ಕನ್ನಡ ವಿಶ್ವವಿದ್ಯಾಲಯ ಪುರಂದರದಾಸ ಅಧ್ಯಯನ ಪೀಠವು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಒಂದು ಭಾಗವಾದ ಹರಿದಾಸ ಸಾಹಿತ್ಯವನ್ನು ಕುರಿತು ಅಧ್ಯಯನ ಹಾಗೂ ಪ್ರಸರಣದ ಗುರಿಯನ್ನು ಇರಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದೆ. ದಾಸ ಸಾಹಿತ್ಯವನ್ನು ಮತಧರ್ಮಗಳ ಚೌಕಟ್ಟಿನಿಂದ ಹೊರತಂದು ಮಧ್ಯಕಾಲಿನ ಭಕ್ತಿ ಪರಂಪರೆಯ ಒಂದು ಉತ್ಪನ್ನ ಎಂಬ ನಿಟ್ಟಿನಿಂದ ಗ್ರಹಿಸಲು ಪ್ರಯತ್ನಿಸುತ್ತಿದೆ. ಈ ಗುರಿಯನ್ನು ತಲುಪಲು ದಾಸರನ್ನು ಹಾಗೂ ಅವರ ಸಾಹಿತ್ಯ ಪರಂಪರೆಯನ್ನು ಕುರಿತ ಪುಸ್ತಕಗಳ ಪ್ರಕಟಣೆ ಮತ್ತು ಕ್ಷೇತ್ರಕಾರ್ಯದ ಮೂಲಕ ಮೌಖಿಕ ಪರಂಪರೆಯಲ್ಲಿರುವ ದಾಸರ ರಚನೆಗಳ ಸಂಗ್ರಹ ಹಾಗೂ ಪಠ್ಯೀಕರಣ, ಪ್ರಕಟಣ ವಿಧಾನವನ್ನು ಬಳಸಿದೆ. ಜೊತೆಗೆ ದಾಸರ ರಚನೆಗಳನ್ನು ಸಾಂಸ್ಕೃತಿಕ ಪಠ್ಯಗಳೆಂದು ಪರಿಗ್ರಹಿಸಿ ವರ್ತಮಾನದ ಸಂದರ್ಭದಲ್ಲಿ ಅವುಗಳ ಪ್ರಸ್ತುತತೆಯನ್ನು ಮರುಪರಿಶೀಲಿಸುವ ಹಿನ್ನೆಲೆಯಲ್ಲಿ ಸಮ್ಮೇಳನ ಹಾಗೂ ವಿಚಾರಸಂಕಿರಣಗಳನ್ನು ನಡೆಸಿಕೊಂಡು ಬರುತ್ತಿದೆ. ಉಡುಪಿ, ಧರ್ಮಸ್ಥಳ, ರಾಯಚೂರು, ಪಂಡರಪುರಗಳಲ್ಲಿ ಜರುಗಿದ ದಾಸ ಸಾಹಿತ್ಯ – ಸಂಸ್ಕೃತಿ ಸಮ್ಮೇಳನಗಳು ನಾಡಿನಲ್ಲಿ ದಾಸ ಸಾಹಿತ್ಯವನ್ನು ಕುರಿತಂತೆ ಹೊಸ ಎಚ್ಚರವನ್ನು ತಂದಿದೆ.

‘ಹರಿದಾಸರ ಪಾಂಡುರಂಗ ವಿಠಲ’ ಒಂದು ಸಂಕಲನ ಕೃತಿ. ಪಂಢರಪುರದ ವಿಠ್ಠಲ ಮೂಲತಃ ಕರ್ನಾಟಕದವನು ಅನಂತರ ಪಂಢರಪುರಕ್ಕೆ ಹೋದನು ಎಂದು ಮರಾಠಿ ಸಂತರು ಹೇಳುತ್ತಾರೆ.

