ಸುಮಾರು ಒಂದುನೂರ ಎಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ ಇದು. ಒಂದು ಸಂಜೆ ಕಾಡಿನ ಹಾದಿಯೊಂದರಲ್ಲಿ ಹದಿನಾಲ್ಕು ವರ್ಷದ ಎಳೆಯನೊಬ್ಬ ಏನನ್ನೋ ಯೋಚಿಸುತ್ತಾ ಸಿಂಹದ ಮರಿಯಂತೆ ಗಂಭೀರವಾಗಿ ನಡೆಯುತ್ತಿದ್ದಾನೆ. ಆತನ ಸೊಂಟದಲ್ಲಿ ಒಂದು ಖಡ್ಗ ತೂಗಾಡುತ್ತಿದೆ. ಆತನ ನಡಿಗೆಯ ಸಪ್ಪಳ ಬಿಟ್ಟರೆ ಬೇರೇನೂ ಕೇಳಿಸದಷ್ಟು ಕಾಡು ನಿಶ್ಯಬ್ದವಾಗಿದೆ.

ಹೀಗೆ ಆತ ಮುಂದೆ ಸಾಗುತ್ತಿದ್ದಂತೆ ದೂರದಲ್ಲಿ ಯಾರೋ ಅಳುತ್ತಿರುವ ಧ್ವನಿ ಆತನಿಗೆ ಕೇಳಿಸಿತು. ಅದು ಆತನ ಯೋಚನೆಗೆ ಭಂಗ ತಂದಿತು. ಕೂಡಲೇ ಆತ ಆ ಧ್ವನಿ ಕೇಳಿ ಬಂದ ದಿಕ್ಕಿಗೆ ನಡೆದ. ಒಂದು ಪಾಳು ಮನೆಯ ಮುಂದೆ ಒಬ್ಬ ಹೆಂಗಸು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸಿತು. ಆಕೆಯ ತಲೆಗೂದಲು ಕೆದರಿತ್ತು. ಮೈಮೇಲಿನ ಬಟ್ಟೆ ಚಿಂದಿ ಚಿಂದಿ.

ದುಷ್ಟರನ್ನು ಶಿಕ್ಷಿಸುತ್ತೇನೆ

“ಅಮ್ಮಾ ಯಾರು ನೀನು? ಏಕೆ ಅಳುತ್ತಿದ್ದೀಯ? ಏನಾದರೂ ಸಹಾಯ ಬೇಕೆ?” ಆಕೆಯನ್ನು ಸಂತೈಸುವ ಧ್ವನಿಯಲ್ಲಿ ಕೇಳಿದ ಈ ಪೋರ.

ಇದ್ದಕ್ಕಿದ್ದಂತೆ ಬಂದ ಆ ಧ್ವನಿಯನ್ನು ಕೇಳಿ ಆ ಹೆಂಗಸು ಬೆಚ್ಚಿದಳು. ಅನಂತರ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದಳು : “ಮಗೂ, ನೀನು ಯಾರೋ ನನಗೆ ಗೊತ್ತಿಲ್ಲ. ಸಹಾಯಬೇಕೇ ಎಂದು ಕೇಳುತ್ತೀಯಾ? ನಿನ್ನಂಥ ಹಾಲುಹಸುಳೆಗೆ ನನ್ನ ಕಷ್ಟವನ್ನು ಪರಿಹರಿಸುವ ಶಕ್ತಿ ಇದೆಯ?”

ಈ ಪ್ರಶ್ನೆಯನ್ನು ಕೇಳಿ ಆ ಬಾಲಕನ ಮುಖ ಗಂಭೀರವಾಯಿತು. ಆತ ಒರೆಯಲ್ಲಿನ ಖಡ್ಗವನ್ನು ಹೊರಗೆಳೆದು, “ಅಮ್ಮಾ, ನಾನು ಸಿಂಹದ ಶಿಶು! ಇಗೋ ಈ ಹೊಳೆಯುವ ಹರಿತವಾದ ಖಡ್ಗ ಕಾಣಿಸುತ್ತಿದೆಯೇ ನಿನಗೆ? ನಿನ್ನ ಕಷ್ಟ ಪರಿಹಾರ ಇದರಿಂದ ಆಗದಿದ್ದರೆ ಇದು ಇರಬೇಕಾದರೂ ಏಕೆ?” ಎಂದನು.

ಹೀಗೆ ಖಡ್ಗ ಹಿರಿದು ನಿಂತ ಆ ಬಾಲವೀರನ ಕೆಚ್ಚನ್ನು ಕಂಡು ಆಕೆಗೆ ಸಂತೋಷವಾಯಿತು. ಅನಂತರ ನಿಟ್ಟುಸಿರುಬಿಡುತ್ತಾ ಹೇಳಿದಳು. “ಮಗು, ನಿನ್ನ ಕೆಚ್ಚನ್ನು ಮೆಚ್ಚಲೇಬೇಕು. ಆದರೆ ನನ್ನ ದುಃಖದ ಕಾರಣ ಎಷ್ಟು ಪ್ರಬಲವಾಗಿದೆ ಗೊತ್ತೇ ನಿನಗೆ? ನನ್ನಂಥ ಸಾವಿರಾರು ಮಂದಿ ಹೆಂಗಸರು ಆಳುವವರಲ್ಲಿ ಕೆಲವರ ದುಷ್ಟತನಕ್ಕೆ ತುತ್ತಾಗಿ ಈ ರೀತಿ ಕಣ್ಣೀರು ಸುರಿಸುತ್ತಾ ಇಂದು ಬಾಳಬೇಕಾಗಿತ್ತು. ರಕ್ಷಣೆ ಇಲ್ಲದ ನಮ್ಮ ಬದುಕು ಎಷ್ಟು ಭಾರ! ನಮ್ಮ ಭವಿಷ್ಯ ಎಷ್ಟು ಘೋರ!”

ಆಕೆಯ ಈ ಕರುಣಾಜನಕ ಕಥೆಯನ್ನು ಕೇಳಿ ಆ ವೀರಬಾಲಕನ ಕಣ್ಣುಗಳಲ್ಲಿ ನೀರು ಬಂತು. ಆದರೆ ಅದರ ಹಿಂದೆ ಕ್ರೋಧವೂ ಉಕ್ಕೇರಿ ಬಂತು. ಸಹಾಯಬೇಕೆ ಎಂದು ಆಕೆಗೆ ತಾನು ಕೇಳಿದುದೂ ನೆನಪಿಗೆ ಬಂತು. ಆದುದರಿಂದ ಗುಡುಗಿ ಹೇಳಿದ “ಅಮ್ಮಾ, ದೇಶವನ್ನಾಳುವವರಲ್ಲಿ ಹಲವರ ದುಷ್ಟತನದ ಕಥೆಗಳನ್ನು ನಾನು ಕೇಳಿದ್ದೆ. ಆದರೆ ಅದು ಇಷ್ಟು ಉಗ್ರ ಎಂಬುದು ನನಗೆ ತಿಳಿದಿರಲಿಲ್ಲ. ಅದಕ್ಕೆ ತುತ್ತಗಿ ಅಸಂಖ್ಯಾತ ಸೋದರಿಯರು ನರಕದಲ್ಲಿ ನರಳುತ್ತಿದ್ದಾರೆ ಎಂಬುದು ಗೊತ್ತೇ ಇರಲಿಲ್ಲ. ಇಂದು ನಿಮ್ಮಿಂದ ನನಗೆ ಇದೆಲ್ಲ ತಿಳಿಯಿತು.  ತಾಯಿ, ಈ ಖಡ್ಗದ ಸಾಕ್ಷಿಯಾಗಿ ನಿಮ್ಮೆದುರು ಇಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅದರಂತೆ ಒಬ್ಬೊಬ್ಬ ಅತ್ಯಾಚಾರಿಯನ್ನು ಶಿಕ್ಷಿಸುತ್ತೇನೆ. ನನ್ನ ಜೀವನದ ಉಸಿರು ಇರುವವರೆಗೆ ನಿಮ್ಮಂಥ ಸೋದರಿಯರ ಕಣ್ಣೀರು ಒರೆಸಲು ಈ ಬಾಳನ್ನು ಮುಡಿಪಾಗಿ ಇಡುತ್ತೇನೆ.”

ಆ ಹೆಂಗಸಿನ ಹೆಸರು ಹರಶರಣ ಕೌರ್. ಆಕೆಯ ಮುಂದೆ ವೀರಪ್ರತಿಜ್ಞೆ ತೊಟ್ಟ ಈ ಸಿಡಿಲ ಮರಿಯೇ ಹರಿಸಿಂಗ್ ನಲ್ವಾ.

ಸಿಂಹಭೂಮಿಯ ಶಿಶು

ಹರಿಸಿಂಹ ಎನ್ನುವುದು ಆತನಿಗೆ ತಂದೆ ತಾಯಿಗಳು ಇಟ್ಟ ಹೆಸರು. ‘ನಲ್ವಾ’ ಎಂಬುದು ನಂತರ ಆತನಿಗೆ ಅವನ ಶೌರ್ಯಕ್ಕೆ ಸಂದ ಬಿರುದು. ಸಂಸ್ಕೃತ ಭಾಷೆಯಲ್ಲಿ ‘ಹರಿ’ ಎಂದರೂ ಪ್ರಾಕೃತ ಭಾಷೆಯಲ್ಲಿ ‘ಸಿಂಗ್’ ಎಂದರೂ ಅರ್ಥ ಒಂದೇ, ಸಿಂಹ ಎಂದು. ಇನ್ನು, ಪಾರಸಿ ಭಾಷೆಯಲ್ಲಿ ನಲ್ವಾ ಎಂದರೆ ಹುಲಿ ಎಂದು ಅರ್ಥವಾಗುತ್ತದೆ. ನೂರು ಸಿಂಹಗಳ ಕೆಚ್ಚಿದ್ದವನಿಗೆ ಹೀಗೆ ಹುಲಿ ಸಿಂಹಗಳ ಹೆಸರು ಇದ್ದದ್ದು ಸಾರ್ಥಕವೇ.

