. ಪ್ರವೇಶ

ಈ ಕಿರುಗ್ರಂಥದಲ್ಲಿ ೯೦ರ ದಶಕದಿಂದೀಚೆಗೆ ಶೋಧನೆ ಗೊಂಡಿರುವ ಶ್ರೀವೈಷ್ಣವ ಹರಿದಾಸ ಸಾಹಿತ್ಯದ ಸ್ವರೂಪವನ್ನು ಸಮೀಕ್ಷೆ ಮಾಡಲಾಗಿದೆ. ‘ಶ್ರೀವೈಷ್ಣವ’ ಎನ್ನುವುದು ವೈಧಿಕಧರ್ಮದ ಒಂದು ಶಾಖೆಯಾದ ‘ವಿಶಿಷ್ಟಾದ್ವೈತ’ ತತ್ವದ ಪರ್ಯಾಯನಾಮ, ಭಗವಾನ್‌ ರಾಮಾನುಜಾಚಾರ್ಯರು ಸ್ಥಾಪಿಸಿದ ಈ ಧರ್ಮ ಕರ್ನಾಟಕದಲ್ಲಿ ೧೧ನೇ ಶತಮಾನದಿಂದಲೇ ಅಸ್ತಿತ್ವದಲ್ಲಿದೆ. ಹಲವು ಬಾರಿ ‘ರಾಜಧರ್ಮ’ವೂ ಆಗಿ ಬೆಳೆದಿದೆ. ದ್ವೈತ – ಅದ್ವೈತಗಳಲ್ಲಿ ಕನ್ನಡದಲ್ಲಿ ಸಾಹಿತ್ಯ ಕಾಣಿಸಿಕೊಂಡಂತೆ ‘ವಿಶಿಷ್ಟಾದ್ವೈತದಲ್ಲಿ ಸಾಹಿತ್ಯ ಸೃಷ್ಟಿಯಾಗಲೇ ಇಲ್ಲ’ ಎಂಬ ಅಭಿಪ್ರಾಯವೇ ೯೦ ರ ದಶಕದವರೆಗೆ ಕನ್ನಡ ಸಾಹಿತ್ಯವಲಯದಲ್ಲಿ ಇತ್ತು. ೯೦ರ ದಶಕದಲ್ಲಿ ನಡೆದ ಸಂಶೋಧನೆಗಳಿಂದ ಅದು ಬದಲಾಗಿದೆ. ಈವರೆಗೆ ಈ ಕ್ಷೇತ್ರದಲ್ಲಿ ಹತ್ತು ಹಲವು ಬಿಡಿ ಬಿಡಿ ಗ್ರಂಥಗಳು, ಲೇಖನಗಳು ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ ತತ್ವದ ಹಾಡುಗಳು ವ್ಯಾಪಕವಾಗಿ ಕಂಡು ಬಂದಿವೆ. ಈಗಾಗಲೇ ಕನ್ನಡ ಸಾಹಿತ್ಯ ಇದಮಿತ್ಧಂ ಎಂದು ನಿರ್ದಿಷ್ಟ ಮತಕ್ಕೆ ಸೇರಿಸದೆ ಚರ್ಚಿಸಿದ್ದ ಲಕ್ಷ್ಮೀಶ ಮತ್ತು ಕನಕದಾಸರು ಈ ವಿಶಿಷ್ಟಾದ್ವೈತ ಸಂಶೋಧನೆಯಿಂದ ವಿಶಿಷ್ಟಾದ್ವೈತ ಮತದಲ್ಲಿ ನಿಲ್ಲುವಂತಾಗಿದ್ದಾರೆ. ೧೫ನೇ ಶತಮಾನದ ಬೇಲೂರು ವೈಕುಂಠದಾಸರಿಂದ ೨೦ನೇ ಶತಮಾನದ ನಾರಾಯಣ ಶರ್ಮರವರೆಗೆ ಈ ತತ್ವದಲ್ಲಿ ಹರಿದಾಸ ಸಾಹಿತ್ಯ ಹಬ್ಬಿದೆ. ೧೯ನೇ ಶತಮಾನದಲ್ಲಿ ತುಳಸಿರಾಮದಾಸರು ಈ ತತ್ವದ ತಳಹದಿಯ ಮೇಲೆ ಸಾಮಾಜಿಕ ಜಾಗೃತಿ ಮೂಡಿಸಲು ಇನ್ನೊಂದು ಹರಿದಾಸ ಆಂದೋಲನವನ್ನೇ ನಡೆಸಿದ್ದು ಇದರ ಪ್ರಭಾವದಿಂದ ಸಮಾಜದ ಎಲ್ಲ ವರ್ಗದ ಜನರೂ ಗೌಡ, ಬಣಜಿಗ, ಗಾಣಿಗ, ಅಕ್ಕಸಾಲಿ, ದಲಿತ ಇತ್ಯಾದಿ – ಎಲ್ಲ ಜಾತಿಯವರೂ ಹರಿದಾಸರಾಗಿ ಕಂಡು ಬಂದಿರುವುದರಿಂದ ಹರಿದಾಸ ಸಾಹಿತ್ಯಕ್ಕಿದ್ದ ಕೇವಲ ‘ವೈದಿಕ ಸಾಹಿತ್ಯ’ ಎಂಬಮಿತಿ ದೂರವಾಗಿ ಹರಿದಾಸ ಸಾಹಿತ್ಯವೂ ವಚನಸಾಹಿತ್ಯದಂತೆ ‘ಜನಪದ ಸಾಹಿತ್ಯ’ ಎಂದು ಸಾಬೀತಾಗಿದೆ.

ಹೀಗೆ ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರಮುಖ ಚರ್ಚೆಗಳನ್ನು ಆಹ್ವಾನಿಸುವ, ಈ ವಿಶಿಷ್ಟಾದ್ವೈತ ಸಾಹಿತ್ಯದ ಅಸ್ತಿತ್ವದ ಮೂಲಕ ಒಟ್ಟು ಕನ್ನಡ ಸಾಹಿತ್ಯಚರಿತ್ರೆಯನ್ನೇ ಪುನರ್ಮೌಲ್ಯೀಕರಣಕ್ಕೆ ಒಳಪಡಿಸಬೇಕಾಗಿದೆ. ಇಂತಹಪ್ರಮುಖ ಸಾಹಿತ್ಯವಾಗಿ ಕಂಡು ಬಂದಿರುವ ಶ್ರೀವೈಷ್ಣವ ಹರಿದಾಸ ಸಾಹಿತ್ಯದಲ್ಲಿ ಈವರೆಗೆ ಪ್ರಕಟವಾಗಿರುವ ಹರಿದಾಸರ ಜೀವನ ವಿವರ ಮತ್ತು ಕೀರ್ತನೆಗಳ ಸಮೀಕ್ಷೆಯನ್ನು ಈಗಾಗಲೇ ನಾರಾಯಣಶರ್ಮ ಸಂಸ್ಕೃತಿ ಕೇಂದ್ರದ ‘ಶ್ರೀವೈಷ್ಣವ ಹರಿದಾಸ ಸಾಹಿತ್ಯ ಮಾಲೆ’ ಯಲ್ಲಿ ಪ್ರಕಟವಾಗಿರುವ ಬಿಡಿಬಿಡಿ ಗ್ರಂಥಗಳಲ್ಲಿ ಮತ್ತು ಸರ್ಕಾರದಿಂದ ಪ್ರಕಟವಾಗಿರುವ ‘ಸಮಗ್ರ ದಾಸಸಾಹಿತ್ಯ ಸಂಪುಟ’ಗಳಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಶ್ರೀ ವೈಷ್ಣ ಹರಿದಾಸ ಸಾಹಿತ್ಯ’ ಪುಸ್ತಕದಲ್ಲಿ ಬಂದಿರುವ ಅಂಶಗಳನ್ನೇ ಇಲ್ಲಿ ಪ್ರಧಾನವಾಗಿ ಬಳಸಿಕೊಂಡಿದ್ದರೂ ಆನಂತರದ ಸಂಶೋಧನೆಯಿಂದ ಬೆಳಕಿಗೆ ಬಂದಿರುವ ಹೊಸವಿಚಾರಗಳನ್ನೂ ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

