ಕಂಡು ಎಂದಿಗೆ ಧನ್ಯಳಾಗುವೆ ನಾನು
ಪಂಢರೀಶನ ಪಾದ ಪುಂಡರೀಕವನೂ  ಪ

ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ
ಪಾಂಡವರ ಪ್ರಿಯ ಬಂಧು ನೆಲಸಿದಂಥಾ
ಪಂಢರೀಕ್ಷೇತ್ರದಲಿ ಚಂದ್ರಭಾಗದಿ ಮಿಂದು
ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ          ೧

ಕೋಮಲದ ಚರಣಕಭಿನಮಿಸಿ ಕರಯುಗದಿಂದ
ಶ್ಯಾಮವರ್ಣನ ಪಾದಕಮಲ ಮುಟ್ಟೆ
ಆ ಮಹಾ ಆನಂದ ಅನುಭವಿಪ ಭಾಗ್ಯವನು
ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ     ೨

ಅಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ
ಆಪಾದ ಮೌಳಿ ಈಕ್ಷಿಸುತ ಹೃದಯದಲಿ
ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ
ಗೋಪಾಲಕೃಷ್ಣವಿಠಲನ ಎಂದು ಕಾಂಬೆ             ೩

ಕಂಡೆ ಕನಸಿನಲಿ ನಾ ಪಾಂಡುರಂಗನ
ಮಂಡೆ ಇಡುತಲಿ ಪುಂಡಲೀಕ ಚರಣದಲೀ        ಪ

ಪಂಢರೀಕ್ಷೇತ್ರದಲಿ ವಿಠ್ಠಲನ ದರ್ಶನಕೆ
ದಂಡೆ ಹಾರ ಕೊಂಡುಪೋಗುತಿರಲೂ
ಹಿಂಡು ಜನ ಊಟಕೆಡೆ ಅಣಿಮಾಡುತಿರಲಲ್ಲಿ
ಕಂಡು ಸಾಗುತ ಮುಂದೆ ದ್ವಾರದೆಡೆ ಬಂದು        ೧

ನಂತರದಿ ದ್ವಾರಗಳು ಮುಚ್ಚಿರಲು ಕಂಡು ಬಹು
ಚಿಂತಿಸಲು ಅಲ್ಲೊಬ್ಬ ಬರಲು ಅವಗೇ
ಅಂತರಂಗವನುಸುರೆ ಕದ ತೆರೆದು ನೋಡೆನಲು
ಸಂತೋಷದಿಂದೆರಡು ದ್ವಾರಗಳ ತೆರೆದೇ            ೨

ರತಿಪತಿಯ ಬಿಂಬ ಶ್ರೀ ಪ್ರದ್ಯುಮ್ನವಿಠ್ಠಲನ
ಮೂರ್ತಿಯನೆ ಕಂಡು ಹಾರವನ್ಹಾಕಿ ನಮಿಸಿ
ಅತಿ ಪ್ರೀತಿ ಭಕ್ತಿಯಲಿ ಅಪ್ಪಿ ನಾ ಮೈಮರತೆ
ಸ್ತುತಿಸುತಲಿ ಗೋಪಾಲಕೃಷ್ಣ ವಿಠ್ಠಲನನಾ        ೩

೧೦

ಕಂಡೆ ಕಂಡೆ ಪಂಢರೀಶನ ಕಂಡೆ ಕಂಡೆ    ಪ

ಕಂಡೆ ಪಂಢರೀಪುರದಿ ಮೆರೆವನ
ಕಂಡೆ ಭಕ್ತರ ಕಾವ ಬಿರುದನ
ಕಂಡೆ ಮಂಡೆಯ ಚರಣದಲ್ಲಿಡೆ
ಹಿಂಡು ಅಘಗಳ ತರಿವ ವಿಠಲನ        || ಅ.ಪ ||.

