. ಶ್ರೀವೈಷ್ಣವ ಕೀರ್ತನಸಾಹಿತ್ಯದ ಲಕ್ಷಣಗಳು

ಸದ್ಯಕ್ಕೆ ಲಭ್ಯವಿರುವ ಶ್ರೀವೈಷ್ಣವಕೀರ್ತನೆಗಳನ್ನು ಪರಿಶೀಲಿಸಿದಾಗ ಇವು ದ್ವೈತ ಮತ್ತು ಅದ್ವೈತಕ್ಕಿಂತ ಭಿನ್ನವಾದ ಪರಿಭಾಷೆಯಲ್ಲಿಯೇ ರಚನೆಯಾಗಿರುವುದು ಕಂಡುಬರುತ್ತದೆ. ಶ್ರೀವೈಷ್ಣವ ತತ್ವವಾದ ಶರಣಾಗತಿ ಮಾರ್ಗ ಅಥವಾ ಪ್ರಪತ್ತಿ ಧರ್ಮ ಈ ಕೀರ್ತನೆಗಳ ಮುಖ್ಯಭಾವ. ಸಾಮಾನ್ಯವಾಗಿ ದ್ವೈತವೆಂದರೆ ಹರನನ್ನು ಒಪ್ಪಿಕೊಂಡು ಹರಿಸರ್ವೋತ್ತಮತ್ವವನ್ನು ಹೇಳುವುದುದೆಂದೂ ಅದ್ವೈತವೆಂದರೆ ಹರಿ ಹರ ಅಭೇದವನ್ನು ಪ್ರತಿಪಾದಿಸುವುದೆಂದೂ ವಿಶಿಷ್ಟಾದ್ವೈತವೆಂದರೆ ಹರನಿರಾಕರಣೆ ಯೊಂದಿಗೆ ಹರಿಏಕನಿಷ್ಠೆಯನ್ನು ಸಾರುವುದೆಂದೂ ಗ್ರಹಿಸಬಹುದು. ಈ ತತ್ವಕ್ಕೆ ಅನು ಗುಣವಾಗಿಯೆ ಶ್ರೀವೈಷ್ಣವ ಕೀರ್ತನೆಗಳಿವೆ. ಇಲ್ಲಿಯ ಗುರುಸ್ತುತಿ ಕೀರ್ತನೆಗಳೆಲ್ಲ ಶ್ರೀವೈಷ್ಣವ ಆಳ್ವಾರರು ಮತ್ತು ಆಚಾರ್ಯರ ಸ್ತುತಿಗಳಾಗಿ ಕನ್ನಡಸಾಹಿತ್ಯಕ್ಕೆ ಹೊಸ ಪರಿಭಾಷೆಯನ್ನು ನೀಡಿರುವುದನ್ನು ನೋಡಬಹುದು. ಶ್ರೀವೈಷ್ಣವ ಧರ್ಮದ ಮುಖ್ಯ ಸಾಹಿತ್ಯವಿರುವುದು ತಮಿಳಿನಲ್ಲಾದ್ದರಿಂದ ಆ ಧಾರ್ಮಿಕಕೃತಿಗಳ ಉಲ್ಲೇಖ ಅಲ್ಲಿಯ ಭಕ್ತರಾದ ಆಳ್ವಾರ್ – ಆಚಾರ್ಯರ ಜೀವನದ ರಸಮಯ ಸಂಗತಿಗಳ ಸೂಚನೆ ಈ ಕೀರ್ತನೆಗಳಲ್ಲಿ ಧಾರಾಳವಾಗಿ ಕಂಡುಬರುತ್ತದೆ. ಹರಿಯ ಅದರಲ್ಲೂ ವಿಶೇಷ ವಾಗಿ ಕೇಶವಾದಿ ದ್ವಾದಶನಾಮಗಳ ಸ್ತುತಿ ಇಲ್ಲಿ ಎದ್ದು ಕಾಣುವ ಸಂಗತಿಯಾಗಿದೆ. ಪ್ರಪತ್ತಿ ಧರ್ಮದ ತಿರುಳಾದ ನಾಮಸ್ಮರಣೆ, ಮಂತ್ರಮಹಿಮೆ, ಆತ್ಮ ಸಮರ್ಪಣೆ, ವಿರಕ್ತಿ, ಲೋಕಸುಖನಿರಾಕರಣೆ, ದೀನತೆ, ದಾಸ್ಯಮನೋಭಾವ, ಗುರುಮುಖೇನ ಹರಿ ದರ್ಶನ, ಹರಿಪಾದ ಸೇವೆಯ ಏಕೈಕ ಹಂಬಲ ಇತ್ಯಾದಿ ಭಾವಗಳು ಈ ದಾಸರ ಕೃತಿಗಳಲ್ಲಿ ಮಡುಗಟ್ಟಿ ನಿಂತಿರುವುದನ್ನು ಯಾರಾದರೂ ಸುಲಭವಾಗಿ ಗುರುತಿಸಬಹುದು.

ಶ್ರೀವೈಷ್ಣವ ಕೀರ್ತನಕಾರರು ಹರಿದಾಸವೃತ್ತಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿ ದವರಲ್ಲ. ಪ್ರಪತ್ತಿಯ ಮಾರ್ಗವಾಗಿ ಕಂಡುಕೊಂಡವರು. ಯಾವುದೇ ಗುರುವಿನ ಮೂಲಕ ಅಂಕಿತವನ್ನಾಗಲೀ ದೀಕ್ಷೆಯನ್ನಾಗಲೀ ಪಡೆದಿಲ್ಲ. ಅರ್ಚಾ ಮೂರ್ತಿಯನ್ನೇ ಅಂಕಿತವಾಗಿಟ್ಟುಕೊಂಡು ಮೋಕ್ಷಸಾಧನೆಯ ರೂಪವಾದ ಭಗವ ನ್ನಾಮಸ್ಮರಣೆಯನ್ನು ಆತ್ಮ ನಿವೇದನೆಯ, ಆತ್ಮ ಸಮರ್ಪಣೆಯ ಮೂಲಕ ಮಾಡುವ ಅಂತರಂಗಭಕ್ತಿ ಈ ಕೀರ್ತನೆಗಳಲ್ಲಿ ಹೊರಹೊಮ್ಮಿದೆ. ಇವರಿಗೆ ಶ್ರೀಹರಿಯೇ ಗುರು, ತಂದೆ,ಅಂಕಿತ, ಆರಾಧ್ಯದೈವ, ಸರ್ವಸ್ವ. ಆದ್ದರಿಂದಲೇ ಇದರಲ್ಲಿ ಗುರು ಮುಖೇನ ಅಂಕಿತವನ್ನು ಹರಿದಾಸವೃತ್ತಿಯ, ದೀಕ್ಷೆಯನ್ನು ಸ್ವೀಕರಿಸಿರುವ ನಿದರ್ಶನಗಳು ಕಂಡು ಬರುವುದಿಲ್ಲ. ಅದ್ವೈತ ಕೀರ್ತನಕಾರರಿಗೂ ಈ ಮಾತು ಅನ್ವಯವಾಗುವುದಲ್ಲದೆ ದ್ವೈತ ಕೀರ್ತನಕಾರರಲ್ಲೂ ಕೆಲವರಿಗೆ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹರಿದಾಸರು ಎಂಬ ಪದದ ಅರ್ಥವ್ಯಾಪ್ತಿಯನ್ನು ಪುನರ್ ವ್ಯಾಖ್ಯಾನಿಸಬೇಕಾದ ಅಗತ್ಯವಿದೆ.

