೫೪

ವಾಯುಸುತನ ತಂದು ಪೂಜಿಪ ತಂದೆ ಮುದ್ದು
ಮೋಹನ ವಿಠ್ಠಲದಾಸರಿಗೆರಗಿ
ಪ್ರೇಮದಿಂದ ಉರಗಾದ್ರಿವಾಸ ವಿ –
ಠ್ಠಲದಾಸರ ಪಾದಕೊಂದಿಸುತ   ೧

ಇಂದಿರೇಶನನು ಚಂದದಿ ಪೂಜಿಸಿ
ಮಂದಮತಿಗಳನುದ್ಧರಿಪ
ತಂದೆ ವೆಂಕಟೇಶ ವಿಠಲದಾಸರಿ –
ಗೊಂದಿಸಿ ಬೇಡುವೆನನವರದ   ೨

ಕಲಿಯುಗದಲಿ ಹರಿಲೀಲೆ ಪೊಗಳಲು
ಸುಲಭ ಮಾರ್ಗವನು ತೋರಿರುವ
ಪವನಾಂತರ್ಗತ ಕಮಲನಾಭ ವಿ-
ಠ್ಠಲನ ಪ್ರಾರ್ಥಿಸುತಲನುದಿನವು   ೩

ವರಗಣಪತಿ ನಿನ್ನ ಚರಣಕೆ ನಮಿಸುವೆ
ಕರುಣದಿ ವರಗಳ ಕರುಣೆಸೆಂದೆನುತಪ

ಇನಕುಲತಿಲಕನು ವನಧಿಯ ಬಂಧಿಸೆ
ಘನಮಹಿಮನು ನಿನ್ನ ಒಲಿಸಿದೆನೆನುತ   ೧

ಪಾಂಡುನಂದನ ನಿನ್ನ ಛಂದದಿ ಸ್ತುತಿಸಲು
ಛಂದದ ವರಗಳ ಅಂದು ನೀಡಿದನೆ   ೨

ಕಮಲನಾಭ ವಿಠ್ಠಲನೊಲಿದ ಸಚ್ಚರಿತ್ರವ
ಸುಲಭದಿ ನೀ ನುಡಿಯ್ಯ ಸಮಿಸುವೆ ನಿನಗೆ   ೩

ಆರ್ಯ

ಒಂದಾನೊಂದಿನ ಪಂಢರಿಪುರದಲಿ
ಇಂದುಮುಖಿಯೊರ್ವಳು ತಾನು
ಕುಂದರಿಲ್ಲದಲೆ ತವಕಿಸುತಲಿ ಗೋ –
ವಿಂದನ ಮುದದಿಂದ ಪ್ರಾರ್ಥಿಪಳು

ಬಾಲಗೋಪಾಲ ಸುಶೀಲ ಸಜ್ಜನ ಪಾಲಪ

ಶ್ರೀಲೋಲ ಗುಣಶೀಲ ಶ್ರೀ ತುಳಸಿಯ ಮಾಲ
ಶ್ರೀ ಲಕುಮಿಯ ಲೋಲ ಬಾಲ ಸುರಮುನಿ ಪಾಲ|| ಅ.ಪ ||

ಕುಂದರಿಲ್ಲದ ಬಹುನಿಂದ್ಯದ ಜನುಮವ
ಪೊಂದಿದೆ ವ್ಯರ್ಥದಿ ಇಂದಿರೆ ರಮಣನೆ   ೧

ಬಾಲಲೀಲೆಗಳಿಂದ ಬಾಲ ಹಾಡುತಲಿರೆ
ಲಾಲಿಸಿ ಹರುಷಿನ ಕಾಲ ಕಾಣೆನೊ ದೇವ   ೨

ಅಂಬೆಗಾಲಿಕ್ಕುತ ಕಂದರಾಡುತ ಬರೆ
ಚಂದದಿಂದೆತ್ತುವಾನಂದವಿಲ್ಲವೋ ದೇವ   ೩

ಕಡಗ ಗಗ್ಗರಿಗೆಜ್ಜೆ ಘಲುರೆಂಬೊನಾದವ
ಧ್ವನಿ ಕೇಳದ್ಹೋದ ಈ ಕಿವಿಗಳು ವ್ಯರ್ಥವು   ೪

ಪಾಂಡುರಂಗನೆ ನಿನ್ನ ನಂಬಿ ನಾ ಸ್ತುತಿಸುವೆ
ನಿಂದೆಯ ಕಳದೆನ್ನ ಚಂದದಿಂ ಪಾಲಿಸೊ   ೫

ಶ್ರೀಶ ಶ್ರೀಮಾಧವ ಕೂಸಿನ ಪಾಲಿಸಿ
ದಾಸಿಯ ಮನದಾಸೆ ನೀ ಸಲಿಸ್ಯೆ ದೇವ   ೬

ಬಾಲಕನದಾರೆ ಆಳನು ಮಾಡುವೆ
ಬಾಲಕಿಯಾದರೆ ಧಾರೆಯನೆರೆಯುವೆ   ೭

ಸಾಸಿರ ನಾಮನೆ ಭೂಸುರ ಪಾಲನೆ
ಕ್ಲೇಶ ನಾಶಕ ಕೃಷ್ಣ ನಾಸಿರಬಾಗುವೆ   ೮

ಕಮಲನಾಭ ವಿಠ್ಠಲ ನಮಿಸಿ ಬೇಡುವೆ ನಿನ್ನ
ಶ್ರಮವ ಪರಿಹರಿಸೆನ್ನ ಭ್ರಮೆಯ ತಪ್ಪಿಸೊ ದೇವ೯

ಭಾಮಿನಿ ಷಟ್ಟದಿ

ಕಂದರಾಡುತ ಬರಲು ಮೋದದಿ
ಚಂದದಿಂ ಮುದ್ಧಿಸುತ ಹರುಷದಿ
ಅಂದವಾಗಿಹ ಮುಖವ ನೋಡುವ ಭಾಗ್ಯವಿಲ್ಲೆನಗೆ
ಅಂದಿಗೆ ಕಾಲ್ಗೆಜ್ಜೆ ಘಲುರೆನೆ
ಮಂದಹಾಸಿದಿ ಬರುವ ಶ್ರೀಹರಿ
ಅಂದತೋರುವ ಪುತ್ರರಿಲ್ಲದ ಜನ್ಮವಿದು ವ್ಯರ್ಥ

ಆರ್ಯ

ಈ ಪರಿ ಬಳಲುತ ಪ್ರಾರ್ಥಿಪ ಬಲೆಯ
ಆ ಪರಮಾತ್ಮನು ನೋಡುತಲಿ
ಶ್ರೀಪತಿ ದಯ ಮಾಡಿತ್ತನು ವರವನು
ಆ ತರುಣಿಯು ಹರುಷವ ತಾಳಿ
ನೋಡಿ ಮಾಯವ ಪಾಂಡುರಂಗ ಆಡಿದಾಟವ
ಆಡಿಪಾಡಿ ಪೊಗಳುವರಿಗೆ ಬೇಡಿದಿಷ್ಟ ಕೋಡುತಲಿಹನುಪ

