೩೧

ಪಂಢರಪುರವಾಸ ಪಾಲಿಸೋ ಶ್ರೀಶ                ಪ

ಶ್ರೇಷ್ಟ ಭಕ್ತನು ಕೊಟ್ಟ ಇಟ್ಟಿಕಲ್ಲಿನ ಮ್ಯಾಲೆ
ಗಟ್ಯಾಗಿ ನಿಂತಿದ್ದ ವಿಠೋಬ್ಬ ದಯ ಮಾಡೊ   ೧

ಪಾಂಡುರಾಯನ ಸುತ ಗಾಂಡೀವರ್ಜುನ ದೂತ
ಬಂಡಿ ನಡೆಸಿದಾತ ಪುಂಡರೀಕರದನೀತ   ೨

ಮುಕುತಿದಾಯಕ ಮುದ್ದು ರುಕುಮಿಯ ರಮಣನೆ
ಭಕುತವತ್ಸಲಯೆನಗೆ ಸಕಲಾಭೀಷ್ಟವ ನೀಡೊ   ೩

ಬುಕ್ಹಿಟ್ಟು ತುಳಸಿ ಮಾಲೆ ಕಟ್ಟಿ ಕೊರಳಿಗೆ ಹಾಕಿ
ಅಪ್ಪಿಕೊಂಡರೆ ಸಾರೂಪ್ಯ ಕೊಡುವ ದಾತ   ೪

ಲೋಕ ಲೋಕದೊಳಗಿದ್ದಾನೇಕ ಜೀವರನೆಲ್ಲ
ಸಾಕಿ ಸಾಕಾಯ್ತೆ ಕರವೇಕೆ ಟೊಂಕದಲ್ಲಿಟ್ಟೆ   ೫

ಸೃಷ್ಟಿ ಸ್ಥಿತಿಯ ಜನಸಂರಕ್ಷಣೆ ಮಾಡಿ ನಿನ್ನ
ರಟ್ಟೆ ಸೋತವೆ ಟೊಂಕಕಿಟ್ಟು ಕಯ್ಯನು ನಿಂತೆ   ೬

ಕಂಬದೊಳಗೆ ನಿಂತ ಪುರಂದರದಾಸರು
ವಂದನೆ ಮಾಡೆ ಇವರೆ ನಾರದರೆಂದು ನಾ ತಿಳಿದೆ   ೭

ರುಕ್ಮಿಣಿ ಸತ್ಯಭಾಮೆ ರಾಧೆ ಲಕ್ಷುಮಿಯೇರ
ಹತ್ತಿಲೆ ನಿಂತ ನಮ್ಮಪ್ಪ ವೆಂಕಟರಮಣ   ೮

ಭೀಮರಥಿಯ ಸ್ನಾನ ಸ್ವಾಮಿ ನಿಮ್ಮ ದರುಶನ
ಭೀಮೇಶ ಕೃಷ್ಣನ ಧ್ಯಾನ ಮಾಡುವೋದ್ವೈಕುಂಠಸ್ಥಾನ            ೯

೩೨

ತಿಲಕ ಕಾಮೋದಭಜನಿಠೇಕಾ

ಪಂಢರಿಯ ಬಿಟ್ಟಲ್ಲಿ ಹೆಂಡತಿಯ ಕರಕೊಂಡು
ಬಂದ ಕಾರಣ ತಿಳಿಯದೋ  ಪ

ಹೆಂಡತಿಯ ಕಾಟವೋ ಇದು ನಿನ್ನ ಆಟವೋ
ಭಕ್ತಭೂಮಿಗೆ ಓಟವೋ      || ಅ.ಪ ||

ಪಂಢರಿಯ ಬಿಟ್ಟಲ್ಲ ಬಂದ ಕಾರಣವೇನು
ಕೇಳಯ್ಯಾ ಪಾಂಡುರಂಗಾss
ಚಂದ್ರಭಾಗಾತೀರ ಸುಂದರ ಮಂದಿರವು
ಇಂದಿರಾರಮಣ ನಿನಗೆ   ೧

ಒಂದಲ್ಲ ಎರಡಲ್ಲ ಪಂಚ ಪಕ್ವಾನ್ನಗಳು
ಪ್ರತಿನಿತ್ಯ ನೈವೇದ್ಯಕೆ
ಅಂದ ಚೆಂದದ ರತ್ನ ಮುತ್ತಿನಾಭರಣಗಳು
ಕಂದರ್ಪಜನಕ ನಿನಗೆ   ೨