ಈವರೆಗಿನ ಕೀರ್ತನಕಾರರ ಬಗೆಗಿನ ಅಧ್ಯಯನಗಳೆಲ್ಲ ಮಧ್ವ ಸಂಪ್ರದಾಯದ ಕೀರ್ತನೆಯ ಹಿನ್ನೆಲೆಯಲ್ಲೇ ನಡೆದಿರುವುದರಿಂದ ಮತ್ತು ಈಚೆಗೆ ಕನ್ನಡ ಸಾಹಿತ್ಯದಲ್ಲಿ ಮಧ್ವೇತರ ಸಂಪ್ರದಾಯಗಳೂ ಹೆಚ್ಚುಹೆಚ್ಚಾಗಿ ಕೂಡಿಕೊಳ್ಳುತ್ತಿರುವುದರಿಂದ ಹರಿದಾಸರನ್ನು ಗುರುತಿಸುವ ದೃಷ್ಟಿಕೋನವೇ ಬದಲಾಗಬೇಕಾಗಿದೆ. ‘ಕ್ರಮಬದ್ಧವಾಗಿ ಗುರುವಿನಿಂದ ದಾಸದೀಕ್ಷೆಯನ್ನು, ಅಂಕಿತವನ್ನು, ವಿಠಲನಾಮವನ್ನು ಸ್ವೀಕರಿಸಿದವರಷ್ಟೇ ಹರಿದಾಸರು. ಉಳಿದವರು ತಮ್ಮ ನಾಮದ ಮುಂದೆ ದಾಸ ಎಂಬ ಪದವನ್ನು ಕೂಡಿಸಿಕೊಂಡವರಾದರೂ ಕೃತಿರಚನೆ ಮಾಡಿದ ಹರಿದಾಸರ ಶ್ರೇಣಿಗೆ ಸೇರುವುದಿಲ್ಲ’. (ಜಿ. ವರದರಾಜರಾವ್‌, ಶ್ರೀಪಾದರಾಜರ ಕೃತಿಗಳು ಪೀಠಿಕೆ) ಎಂಬಂತಹ ಭಿನ್ನತೆಯನ್ನು ತರುವ ಮನೋಭಾವದಿಂದ ದೂರಾಗಿ ಸಮಷ್ಟಿ ದೃಷ್ಟಿಯಿಂಧ ದ್ವೈತ ಅದ್ವೈತ ವಿಶಿಷ್ಟಾದ್ವೈತ ಭೇದವಿವಕ್ಷೆಯಿಲ್ಲದೆ ಸಮನಾಗಿ ನೋಡಬೇಕಾಗುತ್ತದೆ. ದೀಕ್ಷಾ ಬದ್ಧರಾದವರ ರಚನೆಗಳು ಮಾತ್ರ ‘ಕೃತಿಗಳು” ಉಳಿದವರವು ‘ಪದಗಳು’ ಎಂಬಭೇದ ತೋರದೆ ಕೀರ್ತನೆಗಳ ರಚನೆ ಮಾಡಿರುವವರೆಲ್ಲರೂ ಕೀರ್ತನಕಾರರೇ, ಹರಿದಾಸರೇ, ಅವರ ರಚನೆಗಳೆಲ್ಲವೂ ಕೃತಿಗಳೇ, ಕೀರ್ತನೆಗಳೇ, ಹರಿದಾಸರ ಹಾಡುಗಳೇ ಎಂಬ ಧೋರಣೆಗೆ ಬರಬೇಕಾಗುತ್ತದೆ. ಇತ್ತೀಚೆಗೆ ವಿದ್ವಾಂಸರು ಇಂಥ ಪ್ರಯತ್ನ ಮಾಡುತ್ತಿರುವುದು ಆರೋಗ್ಯಕರ ಲಕ್ಷಣವಾಗಿದೆ.

“ಹರಿದಾಸ ಸಾಹಿತ್ಯ ಪ್ರಧಾನವಾಗಿ ಭಕ್ತಿಪರವಾದದ್ದು. ಭಗವದ್ಭಕ್ತನು ತನ್ನ ಆತ್ಮಶೋಧನೆಯನ್ನು ಮಾಡಿಕೊಂಡು ಭಗವಂತನ ಅನುಗ್ರಹಕ್ಕಾಗಿ ಹಗಲಿರುಳೂ ಹಂಬಲಿಸುತ್ತ, ಇಷ್ಟಾರ್ಥ ಸಿದ್ಧಿಯಾದಮೇಲೆ ತನ್ನ ದಿವ್ಯಾನುಭವವನ್ನು ಇತರರಿಗೂ ತಿಳಿಯಹೇಳಿ ಸಮಸ್ತರನ್ನೂ ಸಮಷ್ಟಿದೃಷ್ಟಿಯಿಂದ ಸಮೀಕ್ಷಿಸಿದಾಗ ಅಲ್ಲಿ ಆಯಾ ಹರಿದಾಸರ ಆತ್ಮಶೋಧನೆ, ಅಪರೋಕ್ಷಾನುಭವ, ಭಗವಂತನನ್ನು ಅವರು ಆರಾಧಿಸುವ ನಾನಾ ವಿಧಾನಗಳು ಮೊದಲು ನಮ್ಮ ಮನಸ್ಸನ್ನು ಸೆಳೆಯುತ್ತವೆ”, (ಜಿ. ವರದರಾಜರಾವ್‌ ಶ್ರೀಪಾದರಾಜರ ಕೃತಿಗಳು ಪು.೨೦) ಎಂಬ ಹರಿದಾಸ ಸಾಹಿತ್ಯದ ಬಗೆಗಿನ ಸಾಮಾನ್ಯವಾದ ಅಭಿಪ್ರಾಯಕ್ಕೆ ಈ ಕೀರ್ತನೆಗಳು ಸಹಜವಾಗಿ ಸ್ಪಂದಿಸುತ್ತವೆ. ಈ ಹಿನ್ನೆಲೆಯಲ್ಲಿ ಹರಿದಾಸ ಸಾಹಿತ್ಯ ಮತ್ತು ‘ಕೀರ್ತನೆಗಳು’ ಅಥವಾ ‘ಕೀರ್ತನ ಸಾಹಿತ್ಯ’ ಎಂಬ ಪದಗಳನ್ನು ಸಮಾನಾರ್ಥಕಗಳಾಗಿ ಬಳಸಲಾಗಿದೆ.