ಸೋಸಿನಿಂದ ಬಂದನಾಗ
ಮಾಸ ಮೂರರಲ್ಲಿ ಹರಿಯು
ಆ ಸತಿಯಳ ಮಂದಿರದಿ ಉ-
ಲ್ಲಾಸದಿಂದ ಮೆರೆಯುತಿಹನು   ೧

ವಾವೆ ವರಸ ಇಲ್ಲದ್ಹರಿಯು
ಮಾಮಿ ಮಾಮಿ ಎಂದು ಬಂದು
ಕಾಮಿನಿಯಳ ಮನ ಭಾವ
ಸ್ವಾಮಿ ತಿಳಿದು ನಿಂದನಾಗ   ೨

ಮಾರಜನಕ ಮನ ಹರುಷದಿ
ಆರು ಮಾಸದಲ್ಲಿ ತ್ವರದಿ
ಮಾರಮಣನ ವರ ಎಚ್ಚರದಿ
ಸಾರುತಿಹೆನು ಸಲಿಸು ಮುದದಿ   ೩

ಶ್ರೀ ರಮೇಶ ಬಿಡದೆ ತಿರುಗೆ
ಮೂರು ಮೂರು ಮಾಸವಾಗೆ
ಸಾರಿ ಪೇಳಿ ನುಡಿದ ಹೀಗೆ
ಭಾರಿ ವರವ ಸಲಿಸು ಕೊನೆಗೆ   ೪

ಸರಸಿಜಾಕ್ಷ ಬಂದು ತನ್ನ
ಸರಿಯ ಗೆಳೆಯರಂತೆ ಇರಲು
ಕಮಲನಾಭ ವಿಠ್ಠಲನೆಂದು
ಕಮಲ ಮುಖಿಯ ತಿಳಿಯದಿರಲು   ೫

ಆರ್ಯ

ಮಧುಸೂದನ ಈ ಪರಿ ಕ್ರೀಡಿಸುತಿರೆ
ಸುದತಿ ಮಣಿಯ ಶುಭಲಗ್ನದಲಿ
ಪಡೆದಳು ಶಿಶುರತ್ನವನೆಂದೆನುತಲಿ
ಸಡಗರದಲ್ಲಿ ಬಂದನು ಹರಿಯು

ಮಾತನಾಡ ಬಂದ ಗೋವಿಂದ
ಮಾತನಾಡಿ ಬಂದಪ

ಮಾತರಿಶ್ವಪ್ರೀಯ ಮಾತುಳಾಂತಕ ಹರಿ
ಸೋತನೊ ಭಕ್ತರ ಪ್ರೀತಿಗೆನ್ನುವ ಹರಿ|| ಅ.ಪ ||

ಸುಂದರಾಂಗ ಅರವಿಂದ ಮುಕುಂದನು
ಒಂದು ತಿಂಗಳಲಿ ಬಂದು
ಸುಂದರಿ ಕೊಡು ನಿನ್ನ ಛಂದದ ಶಿಶುವೆನೆ
ನಿಂದರೆ ಕೊರಳು ಚಂದದಲಿ ಕೊಡುವೆ ನೆನೆ   ೧

ಕೆಲವು ದಿನವು ಕಳೆಯಲು ಕಮಲಾಕ್ಷನು
ಕಳುಹಿ ಕೊಡೆಲೆ ಶಿಶುವೆಂದ
ನಳಿನಾಕ್ಷಿಯು ನುಡಿದಳು ಶ್ರೀಕೃಷ್ಣಗೆ
ಕುಳಿತಾಡುವ ಹರುಷವ ನೋಡುವೆನೆನೆ   ೨

ಖಗವರವಾಹನ ಅಗಣಿತ ಮಹಿಮನು
ಮಗುವನು ಕೇಳಲು ಬಂದ
ನಗರಧರನಿಗೆ ವಂದಿಸುತಲಿ ನುಡಿದಳು
ಬಗೆ ಬಗೆ ಆಟವ ನೋಡುವೆನೆನುತಲಿ   ೩

ಕಡಲಶಯನ ಹರಿ ಸಡಗರದಿಂದಲಿ
ಗಡಿ ಬಿಡಿ ಮಾಡುತ ಬಂದ
ಪೊಡವಿಗೊಡೆಯನ್ನು ಅಡಿಗಳಿಗೆರುಗುತ
ನಡೆದಾಡಲಿ ಶಿಶುವೆನ್ನಲು ಹರುಷದಿ   ೪

ಕಮಲಾಕ್ಷನು ಕರೆಕರೆಯನು ಮಾಡದೆ
ಕನಿಕರ ತೋರಿದನಂದು
ಕಮಲನಾಭ ವಿಠ್ಠಲನೆಂದರಿಯದೆ
ವನಿತೆಯು ಕಾಲವ ಕಳೆಯುತಲಿರಲು   ೫

ಆರ್ಯ

ತರಳೆಯ ಆಡಿದ ಗರುವದ ಮಾತನು
ಪರಮಾತ್ಮನು ಕೇಳುತಲಾಗ
ಕರೆ ಕರೆ ಮಾಡದೆ ತೆರಳಿದನೀಕೆಯ
ಗರುವವ ಮುರಿಯುವೆನೆಂದೆನುತ   ೧

ಈ ಪರಿ ವರುಷಗಳಾಗಲು ತರಳೆಗ
ಶ್ರೀಪತಿ ನೋಡುತ ಸುಕುಮಾರಿಗೆ
ಆಕೆಯ ಪಿತ ನೋಡುತ ಸುಕುಮಾರಿಗೆ
ವಿವೇಕದಿ ವರವ ವಿಚಾರಿಸಲು   ೨

ಕಂದ

ನುಡಿದರು ಭೃತ್ಯರು ನಮಿಸುತ
ಹುಡುಗಿಗೆ ತಕ್ಕವರವಿಹುದೆನುತ
ನುಡಿಯಲು ಹರುಷವ ತಾಳುತ
ನಡೆಸಲು ನಿಶ್ಚಯಿಸಿದ ಲಗ್ನವು ತಾ

ಆರ್ಯ

ಈ ಪರಿ ವರ ನಿಶ್ಚಯವನು ಮಾಡುತ
ಭೂಪನು ಬಲು ಸಂತೋಷದಲಿ
ಆ ಪರಮಾತ್ಮನ ಮಹಿಮೆಯ ತಿಳಿಯದೆ
ಈ ಪರಿ ವಿವಾಹೋತ್ಸವ ನಡೆಸೆ   ೧

ಬರೆಸಿದ ಲಗ್ನಪತ್ರಿಕೆಗಳ ತವಕದಿ
ವರನ ಬಂಧು ಜನಗಳಿಗೆಲ್ಲಾ
ಪರಮೋಲ್ಲಾಸದಿ ಬರಬೇಕೆನುತಲಿ
ತ್ವರಿತದಿ ಲಗ್ನವ ಇಡಿಸಿದನು   ೨

