೨೦

ನಾದನಾಮಕ್ರಿಯ                   ಆದಿ

ಜಯಪಾಂಡುರಂಗ ನಾ ನಿನ್ನ ಮನಕೆ ಬಾರೆನೆ                 ಪ

ನಾ ನಿನ್ನ ಮನಕೆ ಬಾರೆನೆ, ಬಂದರೆ ಈ ಭವದ
ಬಲೆಯೊಳು ಸಿಲುಕುವೆನೆ ಜಯ ಪಾಂಡುರಂಗ   ಅ

ಕೆಟ್ಟ ಕಿರಾತಕನ ಬೆಟ್ಟದಂಥ ಪಾಪವ
ಸುಟ್ಟು, ವಾಲ್ಮೀಕಿ ಎನಿಸಿದ್ಯೊ ಜಯಪಾಂಡುರಂಗ   ೧

ಅತಿಭ್ರಷ್ಟ ಅಜಾಮಿಳನ ಅಂತ್ಯ ಸಮಯದಲ್ಲಿ
ಅಂತಕನ ಬಾಧೆ ಬಿಡಿಸಿದ್ಯೊ ಜಯಪಾಂಡುರಂಗ               ೨

ಅಂಬುಜನಾಭನೆ ಕುಬ್ಜೆಯ ಡೊಂಕನು ತಿದ್ದಿ
ಕುಶಲದಿಂದವಳ ಕೂಡಿದ್ಯೊ, ಜಯಪಾಂಡುರಂಗ             ೩

ಪ್ರೀತಿಯಿಂದಲಿ ಶಬರಿ, ಉಂಡ ಎಂಜಲ ಮೆದ್ದು
ಮುಕುತಿ ಮಾರ್ಗವ ತೋರಿದ್ಯೊ, ಜಯಪಾಂಡುರಂಗ        ೪

ಐದು ಮಂದಿಯ ಕೂಡೆ, ಸರಸವು ದ್ರೌಪದಿಗೆ
ಐದೆ ಲಜ್ಜೆಯ ಕಾಯಿದ್ಯೊ, ಜಯಪಾಂಡುರಂಗ               ೫

ಗಣಿಕೆ ಗಂಡಕಿಯ ಅಗಣಿತ ಪಾಪವ ಕಳೆದು
ವೈಕುಂಠದಲ್ಲಿ ನಿಲಿಸಿದ್ಯೊ, ಜಯಪಾಂಡುರಂಗ              ೬

ತೊತ್ತಿನ ಮಗನ ಮನೆಯ ಕುಡುತೆ ಪಾಲನು ಸವಿದು
ವಿದುರನ ಶ್ಲಾಘ್ಯ ಮಾಡಿದ್ಯೊ ಜಯ ಪಾಂಡುರಂಗ         ೭

ಎಲ್ಲರನುದ್ಧರಿಸಿದ್ಯೋ ಪುರಂದರವಿಠಲ ನೀ
ಯಾಕೆ ಎನ್ನನು ಮರೆತ್ಯೊ ಜಯ ಪಾಂಡುರಂಗ    ೮

೨೧

ಪಿಲು                                                   ಏಕ

ಜಯದೇವ ಜಯದೇವ ಜಯ ಪಂಢರಿರಾಯಾ
ಜಯ ವಿಠಲರಾಯಾ ರುಕ್ಮಿಣಿರಾಧಾರಮಣಾ
ಶುಭ ಸುಂದರ ಕಾಯಾ                                           ಪ

ಮಾತಾಪಿತೃಗಳ ಸೇವೆಯೆ ಹರಿಸೇವೆಯೆಂದು
ಅತಿ ಭಕುತಿ ಮಾಡಿದ ಶ್ರೀ ಪುಂಡರೀಕಗೆ ಒಲಿದು
ಆತಕೊಟ್ಟಿಟ್ಟಂಗಿಯ ರತ್ನದ ಪೀಠೆಂದು
ನಿಂತಿರುವಿಯಾ ಟೊಂಕದ ಮೇಲೆ ಕೈ ಇಟ್ಟುಕೊಂಡು         ೧

ಬೆಟ್ಟದ ತುದಿಯಲಿ ನಿಂತನು ಕಾಂಚಾಣಬ್ರಹ್ಮ
ಘಟ್ಟದತಳ ಶರಧಿಯ ತಟದಲ್ಲಿ ಅನ್ನ ಬ್ರಹ್ಮ
ಘಟ್ಟದ ಬೆಟ್ಟದ ಮಧ್ಯದಿ ನೀ ನಾದ ಬ್ರಹ್ಮ
ವಿಠ್ಠಲ ಉಡುಪಿಯ ಕೃಷ್ಣಾ ಬೆಟ್ಟದ ತಿಮ್ಮಪ್ಪಾ            ೨

