ಹರಿವೆ ಅಥವಾ ಕೀರೆ ದಂಟಿನ ಜಾತಿಗೆ ಸೇರಿದ ಸೊಪ್ಪು ತರಕಾರಿಯದರೂ ಅದರಷ್ಟು ಎತ್ತರಕ್ಕೆ ಬೆಳೆಯುವುದಿಲ್ಲ. ಹರಿವೆಯ ಕಾಂಡಭಾಗ ಸಣಕಲು; ಎಲೆಗಳೂ ಸಣ್ಣವೇ, ಕಾಂಡ ಹಾಗೂ ಎಲೆಗಳ ಬಣ್ಣ ತಿಳಿ ಹಸುರು ಇಲ್ಲವೇ ಕೆಂಪು. ತಿಳಿ ಹಸುರು ಬಗೆಯ ಸೊಪ್ಪು ಹೆಚ್ಚು ರುಚಿಯಾಗಿರುತ್ತದೆ. ದೇಶದ ಎಲ್ಲಾ ಭಾಗಗಳಲ್ಲಿ ಇದರ ಬೇಸಾಯ ಕಂಡುಬರುತ್ತದೆ.

ಪೌಷ್ಟಿಕ ಗುಣಗಳು: ಹರಿವೆ ದಂಟುಸೊಪ್ಪಿನಷ್ಟೇ ಪೌಷ್ಟಿಕ. ಅದರಲ್ಲಿ ಅಧಿಕ ಪ್ರಮಾಣದ ನಾರು, ಖನಿಜ ಪದಾರ್ಥ ಹಾಗೂ ಜೀವಸತ್ವಗಳಿರುತ್ತವೆ.

ಔಷಧೀಯ ಗುಣಗಳು : ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣ ಹಾಗೂ ಇತರ ಖನಿಜ ಪದಾರ್ಥಗಳಿದ್ದು ರಕ್ತದ ಉತ್ಪಾದನೆಗೆ ನೆರವಾಗುತ್ತವೆ. ಅದೇ ರೀತಿ ಇದರಲ್ಲಿನ ನಾರಿನ ಅಂಶ ಮಲಬದ್ಧತೆಯನ್ನು ದೂರ ಮಾಡಬಲ್ಲದು. ಕ್ರಮವರಿತು ತಿನ್ನುತ್ತಿದ್ದಲ್ಲಿ ಅದರ ಸಂಪೂರ್ಣ ಲಾಭ ಸಿಗುತ್ತದೆ.

ಉಗಮ ಮತ್ತು ಹಂಚಿಕೆ : ಇದು ಬಹುಶಃ ಸ್ವದೇಶೀ ಎನಿಸಿದ್ದು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಸಸ್ಯ ವರ್ಣನೆ : ಹರಿವೆ ಅಮರಾಂಥೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ ಸಸ್ಯ. ಸಣಕಲಾದ ಕಾಂಡಗಳನ್ನು ಹೊಂದಿರುತ್ತದೆ. ಎಲೆಗಳೂ ಸಹ ಸಣ್ಣವಿರುತ್ತವೆ. ಬುಡಭಾಗದಲ್ಲಿ ಹಲವಾರು ಕವಲು ರೆಂಬೆಗಳಿದ್ದು ಸ್ವಲ್ಪ ಮಟ್ಟಿಗೆ ಪೊದರೆಯಂತೆ ಹರಡಿ ಬೆಳೆದಿರುತ್ತದೆ. ಒಟ್ಟಾಗಿ ಸೇರಿಸಿ ಕುಡುಗೋಲಿನಿಂದ ನೆಲಮಟ್ಟಕ್ಕೆ ಕೊಯ್ದು ತೆಗೆಯಬೇಕು. ಮೊದಲ ಕೊಯ್ಲಿನ ನಂತರ ಮತ್ತಷ್ಟು ಚಿಗುರು ಮೂಡಿ ಬೆಳೆಯುತ್ತವೆ. ಬೇರು ಸಮೂಹ ನೆಲೆದಲ್ಲಿ ಬಹಳಷ್ಟು ಹರಡಿರುತ್ತದೆ.

ಹವಾಗುಣ : ಇದು ಉಷ್ಣವಲಯದ ಸೊಪ್ಪಿನ ಬೆಳೆ. ವರ್ಷದ ಯಾವ ಕಾಲದಲ್ಲಾದರೂ ಬೆಳೆಯಬಹುದು. ಆದರೆ ಮಳೆಗಾಲ ಹೆಚ್ಚು ಸೂಕ್ತ.

