕೂಸು
ನೇವಳ ಪದಕವ ಹಾಕಿತ್ತು ಕೂಸು
ಜಾಲದ ಅಂಗಿಯ ತೊಟ್ಟಿತ್ತು ಕೂಸು
ಬಾಗಿಲ ಒಳಗಿದ್ದು ಹೋಗ್ಯದೆ ಕೂಸು
ಹುಲಿಯುಗುರಿನ ಸರ ಹಾಕಿತ್ತು ಕೂಸು
ಬೆರಳಲಿ ಉಂಗುರ ಇಟ್ಟಿತ್ತು ಕೂಸು
ಕಿವಿಯೊಳು ಚೌಕುಳಿ ಇಟ್ಟಿತ್ತು ಕೂಸು
ಕುಳಿತಿದ್ದ ಠಾವಿಲಿ ಕುಳಿತಿಲ್ಲ ಕೂಸು (ಪುಟ ೧೯)

ದಾಸರಿಗೆ ಉಡುಪಿಯ ಕೃಷ್ಣ, ತಿರುಪತಿಯ ವೆಂಕಟೇಶ ಹಾಗೂ ಪಂಢರಪುರದ ವಿಠಲರಲ್ಲಿ ಭೇದ ಕಾಣಿಸದು.

ವೆಂಕಟೇಶ ಅಲ್ಲಿ ಅವನು ಶಂಖ ಚಕ್ರ ಪಿಡಿದ ಕರವ
ಟೊಂಕದ ಮೇಲಿಟ್ಟುಕೊಂಡು ನಿಂತು ಇಲ್ಲಿ ವಿಠ್ಠಲನಾದ
ಕಡಗೋಲ್ನಿಂದ ಗಡಿಗೆ ಒಡೆದು ತುಡುಗು ಮಾಡಿದ ಹುಡುಗ ಬಂದು
ಉಡುಪಿಯಲ್ಲಿ ಕೃಷ್ಣನಾಗಿ ಓಡಿ ಬಂದಿಲ್ಲಿ ವಿಠ್ಠಲನಾದ
ಎಷ್ಟು ಜನ್ಮದ ಸುಕೃತವೋ ಶ್ರೀಕೃಷ್ಣ ವಿಠಲರೂಪದಿಂದ
ಭಕ್ತ ಜನರಿಗಾಲಿಂಗನ ಭೆಟ್ಟಿ ಕೊಡುತ ನಿಂತುಬಿಟ್ಟ
ಅನ್ನಬ್ರಹ್ಮ ಉಡುಪಿಯಲ್ಲಿ ಚಿನ್ನಬ್ರಹ್ಮ ಬೆಟ್ಟದಲಿ
ಸಣ್ಣ ತುಳಸಿ ಮಾಲೆ ಸಾಕು ಬ್ರಹ್ಮ ಭೂಪತಿ ವಿಠ್ಠಲಗೆ (ಪುಟ ೩೦)
ಪಂಢರಪುರದ ವಿಠ್ಠಲನಿಗೂ ಭಕ್ತರಿಗೂ ಅಂತರವಿಲ್ಲ. ಪಾಂಡುರಂಗನ ಮೈಮುಟ್ಟಿ. ಕಾಲು ಮುಟ್ಟಿ, ಅಪ್ಪಿ ಮುದ್ದಾಡಬಹುದು. ಆತ ಅಲ್ಲಿ ಬಡವರ ದೇವರು. ಪಂಢರಪುರದ ವಿಠಲನ ಕ್ಷೇತ್ರ ಅದು. ಭಕ್ತ – ಭಗವಂತರ ನಡುವಣ ಪ್ರೇಮಸಾಮ್ರಾಜ್ಯ. ಈ ಹೊಸ ವಿಶಿಷ್ಟ ಅನನ್ಯ ಸಂಪ್ರದಾಯವನ್ನು ಹುಟ್ಟು ಹಾಕುವುದರಲ್ಲಿ ವಾರಕರಿ ಪಂಥದ ಪಾತ್ರ ಮಹತ್ವದು. ಲಿಂಗ, ಜಾತಿ, ಸ್ಥಾನಮಾನಗಳನ್ನು ನಿರಾಕರಿಸಿ ಎಲ್ಲರಿಗೂ ಎಲ್ಲೆಡೆಗೂ ಪ್ರವೇಶ ಸಾಧ್ಯವಾಗಿಸಿದ ಜ್ಞಾನೇಶ್ವರನಿಗೆ ಪುರೋಹಿತ ವರ್ಗ ವಿರೋಧವಾಗಿತ್ತು. ವಿಠಲನನ್ನು ಭಕ್ತರು ಅಪ್ಪಿಕೊಳ್ಳುವ, ಕಾಲು ಮುಟ್ಟುವ, ಕೆನ್ನೆ ಸವರುವ ಮೂಲಕ ಮೈಲಿಗೆ ಮಾಡುತ್ತಿದ್ದಾರೆ ಎಂದು ನಂಬಲಾಯಿತು. ಪಂಢರಪುರದ ವಿಠಲ ಮೈಲಿಗೆ ಬ್ರಹ್ಮ ಎಂದು ತಿಳಿದವರೂ ಇದ್ದರು. ಅದಕ್ಕಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕುಡಾಳ ತಾಲೂಕಿನ ವಾಲಾವಲದ ವಿಠಲಮಂದಿರದ (ವೇದೋ ನಾರಾಯಣ – ಮಡಿಬ್ರಹ್ಮ) ವಿಠಲನ ಕೊರಳ ತುಳಸೀ ಮಾಲೆಯನ್ನು ವರ್ಷಕ್ಕೊಮ್ಮೆ ಪಂಢರಪುರದ ವಿಠ್ಠಲನ ಕೊರಳಿಗೆ ಹಾಕಿ ಅಂದು ದೇವರಿಗೆ ಹೊಸಬಟ್ಟೆಯನ್ನು ತೊಡಿಸುವ ಸಂಪ್ರದಾಯ ಇಂದಿಗೂ ಚಾಲ್ತಿಯಲ್ಲಿದೆ. (ಗಾಯಕ್ವಾಡ್ ೨೦೦೫ : ೧೫) ಹೀಗೆ ಸಂತ ಚಳುವಳಿ ಕ್ಷೀಣಗೊಂಡ ಬಳಿಕ ವೈದಿಕಶಾಹಿ ಆಡಳಿತದಿಂದ ನಲುಗಿ ಹೋದ ಪಾಂಡುರಂಗನನ್ನು ಸಾರ್ವಜನಿಕಗೊಳಿಸಿದ ಕೀರ್ತಿ ಮಹಾರಾಷ್ಟ್ರದ ಸಮಾಜ ಸುಧಾರಕ ಜ್ಯೋತಿಫುಲೆ ಅವರದು (೧೯೪೮).

ಬಡವರೊಡೆಯ ವಿಠ್ಠಲನನ್ನು ತಮ್ಮ ಅನೇಕ ಕೀರ್ತನೆಗಳಿಂದ ಸ್ತುತಿಸಿದವರು ಭೂಪತಿ ವಿಠ್ಠಲರು.

ಈ ಪರಿಯ ಸುಲಭ ಇನ್ಯಾವ ದೇವರು ಉಂಟು
ಗೋಪಾಲಕೃಷ್ಣ ಪಂಢರೀನಾಥನಲ್ಲದೆ

ಕಾಸುಇಲ್ಲದೆ ಪೋಗಿ ಶ್ರೀಶನಂಘ್ರಿಯ ಮೇಲೆ
ಲೇಸಾಗಿ ಹಣೆಯಿಟ್ಟು ನಮಿಸಬಹುದೋ
ಕೂಸೆಂದು ಗದ್ದ ತುಟಿ ಹಿಡಿದು ಮುದ್ದಿಡಬಹುದು
ಕೂಸಾಗಿ ಕೈಹಿಡಿದು ಕಾಡಿಬೇಡಲು ಬಹುದೊ
ವಾಸುದೇವನ ಮೂರ್ತಿ ಅಪ್ಪಿಕೊಳ್ಳಲು ಬಹುದೊ

