೧. ಧ್ರುವ

ಅಟ್ಟ

ಅಂದು ಮಾನಿಸನಾದೆಲೋ ಹಾಹ ಕ್ಷೇತದಲ್ಲಿ
ಬಂದು ಸುಳಿದು ಪೋದುದ ಅರಿಯಾದೆ

ಮಂದಮತಿಗ ನಾನು ಮನುಷ್ಯನ್ನವ ಬಿಡದೆ
ತಿಂದ ಪ್ರಯುಕ್ತದಲ್ಲಿ ಇನಿತಾಯಿತೋ
ಹಿಂದೆ ಮಾಡಿದ ಕರ್ಮಾವರ್ಕವಾಗಿದ್ದ ಮರವೊ
ಸಂದೇಹಗೊಳಿಸುವುದು ನಿನ್ನ ಬಗೆಯೊ
ಎಂದಿಗೆಂದಿಗೆ ತಿಳಿಯಾದಿದ್ದೆ ವಿಷಯಂಗಳಿಗೆ
ಪೊಂದಿಕೊಂಡು ನಿನ್ನ ಮಹಾಮಹಿಮೆಯಾ
ಇಂದು ನೀನೆ ಕೃಪೆಯಿಂದ ಬಾಂಧವನಾಗಿ
ಬಂದು ತಿಳಿಪಿದ ಕಾರಣದಿಂದಲಿ
ನಂದವಾಯಿತು ಮನಕೆ ಉತ್ಸಾಹವೆಂದೆಂಬೋ
ಸಿಂಧುವಿನೊಳಗೆ ಮುಣುಗಿ ತೇಲಾಡಿದೆ
ಅಂದೆ ಈ ಪರಿಯಲ್ಲಿ ತಿಳಿಸಿದರಾದರೆ
ಮುಂದಿಯೊಳಗೆ ತಲೆ ಹೊರೆಯಾಗುವೆನೆ
ಇಂದಲ್ಲ ನಿನ್ನ ಮಾಯಾ ಅನಂತಕಲ್ಪಕೆ
ಒಂದೊಂದು ಪರಿ ಉಂಟು ಬೊಮ್ಮಗರಿದು
ಕುಂದಿದೆ ಸತ್ವರಿಗೆ ಮೊದಲು ವಿಷಯಾ ಆಮೇಲೆ
ಸುಂದುವಾದಾಮೃತ ನೋಡ ನೋಡೆ
ಎಂದು ನಿನ್ನಂಘ್ರಿಧ್ವಯವ ಪೂಜಿಪ ಸಜ್ಜನರು
ಒಂದೆ ಮನಸಿನಲಿ ಸಾರುವರೊ
ನಂದ ಗೋಕುಲದಲ್ಲಿ ಗೋಪಾಲಕನಾಗಿದ್ದೆ ದೇವ.   ೧

ಮಟ್ಟ

ಜಾರಿಪೋದ ಜೀವ ಇಂದ್ರದೇವರ ಮನೆಯ
ದ್ವಾರದ ಬಳಿಯಲ್ಲಿ ದಾಸ್ಯ ಭಾವವೆಂದು
ಕಾರುಣ್ಯವೆ ಮಾಡಿ ಸ್ವಪ್ನದಲಿ ಇದೆ
ಮಾರುತಿ ಪೇಳಲಾಯು ನಿಶ್ಚಯಿಸಿಕೊಂಡೆ
ಆರಾರ ಸಾಧನ ಆವುದೊ ನಾನರಿಯೇ
ಘೋರಪಾತಕ ಹರ ವಿಜಯವಿಠಲ ಹದಿ
ನಾರು ಸಾವಿರ ಗೋಪಸ್ತ್ರೀಯರಾಳಿದ ಕೃಷ್ಣ   ೨

