ಹರಿಶ್ಚಂದ್ರನ ಕಥೆಯನ್ನು ಎಷ್ಟು ಸಲ ಕೇಳಿದರೂ ಮತ್ತೆ ಕೇಳಬೇಕು ಎನ್ನಿಸುತ್ತದೆ. ಪ್ರಪಂಚದಲ್ಲಿ ಸತ್ಯಕ್ಕೆ ಬೆಲೆ ಇರುವವರೆಗೆ ಹರಿಶ್ಚಂದ್ರನ ಕಥೆ ಇರುತ್ತದೆ. ನಮ್ಮ ಜನರ ಬಾಳನ್ನು ತಿದ್ದುವುದು ಈ ಕಥೆ. ಧರ್ಮರಾಯನ ಕಷ್ಟ ನಿವಾರಣೆಗೆ ಸಹಾಯ ಮಾಡಿದ್ದು, ಈ ಕಥೆ, ಗಾಂಧೀಜಿಯವರಿಗೆ ಸತ್ಯದ ದಾರಿಯನ್ನು ತೋರಿಸಿ ಕೊಟ್ಟದ್ದು ಈ ಕಥೆ. ಹರಿಶ್ಚಂದ್ರನ ಕಥೆ ವೇದ ಪುರಾಣಗಳಲ್ಲಿ ಬಂದಿದೆ. ಕಾವ್ಯ ನಾಟಕಗಳಲ್ಲಿ ಬಂದಿದೆ. ಈ ಕಥೆಯ ನದಿ ವೇದದಲ್ಲಿ ಹುಟ್ಟಿ, ಪುರಾಣದಲ್ಲಿ ಹರಿದು, ಕಾವ್ಯದಲ್ಲಿ ಜಲಪಾತವಾಗಿ ಜನಜೀವನದಲ್ಲಿ ತುಂಬಿ ಹರಿಯುತ್ತಿದೆ.

ಮಗುವನ್ನು ಬಲಿ ಕೊಡಬೇಕು

ಶ್ರೀರಾಮನ ವಂಶ ಇಕ್ಷ್ವಾಕು ವಂಶ. ಈ ವಂಶದ ಒಬ್ಬ ರಾಜ ಹರಿಶ್ಚಂದ್ರ. ಇಂದ್ರನ ಭೋಗವನ್ನು ಅನುಭವಿಸುತ್ತಿದ್ದನು. ಅವನ ಕಾಂತಿಯ ಮುಂದೆ ಸೂರ್ಯನ ಕಾಂತಿ ಕಡಿಮೆ. ಅವನಲ್ಲಿ ಅಗ್ನಿಯ ತೇಜಸ್ಸು ಮನೆ ಮಾಡಿತ್ತು. ಅವನು ಸಮುದ್ರದಂತೆ ಗಂಭೀರ. ಕುಬೇರನಂತೆ ಧನವಂತೆ. ಚಂದ್ರನಂತೆ ಶಾಂತಿಯುತ. ಅವನು ದಾನಿ, ಉದಾರಿ, ಪ್ರಜಾವತ್ಸಲ, ಆರ್ತರಿಗೆ ಕಾಮಧೇನು, ದೀನದಲಿತರಿಗೆ ಕಲ್ಪವೃಕ್ಷ. ಅವನ ಅಯೋಧ್ಯಾನಗರವೇ ಸ್ವರ್ಗಭೂಮಿ.

ಅವನ ಧರ್ಮಪತ್ನಿ ಚಂದ್ರಮತಿದೇವಿ. ಅವಳು ಸೌಂದರ್ಯದಲ್ಲಿ ರತಿಗೆ ಸಮಾನಳು. ಆಕೆ ಆರುಂಧತಿಯಂತೆ ಪತಿವ್ರತೆ;  ಗಾಯತ್ರಿಯಂತೆ ಪೂಜ್ಯಳು; ಜಾಣತನದಲ್ಲಿ ಸರಸ್ವತಿಯಂತೆ.

ವೈಭವ , ಸಂಪತ್ತು,  ಭೋಗಭಾಗ್ಯಗಳಿಂದ ಕೂಡಿದ್ದರೂ ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ಈ ಒಂದು ಚಿಂತೆ ಅವರ ಎಲ್ಲ ಸುಖಶಾಂತಿಗಳನ್ನು ಮಣ್ಣುಗೂಡಿಸಿತ್ತು. ಕಡೆಗೆ ‘ಮಗು ಅಂತ ಹುಟ್ಟಿ ಅದು ಉಳಿಯದಿದ್ದರೂ ಚಿಂತೆಯಿಲ್ಲ, ಮಕ್ಕಳಿಲ್ಲದವಳು ಎಂಬ ಅಪಕೀರ್ತಿ ತಪ್ಪಿದರೆ ಸಾಕು’ ಎಂಬ ಬಯಕೆ ಚಂದ್ರಮತಿಯಲ್ಲಿ ಮೂಡಿತು. ಹರಿಶ್ಚಂದ್ರ ರಾಜನಿಗೂ ಅಷ್ಟೆ. ‘ಮಕ್ಕಳಾದರೆ ಸಾಕು’ ಎಂಬ ಆಸೆ ಉಂಟಾಯಿತು. ಗಂಡಹೆಂಡರಿಬ್ಬರೂ ವ್ರತಾದಿಗಳನ್ನು ಆಚರಿಸಿದರು; ತೀರ್ಥಯಾತ್ರೆಗಳನ್ನು ಮಾಡಿದರು. ಕಡೆಗೆ ವರುಣ ದೇವನನ್ನು ಧ್ಯಾನಿಸಿ , ಅರ್ಚಿಸಿ, ಪೂಜಿಸಿ, ಪ್ರಾರ್ಥಿಸಿ ಅವನನ್ನು ಮೆಚ್ಚಿಸಿ ಅವನಿಂದ ವರವೊಂದನ್ನು ಪಡೆದರು. ವರುಣ ಪುತ್ರವರವನ್ನು ನೀಡುವಾಗ ಒಂದು ನಿಯಮವನ್ನು ಹಾಕಿದನು: “ನಿಮಗೆ ಮಗ ಹುಟ್ಟುತ್ತಾಣೆ;  ಆದರೆ ಆ ಮಗುವನ್ನು ನನಗೇ ಬಲಿಕೊಡಬೇಕು”. ಹರಿಶ್ಚಂದ್ರ ದಂಪತಿಗಳಿಗೆ ಬೇರೆ ಮಾರ್ಗವೇ ಇರಲಿಲ್ಲ. ವರುಣನ ಮಾತಿಗೆ ಒಪ್ಪಿಕೊಳ್ಳಬೇಕಾಯಿತು.

ರೋಹಿತಾಶ್ವ

ಹರಿಶ್ಚಂದ್ರನಿಗೆ ಮಗ ಹುಟ್ಟಿದ. ರಾಜರಾಣಿಯರ ಮುಖ್ಯ ಚಿಂತೆ ಪರಿಹಾರವಾಯಿತು. ಆದರೆ ಬೇರೊಂದು ಚಿಂತೆ ಭೇತಾಳದಂತೆ ಎದುರು ಬಂದು ನಿಂತಿತು. ಮಗನ ವರ ಕೊಟ್ಟ ವರುಣ ಪ್ರತ್ಯಕ್ಷನಾದ. “ಮಗುವನ್ನು ಬಲಿ ಕೊಡು” ಎಂದ. “ಮಗು ಇನ್ನೂ ಹಸುಗೂಸು, ಅದಕ್ಕೆ ಹಲ್ಲು ಹುಟ್ಟಲಿ. ಆಮೇಲೆ ಕೊಡುತ್ತೇನೆ” ಎಂದ ಹರಿಶ್ಚಂದ್ರ. ಮಗುವಿಗೆ ಹಲ್ಲು ಹುಟ್ಟಿತು. ವರುಣ ಮತ್ತೆ ಬಂದ. “ಬಾಲಕನಿಗೆ ಚೌಲವಾಗಲಿ” ಎಂದ. ಚೌಲವೂ ಆಯಿತು. ವರುಣನಲ್ಲಿ ಇನ್ನೊಂದು ಅವಧಿ ತೆಗೆದುಕೊಂಡ. ಹೀಗೆ ಮಗನ ಬಲಿಯ ಅವಧಿಯನ್ನು ಮುಂದುವರಿಸುತ್ತಿದ್ದಾಗ ಮಗು ಬಾಲಕನಾಗಿ ಅವನಲ್ಲಿ ಸ್ವಲ್ಪ ವಿವೇಕ ಮೂಡಿತು. ‘ತನ್ನನ್ನು ತಂದೆ ವರುಣನಿಗೆ ಬಲಿ ಕೊಟ್ಟುಬಿಡುತ್ತಾನೆ’ ಎಂಬ ವಿಚಾರ ಅವನಿಗೆ ತಿಳಿಯಿತು. ರೋಹಿತಾಶ್ವ ತಂದೆಗೂ ವರುಣನಿಗೂ ಕಾಣಿಸದಂತೆ ರಾಜ್ಯವನ್ನೇ ಬಿಟ್ಟು ತಲೆಮರೆಸಿಕೊಂಡು ಹೋದ. ವರುಣನಿಗೆ ಕೋಪ ಬಂತು. ಅದರ ಪರಿಣಾಮವಾಗಿ ಹರಿಶ್ಚಂದ್ರನಿಗೆ ‘ಜಲೋದರ’ ಎಂಬ ರೋಗ ಬಂತು.

ಕಡೆಗೆ ವರುಣನೇ ಕರುಣೆಯಿಂದ ರೋಹಿತಾರ್ಶವನು ನನಗೆ ಬೇಡ, ಹರಿಶ್ಚಂದ್ರನ ರೋಗ ವಾಸಿಯಾಗಲಿ ಎಂದು ಹರಸಿದನು.

ಹರಿಶ್ಚಂದ್ರನ ಕಣ್ಣು ತೆರೆಯಿತು

ಆಗ ಹರಿಶ್ಚಂದ್ರನ ಕಣ್ಣು ತೆರೆಯಿತು. ಪುತ್ರ ವ್ಯಾಮೋಹದಿಂದ ತಾನು ವರುಣನಿಗೆ ಕೊಟ್ಟಿದ್ದ ಮಾತನ್ನು ಮುಂದೂಡಿದ್ದಕ್ಕಾಗಿ ತನಗೆ ಎಂಥ ಶಿಕ್ಷೆ ಆಯಿತು! ವರುಣನನ್ನು ಬಲಿಗಾಗಿ ಅವಧಿ ಕೇಳುವ ಬದಲು ಅವನನ್ನೆ ಪ್ರಾರ್ಥಿಸಬಹುದಾಗಿತ್ತಲ್ಲ! ಅವನೇ ಪುತ್ರ ವರವನ್ನು ಕೊಟ್ಟವನು. ಅವನು ಹಾಕಿದ ನಿಯಮವನ್ನು ಅವನೇ ಮಾರ್ಪಡಿಸಬಲ್ಲವನಾಗಿದ್ದನು. ಮಾತು ಕೊಟ್ಟು ದುರಾಸೆಯಿಂದ ಅದನ್ನು ನಡೆಸಿಕೊಡಲು ಅವಧಿ ಕೊಂಡದ್ದರಿಂದಲೇ ತನಗೆ, ತನ್ನ ಮಗನಿಗೆ ಇಂಥ ದುರವಸ್ಥೆ ಬಂದದ್ದು. ಇನ್ನು ಕೊಟ್ಟ ಮಾತನ್ನೇ ತಪ್ಪಿದರೆ, ತನ್ನ ಗತಿ ಏನಾಗುತ್ತಿತ್ತು. ತನ್ನ ವಂಶದ ಕೀರ್ತಿ ಏನಾಗುತ್ತಿತ್ತು, ತನ್ನ ಹೆಂಡತಿ ಮಕ್ಕಳ ಭವಿಷ್ಯ ಎಷ್ಟು ಕಷ್ಟವಾಗುತ್ತಿತ್ತು ಎಂದು ಯೋಚಿಸಿ, ‘ಇನ್ನು ಏನಾದರಾಗಲಿ, ಕೊಟ್ಟ ವಾಕ್ಯಕ್ಕೆ ತಪ್ಪಿ ನಡೆಯಬಾರದು. ಮನುಷ್ಯನಿಗೆ ಆಡಿದ ಮಾತು ಮುಖ್ಯ. ಅದನ್ನು ಉಳಿಸಿಕೊಳ್ಳಬೇಕು. ಸತ್ಯದ ಮೌಲ್ಯವನ್ನು ಅರಿತುಕೊಳ್ಳಬೇಕು. ನನ್ನ ನಡವಳಿಕೆಯಲ್ಲಿ ಅದನ್ನು ಆಚರಣೆಗೆ ತರಬೇಕು’ ಎಂದು ನಿಶ್ಚಯಿಸಿಕೊಂಡನು. ಅದರಂತೆ ಆಚರಿಸುತ್ತಾ ‘ಸತ್ಯರತ’ನಾಗಿ ಪ್ರಸಿದ್ಧಿ ಹೊಂದಿದನು. ಅವನ ಸತ್ಯನಿಷ್ಠೆ ದೇವಲೋಕವನ್ನೂ ಮುಟ್ಟಿತು.

