೨೭

ನೋಡಿದೆ ವಿಠಲನ ನೋಡಿದೆ            ಪ

ನೋಡಿದೆನು ಕಂಗಗಳಲಿ ತನು
ವೀಡಾಡಿದೆನು ಚರಣಾಬ್ಜದಲಿ ಕೊಂ
ಡಾಡಿದೆನು ವದನದಲಿ ವರಗಳ
ಬೇಡಿದೆನು ಮನದಣಿಯ ವಿಠಲನ      || ಅ.ಪ ||

ಇಂದಿರಾವಲ್ಲಭನ ತಾವರೆ
ಗಂಧನಂಜಿಸಿ ತಪತಪಾವೆಂ
ತೆಂದು ಪೇಳ್ದನ ಯುವತಿ ವೇಷದಿ
ಕಂದುಗೊರಳನ ಸ್ತುತಿಸಿದನ ಪು

ರಂದರಾನುಜನಾಗಿ ದಿವಿಯೊಳು
ಕುಂದದರ್ಚನೆಗೊಂ ಸನಕ ಸ

ಸಂದನಾದಿ ಮುನೀಂದ್ರ ಹೃದಯ ಸು
ಮಂದಿರನ ಮಮಕುಲದ ಸ್ವಾಮಿ   ೧

ಯಾತುಧಾನರ ಭಾರ ತಾಳದೆ
ಭೂತರುಣಿ ಗೋರೂಪಳಾಗಿ ಸ
ನಾತನನ ತುತಿಸಲೈ ಶೇಷ ಫ
ಣಾತಪತ್ರನು ನಂದಗೋಪ ನಿ
ಕೇತನದಲವತರಿಸಿ, ವೃಷ ಬಕ
ಪೂತನರಿಗೆ ಸದೆದು ಬಹುವಿಧ
ಚೇತನರಿಗೆ ಗತಿನೀಡಲೋಸುಗ
ಜಾತಿಕರ್ಮಗಳ್ವಹಿಸಿ ಮೆರೆದನ   ೨

ತನ್ನ ತಾಯ್ತಂದೆಗಳ ಹೃದಯವೆ
ಪನ್ನಗಾರಿದ್ವಜಗೆ ಸದನವೆಂ
ದುನ್ನತ ಭಕುತಿಭರದಿ ಅರ್ಚಿಪ
ಧನ್ಯಪುರುಷನ ಕಂಡು ನಾರದ
ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರ
ಪನ್ನ ವತ್ಸಲ ಬಿರುದು ಮೆರೆಯಲು
ಜೊನ್ನೊಡಲ ಭಾಗದಿ ನೆಲೆಸಿದ ಜ
ಗನ್ನಾಥ ವಿಠ್ಠಲನ ಮೂರ್ತಿಯ   ೩

೨೮

ನೋಡಿದೆ ವಿಠಲನ ದಣಿಯ              ಪ

ನೋಡಿದೆನು ವಿಠ್ಠಲನ ರೂಪವ
ಪಾಡಿದೆನು ಮನದಣಿಯೆ ಹರುಷವು
ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ
ಬೇಡಿ ಮನಸಿನಭೀಷ್ಟ ಸಂತತ
ನೀಡು ನಿನ್ನಯ ಚರಣ ಸ್ಮರಣಿಯ
ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ   ೧

ಪಂಚ ಪಂಚ ಉಷಕಾಲದೀ
ಪಂಚಬಾಣನ ಪಿತಗೆ ಆರುತಿ
ಮುಂಚಿನೊಸನಗಳನೆಲ್ಲ ತೆಗೆಯುತ ತೈಲವೆರೆಯುವರೂ
ಪಂಚರೂಪಗೆ ಚಂದ್ರಭಾಗೆಯ
ಪಂಚ ಗಂಗೋದಕಗಳೆರೆಯುತ
ಪಂಚ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು   ೨

