. ಸಂಕ್ಷಿಪ್ತದಲ್ಲಿ ಶ್ರೀವೈಷ್ಣವ ತತ್ವದರ್ಶನ

ಕೀರ್ತನೆಗಳಲ್ಲಿ ಕಂಡುಬರುವ ಈ ಧರ್ಮ – ತತ್ವದ ಪ್ರತಿಪಾದನೆಯನ್ನು ಅರ್ಥಮಾಡಿಕೊಳ್ಳುವ ಉದ್ದೇಶಕ್ಕಾಗಿ ಇಲ್ಲಿ ಶ್ರೀವೈಷ್ಣವ ಧರ್ಮದ ಮುಖ್ಯ ತತ್ವಗಳನ್ನು ಸ್ಥೂಲವಾಗಿ ವಿವರಿಸಲಾಗಿದೆ.

. ಶ್ರೀವೈಷ್ಣವ ಧರ್ಮ: ಶ್ರೀವೈಷ್ಣವ ಧರ್ಮವು ‘ಶ್ರೀವೈಷ್ಣವ ಮತ’ ‘ಪ್ರಪತ್ತಿ ಧರ್ಮ’ ‘ಶ್ರೀವೈಷ್ಣವ ಸಿದ್ಧಾಂತ’ ‘ರಾಮಾನುಜ ದರ್ಶನ’ ‘ಭಗವದ್ರಾಮಾನುಜೀಯ’ ‘ಉಭಯವೇದಾಂತ’ ‘ಸವಿಶೇಷಾದ್ವೈತ’ ‘ವಿಶಿಷ್ಟಾದ್ವೈತ’ ‘ವೀರವೈಷ್ಣವ’ ಮುಂತಾದ ಹೆಸರುಗಳಿಂದ ಪ್ರಚಲಿತವಾಗಿರುವ ವಿಷ್ಣುಪಾರಮ್ಯದಿಂದ ಕೂಡಿದ ಧರ್ಮ. ದಕ್ಷಿಣ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ಬಹುಸಂಖ್ಯಾತರ ಧರ್ಮ. ವೈದಿಕ ಜನಾಂಗದಲ್ಲಿರುವ ಒಂದು ಮುಖ್ಯ ಪಂಗಡ. ತ್ರಿಮತಸ್ಥ ಬ್ರಾಹಣರಲ್ಲಿ ಒಂದು ಗುಂಪು.

ವೇದಕಾಲದಿಂದಲೂ ರೂಢಿಯಲ್ಲಿದ್ದ ವಾಸುದೇವ ಅಥವ ಕೃಷ್ಣಪೂಜೆಯ ಭಕ್ತಿಪಂಥ ಅಥವ ಭಾಗವತ ಸಂಪ್ರದಾಯವು ಹಲವು ಮಾರ್ಪಾಟುಗಳನ್ನು ಹೊಂದುತ್ತ ಮಹಾಭಾರತದಲ್ಲಿ ಒಂದು ಖಚಿತವಾದ ರೂಪವನ್ನು ಪಡೆಯಿತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾಋಎ. ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಮೂಲಕ ವಿಷ್ಣುವಿನ ರಾಮ – ಕೃಷ್ಣ – ಅವತಾರದ ಕಥೆಗಳು ಜನಪ್ರಿಯವಾಗಿ ವೇದ – ಆಗಮ – ಉಪನಿಷತ್ತುಗಳ ಸಾರವೆಲ್ಲ ಇವುಗಳಲ್ಲಿ ಮೈಗೂಡಿಕೊಂಡು, ಹಲವು ರೂಪಗಳಲ್ಲಿ ಆಚರಣೆಯಲ್ಲಿದ್ದ ವೈದಿಕ ಸಂಸ್ಕೃತಿಯೊಂದು ಪ್ರಬಲವಾಗಿ ಈ ನೆಲದಲ್ಲಿ ಬೇರೂರಿತು. ಪದೇ ಪದೇ ಅನ್ಯಸಂಸ್ಕೃತಿಗಳು ಇದರ ಮೇಲೆ ದಾಳು ಮಾಡಿ – ಪ್ರಭಾವಬೀರಿ ಭಿನ್ನಾಭಿಪ್ರಾಯಗಳಿಗೆ ಭಿನ್ನಪಂಥಗಳಿಗೆ ಕಾರಣವಾಗಿರುವುದನ್ನು ಇತಿಹಾಸ ಹೇಳುತ್ತದೆ. ಅಂತಹ ಸಂದರ್ಭದಲ್ಲೆಲ್ಲ ಒಬ್ಬೊಬ್ಬ ಸಮಾಜಸುಧಾರಕರು, ಧರ್ಮಗುರುಗಳು, ಆಚಾರ್ಯಪುರುಷರು ಹುಟ್ಟಿಕೊಂಡು ವೈದಿಕ ಧರ್ಮ – ಸಂಸ್ಕೃತಿಯನ್ನು ಇನ್ನಷ್ಟು ಭದ್ರಪಡಿಸಿರುವುದನ್ನು ಕಾಣುತ್ತೇವೆ. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವಣ್ಣ, ವಿವೇಕಾನಂದ, ಗಾಂಧೀಜಿ ಇವರೆಲ್ಲ ಆ ಸಾಲಿನಲ್ಲಿ ನಿಲ್ಲುವವರೇ. ಇವರುಗಳ ತತ್ವ ಚಿಂತನೆಗಳು ತತ್ವತ್ರಯವನ್ನಾಧರಿಸಿವೆ.

. ತತ್ವತ್ರಯ: ಪ್ರಪಂಚದ ಮೂರು ತತ್ವಗಳಾದ ಪುರುಷ – ಪ್ರಕೃತಿ – ಪರಮಾತ್ಮ ಅಥವಾ ಜೀವ – ಜಗತ್ತು – ಜಗನ್ನಿಯಾಮಕ ಅಥವ ಚೇತನ – ಅಚೇತನ ಬ್ರಹ್ಮ ಅಥವಾ ಚಿತ್‌ – – ಅಚಿತ್‌ – ಈಶ್ವರ ಈ ಮೂರನ್ನು ವಿವರಿಸಿ ಪರಸ್ಪರ ಸಂಬಂಧ – ಅರ್ಥಗಳನ್ನು ತಿಳಿಸುವುದೇ ಎಲ್ಲ ಧರ್ಮಗಳ ಗುರಿ, ಇದರ ಜಿಜ್ಞಾಸೆಯೇ ಅನೇಕ ಪಂಥಗಳಿಗೆ, ಸಿದ್ಧಾಂತಗಳಿಗೆ, ಮತಗಳ ಹುಟ್ಟಿಗೆ ಕಾರಣವಾಗಿದೆ. ಅದ್ವೈತವಿಶಿಷ್ಟಾದ್ವೈತ – ದ್ವೈತಗಳೂ ಇದರ ಫಲವೇ ಆಗಿದೆ. ಜಗತ್‌ ಸ್ವರೂಪಿಯಾದ ದೇವರನ್ನು ಪುರುಷ ಬ್ರಹ್ಮ ಈಶ್ವರ ಎಂದೆಲ್ಲ ಕರೆದು ಅವನಿಗೂ ಈ ಜಗತ್ತಿನಲ್ಲಿ ಕಾಣುವ ಜಡ – ಚೇತನಗಳು ಅಥವ ಚಿತ್‌ – ಅಚಿತ್‌ಗಳಿಗೂ ಇರುವ ಪರಸ್ಪರ ಸಂಬಂಧದ ಸ್ವರೂಪವನ್ನು ಈ ಮೂರು ಮತಗಳು ಮೂರು ಬೇರೆ ಬೇರೆ ರೀತಿಯಲ್ಲಿ ಚರ್ಚಿಸುವುದರ ಮೂಲಕ ಭಿನ್ನಮತಗಳಾಗಿ ಬೇರ್ಪಟ್ಟಿವೆ.