ಶ್ರೀವೈಷ್ಣವ – ವಿಶಿಷ್ಟಾದ್ವೈತ ಸಾಹಿತ್ಯವು ಕನ್ನಡ ಓದುಗರಿಗೆ ಹೊಸ ಓದಾಗಿರುವುದರಿಂದ ಅದರ ಪ್ರವೇಶಕ್ಕಾಗಿ ಪ್ರಸ್ತಾವನೆಯ ಮುಂದಿನ ಭಾಗದಲ್ಲಿ ಶ್ರೀವೈಷ್ಣ ತತ್ವಧರ್ಮದ ಪರಿಚಯ ಹಾಗೂ ಈವರೆಗೆ ಈಕ್ಷೇತ್ರದಲ್ಲಿ ಆಗಿರುವ ಸಂಶೋಧನೆ ಮತ್ತು ಶ್ರೀವೈಷ್ಣವ ಹರಿದಾಸ ಸಾಹಿತ್ಯದ ಪ್ರಮುಖ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

. ಅನುಭಾವ ಸಾಹಿತ್ಯ

ಕನ್ನಡ ಸಾಹಿತ್ಯದಲ್ಲಿ ವಚನಸಾಹಿತ್ಯ ಮತ್ತು ಹರಿದಾಸಸಾಹಿತ್ಯಗಳು ಜನಪರ ಸಾಹಿತ್ಯ ಪ್ರಕಾರಗಳಾಗಿ ಕಾಣಿಸಿಕೊಂಡಿರುವ ವಿಶಿಷ್ಟ ಸಾಹಿತ್ಯ ಮಾದರಿಗಳು. ಚಂಪು, ರಗಳೆ, ಷಟ್ಪದಿ, ಸಾಂಗತ್ಯ ಮುಂತಾದ ಸಾಹಿತ್ಯ ಪ್ರಕಾರಗಳು ನಿರ್ದಿಷ್ಟ ವಸ್ತುವನ್ನಿಟ್ಟುಕೊಂಡು ನಿರ್ದಿಷ್ಟ ಮಾಧ್ಯಮದಲ್ಲಿ ದೀರ್ಘಕೃತಿಗಳ ರೂಪದಲ್ಲಿ ಬರೆದಿರುವ ಸಾಹಿತ್ಯವಾದರೆ ವಚನ ಮತ್ತು ಹರಿದಾಸಸಾಹಿತ್ಯ ಇದಕ್ಕೆ ಭಿನ್ನವಾಗಿವೆ. ಸಮಾಜದ ಎಲ್ಲ ವರ್ಗದ ಜನಪ್ರತಿನಿಧಿಗಳೂ ಪಾಲ್ಗೊಂಡು ಸಮಾಜದ ಬದುಕಿನಲ್ಲಿ ದಿನನಿತ್ಯ ತಾವು ಕಾಣುವ ‘ಕಾಣ್ಕೆ’ಗಳನ್ನು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಹೇಳುವ ಮನದಮಾತುಗಳೇ ಇಲ್ಲಿ ಸಾಹಿತ್ಯವಾಗಿ ಹೊರ ಹೊಮ್ಮಿದೆ. ಇದಕ್ಕೆ ಯಾವುದೇ ನಿರ್ದಿಷ್ಟ ‘ಬಂಧ’ವಿಲ್ಲ. ಆನೆ ನಡೆದದ್ದೇ ಹಾದಿ ಯೆಂಬಂಥೆ ಇವರು ಬರೆದದ್ದೇ ಸಾಹಿತ್ಯವಾಗಿ ಅದಕ್ಕೆ ನಾವು ಹೆಸರನ್ನು ರೂಪಿಸಿ ಕೊಂಡಿದ್ದೇವೆ. ಇವು ಕ್ರಮವಾಗಿ ೧೨ ಮತ್ತು ೧೫ನೇ ಶತಮಾನಗಳಲ್ಲಿ ಸಮಾಜದಲ್ಲಿ ಒಂದು ಬಗೆಯ ‘ಚಳವಳಿ’ಯೋಪಾದಿಯಲ್ಲಿ ಸಾಮಾಜಿಕ ಜಾಗೃತಿಯ ರೂಪವಾಗಿ ಕಾಣಿಸಿಕೊಂಡು, ಜಡಗೊಂಡಿದ್ದ ಜನಪದದಲ್ಲಿ ಚಲನ ಶೀಲತೆಯನ್ನು ತಂದು, ಯಾರುಬೇಕಾದರೂ ಇದರಲ್ಲಿ ತೊಡಗಿಸಿಕೊಳ್ಳುವಂತಹ ಮುಕ್ತವಾತಾವರಣವನ್ನು ಉಂಟುಮಾಡಿ, ಇಡೀ ಸಮಾಜವನ್ನೇ ಸಾಹಿತ್ಯದ ವೇದಿಕೆಯನ್ನಾಗಿ ಮಾಡುವ ಮೂಲಕ ‘ಸಾಹಿತ್ಯ’ ಎಂಬುದಕ್ಕೆ ಹೊಸವ್ಯಾಖ್ಯಾನವನ್ನೇ ಬರೆದು ನೂತನ ಮಾರ್ಗವನ್ನು ತೆರೆದವು.

ಈ ಹಾದಿಯಲ್ಲಿ ಮುಂದಿನವರು ಚಳವಳಿಯಂತಹ ಸಾಮೂಹಿಕ ಪ್ರಕ್ರಿಯೆಯಲ್ಲಿ ತೊಡಗದಿದ್ದರೂ ಕರ್ನಾಟಕದಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ಈ ಸಾಹಿತ್ಯ ಮಾಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಈ ಪ್ರಕಾರಗಳನ್ನು ಬೆಳೆಸಿಕೊಂಡು ಬಂದಿದ್ದಾರೆ. ತಮ್ಮ ತಮ್ಮ ವೈಯಕ್ತಿಕ ನೆಲೆಗಳಿಂದಲೇ ಸಮಾಜದ ಮೇಲೆ ಪ್ರಭಾವಬೀರಿ, ಸಾಮಾಜಿಕರಲ್ಲಿ ಬದಲಾವಣೆಯಾಗುವಂತೆ ನೈತಿಕಮೌಲ್ಯ, ಜೀವನನಿಷ್ಠೆಗಳನ್ನು ಉಳಿಸಿಕೊಂಡು ಬರುವಲ್ಲಿ ಬಹಳ ಮುಖ್ಯ ಪಾತ್ರವಹಿಸಿದ್ದಾರೆ. ಇಂದಿಗೂ ಇಂಥವರು ಸಮಾಜದಲ್ಲಿ ಕಾಣಸಿಗುತ್ತಾರೆ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಈ ಸಾಹಿತ್ಯ ಪ್ರಕಾರವನ್ನು ತಮ್ಮ ಅನುಭವಗಳ ಅಭಿವ್ಯಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಮಾಜದಲ್ಲಿರುವ ಎಲ್ಲ ಜಾತಿಯವರೂ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲಮತಗಳೂ ತೊಡಗಿಕೊಂಡಿವೆ. ಬ್ರಾಹ್ಮಣ, ಲಿಂಗಾಯಿತ, ಗೌಡ, ಬಣಜಿಗ, ಗಾಣಿಗ, ಉಪ್ಪಾರ, ಅಕ್ಕಸಾಲಿ, ದರ್ಜಿ, ದಲಿತ, ಮುಸ್ಲಿಂ ಜಾತಿಗಳವರು ದ್ವೈತ – ಅದ್ವೈತ – ವಿಶಿಷ್ಟಾದ್ವೈತ – ಶಕ್ತಿವಿಶಿಷ್ಟಾದ್ವೈತ – ಭಾಗವತ ಧರ್ಮಗಳ ಮೂಲಕ ಯಾವುದೇ ಭೇದ ಭಾವವಿಲ್ಲದೆ, ಪರಸ್ಪರ ಘರ್ಷಣೆಗೊಳಗಾಗದೆ ತಮ್ಮ ತಮ್ಮ ನೆಲೆಗಳಲ್ಲಿ ಈ ಸಾಹಿತ್ಯವನ್ನು ರೂಪಿಸುವಂತಹ ವಾತಾವರಣವನ್ನೂ ‘ಅನುಭಾಗಿ’ಗಳನ್ನೂ ಸೃಷ್ಟಿಸುತ್ತಲೇ ಇದೆ. ಹೀಗಾಗಿ ಇದನ್ನು ಒಟ್ಟಾರೆಯಾಗಿ ‘ಅನುಭಾವ ಸಾಹಿತ್ಯ’ ಎಂದು ಕರೆಯಬೇಕಾಗುತ್ತದೆ. ಇವರೆಲ್ಲರ ಮುಖ್ಯಗುರಿ ಶುದ್ಧಸಮಾಜದ ನಿರ್ಮಾಣವೇ ಆಗಿದೆ.