ಬಂದರು ಬೀಗರು ಪರಮಾನಂದದಿ
ಚಂದದ ಪಂಢರಾಪುರದಲ್ಲಿ
ಮಂದಿಗಳೆಲ್ಲರು ನೆರೆದ ಸಮಯದಿ ಗೋ-
ವಿಂದ ಯೋಚಿಸುತ ಮನದಲ್ಲಿ   ೩

ಏನಿದು ಮಾಮಿಯೆ ಈ ವಿಧ ಸೌರಣೆ
ಯಾರಿಗೆ ನೀಡುವೆ ಕನ್ಯೆಯನು
ಆಡಿದ ಮಾತನು ನಡೆಸದಿರುವದು
ನಾರಿ ನಿನ್ನಪರಾಧವಿದು   ೪

ಕಮಲಾಕ್ಷಿಯ ಕಣ್ತೆರದು ನೋಡಿದಳು
ಕಮಲಾಪತಿ ಶ್ರೀಹರಿಯನ್ನು
ಭ್ರಮೆಗೊಳ್ಳುತ ನಿರ್ಭಯದಿಂ ನುಡಿದಳು
ಕಮಲನಾಭ ವಿಠ್ಠಲನೊಡನೆ   ೫

ಕಂದ

ಕೇಳಲೊ ನಿಮ್ಮ ಮಾವನನು
ತಾಳದೆ ನೀಡುವ ಕನ್ಯೆಯನೆನಲು
ಕೇಳುತ ಕೋಪದಿ ನುಡಿದನು
ಕಾಳಾಹಿವೇಣಿಯನಪಹರಿಸುವೆನೆನುತಾ

ಆರ್ಯ

ಇಂದಿರುಳೇ ಲಗ್ನವು ನಡೆಯುವದು
ಎಂದೆನುತಲಿ ಬಲು ಸಂಭ್ರಮದಿ
ಮಂದಿಗಳೊಳು ಆನಂದದೊಳಿರುತಿರೆ ದೇ-
ವೇಂದ್ರನಿಗಾಜ್ಞಾಪಿಸಿದ ಹರಿಯು
ಹರಿಯಾಜ್ಞೆಯಂತೆ ಚರಿಸುವುದಿದು
ಪರಮ ಧರ್ಮವುಪ

ಇರುಳು ಲಗ್ನ ಸಮಯಕೆ
ಭರದಿ ಮಳೆಯ ಕರೆಯುತಿರೆ
ಹರಿಯು ವರನ ರೂಪದಿಂದ
ಭರದಿ ಬಂದನು   ೧

ಮೀರುವದು ಶುಭ ಮುಹೂರ್ತವು
ಮೂರುಜನವು ಬಂದಿಹೆವು
ಧಾರೆಯೆರೆದು ಧನ್ಯರಾಗಿ
ರೆಂದು ನುಡಿದನು   ೨

ಕಮಲಮುಖಿಯರೆಲ್ಲರು
ಕಮಲನಾಭ ವಿಠ್ಠಲನಿಗೆ
ನಮಿಸಿ ಪಾದವ ತೊಳೆದು
ಕನ್ಯದಾನ ಮಾಡಲು   ೩

ಧಾರೆಯನೆರೆದರಂದು ಶ್ರೀಧರಗೆ ಕನ್ಯೆಯಪ

ಗಂಗೆಯುದಕದಿ ಪಾದಂಗಳ ತೊಳೆಯುತ
ಶೃಂಗರಿಸಿದ ಮುದ್ದುಮಂಗಳ ಮೂರುತಿಗೆ   ೧

ತಂಗಿ ಸುಭದ್ರೆ ಕಳಸಗಿತ್ತಿ ಪೂಜಿಸೆ
ಮಂಗಳಾಷ್ಟಕವು ಆಚಾರ್ಯರು ಪಠಿಸಲು   ೨

ಮಂಗಳಸೂತ್ರವ ಕಟ್ಟಿ ಮಂಗಳಾಂಗಿಗೆ ಕಾ –
ಲುಂಗುರ ಮುಡಿ ಉಂಗುರಗಳ ಅಲಂಕರಿಸುತ   ೩

ಗುಡಿಜೀರೆಗೆಯು ವಧುವರರ ಸೆರಗಿಗೆ ಕಟ್ಟಿ
ಮದವಣಿಗರ ಸೆರಗಿಗೆ ಸೆರಗ ಗಂಟನೆ ಹಾಕಿ   ೪

ಶಾವಿಗೆ ಪರಮಾನ್ನ ಮೊದಲಾದ ಭಕ್ಷ್ಯಗಳಿಂದ
ಬೇಗ ಭೂಮ ಮಾಡಿ ಆಗ ಪವಡಿಸಿದರು   ೫

ಪುಣ್ಯದಂಪತಿಗಳು ಧನ್ಯರಾದೆವು ಎಂದು
ಕನ್ಯೆಯ ವರನಿಗೊಪ್ಪಿಸಿದರು ಹರುಷದಿ   ೬

ಕನಕ ಗರ್ಭನಿಪಿತ ಕಮಲನಾಭ ವಿಠ್ಠಲ
ವನಿತೆಯನೊಡಗೂಡಿ ಘನಹರುಷದೊಳಿರೆ   ೭

ಆರ್ಯ

ನಾಕೇಶನು ವೃಷ್ಠಿಯ ನಿಲಿಸಲು
ಭೀಕರ ಶಬ್ದಗಳಡಗಿದವು
ಆ ಕಾಲದಿ ಬಂದರು ಬೀಗರು ಬಹು
ಜೋಕಿನಿಂದ ವಧು ಮಂದಿರಕೆ
ಹೊರಟಿತು ನಿಬ್ಬಣ ಸಮರಾತ್ರಿಯೊಳು
ಪರಿ ಪರಿ ವಾದ್ಯದ ಪರಿ ವರ್ಣಿಸಲು
ಪರಶಿವನೊಬ್ಬನೆ ಬಲ್ಲನು ಈ ಪರಿ
ಅರುಹುವದಸದಳವು   ೧

ಆನೆ ಮೇಲಂಬಾರಿಗಳಲ್ಲಿ
ಮೇನೆ ಪಲ್ಲಕ್ಕಿಗಳೊಳು ಸಹಿತ
ಭಾಳಜನ ಕುಳಿತಿರುವ ರಥಗಳು
ಸಾಲಲಿ ಬರುತಿರಲು   ೨

ಮದ್ದು ಬಾಣ ಬಿರುಸಿನ ಧ್ವನಿಗೆ ಆ
ಲ್ಲಿದ್ದ ಶುಕಪಿಕ ಪಕ್ಷಿಗಳೆಲ್ಲ
ಎದ್ದು ತಮ್ಮ ಸ್ಥಳಗಳ ಬಿಟ್ಟು
ಬಿದ್ದವು ಎಲ್ಲೆಲ್ಲೊ   ೩