ಜೀವ ಮತ್ತು ಜಗತ್ತುಗಳು ಜಗದೀಶ್ವರನಿಂದಲೇ ಪ್ರೇರತಿವಾದವುಗಳು, ಇವೆರಡೂ ಒಂದೇ, ಇವುಗಳಲ್ಲಿ ಭೇದವಿಲ್ಲ, ಪರಮಾತ್ಮನಿಂದಲೇ ನಡೆಯತಕ್ಕವುಗಳು, ಪರಮಾತ್ಮನ ವಿನಾ ಬೇರೆ ವಸ್ತುವಿಲ್ಲ, ಪರಮಾತ್ಮ ಒಬ್ಬನೇ ಎಂದು ಅಭೇದವನ್ನು ಹೇಳುವ ತತ್ವವೇ ಅದ್ವೈತ. ಇವೆರಡೂ ಬೇರೆ ಬೇರೆ ಎಂದು ಭೇದವನ್ನು ಕಲ್ಪಿಸುವ ತತ್ವದ್ವೈತ. ವಿಶಿಷ್ಟಾದ್ವೈತದಲ್ಲಿ ಈ ಎರಡು ತತ್ವಗಳನ್ನೂ ಬೆಸೆಯುವ ಕೆಲಸಮಾಡಿರುವಂತಿದೆ. ಚಿತ್‌ – ಅಚಿತ್‌ಗಳು ಈಶ್ವರನಿಂದ ಬೇರೆಯಾದರೂ ಅವನಿಗೆ ಶರೀರವಾಗಿರತಕ್ಕವು, ಅವನ ವಿಶೇಷಣಗಳು, ಆದ್ದರಿಂದ ಅವನಿಲ್ಲದೆ ಇವಕ್ಕೆ ಅಸ್ತಿತ್ವವಿಲ್ಲ. ಹಾಗಾಗಿ ಈ ವಿಶೇಷಣಗಳಿಂದ ಕೂಡಿದ ಪರಮಾತ್ಮನೊಬ್ಬನೇ ದೈವ. ಜೀವ, ಜಗತ್ತುಗಳು ಜಗದೀಶ್ವರನ ಶರೀರ, ವಿಶೇಷಣ ಎಂಬ ವೈಶಿಷ್ಟ್ಯವನ್ನು ಹೇಳುವ ಮೂಲಕ ವಿಶಿಷ್ಟಾದ್ವೈತವೆನಿಸಿದೆ.

ಈ ತತ್ವಗಳು ಮತ – ಪಂಥಗಳಾಗಿ ಬಳಕೆಗೆ ಬರುವ ಕಾಲದಲ್ಲಿ ವೈದಿಕ ಸಂಸ್ಕೃತಿಯಲ್ಲಿ ಪೂಜೆಗೊಳ್ಳುತ್ತಿದ್ದ ಈಶ್ವರ ಸ್ವರೂಪಕ್ಕೆ ಎರಡು ರೂಪಗಳಿದ್ದವು. ಶಿವ – ಕೇಶವ ಅಥವಾ ಹರಿ – ಹರ. ವೇದಗಳ ಕಾಲದಲ್ಲಿ ಇವುಗಳ ಜೊತೆಗೆ ಇಂದ್ರ, ವರುಣ, ಅಗ್ನಿ, ಸೂರ್ಯ, ಬ್ರಹ್ಮ ಇನ್ನೂ ಮುಂತಾದ ಅನೇಕ ದೇವತೆಗಳೂ ಪೂಜಾರ್ಹವಾಗಿದ್ದವು. ಕಾಲಕ್ರಮೇಣ ಅವುಗಳೆಲ್ಲ ಹಿಂದೆ ಸರಿದು ಈ ಎರಡು ದೈವಗಳೇ ಪ್ರಾಬಲ್ಯ ಸಾಧಿಸಿದ್ದವು. ಅದ್ವೈತತತ್ವವು ಹರಿ – ಹರ ಇಬ್ಬರನ್ನೂ ಸಮಾನ ವಾಗಿ ಕಂಡು ಈಶ್ವರರೂಪವನ್ನು ಬ್ರಹ್ಮ ಎಂದು ಕರೆದು ಅಬೇಧ ಕಲ್ಪಿಸಿದರೆ ದ್ವೈತ ದಲ್ಲಿ ಹರನನ್ನು ಒಪ್ಪಿಕೊಂಡರೂ ಈಶ್ವರಸ್ವರೂಪವನ್ನು ಹರಿ ಎಂದು ಕರೆದು ಹರಿ ಪಾರಮ್ಯವನ್ನು ಸಾಧಿಸಿರುವುದನ್ನು ಕಾಣುತ್ತೇವೆ. ವಿಶಿಷ್ಟಾದ್ವೈತ ಹರನನ್ನು ನಿರಾಕರಿಸಿ ಹರಿಸರ್ವೋತ್ತಮತ್ವವನ್ನು ಮಾತ್ರ ಸ್ವೀಕರಿಸಿ ಹರಿಏಕನಿಷ್ಠೆಯನ್ನು ಸಾಧಿಸಿದೆ. ಇದನ್ನು ಈ ಕೆಳಕಂಡ ವಿಶೇಷ ಲಕ್ಷಣಗಳಿಂದ ಗುರುತಿಸಬಹುದಾಗಿದೆ.

. ಶ್ರೀಹರಿ ಏಕನಿಷ್ಠೆ: ಈ ಭೂಲೋಕ, ಇದರೊಂದಿಗಿರುವ ಇನ್ನೂ ಹಲವು ಲೋಕಗಳನ್ನು ಹೊಂದಿರುವ, ಬ್ರಹ್ಮಾಂಡವನ್ನೇ ವ್ಯಾಪಿಸಿರುವ, ಈ ಜಗತ್ತನ್ನೇ ದೇಹವನ್ನಾಗಿಸಿಕೊಂಡಿರುವ, ಸರ್ವಶಕ್ತಿ ಸ್ವಾತಂತ್ರ್ಯಗಳಿಂದ ಕೂಡಿರುವ ಪುರುಷನೊಬ್ಬನಿರುವನು. ಅವನು ಊಹಿಸಲಸಾಧ್ಯವಾದ ವಿಶ್ವರೂಪಿಯಾಗಿರುವನಾದರೂ ಬೇರೆ ಬೇರೆ ರೂಪಗಳನ್ನೂ ಧರಿಸುವ ಶಕ್ತಿಯುಳ್ಳವನು. ಸರ್ವೇಶ್ವರನೂ ಪರಮ ಪುರುಷನೂ ಸರ್ವಶಕ್ತನೂ ಪರಮಾತ್ಮನೂ ಆದ ಈತನು ‘ನಾರಾಯಣ’ ರೂಪದಿಂಧ ವೈಕುಂಠದಲ್ಲಿರುವನು. ಈ ವೈಕುಂಠ ಲೋಕವನ್ನು ‘ ಪರಮಪದ’ ಎಂದು ಕರೆದಿದ್ದು ನಾರಾಯಣನನ್ನು ‘ಪರವಾಸುದೇವ’ ರೂಪದಲ್ಲೂ ಗುರುತಿಸಲಾಗಿದೆ. ಇವನು ಸಮಸ್ತ ಕಲ್ಯಾಣಗುಣಾನ್ವಿತ, ದಿವ್ಯಮಂಗಳಕರ ವಿಗ್ರಹ, ಸಮಸ್ತ ಸಂಪತ್ತುಳ್ಳವನು, ಪರಮಕಾರುಣ್ಯಮೂರ್ತಿ. ಇವನಿಗೆ ಸಮಾನರೂ ಅಧಿಕರೂ ಈ ಬ್ರಹ್ಮಾಂಡದಲ್ಲಿ ಮತ್ತೊಬ್ಬರಿಲ್ಲ. ಇವನು ‘ಶ್ರೀ’ ಅಥವ ‘ಲಕ್ಷ್ಮೀ’ ಹೆಸರಿನ ಪತ್ನೀ ಸಮೇತನಾಗಿರುತ್ತಾನೆ. ಶ್ರೀಮನ್ನಾರಾಯಣನಂತೆ ಶ್ರೀದೇವಿಯೂ ಈಶ್ವರ ಸ್ವರೂಪ ಳಾದರೂ ನಾರಾಯಣನಿಗೆ ಅಧೀನ ಸ್ವಾತಂತ್ರ್ಯವುಳ್ಳವನು. ವೈಕುಂಠದಲ್ಲಿ ಲಕ್ಷ್ಮೀ ನಾರಾಯಣನೊಂದಿಗೆ ಅನಂತ (ಆದಿಶೇಷ) ಗರುಡ, ವಿಶ್ವಕ್ಸೇನರೂ ಇದ್ದು ಇವರೆಲ್ಲ ನಿತ್ಯರು ಮತ್ತು ನಾರಾಯಣನ ಸೇವಕರು.