ಶ್ರಾವಣದಲಿ ಜನ್ಮೋತ್ಸವ ಮನೆ ಮನೆಯೊಳು ಮಾಡಿ
ಅಶ್ವಿನದಿ ಬ್ರಹ್ಮೋತ್ಸವ ತಿರುಪತಿಯಲಿ ನೋಡಿ
ಕಾರ್ತಿಕದಿ ಪಂಢರಪುರದ ಯಾತ್ರೆಯನು ಮಾಡಿ
ಮುಕ್ತಿಯ ಪಡೆಯಿರಿ ಭಕುತರು ಶ್ರೀಹರಿಯ ಪಾಡಿ             ೩

ಪಂಢರಿಕ್ಷೇತ್ರದ ಯಾತ್ರೆಯ ಮಾಡುವದಾನಂದಾ
ಚಂದ್ರಭಾಗಾ ತೀರ್ಥದ ಸ್ನಾನವು ಆನಂದಾ
ಬಂದಿಹ ಭಕ್ತರ ತಂಡದಿ ಭಜನೆಯು ಆನಂದಾ
ಪಾಂಡುರಂಗನ ಆಲಿಂಗನ ಮಹಾದಾನಂದಾ         ೪

* ಈ ಕೀರ್ತನೆಗೆ ಅಂಕಿತ ಇಲ್ಲ

೨೨

ಜೈ ಜೈ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ   ೧

ಮಕರಕುಂಡಲಧರ ಪಾಂಡುರಂಗ
ರಕುಮಾಯೀಧವ ಪಾಂಡುರಂಗ   ೨

ರಾಧಾರಾಧಿತ ಪಾಂಡುರಂಗ
ಸಾಧುಜನಾರ್ಚಿತ ಪಾಂಡುರಂಗ   ೩

ನೀಲಶರೀರ ಪಾಂಡುರಂಗ
ಕಾಲಾಂತಕಪ್ರೀಯ ಪಾಂಡುರಂಗ   ೪

ಸರಸಿಜವದನ ಪಾಂಡುರಂಗ
ಕರಿರಾಜವರದ ಪಾಂಡುರಂಗ   ೫

ವನಜಲೋಚನ ಪಾಂಡುರಂಗ
ವನಜಾಸನನುತ ಪಾಂಡುರಂಗ   ೬

ಕಟಿಕರದ್ವಯ ಪಾಂಡುರಂಗ
ಕುಟಿಲಾಂತಕಹರೆ ಪಾಂಡುರಂಗ   ೭

ಪಾವನಚರಣ ಪಾಂಡುರಂಗ
ಭಾವಜಪಿತಹರೆ ಪಾಂಡುರಂಗ   ೮

ಮಣಿಮಕುಟಧರ ಪಾಂಡುರಂಗ
ಫಣಿಪತಿಶಯನ ಪಾಂಡುರಂಗ           ೯

ಸಿರಿವತ್ಸಾಂಕಿತ ಪಾಂಡುರಂಗ
ದುರಿತವಿದೂರ ಪಾಂಡುರಂಗ   ೧೦

ವನಮಾಲಾಂಕಿತ ಪಾಂಡುರಂಗ
ವನಜನಾಭಹರೆ ಪಾಂಡುರಂಗ   ೧೧

ಪೀತಾಂಬರಧರ ಪಾಂಡುರಂಗ