ಬೆಣ್ಣೆ ಬಿಸಿನೀರೆರೆದು ಕೃಷ್ಣಗೆ
ಸಣ್ಣ ವಸ್ತ್ರದಿ ವರಸಿ ಮೈಯನು
ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ
ಬಣ್ಣದೊಸ್ತ್ರದ ಪಾಗು ಸುತ್ತತ
ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ
ಸಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ   ೩

ಗಂಧ ಅಕ್ಷತೆ ಪುನುಗು ಜವಾಜಿ
ಛಂದದಾ ಕಸ್ತೂರಿ ತಿಲಕವು
ಸುಂದರಾಂಗನೆ ಮುಖಕೆ ಕನ್ನಡಿ ತೋರಿಸುವರಿಂತೂ
ಅಂದದಾ ಪಕ್ವಾನ್ನ ತರುತಲಿ
ಇಂದಿರೇಶಗೆ ಅರ್ಪಿಸುತ್ತಲಿ
ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ   ೪

ಮಾಡಿ ಪಂಚಾರ್ತಿಗಳ ವಿಠಲಗೆ
ಪಾಡುವರು ಮನದಣಿಯೆ ಭಕ್ತರು
ನೀಡುವರು ಪಂಚಾಮೃತಂಗಳ ಬೇಡುವರು ಹರಿಯ
ರೂಢಿಯೊಳು ಪಂಢರಿಯ ಕ್ಷೇತ್ರವ
ಮಾಡಿ ಮಂದಿರ ನೆಲಸಿ ರಂಗನು
ಬೇಡಿದವರನು ಪೊರೆವ ಗೋಪಾಲಕೃಷ್ಣ ವಿಠ್ಠಲನು   ೫

೨೯

ನೋಡಿದೇ ಶ್ರೀ ವಿಠಲನ ನೋಡಿದೆ     ಪ

ನೋಡಿದೆ ಲೀಲಾ ಮಾನುಷನ – ಕೊಂ
ಡಾಡಿದೆ ಕರುಣ ಸಾಗರನ – ಆಹ
ನಾಡೊಳಗಾವೆಡೆ ಈಡು ಇಲ್ಲದ ದೈವ
ಗಾಡಿಕಾರನು ಕೃಷ್ಣ ಜೋಡು ಕುಂಡಲ ಧರನ|| ಅ.ಪ ||

ದಾಸರಂದದಿ ಕಾವಿ ವಸನ ಹೊದ್ದು
ಭಾಸಿಸುತಿಹ ಸಿರಿವರನ ವಸನ
ಮೀಸಲನವನು ತೆಗೆಯಲದವನ ಕಂಡೆ
ಲೇಸಾದ ಶಾಲು ಹೊದ್ದವನ ಆಹ
ಕಾಶಮೀರದ ಶಾಲು ಭಾಸುರ ಜರಿ ಖಚಿತ
ಭೂಷಿತ ಹರಿ ಕುಳಿತು ತೋಪಿಪ ಭಕುತರನ   ೧

ಸುತ್ತಿಹ ಪಾವಡೆ ಶಿರಕೇ ಬಲು
ಸುತ್ತು ಸುತ್ತಿರುವುದು ಅದಕೆ ಹರಿ
ಮಸ್ತಕ ಛಂದ ಕಾಂಬುದಕೆ ನೋಡಿ
ಭಕ್ತ ಸಂದಣಿಯ ತೋಷಕ್ಕೆ ಆಹ
ಸುತ್ತಿಹುದನು ಬಿಚ್ಚಿ ತುತ್ತಿಸುತಿರಲಾಗ
ಕೃತ್ತಿವಾಸನ ತಾತ ನೆತ್ತಿ ನೈಜವ ಕಂಡೆ   ೨

