. ಹರಿಏಕನಿಷ್ಠೆ

ಹರಿಏಕನಿಷ್ಠೆ ಈ ಧರ್ಮದ ಇನ್ನೊಂದು ಮುಖ್ಯ ಲಕ್ಷಣ. ಜಗತ್ತೆಲ್ಲವೂ ಹರಿಮಯ, ಅವನೇ ತಂದೆ, ಮಹಾಲಕ್ಷ್ಮಿಯೇ ತಾಯಿ. ಇವನನ್ನು ಹೊರತುಪಡಿಸಿ ಇನ್ನೊಂದು ದೈವವಿಲ್ಲ. ಇದ್ದರೆ ಇವನ ಅಧೀನ, ಅವರೆಲ್ಲ ಇವನು ನೇಮಿಸಿದ ಕಾರ್ಯಗಳನ್ನು ಮಾಡಬಲ್ಲವರಷ್ಟೇ. ಆದ್ದರಿಂದ ಅವರನ್ನು ಅನುಸರಿಸುವುದರಿಂದ ಹರಿ ಒಲಿಯುವುದಿಲ್ಲ: ಎಂಬ ಪ್ರಬಲವಾದ ನಂಬಿಕೆ – ಆಚರಣೆ ಈ ಧರ್ಮೀಯರಲ್ಲಿದೆ. ಆಧುನಿಕ ಸಮಾಜದಲ್ಲಿ ಈ ನಿಷ್ಠೆ ಅಷ್ಟಾಗಿ ಆಚರಣೆಯಿಲ್ಲಲ್ಲದಿದ್ದರೂ ಧರ್ಮನಿಷ್ಠರು ಇಂದಿಗೂ ಈ ತತ್ವಕ್ಕೆ ಬದ್ಧರಾಗಿದ್ದಾರೆ. ಶ್ರೀವೈಷ್ಣವಧರ್ಮೀಯರ ಮನೆಗಳಲ್ಲಿ ಇಂದಿಗೂ ಶ್ರೀಹರಿ ಮತ್ತು ಅವನ ಅವತಾರದ ನರಸಿಂಹ, ರಾಮ, ಕೃಷ್ಣ ಇತ್ಯಾದಿ ಹಾಗೂ ಅರ್ಚಾರೂಪದ ಶ್ರೀನಿವಾಸ, ರಂಗನಾಥ, ಚನ್ನಕೇಶವ ಇತ್ಯಾದಿ ಫೋಟೋಗಳನ್ನು ಬಿಟ್ಟರೆ ಅನ್ಯದೈವಗಳ ಫೋಟೋಗಳು ಕಂಡುಬರುವುದಿಲ್ಲ, ಗಣೇಶನದೂ ಕೂಡ. ಈ ಗಣೇಶನಿಗೂ ಈ ಧರ್ಮೀಯರಲ್ಲಿ ಬೇರೆಯದೇ ಕಲ್ಪನೆಯಿದೆ.

‘ಕುಮುದಗಣೇಶ’ ‘ವಿಶ್ವಕ್ಸೇನ’ಹೆಸರಿನಲ್ಲಿ ವಿಷ್ಣುವಿನ ವೈಕುಂಠದ ಸೇನಾಧಿಪತಿಯನ್ನಾಗಿ ಕಲ್ಪಿಸಿಕೊಂಡು ಅವನನನ್ನು ವಿಘ್ನನಾಶಕನನ್ನಾಗಿ ಸ್ತುತಿಸಲಾಗುತ್ತದೆ. ಶಾಮ ಶರ್ಮದಾಸರು ಈ ಗಣೇಶನ ಬಗ್ಗೆ ಒಂದು ಸ್ವತಂತ್ರ ಕೃತಿಯನ್ನೇ ರಚಿಸಿದ್ದರೆ, ಉಳಿದವರು ಪ್ರತಿಮೆಯನ್ನಾಗಿಸಿದ್ದಾರೆ.

ಶ್ರೀನಾಥಾಜ್ಞಾಪ್ರಕಾರ ನಡೆಯುವ ಸೂತ್ರವತೀರಮಣ
ಮಾನಿತಪ್ರಧಾನಿಮಂತ್ರಿ ಪೂಜಿಪೆ ವಿಘ್ನೇಶಾ ನಮಿಪೆ

ಎಂದು ಆರಂಭವಾಗುವ ಈ ಕೃತಿ ಮೂಲತಃ ಸಂಸ್ಕೃತದ ‘ಶುಕ್ಲಾಂಬರಧರಂ’..ಶ್ಲೋಕಗಳನ್ನು ಸ್ವಂತಿಕೆಯೊಂದಿಗೆ ಕನ್ನಡೀಕರಿಸಿರುವುದಾಗಿದ್ದು, ಅತ್ಯುತ್ತಮವಾಗಿದೆ.

ಬಿಳಿಯುಡೆ ತುಂಬಿದ ತಿಂಗಳಬೆಳಗಾ
ತೊಳಗುವ ನಾಲಕು ತೋಳುಗಳ
ಬಲು ನಗೆಮೊಗ ವಿಷ್ಣು ನೆನೆವೆ
ಸುಲಭದಿ ಕಾರ್ಯವ ಗೈಸುವನೇ

ಲಕ್ಷ್ಮಿಸಮೇತವಾದ ಶ್ರೀಹರಿಯೊಬ್ಬನನ್ನೇ ಅವಲಂಬಿಸಿರುವುದು ಈ ಶ್ರೀವೈಷ್ಣವ ಕೀರ್ತನೆಗಳಲ್ಲಿ ದಟ್ಟವಾಗಿ ಕಾಣಿಸುತ್ತದೆ. ಸರ್ವದೈವಗಳನ್ನು ಸ್ತುತಿಸಿದರೂ ಅವುಗಳನ್ನೂ ಶ್ರೀಹರಿಯಿಂದ ನಿಯಮಿತರಾದ ದೇವತೆಗಳನ್ನಾಗಿಯೋ ಶ್ರೀಹರಿಯನ್ನೇ ಸ್ತುತಿಸುವ ದೇವತೆಗಳಾಗಿಯೋ ಚಿತ್ತಿಸಿರುವುದು ಇಲ್ಲಿಯ ವೈಶಿಷ್ಟ್ಯ.

‘ಶಿವಸುತ’, ‘ಬ್ರಹ್ಮಪೂಜಿತ’, ‘ಅಜಪಿತ’, ‘ಶಂಕರಸೇವಿತ’ ಎಂದೆಲ್ಲ ಶ್ರೀಹರಿಯನ್ನು ಇಲ್ಲಿ ಹೆಸರಿಸಲಾಗಿದೆ.