ಬೇರಿ ಸೌಬತ್ತಿನ ಧ್ವನಿ ಕೇಳಿ
ಊರವರೆಲ್ಲಾ ಚೋದ್ಯವ ಪಟ್ಟು
ನಾರಿಯರುಪ್ಪರಿಗೆಗಳನೆ ಏರಿ
ನೋಡುತ ನಿಂದಿರಲು   ೪

ರಂಭೆಯೂರ್ವಶಿ ಮೇನಕೆಯರನು
ನಿಂದಿಸುವಂಥ ಸುಂದರಿಯರನು
ಕಂಡು ಮೋಹಿತರಾದರು ಪುರದ
ಮಂದಿಗಳಾಕ್ಷಣದಿ   ೫

ನೂರಾರು ಕೈದೀವಟಿಗೆಗಳು ಆ-
ಪಾರದಂದಣ ಸಂದಣಿಯಿಂದ
ಸಾಲು ಸಾಲಗೈತಂದರು ಮ-
ದ್ದಾನೆಗಳಂದದಲಿ   ೬

ಈ ಪರಿ ವೈಭವದೊಳು ಬರುತಿರಲು
ಭೂಪನು ನಿದ್ರೆಯ ಸುಖದೊಳಗಿರಲು
ಶ್ರಿ ಪತಿ ಕಮಲನಾಭ ವಿಠ್ಠಲ
ಈ ಪರಿ ಪೊಗಳಿದರು   ೭

ಭಾಮಿನಿ ಷಟ್ಟದಿ

ದೇಶ ದೇಶದೊಳಿಹ ಜನಂಗಳ
ಆಸು ಕಳುಹುತ ಕರೆಯ ಕಳಿಸಿ ಊ-
ದಾಸೀನವ ಮಾಡುವದು ಧರ್ಮವೆ ಲೇಸು ತೋರುವದೆ
ಭಾಸುರಾಂಗಿಯ ಕೊಡುವ ಜನರಿಗೆ
ನೀತಿ ಕಲಿಸುವದಾತ ನಿಶ್ಚಯ
ಯಾತಕೀಪರಿ ಮಾಡಿದಿಯೋ ಬಲುಮೂರ್ಖ ನೀನೆಂದೂ

ಪೊರೆಯೊ ದೇವನೇ ನೀ ಪೊರೆಯೊ ದೇವನೆ
ಉರಗಾದ್ರಿವಾಸನೆಪ

ದಿಟ್ಟ ಮನವಿ ನಿನ್ನ ಮುಟ್ಟಿ ಭಜಿಪರನು
ಶ್ರೇಷ್ಠರ ಮಾಡುತ ಕಷ್ಟಗಳ್ಹರಿಸುವ
ದುಷ್ಟರ ಮರ್ದಿಸಿ ಶಿಷ್ಟರ ಪೊರೆಯುವ
ಇಟ್ಟಿಗೆ ಮೇಲೆ ನಿಂತ ವಿಠ್ಠಲ ಮೂರುತಿ   ೧

ಆಕಳಂಕ ಮಹಿಮನೆ ಶುಕಮುನಿಸೇವ್ಯನೆ
ಶುಕ ಶೌನಕ ನಾರದ ಮುನಿವಂದ್ಯನೆ
ಭಕುತಿಯ ಮಾರ್ಗವನರಿಯೆನು ಶ್ರೀಹರೆ
ಶುಕಭಾಷಣದಿಂ ಸ್ತುತಿಸುವೆ ನಿನ್ನನು   ೨

ಮಾನಾಪಮಾನವು ನಿನ್ನದೊ ಮಾಧವ
ಜ್ಞಾನಿಗಳರಸನೆ ಭಾನುಪ್ರಕಾಶನೆ
ಶ್ರೀನಿಧೆ ಕಮಲನಾಭ ವಿಠ್ಠಲ ಹರೇ
ಧ್ಯಾನಿಸುವ ಹೃದಯಾಬ್ಜ ಮಂದಿರನೆ   ೩

ಆರ್ಯ

ಈ ವಿಧದಿಂದ ನರಹರಿಯನು ಭಜಿಸುತ
ಆ ವಧುವಿನ ಜನರನು ಜರಿದು
ಕೋಪತಾಪಗಳ ಸಹಿಸದೆ ಹೊರಟರು
ಆ ಪುರ ಬಿಡುತ ಬೀಗರು ಜವದಿ   ೧

ಮದುವೆಯ ಕಾರ್ಯವ ನೆರವೇರಿಸಿ ಆ-
ಮುದದಿಂದಲಿ ಮಲಗಿದ ನೃಪನು
ಉದಯವಾದನಂತರದಲಿ ನೋಡಲು
ವಧುವರರನು ಕಾಣದೆ ಇರಲು   ೨

ಕಮಲಾಕ್ಷಿಯೆ ಕಣ್ಮರೆಯಾಗಲು ಕಾ-
ರಣವೇನಿದು ಬಲ್ಲೆಯ ಎನುತ
ಕಳವಳ ಪಡುತಿಹ ದಂಪತಿಗಳ ಮನ
ಕಮನಾಭ ವಿಠ್ಠಲ ತಿಳಿದ   ೩

ಭಾಮಿನಿ ಷಟ್ಟದಿ

ಅಷ್ಟರಲ್ಲಿಯೆ ವಿಠ್ಠಲನ ಗುಡಿ
ಮೆಟ್ಟಲೇರುತ ಅರ್ಚಕನು ಕದ
ಮುಟ್ಟಿ ತೆಗೆಯುವ ಸಮಯದಲಿ ಆಶ್ಚರ್ಯವನೆ ಕಂಡು
ಮೆಟ್ಟಿ ಬೀಳುತ ಒದರಿದನು ಬಲು
ಗಟ್ಟಿ ಸ್ವರವನ್ನು ಕೇಳುತಲಿ ಆ
ಪಟ್ಟಣದ ಜನರೆಲ್ಲ ಬಂದು ವಿಚಾರ ಮಾಡುತಿರೆ

ನೋಡಿರಿ ನೋಡಿರಿ ನೋಡಿರಿ ಹರಿ ಶರ-
ಣಾಗತ ಜನರನು ಪೊರೆವದನುಪ

ಪಾಡಿ ಪೊಗಳಿ ಕೊಂಡಾಡುವವರ ಮುಂ-
ದಾಡುತ ನಲಿಯುವ ಪರಿ ಇದನು|| ಅ.ಪ ||

ಬಂದರು ಆ ಪುರ ಮಂದಿಗಳೆಲ್ಲಾ ಗೋ-
ವಿಂದನು ಆಲಯದಲಿ ನಿಂದು
ಇಂದು ವದನೆಯಳ ಚಂದವ ನೋಡುತ
ವಂದಿಸಿ ದೇವನ ನಮಿಸುತಲಿ   ೧