ಜಾತಿಕುಲಗೋತ್ರಗಳ ಆತ ನೋಡುವುದಿಲ್ಲ
ಪ್ರೀತಿಯಿಂದಲಿ ಬರುವ ಭಕ್ತನಕೆಲ್ಲ

ರಾತ್ರಿಹಗಲೆನ್ನದೇ ಸತತ ಜನಜಾತ್ರೆಗೆ
ಮಿತ್ರನಂದದಿ ಭೆಟ್ಟಿ ಕೊಡುವ ವಿಠ್ಠಲರಾಯ

ದುಡ್ಡಿನವ ತಿಮ್ಮಪ್ಪ – ದೊಡ್ಡಗುಡ್ಡದಿ ನಿಂತ
ಕಡಲದಡದಲಿ ನಿಂತ ಮಡಿವಂತ ಕೃಷ್ಣ
ಬಡವರೊಡೆಯನು ನಾನು ಬೇಗ ಬನ್ನಿರಿ ಎಂದು
ನಡದ ಮೇಲೆ ಕೈಯಿಟ್ಟು ನಿಂತ ಭೂಪತಿ ವಿಠ್ಠಲ (ಪುಟ ೫)

ಪಂಢರಪುರದ ವಿಠ್ಠಲ ಎಲ್ಲರ ಕೈಗೊಂಬೆಯಾಗಿ ಅವನ ‘ಮಡಿ’ ಕೆಟ್ಟುದನ್ನು ಯಾವೊಬ್ಬ ದಾಸನೂ ಪ್ರಸ್ತಾಪಿಸಿಲ್ಲ ಕರ್ಜಗಿಯ ದಾಸರನ್ನು ಬಿಟ್ಟು. ವಿಠ್ಠಲನಿಗೆ ದೊಡ್ಡ ಹರಕೆ ಹೊರಬೇಕಾಗಿಯೂ ಇಲ್ಲ. ‘ಬುಕ್ಹಿಟ್ಟು ತುಳಸಿ ಮಾಲೆ ಕಟ್ಟಿ ಕೊರಳಿಗೆ ಹಾಕಿ ಅಪ್ಪಿಕೊಂಡರೆ ಸಾರೂಪ್ಯ ಕೊಡುವ ದಾತ’ ಆತ.

ದಾಸಜನರ ಕ್ಲೇಶ ಹರಿಪಾ ದೋಷ ದೂರನನ್ನು ಕಂಡ ಭಕ್ತರು ಅಡಿಯಿಂದ ಮುಡಿಯವರೆಗೆ ವರ್ಣಿಸಿದ್ದಾರೆ. ಇಂತಹ ವರ್ಣನೆಯಲ್ಲಿ ವಸ್ತು ವಿವರಗಳಲ್ಲದೆ ಬೇರೇನೂ ಇಲ್ಲ.

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ
ತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರ
ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ
ತೆರಜಾನು ಜಂಘ ಭಾಸುರ ರತ್ನ ಮುಕುರ (ಪುಟ ೬)

ಪಂಡರಪುರದ ವಿಠಲ ಕಟಿಯಲ್ಲಿ ಕರವಿಟ್ಟ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾನೆ. ಈ ಭಂಗಿಗೆ ಕಾರಣವನ್ನು ಪುರಂದರದಾಸರು ಬಗೆಬಗೆಯಲ್ಲಿ ಊಹಿಸುತ್ತಾರೆ.

ಇದೊಂದು ಬಗೆಯ ವ್ಯಾಜ ಸ್ತುತಿ.