ಅರುಣೋದಯಕೆ ನಿತ್ಯ ಪಂಚಾಮೃತದ ಸ್ನಾನ
ನವನೀತ ಬಾಯಿ ತುಂಬಾss

ಜರತಾರಿಮುಂಡಾಸು ಭರ್ಜರಿ ನಿಲುವಂಗಿ
ಸೊಂಪಿನಂಚಿನ ಮಡಿಯು ನಿನಗೆ
ತರತರದ ಪುಷ್ಪಗಳು ಎಳೆ ತುಳಸಿ ವನಮಾಲಿ
ಕೊರಳೊಳಗೆ ವೈಜಯಂತಿ
ಪರಿಮಳದ ಗಂಧ ಕಸ್ತೂರಿ ಪಣೆಯಲ್ಲಿ ಇಟ್ಟು
ವೈಭವದಿ ಪೂಜಿಸುವರು   ೩

ಸರಿಯಾಗಿ ಮಧ್ಯಾಹ್ನ ಮಹಾಪೂಜೆ ನಡೆಯುವುದು
ಭಕ್ತರಿಗೆ ಲೆಖ್ಖವಿಲ್ಲಾss

ಪಾದಕ್ಕೆ ಹಣೆಹಚ್ಚಿ ತಿಕ್ಕುವರು ಮೇಲೆದ್ದು
ಅಪ್ಪಿಕೊಳ್ಳುವರು ಸ್ವಾಮಿ ತಿರುಗಿ ಬರಲಾಗದೇ
ನಿಂತು ಬಿಡುವರು ಅಲ್ಲಿ ದಬ್ಬಿದರು ಎಚ್ಚರಿಲ್ಲಾ
ಇಂಥ ಭಕ್ತಿಯ ಭಾವ ಇನ್ನೆಲ್ಲಿಯ ಕಾಣೆ
ಭಕ್ತವತ್ಸಲ ವಿಠ್ಠಲಾss   ೪

ಗೋಧೊಳಿಕಾಲಕ್ಕೆ ಪಾದಪೂಜೆಯ ಮಹಾ
ಧೂಪ ದೀಪೋತ್ಸವಗಳುss
ಆಪಾದಮೌಳಿಪರ್ಯಂತ ದರ್ಶನ ಪಾದ
ಸ್ಪರ್ಶದ ಆನಂದವೋss
ರಾತ್ರಿ ಹತ್ತಕ್ಕೆ ಶಯನೋತ್ಸವದ ವೈಭವವು
ನೋಡಿದವರೆ ಧನ್ಯರು
ಸಚ್ಚಿದಾನಂದ ಮೂರ್ತಿಯಲ್ಲಿ ಅಲ್ಲಿ ಪ್ರತ್ಯಕ್ಷ
ಭಕ್ತರಿಗೆ ಕಾಣುತಿಹನು   ೫

ಸತ್ಯವಾದಿ ಜಗಕೆ ಪಂಚಭೇದವು ನಿತ್ಯ
ಸರ್ವತ್ರ ತಾರತಮ್ಯಾ
ಸೃಷ್ಟ್ಯಾದಿ ಅಷ್ಟ ಕರ್ತೃತ್ವ ವಿಠ್ಠಲಗುಂಟು
ವಿಠ್ಠಲನೇ ಸರ್ವೋತ್ತಮss
ಹರಿಯು ಸರ್ವೋತ್ತಮ ವಾಯುಜೀವೋತ್ತಮನು
ಮೂಲಗುರು ಮುಖ್ಯ ಪ್ರಾಣಾss
ವರಮಧ್ವಮತವೇ ಮತ ಸಕಲಶ್ರುತಿಸಮ್ಮ ತವು
ಸತ್ಯ ತತ್ವಜ್ಞಾನವುss   ೬

ಅಣುರೇಣು ಪರಿಪೂರ್ಣ ಸರ್ವಗುಣ ಸಂಪನ್ನ
ನಿರ್ದೋಷ ನಿರ್ವಿಕಾರಾss
ಸರ್ವತಂತ್ರ ಸ್ವತಂತ್ರ ಸರ್ವರಂತರ್ಯಾಮಿ
ಸರ್ವಜ್ಞ ಸರ್ವಸ್ವಾಮಿss
ಸಚ್ಚಿದಾನಂದಾತ್ಮಾ ಪೂತಾತ್ಮ ಪರಮಾತ್ಮಾ
ನಿತ್ಯ ತೃಪ್ತನು ಶ್ರೀಹರಿss
ನಿರ್ಗುಣ ನಿರಾಕಾರ ಅಮಿತ ಗುಣ ಆಕಾರ
ತ್ರಿಗುಣ ವರ್ಜಿತ ತ್ರಿಧಾಮಾ   ೭