ತಾಯಿಲಕುಮಿ ತಂದೆನಾರಾಯಣ
ನಿಮ್ಮಯ ನೆಚ್ಚಿನ ಮಗ ನಾನಣ್ಣ

ಎಂಬುವ ಕೌಟುಂಬಿಕ ಚೌಕಟ್ಟಿನಲ್ಲಿಯೇ ಇಲ್ಲಿಯ ದಾಸರಿಗೆ ದೈವದೊಲವಿದೆ.

ಆಕಾರವಿಲ್ಲದ ಅನಾಬಿಯೊಳು ಪಂಥ
ಸಾಕಾರವಾಗಿಹನು ಶ್ರೀಲಕ್ಷ್ಮೀಕಾಂತ

ಎಂಬಂತಹ ಹರಿಏಕನಿಷ್ಠೆ ಎಲ್ಲ ಶ್ರೀವೈಷ್ಣವ ಹರಿದಾಸರಲ್ಲೂ ಕಂಡುಬರುತ್ತದೆ. ಆದರೂ ಬೇಲೂರು ವೈಕುಂಠದಾಸರು (ಶನೀಶ್ವರದಂಡಕ) ಅಹೋಬಲದಾಸರು ಶಾಮಶರ್ಮರು ಹಾಗೂ ಆಸೂರಿ ರಾಮಸ್ವಾಮಿದಾಸರಲ್ಲಿ ಸರ್ವದೇವತೆಗಳನ್ನು ಕುರಿತ ಸುಂದರವಾದ ಸ್ತುತಿರೂಪದ ಕೆಲವು ಕೀರ್ತನೆಗಳೂ ಇವೆ. ಅಷ್ಟೇ ಅಲ್ಲ, ಗುರುರಾಯ ರಾಘವೇಂದ್ರರು ಮತ್ತು ಆಧುನಿಕ ದೈ”ವ ಗುರುಶ್ರೀಸಾಯಿಬಾಬರನ್ನೂ ಕುರಿತು ಆಸೂರಿಯವರು ಕೀರ್ತನೆಗಳನ್ನು ರಚಿಸಿದ್ದಾರೆ. ಆದರೆ ಇವು ಶ್ರೀವೈಷ್ಣವೇತರ ಹರಿದಾಸರಲ್ಲಿ ಕಂಡುಬರುವಂತೆ ಶ್ರೀಹರಿಗೆ ಸಮಾನ ಅಥವಾ ಪರ್ಯಾಯ ದೇವತಾಸ್ತುತಿಗಳಾಗಿಲ್ಲ. ಬದಲು ಹರಿಏಕನಿಷ್ಠೆಗೇ ಬದ್ಧವಾಗಿ ಅವನ ಅಧೀನ ದೇವತೆಯಾಗಿ, ಅವನದೇ ಭಿನ್ನರೂಪವಾಗಿ ಕಲ್ಪಿಸಿರುವಂತಿದೆ. (ಆಸೂರಿಯವರು ತಮ್ಮ ಆರಾಧ್ಯದೈವವನ್ನೇ ಹರಿಹರ ಅಭೇದದಲ್ಲಿ ಸ್ವೀಕರಿಸಿದ್ದಾರೆ;‘ಮಾಂಗಿರಿರಂಗ’ ಹರಿಯೂ ಹೌದು ಹರನೂ ಹೌದು. ಅವನಿಗೆ ಸ್ಥಳಪುರಾಣದಲ್ಲೆ ಈ ಅಭೇದವಿದೆ. ಇದರ ಬಗ್ಗೆ ಇವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ.) ಸರ್ವದೇವೋಪಸಾನೆಯ ಇಂದಿನ ಆಧುನಿಕ ಸಾಮಾಜಿಕ ಸಂದರ್ಭದಲ್ಲಿ ಶ್ರೀವೈಷ್ಣವ ಹರಿದಾಸರ ಹರ ಮತ್ತು ಇತರ ದೇವತೆ – ಗುರುಗಳ ಸ್ತುತಿ ಅತ್ಯಂತ ಸಹಜವಾದುದಾಗಿದೆ. ಇದು ಸಾಮಾಜಿಕ ಬದಲಾವಣೆಗೆ ಸ್ಪಂದಿಸಿರುವ ದಾಸರ ಸಮಕಾಲೀನ ಪ್ರಜ್ಞೆಯೂ ಆಗಿರುತ್ತದೆತಾದ್ದರಿಂದ ಇದನ್ನು ವಿಶಿಷ್ಟ ಲಕ್ಷಣವಾಗಿಯೇ ಪರಿಭಾವಿಸಿ, ತತ್ವದ ಬಗೆಗಿನ ಬಿಗಿ ನಿಲುವನ್ನು ಸಡಿಲಿಸುವ ಮೂಲಕ ಶ್ರೀವೈಷ್ಣವ ಕೀರ್ತನ ಸಾಹಿತ್ಯದಲ್ಲಿ ಧರ್ಮಸಮಾನತೆಯನ್ನು ಸಾಧಿಸಿದಂತಾಗಿದೆ ಎಂದು ಹೇಳಬಹುದಾಗಿದೆ.

ಏನೋಒಂದಿಹುದು ಕೋಟಿ ಬಾಳುವ ನುಂಗಿಹದು   

ದೀನನಾಗಿ ಗುರುಧ್ಯಾನವ ಮಾಡಿ ಆದೆಯೊಳೀ ಬಹು
ಮಾನದಿ ಕಾಣುವುದೇನೋ  ..

ನಮ್ಮೊಳಿರಬಹುದು ಅದು ನಮ್ಮ ನಮ್ಮೊಳಿರಬಹುದು
ಹಮ್ಮುಗಳೆಂಬುವ ಹೆಮ್ಮೆಯನಳಿಯಲು
ಸುಮ್ ಮನೆ ಗಮ್ಮನೆ ಕಾಣಬರುತ್ತಿಹುದೇನೋ 

ಅದಕ್ಕಿನ್ನೆಣೆಯಿಲ್ಲ ಅದನು ಗುರುಸೇವಕಬಲ್ಲ
ಮದನಜನಕ ಶ್ರೀತುಳಸೀರಾಮನ
ಪದಭಜನೆಯೊಳು ವುದಯಸಿ ತಾನೇ 

ಅಹೋಬಲದಾಸರ ಈ ಕೃತಿ ವಿಶಿಷ್ಟಾದ್ವೈತದ ಸಾಧಕನಿಗೆ ಒದಗುವ ಸಿದ್ಧಿಯನ್ನು ಅತ್ಯಂತ ಆಕರ್ಷಣೀಯವಾಗಿ ತಿಳಿಸುವ ಸರಳ ತತ್ವವಾಗಿ ಹೊರಹೊಮ್ಮಿದೆ.