ರಾಜಸೂಯ ಯಾಗದಲ್ಲಿ ರಾಜೇಶ್ವರ
ರಾಜರು ಮೊದಲಾದ ಸುರರೆಲ್ಲರು
ಭೋಜನವನೆ ಮಾಡಿದೆಂಜಲು ಮೊದಲಾದ್ದು
ರಾಜೀವಾಕ್ಷನು ಎತ್ತಿದಾಯಾಸದಿಂದಲೊ
ಗೊಲ್ಲ ಬಾಲಕರೊಡಗೊಡಿ ತಾ ಬಂದು
ಗೊಲ್ಲತೇರ ಮನೆಪೊಕ್ಕು ಬೆಣ್ಣೆಯ ತಿಂದು
ಬಲ್ಲಿದ ತೃಣಾವರ್ತ ಮೊದಲಾದಸುರರನ್ನು
ಎಲ್ಲರನ್ನು ಕೊಂದ ಆಯಾಸದಿಂದಲೊ (ಪುಟ ೧೬)

ಪುರಾಣದಿಂದ ಎತ್ತಿಕೊಂಡ ಶಬ್ದ ಚಿತ್ರಗಳನ್ನು ಹೆಣೆಯುತ್ತಾ ಹೋಗುತ್ತಾರೆ.

ಪುಂಡರೀಕ ಮತ್ತು ಪಾಂಡುರಂಗ ವಿಠ್ಠಲರಿಗೆ ಸಂಬಂಧಿಸಿದಂತೆ ಕೆಲವೊಂದು ಐತಿಹ್ಯಗಳು ಪ್ರಚಲಿತವಿವೆ. ಪುಂಡರೀಕನು ತನ್ನ ಹೆಂಡತಿಯ ವ್ಯಾಮೋಹದಲ್ಲಿ ವೃದ್ದ ತಂದೆ – ತಾಯಿಯರನ್ನು ನಿರ್ಲಕ್ಷಿಸುತ್ತಾನೆ. ರೋಹಿದಾಸನೆಂಬ ಚಮ್ಮಾರನು ತನ್ನ ಮಾತಾ – ಪಿತೃಗಳ ಸೇವೆಯನ್ನು ತಾದಾತ್ಮ್ಯದಿಂದ ಮಾಡುತ್ತಿರುವುದನ್ನು ಕಂಡು ಪರಿವರ್ತಿತನಾಗುತ್ತಾನೆ. ಹೀಗೆ ಹೃದಯ ಪರಿವರ್ತನೆಗೊಂಡ ಪುಂಡರೀಕನು ತನ್ನ ತಂದೆ ತಾಯಿಯರ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ವಿಷ್ಣುವೇ ಪರೀಕ್ಷಿಸಲು ಬರುತ್ತಾನೆ. ಅವನನ್ನು ಕಾದು ನಿಲ್ಲುವಂತೆ ಇಟ್ಟಿಗೆಯನ್ನು ಎಸೆಯುತ್ತಾನೆ. ಭಕ್ತನ ನಿಷ್ಠೆಯನ್ನು ಕಂಡು ಮೆಚ್ಚಿದ ವಿಠೋಬಾ ಸೊಂಟಕ್ಕೆ ಕೈಕೊಟ್ಟು ಚಿರಸ್ಥಾಯಿಯಾಗಿ ಭಕ್ತನಿಗಾಗಿ ಕಾಯುತ್ತ ನಿಂತ. ಹೀಗೆ ವಿಠಲ ‘ಪುಂಡರೀಕ ವರದ’ ನಾಮ ಈ ಐತಿಹ್ಯವನ್ನು ಎಲ್ಲ ದಾಸರೂ ತಮ್ಮ ಕೀರ್ತನೆಗಳಲ್ಲಿ ಕೀರ್ತಿಸಿರುವುದು ಕಂಡು ಬರುತ್ತದೆ.

ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ
ಪಾಂಡವರ ಪ್ರಿಯಬಂಧು ನೆಲಸಿದಂಥಾ (ಪುಟ ೧೧)

ಕಟಿಯಲಿ ಕರವಿಟ್ಟು ಮೆರೆವನ
ಹಠದಿ ವಗದಿಟ್ಟಿಗೆಲಿ ನಿಂತನ (ಪುಟ ೧೬)

ವಿಠಲನ ದಿವ್ಯರೂಪವನ್ನು ವೀಕ್ಷಿಸಿದ ಭಕ್ತನೊಬ್ಬ ವಿಠ್ಠಲಮಂದಿರದ ದೈನಂದಿನಾ ಪೂಜಾ ಕೈಂಕರ್ಯವನ್ನು ಮನದಣಿಯೆ ಹಾಡಿದ್ದಾನೆ.