ತ್ರಿವಿಡಿ
ಈರ್ವರ ಕರಸುವದೆಂದವ ಪೇಳಿದ
ಗೀರ್ವಾಣ ಸಭೆಯಲ್ಲಿ ನುಡಿದ ಮಾತು
ಊರ್ವಿಯೊಳಗೆ ಸಿದ್ದಪ್ರಮೇಯ ಇದೆ ನಿಜವೆಂದು
ನಿರ್ವಾಧಿಕ ಬಾಲಾಪ್ರಾಯವೆನದೆ
ಗರ್ವವ ತಗ್ಗಿಸಿ ಕರದು ಒಯ್ಯದೆ ಬಿಡರು
ನಿರ್ವಾಹಕರ್ತರು ಮೇಲಿನವರು
ನಿರ್ವಹಿಸಲಾರರು ಮರ್ತ್ಯರೆಂದೆನುತ ಆ
ಓರ್ವನು ಕೂಗಿ ಸಾರಿಪೋದನು
ಸರ್ವಥಾ ನಾನಿದಕೆ ಶಂಕಿಸುವವನಲ್ಲಾ
ಸರ್ವದ ನಿನ್ನಾಜ್ಞದವನೋ ನಾನು
ಸರ್ವಶಕ್ತನೋ ಕೇಳೋ ಬಿನ್ನಪ ಒಂದುಂಟು
ಪೂರ್ವದಲ್ಲಿದ್ದ ಮನಸ್ಸಿನಪೇಕ್ಷ
ಗೀರ್ವಾಣ ನದಿಸ್ನಾನ ಗಯ ಪಿಂಡದಾನಾ
ಸರ್ವೇಂದ್ರಿಯಾಗಳಿಂದ ನಿನ್ನ ಸೇವೆ
ದರ್ವಿ ಭೂತಸ್ಥನಾಗಿಹನೆಂದು ಮುನ್ನಿಸಿ
ಪೂರ್ವಮತಿಯ ಕೊಟ್ಟು ಪಾಲಿಸುತ್ತ
ಇರ್ವಗೆ ಮಾಡಿಸು ಪುಸಿಯಗೊಡದೆ ಮಾತು
ದೂರ್ವಿನಾದರೂ ನಿನಗೆ ಕೊಡಲರಿಯೆನೋ
ಶರ್ವಾದಿಗಳ ವಂದ್ಯ ವಿಜಯ ವಿಠಲಕೃಷ್ಣ
ನಿರ್ವಾಣಗಿಂದಧಿಕ ನಿನ್ನ ಭಕ್ತಿ ಮುಕುತಿ ಸುಖ   ೩

ಅಟ್ಟ
ಕಸಗೊಂಡ ಭೂಪತಿ ತಿರುಗಿ ಕೊಡುವೆನೆಂದು
ವಸಿಕರನಾಗಿ ಬಡವಂಗೆ ಒಲಿದಾರೆ
ವಸುಧಿ ಮಾನವರೆಲ್ಲಾ ಒಂದಾಗಿ ಪೋಗಿ ಮಾ
ಣಿಸಲಾಗಿ ಭೂಪತಿ ಕೊಡದಿಪ್ಪನೇ
ಬಿಸಜನಾಭನ ಕೃಪಾರಸಪೂರ್ಣ ದೃಷ್ಟಿಲಿ
ನಸುನಗೆಯಲ್ಲಿ ನಿನ್ನ ಭಕುತನ್ನ ಸಂತಾಪ
ಕೊಸರಿದರಿವರೆಂದು ಇಚ್ಚೆ ಮಾಡಿದರೆ ನಿ
ಲ್ಲಿಸಲಾಪರೆ ಸರ್ವಲೋಕದವರು ಕೂಡಿ
ಪಶುಪತಿ ಮಿಕ್ಕಾದವರು ಈ ಮಾತಿಗೆ
ಕುಶಲವಾಗಲೆಂದು ನಿನ್ನ ಸ್ತುತಿಪರು
ವಿಷಭುಂಜ ವಿಜಯ ವಿಠಲ ಕೃಷ್ಣ ಒಲಿದಾರೆ
ಹಸಗೆಟ್ಟು ಪೋಗುವುದು ಅನಾದಿ ದುಷ್ಕರ್ಮ   ೪

ಆದಿ
ಚಿತ್ತವಾದರು ಹರಿಯ ಚಿತ್ತಜನಯ್ಯಾ ನಿನ್ನ
ಚಿತ್ತ ನಮ್ಮ ಭಾಗ್ಯ
ಹತ್ತಾರು ತುತ್ತು ಪುಣ್ಯಕೀರ್ತಿಯಂ ಬರುವಂತೆ
ವಾರ್ತಿಯಾಗಲಿ ಎನ್ನ ಆರ್ತವ ಪರಿಹರಿಸು
ಸ್ಟೋತ್ತಮರ ಗುರುವೆ ಎತ್ತಿ ಕರವ ಮುಗಿವೆ
ಮತ್ತೊಂದಾವರು ಅರಿಯೆ ಮಿತ್ರಾನೆ ನಮಗೆ ನೀನು
ನಿತ್ಯದಲ್ಲಿ ರಕ್ಷಿಸು ಸತ್ಯಸಂಕಲ್ಪ ಸಿದ್ದಿ ವಿಜಯ ವಿಠಲ ಇದೇ
ಉತ್ತರ ಲಾಲಿಸೈ ಅರಿಷ್ಟ ನಿವಾರಣಾ   ೫

