ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ದಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತ್ರವಾಗಿ ಪ್ರಯೋಗವಾಗುತ್ತಿರುವಾಗ ಈ ಅಸ್ತ್ರವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯದ ಮೇಲೆ ಇದೆ. ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕೆನ್ನುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಈ ಸಂಬಂಧ ಸಾಹಿತಿಗಳ, ಭಾಷಾತಜ್ಞರ, ತಂತ್ರಜ್ಞರ ಸಮಾಲೋಚನೆಯನ್ನು ನಡೆಸಿ ಕನ್ನಡವು ಸರ್ವವ್ಯಾಪಿಯಾಗಿ ಬೆಳೆಯಲು ಶ್ರಮಿಸುತ್ತಿದೆ.

ಕನ್ನಡ ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ – ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳಲ್ಲಿ ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಿಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ವಿಶ್ವವಿದ್ಯಾಲಯದ ಪುರಂದರದಾಸ ಅಧ್ಯಯನ ಪೀಠದ ಸಂಚಾಲಕರಾಗಿ ಪ್ರೊ. ಎ.ವಿ. ನಾವಡ ಅವರು ದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಅಪೂರ್ವ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳ ಸಾಲಿಗೆ ಸೇರುವ ಪ್ರಸ್ತುತ ಕೃತಿ ‘ಹರಿದಾಸರ ಪಾಂಡುರಂಗ ವಿಠ್ಠಲ’ ಬಹಳ ಮಹತ್ವಪೂರ್ಣವಾದದು. ಪ್ರೊ. ಎ.ವಿ. ನಾವಡ ಅವರು ಮಹಾರಾಷ್ಟ್ರದಲ್ಲಿ ನೆಲೆಸಿದ ಕನ್ನಡ ವಿಠ್ಠಲನಿಗೆ ಸಂಬಂಧಿಸಿದ ಬಹಳ ಅಪೂರ್ವವಾದ ೫೮ ರಚನೆಗಳನ್ನು ಇಲ್ಲಿ ಕಲೆ ಹಾಕಿದ್ದಾರೆ. ಕನ್ನಡ ಕವಿಗಳು ಪಾಂಡುರಂಗ ವಿಠ್ಠಲನನ್ನು ಪರಿಕಲ್ಪಿಸಿದ ಬಗೆಗಳು ಇಲ್ಲಿ ಅನಾವರಣಗೊಂಡಿವೆ. ಒಂದು ಅರ್ಥದಲ್ಲಿ ಮಹಾರಾಷ್ಟ್ರದಲ್ಲಿರುವ ಪ್ರಯತ್ನ ಇಲ್ಲಿ ನಡೆದಿದೆ. ತಮ್ಮ ಶ್ರದ್ಧೆ ಮತ್ತು ಪರಿಶ್ರಮದ ಮೂಲಕ ಅಚ್ಚುಕಟ್ಟಾಗಿ ಸಂಪಾದನೆಯನ್ನು ಮಾಡಿಕೊಟ್ಟ ಪ್ರೊ. ಎ.ವಿ. ನಾವಡ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಅಭಿನಂದನೆಗಳು. ಈ ಕೃತಿ ಕನ್ನಡ ಮತ್ತು ಮರಾಠಿ ಭಾಷೆ ಹಾಗೂ ಸಾಹಿತ್ಯಗಳ ಸಂಬಂಧವನ್ನು ಇನ್ನೆಷ್ಟು ಬೆಸೆಯುತ್ತದೆ ಎಂದು ಭಾವಿಸಿದ್ದೇನೆ.

ಬಿ. ಎ. ವಿವೇಕ ರೈ
ಕುಲಪತಿ