ಪೂಜಾರಿ ತೆಗೆಯಲು ಜರಿಯ ಶಾಲು
ಮಾಜಾದೆ ವಿಠಲನ ಪರಿಯ ಕಂಡೆ
ನೈಜದ ಶ್ರೀವರನ ದ್ವಯಹಸ್ತ
ಯೋಚಿಸಿ ಕಟಿಲಿಹ ಪರಿಯ ಆಹ
ಸೋಜಿಗತನರೂಪ ನೈಜದಿ ತೋರುತ
ಪೂಜಾದಿ ಸ್ವೀಕಾರ ವ್ಯಾಜಾವ ಕಂಡನೆನು   ೩

ನಿರ್ಮಾಲಾಕೃತಿ ಪೊದ್ದ ಹಾರ ತುಳಸಿ
ಕಮ್ಮಲರ್ಸೂಸುವಧಾರಾಕಾರ
ಒಮ್ಮೇಲಿ ತೆಗೆದರಪಾರ ದಯ
ಸುಮ್ಮನಸರಿಗೀವ ಪೋರ ಆಹ
ಆಮ್ಮಹ ದೈವನ ಇಮ್ಮಡಿ ಪ್ರಭೆ ಕಂಡ
ನಿರ್ಮಾಲ್ಯ ತೆಗೆಯುವ ಕರ್ಮಾಚರಿಸೂವಲ್ಲಿ   ೪

ಲೌಕಿಕ ಪೂಜೆಗಳ ಮಮ ಪರ
ಲೋಕೈಕನಾಥಗೆ ಪರಮ ಪ್ರೀತಿ
ವಾಕು ಭಕ್ತಿಯುತ ಮರ್ಮ ತಿಳಿ
ಪ್ರಾಕೃತಕೊಳ್ಳುವ ನಮ್ಮ ಆಹ
ಶ್ರೀಕರಾರ್ಚಿತ ಪಾದ ಸ್ವೀಕಾರಿಸುವ ಭಕ್ತ
ತೋಕನ ಬಿಂಬೋದ ಶ್ರೀಕರ ದಳ ತುಳಸಿ   ೫

ನಾಕ್ಹತ್ತು ಭವನಗಳ್ಜೋತಿ ಮತ್ತ
ನೇಕಾನೇಕಾಕಾರ ಜ್ಯೋತಿಗಳೊ
ಪ್ರಕಾಶಪ್ರದ ಪರಂಜ್ಯೋತಿ ಮುಕ್ತಿ
ಪ್ರಕಾರದೊಳಗಿವನೆ ಜ್ಯೋತಿ ಆಹ
ಏಕಮೇವ ಹರಿಗೆ ಕಾಕಡಾರುತಿ ಮಾಳ
ಲೋಕರ ಪೂಜೆಯ ಸ್ವೀಕರಿಪುದ ಕಂಡೆ   ೬

ಪಂಚ ಮೋಕ್ಷಪ್ರದ ಹರಿಗೆ ಆಯ್ತು
ಪಂಚವಿಧಭಿಷೇಕ ಆವಗೆ ಶೇಷ
ಮಂಚಿಕೆ ಕ್ಷೀರಾಬ್ದಿಶಯಗೆ ಮಧು
ಸಂಚನ ಮದ್ವಿದ್ಯ ಹರಿಗೆ ಆಹ
ಪಂಚಾಮೃತಭಿಷೇಕ ಸಂಚಿಂತಿಸುವನೀಗೆ
ಸಂಚಿತ ಕರ್ಮವ ಕೊಂಚವ ಮಾಡುವ   ೭

ಮಂಗಳ ಮಹಿಮಗೆ ಸ್ನಾನಾ ಅವ
ಗಂಗಾ ಪಿತನೆಂಬುದೆ ಮಾನ ಹಾಗೂ
ಅಂಗಜನಯ್ಯಗೆ ಸ್ನಾನಾ ಆಯ್ತು
ಹಿಂದಗೆ ಲೋಕ ವಿಧಾನಾ ಆಹ
ಸಂಗೀತಲೋಲ ಸತ್ಸಂಗವು ತುತಿಸಲು
ಸ್ವಾಂಗಾಯನಾಮ ಶುಭಾಂಗನು ಮೆರೆದನು   ೮