ಈ ಪರಿ ವಾರ್ತೆಯ ಕೇಳುತ ತ್ವರದಲಿ
ಆ ಸತಿ ಪತಿಯರು ನಡೆ ತಂದು
ಶ್ರೀ ಪತಿಯನು ಒಡಗೂಡುತ ನಿಂದಿಹ
ವೈಖರಿ ನೋಡುತ ಬೆರಗಾಗಿ   ೨

ಏನಿದು ಕೌತುಕ ಮಾನಿನಿಯಳ ಮದು-
ವ್ಯಾದನು ಎನುವರು ಪುರಜನರು
ಶ್ರೀವರ ನಿನಗೀಕೆಯ ಕೊಡುವದು
ಹೀನತೆಯಲ್ಲವೆ ಮಾಧವನೆ   ೩

ಗುಡ ಜೀರಿಗೆ ಸೆರಗಿಗೆ ಕಟ್ಟಿರುವದು
ಸೆರಗಿಗೆ ಸೆರಗಗಂಟ್ಹಾಕಿಹನು
ವದನ ಹೃದಯ ಶಾವಿಗೆ ಪರಮಾನ್ನ ಪಾ
ದದ ಅರಿಶಿನ ಹೊಳೆ ಹೊಳೆಯುವದು   ೪

ಕರತಂದವರ‍್ಯರಿಲ್ಲಿಗೆ ನಿನ್ನನು
ಸುಮನಸ ವಂದ್ಯನ ಬಳಿಯಲ್ಲಿ
ಕಮಲ ಮುಖಿಯೆ ಸರಿಯಲ್ಲವು ಈ ಪರಿ
ಕಮಲನಾಭ ವಿಠ್ಠಲ ಬಲ್ಲ   ೫

ಈ ಪರಿಯಿಂದಲಿ ಮಾತಾಪಿತೃಗಳು
ಆ ತರುಣಿಯ ಕೇಳುತಲಿರಲು
ಆ ಪುರಜನಗಳು ಚೋದ್ಯವ ಪಡುತಲಿ
ಶ್ರೀ ಪತಿಯು ನೋಡುತಲಿರಲು
ನೀವೇ ಧಾರೆಯನೆರಿದಿಹಿರಿನ್ನು ನಿರ್ಭಯದಿಂ
ನಿದ್ರಿಸುತಿಹ ಸಮಯದಿ ಶ್ರೀವರ ಎನ್ನನು
ಕರೆ ತಂದಿಹನು ತೋರದೆ ನಿಮಗಿನ್ನು

ಆರ್ಯ

ನಡಿ ನಡಿ ಸುಕುಮಾರಿಯೆ ನಿನಗಿದು
ತರವಲ್ಲವು ಇಂದಿನ ಕಾರ್ಯ
ಮದುವೆಯ ಗಂಡನು ಶಿಲೆಯಾಗಿರುತಿರೆ
ಮುದ ತೋರುವುದಿಲ್ಲವು ಎನಗೆ

ಪತಿ ನುಡಿಗಳ ಕೇಳುತಲಾಕ್ಷಣದಿ
ಸತಿಗಾಕ್ಷಣ ಜ್ಞಾಪಿಸಿದನು ಹರಿಯ
ಮತಿಹೀನಗಳು ನಾ ಮಾಡಿದ ತಪ್ಪು
ಅತಿಶಯವಾಗಿಹುದು

ಆರ್ಯ

ಏನಿದು ನಿನ್ನಯ ನುಡಿಗಳು ಎನಗದು
ಮಾನಿನಿ ಬಿಡದಲೆ ತಿಳುಹುವದು
ಮಾನಾಪಮಾನವು ಸಮವು ಇಬ್ಬರಿಗು
ಮಾಣದೆ ಸಂಶಯ ಬಿಡು ಮನದಿ

ಕೇಳುತಲಾ ನುಡಿ ಪೇಳಿದಳೆಲ್ಲವು
ಬಾಲಕಿ ಉದಿಸಲು ಬೇಡಿದ ವರಗಳ
ಆಡಿದ ನುಡಿ ನಡೆಸದಿರಲು
ಶ್ರೀಧರ ಮಾಡಿದ ಮಾಯವನು

ಆರ್ಯ

ಹಾಗಾದರೆ ಈಗೇನು ಮಾಡುವಿ
ಬಾಲಕಿಯನು ಕರತರದಿರಲು
ನಾವಿನ್ನಾದರು ಲಾಲಿಸಿ ಕಾಲವ
ಸುನುರಾಗದಲಿ ಕಳೆಯುವುದು

ಹಾಗೆನ್ನಲು ಬಾರದು ಮಾಧವನಿಗೆ
ಬಾಲಕಿಯನು ಅರ್ಪಿಸುತಲಿ ಮುದದಿ
ಬಾಲಗೋಪಾಲನ ಚರಣವ ನಂಬಲು
ತಾ ಒಲಿವನು ಭಕ್ತಿಗೆ ಮೆಚ್ಚಿ

ಆರ್ಯ

ಕಡು ಹರುಷದಿ ಕಾಮನ ಪಿತನಿಗೆ ತನ್ನ
ಸುದತಿ ಮಣಿಯನರ್ಪಿಸಿ ಮುದದಿ
ಕರಗಳ ಜೋಡಿಸಿ ಕಮಲನಾಭ ವಿ
ಠ್ಠಲನ ಸ್ಮರಿಸುತ ಕೊಂಡಾಡಿದನು

ಭಾಮಿನಿ ಷಟ್ಟದಿ

ಪಾಪ ರಹಿತನೆ ಪರಮ ಪುರುಷನೆ
ಆ ಕಮಲ ಸಂಭವನ ಜನಕನೆ
ನಾಕ ಪಾಲಕ ವಂದ್ಯ ಚರಣನೆ ನವನೀತ ಕದ್ದವನೆ
ನರಕ ಮರ್ದನ ಯದುಕುಲೇಶನೆ
ಮದನ ಮೋಹನ ರುಕ್ಮಿಣಿ ಪ್ರಿಯ
ಖಗನ ಹೆಗಲು ಏರಿ ಮೆರೆದನೆ ಕರುಣಿಪುದು ಎನ್ನ

ಪಂಢರಿಪುರ ಪಾಂಡುರಂಗ ಪಾಲಿಪುದು
ಭಂಗವ ಬಿಡಿಸಿ ಉದ್ಧರಿಸಿ ರಕ್ಷಿಪುದುಪ

ತಂಡ ತಂಡದ ಜನ ಬಂದು ಸೇವಿಸುವರು
ಪುಂಡರೀಕಗೊಲಿದವ ನೀನಹುದು|| ಅ.ಪ ||

ವಾರಿವಿಹಾರನೆ ಭಾರ ಪೊತ್ತವನೆ
ಕೋರೆ ತೋರುವನೆ ಕರುಳ್ಹಾರ ಹಾಕಿದನೆ
ಮೂರಡಿ ಭೂಮಿಯ ಬೇಡಿ ಶೂರರ ಗೆಲಿದು
ವಾರಿಧಿಯನೆ ಕಟ್ಟಿ ನಾರಿಯ ತಂದು
ಹಾರುತ ಕಾಳಿಯ ಮಡುವೆ ಕಲಕಿ ತ್ರಿಪು-