ಹರಿಸಿಂಹ ಹುಟ್ಟಿದುದು ಪಂಜಾಬಿನ ವೀರಭೂಮಿಯಲ್ಲಿ. ನಮ್ಮ ದೇಶದ ಪ್ರತಿಯೊಂದು ಪ್ರಾಂತದಲ್ಲಿಯೂ ಜನ ತಮ್ಮ ತಮ್ಮ ಭಾಗಗಳಲ್ಲಿ ಜನ್ಮತಾಳಿದ ವೀರಪುರುಷರ ಹೆಸರನ್ನು ಹೆಮ್ಮೆಯಿಂದ ಹೇಳುವಂತೆ ಪಂಜಾಬಿನ ಜನರೂ ಹೇಳುತ್ತಾರೆ. ‘ಜಗಜ್ಜೇತಾ’ ಎಂಬ ಗರ್ವದಿಂದ ಮೇಲೇರಿ ಬಂದ ಅಲೆಕ್ಸಾಂಡರನ ಅಬ್ಬರವನ್ನು ಇಳಿಸಿದ ವೀರ ಪುರೂರವನ ಬಗ್ಗೆ, ಗುಬ್ಬಿಗಳಂತಿದ್ದ ಜನರಿಗೆ ಸಿಂಹದ ಮರಿಗಳಂತೆ ಹೋರಾಡಲು ಕಲಿಸಿ ಮೊಗಲರ ಗರ್ವದ ಗುಳ್ಳೆಗೆ ಮುಳ್ಳಾದ ಗುರುಗೋವಿಂದ ಸಿಂಹನ ಬಗ್ಗೆ, ಅದೇ ಗುರು ಗೋವಿಂದ ಜನತೆಗೆ ಉಪದೇಶಿಸಿದ ವೀರಮಂತ್ರ ‘ಸತ್ ಶ್ರೀ ಅಕಾಲ್’ ಅನ್ನು ಘೋಷಿಸುತ್ತಾ ಪ್ರಾಣದ ಆಸೆಯಿಲ್ಲದೆ ಹೋರಾಡಿದ ‘ಖಾಲ್ಸಾ’ ಸೈನಿಕರ ಬಹದ್ದೂರ್ ಸೇನಾಪತಿ ಬಂದಾ ಭೈರಾಗಿಯ ಬಗ್ಗೆ ಇಲ್ಲಿಯ ಜನ ಎದೆಯುಬ್ಬಿಸಿ ಕಥೆ ಹೇಳುತ್ತಾರೆ. ಇಂಥ ಸಿಂಹಗಳ ಭೂಮಿಯೇ ಹರಿಸಿಂಹನಂಥ ವೀರಪುರುಷನಿಗೂ ಜನ್ಮಕೊಟ್ಟು ಕೀರ್ತಿ ಪಡೆಯಿತು.

ಹರಿಸಿಂಹ ಹುಟ್ಟಿದುದು ೧೭೯೧ರಲ್ಲಿ. ತಂದೆ ಗುರುದಯಾಳ ಸಿಂಹ. ತಾಯಿ ಧರ್ಮ ಕೌರ್. ಗುರು ದಯಾಳ ಸಿಂಹರು ಗುಜರಾನ್‌ವಾಲಾ ರಾಜ್ಯದ ರಾಜಾ ಮಹಾಸಿಂಹನ ಸೈನ್ಯದಲ್ಲಿ ಒಬ್ಬ ಪ್ರಸಿದ್ಧ ಸೇನಾಪತಿ ಆಗಿದ್ದರು. ಅವರ ತಂದೆ ಹರದಯಾಳ ಸಿಂಹರೂ, ಅಜ್ಜ ಹರಿದಾಸ ಸಿಂಹರೂ ತಮ್ಮ ಕಾಲದಲ್ಲಿ ಸುಪ್ರಸಿದ್ಧ ಸೈನಿಕರೇ ಆಗಿದ್ದರು. ಗುರುದಯಾಳ ಸಿಂಹರು ರಾಜಾ ಮಹಾಸಿಂಹನ ಸೇವೆಯನ್ನು ಸ್ವೀಕರಿಸಿದ ನಂತರ ಅಮೃತಸರವನ್ನು ಬಿಟ್ಟು ಗುಜರಾನ್‌ವಾಲಾದಲ್ಲೇ ಬಂದು ನೆಲೆಸಬೇಕಾಯಿತು. ಇವರ ಶೌರ್ಯ ಸಾಹಸಗಳನ್ನು ಮೆಚ್ಚಿದ ರಾಜ ಮಹಾಸಿಂಹ ಅವರಿಗೆ ಶಾಹದಾರಾ ಬಳಿ ಒಂದು ಜಾಗೀರನ್ನು ನೀಡಿದ. ಹರಿಸಿಂಹ ಹುಟ್ಟಿದುದು ಇಲ್ಲೇ.

ಓರಗೆಯವರಿಗೆ ಸ್ಫೂರ್ತಿ

ಹರಿಸಿಂಹ ಹುಟ್ಟಿದ ದಿನವೇ ಹರಿದಾಸರೆಂಬ ಮಹಾತ್ಮರೊಬ್ಬರು ಅವನ ತಂದೆಯ ಮನೆಗೆ ಬಂದಿದ್ದರಂತೆ. ಅವರ ಮಗುವನ್ನು ನೋಡಿ “ಈತ ಮುಂದೆ ಒಬ್ಬ ವೀರ ಸೇನಾಪತಿ ಆಗುತ್ತಾನೆ. ದೇಶಕ್ಕೆ ದೇಶವೇ ಈತನ ಶೌರ್ಯವನ್ನು ಕೊಂಡಾಡುತ್ತದೆ. ಇದರಿಂದ ನಿಮ್ಮ ಕುಲದ ಕೀರ್ತಿ ಇಮ್ಮಡಿಯಾಗುತ್ತದೆ” ಎಂದು ಭವಿಷ್ಯ ನುಡಿದರಂತೆ. ತಂದೆತಾಯಿಯರು ಮಹಾತ್ಮರ ಮುಖದಿಂದ ಬಂದ ಭವಿಷ್ಯವಾಣಿಯನ್ನು ಕೇಳಿ ಸಂತೋಷಗೊಂಡರು. ಆದರೆ ಮಗನ ಕೀರ್ತಿಯನ್ನು ಕಾಣುವ ಭಾಗ್ಯವನ್ನು ಗುರುದಯಾಳರು ಪಡೆದು ಬಂದಿರಲಿಲ್ಲ. ಹರಿಸಿಂಹನಿಗೆ ಏಳು ವರ್ಷಗಳಾಗಿದ್ದಾಗ ಅವರು ಅಕಾಲಮೃತ್ಯುವಿಗೆ ತುತ್ತಾದರು. ತಂದೆಯನ್ನು ಕಳೆದುಕೊಂಡ ಹರಿಸಿಂಹ ತನ್ನ ಸೋದರಮಾವ ವೀರಸಿಂಹನ ಆರೈಕೆಯಲ್ಲಿ ಬೆಳೆಯಬೇಕಾಯಿತು.

ವೀರಸಿಂಹನಿಗೆ ಹರಿಸಿಂಹನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ತನ್ನ ಮುದ್ದು ‘ಹರಿಹಾ’ನನ್ನು ಯೋಗ್ಯ ರೀತಿಯಲ್ಲಿ ಬೆಳೆಸಬೇಕು ಎಂಬುದರಲ್ಲಿ ಅವನಿಗೆ ತುಂಬಾ ಆಸಕ್ತಿ. ಆದುದರಿಂದ ಆತನಿಗೆ ಶೂರ ಸರದಾರನಾಗಲು ಏನು ಶಿಕ್ಷಣ ಬೇಕೋ ಅದನ್ನು ಕೊಡಿಸಲು ವ್ಯವಸ್ಥೆ ಮಾಡಿದ. ಹರಿಸಿಂಹನೂ ಅಷ್ಟೇ. ಕತ್ತಿವರಸೆ, ಕುದುರೆ ಸವಾರಿ, ಬಂದೂಕು ಹಾರಿಸುವುದು, ಮಲ್ಲಯುದ್ಧ ಮುಂತಾದ ಎಲ್ಲ ಸೈನಿಕ ವಿದ್ಯೆಗಳನ್ನೂ ಚೆನ್ನಾಗಿ ಕಲಿತು ಕರಗತಮಾಡಿಕೊಳ್ಳುತ್ತಾ ಬೆಳೆದ. ಜೊತೆಗೆ ಪಾರಸಿ ಮತ್ತು ಗುರುಮುಖಿ ಭಾಷೆಗಳಲ್ಲಿ ಬೇರೆಬೇರೆ ಶಾಸ್ತ್ರಗಳನ್ನೂ ಕಲಿತ.

ಓದು – ಬರಹ ಯುದ್ಧವಿದ್ಯೆಯ ಅಭ್ಯಾಸ ಎಂದರೆ ಎಷ್ಟು ಆಸಕ್ತಿಯೋ ಆಟಗಳು-ಓಟಗಳು ಎಂದರೂ ಹರಿಸಿಂಹನಿಗೆ ಅಷ್ಟೇ ಅಚ್ಚುಮೆಚ್ಚು. ಅನೇಕ ರೀತಿಯ ಆಟಗಳಲ್ಲಿ ಆತ ಪ್ರವೀಣನಾಗಿದ್ದ. ಈಜುವಿಕೆಯಲ್ಲೂ ನಿಸ್ಸೀಮ ಎನಿಸಿದ್ದ. ಸಾಹಸಕ್ಕೆ, ಪೌರುಷಕ್ಕೆ ಅವಕಾಶವೀಯುವ ಯಾವ ಸಂಗತಿಯಾದರೂ ಸೂಜಿಗಲ್ಲಿನಂತೆ ಅವನನ್ನು ಆಕರ್ಷಿಸುತ್ತಿತ್ತು. ದರ್ಗಮವಾದ ಕಾಡುಗಳಲ್ಲಿ ಓಡಾಡುವುದು, ಅಲ್ಲಿ ಕ್ರೂರ ಪ್ರಾಣಿಗಳು ವಾಸಿಸುವ ಗುಹೆಗಳನ್ನು ಪ್ರವೇಶಿಸುವುದು, ಭಾರಿಯಾಗಿ ಬೆಳೆದ ಹಣ್ಣಿನ ಮರಗಳನ್ನು ಒಂದೇ ಉಸಿರಿಗೆ ಏರುವುದು, ಅವುಗಳಲ್ಲಿ ತುಂಬಿಕೊಂಡಿರುವ ಮಾವು, ನೇರಳೆ ಮುಂತಾದ ಹಣ್ಣುಗಳನ್ನು ಹೊಟ್ಟೆತುಂಬಾ ತಿನ್ನುವುದು, ಇವೆಲ್ಲವೂ ಆತನಿಗೆ ಸಹಜ ಆಟಗಳೆ ಆಗಿದ್ದವು. ಇಂತ ಕೆಲಸಗಳಲ್ಲಿ ಮೋಜಿಗೆ ಮೋಜೂ ಉಂಟು, ಅದಕ್ಕೆ ಸಾಹಸದ ನಂಟೂ ಉಂಟು. ಹರಿಸಿಂಹ ಹೀಗೆ ಉಲ್ಲಾಸ, ಸಾಹಸ, ಪೌರುಷಗಳನ್ನು ಮೈಗೂಡಿಸುತ್ತಾ ಬೆಳೆದ.