ವಸ್ತ್ರದಿಂದಲಿ ಕಾಯ ಮರೆಸಿ ಬಹು
ಶಾಸ್ತ್ರೋಕ್ತಿ ಉಡಿಗೆಯ ಉಡಿಸಿ ಮತ್ತೆ
ರತ್ನಧ್ಯಾಭರಣವ ತೊಡಿಸಿ ಚೆಲ್ವ
ಕಸ್ತೂರಿ ತಿಲಕವನಿರಿಸಿ ಆಹ
ವಿಸ್ತೃತಿಪರಿಯಲಿ ಸತ್ಯ ಷೋಡಶ ಪೂಜೆ
ಚೆತ್ತುರ ಮೊಗನಿಂದ ಕೃತ್ಯಾನುಸಂಧಾನ           ೯

ವೇದ ಘೋಷ ಪೂಜಾ ಮಂತ್ರ ಬಹು
ನಾದ ವಿಠಲ ನಾಮ ಮಂತ್ರ ತುಂಬಿ
ಮೋದ ಪೂರೈಸಿತು ತಂತ್ರ ಘಂಟೆ
ನಾದದಿಂದಾರುತಿ ಕೃತ ಆಹ
ಆದರದಿಂದ ಪ್ರಸಾದವು ಸ್ವೀಕೃತ
ಮೋದದಿ ವಿಠಲನ ಪಾದಾಲಿಂಗಾತ್ಯವ   ೧೦

ಉತ್ಕೃಷ್ಟ ಸುಕೃತದ ಭೋಗ ಹರಿ
ಇತ್ತನು ಅನುಗ್ರಹ ಯೋಗ ಸ್ವಂತ
ಹಸ್ತದಿ ಪೂಜಾದಿ ಯೋಗ ಮಾಳ್ವ
ಕೃತ್ಯ ಸಂಧಿಸಿದನು ಈಗ ಆಹ
ಚಿತ್ತಜ ಪಿತ ವಿಠಲ ಭಕ್ತವತ್ಸಲ ದೇವ
ನಿತ್ತಕಾರುಣ್ಯ ತುತಿಸಲೆನಗಳವೇ   ೧೧

ಪಿತೃ ಸೇವಕ ಪುಂಡಲೀಕ ತನ್ನ
ಕೃತ್ಯದೊಳಿರೆ ನಿರ್ವಲ್ಮೀಕ ಹರಿ
ವ್ಯಕ್ತ ತನ್ಛಕ್ತ ಪರೀಕ್ಸಕನಾಗೆ
ಭಕ್ತನು ಮನಸ್ಥೈರ್ಯಾಲೋಕ ಆಹ
ಇತ್ತ ಇಟ್ಟಿಗೆ ಪೀಠ ಮೆಟ್ಟಿ ನಿಂತಿಹ ದೇವ
ಕೃತ್ತಿ ವಾಸಾದ್ಯರಿಂದ ಸ್ತುತ್ಯಶ್ರೀ ವಿಠಲನ   ೧೨

ದಾಸೀಗೆ ಕಂಕಣವಿತ್ತು ಹರಿ
ದಾಸರ ರೂಪೀಲಿ ನಕ್ತ ಕಳೆ
ದಾಶು ದಾಶರ ಶಿಕ್ಷಕರ್ತ ಮತ್ತೆ
ದಾಸರ ನಿರ್ದೋಷ ವಾರ್ತ ಆಹ
ದಾಸನೋರ್ವಾ ವೇಷ ಭೂಷಣ ಕೇಳುತ್ತ
ವಾಸುಕಿ ಶಯನೊಲಿದ ದಾಸ ಪುರಂದರಗೆ   ೧೩