ವಾತಾತ್ಮಜನುತ ಪಾಂಡುರಂಗ   ೧೨

ಖಗಪತಿವಾಹನ ಪಾಂಡುರಂಗ
ಜಗದೋದ್ದಾರ ಪಾಂಡುರಂಗ   ೧೩

ಪಂಢರಾಪುರಾಧಿಪ ಪಾಂಡುರಂಗ
ಪುಂಡರೀಕವರದ ಪಾಂಡುರಂಗ   ೧೪

ಮೀನಶರೀರ ಪಾಂಡುರಂಗ
ದೀನಮಂದಾರ ಪಾಂಡುರಂಗ   ೧೫

ಮಂದರಧರ ಶ್ರೀ ಪಾಂಡುರಂಗ
ಸಿಂಧುಶಯನಹರೆ ಪಾಂಡುರಂಗ   ೧೬

ಸೂಕರರೂಪಕ ಪಾಂಡುರಂಗ
ಶ್ರೀಕರಸೇವಿತ ಪಾಂಡುರಂಗ   ೧೭

ನರಕಂಠೀರವ ಪಾಂಡುರಂಗ
ಸರಕಾಂತಕಹರೆ ಪಾಂಡುರಂಗ   ೧೮

ವಾಮನವೇಷ ಪಾಂಡುರಂಗ
ಸಾಮಗಾನಪ್ರಿಯ ಪಾಂಡುರಂಗ   ೧೯

ಕ್ಷಾತ್ರಕುಲಾಂತಕ ಪಾಂಡುರಂಗ
ಧಾತ್ರೀರಮಣ ಪಾಂಡುರಂಗ   ೨೦

ರಾಮಚಂದ್ರಹರೆ ಪಾಂಡುರಂಗ
ಕಾಮಿತಫಲದ ಪಾಂಡುರಂಗ   ೨೧

ದೇವಕಿನಂದನ ಪಾಂಡುರಂಗ
ಪಾವನಚರಿತ ಪಾಂಡುರಂಗ   ೨೨

ಬತ್ತಲೆನಿಂದಿಹ ಪಾಂಡುರಂಗ
ಉತ್ತಮದೇವನೆ ಪಾಂಡುರಂಗ   ೨೩

ತೇಜಿಯನೇರಿದ ಪಾಂಡುರಂಗ
ಸೋಜಿಗಪುರುಷನೆ ಪಾಂಡುರಂಗ   ೨೪

ಗಾನವಿನೋದಿ ಪಾಂಡುರಂಗ
ಭಾನುಪ್ರಕಾಶ ಪಾಂಡುರಂಗ   ೨೫

ಸುರನರವಂದಿತ ಪಾಂಡುರಂಗ
ಸುರಭಿನಿವಾಸ ಪಾಂಡುರಂಗ   ೨೬

ಮುಕುತಿದಾಯಕ ಪಾಂಡುರಂಗ
ಭಕುತಪೋಷಕ ಪಾಂಡುರಂಗ   ೨೭

ಅಗಣಿತಗುಣಗಣ ಪಾಂಡುರಂಗ
ತ್ರಿಗುಣಾತೀತಾ ಪಾಂಡುರಂಗ   ೨೮

ಚಂದ್ರಭಾಗನುತ ಪಾಂಡುರಂಗ
ಚಂದ್ರಮೌಳಿಹಿತ ಪಾಂಡುರಂಗ   ೨೯

ಸುರನದಿಜನಕ ಶ್ರೀ ಪಾಂಡುರಂಗ
ಸುರಮುನಿಸನ್ನುತ ಪಾಂಡುರಂಗ   ೩೦.