ಹೀಗೆ ಸರ್ವೋತ್ತಮನಾಗಿರುವ ಶ್ರೀಮನ್ನಾರಾಯಣನೇ ‘ಪರತತ್ವ’ ಎಂದು ನಂಬುವುದೇ ಶ್ರೀವೈಷ್ಣವ ಧರ್ಮದ ಸಿದ್ಧಾಂತ. ಈ ಸಿದ್ಧಾಂತಜ್ಞಾನವು ಜೀವನ ಆತ್ಮ ಶ್ರೇಯಸ್ಸಿಗೆ ಕಾರಣವಾಗಿ ಆ ಶ್ರೇಯಸ್ಸೇ ಮುಕ್ತಿ ಎನಿಸಿಕೊಳ್ಳುತ್ತದೆ. ಇತರ ಮತಗಳು ದುಃಖವನ್ನು ದೂರಮಾಡಿ ಸುಖಾಪೇಕ್ಷೆಗಾಗಿ ‘ತತ್ವ’ವನ್ನು, ಅದನ್ನು ಪಡೆಯುವ ಫಲವಾದ ‘ಪುರುಷಾರ್ಥ’ವನ್ನು, ಅದಕ್ಕಾಗಿ ಕ್ರಮಿಸುವ ಮಾರ್ಗವಾದ ‘ಹಿತ’ವನ್ನು ವಿವಿಧ ಸಾಧನೋಪಾಯಗಳಿಂದ ಕಂಡುಕೊಂಡಿವೆಯಾದರೆ ವಿಶಿಷ್ಠಾದ್ವೈತ ಈ ಒಂದೊಂದಕ್ಕೂ ಪ್ರತ್ಯೇಕವಾಗಿ ಸಾಧನೆ ಮಾಡಬೇಕಾದ ಅಗತ್ಯವಿಲ್ಲವೆಂದೂ ಎಲ್ಲಕ್ಕೂ ಶ್ರೀಮನ್ನಾರಾಯಣನೊಬ್ಬನನ್ನೇ ಆಶ್ರಯಿಸಿದರೆ ಸಾಕೆಂದೂ ಎಲ್ಲವನ್ನೂ ಅವನೇ ಕರುಣಿಸುತ್ತಾನೆಂದೂ ‘ಏಕನಿಷ್ಠ ದೇವೋಪಾಸನೆ’ಯನ್ನು ವಿಶಿಷ್ಟವಾಗಿ ಪ್ರತಿಪಾದಿಸಿದೆ. ಮೋಕ್ಷಕ್ಕೆ ಅತ್ಯಂತ ಸರಳ – ಸುಲಭ ಉಪಾಯವಾಗಿ ‘ಪ್ರಪತ್ತಿ’ ಅಥವಾ ‘ಧ್ಯಾನ’ದ ಮಾರ್ಗವನ್ನು ಹೇಳುತ್ತದೆ. ಇದರ ಸಾಧನೆಗೆ ಹರಿನಾಮಸ್ಮರಣೆಯಷ್ಟೇ ಸಾಕೆನ್ನುತ್ತದೆ.

. ಪ್ರಪತ್ತಿಶರಣಾಗತಿ: ಇತರ ಧರ್ಮಗಳಲ್ಲಿ ಮೋಕ್ಷಪಡೆಯಲು ಹಲವು ಜನ್ಮಗಳನ್ನು ಅನುಭವಿಸಬೇಕಾಗುತ್ತದೆ. ಪಾಪಶೇಷಗಳು ಕಳೆಯುವವರೆಗೂ ಜೀವಕ್ಕೆ ಮುಕ್ತಿಯಿಲ್ಲ. ಅಲ್ಲಿಯವರೆಗೆ ಸಾಧನೆ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಶ್ರೀವೈಷ್ಣವ ಧರ್ಮದಲ್ಲಿ ಮನುಷ್ಯಜನ್ಮವೇ ಸರ್ವಶ್ರೇಷ್ಠ ಮತ್ತು ಜನ್ಮಾಂತರ ವಿಕಾಸದಲ್ಲಿ ತುಟ್ಟತುದಿಯದು. ಇಲ್ಲಿಂದ ಎಂದಿಗೂ ನಾಶವಿಲ್ಲದ, ಶಾಶ್ವತವಾದ, ಜ್ಞಾನಾಲನಂದ ಮಯವಾದ ವೈಕುಂಠ ಸೇರುವುದೇ ಮೋಕ್ಷದ ಸ್ಥಿತಿ. ಅದಕ್ಕಾಗಿ ಕ್ಲಿಷ್ಟಕರವಾದ ಹಲವು ‘ಯೋಗ’ಗಳನ್ನು ಅನುಸರಿಸಬೇಕಾಗಿಲ್ಲ. ಶ್ರೀಮನ್ನಾರಾಯಣನಲ್ಲಿ ಪ್ರಪತ್ತಿ ಅಥವಾ ಶರಣಾಗತಿ ಅಥವಾ ಭರನ್ಯಾಸ ಮಾಡುವುದು ಅತ್ಯಂತ ಸುಲಭ ಉಪಾಯ.ಜೀವನು ಸಂಪೂರ್ಣವಾಗಿ ಪರಮಾತ್ಮನಲ್ಲಿ ಶರಣಾದರೆ ಅವನ ಹೊಣೆ ಆ ಪರಮಾತ್ಮನಿಗೆ ಸೇರುವುದು. ಅವನು ಮೋಕ್ಷವನ್ನು ಕರುಣಿಸುತ್ತಾನೆ. ಜಗತ್ತಿಗೆ ಮಾತಾ ಪಿತೃಗಳಾದ ಲಕ್ಷ್ಮೀ – ನಾರಾಯಣರು ಅಭಯ ನೀಡುತ್ತಾರೆ. ಕರುಣೆ ತೋರುತ್ತಾರೆ. ವೈಕುಂಠದಲ್ಲಿ ಸೇರಿಸುತ್ತಾರೆ ಎಂದು ನಂಬುವುದೇ ಶ್ರೀವೈಷ್ಣವ ಧರ್ಮ. ಈ ಪ್ರಪತ್ತಿ ಧರ್ಮವನ್ನು ಈ ಎರಡು ಶ್ಲೋಕಗಳು ಸ್ಪಷ್ಟವಾಗಿ ಪ್ರತಿಪಾದಿಸುತ್ತವೆ.

ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೆ
ಅಭಯಂ ಸರ್ವಭೂತೇಭ್ಯೋ ಪರಮೈತದ್ವತಂಮಮ
 – ಶ್ರೀರಾಮ, ರಾಮಾಯಣ

(ಒಂದು ಬಾರಿ ನನ್ನಲ್ಲಿ ಪ್ರಪತ್ತಿಯನ್ನು ಮಾಡಿದರೆ, ಎನ್ನವನೆಂದು ಯೋಚಿಸುವ ಸರ್ವಭೂತಗಳಿಗೂ ಅಭಯವನ್ನು ಕೊಡುತ್ತೇನೆ.)

ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||
 – ಶ್ರೀಕೃಷ್ಣ, ಭಗವದ್ಗೀಥೆ.

(ಸಮಸ್ತ ಉಪಾಯಗಳನ್ನು (ಅನ್ಯ ಧರ್ಮ, ದೈವೋಪಾಸನೆಗಳನ್ನು) ಬಿಟ್ಟು ನನ್ನೊಬ್ಬನಲ್ಲಿಯೇ ಶರಣಾದರೆ ನಾನು ನಿನ್ನನ್ನು ಸಮಸ್ತ ಪಾಪಗಳಿಂದಲೂ ಮುಕ್ತನನ್ನಾಗಿಸುತ್ತೇನೆ.)

ಪ್ರಪತ್ತಿಯೋಗ ಶ್ರೀವೈಷ್ಣವ ಧರ್ಮದ ಏಕೈಕ ಸಾಧನಕ್ರಮ. ಜ್ಞಾನ, ಭಕ್ತಿ, ಯಜ್ಞ, ಕರ್ಮ ಯೋಗಗಳಿಗಿಂತ ಈ ಶರಣಾಗತಿಯೋಗವನ್ನೇ ಇದು ಸುಲಭೋ ಪಾಯವಾಗಿ ಸ್ವೀಕರಿಸಿದೆ. ಮೋಕ್ಷವನ್ನು ಬಯಸುವ ಜೀವನಾದ ಮುಮುಕ್ಷು ಭಗವಂತನಲ್ಲಿ ಸಂಪೂರ್ಣ ಶರಣಾಗಿ ನಾಮಸ್ಮರಣೆ ಮಾಡಿದರೂ ಸಾಕು ಅವನು ಕೃಪೆದೋರುತ್ತಾನೆನ್ನುವ ಈ ಉಪಾಯವು ದೇವರನ್ನು ಬಯಸುವ ಜಗತ್ತಿನಲ್ಲಿರುವ ವಿಧಾನಗಳಲ್ಲೆಲ್ಲ ಅತಿಸುಲಭ ವಿಧಾನವೆನಿಸಿದೆ ಎಂದು ಚಿಂತಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಧ್ಯಾನ ಧಾರಣನಾಗಬೇಕಂತೆ ಪ್ರಪಂಚದೊಳಗೆ ದೀನ ನಾನದೊಡೆ ಮುಖ್ಯಸಾಕಂತೆ’ (ಅಹೋಬಲದಾಸ) ಎಂಬಷ್ಟು ಸರಳವಾಗಿ ಇದು ಜನಪ್ರಿಯವಾಗಿದೆ.