ಜತೆ
ಸಂತಾಪ ಕಳೆವಲ್ಲಿ ನೀನಲ್ಲದಿನ್ನಿಲ್ಲ
ಶಾಂತ ಮೂರುತಿ ನಮ್ಮ ವಿಜಯವಿಠಲ ಕೃಷ್ಣ   ೬


ಧ್ರುವ
ಅಚ್ಯುತಾನಂತನ ಕಂಡೆ
ಸಚ್ಚಿದಾನಂದೈಕ ಸರ್ವೋತ್ತಮನ ಕಂಡೆ
ಅಚ್ಚ ಮಲ್ಲಿಗೆ ವನಮಾಲಾನ ಕಂಡೆ
ಪಚ್ಚಕಡಗ ವಿಹ್ಯರಾ ಕಂಡೆ
ನೆಚ್ಚಿದ ಭಕ್ತ ಪೊರೆವದಾತನ ಕಂಡೆ ಅಚ್ಯುತಾನಂತ
ಅಚ್ಚರಿಯಾ ದೈವಾವೆ ವಿಜಯವಿಠಲರೇಯಾ
ನಿಚ್ಚಾ ಪಂಢರಪುರಿವಾಸಾ ರಂಗನ ಕಂಡೆ             ೧

ಮಟ್ಟ

ವಾಸುದೇವನ ಕಂಡೆ ವಾಮನನಾ ಕಂಡೆ
ಕ್ಲೇಶನಾಶನ ಕಂಡೆ ಕೇಶವನ ಕಂಡೆ
ವಾಸವಾನುಜನಾಗಿ ವಾಗೀಶ ಪಿತನ ಕಂಡೆ
ಶ್ರೀಶ ವಿಜಯವಿಠಲೇಶ ಚಂದ್ರಭಾಗಾ
ವಾಸ ರಂಗನ ಕಂಡೆ ವರನಾ ಕಂಡೆ          ೨

ತ್ರಿವಿಡಿ

ಕುಲಾವಿ ಶಿರದಲ್ಲಿ ಇಟ್ಟು ಸೊಬಗುಕಂಠ
ದಲ್ಲಿ ಮೆರೆವ ಎಳೆ ತುಳಸಿಮಾಲೆ ನವ
ಮಲ್ಲಿಕ ಸುರಗಿ ಜಾಜಿದಂಡೆ, ಉಡಿ
ಯಲ್ಲಿ ಗುಲ್ಲಿಯ ಚೀಲಾ ಸಿಗಿಸಿಕೊಂಡಾ ಗೋವಾ
ಳೆಲ್ಲಾರು ಒಂದಾಗಿ ತುರುವಿಂಡು ಕಾಯುವತಾ
ಇಲ್ಲಿಗೆ ಬಂದಾ ಶ್ರೀವಲ್ಲಭಾ ಯದುಪಾ
ಚಲ್ಲಾಗಂಗಳ ಚಲುವ ವಿಜಯವಿಠಲ ಸ್ವಾಮಿಯಾ
ಎಲ್ಲಿಂದ ಬಂದ ಮತ್ತೆಲ್ಲಿಪ್ಪನ ಕಂಡೆ               ೩

ಅಟ್ಟ

ಗೋಪಿಯನಂದನ ಗೋಪಿಯರರಸ
ಗೋಪಾಲರಾ ಒಡಿಯಾ ಸಾಂದೀಪನಿ ಪ್ರೀಯಾ
ದ್ರೌಪದಿಯಾ ಮಾನವ ಪರಿಪಾಲಕಾ
ತಾಪಹರ ನಮ್ಮ ವಿಜಯವಿಠಲನ್ನ
ಈ ಪಾಂಡುರಂಗಾ ಕ್ಷೇತ್ರದಲ್ಲಿ ಕಂಡೆ    ೪