ಜ್ಞಾನಿಗಳರಸನೆ ಪಾಂಡುರಂಗ
ದಾನವಾಂತಕ ಪಾಂಡುರಂಗ   ೩೧

ಭಾಸುರಾಂಗ ಶ್ರೀ ಪಾಂಡುರಂಗ
ಭೂಸುರವಂದಿತ ಪಾಂಡುರಂಗ   ೩೨

ಅಷ್ಟಕರ್ತೃಪ್ರಿಯ ಪಾಂಡುರಂಗ
ಸೃಷ್ಟಿಗೊಡೆಯ ಶ್ರೀ ಪಾಂಡುರಂಗ   ೩೩

ಸರ್ವವ್ಯಾಪಕ ಪಾಂಡುರಂಗ
ಉರ್ವಿರಮಣ ಪಾಂಡುರಂಗ   ೩೪

ಕೃತಿರಮಣಹರೆ ಪಾಂಡುರಂಗ
ಶ್ರುತಿತತಿವಿನುತ ಪಾಂಡುರಂಗ   ೩೫

ಜೀವನಿಯಾಮಾಕ ಪಾಂಡುರಂಗ
ಜೀವೋತ್ತಮನುತ ಪಾಂಡುರಂಗ   ೩೬

ಲೋಕನಾಯಕ ಪಾಂಡುರಂಗ
ನಾಕಾಧಿಪನುತ ಪಾಂಡುರಂಗ   ೩೭

ವೇದವೇದ್ಯವಿಭೋ ಪಾಂಡುರಂಗ
ಮೋದದಾಯಕ ಪಾಂಡುರಂಗ   ೩೮

ಯೋಗಿರಾಜ ಶ್ರೀ ಪಾಂಡುರಂಗ
ಭಾಗವತಪ್ರಿಯ ಪಾಂಡುರಂಗ   ೩೯

ಪುರಾಣಪುರುಷ ಪಾಂಡುರಂಗ
ಕರುಣಿಗಳರಸನೆ ಪಾಂಡುರಂಗ   ೪೦

ಪಾಪನಾಶಕ ಪಾಂಡುರಂಗ
ತಾಪತ್ರಯಹರೆ ಪಾಂಡುರಂಗ   ೪೧

ಧರ್ಮಸ್ಥಾಪಕ ಪಾಂಡುರಂಗ
ಕರ್ಮಾಧಿಪತೆ ಪಾಂಡುರಂಗ   ೪೨

ಕಪಿಲವತಾರ ಪಾಂಡುರಂಗ
ಕಪಟಿನಾಟಕ ಪಾಂಡುರಂಗ   ೪೩

ಆದಿರಹಿತಹರೆ ಪಾಂಡುರಂಗ
ಬಾದರಾಯಣ ಪಾಂಡುರಂಗ   ೪೪

ನೊಂದೆನೋ ಭವದೊಳು ಪಾಂಡುರಂಗ
ಮುಂದೆ ದಾರಿಯೇನೋ ಪಾಂಡುರಂಗ   ೪೫

ದಾಸಜನಪ್ರಿಯ ಪಾಂಡುರಂಗ
ಪಾಶಪರಿಹರಿಸೊ ಪಾಂಡುರಂಗ   ೪೬

ಎಷ್ಟು ಮಹಿಮೆಯೋ ಪಾಂಡುರಂಗ
ಎಷ್ಟು ಪೊಗಳಲೋ ಪಾಂಡುರಂಗ   ೪೭

ಕಷ್ಟ ಬಿಡಿಸೋ ನೀ ಪಾಂಡುರಂಗ
ಇಷ್ಟದಾಯಕ ಪಾಂಡುರಂಗ   ೪೮

ಜನಿಸಲಾರೆನೊ ಪಾಂಡುರಂಗ
ಜನುಮ ನೀಗಿಸೊ ಪಾಂಡುರಂಗ   ೪೯

ನಿನ್ನ ನಂಬಿಹನೋ ಪಾಂಡುರಂಗ
ಘನ್ನಮಹಿಮನೆ ಪಾಂಡುರಂಗ   ೫೦

ನೀನ್ನ ಗತಿಯೋ ಹೇ ಪಾಂಡುರಂಗ
ದೀನವತ್ಸಲನೆ ಪಾಂಡುರಂಗ   ೫೧

ಬೇಡಿವೆನನುದಿನ ಪಾಂಡುರಂಗ
ನೀಡೊ ನಿನ್ನಯ ಪಾದ ಪಾಂಡುರಂಗ   ೫೨

ಜಯಮಂಗಳಹರೆ ಪಾಂಡುರಂಗ
ಶುಭಮಂಗಳಹರೆ ಪಾಂಡುರಂಗ   ೫೩

ದೋಷದೂರಹರೆ ಪಾಂಡುರಂಗ
ಶ್ರೀಶಕೇಶವ ಪಾಂಡುರಂಗ   ೫೪

೨೩

ಭೈರವಿ                                                                                                 ಧ್ರುವ

ತರುಣ ಅರುಣ ಕಿರಣದಂತೆ ಪೋಲುವ ಚರಣ
ತರಣಿ ಹರಿಣಾಂಕರನು ಧರಣ ಮಾಡುವ ಚರಣ
ವರುಣ ವಾರುಣ ನಿತ್ಯಾಚರಣೆ ಮಾಡುವ ಚರಣ
ತರುಣಿ ದ್ರೌಪದಿಯ ಭಯ ನಿವಾರಣ ಮಾಡಿದ ಚರಣ
ಧರಣಿಯೊಳು ಪುಟ್ಟಿ ಸಂಚರಣ ಮಾಡಿದ ಚರಣ
ಕರುಣಾದಲ್ಲಿ ದಾಸರನಾದರಣೆ ಮಾಡಿದ ಚರಣ
ಸ್ಮರಣೆ ಮಾಡುವವರಿಗೆ ಸಾಭರಣವಾಗುವ ಚರಣ
ಕರುಣಾಗತಿ ಸತತ ಪಂಢರಿಪುರವಾಸ
ವರಣವಾಗಿ ಎನ್ನ ಹರಣ ಉಳ್ಳನಕ ನಿನ್ನ
ಚರಣ ಸಂದರುಶನ ಲೇಸಾಗಿ ಈವುತ್ತ
ಶಿರದಲ್ಲಿ ಇಡುವುದು ಶಿರಿ ರಮೆಯ ಸಿರಿ
ವರ ಕರುಣಿ ವಿಜಯವಿಠಲರೇಯ ನಿರುತ
ಪರಣ ನಿನ್ನದು ಸದಾ ಪರಿಣಾಮನೆನಿಸೊ   ೧