ಸ್ವರ್ಗದಲ್ಲಿ ಸವಾಲು

ಒಂದು ಸಲ ದೇವೇಂದ್ರನ ಸಭೆ ಸೇರಿತ್ತು. ಅಲ್ಲಿನ ಅನೇಕ ಕಾರ್ಯಕ್ರಮಗಳ ಮಧ್ಯೆ ಭೂಲೋಕದ ವಿಚಾರ ಬಂತು. ಅಂದು ಸಭೆಯಲ್ಲಿ ‘ಭೂಲೋಕದಲ್ಲಿ ಸತ್ಯವಂತರು ಇದ್ದಾರೆಯೇ? ಎಂದು ದೇವೇಂದ್ರ ಕೇಳಿದ. ವಸಿಷ್ಠರು ಕೂಡಲೇ ಎದ್ದು “ಇದ್ದಾರೆ” ಎಂದರು. “ಯಾರು?” ಎಂದ ಇಂದ್ರ. “ಸತ್ಯವ್ರತನ ಮಗನಾದ ಹರಿಶ್ಚಂದ್ರ” ಎಂದರು ವಸಿಷ್ಠರು. ಈ ಮಾತನ್ನು ಕೇಳಿ ವಿಶ್ವಾಮಿತ್ರನಿಗೆ ಎಲ್ಲಿಲ್ಲದ ಕೋಪ ಬಂತು:

“ವರುಣನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದ ಅವನನ್ನು ಸತ್ಯವಂತನೆಂದು ಯಾರು ಹೇಳುತ್ತಾರೆ? ವರುಣನ ಶಾಪದಿಂದ ಅವನು ಜಲೋದರ ರೋಗಕ್ಕೆ ತುತ್ತಾದುದು ನಿಮಗೆ ಗೊತ್ತಿಲ್ಲವೆ?”

“ನಾನು ಹಿಂದಿನ ವಿಷಯ  ಹೇಳುತ್ತಿಲ್ಲ. ಇಂದು ಅವನು ಸತ್ಯಸಂಧನಾಗಿದ್ದಾನೆ. ಅವನ ಬಳಿಗೆ ಸುಳ್ಳು ಸುಳಿಯುವುದಿಲ್ಲ.”

“ಅವನಲ್ಲಿ ಅಸತ್ಯವನ್ನು ಕಂಡರೆ?”

ಹರಿಶ್ಚಂದ್ರನ ನಡವಳಿಕೆಯಲ್ಲಿ ಪೂರ್ಣ ನಂಬಿಕೆಯುಳ್ಳ ವಸಿಷ್ಠ ಮಹರ್ಷಿಗಳು ಹೇಳಿದರು: “ಅವನು ಸುಳ್ಳಾಡಿದರೆ, ಅವನಲ್ಲಿ ಅಸತ್ಯ ಕಂಡುಬಂದರೆ ನಾನು ಬತ್ತಲೆಯಾಗಿ ಜಟೆಬಿರಿ ಹೊದ್ದುಕೊಂಡು, ನರಕಪಾಲದಲ್ಲಿ ಸುರೆ ಕುಡಿಯುತ್ತಾ ದಕ್ಷಿಣ ದಿಕ್ಕಿನ ಕಡೆಗೆ ಹೊರಟು ಹೋಗುತ್ತೇನೆ”.

‘ನಾನು ಸಂಪಾದಿಸಿದ ಪುಣ್ಯದಲ್ಲಿ ಅರ್ಧವನ್ನು ಅವನಿಗೆ ಕೊಡುತ್ತೇನೆ.’

ಅಲ್ಲಿಯೇ ಇದ್ದ ನಾರದರು ವಿಶ್ವಾಮಿತ್ರರನ್ನು ಕುರಿತು, “ಹರಿಶ್ಚಂದ್ರನು ಸತ್ಯವನ್ನು ಬಿಡದಿದ್ದರೆ ತಾವೇನು ಮಾಡುತ್ತೀರಿ?” ಎಂದು ಕೇಳಿದರು.

“ನಾನು ಸಂಪಾದಿಸಿದ ಪುಣ್ಯದಲ್ಲಿ ಅರ್ಧವನ್ನು ಆ ರಾಜನಿಗೆ ಧಾರೆ ಎರೆದು ಅವನನ್ನು ಲೋಕವಿಖ್ಯಾತನನ್ನಾಗಿ ಮಾಡುತ್ತೇನೆ” ಎಂದು ವಿಶ್ವಾಮಿತ್ರರು ಇಂದ್ರನ ಸಭೆಯಲ್ಲಿ ಪ್ರತಿಜ್ಞೆ ಮಾಡಿದರು.

ಇವರಿಬ್ಬರ ಸ್ವಾರ್ಥ ಪ್ರತಿಷ್ಠೆಗಳು ಹರಿಶ್ಚಂದ್ರನಿಗೆ ಸಲ್ಲದ ಕೋಟಲೆಗಳನ್ನು ತಂದೊಡ್ಡಿದವು.

ಹರಿಶ್ಚಂದ್ರನ ಸತ್ಯ ಪರೀಕ್ಷೆ ಆರಂಭವಾಯಿತು.

ಮೊದಲನೆಯ ಪರೀಕ್ಷೆ

ಪ್ರೀತಿಯ ಹೆಂಡತಿ, ವಾತ್ಸಲ್ಯದ ಮಗ, ಜಾಣ ಮಂತ್ರಿ, ಒಲವಿನ ಪ್ರಜೆಗಳು ಇವರುಗಳಿಂದ ಕೂಡಿ ಸುಖವಾಗಿ ರಾಜ್ಯಭಾರ ಮಾಡಿಕೊಂಡಿದ್ದ ಹರಿಶ್ಚಂದ್ರನಿಗೆ ದೇವಲೋಕದಲ್ಲಿ ವಸಿಷ್ಠ ವಿಶ್ವಾಮಿತ್ರರು ಕೈಗೊಂಡ ಪ್ರತಿಜ್ಞೆಗಳ ಅರಿವಿರಲಿಲ್ಲ. ಭೂಲೋಕಕ್ಕೆ ತಿರುಗಿ ಬಂದ ವಿಶ್ವಾಮಿತ್ರರು ಹರಿಶ್ಚಂದ್ರನ ರಾಜ್ಯಭಾರ ಕ್ರಮವನ್ನು, ಅವನ ರೀತಿನೀತಿಗಳನ್ನು ಸ್ವಲ್ಪ ಕಾಲ ಪರಿಶೀಲಿಸಿದರು. ಅವನನ್ನು ಸುಳ್ಳಿನ ದಾರಿಗೆ ಎಳೆಯುವುದು ಹೇಗೆ ಎಂದು ಚಿಂತಿಸಿದರು. ಅವನ ಹಣವನ್ನು ಸುಲಿದು ಇಕ್ಕಟ್ಟಿಗೆ ಸಿಕ್ಕಿಸಿ, ಅವನಿಂಧ ಸುಳ್ಳು ಹೇಳಿಸುವ ಸಂದರ್ಭವನ್ನು ಏಕೆ ಸೃಷ್ಟಿಸಬಾರದು ಎಂದುಕೊಂಡರು.

ಮಹಾರಾಜನು ಸುಖಸಂಕಥಾ ವಿನೋದದಲ್ಲಿದ್ದಾಗ ವಿಶ್ವಾಮಿತ್ರರ ಕಡೆಯ ಕೆಲವರು ಋಷಿಗಳು ಬಂದು ರಾಜನಿಗೆ ‘ಬಹುಸುವರ್ಣಯಾಗ’ದ ವಿವರಗಳನ್ನು ಹೇಳಿ, ಅಂಥ ಯಾಗವನ್ನು ಆಚರಿಸಲು ಅವನೊಬ್ಬನೇ ಸಮರ್ಥ ಎಂದು ಅವನಿಗೆ ಮನದಟ್ಟು ಮಾಡಿಕೊಟ್ಟರು. ರಾಜನಿಗೂ ಮುನಿಗಳ ಬೋಧನೆ ಹಿಡಿಯಿತು. ಮುನಿವರ್ಯರ ಸಹಕಾರದಿಂದ ಬೋಧನೆ ಹಿಡಿಯಿತು. ಮುನಿವರ್ಯರ ಸಹಕಾರದಿಂದ ಯಾಗವನ್ನು ನೆರವೇರಿಸುವುದಾಗಿ ಮಾತುಕೊಟ್ಟನು. ಆ ಯಾಗದ ಒಂದು ವೈಶಿಷ್ಟ್ಯವೆಂದರೆ, ಯಾಗಾನಂತರ ನೀಡುವ ದಾನದಕ್ಷಿಣೆಗಳಿಗೆ ಮಿತಿಯಿರಬಾರದು. ಅಂದರೆ ಬೇಡುವವರು ಕೇಳಿದಷ್ಟು ದಕ್ಷಿಣೆಯನ್ನು ಇಲ್ಲವೆನ್ನದೆ ಕೊಡಬೇಕು. ಹರಿಶ್ಚಂದ್ರನಿಗೆ ಇದು ತಿಳಿದಿತ್ತು. ಯಾಗವನ್ನು ಸುಗಮವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ. ದೀನರು, ಆರ್ತರು, ಬಡವರು ಎಲ್ಲರೂ ತೃಪ್ತಿಗೊಂಡರು.

ಇದನ್ನು ಕಂಡು ವಿಶ್ವಾಮಿತ್ರರಿಗೆ ಅಸಮಾಧಾನವೇ ಆಯಿತು. ಆದರೂ ಅವರು ತಮ್ಮ ಯೋಜನೆಯನ್ನು ಬಿಡಲಿಲ್ಲ.

ವಿಶ್ವಾಮಿತ್ರರು ಅರಸನೆಡೆಗೆ ಬಂದರು. ರಾಜ ಋಷಿಗಳಿಗೆ ಅರ್ಘ್ಯಪಾದ್ಯಗಳನ್ನಿತ್ತು ನಮಸ್ಕರಿಸಿ ಉಪಚರಿಸಿದ. ಋಷಿಗಳ ಆಗಮನದ ಕಾರಣವನ್ನು ವಿಚಾರಿಸಿದ. ಮುನಿವರ್ಯರು ಯಾವ ಅಳುಕೂ ಇಲ್ಲದೆ “ಯಾಗದ ದಕ್ಷಿಣೆಗಾಗಿ ಬಂದೆ” ಎಂದರು. ಹರಿಶ್ಚಂದ್ರ “ತಮ್ಮ ಅಭೀಷ್ಟವನ್ನು ಸಲ್ಲಿಸಲು ಸಿದ್ಧನಿದ್ದೇನೆ” ಎಂದಾಗ “ದೊಡ್ಡ ಆನೆಯನ್ನು ಹತ್ತಿ ಒಬ್ಬ ಮನುಷ್ಯ ಅದರ ಮೇಲೆ ನಿಂತು ಕವಡೆಯನ್ನು ಚಿಮ್ಮಿದರೆ ಅದು ಎಷ್ಟು ಎತ್ತರ ಹಾರುತ್ತದೆಯೋ ಅದರಷ್ಟು ಎತ್ತರದ ರಾಶಿ ಹಣವನ್ನು ನೀಡು” ಎಂದರು. “ಕೊಟ್ಟಿದ್ದೇನೆ, ತೆಗೆದುಕೊಂಡು ಅನುಗ್ರಹಿಸಬೇಕು” ಎಂದು ಅರಸನು ಹಿಂಜರಿಯದೆ ಹೇಳಲು ವಿಶ್ವಾಮಿತ್ರರಿಗೆ ದಿಕ್ಕು ತೋಚದಂತಾಯಿತು. ರಾಜನನ್ನು ಧೃತಿಗೆಡಿಸಿ ಸುಳ್ಳಿಗನನ್ನಾಗಿ ಮಾಡುವ ಅವರ ಯೋಚನೆಗೆ ಭಂಗ ಬಂದಿತು. ಆಗಲಿ, ಸಂತೋಷ. ಬೇಕಾದಾಗ ತರಿಸಿಕೊಳ್ಳುತ್ತೇನೆ” ಎಂದು ಹೇಳಿ, ಬಂದ ದಾರಿಗೆ ಸುಂಕವಿಲ್ಲವೆಂದು ಗಣಿಸಿ ಆಶ್ರಮಕ್ಕೆ ಸಪ್ಪೆ ಮೋರೆ ಹಾಕಿಕೊಂಡು ಹಿಂದಿರುಗಿದರು.

ಮೊದಲ ಪರೀಕ್ಷೆಯಲ್ಲಿ ಹರಿಶ್ಚಂದ್ರ ತೇರ್ಗಡೆಯಾದ.