ಕಟಿಯಲೀ ಕರವಿಟ್ಟು ಮೆರೆವನ
ಹಟದಿ ವಗದಿಟ್ಟಿಗೆಲಿ ನಿಂತನ
ಸ್ಪಟಿಕ ಹಾಟಕ ಕಟಕ ಮಕುಟನ
ವಟದೆಲೆ ಮೇಲೊರಗಿದಂಥನ
ಕುಟಿಲ ಕುಂತಳ ಫಣಿಯ ತಿಲಕನ
ತೃಟಿಯು ತೆರವಿಲ್ಲದಲೆ ನಮಿತನ
ವಟುವೆನಿಸಿ ಬಲಿರಾಯಗೊಲಿದನ
ನಟನೆಗೆಯ್ಯವ ದಿವ್ಯರೂಪನ               ೧

ಚಂದ್ರಭಾಗಾ ತೀರದಲ್ಲಿ ಹನ
ಚಂದ್ರ ಕೋಟಿಸ್ಮರನ ರೂಪನ
ಇಂದಿರೆಯ ಸಹಿತದಲಿ ನೆಲಸುತ
ಚಂದ್ರದ್ಹಾರಗಳಿಂದಲೆಸವನ
ಬಂದ ಭಕ್ತರ ಭೇದ ನೋಡದೆ
ಸಂದರುಶನಾನಂದವೀವನ
ಚಂದ್ರಮಂಡಲ ಮಧ್ಯವರ್ತಿಯ
ಚಂದ್ರಕುಲಕೆ ತಾ ಚಂದ್ರನೆನಿಪನ            ೨

ವಿಠ್ಠಲನ ಪುರದಲ್ಲಿ ಹರಿಯುವ
ಶ್ರೇಷ್ಠ ಇಂದುಭಾಗೆಯಲಿ ಮಿಂದು
ಮುಟ್ಟಿ ವಿಠಲನ ಚರಣಕಮಲವ
ಬಿಟ್ಟು ಮನದ್ಹಂಬಲಗಳೆಲ್ಲವ
ವಿಠ್ಠಲಾ ನೀನೆ ಗತಿ ಕೈ
ಗೊಟ್ಟು ಕಾಯೆಂದೆನುತ ಸ್ತುತಿಸಿ
ಕಷ್ಟಹರ ಗೋಪಾಲಕೃಷ್ಣ
ವಿಠ್ಠಲನ ಚರಣಾಂಬುಜಗಳನು            ೩

೧೧

ಕಂಡು ಧನ್ಯಳಾದೆ ನಾ
ಪಾಂಡುರಂಗವಿಠಲನಾ        ಪ

ಕಂಡು ಧನ್ಯಳಾದೆ ಹರಿಯ
ಪುಂಡರೀಕ ಪದದಿ ಎನ್ನ
ಮಂಡೆ ಇಟ್ಟು ವಂದಿಸುತಲಿ
ಪುಂಡರೀಕ ವರದ ನಾ         || ಅ.ಪ ||.

ದೂರದಿಂದ ಬಂದು ಹರಿಯ
ಸೇರಿ ವಂದಿಸುತಲಿ ಈಗ
ಹಾರ ಹಾಕಿ ನಮಿಸಿ ಮನೋ
ಹಾರ ನೋಡಿ ದಣಿದೆನಿಂದು   ೧

ಗುರುಗಳಂತರ್ಯಾಮಿ ಹರಿಯ
ಇರಿಸಿ ಎನ್ನ ಬಿಂಬ ಸಹಿತ
ಸ್ಮರಿಸಿ ಚಿಂತಿಸಿ ವಿಠಲನಲ್ಲಿ
ಕರುಣಮೂರ್ತಿ ಪಾಂಡುರಂಗನ   ೨

ಗುರುಪುರಂದರ ಸ್ತಂಭ ಕಂಡೆ
ವರದ ಚಂದ್ರಭಾಗ ತೀರದಿ
ಚರಣ ಇಟ್ಟಿಗೆಯಲಿ ಇಟ್ಟು
ಸಿರಿ ಗೋಪಾಲಕೃಷ್ಣ ವಿಠಲನ   ೩

ವನ ಮಧ್ವಮಂದಿರ ಮನಸಿಜಪಿತ ಸರ್ವ
ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ   ೪

ಶ್ರೀಪದ್ಮಭವನುತ ನಾ ಪಾಮರಾಳಿಹೆ
ಗೋಪಾಲಕೃಷ್ಣವಿಠಲ ಶ್ರೀಪತಿಯೆ
ನೀ ಪಾರು ಮಾಡದೆ ಕಾಪಾಡುವವಯ್ರ‍್ರೊ
ಗೋಪಕುವರ ಪೇಲೋ ತಾಪ ಬಿಡಿಸಿ ಸಲಹೋ   ೫