೩ ಮಹಾಲಕ್ಷ್ಕಮೀ ಪ್ರಾಧಾನ್ಯತೆ ಮತ್ತು ವಿಶ್ವಕ್ಸೇನ ಕಲ್ಪನೆ: ವಿಶಿಷ್ಟಾದ್ವೈತ ತತ್ವವನ್ನು ಶ್ರೀಮನ್ನಾರಾಯಣನಿಂದ ಉಪದೇಶ ರೂಪದಲ್ಲಿ ತಿಳಿದುಕೊಂಡು ಶ್ರೀಮಹಾಲಕ್ಷ್ಮೀ ವಿಶ್ವಕ್ಸೇನರಿಗೆ ಉಪದೇಶ ಮಾಡಿದಳೆಂದೂ ವಿಶ್ವಕ್ಸೇನರಿಂದ ನಾರದಾದಿ ಭಗವದ್ಭಕ್ತರ ಮೂಲಕ ಜಗತ್ತಿಗೆ ಉಪದೇಶವಾಯಿತೆಂದೂ ಶ್ರೀವೈಷ್ಣವ ತತ್ವ ನಂಬುವುದರಿಂದಲೇ ಶ್ರೀಮಹಾಲಕ್ಷ್ಮೀ ಸಮೇತನಾದ ಶ್ರೀಮನ್ನಾರಾಯಣನನ್ನು ಅನುಸಂಧಾನ ಮಾಡುತ್ತದೆ. ಈ ಧರ್ಮದಲ್ಲಿ ನಾರಾಯಣನ ನಂತರ ಲಕ್ಷ್ಮಿಗೆ ಎರಡನೇ ಸ್ಥಾನ. ನಾರಾಯಣನ ಕೃಪೆ ದೊರಕಬೇಕಾದರೆ ಲಕ್ಷ್ಮಿಯನ್ನೇ ಮೊರಹೋಗಬೇಕು. ಲಕ್ಷ್ಮಿಯಿಲ್ಲದೆ ನಾರಾಯಣನಿಲ್ಲ. (ಇದು ಪುರುಷ ಪ್ರಾಧಾನ್ಯತೆಯನ್ನು ಹೊಂದಿರುವ ಆರ್ಯಸಂಸ್ಕೃತಿಗಿಂತ ಭಿನ್ನವಾದ ಸ್ತ್ರೀಸಮಾನತೆ, ಸ್ತ್ರೀಪ್ರಾಧಾನ್ಯತೆಯನ್ನು ಸಾರುವ ದ್ರಾವಿಡಸಂಸ್ಕೃತಿಯೂ ಆಗಿರುವಂತಿದೆ.) ಆದ್ದರಿಂದಲೇ ಹರಿಯನ್ನು ‘ಶ್ರೀಹರಿ’ ಎಂದು ಕರೆದಿರುವುದು ಮತ್ತು ಹರಿಯ ಎಲ್ಲ ರೂಪಗಳನ್ನು ಲಕ್ಷ್ಮೀ ಅಥವಾ ಶ್ರೀ ಸಮೇತವಾಗಿಯೇ ಕಲ್ಪಿಸಿರುವುದು. (ಲಕ್ಷ್ಮೀನಾರಾಯಣ, ಲಕ್ಷ್ಮೀವೆಂಕಟೇಶ್ವರ, ಲಕ್ಷ್ಮಿನರಸಿಂಹ, ಶ್ರೀಋಆಮ, ಶ್ರೀಕೃಷ್ಣ, ಶ್ರೀನಿವಾಸ, ಪ್ರಸನ್ನವೆಂಕಟರಮಣ ಇತ್ಯಾದಿ). ಶ್ರೀವೈಷ್ಣವ ಭಕ್ತರು ಲಕ್ಷ್ಮಿಯನ್ನು ತಾಯಿಯ ರೂಪದಲ್ಲೂ ವಿಷ್ಣುವನ್ನು ತಂದೆಯ ರೂಪದಲ್ಲೂ ಸ್ವೀಕರಿಸಿದ್ದಾರೆ. ತಾಯಿಯ ಮೂಲಕ ತಂದೆಯಿಂದ ತಮಗೆ ಬೇಕಾದ ಅಗತ್ಯಗಳನ್ನು ಪೂರೈಸಿಕೊಳ್ಳುವ ಮಗನಂತಹ ಅತ್ಯಂತ ಸಹಜವಾದ ವಾತ್ಸಲ್ಯಮಯಭಾವ ಈ ಧರ್ಮದ ಜೀವ – ದೇವರ ನಡುವೆ ಕಂಡುಬರುತ್ತದೆ. ಹೀಗೆ ಲಕ್ಷ್ಮೀ ಸಮೇತ ಧರ್ಮವಾದ್ದರಿಂದ ಇದು ‘ಶ್ರೀವೈಷ್ಣವ’ವಾಗುತ್ತದೆ.

ವಿಶ್ವಕ್ಸೇನರೇ ಜಗತ್ತಿನ ಜೀವಕೋಟಿಗೆ ಧರ್ಮದ ಮೂಲವಾಗಿರುವುದರಿಂದ ವಿಶ್ವಕ್ಸೇನರ ಆರಾಧನೆಗೆ ಈ ಧರ್ಮ ಮಹತ್ವ ಕೊಡುತ್ತದೆ. ವಿಶ್ವಕ್ಸೇನರನ್ನು ‘ಕುಮುದಗಣೇಶ’ ಎಂದೂ ಕರೆಯಲಾಗಿದೆ. ವೈಕುಂಠದಲ್ಲಿ ಸೇನಾಧಿಪತಿಯಾಗಿರುವ ಈ ವಿಶ್ವಕ್ಸೇನರನ್ನು ಒಲಿಸಿಕೊಂಡರೆ ಲಕ್ಷ್ಮಿನಾರಾಯಣರ ದರ್ಶನ ಸುಲಭವೆಂದು ಭಾವಿಸಲಾಗಿದೆ. ಆದ್ದರಿಂದಲೇ ಶ್ರೀವೈಷ್ಣವಧರ್ಮದಲ್ಲಿ ಗಣೇಶನ (ಗೌರೀಪುತ್ರ, ವಿಘ್ನನಾಶಕ, ಗಜಾನನ) ಪೂಜೆಯಿರುವುದಿಲ್ಲ. ಬದಲಿಗೆ ಈ ವಿಶ್ವಕ್ಸೇನರನ್ನೇ ವಿಘ್ನವಿನಾಶಕರನನ್ನಾಗಿ ಭಾವಿಸಿ ಪ್ರತಿಯೊಂದು ಕಾರ್ಯದಲ್ಲಿಯೂ ಮೊದಲು ಪ್ರಾರ್ಥಿಸಲಾಗುತ್ತದೆ. ಈ ವಿಶ್ವಕ್ಸೇನರಿಗೆ ಮೂರ್ತಿ ಪೂಜೆ ರೂಢಿಯಲ್ಲಿಲ್ಲ. ಮಂತ್ರಪೂಜೆ ಮಾತ್ರವಿದೆ. ‘ಶುಕ್ಲಾಂಬರಧರಂ ವಿಷ್ಣುಂ..’ ಎಂಬ ಪ್ರಸಿದ್ಧ ಶ್ಲೋಕ ವಾಸ್ತವವಾಗಿ ಈ ವಿಶ್ವಕ್ಸೇನರ ಪ್ರಾರ್ಥನೆಯೇ ಆಗಿದೆ. ಈಗ ನಂಬಿರುವಂತೆ ಗೌರಿಪುತ್ರ ಗಣೇಶನದಲ್ಲ. ಈ ಶ್ಲೋಕದಲ್ಲಿ ಗಜಮುಖಗಣೇಶನ ವರ್ಣನೆ ಬರುವುದಿಲ್ಲ. ವಿಷ್ಣುದೇವಾಲಯಗಳಲ್ಲಿರುವ ದ್ವಾರಪಾಲಕರ ರೂಪದಂತಿರುವ ಸುಂದರವದನದ ಈ ವಿಶ್ವಕ್ಸೇನರ ಸಂಕೇತವಾದ ವಿಘ್ನವಿನಾಶಕನ ವರ್ಣನೆಯಿದೆ.