ವಿಶ್ವಾಮಿತ್ರರಿಗೆ ಯೋಚನೆಗಿಟ್ಟುಕೊಂಡಿತು. ‘ದೇವೇಂದ್ರನ ಸಭೆಯಲ್ಲಿ ಮಾಡಿದ ಪ್ರತಿಜ್ಞೆ ನೆರವೇರಿಸುವುದು ಹೇಗೆ? ಎಲ್ಲರೆದುರಿಗೆ ಅಪಮಾನವಾಗುವ ಸನ್ನಿವೇಶ ಒದಗಿಬಂತಲ್ಲಾ! ಏನು ಮಾಡುವುದು? ಹರಿಶ್ಚಂದ್ರನ ಕೀರ್ತಿ ಮೂರು ಲೋಕವನ್ನೂ ಆವರಿಸಿಬಿಟ್ಟಿದೆಯಲ್ಲ! ಮುಂದಿನ ದಾರಿ ತನಗಾವುದು?” ಎಂದು ಯೋಚಿಸಿ ಕರ್ಪೂರವನ್ನು ಹಚ್ಚಿ ಅದರ ಜ್ವಾಲೆಯ ಕಾವಿನಿಂದ ಮೈ ಕಾಯಿಸಿಕೊಳ್ಳುವಂತೆ ಮತ್ತೊಂದು ಉಪಾಯವನ್ನು ಚಿಂತಿಸಿದರು. ಕೆಲವರಿಗೆ ಹಣದ ಬಲವಿರುತ್ತದೆ. ಮತ್ತೆ ಹಲವರಿಗೆ ಆತ್ಮಶಕ್ತಿಯ ಬಲವಿರುತ್ತದೆ. ಇನ್ನು ಕೆಲವರಿಗೆ ಉತ್ತಮರ ಪ್ರಭಾವದ ಬಲ ಉಂಟು. ಮತ್ತೆ ಕೆಲವರಿಗೆ ಅಧಿಕಾರಬಲ, ಸ್ಥಾನಬಲ ಇರುವುದೂ ಉಂಟು. ಹಾಗೆ ವಿಶ್ವಾಮಿತ್ರರು ‘ಹರಿಶ್ಚಂದ್ರನನ್ನು ನನ್ನ ಆಶ್ರಮಕ್ಕೆ ಬಲವಂತದಿಂದ ಎಳೆದು ತಂದು ನನ್ನ ಸ್ಥಾನಬಲದ ಪರೀಕ್ಷೆ ಮಾಡುತ್ತೇನೆ, ಅವನ ಸತ್ಯಗಿತ್ಯದ ಶಕ್ತಿ ನೋಡುತ್ತೇನೆ’ ಎಂದುಕೊಂಡರು. ಹಾಗೆ ಬರಮಾಡಿಕೊಳ್ಳುವುದೇ ಒಂದು ಸಾಹಸವೆಂಬಂತೆ ತಮ್ಮ ಸೃಷ್ಟಿ ಶಕ್ತಿಯನ್ನು ಉಪಯೋಗಿಸಿ ಅನೇಕ ದುಷ್ಟಪ್ರಾಣಿಗಳನ್ನು ಸೃಷ್ಟಿಸಿ, ಹರಿಶ್ಚಂದ್ರನ ರಾಜ್ಯವನ್ನೂ, ಪ್ರಜೆಗಳನ್ನೂ ಗೋಳಿಡುವಂತೆ ಅವುಗಳಿಗೆ ಪ್ರೇರಣೆಯಿತ್ತರು.

ವಿಶ್ವಾಮಿತ್ರರ ಆಶ್ರಮಕ್ಕೆ

ವಿಶ್ವಾಮಿತ್ರರ ಕಾಟ ಮತ್ತೊಂದು ಭಯಂಕರ ರೂಪವನ್ನು ತಾಳಿತು. ರಾಜ್ಯದ ಪ್ರಜೆಗಳಿಗೆ ಪೀಡೆ ಆರಂಭವಾಯಿತು, ವಿಶ್ವಾಮಿತ್ರ – ಸೃಷ್ಟಿಯ ಪ್ರಾಣಿಗಳಿಂದ ಕ್ರಿಮಿಕೀಟಗಳು ಬಿತ್ತಿದ ಬೀಜಗಳನ್ನೇ ನುಂಗಿದವು. ಜಿಂಕೆಗಳು ದವಸದ ಕುಡಿಗಳನ್ನೇ ಮೆದ್ದವು. ತೆನೆಗಳನ್ನು ನವಿಲು ಮೊದಲಾದ ಪಕ್ಷಿಗಳೇ ಭಕ್ಷಿಸಿದವು. ಜನಕ್ಕೆ ಆಹಾರವೇ ಉಳಿಯಲಿಲ್ಲ. ಅವರು ಭಯಗೊಂಡರು. ರಾಜನಲ್ಲಿ ಮೊರೆಯಿಟ್ಟರು: “ಮಹಾಪ್ರಭು, ಇದುವರೆಗೆ ನಮಗೆ ಎಂತಹ ಕಾಟವೂ ಇರಲಿಲ್ಲ. ಶತ್ರುಗಳ ಭಯವಿರಲಿಲ್ಲ; ಸಾಲದ ಬಾಧೆಯಿರಲಿಲ್ಲ; ಹಸಿವು ನೀರಡಿಕೆಗಳ ಉಪದ್ರವವಿರಲಿಲ್ಲ. ಆದರೆ ಈಗ ಬಂದಿರುವ ಭೀತಿ ಅತಿಶಯವಾದುದು. ಬೆಳಸಿಲ್ಲ, ಬೀಜವಿಲ್ಲ, ನೀರಿಲ್ಲ. ಪಕ್ಷಿಗಳ ಮತ್ತು ಮೃಗಗಳ ಕಾಟ ತಡೆಯಲಾರೆವು” ಎಂದು ಮೊರೆಯಿಟ್ಟರು. ರಾಜ ತನ್ನ ಪ್ರಜೆಗಳಿಗೆ ಭರವಸೆ ಕೊಟ್ಟು ಪ್ರಾಣಿಸಂಹಾರದ ಬೇಟೆಯಾಡಿದನು. ದುಷ್ಟಮೃಗಗಳನ್ನು ಕೊಂದನು. ಹೀಗೆ ಬೇಟೆ ಆಡುತ್ತಾ ಆಡುತ್ತಾ ಮುಂದುವರಿದಾಗ ಅವನಿಗೆ ಒಂದು ಆಶ್ಚರ್ಯವೇ ಎದುರುಗೊಂಡಿತು. ಎಲ್ಲ ಪ್ರಾಣಿಗಳೂ ನಿರ್ಭಯವಾಗಿ ಓಡಾಡುತ್ತಿರುವ ಒಂದು ಪ್ರದೇಶ ಕಾಣಿಸಿತು. ಅಲ್ಲಿ ಹುಲಿ ಹಸು ಜೊತೆಜೊತೆಯಲ್ಲಿವೆ. ಸಿಂಹ ಆನೆ ಆಟವಾಡುತ್ತಿವೆ. ನವಿಲು ಹಾವು ಸರಸದಲ್ಲಿವೆ. ‘ಜಾತಿದ್ವೇಷವನ್ನು ಬಿಟ್ಟು ಹೀಗೆ ಹೊಂದಾಣಿಕೆ ಇರಲು ಏನು ಕಾರಣ?’ ಎಂದು ಹರಿಶ್ಚಂದ್ರ ಯೋಚಿಸಿದನು. ಸ್ವಲ್ಪ ದೂರ ನಡೆದು ಬಂದಾಗ ಋಷಿಕುಮಾರರು ಅಭ್ಯಾಸದಲ್ಲಿ ತೊಡಗಿರುವುದು ಕಾಣಿಸಿತು. ಇದು ಯಾವುದೋ ಋಷಿಗಳ ಆಶ್ರಮವಿರಬೇಕೆಂದುಕೊಂಡು ವಿಚಾರಿಸಲಾಗಿ, ಅದು ತನ್ನ ಕುಲಗುರು ವಸಿಷ್ಠರ ಆಶ್ರಮವೆಂದೇ ತಿಳಿಯಿತು. ಅಲ್ಲಿನ ವಾತಾವರಣ ಅವನ ಬೇಟೆಯ ಆಯಾಸಕ್ಕೆ ತಂಪನ್ನೀಯಿತು. ಕೂಡಲೇ ಗುರುಗಳನ್ನು ಕಂಡು ಭಕ್ತಿಯಿಂದ ನಮಿಸಿ ಅವರ ಆಶೀರ್ವಾದವನ್ನು ಪಡೆದನು. ತಾನು ಬಂದ ಉದ್ದೇಶವನ್ನು ತಿಳಿಸಿ ಮುಂದಿನ ಕರ್ತವ್ಯದ ಕಡೆಗೆ ನಡೆದನು.

ಮಧ್ಯಾಹ್ನದ ಬೇಟೆಯ ನಂತರ ಅವನು ಪ್ರವೇಶಿಸಿದ್ದು ಇನ್ನೊಂದು ಆರ್ಶರಮ. ಅಲ್ಲಿನ ವಾತಾವರಣ ಮೊದಲ ಆಶ್ರಮಕ್ಕೆ ವಿರುದ್ಧವಾಗಿ ಕಂಡಿತು. ಆಯಾಸ ಪರಿಹಾರವಾಗಲಿಲ್ಲ. ಹೆಚ್ಚಾಯಿತು. ಮನಸ್ಸಿಗೆ ಶಾಂತಿ ದೊರಕಲಿಲ್ಲ, ಬದಲು ಕಳವಳ ಅಧಿಕವಾಯಿತು. ಅದು ವಿಶ್ವಾಮಿತ್ರರ ಆಶ್ರಮವೆಂದು ತಿಳಿಯಿತು. ಅಂದ ಮೇಲೆ ಇಂಥ ಆಶ್ರಮ ವಿರುದ್ಧ ಪರಿಣಾಮ ಏಕಾಯಿತೆಮಬುದು ಅವನಿಗೆ ಅರ್ಥವಾಗಲಿಲ್ಲ. ಸ್ವಲ್ಪ ವಿಶ್ರಾಂತಿ ಪಡೆದು ಋಷಿವರ್ಯರನ್ನು ಕಾಣುವ ಎಂದು ನಿಶ್ಚಯಿಸಿ ಹೆಂಡತಿಯ ತೊಡೆಯನ್ನು ತಲೆದಿಂಬಾಗಿ ಮಾಡಿ ಮಲಗಿದನು.

ಮಾಯಾಕನ್ಯೆಯರು

ವಿಶ್ವಾಮಿತ್ರರಿಗೆ ಹರಿಶ್ಚಂದ್ರ ತಮ್ಮ ಆಶ್ರಮಕ್ಕೆ ಬಂದದ್ದು ತಿಳಿಯಿತು. ತಾವು ಹಾಕಿದ ಗಾಳ ಅವನನ್ನು ಎಳೆದು ತಂದಿತ್ತು. ಈಗ ತಮ್ಮ ಸ್ಥಳಬಲವನ್ನು ತೋರಿಸಿ ಅವನಿಂದ ಸುಳ್ಳು ಹೇಳಿಸಲೇಬೇಕು ಎಂದು ನಿರ್ಧರಿಸಿದರು. ವಸಿಷ್ಠರ ಮೇಲಿನ ಸ್ಪರ್ಧೆಯ ಕೋಪ ಭುಗಿಲ್ಲೆಂದು ಹೊತ್ತಿತು. ತಮ್ಮ ಮೊದಲ ಯತ್ನ ವಿಫಲವಾಗಿದ್ದುದು ಬೇರೆ ನೆನಪಿಗೆ ಬಂತು. ಇಂದ್ರನ ಸಭೆಯಲ್ಲಿ ಮಾಡಿದ ಪ್ರತಿಜ್ಞೆ, ಅದರಲ್ಲಿ ಸೋತರೆ ತಮಗಾಗುವ ಅಪಮಾನ ಮನಸ್ಸಿನಲ್ಲಿ ಸುಳಿದು ಹೂಂಕರಿಸಿದಾಗ ಇಬ್ಬರು ತರುಣಿಯರು ಅವರಿಂದ ಸೃಷ್ಟಿಯಾದರು. ಮುನಿಗೆ ಹೊಲೆ, ಕೊಳಕು ಯಾವುದು ಎಂದರೆ ಅತಿ ಕೋಪ, ಬದ್ಧ ದ್ವೇಷ, ಅಕಾರಣ ವೈರ. ಈ ಭಾವನೆಗಳಿಂದ ಹುಟ್ಟಿದವರು ಅವರು. ಆದ್ದರಿಂದ ಅವರು ಹೊಲತಿಯರಾದರು. ಅವರು ತಮ್ಮ ಒಡೆಯನ ಅಪ್ಪಣೆಯಂತೆ ಹರಿಶ್ಚಂದ್ರನನ್ನು ಮರುಳು ಮಾಡಲು ಹೊರಟು ಬಂದರು.

ಆಯಾಸಗೊಂಡ ಹರಿಶ್ಚಂದ್ರನಿಗೆ ಕೆಟ್ಟ ಕನಸೊಂದು ಬೇರೆ ಬಿದ್ದಿತು. ಇದೇನೋ ಅಶುಭ ಸೂಚನೆ ಎಂದು ಧಾವಿಸಿ ಹೆಂಡತಿಗೆ ಕನಸನ್ನು ವಿವರಿಸಿ ಹೇಳಿದನು. ಆಕೆ ಗಂಡನಿಗೆ ಹೇಳಿದಳು: “ನೀವು ಮನಸ್ಸಿಗೆ ಚಿಂತೆ ಮಾಡಿಕೊಳ್ಳಬೇಡಿ, ಏನೇ ಆದರೂ ಸತ್ಯವನ್ನು ಬಿಡಬೇಡಿ”. ಮಂತ್ರಿಯೂ ಮಗನೂ ರಾಜನನ್ನು ಸಮಾಧಾನಪಡಿಸಿದರು. ಆಗ ವಿಶ್ವಾಮಿತ್ರರ ಕನ್ಯೆಯರಾದ ತರುಣಿಯರು ಬಂದರು. ತಮ್ಮ ಗಾನ ನೃತ್ಯಗಳಿಂದ ಅವನ ಮನಸ್ಸಿಗೆ ಸಂತೋಷವನ್ನೂ ಸುಖವನ್ನೂ ಒದಗಿಸಿದರು.

