೩೮

ಭೈರವಝಪತಾಲ

ಪುಂಡರೀಕ ವರದಾ ವಿಠ್ಠಲಾ            ಪ

ಚಂದ್ರಭಾಗ ತಟ ಸುಂದರ ಮಂದಿರಾ
ಪಾಂಡುರಂಗ ಶ್ರೀ ಪುರಂದರ ಮಂದಿರಾ
ಅಜಭವಸುರನುತ ತ್ರಿಜಗದೊಡೆಯ ಹರಿ
ವಿಜಯಪದ ಶ್ರೀ ವಿಜಯ ವಿಠ್ಠಲಾ   ೧

ಗೋಪವೇಷಧರ ಗೋಪಕಿಶೋರಾ
ಗೋಪಿ ಮನೋಹರ ಗೋಪಾಲ ವಿಠ್ಠಲಾ
ಜಗದೋದ್ದಾರಾ ನವನೀತ ಚೋರಾ
ಜಗದೀಶಾ ಶ್ರೀ ಜಗನ್ನಾಥ ವಿಠ್ಠಲಾ   ೨

ಭಕ್ತವತ್ಸಲಾ ಭವರೋಗವೈದ್ಯಾ
ಕರುಣಾಸಾಗರ ಪ್ರಾಣೇಶ ವಿಠ್ಠಲಾ
ಧರ್ಮ ಸಂಸ್ಥಾಪಕ ಗೀತೋಪದೇಶಕ
ಪಾರ್ಥಸಾರಥೀ ಶ್ರೀ ಭೂಪತಿ ವಿಠ್ಠಲಾ   ೩

೩೯

ಜೋಗಿಯಾತ್ರಿತಾಲ

ಪೋಗಿ ಬರುವೆ ನಾ ಪಂಢರಿರಾಯ
ಶ್ರೀ ಗೋವಿಂದನೆ ನೀಢೋ ಅಭಯಾ  ಪ

ಮೊಲೆಯ ಕೂಸು ನಾ ಸಲುಹು ನೀ ತಾಯಿ
ಎಳೆಯ ಕರುವನಾ ತೊರೆಬಿಡು ತಾಯಿ   ೧

ಮೂಢ ಅನಾಥಾ ಅಪರಾಧಿಯ ನಾ
ಕಡು ದಯಾನಿಧಿ ಸಲಹೋ ಎನ್ನಾ   ೨

ಎನ್ನ ಹೃದಯವನು ನಿರ್ಮಲ ಮಾಡು
ಭೂಪತಿ ವಿಠ್ಠಲ ಅಲ್ಲೆ ಕುಳಿತು ಬಿಡು   ೩

೪೦

ಪ್ರಥಮ ದೈವವೇ ಪಂಡರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ತೋರೊ               ಪ

ಸಕಲಭಯನಾಶ ಸಾತ್ವಿಕ ಮೂರುತಿ
ಭಕ್ತಜನಪೋಷಕ ನೀನಲ್ಲವೆ
ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ   ೧

ಸರ್ವರಂತರಿಯಾ ಸಿದ್ದ ಫಲದಾಯಕ
ಸರ್ವರಲಿ ಸ್ವಾವಿಯೆಂದೆನಿಪ
ಸರ್ವವಿಘೋಪಶಾಂತ ವೇದಾಂತನೆ
ಗೀರ್ವಾಣ ಮುನಿಸುತ ಗಿರಿಧರ ದೇವಾ   ೨

ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಠಲರೇಯಾ ನೀನು
ಈ ಜಗದೊಳು ಭೀಮಾತೀರನಿವಾಸಾ   ೩

೪೧

ಯಮನತ್ರಿತಾಲ

ಪ್ರತಿ ಮನೆಯೊಳು ಶ್ರೀ ತುಲಸಿ ವೃಂದಾವನ ಬೇಕು
ಪ್ರತಿ ಮನೆಯೊಳು ಗೋಮಾತೆಯ ಸಂರಕ್ಷಿಸಬೇಕು
ಪ್ರತಿದಿನ ಮನೆಯೊಳು ಗೀತಾಪಾರಾಯಣ ಬೇಕು
ಅತಿ ಪ್ರೀತಿಯು ಶ್ರೀಹರಿಗೆ ಈ ಸೇವೆಯು ಸಾಕು   ೧