ಕಾರ್ಯಕಾರಣ ಅಂಶಿ ಅಂಶಾವತಾರ
ಅಂತರ್ಯಾಮಿ ಆದಿ ಇದನುss
ಪ್ರೇರ್ಯ ಪ್ರೇರಕನಾಗಿ ಬಾಧ್ಯ ಬಾಧಕನಾಗಿ
ವ್ಯಾಪ್ಯ ವ್ಯಾಪಕನು ತಾನುss
ಯಾರು ತನ್ನನೇ ನಂಬಿ ಸರ್ವಸ್ವನು ನೀಡಿ
ದಾಸರಾಗುವರೋ ಅವರಾss
ಕ್ಲೇಶಗಳ ಕಳೆದು ಭವಪಾಶ ಬಂಧವ ಬಿಡಿಸಿ
ಶ್ರೀಶ ಕೈಪಿಡಿದು ಪೊರೆವಾss   ೮

ವಿಷ್ಣುಸರ್ವೋತ್ತಮ ತತ್ವದ ಜ್ಞಾನ ಶೂನ್ಯರಿಗೆ
ಬೇಸತ್ತು ಇಲ್ಲಿಗೆ ಬಂದ್ಯಾss
ಭಕ್ತ ಪ್ರಹ್ಲಾದನವತಾರ ರಾಯರು ಇಲ್ಲಿ
ಬಂದದ್ದು ಕೇಳಿ ಬಂದ್ಯಾss
ಮಧ್ವಸಿದ್ದಾಂತ ಪದ್ದತಿಗೆ ಅನುಸರಿಸಿ
ಪೂಜೆಗೊಂಬಲು ಬಂದೆಯಾss
ಮುದ್ದು ಭೂಪತಿ – ವಿಠಲ ಬಿದ್ದಿರುವೆ ಪಾದಕ್ಕೆ
ಉದ್ದಾರಮಾಡೋ ಸ್ವಾಮಿ                                    ೯

ಸಾಕ್ಷಿ

ಚಿತ್ತ ನಿರ್ಮಲರಾಗಿ ಭಕ್ತಿಭಾವದಿ ನಿತ್ಯ
ವಿಠ್ಠಲಾಷ್ಟಕ ಪಠಿಸಲು
ವಿಠ್ಠಲನು ಕೈಪಿಡಿದು ಕಷ್ಟಗಳ ಪರಿಹರಿಸಿ
ಇಷ್ಟಾರ್ಥಗಳ ಕೊಡುವನುss
ಸತ್ಯವೀಮಾತಿದಕೆ ಸಾಕ್ಷಿ ಬೇಕಾದರೆ
ಪ್ರತ್ಯಕ್ಷ ಪಾಂಡುರಂಗಾss
ಕಾವೇರಿ ಶ್ರೀರಂಗ ಕಂಚಿವರದ ರಾಜ
ಗಲಗಲಿಯ ನರಸಿಂಗನೋss   ೧೦

೩೩

ಪುಂಡರೀಕರವರದ ಪಂಢರಿರಾಯನ ಕೇಳವ್ವ ಕೇಳೆ          ಪ

ಗೋಕುಲದೊಳಗೆ ತಾನಿಪ್ಪ
ಮೂರು ಲೋಕಕೆ ತಾನಿಪ್ಪ
ಕೊಳಲಧ್ವನಿಯ ಮಾಡುತಲಿಪ್ಪ ನಮ್ಮ
ತುರುಗಳ ಕಾಯುತಲಿಪ್ಪ   ೧

ವೃಂದಾವನದೊಳು ನಿಂದ
ನಂದನ ಕಂದ ಗೋವಿಂದ
ಕೊಳಲ ಧ್ವನಿ ಬಹು ಚಂದ ಮೂ
ಜಗವ ಪಾಲಿಪ ಮುಕುಂದ   ೨

ಸುರತರುವಿನ ನೆರಳಲ್ಲಿ ಇವನ
ಹೆಗಲಿನ ಮೇಲೆ ಕೊಡಲಿ
ನೆರೆದಿಹ ಗೋಪಿಯರಲ್ಲಿ ಗೋಪಾಲ
ರಾಡುತ ಲೀಲೆಗಳಲ್ಲಿ   ೩