ಹರಿಶ್ಚಂದ್ರನಿಗೆ ಬಹಳ ಸಂತೋಷವಾಯಿತು. ತಾನು ಧರಿಸಿದ್ದ ಅಮೂಲ್ಯವಾದ ಮುತ್ತಿನ ಹಾರವನ್ನು ಬಹುಮಾನವನ್ನಾಗಿ ಕೊಟ್ಟ. ಅವರಿಗೆ ಬಹುಮಾನ ಬೇಕಿರಲಿಲ್ಲ. ಅವರು ಬಂದದ್ದು ಕೀಟಲೆಗೆ, ವಿಶ್ವಾಮಿತ್ರ ಮುನಿಯ ಕಾರಣದಿಂದ. ತಮ್ಮ ಮಾತಿನ ಜಾಣ್ಮೆಯಿಮದ ರಾಜನನ್ನು ಮಾತಿಗೆ ಸಿಕ್ಕಿಹಾಕಿಸಿಕೊಳ್ಳಲು ಯತ್ನಿಸಿದರು. ಕಡೆಗೆ ಅವರು ತಮ್ಮನ್ನು ಮದುವೆಯಾಗಬೇಕೆಂದು ಕೇಳಿದರು. ಶಾಂತಗೊಂಡ ರಾಜನ ಮನಸ್ಸು ಉರಿದೆದ್ದಿತು. ಹೊಲತಿಯರು ಸೂರ್ಯವಂಶದ ರಾಜನನ್ನು ಮದುವೆ ಆಗುತ್ತೇವೆ ಎನ್ನುವ ಧಾರ್ಷ್ಟ್ಯ ಅವರಲ್ಲಿ ಹೇಗೆ ಮೂಡಿತ್ತು? ಅದಕ್ಕೆ ‘ಕಾಲಕೆಟ್ಟಿದ್ದರ ಕಾರಣವಿರಬೇಕು, ಇಲ್ಲವೇ ಸ್ಥಳದ ಮಹಾತ್ಮೆ ಇರಬೇಕು. ಇದಕ್ಕೆ ಶಿಕ್ಷೆಯೇ ಫಲ’ ಎಂದು ಚಮ್ಮಟಿಗೆಯಿಂದ ಅವರನ್ನು ಹೊಡೆದು ಓಡಿಸಿದನು. ಏಟು ತಿಂದ ಅವರು ವಿಶ್ವಾಮಿತ್ರರ ಬಳಿಗೆ ಬಂದು ಮೊರೆಯಿಟ್ಟರು.

ನಿನ್ನ ರಾಜ್ಯವನ್ನೆ ಕೊಡು

ಋಷಿಗೆ ಬೇಕಾದದ್ದು ಅಷ್ಟೆ. ಕೋಪದಿಂದ ಹೂಂಕರಿಸುತ್ತ, ತಾವೇ ಹರಿಶ್ಚಂದ್ರನ ಬಳಿಗೆ ಬಂದರು. ಹೀಗೆ ಆಕಸ್ಮಿಕವಾಗಿ ಬಂದ ವಿಶ್ವಾಮಿತ್ರನ್ನು ಗುರುತಿಸುವುದೇ ರಾಜನಿಗೆ ಕಷ್ಟವಾಯಿತು. ಅವರು ಧರಿಸಿದ್ದು ಜಟೆಯೋ ಬೆಂಕಿಯೋ! ಹಣೆಗೆ ಹಚ್ಚಿದ್ದುದು ವಿಭೂತಿಯೋ ಸಿಡಿಲೋ, ಹೊದೆದದ್ದು ಕೃಷ್ಣಾಜಿನವೋ ಕಾಡುಗಿಚ್ಚೋ! ಈಶ್ವರನ ಹಣೆಗಣ್ಣ ಬೆಂಕಿಗೆ ಋಷಿರೂಪ ಬಂದಿದೆಯೋ ಏನೋ, ರಾಜನಿಗೆ ಗೊತ್ತಾಗಲಿಲ್ಲ. ಮುಕ್ತಿಯೇ ಜಟೆಯಾಗಿ, ಪ್ರಾಣಿದಯೆ ಕೃಷ್ಣಾಜಿನವಾಗಿ, ಪುಣ್ಯವೇ ವಿಭೂತಿಯಾಗಿ, ಶ್ರುತಿಗಳು ಮಾತುಗಳಾಗಿ, ನೀತಿ ಶಾಂತಿಗಳು ರೂಪು ತಾಳಿದಂತೆ ಇದ್ದ ವಸಿಷ್ಠರ ಮೂರ್ತಿಗೂ ಎದುರಿಗೆ ನಿಂತ ಈ ಬೆಂಕಿಯ ಮೂರ್ತಿಗೂ ಎಲ್ಲಿಗೆಲ್ಲಿಗೆ ಹೋಲಿಕೆ? ಹರಿಶ್ಚಂದ್ರನಿಗೆ ಕ್ಷಣಕಾಲ ಏನೂ ತೋಚದಾಯಿತು. ಆದರೂ ಸತ್ಯಬಲದಿಂದ, ಕುಪಿತರಾದ ಋಷಿಶ್ರೇಷ್ಠರನ್ನು ಗೌರವಿಸಿ ಅವರನ್ನು ಕುಡಲೇ ಕಾಣದಿದ್ದಕ್ಕೆ ಕ್ಷಮೆ ಯಾಚಿಸಿ ಅವರ ಅಪ್ಪಣೆ ಬೇಡಿದನು. ಋಷಿವರ್ಯರು ಈಗ ಋಷಿಧರ್ಮವನ್ನು ಮರೆತಿದ್ದರು. ಅವರ ಕೋಪ ಕಡಿಮೆ ಆಗುವುದರ ಬದಲು ಹೆಚ್ಚಿತು.

“ಹರಿಶ್ಚಂದ್ರ, ಇದೇನು ನಿನ್ನ ಕೆಲಸ? ನನ್ನ ಪ್ರಾಣಿಗಳನ್ನು ಕೊಂದೆ. ನನ್ನ ಆಶ್ರಮವನ್ನು ಹಾಳುಮಾಡಿದೆ, ನನ್ನ ಮಕ್ಕಳನ್ನು ನಿಷ್ಕರುಣೇಯಿಂದ ಸದೆಬಡಿದೆ” ಎಂದರು.

ರಾಜನಿಗೆ ಮುನಿಗಳ ಮಾತು ಕೇಳಿ ಆಶ್ಚರ್ಯವಾಯಿತು. “ಮುನಿವರ್ಯ, ನಾನು ನಿರಪರಾಧಿ. ಗುರುಗಳನ್ನು ವಂದಿಸುವುದಕ್ಕೆ ಬರುವುದೇ ತಪ್ಪೇ?” ಎಂದು ಕೇಳಿದ. ಋಷಿಗಳು “ನೀನು ಯಾವ ಕನ್ಯೆಯರ ನೃತ್ಯಾದಿಗೀತೆಗಳಿಂದ ಸಂತೋಷಪಟ್ಟೆಯೋ, ಯಾವ ಕನ್ಯೆಯರನ್ನು ಹೊಡೆದೆಯೋ, ಅವರನ್ನು ಮದುವೆಯಾಗು. ನಿನ್ನ ಅಪರಾಧವನ್ನು ಕ್ಷಮಿಸುತ್ತೇನೆ” ಎಂದರು. 

‘ನಿನ್ನ ತಾಳಿಯನ್ನು ಮಾರಿ ಹಣ ತೆಗೆದುಕೊಂಡು ಬಾ’

 ರಾಜ ಒಪ್ಪಲಿಲ್ಲ. ವಿಶ್ವಾಮಿತ್ರರ ಅಸಮಾಧಾನ ಮತ್ತಷ್ಟು ಹೆಚ್ಚಿತು. ಕಡೆಗೆ ದೊರೆ “ನನ್ನ ಸಮಸ್ತ ರಾಜ್ಯವನ್ನಾದರೂ ಕೊಡುವೆನೇ ಹೊರತು, ತಾವು ಹೇಳಿದಂತೆ ಆ ಯುವತಿಯರನ್ನು ಮದುವೆ ಆಗುವುದಿಲ್ಲ” ಎಂದು ಖಂಡಿತವಾಗಿ ಹೇಳಿದನು.

ಆಗ ವಿಶ್ವಾಮಿತ್ರರೂ, “ಸರಿ ಹಾಗಾದರೆ, ನಿನ್ನ ಸರ್ವ ರಾಜ್ಯವನ್ನೇ ನೀಡು” ಎಂದು ಕೇಳಿದನು.

ಹರಿಶ್ಚಂದ್ರ ಯೋಚನೆಯನ್ನೂ ಮಾಡಲಿಲ್ಲ. ತನ್ನ ರಾಜ್ಯವನ್ನು ವಿಶ್ವಾಮಿತ್ರರಿಗೆ ಧಾರೆ ಎರೆದುಕೊಟ್ಟನು.

ಅಷ್ಟಕ್ಕೆ ಋಷಿ ಒಪ್ಪಲಿಲ್ಲ. “ರಾಜಧಾನಿಗೆ ಹೋಗಿ ಸಮಸ್ತ ಪ್ರಜೆಗಳ ಎದುರಿಗೆ ನಿನ್ನ ರಾಜ್ಯವನ್ನೆಲ್ಲ ನನಗೆ ಒಪ್ಪಿಸು” ಎಂದರು.

ರಾಜನು ಅದಕ್ಕೂ ಒಪ್ಪಿಕೊಂಡು ಋಷಿವರೇಣ್ಯರನ್ನು ರಥದಲ್ಲಿ ಕುಳ್ಳಿರಿಸಿದ. ಅವರು ಮುಂದೆ, ತಾನು ಹಿಂದೆ ನಡೆಯುತ್ತಾ ಅರಮನೆಗೆ ಮೆರವಣಿಗೆಯಿಂದ ಕರೆತಂದ. ಮಂತ್ರಿಮುಖ್ಯರ ಸಮ್ಮುಖದಲ್ಲಿ ಚತುರಂಗ ಸೇನೆ, ಸಕಲ ಭಂಡಾರ, ರಾಜಧಾನಿ, ರಾಜಮುದ್ರೆ, ಹೀಗೆ ಒಂದೊಂದನ್ನಾಗಿ ವಿಶ್ವಾಮಿತ್ರರಿಗೆ ಒಪ್ಪಿಸಿದ.

ಇಷ್ಟಾದರೂ ವಿಶ್ವಾಮಿತ್ರರು ತೃಪ್ತಿಪಟ್ಟರೆ, ಸುಮ್ಮನಾದರೆ? ಇಲ್ಲ. “ನಿನ್ನ ಆಭರಣವನ್ನು ತೆಗೆದಿಡು, ರಾಜವಸ್ತ್ರವನ್ನು ಕಳಚಿಡು, ಹೆಂಡತಿ ಮಕ್ಕಳ ಒಡವೆಗಳನ್ನೆಲ್ಲ ಎಣಿಸಿಡು” ಎಂದರು. ಆಮೇಲೆ ನಾರುವಸ್ತ್ರಗಳನ್ನು ನೀಡಿ, “ಇವನ್ನು ಧರಿಸಿಕೋ” ಎಂದರು.

ಹರಿಶ್ಚಂದ್ರನು ಹೆಂಡತಿ ಮಗನಿಗೆ ನಾರುವಸ್ತ್ರಗಳನ್ನು ಉಡಿಸಿ ತಾನೂ ತೊಟ್ಟು “ಹೋಗಬಹುದೆ, ಗುರುಗಳೇ?” ಎಂದು ನಮಸ್ಕರಿಸಿದ. ವಿಶ್ವಾಮಿತ್ರರು ‘ಹೂಂ’ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಹರಿಶ್ಚಂದ್ರನಿಗೆ ವಿಶ್ವಾಮಿತ್ರರ ಚರ್ಯೆಯೇ ಅರ್ಥವಾಗಲಿಲ್ಲ. ಅರಮನೆ ಬಿಟ್ಟು ಬೀದಿಗೆ ಬಂದ. ಪುರಜನರು ಮುತ್ತಿಕೊಂಡರು. ರಾಜನ ಅವಸ್ಥೆಯನ್ನು ಕಂಡು ಬೆರಗಾದರು. ರಾಜ ಅವರಿಗೆಲ್ಲ ಸಮಾಧಾನ ಮಾಡಿ “ಇನ್ನು ಮುಂದೆ ವಿಶ್ವಾಮಿತ್ರರೆ ನಿಮ್ಮ ಚಕ್ರವರ್ತಿ” ಎಂದು ನಂಬಿಸಿಹೊರಟ.

ನನ್ನ ದಕ್ಷಿಣೆ ಎಲ್ಲಿ?’

ವಿಶ್ವಾಮಿತ್ರರು ಹರಿಶ್ಚಂದ್ರನನ್ನು ಮತ್ತೆ ಕರೆಸಿದರು.

“ಹರಿಶ್ಚಂದ್ರ, ಇನ್ನೊಂದು ವಿಚಾರವಿದೆ. ನೀನು ಸುವರ್ಣಯಾಗ ಮಾಡಿದಾಗ ದಕ್ಷಿಣೆ ಕೊಟ್ಟಿದ್ದೆಯಲ್ಲ, ಅದನ್ನು ನಿನ್ನ ಹತ್ತಿರವೆ ಬಿಟ್ಟಿದ್ದೆ ಅಲ್ಲವೆ? ಅದನ್ನು ಕೊಡು” ಎಂದರು.

ಹರಿಶ್ಚಂದ್ರನಿಗೆ ದಿಗ್ಭ್ರಮೆಯಾಯಿತು. ಎತ್ತರವಾದ ಆನೆಯ ಮೇಲೆ ಮನುಷ್ಯ ನಿಂತು ಕವಡೆ ಚಿಮ್ಮಿದರೆ ಎಷ್ಟು ಎತ್ತರ ಹೋಗುವುದೋ ಅಷ್ಟು ಎತ್ತರದ ರಾಶಿಯ ಹಣ! ಆ ಹಣ ಇಟ್ಟ ಭಂಡಾರವನ್ನೇ ಅರ್ಪಿಸಿದ ಮೇಲೆ ಇದು ಏನು ಮೇಲು ಕೊಸರು ಎಂದುಕೊಂಡು ‘ಹೇರನ್ನೇ ಒಪ್ಪಿಸಿದ ಮೇಲೆ ಸುಂಕ ಎಲ್ಲಿ?’ ಎಂದ. ವಿಶ್ವಾಮಿತ್ರರು ರಾಜನ ಪಾದಕ್ಕೆ ಒಪ್ಪಿಕೊಳ್ಳಲಿಲ್ಲ. ಕಡೆಗೆ ರಾಜ ನಲವತ್ತೆಂಟು ದಿನಗಳ ಅವಧಿ ಪಡೆದು ಊರನ್ನು ಬಿಟ್ಟು ಹೊರಟ. ‘ಪುರದ ಪುಣ್ಯ ಹೊರಟುಹೋಯಿತು’ ಎಂದು ಜನ ಗೋಳಿಟ್ಟರು.