ಉತ್ಥಾನ ದ್ವಾದಶಿ ದಿನ ತುಲಸಿಯ ಲಗ್ನವನು
ಅತಿ ಸಂಬ್ರಮದಲ್ಲಿ ಮಾಡಿ ಪಡೆಯಿರಿ ಸೌಖ್ಯವನು
ರಾಧಾದಾಮೋದರನೆ ಅಪ್ರಾಕೃತ ವರನು
ತಿಳಿಯಿರಿ ಕೃಷ್ಣನ ಲೀಲಾ ಮಹಿಮೆಯ ಮರ್ಮವನು   ೨

ಇಂದ್ರಾದ್ಯಮ ಪ್ರಾರ್ಥಿತ ಸುಂದರ ಶುಭಕಾಯಾ
ವೃಂದಾವನ ಪ್ರಿಯಸ್ವಾಮಿನ ತಿಳಿಯದು ತವಮಾಯಾ
ಪೊಂದಿದೆ ನಿನ್ನಯ ಪಾದದ್ವಯ ಪಂಢರಿರಾಯಾ
ವಂದೇ ಭೂಪತಿ ವಿಠ್ಠಲನ ನೀಡೈ ನಮಗಭಯಾ   ೩

೪೨

ವಸಂತಧ್ರುವ

ಬಂದೆನೊ ಎಲೆ ಹರಿಯೆ ಪಂಢರಿಪುರಿಧೊರಿಯೆ
ಇಂದೆನ್ನ ಪಾಲಿಸೊ ಬಿನ್ನಪವ ಲಾಲಿಸೋ
ಮಂದನು ನಾನಯ್ಯಾ ಮಹಾತ್ಮ ನೀನಯ್ಯಾ
ಮಂದಾಕಿನಿ ಜನಕ ಲಿಂಗ ಭಂಗದ ತನಕ
ಒಂದು ಸಾಧನ ಕಾಣೊ ನಿನ್ನ ಸ್ಮರಣೆ ಮಾಣೆ
ಬಂಧು ಬಳಗ ನೀನೆ ಭಕ್ತಾರಮರಧೇನು
ಎಂದೆಂದಿಗೆ ನಿನ್ನ ಪಾಡಿದವಗೆ ಬನ್ನಾ
ಪೊಂದಪ್ಪವೆಂದು ಪ್ರತಿದಿನದಲಿ ನಿಂದು
ವೃಂದಾರಕ ವೃಂದ ಪೊಗಳೀದರಾನಂದ
ನಂದನಾಗಿ ಕೇಳಿ ಘನಸಂತಸ ತಾಳಿ
ಬಂದಿನೊ ಎಲೊ ಹರಿಯೆ ಪಂಢರಿಪುರಿ ಧೊರಿಯೆ
ಬಿಂದು ಮಾತುರ ಪುಣ್ಯ ಇಲ್ಲವೊ ಕಾರಣ್ಯ
ಸಿಂಧು ಪುಂಡರೀಕವರದ ನಿಷ್ಕಳಂಕ
ಚಂದಿರ ಭಾಗ ಭೀಮಾತೀರ ಗೋವಗಾ
ನಂದ ವಿಗ್ರಹ ವಿಜಯವಿಠಲ ಮುನಿಗೇಯ
ವಂದಿಸುವೆನು ನಾರಂದಮುನಿ ಹೃದ್ಬಾನು   ೧

ಮಟ್ಟ

ದೋಷಿ ಮಾನವರಿಗೆ ದಯಮಾಡುವೆನೆಂದು
ದೇಶದೊಳಗೆ ನಿನ್ನ ಕೀರ್ತಿ ವ್ಯಾಪಿಸಿ ಇಪ್ಪದು
ದೋಷ ವಿದೂರ ದುರ್ಜನದೂರ
ದೋಷ ಭಾವಗಳೆಲ್ಲ ನರರಂತೆ ಕೈಕೊಂಡು
ದೋಷಿ ಜನರ ಸಂಗಡ ಮಾಡಿ ಅವರ ಪಾಪ
ಲೇಶ ಉಳಿಯದಂತೆ ಅಪಹರಿಸಿದೆ ದೇವ
ಲೇಸು ನಿನ್ನ ಮಹಿಮೆ ಪೊಗಳಲು ಅತಿ ಚಿತ್ರಾ
ಏಸು ಬಗೆಯಿಂದ ಒಲಿಸಿದ ಕಾಲಕ್ಕು
ಆಶೆ ತೀರದು ಕಾಣೊ ಅನಿಮಿತ್ಯ ಬಂಧು
ವಾಸ ಪಂಢರಪುರಿ ವಿಜಯವಿಠಲ ಗೋವ
ಳೇಶ ಇಟ್ಟಗಿ ಮೇಲೆ ನಿಂದ ಮುಕ್ಕಂದ   ೨