ಸಾಮಾಜಿಕ ಮೌಲ್ಯಗಳ ಸ್ಥಿರೀಕರಣ ನೈತಿಕ ಮತ್ತು ಪಾರಮಾರ್ಥಿಕ ಸ್ಥೈರ್ಯಗಳ ಪುನಃ ಸ್ಥಾಪನೆ; ಬದಲಾವಣೆಗೆ ತೆರೆದುಕೊಳ್ಳುವ ಸಮಾಜದಲ್ಲಾಗುವ ಅಸ್ಥಿರತೆಗಳಿಂದ ಜನರಲ್ಲಾಗುವ ತಲ್ಲಣ – ಆತಂಕಗಳಿಂದ ಅವರನ್ನು ವಿಮುಖಗೊಳಿಸಿ ಮತ್ತೆ ಬದುಕಿನತ್ತ ಮುಖಮಾಡಿಸುವ ಜೀವನನಿಷ್ಠೆ; ಬದುಕನ್ನು ಉದಾತ್ತ ಧ್ಯೇಯಗಳತ್ತ ತಿರುಗಿಸುವ ಉನ್ನತ ಆಧ್ಯಾತ್ಮಿಕ ಚಿಂತನೆ ಮುಂತಾದ ಸಮಾಜಪರವಾದ ಜೀವನ ದೃಷ್ಟಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಮಾಜದ ದಿನನಿತ್ಯದ ಬದುಕಿನ ನಿದರ್ಶನಗಳ ಮೂಲಕವೇ ಉತ್ತಮ ಆದರ್ಶದ ದರ್ಶನ ಮಾಡಿಸುವ ವಿಶಿಷ್ಟ ಚಿಂತನೆಗಳಿಂದ ಕೂಡಿರುವ ಈ ಮಾತುಗಳ ಉದ್ದೇಶ ಒಂದೇ ಆಗಿರುವುದರಿಂದ ಮತ್ತು ಇದರ ಮೂಲಪ್ರೇರಣೆ ‘ಅನುಭವ’ವೇ ಆಗಿರುವುದರಿಂದ ಇದು ವಚನವಾಗಿರಲಿ, ಕೀರ್ತನೆಯಾಗಿರಲಿ, ತತ್ವವಾಗಿರಲಿ, ಸಂಪ್ರದಾಯದ ಹಾಡಾಗಿರಲಿ ಇವೆಲ್ಲವೂ ‘ಅನುಭಾವ’ ಸಾಹಿತ್ಯದ ವ್ಯಾಪ್ತಿಯಲ್ಲಿಯೇ ಬರುತ್ತವೆ. ೧೭ನೇ ಶತಮಾನದಿಂದ ಕಾಣಿಸಿಕೊಂಡಿರುವ ಈ ಸಾಹಿತ್ಯ ಪ್ರಕಾರಗಳನ್ನು ‘ಅನಭಾವ ಸಾಹಿತ್ಯ’ದ ವಿಭಾಗದಲ್ಲೇ ಗುರುತಿಸುವುದು ಸೂಕ್ತ. ಏಕೆಂದರೆ ಒಂದೇ ಕಾಲದಲ್ಲಿ ಬೇರೆ ಬೇರೆ ಮತಧರ್ಮಗಳಲ್ಲಿ ಸಮಾಜದ ಬೇರೆ ಬೇರೆ ಜಾತಿ ವರ್ಗಗಳ ಪ್ರತಿನಿಧಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಈ ಮೂರು ಪ್ರಕಾರಗಳಲ್ಲೂ ತಮ್ಮ ‘ಅನುಭವ’ಗಳನ್ನು ದಾಖಲಿಸುತ್ತಿರುತ್ತಾರೆ. ಆದ್ದರಿಂದ ಇವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅಧ್ಯಯನಕ್ಕೆ ತೊಡಗಿಸುವ ಬದಲು ಒಂದೇ ಧೋರಣೆಯ ಹಿನ್ನೆಲೆಯಲ್ಲಿ ‘ಅನುಭಾವ ಸಾಹಿತ್ಯ’ವಾಗಿ ಅಧ್ಯಯನ ಮಾಡುವುದರಿಂದ ಈ ಸಾಹಿತ್ಯದ ಮೌಲ್ಯವನ್ನು ವಿಸ್ತರಿಸಬಹುದಾಗಿದೆ.