. ಶ್ರೀಹರಿಯ ರೂಪಭೇದಗಳು: ಕೈವಲ್ಯ ಪದವಿಗಾಗಿ ಶ್ರೀಹರಿಯನೊಬ್ಬನನ್ನೇ ಈ ಧರ್ಮ ಸ್ವೀಕರಿಸಿದ್ದರೂ ಸಹ ಅವನಲ್ಲೇ ಸ್ವರೂಪಭೇದವನ್ನು ಕಲ್ಪಿಸಿದೆ. ಇತರ ಧರ್ಮಗಳಲ್ಲಿರುವಂತೆ ದೇವತಾ ತಾರತಮ್ಯ ಇಲ್ಲ. ಪರಾತ್ಪರನಾಗಿರುವ ಶ್ರೀಮನ್ನಾನಾರಾಯಣನ ಸ್ವರೂಪ ಐದು ಬಗೆಯಾಗಿದ್ದು ಅವನ್ನು ಪರ, ವ್ಯೂಹ, ವಿಭವ, ಅಂತರ್ಯಾಮಿ ಮತ್ತು ಅರ್ಚಾ ಎಂದು ಹೇಳಲಾಗಿದೆ. ಪರದಲ್ಲಿ ನಿತ್ಯ, ನಿರ್ವಿಕಾರ, ಲೋಕಾತೀತನಾದ ವಾಸುದೇವನನ್ನು ಮಾತ್ರ ಕಲ್ಪಿಸಲಾಗಿದೆ. ವ್ಯೂಹದಲ್ಲಿ ಸಂಕರ್ಷಣ, ಅನಿರುದ್ಧ, ಪ್ರದ್ಯುಮ್ನರನ್ನು ಇವರುಗಳ ಮೂಲಕ ದ್ವಾದಶನಾಮಗಳ ರೂಪವನ್ನು ಭಗವಂತನಿಗೆ ಹೆಸರಿಸಲಾಗಿದೆ. ವಿಭವದಲ್ಲಿ ಭಗವಂತನ ದಶಾವತಾರ ಗಳನ್ನು ಒಳಗೊಂಡು ೩೯ ಅವತಾರಗಳನ್ನು ಕಲ್ಪಿಸಲಾಗಿದೆ. ದಶಾವತಾರದಲ್ಲಿ ಪ್ರಚಲಿತವಿರುವ ಬುದ್ಧನನ್ನು ಶ್ರೀವೈಷ್ಣವಧರ್ಮ ತನ್ನ ತತ್ವಕ್ಕೆ ಅನುಗುಣವಾಗಿ ಸ್ವೀಕರಿಸಿಲ್ಲ. ಬದಲಿಗೆ ಬಲರಾಮ ಅಥವಾ ತ್ರಿಪುರಾಂತಕಹರಿ ರೂಪಗಳನ್ನು ಅನುಸಂಧಾನ ಮಾಡುತ್ತದೆ. ಅಂತರ್ಯಾಮಿರೂಪವು ಅಗೋಚರವಾದ ಯೋಗ ಸಿದ್ಧಿಯ ದಾರ್ಶನಿಕರಿಗೆ ಮಾತ್ರ ಕಾಣಸಿಗುವ ದರ್ಶನರೂಪ. ಇದು ಆಕಾರ ಬಣ್ಣ ಹೆಸರಿಲ್ಲದ ಇಡೀ ಜಗತ್ತನ್ನು ನಡೆಸುತ್ತಿರುವ ಒಂದು ಶಕ್ತಿ ವಿಶೇಷ. ಅರ್ಚಾರೂಪ ಸಾಮಾನ್ಯ ಭಕ್ತರ ಕಲ್ಪನೆಗೆ ಒಳಪಟ್ಟು ಆಲಯ – ಮನೆಗಳಲ್ಲಿ ಅರ್ಚಿಸಲ್ಪಡುವ ವಿಗ್ರಹರೂಪ. ಈ ಅರ್ಚಾರೂಪದ ಭಗವಂತ ಮಾತ್ರ ಭಕ್ತರ ಕೈಗೆ ಎಟುಕುವಂತಹುದು.

ಹೀಗೆ ಅನೇಕ ರೂಪಗಳಲ್ಲಿರುವ ಭಗವಂತ – ಶ್ರೀಹರಿಯು ಸಕಲ ಜೀವಕೋಟಿಗಳಲ್ಲಿ ಜೀವಾತ್ಮನ ರೂಪದಲ್ಲೂ ಇದ್ದಾನೆ. ಈ ಜೀವಿಗಳ ವ್ಯಾಪಾರ ಈ ಆತ್ಮ ಇರುವವರೆಗೆ ಮಾತ್ರ. ಶ್ರೀಮನ್ನಾರಾಯಣನೇ ಜಗತ್ತನ್ನು ನಡೆಸುವ ಸೂತ್ರಧಾರ. ಶ್ರೀಹರಿಯು ತನ್ನ ಸಂಕಲ್ಪದಿಂದ ಬ್ರಹ್ಮನನ್ನೂ ಅವನಿಂದ ರುದ್ರನನ್ನೂ, ಇಂಧ್ರಾದಿ ಸಕಲ ದೇವತೆಗಳನ್ನೂ ಸೃಷ್ಟಿಸಿ ಅವರವರಿಗೆ ನಿರ್ದಿಷ್ಟವಾದ ಲೋಕಕಲ್ಯಾಣ ಕಾರ್ಯವನ್ನು ನಿಯಮಿಸುತ್ತಾನೆ. ಈ ಒಬ್ಬೊಬ್ಬ ದೇವ – ದೇವತೆಗಳಿಗೂ ನಾರಾಯಣನು ನೇಮಿಸಿರುವ ಕಾರ್ಯಗಳಲ್ಲಿ ಮಾತ್ರ ಅಧಿಕಾರವಿರುತ್ತದೆ. ನಾರಾಯಣದ ಜಗತ್ತಿನ ಈ ರಕ್ಷಣಾಕಾರ್ಯ ಒಂದು ರೀತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಂತಿದೆ. ಪ್ರಧಾನಮಂತ್ರಿ ಮತ್ತು ಅವನ ಮಂತ್ರಿಮಂಡಲ; ಅವರಿಂದ ನೇಮಿಸಲ್ಪಡುವ ಅಥವಾ ಅವರಿಗೆ ಅಧೀನರಾದ ರಾಜ್ಯಗಳ ಮುಖ್ಯಮಂತ್ರಿ ಮತ್ತು ಸಚಿವ ಮಂಡಲವಿದ್ದಂತೆ. ಎಲ್ಲ ಅಧಿಕಾರವೂ ಸರ್ವಶಕ್ತನಾದ ಶ್ರೀಮನ್ನಾರಾಯಣನ ಕೈಯಲ್ಲಿರುತ್ತದೆ. ಹೀಗೆ ಇಡೀ ಜೀವ – ಜಗತ್ತನ್ನು ನಾರಾಯಣಮಯವನ್ನಾಗಿ ಮಾಡಿ ಹರಿಸರ್ವೋತಮತ್ವನ್ನು ಸಾಧಿಸಿರುವುದು ಈ ಧರ್ಮದ ವೈಶಿಷ್ಟ್ಯ. ಅದಕ್ಕಾಗಿಯೇ ಇದು ಹರಿಏಕನಿಷ್ಠೆಯನ್ನು ಅನುಸರಿಸುವುದು.

. ಪಂಚಸಂಸ್ಕಾರ: ಈ ಧರ್ಮೀಯರು ಲೋಕದಲ್ಲಿ ಧರ್ಮಾನುಸರಣೆಯನ್ನು ‘ಪಂಚ’ಸಂಸ್ಕಾರಭೂತವಾಗಿ ಸ್ವೀಕರಿಸಿರುತ್ತಾರೆ. ತಮ್ಮ ಭುಜಗಳ ಮೇಲೆ ಭಗವಂಥನ ಚಿಹ್ನೆಗಳಾದ ಶಂಖಚಕ್ರಗಳನ್ನು ಧಾರಣಮಾಡಿಕೊಳ್ಳುವ ತಾಪ’; ಹಣೆಯ ಮೇಲೆ ಮತ್ತು ದೇಹದ ೧೨ ಭಾಗಗಳಲ್ಲಿ ಎರಡು ಬಿಳಿಯ ನಾಮಗಳ ನಡುವೆ ಒಂದು ಶ್ರೀಚೂರ್ಣದ ಕೆಂಪು ನಾಮವನ್ನು ಧರಿಸುವ ಪುಂಡ್ರ’; ಆಚಾರ್ಯರ ಮೂಲಕ ‘ದಾಸ’ ಎಂಬ ಅಂಕಿತವನ್ನು ಪಡೆಯುವ ಮೂಲಕ ಪ್ರಪತ್ತಿ ಅಥವಾ ಶರಣಾಗತಿಮಾರ್ಗದ ಸ್ವೀಕಾರದ ನಾಮ’; ತತ್ವ – ಹಿತ ಪುರುಷಾರ್ಥಸಾಧಕಗಳ ರೂಪವೆನಿಸಿದ ರಹಸ್ಯತ್ರಯದ ಉಪದೇಶವಾದ ಮಂತ್ರಮತ್ತು ಆಂತರಿಕ ಮನಃಶುದ್ಧಿಯ ಇಂದ್ರಿಯನಿಗ್ರಹ ಹಾಗೂ ಬಾಹ್ಯ ಮನಃಶುದ್ಧಿಯ ‘ಅರ್ಚಾ’ ರೂಪಕ್ಕೆ ಪೂಜಾ ವಿಧಿಗಳನ್ನು ಸ್ವೀಕರಿಸುವ ಯಾಗಎಂಬ ಐದು ಸಂಸ್ಕಾರಗಳು ಶ್ರೀವೈಷ್ಣವ ಧರ್ಮೀಯನಿಗೆ ಉಪನಯನ ಕಾಲದಲ್ಲೇ ಆಚಾರ್ಯಭಿಮುಖದಲ್ಲಿ ನಡೆಯುವುದರ ಮೂಲಕ ಪ್ರತಿಯೊಬ್ಬ ಶ್ರೀವೈಷ್ಣವನೂ ಸಂಸ್ಕಾರದ ಮೂಲಕ ದಾಸನೇ ಆಗಿರುತ್ತಾನೆ. ಅವರವರ ಪ್ರವರ ಹೇಳುವ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಹೆಸರಿನ ಮುಂದೆ ದಾಸನ್‌ ಅಥವ ಶರ್ಮಣಃ ಎಂದು ಸೇರಿಸಿಕೊಳ್ಳುವುದು ಈ ಕಾರಣಕ್ಕಾಗಿಯೇ.