ತ್ರಿವಿಡಿ

ದೇವರೆಂಬುವರೆಲ್ಲ ನಿನ್ನ ತರುವಾಯ
ಆವಾವ ದೇಶದಲ್ಲಿ ನೋಡಿದರು
ಕಾವ ನೀತಿಯಲ್ಲಿ ಕೊಡುವಲ್ಲಿ ಕೊಂಬಲ್ಲಿ
ಭೂವಲಯದಲ್ಲಿ ಸರಿಗಾಣೆನೋ
ಪಾವನ್ನ ಮೂರ್ತಿಯೆ ನಿನ್ನ ನಂಬಿದೆ ಇನ್ನಾವ
ದೈವದಗಳನ್ನು ಸ್ತುತಿಸಲರಿಯೆ
ಪೂವಿನೊಳಗೆ ಇಟ್ಟು ನಮ್ಮನ ಸಲಹುವ
ಗೋವರ್ಧನುದ್ಧರಣ ಕಲಿಹರಣ
ಭಾವೆ ವಂದನೆ ಕೇಳೊ ನಿರ್ವಿಘ್ನದಾಯಕನೆ
ದೇವನಂದನ ಪಂಢರಪುರಿರಾಯನೆ
ಶ್ರೀವತ್ಸಲಾಂಛನ ವಿಜಯವಿಠಲ ಎನ್ನ
ಜೀವನೋಪಾಯವೇ ಜೀವ ಜೀವೇಶಾ   ೩

ಅಟ್ಟ

ಹೂಣ, ಪುಳಿಂದ, ಪಲ್ಕಸ, ಕುಂಕ, ಕಿರಾತ
ಕಾಣ, ಅಭೀರ, ಯವನ, ನಾನಾ ವಿಜಾತಿ
ಯೋನಿ ಜನರಿಗೆ ನೀನೆ ಒಲಿದಂತೆ ಕರುಣಾಳೆ
ನಾನಂತು ವೈಷ್ಣವ ಸತ್ಕುಲ ಪ್ರಸೂತ
ಆನಂದತೀರ್ಥರ ಮತದಲ್ಲಿ ಪೊಂದಿಪ್ಪೆ
ಏನಾದರವಗುಣ ಇದ್ದರಾದಡೆ ನೀನೆ
ಎಣಿಸಾದೆ ಎನ್ನ ಪಾಲಿಸು ಪರದೈವ
ಕಾಣಿ ಮಿಕ್ಕಾ ದ್ರವ್ಯದಿಂದ ನಿನ್ನಂಘ್ರಿ
ಮಾನಸದಲಿ ಪೂಜೆ ಮಾಡಲಿಲ್ಲ ಪ್ರಭುವೆ
ಮಾನಿಸವೇಷನೆ ವಿಜಯವಿಠಲರೇಯಾ
ಜ್ಞಾನವಕೊಡುವೆ ಮಹಭಾಗ್ಯವ ಕೊಡುವೆ   ೪

ಆದಿ

ನಿನ್ನ ನುಡಿದೆ ನಾನು ನಿನ್ನ ಪಾಡಿದೆ ನಾನು ನಿನ್ನ ಕಾಡಿದೆ ನಾನು
ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು
ಅನಂತ ಬಗೆಯಿಂದ ಕೊಂಡಾಡುವೆನೊ ವಿಠಲಾ
ಎನ್ನಭಾರ ನಿನ್ನದು ಕ್ಷಣ ಅನಂತ ಕ್ಷಣಕ್ಕೆ
ಮುನ್ನೆ ಪೇಳುವದೆಲ್ಲಾ ಉಪಚಾರವೊ ಸ್ವಾಮಿ
ಘನ್ನ ಪಂಢರಿರಾಯ ವಿಜಯವಿಠಲರೇಯಾ
ರನ್ನ ಪ್ರಸನ್ನ ಸಂಪನ್ನ ಮತಿಯ ಕೊಡು   ೫