ಆದಿ

ಮನುಜನಾಗಿ ಧನುವನು ಮುರಿದು
ದನುಜನ ಕಾಲಿಲೆ ವರಸಿದೆ
ಮನುಜನಾಗಿ ಮಡಿಯನ್ನು ಉಟ್ಟು
ತನುವಿಗೆ ಗಂಧವ ಪೂಸಿದಾ
ಮನುಜನಾಗಿ ಹರನ ಸೋಲಿಸಿ
ತನುಜ ತನುಜನ್ನ ಬಿಡಿಸಿದ
ಮನುಜನಾಗಿ ಮನುಜ ಧರ್ಮವ
ಜನರಿಗೆ ಸೋಜಿಗೆ ತೋರಿದ
ಮನುಜನಲ್ಲ ಇದು ಮಾಯಾದ ಬೊಂಬೆ
ಘನ ವಿಜಯವಿಠಲನ್ನ ಕಂಡೆ
ಮನುಜನಾಗಿ ಸೋಳಾ ಸಾಸಿರ ಗೋಪೇರ
ಮನಸಿಗೆ ಒಪ್ಪಿದ ಮನುಜನಾಗಿ           ೫

ಜತೆ

ಆವಾಗ ಬಿಡದಿಲ್ಲಿ ಆಡುವವನ ಕಂಡೆ
ದೇವೇಶಾ ವಿಜಯವಿಠಲರಾಯನ ಕಂಡೆ

ಜೋಗ                                                ಝಪ

ಈ ಪರಿಯ ಸುಲಭ ಇನ್ಯಾವ ದೇವರು ಉಂಟು
ಗೋಪಾಲಕೃಷ್ಣ ಪಂಢರೀನಾಥನಲ್ಲದೆ                      ಪ

ಕಾಸು ಇಲ್ಲದೇ ಪೋಗಿ ಶ್ರೀಶನಂಘ್ರಿಯ ಮೇಲೆ
ಲೇಸಾಗಿ ಹಣಿಯಿಟ್ಟು ನಮಿಸಬಹುದೋ
ಕೂಸೆಂದು ಗದ್ದ ತುಟಿ ಹಿಡಿದು ಮುದ್ದಿಡಬಹುದು
ಕೂಸಾಗಿ ಕೈ ಹಿಡಿದು ಕಾಡಿಬೇಡಲುಬಹುದೊ
ವಾಸುದೇವನ ಮೂರ್ತಿ ಅಪ್ಪಿಕೊಳ್ಳಲುಬಹುದೋ          ೧

ಜಾತಿಕುಲ ಗೋತ್ರಗಳ ಆತ ನೋಡುವದಿಲ್ಲ
ಪ್ರೀತಿಯಿಂದಲಿ ಬರುವ ಭಕುತ ಜನಕೆಲ್ಲಾ
ರಾತ್ರಿ ಹಗಲೆನ್ನದೇ ಸತತ ಜನಜಾತ್ರಿಗೆ
ಮಿತ್ರನಂದದಿ ಭೆಟ್ಟಿಕೊಡುವ ವಿಠ್ಠಲರಾಯ        ೨

ದುಡ್ಡಿನವ ತಿಮ್ಮಪ್ಪ ದೊಡ್ಡಗುಡ್ಡದಿ ನಿಂತ
ಕಡಲದಡದಲಿ ನಿಂತ ಮಡಿವಂತ ಕೃಷ್ಣಾ
ಬಡವರೊಡೆಯನು ನಾನು ಬೇಗ ಬನ್ನಿರಿ ಎಂದು
ನಡದಮೇಲೆ ಕೈಯಿಟ್ಟು ನಿಂತ ಭೂಪತಿ ವಿಠಲ    ೩

ಎಂದು ಕಾಂಬೆನು ಪಾಂಡುರಂಗ ಮೂರುತಿಯಾ
ಇಂದುಭಾಗನಿವಾಸ ನರನ ಸಾರಥಿಯ              ಪ

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರ
ತರುಣೇಂದುಚ್ಚವಿ ತಿರಸ್ಕರಿಸುವ ಪ್ರಖರ
ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ
ತೆರಜಾನು ಜಂಘೆ ಭಾಸುರ ರತ್ನ ಮುಕುರ   ೧