ಭೂಗುಣ : ಈ ಬೆಳೆಗೆ ಮರಳುಗೋಡು ಇಲ್ಲವೇ ಕೆಂಪುಗೋಡು ಮಣ್ಣಿನ ಭೂಮಿ ಬಹುವಾಗಿ ಹಿಡಿಸುತ್ತದೆ. ನೀರು ನಿಲ್ಲದೆ ಬಸಿದುಹೋಗಬೇಕು. ಸ್ವಲ್ಪ ಇಳಿಜಾರಿರುವ ಭೂಮಿಯಾದರೆ ಉತ್ತಮ.

ತಳಿಗಳು : ಹರಿವೆಯಲ್ಲಿ ತಳಿಗಳಂತೇನೂ ಇಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಗೊದ್ದರಿವೆ, ಚಿಲಕರಿವೆ, ಮುಳ್ಳರಿವೆ ಮುಂತಾದ ಬಗೆಗಳನ್ನು ಕಾಣಬಹುದು. ಬೇಸಾಯದಲ್ಲಿನ ಬಗೆಯಲ್ಲಿ ಮುಳ್ಳುಗಳೇನೂ ಇರುವುದಿಲ್ಲ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಅನುಕೂಲಕ್ಕೆ ತಕ್ಕಂತೆ ಮಡಿಗಳನ್ನು ತಯಾರಿಸಿ, ತಿಪ್ಪೆ ಗೊಬ್ಬರ ಹರಡಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಸಾಮಾನ್ಯವಾಗಿ ೧ ಮೀಟರ್ ಉದ್ದ ಮತ್ತು ೧ಮೀಟರ್ ಅಗಲದ ಮಡಿಗಳನ್ನು ಮಾಡುವುದೇ ಹೆಚ್ಚು. ಕೆಲವರು ಮಡಿಗಳ ಉದ್ದ ೧.೫ ಮೀಟರ್ ಅಗಲ ಇರುವಂತೆ ತಯಾರಿಸುತ್ತಾರೆ. ಈ ರೀತಿಯಲ್ಲಿ ಸಿದ್ಧಗೊಳಿಸಿದ ಮಡಿಗಳನ್ನು ನೀರು ಕಾಲುವೆಗಳು ಉದ್ದಕ್ಕೂ ಬೇರ್ಪಡಿಸುತ್ತವೆ. ಬೀಜ ಅತೀ ಸಣ್ಣ. ಅವು ಸಮನಾಗಿ ಹಾಗೂ ತೆಳ್ಳಗೆ ಬೀಳುವಂತೆ ಮಾಡಲು ಪುಡಿ ಮಾಡಿದ ತಿಪ್ಪೆಗೊಬ್ಬರದೊಂದಿಗೆ ಬೆರೆಸಿಕೊಳ್ಳಬೇಕು. ಮಡಿಗಳಲ್ಲಿ ಅಡ್ಡಲಾಗಿ ಅಥವಾ ಉದ್ದಕ್ಕೆ ಸಣ್ಣದಾದ ಗೀರು ಸಾಲು ಕಾಲುವೆಗಳನ್ನು ಮಾಡಿ, ಅವುಗಳಲ್ಲಿ ಬೀಜ ಬಿತ್ತಬೇಕು. ಬೀಜ ಬಹುಮೇಲೆಯೇ ಬೀಳುವುದರಿಂದ ಇರುವೆಗಳು ಅವುಗಳನ್ನು ಹೊತ್ತುಕೊಂಡು ಹೋಗಿ ತಿಂದು ಹಾಳುಮಾಡಬಹುದು ಅಥವಾ ನೀರು ಹಾಯಿಸಿದಾಗ ಅವೆಲ್ಲವೂ ತಗ್ಗಿರುವ ಕಡೆ ತೇಲಿಬರಬಹುದು. ಆದ್ದರಿಂದ ಬಿತ್ತಿದ ಕೂಡಲೇ ಅವುಗಳ ಮೇಲೆ ಮರಳು, ಪುಡಿಗೊಬ್ಬರ ಮುಂತಾಗಿ ತೆಳ್ಳಗೆ ಉದುರಿಸಬೇಕು. ಪ್ರಾರಂಭದಲ್ಲಿ ಒಂದೆರಡು ಸಾರಿ ಕೈ ನೀರು ಕೊಡುವುದು ಒಳ್ಳೆಯದು. ನೀರು ಹನಿಸುವ ಡಬ್ಬಿ ಇದ್ದರೆ ಅನುಕೂಲ. ಹೆಕ್ಟೇರಿಗೆ ೨.೫-೫.೦ ಕಿ.ಗ್ರಾಂ ಬೀಜ ಬೇಕಾಗುತ್ತದೆ.