೧೨

ಕಂಡೆ ಪಂಢರಿರಾಯನ ತನ್ನನು
ಕೊಂಡಾಡುವರ ಪ್ರಿಯನ ವಿಠ್ಠಲನ    ಪ

ಸಮಚರಣಭುಜನ ನಿಗಮಾ
ಗಮತತಿಗೋಚರನಾ
ಅಮಿತ ಪರಾಕ್ರಮನ ರುಕ್ಮಿಣಿ
ರಮಣ ರವಿಕ್ಷಣನಾ ವಿಠಲನ    ೧

ಕಾಮಿತಾರ್ಥಪ್ರದನ ಶ್ರೀ ತುಲಸೀ
ಧಾಮ ವಿಭೂಷಿತನ
ಸಾಮಜ ಪತಿ ಪಾಲನ ತ್ರಿಭುವನ
ಸ್ವಾಮಿ ಚಿತ್ಸುಖಮಯನ ವಿಠ್ಠಲನ     ೨

ಗೋಕುಲ ಪೋಷಕನ ಮುನಿ ಪುಂಡ
ರೀಕಗೋಲಿದು ಬಂದನ
ಲೋಕವಿಲಕ್ಷಣನ ಪ್ರಣತರ
ಶೋಕವಿನಾಶಕನ ವಿಠ್ಠಲನ     ೩

ಚಂದ್ರಭಾಗವಾಸನಾ ವಿಧಿ ವಿಹ
ಗೇಂದ್ರಮುಖಾರ್ಚಿತನ
ಇಂದ್ರೋತ್ಪಲನಿಭನ ಗುಣಗಣ
ಸಾಂದ್ರ ಸರ್ವೋತ್ತಮನ ವಿಠ್ಠಲನ   ೪

ಶ್ವೇತವಾಹನ ಸಖನ ಸತಿಗೆ ಪಾರಿ
ಜಾತನ ತಂದವನಾ
ವೀತ ಶೋಕ ಭಯನಾ ಶ್ರೀ ಜಗ
ನ್ನಾಥ ವಿಠಲರೇಯನಾ   ೫

೧೩

ಕಂಡೆ ಪಂಢರಿರಾಯನ ಸಿರಮನಃ ಪ್ರಿಯನಾ       ಪ

ಚಂಡವಿಕ್ರಮ ಕರದಂಡ ಮುನಿಪಗೊಲಿ
ದಂಡಜಾಧಿಪ ಪ್ರಕಾಂಡ ಸುಪೀಠನ     || ಅ.ಪ ||.

ಮಣಿಮಯ ಮುಕುಟ ಮಧುಪನವಿರಪ್ಯರೇ
ಪಣೆಯೊಳಿಟ್ಟ ಕಸ್ತೂರಿ ತಿಲಕ
ವನರುಹ ಉಪಮ ಲೋಚನಯುಗ ಚಂಪಕ
ಸುನಾಸವಕುಂಡಲ ವಿಕಾಸವ ಕದಪಿನ ವಿಲಾಸವ
ಮೊಗದ ಮಂದಹಾಸವ          ೧

ಕುಂದಕೋರಕ ದಶನಾವಳಿಯ ಬಿಂಬ
ದಂದದಿ ಪೊಳೆವ ಅಧರಕಳೆಯ
ಕಂಧರ ತ್ರಿವಳಿ ಪುರಂದರ
ಇಭಕರ ಪೋಲುವ ಭುಜಯುಗ ವಿಶಾಲವಾ
ಕರತಳರಸಾಲವ ನಖರ ಮಲ್ಲಿಕಾಸವ    ೨

ಅತಿವಿಸ್ತೃತ ವಕ್ಷಸ್ಥಳವಾ ಸಿರಿ
ಸತಿಸದನಾರ್ಕನಂದದಿ ಪೊಳೆವಾ
ರತುನ ಕೌಸ್ತುಭ ದೀಧಿತಿ ವಿಲಸಿತ
ವೈಜಯಂತಿಯ ಉದರರೋಮ ಪಂಕ್ತಿಯಾ
ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕದಂತಿಹ       ೩