ರಂಭಾ ಪೋಲುವ ಊರು ಪೊಂಬಣ್ಣಾಂಬರವ
ಕುಂಭೀಮಸ್ತಕದೊಲ್ ನಿತಂಬದಿ ಪೊಳೆವ
ಕಂಬುಮೇಖಳಕಂಜ ಗಂಭೀರ ನಾಬೀ
ಅಂಬುಧಿಶಾಯಿ ವಿಧಿ ಶಂಭು ಪೂಜಿತನ   ೨

ಲವಕುಕ್ಷಿತ್ರಿವಳೀ ಭಾರ್ಗವಿವಕ್ಷ ಉದಯ
ರವಿ ಪೋಲುವ ಕೌಸ್ತುಭ ವೈಜಯಂತಿಯ
ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು
ನವನೀತ ಚೋರ ಶ್ರೀ ಪವಮಾನಾರ್ಚಿತನ   ೩

ಪದಕ ಸರಿಗೆಯು ಜಾಂಬೂನದ ಕಂಬುಕಂಠ
ರದನೀಕರ ಬಾಹು ಚೆದುರ ಭುಜಕೀರ್ತಿ
ಬದರಸಂಕಾಶಾ ಅಂಗದ ರತ್ನ ಕಟಕಾ
ಪದುಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ   ೪

ವಿಧುಬಿಂಬೋಪಮ ಚೆಲ್ವವದನ ಕೆಂದುಟಿಯಾ
ಬಿಧುರಾಭಾದಶನಾಲಿಂಗದನೊಳ್ ಕಿರುನಗೆಯಾ
ಕದಪು ಕನ್ನಡಿ ನಾಸಾ ತುದಿ ಚಂಪಕಮೊನೆಯಾ
ಉದಕೇಜಾಯತ ನೇತ್ರಯದುವಂಶೋದ್ಭವನಾ   ೫

ಜ್ವಲಿತಕುಂಡಲಿ ಕರ್ಣ ಸುಲಲಿತ ಭ್ರೂಯುಗಳ
ಪೊಳೆವ ಬಾಲ ಶಶಾಂಕ ತಿಲಕಾಂತಿಕ ಫಾಲ
ಅಳಿಜಾಲವೆನಿಪ ಕುಂತಳ ರತ್ನ ಚಕಿತ
ಕಲಧೌತಮಕುಟ ದಿಗ್ವಲಯ ಬೆಳಗುವನ   ೬

ಶಠಕೂರ್ಮರೂಪಿಯ ಕಿಟ ಮಾನವ ಹರಿಯಾ
ವಟುಭಾರ್ಗವ ಕಾಕುಸ್ಥ ಶಠ ಕಂಸದ್ವೇಷಿಯ
ನಿಟಿಲಾಂಬಕ ಸಹಾಯ ಖಳಕಟಕಾರಿ ಭೀಮಾ
ತಟವಾಸಿ ಜಗನ್ನಾಥವಿಠಲ ಮೂರುತಿಯ

ಎಂದು ಕಾಂಬೆನು ತಂದೆ ಪಂಢರಿ ವಿಠಲರಾಯನೆ
ಬಂದು ನಿನ್ನಯ ಸುಂದರಾಕೃತಿ ಎಂದು ನೋಡುವೆ         ಪ

ದಾಸ ಜನರಾ ಕ್ಲೇಶ ಹರಿಪಾ ದೋಷ ದೂರಾನೇ
ದೋಷಿ ಎನ್ನನು ಪೋಷಿಸೂವುದು ಸಹಸ್ರನಾಮಾನೇ   ೧

ಶ್ರೇಷ್ಠ ಭಕ್ತನು ಕೊಟ್ಟ ಇಟ್ಟಿಯ ಮೆಟ್ಟಿ ನಿಂತಾನೇ
ಪುಟ್ಟನಾಗುತ ಮೆಟ್ಟಿ ಒಲಿಯನು ಕಷ್ಟ ಕಳೆದಾನೇ   ೨