೧೭ನೇ ಶತಮಾನದ ನಂತರದ ಕೀರ್ತನೆಗಳು, ಶಿವದಾಸಗೀತೆಗಳು ಮತ್ತು ತತ್ವಪದಗಳು ಹಾಗೂ ಸಂಪ್ರದಾಯದ ಹಾಡುಗಳನ್ನೆಲ್ಲ ಸೇರಿಸಿ ಅಧ್ಯಯನದ ದೃಷ್ಟಿಯಿಂದ ‘ಅನುಭವ ಸಾಹಿತ್ಯ’ ವಿಭಾಗದಲ್ಲಿ ವಿಶ್ಲೇಷಣೆ ಮಾಡುವುದು ಸೂಕ್ತವಾದರೂ ಅದಕ್ಕೂ ಮುಂಚೆ ಈ ಪ್ರಕಾರಗಳಲ್ಲಿ ದೊರಕುವ ಸಾಹಿತ್ಯ ಎಷ್ಟು ಎಂಬ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿರಬೇಕು. ಈಚಿನ ದಶಕಗಳಲ್ಲಿ ಈ ಪ್ರಕಾರಗಳಲ್ಲಿ ಅನೇಕ ಕೃತಿಕಾರರ ಬಗ್ಗೆ ಶೋಧಗಳು ನಡೆದಿವೆ. ನಡೆಯುತ್ತಿವೆ. ‘ಸಮಗ್ರವಚನ ಸಾಹಿತ್ಯ’ ಪ್ರಕಟನೆಯ ಮೂಲಕ ೧೯ನೇ ಶತಮಾನದವರೆಗಿನ ಶರಣರ ಹಾಡುಗಳು ಮತ್ತು ಶೈವತತ್ವಾಧಾರಿತ ತತ್ವಪದಕಾರರ ಬಗ್ಗೆ ಸಾಕಷ್ಟು ಸಾಹಿತ್ಯ ದಾಖಲಾಗಿದೆ. ಈಚೆಗೆ ‘ಸಮಗ್ರ ದಾಸ ಸಾಹಿತ್ಯ’ದ ಪ್ರಕಟನೆಯ ಮೂಲಕ ಹರಿದಾಸರ ಕೀರ್ತನೆಗಳೂ ೧೯ನೇ ಶತಮಾನದವರೆಗಿನ ಅವಧಿಯವರೆಗೆ ಸಾಕಷ್ಟು ದಾಖಲಾಗಿದೆ. ಇದರಲ್ಲಿ ವೈದಿಕ ಧರ್ಮದ ಮುಖ್ಯ ತತ್ವಗಳಾದ ಅದ್ವೈತ – ವಿಶಿಷ್ಟಾದ್ವೈತ ಮತ್ತು ದ್ವೈತ ಈ ಮೂರು ಧರ್ಮಗಳಲ್ಲಿ ಹರಿದಾಸರು ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಮುಖ್ಯವಾಹಿನಿಯಾದ ದ್ವೈತಕ್ಕೆ ಅದ್ವೈತ – ವಿಶಿಷ್ಟಾದ್ವೈತಗಳೂ ಸೇರಿಕೊಂಡು ಹರಿದಾಸ ಸಾಹಿತ್ಯ ‘ತ್ರಿವೇಣಿಸಂಗಮ’ವಾಗಿದೆ. ಈ ಸಂಪುಟಗಳಲ್ಲಿರುವ ಸುಮಾರು ೨೦,೦೦೦ ಹಾಡುಗಳಲ್ಲಿ ಅದ್ವೈತ ತತ್ವಪ್ರತಿಪಾದಕರಾದ ಹರಿದಾಸರ ಹಾಡುಗಳು ಸುಮಾರು ೨೦೦೦ ಸಂಗ್ರಹಗೊಂಡಿದ್ದರೆ ವಿಶಿಷ್ಟಾದ್ವೈತ ತತ್ವದ ಪ್ರತಿಪಾದಕ ಹರಿದಾಸರ ಹಾಡುಗಳು ಸುಮಾರು ೧೫೦೦ರಷ್ಟು ಸಂಗ್ರಹಗೊಂಡಿವೆ. ತತ್ವಪದಗಳು ಮತ್ತು ಸಂಪ್ರದಾಯದ ಹಾಡುಗಳು ಇದರಲ್ಲಿ ಸೇರಿಲ್ಲ. ಇವುಗಳ ಬಿಡಿಬಿಡಿ ಸಂಗ್ರಹ ಗ್ರಂಥಗಳು ಅನೇಕ ಪ್ರಕಟವಾಗಿವೆ. ಇವುಗಳನ್ನೂ ಸಮಗ್ರವಾಗಿ ಸಂಕಲಿಸಿ ಸಂಪುಟಗಳಲ್ಲಿ ಪ್ರಕಟಿಸುವ ಅಗತ್ಯವಿದೆ. ಜೊತೆಗೆ ೧೮ – ೧೯ನೇ ಶತಮಾನದಲ್ಲಿ ಕಂಡು ಬಂದಿರುವ ಅದ್ವೈತ – ವಿಶಿಷ್ಟಾದ್ವೈತ ಹರಿದಾಸರ ಹಾಡುಗಳು ಇನ್ನೂ ಸಾಕಷ್ಟು ಸಂಗ್ರಹವಾಗಬೇಕಾಗಿದೆ. ಈ ಇಡೀ ಸಾಹಿತ್ಯ ಸಂಪೂರ್ಣವಾಗಿ ದಾಖಲೆಯಾಗಿ ಅಭ್ಯಾಸಕ್ಕೆ ಸುಲಭವಾಗಿ ದೊರಕಿದ ಮೇಲಷ್ಟೇ ಈ ಬಗೆಯ ‘ಅನುಭಾವ ಸಾಹಿತ್ಯ’ದ ಅಧ್ಯಯನ ರೂಪಗೊಳ್ಳಬೇಕಾಗುತ್ತದೆ. ಅಲ್ಲಿಯವರೆಗೆ ವಿಮರ್ಶಕರು ಆಯಾ ಪ್ರಕಾರಗಳ ಬಿಡಿಬಿಡಿ ಪ್ರಕಟನೆಗಳನ್ನು ಕುತೂಹಲದಿಂದ ನಿರೀಕ್ಷಿಸಬೇಕಾಗಿದೆ ಮತ್ತು ಸಂಶೋಧಕರು ಆಸಕ್ತಿಯಿಂದ ಶೋಧಿಸಿ ಸಂಪಾದಿಸಿ ಪ್ರಕಟಿಸುವುದನ್ನು ಪ್ರೋತ್ಸಾಹಿಸಬೇಕಾಗಿದೆ.

. ಕನ್ನಡ ಕೀರ್ತನ ಸಾಹಿತ್ಯದ ತ್ರಿವೇಣಿ ಸಂಗಮ

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಂತ ಪ್ರಮುಖ ಪ್ರಕಾರವಾಗಿರುವ ಹರಿದಾಸ ಅಥವಾದ ಕೀರ್ತನ ಸಾಹಿತ್ಯ ಪರಂಪರೆ ನಾಲ್ಕು ಘಟ್ಟಗಳಲ್ಲಿ ಬೆಳೆದಿದೆ ಯೆಂಬುದು ಸರ್ವವಿದಿತ. ನರಹರಿತೀರ್ಥರು, ಶ್ರೀಪಾದರಾಜರಿಂದ ಇದರ ಆರಂಭಕಾಲವನ್ನೂ ವ್ಯಾಸರಾಯರು, ಪುರಂದರದಾಸರು, ಕನಕದಾಸರು, ವಾದಿರಾಜರು, ವೈಕುಂಠ ದಾಸರ ಕಾಲವನ್ನು ಎರಡನೆಯ ಘಟ್ಟ ಅಥವಾ ಉನ್ನತಿಯ ಕಾಲವೆಂದೂ ವಿಜಯದಾಸರು, ಗೋಪಾಲದಾಸರು, ರಾಘವೇಂದ್ರತೀರ್ಥರು, ಜಗನ್ನಾಥದಾಸರು ಮುಂತಾದವರ ಕಾಲವನ್ನು ಮೂರನೇ ಘಟ್ಟ ಅಥವಾ ವಿಸ್ತಾರ ಕಾಲವೆಂದೂ ವೇಣು ಗೋಪಾಲದಾಸರು, ಪ್ರಾಣೇಶವಿಠಲರು ಮುಂತಾದವರ ಕಾಲವನ್ನು ನಾಲ್ಕನೆಯ ಘಟ್ಟ ಅಥವಾ ಅವನತಿಯ ಕಾಲವೆಂದೂ ಸಾಮಾನ್ಯವಾಗಿ ಗುರುತಿಸಲಾಗುತ್ತಿದೆ.

ವಿಜಯನಗರ ಸಾಮ್ರಾಜ್ಯದ ಸ್ವರ್ಣಯುಗದ ಜೊತೆ ಜೊತೆಗೇ ಹರಿದಾಸ ವಾಙ್ಮಯವೂ ಜನಜನಿತವಾಗಿ, ಸಾಮ್ರಾಜ್ಯದ ಪತನಾನಂತರ ಅದರ ಜನಪ್ರಿಯತೆಯೂ ಕುಗ್ಗಿತು ಎಂಬುದು ಇತಿಹಾಸಕಾರರ ಅಭಿಪ್ರಾಯ. ‘ವಿಜಯನಗರ ಸಾಮ್ರಾಜ್ಯದ ಸ್ವರ್ಣಯುಗದಲ್ಲಿ ಪುರಂದರ ಕನಕದಾಸರು ನಾಡಿನಾದ್ಯಂತ.. ವಾದಿರಾಜರು ದಕ್ಷಿಣ ಕನ್ನಡದಾದ್ಯಂತ, ವೈಕುಂಠದಾಸರು ಬೇಲೂರಿನ ಸುತ್ತಮುತ್ತ ಬೆಳೆಸುವುದರ ಮೂಲಕ ೧೬೦೦ರವರೆಗೆ ಹರಿದಾಸ ಸಾಹಿತ್ಯ ಪ್ರಸರಿಸಿತ್ತು… ಅನಂತರ ಕಾರಣಾಂತರದಿಂದ ಹರಿದಾಸ ಪರಂಪರೆ ಅಷ್ಟಾಗಿ ಸ್ಪಷ್ಟವಾಗಿ ಮುಂದುವರಿಯಲಿಲ್ಲ. ಪುರಂದರದಾಸರ ಶಿಷ್ಯರೂ, ವೈಕುಂಠದಾಸರ ಶಿಷ್ಯರೂ ಏನು ಕಾರಣದಿಂದಲೋ ಹೊರಗೆ ಬರಲಿಲ್ಲ. ಹೆಸರು ಪಡೆಯಲಿಲ್ಲ, ಪದಗಳನ್ನು ರಚಿಸಿದಂತೆ ಕಾಣಲಿಲ್ಲ’ (ಎಸ್‌.ಕೆ.ರಾಮಚಂದ್ರರಾವ್‌, ದಾಸಸಾಹಿತ್ಯ, ಐ.ಬಿ.ಹೆಚ್‌, ಪು.೮೯) ಸಾಹಿತ್ಯ ಚರಿತ್ರಕಾರರಿಂದ ಹಿಡಿದು ಹೆಚ್ಚುಕಡಿಮೆ ಎಲ್ಲ ವಿದ್ವಾಂಸರೂ ಈ ಅಭಿಪ್ರಾಯವನ್ನು ಹೊಂದಿದ್ದಾರೆ. ಈ ಕಾಲದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳು, ಆ ಮೂಲಕ ಸಮಾಜಜೀವನ ಮತ್ತು ಧರ್ಮದ ಮೇಲಾದ ಆಘಾತಗಳು ಇದಕ್ಕೆ ಕಾರಣವೆಂದೂ ಊಹಿಸುತ್ತಾರೆ.