ಮುಂಬಿಸಿಲಿನಂತೆ ಕನಕ ಚೇಲ ಸುನಿ
ತಂಬದಿ ಪೊಳೆವ ಗೋಲಿಯ ಚೀಲ
ಕಂಬು ಕೋಕನವಿಡಂಬ ಮೇಖಲ ಕದಂಬವ
ಊರು ಕದಳೀ ಜಾನುಗಳಿಂದುಬಿಂಬನಾ
ಅ ಚರಿಪ ವಿಡಂಬವ              ೪

ಮಾತಂಗಕರದ ಜಂಘೆಗಳ ಗುಲ್ಫ
ಜಾತಿಮಣಿಕಾಂಗುಲಿ ಸಂಘಗಳ
ಜ್ಯೋತಿ ಬೆಳೆಗೆ ಜಗನ್ನಾಥ ವಿಠಲ
ಸಂಘ್ರೀ ಪುಷ್ಕರ ಉದಿತ ಶತ ಭಾಸ್ಕರ
ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ             ೫

೧೪

ತೋಡಿ                                        ಛಾಪು

ಕಟಿಯಲ್ಲಿ ಕರವಿಟ್ಟನು ಜಗದೀಶನು              ಪ

ರಾಜಸೂಯಯಾಗದಲ್ಲಿ ರಾಜೇಶ್ವರ
ರಾಜರು ಮೊದಲಾದ ಸುರರೆಲ್ಲರು
ಭೋಜನವನೆ ಮಾಡಿದೆಂಜಲು ಮೊದಲಾದ್ದು
ರಾಜೀವಾಕ್ಷನು ಎತ್ತಿದಾಯಾಸದಿಂದಲೊ            ೧

ಗೊಲ್ಲ ಬಾಲಕರೊಡಗೂಡಿ ತಾ ಬಂದು
ಗೊಲ್ಲತೇರ ಮನೆ ಪೊಕ್ಕು ಬೆಣ್ಣೆಯ ತಿಂದು
ಬಲ್ಲಿದ ತೃಣಾವರ್ತ ಮೊದಲಾದಸುರರನ್ನು
ಎಲ್ಲರನ್ನು ಕೊಂದ ಆಯಾಸದಿಂದಲೊ             ೨

ಧಾರಿಣಿಯನು ತಂದ ದನುಜ ಹಿರಣ್ಯಕನ
ಕೋರೆದಾಡೆಯಿಂದ ಸೀಳಿದರಿಂದಲೊ
ವಾರಿಜಮುಖಿ ಸರ್ವಕಾಲದಲಿ ನಿಂತು
ಸೇರಿ ಸುರತ ಮಾಡಿದಾಯಾಸದಿಂದಲೊ             ೩

ಸುರಪತನಯಗೆ ಸಾರಥ್ಯವನೆ ಮಾಡಿ
ಭರದಿಂದ ಚಕ್ರ ಪಿಡಿದರಿಂದಲೊ
ಪರಿಪರಿ ವಿಧದಿಂದ ಕುದುರೆಗಳನೆ ತೊಳೆದು
ಪರಿಪರಿ ಕೆಲಸದ ಆಯಾಸದಿಂದಲೊ      ೪

ಮುದದಿಂದ ವ್ರಜದ ಹದಿನಾರು ಸಾವಿರ
ವನಿತೆಯರಾಳಿದ ಮದದಿಂದಲೊ
ಮದಗಜಗಮನೆರ ಮಧುರಾಂತಕನ
ಒದಗಿ ಮಾವನ ಕೊಂದ ಆಯಾಸದಿಂದಲೊ         ೫

ಮಮತೆಯಿಂದಲಿ ಭಕ್ತಜನರು ನಿಮ್ಮ ಚರಣ
ಕಮಲಯುಗವನು ಸ್ತುತಿಸುತಿರಲು
ಮಮತೆಯಿಂದಲಿ ಬಂದು ಅಭಯಗಳನೆ ಕೊಟ್ಟು
ಕಮಲನಾಭ ಶ್ರೀಪುರಂದರವಿಠಲ          ೬