ಈ ಕೀರ್ತನೆಗಳಲ್ಲಿ ಆತ್ಮನಿವೇದನೆ, ಭಕ್ತಿಭಾವನೆಗಳು ಬೇರೆ ಯಾವ ಕೀರ್ತನೆಗಳಿಗೂ ಕಡಿಮೆಯಿಲ್ಲದಂತೆ ಅಭಿವ್ಯಕ್ತವಾಗಿರುವುದನ್ನು ಕಾಣಬಹುದು. (ತತ್ವಪ್ರತಿಪಾದನೆ, ದಾರ್ಶನಿಕ ಕೃತಿಗಳೂ ಇಲ್ಲದಿಲ್ಲ). ಭಗವಂತನ ಸ್ತುತಿಯನ್ನು ವಿವಿಧರೂಪದಲ್ಲಿ ಅದರಲ್ಲೂ ವಿಶೇಷವಾಗಿ ದ್ವಾದಶನಾಮ ಮತ್ತು ದಶಾವತಾರ ರೂಪದಲ್ಲಿ ಭಕ್ತಿಪರವಶತೆಯಿಂದ ಮಾಡಿರುವುದು ಈ ಕೀರ್ತನಕಾರರ ವೈಶಿಷ್ಠ್ಯ, ಇವರಿಗೆ ಹರಿ, ನಾರಾಯಣ, ರಾಮ, ಕೃಷ್ಣ ಅತ್ಯಂತ ಪ್ರಿಯವಾದ ಭಗವನ್ನಾಮ. ಭಗವಂತನನ್ನು ಸದಾ ಧ್ಯಾನಿಸುತ್ತಾ ಆರಾಧಿಸುತ್ತ, ಗೀತೆ, ಸ್ತುತಿ, ಪ್ರಬಂಧಗಳನ್ನು ಅಧ್ಯಯನ ಮಾಡುತ್ತ ಹಗಲಿರುಳೂ ಅವನ ನಾಮಸ್ಮರಣೆಯಲ್ಲೇ ತಲ್ಲೀನರಾಗಿರುವ ಈ ಕೀರ್ತನಕಾರರು ಒಂದಲ್ಲ ಹಲವು ಬಾರಿ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡು ಧನ್ಯರಾಗಿದ್ದಾರೆ. ಆ ವಿಶೇಷ ದರ್ಶನವನ್ನು – ಕನಸನ್ನು – ತಮ್ಮ ಕೀರ್ತನೆಗಳಲ್ಲಿ ಹಿಡಿದಿಟ್ಟಿದ್ದಾರೆ.

ಇವರ ಕೀರ್ತನೆಗಳಲ್ಲಿ ಸಮಾಜದರ್ಶನ, ಬದುಕಿನಬವಣೆಯ ಚಿತ್ರಣ ಇತರ ಹರಿದಾಸರಿಗಿಂತ ಸ್ವಲ್ಪ ಕಡಿಮೆಯೇ ಆದರೂ ಲೋಕನೀತಿಯನ್ನು ಹೇಳುವಲ್ಲಿ, ಸಾಮಾಜಿಕ ವಿಡಂಭನೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಅತ್ಯಂತ ಸೂಕ್ಷ್ಮಜ್ಞರಾಗಿ ಹಲವಾರು ಅಪರೂಪದ ಮತ್ತು ನೂತನ ಪ್ರತಿಮೆಗಳ ಮೂಲಕ ಸಮಕಾಲೀನ ಸಮಾಜವನ್ನು ಸಾಮಾಜಿಕ ಸ್ವರೂಪವನ್ನು ಹಿಡಿದಿಡುತ್ತಾರೆ. ಪುರಂದರದಾಸರಷ್ಟೇ ಸಮರ್ಥವಾಗಿ ಆದರೆ ಅವರಿಗಿಂತ ಭಿನ್ನವಾಗಿ ‘ರಾಘಿ’ ಪ್ರತಿಮೆಯನ್ನು ದುಡಿಸಬಲ್ಲವರಾಗಿದ್ದಾರೆ. ಕುದುರೆ, ಯೋಗ, ಮಾತ್ರೆ, ತಾಳ, ರಸಾಯನ, ಸುರಾಪಾನ, ವೃಕ್ಷ, ಮುತ್ತು – ರತ್ನಗಳು, ಅಳು, ನಗು, ನಂಬಿಕೆ, ಹೀಗೆ ಹಲವು ಪ್ರತಿಮೆಗಳನ್ನು ಚಮತ್ಕಾರವಾಗಿ, ತಾತ್ವಿಕವಾಗಿ, ದಾರ್ಶನಿಕವಾಗಿ ಕಲ್ಪಿಸಿ ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಪ್ರಪತ್ತಿಯ ಮೂಲಕ ದೇವನಲ್ಲಿ ಸಂಪೂರ್ಣ ಶರಣಾಗತರಾಗಿ ಸಮಸ್ತವೂ – ತನ್ನ ರಕ್ಷಣೆಯೂ – ಭಗವಂತನದೆಂಬ ದಾಸ್ಯ ಭಾವದಲ್ಲಿದ್ದರೂ ಬದುಕಿನ ಜಂಜಾಟಗಳನ್ನು, ಸಮಾಜದ ದುಷ್ಕೃತ್ಯಗಳನ್ನು, ಮೌಲ್ಯಗಳ ಅಧಃಪತನಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುವ ಮೂಲಲಕ ಸಾಮಾಜಿಕ ಸ್ಪಂದನದಲ್ಲೂ ಇವರು ಹಿಂದೆ ಬಿದ್ದಿಲ್ಲ. ಆಚಾರ – ವಿಚಾರಗಳು, ನಡೆ – ನುಡಿ, ಕೌಟುಂಬಿಕ ವ್ಯವಸ್ಥೆ, ಮೇಲು – ಕೀಳು, ಜಾತಿ – ಕುಲ, ಮಾನವ ಸಂಬಂಧ ಹೀಗೆ ಹಲವು ಸಾಮಾಜಿಕ ದೃಷ್ಟಿಗಳು ಇವರ ಕೀರ್ತನೆಗಳಲ್ಲಿವೆ.