ಜತೆ

ಮನೋರಥ ಸಿದ್ಧ ಮಾಡಯ್ಯ ಮನ್ಮಥನಯ್ಯಾ
ಅನುಭವದಿಂದಲಿ ವಿಜಯವಿಠಲ ಪಂಢರಿ   ೬

೪೩

ಬಂದಾ ನೋಡೇ – ವಿಠಲಾ ಮನಗೇ
ಬಂದಾ ನೋಡೇ – ವಿಠಲಾ  ಪ

ನಂದನ ಕಂದನ ಯಶೋದೆಯಾನಂದ ಅರ
ವಿಂದ ನಯನ ಗೋವಿಂದ ಮುಕುಂದನು|| ಅ.ಪ ||

ಇಂದುಭಾಗದಿ ವಾಸಾ ಧೂರ್ಜಟಿ
ಇಂದು ಮೌಳಿಯ ಪೋಷಾ
ತಂದೆ ಸೇವಕ ಭಕ್ತ ನಿಂದಿರೆ ಪೇಳಲು
ಅಂದ ಇಟಗಿ ಮೇಲೆ ನಿಂದ ಆನಂದದಿ   ೧

ಪಂಢರಪುರೆಯಲ್ಲಿಹ ತನ್ನಯ
ತೊಂಡ ಜನರ ದೋಷ ಆಹ
ಪಾಂಡವ ಪ್ರಿಯ ಪದ ಬಂಡುಣಿಯೆನಿಸಿಹ
ಪುಂಡಲೀಕನಿಗೊಲಿಯೆ ಗೊಂಡು ಮಾನುಷ ವೇಷ   ೨

ಕುಂಡಗೋಳಕರ ಸಖ ಅವರ್ಗಳ
ದಿಂಡುಗಳ ಪೋಷಕ ಆಹ
ಭಾಂಡಕಾರಕ ಮಣ್ಣು ಉಂಡು ಒಡವೆಗಳ
ಗೊಂಡು ಅವನ ಕಾಯ್ದ ಪುಂಡರೀಕಾಕ್ಷ ಶ್ರೀಶ   ೩

ಗೊಂಡು ಮತ್ಸ್ಯದ ಕಾಯ ಬೆನ್ನಲಿ
ಅಂಡ ಪೊತ್ತಿಹ ರಾಯ
ಭೂ-ಮಂಡಲ ಪೊತ್ತೆ ದಾಡೆ ತೊಂಡ ಪ್ರಹ್ಲಾದ ವರದ
ದಂಡ ಕಮಂಡಲಜಿನ ಭಂಡ ಕ್ಷತ್ರಿಯಮರ‍್ದನನ   ೪

ಹೆಂಡತಿಗಾಗಿ ತಿರುಗಿ ಕಾನನ
ಕೌರವರಸು ನೀಗಿ ಆಹ
ಶೌಂಡನು ತ್ರಿಪುರರ ಹೆಂಡರ ವಂಚಿಸುತು
ದ್ದಂಡ ಹಯವನೇರಿ ರುಂಡ ಮ್ಲೇಂಛರ ತರಿದೆ   ೫

ಮಕರ ಕುಂಡಲಿಧಾರೀ ಶೋಭಿತ
ಪ್ರಖರ ಕಿರೀಟ ಮೌಳೀ
ವಿಖನಸಾಂಡಧಿಪ ವಿಕಸಿತ ಕೌಸ್ತುಭ
ಪ್ರಕಟ ಕೊರಳ ಮಾಲೆ ನಿಕಟ ಶ್ರೀವತ್ಸಕೆ   ೬

ಕೊರಳೊಳು ವೈಜಯಂತೀ ರೂಪದಿ
ಶಿರಿಯೇ ಶೋಭಿತ ಕಾಂತೀ
ಧರಸಿಹ ತುಳಸಿಯ ಪರಿಪರಿ ವನಮಾಲೆ
ಬೆರಳೊಳು ಉಂಗುರ ವರ ರತ್ನ ಖಚಿತವು   ೭

ಗೆಜ್ಜೆ ಸರಪಳಿ ಸುಂದರ ಸೊಂಟವು
ಗೆಜ್ಜೆ ಕಾಲಲಿ ನೂಪುರ
ಕಜ್ಜಲ ಕಂಗಳು ಗೆಜ್ಜೆ ನಾದದಿ ಒಪ್ಪು
ಬೊಜ್ಜೇಲಿ ಬ್ರಹ್ಮಾಂಡ ಸಜ್ಜುಗೊಳಿಸಿ ಇಹ   ೮