೧೫

ತಿಲಂಗ ಝಪತಾಳ

ಕರಮುಗಿದು ಪ್ರಾರ್ಥಿಪೆವು ದಯಮಾಡಿಸಯ್ಯಾ
ಸಿರಿರಮಣಿ ಪರಿವಾರ ಸಹಿತಾಗಿ ಸಂಭ್ರಮದಿಂದ ಪಲ್ಲವಿ

ಹರಿಯೆ ಸರ್ವೋತ್ತಮ ಎಂದು ಭೂಮಂಡಲದಿ
ಡಂಗುರ ಹೊಡಿಸಿ ಅವತಾರ ಮುಗಿಸಿ
ನಿನ್ನ ಸನ್ನಿಧಿಯಲ್ಲಿ ಸ್ತಂಭದಲ್ಲಿ ಇರುತಿರುವ
ಶ್ರೀ ಪುರಂದರದಾಸರ ದಾಸರೈ ನಾವು    ೧

ದಾಸರಾಯರ ಪುಣ್ಯತಿಥಿಯ ಆರಾಧನೆಯು
ನಿನ್ನ ಪ್ರೇರಣೆಯಿಂದ ನಿನ್ನ ಪ್ರೀತ್ಯರ್ಥ
ನಿನ್ನ ಸನ್ನಿದಿಯಲ್ಲಿ ಆಚರಿಸಬೇಕೆಂದು
ಉತ್ಸಾಹದಿಂದ ಪ್ರತಿವರುಷ ಬರುತಿಹೆವೈಯ್ಯಾ              ೨

ಮಧ್ವಮತ ಸಿದ್ದಾಂತ ಪದ್ದತಿಗೆ ಅನುಸರಿಸಿ
ಶುದ್ಧ ತತ್ವಜ್ಞಾನ ಮರ್ಮವರಿತು
ಶ್ರಧ್ಧೆಯಿಂದಲಿ ಸರ್ವಕಾರ್ಯಗಳು ನಡೆಯುವವು
ಮುದ್ದು ಭೂಪತಿ ವಿಠ್ಠಲ ಶ್ರೀ ಪಾಂಡುರಂಗಾ   ೩

೧೬

ಕರುಣ ಬಾರದೆ ವಿಠ್ಠಲಾ ಶ್ರೀ ಪಾಂಡುರಂಗ      ಪ

ಶರಣಳಲ್ಲವೆ ನಿನ್ನ ಚರಣ
ಸ್ಮರಣೆ ಮಾಡುತ ಪೊರೆ ಎಂದೆನ್ನುತ
ವರಲುವಾ ಧ್ವನಿ ಕೇಳದೇ ಈ
ಪರಿಯ ಗರ್ವವಿದೆನೊ ಹರಿಯೆ          || ಅ.ಪ ||

ದೂರದಿಂದಲಿ ಬಂದೆನೋ ಇಲ್ಲಿಂದ ಮುಂದೆ
ದಾರಿ ಕಾಣದೆ ನಿಂದೆನೋ
ದ್ವಾರಕಾಪತಿ ನೀನಲ್ಲದಿ
ನ್ನಾರು ಕಾಯುವರೀಗ ಪೇಳು
ಸಾರಿದೆನು ನಿನ್ನಂಘ್ರಿಕಮಲವ
ಚಾರು ಚರಿತನೆ ಮಾರನಯ್ಯ               ೧

ತನುಸುಖ ಬೇಡಲಿಲ್ಲಾ ನಿನ್ನ ನಾನು
ಘನವಾಗಿ ಕಾಡಲಿಲ್ಲ
ಮನದ ಹಂಬಲ ನೀನೆ ಬಲ್ಲೆಯೊ
ಮನಕೆ ತಾರದೆ ಸುಮ್ಮನಿಪ್ಪೆಯೋ
ಎನಗೆ ಪ್ರೇರಕ ನೀನೆ ಅಲ್ಲವೆ
ನಿನಗೆ ದಾಸಳು ನಾನು ಅಲ್ಲವೆ             ೨

ಕರೆಕರೆ ಪಡಿಸುವುದು ಸರಿಯಲ್ಲ ನಿನಗೆ
ಕರಿವರದ ಕೇಳು ಇದೂ
ನರಸಖನೆ ದಯದಿಂದ ನಿನ್ನ
ಚರಣ ದರುಶನವಿತ್ತೆ ಒಲಿದು
ಕರಪಿಡಿದು ಸಲಹೆಂದರೀಗ
ತೆರೆದು ನೋಡದೆ ನೇತ್ರವಿರುವರೆ          ೩