ನಕ್ಷತ್ರಕ

ಅನಂತರ ವಿಶ್ವಾಮಿತ್ರರು ತನ್ನ ಶಿಷ್ಯರಲ್ಲಿ ಒಬ್ಬನಾದ ನಕ್ಷತ್ರಕನನ್ನು ಕರೆದು, “ಕೊಡುವ ಒಡವೆ ಬರಲಿ, ಬರದಿದ್ದರೆ ಬಿಡಲಿ, ಅವನನ್ನು ನಿಷ್ಕರುಣೆಯಿಂದ, ನಿರ್ದಾಕ್ಷಿಣ್ಯದಿಂದ ಕಾಡು. ಕಾಡಿನ ಮಧ್ಯದಲ್ಲಿ ತೊಂದರೆ ಕೊಡು, ಉಪವಾಸ ಬೀಳಿಸು, ದಾರಿ ತಪ್ಪಿಸು, ಅವಧಿ ಆಗಿಹೋಯಿತು ಎಂದು ಹೆದರಿಸು. ಅವನಲ್ಲಿ ಕೊಂಚವೂ ಕೃಪೆ ತೋರಬೇಡ. ಕುಳಿತ ಕಡೆ ಕೂಡಿಸಬೇಡ, ನಿಂತಕಡೆ ನಿಲ್ಲಿಸಬೇಡ, ಆಯಾಸ ಬರುವಂತೆ ಮಾಡು. ಅವನಿಗಿಂತ ನಿನಗೆ ಆಯಾಸ ಹೆಚ್ಚು ಎಂದು ಉಪಚಾರ ಪಡೆ. ಹೇಗಾದರೂ ಅವನಿಂದ ಸುಳ್ಳು ಹೇಳಿಸು. ಇಷ್ಟೆಲ್ಲ ನೀನು ನೋಡಿಕೊ. ನೀನು ನಿಮಿತ್ತ ಮಾತ್ರನಾಗಿರು. ನಾನು ಬಿರುಗಾಳಿಯಾಗಿ, ಭೂತವಾಗಿ, ಅಗ್ನಿಯಾಗಿ, ಕ್ರೂರ ಮೃಗವಾಗಿ, ನೀರಡಿಕೆ ಹಸಿವು ನಿದ್ರೆ ಆಲಸ್ಯವಾಗಿ ಕಾಡುತ್ತೇನೆ. ನನ್ನ ಪ್ರತಿಜ್ಞೆಯನ್ನು ನಡೆಸಿಕೊಳ್ಳುತ್ತೇನೆ” ಎಂದು ಹರಿಶ್ಚಂದ್ರನ ಹಿಂದೆ ಕಳುಹಿಸಿಕೊಟ್ಟರು.

ನಕ್ಷತ್ರಕ ಪ್ರಪಂಚದಲ್ಲಿ ತನ್ನ ಹೆಸರು ಶಾಶ್ವತವಾಗಿ ಉಳಿಯುವಂತೆ ನಡೆದುಕೊಂಡ.

ತನ್ನ ರಾಜ್ಯಕ್ಕೆ ಈಗ ಒಡೆಯರಾದ ವಿಶ್ವಾಮಿತ್ರರಿಗೆ ಮಾತು ಕೊಟ್ಟಿದ್ದಂತೆ ಹರಿಶ್ಚಂದ್ರ ಸಾಲದ ಹಣವನ್ನು ಅವಧಿ ಮುಗಿಯುವುದರೊಳಗೆ ಒದಗಿಸಬೇಕಾಗಿತ್ತು. ಅದನ್ನು ವಿಶ್ವಾಮಿತ್ರರ ರಾಜ್ಯದಲ್ಲಿ ಸಂಪಾದಿಸುವಂತಿರಲಿಲ್ಲ. ಬೇರೆ ರಾಜ್ಯದಲ್ಲಿ ದುಡಿದೋ, ಸಾಲ ಮಾಡಿಯೋ ಅಥವಾ ಇನ್ನಾವುದಾದರೂ ರೀತಿಯಲ್ಲಿಯೋ ಹೊಂದಿಬೇಕಾಗಿತ್ತು. ವಿಶ್ವೇಶ್ವರನ ಸಾನ್ನಿಧ್ಯವಿರುವ ಕಾಶಿಯು ಯೋಗ್ಯ ಸ್ಥಳವೆಂದು ಭಾವಿಸಿ ಅಲ್ಲಿಗೆ ಹೊರಟ.

ಹೋಗುವಾಗ ಅರಣ್ಯವನ್ನು ಹಾದು ಹೋಗುವುದು ಅನಿವಾರ್ಯವಾಯಿತು. ಕಾಡಿನ ಪ್ರಯಾಣವೇ ಕಷ್ಟ. ಅವನ ಜೊತೆಯಲ್ಲಿ ಕಷ್ಟವನ್ನೇ ಕಾಣದ ರಾಣಿ, ರಾಜಕುಮಾರ ರೋಹಿತಾಶ್ವ. ವಿಶ್ವಾಮಿತ್ರ ಸೃಷ್ಟಿಯ ಕೋಟಲೆಗಳೇ ಅತಿ ಭಯಂಕರವಾಗಿದ್ದುವು. ಜೊತೆಗೆ ನಕ್ಷತ್ರಕನ ಕಾಟ ಬೇರೆ.ಒಮ್ಮೆ ಕಾಡುಗಿಚ್ಚು ಎಲ್ಲರನ್ನೂ ಆಪೋಶನ ತೆಗೆದುಕೊಳ್ಳುವಂತೆ ವ್ಯಾಪಿಸಿ ಬಂದಿತು. ಚಂದ್ರಮತಿಯ ಪಾತಿವ್ತ್ಯದ ಶಕ್ತಿಯಿಂದ ಕಪಟಜ್ವಾಲೆ ಮರೆಯಾಯಿತು. ಮತ್ತೊಮ್ಮೆ ಬಿಸಿಲಿನ ಬೇಗೆ. ಮರದ ನೆರಳೂ ಬೆಂಕಿಯಂತೆ ಕಾದಿತ್ತು. ಸುಡುವ ನೆಲ, ಬೆಂಕಿಯ ಗಾಳಿ. ಇರಬಾರದು, ನಿಲಬಾರದು, ಕೂಡಬಾರದು, ಏಳಬಾರದು. ಆದರೆ ಎಂಥದೇ ಕಷ್ಟ  ಬರಲಿ ಹರಿಶ್ಚಂದ್ರನ ಸತ್ಯವ್ರತದ ಮುಂದೆ ಅವು ನಿಲ್ಲಲಾರದೆ ಹೋದವು. ಅಂತೂ ಅವರೆಲ್ಲ ಕಾಶಿಗೆ ಬಂದಲು ತಲುಪಿದರು.

ಹೆಂಡತಿಮಗ ಇಬ್ಬರ ಮಾರಾಟ

ಹೊಸ ಊರು. ಯಾರ ಪರಿಚಯವೂ ಇಲ್ಲ. ಹಣ ಹೊಂದಿಸುವುದು ಹೇಗೆ? ಅವಧಿ ತೀರುತ್ತಾ ಬಂದಿದೆ. ನಕ್ಷತ್ರಕ ದುಂಬಾಲು ಬಿದ್ದಿದ್ದಾನೆ. ಅವಧಿ ಮುಗಿದುಹೋಯಿತು. ಎಂದು ಅವನು ಹೆದರಿಸುವುದು ಬೇರೆ. ದಿಕ್ಕೆಟ್ಟ ಹರಿಶ್ಚಂದ್ರ ವಿಶ್ವೇಶ್ವರನ ದರ್ಶನ ಮಾಡಿ ಅನಂತರ ಯೋಚಿಸೋಣ ಎಂದುಕೊಂಡು, ಗಂಗೆಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನನ್ನು ಸಂದರ್ಶಿಸಿದ. ‘ದಾರಿ ತೋರಿಸು ಭಗವಂತ’ ಎಂದು ಅವನನ್ನು ಬೇಡಿಕೊಂಡ. ಮನಸ್ಸಿಗೆ ಸ್ವಲ್ಪ ಸಮಾಧಾನವಾದಂತಾಯಿತು, ಆದರೆ ಮತ್ತೆ ಚಿಂತೆ ಕಾಲುಹಾಕಿತು. ಆಗಲೆ ಎಷ್ಟೋ ದಿನಗಳು ಕಳೆದಿವೆ, ಋಷಿಯ ಋಣವನ್ನು ತೀರಿಸುವುದು ಹೇಗೆ?
ಆಗ ಚಂದ್ರಮತಿ ಒಂದು ಸಲಹೆ ಕೊಟ್ಟಳು. “ನನ್ನನ್ನೂ ಮಗನನ್ನೂ ಮಾರಿ ಸಾಲವನ್ನು ತೀರಿಸಿ’ ಎಂದಳು.

ಹರಿಶ್ಚಂದ್ರನು ಆ ಮಾತನ್ನು ಕೇಳಿ ಹೌಹಾರಿದನು. ಹೆಂಡತಿಯನ್ನೂ ಮಗನನ್ನೂ ಮಾರುವುದೇ!

ಆಗ ಮತ್ತೆ ಚಂದ್ರಮತಿ ಅಂದಳು: “ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮುಖ್ಯವೇ, ಹೆಂಡತಿ ಮಕ್ಕಳು ಮುಖ್ಯವೆ? ಈ ಕೆಲಸಕ್ಕೆ ಹಿಂಜರಿಯಬೇಡಿ, ನಮಗೂ ಅಸಮಾಧಾನವಿಲ್ಲ”.

ಬೇರೆ ದಾರಿಯೇ ಇಲ್ಲ. ಶ್ರೀರಾಮನ ವಂಶದ ಮಹಾರಾಜ ಹರಿಶ್ಚಂದ್ರ ಹೆಂಡತಿಯನ್ನೂ ಮಗನನ್ನೂ ಮಾರಲು ಸಿದ್ಧನಾದ. ಬೀದಿಬೀದಿಯಲ್ಲಿ ‘ಇವರನ್ನು ಮಾರುತ್ತೇನೆ’ ಎಂದು ಕೂಗಿಕೊಳ್ಳುತ್ತಾ ಮಾರುವ ವ್ಯಕ್ತಿಗಳನ್ನು ಜನಕ್ಕೆ ತೋರಿಸುತ್ತಾ ಅಲೆದಾಡಿದನು. ಕಡೆಗೆ ಇವನ ದುರದೃಷ್ಟಕ್ಕೆ ಒಬ್ಬ ಬ್ರಾಹ್ಮಣ ವ್ಯಾಪಾರಿ ಬಂದ. ‘ಹೆಂಗಸು ಮುದುಕಿ’ ಎಂದು, ‘ಹುಡುಗ ಕೈಲಾಗದವ’ ಎಂದು ಚೌಕಾಸಿ ಮಾಡಿದ. ಅಂತೂ ಹಿಗ್ಗಾಡಿ ಮುಗ್ಗಾಡಿ ಅವರಿಬ್ಬರನ್ನೂ ಹಣ ಕೊಟ್ಟು ಕೊಂಡ.

ಆ ಹಣವನ್ನು ಹರಿಶ್ಚಂದ್ರ ನಕ್ಷತ್ರಕನಿಗೆ ಒಪ್ಪಿಸಿದರೆ ನಕ್ಷತ್ರಕ, “ನಾನು ಇಲ್ಲಿಯವರೆಗೆ ನಿನ್ನೊಡನೆ ಅಲೆದಾಡಿ, ಕಷ್ಟಪಟ್ಟಿದ್ದಕ್ಕೆ ಈ ಹಣ ಭತ್ಯವಾಯಿತು” ಎಂದು ಅದನ್ನು ಮುರಿಹಾಕಿಕೊಂಡು ಬಿಟ್ಟನು.

ಸ್ಮಶಾನದ ಕಾವಲುಗಾರ

ಹರಿಶ್ಚಂದ್ರ ಅವಧಿಯನ್ನು ನೆನೆಸಿಕೊಂಡು ಗಾಬರಿಯಾಗಿ ಕಡೆಗೆ ತನ್ನನ್ನೆ ಮಾರಿಕೊಳ್ಳಲು ಸಿದ್ಧನಾದ. ತಲೆಯ ಮೇಲೆ ಹುಲ್ಲು ಕಡ್ಡಿ ಇಟ್ಟುಕೊಂಡು, “ಇಕ್ಷ್ಯಾಕು ವಂಶದ ರಾಜ, ಅಯೋಧ್ಯೆಯ ಅರಸ ನಾನು. ನನ್ನನ್ನು ಮಾರಿಕೊಳ್ಳುತ್ತೇನೆ” ಎಂದು ಕೂಗಿಕೊಳ್ಳುತ್ತ ಸಾಯಂಕಾಲದವರೆಗೂ ಕಾಶಿಯಾತ್ರೆಯೆಂದು ಕಾಶಿಯ ಬೀದಿ ಬೀದಿಯೆಲ್ಲಾ ಓಡಾಡಿದ.