ಮಟ್ಟ

ಭಕುತರಾಪತ್ತು ಪರಿಹರಿಸುವ ಚರಣ
ಲಕುಮಿಯ ಮೊಗಕ್ಕೆ ಕನ್ನಡಿಯಾದ ಚರಣ
ತ್ವಕುವೇಂದ್ರಿಗಳನ್ನು ತುಳಿದು ನಿಲ್ಲಿಪ ಚರಣ
ಮುಕುತ ವಂದಿತ ವಿಜಯವಿಠಲ ನಿನ್ನ ಚರಣ
ಸಕಲ ಪಾಪಂಗಳಿಗೆ ಪ್ರಾಯಶ್ಚಿತ್ತದ ಚರಣ
ಭಕುತರಾಪತ್ತು ಪರಿಹರಿಸುವ ಚರಣ   ೨

ತ್ರಿವಿಡಿ

ಕಂಸನ ಉದರದಲ್ಲಿ ನಾಟ್ಯವಾಡಿದ ಚರಣ
ಹಂಸಡಿಂಬರನಾ ಭೂತಳದಿ ಒರೆಸಿದ ಚರಣ
ಹಂಸವಾಹನನ ಮನದಲ್ಲಿ ಪೊಳೆವ ಚರಣ
ಸಂಸಾರಾಂಬುಧಿಯನ್ನು ಉತ್ತರಿಸುವ ಚರಣ
ಪುಂಸಪುಂಗವ ನಮ್ಮ ವಿಜಯವಿಠಲ ಕರುಣೀ
ಅಂಶಾದಿಂದಲಿ ಜಗವ ಬೆಳಗುವ ಸಿರಿಚರಣ   ೩

ಅಟ್ಟ

ಇದೆ ಚರಣವು ಇದೆ ಚರಣವು
ಹೃದಯದೊಳಗೆ ಬಂದು ವದನಕ್ಕೆ ಒದಗಲಿ
ಇದೆ ಚರಣ ಸಕಲ ಸದಾ ಸಂಪದವಿಗೆ ಪರಿಪರಿ
ಸಾಧನ ತೋರಲು ಇದೆ ಚರಣವು
ಸದನವಾಗಲಿ ಎನಗೆ
ಅಧಿಕ ದೈವವೆ ರಂಗಾ ವಿಜಯವಿಠಲ ನಿನ್ನ
ಸದಮಲಚರಣ ಸದಾನಂದ ಚರಣ   ೪

ಆದಿ

ಇಟ್ಟಿಗೆ ಗದ್ದಿಗೆ ಮೆಟ್ಟಿ ನಿಂದ ಚರಣ
ಜಟ್ಟಿಗಳೆಲ್ಲರ ಕುಟ್ಟಿ ಕೆಡಹಿದ ಚರಣ
ಪುಟ್ಟಗೆಜ್ಜೆ ಪೊನ್ನಂದಿಗೆಯಿಟ್ಟ ಚರಣ
ಕಟ್ಟುಗ್ರ ದೈವವೆ ವಿಜಯವಿಠಲ ನಿನ್ನ ಚರಣ

ಜತೆ

ಬೇಡಿದಿಷ್ಟಾರ್ಥವ ವೇಗ ಕೊಡುವ ಚರಣ
ಗೂಢ ಮಹಿಮ ವಿಜಯವಿಠಲ ರಂಗನ ಚರಣ

೨೪

ವೃಂದಾವನಿ ಸಾರಂಗ                                                              ಭಜನಿ ಠೇಕಾ

ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು
ತಂದೆ ತಾಯಿಯ ಸೇವೆಮಾಡಿದ                     ಪ

ಪುಂಡರೀಕನ ಭಕ್ತಿಗೊಲಿದು
ಚಂದ್ರಭಾಗಾ ತೀರದಲ್ಲಿ ಬಂದು ನಿಂತ ವಿಠ್ಠಲನ ಕಂಡು   ೧

ವೆಂಕಟೇಶ ಅಲ್ಲಿ ಅವನು ಶಂಖ ಚಕ್ರ ಪಿಡಿದ ಕರವ
ಟೊಂಕದ ಮೇಲಿಟ್ಟುಕೊಂಡು ನಿಂತು ಇಲ್ಲಿ ವಿಠ್ಠಲನಾದ   ೨