ಜ್ಞಾನಿ ಹೃತ್ಕಮಲವಾಸ ಶ್ರೀ ರುಕ್ಮಿಣೀಶ
ಭಾನುಕೋಟಿ ಪ್ರಕಾಶ
ನೀನೆ ಗತಿ ಇನ್ನಿಲ್ಲ ಅನ್ಯರು
ಸಾನುರಾಗದಿ ಸಲಹೊ ಎನ್ನಲು
ಆನನದಿ ಈಕ್ಷಿಸದೆ ನಿಂತರೆ
ಮಾನ ಉಳಿವುದೆ ಭಕ್ತವತ್ಸಲ              ೪

ಇಟ್ಟಿಗೆ ಕೊಟ್ಟವನೊ ಕೊಟ್ಟನಿನ್ನೇನು
ಅಷ್ಟು ಭಾಗ್ಯವನೂ
ಕೊಟ್ಟೆ ಬಡ ಬ್ರಾಹ್ಮಣನ ಅವಲಿಗೆ
ದೃಷ್ಟಿ ಬಿದ್ದರೆ ಕಷ್ಟ ಉಂಟೆ
ಕೊಟ್ಟು ಅಭಯ ಪೊರೆ ಗೋಪಾಲ –
ಕೃಷ್ಣ ವಿಠಲ ಮನದಿ ತೋರೋ          ೫

 

೧೭

ಪಂತುವರಾಳಿ                                 ಆದಿ

ಕೂಸಿನ ಕಂಡಿರಾ ಗೋಪಾಲಕೃಷ್ಣನ ಕಂಡಿರಾ                ಪ

ಅಂದಿಗೆ ಅರಳೆಲೆ ಇಟ್ಟಿತ್ತು ಕೂಸು
ಮುಂಗೈಯ ಬಾಪುರಿ ಇಟ್ಟಿತ್ತು ಕೂಸು
ಬಿಂದಲಿ ಸರಪಳಿ ಹಾಕಿತ್ತು ಕೂಸು
ಅಂಗಳದೊಳಗಿಂದ ಹೋಗ್ಯದೆ ಕೂಸು   ೧

ಕಾಲಿಗೆ ಕಿರುಗೆಜ್ಜೆ ಕಟ್ಟಿತ್ತು ಕೂಸು
ನೇವಳ ಪದಕವ ಹಾಕಿತ್ತು ಕೂಸು
ಜಾಲದ ಅಂಗಿಯ ತೊಟ್ಟಿತ್ತು ಕೂಸು
ಬಾಗಿಲ ಒಳಗಿದ್ದು ಹೋಗ್ಯದೆ ಕೂಸು   ೨

ಹುಲಿಯುಗುರಿನ ಸರ ಹಾಕಿತ್ತು ಕೂಸು
ಬೆರಳಲಿ ಉಂಗುರ ಇಟ್ಟಿತ್ತು ಕೂಸು
ಕಿವಿಯೊಳು ಚೌಕಳಿ ಇಟ್ಟಿತ್ತು ಕೂಸು
ಕುಳಿತಿದ್ದ ಠಾವಿಲಿ ಕುಳಿತಿಲ್ಲ ಕೂಸು   ೩

ನೀಲಮೇಘವ ಪೋಲುವ ಕೂಸು
ನೀಲದ ಬಾವುಲಿ ಇಟ್ಟಿತ್ತು ಕೂಸು
ನೀರಿನ ತೀರದಿ ಕುಳಿತಿತ್ತು ಕೂಸು
ನೀರಿನ ದಡದಿಂದ್ಯೋಗ್ಯದೆ ಕೂಸು        ೪

ಪಂಢರಪುರದಲ್ಲಿ ನೆಲಸಿತ್ತು ಕೂಸು
ಪಾಂಡವರೈವರ ಸಲಹಿತು ಕೂಸು
ಅಂಡದೊಳಗೆ ಹರಿದಾಡುವ ಕೂಸು ಪ್ರ
ಚಂಡ ಪುರಂದರವಿಠಲ ಕೂಸು              ೫