ಕರ್ಪೂರ ವೀಳ್ಯವ ಮೆಲುವ ನಮ್ಮ
ಕಸ್ತೂರಿ ತಿಲಕ ಉಂಗುರವ
ಮುತ್ತಿನ ಓಲೆ ವರ ಚೆಲುವ ವಿಸ್ತರದಿ
ಹದಿನಾಲ್ಕು ಲೋಕ ಪೊರೆವ   ೪

ಹಿಮಕರಚರಣದ ಕರನ ಮೂ
ಜಗ ಪಾಲಿಪ ಕರುಣ
ಅಮರರಿಗೆ ಒಲಿದವನ ನಮ್ಮ
ಪುರಂದರವಿಠ್ಠಲರಾಯನ   ೫

ಪಾಂಡುರಂಗನೆ ಪಾಲಿಸೆನ್ನನು
ಬೇಡಿಕೊಂಬೆನು ವರವ ನೀಡಯ್ಯ ನೀನು          ಪ

ಸಿರಿವಿರಿಂಚ್ಯಾದಿ ಸುರರು ನಿರುತ ನಿನ್ನನ್ನು ಬಿಡರು
ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು
ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ
ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ
ಭೀಮರಥಿಯ ತೀರದಲ್ಲಿ ಮಾಹಾನಂದ ಭರಿತ ನಂದನ ಕಂದ
ಸ್ವಾಮಿ ನಂಬಿದೆ ಅಭಯನ ಕೊಟ್ಟು ವರಗಳನನಿಟ್ಟು
ಪೂರ್ಣಸುಖವನ್ನೆ ಕೊಟ್ಟು
ನಾಮ ಧ್ಯಾನಗಳ ಅನುದಿನ ಮಾಡುವ ಜ್ಞಾನ ಕೊಟ್ಟನಂತಾಸನ
ಧಾಮ ಶ್ವೇತದ್ವೀಪ ವೈಕುಂಠದಲ್ಲೆ ನಿನ ಭಂಟಿರೊಳು
ಸೇರಿಸೊ ವೈಕುಂಠ   ೧

ಬಂದು ಕಂಡೆನು ನಿನ್ನ ಇಂದು ನಾ ಮಾಡ್ಡ ಪುಣ್ಯ
ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ
ಬಂಧ ಪರಿಹರಿಸಿ ಬೇಗದಿಂದ ಉದ್ದರಿಸೋ ಈಗ
ನಂದನ ಕಂದ ರಂಗ ಬಂಧುವೇ ಪಾಂಡುರಂಗ
ನೀರೊಳು ಮಚ್ಛವತಾರನೆ ಕಮಠ ರೂಪನೆ
ವರಹ ವೇಷಧಾರಕನೆ
ನಾರಸಿಂಹನೆ ದೈತ್ಯ ಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ
ಶ್ರೀರಾಮ ಲಂಕಾಧೀಶನ ಕೊಂದಿ ಮಧುರಿಗೆ ಬಂದಿ
ಬೌದ್ದನೆನಿಸುತ್ತ ನಿಂದಿ
ಶೂರ ಕಲ್ಕಿಯೆ ನಿನ್ನ ಮಹಿಮೆಯ
ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ   ೨

ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ
ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ
ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀಕೃಷ್ಣರಾಯ
ಕಷ್ಟಪರಿಹರಿಸು ಗೋಪಾಲಕೃಷ್ಣ ವಿಠ್ಠಲ ಜೀಯ
ನಿಲ್ಲಿಸೆನ್ನಯ ಮನ ನಿನ್ನೊಳು ಭಕ್ತಿ ಗುಣಗಳು
ಪಾಡಲಿ ಹಗಲಿರುಳು
ಒಲ್ಲೆ ನೀನೊಲ್ಲದ ಸುದ್ದಿಯ ದುರ್ಬುದ್ದಿಯ
ಕೊಡದಿರು ವಿಠ್ಠಲಯ್ಯ
ಮಲ್ಲಮರ್ದನ ಲಕುಮಿಯ ಕಾಂತರಂಗ
ಬಲವಂತ ರಕ್ಷಿಸೆನ್ನ ವಸಂತ
ವಲ್ಲಭ ಪುಂಡಲೀಕನ ವರದ ದಾಮೋದರ
ಶ್ರೀದ ಕೈಯ ಮುಗಿವೆ ಸರ್ವದಾ   ೩

ಬಿಟ್ಟ ಕಣ್ಣು ಬೆಟ್ಟ ಸೊಟ್ಟಕೋರೆ ಬಹು
ದುಷ್ಟ ಘೋರರೂಪಿ ನೀನು ಪುಟ್ಟ ಬಾಲ
ದುಷ್ಟ ರಾಜರ ಕೊಂದ ದಿಟ್ಟ ರಾಮನೆ ಕೃಷ್ಣ
ಬಿಟ್ಟ ವಸ್ತ್ರದ ದುಷ್ಟಹನನ ಕಲ್ಕಿ   ೪