ಪಂಚ ಪಂಚ ಉಷಃಕಾಲದೀ
ಮಂಚಬಾಣನ ಪಿತಗೆ ಆರುತಿ
ಮುಂಚಿನೊಸನಗಳನೆಲ್ಲ ತೆಗೆಯುತ ತೈಲವೆರೆಯುವರೂ
ಮಂಚರೂಪಗೆ ಚಂದ್ರಭಾಗೆಯ
ಪಂಚಗಂಗೋದಕಗಳೆರೆಯುತ
ಪಂಚ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು

ಬೆಣ್ಣೆ ಬಿಸಿನೀರೆರದು ಕೃಷ್ಣಗೆ
ಸಣ್ಣವಸ್ತ್ರದಿ ಒರಸಿ ಮೈಯನು
ಘನ್ನಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ
ಬಣ್ಣದೊಸ್ತ್ರದ ಪಾಗು ಸುತ್ತುತ
ಬೆಣ್ಣೆ ಕಳ್ಳಗೆ ಅಂಗಿ ತೊಡಿಸುವ
ಸಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ (ಪುಟ ೩೬)

ಮಧ್ಯಾಹ್ನ ಮಹಾಪೂಜೆಯ ಬಳಿಕದ ಚಿತ್ರಣ :

ಸರಿಯಾಗಿ ಮಧ್ಯಾಹ್ನ ಮಹಾಪೂಜೆ ನಡೆಯುವುದು
ಭಕ್ತರಿಗೆ ಲೆಖ್ಖವಿಲ್ಲಾ
ಪಾದಕ್ಕೆ ಹಣೆಹಚ್ಚಿ ತಿಕ್ಕುವರು ಮೇಲೆದ್ದು
ಅಪ್ಪಿಕೊಳ್ಳುವರು ಸ್ವಾಮಿ ತಿರುಗಿ ಬರಲಾಗದೇ
ನಿಂತು ಬಿಡುವವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾ
ಇಂಥ ಭಕ್ತಿಯ ಭಾವ ಇನ್ನೆಲ್ಲಿಯೂ ಕಾಣೆ
ಭಕ್ತವತ್ಸಲ ವಿಠ್ಠಲಾ (ಪುಟ ೨೪)