ಕಾರ್ಯ, ಸಾಹಸ, ಉಲ್ಲಾಸಗಳ ಚಿಲುಮೆಯಂತಿದ್ದ ಹರಿಸಿಂಹ ದಿನಕಳೆದಂತೆ ತನ್ನ ಊರಿನ ಓರಗೆ ಹುಡುಗರಿಗೆ ಆಕರ್ಷಣೆಯ ಕೇಂದ್ರವಾದುದರಲ್ಲಿ ಆಶ್ಚರ್ಯವೇನಿಲ್ಲ. ಅವನನ್ನು ಕಂಡು ಸ್ಫೂರ್ತಿ ಪಡೆದ ಆ ಕಿಶೋರರಿಗೆ ತಾವೂ ಆತನಂತೇ ಆಗಬೇಕು ಎಂಬ ಹಂಬಲ ಉಂಟಾಯಿತು. ಅವರು ಅದಕ್ಕಾಗಿ ಅವನ ಜೊತೆಗಾರರಾದರು. ಅವನ ಸಾಹಸಕೃತಿಗಳಲ್ಲಿ ಇವರೂ ಭಾಗವಹಿಸಿದರು. ಹರಿಸಿಂಹ ಈಗ ಆ ಪುಟ್ಟ ಪರಿವಾರಕ್ಕೆ ಒಬ್ಬ ದಿಟ್ಟನಾಯಕ. ಆ ಬಾಲಕರು ಅಭಿಮಾನದಿಂದ ‘ಹರಿಯಾ ಸರ್ದಾರ್’ ಎಂದು ಹೇಳುವಷ್ಟು ಆತನ ವರ್ಚಸ್ಸು ಬೆಳೆದಿತ್ತು.

ಅರಚಬಾರದು, ಸಾಧಿಸಬೇಕು

ಒಮ್ಮೆ ಲೋಹಡೀ ಉತ್ಸವದ ದಿನಗಳು ಬಂದವು. ನಮ್ಮಲ್ಲಿ ಕಾಮಣ್ಣನನ್ನು ಸುಡುವುದಿಲ್ಲವೇ ಹಾಗೆ ಪಂಜಾಬಿನ ಜನ ಲೋಹಡೀ ಉತ್ಸವವನ್ನು ಆಚರಿಸಿ ನಲಿಯುತ್ತಾರೆ. ಆ ಉತ್ಸವದ ದಿನ ರಾತ್ರಿ ಅಲ್ಲಲ್ಲಿ ಕಟ್ಟಿಗೆಯ ರಾಶಿಯನ್ನು ಪೇರಿಸುತ್ತಾರೆ. ಅದಕ್ಕೆ ಬೆಂಕಿಹಚ್ಚಿ ಕವನಗಳು, ವೀರಗೀತೆಗಳನ್ನು ಹಾಡುತ್ತಾ ಸುತ್ತಲೂ ಕುಣಿಯುತ್ತಾರೆ. ರಾತ್ರಿಯೆಲ್ಲ ಹೀಗೆ ಕಳೆದು ಹೋಗುತ್ತದೆ. ಆ ವರ್ಷ ಪುಟ್ಟ ಹರಿಯಾ ಸರ್ದಾರನೂ ಅವನ ಪುಟಾಣಿ ಸೈನಿಕರೂ ಸೇರಿ ಉತ್ಸವದ ಸಲುವಾಗಿ ಭಾರಿ ಸಿದ್ಧತೆ ನಡೆಸಿದ್ದರು.

 

‘ಜೀವನದಲ್ಲಿ ಅರಚಬಾರದು, ಸಾಧಿಸಬೇಕು’

ರಾತ್ರಿಯಾಯಿತು. ಜನ ಊಟವಾದ ನಂತರ ಮನೆಗಳಿಂದ ಹೊರಬಿದ್ದರು. ಕಟ್ಟಿಗೆಯ ರಾಶಿಗಳಿಗೆ ಬೆಂಕಿ ಹೊತ್ತಿಸಿ ಆನಂದದಿಂದ ಕುಣಿಯಲು ಪ್ರಾರಂಭಿಸಿದರು. ಅಷ್ಟರಲ್ಲಿ ಎಲ್ಲಿಂದಲೋ ಇಬ್ಬರೂ ಜೋಗಿಗಳು ಹಾಡುತ್ತಾ ಆ ಗ್ರಾಮಕ್ಕೆ ಬಂದರು. ಇಬ್ಬರೂ ಮೈತುಂಬ ಕಾವಿಯ ಬಟ್ಟೆ ತೊಟ್ಟಿದ್ದರು. ಉದ್ದ ಗಡ್ಡ ಕೂದಲು ಬಿಟ್ಟಿದ್ದರು. ಕತ್ತಿನಲ್ಲಿ ರುದ್ರಾಕ್ಷಿಮಾಲೆ, ಕಾಲಿಗೆ ಚಡಾವು ಧರಿಸಿದ್ದರು. ಆ ಇಬ್ಬರಲ್ಲಿ ಒಬ್ಬನ ಕೈಯಲ್ಲಿ ಒಂದು ‘ಏಕನಾದ’. ಇಬ್ಬರೂ ಹಾಡುವಾಗ ತಮ್ಮ ವಾದ್ಯಗಳನ್ನು ಕುಣಿತಕ್ಕೆ ತಕ್ಕಂತೆ ಬಾರಿಸುತ್ತಿದ್ದರು.

ಅವರು ಹಾಡುತ್ತಿದ್ದುದಕ್ಕೆ ‘ಜಯಮಲ್ ಫತ್ತಾ’ ಎಂದು ಹೆಸರು. ಅದೊಂದು ವೀರ ಕಾವ್ಯ. ಮೊಗಲರ ಅರಸ ಅಕ್ಬರ್ ಭಾರಿ ಸೇನೆಯೊಂದಿಗೆ ಚಿತ್ತೋಡ ದುರ್ಗವನ್ನು ಮುತ್ತಿದಾಗ ಅಲ್ಲಿನ ಸೇನಾಪತಿ ಜಯಮಲ್ಲ ಶತ್ರುವಿನೊಂದಿಗೆ ಕಲಿತನದಿಂದ ಹೇಗೆ ಹೋರಾಡಿದ, ತಿಂಗಳುಗಟ್ಟಲೆ ಅವನನ್ನು ಕುಣಿಸಿ ಅವನ ಉತ್ಸಾಹವನ್ನು ಹೇಗೆ ಭಂಗ ಮಾಡಿದ ಎಂಬುದನ್ನು ಅದು ವರ್ಣಿಸುತ್ತದೆ. ಮೊದಲೇ ವೀರರಸ ಉಕ್ಕುವ ಕಾವ್ಯ ಅದು. ಅವರು ಅಷ್ಟೇ ಆವೇಶದಿಂದ ಹಾಡುತ್ತಿದ್ದುದರಿಂದ ಕೇಳುವವರ ಕಿವಿ ನೆಟ್ಟಗಾಯಿತು. ಪ್ರಾಣದ ಹಂಗು ತೊರೆದು ಹೋರಾಡಿದ ಚಿತ್ತೋಡದ ಸೈನಿಕರ ಪರಾಕ್ರಮದ ಕಥೆಗಳನ್ನು ಕೇಳಿ ಅವರ ಮೈ ನಿಮಿರಿತು. ವೀರ ಯುವಕರ ಭುಜಗಳು ಕುಣಿಯತೊಡಗಿದವು.

ಎಲ್ಲರಂತೆ ಹರಿಸಿಂಹನೂ ಆ ವೀರಗಾನವನ್ನು ಕೇಳುತ್ತಾ ಒಂದು ಕಡೆ ಮೂಕ ಆವೇಶದಿಂದ ಸ್ತಬ್ಧನಾಗಿ ನಿಂತಿದ್ದ. ಆದರೆ ಅಕ್ಬರನ ಸೈನಿಕರು ನಡೆಸಿದ ಅನ್ಯಾಯಗಳನ್ನು ಆ ಜೋಗಿಗಳು ಒಂದರ ಮೇಲೊಂದರಂತೆ ವರ್ಣೀಸುತ್ತಾ ಬಂದಂತೆಲ್ಲ ಅವನ ಆವೇಶ ಹೆಚ್ಚಿತು. ಅದರ ಭರದಲ್ಲಿ ಆತ ಮೈಮರೆತ. ತಾನೀಗ ಅಕ್ಬರನ ಕಾಲದಲ್ಲೇ ಇದ್ದೇನೆ ಎಂಬ ಭ್ರಮೆಯೂ ಆಯಿತು ಆತನಿಗೆ. ಎಂದೇ ತಟ್ಟನೆ ನೆರೆದಿದ್ದ ಆ ಗುಂಪನ್ನು ಸೀಳಿಕೊಂಡು ಆತ ಮುಂದೆ ಬಂದ. ಹಾಗೆ ಬಂದವನೆ “ಎಲ್ಲಿ ? ನಮ್ಮ ವೀರಭೂಮಿ ಚಿತ್ತೋಡನ್ನು ಮುತ್ತಿರುವ ಅಕ್ಬರ್ ಎಲ್ಲಿದ್ದಾನೆ? ಆತ ಹೇಗೆ ಆ ಕೋಟೆಯನ್ನು ಗೆಲ್ಲುತ್ತಾನೋ ನಾನು ನೋಡುತ್ತೇನೆ” ಎಂದು ಚೀರಿದ.

ಜನರ ಗಮನ ಗಾನದಿಂದ ಹರಿಸಿಂಹನತ್ತ ತಿರುಗಿತು. ಆವೇಶದಿಂದ ಚೀರುತ್ತಿದ್ದ ಅವನ ಭುಜವನ್ನು ಕೆಲವರು ಹಿಡಿದುಕೊಂಡರು. “ಹರಿಯಾ! ಹರಿಯಾ! ಹುಚ್ಚು ಹಿಡಿಯಿತೇನು ನಿನಗೆ? ಅರೇ, ಇದು ಇನ್ನೂ ವರ್ಷಗಳಷ್ಟು ಹಿಂದಿನ ಮಾತಲ್ಲವೇನಯ್ಯಾ? ಈಗ ಅಕ್ಬರ್ ಎಲ್ಲಿದ್ದಾನೆ? ಜಯಮಲ್ಲ ಎಲ್ಲಿದ್ದಾನೆ? ಸ್ವಲ್ಪ ಎಚ್ಚರ ಮಾಡಿಕೊಂಡು ಮಾತಾಡು” ಎಂದು ಅಲುಗಾಡಿಸಿ ಕೇಳಿದರು.