ಮಾಧ್ವಮತ ತತ್ವಗಳ ಮುಖ್ಯವಾಹಿನಿಯಾಗಿ ಕೀರ್ತನ ಸಾಹಿತ್ಯವನ್ನು ಗುರುತಿಸಲಾಗುತ್ತದೆ. ಈ ಬಗೆಗಿನ ಈವರೆಗಿನ ಅಧ್ಯಯನವೂ ಇದರ ಹಿನ್ನೆಲೆಯಲ್ಲಿಯೇ ನಡೆದುಬಂದಿದೆ. ೭೦ರ ದಶಕದಲ್ಲಿ ಸ್ಮಾರ್ತಸಂಪ್ರದಾಯದ ಕೀರ್ತನಕಾರರೂ ಇರುವುದನ್ನು ಪೊ|| ಎಂ.ವಿ. ಸೀತಾರಾಮಯ್ಯ ಮುಂತಾದವರು ಬೆಳಕಿಗೆ ತಂದಿದ್ದಾರೆ. ಚಿದಾನಂದವಧೂತ, ತಿಮ್ಮಪ್ಪದಾಸರು ಮತ್ತು ಅವರ ಶಿಷ್ಯರು, ಪರಮದೇವ, ವೇದಾಂತ ಶಿವರಾಮಶಾಸ್ತ್ರಿಗಳು ಮುಂತಾದವರನ್ನು ಇಲ್ಲಿ ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಕನ್ನಡ ಹರಿದಾಸ ಸಾಹಿತ್ಯದಲ್ಲಿ ದ್ವೈತಕೀರ್ತನ ಪರಂಪರೆಯ ಜೊತೆಗೆ ಅದ್ವೈತಕೀರ್ತನ ಪರಂಪರೆಯನ್ನು ವಿದ್ವಾಂಸರು ಸ್ಪಷ್ಟವಾಗಿ ಗುರುತಿಸುತ್ತಿದ್ದಾರೆ.

ವೈಧಿಕಧರ್ಮದ ಇನ್ನೊಂದು ಪ್ರಮುಖ ಶಾಖೆಯಾದ ವಿಶಿಷ್ಟಾದ್ವೈತ ಸಂಪ್ರದಾಯದಲ್ಲಿಯೂ ಇರುವ ಕೀರ್ತನ ಸಾಹಿತ್ಯವನ್ನು ಈಚೆಗೆ ೯೦ರ ದಶಕದಲ್ಲಿ ಪ್ರೊ|| ನಾ. ಗೀತಾಚಾರ್ಯ ಅವರು ಶೋಧಿಸಿ ದಾಖಲಿಸಿದ್ದಾರೆ. ನಾರಾಯಣಶರ್ಮ ಸಂಸ್ಕೃತಿ ಕೇಂದ್ರದ ಮೂಲಕ ಸಂಪಾದಿಸಿ ಪ್ರಕಟಿಸಿರುವ ನಾರಾಯಣಶರ್ಮರ ಕೀರ್ತನೆಗಳು (೧೯೯೩) ರಂಗದಾಸರ ಕೀರ್ತನೆಗಳು (೧೯೯೪) ಮೂವರು ಶ್ರೀವೈಷ್ಣವ ಹರಿದಾಸರ ಕೀರ್ತನೆಗಳು (೧೯೯೯) ಹಾಗೂ ೧೯೯೮ರಲ್ಲಿ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ದಿಂದ ಪ್ರಕಟವಾದ ತುಮಕೂರು ಜಿಲ್ಲೆಯ ಮೂವರು ಕೀರ್ತನಕಾರರು ಎಂಬ ಪುಸ್ತಕಗಳು ಹಾಗೂ ಶ್ರೀವೈಷ್ಣವ ಹರಿದಾಸಸಾಹಿತ್ಯ – – ಹೊಸ ಶೋಧ (ಇತಿಹಾಸ ದರ್ಶನ, ಸಂ. ೧೪) ಶ್ರೀವೈಷ್ಣೌ ಹರಿದಾಸ ಸಾಹಿತ್ಯ – ಒಂದು ಪರಿಚಯ (ಭೂಷಣ, ಪು. ೬೩೪) ಆದ್ಯ ಶ್ರೀವೈಷ್ಣವ ಕೀರ್ತನಕಾರರಾಗಿ ಬೇಲೂರು ವೈಕುಂಠದಾಸರು (ಇತಿಹಾಸದರ್ಶನ, ಪು. ಸಂಖ್ಯೆ ೧೧೧) ಮುಂತಾದ ಹಲವು ಲೇಖನಗಳು ಈ ಅವಧಿಯಲ್ಲಿ ಪ್ರಕಟವಾಗಿವೆ. ‘ಹರಿದಾಸ ಸಾಹಿತ್ಯದ ಮೂರು ದಾರಿಗಳು’(೨೦೦೪) ಎಂಬ ಪುಸ್ತಕದಲ್ಲಿ ಈ ಲೇಖನಕಗಳೆಲ್ಲ ಸಂಕಲನ ಗೊಂಡಿವೆ. ನಾರಾಯಣಶರ್ಮ ಸಂಸ್ಕೃತಿ ಕೇಂದ್ರ ‘ಶ್ರೀವೈಷ್ಣವ ಹರಿದಾಸ ಸಾಹಿತ್ಯ ಮಾಲೆ’ಯನ್ನೇ ಆರಂಭಿಸಿ ಈ ಪುಸ್ತಕಗಳನ್ನು ಪ್ರಕಟಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಮೂಲಕ ಕೀರ್ತನ ಸಾಹಿತ್ಯದ ಅಧ್ಯಯನದ ಇತಿಹಾಸದಲ್ಲಿ ಮಧ್ವ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಅದ್ವೈತ ಸಂಪ್ರದಾಯದ ಕೀರ್ತನಕಾರರ ಜೊತೆಗೆ ವಿಶಿಷ್ಟಾದ್ವೈತ ಸಂಪ್ರದಾಯದ ಕೀರ್ತನಕಾರರೂ ಸೇರ್ಪಡೆಯಾಗಿರುವುದನ್ನು ಕಾಣಬಹುದಾಗಿದೆ. ಇದನ್ನೆಲ್ಲ ಮಾನ್ಯಮಾಡಿರುವ ವಿದ್ವಾಂಸ ವಲಯ ಹರಿದಾಸ ಸಾಹಿತ್ಯವನ್ನು “ತ್ರಿವೇಣಿ ಸಂಗಮ” ಎಂದು ಕರೆಯುತ್ತಿದೆ.