ನೀರೊಳಿದ್ದು ಭಾರ ಪೊತ್ತು ಕೋರೆ ತೋರ್ದೆ ಬಹು
ಘೋರಾಕಾರ ಬಾಲರೂಪಿ ಕ್ರೂರ ರಾಮ
ನಾರಿಚೋರನ ಕೊಂದು ಜಾರ ಚೋರಮ ಆಗಿ
ಮೀರಿ ಬತ್ತಲೆ ನಿಂದು ಏರಿ ಕುದುರೆ   ೫

ಕುಟ್ಟಿ ತಮನ ಕೊಟ್ಟು ಅಮೃತ ದಿಟ್ಟ ವರಹ ಹರಿ
ಸಿಟ್ಟು ನಿನಗೆ ಪುಟ್ಟಿ ಭಾರ್ಗವ ಶ್ರೇಷ್ಠ ಶ್ರೀ ರಾಮ
ಕೃಷ್ಣ ಮೂರುತಿ ಬುದ್ದ ಕೆಟ್ಟ ಕಲಿಯ ಗೆದ್ದ
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲ ಈಗ   ೬

೩೫

ಪಾಂಡುರಂಗನೆ ಈಕ್ಷಿಸುವ ಸುಖವೇ ಸಾಕೂ
ಅಪಾರ ಮಹಿಮ ಅನಂತನಾನಂತ ರೂಪನಾ                  ಪ

ಶಶಿ ನಖ ಸಾಲ್ಬೆರಳು ಪರಡು ಜಾನು ಜಂಘೀ
ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠಾ
ಮಿಸಣಿಪ ವದನ ನಾಸ ಕದಪು ಕರ್ಣ ನಯನಾ
ನೊಸಲು ಶಿರ ಜಗವ ಜ್ಯಾಪಿಸಿದ ರಕ್ಕಸ ಹರನಾ   ೧

ಮುಕುಟ ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ
ವಿಕಸಿತ ಕಮಲ ತುಲಸಿಹಾರ ಮುತ್ತಿನ ಸರ ಪ
ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ
ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ   ೨

ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ
ಸತತ ಭಕ್ತರಾಧಾರ ಅಪ್ರಾಕೃತ ಶರೀರ
ಯತಿಗಳ ಮನೋಹರ ಮತಿಗೆ ಅಗೋಚರ
ಪತಿತಪಾವನ ಸಿರಿ ಪ್ರತಿ ವಿಜಯವಿಠಲನಾ   ೩

೩೬

ಯದುಕುಲಕಾಂಬೋಧಿಆಧಿ

ಪಾಂಡುರಂಗ ತ್ವತ್ಪಾದ ಪಾಲಿಸಯ್ಯಾ ಕರುಣದಿ ಪಡಿಕೈಯ್ಯ       ಪ

ಪುಂಢರೀಕಮುನಿವರದ ನಮಿಪೆ ನಿನಗೇ – ನೀ ತ್ವರಿತದಲ್ಲೆನಗೇ                  ಅ

ವನಜಭವಾದಿ ಸಮಸ್ತ ಸುರವ್ರಾತಾ – ವಂದಿತ ಶ್ರೀನಾಥಾ
ಪ್ರಣತಾರ್ಥಾಹರನೆ ಕಾಮಿತಫಲದಾತಾ – ಮುನಿಗಣಸಂಧ್ಯಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ – ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ – ದಯಮಾಡಿ ತ್ವರಿತಾ   ೧

ಸುರಚಿರ ಮಹಿಮನೆ ಭಜಕಾಮರಧೇನೂ – ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ದಾರಾ – ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ – ಕೇಳೆಲೋ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ – ಪೊರೆಯೆಂದು ನುಡಿವೇ   ೨

ಬಂದ ಜನರ ಭವಸಾಗರದ ಪರಿಮಿತಿ – ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ – ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾದಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ – ಅನಾಥ ಬಂಧೋ   ೩

೩೭

ಪಾಲಿಸೋ ಪಂಢರಿಪುರರಾಯಾ ಪಾವನ ಕಾಯಾ           ಪ

ಶ್ಲೋಕ : ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ
ಶರಧಿ ತನಯಲೋಲಾ ಶಕ್ವರೀಕಾರಿ ಫಾಲ
ಶಿರಿ ಅಜಭವ ಮೂಲಾ ಶುದ್ದ ಕಾರಣ್ಯ ಲೀಲಾ
ಪುರಹರ ಸುಖ ಲೀಲಾ ಪಾಹಿ ಗೋಪಾಲ ಬಾಲಾ