ಆದರೆ ಹರಿಸಿಂಹನ ಆವೇಶ ಅಷ್ಟು ಸುಲಭವಾಗಿ ಇಳಿಯುವಂತಿರಲಿಲ್ಲ. ಕ್ರೋಧದಿಂದ ಆತನ ಕಣ್ಣು ಕೆಂಪಾಗಿತ್ತು. ಮೈನಡುಗುತ್ತಿತ್ತು. “ಇಲ್ಲ, ಇಲ್ಲ, ನನ್ನನ್ನು ತಡೆಯಬೇಡಿ. ಮೊಗಲರ ವಿರುದ್ಧ ನಾನು ಹೋರಾಡಲೇಬೇಕು” ಎಂದು ಬಡಬಡಿಸಿದ.

ಅಷ್ಟರಲ್ಲಿ ವೀರಸಿಂಹ ಅಲ್ಲಿಗೆ ಬಂದು ‘ಹರಿಯಾ, ಈ ಹುಡುಗಾಟ ಸಾಕಿನ್ನು. ನಡೆ ಮನೆಗೆ. ಈವರೆಗೆ ನೀನು ಕೇಳಿದುದು ಹಾಡು ಎಂಬುದನ್ನು ಮರೆತು ಹುಚ್ಚಾಗಿ ಅರಚುತ್ತೀಯೇಕೆ? ಹಾಗೆ ಅರಚಬಾರದು, ಸಾಧಿಸಬೇಕು. ಹಾಗೆ ಮಾಡಲು ಇನ್ನೂ ಸಾಕಷ್ಟು ದೀರ್ಘ ಸಮಯ ನಿನ್ನ ಜೀವನದಲ್ಲಿ ಇದೆ’ ಎಂದು ಗದರಿಸಿದ.

ಸೋದರಮಾವನ ಗದರಿಕೆಯಿಂದ ಹರಿಸಿಂಹನ ಮತ್ತು ಇಳಿಯಿತು. ಲೋಹಡೀಯ ಉತ್ಸವ, ಬೆಂಕಿಯ ಜ್ವಾಲೆ, ಜೋಗಿಗಳ ಹಾಡು ಎಲ್ಲ ಸ್ಮರಣೆಗೆ ಬಂತು. ಲಜ್ಜೆಯಿಂದ ತಲೆಬಾಗಿ ಹಿಂದೆ ಸರಿದು ಮನೆಗೆ ಹೊರಟ.

ಮನೆಯ ಹಾದಿಯಲ್ಲಿ ಉದ್ದಕ್ಕೂ ಅವನ ತಲೆಯಲ್ಲಿ ಜಯಮಲ್ ಫತ್ತಾ ಗುಂಯ್ಗುಡುತ್ತಿತ್ತು. ಆಗಾಗ ತಾನು ಆವೇಶಭರಿತನಾಗಿ ಅರಚಿದುದೂ ನೆನಪಾಗುತ್ತಿತ್ತು. ಆದರೆ ಎಲ್ಲಕ್ಕಿಂತ ಮಿಗಿಲಾಗಿ “ಜೀವನದಲ್ಲಿ ಅರಚಬಾರದು, ಸಾಧಿಸಬೇಕು” ಎಂದ ಸೋದರಮಾವನ ಮಾತು ಗಂಭೀರವಾಗಿ ಮೊರೆಯಲಾರಂಭಿಸಿತು. ಹರಿಸಿಂಹ ತನ್ನ ಜೀವನದಲ್ಲಿ ಎಂದೂ ಈ ಮಾತನ್ನು ಮರೆಯಲಿಲ್ಲ.

ಅಗೋ, ಮತ್ತೆ ಅವನೇ

ಅಂದು ವಸಂತ ಪಂಚಮಿಯ ಹಬ್ಬ. ಲಾಹೋರಿನಲ್ಲಿ ಜನರಿಗೆ ಸಡಗರವೋ ಸಡಗರ. ಮೊದಲೇ ಹಬ್ಬ. ಅದರ ಜೊತೆಗೆ ಆ ದಿನವೇ ಅಲ್ಲಿ ಪಂಜಾಬ ಕೇಸರಿ ಮಹಾರಾಜ ರಣಜಿತ್ ಸಿಂಹ ಒಂದು ವಿಶೇಷ ದರ್ಬಾರು ನಡೆಸುವುದು ಸಂಪ್ರದಾಯ. ಮಹಾರಾಜನ ದುರ್ಬಾರು ಎಂದರೆ ಕೇಳಬೇಕೆ? ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ. ಊರು ಊರುಗಳ ಮುಖಂಡರು ಬರುತ್ತಾರೆ. ಸಾಮಾನ್ಯ ಜನರೂ ಬರುತ್ತಾರೆ. ಊರು ತಳಿರು ತೋರಣಗಳಿಂದ ಶೃಂಗರಿಸಲ್ಪಟ್ಟಿರುತ್ತದೆ. ಬಾಲಕರು, ಯುವಕರು, ಮುದುಕರು, ಗಂಡಸರು, ಹೆಂಗಸರು ಎಲ್ಲರೂ ಬಗೆಬಗೆಯ ಬಣ್ಣದ ಹೊಸ ಬಟ್ಟೆಗಳನ್ನು ತೊಟ್ಟು, ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಮಾಡಿ ತಿಂದು, ಅಚ್ಚುಮೆಚ್ಚಿನ ಗೆಳೆಯರೊಡನೆ ಕೂಡಿ ನಲಿದಾಡುತ್ತಾರೆ. ಎಲ್ಲಿ ನೋಡಿದರೂ ಉತ್ಸಾಹ.

ಆದರೆ ಜನ ಕೇವಲ ನಲಿಯಬೇಕು, ಹಾಡಿ ಕುಣಿಯಬೇಕು ಎಂಬುದಕ್ಕಾಗಿ ಅಷ್ಟೇ ಮಹಾರಾಜ ಈ ದರ್ಬಾರು ನಡೆಸುತ್ತಿರಲಿಲ್ಲ. ಅವನ ರಾಜ್ಯದ ಸುತ್ತ ಶತ್ರುರಾಜ್ಯಗಳಿವೆ. ಸಮಯ ಸಿಕ್ಕಿದರೆ ಅವನ ರಾಜ್ಯವನ್ನು ಕಬಳಿಸಲು ಹೊಂಚುಹಾಕುತ್ತಿದ್ದಾರೆ. ಇಂಥ ಸಮಯದಲ್ಲಿ ಜನ ಕೇವಲ ಮೋಜಿನಲ್ಲೇ ಉಳಿದು ಬಿಟ್ಟರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಆತನಿಗೆ ಚೆನ್ನಾಗಿ ಗೊತ್ತು. ಮೋಜು ಬೇಕು ನಿಜ. ಆದರೆ ಮೋಜೇ ಜೀವನದ ಮುಖ್ಯ ಗುರಿಯಲ್ಲ. ಅದರಲ್ಲೂ ತರುಣರು, ದೇಶದ ಭವಿಷ್ಯದ ಆಶಾಕಿರಣಗಳು. ಅಂಥವರು ತಮ್ಮ ಜೀವನದ ಅಮೂಲ್ಯ ದಿನಗಳನ್ನು ಕೇವಲ ಜೂಜು ಮೋಜುಗಳಿಗಷ್ಟೆ ಮೀಸಲಾಗಿಟ್ಟರೆ ದೇಶದ ಕಥೆ ಮುಗಿದಂತೆಯೇ! ಇದಕ್ಕಾಗಿ ತರುಣರಲ್ಲಿ ಶೌರ್ಯ, ಸಾಹಸಗಳನ್ನು ಬೆಳೆಸಬೇಕು. ಯಾವ ಸಮಸ್ಯೆಯೇ ಆದರೂ ಅವರು ಎದೆಗೊಟ್ಟು ಅದನ್ನು ಎದುರಿಸುವಂತಾಗಬೇಕು.

ಈ ಉದ್ದೇಶದಿಂದಲೇ ಮಹಾರಾಜ ವಸಂತ ಪಂಚಮಿಯ ಸಂದರ್ಭದಲ್ಲಿ ಒಂದು ಶೌರ್ಯ ಸ್ಪರ್ಧೆಯನ್ನು ನಡೆಸುತ್ತಿದ್ದ. ಕುದುರೆ ಸವಾರಿ, ಕತ್ತಿಯ ವರಸೆ, ಕುಸ್ತಿ ಮುಂತಾದವುಗಳ ಸ್ಪರ್ಧೆ ಇರುತ್ತಿತ್ತು. ಈ ಸ್ಪರ್ಧೆಗಳಲ್ಲಿ ಮಹಾರಾಜನ ಮನಸೆಳೆದ ವೀರರು ಆತನ ಸೈನ್ಯಕ್ಕೆ ತಕ್ಷಣವೇ ಭರ್ತಿಯಾಗುತ್ತಿದ್ದರು. ಈ ವರ್ಷವೂ ಅದೇ ರೀತಿಯ ಸ್ಪರ್ಧೆಗೆ ಎಲ್ಲ ಸಿದ್ಧತೆ ಆಗಿತ್ತು.

ಸುಮಾರು ಆರು ಏಳು ದಿನ ನಡೆಯುವ ಸ್ಪರ್ಧೆಗಳಿಗೆ ಇಂದು ಮೊದಲ ದಿನ. ವಿಶಾಲವಾದ ಬಯಲಿನಲ್ಲಿ ನೂರಾರು ತರುಣರು ಉತ್ಸಾಹದಿಂದ ವೀರವೇಷ ತೊಟ್ಟು ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಾಗಿದ್ದರು. ಅವರ ಪರಾಕ್ರಮವನ್ನು ನೋಡಿ ಆನಂದಿಸಲು ಸಹಸ್ರ ಸಂಖ್ಯೆಯಲ್ಲಿ ಜನರೂ ನೆರೆದಿದ್ದರು. ಮಹಾರಾಜ ರಣಜಿತ್ ಸಿಂಹ ಬಂದ. ಆ ಬಯಲಿನ ಮಧ್ಯಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ ಚಪ್ಪರದಲ್ಲಿ ಸಿಂಹಾಸನದ ಮೇಲೆ ಕುಳಿತ. ಆತ ಸಂಜ್ಞೆಮಾಡಿದ್ದೇ ತಡ ದೊಡ್ಡ ಘಂಟೆಯೊಂದು ಮೊಳಗಿ ಸ್ಪರ್ಧೆಗಳು ಪ್ರಾರಂಭವಾದವು.