ಮಯ್ಯಕೆ ಮುಯ್ಯ ತೀರಿತು ಜಗ
ದಯ್ಯ ವಿಠಲನ್ನ ಕುರಿತು ಪೇಳಿ
ಕಯ್ಯನೆ ಮುಗಿದರು ತ್ವರಿತು ದಾಸ
ಮೈಯ ಬಿಗಿದ ಕಂಬ ಒಳಿತು ಆಹ
ತ್ರಯ್ಯ ಲೋಕದಿ ದಾಸ ಅಯ್ಯನ ಪೆಸರಾಯ್ತು
ತ್ರಯ್ಯ ಗೋಚರ ಹರಿ ಪ್ರೀಯನಿಗೊಲಿದಂಥಾ   ೧೪

ಅಂಡ ಬ್ರಹ್ಮಾಂಡಗಳೊಡೆಯ ಭಕ್ತ
ಪುಂಡಲೀಕನಿಗೊಲಿದ ಭಿಡೆಯ ರಹಿತ
ಚಂಡ ಕಿರಣಾನಂತ ಪ್ರಭೆಯ ಹರಿ
ಮಂಡಿ ತಿಂದುಭಾಗ ತಡಿಯ ಆಹ
ಹಿಂಡು ದೈವರ ಗಂಡ ಪುಂಡರೀಕ್ಷಾಕನೆ
ಪಿಂಡಾಂಡದೊಳಗಿಹ ಗಂಡನೆಂದೆನಿಸಿಹಗೆ   ೧೫

ಪುರಂದರ ವಿಜಯ ಭಾಗಣ್ಣ ಮತ್ತೆ
ವರ ಜಗನ್ನಾಥವರ್ಯ ಬಹು
ಪರಿಠವಿಸಿತ್ತೆ ಮೃಷ್ಟಾನ್ನ ದಾಸ
ವರರ ಸೇವಕ ಸೇವಕನ್ನ ಆಹ
ಪುರಂದರದಾಸರ ದಿನ ದರುಶನವಿತ್ತಿಹೆ
ಅರಿದಾಯ್ತೆನ್ನಯ ಕುಲ ಪರಮ ಧನ್ಯವೆಂದು   ೧೬

ಇಂದುಭಾಗದಿ ವಾಸ ಜಯ ಸಿರಿ
ಇಂದಿರಾ ಲೋಲನೆ ಜಯ ದಾಸ
ಮಂದಿಗಭಿಷ್ಟದ ಜಯ ಎನ್ನ
ತಂದೆ ತಾಯಿ ಬಂದು ಜಯ ಆಹ
ಸುಂದರ ಗುರು ಗೋವಿಂದ ವಿಠಲ ಹೃ –
ನ್ಮಂದಿರದೊಳು ತೋರಿ ಬಂಧನ ಬಿಡಿಸುವ   ೧೭

೩೦

ನೋಡಿದೆನೊ ಸಿರಿ ಪಾಂಡುರಂಗನಾ
ಪಾಡಿದೆನೊ ಜಗದಂತರಂಗನ
ಕೂಡಿದೆನೊ ಮನ ಖಗ ತುರಂಗನ
ಬೇಡಿದೆನೊ ಗುಣಾಂತರಂಗನಾ          ಪ

ಕಪಿಲ ವಿಭುಹರಿ ಸಾರ್ವಭೌಮಸು
ತಪನಂದನ ಕೃಷ್ಣ ಗೀರ್ವಾಣ
ತಪಯಜ್ಞ ಜಿತದತ್ತ ಧನ್ವಂತ್ರಿ
ತಪನಿವಾಸ ವಿನುತ ವೃಷಭ ಹಯ
ಲಪಲಪನ ವೈಕುಂಠ ಹಂಸ ತಪನಾ
ಕುಪಿತಜಿತ ಮುನಿ ನರನಾರಾಯಣ
ಅಪರಿಮಿತ ರೂಪ ಧರಿಸಿದಾನಂದ
ವಿಪುಳದೊಳಗೀ ಗುಪಿತ ಮಹಿಮನ   ೧