ರಾರಿ ಎನಿಸಿಹ ಹಯವೇರುತ ಮೆರೆದೆ   ೧

ಅಗಣಿತ ಮಹಿಮ ಶ್ರೀ ಅನಿರುದ್ಧದೇವ
ಪರಮ ಪುರುಷ ಕಾಯೊ ಪ್ರದ್ಯುಮ್ನದೇವ
ಸರ್ವವ್ಯಾಪಕನೆ ಸಂಕರ್ಷಣದೇವ
ವಿಶ್ವ ಮೂರುತಿ ಶ್ರೀಶ ಶ್ರೀವಾಸುದೇವ
ನಾರದ ಮಂದ್ಯ ನಾರಾಯಣ ರಕ್ಷಿಸು
ಶಾಂತಿ ಕೃತಿ ಜಯ ಮಾಯ ಲಕ್ಷ್ಮೀರಮಣನೆ   ೨

ಇಟ್ಟಿಗೆ ವಾಸ ಶ್ರೀ ವಿಠ್ಠಲಮೂರ್ತಿ
ಮುಟ್ಟಿ ಭಜಿಪರಘ ನಷ್ಟವ ಮಾಳ್ವೆ
ಸೃಷ್ಟಿಯೊಳಗೆ ಮಹಶ್ರೇಷ್ಠನೆಂದೆನಿಪೆ
ವಿಠಲ ವಿಠಲ ವಿಠೋಬ ಎಂದೆನಿಪೆ
ಇಷ್ಟ ಭಕುತರಿಗೆ ಕೊಟ್ಟು ವರವ ಕಾಯ್ವೆ
ರಕ್ಷಿಸಿ ಕಮಲನಾಭ ವಿಠ್ಠಲನೆ   ೩

ಆರ್ಯ

ಗರುಡಗಮನ ನಾರಾಯಣ ರಕ್ಷಿಸು
ಅರಿಯದ ಅಜ್ಞಾನಿಯನೀಗ
ಸ್ಮರಪಿತ ವಂದಿಪೆ ಕರುಣಿಸು ಎನ್ನನು
ಪರಿ ಪರಿ ಅಪರಾಧವ ಕ್ಷಮಿಸು   ೧

ಪತಿ ಈ ಪರಿ ಹರಿಯನು ಪ್ರಾರ್ಥಿಸುತಿರೆ
ಸತಿ ಬೇಗದಿ ಕರಗಳ ಮುಗಿದು
ಅತಿ ಭಕ್ತಿಲಿ ಸಿರಿ ವಾಗುತಲಾಕ್ಷಣ
ಪತಿತ ಪಾವನನ ಸ್ಮರಿಸಿದಳು   ೨

ವಂದಿಸಿ ಬೇಡುವೆನು ವೈಕುಂಠಪತಿ ನಿನ-
ಗೊಂದಿಸಿ ಬೇಡುವೆನುಪ

ಹಿಂದೆ ಮುಂದೆಂದಿಗೂ ಗೋ-
ವಿಂದ ನೀಗತಿಯೆಂದು ನಂಬಿದೆ
ಇಂದಿರಾಪತಿ ಬಂದು ರಕ್ಷಿಸೊ
ನಂದ ಗೋಪಿಯ ಕಂಡ ಮಾಧವ|| ಅ.ಪ ||

ಸುಂದರ ಚರಣಗಳ ಸುಮನಸರು ಕೃನ್ಮನ-
ಮಂದಿರದೊಳು ಧ್ಯಾನಿಸೆ ಸನಕಾದಿ ಮುನಿಗಳು
ಚಂದದಲಿ ಪ್ರಾರ್ಥಿಸೆ
ಮಂದರೋದ್ಧರ ಮದನ ಮೋಹನ
ನಂದ ವ್ರಜದೊಳು ಚಂದ ತೋರಿದೆ
ಇಂದು ನಿನ್ನ ಪೋಲುವವರ ಕಾಣೆನೊ
ಬಂಧ ಮೋಚಕನಹುದೊ ಶ್ರೀವರ
ಅಂದು ಗೋಪೇರ ವೃಂದ ವೃಂದ ಕೂಡಿಸಿ
ಚಂದದಿಂ ಕೊಳಲೂದಿ ನಲುಯುವ
ಮಂದಹಾಸದ ಮುಗುಳುನಗೆ ಗೋ-
ವಿಂದ ನಿನ ಪಾದಾರವಿಂದಕೆ   ೧

ಶಾಮಸುಂದರ ನಿನ್ನಯ ಕೋಮಲ ಕರದಿ
ತೋರು ಚಕ್ರ ಗದ ಶಂಖವು ಪದುಮವು
ತೋರ ಮುತ್ತಿನ ಹಾರವು
ವಾರಿಜಾಕ್ಷಿಯ ಲಕ್ಷ್ಮಿ ಉರದೊಳು
ತೋರುತಿಹ ವೈಜಯಂತಿ ಮಾಲೆಯ
ಶ್ರೀಶನಿಗೆ ಶ್ರೀವತ್ಸ ಕೌಸ್ತುಭ
ಮಾಲೆ ಥಳಥಳ ಹೊಳೆವ ಕಾಂತಿಯ
ಸೂರ್ಯಕೋಟಿ ಪ್ರಕಾಶದಂದದಿ
ತೋರಿ ಮೆರೆವ ಕಿರೀಟ ಹೊಳೆಯಲು
ಲಲಾಟ ಕಸ್ತೂರಿ ತಿಲಕ ಶೋಭಿಸೆ
ಹಾಟಕಾಶ್ಯನ ಒದೆದ ಪಾದಕೆ   ೨

ಇಷ್ಟ ಭಕುತರುಗಳೆಲ್ಲ ನಿನ್ನನು ಮನ
ಮುಟ್ಟಿ ಪೂಜಿಸೆ ಶ್ರೀನಲ್ಲನೆನುತ ಬಲು
ಶ್ರೇಷ್ಠನೆಂದರಿತರೆಲ್ಲ
ಇಟ್ಟಿಗೆ ಕೊಟ್ಟಾತನಿಗೆ ಬಲು
ಕಷ್ಟ ಪಡಿಸದೆ ಕೊಟ್ಟು ದರ್ಶನ
ದಿಟ್ಟತನದಲಿ ಪುಟ್ಟ ಪಾದದ
ದೃಷ್ಠಿ ಅವನಿಗೆ ಕೊಟ್ಟು ಸಲಹಿದಿ
ಅಷ್ಟು ಇಷ್ಟೆಂದ್ವೇಳ್ವ ಮಹಿಮೆಯು
ತುಚ್ಚ ಮನಜರಿಗಳವೆ ಶ್ರೀಹರೆ
ಇಷ್ಟದೈವ ಶ್ರೀ ಕಮಲನಾಭ-
ವಿಠ್ಠಲ ನಿನ್ನ ಪುಟ್ಟ ಪಾದಕೆ   ೩