ಕಡೆಗೊಬ್ಬ ಕೊಳ್ಳುವವ ಬಂದ. ಅವನೇ ವೀರ ಬಾಹು. ಅವನು ಚಂಡಾಲ. ಆ ನಗರದ ಸುಡುಗಾಡಿನ ಅಧಿಕಾರಿ. ಕೊಬ್ಬಿದ ಮೈಯನ್ನು ತೂಗಾಡಿಸುತ್ತಾ, ಕುಡಿದ ಮತ್ತಿನಿಂದ ಮತ್ತಷ್ಟು ತೂರಾಡುತ್ತಾ ಅವನ ಬಳಿಗೆ ಬಂದು “ನಾನು ಕೊಳ್ಳುತ್ತೇನೆ, ಯಾರವನು ಮಾರಿಕೊಳ್ಳುವವನು?” ಎಂದು ಕೇಳಿದ. ಇಕ್ಷ್ಯಾಕು ವಂಶದ ರಾಜ. ತಾನು ಹೊಲೆಯನಿಗೆ ಮಾರಿಕೊಳ್ಳುವುದೇ ಎಂಬ ಚಿಂತೆ ಹರಿಶ್ಚಂದ್ರನನ್ನು ಕ್ಷಣ ಕಾಡಿಸಿತು . ಆದರೆ ಸಾಲದ ಹೊಣೆ ಎಷ್ಟು. ಸಾಲಿಗನ ಕಾಟದ ಭಯ ಎಷ್ಟು ಎಂಬ ಅರಿಯಾವಯಿತು. ಅಲ್ಲದೆ ಮಾತು ಬೇರೆ ಆಡಿ ಆಗಿತ್ತು.

ಈಗ ಹರಿಶ್ಚಂದ್ರ ಹಿಂದಿನಂತೆ ಅಸಡ್ಡೆ ತೋರಲಿಲ್ಲ. ಎಚ್ಚರದಿಂದ ತನ್ನ ಬೆಲೆಯನ್ನು ನಮೂದಿಸಿದ. “ಆನೆಯ ಮೇಲೆ ಎತ್ತರದ ಮನುಷ್ಯ ನಿಂತು ಕವಡೆ ಚಿಮ್ಮಬೇಕು. ಅದು ಎಷ್ಟು ಎತ್ತರ ಹೋಗುತ್ತದೆಯೋ ಆ ಪ್ರಮಾಣದ ಹೊನ್ನರಾಶಿ ನನ್ನ ಬೆಲೆ” ಎಂದ.

“ಆನೆ ಹೂಳುವಷ್ಟು ಹಣ ಕೊಟ್ಟರೆ ನೀನು ಮಾಡುವ ಕೆಲಸ ಏನು?” ಎಂದು ವೀರಬಾಹು ಪ್ರಶ್ನಿಸಿದ.

ಅದಕ್ಕೆ ಹರಿಶ್ಚಂದ್ರ “ನಾನು ನಿನ್ನ ಸೇವಕ. ನೀನು ಹೇಳಿದ ಎಲ್ಲ ಕೆಲಸವನ್ನೂ ಮಾಡುತ್ತೇನೆ” ಎಂದ. ಆಗ ವೀರಬಾಹು ಹಣದ ರಾಶಿಯನ್ನೆ ಸುರಿದು ಅಯೋಧ್ಯಾ ಪಟ್ಟಣದ ರಾಜನಾದ ಹರಿಶ್ಚಂದ್ರ ಭೂಪಾಲನನ್ನು ತನ್ನ ಆಳಾಗಿ ನೇಮಿಸಿಕೊಂಡ. ಸ್ಮಶಾನವನ್ನು ಕಾಯುವುದು ಅವನ ಕೆಲಸ ಎಂದ.

ಹಣದ ಹೊಸ ರಾಶಿ ಕಣ್ಣು ಕುಕ್ಕುವಂತೆ ಕಾಣಿಸುತ್ತಿತ್ತು. ಹರಿಶ್ಚಂದ್ರನು ಅಷ್ಟು ಹಣವನ್ನೂ ನಕ್ಷತ್ರಕನಿಗೆ ಒಪ್ಪಿಸಿದ.

ನಕ್ಷತ್ರಕನಿಗೇ ನಾಚಿಕೆಯಾಯಿತು. ತನ್ನ ಗುರುಗಳ ಸಣ್ಣತನವನ್ನೂ ರಾಜನ ಹಿರಿತನವನ್ನೂ ಮೆಲುಕು ಹಾಕಿದ. ‘ಇಂಥ ರಾಜನ ಸಂಪರ್ಕದಲ್ಲಿ ಇದ್ದುದೇ ತನ್ನ ಪುಣ್ಯ’ ಎಂದುಕೊಂಡು ಹಣವನ್ನು ದಣಿಗೆ ತಲುಪಿಸಲು ಹೊರಟುಹೋದ.

ವಿಶ್ವಾಮಿತ್ರರಿಗೆ ಮತ್ತೆ ಯೋಚನೆಗಿಟ್ಟುಕೊಂಡಿತು. ಎಂತಹ ಅಗ್ನಿಪರೀಕ್ಷೆಗೂ ಹರಿಶ್ಚಂದ್ರ ಜಗ್ಗಲಿಲ್ಲ. ಇನ್ನೂ ಪ್ರಯತ್ನ ಮಾಡುವೆ ಎಂದು ಯೋಚಿಸಿ ಮತ್ತೊಂದು ರೀತಿಯ ಕಷ್ಟವನ್ನು ಆಲೋಚಿಸಿದರು.

ತಾಯಿಯ ತೋಳಿನಲ್ಲಿ ಮಗನ ಶವ

ಚಂದ್ರಮತಿ, ರೋಹಿತಾಶ್ವ ಬ್ರಾಹ್ಮಣನ ಮನೆಯಲ್ಲಿ ನಿಂತರಷ್ಟೆ? ಅವರಿಗೆ ವಿಶ್ವಾಮಿತ್ರರ ಅಪರಾವತಾರನಾದ ಆ ಬ್ರಾಹ್ಮಣ ಕೊಡುತ್ತಿದ್ದ ಕಷ್ಟಗಳನ್ನು ವಿವರಿಸುವುದೇ ಅಸಾಧ್ಯ. ಬೆಳಗಿನಿಂದ ರಾತ್ರಿಯವರೆಗೆ ಬೆನ್ನು ಮುರಿಯುವಂತೆ ಕೆಲಸ. ಹೊಟ್ಟೆಗೆ ತಕ್ಕಷ್ಟಿಲ್ಲ. ಜೊತೆಗೆ ಬೈಗಳ ಮಳೆ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು. ಅವರು ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ನೆಚ್ಚಿಕೊಂಡು ದಿನ ನೂಕುತ್ತಿದ್ದರು.

ಒಂದು ದಿನ ದರ್ಭೆ ಸಮಿತ್ತುಗಳನ್ನು ತರಲು ಅಡವಿಗೆ ಹೋಗಿದ್ದ ರೋಹಿತಾಶ್ವನನ್ನು ಒಂದು ನಾಗರಹಾವು ಕಚ್ಚಿಬಿಟ್ಟಿತು. ಮನೆಗೆ ಸುದ್ದಿ ಮುಟ್ಟಿದಾಗ ಸಂಜೆಯಾಗಿತ್ತು.

ಚಂದ್ರಮತಿಯ ಕರುಳು ಬೆಂದುಹೋಯಿತು. ಎಲ್ಲ ಕಷ್ಟ ಅಪಮಾನಗಳ ಮಧ್ಯೆ ಮಗನ ಮುಖವನ್ನು ನೋಡಿಕೊಂಡು ಸಮಧಾನಪಡುತ್ತಿದ್ದಳು. ಈಗ ಆ ಮಗನೇ ಇಲ್ಲ, ತನ್ನ ಕೈ ಬರಿದಾಯಿತು.

ಅಳುತ್ತಾ ಕುಳಿತುಕೊಳ್ಳುವಂತಿಲ್ಲ, ಮಗನ ಹೆಣ ಕಾಡಿನಲ್ಲಿ ಬಿದ್ದಿದೆ. ಹೋಗಿ ಅದಕ್ಕೆ ಸಂಸ್ಕಾರ ಮಾಡಬೇಕು. ಜೊತೆಗೊಬ್ಬರಿಲ್ಲ.

ಹೋಗಲು ಯಜಮಾನನ ಅಪ್ಪಣೆ ಪಡೆಯಬೇಕು. ಒಡೆಯನ ಬಳಿಗೆ ಹೋಗಿ “ಮಗ ಸತ್ತಿದ್ದಾನೆ, ಮಗನ ಹೆಣವನ್ನು ನೋಡಬೇಕಲು, ಶವಸಂಸ್ಕಾರ ಮಾಡಬೇಕು, ಹೋಗುತ್ತೇನೆ ತಂದೆ” ಎಂದು ಬೇಡಿದಳು. “ಉಳಿದಿರುವ ಕೆಲಸವನ್ನು ಮಾಡಿಟ್ಟು ಹೋಗು” ಎಂದ ಅವನು. ಉಳಿದಿರುವ ಕೆಲಸ ಏನು? ಹೊಸದಾಗಿ ಹೂರಿಸಿದ ಕೆಲಸವೇ ಹೆಚ್ಚು. ಚಂದ್ರಮತಿ ದುಃಖವನ್ನೆಲ್ಲಾ ಒತ್ತಿ ಹಿಡಿದಳು. ಕೆಲಸ ಮುಗಿಸಿದಳು. ಶವಶೋಧನೆಗೆ ನಡೆದಳು.

ಕಾಡಿನಲ್ಲಿ ಸತ್ತು ಬಿದ್ದ ಮಗನನ್ನು ಕಂಡಳು, ಅತ್ತಳು. ಅವಳಲ್ಲಿ ಇದ್ದದ್ದು ಒಂದೇ, ಅದೇ ಅಳು ಅಳು. ಅದಕ್ಕೂ ಇಷ್ಟು ಹೊತ್ತಿದೆ? ತನಗೆ ತಾನೇ ಸಮಾಧಾನ ತಂದುಕೊಂಡು ಹೆಣ ಸುಡುವ ಯೋಚನೆ ಕೈಕೊಂಡು ಸ್ಮಶಾನಕ್ಕೆ ಮಗನ ಶವವನ್ನು ಎತ್ತಿಕೊಂಡು ಹೋದಳು. ಅಲ್ಲೊಂದು ಕಡೆ ಹೆಣವನ್ನು ಇಳಿಸಿದಳು. ಮಗನ ಹೆಣ ಸುಡಲು ಕಟ್ಟಿಗೆ ಬೇಕು, ಅದನ್ನು ಕೊಳ್ಳಲು ಹಣವಿಲ್ಲ. ಅರ್ಧ ಸುಟ್ಟಿದ್ದ ಕಟ್ಟಿಗೆ ತುಂಡುಗಳನ್ನೆಲ್ಲ ಒಟ್ಟಿ ರಾಶಿ ಹಾಕಿದಳು. ಅದರ ಮೇಲೆ ತನ್ನ ಕೈಯಿಂದಲೇ ಮಗನ ಉಸಿರಿಲ್ಲದ ದೇಹವನ್ನು ಇಟ್ಟಳು. ಅಲ್ಲೇ ಹತ್ತಿರದಲ್ಲಿ ಸುಡುತ್ತಿದ್ದ ಹೆಣದ ಬೆಂಕಿಯಿಂದ ಉರಿಯುವ ಕೊಳ್ಳಿಯೊಂದನ್ನು ಎಳೆದು ತಂದು ಮಗನಿಗೆ ಬೆಂಕಿ ಕೊಡಲು ಸಿದ್ಧವಾದಳು.

ತಾಯಿಗೆ ಎಂತಹ ಗಳಿಗೆ!

ಗಂಡಹೆಂಡತಿಮಗಮತ್ತೆ ಸೇರಿದರುಹೇಗೆ?

ಆ ಹೊತ್ತಿಗೆ ಮೈಯೆಲ್ಲಾ ಕಣ್ಣಾಗಿ ಸ್ಮಶಾನವನ್ನು ಕಾಯುತ್ತಿದ್ದ ಹರಿಶ್ಚಂದ್ರ ದಡದಡನೆ ಬಂದು, ಕೊಳ್ಳಿಯನ್ನು ಅವಳ ಕೈಯಿಂದ ಕಿತ್ತೆಸೆದ. ಸೌದೆಯ ರಾಶಿಯ ಮೇಲೆ ಮಲಗಿಸಿದ್ದ ಬಾಲಕನ ಹೆಣದ ಎಡಗಾಲನ್ನು ಹಿಡಿದೆಳೆದು ಬಿಸಾಡಿದ. ಚಂದ್ರಮತಿಗೆ ದಿಕ್ಕು ತೋರಲಿಲ್ಲ. ಭೋರೆಂದು ಅಳುತ್ತಾ, “ಬೇಡ ಬೇಡ, ಅವನು ನನ್ನ ಮಗನಲ್ಲ,ನಿನ್ನ ಮಗ. ಸುಡಲು ಅಪ್ಪಣೆ ಕೊಡು” ಎಂದು ಬೇಡಿಕೊಂಡಳು.

“ಸುಡುವುದಕ್ಕೆ ಮುಂಚೆ ಹೆಣದ ಬಟ್ಟೆ ತೆಗೆದುಕೊಡು, ಸ್ಮಶಾನದ ಬಾಡಿಗೆ ತೆರು” ಎಂದ ಹರಿಶ್ಚಂದ್ರ.

“ನಾನು ಜನದ ಮನೆಯ ದಾಸಿ , ಬಡವೆ, ನನ್ನಲ್ಲಿ ಕೊಡಲು ಏನೂ ಎಲ್ಲ”.