ಮುನಿವನ ಜಿತ ಚಿತ್ತ ಶುದ್ದದಿ
ಜನನಿ ಜನಕನ ಚರಣ ಸೇವೆಯ
ಅನುದಿನದಿ ಘನವಾಗಿ ಮಾಡುತ
ಗುಣಗಳಿಂದಲಿಯಿರಲು ಇತ್ತಲು
ಮುನಿ ನಾರದನು ಗಾಯನವ ಗೈಯುತ
ಇನಿತು ಸೋಜಿಗ ನೋಡಿ ತನ್ನಯ
ಜನಕಗರುಹಲು ನಗುತಲಾ
ಮನದಿ ಕೈಕೊಂಡ ಮೂಲ ಮೂರ್ತಿಯ   ೨

ನುಡಿದ ಮಾತಿಗೆ ತೂಗಿ ಮಸ್ತಕ
ಪೊಡವಿಯೊಳು ನೀನವತರಿಸಿ ಆ
ದೃಡ ಭಕುತನಿಗೆ ದರುಶನವೆ ಇ
ತ್ತಡಿಗಡಿಗೆ ಸುಖಬಡಿಸಿ ಅಲ್ಲಲ್ಲಿ
ಬಿಡದೆ ನಿಲ್ಲುವೆ ನಿಮ್ಮ ಸಹಿತಲಿ
ಕೊಡುವೆ ವರಗಳ ವಿನುತ ಕಳುಹಿದ
ಒಡನೆ ಸಲ್ಲಿಪೆನೆಂದು ಯಮುನಾ
ತಡಿಯ ಜನಿಸಿದ ಜಗನ್ಮೋಹನಾ   ೩

ಉದುಭವಿಸಿ ಕಿಶೋರತನದಲಿ
ನಿಧಿಯ ನೋಡುವೆನೆನುತ ಗೋವುಗಳ
ಮುದದಿ ಮೇಯಿಸಿಕೊಳುತ ಕಾವುತ
ಒದಗಿ ಗೋವಳರೊಡನೆ ಬಂದನು
ಮೃಡ ವಿಧಿ ಸಂಭವಾದ್ಯ ಭಕ್ತನ
ಎದುರಲಿ ನೋಡಿದನು ಹೋ ಹೋ
ಇದೇ ಸಮಯವೆಂದು ನಿಂದಾ ಹಿಂಭಾ
ಗದಲಿ ಭಕ್ತಿಗೆ ಮೆಚ್ಚಿ ಬಲು ವೇಗಾ   ೪

ತಿರುಗಿ ನೋಡದಲಿರಲು ಭಕುತನ
ಮರಳೆ ಮಾತಾಡಿಸಲು ಇಟ್ಟಿಗೆ
ಭರದಿ ಹಿಂದಕೆ ಒಗಿಯೆ ವಿಠ್ಠಲ
ಹರುಷದಲಿ ವಶವಾಗಿ ನಿಲ್ಲಲು
ಕರುಣರಸ ಸಂಪೂರ್ಣ ದೇವನ
ನಿರೀಕ್ಷಿಸಿದ ಜಯವೆಂದು ಪೊಗಳಿ
ವರವ ಬೇಡಿದ ಪುಂಡರೀಕನು ಗಿರಿಯನೆತ್ತಿದ ಗೋಕುಲೇಶನ   ೫

ಭಕುತ ಮನೋರಥ ಎನ್ನ ಪೆಸರಿಲಿ
ಪ್ರಕಟವಾಗಲಿ ಕ್ಷೇತ್ರದ ಸರ್ವದ
ಸಕಲ ಲೋಕದೊಳಗೆ ನೀನೆ
ಮುಕುತಿ ಕೊಡುತಲಿ ಇಲ್ಲೆ ನಿಲುವದು
ಅಖಿಳ ಬಗೆಯಿಂದ ಭಜನೆಗೊಳುತ ನೀ
ರುಕ್ಮೀಣಿಪತಿ ಒಲಿದು ಪಾಲಿಸಿ
ವ್ಯಕುತವಾದನು ಪೂರ್ವಮುಖನಾಗಿ
ಸುಖಪಯೋನಿಧಿ ಮೆರೆಯುತಲಿ ಇಂದೂ   ೬