ಆರ್ಯ

ಸತಿ ಈ ಪರಿಯಲಿ ಸ್ತುತಿಸಲು ಹರಿಯನು
ಪತಿ ನೋಡುತ ಬೆರಗಾಗುತಲಿ
ಅತಿ ಹರುಷದಿ ಸತಿ ಪತಿಯರು ಕೂಡುತ
ಪತಿತ ಪಾವನನ ಪೊಗಳಿದರು

ಪರಿ ಪಾಲಿಸು ಶ್ರೀಶನೆ ಭೂರಮಾನಾಥನೆ
ಪರಿ ಪಾಲಿಸು ಶ್ರೀಶನೆಪ

ಶರಧಿ ಶಯನನೆ ಗರುಡಗಮನನೆ
ಪರಮ ಪುರುಷನೆ ಪಾಪ ದೂರನೆ
ಶರಣಜನ ಸಂರಕ್ಷ ಶ್ರೀ ಹರಿ
ವರದ ಪಂಢರಿವಾಸ ಶ್ರೀಶನೆ|| ಅ.ಪ ||

ಮಂದಿಗಳೆಲ್ಲ ನಿಂದಿಸೆ ನಿನ್ನನು ಬಲು
ಚಂದದಿಂದಲೆ ಪ್ರಾರ್ಥಿಸೆ ತಡಮಾಡದಲೆ ನೀ
ನಂದನೆಯನು ಪಾಲಿಸೆ
ಅಂದು ಆಡಿದ ವಚನ ಮೀರಲು
ಚಂದದಿಂದಲಿ ಬಂದು ನೀನು
ಸುಂದರಿಯ ಕರ ಪಿಡಿದು ಬೇಗದಿ
ಬಂದು ನಿಂತೆಯಾ ಕಪಟ ವೇಷದಿ   ೧

ಪೊಕ್ಕಳಿಂದಲಿ ಬೊಮ್ಮನ ಪಡೆದವನಿಗೆ
ಲೆಕ್ಕವ ಇಲ್ಲ ಜನ ಶ್ರೀ ಲಕುಮಿಯನು ಸಹ
ಲೆಕ್ಕಿಸದಿಹ ದೇವನ
ಕಕ್ಕುಲಾತಿಯ ಜನರ ತೆರದಿ
ಚಿಕ್ಕವನಿತೆಯ ಕೂಡಿಕೊಂಡು
ಮಿಕ್ಕಜನರಿಗೆ ಮೋಸಗೊಳಿಸುತ
ಭಕ್ತರನು ಉದ್ಧರಿಸುತಿರ್ಪೆಯೊ   ೨

ಮಾಯಾರಮಣ ನಿನ್ನಯ ಮಾಯಕೆ ಸಿಲುಕಿ
ಬಾಯ ಬಿಟ್ಟರೊ ದುರ್ಜನ ಸಜ್ಜನರಿಗೆ
ನೀಡಿದೆ ಅಭಯವನು
ಮಾರಜನಕನೆ ಮದನ ಮೋಹನ
ಸಾರಿದೆನೊ ಪಾದಾರವಿಂದವ
ಪಾರುಗಾಣಿಸಿ ಪೊರೆಯೊ ಕಮಲ
ನಾಭ ವಿಠ್ಠಲನೆ ಪೊರೆಯೊ ಸಂತತ   ೩

ಪಾರ್ಥಸಾರಥೇ ಪಾಲಿಸೆನ್ನ
ಪಾರ್ಥಸಾರಥೇಪ

ಪಾರ್ಥಸಾರಥೆಯೆ ದೇವ
ಕೀರ್ತಿಸುವೆನು ನಿನ್ನ ಗುಣವ
ಕುಕ್ಷಿಯೊಳಗೆ ಸರ್ವ ಜಗವ
ಇಟ್ಟು ಪೊರೆವೊ ದೇವ ದೇವ   ೧

ಕರುಣಾಸಾಗರನೆ ದೇವ
ಶರಣ ಜನರ ರಕ್ಷಿಸುವ
ಬಿರುದು ಕೇಳಿ ನಲಿವೆ ಭವ
ಶರಧಿಯಿಂದುದ್ಧರಿಸು ದೇವ   ೨

ಹರಿಯೇ ನೀ ಸರ್ವೋತ್ತಮನು
ಸಿರಿಯು ನಿನ್ನ ಮಡದಿ ಪವನ-
ತನಯ ಜೀವರೊಳುತ್ತಮ ಭವನು
ಪರಮ ವೈಷ್ಣವನೆನಿಸುತಿಹನು   ೩

ಸುರರು ನಿನ್ನ ಕಿಂಕರರು
ಸರ್ವಕಾಲದಲ್ಲಿ ಅವರು ಬಿಡದೆ
ನಿನ್ನ ಸೇವಿಸುವರು ವರದ
ಕಮಲನಾಭ ವಿಠ್ಠಲ   ೪

ಆರ್ಯ

ಅರಿಯದ ಅಜ್ಞಾನಿಯನೀಪರಿ ಸು
ಮ್ಮನೆ ಬಳಲಿಸುವುದುಚಿತವಲ್ಲ
ಸರಸಿಜಭವಮುಖರಿಗೆ ಒಲಿದಂದದಿ ದಾ
ಸ್ಯವ ಕೈಗೊಳ್ಳುತೆನ್ನನು ರಕ್ಷಿಪುದು

ಸಂಬಳಕಿಟ್ಟುಕೊ ನಿನ್ಹಂಬಲ ಬಿಡಿಸದೆ
ಶಂಬರಾರಿಯ ಪಿತ ನಂಬಿದೆ ನಿನ್ನ ಸೇವಾ|| ಅ.ಪ ||

ಸತ್ಯ ಸಂಕಲ್ಪ ನಿನ್ನಯ ದ್ವಾರದ ಹೊಸ
ಮುತ್ತಿನ ಕದ ತೆಗೆಯುವ
ವಿಶ್ವಮೂರುತಿ ನಿನ್ನ ದರ್ಶನನಾಂತರದಿ
ಮುತ್ತಿನ ಗದ್ದುಗೆಯನಿಟ್ಟು
ಮತ್ತೆ ಚಾಮರ ಬೀಸಿ ನಲಿಯುವೆ
ಸತ್ಯ ಭಾಮೆಯ ರಮಣ ಶ್ರೀಹರೆ
ಉತ್ತಮರ ಸೇವೆಯನು ಮಾಡುವ   ೧