ಕಾನಡಾ ಹೋ ವಿಠ್ಠಲ ಕರ್ನಾಟಕೂ
ತ್ಯಾನೆ ಮಜ ಲಾವಿಲಾ ವೇಧು

ಎಂದು ಕನ್ನಡದ ವಿಠ್ಠಲ ತನ್ನ ಮನಸ್ಸನ್ನು ಸೆಳೆದುಕೊಂಡನು ಎಂದು ಸಂತ ಜ್ಞಾನೇಶ್ವರ ಹೇಳಿದ್ದಾನೆ. ಪಂಢರಪುರದ ವಿಠಲನ ಗುಡಿಯಲ್ಲಿ ಕ್ರಿ.ಶ. ೧೧೯೬ರ ಶಿಲಾಲೇಖವೊಂದು ಕನ್ನಡದಲ್ಲಿದೆ. ಕರ್ನಾಟಕದ ಯಾದವ ವಂಶದ ದೇವಗಿರಿಯ ರಾಮದೇವರಾಯನ ಹೆಸರು ಅಲ್ಲಿ ಉಲ್ಲೇಖವಾಗಿದೆ. ಕನ್ನಡದ ಅನೇಕ ದಾಸರು ತಮ್ಮ ಅಂಕಿತದೊಳಗೆ ವಿಠ್ಠಲನ ಬಹುರೂಪೀ ಹೆಸರುಗಳನ್ನೇ ಬಳಸಿರುವುದು ಗಮಾನಾರ್ಹ. ಕನ್ನಡ ದಾಸರು ತಮ್ಮ ಕಾವ್ಯರಚನೆಯ ಸಂದರ್ಭಗಳಲ್ಲಿ ‘ಇಟ್ಟಿಗೆಯ ಮೇಲೆ ನಿಂತ ಪಾಂಡುರಂಗ’ ನನ್ನು ಬಹು ಬಗೆಯಾಗಿ ಹೊಗಳಿದ್ದಾರೆ. ಬಡವರ ದೇವರೆಂದೇ ಖ್ಯಾತನಾದ ಪಾಂಡುರಂಗ ವಿಠ್ಠಲನೊಂದಿಗೆ ಬೆಳೆದು ಬಂದ ವಾರಕರಿ ಸಂಪ್ರದಾಯದಲ್ಲಿ ಕನ್ನಡಿಗರ ಪಾತ್ರವೂ ನಗಣ್ಯವಲ್ಲ. ಭೀಮ ನದಿಯ ಕವಲು ಚಂದ್ರಭಾಗ ನದಿಯ ದಂಡೆಯ ಮೇಲೆ ನಿಂತಿರುವ ಪಾಂಡುರಂಗ ವಿಠ್ಠಲನನ್ನು ಕನ್ನಡದ ಕವಿಗಳು ಗ್ರಹಿಸಿರುವ ಬಗೆಯನ್ನು ಇಲ್ಲಿನ ೫೮ರ ರಚನೆಗಳು ಹೇಳುತ್ತವೆ. ಈ ಮೂಲಕ ಒಂದು ನೆಲ ಕಟ್ಟಿದ ಸಾಂಸ್ಕೃತಿಕ ಪರಿವೇಷದ ಸ್ವರೂಪವನ್ನು ತಿಳಿಯಲು ಅನುಕೂಲವಾಗುತ್ತದೆ.

ಈ ಪುಸ್ತಕವನ್ನು ಪುರಂದರದಾಸ ಅಧ್ಯಯನ ಪೀಠದ ಪರವಾಗಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿದೆ. ಅದಕ್ಕಾಗಿ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯನವರಿಗೆ ಕೃತಜ್ಞತೆಗಳು. ಮುದ್ರಣ ವಿನ್ಯಾಸದ ಬಗೆಗೆ ಕಾಳಜಿ ವಹಿಸಿರುವ ಶ್ರೀ ಬ. ಸುಜ್ಞಾನಮೂರ್ತಿಯವರಿಗೆ ವಂದನೆಗಳು.

ಎಲ್ಲಕ್ಕಿಂತ ಮುಖ್ಯವಾಗಿ ಪುರಂದರದಾಸ ಅಧ್ಯಯನ ಪೀಠದ ಗೊತ್ತು ಗುರಿಯ ಬಗೆಗೆ ಅಗಿಂದಾಗ್ಗೆ ಮಾರ್ಗದರ್ಶನ ಮಾಡುತ್ತಾ. ಪೀಠದ ಸಂಶೋಧನೆ ಕಾರ್ಯಗಳಿಗೆ ಎಲ್ಲಿಲ್ಲದ ಪ್ರೋತ್ಸಾಹ ನೀಡುತ್ತಿರುವ ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರಿಗೆ ವಿಶೇಷ ನೆನಕೆಗಳು.

 

ಪ್ರೊ. ಎ. ಬಿ. ನಾವಡ
ಸಂಚಾಲಕ
ಪುರಂದರದಾಸ ಅಧ್ಯಯನ ಪೀಠ.