ಕಾವ ಕೊಲ್ಲುವ ಬೋವ ಬಂಡಿಗೆ ಯಾವನೀತನೇ
ಓವಿ ಭಜಿಸಲು ಕಾವ ಗುರು ಗೋವಿಂದ ವಿಠಲನೇ   ೩

ಧ್ರುವ

ಎನ್ನ ಜ್ಞಾನಗಳೆಲ್ಲ ಎನ್ನ ಧ್ಯಾನಗಳೆಲ್ಲ
ಎನ್ನ ಮಾನಗಳೆಲ್ಲ ಎನ್ನ ಸ್ನಾನಗಳೆಲ್ಲ
ಎನ್ನ ಮಂತ್ರಗಳೆಲ್ಲ ಎನ್ನ ತಂತ್ರಗಳೆಲ್ಲ
ಎನ್ನ ದಾನಂಗಳೆಲ್ಲ ಎನ್ನ ಧರ್ಮಂಗಳೆಲ್ಲ
ಎನ್ನ ತೀರ್ಥಯಾತ್ರೆಯೆಲ್ಲ ಎನ್ನ ಯಾಗಂಗಳೆಲ್ಲ
ಎನ್ನ ಪುಣ್ಯಗಳೆಲ್ಲ ಎನ್ನ ಕೌಶಲ್ಯವೆಲ್ಲ
ಇನ್ನಿದರೊಳಗಿನ್ನು ಎನ್ನಿಂದಾದ ಸಾಧನ –
ವನ್ನು ಲೇಶವಾದರು ಕಣ್ಣಿಲಿ ಕಂಡುದ್ದಿಲ್ಲ
ನಿನ್ನ ಸ್ವಭಾವವಯ್ಯಾ ನಿನ್ನ ಕರುಣರಸಕಿನ್ನು
ಆನೇನೆಂಬೆ ಎನ್ನೊಡೆಯನೆ ಕೇಳು
ಎನ್ನ ಕರ್ತೃತ್ವಗಳು ಇನ್ನೂ ಮುನ್ನಾದುದಲ್ಲ
ನಿನ್ನ ಅಧೀನವಯ್ಯ ಎನ್ನ ಫಲಾಫಲವು
ಮನ್ನಣೆ ಮಾಡಿಸುವಿ ಅನ್ಯರಿಂದಲಿ? ನೀನು
ಮನ್ನಣೆಯನ್ನು ಕೊಂಬೆ ಎನ್ನಲ್ಲಿ ನಿಂತುಕೊಂಡು
ನಿನ್ನ ಭಕ್ತರವರನ್ನು ಪಾಲಿಸೊ ಬಗೆ
ನಿನ್ನವರ ಮಹಿಮೆ ನೀನೆ ಬಲ್ಲೆಯೊ ದೇವ
ನಿನ್ನನೆ ಗತಿ ಎಂದು ಬಿನ್ನಪ ಚಿತ್ತೈಸು
ಘನ್ನ ದಯಾನಿಧಿಯೆ ಪನ್ನಗಶಯನ ಗೋಪಾಲವಿಠಲರೇಯ
ನಿನ್ನನೆ ನಿನ್ನನೆ ನಿನ್ನನೆ ಮರೆಹೊಕ್ಕೆ       ೧

ಮಠ್ಯ

ಸಿರಿ ಅಜಭವ ಸುರ ಸನಕಾದಿಗಳಿಗೆ
ಹರಿ ನೀ ಚಲಿಸದಿರೆ ಬೆರಳು ಆಡಿಸಲಿನ್ನು
ತರವಲ್ಲವೆಂತೆಂದು ವರಶ್ರುತಿಸ್ಮೃತಿಗಳು
ಪರಿಪರಿಯಲಿ ಸ್ತುತಿಸಿ ಆರಸಿ ಕೊಂಡಾಡಲು
ಅರಿಯದೆ ನಾ ವ್ಯರ್ಥ ಮರುಳು ಕರ್ತೃತ್ವಾ –
ಧರಿಸಿಕೊಂಡು ಇನ್ನು ಬರಿದೆ ದಣಿದೆನಯ್ಯ
ಪರಮಮೂರ್ಖ ನಾನು ಮರೆಹೊಕ್ಕೆ ಮರೆಹೊಕ್ಕೆ
ಮರೆದದ್ದೆಲ್ಲವ ನೀನು ಅರಿವು ಮಾಡೆನಗೀಗ
ಕರುಣಾಕರರಂಗ ಗೋಪಾಲವಿಠಲ
ಕರುಣಾಳೆಂಬುವುದು ಅರಿಯದಾದೆ ನಿನ್ನ            ೨