ಮೊದಲು ಕುದುರೆ ಸವಾರಿ. ಅದಕ್ಕಾಗಿ ಬಲಿಷ್ಠ ಕುದುರೆಗಳನ್ನು ಆರಿಸಿ ತಂದಿದ್ದರು. ಕೆಲವು ತರುಣರು ಅವನ್ನು ಹತ್ತಿ ಕುಳಿತು ಸವಾರಿ ಹೊರಟರು. ಎಲ್ಲರಿಗೂ ನಾ ಮುಂದು ತಾ ಮುಂದು ಎನಿಸಿಕೊಳ್ಳುವ ಹಂಬಲ. ಧಾರಕಾರವಾಗಿ ಬೆವರು ಹರಿಯುತ್ತಿದ್ದರೂ ಲೆಕ್ಕಿಸದೇ ಔಡುಗಚ್ಚಿ ಅವರು ಕುದುರೆಗಳನ್ನು ಓಡಿಸುವಾಗ ನೋಡಲು ಕುಳಿತ ಜನ ಹುಚ್ಚೆದ್ದು ಕೂಗುತ್ತಿದ್ದರು. ಆ ಸ್ಪರ್ಧಿಗಳಲ್ಲಿ ಒಬ್ಬ ತರುಣನ ಸಾಹಸ ಎಲ್ಲರ ಗಮನ ಸೆಳೆಯಿತು. ಆತನ ಮೈಕಟ್ಟು, ಕುದುರೆಯನ್ನು ಓಡಿಸುವ ಠೀವಿ ಪ್ರತಿಯೊಂದೂ ಅದ್ಭುತ. ಸ್ಪರ್ಧೆಯಲ್ಲಿ ಗೆಲ್ಲುವವನು ಅವನೇ ಒಂದು ಜನ ಊಹಿಸಿದನು. ಆ ಊಹೆಯೇ ಕಡೆಗೆ ನಿಜವಾದಾಗ ತಮ್ಮ ಪಕ್ಕದಲ್ಲಿ ಅತ್ತಿತ್ತ ಕುಳಿತವರನ್ನು ‘ಯಾರಿವನು?’ ಎಂದು ಕೇಳಿದರು

ವೀರಾವೇಷಕ್ಕೆ ಇವನಿಗೆ ಇವನ ಸಾಟಿ.

ಅನಂತರ ಕತ್ತಿವರಸೆ ಪ್ರಾರಂಭವಾಯಿತು. ಸ್ಪರ್ಧೆಯ ಕಣದಲ್ಲಿ ಎಷ್ಟೋ ಮಂದಿ ಇದ್ದರು. ಜೋಡಿಗಳಲ್ಲಿ ಕಾದಾಡಬೇಕು. ಗೆದ್ದವರು ಜೋಡಿ ಕಟ್ಟಿ ಮತ್ತೆ ಹೋರಾಡಬೇಕು; ಕೊನೆಯಲ್ಲಿ ಗೆದ್ದವನೇ ವಿಜಯಿ. ಇದು ಸ್ಪರ್ಧೆಯ ನಿಯಮವಾಗಿತ್ತು. ಇದರ ಮೊದಲ ಸ್ಥಾನವೂ ಅದೇ ತರುಣನಿಗೆ ದಕ್ಕಿತು. “ಆಗೋ ಮತ್ತೆ ಅವನೇ” ಎಂದು ಹೇಳಿ ಜನ ಆಶ್ಚರ್ಯಪಟ್ಟರು. ಹೀಗೆ ದಿನದಿನವೂ ನಡೆದ ವಿವಿಧ ಸ್ಪರ್ಧೆಗಳಲ್ಲಿ ತರುಣ ತನ್ನ ಪ್ರಾವೀಣ್ಯವನ್ನು ತೋರಿಸಿದ. ಒಂದಲ್ಲ ಒಂದು ಬಹುಮಾನವನ್ನು ಗಿಟ್ಟಿಸಿದ. ಜನರ ಮೆಚ್ಚಿಗೆಯನ್ನು ಗಳಿಸಿಕೊಂಡ. ಅವನೇ ಹರಿಸಿಂಹ.

ಮಹಾರಾಜ ರಣಜಿತ್ ಸಿಂಹನೂ ಹರಿಸಿಂಹನ ಸಾಮರ್ಥ್ಯವನ್ನು ವಿಶೇಷವಾಗಿ ಮೆಚ್ಚಿಕೊಂಡ. ಅವನನ್ನು ತನ್ನ ಅಂಗರಕ್ಷಕ ಪಡೆಯಲ್ಲಿ ನೇಮಕ ಮಾಡಿಕೊಂಡ.

ಹುಲಿಗೆ ಯಾರಿದಿರು?”

ಮಹಾರಾಜ ಒಂದು ದಿನ ಮೃಗಬೇಟೆಗೆ ಹೊರಟಿದ್ದಾನೆ. ವೀರ ಹರಿಸಿಂಹ ಅಚ್ಚುಮೆಚ್ಚಿನ ಅಂಗರಕ್ಷಕನಾಗಿ ಆತನ ಜೊತೆಗಿದ್ದಾನೆ. ಇನ್ನೂ ಅನೇಕರು ಅವನ ಪರಿವಾರದಲ್ಲಿದ್ದಾರೆ. ಎಲ್ಲರೂ ಮೃಗಗಳನ್ನು ಅರಸಿ ಕಾಡಿನಲ್ಲಿ ಅಲೆಯುತ್ತಿದ್ದಾರೆ. ಆದರೆ ಅಂದು ಎಷ್ಟು ಅರಸಿದರೂ ಅವರಿಗೆ ಒಂದು ಪ್ರಾಣಿಯೂ ಸಿಗುತ್ತಿಲ್ಲ. ಹೊತ್ತೇರಿ ಇಳಿಯುತ್ತಿದೆ. ಎಲ್ಲರಿಗೂ ಹಸಿವು, ತೀರದ ದಾಹ, ದಣಿದು ಕಂಗೆಟ್ಟಿದ್ದಾರೆ.

ಇಷ್ಟರಲ್ಲಿ ಒಂದು ಪೊದೆಯ ಮರೆಯಿಂದ ಗರ್ಜನೆಯೊಂದು ಕೇಳಿ ಬಂತು. ಯಾವ ಪ್ರಾಣಿ ಎಂದು ತಿಳಿಯುಷ್ಟರಲ್ಲಿ ಒಂದು ಹೆಬ್ಬುಲಿ ಹಾರಿ ಬಂದು ಬೇಟೆಯ ತಂಡದ ಮೇಲೆ ಬಿತ್ತು. ಎಲ್ಲರಿಗೂ ಕೈಕಾಲು ಕಟ್ಟಿದಂತೆ ಆಯಿತು. ಕೆಲವರು ಎದ್ದೆವೋ ಬಿದ್ದೆವೋ ಎಂಬುದನ್ನು ನೋಡದೆ ಓಡಿದರು. ಆದರೆ ಉಳಿದವರಂತೆ ಹರಿಸಿಂಹ ಓಡಿಹೋಗಲಿಲ್ಲ. ಎದೆಗೆಡಲಿಲ್ಲ. ದಿಟ್ಟತನದಿಂದ ಅದನ್ನು ಎದುರಿಸಿದ. ಅದರ ಮುಖವನ್ನು ಬಿಗಿಯಾಗಿ ಹಿಡಿದು ಒಮ್ಮೆಗೆ ತಿರುಗಿಸಿದ ಹಾಗೆ ಮಾಡಿದಾಗ ಹುಲಿಯ ಹಿಡಿತ ಕೊಂಚ ಸಡಿಲಾಯಿತು. ತಕ್ಷಣವೆ ತನ್ನ ಸೊಂಟಕ್ಕೆ ಸಿಕ್ಕಿಸಿದ್ದ ಭರ್ಜಿಯನ್ನು ಹೊರಗೆಳೆದು ಅವರ ಹೊಟ್ಟೆಯನ್ನು ಬಗೆದ. ದೂರಕ್ಕೆ ಓಡಿದವರು ಸಾವರಿಸಿ ನಿಂತುಕೊಂಡು ಹಿಂತಿರುಗಿ ನೋಡುವುದರೊಳಗಾಗಿ ಇಷ್ಟೆಲ್ಲ ನಡೆದು ಹೋಯಿತು. ಅವರು ಇತ್ತ ಗಮನಿಸಿದಾಗ ಹಾರಿ ಮೇಲೆ ಬಿದ್ದ ಹುಲಿಯ ಗರ್ಜನೆಯ ಮುಕ್ತಾಯವಾಗಿತ್ತು. ಹರಿಸಿಂಹನ ಮೈ ಕೈಗಳ ಗಾಯದಿಂದ ರಕ್ತ ಸೋರುತ್ತಿತ್ತು.

ಹರಿಸಿಂಹನ ಬಳಿಗೆ ಮಹಾರಾಜ ಧಾವಿಸಿ ಬಂದ. ಆತನ ಪರಾಕ್ರಮಕ್ಕೆ ಮೆಚ್ಚಿ “ವ್ವಾರೆ ನಲ್ವಾ” ಎಂದು ತಬ್ಬಿಕೊಂಡ. ತನ್ನ ಮೆಚ್ಚುಗೆಯ ಗುರುತಾಗಿ ಹರಿಸಿಂಹನನ್ನ ಅಂದಿನಿಂದ ತನ್ನ ಸೈನ್ಯದಳವೊಂದಕ್ಕೆ ಅಧಿಪತಿಯನ್ನಾಗಿ ನೇಮಿಸಿದ. ಹರಿಸಿಂಹ “ಹರಿಸಿಂಹ ನಲ್ವಾ” ಆದದ್ದು ಹೀಗೆ.