. ಕರ್ನಾಟಕದಲ್ಲಿ ವಿಶಿಷ್ಟಾದ್ವೈತದ ಇತಿಹಾಸ

ಕರ್ನಾಟಕದಲ್ಲಿ ವಿಶಿಷ್ಟಾದ್ವೈತದ ಇತಿಹಾಸ ದ್ವೈತಕ್ಕಿಂತ ಹಿಂದಿನಿಂದ ಇದ್ದರೂ ೧೨ನೇ ಶತಮಾನದಲ್ಲೇ ಹೊಯ್ಸಳರ ರಾಜಧರ್ಮವಾಗಿ ಬೆಳೆದು ಬಂದಿದ್ದರೂ ಇದು ಜನಸಾಮಾನ್ಯರ ನಡುವೆ ಬೆಳೆದುಬರಲಿಲ್ಲ. ಇದಕ್ಕೆ ಕಾರಣವಾಗಿ ಇದರ ಧಾರ್ಮಿಕ ಆಚರಣೆಗಳು ತಮಿಳು ಭಾಷೆಯಲ್ಲಿದ್ದುದು ಮತ್ತು ಮತೀಯ ಗ್ರಂಥಗಳು ಸಂಸ್ಕೃತ ಹಾಗೂ ದ್ರಾವಿಡ (ತಮಿಳು) ಪ್ರಬಂಧಗಳಾಗಿದ್ದುದು ಎಂಬ ಸಾಮಾನ್ಯ ಅಭಿಪ್ರಾಯವೊಂದಿದೆ. ‘ರಾಮಾನುಜಾಚಾರ್ಯರು ಈ ಧರ್ಮದ ತಿರುಳನ್ನು ಎಲ್ಲರಿಗೂ ತಿಳಿಯುವಂತೆ ಸಾರ್ವಜನಿಕವಾಗಿ ಪ್ರಕಟಿಸುವುದರ ಮೂಲಕ ಸಾಮಾನ್ಯ ಜನರನ್ನು ಈ ಧರ್ಮದತ್ತ ಸೆಳೆದು ಭಕ್ತರನ್ನಾಗಿ, ಅನುಯಾಯಿಗಳನ್ನಾಗಿ ಮಾಡಿದರೇ ವಿನಾ ಮತೀಯ ಆಚರಣೆಯ ವಿಧಿವಿಧಾನಗಳಲ್ಲಿ ನೆಲೆಗೊಳಿಸಲಿಲ್ಲ. ಆದ್ದರಿಂದ ಅನ್ಯಮತೀಯರು ಶ್ರೀವೈಷ್ಣ ಮತಾನುಯಾಯಿಗಳಾದರೇ ವಿನಾ ಶ್ರೀವೈಷ್ಣವ ಬ್ರಾಹ್ಮಣರಾಗಲಿಲ್ಲ ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಆದ್ದರಿಂದಲೇ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸುವ ಗ್ರಂಥಗಳು ಕನ್ನಡದಲ್ಲಿ ಪ್ರಸಾರಗೊಳ್ಳಲೂ ಇಲ್ಲ ಮತ್ತು ಸೃಷ್ಟಿಯಾಗಲೂ ಇಲ್ಲ’. (ಮೂವರು ಶ್ರೀವೈಷ್ಣವ ಹರಿದಾಸರು ೧೯೯೯) ಎಂಬ ಮಾತು ಹೆಚ್ಚು ಸಮರ್ಥವಾಗಿರುವಂತೆ ತೋರುತ್ತದೆ. ಆದರೂ ಶ್ರೀವೈಷ್ಣವರೇ ಆದ ಬೇಲೂರು ವೈಕುಂಠದಾಸರ ಮತ್ತು ಪೂರ್ವದಲ್ಲಿ ಶ್ರೀವೈಷ್ಣವ ಅನುಯಾಯಿಗಳಾಗಿದ್ದರೆಂದು ಹೇಳುವ ಕನಕದಾಸರ ಕೀರ್ತನೆಗಳಲ್ಲಿ (ಮತ್ತು ವಿಶೇಷವಾಗಿ ಮೋಹನ ತರಂಗಿಣಿ, ಹರಿಭಕ್ತಿಸಾರ ಕೃತಿಗಳಲ್ಲಿ) ವಿಶಿಷ್ಟಾದ್ವೈತ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದಾದರೂ ಈವರೆಗೆ ಇವು ಮಧ್ವಪರಂಪರೆಯ ಮುಖ್ಯವಾಹಿನಿಯೊಳಗೇ ಸೇರಿಹೋಗಿದ್ದವು. ಹಾಗೆಯೇ ಚರಿತ್ರಕಾರರು ಇದಮಿತ್ಥಂ ಎಂದು ಹೇಳಲಾಗದ, ಕುಮಾರವ್ಯಾಸ, ಲಕ್ಷ್ಮೀಶರ ಕೃತಿಗಳನ್ನು ಶ್ರೀವೈಷ್ಣವತತ್ವದ ಹಿನ್ನೆಲೆಯಲ್ಲಿ ಪುನರಾಲೋಚಿಸಬಹುದಾಗಿದೆ. ಲಕ್ಷ್ಮೀಶನಂತು ಸ್ಪಷ್ಟವಾಗಿ ಶ್ರೀವೈಷ್ಣವ ಮತೀಯನೇ ಆಗಿದ್ದು ವಿದ್ವಾಂಸರು ಅವನನ್ನು ಲಕ್ಷ್ಮೀಕಾಂತ ಹೆಬ್ಬಾರ ಎಂದು ಹೆಸರಿಸಿದ್ದಾರೆ. ಅವನ ಹೆಸರಿನಲ್ಲಿ ಹತ್ತಾರು ಕೀರ್ತನೆಗಳೂ ಇವೆ. ಈ ಹಿನ್ನೆಯಲ್ಲಿ ವೈಕುಂಠದಾಸರು, ಕನಕದಾಸರು ಮತ್ತು ಲಕ್ಷ್ಮೀಶರನ್ನು ಶ್ರೀವೈಷ್ಣವ ಕೀರ್ತನಕಾರರನ್ನಾಗಿ ಪರಿಗಣಿಸಲಾಗಿದೆ. ಹೀಗೆ ಹರಿದಾಸ ಸಾಹಿತ್ಯದ ಉನ್ನತಿಯ ಕಾಲದಲ್ಲೆ ಶ್ರೀವೈಷ್ಣವ ಕೀರ್ತನ ಸಾಹಿತ್ಯ ಕಾಣಿಸಿಕೊಂಡಿರುವುದನ್ನು ಕಾಣಬಹುದು.