ಪಂಢರಪುರದೊಳಗೆ ಪುರಂದರದಾಸರ ಕಂಬವಂತೂ ಬಹಳ ಪ್ರಸಿದ್ದವಾದುದು. ಆದರೆ ಅದರ ಹಿಂದಿರುವ ಐತಿಹ್ಯದ ಸತ್ಯಾಸತ್ಯತೆಯ ಬಗ್ಗೆ ಖಚಿತವಾಗಿ ಹೇಳತೀರದು. ಪುರಂದರದಾಸರನ್ನು ಒಂದು ಅಪವಾದದ ಕಾರಣಕ್ಕಾಗಿ ಕಂಬಕ್ಕೆ ಕಟ್ಟಿ ಹೊಡಿಸಿದರೆಂದೂ ಆಗ ಅವರು ‘ಮುಯ್ಯಕ್ಕೆ ಮುಯ್ಯ ತೀರಿತು ಜಗದಯ್ಯ, ವಿಜಯ್ಯ ಸಹಾಯ ಪಂಢರಿರಾಯ’ ಎಂಬ ಕೃತಿಯನ್ನು ಹಾಡಿದರೆಂಬ ಪ್ರತೀತಿಯಿದೆ. ಆದರೆ ಮಂದಿರದ ಮಂದಿಯಲ್ಲಿ ಕೇಳಿದರೆ ಯಾರೂ ಅದನ್ನು ಪುರಂದರದಾಸರ ಕಂಬವೆಂದು ಗುರುತಿಸುತ್ತಿಲ್ಲ. ಹೀಗಾಗಿ ಈ ಕತೆಯಲ್ಲಿ ಹುರುಳಿಲ್ಲವೆನಿಸುತ್ತದೆ. ಪಂಢರಪುರದ ವಿಠ್ಠಲಮೂರ್ತಿಯ ಎದುರುಗಡೆ ‘ಸೋಳಹ ಕಂಬ’ (ಹದಿನಾರು ಕಂಬಗಳ ಮಂಟಪ) ಎನ್ನುವ ಆವರಣವಿದೆ. ಅಲ್ಲಿನ ಎರಡನೆಯ ಕಂಬಕ್ಕೆ ಬೆಳ್ಳಿಯ ತಗಡನ್ನು ಮಡಾಯಿಸಿದ್ದು ಕುಂದಣದ ಕೆಲಸ ಮಾಡಿದ್ದಾರೆ. ಭಕ್ತರು ಈ ಕಂಬವನ್ನು ಅಪ್ಪಿಕೊಂಡು ವಿಠ್ಠಲನ ದರ್ಶನ ಮಾಡುವುದು ಸಂಪ್ರದಾಯ. ಇದನ್ನೇ ನಮ್ಮವರು (ಕನ್ನಡಿಗರು) ‘ಪುರಂದರ ಕಂಬ’ವೆಂದು ಹೇಳುತ್ತಿರುವುದು. ವಿಚಾರ ಮಾಡಿದರೆ ಈ ಕಂಬಕ್ಕೂ ಪುರಂದರದಾಸರಿಗೂ ಸಂಬಂಧ ಕಾಣದು. ಅಲ್ಲಿನ ಜನ ಅದನ್ನು ‘ಗರುಡ ಕಂಬ’ ವೆಂದೇ ಗುರುತಿಸುತ್ತಾರೆ.

ಕನ್ನಡದ ದಾಸಸಾಹಿತ್ಯದಲ್ಲಿ ಪುಂಡರಪುರದಲ್ಲಿ ಜರುಗುವ ವಾರಕರಿಯ ಪ್ರಸ್ತಾವ ಬಾರದೆ ಇರುವುದೆ ಆಶ್ಚರ್ಯ. ಪತಿತರಿಗೂ ದಲಿತರಿಗೂ ಪಂಢರಪುರ ಕ್ಷೇತ್ರದಲ್ಲಿ ಮುಕ್ತ ಪ್ರವೇಶದ ವಿವರ ಭೂಪೇಶ ವಿಠಲರ ಹಾಡುಗಳನ್ನು ಹೊರತು ಇನ್ನಾರಲ್ಲೂ ದಾಖಲೆಗೊಂಡಿಲ್ಲ ಜ್ಞಾನದೇವ, ತುಕಾರಾಮ, ನಾಮದೇವ ಮುಂತಾದ ಸಂತರು ನಮ್ಮ ದಾಸರ ಗಮನ ಸೆಳೆದಿಲ್ಲ.

ಪಂಢರಪುರದ ವಿಠ್ಠಲನ ಕತೆ ರೋಚಕವಾದುದು. ಒಂದು ಕಾಲದಲ್ಲಿ ಕನ್ನಡದ ನೆಲದೊಳಗಿನ ‘ಕಾನಡಿ ವಿಠಲ_’ ಕನ್ನಡ ಮರಾಠಿ ಭಕ್ತರೆಲ್ಲರಿಗೂ ತಂದೆ – ತಾಯಿ – ಬಂಧು – ಬಳಗ. ಕನ್ನಡದ ಹರಿದಾಸರ ಆರಾಧ್ಯ ದೈವ, ವಿಠಲನ ಅಂಕಿತ ಬಳಸುವ ಮೂಲಕ, ಅವನ ಅಂಕೆಗೆ ಒಳಗಾದವರಾಗಿದ್ದಾರೆ.

ಎ. ವಿ. ನಾವಡ
ಸಂಚಾಲಕ
ಪುರಂದರದಾಸ ಅಧ್ಯಯನ ಪೀಠ.