ಕೀರ್ತನ ಸಾಹಿತ್ಯದಲ್ಲಿ ಬರುವ ಸುಳಾದಿ, ಉಗಾಭೋಗ, ಮುಂಡಿಗೆ, ದಂಡಕ, ಮೂರ್ತಿಧ್ಯಾನ ಅಥವ ಚೂರ್ಣಿಕೆ, ಜಾವಳಿ, ಜಾನಪದ ಧಾಟಿ, ತತ್ವಪ;ದ, ಸೀಸಪದ ಹೀಗೆ ಎಲ್ಲ ಸ್ವರೂಪದ ಕೃತಿಗಳನ್ನೂ ಈ ಕೀರ್ತನಕಾರರೂ ರಚಿಸಿದ್ದಾರೆ. ಸರಳಶೈಲಿಯ ಕೀರ್ತನೆಗಳಿಂದ ಹಿಡಿದು ರಾಗ – ತಾಳ – ಪ್ರಾಸಬದ್ಧ, ಶಾಸ್ತ್ರನಿಷ್ಠ, ಸಂಗೀತ – ನಾಟ್ಯಪ್ರಧಾನಕೃತಿಗಳವರೆಗೆ ಕೀರ್ತನೆಗಳಿವೆ. ಜಾನಪದ ಶೈಲಿ, ಭಾವನಾತ್ಮಕ, ಬೋಧಪ್ರದ, ವರ್ಣನಾಪ್ರಧಾನ, ಭಾವಗೀತಾತ್ಮಕ, ಪ್ರಕೃತಿಚಿತ್ರಣ ಹೀಗೆ ಎಲ್ಲ ವಿಧದ ರಚನೆಗಳನ್ನೂ ಕಾಣಬಹುದು. ಕೆಲವರು ಕೇವಲ ಕೀರ್ತನಕಾರರಷ್ಟೇ ಅಲ್ಲದೆ ವಾಗ್ಗೇಯಕಾರರೂ ಆಗಿದ್ದಾರೆ. ಹಾಗೆಯೇ ಭಾಷಿಕವಾಗಿ ದೇಸೀಕನ್ನಡ – ಸಂಸ್ಕೃತ ಭೂಯಿಷ್ಟವಾದ ಕೃತಿಗಳ ಜೊತೆಗೆ ಭಿನ್ನ ಭಾಷೆಗಳ ಸಮ್ಮಿಶ್ರಣದಲ್ಲಿ ರಚನೆಯಾಗಿರುವ ಅತ್ಯಂತ ವಿಶಿಷ್ಟವಾದ ಕೀರ್ತನೆಗಳೂ ಇವೆ. ಇದರಿಂದ ಈವರೆಗಿನ ಕೀರ್ತನ ಸಾಹಿತ್ಯಕ್ಕೆ ಯಾವ ರೀತಿಯಲ್ಲೂ ಕಡಿಮೆಯಿಲ್ಲದಂತೆ, ಬದಲಿಗೆ ಸರಿಸಾಟಿಯಾಗುವಂತೆ ಶ್ರೀವೈಷ್ಣವ ಹರಿದಾಸ ಸಾಹಿತ್ಯವೂ ಇದೆ ಎಂಬುದನ್ನು ಸುಲಭವಾಗಿ ಗ್ರಹಿಸಬಹುದಾಗಿದೆ. ಕೀರ್ತನ ಸಾಹಿತ್ಯವನ್ನು ಸಾಮಾನ್ಯವಾಗಿ ವಿಭಾಗಿಸಬಹುದಾದ – ಅ) ಆತ್ಮ ನಿವೇದನೆ ಆ) ತತ್ವಪ್ರತಿಪಾದನೆ ಇ) ಉಪದೇಶಾತ್ಮಕ – ಈ) ಸಮಾಜದರ್ಶನ ಉ) ಕ್ಷೇತ್ರದರ್ಶನ – ಈ ಎಲ್ಲ ಮುಖ್ಯ ವಿಭಾಗಗಳಲ್ಲಿ ಈ ಕೀರ್ತನೆಗಳೂ ವಿಭಾಗಗೊಳ್ಳುತ್ತವೆಯಲ್ಲದೆ ಉಳಿದವುಗಳಿಗಿಂತ ಭಿನ್ನವಾಗಿ ಹರಿಏಕನಿಷ್ಠೆ, ಆಳ್ವಾರ್ – ಆಚಾರ್ಯ ಸ್ತುತಿ, ಶರಣಾಗತಿ – ಮಂತ್ರಮಹಿಮೆ, ನಾಮಸ್ಮರಣೆ, ಧ್ಯಾನಧಾರಣೆ, ದೈನ್ಯತೆಗಳ ಮೂಲಕ ತಮ್ಮ ವಿಶಿಷ್ಟತೆಯನ್ನು ಕಾಯ್ದುಕೊಳ್ಳುತ್ತವೆ. ಈ ವಿಶಿಷ್ಟಾದ್ವೈತ ಹರಿದಾಸ ಸಾಹಿತ್ಯಕ್ಕೇ ವಿಶಿಷ್ಟವಾದ ಲಕ್ಷಣಗಳನ್ನು ಸ್ಥೂಲವಾಗಿ ಹೀಗೆ ಗುರುತಿಸಬಹುದು.

. ಶರಣಾಗತಿ/ಪ್ರಸತ್ತಿ

ಶ್ರೀವೈಷ್ಣವ ಹರಿದಾಸಡರ ಎಲ್ಲ ಕೀರ್ತನೆಗಳೂ ಶರಣಾಗತಿ ತತ್ವದ ಲಕ್ಷಣವಾದ ಆತ್ಮಶೋಧನೆ, ದೈನ್ಯತೆ, ಆತ್ಮಸಮರ್ಪಣೆ, ಹರಿ – ಗುರುಪಾದಸೇವನೆಯ ಭಾವದಿಂದ ತುಂಬಿವೆ. ಈ ಶರಣಾಗತಿಭಕ್ತಿಯ ಮೂಲಕ ದೈವಸಾನ್ನಿಧ್ಯ ಸೇರಿರುವ ಪುರಾಣ ಪುರುಷರ, ಭಾಗವತಭಕ್ತರ ಪ್ರತಿಮೆಗಳನ್ನು ವಿವಿಧ ರೀತಿಯಲ್ಲಿ ಹೋಲಿಸಿಕೊಂಢು ಹರಿ ಧ್ಯಾನವೊಂದನ್ನೇ ಧಾರಣ ಮಾಡಿಕೊಂಡು ತಮ್ಮ ಅಸ್ತಿತ್ವವನ್ನು ನಿರಾಕರಿಸಿ, ಲೋಕಾಸಕ್ತಿಯನ್ನು ತ್ಯಜಿಸಿ, ದೈವದತ್ತ ತುಡಿಯುವುದೇ ಇವರ ಗುರಿ. ಲೌಕಿಕಾಸಕ್ತಿಯಿಲ್ಲದ, ಜೀವಸುಖ ಬೇಡದ, ಮರುಜನ್ಮವಿಲ್ಲದ, ಶಾಶ್ವತಮುಕ್ತಿಯ ಮಾರ್ಗದ ಸಾಧಕರಾಗಿ ಈ ದಾಸರು ನಿಲ್ಲುತ್ತಾರೆ.

ಈ ಶರಣಾಗತಿ ಧರ್ಮದ ಎಲ್ಲ ತಿರುಳನ್ನು ಅಹೋಬಲದಾಸರು ಈ ಕೃತಿಯಲ್ಲಿ ತತ್ವಪದದ ಧಾಟಿಯಲ್ಲಿ ಸೊಗಸಾಗಿ ಸ್ತುತಿಸಿದ್ದಾರೆ.

ಧ್ಯಾನ ಧಾರಣನಾಗಬೇಕಂತೆ ಪ್ರಪಂಚದೊಳಗೆ
ದೀನನಾನಾದಡೆ ಮುಖ್ಯ ಸಾಕಂತೆ     

ಪ್ರಾಣ ಪಾನ ಸಮಾನ ವ್ಯಾನವು
ಧ್ಯಾನ ಹೀಗೆಂದೆಂಬೊ ಪಂಚಕ
ನೀನೆ ನಿನ್ನೊಳು ಹುಡುಕಿ ದಿವ್ಯ
ಜ್ಞಾನಗುರುಗಳು ತೋರಿಸಿದು ನಿಜ     

ಆಗ ನೀನದ ಕಾಣಬಹುದಂತೆ ಆಧ್ಯಾತ್ಮ ಸತ್ಯವು
ಯೋಗವೆ ನಿಜ ತಾನಹುದಂತೆ
ಭಾಗವತಗಿದು ಮುಖ್ಯವೆನ್ನುತ
ಬಾಗಿನಡೆದ ಅವಿಜ್ಞನಿಗೆ ಅದು
ಭೋಗಿಭೂಷಣ ಸರ್ವ ಸಾಕ್ಷಿ ಸ
ರಾಗ ಮುದ್ರೆ ಸಮಾಧಿ ಹೊಂದುವ    

ಸ್ಮರಣೆ ನಿಂತೊಡೆ ಧ್ಯಾನ ಸಾಕಂತೆ ಅಭಯ ಪ್ರಸಿದ್ಧವು
ಕರಣನಿಗ್ರಹ ನಿನಗೆ ಬಹುದಂತೆ
ಧರಣಿ ಮದ್ಗುರು ತುಳಸಿರಾಮ ದಾ
ಸರಪ್ಪಣೆಗೊಳುಹಲಾತನ
ಚರಣ ಸೇವೆಯೊಳಿರುತಿಹುದೆ ನಿಜ
ಪರಮಪದವಿದು ಸತ್ಯನಿತ್ಯವು ೩

ಇನ್ನೊಬ್ಬ ಹರಿದಾಸರಾದ ಆಸೂರಿರಾಮಸ್ವಾಮಿದಾಸರು ಹೀಗೆ ಹೇಳುತ್ತಾರೆ.