ಕ್ರೋಶ ಯೋಜನ ಯೋಜನತ್ರಯ
ದೇಶ ಪರಿಮಿತ ಕ್ಷೇತ್ರವಿಪ್ಪುದು
ವಾಸ ಒಂದಿನಮಲ ಮನುಜರನ
ಲೇಸು ಪುಣ್ಯಗಳೆಣೆಸಿ ಸರಸಿ
ಜಾಸನನು ಬೆರಗಾಗಿ ನಿಲ್ಲುವ
ದೋಷವರ್ಜಿತ ಹರಿಯ ನೆನೆಸುತ

ಅಸೇತು ಮಧ್ಯದಲಿ
ವಿಶೇಷವಾಗಿದ್ದ ಈ ಕ್ಷೇತ್ರ ಮೂರ್ತಿಯಾ   ೭

ನಂದಾ ಮಂದಾಕಿನಿ ಮಧ್ಯಾಹ್ನಕೆ
ನಿಂದಿರದೆ ಬರುತಿಪ್ಪ ಪ್ರತಿದಿನ
ಚಂದ್ರಭಾಗಾ ಪ್ರಸೂನುವತಿ ಅರ
ವಿಂದ ಕುಂಡಲ ಚತುರ ದಿಕ್ಕಿನಲ್ಲಿ
ಪೊಂದಿಪ್ಪವು ಓರ್ವನಾದರು
ಮಿಂದು ತೀರ್ಥದಲಿ ಆ
ನಂದ ಸತ್ಕರ್ಮ ಚರಿಸಲಾಕ್ಷಣ
ಇಂದಿರೇಶನು ಒಲಿವ ನಿಶ್ಚಯಾ   ೮

ದ್ವಾರಸ್ಥ ಜಯ ವಿಜಯ ನಾರದ
ಭಾರತಿ ಪಂಚ ಕೋಟಿ ದೇವರು
ಶ್ರೀರಮಣಿ ಮಿಕ್ಕಾದ ಜನರೆಲ್ಲ
ಈರೆರಡು ದಿಕ್ಕಿನಲಿಯಿಹರು
ಸುತ್ತಲಿ ಪಾಡುತ್ತಕುಣಿಯುತ್ತ
ಹಾರುತಲಿ ಹಾರೈಸಿ ನಾನಾ ವಿ
ಹಾರದಲಿ ಪುರಿ ಪ್ರದಕ್ಷಿಣಡೆ ವಿ
ಸ್ತಾರ ಮಾಡುತಲಿಪ್ಪ ಸೊಬಗನಾ     ೯

ಎರಡು ವಿಂಶತಿ ಗುದ್ದು ಮೊಳವೆ
ಕರಿಸಿ ಕೊಂಬೊದೊಂದೆ ನಿಷ್ಕವು
ಇರದೆ ಇವು ನಾನೂರುಯಾದಡೆ
ವರಧನಸ್ಸು ಪ್ರಮಾಣವೆನಿಸೊದು
ಗುರುತು ತಿಳಿವದು ಇಂಥ ಧನಸ್ಸು
ಅರವತ್ತು ಪರಿಮಿತಾ ಈ ಭೀಮಾ
ಸರಿತೆಯೊಳು ಪರಿಪರಿ ತೀರ್ಥಗಳಕ್ಕು
ನಿರೀಕ್ಷಿಸಿ ವಂದನೆಯ ಮಾಡುತ್ತಾ   ೧೦