೧೮

ಯಮನ ಭಜನಿಠೇಕಾ

ಗಿರಿಧರ ಪರಮ ಮಂಗಲಾ ಕರುಣಾನಿಧಿ
ಶರಣಾಗತ ಭಕ್ತವತ್ಸಲಾ    ಪ

ತಂದೆ ತಾಯಿ ಸೇವಾಸಕ್ತ ಪುಂಡಲೀಕನ ಭಕ್ತಿಗೊಲಿದು
ಭಕ್ತಕೊಟ್ಟ ಇಟ್ಟಿಗೆಯ ಮೇಲೆ
ಟೊಂಕದ ಮೇಲೆ ಕೈಇಟ್ಟು ನಿಂತೆ   ೧

ಬೆಟ್ಟದೊಳಗೆ ಹುತ್ತಿನಲ್ಲಿ ಪೆಟ್ಟುತಿಂದು ಪದ್ಮಾವತಿಯ
ಎಷ್ಟು ಸಾಲ ಮಾಡಿಕಡೆಗೆ ಪಟ್ಟದರಸಿ ಮಾಡಿಕೊಂಡೆ   ೨

ಮಣ್ಣು ಹೆಂಟಿಯೊಳಗೆ ನೀನು ಪೂರ್ಣಪ್ರಜ್ಞರಿಗೆ ಒಲಿದು
ಬೆಣ್ಣೆ ಕಡಗೋಲಪಿಡಿದ ಕೃಷ್ಣ ಅನ್ನಬ್ರಹ್ಮನಾಗಿ ಮೆರೆವೆ   ೩

ಅನ್ನಬ್ರಹ್ಮ ನಾದಬ್ರಹ್ಮ ಕಾಂಚಾಣದ ಬ್ರಹ್ಮ ನೀನು
ದೈನ್ಯಬಿಡಿಸಿ ಜ್ಞಾನ ಭಕ್ತಿಕೊಟ್ಟು ಕಾಪಾಡೊ ಸ್ವಾಮಿ   ೪

ಆಪದ್ಬಾಂಧವ ಅನಾಥ ಬಂಧೋ ತಾಪತ್ರಯ ಬಿಡಿಸು ದೇವಾ
ಕೈಪಿಡಿದು ಉದ್ದರಿಸು ಭೂಪತಿ ವಿಠಲನಭಕ್ತರ ಕೃಷ್ಣ   ೫

ವರಾಳಿ ಧ್ರುವ

ಜನನಿ ರುಕುಮಿಣಿ ಜನಕ ವಿಠಲಾ
ನನಚತುಷ್ಟನು ಭ್ರಾತನು
ಅನಲನೇತ್ರನು ಆತನ ಸುತ
ಅನುದಿನ ನಿಜಬಾಂಧವ
ಅನಿಲದೇವನು ಮುಖ್ಯತಗುರು
ಅನಿಮಿಷರೂ ಬೆಂಬಲಾರೆನ್ನೀ
ದನುಜ ದೈತ್ಯರು ಹತ್ತಾದವರು
ಮುನಿಯ ದಾಸಿಯರು ಮಾರಿ ಮೃತ್ಯುಗ
ಳಿನಿತು ಹರಿದಾಸರಿಗೆ ಅಯ್ಯಾ ಅಯ್ಯಾ
ಜನನಿ ರುಕುಮಿಣಿ ಅವನಿಜಾಂಡದೊಳಗೆ ಇವರಿಗೆ
ಎಣೆ ಇಲ್ಲಾ ಆವಲ್ಲಿ ಎಂಬರೂ
ಘನ ವಿಜಯವಿಠಲರೇಯನ
ನೆನವರ ಸುಕೃತವಿನ್ನೆಂತೋ    ೧

ಮಟ್ಟ

ಕಡಲಶಯನ ನಾಮಾ ನುಡಿ ಎಂಬೋ ಖಡ್ಗಾ
ವಿಡಿದು ದುರಿತ ರಾಶಿಯಾ ತಡೆದು ತರುಬಿ ನಿಲಿಸಿ
ಕಡಿಕಡಿ ಎನುತಾಲಿ ಕಡಿದೊಟ್ಟವರಯ್ಯಾ
ಸುಡುವ ದಾವಾನಲನ ಉಡಿಯಲ್ಲಿ ಕಟ್ಟುವರು
ಪಡಿಗಾಣೆ ಹರಿಯಾ ಅಡಿಗಳ ನಂಬಿದ ದೃಢ ಭಕ್ತರಿಗಿನ್ನು
ಮೃಡನೊಬ್ಬನೆ ಬಲ್ಲ ಒಡ ಒಡನಾಡುವಾ ವಿಜಯವಿಠಲನ್ನ
ಒಡನಾಡಿಸಿಕೊಂಡ ಕಡುಗಲಿ ದಾಸರಿಗೆ   ೨