ಸರ್ಪಶಯನ ನಿನಗೆ ಮುತ್ತಿನ ಸು-
ಪ್ಪತ್ತಿಗೆಸೇವೆ ಮಾಡುವೆ
ಸತ್ಯ ಸಂಕಲ್ಪ ನಿನ್ನ ಇಚ್ಚಾನುವರ್ತನಾಗಿ
ಉತ್ತಮ ಪಾದಗಳನೊತ್ತಿ
ಮತ್ತೆ ನೀ ನಿದ್ರಿಸುವ ಸಮಯದಿ
ಮುತ್ತಿನ ವ್ಯಜನದಲ್ಲಿ ಬೀಸುತ
ಮತ್ತೆ ನಿನ್ನ ಕೀರ್ತನೆ ಮಾಡುವೆ   ೨

ಗರಡಗಮನ ನಿನ್ನ ಒಡಗೂಡಿ ಬಂದು
ಬಿಡದೆ ಛತ್ರಿಯನ್ಹಿಡಿಯುವೆ
ಕಡಲಶಯನ ನಿನಗೆ ಸಡಗರದಿಂದ ಬಂದು
ನಡೆಮಡಿಯ ಹಾಸುತ್ತ ನಿನ್ನನು
ಅಡಗಡಿಗೆ ವಂದಿಸುತ ಸ್ತುತಿಪೆನು
ಕಡಲೊಡೆಯ ಶ್ರೀಕಮಲನಾಭ ವಿಠ್ಠಲನೆ
ಸರ್ವದ ನಿನ್ನ ಸ್ಮರಿಸುವ   ೩

ಆರ್ಯ

ಇಂತೀಪರಿ ಸತಿಪತಿಗಳು ಲಕ್ಷ್ಮಿ
ಕಾಂತನ ಗುಣಗಳ ಪೊಗಳುತಿರೆ
ಸಂತೋಷದಿ ಶ್ರೀ ಹರಿ ಅವರನು ಬಹು
ಸಂವಿಡುತ ನುಡಿದನು ಅಂದು   ೧

ಒಲ್ಲೆನು ಮಾನವ ವಲ್ಲಭೆಯನು ನಾ
ಕಲ್ಲಾಗಿರುತಿಹೆನಿದು ನೋಡಿ
ಮೆಲ್ಲನೆ ನಿಮ್ಮಯ ಸ್ಥಳಕೆ ಪೋಗಿ ಎನ್ನ
ಉಲ್ಲಾಸದಿ ಸ್ತುತಿ ಮಾಡಿರೆನೆ   ೨

ಬಂದರು ದಂಪತಿಗಳು ಕುವರಿಯ ಆ-
ನಂದ ಕಂದನಿಗರ್ಪಿಸೆ ಮುದದಿ
ನಿಂದರು ಮಾನಸ ಮಂದಿರದಲಿ ಗೋ-
ವಿಂದನ ಧ್ಯಾನವ ಮಾಡುತಲಿ   ೩

ಗುರುಗಳ ಕರುಣದಿ ನುಡಿಸಿದ ನುಡಿಗಳು
ನರಹರಿ ಪಾದಕೆ ಅರ್ಪಿತವು
ಅರಿತ ಸಜ್ಜನರು ಜರಿಯದೆ ಆಲಿಸಿ
ಸರಿ ಮಾಳ್ಪರು ತಪ್ಪುಗಳನ್ನು   ೪

ಅರಿಯೆನು ಒಂದನು ಬರೆಯಲು ಗುರುಗಳು
ಬರೆಸಿದರಿದು ಬೇಸರಿಸದಲೆ
ಹಿರಿಯರು ಆದರದಲಿ ಕೇಳುವದು ಶ್ರೀ
ಪವನಂತರ್ಯಾಮಿಯ ಚರಿತೆಯನು   ೫

ಶ್ರೀಪತಿ ಮಾಡುವ ವ್ಯಾಪಾರವು ಬಲು
ನೂತನವಾಗಿಹುದಿದು ಕೇಳಿ
ಗೋಪತಿ ಕೃಷ್ಣನ ಗುಣಗಳ ಪಾಡಲು
ನಾಕೇಶನು ಆಜ್ಞಾಪಿಸಲು   ೬

ದೇವೇಂದ್ರನ ನುಡಿ ಕೇಳುತ ತ್ವರದಲಿ
ದೇವ ದುಂದುಭಿಗಳು ಮೊಳಗಿದವು
ಗಾನದಿ ಪಾಡುತ ಶ್ರೀನಿಧಿ ಕಮಲ
ನಾಭ ವಿಠ್ಠಲನ ಪೊಗಳಿದರ‍್ದರಿಗೆ   ೭

ಮಂಗಳ

ಜಯ ಜಯ ಶ್ರೀ ಲಕ್ಷ್ಮಿರಮಣನಿಗೆ
ಜಯ ಜಯ ಶ್ರೀ ಭೂರಮಣ ಶ್ರೀಹರಿಗೆಪ

ಮಂಗಳ ಮಹಿಮಗೆ ಶೃಂಗಾರ ರೂಪಗೆ
ಅಂಗಜಜನಕಗೆ ಜಯ ಜಯತು
ಗಂಗೆಯಪಿತ ಪಾಂಡುರಂಗಗೆ ಯದುಕುಲ-
ಚಂದ್ರಗೆ ಸದ್ಗುಣ ಸಾಂದ್ರ ಶ್ರೀಹರಿಗೆ   ೧

ರಣದೊಳು ಪಾರ್ಥಗೆ ಸಾರಥಿಯಾಗುತ
ನಯನದೊಳು ಗೀತೆಯ ಪೇಳಿದಗೆ
ಸುಲಭದಿ ಕುರು ಸೈನ್ಯವನೆಲ್ಲ ಮಡುಹಿಸಿ
ಗುರುಗಾಂಗೇಯಗೆ ಒಲಿದವಗೆ   ೨

ಪಂಡರೀಕನಿಗೆ ಒಲಿದು ವರವನಿತ್ತು
ಪಂಢರಿಪುರಿ ಪಾಂಡುರಂಗನಿಗೆ
ಇಂದು ವದನೆಯಳ ಪೊಂದಿದ ವಸುದೇವ
ಕಂದನೆಂದೆನಿಸುತ ಮೆರೆದವಗೆ   ೩

ಭಕ್ತರ ಮೊರೆ ಕೇಳಿ ಯುಕ್ತಿಯಿಂ ಪಾಲಿಸಿ
ಅಕೃತಾತ್ಮರನೆಲ್ಲ ಕೆಡಿಸಿದಗೆ
ಭಕ್ತವತ್ಸಲ ಸ್ವಾಮಿ ಸತ್ಯಮೂರುತಿಗೀಗ
ಮುತ್ತಿನಾರತಿ ಎತ್ತಿ ಪಾಡಿದರು   ೪

ಕಾಳಿಯ ಮಡುವನು ಕಲಕಿದ ಧೀರಗೆ
ಕಂಸನ ಮರ್ದಿಸಿ ಕೊಂದವಗೆ
ಖಗನ ಹೆಗಲೇರಿ ಕನ್ನಿಕೆಯನು ಕೊಂದ
ಜಗದೀಶ ಕಮಲನಾಭ ವಿಠ್ಠಲಗೆ   ೫