ಕಸೂರನ್ನು ಗೆದ್ದ

ಪಂಜಾಬಿನ ಕೇಸರಿ ಮಹಾರಾಜ ರಣಜಿತ್ ಸಿಂಹನ ನಾಯಕತ್ವದಲ್ಲಿ ಶಕ್ತಿಗಳಿಸುತ್ತಿದ್ದ ಸಿಖ್ಖರನ್ನು ನೋಡಿ ಮುಲ್ತಾನದ ನವಾಬ ಮುಜಫರ್‌ ಖಾನನಿಗೆ ಒಳಗೊಳಗೆ ಭಯ. ಅವನಿಗೆ ಯಾವಾಗಲೂ ಹೇಗಾದರೂ ಮಾಡಿ ಅವರನ್ನು ನಾಶಮಾಡಬೇಕು ಎಂಬ ಚಿಂತೆ. ಒಂದು ದಿನ ಕಸೂರಿನ ನವಾಬ ಕತ್ಬುದೀನನನ್ನು ಮುಜಫರ್ ಖಾನ್ ತನ್ನ ಬಳಿಗೆ ಕರೆಸಿದ. ಆತನನ್ನು ಸತ್ಕರಿಸಿದ ನಂತರ ಮಾತುಕತೆಗೆ ತೊಡಗಿದ. ಅಯ್ಯಾ, ಕುತ್ಬುದ್ದೀನ್, ಈ ಸಿಖ್ಖರನ್ನು ಹೇಗಾದರೂ ಮಾಡಿ ಅಡಗಿಸಬೇಕು. ಹೇಳು ಮಿತ್ರ, ಸಿಖ್ಖರ ವಿರುದ್ಧ ನಿನು ಯುದ್ಧ ಮಾಡಲು ಸಿದ್ಧನಿದ್ದೀಯಾ?”

ಇಬ್ಬರೂ ಕೈ ಕೂಡಿಸಿದರು. ಸರಿ, ರಾತ್ರಿ ಕಲೆಯುವವರೆಗೂ ಯೋಚಿಸಿ ಬಗೆ ಬಗೆಯ ಯೋಜನೆಗಳನ್ನು ಸಿದ್ಧಪಡಿಸಿದರು.

ಈ ಸುದ್ದಿ ರಣಜಿತ್ ಸಿಂಹನ ಕಿವಿಗೆ ಬಿತ್ತು. ಜೊತೆಗೆ ಕುತ್ಬುದ್ದೀನ್ ಆಗಲೇ ಸುಮಾರು ಇಪ್ಪತ್ತೈದು ಸಾವಿರ ಸೈನಿಕರನ್ನು ಕೂಡಿಸಿದ್ದಾನೆಂದು ಮುಂದಿನ ತಯಾರಿಯಲ್ಲಿದ್ದಾನೆಂದೂ ತಿಳಿದು ಬಂತು. ಆತ ಮಂತ್ರಿಗಳನ್ನು ಕರೆಸಿದ. ಏನು ಮಾಡಬೇಕು ಎಂದು ಕೇಳಿದ. ವೈರಿಗಳು ಎಲ್ಲ ಸಜ್ಜು ಮಾಡಿಕೊಳ್ಳುವುದಕ್ಕೆ ಮೊದಲೇ ಕಸೂರಿನ ಮೇಲೆ ತಾವೇ ಧಾಳಿ ಮಾಡಬೇಕೆಂದೂ, ಕುತ್ಬುದ್ದೀನನಿಗೆ ಬುದ್ದಿ ಕಲಿಸಿದ ನಂತರ ಮುಜಫರ್ ಖಾನನಿಗೂ ಒಂದು ಕೈ ತೋರಿಸಬೇಕೆಂದೂ ಮಂತ್ರಿಗಳು ಹೇಳಿದರು. ಅದರಂತೆ ಒಳ್ಳೆ ಕಟ್ಟುಮಸ್ತಾದ, ಪ್ರಾಣದ ಹಂಗು ತೊರೆದು ಹೋರಾಡುವ ಹತ್ತು ಸಾವಿರ ಸಿಖ್ಖರ ತಂಡ ಕಸೂರಿನತ್ತ ಹೊರಟಿತು. ಹರಿಸಿಂಹ ಈ ತಂಡದ ಮುಖಂಡನಾಗಿ ಕುದುರೆ ಹತ್ತಿದ.

ಕುತ್ಬುದ್ದೀನನ ಸಿದ್ಧತೆ ಇನ್ನೂ ಪೂರ್ಣ ಆಗಿರಲಿಲ್ಲ. ಅಷ್ಟರಲ್ಲೇ ಸಿಖ್ಖರ ಸೈನ್ಯ ಏರಿ ಬರುತ್ತಿದೆ ಎಂಬುದನ್ನು ಕೇಳಿ ಗಾಬರಿಗೊಂಡ. ಮಾರ್ಗ ಮಧ್ಯದಲ್ಲೇ ಅದನ್ನು ತಡೆಯಲು ತನ್ನ ಸೈನಿಕರ ತುಕಡಿಗಳಿಗೆ ಆತ ಆಜ್ಞೆ ಇತ್ತ. ಆದರೆ ಬಿರುಗಾಳಿಯಂತೆ ಬರುತ್ತಿದ್ದ ಸಿಖ್ ಸೈನ್ಯವನ್ನು ತಡೆಯಲು ಯಾರಿಗೆ ಸಾಧ್ಯ? ೧೮೦೭ರ ಫೆಬ್ರವರಿ ೧೮ ರಂದು ಸಿಖ್ಖರ ಸೈನ್ಯ ಕಸೂರಿನ ಕೋಟೆಗೆ ಲಗ್ಗೆ ಹಾಕಿತು.

ಎರಡು ಕಡೆಯವರೂ ಭೀಕರವಾಗಿ ಕಾದಾಡಿದರು. ಆದರೆ ಸಿಖ್ಖರ ಪೌರುಷದ ಮುಂದೆ ಕಸೂರಿನ ಸೈನಿಕರ ಆಟ ಸಾಗಲಿಲ್ಲ. ಸುಮಾರು ಹತ್ತು ದಿನಗಳ ಹೋರಾಟದ ನಂತರ ಕಸೂರು ಪತನಗೊಂಡಿತು. ಹೆದರಿ ಪಲಾಯನ ಮಾಡುತ್ತಿದ್ದ ಕುತ್ಬುದ್ದೀನನನ್ನು ಹರಿಸಿಂಹನ ಸೈನಿಕರು ಬಂಧಿಸಿ ತಂದರು.

ಕಾಲು ಕೆರೆದವ ಕಾಲಿಗೆ ಬಿದ್ದ

೧೮೧೦ರ ಫೆಬ್ರವರಿ ೧೫ ರಂದು ರಣಜಿತ್ ಸಿಂಹನ ಆಜ್ಞೆ ಪಡೆದು ಹರಿಸಿಂಹ ಮುಲ್ತಾನಿಗೂ ನುಗ್ಗಿದ. ಅವನ ಬರುತ್ತಿರುವ ಸುದ್ದಿಯನ್ನು ಕೇಳಿಯೇ ಮುಝಪರ್ ಫಟ್ಟಣವನ್ನು ಬಿಟ್ಟು ಬಳಿಯಿದ್ದ ಕೋಟೆಗೆ ಓಡಿದ. ಯಾವ ಅಡ್ಡಿಯೂ ಇಲ್ಲದೆ ಮುಲ್ತಾನ್ ಹರಿಸಿಂಹನ ಕೈಸೇರಿತು. ಈಗ ಅವನ ಕಣ್ಣು ದುರ್ಗದ ಮೇಲೆ. ಸರ್ದಾರ್ ಅತರ್ ಸಿಂಹ, ಸರ್ದಾರ್ ನಿಹಾಲ್ ಸಿಂಹರಂಥ ಜೊತೆಗಾರರಿರುವಾಗ ಹರಿಸಿಂಹ ಕೋಟೆಯ ಗೋಡೆಯನ್ನು ಏರತೊಡಗಿದರು. ಕೆಲವರು ಕೋಟೆಗೆ ಸಿಡಿಮದ್ದಿಕ್ಕಿದರು. ಇನ್ನು ಕೆಲವರು ಕೋಟೆಯ ಮೇಲಿಂದ ಬರುತ್ತಿದ್ದ ಗುಂಡುಗಳಿಗೆ ಪ್ರತಿಯಾಗಿ ತೋಪುಗಳಿಂದ ಗುಂಡಿನ ಮಳೆಗರೆದರು. ನೋಡು ನೋಡುತ್ತಿದ್ದಂತೆಯೇ ಒಂದು ಕಡೆ ಕೋಟೆಯ ಗೋಡೆ ಬಿದ್ದುಹೋಯಿತು. ಅದನ್ನೆ ದ್ವಾರ ಮಾಡಿ ಹರಿಸಿಂಹನ ಸೈನಿಕರು ಕೋಟೆಯೊಳಗಡೆ ನುಗ್ಗಲಾರಂಭಿಸಿದರು. ಇನ್ನು ಉಳಿಗಾಲ ಇಲ್ಲವೆಂದು ಬಗೆದು ಮುಜಫರ್ ಖಾನನು ಆ ಸೈನಿಕರಿಗೆ ಶರಣಾದ.