ಜಾತಿ ಗೋತುರ ಹತ್ತದೊಂದೆ
ಮಾತು ಮನ್ನಿಸಿ ಕೇಳಿ ಸುಜನರು
ವಾತದೇವನ ಕರುಣತನವನು
ನೀತಿಯಲಿ ಪಡಕೊಂಡು ಸತ್ವದಿ
ಜ್ಞಾತ ಅನುಷ್ಠಾನದಲಿ ನಡೆದು ಪು
ನೀತ ಮಾನವ ಬಂದರಾದಡೆ
ಆತುಮದೊಳು ಹರಿ ಪೊಳೆದು ಬಲು
ಕೌತುಕವ ತೋರಿಸುವ ರಂಗನಾ   ೧೧

ಶಯ್ಯಾ ಹರಿ ದಿನದಲಿ ಮಾನವ
ಕಾಯ ನಿರ್ಮಳನಾಗಿ ಪಂಢರಿ
ರಾಯ ರಾಜೀವನೇತ್ರ ತ್ರಿಭುವನ
ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ
ಗಾಯನವ ಮಾಡುತಲಿ ಬಂದ ನಿ

ರ್ಮಾಯದಲಿ ಕೊಂಡಾಡಿ ದಮ್ಮಯ್ಯ
ಕೈಯ ಪಿಡಿಯನೆ ಕರುಣದಿಂದ ಸಾ
ಹಾಯವಾಗುವ ವಾಣಿ ಜನಕನಾ   ೧೨

ಮಕುಟ ಕುಂಚಿ ಕುಲಾಯ ಕುಂತಳ
ಮಕರ ಕುಂಡಲ ಮಣಿ ಕಿರಣ ಸ
ನ್ಮಖ ಮುಕರ ಸೋಲಿಸುವ ಕಾಂತಿ ಚಂ
ಪಕ ನಾಸಿಕ ಮುಖ ಮೃಗನಾಭಿ ಸಣ್ಣ ತಿ
ಲಕ ಕೌಸ್ತುಭಗಳ ತುಲಸಿ ಮಾಲಿಕಾ
ನಖ ಪದಕ ಕಟಿಕಂಬು ಕರದ್ವಯ
ಆಕಳಂಕ ನಖ ಪಾದ ಭೂಷಣ ಮಾ
ಣಿಕ ಇಟ್ಟಿಗೆ ಮೇಲೆ ನಿಂದ ವಿಠ್ಠಲನ   ೧೩

ಸಂಗಮ ಸುರ ಮಥನ ಕಾಳಿಂಗ
ಭಂಗ ಭಾವುಕ ಭಕ್ತಜನಲೋಲ
ಶೃಂಗಾರಾಂಬುಧಿ ರೋಮ ಕೋಟಿ ಕೋಟಿ
ಲಿಂಗಧರ ಗೌರೀಶ ಸುರಪ
ನಂಗ ಮಿಗಿಲಾದ ಮುನಿವಂದಿತಾ ಮಾ
ತಂಗ ವರದ ಗೋವಿಂದ ವರದೇಶ
ಸಂಗ ನಿಃಸಂಗ ಸುಪ್ರಸನ್ನ ನೀ
ಲಾಂಗ ಗತಿ ಎಂದು ತುತಿಸೆ ಅನುದಿನ   ೧೪

ಪೇಳಲೊಶವೇ ಲೋಹದಂಡಹಿ
ಯ್ಯಾಳಿ ಕ್ಷೇತ್ರದ ಮಹಿಮೆ ಸಾವಿರ
ನಾಲಿಗಿಂದಲಿ ಪೊಗಳಿ ಸುಮ್ಮನೆ
ವ್ಯಾಳಪತಿ ಬೆರಗಾಗಿ ನಿಲ್ಲುವ
ಸಲಿಗೆನಾ ಮಾಳ್ಪರು ವಿಲಿಂಗರು
ಮೇಲು ಮೇಲೀ ಭುವನದೊಳಗಿದ್ದು
ಹೇಳಿ ಕೇಳಿದು ಜನರಿಗಾನಂದಾ
ಬಾಲಾ ವಿಜಯವಿಠ್ಠಲರೇಯನಾ   ೧೫