. ಮಂತ್ರ ರಹಸ್ಯ: ಈ ಪ್ರಪತ್ತಿಧರ್ಮದ ಸಾಧನೆಗಾಗಿ ಮುಮುಕ್ಷುವು ಆಚಾರ್ಯಭಿದಾನವಾಗಿರುವ ‘ರಹಸ್ಯತ್ರಯ ಮಂತ್ರ’ವನ್ನು ಸದಾ ಅನುಸಂಧಾನ ಮಾಡಬೇಕೆಂಬ ನಿಯಮವಿದೆ. ಈ ರಹಸ್ಯತ್ರಯದಲ್ಲಿ ಮೂರು ಮಂತ್ರಗಳಿವೆ. (೧) ಮಂತ್ರರಾಜವೆನಿಸಿರುವ ಮೂಲಮಂತ್ರವಾದ ಅಷ್ಟಾಕ್ಷರಿಮಂತ್ರ: ‘ಓಂ ನಮೋ ನಾರಾಯಣಾಯ’(೨) ದ್ವಯಮಂತ್ರವಾದ ‘ಶ್ರೀಮನ್ನಾರಾಯಣ ಚರಣೌ ಶರಣಂ ಪ್ರಪದ್ಯೇ ಶ್ರೀಮತೇ ನಾರಾಯಣಾಯ’ ಹಾಗೂ (೩) ಚರಮಶ್ಲೋಕವೆನಿಸಿರುವ ‘ಸರ್ವ ಧರ್ಮಾನ್‌ ಪರಿತ್ಯಜ್ಯ…..’ ಎಂಬ ಭಗವದ್ಗೀತೆಯ ಶ್ಲೋಕ. ಇವುಗಳನ್ನು ಪ್ರತಿನಿತ್ಯ, ಪ್ರತಿಕ್ಷಣ ಅನುಸಂಧಾನ ಮಾಡಬೇಕೆಂದೂ ಇವು ಅತ್ಯಂತ ರಹಸ್ಯಮಂತ್ರಗಳಾಗಿರುವುದರಿಂದ ಇತರರಿಗೆ ಮತ್ತು ಗಟ್ಟಿಯಾಗಿ ಹೇಳಬಾರದೆಂದೂ ವಿಧಿಯಿದೆ. (ಈ ಮಂತ್ರಗಳನ್ನೇ ರಾಮಾನುಜರು ಗಿರಿಯಮೇಲೆ ನಿಂಥು ಜನಕ್ಕೆಲ್ಲ ತಿಳಿಯುವಂತೆ ಉದ್ಘೋಷ ಮಾಡಿ ಇದರ ಪ್ರಯೋಜನ ಸಾಮಾನ್ಯ ಜನರಿಗೂ ಸಿಗಲೆಂದು ಪ್ರಚಾರಮಾಡಿದ್ದು) ಈ ಮಂತ್ರಗಳ ಬಗ್ಗೆ ಶ್ರೀವೈಷ್ಣವ ಧರ್ಮಗ್ರಂಥಗಳಲ್ಲಿ ವಿಶೇಷವಾದ ವ್ಯಾಖ್ಯಾನಗಳಿವೆ. ರಾಮಾನುಜರೇ ‘ರಹಸ್ಯತ್ರಯಸಾರ’ ಎಂಬ ಗ್ರಂಥವನ್ನು ಬರೆದಿದ್ದಾರೆ. ಶ್ರೀವೈಷ್ಣವ ಧರ್ಮದ ತಿರುಳೇ ಇದರಲ್ಲಿದೆ.

. ಆಳ್ವಾರರ ಪ್ರಬಂಧಗಳು: ಶ್ರೀವೈಷ್ಣವಧರ್ಮದ ಈ ಸಿದ್ಧಾಂತಗಳಿಗೂ ಇತರ ಧರ್ಮಗಳಿಗೆ ಆಧಾರವಾಗಿರುವ ಪ್ರಸ್ಥಾನತ್ರಯಗಳೇ ಆಧಾರವಾದರೂ (ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆ) ವಿಶಿಷ್ಟಾದ್ವೈತಕ್ಕೆ ಆಳ್ವಾರರ ಪ್ರಬಂಧಗಳೂ ಒಂದು ಹೆಚ್ಚಿನ ಆಧಾರವಾಗಿರುವುದರಿಂದ ಇದು ‘ಪ್ರಸ್ಥಾನಚತುಷ್ಟಯ’ವೆನಿಸಿದೆ. ಕ್ರಿ.ಶ. ೭ ನೇ ಶತಮಾನದಿಂದ ೯ನೇ ಶತಮಾನದ ಅವಧಿಯವರೆಂದು ಇತಿಹಾಸಕಾರರು ಗುರುತಿಸಿರುವ ೧೨ ಜನ ಆಳ್ವಾರರು ಶರಣಾಗತಿಯ ಮೂಲಕ ಭಗವಂತನನ್ನು ವಿವಿಧ ರೀತಿಯಲ್ಲಿ ಭಾವನಾತ್ಮಕವಾಗಿ ಸ್ತುತಿಸಿರುವ ಹಾಡುಗಳಲ್ಲಿ ನಾಲ್ಕು ಸಾವಿರ ಪಾಶುರ(ಶ್ಲೋಕ)ಗಳನ್ನು ರಚಿಸಿದ್ದು ಇವುಗಳನ್ನು ‘ನಾಲಾಯಿರ ದಿವ್ಯಪ್ರಬಂಧಗಳು’ ಎಂದು ಕರೆಯಲಾಗಿದೆ. ಈ ಪ್ರಬಂಧಗಳಲ್ಲೂ ವೇದ – ಉಪನಿಷತ್ತು – ರಾಮಾಯಣ – ಮಹಾಭಾರತ – ಭಾಗವತ ವಿಶೇಷವಾಗಿ ಭಗವದ್ಗೀತೆಯ ಸಾರ ಅಡಗಿರುವುದರಿಂದ ಈ ಮತವನ್ನು ಸ್ಥಾಪಿಸಿದ ರಾಮಾನುಜಾಚಾರ್ಯರು ಇದನ್ನು ಒಂದು ಪ್ರಮಾಣವಾಗಿ ಸ್ವೀಕರಿಸಿ ಇದನ್ನೂ ವೇದಸಮಾನಗೊಳಿಸಿದ್ದಾರೆ. ಅನೇಕ ವಿಮರ್ಶಕರು ಈ ಪ್ರಬಂಧಗಳಲ್ಲಿ ವೈದಿಕ ಸಾಹಿತ್ಯದಲ್ಲಿಲ್ಲದ ಎಷ್ಟೋ ಹೊಸ ವಿಚಾರಗಳು ಇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ ಧರ್ಮದ ಮೂಲವಾಗಿರುವ ವೈದಿಕ ಸಾಹಿತ್ಯಕ್ಕೆ ಸರಿಸಮನಾಗಿ, ಸ್ಥಳೀಯ ಭಾಷೆಯಲ್ಲಿರುವ ದ್ರಾವಿಡ ಪ್ರಬಂಧಗಳು ಧರ್ಮಸ್ಥಾಪನೆಗೆ ಮತ್ತು ದರ್ಶನ ವ್ಯಾಖ್ಯಾನಕ್ಕೆ ಆಕರವಾಗಿ ನಿಂತಿರುವುದು ಬಹುಶಃ ಇಲ್ಲೊಂದೇ ಕಡೆ ಎನಿಸುತ್ತದೆ. ಆರ್ಯಸಂಸ್ಕೃತಿಗಿಂತ ಭಿನ್ನವಾದ ದ್ರಾವಿಡ ಸಂಸ್ಕೃತಿಯೊಂದು ಈ ದೇಶದಲ್ಲಿ ಅತ್ಯಂತ ಶಕ್ತಿಯುತವಾಗಿ ಮತ್ತು ಗಟ್ಟಿಯಾಗಿ ಬೇರೂರಿದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಆಳ್ವಾರರುಗಳೆಲ್ಲ ಸಾಮಾನ್ಯ ಜನವರ್ಗದ ಪ್ರತಿನಿಧಿಗಳಾಗಿದ್ದು ಇವರಲ್ಲಿ ವೈದಿಕರಲ್ಲದೆ ಇತರ ಜಾತಿಯವರೂ – ಅಂತ್ಯಜರೂ ಕ್ಷತ್ರಿಯರೂ ಮಹಿಳೆಯರೂ – ಇರುವುದು ವಿಶೇಷ, ಧರ್ಮೋಪದೇಶ ಮತ್ತು ದೈವಸಾಕ್ಷಾತ್ಕಾರ ಕೇವಲ ವೇದಪಾರಂಗತರಿಗೆ ಮಾತ್ರ ಎಂಬ ಆರ್ಯಮತದ ಸಿದ್ಧಹೇಳಿಕೆಯನ್ನು ಬದಲಾಯಿಸಿದ ಸ್ಥಿತಿಗೆ ಮತ್ತು ಧರ್ಮದ ಹೊಸ ವ್ಯಾಖ್ಯಾನಕ್ಕೆ ಇದು ದಾರಿ ಮಾಡಿಕೊಟ್ಟಿದೆ. ಈ ಆಳ್ವಾರರುಗಳ ಸಾಧನೆಯಾದ ಅತ್ಯಂತ ಸರಳ ಮತ್ತು ಸುಲಭವಾದ ಶರಣಾಗತಿಯ ತತ್ವ ಶ್ರೀವೈಷ್ಣವಧರ್ಮದ ಮುಖ್ಯ ತಿರುಳಾಗುವ ಮೂಲಕ ಇತರ ಧರ್ಮಗಳಿಂದ ಇದು ಸಹಜವಾಗಿ ಭಿನ್ನವಾಗಿ ಮತ್ತು ವಿಶಿಷ್ಟವಾಗಿ ನಿಲ್ಲುವಂತಾಗಿದೆ. ಈ ಧರ್ಮದಲ್ಲಿ ಬರುವ ೧೨ ಜನ ಆಳ್ವಾರರನ್ನು ಬೇರೆ ಬೇರೆ ಧರ್ಮಗ್ರಂಥಗಳಲ್ಲಿ ಬೇರೆ ಬೇರೆ ಕ್ರಮದಲ್ಲಿ ಗುರುತಿಸಿರುವುದು ಕಂಡು ಬರುತ್ತದಾದರೂ ಶ್ರೀವೈಷ್ಣವ ಸಂಪ್ರದಾಯದ ಮುಖ್ಯ ಗ್ರಂಥವಾದ ‘ಗುರುಪರಂಪರಾ ಪ್ರಭಾವ’ ‘ಹೇಳುವ ಕ್ರಮವನ್ನೇ ಎಲ್ಲರೂ ಒಪ್ಪಿದ್ದು ಆ ಕ್ರಮ ಈ ರೀತಿ ಇದೆ.