ಚಿಕ್ಕದೇವರಾಯ ಒಡೆಯರ ಕಾಲದಲ್ಲಿ ಇದು ರಾಜಧರ್ಮವಾಗಿ ಪ್ರವರ್ಧಮಾನಕ್ಕೆ ಬಂದ ನಂತರವೇ ಮತ್ತೆ ನೇರವಾಗಿ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ ಕಾಣಿಸಿಕೊಂಡಿದ್ದು, ಈ ಕಾಲದ ಚಿಕ್ಕದೇವರಾಜನ ‘ಚಿಕ್ಕದೇವರಾಜ ಬಿನ್ನಪ’, ತಿರುಮಲಾರ್ಯನ ‘ಗೀತಗೋಪಾಲ’, ಚಿಕ್ಕುಪಾಧ್ಯಾಯನ ‘ದಿವ್ಯಸೂರಿಚರಿತ’, ಸಂಚಿಹೊನ್ನಾಮ್ಮನ ‘ಹದಿಬದೆಯ ಧರ್ಮ’ ಮುಂತಾದವು ವಿಶಿಷ್ಟಾದ್ವೈತ ತತ್ವವನ್ನು ಪ್ರತಿಪಾದಿಸುವ ಕನ್ನಡ ಕೃತಿಗಳಾಗಿವೆ. ೪ನೇ ಘಟ್ಟದ ಕೀರ್ತನ ಸಾಹಿತ್ಯ ಪರಂಪರ;ಎಯ ಸ್ಯಷ್ಟಿಗೆ ಗೀತಗೋಪಾಲವೇ (ಸು.೧೭೦೦) ಮೂಲವಾಗಿದೆ ಎಂಬುದು ಎಲ್ಲ ವಿದ್ವಾಂಸರ ಮತ. ‘ಹರಿದಾಸ ಸಾಹಿತ್ಯದ ಕೀರ್ತನ ಪ್ರಕಾರವನ್ನು ಶ್ರೀವೈಷ್ಣವ ಕವಿಗಳು ಬಳಸಿಕೊಂಡರು’. (ರಂ.ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು. ೩೦) ‘ಹರಿ ಸಂಕೀರ್ತನೆಗಳ ಭಂಡಾರಕ್ಕೆ ಗೀತಗೋಪಾಲವು ಉನ್ನತವಾದ ಅಲ್ಲದಿದ್ದರೂ ತುಂಬ ಮೆಚ್ಚುವಂಥ ಗೀತನಿಧಿಯನ್ನು ನೀಡಿರುತ್ತದೆ.’ (ಅದೇ ಪು. ೩೦, ೩೧) ‘ಶ್ರೀವೈಷ್ಣವ ಸಂಪ್ರದಾಯದ ಗೀತೆಗಳಲ್ಲಿಯಂತು ಕನ್ನಡದಲ್ಲಿ ಇದೇ ಮೊದಲನೆಯದು’ (ಎಂ.ವಿ.ಸೀ., ಹರಿದಾಸರು ಮತ್ತು ಅನುಭಾವ ಕವಿಗಳು. ಪು.೫) ಎಂಬ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಗಿದೆ. ಆದರೆ ಇದು ಶುದ್ಧ ಕೀರ್ತನಸಾಹಿತ್ಯವಲ್ಲ, ಅಂದರೆ ಪುರಂದರ – ಕನಕದಾಸರುಗಳಂತಹ ಭಿನ್ನವಸ್ತು – ವಿಷಯವಿರುವ ಬಿಡಿಬಿಡಿ ಕೀರ್ತನೆಗಳಲ್ಲ. ಒಂದು ನಿರ್ಧಿಷ್ಟ ಕಾವ್ಯದ ಸ್ವರೂಪದ್ದಾಗಿದ್ದು ಜಯದೇವನ ಗೀತಗೋವಿಂದದ ಅನುವಾದವಾಗಿದೆ ಎಂಬ ಅಭಿಪ್ರಾಯವಿದೆ. ಇದರೊಂದಿಗೆ ಸಿಂಗಿರಾರ‍್ಯನ ‘ಗೀತರಂಗೇಶ್ವರ’, ಚಿಕ್ಕುಪಾಧ್ಯಾಯನ ‘ಚಿಕ್ಕದೇವರಾಯ ಶೃಂಗಾರ ಪದಗಳು’, ‘ರಂಗನಾಥನ ಲಾಲೀ ಪದಗಳು’ ಅನಂತರದ ಕಳಲೆ ಕಾಂತರಾಜನ ಮಗಳಾದ ದೊಡ್ಡಒಡೆಯರ ಪಟ್ಟಮಹಿಷಿ (೧೭೨೫) ಚೆಲುವಾಂಬೆಯ ‘ವೆಂಕಟಾಚಲ ಮತ್ತು ಅಲಮೇಲುಮಂಗಮ್ಮ ಲಾಲೀಪದಗಳು’, ‘ವರನಂದಿ ಕಲ್ಯಾಣ’ ಮುಂತಾದವು ಶ್ರೀವೈಷ್ಣವ ಕೀರ್ತನಸಾಹಿತ್ಯದಲ್ಲಿ ಬರಬಲ್ಲವೆನಿಸಿದರೂ ಇವೂ ಸಹ ನಿರ್ದಿಷ್ಟ ವಸ್ತು – ವಿಷಯಕ್ಕೆ ಸಂಬಂಧಿಸಿದ ಕೀರ್ತನಪ್ರಕಾರದ ಕಾವ್ಯಕೃತಿಗಳಾಗಿ ನಿಲ್ಲುತ್ತವೆಂಬ ಕಾರಣದಿಂಧ ಈವರೆಗಿನ ಹರಿದಾಸ ಚರ್ಚೆಯಲ್ಲಿ ಯಾರೂ ಅಳವಡಿಸಿಕೊಂಡಿಲ್ಲ. ಆದರೆ ಗೀತಗೋಪಾಲ ಶ್ರೀವೈಷ್ಣವ ತತ್ವಪ್ರತಿಪಾದನೆಯನ್ನು ಒಳಗೊಂಡಿರುವ ಶುದ್ಧ ಹರಿದಾಸ ಸಾಹಿತ್ಯಕೃತಿಯಾಗಿದ್ದು ಇದರ ಪ್ರಭಾವದಿಂದಲೇ ಕನ್ನಡ ಕೀರ್ತನ ಸಾಹಿತ್ಯ ಹತ್ತೊಂಬತ್ತನೆಯ ಶತಮಾನದವರೆಗೆ ವ್ಯಾಪಕವಾಗಿ ಕಾಣಿಸಿಕೊಂಡಿತು ಎಂದೇ ಹೇಳಬೇಕಾಗುತ್ತದೆ. ಈಚೆಗೆ ನಿಧನರಾದ ಶ್ರೀ ಎಂ.ಆರ್. ನರಸಿಂಹನ್‌ ಅವರೂ ಗೀತಗೋಪಾಲದ ಕೀರ್ತನೆಗಳ ಸ್ವಾರಸ್ಯವನ್ನು ದಾಖಲಿಸುತ್ತ ‘ಇವು ಕನ್ನಡ ಕೀರ್ತನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ’ ಎಂದಿದ್ದಾರೆ (ಕರ್ನಾಟಕ ಲೋಚನ – ಡಿಸೆಂಬರ್ ೨೦೦೬) ಈ ದೃಷ್ಟಿಯಲ್ಲಿ ಗೀತಗೋಪಾಲ ಮತ್ತು ಸಮಕಾಲೀನರಾದ ಇತರರ ಎಲ್ಲ ಹಾಡುಗಳ ಕೃತಿಗಳನ್ನೂ, ಕೀರ್ತನೆಗಳ ದೃಷ್ಟಿಯಿಂದ ಪುನಃ ಪರಿ ಶೀಲಿಸುವ ಅಗತ್ಯವಿದೆ. ಇವನ್ನು ಸಮಗ್ರವಾಗಿ ಸಂಕಲಿಸುವ ಪ್ರಯತ್ನ ನಡೆಯುತ್ತಿದೆ.

೧೯ – ೨೦ನೇ ಶತಮಾನವು ಶ್ರೀವೈಷ್ಣವ ಹರಿದಾಸಸಾಹಿತ್ಯದ ಸಮೃದ್ಧಿಯ ಕಾಲವಾಗಿದೆ. ಕ್ರಿ.ಶ. ೧೮೪೭ರ ಸುಮಾರಿನಲ್ಲಿದ್ದ ತುಳಸೀರಾಮದಾಸರು ಹಾಗೂ ೧೮೩೦ರ ಅವಧಿಯಲ್ಲಿ ಕಾಣಿಸಿಕೊಂಡ ರಂಗದಾಸರು, ವೆಂಕಟವರದಾರ್ಯರು ಮತ್ತು ಯದುಗಿರಿಯಮ್ಮ ಅವರುಗಳು ೧೯ನೇ ಶತಮಾನದ ವಿಶಿಷ್ಟಾದ್ವೈತ ಹರಿದಾಸ ಪರಂಪರೆಯ ಆರಂಭದ ಕೀರ್ತನಕಾರರಾಗಿ ಕಂಡುಬರುತ್ತಾರೆ. ಯದುಗಿರಿಯಮ್ಮ ಶ್ರೀವೈಷ್ಣವ ಮಹಿಳಾ ಕೀರ್ತನಕಾರರಲ್ಲಿ ಪ್ರಥಮರೆನಿಸಿದ್ದಾರೆ. ಈವರೆಗಿನ ಪರಿ ವೀಕ್ಷಣೆಯ ಹಿನ್ನೆಲೆಯಲ್ಲಿ ಶ್ರೀವೈಷ್ಣವ ಹರಿದಾಸರನ್ನು ಈ ರೀತಿ ಪಟ್ಟಿ ಮಾಡಬಹುದು.