ರೂಪಕ

ಕರಚರಣಂಗಳ ಚೇಷ್ಠೀಪರಿ ವ್ಯಾಪಾರವು ಎನ್ನಿಂ –
ದರಿದು ಮಾಡಿದ್ದರೆ ಅರಿಯದಲೆ ಎನ್ನ
ಬೆರಳಿಂದ ಕಣ್ಣನು ಇರಿದುಕೊಬಲ್ಲೆನೆ ಚರಣದಿಂದಲಿ ಮುಳ್ಳು
ಭರದಿಂದ ತುಳಿವೆನೆ ಮರಳಿ ಎನ್ನ ಜಿಹ್ವೆ
ಮರೆದು ನಾ ಕಡ್ವೆಳ್ವೆನೇ ಕಡಿವೆನೆ
ತೆರೆವನೆ ನೀ ಬಾಯನು ತೆರೆಸಿದಿದ್ದರೆ ನಾನು
ಹರಿಯೆ ನೀ ಕರ್ತನಿರೆ ಬರಿದೆ ನಾ ಕರ್ತೆಂದು
ಉರುಲು ಹಾಕಿಸಿಕೊಂಡು ಗುರುಗುರುಗುಟ್ಟುವೆನೆ
ಶರಣರಪಾಲಕ ಗೋಪಾಲವಿಠಲ
ಪೊರೆಯೆನ್ನ ದೊರೆಯೆ ನೀ ಪರಿಪರಿಯಿಂದಲಿ       ೩

ಝುಂಪೆ

ಸರ್ವರಿಗೆ ಪ್ರೇರಕ ಸರ್ವಕರ್ತಭೋಕ್ತ
ಸರ್ವತ್ರದಲಿ ವ್ಯಾಪ್ತ ಸರ್ವಶಬ್ದವಾಚ್ಯ
ಸರ್ವಗುಣ ಪರಿಪೂರ್ಣ ಸರ್ವದೋಷದೂರ
ಸರ್ವಜ್ಞಾನಗಮ್ಯ ಸರ್ವಶಕ್ತಮೂರ್ತಿ
ಸರ್ವೇಶ ಚೆಲುವ ಗೋಪಾಲವಿಠಲರೇಯ
ಸರ್ವಾಂತರಿಯಾಮಿ ಸಾರ್ವಭೌಮ ನಮೋ          ೪

ತ್ರಿಪುಟ

ಬಂದವನು ನೀನೆ ಭಕ್ತರಮನದಲ್ಲಿ
ನಿಂದವನು ನೀನೆ ಪಂಢರಪುರದಲ್ಲಿ
ತಂದೆಯಾಗಿ ಎನಗೆ ತಾಯಿಯಾಗಿ ಎನಗೆ
ಬಂಧುವಾಗಿ ಎಮಗೆ ಸಂದೇಹವಿಲ್ಲದೆ
ಹಿಂದೆ ಮುಂದೆ ಏಕಾಗಿ ಒಂದೆ ಪರಿಯಲ್ಲಿನ್ನು ಸಕಲಕಾಲಲಿನ್ನು
ಚೆಂದದಿ ಪಾಲಿಸಲಾನಂದದಿ ಎನ್ನಮನ-
ಮಂದಿರದಿ ಪೊಳೆದು ನಿಂದು ಆಡುವ ರಂಗ
ಒಂದೆ ದೈವವೆ ನಮ್ಮ ಗೋಪಾಲವಿಠಲ
ಕಂದನ ತಾಯಿ ತಾಯಿ ಸಲಹಿದಂದದಿ ಸಲಹುವೆ               ೫

ಅಟ್ಟ

ಬೇಬ್ಯಾಡೆನ್ನಬಾರದೆ ನಾಡವಿಷಯಕ್ಕೆ ಮನ
ಓಡಿದರೆ ನೀನು ಓಡುತಲಿಹರೆ
ಮಾಡಿಕೊಂಡ ಪತಿ ನೋಡುತಲಿರಲು ಸತಿ
ಈಡ ಒಬ್ಬನ ಬೇರೆ ನೋಡಿಕೊಂಡರೆ ಇನ್ನು
ಮಾಡುವನೊ ಕೃಪೆ ಕೇಡಾಗೋದಲ್ಲದೆ
ನಾಡದೈವದ ಗಂಡ ಗೋಪಾಲವಿಠಲ
ಖೋಡಿ ವಿಷಯಕ್ಕೆ ಮನ ಓಡಾಡದಂತೆ ಮಾಡೊ              ೬