ಬಂದಿಯೊಂದಿಗೆ ತಮ್ಮ ಶಿಬಿರಕ್ಕೆ ಬಂದ ಸೈನಿಕರಿಗೆ ಒಂದು ಆಘಾತ ಕಾದಿತ್ತು. ಅವನನ್ನು ಒಪ್ಪಿಕೊಳ್ಳಬೇಕಾದ ಸೇನಾಪತಿ ಹರಿಸಿಂಹ ಅಲ್ಲಿ ಇರಲಿಲ್ಲ. ಯುದ್ಧಭೂಮಿಯಲ್ಲಿ ಎಲ್ಲಾದರೂ ಬಿದ್ದುಹೊದನೇ ಎಂಬ ಶಂಕೆ ಅವರಿಗೆ ಬಂತು. ಎಲ್ಲರೂ ಅವನನ್ನು ಹುಡುಕಾಡತೊಡಗಿದರು. ಅತ್ತ ಕೋಟೆಯ ಗೋಡೆ ಬಿದ್ದ ಜಾಗದ ಬಳಿಯೂ ಒಬ್ಬ ಅಪರಿಚಿತ ವ್ಯಕ್ತಿ ಅವನಿಗಾಗಿ ಹುಡುಕತೊಡಗಿದ್ದ. ಕೋಟೆಯ ಗೋಡೆ ಬೀಳುವ ಹೊತ್ತಿನಲ್ಲಿ ಅಲ್ಲೇ ಇದ್ದು ಸ್ವತಃ ಹರಿಸಿಂಹನೇ ಗೋಡೆ ಬೀಳಿಸುವ ಕಾರ್ಯದಲ್ಲಿ ತೊಡಗಿದ್ದನ್ನು ಆತ ಕಂಡಿದ್ದ. ಗೋಡೆ ಬಿದ್ದ ಮೇಲೆ ಆತನ ಸೈನಿಕರು ಕೋಟೆಯೊಳಗಡೆ ನುಗ್ಗುತ್ತಿದ್ದರೂ ಹರಿಸಿಂಹ ಅವನ ಕಣ್ಣಿಗೆ ಕಾಣದಾದ. ಹಾಗಾದರೆ ಕೋಟೆಯ ಗೋಡೆ ಬಿದ್ದಾಗ ಅದರ ಅಡಿಯಲ್ಲೇನಾದರೂ ಆತ ಸಿಕ್ಕಿಬಿಟ್ಟನೇ? ಸಂದೇಹಗ್ರಸ್ತನಾದ ಆ ವ್ಯಕ್ತಿ ಉಳಿದ ಸೈನಿಕರು ಕೋಟೆಯೊಳಗೆ ಆವೇಶದಿಂದ ಹೋರಾಡುತ್ತಿದ್ದರೆ ಅಷ್ಟೇ ಆವೇಶದಿಂದ ಈತ ಗೋಡೆ ಬಿದ್ದ ಜಾಗದ ಮಣ್ಣು ಕೆದಕಿ ಹರಿಸಿಂಹನನ್ನು ಹುಡುಕಾಡಿದ. ಅವನೆಂದುಕೊಂಡಂತೆ ಆಗಿತ್ತು. ಸರಸರನೆ ಹರಿಸಿಂಹನನ್ನು ಆತ ಮಣ್ಣಿನಿಂದ ಮೇಲೆ ಎತ್ತಿದ. ಆತನಿಗೆ ಜ್ಞಾನ ತಪ್ಪಿತ್ತು. ಆದರೆ ಪ್ರಾಣ ಉಳಿದಿತ್ತು. ಅಷ್ಟರಲ್ಲಿ ಇನ್ನೊಂದು ಆಪತ್ತು ಬಂತು. ಕೋಟೆಯೊಳಗಡೆ ವೀರಾವೇಶದಿಂದ ಹೋರಾಡುತ್ತಿದ್ದ ಶತ್ರು ಸೈನಿಕರ ತುಕಡಿಯೊಂದು ಅತ್ತ ಓಡಿ ಬಂತು. ತಾವಿಬ್ಬರೇ ಇರುವಾಗ ತಮ್ಮನ್ನು ಅವರು ಘಾಸಿ ಮಾಡಿದರೆ? ತಕ್ಷಣವೇ ಈ ವ್ಯಕ್ತಿ ಹರಿಸಿಂಹನ ದೇಹದ ಮೇಲೆ ಒಂದಿಷ್ಟು ಮಣ್ಣು ಮುಚ್ಚಿ ಗೋರಿಯ ಮುಂದೆ ನಮಾಜು ಮಾಡುವಂತೆ ಮಂಡಿಯೂರಿದ. ಅಪಾಯ ತಪ್ಪಿಹೋಯಿತು.

ಪ್ರಾಣ ಉಳಿಸಿದ ಸೋದರಿ

ಕೊನೆಗೆ ಬಹು ಪ್ರಯಾಸದಿಂದ ಹರಿಸಿಂಹನ ದೇಹವನ್ನು ಹೊತ್ತು ಆ ವ್ಯಕ್ತಿ ಶಿಬಿರದತ್ತ ಹೊರಟ. ಅಷ್ಟರಲ್ಲಿ ಅವನನ್ನೇ ಅರಸುತ್ತಿದ್ದ ಕೆಲವು ಸೈನಿಕರೂ ಅತ್ತ ಬಂದರು. ಎಲ್ಲರೂ ಸೇರಿ ಹರಿಸಿಂಹನನ್ನು ಒಯ್ದರು. ಶೈತ್ಯೋಪಚಾರದಿಂದ ಹರಿಸಿಂಹನಿಗೆ ಪ್ರಜ್ಞೆ ಬಂತು. ಜೀವ ಉಳಿಸಿದ ಆ ಅಪರಿಚಿತ ವ್ಯಕ್ತಿಯನ್ನು ಸೈನಿಕರು ಆತನಿಗೆ ಪರಿಚಯ ಮಾಡಿಕೊಟ್ಟರು. ಅವನಿಗೆ ವಂದನೆ ಸೂಚಿಸಲು ಹರಿಸಿಂಹ ಏಳಹೊರಟ. ಆದರೆ ಅವನನ್ನು ಅಷ್ಟಕ್ಕೇ ತಡೆದು ಆ ವ್ಯಕ್ತಿ “ತಮ್ಮಾ ನಲ್ವಾ, ಏಳಬೇಡ” ಎಂದು ಹೆಣ್ಣು ಧ್ವನಿಯಲ್ಲಿ ಮಾತಾಡಿತು. ಅನಂತರವೇ ಆ ವ್ಯಕ್ತಿ ಪುರುಷ ವೇಷ ಧರಿಸಿದ ಹರಶರಣ ಕೌರ್ ಎಂದು ಎಲ್ಲರಿಗೂ ತಿಳಿದದ್ದು. ಹರಿಸಿಂಹ ದೇಶದ ಅಭಾಗಿನಿ ಸೋದರಿಯರ ಕಣ್ಣೀರು ಒರೆಸಲು ಹೋರಾಡುವಾಗ ತಾನೇಕೆ ಸುಮ್ಮನಿರಬೇಕು? ನೆರಳಿನಂತೆ ಆತನ ಹಿಂದಿದ್ದು ಆತನಿಗೆ ಆಪತ್ತು ಬರದಂತೆ ರಕ್ಷಿಸಬೇಕು, ಆಪತ್ತು ಬಂದಾಗ ಉಪಚರಿಸಬೇಕು ಎಂದು ನಿರ್ಧರಿಸಿದ್ದಳು ಆ ವೀರವನಿತೆ.

ಕಾಶ್ಮೀರದ ರಾಜ್ಯಪಾಲ

ಹರಿಸಿಂಹ ಈಗ ಬಹು ಪ್ರಖ್ಯಾತ ವ್ಯಕ್ತಿ. ಆತನ ಹೆಸರೇ ಶತ್ರುಗಳ ಎದೆ ನಡುಗಿಸುತ್ತದೆ. ಆತ ಹೋದಹೋದಲ್ಲಿ ಶತ್ರುಗಳ ಹೆದರಿ ಓಡಿಹೋಗುತ್ತಾರೆ, ಇಲ್ಲವೇ ಕಾಲಿಗೆ ಬೀಳುತ್ತಾರೆ. ಬಹಾವಲಪುರದ ನವಾಬ ಮಹಮದ್ ಸದೀಕ್ ಖಾನ್ ಒಂದು ಲಕ್ಷ ರೂಪಾಯಿಗಳ ಕಾಣಿಕೆಕೊಟ್ಟು ಪ್ರಾಣಭಿಕ್ಷೆ ಬೇಡಿದ. ಷಾಹಪುರದ ಬಳಿ ದಂಡು ಹೋದಾಗ ಅಲ್ಲಿನ ನವಾಬ ಅಹಮದ್ ಯಾರ್ ಹೇಳದೇ ಕೇಳದೇ ಕಾಲಿಗೆ ಬುದ್ಧಿಗೆ ಹೇಳಿದ.

ಆದರೆ ಶತ್ರುಗಳು ಇನ್ನೂ ಇದ್ದಾರೆ. ಹಲವರು ಜನರಿಗೆ ತೊಂದರೆ ಕೊಡುತ್ತಲೆ ಇದ್ದಾರೆ. ಒಂದು ದಿನ ಕಾಶ್ಮೀರದ ಪಂಡಿತ ಬೀರಬಲ್ ಲಾಹೋರಿಗೆ ಬಂದ. ಮಹಾರಾಜ ರಣಜಿತ್ ಸಿಂಹನ ಮುಂದೆ ದೀನನಾಗಿ ರೋದಿಸಿದ: “ಮಹಾರಾಜ್, ಕಾಶ್ಮೀರದ ಸುಲ್ತಾನ ನಮ್ಮನ್ನು ನಿರ್ದಯವಾಗಿ ಪೀಡಿಸುತ್ತಾನೆ. ಹಗ್ಗಗಳಿಂದ ಕಟ್ಟಿಹಾಕಿ ನೀರಿಗೆಸೆದು ನಾವು ಪೇಚಾಡುವಾಗ ಕೇಕೆ ಹಾಕಿ ನಗುತ್ತಾನೆ. ನಮಗೆ ದಿಕ್ಕೇ ತೋಚುತ್ತಿಲ್ಲ.”

ದರ್ಬಾರಿನಲ್ಲಿದ್ದವರಿಗೂ ಈ ಅತ್ಯಾಚಾರದ ವರ್ಣನೆ ಕೇಳಿ ರಕ್ತ ಕುದಿಯತೊಡಗಿತು. ಸಿಟ್ಟಿನಿಂದ ಮೈ ಕೆಂಪಡರಿತು. ಕೂಡಲೇ ಮೂವತ್ತು ಸಾವಿರ ಸಿಖ್ ವೀರರು ಈ ಅತ್ಯಾಚಾರಿಗಳಿಗೆ ಶಾಸ್ತಿ ಮಾಡಲು ಕಾಶ್ಮೀರಕ್ಕೆ ಹೊರಟರು. ಮೂರು ದಿಕ್ಕುಗಳಿಂದ ಅದನ್ನು ಮುತ್ತಲು ನಿರ್ಧರಿಸಿದರು.

ಹರಿಸಿಂಹ ರಾಜೋರಿಯ ಮಾರ್ಗವಾಗಿ ಮುನ್ನಡೆದ. ಮಧ್ಯದಲ್ಲಿ ಒಂದು ಸೈನ್ಯ ಆತನನ್ನು ತಡೆಯಿತು. ಆದರೆ ಹರಿಸಿಂಹನ ಒಂದೇ ಏಟಿಗೆ ತತ್ತರಿಸಿಹೋಯಿತು. ಹರಿಸಿಂಹನ ಸೈನ್ಯ ಪೂಂಚನತ್ತ ಧಾವಿಸಿತು. ಸಿಡಿಮದ್ದಿಕ್ಕಿ ಕೋಟೆಯ ಗೋಡೆ ಕೆಡವಿ, ಮಳೆಗಾಲದ ಮೋಡಗಳು ಪರ್ವತ ಪ್ರದೇಶದ ಮನೆಗಳನ್ನು ನುಗ್ಗುವಂತೆ ನುಗ್ಗಿಬಿಟ್ಟಿತು. ದುರ್ಗದ ಅಧಿಪತಿ ಬಂದಿಯಾದ.