ಕೇವಲ ಶ್ರೀವೈಷ್ಣವ ತತ್ವದ ದೃಷ್ಟಿಯಿಂದಷ್ಟೇ ಇವು ವಿಶಿಷ್ಟವಾಗುಳಿಯದೆ ಹರಿದಾಸ ಸಾಹಿತ್ಯ ಲಕ್ಷಣ ದೃಷ್ಟಿಯಿಂದಲೂ ವಿಶಿಷ್ಟತೆಯನ್ನು ಗಳಿಸುತ್ತವೆ. ಸಾಮಾಜಿಕವಾಗಿಯೂ ಸಮರ್ಥವಾಗಿಯೆ ಸ್ಪಂದಿಸುತ್ತವೆ. ಮತ, ಕುಲ, ಲೋಭತನಸದ, ಕಂದಾಚಾರ, ಕಪಟತನ, ಮೋಸ, ಸಂಬಂಧಗಳ ಮೌಲ್ಯಗಳು, ಭಾವನೆಗಳ ಮೌಲ್ಯಗಳು, ಹಣ, ಅಧಿಕಾರ, ಆಸೆ ಇತ್ಯಾದಿ ಎಲ್ಲ ಸಾಮಾಜಿಕ ಸಂಗತಿಗಳಿಗೂ ಇತರ ಹರಿದಾಸರಂತೆ ಇವರೂ ಸಹಜವಾಗಿ ಸ್ಪಂದಿಸಿದ್ದಾರಲ್ಲದೆ, ಜಾತ್ರೆ, ಬರಗಾಲ, ಕ್ಷಾಮ, ಖಾಯಿಲೆ, ಸ್ವಾತಂತ್ರ್ಯಹೋರಾಟ, ಚೀನಾ – ಪಾಕಿಸ್ತಾನದೊಂದಿಗಿನ ಯುದ್ಧ ಹೀಗೆ ಹಲವು ಸಮಕಾಲೀನ ಸಂಗತಿಗಳಿಗೂ ಪ್ರತಿಕ್ರಿಯಿಸಿದ್ದಾರೆ. ತಾವು ಬದುಕಿಗೆ ವಿಮುಖ ರಾಗಿದ್ದರೂ ತಮಗೆ ಕಾಣುವ ಸಮಾಜಜೀವನದ ಬದುಕು – ಬವಣೆ – ಬದಲಾವಣೆಗಳನ್ನೂ ಅದರ ಎಲ್ಲ ಸೂಕ್ಷ್ಮಗಳೊಂದಿಗೆ ಚಿತ್ರಿಸಿದ್ದಾರೆ. ಮೌಲ್ಯಗಳ ಕುಸಿತಗಳನ್ನೂ ಜೀವನ ಪರಿವರ್ತನೆಯನ್ನೂ ದಾಖಲಿಸಿದ್ದಾರೆ. ಶ್ರೀವೈಷ್ಣವ ಹರಿದಾಸರು ಇತರ ಹರಿದಾಸರಂತೆ ಕ್ಷೇತ್ರದರ್ಶನದ ಸ್ತುತಿಗಳನ್ನೂ ಸಾಂದರ್ಭಿಕ ಸನ್ನಿವೇಶಗಳ – ಸ್ಥಳೀಯ ಘಟನಾವಳಿಗಳ ಚಿತ್ರಣಗಳನ್ನೂ ತತ್ವಪದಗಳ ಧಾಟಿಯ ಕೃತಿಗಳನ್ನೂ ರಚಿಸಿದ್ದಾರೆ.

ಒಟ್ಟಾರೆ ಈ ಕೀರ್ತನಾಕಾರರ ಮುಖ್ಯ ವೈಶಿಷ್ಟ್ಯವಿರುವುದು ಶ್ರೀವೈಷ್ಣವ ತತ್ವಗಳನ್ನು ತಮ್ಮ ಕೀರ್ತನೆಗಳಲ್ಲಿ ಅಳವಡಿಸಿರುವುದರಲ್ಲಿ “ಕನ್ನಡ ಸಾಹಿತ್ಯದಲ್ಲಿ ಶ್ರೀವೈಷ್ಣವತತ್ವ ಪ್ರತಿಪಾದಿತವಾಗಿಲ್ಲ” ಎಂಬ ವಿಮರ್ಶಕರ ಹೇಳಿಕೆಗಳಿಗೆ ಇವು ಉತ್ತರವಾಗಿ ನಿಲ್ಲುವ ಸಾಮರ್ಥ್ಯ ಹೊಂದಿವೆ. “ರಾಮಾನುಜರು ಕರ್ನಾಟಕಕ್ಕೆ ಬಂದರೂ ಶ್ರೀವೈಷ್ಣವ ಸಂಪ್ರದಾಯದ ಭಕ್ತಿಪಂಥ ಕನ್ನಡ ಭಾಷೆಯಲ್ಲಿ ಆರಂಭವಾಗದುದೊಂದು ಸೋಜಿಗದ ಸಂಗತಿ. ಒಂದು ಪಕ್ಷ ಶ್ರೀವೈಷ್ಣವಭಕ್ತಿಪಂಥ ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಕನ್ನಡವನ್ನು ಬಳಸಿಕೊಂಡಿದ್ದರೆ ಅದು ಯಾವ ಸ್ವರೂಪದಲ್ಲಿರುತ್ತಿತ್ತೋ, ವಚನ ಸಾಹಿತ್ಯಕ್ಕಿಂತ ಹೇಗೆ ಭಿನ್ನವಾಗಿರುತ್ತಿತ್ತೋ ಊಹಿಸುವುದು ಕಷ್ಟ” (ಕನಕದಾಸರ ಕೀರ್ತನೆಗಳು ಲೇಖನದಲ್ಲಿ, ಬೆಂ.ವಿ.ವಿ. ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಭಾಗ ೪ – ೨, ಪು.೪೯೦) ಎಂಬ ಹೇಳಿಕೆಗಳಿಗೆ ಈ ಕೀರ್ತನೆಗಳ ಮೂಲಕ ಉತ್ತರ ಸಿಕ್ಕಿದಂತಾಗಿದೆ. ರಾಮಾನುಜರು ಕರ್ನಾಟಕಕ್ಕೆ ಬಂದ ತಕ್ಷಣದಲ್ಲೇ ಇದು ಸಾಧ್ಯವಾಗದೇ ಹೋದರೂ ಕೇವಲ ೪೦೦ – ೫೦೦ ವರ್ಷಗಳ ಆನಂತರ ಬೇಲೂರು ವೈಕುಂಠದಾಸರು, ಕನಕದಾಸರು, ಲಕ್ಷ್ಮೀಶ ಇವರುಗಳಲ್ಲಿ ಸಮರ್ಥವಾಗಿಯೇ ಕಾಣಿಸಿಕೊಂಡು ೧೮ – ೧೯ನೇ ಶತಮಾನದಲ್ಲಿ ದಟ್ಟವಾಗಿ ರೂಪುಗೊಂಡಿವೆ. ಕೀರ್ತನ ಸಾಹಿತ್ಯದಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡು ವೈವಿಧ್ಯಮಯವಾಗಿ ಸಂಪುಷ್ಟವಾಗಿ ಬೆಳೆದಿದೆ. ಕನ್ನಡ ಕೀರ್ತನ ಪರಂಪರೆಯಲ್ಲಿಯೇ ಒಂದು ವಿಶಿಷ್ಟ ಪರಿಭಾಷೆಯನ್ನು ರೂಢಿಸಿದೆ. ಬೇರೆ ಕೀರ್ತನ ಸಾಹಿತ್ಯದಲ್ಲಿ ಕಾಣಸಿಗದ ಹರಿಏಕನಿಷ್ಠೆ, ಪ್ರಪತ್ತಿ ಅಥವಾ ಶರಣಾಗತಿಮನೋಭಾವ, ಸರ್ವಸಮರ್ಪಣಸ್ಥಿತಿ, ಆತ್ಮ – ದೈವಕಲ್ಪನೆ ಮತ್ತು ಮೋಕ್ಷಗಳಿಗೆ ಹೊಸ ವ್ಯಾಖ್ಯಾನ, ಆಳ್ವಾರರು – ಆಚಾರ್ಯಸ್ತುತಿ ಸಮಾಜದ ಎಲ್ಲ ವರ್ಗದ ಸಹಭಾಗಿತ್ವ ಮುಂತಾದ ವಿಶೇಷ ಅಂಶಗಳ ಮೂಲಕ ಕನ್ನಡ ಕೀರ್ತನ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ.