ಚಕ್ತಶಂಖವು ಶೋಭಿತ ಕೈಗಳು
ನಕ್ರ ಹರಗೆ ಕಟಿತಟ
ವಕ್ರ ಮನದವರ ಸೊಕ್ಕನು ಮುರಿಯುತ
ಅಕ್ಕರ ಭಜಿಪರ ಸಿಕ್ಕನು ಬಿಡಿಸುವ     ೯

ಮಾಸ ಮಾಗಶೀರ್ಷವು ನವಮಿ ತಿಥಿ
ಆಸಿತ ತಾರೆಯ ಚಿತ್ತವು
ವಾಸರ ಭಾರ್ಗವು ನಿಶಿಯೋಳ್ನಗುತ ಪ್ರ
ವೇಶಿಸಿದನು ಗೃಹ ವಾಸವಾನುಜ ಶ್ರೀಶ   ೧೦

ಭಾವುಕರ ಪರಿಪಾಲ ಬಂಡಿಯ
ಬೋವನಿದ್ದ ಸುಶೀಲ ಆಹಾ
ದೇವಾದಿ ದೇವನು ಮಾವಿನೋದಿಯ ಗುರು
ಗೋವಿಂದ ವಿಠಲನು ತೀವ್ರ ಫಲಪ್ರದ   ೧೧

೪೪

ಶುದ್ಧ ಸಾರಂಗಭಜನಿಠೇಕಾ

ಬಂದಾನು ಪಾಂಡುರಂಗಾ ವಿಠಲರಾಯಾ
ವೈಭವದಿಂದ ಬಂದಾ ಗಲಗಲಿಗೆಂದು  ಪ

ಒಂದೇ ಮನದಿ ಆನಂದದಿಂದ ಭಜಿಪ ಭಕ್ತರ ಪೊರೆಯಲು
ಗುರುಸಾರ್ವಭೌಮನು ಐರಾವತದ ಮೇಲೆ
ಸಿರಿಸಹಿತ ಹರಿಯನ್ನು ಕರೆದುಕೊಂಡು ಬಂದಾ
ಪುಂಡಲೀಕವರದ ಪಾಂಡುರಂಗ ಬಂದಾ   ೧

ಪ್ರಹ್ಲಾದ ವರದ ನರಸಿಂಗನ ಕ್ಷೇತ್ರಕೆ
ವಿಷ್ಣು ಭಕ್ತರಿಗೆಲ್ಲಾ ಇಷ್ಟ ದೇವರು ನಮ್ಮ
ಇಟ್ಟಂಗಿ ಮೇಲ್ನಿಂತ ವಿಠ್ಠಲರಾಯನು   ೨

ಎಡ ಭಾಗದಲ್ಲಿ ತನ್ನ ಮಡದಿಯಿಂದೊಡಗೂಡಿ
ಸಡಗರದಲಿ ಬಂದು ಬಡಭಕ್ತರೂರಿಗೆ
ಗುರ್ವಂತರ್ಗಗತ ಭಾರತಿ ರಮಣ ಸರಿಸಹಿತ
ಭೂಪತಿ ವಿಠ್ಠಲ ಬಂದನು   ೩

೪೫

ದೇಶಏಕತಾಲ

ಬಂದ್ಯಾ ವಿಠ್ಠಲ ಆನಂದವಾಯಿತು ನಂದಕಂದ
ಗೋವಿಂದ ಮುಕುಂದಾಪ

ಹಿಂದಿನ ಹಿರಿಯರ ಪುಣ್ಯ ಫಲಿಸಿತು
ಮುಂದಿನವರಿಗೆ ಅಭ್ಯುದಯವಾಯಿತು
ತಂದೆ ತಾಯಿ ಬಂಧು ಬಳಗವು ನೀನೇ
ಪುಂಡರೀಕ ವರದ ಪಂಡರಿರಾಯಾ   ೧

ಪತಿತ ಪಾವನ ಪಾದ ಶತಕೋಟಿ ರವಿತೇಜ
ಟೊಂಕದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಾ
ಸತ್ಯ ಸಂಕಲ್ಪ ನೀ ನಿತ್ಯ ತೃಪ್ತನು ನಿನ್ನ
ಭಕ್ತ ವಾತ್ಸಲ್ಯಕ್ಕೆ ಮಿತಿಯಿಲ್ಲವಯ್ಯಾ   ೨