ಶ್ರೀನಿವಾಸ ನಿನ್ನ ದಾಸನು ನಾನಲ್ಲವೇ
ಮಾನ ಪ್ರಾಣಗಳಿಗೆ ದೊರೆಯು ನೀನಲ್ಲವೇ

ಎಂದು ಸರ್ವಸ್ವವನ್ನೂ ಭಗವಂತನಿಗರ್ಪಿಸಿ ಅವನ ಮತ್ತು ಅವನ ಭಕ್ತರ ಪಾದ ಸೇವನೆಮಾಡುತ್ತ ದೀನನಾಗಿ ನಡೆದುಕೊಳ್ಳುವ ಈ ತತ್ವದ ಭಕ್ತರೆಲ್ಲರ ಲೋಕಸುಖತ್ಯಾಗ ಹೀಗಿರುತ್ತದೆ.

ಧರೆಯ ರಾಜ್ಯವನೊಲ್ಲೆ ಸಿರಿಯ ಸಂಪದವೊಲ್ಲೆ
ಸುರರು ಭೋಗಿಪ ಸುರಪುರವ ನಾನೊಲ್ಲೆ
ಪರಮೇಷ್ಠಿಪುರದೊಳಗಿರಲು ನಾನೊಲ್ಲೆ ನಿನ್ನ
ಹೊರತಾದ ಕೈವಲ್ಯ ಸ್ಥಿರವೊಲ್ಲೆ ನಾ” (ಆಸೂರಿ)

ಆವಾವ ಪರಿಯಲಿ ರಾಮನಾಮವನು
ಆವ ಪರಿಯಲಿ ನೆನೆದು ಸುಖಿಯಾಗು ಮನವೆ (ಲಕ್ಷ್ಮೀಶ)

ಶ್ರೀನಿವಾಸನ ಮೂಲನಾಮವ ಸೊಗಸಿನಿಂದ
ದೀನನಾನು ಸಮಸ್ತಲೋಕಕೆ ದಾನಿ ನೀನು – (ಕನಕದಾಸರು)
ಗಾನ ಮಾಳ್ಪ ಧೀರನಾವನೋ (ವೆಂಕಟವರದಾರ್ಯ)

ಓಂ ನಮೋ ನಾರಾಯಣಾಯ
ಎನ್ನುವ ನಾಮದ ಬೀಜವನು ರಾ
ಮಾನುಜ ಬೆಳೆದ ಧರೆಯೊಳೆಗೆ (ನಾರಾಯಣಶರ್ಮ)

ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ (ಶಾಮಶರ್ಮ)

ತಿರುಮಂತ್ರದ್ವಯದರ್ಥವ ಬೋಧಿಸಿ (ರಂಗದಾಸ)

ಮುಂತಾದ ಕೀರ್ತನೆಗಳಲ್ಲಿ ಈ ತತ್ವದ ಶರಣಾಗತಿಗೆ ಸಾಧನವಾದ “ಮಂತ್ರ ಮಹಿಮೆ”, “ನಾಮ ಸ್ಮರಣೆಗಳು” ಹೇರಳವಾಗಿ ಗೋಚರವಾಗುತ್ತವೆ.

ಸೃಷ್ಟಿನಾಥಪದಯುಕ್ತರ ಭಕ್ತಿಯು
ಕೊಟ್ಟರಭೀಷ್ಟವು ಎನಗಯ್ಯ
ಇಷ್ಟರ ಮೇಲಿನ್ನು ಲಕ್ಷ ಕೊಟ್ಟರು ಎನ
ಗಿಷ್ಟವಿಲ್ಲ ಶ್ರೀಕೃಷ್ಣಯ್ಯ (ವೆಂಕಟವರದಾರ್ಯ)

ಎಂಬಷ್ಟು ಅಚಲವಾದ ನಿಷ್ಠೆ ಈ ದಾಸರ ಶರಣಾಗತಿಗೆ ಇದೆ. ತನ್ನನ್ನು ತಾನು ದೇವನಲ್ಲಿ ಅರ್ಪಿಸಿಕೊಂಡನೆಂದರೆ ಆ ನಿಷ್ಠೆಗೆ ಎಂದೂ ಕುಂದಾಗದಂತೆ ನಡೆದುಕೊಳ್ಳುವ ವ್ರತ ಈ ಪ್ರಪತ್ತಿ. ಅದಕ್ಕಾಗಿಯೇ ಅಸಾಧ್ಯವಾದ ದೈನ್ಯತೆ, ದಾಸ್ಯಪ್ರವೃತ್ತಿ, ತನ್ನದೇನೂ ಇಲ್ಲ ಎಂಬ ನಿವೃತ್ತಿ, ಬದುಕಿನ ನಿರಾಸಕ್ತಿ, ದೇವ – ದೈವಭಕ್ತರ ಪಾದಸೇವನೆ ಯೊಂದೇ ಮುಕ್ತಿಗೆ ದಾರಿ ಎಂಬ ಅಚಲ ನಂಬಿಕೆ ಈ ದಾಸರಲ್ಲಿ ಎದ್ದು ಕಾಣುವುದು ಈ ತತ್ವ ನಿಷ್ಠೆಯಿಂದಲೇ. (ಕನಕದಾಸರಲ್ಲೂ ಕಾಣುವುದು ಇದನ್ನೇ. ಕನಕದಾಸರು ವಿಶಿಷ್ಟಾದ್ವೈತ ತತ್ವಾನುಯಾಯಿಗಳೇ ವಿನಾ ಮಧ್ವ (ದ್ವೈತ) ತತ್ವಾನುಯಾಯಿಗಳಲ್ಲ. ಅದಕ್ಕಾಗಿಯೇ ಅವರು ಪುರಂದರದಾಸರಿಗಿಂತ ಭಿನ್ನವಾಗಿ ತೋರುವುದು).