. ೧೯ನೇ ಶತಮಾನದಲ್ಲೊಂದು ಹರಿದಾಸ ಆಂದೋಲನ

೧೯ನೇ ಶತಮಾನದ ಅಂತ್ಯಭಾಗದಲ್ಲಿ ೧೮೭೩ ರಿಂದ ೧೯೦೪ ರವರೆಗೆ ಕರ್ನಾಟಕದಲ್ಲಿ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಕೋಲಾರದಿಂದ ಮೈಸೂರಿನವರೆಗೆ ಇಡೀ ದಕ್ಷಿಣ ಕರ್ನಾಟಕದಾಧ್ಯಂತ ಸದ್ದಿಲ್ಲದೆ ಇನ್ನೊಂದು ಹರಿದಾಸ ಆಂದೋಲನವೇ ನಡೆದು ಹೋಗಿರುವುದು ಕಂಡು ಬರುತ್ತದೆದ.

ತುಳಸಿರಾಮದಾಸರೇ ಇದರ ಮೂಲ ಕೇಂದ್ರ. ಇವರ ಶಿಷ್ಯಪರಂಪರೆ ಬಹಳ ದೊಡ್ಡದಿದೆ. ಶಿಷ್ಯರು ಪ್ರಶಿಷ್ಯರೆಲ್ಲ ಸೇರಿ ನೂರಕ್ಕೂ ಅಧಿಕವಾಗುವ ಸಾಧ್ಯತೆಯಿದೆ. ಚನ್ನಪಟ್ಟಣದ ಅಹೋಬಲದಾಸರ ಮತ್ತು ಮಳಿಗೆ ರಂಗಸ್ವಾಮಿದಾಸರ ಹಾಡುಗಳು ಮಾತ್ರ ದೊರಕಿದೆ. ಉಳಿದ ಶಿಷ್ಯ ದಾಸರ ಹಾಡುಗಳಲ್ಲಿ ತುಳಸಿರಾಮದಾಸರನ್ನು ಸ್ತುತಿಸಿರುವ ಹಾಡುಗಳು ಮಾತ್ರ ಲಭ್ಯವಿದ್ದು ಇತರ ರಚನೆಗಳು ಅನುಪಲಬ್ಧವಾಗಿವೆ.

ಸಾಮಾಣ್ಯ ಜನವರ್ಗದಲ್ಲಿ ತುಳಸಿರಾಮದಾಸರು ಪವಾಡ ಸದೃಶ್ಯ ಕ್ರಾಂತಿಯನ್ನುಂಟು ಮಾಡಿದ್ದಾರೆ. ಗೌಡ, ಬಣಜಿಗ, ಗಾಣಿಗ, ಉಪ್ಪಾರ, ದರ್ಜಿ, ಅಕ್ಕಸಾಲಿಗ, ದಲಿತ – ಇತ್ಯಾದಿ ಎಲ್ಲರ ಮನೆ ಮನೆಗಳಲ್ಲಿ ದಾಸರ ಫೋಟೋ ಇಟ್ಟುಕೊಂಡು ದಾಸರ ಹಾಡು ಹೇಳಿಕೊಂಡು ‘ಇವರಿಂದ ಜೀವನ ಕಂಡಿದ್ದೇವೆ. ಈ ಸ್ವಾಮಿಗಳನ್ನೇ ೨೪ ಗಂಟೆ ಧ್ಯಾನ ಮಾಡುತ್ತಿದ್ದೇವೆ’. ಎಂದು ಕೃತಕೃತ್ಯರಾಗಿರುವುದನ್ನು ದಕ್ಷಿಣ ಕರ್ನಾಟಕದಾದ್ಯಂತ ಕಾಣಬಹುದಾಗಿದೆ.