“ನಿನ್ನ ಕೊರಳಿನಲ್ಲಿರುವ ತಾಳಿಯನ್ನು ಅಡವಿಟ್ಟು ಹಣ ತೆಗೆದುಕೊಂಡು ಬಾ” ಎಂದ.

ಚಂದ್ರಮತಿಗೆ ದುಃಖ ಮತ್ತೆ ಒತ್ತರಿಸಿ ಬಂದಿತು. ತನ್ನ ಮಾಂಗಲ್ಯ ಕಾಣಿಸುವುದು ತನ್ನ ಪತಿಗೆ ಮಾತ್ರ; ಇಲ್ಲವೇ ಪತಿಗೆ ಕೇಡಾದಾಗ ಮಾತ್ರ ಇನ್ನೊಬ್ಬರಿಗೆ ಕಾಣಿಸುತ್ತದೆ. ಈ ಮಸಣದ ಕಾವಲಿಗ ತಾಳಿಯ ಮಾತೆತ್ತಿದಾಗ ಅವಳಿಗೆ ಗಂಡನ ಬಗ್ಗೆಯೂ ಭಯವುಂಟಾಯಿತು. ಗಂಡನಿಗೆ ಏನು ಕೇಡು ಬಂದಿತೋ ಈ ಮಗನ ಜೊತೆಗೆ ಎಂದು ನಡುಗಿದಳು. “ಅಯ್ಯೋ ಮಗನೆ! ರಾಜಪುತ್ರನಿಗೆ ಇಂಥ ಸಾವೆ? ಹೆಣ ಸುಡಲು ಶುಲ್ಕ ಹುಟ್ಟಿದ ದಾರಿದ್ಯ್ರವೇ? ನಿಮ್ಮ ತಂದೆ ಇದ್ದಿದ್ದರೆ ಇಂಥ ಸ್ಥಿತಿ ನಿನಗೆ ಬರುತ್ತಿತ್ತೇ? ರಾಜ ಹರಿಶ್ಚಂದ್ರನ ಮಗನಿಗೆ ಈ ಗತಿಯೆ?” ಎಂದು ಹಿಂದಿನದನ್ನು ನೆನೆಸಿ ರೋದಿಸಿದಳು.

“ಹರಿಶ್ಚಂದ್ರನ ಮಗ!”

ಈ ಮಾತುಗಳನ್ನು ಕೇಳಿ ನಡುಗಿದ ಹರಿಶ್ಚಂದ್ರ. ಏನಿದು ವಿಧಿಯ ಕಾಟ! ಕಟ್ಟಿಗೆಯ ಮೇಲೆ ಮಲಗಿದ್ದ ಹೆಣ ತಾನೇ ಎಳೆದು ಹಾಕಿದ ಹೆಣ, ತನ್ನ ಮಗನದೇ? ಹೆಣ ಸುಡುವ ಬಾಡಿಗೆ ತೆರಲಾರದೆ ಗೋಳಿಡುತ್ತಿರುವವಳು ಚಂದ್ರಮತಿಯೇ?

ಅಳುತ್ತಿದ್ದ ಹೆಂಗಸನ್ನೇ ಕೇಳಿದ: “ಏನು ಹೀಗೆನ್ನುತ್ತೀಯೆ? ಇವನು ಹರಿಶ್ಚಂದ್ರನ ಮಗನೆ?”

ಕರುಳನ್ನು ಕತ್ತರಿಸುವ ಕಥೆ ಎಲ್ಲ ತಿಳಿಯಿತು.

ಎಷ್ಟೋ ಕಾಲವಾದ ಮೇಲೆ ಮತ್ತೆ ಒಬ್ಬರನ್ನೊಬ್ಬರು ಕಂಡ ಚಕ್ರವರ್ತಿ-ಚಕ್ರವರ್ತಿನಿಯರು, ಅರ್ಧರಾತ್ರಿಯಲ್ಲಿ. ಸ್ಮಶಾನದಲ್ಲಿ, ಮಗನ ಹೆಣವನ್ನು ಮುಂದಿಟ್ಟುಕೊಂಡು ಬಿಕ್ಕಿಬಿಕ್ಕಿ ಅತ್ತರು.

ಆದರೆ ಹರಿಶ್ಚಂದ್ರ ತನ್ನ ಕರ್ತವ್ಯದಿಂದ ವಿಮುಖನಾಗಲಿಲ್ಲ.

“ನೆಲದ ಬಾಡಿಗೆ ಕೊಡಲೇಬೇಕು, ಹೆಣ ಸುಡಬೇಕಾದರೆ” ಎಂದುಬಿಟ್ಟ. “ಎಲ್ಲಾದರೂ ಬೇಡಿ ತಾ” ಎಂದ. ಚಂದ್ರಮತಿಗೆ ಬೇರೆ ದಾರಿ ತೋರಲಿಲ್ಲ. ಹಣ ತರಲು ಮತ್ತೆ ಊರಿನ ಕಡೆ ಹೊರಟಳು.

ಚಂದ್ರಮತಿಗೆ ಮರಣದಂಡನೆ

ಸೋಲಿನ ಮೇಲೆ ಸೋಲು ಅನುಭವಿಸುತ್ತಿದ್ದ ವಿಶ್ವಾಮಿತ್ರರೂ ಕಡೆಯದಾಗಿ ಇನ್ನೊಂದು ಪ್ರಯತ್ನ ಮಾಡಿದರು. ಕಾಶಿರಾಜನ ಮಗನನ್ನು ಕಳ್ಳರು ಅದೇ ರಾತ್ರಿ ಅರಮನೆಯಿಂದ ಅಪಹರಿಸಿ ಕಾಡಿಗೆ ತಂದರು. ಅವನ ಮೈಮೇಲಿದ್ದ ಆಭರಣಗಳ ಆಸೆಗಾಗಿ ಅವನನ್ನು ಕೊಂದು ಒಡವೆಗಳನ್ನು ಕದಿಯಬೇಕೆಂದುಕೊಂಡರು. ಚೂರಿಯಿಂದ ಮಗುವನ್ನು ತಿವಿದು ಕೊಂದು ಒಡವೆಗಳನ್ನು ಶೇಖರಿಸಿದರು. ಪ್ರಾಣ ಹೋಗುವಾಗ ಮಗು “ಅಮ್ಮಾ” ಎಂಧು ಅರಚಿತು. ಅದರ ಧ್ವನಿ ಊರಿಗೆ ಮರಳುತ್ತಿದ್ದ ಚಂದ್ರಮತಿಗೆ ತನ್ನ ಮಗುವಿನ ಧ್ವನಿಯಂತೆಯೇ ಕೇಳಿಸಿತು. “ರೋಹಿತಾಶ್ವ, ಮಗೂ”  ಎಂದು ಅರಚುತ್ತಾ ಆ ಧ್ವನಿ ಬಂದ ಕಡೆಗೆ ಓಡಿದಳು. ಓಡಿಬರುತ್ತಿದ್ದ ಹೆಂಗಸನ್ನು ಕಂಡು ಕಳ್ಳರು ಒಡವೆಗಳನ್ನು ಅಲ್ಲಿಯೇ ಬಿಟ್ಟು ಮರೆಯಾದರು. ಚಂದ್ರಮತಿ ಮಗುವನ್ನು ಎತ್ತಿಕೊಂಡು ತೊಡೆಯ ಮೇಲೆ ಮಲಗಿಸಿಕೊಂಡಳು. ಮಗುವಿನ ಮೈದಡವುತ್ತಾ ಅತ್ತಳು. ಆ ಹೊತ್ತಿಗೆ ರಾಜನ ಮಗನನ್ನೂ ಕಳ್ಳನನ್ನೂ ಹುಡುಕಿಕೊಂಡು ರಾಜಭಟರು ಬಂದರು. ಅವಳ ಕೈಯಲ್ಲಿ ಮಗನನ್ನು ಕಂಡರು. ಅವಳ ಬಟ್ಟೆ ರಕ್ತವಾಗಿರುವುದನ್ನು ನೋಡಿ ಅವಳೇ ಆ ಬಾಲಕನನ್ನು ಕೊಂದವಳು ಎಂದು ನಿಶ್ಚಯಿಸಿದರು.

ರಾಜಭಟರು ಚಂದ್ರಮತಿಯನ್ನು ದರದರನೆ ಎಳೆದುಕೊಂಡು ಹೋದರು. ರಾಜನ ಮುಂದೆ ನಿಲ್ಲಿಸಿದರು.

ದುಃಖದಲ್ಲಿ ಬೆಂದುಹೋಗಿದ್ದಳು ಚಂದ್ರಮತಿ. ಗಂಡನನ್ನು ಕಂಡಿದ್ದಳು-ಹೇಗೆ? ಚಕ್ರವರ್ತಿಯಾಗಿದ್ದವನು ಸ್ಮಶಾನದ ಕಾವಲುಗಾರ! ಮಗ ಸತ್ತಿದ್ದಾನೆ, ಸುಡಲು ಕಾಸಿಲ್ಲ. ತಾನೋ ನಿಷ್ಕರುಣಿಯಾದ ಒಡೆಯನ ಆಳು. ಇನ್ನು ಬದುಕಿ ಏನಾಗಬೇಕು?

ರಾಜನ ಪ್ರಶ್ನೆಗಳಿಗೆ ಉತ್ತರ ಕೊಡದೆ ತಲೆಬಾಗಿ ನಿಂತಳು. ರಾಜನಿಗೆ ಆಕೆಯ ವಿಷಯದಲ್ಲಿ ಕನಿಕರ ಬಂದಿತು. ಆದರೆ ತನ್ನ ಮಗ ಸತ್ತ ಎಂದು ದುಃಖ ಕಾಡುತ್ತಿತ್ತು.

ಚಂದ್ರಮತಿಗೆ ಮರಣದಂಡನೆಯಾಯಿತು.

ಸ್ಮಶಾನದ ನಿಯಾಮಕನಾದ ವೀರಬಾಹುವನ್ನು ಕರೆದು ಅವಳ ಕೊಲೆಯನ್ನು ಅವನಿಗೆ ಒಪ್ಪಿಸಿದನು ರಾಜ. ವೀರಬಾಹು ಆ ಕೆಲಸವನ್ನು ಸುಡುಗಾಡಿನ ಕಾವಲುಗಾರನಾದ ಹರಿಶ್ಚಂದ್ರನಿಗೆ ವಹಿಸಿದ.

ಇದೇ ನನ್ನ ಹರಕೆಹೊಡೆ

ಮಗನ ಹೆಣವನ್ನು ಸುಡಲು ಸತಿ ನೆಲದ ಹಾಗವನ್ನು ತರುತ್ತಾಳೆ ಎಂದು ಕಾಯುತ್ತ ಕುಳಿತಿದ್ದವನಿಗೆ ಹೆಂಗಸಿನ ಕೊಲೆಯ ಕೆಲಸ ಬಿತ್ತು. ಅದು ದಣಿಯ ಆಜ್ಞೆ, “ಸರಿ” ಎಂದ. ಆಕೆಯನ್ನು ವಧಾಶಿಲೆಯ ಬಳಿಗೆ ಕರೆದುಕೊಂಡು ಹೋಗಿ ನಿಲ್ಲಿಸಿ “ಕಡೆಯದಾಗಿ ನಿನ್ನ ದೇವರನ್ನು ಪ್ರಾರ್ಥಿಸಿಕೊ” ಎಂದ. ಅವಳು ಯಾರು ಎಂದು ಹರಿಶ್ಚಂದ್ರ ವಿಚಾರಿಸಲಿಲ್ಲ. ವಿಚಾರ ಮಾಡಬೇಕಾದ ಅವಶ್ಯಕತೆಯೂ ಅವನಿಗಿರಲಿಲ್ಲ. ಅವಳು ಇದ್ದ ಸ್ಥಿತಿಯಲ್ಲಿ ಅವಳನ್ನು ಗುರುತು ಹಿಡಿಯುವಂತೆಯೂ ಇರಲಿಲ್ಲ.

ಚಂದ್ರಮತಿ ಪದ್ಮಾಸನ ಹಾಕಿ ಕುಳಿತಳು. ಕಣ್ಣುಮುಚ್ಚಿ, ಕೈಮುಗಿದು ಪರಮಾತ್ಮನನ್ನು ಧ್ಯಾನಿಸಿದಳು. ಆತನ ರೂಪವನ್ನು ಮನದಲ್ಲಿ ತಂದುಕೊಂಡಳು. ಗುರು ವಸಿಷ್ಠರಿಗೆ ಮನಸ್ಸಿನಲ್ಲೇ ವಂದಿಸಿದಳು. ಆಮೇಲೆ ಆಕಾಶವನ್ನು ನೋಡುತ್ತ “ಹರಿಶ್ಚಂದ್ರರಾಯ ತನ್ನ ಸತ್ಯದಿಂದ ಅಮರನಾಗಲಿ. ಅವನ ಕೀರ್ತಿ ಸೂರ್ಯಚಂದ್ರ ಇರುವವರೆಗೆ ನಿಲ್ಲಲಿ. ಸತ್ತ ಮಗ ಬದುಕಲಿ. ರಾಜ್ಯದೊಡೆಯ ವಿಶ್ವಾಮಿತ್ರ ನಿತ್ಯನಾಗಲಿ. ಇದೇ ನನ್ನ ಹರಕೆ. ಹೊಡೆ” ಎಂದಳು.

ಸತ್ಯ ಹರಿಶ್ಚಂದ್ರ

ತಲೆ ಬಾಗಿಸಿದ ಹೆಂಗಸಿನ ಬಾಯಿಂದ ಬಂದ ಮಾತುಗಳನ್ನು ಕೇಳಿದ ಹರಿಶ್ಚಂದ್ರ.