ಕಡಗೋಲ್ನಿಂದ ಗಡಿಗೆ ಒಡೆದು ತುಡುಗು ಮಾಡಿದ ಹುಡುಗ ಬಂದು
ಉಡುಪಿಯಲ್ಲಿ ಕೃಷ್ಣನಾಗಿ ಓಡಿ ಬಂದಿಲ್ಲಿ ವಿಠ್ಠಲನಾದ   ೩

ಎಷ್ಟು ಜನ್ಮದ ಸುಕೃತವೋ ಶ್ರೀ ಕೃಷ್ಣ ವಿಠಲ ರೂಪದಿಂದ
ಭಕ್ತ ಜನರಿಗಾಲಿಂಗನ ಭೆಟ್ಟಿ ಕೊಡುತ ನಿಂತುಬಿಟ್ಟ   ೪

ಅನ್ನಬ್ರಹ್ಮ ಉಡುಪಿಯಲ್ಲಿ ಚಿನ್ನಬ್ರಹ್ಮ ಬೆಟ್ಟದಲಿ
ಸಣ್ಣತುಳಸಿ ಮಾಲೆ ಸಾಕು ನಂದ ಬ್ರಹ್ಮಭೂಪತಿ ವಿಠ್ಠಲಗೆ   ೫

೨೫

ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ದಿಂಡು       ಪ

ಧನ್ಯನಾದೆನೂ ಕಾಮನ್ನ ಪಿತನ ಲಾ
ವಣ್ಯ ಮೂರುತಿಯ ಕಣ್ಣಿಲೆ ಕಂಡು   || ಅ.ಪ ||

ದೇವವರೇಣ್ಯ ಸದಾ ವಿನೋದಿ ವೃಂ
ದಾವನ ಸಂಚರ ಗೋಪನ ಕಂಡು   ೧

ಮಂಗಳಾಂಗ ಕಾಳಿಂಗ ಮಥನ ಮಾ
ತಂಗವರ ವರ ರಂಗನ ಕಂಡು   ೨

ಹಾಟಕಾಂಬರ ಕಿರೀಟ ಸಾರಥಿ
ತಾಟಕಾರಿ ವೈರಾಟನ ಕಂಡು   ೩

ಚಿಂತಿತ ಫಲದ ಕೃತಾಂತನಾತ್ಮ ಜಾ
ದ್ಯಂತರಹಿತ ನಿಶ್ಚಿಂತನ ಕಂಡು   ೪

ಮಾತುಳಾಂತಕ ವಿಧಾತಪಿತ ಜಗ
ನ್ನಾಥ ವಿಠಲ ವಿಖ್ಯಾತನ ಕಂಡು   ೫

೨೬

ಪಂತುವಾರಾಳಿಧ್ರುವ

ನಾನಾ ಪರಿಯಿಂದ ನಿನ್ನ ಚರಣಾಬ್ಬಾ
ಮಾನಸದಲ್ಲಿ ಧ್ಯಾನಿಸೆ ಕಾಣಿಸದಿಪ್ಪ ಕಪಟವೇನಯ್ಯಾ
ನಾನು ಬಲು ಅಪರಾಧಿಯೋ ಸ್ನಾನ ಸಂಧ್ಯಾವಿಲ್ಲದಿ ವಿಪ್ರ
ಯೋನಿಯಿಲ್ಲವೇ ? ಜಾತಿಯ ಭಾನುಕೋಟಿತೇಜಾ ಭಕ್ತರ
ಧೇನು ಸಂತತ ದಯಾಂಬುಧಿ
ಹೀನಯೋನಿಜ ಮಾನವರು ನಿನ್ನ ಏನು ತುತಿಪಾರು ಕೇಳೀದಯ್ಯಾ
ನೀನೆ ತಾವೆ ಎಂದು ಭಜಿಸಿ ಇಂಥ
ಅಜ್ಞಾನದಿ ಕುಣಿವಾರತಿ ಏನೆಂಬೆ ನಿನ್ನ ಮಾಯಾಶಕ್ತಿಗೆ
ಆನು ವಿಸ್ಮತನಾಗುವೆ ಶ್ರೀ ನಾರಿಪತಿ ಬೊಮ್ಮನಯ್ಯಾ ಕೃ
ಶಾನು ನೇತ್ರನು ತಾತನೆ ಅನಿರ್ಜರಾದಿ ವಂದ್ಯ ಮಮ ಸ್ವಾಮಿ
ಈ ನುಡಿ ನಿನಗದೋ ಮಾಣಿ ನಿನ್ನ ಸ್ವಭಾವ ಎಂದಿಗೂ
ಮಾಣಿಯಲ್ಲಾವೆ ಪಿರಿಯನೆ ಮಾಣಿತಾ ಕಾಣಿಕೆ ಇತ
ದೀನತನದಲ್ಲಿ ಬಾಯಿದೆರೆದು ಪ್ರಾಣನಾಗಿ ಇರು ಎಂದರೆ
ನಾನೊಲ್ಲೆನೆಂಬೋಗಾದಿಯೋ
ಕಾಣಿಗಾಗದ ಕಾಡಗಲ್ಲಾನು ಪಾಣಿಯೊಳು ತೋರಲು
ಮೌನದಲ್ಲಿ ಬಂದು ಅವನ ಬಳಿಯಲ್ಲಿ ಮಾನವಂತ ನಿಲವಂತೆ
ಹೊಂಣ ಕಂಕ ಕಿರಾತ ಪುಲಕಸ ಹೀನಜಾತಿಗಳಿಂದಾದ
ನೀನೆ ಪರದೈವ ಸರ್ವೋತ್ಕೃಷ್ಟನೆಂಬೋ
ಜ್ಞಾನ ಬಂದಿರಬ್ಯಾಡವೇ ನಾನಾ ಪರಿಯಲಿ ನಿನ್ನ ಚರಣಾಬ್ಜಾ
ಏನೂ ತಿಳಿಯದಾ ಪಶುಗಳಿಗೆ
ನೀನೆ ಒಲಿದೆದ್ದು ಎಂತಯ್ಯಾ ಆನಂದ ಪಂಢರಪುರಿರಾಯಾ
ಮಾನಿಸರೂಪ ವಿಜಯವಿಠಲ ನಾನು ನಿಗಲ್ಲದವನೇನೋ   ೧