ವ್ಯಾಸರಾಯರ ಕಾಲದಲ್ಲಿನ ಕನಕದಾಸರೊಬ್ಬರನ್ನು ಬಿಟ್ಟರೆ ಬೇರೆ ಯಾವ ವೈದಿಕೇತರ ಹರಿದಾಸರೂ ಇಡೀ ಹರಿದಾಸ ಸಾಹಿತ್ಯದಲ್ಲಿ ಕಂಡು ಬರುವುದಿಲ್ಲ. ಈವರೆಗೆ ಇದು ವೈದಿಕ ಸಮಾಜದಲ್ಲೇ ನಡೆದಿರುವ ಆಂದೋಲನವಾಗಿತ್ತು. ಆದರೆ ತುಳಸಿರಾಮದಾಸರ ಕಾಲದಲ್ಲಿ ವೈದಿಕೇತರ ಸಮಾಜವನ್ನೇ ಕೇಂದ್ರವಾಗಿಟ್ಟುಕೊಂಡು ಯಶಸ್ವೀ ಆಂದೋಲನ ನಡೆದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ತುಳಸಿ ರಾಮ ದಾಸರು ದಕ್ಷಿಣ ಕರ್ನಾಟಕದಾದ್ಯಂತ ಸಂಚರಿಸಿ ಎಲ್ಲ ಪ್ರಮುಖ ಸ್ಥಳಗಳಲ್ಲೂ ಶ್ರೀಮಂತ ಭಕ್ತಾದಿಗಳನ್ನು ಸೆಳೆದು ಅವರಲ್ಲಿ ಧಾರ್ಮಿಕ ಚಿಂತನೆಯನ್ನು ಬಿತ್ತುವ ಮೂಲಕ ಸಮಾಜಸೇವಾ ಮನೋಭಾವವನ್ನು ಮೂಡಿಸಿ ಭಾರ್ಗವರಾಮ (ಬಾರಾಮಾರ್ಗ) ಭಜನ ಮಂದಿರಗಳನ್ನು ಕಟ್ಟಿಸಿ ಅನೂಚಾನವಾಗಿ ಧಾರ್ಮಿಕ – ಸಾಮಾಜಿಕ ಕಾರ್ಯಗಳು ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ. ಭಜನೆ, ರಾಮೋತ್ಸವ, ಕೃಷ್ಣೋತ್ಸವ, ರಾಮಕೋಟಿ (ಅಖಂಡ ಭಜನೆ) ಹರಿಕಥೆ ಇತ್ಯಾದಿ ಗಳನ್ನು ರೂಢಿಗೆ ತಂದಿದ್ದು ಇವು ಇಂದಿಗೂ ನಡೆದುಕೊಂಡು ಬರುತ್ತಿವೆ. ಇವರ ಶಿಷ್ಯಕೋಟಿಯಲ್ಲಿ ಗೌಡ, ಬಣಜಿಗ, ಇತ್ಯಾದಿ., ಸಮಾಜದ ಎಲ್ಲ ವರ್ಗದವರೂ ಕಂಡುಬಂದಿದ್ದು ಅನೇಕರು ಹರಿದಾಸರಾಗಿ ಹಾಡುಗಳನ್ನು ರಚಿಸಿದ್ದಾರೆ. ತುಳಸಿರಾಮ ದಾಸರ ಮೇಲೆ ೩೦ ಕ್ಕೂ ಹೆಚ್ಚು ಜನ ಶಿಷ್ಯದಾಸರು ಕೀರ್ತನೆಗಳ ರಚನೆ ಮಾಡಿದ್ದಾರೆ. ಮೈಸೂರು ಮಹಾರಾಜರಾದಿಯಾಗಿ ಪರಕಾಲ ಮಠವನ್ನೂ ಒಳಗೊಂಡು ಆಕಾಲದ ವೈದಿಕಗಣ್ಯರನೇಕರೂ ತುಳಸಿರಾಮದಾಸರನ್ನು ಮುಕ್ತಕಂಠದಿಂದ ಸ್ತುತಿಸಿದ್ದಾರೆ.

ಕನಕದಾಸರಿಗೆ ಸರಿಸಾಟಿಯಾಗುವ; ಶಿಶುನಾಳ ಶರೀಫರನ್ನು ಮೀರಿಸುವ; ತತ್ವಪದಗಳನ್ನು ರಚಿಸಿರುವ; ಜಾವಳಿಗಳಂತಹ ವಿಶಿಷ್ಟ ಕೀರ್ತನೆಗಳನ್ನು ನೀಡಿರುವ ಚನ್ನಪಟ್ಟಣದ ಅಹೋಬಲದಾಸರು ಬಣಜಿಗರು. ಮುಳಬಾಗಿಲಿನ ರಂಗಸ್ವಾಮಿ ದಾಸರು ಗಾಣಿಗರು, ಕೋಲಾರದ ಚೆಂಚುದಾಸರು ದಲಿತರು, ಶ್ರೀರಂಗಪಟ್ಟಣದ ಸಮೀಪದ ದರಿಶಕುಪ್ಪದ ಕೃಷ್ಣದಾಸರು ಗೌಡರು, ಆಲಂಗೂರಿನ ಅಪ್ಪಾಜಿದಾಸರು ರೆಡ್ಡಿಗರು, ಚಿಂತಾಮಣಿಯ ಶ್ರೀನಿವಾಸದಾಸರು ಉಪ್ಪಾರರು, ಮೈಸೂರಿನ ಬೈರೇಗೌಡ ದಾಸರು ಒಕ್ಕಲಿಗರು – ಹೀಗೆ ಸಮಾಜದ ಎಲ್ಲ ಜನವರ್ಗದಿಂದ ಬಂದಿರುವ ಹರಿ ದಾಸರು ಈ ಶಿಷ್ಯಕೋಟಿಯಲ್ಲಿದ್ದಾರೆ. ‘ಶಂಕರದಾಸರು’ ಅಂಕಿತದಿಂದ ಪ್ರಸಿದ್ಧವಾಗಿದ್ದ ಮೈಸೂರಿನ ಪ್ರಸಿದ್ಧ ಅದ್ವೈತಿಗಳಾದ ವೇದಾಂತ ಶಿವರಾಮಶಾಸ್ತ್ರಿಗಳು ಇವರಿಂದ ವೇದಾಂತ ವಿಷಯ ತಿಳಿದವರಾಗಿ ಇವರ ಶಿಷ್ಯರೆನಿಸಿಕೊಂಡು ಗುರುಸ್ಥಾನದಲ್ಲಿ ಸ್ತುತಿಸುತ್ತಾರೆ.