೧. ಪೊಯ್‌ಗೈಯಾಳ್ವಾರ್
೨. ಪೂದತ್ತಾಳ್ವಾರ್
೩. ಪೇಯಾಳ್ವಾರ್

ಇವರನ್ನು ಮೊದಲಾಳ್ವಾರರೆಂದು ಕರೆಯಲಾಗಿದೆ. ಇವರ ಇತಿವೃತ್ತ, ಜಾತಿ, ಊರು ಇತ್ಯಾದಿಗಳೇನೂ ತಿಳಿದಿಲ್ಲ, ಇವರು ಮೂವರೂ ಒಂದೆಡೆ ಸಂಧಿಸಿದ್ದರೆಂದೂ ಮತ್ತು ಒಂದೇ ತೆರವಾದ ಜೀವನಕ್ರಮ, ಭಕ್ತಿಮಾರ್ಗ – ಹೊಂದಿದ್ದರೆಂದೂ ಹೇಳಲಾಗಿದ್ದು ಇವರನ್ನು ‘ಪುಷ್ಪಜಾತರು’ ಎಂದೇ ಗ್ರಹಿಸಲಾಗಿದೆ.

೪. ತಿರುಮಳಿಶೈಯಾಳ್ವಾರ್ (ತಿರುವಳೈ ಊರಿನವರು, ಜಾತಿ ಗೊತ್ತಿಲ್ಲ)
೫. ಕುಲಶೇಖರಾಳ್ವಾರ್ (ಕ್ಷತ್ರಿಯರು, ಕೇರಳದ ತಿರುವಾಂಕೂರಿನ ರಾಜ)
೬. ಪೆರಿಯಾಳ್ವಾರ್ (ಭಟ್ಟನಾಥ ಎಂಬ ಪರ್ಯಾಯ ನಾಮವಿರುವ ಶ್ರೀವಿಲ್ಲಿ ಪುತ್ತೂರಿನ ಬ್ರಾಹ್ಮಣರು)
೭. ಆಂಡಾಳ್‌ (ಗೋದಾದೇವಿ, ಪೆರಿಯಾಳ್ವಾರರ ಸಾಕುಮಗಳು)
೮. ತೊಂಡರಡಿಪ್ಪೊಡಿಯಾಳ್ವಾರ್ (ಭಕ್ತಾಂಘ್ರಿರೇಣು, ವಿಪ್ರನಾರಾಯಣ ಎಂದು ಹೆಸರುಗಳೂ ಇರುವ ಮಂಡಂಗುಡಿಯ ಬ್ರಾಹ್ಮಣರು)
೯. ತಿರುಪ್ಪಾಣಾಳ್ವಾರ್ (ತಿರುಪ್ಪಾಣಿ, ಯೋಗಿವಾಹನ ಹೆಸರುಗಳೂ ಇರುವ ಉರೈಯೂರಿನ ಅಂತ್ಯಜರು)
೧೦. ತಿರುಮಂಗೈ ಆಳ್ವಾರ್ (ನೀಲ ಹೆಸರೂ ಇರುವ ತಿರುಮಂಗೈ ಊರಿನ ಕಳ್ಳರ್ ಜಾತಿಯ ಶೂದ್ರರು)
೧೧. ಮಧುರಕವಿಯಾಳ್ವಾರ್ (ತಿರುಕ್ಕೋಳೂರಿನ ಬ್ರಾಹ್ಮಣರು)
೧೨. ನಮ್ಮಾಳ್ವಾರ್ (ಷಡಗೋಪನ್‌, ಹೆಸರೂ ಇರುವ ತಿರುಕ್ಕುರುಗೂರಿನ ವೆಳ್ಳಾಳ ಜಾತಿಯ ಶೂದ್ರರು)

ಶ್ರೀವೈಷ್ಣವ ಧರ್ಮೀಯರು ಈ ಆಳ್ವಾರರನ್ನು ದೈವಸ್ಥಾನದಲ್ಲಿಟ್ಟು ಸ್ತುತಿಸುತ್ತಾರೆ. ಇವರ ಹಾಡುಗಳು ವೇದಸಮಾನವೆಂದು ಪರಿಗಣಿಸಲ್ಪಟ್ಟು ವಿಶಿಷ್ಟಾದ್ವೈತದ ದರ್ಶನ ಸಾಹಿತ್ಯವಾಗಿದೆ. ಈ ಧರ್ಮೀಯರ ಮನೆ – ದೇವಾಲಯಗಳಲ್ಲಿ ಇವರ ವಿಗ್ರಹಗಳು ಪೂಜಾರ್ಹವಾಗಿವೆ. ಇವರ ತಿರುನಕ್ಷತ್ರಗಳು ಪ್ರಮುಖ ಧಾರ್ಮಿಕ ಆಚರಣೆ – ಹಬ್ಬ – ಉತ್ಸವಗಳಾಗಿವೆ.

ಈ ೧೨ ಜನ ಆಳ್ವಾರರಲ್ಲಿ ಯೋಗಿಗಳಾಗಿರುವ ನಮ್ಮಾಳ್ವಾರರು ಪ್ರಧಾನ ಆಳ್ವಾರರಾಗಿ ಸ್ತುತಿಸಲ್ಪಟ್ಟಿದ್ದಾರೆ. ಈ ಎಲ್ಲ ಆಳ್ವಾರರ ಜೀವನ ವಿವರಗಳು ಅತ್ಯಂತ ಕುತೂಹಲಕರವಾಗಿದ್ದು ರೋಚಕ ಸಂಗತಿಗಳಿಂದ ಕೂಡಿವೆ. ಸಾಮಾನ್ಯ ಜನರಾಗಿ ರಾಗ – ಭಾವಗಳಿಗೊಳಗಾಗಿದ್ದವರೇ ಶರಣಾಗತಿ ಮೂಲಕ ಮೋಕ್ಷಮಾರ್ಗ ಹಿಡಿದು ದೈವಸಾಕ್ಷಾತ್ಕಾರ ಪಡೆದು ದ್ವೈವತ್ವಕ್ಕೇರಿದ ಸಂತಶ್ರೇಷ್ಟರಾಗಿದ್ದಾರೆ.