ಗೊಬ್ಬರ : ಹೆಕ್ಟೇರಿಗೆ ೧೦ ರಿಂದ ೧೫ ಟನ್ ತಿಪ್ಪೆಗೊಬ್ಬರ ಕೊಡಬೇಕು. ಅದು ಚೆನ್ನಾಗಿ ಕೊಳೆತಿರಬೇಕು. ಪ್ರತಿ ಕಟಾವಿನ ನಂತರ ಸ್ವಲ್ಪ ಪ್ರಮಾಣದ ಯೂರಿಯಾದಂತಹ ರಾಸಾಯನಿಕ ಗೊಬ್ಬರ ಕೊಡುವುದು ಲಾಭದಾಯಕ.

ನೀರಾವರಿ : ಇದಕ್ಕೆ ಹದವರಿತು ನೀರುಕೊಡಬೇಕು. ತೇವ ಜಾಸ್ತಿಯೂ ಇರಬಾರದು ಹಾಗೆಯೇ ಕಡಿಮೆಯೂ ಇರಬಾರದು. ಬೇಸಿಗೆಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಮತ್ತು ಇತರ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ಮಳೆಗಾಲದಲ್ಲಿ ಹೆಚ್ಚು ನೀರು ಬೇಕಾಗಿಲ್ಲ.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಆಗಿಂದಾಗ್ಗೆ ಕಳೆಗಳನ್ನು ಕಿತ್ತು ಹಾಕುವುದು ಅಗತ್ಯ. ಪ್ರತಿ ಸಾರಿ ಸೊಪ್ಪನ್ನು ಕೊಯ್ಲು ಮಾಡಿದ ನಂತರ ಮಣ್ಣನ್ನು ಹಗುರವಾಗಿ ಕೆದಕಿ, ತಿಪ್ಪೆಗೊಬ್ಬರ ಹರಡಿ ನೀರು ಹಾಯಿಸಿದರೆ ಹೊಸ ಚಿಗುರು ಪುಟಿದು, ದೃಢವಾಗಿ ಬೆಳೆಯುತ್ತದೆ.

ಕೊಯ್ಲು ಮತ್ತು ಇಳುವರಿ : ಬಿತ್ತನೆ ಮಾಡಿದ ೨೦-೨೫ ದಿನಗಳಲ್ಲಿ ಸೊಪ್ಪನ್ನು ಕಿತ್ತು ಬಳಸಬಹುದು ಅಥವಾ ಕುಡುಗೋಲಿನಿಂದ ನೆಲಮಟ್ಟಕ್ಕೆ ಹಿಡಿಹಿಡಿಯಾಗಿ ಸೇರಿಸಿ ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ಪ್ರಾರಂಭದಲ್ಲಿ ಎಲೆಗಳು ದೊಡ್ಡವಿರುತ್ತವೆಯಾದರೂ ದಿನಕಳೆದಂತೆ ಅವುಗಳ ಗಾತ್ರ ಕುಸಿಯುತ್ತದೆ. ಒಮ್ಮೆ ಬಿತ್ತಿದರೆ ಸುಮಾರು ಎಳೆಂಟು ತಿಂಗಳುಗಳವರೆಗೆ ಸೊಪ್ಪು ಸಿಗುತ್ತಿರುತ್ತದೆ. ಅನಂತರ ಬೇರುಗಳ ಸಮೇತ ಕಿತ್ತು ತೆಗೆದು, ಅವುಗಳನ್ನೂ ಸಹ ತರಕಾರಿಯಾಗಿ ಬಳಸಬಹುದು. ಹೆಕ್ಟೇರಿಗೆ ೨೦-೨೫ ಟನ್ನುಗಳಷ್ಟು ಸೊಪ್ಪು ಸಾಧ್ಯ. ಕಡೆಯಲ್ಲಿ ಕಿತ್ತು ತೆಗೆದ ಬೇರುಗಳು ಸುಮಾರು ೨-೩ ಟನ್ನುಗಳಷ್ಟಿರುತ್ತವೆ.

* * *