ತ್ರಿವಿಡಿ

ಉರಿಮಾರಿ ತುತ್ತಿಗೆ ಜಡಭರತನ ಕಟ್ಟಿ
ದುರುಳಾ ಪಿಡಿದೊಯ್ಯೆ ತರಹರಿಸಲಾರದೆ
ಮರಳೆ ಉಗುಳಿತು ನೋಡಾ ಹರಿಯಾ ಮಹಿಮೆಯಂತೆ
ಕರೆದೊಯ್ಯೆ ಪುಷ್ಕರನ ಯಮನಾದೂತರು ತಂದು
ನರಕಾವೆ ಬತ್ತಿ ಪೋಯಿತು ಮತ್ತೆ ದೂರ್ವಾಸಾ
ಪರೀಕ್ಷಿತಾ ಬಳಲಿದ ತಪನ ಕುಲಜನಿಂದ
ಧರೆಯೊಳು ಕೀರ್ತಿಮಾನಿನಿ ಕೆಣಕಿ ಯಮರಾಯಾ
ಪರಾಜಿತನಾದನು ನಿಜವೆಂದು ತಿಳಿವಾದು
ಹರಿಶರಣರ ಪ್ರತಾಪಾರೂ ಬಲ್ಲರು ಬಲೂ
ಪರಿಯಲ್ಲಿ ಶೋಧಿಸಿ ನೋಡಲು ನೆಲೆ ಇಲ್ಲಾ
ಶರಣರಾಡಿದಂತೆ ಆಡುವ ಪ್ರಲ್ಹಾದ
ವರದ ವಿಜಯವಿಠಲ ಐಶ್ವರಿಯಾ ದೇವಾ   ೩

ಅಟ್ಟ

ಹರಿದಾಸರು ಒಂದು ಚರಣವಿಡಲು ರಜ
ಹರಿಯಲು ಸುತ್ತಲು ಧರೆಯೆಲ್ಲಾ ಪಾವನ
ಪುರವೆಲ್ಲಾ ಪಾವನ್ನ ನರರೆಲ್ಲಾ ಪಾವನ್ನ
ಕೇರಿ ಪಾವನ ಹೊಲಗೇರೆಲ್ಲ ಪಾವನ
ಹರಿ ತನ್ನ ಶರಣನ್ನ ಚರಣರಜಾವನ್ನು
ಉರದಲ್ಲಿ ಧರಿಸಿದ ಶಿರಿವಾಸಾವಾದಳು
ಹರಿ ತನ್ನ ಶರಣರ ತಾನೆ – ಉದ್ಧರಿಸುವ
ಪರಮಾತ್ಮ ಪಂಢರಪುರಿ ವಿಜಯವಿಠಲಾ            ೪

ಆದಿ

ಭಜಿಸು ಬೇಕಾದರೆ ಅಜನಪಿತನ ಪಾದಾಂ
ಬುಜವನನುದಿನಾ ಭಜಿಪಾರು ಭಜಿಪಾರು
ನಿಜವಾಗಿ ವರವ್ರಜ ಮನುಜಾರರಿದೂ
ಕುಜನ ಮತನು ಒದ್ದು ಭಜನೆಯಗೆಡಿಸುವರು
ಸುಜನರಿಗೆ ಪಾದ ರಜವಾಗಿ ಇಪ್ಪಾರು
ತ್ರಿಜಗದೊಳಗೆ ನಮ್ಮಾ ವಿಜಯವಿಠಲನ್ನಾ
ನಿಜದಾಸರು ಸದಾ ಪ್ರಜ್ಞಾವಂತಾವೆನಿಸುವರೂ      ೫

ಜತೆ

ಸಂಬಿದವರಿಗೆ ಕಟಿ ಪ್ರಮಾಣವೆಂದು ಭ
ವಾಂಬುಧಿಯಾ ತೋರುವಾ ಪ್ರಿಯ ವಿಜಯವಿಠಲಾ          ೬