ಪದ: ನವ ಜಲಾಧರನಿಭ ಶಾಮಲ ವಪು
ಕೋಮಲ ವೈಜಯಂತಿ ಮಾಲಾ
ರವಿಯಂತೆ ಪೊಳೆವ ಕುಂಡಲ ಹಾರಾ ಧೃತ
ಕೇಯೂರ ಕೌಸ್ತುಭ
ಮಣಿರುಚಿರಾ ದಿವಿ ಭೂ ಪಾತಾಳ
ಲೋಕದಿ ವ್ಯಾಪ್ತಾ ದೋಷ ನಿರ್ಲಿಪ್ತ
ವಿಷಶ್ಚಿತಜನರಾಪ್ತ ಭವವನಧಿಗೆ ಕುಂಭ ಸಂಭವ
ದೇವರ ದೇವಾ ಧರುಮಾದ್ಯರ ಭಾವಾ   ೧

ಶ್ಲೋಕ : ಅಮಿತ ಸುಗುಣಧಾಮ ಆತ್ಮಭೂಪೂರ್ಣ ರಾಮಾ
ಅಮರಕುಲಲಲಾಮ ಅಬ್ಜಧಾಮಾಭಿರಾಮಾ
ಯಮಿಕುಲೋದಧಿ ಸೋಮ ಯಜ್ಞ ಭೃದ್ಯಜ್ಞ ನಾಮಾ
ಸಮರವಲಯ ಭೀಮಾ ಸಾತ್ವತಾಂ ಸಾರ್ವಬೌಮಾ

ಪದ : ದಿತಿಜಮರ್ದನ ದೀನರಕ್ಷಕಾ ಕರ್ಮ ಸಾಕ್ಷಿಕಾ
ಸಂರಕ್ಷಿತ ಸರ್ವ ಲೋಕಾ
ವಿತತ ಮಹಿಮ ವಿಶ್ವನಾಟಕ ವತ್ಪ್ರಘೋಟಕಾ ಶೋ
ಭಿತ ರತ್ನಕಟಕಾ ನುತಿಸುವೆ ನಳಿನ
ಜಾಂಡೋದರಾ ಸರ್ವರಾಧಾರಾ
ಸಂತತ ನಿರ್ವಿಕಾರಾ ಮತಿ ಮಂದನಾಗಿ ನಿನ್ನನು ಬಿಟ್ಟೆ ಮ
ಮತೆಯ ತೊಟ್ಟೆ ಕಾಣೆನೋ ಪುಣ್ಯ ಬಟ್ಟೆ   ೨

ಶ್ಲೋಕ : ಜನನ ಮರಣ ದೂರ ಜಂಗಮಾಚಾರ ವಿಹಾರಾ
ದನುಜವನ ಕುಠಾರಾ ದೀನಮಂದಾರ ಧೀರಾ
ಪ್ರಣತ ಭಯ ವಿಹಾರಾ ಪ್ರಾಕೃತಾತೀತ ಸಾರಾ
ದಿನಪನಿಭ ಶರೀರಾ ದುಃಖವಾರಿಹ ಸಮೀರಾ   ೩

ಪದ : ವನಧಿ ಬಂಧನ ವನೌಕಪನಾಥಾ
ಜಿತಾಸುರಯೂಥ ನಿರ್ಮಲ ಶ್ರುತಿಗಾಥಾ
ಅನುದಿನದಲಿ ನಂಬಿದೆ ನಿನ್ನ ಪಾಲಿಸು
ಎನ್ನ ಸಂತತ ಸಂಪ್ರಸನ್ನಾ
ಮನೋವಾಕ್ಕಾಯದಿ ಮಾಡಿದ ಕ್ರಿಯೆ ನಿನ್ನದು
ಜೀಯ ಕರಣದಿ ಪಿಡಿಕಯ್ಯಾ
ನೆನೆಯೆ ನೀನಲ್ಲದೆ ಅನ್ಯರ ದುರ್ಜನ ದೂರಾ ನಂದ
ಗೋಪಕುಮಾರಾ   ೩

ಶ್ಲೋಕ : ಶಫರ ಕಮಠ ಕೋಲಾ ಶತ್ರುಕಾಶ್ಯಪಿಬಾಲಾ
ನೃಪಕುಲ ಈರವಾಳಾ ನೀಲಕಂಠಾಸ್ತ್ರಕಾಲಾ
ದ್ರುಪದತನಯಪಾಲಾ ದುರವರ್ಜಿತದುಕೂಲಾ
ರಿಪುದಿತಿಸುರ ಬಾಲಾ ರಕ್ತಪದ ಭೇದ ಸಾಲಾ