ಹೀಗೆ ಎಲ್ಲಿ ಜನವರ್ಗದಲ್ಲೂ ತುಳಸಿರಾಮದಾಸರು ವಿದ್ಯುತ್‌ ಸಂಚಾರವನ್ನುಂಟುಮಾಡಿ, ಜಾಗೃತಿಯನ್ನು ಮೂಡಿಸಿದ್ದಾರೆ. ಸ್ವಾತಂತ್ರ್ಯದ ಅಸ್ಥಿರತೆ, ಸಾಮಾಜಿಕ ಅರಾಜತೆ, ಕ್ಷಾಮ ಬರ, ಯುದ್ಧಬೀತಿಗಳಿಂದ ನಲುಗಿದ್ದ ಜನರಲ್ಲಿ ಮಾನಸಿಕ ಶಾಂತಿಯನ್ನು, ಜೀವನದ ನಿರ್ದಿಷ್ಟ ಗುರಿಯನ್ನು, ಸಾಮಾಜಿಕ ಬದ್ಧತೆಯನ್ನು ಮೂಡಿಸುವಲ್ಲಿ ತುಳಸಿರಾಮದಾಸರು ಅಪಾರವಾಗಿ ಶ್ರಮಿಸಿದ್ದಾರೆ. ಧನಿಕರಿಂದ ದಾನಧರ್ಮಗಳನ್ನು ಮಾಡಿಸಿದ್ದಾರೆ. ನೊಂದವರಿಗೆ – ರೋಗಿಗಳಿಗೆ ಆರೈಕೆ ಮಾಡುವ ಆರೋಗ್ಯ ಶಿಬಿರಗಳನ್ನು ನಡೆಸಿ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡಿರುವ ನಿಜವಾದ ಭವರೋಗ ವೈದ್ಯರೆನಿಸಿದ್ದಾರೆ. ಆಗಿನ ಕಾಲದ ಕ್ರಿಶ್ಚಿಯನ್‌ ಮಿಷನರಿಗಳಿಂದ ನಡೆಯುತ್ತಿದ್ದ ಮತಾಂತರದ ಹಾವಳಿಯನ್ನು ತಗ್ಗಿಸುವಲ್ಲಿ, ಹಿಂದುತ್ವವನ್ನು ಕಾಪಾಡುವಲ್ಲಿ ಜನರಲ್ಲಿ ಬದುಕಿನ ಬಗೆಗೆ ಆಸಕ್ತಿ ಮತ್ತು ನೈತಿಕ ಜಾಗೃತಿಯನ್ನುಂಟು ಮಾಡುವಲ್ಲಿ ತುಳಸಿರಾಮದಾಸರ ಆಂದೋಲನ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಇಂದಿಗೂ ಜನಮನದಲ್ಲಿ ಶಾಶ್ವತವಾಗುಳಿದಿದ್ದಾರೆ. ಇವರ ಶಿಷ್ಯ ಪರಂಪರೆ ಇಂದಿಗೂ ಮುಂದುವರೆದಿದ್ದರೂ ಆಧುನಿಕತೆಯ ಅಬ್ಬರದಲ್ಲಿ ಗುಪ್ತಗಾಮಿನಿಯಾಗಿದ್ದಾರೆ, ಮುಳಬಾಗಿಲಿನಲ್ಲಿ ಮತ್ತು ಬೆಂಗಳೂರಿನಲ್ಲಿ ಇವರ ಹೆಸರಿನ ಮಠ ಮತ್ತು ದೇವಾಲಯಗಳೇ ಇವೆ.

ಕೇವಲ ನೂರು ವರ್ಷಗಳಹಿಂದೆ ಇವರು ನಡೆಸಿದ ಈ ಸಾಮಾಜಿಕ – ಧಾರ್ಮಿಕ ಹರಿದಾಸ ಆಂದೋಲನವು ಇತಿಹಾಸದಲ್ಲಿ ಸರಿಯಾದ ರೀತಿಯಲ್ಲಿ ದಾಖಲಾಗಬೇಕಾಗಿದೆ.

. ಸಮಾರೋಪ

ಒಟ್ಟಾರೆ ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟಾದ್ವೈತವೂ ನಿಚ್ಚಳವಾಗಿ ಸೇರಿಕೊಂಡಿದ್ದು ಅದಕ್ಕೊಂದು ಪರಂಪರೆಯೇ ನಿರ್ಮಾಣವಾಗಿರುವುದೂ ಸ್ವಯಂ ಸ್ಪಷ್ಟವಾಗಿದೆ. ಕನ್ನಡ ಸಾಹಿತ್ಯ ಅಧ್ಯಯನಾಸಕ್ತರು ಈ ನಿಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯ ಚರಿತ್ರೆಯನ್ನು ಪುನರಧ್ಯಯನಕ್ಕೆ ಒಳಪಡಿಸಬೇಕಾಗಿದೆ. ೪ನೇ ಘಟ್ಟದವರೆಗೆ ಮಾತ್ರ ಗುರುತಿಸಲ್ಪಟ್ಟಿದ್ದ ಕೀರ್ತನ ಸಾಹಿತ್ಯಚರಿತ್ರೆಗೆ ಇನ್ನುಮುಂದೆ ಅದು ಐದನೇ ಘಟ್ಟವೊಂದನ್ನು ಗುರುತಿಸಿಕೊಂಡಿರುವುದನ್ನೂ ಮತ್ತು ಈ ಘಟ್ಟದಲ್ಲಿ ದ್ವೈತ – ಅದ್ವೈತ – ವಿಶಿಷ್ಟಾದ್ವೈತ ಈ ಮೂರೂ ತತ್ವಗಳ ಕೀರ್ತನೆಗಳೂ ಸರಿಸಮನಾಗಿ ಬೆಳೆದಿರುವುದನ್ನು ಹಾಗೂ ಒಂದು ಯಶಸ್ವಿ ಹರಿದಾಸ ಆಂದೋಲನವೇ ನಡೆದಿರುವುದನ್ನೂ ಈ ಮೂಲಕ ವೈದಿಕೇತರವರ್ಗದವರನ್ನೂ ಈ ಹರಿದಾಸ ಸಾಹಿತ್ಯ ಒಳಗೊಂಡಿರುವುದನ್ನೂ ನೂತನವಾಗಿ ಸೇರಿಸಿಕೊಂಡು ಅಧ್ಯಯನಮಾಡ ಬೇಕಾದ ಅವಶ್ಯಕತೆಯಿದೆ.

ಭಕ್ತರಿಗೆ ಕರಿಗಡುಬು ಊಟ ಹಾಕಿಸುತ್ತಿದ್ದರೆಂದೂ ಅಲ್ಲಿಯ ಪುಷ್ಕರಿಣಿಯಲ್ಲಿ ದೊರೆತ ಚಂದನದ ವೆಂಕಟೇಶ್ವರನನ್ನು ತಮ್ಮೂರಿಗೆ ಲಕ್ಷದೀಪೋತ್ಸವದ ಜ್ಯೋತಯೊಂದಿಗೆ ತಂದು ಆರದಂತೆ ಪೋಷಣೆ ಮಾಡುತ್ತಿದ್ದರೆಂದೂ ಇನ್ನೊಬ್ಬ ಅಣ್ಣಯ್ಯ ದಾಸರ ಬಗೆಗೂ ಡಾ|| ನೀ. ಕೃ.ರಾಮಶೇಷನ್‌ ಮತ್ತು ಇತರರು ಹೇಳುತ್ತಾರೆ.