ಮಟ್ಟ

ಭಕುತಿಬಾರಣೆಯಿಂದ ನಿನ್ನರ್ಚನೆ ಮಾಡಿದ
ಭಕುತಜನರಿಗಿಂತ ಮಾಯಾದ ನೊಬಗೆ
ಅಖಿಳ ಶಕ್ತಿ ಉಳ್ಳ ಅನಿಮಿತ್ತ ಬಂಧು
ಲಕುಮಿವಲ್ಲಭ ನಮ್ಮ ವಿಜಯವಿಠಲರೇಯಾ
ಮುಕ್ತಾ ಕೇಳಿಗೆ ಒಲಿದ ಪಂಢರಪುರಿರಾಯಾ   ೨

ತ್ರಿವಿಡಿ

ಎಲ್ಲಾರಿಗೆ ಇಂತು ಮೋಹಾವೆ ಕಲ್ಪಸಿ
ಗಲಭೆ ಎಬ್ಬಿಸಿ ನಾನಾ ಪರಿಯಿಂದ
ಸೊಲ್ಲುಗಳಾಡಿ ಕಂಡಲ್ಲೆ ತಿರುಗುತಿಹರು
ಎಲ್ಲಾ ಮಾತಂಬಿಯಾ ತ್ರಿವಿಧ ಜೀವರ ಭೇಧ
ಇಲ್ಲದಂತಾಗುವದಲ್ಲೋ ಜೀಯಾ
ಎಲ್ಲೆ ಸ್ತೋತ್ತರವಿದು ಕರ್ಣಕ್ಕೆ ಕಠೋರ
ನಿಲ್ಲಾದೆಯಾಗುತಿದೆ ನಿರ್ದೋಷನೆ
ಬಲ್ಲೆನೋ ನಾ ನಿನ್ನ ವಂಚಕತನವ ಶ್ರೀ
ವಲ್ಲಭ ಕೇಳಲೋ ಚಾರಚೋರ
ಕೊಲ್ಲುವ ಮೃಗಗಳಿಗೇ ಪರಿಪರಿವಿಧದಿಂದ
ಹುಲ್ಲು ನೀರೆರೆದು ಸಂತೋಷಬಡಿಸಿ
ಎಲ್ಲಾ ಪರಿಯಿಂದ ಮೆಚ್ಚಿಸಿ ಕೊನೆಗೆ ತಾ
ನೊಲ್ಲದೆ ಹಿಂಸೆಯಾ ಮಾಡುವಂತೆ
ಇಲ್ಲಿಗೆ ಬರುವ ಮಾನನರಿಗೆ ಇದರಂತೆ
ಮೆಲ್ಲನೆ ಸವಿತೋರಿ ಐಹಿಕ ಸುಖವ
ಅಲ್ಲಿಗಲ್ಲಿಗೆ ಇತ್ತು ಕಡಿಗೆ ಕೆಡಿಸುವ ಯೋಗಾ
ಮಲ್ಲಮರ್ದನ ನಿನ್ನದು ನಿಶ್ಚಯಾ
ಖುಲ್ಲಾ ಏಕಲವ್ಯ ಗುರುಭಕ್ತಿ ಮಾಡಿ ಘನ
ಬಿಲ್ಲು ವಿದ್ಯವ ಕಲೆತು ಕೆಡಲಿಲ್ಲವೇ
ಹೊಲ್ಲೆ ಜೀವರು ಭಕುತಿಮಾಡಿದರು ಫಲವಿಲ್ಲ
ಇಲ್ಲವೊ ಏಸು ಜನುಮಕ್ಕೆ ದೇವ
ಗೊಲ್ಲವಲ್ಲಭ ನಮ್ಮ ಸ್ವಾಮಿ ವಿಜಯವಿ
ಠಲ ಪಂಢರಿರಾಯಾ ನಿನಗೆ ನಮೋ ನಮೋ   ೩