ಪದ: ಕ್ಷೇತ್ರಜ್ಞಾ ಕ್ಷೇತ್ರನಾಮಕ ಕ್ಷೀರಾಬ್ದಿನಿಜಾಗಾರ
ನಿರ್ಮಲ ಓಂಕಾರಾ
ಮಾತೃ ಪ್ರತಿಪಾದ್ಯ ಸ್ವರೂಪಾ ವರ್ಜಿತ ಪಾಪ
ಗುರುವೆನಿಪ ಸಾಂದೀಪ
ಪುತ್ರನ ತಂದ ಪರಾಕ್ರಮಿ ಎಲ್ಲರ ಸ್ವಾಮಿ
ಪರಮ ಪ್ರೀಯ ಜಾಮಿ
ಭಕ್ತಗೊಲಿದು ವಿಶ್ವರೂಪವಾ ತೋರಿ ಚಾಪವಾ ಕೊಟ್ಟು
ಕಳೆದ್ಮೊ ತಾಪವಾ   ೪

ಶ್ಲೋಕ : ನಗಧರ ನಳಿನಾಕ್ಷ ನಾಕನಾಥದ್ಯ ಪಕ್ಷ
ನೃಗ ನಗಪತಿ ಶಾಪಾ ನಿರ್ವಹಕಾರ ಶ್ರೀಪಾದ
ಭೃಗು ಮುನಿಗೇಯಾ ಭೂತನಾಥ ಸಹಾಯ
ಅಗಣಿತ ಸುಮಹಾತ್ಮ ಸರ್ವ ಜೀವಾಂತರಾತ್ಮಾ

ಪದ : ರಜನೀಶ ಬಿಂಬವನಿಳುಹಿದಾ ಮಾವಕಳುಹಿದ
ಅಹಿತರನಳುಹಿದಾ
ದ್ವಿಜನ ಸಾಹನಾಂತಾಸನ ಪುರವೈದೆ ಸತ್ವರಾ
ತೋರಿದೆ ಸತ್ವುತ್ರರಾ
ಭಜಗಮಾರ್ಗಣ ರವಿನಂದನಾ ಬಿಡೆ ಸ್ಯಂದನಾ
ವ ಒತ್ತಿ ಕುಂತಿನಂದನಾ
ನಿಜಭಾಪುರೆ ಕಾಯ್ದೆ ರಣದೋಳು ಬಾಣನ ತೋಳು
ಖಂಡಿಸಿದ್ಯೊ ಕೃಪಾಳು   ೫

ಶ್ಲೋಕ : ಶುಭತನು ಸುಖತೀರ್ಥಾರಾಧ್ಯ ಸದ್ದಾನಪಾತ್ರಾ
ಇಭವರರಿಪು ಹತಾನ ವಿಶ್ವಜನ್ಮಾವಿಕರ್ತ
ಅಭಯದ ತವಪದಾಂಭೋಜಾತ ಯುಗ್ಮ ಪ್ರಸಾದಾ
ನಭದನುಷಿತ ದೇಹಿ ನಿಶ್ಚಲಾನಂತ ಪಾಹಿ

ಪದ : ವಸುಪತಿಸುತ ನಳಕೂಬರಾ ಮಣಿಗ್ರೀವರಾ
ತರುಜನ್ಮ ವಿದೂರಾ
ವೃಷಭ ಶಕಟ ಬಕಭಂಜನಾ ಜನರಂಜನಾ
ನಿರ್ಗುಣ ನಿರಂಜನಾ
ವಸುದೇವನಿಗೆ ಮಗನಾಗಿದ್ದೆ ಬೆಣ್ಣೆಯ ಕದ್ದೆ
ಗೋಪರೊಡಗೂಡಿ ಮೆದ್ದೆ
ಬಿಸಜಾಂಡವ ವದನದೊಳಂದು ಸಜ್ಜನಬಂಧೂ
ತೋರಿದೆ ದಯಾಸಿಂಧೂ   ೬

ಶ್ಲೋಕ : ಅತಿವಮಲ ಸುಗಾತ್ರ ಅಖಿಲಳೋಕೈಕ ಪಾತ್ರಾ
ಷತತಿಜದಳ ನೇತ್ರಾ ವೃತ್ತ ಹಾದ್ಯ ಮರಮಿತ್ರಾ
ಶ್ರುತಿಕಮಂಜ ಸೂತ್ರಾಸ್ತುತ್ಯ ಪಾವನ ಪವಿತ್ರಾ
ಪ್ರತಿಹಯ ಸುಚರಿತ್ರಾ ಪಾತು ಲಕ್ಷ್ಮೀ ಕಳತ್ರ