. ಆಚಾರ್ಯ ಪರಂಪರೆ: ಶ್ರೀವೈಷ್ಣವ ಮತವನ್ನು ಸ್ಥಾಪಿಸಿದವರು ರಾಮಾನುಜಾಚಾರ್ಯರಾದರೂ ಅವರೇ ಈ ಧರ್ಮದ ಮೊದಲ ಆಚಾರ್ಯರಲ್ಲ. ಅವರಿಗಿಂತ ಮೊದಲು ಹಲವು ಆಚಾರ್ಯರು ಆಗಿಹೋಗಿದ್ದಾರೆ. ಅವರಲ್ಲಿ ಮುಖ್ಯವಾಗಿ ಸ್ತುತಿಸುವ ಆಚಾರ್ಯರೆಂದರೆ ನಾಥಮುನಿಗಳು ಮತ್ತು ಯಾಮುನಾಚಾರ್ಯರು. ಆಳ್ವಾರರ ಪ್ರಬಂಧಗಳನ್ನೆಲ್ಲ ಸಂಗ್ರಹಿಸಿ ನಾಲಾಯಿರ ದಿವ್ಯಪ್ರಬಂಧ ರೂಪಕ್ಕೆ ತಂದವರು ನಾಥಮುನಿಗಳು. ಇವರು ಈ ಪ್ರಬಂಧಗಳನ್ನು ನಿತ್ಯಪಾರಾಯಣದಲ್ಲಿ, ಭಗವದಾರಾಧನೆಯಲ್ಲಿ ಬಳಕೆಗೆ ತರುವುದರ ಮೂಲಕ ಶ್ರೀವೈಷ್ಣವ ಧರ್ಮಕ್ಕೆ (ಉಭಯವೇದಾಂತ) ಎಂಬ ಹೆಸರನ್ನು ತಂದರು. ಉಭಯವೇದಗಳೆಂದರೆ ಚತುರ್ ವೇದಗಳು ಮತ್ತು ವೇದಸಮಾನವಾದ ಪ್ರಬಂಧಗಳು, ಇವರ ನಂತರ ಯಾಮುನಾಚಾರ್ಯರು ಈ ಧರ್ಮದ ಸಿದ್ಧಾಂತಸ್ಥಾಪನೆಗೆ ರಾಮಾನುಜರನ್ನು ನೇಮಿಸುವುದರ ಜೊತೆಗೆ ವಿಶಿಷ್ಟಾದ್ವೈತ ತತ್ವವನ್ನು ಎಲ್ಲೆಡೆ ಹರಡಿ ಕಂಚಿ, ಶ್ರೀರಂಗಗಳಂಥ ಪ್ರಮುಖ ಕೇಂದ್ರಗಳನ್ನು ರೂಪಿಸಿದ್ದರು. ಅನಂತರ ಬಂದ ರಾಮಾನುಜಾಚಾರ್ಯರು ಈ ಧರ್ಮವನ್ನು ಜನಮತವನ್ನಾಗಿ ಪರಿವರ್ತಿಸಿ ಸಮರ್ಥವಾದ ವ್ಯಾಖ್ಯಾನಗಳನ್ನು ರಚಿಸಿ ವೇದಾಂತದ. ಶಾಸ್ತ್ರಜ್ಞಾನದ ಸಂಪ್ರದಾಯದ ಜೊತೆಗೆ ಆಳ್ವಾರರ ಭಕ್ತಿ ಸಂಪ್ರದಾಯವನ್ನು ಸೇರಿಸಿ ದೇವ – ಜೀವರನ್ನು ಒಂದು ಗೂಡಿಸಿ ವಿಶಿಷ್ಟಾದ್ವೈತ ಸಿದ್ಧಾಂತವಾಗಿ ಸ್ಥಾಪಿಸಿದರಲ್ಲದೆ ಅದನ್ನು ಜನಪ್ರಿಯ ಗೊಳಿಸಿದರು. ದಕ್ಷಿಣಭಾರತದಾದ್ಯಂತ ಪ್ರಚಾರ ಮಾಡಿ ತಿರುಪತಿ – ಮೇಲುಕೋಟೆ ಗಳನ್ನೂ ಕೇಂದ್ರಗಳನ್ನಾಗಿ ಮಾಡಿ ತಮಿಳುನಾಡಿನಲ್ಲಿ ಮಾತ್ರ ಇದ್ದ ಈ ಧರ್ಮವನ್ನು ಆಂಧ್ರ – ಕರ್ನಾಟಕಗಳಿಗೂ ವಿಸ್ತರಿಸಿ ಭಾರತದ ಪ್ರಮುಖ ವೈದಿಕಮತತ್ರಯಗಳಲ್ಲಿ ಒಂದನ್ನಾಗಿಸಿದರು. ಆದ್ದರಿಂದಲೇ ಈ ವಿಶಿಷ್ಟಾದ್ವೈತವನ್ನು ‘ರಾಮಾನುಜದರ್ಶನ’ ಎಂದೇ ಕರೆಯುವ ಸಂಪ್ರದಾಯವೂ ಇದೆ.

ಇವರ ನಂತರವೂ ಈ ಧರ್ಮ ಅನೂಚಾನವಾಗಿ ಬೆಳೆಯಲು ರಾಮಾನುಜರು ೭೪ ಪೀಠಗಳನ್ನು ನೇಮಿಸಿ ಅಸಂಖ್ಯಾತ ಶಿಷ್ಯಕೋಟಿಯನ್ನು ಸೃಷ್ಟಿಸಿದ್ದಾರೆ. ಈ ಆಚಾರ್ಯಪೀಠಗಳು ಈ ಧರ್ಮವನ್ನು ಇನ್ನಷ್ಟು ಜಿಜ್ಞಾಸೆಗೆ ಒಳಪಡಿಸಿವೆ. ಕನ್ನಡ ಹರಿದಾಸ ಸಾಹಿತ್ಯದಲ್ಲಿ ಕಂಡುಬರುವ ದಾಸಕೂಟ – ವ್ಯಾಸಕೂಟದಂತೆ ಇಲ್ಲೂ ‘ತೇಂಗಲೆ’ – ‘ವಡಗಲೆ’ ಸಂಪ್ರದಾಯಗಳು ಬೆಳೆದುನಿಂತಿವೆ. ವೇದಪ್ರಮಾಣವನ್ನೇ ಮುಖ್ಯವಾಗಿ ಪರಿಗಣಿಸುವ ಸಂಸ್ಕೃತ ಪ್ರಭಾವವನ್ನು ವಡಗಲೆ ಸಂಪ್ರದಾಯ ಹೇಳಿದರೆ ಆಳ್ವಾರರ ಪ್ರಬಂಧ ಪ್ರಮಾಣವನ್ನೇ ಮುಖ್ಯವಾಗಿರುವ ತಮಿಳು ಪ್ರಭಾವವನ್ನು ತೇಂಗಲೆ ಸಂಪ್ರದಾಯ ಪ್ರತಿಪಾದಿಸುತ್ತದೆ. ಇಂದು ಈ ಎರಡೂ ಸಂಪ್ರದಾಯಗಳಲ್ಲಿ ನೂರಾರು ಗುರುಪೀಠಗಳ ಆಶ್ರಯದಲ್ಲಿ ಈ ಧರ್ಮೀಯರು ವಿಶೀಷ್ಟಾದ್ವೈತವನ್ನು ಆಚರಿಸುತ್ತ, ಶ್ರೀವೈಷ್ಣವ ಧರ್ಮವನ್ನು ಪಾಲಿಸುತ್ತ, ರಾಮಾನುಜ ದರ್ಶನವನ್ನು ಪ್ರಚಾರ ಮಾಡುತ್ತಾ ಆಳ್ವಾರರ ಭಕ್ತಿಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಇದರ ಸುಲಭೋಪಾಯವನ್ನು ಸ್ವೀಕರಿಸಿ ಸಮಾಜದ ಇತರ ಮತೀಯರೂ ಈ ಧರ್ಮಾನು ಯಾಯಿಗಳಾಗಿ ಇದರ ತತ್ವಗಳನ್ನನುಸರಿಸುವ ಮೂಲಕ ಇದನ್ನು ‘ಜನಮತ’ವನ್ನಾಗಿಸಿದ್ದಾರೆ.