೧. ಬೇಲೂರು ವೈಕುಂಠದಾಸರು, ಬೇಲೂರು (ಕ್ರಿ.ಶ. ಸು. ೧೪೫೦)
೨. ಕನಕದಾಸರು, ಕಾಗಿನೆಲೆ (ಕ್ರಿ.ಶ.ಸು. ೧೫೦೮)
೩. ಕವಿ ಲಕ್ಷ್ಮೀಶ (ಲಕ್ಷ್ಮಿಕಾಂತ ಹೆಬ್ಬಾರಂ) ದೇವನೂರು (ಸು.೧೫೫೦)
೪. ತಿರುಮಲಾರ್ಯ, ಶ್ರೀರಂಗಪಟ್ಟಣ (ಕ್ರಿ.ಶ.ಸು. ೧೭೦೦)
೫. ಯದುಗಿರಿಯಮ್ಮ, ಬೆಂಗಳೂರು (ಕ್ರಿ.ಶ.ಸು. ೧೮೨೮)
೬. ರಂಗದಾಸರು (ತುಮಕೂರು ಜಿಲ್ಲೆ) ಕ್ರಿ.ಶ. ೧೮೩೦)
೭. ರಂಗದಾಸರು (ತುಮಕೂರು ಜಿಲ್ಲೆ) ಕ್ರಿ.ಶ. ೧೮೩೦
೭. ವೆಂಕಟವರದಾರ್ಯರು (ಸರಗೂರು, ಚಾಮರಾಜನಗರ) ಕ್ರಿ.ಶ. ಸು. ೧೮೩೦
೮. ತುಳಸೀರಾಮದಾಸರು (ಬೆಂಗಳೂರು) ಕ್ರಿ.ಶ. ೧೮೪೭
೯. ಮಳಿಗೆ ರಂಗಸ್ವಾಮಿದಾಸರು (ಮುಳಬಾಗಿಲು) ಕ್ರಿ.ಶ. ೧೮೬೮
೧೦. ಚನ್ನಪಟ್ಟಣದ ಅಹೋಬಲದಾಸರು (ಚನ್ನಪಟ್ಟಣ) ಕ್ರಿ.ಶ. ೧೮೬೦
೧೧. ಆಸೂರಿ ರಾಮಸ್ವಾಮಿ ಅಯ್ಯಂಗಾರ್ (ಬೆಂಗಳೂರು) ಕ್ರಿ.ಶ. ೧೮೮೬
೧೨. ನಂಜನಗೂಡು ತಿರುಮಲಾಂಬ (ನಂಜನಗೂಡು) ಕ್ರಿ.ಶ. ಸು ೧೮೮೭
೧೩. ಶಾಮಶರ್ಮದಾಸರು (ಬೆಂಗಳೂರು ಜಿಲ್ಲೆ) ಕ್ರಿ.ಶ. ೧೮೯೧
೧೪. ಎಸ್‌. ಸಂಪತ್ತೈಯಂಗಾರ್. (ಬೆಂಗಳೂರು) ಕ್ರಿ.ಶ. ೧೯೦೦
೧೫. ನಾರಾಯಣಶರ್ಮರು (ಬೆಂಗಳೂರು ಜಿಲ್ಲೆ) ಕ್ರಿ.ಶ. ಸು. ೧೯೧೨
೧೬. ಕೋಸಲಪುರೀಶ ಅಂಕಿತದ ಕೀರ್ತನಕಾರರು ಸು. ೧೮ನೇ ಶ.
೧೭. ಬಡ್ಡಣ್ಣಯ್ಯಾಚಾರ್ (ಅಣ್ಣಾವಧೂತರು) ಸು. ೧೯ನೇ ಶ.

ತುಳಸಿರಾಮದಾಸರ ಶಿಷ್ಯಪರಂಪರೆಯ ಸು. ೨೫ ಜನ ಹರಿದಾಸರು (೧೮೫೦ ರಿಂದ ೧೯೫೦) ಕಂಡುಬಂದಿದ್ದರೂ ಇವರ ಇತಿವೃತ್ತ ಮತ್ತು ಕೀರ್ತನೆಗಳು ಅಲಭ್ಯ. ಆದರೆ ಇವರುಗಳು ತುಳಸಿರಾಮದಾಸರನ್ನು ಸ್ತುತಿಸಿರುವ ಕೀರ್ತನೆಗಳು ಲಭ್ಯವಿದೆ.

ಸರಿಯಾಗಿ ಸರ್ವೇಕ್ಷಣೇ ಮಾಡಿದಲ್ಲಿ ಈ ಸಂಪ್ರದಾಯದಲ್ಲಿ ಇನ್ನೂ ಹೆಚ್ಚಿನ ಕೀರ್ತನಕಾರರು ಲಭ್ಯವಾಗುವ ಸಾಧ್ಯತೆಯಿದೆ. ಈವರೆಗೆ ಕೀರ್ತನೆಗಳು ಲಭ್ಯವಾಗಿರುವುದನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ. ಲಭ್ಯವಾಗಬೇಕಾದ ಕೀರ್ತನಕಾರರ ಮತ್ತು ಕೀರ್ತನೆಗಳ ಸಂಖ್ಯೆ ಅಪಾರವಾಗಿಯೇ ಇದೆ. ಈವರೆಗಿನ ದಾಖಲೆಯಲ್ಲೇ ಸಾವಿರವನ್ನು ದಾಟುವ ಇವರ ಕೀರ್ತನೆಗಳ ಸಂಖ್ಯೆ ಸಮಗ್ರ ಸರ್ವೇಕ್ಷಣೆಯ ನಂತರ ಎರಡು ಸಾವಿರಕ್ಕೂ ಮಿಗಿಲಾಗುತ್ತದೆ.

ಶ್ರೀವೈಷ್ಣವ ಕೀರ್ತನಕಾರರು ಎಂದರೆ ಶ್ರೀವೈಷ್ಣವ ಸಂಪ್ರದಾಯದಲ್ಲಿ ಅಂದರೆ ವಿಶಿಷ್ಟಾದ್ವೈತ ತತ್ವದ ತಳಹದಿಯ ಮೇಲೆ ಕೃತಿಗಳನ್ನು ರಚಿಸಿರುವವರು ಎಂದು ಗ್ರಹಿಸಲಾಗಿದೆ. ಇಲ್ಲಿ ಶ್ರೀವೈಷ್ಣವ ಮತೀಯರಷ್ಟೇ ಅಲ್ಲದೆ ಪ್ರಮುಖವಾಗಿ ಅನ್ಯಮತೀಯರೂ ಈ ತತ್ವಪ್ರತಿಪಾದನೆಯಲ್ಲಿ ಕಾಣಸಿಗುತ್ತಾರೆ. (ಕನಕದಾಸರು, ಮಳಿಗೆ ರಂಗಸ್ವಾಮಿದಾಸರು, ಚನ್ನಪಟ್ಟಣದ ಅಹೋಬಲದಾಸರು ಇತ್ಯಾದಿ) ಆದ್ದರಿಂದ ಕೀರ್ತನೆಗಳಲ್ಲಿ ಕಂಡುಬರುವ ಶ್ರೀವೈಷ್ಣವ ತತ್ವದ ಲಕ್ಷಣಗಳ ದೃಷ್ಟಿಯಿಂದ ಇಲ್ಲಿನ ಕೀರ್ತನಕಾರರನ್ನು ಶ್ರೀವೈಷ್ಣವ ತತ್ವದ ಲಕ್ಷಣಗಳ ದೃಷ್ಟಿಯಿಂದ ಇಲ್ಲಿನ ಕೀರ್ತನಕಾರರನ್ನು ಶ್ರೀವೈಷ್ಣವ ಕೀರ್ತನಕಾರರು ಎಂದು ಪರಿಗಣಿಸಲಾಗಿದೆ. ಈ ಕಾರಣದಿಂದಲೇ ಶ್ರೀವೈಷ್ಣವ ಕೀರ್ತನ ಸಾಹಿತ್ಯವು, ಕೇವಲ ವೈದಿಕ ಸಾಹಿತ್ಯದ ಮಿತಿಯಲ್ಲಿ ನಿಲ್ಲದೆ ಜನಪರವಾದ ಸಾಹಿತ್ಯವಾಗಿದ್ದು ಹರಿದಾಸಸಾಹಿತ್ಯಕ್ಕಿದ್ದ ವೈದಿಕದ ಮಿತಿಯನ್ನು ಮೀರಿ ನಿಲ್ಲುತ್ತದೆ.