ತನ್ನ ರಕ್ಷಣೆಯ ಹೊಣೆಯನ್ನು ಭಗವಂತನ ಮೇಲೆ ಹಾಕಿ ತಾನು ನಿಶ್ಚಿಂತನಾಗಿ (ತನ್ನ ರಕ್ಷಣೆಯಿಂದ ಮತ್ತು ಲೌಕಿಕ ಜೀವನದಿಂದ) ಶ್ರೀಹರಿಯೊಬ್ಬನನ್ನೇ ಧ್ಯಾನಿಸುತ್ತಾ ಭಗವಂತನ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುವುದೇ ಪ್ರಪತ್ತಿಯ ಸಾಧನೆ. ತತ್ವ – ಹಿತ – ಪುರುಷಾರ್ಥಗಳೆಲ್ಲ ನಾರಾಯಣನ ನಾಮೋಚ್ಚಾರಣೆಯೇ. ಅನ್ಯ ಭಕ್ತಿಯ ಮಾರ್ಗವಿಲ್ಲದೆ, ಅನ್ಯ ದೈವಕಲ್ಪನೆಯಿಲ್ಲದೆ ಪರಮಾತ್ಮನೇ ಸರ್ವೋತ್ತಮನೆಂದು ನಂಬಿ, ಅವನ ಪ್ರಾಪ್ತಿಗಾಗಿ ಸರ್ವಸ್ವವನ್ನೂ ತ್ಯಜಿಸಿ, ಅವನ ಸಾಕ್ಷಾತ್ಕಾರವೇ ತನ್ನ ಜೀವಿತದ ಪರಮಗುರಿಯಾಗಿಸಿ, ಅವನ ಧ್ಯಾನವನ್ನೇ ಸದಾಕಾಲಮಾಡುತ್ತಾ ಇರುವುದೇ ಶರಣಾಗತಿ ಮಾರ್ಗದ ಧರ್ಮ. ಈ ಧರ್ಮದ ಪ್ರತಿಪಾದನೆಯಾಗಿ ಇವರ ಒಂದೊಂದು ಕೃತಿಗಳೂ ನಿಲ್ಲುತ್ತವಬೆ. ಇದರ ಸಾಧನೆಗಾಗಿ ‘ರಹಸ್ಯತ್ರಯ ಮಂತ್ರ’ವನ್ನು ಅನುಸಂಧಾನಮಾಡುವುದೇ ಈ ಭಕ್ತನ ಉಪಾಸನೆ. ಈ ತತ್ವಗಳನ್ನು ಸಾರಿರುವ ಆಳ್ವಾರರ ಆಚಾರ್ಯರ ಸ್ತುತಿ ಮತ್ತು ನಾಮಮಹಿಮೆ ಇವರ ಕೃತಿಗಳಲ್ಲಿ ಮೇಲಿಂದಮೇಲೆ ಬರುತ್ತವೆ.

ಇವರ ಆತ್ಮನಿವೇದನೆಯ ಕೃತಿಗಳೂ ಈ ಸಮರ್ಪಣೆಯ ಭಾವದಿಂದ ಸಾರ್ಥಕತೆಯನ್ನು ಪಡೆದಿವೆ. ಅದು ಗರುಡ, ಹನುಮಂತ, ಲಕ್ಷ್ಮಣರಂತೆ ಕಷ್ಟಗಳನ್ನು ಸಂತೋಷವಾಗಿ ಅನುಭವಿಸುತ್ತ, ವಿರಾಮವಿಲ್ಲದೆ ಸೇವೆಗೈಯುತ್ತ ಆನಂದಿಸಬಹುದು. ಕೌಸಲ್ಯೆ, ದೇವಕಿ, ಯಶೋದೆ, ಪೆರಿಯಾಳ್ವಾರರಂತೆ ದೇವರನ್ನು ಮಗುವಾಗಿ ಭಾವಿಸಿ, ಪ್ರೀತಿಸಿ ಮಾತೃ ವಾತ್ಸಲ್ಯದ ಆರೈಕೆ ಮಾಡಬಹುದು. ಆಂಡಾಳ್‌, ರಾಧೆ, ನಮ್ಮಾಳ್ವಾರರಂತೆ ಭಗವಂತನನ್ನು ಪತಿ ಎಂದು ಭಾವಿಸಿ ಸತಿ – ಪತಿ ಭಾವದ ಪ್ರೇಮ – ವಿರಹದಲ್ಲಿ ಮುಳುಗಬಹುದು. ಬಲಿ, ತಿರುಪ್ಪಾಣಾಳ್ವಾರ್, ತೊಂಡರಡಿಪ್ಪಡಿ ಯಾಳ್ವಾರರಂತೆ ಸರ್ವಸ್ವವನ್ನೂ ಸಮರ್ಪಿಸಿ ಅಡಿಯಾಳಾಗಬಹುದು. ಅಂಬರೀಷ, ವಿಭೀಷಣ, ಸುಗ್ರೀವರಂತೆ ಶರಣಾಗತಿ ಮಾಡಬಹುದು. ಅರ್ಜುನನಂತೆ ಸಖನಾಗಿರಬಹುದು. ಪ್ರಹ್ಲಾದ, ಶುಕ, ಧ್ರುವ, ಜನಕರಂತೆ ಏಕಚಿತ್ತದಿಂದ ಸ್ತುತಿಸಿ ಕಾರುಣ್ಯ ಸಂಪಾದಿಸಬಹುದು; ಅಜಾಮಿಳ, ವಾಲ್ಮೀಕಿ, ಗಜೇಂದ್ರ ದ್ರೌಪದಿಯರಂತೆ ನಾಮಸ್ಮರಣೆ ಯಿಂದಲೇ ಇಚ್ಛಿಸಿದುದನ್ನು ಪಡೆಯಬಹುದು. ಕುಬ್ಜೆ, ಕುಚೇಲ, ವಿದುರ, ಶಬರಿ, ಗೋಪಿಕೆಯರು, ಶಿಬಿ, ಜಟಾಯು, ಅಕ್ರೂರ, ಅಹಲ್ಯೆಯರಂತೆ ಅನನ್ಯವಾಗಿ ಸ್ತುತಿಸುತ್ತಾ ದೈವದರ್ಶನಕ್ಕಾಗಿ ಕಾಯುತ್ತಾ ಮುಕ್ತಿಪಡೆಯಬಹುದು. ಹಿರಣ್ಯಾಕ್ಷ್, ಹಿರಣ್ಯಕಶಿಪು, ರಾವಣ, ಶಿಶುಪಾಲ, ದುರ್ಯೋಧನರಂತೆ ದ್ವೇಷಿಸುತ್ತ ನಿಂದಿಸುತ್ತಲೂ ದೇವರನ್ನು ಕಾಣಬಹುದು. ಹೀಗೆ ಎಲ್ಲ ರೀತಿಯ ದಿವ್ಯದರ್ಶನದ ಮಾರ್ಗಗಳನ್ನು ಶರಣಾಗತಿಯ ತಳಹದಿಯ ಮೇಲೆ ಕಲ್ಪಿಸಿಕೊಂಡು ಆತ್ಮವನ್ನು ಪರಿಪರಿಯಾಗಿ ದೇವರಿಗೆ ಸಮರ್ಪಿಸುತ್ತ ನವವಿಧಭಕ್ತಿಯ ಮೂಲಕ ಮೋಕ್ಷಕ್ಕಾಗಿ ಹಾತೊರೆಯುವುದೇ ಈ ಕೀರ್ತನಕಾರರ ಪರಮಗುರಿಯಾಗಿರುತ್ತದೆ. ಪುರಾಣ ಪ್ರತಿಮೆಗಳಿಲ್ಲದ ಕೀರ್ತನೆಗಳೇ ಇಲ್ಲ ಎನ್ನುವಷ್ಟು ಬಾಹುಳ್ಯದಿಂದ ಮೇಲಿನ ಎಲ್ಲ ಭಕ್ತರ, ಆಳ್ವಾರರ ನಿದರ್ಶನಗಳನ್ನು ಯಥೇಚ್ಛವಾಗಿ ತರುತ್ತಾರೆ. ಮೇಲಿನ ಎಲ್ಲ ಭಕ್ತರ, ಆಳ್ವಾರರ ನಿದರ್ಶನಗಳನ್ನು ಯಥೇಚ್ಛವಾಗಿ ತರುತ್ತಾರೆ. ಭಗವಂತನ ಲೀಲಾವಿಲಾಸಗಳನ್ನು – ಅದು ಈ ಭಕ್ತರಿಗೆ ಒಲಿದದ್ದೂ ಆಗಿರಬಹುದು; ಶಿಷ್ಟ ನಿಗ್ರಹವಾಗಿರಬಹುದು; ಕೃಷ್ಣನ ಲೀಲೆಗಳಾಗಿರಬಹುದು – ಮನತುಂಬಿ ಸ್ತುತಿಸುವ ಭಾವಪರವಶತೆಯನ್ನು ಈ ಕೀರ್ತನೆಗಳಲ್ಲಿ ಕಾಣಬಹುದು.