ಇನ್ನು ಎನ್ನಯ ಬಂಧವು ತೀರಿತು
ಮುನ್ನ ಬರುವ ಕ್ಲೇಶವು ದೂರಾಯಿತು
ಧನ್ಯನಾದೆ ನರಜನ್ಮ ಸಾರ್ಥಕವಾಯ್ತು ಪ್ರ
ಸನ್ನ ಭೂಪತಿ ವಿಠ್ಠಲ ರುಕ್ಮಿಣಿ ರಮಣಾ   ೩

೪೬

ಹಿಂಡೋಲಭಜನಿಠೇಕಾ

ಬಾರೋ ಪಾಂಡುರಂಗಾ ಕೆಂಹ್ವಾ ಭೇಟ್ಟಿ ದೇಗಿ
ಚಂದ್ರಭಾಗ ವಾಸಿ ಭಕ್ತ ಜನ ಪೋಷಿಪ

ಆಹ್ಮೀ ಭಕ್ತಜನ ಆಲೋ ಪಂಢರಿಲಾ
ಗೋಪಾಲಬಾಲಾ ತವದರ್ಶನಾಲಾ   ೧

ದೇಹಿ ದರುಶನ ರುಕ್ಮಿಣಿ ರಮಣಾ
ತೋರೊ ತವಚರಣಾ ಕರುಣಾಪೂರ್ಣಾ   ೨

ಪುರಂದರ ವಿಠ್ಠಲಾ ಪಹಾ ಭಖ್ತ ಆಲಾ
ಆಲಿಂಗನ ತುಜಲಾ ಭೂಪತಿ ವಿಠ್ಠಲಾಲಾ   ೩

೪೭

ಬಿಟ್ಹ್ಯಾಗೆ ಇರಲಿನ್ನೀ ಚರಣ ರಂಗ     ಪ

ವಿಠ್ಠಲನಾ ಪುಟ್ಟಿ ಚರಣ
ಬಿಟ್ಟು ಗೋಕುಲ ಪುಂಡರೀಕನಿಗೊಲಿಯುತ
ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ|| ಅ.ಪ ||

ಭಕ್ತರಿಗೊಲಿಯುವ ಚರಣಾ ವೇದ
ಉಕ್ತಿಗೆ ನಿಲುಕದ ಚರಣಾ
ಹತ್ತಿ ಪಾರ್ಥನ ರಥ ಮತ್ತೆ ಭೀಷ್ಮನಿಗೊಲಿದ
ಹಸ್ತದಿ ಚಕ್ರವ ಪಿಡಿದು ಬಂದಾ ಚರಣ   ೧

ಬಲಿಯನ್ನು ತುಳಿದಂಥ ಚರಣಾ ಮೂರು
ಇಳೆಯನಳೆದ ಪುಟ್ಟ ಚರಣ
ಕುಲಕೋಟಿ ಉದ್ಧಾರಗೈವಂಥ ಗಂಗೆಯ
ಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ   ೨

ಹಸ್ತಿ ಕರೆಯೆ ಬಂದ ಚರಣಾ ಲಕ್ಷ್ಮಿ
ಒತ್ತುವೋ ಮೃದತಳ ಚರಣಾ
ಚಿತ್ತದೆ ಚಿಂತಿಪ ಭಕ್ತರ ಮನದೈವ
ತೆತ್ತಿಗನಾಗಿ ಐವರ ಪೊರೆದಾ ಚರಣ   ೩

ಭೀಮ ತೀರಾವಾಸ ಚರಣಾ ಭಕ್ತ
ರಾಮಯ ಹರಿಸುವ ಚರಣಾ
ಕಾಮಜನಕ ಪಾಂಡುರಂಗವಿಠ್ಠಲನೆಂದು
ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣಾ   ೪

ಬಿಟ್ಟಿರಲಾರೆ ನೀ ಚರಣ ಮನದಿ
ಕಟ್ಟಿ ಹಾಕೂವೆ ನಾ ನೀ ಚರಣ
ದಿಟ್ಟ ಶ್ರೀ ಗೋಪಾಲಕೃಷ್ಣ ವಿಠ್ಠಲ ಚರಣ
ಇಟ್ಟು ಹೃತ್ಯಮಲದಿ ಪೂಜಿಪೆ ನೀ ಚರಣ   ೫