‘ಅವಳು ತನ್ನ ಹೆಂಡತಿ, ಮಗನ ಲಹೆಣ ಸುಡಲು ಕಾಸು ತರಲು ಹೋದವಳು’ ಎಂದು ಗೊತ್ತಾಯಿತು. ಮಗನ ಹೆಣವೂ ಅಲ್ಲೆ ಬಿದ್ದಿತ್ತು.

‘ಸರಿ, ಇದು ವಿಧಿಯ ಮತ್ತೊಂದು ಹೂಟ’ ಎಂದುಕೊಂಡ. ‘ಹಿಂದಿನ ದಿನ ಮಗನ ಸಾವು; ಸತ್ತವನ ಸಂಸ್ಕಾರವಾಗಿಲ್ಲ. ಈಗ ಹೆಂಡತಿಯ ಕೊಲೆ. ಇದು ಒಡೆಯನ ಅಪ್ಪಣೆ, ವಿಧಿಯ ಆಸೆ, ಆಗಲಿ, ಕರ್ತವ್ಯ ಮೊದಲು’ ಎಂದು ನಿಶ್ಚಯಿಸಿ ಖಡ್ಗವನ್ನು ಎತ್ತಿದ, ಹೆಂಡತಿಯ ಕುತ್ತಿಗೆಗೆ ಗುರಿಯಿಟ್ಟು ಹೊಡೆಯಲು ಸಿದ್ಧನಾದ.

ತನ್ನ ಕುಲದ ಬೆಳಕು ಇಂದು ಪ್ರಜ್ವಲಿಸುತ್ತದೆ ಎಂದು ಸೂರ್ಯ ಆಗ ತಾನೆ ಹುಟ್ಟಿ ಬೆಟ್ಟದ ಮೇಲೆ ನಿಂತು ನೋಡುತ್ತಿದ್ದಾನೆ. ಭೂಲೋಕದ ಒಬ್ಬ ರಾಜ ಸ್ವರ್ಗ ಸಮಾನವಾದ ನಡತೆಯಿಂದ ದೈವತ್ವವನ್ನು ಪಡೆಯುವ ಸಮಾರಂಭವನ್ನು ನೋಡಲು ದೇವತೆಗಳು ಆಕಾಶದ ವೇದಿಕೆಯಲ್ಲಿ ನಿಂತಿದ್ದಾರೆ. ಈಗಲಾದರೂ ವಿಶ್ವಾಮಿತ್ರರು ಹರಿಶ್ಚಂದ್ರನ ಮೇಲೆ ಕರುಣೆ ತೋರಿಸಬಾರದೆ ಎಂದು ವಸಿಷ್ಠರು ಕಾತರಗೊಂಡಿದ್ದಾರೆ. ಸಕಲ ಚರಾಚರವೆಲ್ಲ ಮೂಕವಾಗಿ ಸತ್ಯಸಂದರ್ಶನವನ್ನು ಕಾಣಲು ಆತುರಗೊಂಡಿವೆ. ಆಗ ಒಂದು ಧ್ವನಿ ಕೇಳಿಸಿತು.

“ನನ್ನ ಕನ್ಯೆಯರನ್ನು ಮದುವೆ ಆಗು! ಎಲ್ಲ ವಿರೋಧವನ್ನು ಬಿಟ್ಟುಬಿಡುತ್ತೇನೆ. ಮಗನನ್ನು ಬದುಕಿಸುತ್ತೇನೆ. ಹೆಂಡತಿಯ ಕೊಲೆಯ ನ್ನು ತಪ್ಪಿಸುತ್ತೇನೆ. ರಾಜ್ಯ ವೈಭವವನ್ನು ಹಿಂದಿರುಗಿಸುತ್ತೇನೆ” ಎಂದಿತು ಆ ಧ್ವನಿ.

ಹರಿಶ್ಚಂದ್ರ ತಲೆಯೆತ್ತಿ ನೋಡಿದ. ಆ ಧ್ವನಿ ವಿಶ್ವಾಮಿತ್ರರದು. ಆಗ ಅವನಿಗೆ ಅನ್ನಿಸಿತು, ‘ನನಗೆ ಬಂದ ಕಷ್ಟ ಕರ್ಮ ಫಲವೆಂದುಕೊಂಡದ್ದು ತಪ್ಪು. ವಿಧಿಯ ದ್ವೇಷ ಎಂದು ಅರಿತದ್ದು ಸರಿಯಲ್ಲ. ಗುರುಸ್ಥಾನೀಯರಾದ ವಿಶ್ವಾಮಿತ್ರರ ಕಾಟವಿದು. ಅವರು ನನ್ನ ಮೇಲೆ ಏಕೆ ದ್ವೇಷ ಸಾಧಿಸುತ್ತಿದ್ದಾರೆಯೋ ತಿಳಿಯದು’ ಅವರ ಗೊಡ್ಡಾಟಕ್ಕೆ ತಾನು ಹಿಂಜರಿಯಬಾರದು  ಎಂದು ನಿರ್ಧರಿಸಿದ. “ಪೂಜ್ಯರೇ, ಅಂಥ ಮಾತನ್ನು ಮತ್ತೆ ಮತ್ತೆ ಆಡದಿರಿ. ನನಗೆ ಈಗ ಯಾವ ಲೋಭವೂ ಇಲ್ಲ. ಇರುವುದು ಒಂದೇ. ಅದೆಂದರೆ ಸತ್ಯಪರಿಪಾಲನೆ. ಚಂಡಾಲ ವೃತ್ತಿಯಾಯಿತು. ಮಗನ ದುರ್ಮರಣ ಕಂಡಾಯಿತು, ಹೆಂಗಸಿನ-ಹೆಂಡತಿಯ ಕೊಲೆ ಆಗಬೇಕಾಗಿದೆ, ಆಗಲಿ. ಆಡಿದ ಮಾತು ನಡೆಯಲಿ. ಕೊಟ್ಟ ಭಾಷೆ ತಪ್ಪದಿರಲಿ. ತಮ್ಮ ಅನುಗ್ರಹವಿರಲಿ” ಎಂದು ಕತ್ತಿಯನ್ನು ಎತ್ತಿ ಬೀಸಿ ಹೊಡೆದನು.

ಹಾಹಾಕಾರ ನಾಲ್ಕೂ ದಿಕ್ಕಿನಿಂದ ತುಂಬಿ ಬಂತು.

ಆಗಲೇ ಆಶ್ಚರ್ಯವೊಂದು ಕಾಣಿಸಿತು. ಹರಿಶ್ಚಂದ್ರನ ಕತ್ತಿಯ ಅಲಗು ಚಂದ್ರಮತಿಯ ಕುತ್ತಿಗೆಗೆ ತಗಲುವಷ್ಟರಲ್ಲಿ ಕತ್ತಿಯೆ ಪರಮೇಶ್ವರ ರೂಪವನ್ನು ತಾಳಿದಂತೆ ಕಾಣಿಸಿತು. ಈಶ್ವರ ಪಾರ್ವತಿಯೊಡನೆ ಪ್ರತ್ಯಕ್ಷವಾಗಿ, ಅಭಯ ಹಸ್ತದಿಂದ ಆಶೀರ್ವದಿಸುತ್ತಿರುವ ಚಿತ್ರ ಮೂಡಿತ್ತು. ಹರಿಶ್ಚಂದ್ರ ಕ್ಷಣದಲ್ಲಿ ಶಿವನ ಪಾದದಡಿ ಸಾಷ್ಟಾಂಗವಾಗಿ ಬಿದ್ದಿದ್ದ. ಹರಿಶ್ಚಂದ್ರ ಸತ್ಯಾಚರಣೆಯಿಂದ ಅಲ್ಲಿ ನೆರೆದಿದ್ದವರಿಗೆ ಪರಮೇಶ್ವರನ ದರ್ಶನವನ್ನು ಒದಗಿಸಿಕೊಟ್ಟಿದ್ದ.

ಪಾರ್ವತಿ ಪರಮೇಶ್ವರರು ಪ್ರತ್ಯಕ್ಷವಾಗಿ ಕಾಣಿಸಿಕೊಂಡರು. ಹರಿಶ್ಚಂದ್ರನಲ್ಲಿ ಅಸತ್ಯವನ್ನು ಕಾಣದ ವಿಶ್ವಾಮಿತ್ರರು ಓಡಿಬಂದು ಈಶ್ವರನಿಗೆ ಪ್ರಣಾಮ ಮಾಡಿ ಕೈ ಮುಗಿದು ನಿಂತರು. ಈಶ್ವರನ ಅನುಜ್ಞೆಯ ಪ್ರಕಾರ ರೋಹಿತಾಶ್ವನನ್ನು ಬದುಕಿಸಿದರು. “ಹರಿಶ್ಚಂದ್ರ, ನೀನು ಗೆದ್ದೆ, ನಿನ್ನ ಸಮಾನರಿಲ್ಲ” ಎಂದರು. ತಾವು ವಸಿಷ್ಠರೊಡನೆ ಹೂಡಿದ ಸ್ಪರ್ಧೆ, ತಾವು ಮಾಡಿದ ಪ್ರತಿಜ್ಞೆ, ಪ್ರತಿಜ್ಞೆಯನ್ನು ನೆರವೇರಿಸಲು ಹರಿಶ್ಚಂದ್ರನಿಗೆ ಕೊಟ್ಟ ಕಷ್ಟ ಪರಂಪರೆ, ಅವುಗಳಲ್ಲಿ ಅವನು ತೇರ್ಗಡೆಯಾದ ಕ್ರಮ ಎಲ್ಲವನ್ನೂ ವಿಸ್ತಾರವಾಗಿ ಹೇಳಿದರು. ಹರಿಶ್ಚಂದ್ರ ಹೆಂಡತಿ ಮಕ್ಕಳನ್ನು ಮಾರಿದ್ದು ಅಗ್ನಿ ದೇವನಿಗೆಂದೂ, ಅವನು ಆಳಾದದ್ದು ವೀರಬಾಹುವಿನ ರೂಪ ತಾಳಿದ ಧರ್ಮಸ್ವರೂಪಿಯಾದ ಯಮರಾಜನಿಗೆಂದೂ, ಮಗ ಸತ್ತದ್ದು ಒಂದು ನಾಟಕವೆಂದೂ ಹೇಳಿದರು. ಸಮಸ್ತ ಋಷಿಗಳ, ದೇವತೆಗಳ, ಪರಮೇಶ್ವರನ ಸಮ್ಮುಖದಲ್ಲಿ ತಾವು ಗಳಿಸಿದ ಪುಣ್ಯದಲ್ಲಿ ಅರ್ಧವನ್ನು ಧಾರೆ ಎರೆದು ಕೊಟ್ಟರು.

ಪುಣ್ಯ ಕಥೆ

ವಸಿಷ್ಠರು ಶಿಷ್ಯನ ನಡತೆಯನ್ನು ಮೆಚ್ಚಿಕೊಂಡರು. ಇಂದ್ರಾದಿ ದೇವತೆಗಳು ಸಂತೋಷದ ಹೂಮಳೆಯನ್ನು ಕರೆದರು. ವಿಶ್ವಾಮಿತ್ರರು ರಾಜ್ಯವನ್ನು ಯಥಾಸ್ವರೂಪದಲ್ಲಿ ಹಿಂದಿರುಗಿಸಿದರು.

“ಕುಡಿದ ಔಷಧ ಬಾಯಿಗೆ ಕಹಿಯಾದರೂ ದೇಹಕ್ಕೆ ಆರೋಗ್ಯವನ್ನುಂಟು ಮಾಡುತ್ತದೆ. ಹಾಗೆಯೇ ವಿಶ್ವಾಮಿತ್ರರ ಕೋಟಲೆಗಳ ಪರಂಪರೆಯಿಂದ ಹರಿಶ್ಚಂದ್ರ ಮಹಾರಾಜನಿಗೆ ಒಳಿಗೇ ಆಯಿತು. ಅವನ ಸತ್ಯನಿಷ್ಠೆಯನ್ನು ಲೋಕಕ್ಕೆ ಎತ್ತಿ ತೋರಿಸಿದುದಲ್ಲದೆ ಸತ್ಯದ ಆಚರಣೆಯಿಂದ ಪರಮಾತ್ಮನನ್ನು ಪ್ರತ್ಯಕ್ಷವಾಗಿ ಕಾಣಬಹುದೆಂಬುದನ್ನು ತೋರಿಸಿತು. ವಿಶ್ವಾಮಿತ್ರರು ನನ್ನ ಸತ್ಯನಿಷ್ಠೆಯನ್ನು ಮೂರು ಲೋಕಗಳಿಗೆ ತೋರಿಸಿಕೊಟ್ಟರು. ಅವರಿಗೆ ನಿನ್ನ ಮೇಲೆ ಕೋಪವಿಲ್ಲ; ಅಸಮಾಧಾನವಿಲ್ಲ. ವಸಿಷ್ಠರಂತೆಯೇ ಪೂಜ್ಯರು” ಎಂದು ಪರಮೇಶ್ವರನು ಹರಿಶ್ಚಂದ್ರನಿಗೆ ಹೇಳಿ ಆಶೀರ್ವದಿಸಿದನು.

ಸತ್ಯಕ್ಕಾಗಿ ಬದುಕಿ, ಸತ್ಯಕ್ಕಾಗಿ ಎಲ್ಲವನ್ನೂ ಅರ್ಪಿಸಲು ಸಿದ್ಧನಾದ ಹರಿಶ್ಚಂದ್ರನ ಕಥೆ ಪುಣ್ಯಕಥೆ, ಪರಮ ಪಾವನ ಕಥೆ, ಅಲ್ಲವೇ?