ತತ್ವಪ್ರತಿಪಾದನೆಯನ್ನೇ ನೇರವಾಗಿ ಮಾಡಿರುವ ತಾತ್ವಿಕ, ದಾರ್ಶನಿಕ ಕೃತಿಗಳೂ ಪ್ರತ್ಯೇಕವಾಗಿ ಈ ಕೀರ್ತನಕಾರರಲ್ಲಿ ಕಂಡುಬಂದರೂ ಆತ್ಮ ನಿವೇದನೆಯ ಕೃತಿಗಳೆಲ್ಲವೂ ತತ್ವಪ್ರತಿಪಾದನೆಯ ಕೃತಿಗಳೂ ಆಗಬಲ್ಲವು. ಏಕೆಂದರೆ ಆತ್ಮ ನಿವೇದನೆಯ ಕೀರ್ತನೆಗಳನ್ನು ಈ ಕೀರ್ತನಕಾರರು ಶ್ರೀವೈಷ್ಣವ ತತ್ವವಾದ ಶರಣಾಗತಿಯ ತಳಹದಿಯ ಮೇಲೆಯೇ ಕಟ್ಟಿರುತ್ತಾರೆ. ಶ್ರೀವೈಷ್ಣವ ಮತಕ್ಕೆ ಈ ಪ್ರಪತ್ತಿಯೇ ಮೂಲಾಧಾರ, ಶರಣಾಗತಿ ಎಂಬುದು ಅತ್ಯಂತ ಸರಳವಾದ ಆದರೆ ಅಷ್ಟೆ ಕಠಿಣವಾದ ಭಕ್ತಿಯ ಮಾರ್ಗ. ಸುಖಾಪೇಕ್ಷೆ ತೊರೆದು ತನ್ನದೇನೂ ಇಲ್ಲವೆನ್ನುವ, ದೈನ್ಯತೆ ನಾನು ನಾನಲ್ಲವೆಂಬ ಸರ್ವಸಮರ್ಪಣ ಸ್ಥಿತಿ. ಕನಕದಾಸರ ‘ದೀನ ನಾನು ಸಮಸ್ತಲೋಕಕೆ ದಾನಿ ನೀನು’ ಈ ಸ್ತುತಿಯಲ್ಲಿ ಈ ಶರಣಾಗತಿಯೇ ಇರುವುದು.

. ಆಳ್ವಾರ್ಆಚಾರ್ಯ ಸ್ತುತಿ

ಶ್ರೀವೈಷ್ಣವ ತತ್ವಗಳನ್ನು ಅವುಗಳ ಒಳಗುಟ್ಟುಗಳನ್ನು ಅತ್ಯಂತ ಸರಳವಾಗಿ ನೇರವಾಗಿ ಸ್ಪಷ್ಟವಾಗಿ ಕೀರ್ತನಸಾಹಿತ್ಯದಲ್ಲಿ ತರುವುದರ ಮೂಲಕ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತ ತತ್ವವನ್ನು ಸೊಗಸಾಗಿ ಮೂಡಿಸಿರುವ ಪ್ರಮುಖ ದಾಖಲೆಗಳಾಗಿ ಇವು ನಿಲ್ಲುತ್ತವೆ. ಶ್ರೀವೈಷ್ಣವ ತತ್ವದ ಎಲ್ಲ ಪ್ರಮೇಯಗಳನ್ನೂ ಇವುಗಳಲ್ಲಿ ತರಲಾಗಿದೆ. ಆಳ್ವಾರರು – ಆಚಾರ್ಯರು ಈ ಶ್ರೀವೈಷ್ಣವ ತತ್ವದ ಮೂಲ ಪ್ರತಿಪಾದಕರು. ಈ ತತ್ವಾನುಯಾಯಿಗಳಿಗೆ ಇವರೇ ಗುರುಗಳು. ಇವರನ್ನು ಹೊರತಾಗಿ ಅನ್ಯಗುರುಗಳ ಸ್ತುತಿ ಇವರಲ್ಲಿ ಕಂಡುಬರುವುದಿಲ್ಲ. ಇಲ್ಲಿಯ ಗುರುಸ್ತುತಿಯ ಇನ್ನೊಂದು ವಿಶೇಷ. ಈ ಗುರುಪರಂಪರೆಯನ್ನು ದೈವಸಮಾನವಾಗಿ ಸ್ವೀಕರಿಸಿರುವುದು, ಇವರ ಪಾದಸೇವನೆಯೇ ಮುಕ್ತಿಗೆ ದಾರಿ ಎಂಬ ಅಚಲನಂಬಿಕೆಯಿರುವುದು. ಈ ಆಳ್ವಾರಾಚಾರ್ಯರನ್ನು ಸ್ತುತಿಸುವ ದಾಸರನ್ನೂ ಗುರುಗಳಾಗಿ ಸ್ವೀಕರಿಸುವವರೆಗೂ ಈ ಭಾವವಿರುತ್ತದೆ. ಈ ಗುರುಸ್ತುತಿಯ ರೂಪದಲ್ಲಿರುವ ಆಳ್ವಾರ್ – ಆಚಾರ್ಯರ ಸ್ತುತಿ ಈ ಕೀರ್ತನೆಗಳ ಬಹಳ ಮುಖ್ಯ ವೈಶಿಷ್ಟ್ಯವಾಗಿದ್ದು, ಕನ್ನಡ ಕೀರ್ತನೆಗಳಿಗೆ ಹೊಸ ಓದನ್ನು, ಪರಿಕಲ್ಪನೆಯನ್ನು ಒದಗಿಸುವಲ್ಲಿ ಇದು ಯಶಸ್ವಿಯಾಗಿದೆ.

ಆಚಾರ್ಯ ಪ್ರಾಚಾರ್ಯ ಪರಮಾಚಾರ್ಯ
ಆಳ್ವಾರ್ ತಿರುವಡಿಗಳೆ ಶರಣೆನ್ನುತ
ಬಾಳ್ವರು ಭಜಿಪುದು ಭಕುತಿಯಲಿ
ವಕುಳಾಭರಣನೆ ಶರಣೆಂಬೆ

ನಾಥವಾನಸ್ಮಿ ವಿಪ್ರನಾರಾಯಣೇನ
ಶ್ರೀಗೋದಾದೇವಿ ಶ್ರೀಭೂನೀಳಾ ಆಂಡಾಳ್ದೇವಿ
ರಾಮಾನುಜಾಚಾರ್ಯ ಮೌನಿವರ್ಯ
ನೇಮದಿಂದಲಿ ಗೈದೆ ನಾಂ ಸ್ವಾಮಿಕಾರ್ಯ

ಮುಂತಾದ ಇನ್ನೂ ಹಲವು ಕೃತಿಗಳಲ್ಲಿ ಈ ಬಗೆಯ ನೂತನ ಗುರುಸ್ತುತಿ ಸ್ವರೂಪವನ್ನು ಕಾಣಬಹುದು.