ಹಾಗೆಯೇ ಮೇಲುಕೋಟೆಯ ಯತಿರಾಜಮಠದ ಸ್ವಾಮಿಗಳೊಬ್ಬರು ‘ದೊಡ್ಡಯ್ಯಾಚಾರ್ಯ’ರೆನ್ನುವವರು ತಿರುನಾರಾಯಣನನ್ನು ಸೇವಿಸುತ್ತ ಅವಧೂತರಂತೆ ಸಂಚರಿಸುತ್ತಿದ್ದರೆಂದೂ ಇನ್ನೊಂದು ಮಾಹಿತಿಯಿದೆ. ದೇವಾಲಯದಲ್ಲಿ ಅನೇಕ ತಮಿಳು ಪಾಶುರಗಳನ್ನೂ ಆಶುಗೀತೆಗಳನ್ನೂ ಹಾಡುತ್ತಿದ್ದರೆಂದೂ ಇವರ ಬಗ್ಗೆ ಪ್ರತೀತಿಯಿದೆ.

ಬೆಂಗಳೂರಿನಲ್ಲೂ ಮಲ್ಲೇಶ್ವರದ ರಸ್ತೆಗಳಲ್ಲಿ ಒಬ್ಬ ಅವಧೂತರು ಊರ್ಧ್ವಪುಂಡ್ರಧಾರಿಗಳಾಗಿ ತುಂಡುಪಂಚೆ ಬೈರವಾಸದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದುದನ್ನು ನಾನು ಬಾಲಕನಾಗಿದ್ದಾಗ ನೋಡಿದ್ದುಂಟೆಂದು ಸು.೮೦ ವರ್ಷದ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ನೆನಪಿಸಿಕೊಳ್ಳುತ್ತಾರೆ. ಇವರು ತಮಗೆತಾವೇ ಹಾಡುಗಳನ್ನು ಹಾಡಿಕೊಳ್ಳುತ್ತ ಅಂತರ್ಮುಖಿಗಳಾಗಿರುತ್ತಿದ್ದರೆಂದೂ ಲೌಕಿಕ ವ್ಯವಹಾರದ ಗೊಡವೆ ಅವರಿಗಿರಲಿಲ್ಲವೆಂದೂ ಶಾಸ್ತ್ರಿಗಳು ಹೇಳುತ್ತಾರೆ. ಮೇಲುಕೋಟೆಯ ಮಠದ ಶಾಖೆ ಮಲ್ಲೇಶ್ವರದಲ್ಲೇ ಇದ್ದು ಈ ಅವಧೂತರು ಮೇಲುಕೋಠೆಯ ದೊಡ್ಡಯ್ಯಾಚಾರ್ಯರೇ ಆಗಿದ್ದಿರಲೂ ಬಹುದು.

ಒಟ್ಟಾರೆ ಈ ಮೂವರು ಬಡಅಣ್ಣಯ್ಯಾಚಾರ್ಯರಲ್ಲಿ ಯಾರು ಹರಿದಾಸರಾಗಿ ಕೀರ್ತನೆಗಳನ್ನು ರಚಿಸಿದವರೆಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ. ದೊರೆತಿರುವ ನಾಲ್ಕು ಕೀರ್ತನೆಗಳಲ್ಲಿ ಒಂದು ಉರ್ದುಗೀತೆಯಾಗಿರುವುದರಿಂದ ಸವಣೂರಿನ ನವಾಬನೊಂದಿಗೆ ಸಂಬಂಧವಿದ್ದ ಬಡಣ್ಣಾಚಾರ್ಯರೇ ಹರಿದಾಸರಾಗಿರುವುದು ಬಹುಪಾಲು ಖಚಿತವೆನಿಸುತ್ತದೆ. ಸವಣೂರಿನ ನವಾಬನ ಕಾಲದ ಖಂಡೇರಾವ್‌ ನೊಂದಿಗೆ ಈ ದಾಸರ ಸಂಬಂಧ ಗುರುತಿಸಿರುವುದರಿಂದ ಈತನ ಕಾಲ ಹೈದರಾಲಿಯ ಕಾಲಕ್ಕೆ ಹೊಂದುತ್ತದೆ. ಹೈದರಾಲಿಯು ಸವಣೂರ ನವಾಬನೊಂದಿಗೆ ವೈವಾಹಿಕ ಸಂಬಂಧ ಬೆಳೆಸಲು ಈ ಖಂಡೇರಾಯನೇ ಕಾರಣನೆಂದೂ ಮುಂದೆ ಕಾರಣಾಂತರ ದಿಂದ ಇವನೊಂದಿಗೆ ಮನಸ್ತಾಪವುಂಟಾಗಿ ಹೈದರಾಲಿಯು ಇವನನ್ನು ಶ್ರೀರಂಗಪಟ್ಟಣದಲ್ಲಿ ಸೆರೆಯಲ್ಲಿಟ್ಟಿದ್ದನೆಂದೂ ಇತಿಹಾಸದಲ್ಲಿ ಇವನ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಘಟನೆ ಕ್ರಿ.ಶ. ೧೮೦೦ರ ಸರಿಸುಮಾರಿನಲ್ಲಿ ಬರುವುದರಿಂದ ಈ ಕಾಲದಲ್ಲಿದ್ದರೆಂದು ಬಡಣ್ಣಾಚಾರ್ಯರ ಕಾಲವನ್ನು ಊಹಿಸಬಹುದಾಗಿದೆ.

ಇವರ ಸ್ಥಳವನ್ನು ಕೆಲವರು ಬೆಂಗಳೂರು ಜಿಲ್ಲೆಯ ಕಲ್ಕುಂಟೆ (ಹೊಸಕೋಟೆ ತಾ||) ಎಂದು ಹೇಳುತ್ತಿದ್ದುದರಿಂದ ಪರಿಶೀಲಿಸಲಾಗಿ ಇಂಥ ಅವಧೂತರು ಅಲ್ಲಿ ಇದ್ದುದರ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ದೊರೆತಿರುವ ಕೀರ್ತನೆಗಳಲ್ಲೂ ಇವರ ಇತಿವೃತ್ತದ ಬಗ್ಗೆ ಯಾವ ಮಾಹಿತಿಯೂ ಸಿಕ್ಕುವುದಿಲ್ಲ. ಅಷ್ಟೇ ಅಲ್ಲ ಇವರ ಮತದ ಬಗೆಗೂ ಖಚಿತವಾಗಿ ಹೇಳಲಾಗುತ್ತಿಲ್ಲ. ಸಂತೆಬಿದನೂರಿನ ಆಂಜನೇಯನನ್ನು ಸ್ತುತಿಸಿರುವ ಕೀರ್ತನೆಯಲ್ಲಿ, (‘ವೀರಹನುಮ ಬಹುಪರಾಕ್ರಮ ಸುಜ್ಞಾನವಿತ್ತು ಪಾಲಿಸೆನ್ನ ಜೀಔರೋತ್ತಮ’) ‘ಮಧ್ವಗೇಹದಲ್ಲಿ ಜನಿಸಿ’ ಎಂಬ ಉಲ್ಲೇಖ ಇರುವುದರಿಂಧ ಇವರ ಮುದ್ರಿಕೆಯಲ್ಲಿ ‘ವಿಠಲ’ ಅಂಕಿತವಿರುವುದರಿಂದ ಇವರು ಮಾಧ್ವ ಸಂಪ್ರದಾಯದವರಾಗಿರುವ ಸಾಧ್ಯತೆಯೂ ಉಂಟು. ಹಾಗೆಯೇ, ತತ್ತ್ವಪದದಂತೆ ಸಾಗುವ ‘ದಾವಾದಾರದ ದುರ್ವಿಷಯದಿ ನೀ ಮುಳುಗಿ ಹರಿಯುತಿದಿ’ ಎಂಬ ಕೃತಿಯಲ್ಲಿ