ಅಟ್ಟ

ಕಲಿಯುಗದೊಳಗಿಂದ ಧರ್ಮ ಹೆಚ್ಚಿತು ಕಾಣೋ
ತಲೆದೂಗಿ ಪಾಡೋದು ಪೂರ್ವೋತ್ತರೆ ಜ್ಞಾನ

ಕೆಲವು ಕೆಲವು ಇಲ್ಲದಲೆ ಸರಿ ಬಂದಂತೆ
ಜಲಜನಾಭನೆ ನೀನೇ ಇದರೊಳಗಾವವ
ನೆಲೆವಂತರಿಪ್ಪಾರೋ ತಿಳಿದಿಪ್ಪ ಚೆನ್ನಾಗಿ
ಚಲುವ ಅಪ್ರಾಕೃತಗಾತುರ ಎನಗಿಂತು
ತಿಳಿದಿಪ್ಪದು ಪಂಚಭೇಧ ತತ್ವಜ್ಞಾನ
ಒಳಿತಾಗಿ ಒಲಿಸಿ ಸಂಪಾದಿಸದೆ ಉನ್ನತ
ಸುಲಭ ಮುಕುತಿಯಾಗದೆಂದು ಅನುದಿನ
ಬಲವಂತ ವಿಜಯವಿಠಲ ಪಂಢರಿಪುರ
ನಿಲಯಾ ನಿನ್ನಿಚ್ಚೆ ಮತ್ತಾವುದೂ ಕಾಣೆ   ೪

ಆದಿ

ಅವರಂತಿರಲಿ ನೀ ನನಗೆ ಸರಿಬಂದ ಗತಿಯಾ ಕೊಡು
ತವಕದಿಂದಲಿ ಎನ್ನ ಬಿನ್ನಪ ಲಾಲಿಸಯ್ಯಾ ದಿವಸ
ದಿವಸಕ್ಕೆ ಕ್ರಮಾನುಸಾರವಾಗಿ
ನವನವರೂಪವನ್ನು ತೋರುತ್ತ ಸಲಹಬೇಕೋ
ಅವಗುಣ ಎಣಿಸದೆ ಕರಪಿಡಿದು ಉದ್ದರಿಸು
ಭವದೂರ ಭಕುತವತ್ಸಲಾ ದಿವಿಗಂಗಾಸ್ನಾನ ಪಾದದರುಶನ
ಲವಲವಿಕೆಯಿಂದ ಸುಜನರ ಸಂಗವಿತ್ತು
ಪವನಾಂತರಯಾಮಿ ಮಾಡಿಸೋ, ನಿರ್ವಿಘ್ನ
ಅವನಿ, ಜಲ, ತೇಜ, ವಾಯು, ಗಗನದಲ್ಲಿ ನೀನೆ
ವಿವರಿಸಿ ಪೇಳುವುದೇನು ವಿಶ್ವಂಭರ ಕೃಷ್ಣ
ಶಿವನಂದನ ವಾಸ ವಿಜಯವಿಠಲರೇಯ
ಕವಿ ಪುಂಡರೀಕ ವರದ ಪಂಢರಿಪುರರಾಯಾ   ೫

ಜತೆ

ಶರಣು ಶರಣು ನಿನ್ನ ಚರಣಾಬ್ಜಯಗಳಕ್ಕೆ
ಕರುಣ ಪಂಢರಿಪುರಿ ವಿಜಯವಿಠಲರೇಯಾ   ೬