ಆದಿ

ಗರತಿಯ ಲಕ್ಷಣ ದೊರಕಿಸು ಎನಗೆ
ಗರಳ ಎನಿಸು ಪರ ಅರಸಿಯಲಿ
ಕುರುಹ ತಿಳುಹಿಸು ನಿನ್ನ ತತ್ವಗಳಲ್ಲಿ
ಮರುಳು ಬಿಡಿಸು ಮನಮತಿಗಳಲ್ಲಿ
ತಿರುಗಿಸೆನ್ನನು ತೀರ್ಥಯಾತ್ರೆಗಳಲ್ಲಿ
ಹರಟೆಮಾಡಿಸು ಹರಿವಾರ್ತೆಗಳಲ್ಲಿ
ಕರವ ಮುಗಿಸು ನಿನ್ನ ರೂಪಂಗಳಲ್ಲಿ
ಕರವವಿಡಿಸು ನಿನ್ನ ಶರಣರಲ್ಲಿ
ಪರಮ ದಯಾಳು ಗೋಪಾಲವಿಠಲರೇಯ
ಕರೆವ ವಚನಗಳಲ್ಲಿ ಅರಿವಂತೆ ಮಾಡೊ ನಿನ್ನ                  ೭

ಜತೆ

ನಾನಾಡುವ ಮಾತೆಲ್ಲ ನಿನ್ನದೆ ಅಯ್ಯಾ
ನಾನರಿಯೆ ನೀನೆ ಗತಿ ಗೋಪಾಲವಿಠಲ

ಏಳು ಪಂಢರಿವಾಸ ಏಳು ಶ್ರೀ ದೇವೇಶ
ಏಳು ಮುಕ್ತ ಗಿರೀಶ ಏಳು ಹೃದೇಶ                ಪ

ಏಳು ಮೂಲೋಕದೀಶ ಏಳು ಹೃತ್ಪದವಾಸ
ಏಳು ಏಳಯ್ಯ ಶ್ರೀಶಾ ಏಳು ಸರ್ವೇಶಾ            || ಅ.ಪ ||

ಗಂಗಾ ಭಾಗೀರಥಿ ತುಂಗಭದ್ರಾ ಯಮುನ
ಸಂಗಮ ತ್ರೀವೇಣಿ ಸರಸ್ವತಿ ಸರಯೂ
ಮಂಗಳೆ ಚಂದ್ರಭಾಗೆಯೋಳ್ ಕೂಡಿ ಸೇವಿಸೆ
ರಂಗಾ ಬಾಗಿಲೋಳ್ ನಿಂತು ಕಾದಿಹಳಯ್ಯ          ೧

ಪುನಗು ಜವಾಜಿ ಕಸ್ತೂರಿ ಬೆರಸಿದ ಜಲ
ನಿನಗೆ ತೈಲವನೆತ್ತಿ ಎರೆವೆನೆಂದು
ಕನಕ ರತ್ನದಿ ಭೂಷಿತರಾದ ದೇವ
ಕನ್ನಿಕೆಯರು ಕಾದಿಹರಯ್ಯ ಲಕುಮಿಪತಿ             ೨

ಪಂಚಬಾಣನ ಪಿತನೆ ಪಂಚಾಮೃತ ತಂದು
ಪಂಚಕನ್ನೆಯರು ಎರೆವೆನೆಂದು
ಮಿಂಚು ಕೋಟಿಯತೇಜಾಭರಣ ಪೀತಾಂಬರ
ಪಂಚ ರೂಪಗೆ ಉಡಿಸಿ ಶೃಂಗರಾಗೈಯುವರು                  ೩

ಕಸ್ತೂರಿ ತಿಲಕವು ಕನಕಾಂಬರದ ಶಾಲು
ಸುತ್ತಿದ ಮುಂಡಾಸು ಶೃಂಗರಿಸಿ
ಮತ್ತೆ ಕಾಸಿದ ಹಾಲು ಹಣ್ಣು ಸಕ್ಕರೆ ಕೊಟ್ಟು
ಎತ್ತಿ ಬೆಳಗುವ ಮುತ್ತಿನಾರತಿ ವಿಠಲ      ೪

ಪಾಪರಹಿತ ಏಳು ಪಾವನ್ನ ರೂಪ ಏಳು
ಗೋಪಾಲಕೃಷ್ಣ ವಿಠಲ ಹರಿ ಏಳು
ಶ್ರೀಪದ್ಮಭವಮುಖರಾಪಾರ ಮುನಿಗಳು
ರೂಪ ನೋಡಲು ಇಲ್ಲಿ ಕಾದಿಹರೇಳಯ್ಯ          ೫