ದೃಷ್ಟಿ ಒಬ್ಬನಲ್ಲಿಟ್ಟರೆ ಜಗದಲಿ ಕಷ್ಟಾಹುದೆ ನೋಡ
ಥಟ್ಟನೆ ಈ ಭವನಷ್ಟಾಂಗವ ಹಾಂಗಿಷ್ಟು ಮಾಡೊ ಮೂಢ

ಎಂದು ಹೇಳಿರುವಲ್ಲಿ ಶ್ರೀಹರಿ ಏಕನಿಷ್ಠೆಯಿರುವಂತೆ ಕಂಡುಬರುವುದರಿಂದ ಮತ್ತು ಹಲವರು ಇವರನ್ನು ಊರ್ಧ್ವಪುಂಡ್ರಧಾರಿಗಳಾಗಿದ್ದ ಶ್ರೀವೈಷ್ಣವ ಆಚಾರ್ಯರೇ ಎಂದು ಹೇಳುತ್ತಿರುವುದರಿಂದ ಸದ್ಯಕ್ಕೆ ಶ್ರೀವೈಷ್ಣವ ಸಂಪ್ರದಾಯದಲ್ಲಿ ಗುರುತಿಸಲಾಗಿದೆ. ಒಟ್ಟಾರೆ ಇವರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುವವರೆಗೆ ಏನನ್ನೂ ಹೇಳಬರುವುದಿಲ್ಲ.

() ಕೀರ್ತನೆಗಳ ಪರಿಚಯ

ಲಭ್ಯವಿರುವ ನಾಲ್ಕು ಕೀರ್ತನೆಗಳನ್ನಷ್ಟೇ ಇಟ್ಟುಕೊಂಡು ಕೀರ್ತನೆಗಳ ಬಗ್ಗೆ ಏನನ್ನೂ ಹೇಳಲು ಸಾಧ್ಯವಾಗದಾದರೂ ಸಿಕ್ಕಿರುವ ಕೃತಿಗಳೆಲ್ಲ ಶ್ರೀಹರಿಸ್ತುತಿಯಾಗಿ ಮಾತ್ರ ಕಂಡು ಬಂದಿವೆ.

ಮನದಿ ನಿನ್ನ ತಪವ ಮಾಡಿಸೊ ಮಾಧವ
ಅನುದಿನದಲದನೆ ಬಯಸುವೆ ಯಾದವ

ಕೃತಿಯಲ್ಲಿ ಶ್ರೀವೈಷ್ಣವ ತತ್ವವಾದ ಶ್ರೀಹರಿಏಕನಿಷ್ಠೆಯೇ ಕಂಡುಬರುತ್ತದೆ.

ನಿನ್ನಿಂದಲೇ ಸೃಷ್ಟಿ ನಿನ್ನಿಂದಲೇ ಸ್ಥಿತಿಯು
ನಿನ್ನಿಂದಲೇ ಪ್ರಳಯ ನಿಯಮಗಳು
ನಿನ್ನಿಂದಲೇ ಜ್ಞಾನ ನಿನ್ನಿಂದಲಜ್ಞಾನ
ನಿನ್ನಿಂದಲೇ ಬಂಧ ಮೋಕ್ಷವೆಂಬ ವಿಧ

ಎಂಬುದೂ ಆ ತತ್ತ್ವಕ್ಕೆ ಪೂರಕವಾಗಿಯೇ ಇದೆ. ಇದರಲ್ಲೇ ಬರುವ ‘ಕೃಷ್ಣ ದಯಮಾಡಿ ನೀ ಪೇಳಿದಂತೆ’.. ‘ಭವಭೀತಿ ಹರಿಸಲು ಕೃಪಾಮಯ ವಿಠಲವ್ಯಾಸ ವಿಧಿ ಒಂದೇ ವಿಭುವೇ’ ಎಂಬ ಮಾತಿನಲ್ಲಿ ಭಗವದ್ಗೀತೆಯಿಂದ ಶ್ರೀವೈಷ್ಣವ ತತ್ವ ಸ್ವೀಕರಿಸಿರುವ ‘ಶರಣಾಗತಿಯ’ ಚರಮಶ್ಲೋಕದ ಸಂದೇಶವನ್ನೇ ಹೇಳುವಂತಿದೆ.

‘ದಾವಾದಾರದ ದುರ್ವಿಷಯದಿ ನೀ’. – ಕೃತಿ ಸೊಗಸಾದ ತತ್ವಪದವಾಗಿದೆ. ಲಯಬದ್ಧವಾಗಿ ಛಂದೋ ಬದ್ಧವಾಗಿ ಮತ್ತು ಅತ್ಯಂತ ಸಹಜವಾಗಿ ರಚನೆಯಾಗಿರುವ ಈ ಕೃತಿಗಳನ್ನು ನೋಡಿದರೆ ಬಡಣ್ಣಯ್ಯಾಚಾರ್ಯರ ಇತರ ಕೃತಿಗಳೂ ಇದೇ ಧಾಟಿಯಲ್ಲಿದ್ದರಿಬಹುದೆನಿಸುತ್ತದೆ. ಅವೆಲ್ಲ ದೊರೆತಲ್ಲಿ ಕೀರ್ತನಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಯಾಗಬಲ್ಲವು ಎಂದೆನಿಸದಿರದು.

ವಿಜಯದಾಸರ ಶಿಷ್ಯಪರಂಪರೆಗೆ ಸೇರಿದ ಕಲ್ಲೂರು ಸುಬ್ಬಣ್ಣನವರದೇ ಆಗಿರುವ ಸಾಧ್ಯತೆಯೂ ಇದೆ. ಆದ್ದರಿಂದ ಸಂಗ್ರಹ ಮಾಡುವವರು ಈ ಅಂಶವನ್ನೂ ಗಮನಿಸಬೇಕಾಗುತ್ತದೆ.