ಪದ : ಏಳು – ಘೊಳಿಯ ಗೆದ್ದ ಯದುಪತಿ ಸುಪರಂಜ್ಯೋತಿ
ನಿನ್ನಯ ದಿವ್ಯ ಖ್ಯಾತಿ ಈ
ರೇಳು ಜಗದೊಳು ನುತಿಸೋರು ನಿತ್ಯ
ಸುಖಿಸೋರು ಆನಂದಾಬ್ದಿ ಸದ್ಗತರೋ
ಕೀಳು ಮಾನವ ನಾ ಬಲ್ಲೆನೆ ನಿನ್ನಾ ನಿರುತಾ ಪನ್ನ
ಜನಕ್ಲೇಶ ಭಂಜನಾ
ತಾಳಿದೆ ನರರೋಳು ನರವೇಷಾ ಮಂಜುಳ
ಭಾಷಾ ಎನ್ನಯ ಅಭಿಲಾಷಾ   ೭

ಶ್ಲೋಕ : ವನರುಹಭವತಾತಾ ವೀತ ತನ್ಮಾ ತ್ರಭುತ
ದ್ಯುನದಿ ಜಲವಿಧೂಪ ದಿವ್ಯ ಪಾದಾಂಬುಜಾತಾ
ಅನಿಲತನಯ ಪ್ರೀತಾ ಅತ್ರಿ ಸದ್ವಂಶ ಜಾತಾ
ಅನಿಮಿಷ ಜಯಸೂತಾ ಆನತೇಷ್ಟಪ್ರದಾತಾ

ಪದ : ಕರದಂಡ ಧರ ಕಟಿಸ್ಥಿತಿ ಪಾಣಿ
ಮಂಗಳ ಶ್ರೇಣಿ ಲೋಕೈಕ ಸತ್ರಾಣಿ
ಶರಣು ಹೊಕ್ಕರ ಕಾಯುವ ಛಲದಂಕಾ ಕಾಳಿಂಗನ
ಬಿಂಕಾ ಬಿಡಿಸಿದ್ಯೊ ವಿಷ್ಕಳಂಕಾ
ಮುದ ಶಿಶುಪಾಲ ಧೇನುಕಾಹಂಸಾ ವತ್ಸಾಸುರ ಕಂಸಾ
ದಂತವಕ್ತ್ರದ್ಯರ ಹಿಂಸಾ
ಪರನಾಗಿ ಕೊಟ್ಟೆ ಧಾರಿಣಿಷ್ಟು ಸುಜನರ ಕಷ್ಟಾ
ಬಿಡಿಸಿದೆಯೋ ಜಜಿಷ್ಠಾ   ೮

ಶ್ಲೋಕ : ಹನುಮನತ ಪಾದಬ್ಜಹಂಸ ಸಂವಕ್ತೃ ಕುಬ್ಜಾ
ತನುವಿಕೃತಿ ವಿನಾಶಿತ ಕಾಳಿ ಜಿಹ್ವಾಸುದೇಶ
ದನುಜ ಡಿಬಿಕ ಸಾಲ್ವ ಮತ್ತು ಪೌಂಡ್ರೇಶ್ವರಾಳ್ವ
ಹಮ ವಿದುರವಂದ್ಯ ಹೇಮಗರ್ಭಾಂಡ ವಂದ್ಯ

ಪದ : ಇಟ್ಟಿಗೆ ಪೀಠಸಂಸ್ಥಿತ ಪಾದ ಮಂಗಳಪ್ರದಾ
ಶಾಶ್ವತ ಮೋದ ಸುಪದ
ಕೊಟ್ಟು ಪಾಲಿಸೋ ಅನಿಮಿಷತರು ನಿನ್ನಯ ಚಾರು
ಮೂರುತಿಯನ್ನು ತೋರು
ಪುಟ್ಟಲಾರೆನೋ ಜಗದೊಳು ದಾತಾ ಎನ್ನಯ ಮಾತಾ
ಲಾಲಿಸು ಜಗನ್ನಾಥ
ವಿಠ್ಠಲ ವೃಂದಾರಕರರಸಾ ಸಂತತ ಲೇಸಾ

ನಿನ್ನವರಿಗೀಯೋ ಶ್ರೀಶಾ    ೯