. ತತ್ವದರ್ಶನ:

ವಿಶಿಷ್ಟಾದ್ವೈತ ಮತದ ಎಲ್ಲ ಪ್ರಮೇಯಗಳನ್ನೂ ಈ ಮುಂದಿನ ಕೃತಿಯು ಯಶಸ್ವಿಯಾಗಿ ಹಿಡಿದಿಟ್ಟಿರುವುದನ್ನು ನೋಡಬಹುದು.

ವಿಶಿಷ್ಟಾದ್ವೈತ ಮತವೇ ಮತವು
ವಿಷ್ಣುಪದವೇ ಶಾಶ್ವತ ಪದವು ಪ.

ವಸಿಷ್ಠ ನಾರದ ಸನಕಾದಿವಂದ್ಯರ
ವಿಶಿಷ್ಟ ಪರಿಗ್ರಹ ವೇದಾಂತಸಾರದ    ..

ಅಸೇತು ಹಿಮಾಚಲ ವಿಶೇಷದ
ವಿಶೇಷ ಪ್ರಮಾಣ ಚತುಷ್ಟಯದ ೧
ಚಿತ್ತು ಅಚಿತ್ತೀಶ್ವರ ತತ್ವವನು
ಪ್ರತ್ಯೇಕವಾಗಿಯೇ ಬೋಧಿಸಿಹ ೨

ಪರ ವ್ಯೂಹ ವಿಭವಾಂತರ್ಯ ಅರ್ಚಾ
ಪರಿಪರಿ ರೂಪದ ಶ್ರೀಹರಿ ಪೂಜನ ೩

ರಹಸ್ಯತ್ರಯ ಮಂತ್ರ ವಿಶಿಷ್ಟದ
ಸಹಮತ ಸುಲಭೋಪಾಯ ವಿಧಾನದ ೪

ಹರ ಅಜ ಸುರರೆಲ್ಲರು ಹರಿಮತ
ಹರಿಯೊಬ್ಬನ ಪಾದವೆ ಮೋಕ್ಷಪಥದ

ಪ್ರಪತ್ತಿಮಾರ್ಗದ ಪ್ರಧಾನ ಧರ್ಮದ
ಉಪವೃತ್ತಿಯ ಬೇಡದ ಶರಣಾಗತಿಯ ೬

ಸತತವು ಹೆಚ್ಚಾಜಿ ಕೇಶವನಾಮ
ನುತಿಸಿದವನ ಭವಬಂಧನ ಬಿಡಿಸುವ ೭ (ನಾರಾಯಣಶರ್ಮ)

ನೀನಾರು ನಾನಾರು ನೀನೆನ್ನೊಳಿರಲು
ನೀನೆನ್ನೊಳಡಗಿಹೆಯೋ ರಂಗಯ್ಯ ನಾನಿನ್ನೊಳಡಗಿಹೆನೊ,’

ಮುಂತಾದ ಕೀರ್ತನೆಗಳ ಮೂಲಕ ದೇವ – ಜೀವಗಳ ಸಂಬಂಧದ ವಿಶಿಷ್ಟಾದ್ವೈತ ದೃಷ್ಟಿಯಾದ ಜೀವ – ಜಡಗಳೆರಡೂ ‘ದೇವನಲ್ಲಿ ಲೀನವಾಗಿವೆ. ಇವುಗಳನ್ನು ವಿಶೇಷಣವಾಗಿ ಹೊಂದಿರುವ ವಿಶ್ವವ್ಯಾಪಕ ರೂಪ ಶ್ರೀಹರಿ’ ಎಂಬುದನ್ನು ಈ ಕೀರ್ತನೆಗಳು ಸ್ಪಷ್ಟವಾಗಿ ಪ್ರತಿಪಾದಿಸುತ್ತವೆ. ಪುರಂದರದಾಸರು

ಎರೆಡೂ ಒಂದಾಗದು ರಂಗ 
ಎರಡು ಒಂದಾಗದು ಎಂದೆಂದಿಗು ರಂಗ  ..

ಒಂದೆ ವೃಕ್ಷದಲಿ ಎರಡು ಪಕ್ಷಿಗಳು
ಒಂದೇ ಗೂಡಿನಲಿ ಇರುತಿಹವು

ಎಂದು ಸಾರುವ ದ್ವೈತಪ್ರತಿಪಾದನೆಯಂತೆ ಅಷ್ಟೇ ಸ್ಪಷ್ಟವಾಗಿ ಆಸೂರಿ ರಾಮಸ್ವಾಮಿ ದಾಸರು ವಿಶಿಷ್ಟಾದ್ವೈತ ತತ್ವವನ್ನು ಒಂದು ಕೃತಿಯಲ್ಲಿ ನಿರೂಪಿಸಿದ್ದಾರೆ.

ಒಂದಿಲ್ಲದ ಮೇಲೆರಡುಂಟೆ ಭಕ್ತಿ
ಒಂದಲ್ಲದೆ ಹರಿಯೊಲವುಂಟೆ 

ಒಂದಲ್ಲದೆ ರುಚಿ ಔಷಧಿಯುಂಟೆ
ನೊಂದಲ್ಲದೆ ರಂಗಾ ಎಂಬುವುದುಂಟೆ  ಅಪ
ಗಿಡ ಮರವಾಗದೆ ಕೃಮಿಯಾಗುವೆನೆ
ಅಡವಿಯೊಳಿರದೆ ಗೋವಾಗುವೆನೆ

ಪಡೆಯದೆ ಪುಣ್ಯವ ನರನಾಗುವೆನೆ
ಮೃಡನ ಪೂಜಿಸದೆ ದ್ವಿಜನಾಗುವೆನೆ  

ಸುಗುಣವಿರದೆ ಮಾತಿನಿದಾಗುವುದೆ
ಸೊಗಮಿಲ್ಲದೆ ಬಾಯ್ನಗದೋರುವುದೆ
ಸುಗುಣವಿಲ್ಲದೆ ನಿರ್ಗುಣಬಹುದೆ
ಮುಗಿಲಿಲ್ಲದೆ ಮಳಧರೆಗೆ ಬೀಳುವುದೆ ೨

ತಂಗಿದ್ದಲ್ಲದೆ ಭಾವ ಎಂಬೋದುಂಟೋ
ಹಂಗಿಲ್ಲದೆ ಮರೆ ಹಿತಕುಂಟೊ
ತಂಗಿನೋಡಲು ಭಾವ ಮರೆಯಹುದುಂಟೊ
ಮಾಂಗಿರಿರಂಗ ನೀನೆನ್ನಯ ನಂಟೊ 

ದ್ವೈತ ಅದ್ವೈತಗಳ ಸಗುಣ – ನಿರ್ಗುಣಗಳನ್ನು ಸಮ್ಮಿಳನಗೊಳಿಸಿರುವ ವಿಶಿಷ್ಟಾದೈತವನ್ನು ಇಲ್ಲಿ ಬಹಳ ಸೊಗಸಾಗಿ ಸಾಧಿಸಿದ್ದಾರೆ. ಕನಕದಾಸರು ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಕೀರ್ತನೆಯಲ್ಲಿ ನಿರೂಪಿಸಿರುವ ತತ್ವವೂ ಇದೇ ಆಗಿದೆ.