ಪೂಂಚ್ ವಿಜಯದ ನಂತರ ಈಗ ಸೋಪಿಯಾ ಮೈದಾನದಲ್ಲಿ ಯುದ್ಧ. ಇಲ್ಲೇ ಕಾಶ್ಮೀರದ ಸುಲ್ತಾನ ಹರಿಸಿಂಹನ ಮಾರ್ಗಕ್ಕೆ ಅಡ್ಡಕಟ್ಟಿ ನಿಂತಿದ್ದ. ವೀರ ನಲ್ವಾ ಬಿರುಗಾಳಿಯಂತೆ ಬಂದ. ಅಂದೇ ಫೂಲಸಿಂಹನ ನಾಯಕತ್ವದಲ್ಲಿ ಇನ್ನೊಂದು ದಿಕ್ಕಿನಿಂದ ಹೊರಟ ಸೇನೆ ಹಿಂಬದಿಯಿಂದ ಬಂದು ಖಾನನ ಮೇಲೆ ಎರಗಿತು. ಖಾನನ ಸ್ಥಿತಿ ಬೋನಿನಲ್ಲಿ ಸಿಕ್ಕ ಇಲಿಯಂತಯಿತು. ಆತನ ಸೇನಾಪತಿ ಫೂಲಸಿಂಹನ ಖಡ್ಗಕ್ಕೆ ಬಲಿಯಾಗಬೇಕಾಯಿತು. ಸುಲ್ತಾನ ಜಬ್ಬಾರ್ ಖಾನ್ ತಪ್ಪಿಸಿಕೊಂಡ.

೧೮೧೯ರ ಜುಲೈ ೪ರಂದು ಹರಿಸಿಂಹ ವಿಜಯೋತ್ಸಾಹದಿಂದ ರಾಜಧಾನಿ ಶ್ರೀನಗರಕ್ಕೆ ಬಂದ. ಹರಿಸಿಂಹನ ಶೌರ್ಯಕ್ಕೆ ಪುರಸ್ಕಾರವಾಗಿ ಮಹಾರಾಜ ರಣಜಿತ್ ಸಿಂಹ ರಾಜ್ಯದ ವ್ಯವಸ್ಥೆ ಚೆನ್ನಾಗಿ ಆಗುವವರೆಗೆ ಆತನನ್ನೇ ತನ್ನ ಪ್ರತಿನಿಧಿ ಎಂದು ನೇಮಕ ಮಾಡಿದ. ಕಾಶ್ಮೀರದ ರಾಜ್ಯಪಾಲನಾಗಿ ನಲ್ವಾ ಒಳ್ಳೆ ನ್ಯಾಯಶೀಲ ಎಂಬ ಕೀರ್ತಿ ಪಡೆದ.

ಸೀಮಾ ಪ್ರಾಂತಕ್ಕೆ ಮುಕ್ತಿ

ಕಾಶ್ಮೀರದಲ್ಲಿ ರಾಜ್ಯವ್ಯವಸ್ಥೆ ಭದ್ರವಾಯಿತು. ನಲ್ವಾ ಇನ್ನೇಕೆ ಸುಮ್ಮನೆ ಕೂರಬೇಕು? ರಾಜವೈಭವದಲ್ಲಿ ಮೆರೆಯುವ ಆಸೆ ಅವನಿಗೆ ಇಲ್ಲ. ಅತ್ಯಾಚಾರಿಗಳಿಗೆ ಶಿಕ್ಷೆ ಮಾತೃಭೂಮಿಗೆ ಮುಕ್ತಿ-ಇದೇ ಅವನ ಜೀವನದ ಪರಮ ಉದ್ದೇಶ. ಇದಕ್ಕಾಗಿ ಅವನ ಸತತ ಹೋರಾಟ. ಅವನ ದೃಷ್ಟಿ ಭಾರತದ ಸೀಮಾ ಪ್ರಾಂತದತ್ತ ಬಿತ್ತು. ಆಫ್‌ಘಾನಿಸ್ತಾನ ಭಾರತದ ಎಲ್ಲೆಯಾಚೆಯ ದೇಶ. ಹಸ್ತದಿಂದ ಹೊರಚಾಚುವ ಬೆರಳುಗಳಿದ್ದಂತೆ. ಆಫ್‌ಘಾನಿಸ್ತಾನವನ್ನು ಆಧಾರ ಮಾಡಿ ವೈರಿಗಳು ಭಾರತದೊಳಗೆ ಸೀಮಾ ಪ್ರಾಂತದ ಮುಂಘೇರ್, ಹಾಜ್ರಾ ಮುಂತಾದ ಕಡೆಗಳಲ್ಲಿ ಜಮಾಯಿಸಿ ಕುಳಿತಿದ್ದರು. ಹರಿಸಿಂಹ ಸೀಮಾ ಪ್ರಾಂತದ ಮುಕ್ತಿಗೆ ನಿರ್ಧರಿಸಿದ.

ಪರ್ವತೀಯ ಪ್ರದೇಶ ಮಾಂಗಲಿ, ಈ ವಿಜಯಯಾತ್ರೆಯಲ್ಲಿ ಮೊದಲು ಸಿಕ್ಕ ಊರು. ಕುರಿಯ ಮೇಲೆ ಎರಗುವ ಹುಲಿಯಂತೆ ಹರಿಸಿಂಹ ಅಲ್ಲಿನ ಸೈನ್ಯದ ಮೇಲೆ ಬಿದ್ದ. ಹೆದರಿಕೆಯಿಂದ ಗಡಗಡನೆ ನಡುಗುತ್ತಾ ಶತ್ರು ಸೈನಿಕರು ಕೈಯಲ್ಲಿ ಬಿಳಿಯ ಧ್ವಜ ಹಿಡಿದು ಆತನ ಕಾಲಿಗೆ ಬಿದ್ದರು.

ಮಾಂಗಲಿಯ ನಂತರ ಮುಂದಿನ ಪಯಣ ಖುಷಾಬಿಗೆ. ಖುಶಾಬ್ ಎಷ್ಟು ದೂರ ಅಲೆದರೂ ನೀರು ಸಿಗದ ಮರುಭೂಮಿ. ಅದರೂ ಅದು ಪವಿತ್ರ ಮಾತೃಭೂಮಿ. ಹರಿಸಿಂಹನ ವಿಜಯಯಾತ್ರೆಯನ್ನು ಕಣ್ಣಾರೆ ಕಂಡು ಆನಂದಿಸಲು ಸ್ವತಃ ಮಹಾರಾಜ ರಣಜಿತ್ ಸಿಂಹ ಅವನಿಗಾಗಿ ಇಲ್ಲಿ ದಾರಿಕಾಯುತ್ತಿದ್ದ. ಮುಂಘೇರ್ ನವಾಬ ಅಹಮದ್ ಖಾನನೂ ಇಪ್ಪತ್ತೈದು ಸಾವಿರ ಸೈನಿಕರೊಡನೆ ಇವರನ್ನು ತಡೆಯಲು ಅಲ್ಲಿಂದ ಅನತಿ ದೂರದಲ್ಲಿ ದಾರಿಗೆ ಅಡ್ಡ ನಿಂತಿದ್ದ. ಸಿಖ್ ಸೈನ್ಯ ಅವರ ಮೇಲೆ ಬಿತ್ತು. ಮೂರು ದಿನಗಳ ಭೀಕರ ಸಂಗ್ರಾಮ ನಡೆಯಿತು. ಹರಿಸಿಂಹನ ಕೈಗೆ ಒಂದರ ಮೇಲೊಂದರಂತೆ ಏಳುಕೋಟೆಗಳು ಬಂದವು. ನಾಲ್ಕನೆಯ ದಿನ ಮುಂಘೇರ್ ಮುತ್ತಿಗೆಗೆ ಒಳಗಾಯಿತು. ಹರಿಸಿಂಹನ ಸೈನ್ಯದ ತೋಪುಗಳು ದುರ್ಗದ ಗೋಡೆಗಳನ್ನು ಉಡಾಯಿಸತೊಡಗಿದವು. ವೈರಿಗಳು ಶಸ್ತ್ರವನ್ನು ಕೆಳಗೆ ಇಟ್ಟಿತು. ೧೮೨೧ ರ ಡಿಸೆಂಬರ್ ೨೦ ರಂದು ದುರ್ಗ ವಶವಾಯಿತು.

ಮುಂದಿನ ಗುರಿ ಹಜ್ರಾ. ಅಲ್ಲಿದ್ದ ಸೈನಿಕರು ಹರಿಸಿಂಹನನ್ನು ನೇರವಾಗಿ ಎದುರಿಸಲಾರದೆ ಕಿರುಕುಳ ಯುದ್ಧ ಮಾಡಿದರು. ಆದರೆ ಹರಿಸಿಂಹ ಎಚ್ಚರಿಕೆಯಿಂದ ಮುಂದುವರೆದ. ಈ ಸ್ಥಳವೂ ಹರಿಸಿಂಹನ ವಶವಾಯಿತು. ಮುಂದೆ ನಲ್ವಾ ನೌಶೇರದತ್ತಾ ನಡೆದ. ೧೮೨೩ ರ ಮಾರ್ಚ್‌ ೧೪ ರಂದು ಅದನ್ನು ವಶಪಡಿಸಿಕೊಂಡ. ಹೀಗೆ ಸಂಪೂರ್ಣ ಸೀಮಾ ಪ್ರಾಂತ ಹರಿಸಿಂಹನ ವಶವಾಯಿತು.

ಬಲಾತ್ಕಾರಕ್ಕೆ ಪ್ರತೀಕಾರ

ಮಿಚಿನೀ ಗ್ರಾಮದ ಬಳಿ ಒಬ್ಬ ಹಿಂದೂ ಯುವಕ ಆಗ ತಾನೇ ಮದುವೆಯಾದ ಪತ್ನಿಯನ್ನು ಮೇನೆಯಲ್ಲಿ ಕುಳ್ಳಿರಿಸಿಕೊಂಡು ತನ್ನ ಮನೆಗೆ ಹೊರಟಿದ್ದಾನೆ. ಆ ಮೇನೆಯನ್ನು ಕೆಲವು ಸೇವಕರು ಹೊತ್ತಿದ್ದಾರೆ. ಮಾರ್ಗ ಮಧ್ಯದಲ್ಲಿ ಆ ಯುವತಿಗೆ ಬಾಯಾರಿತು. ಮೇನೆಯ ಪರದೆ ಸರಿಸಿ ಆಕೆ ನೀರು ಕೇಳಿದಳು. ಹಿಂದಿನಿಂದ ಒಬ್ಬ ಸೇವಕ ನೀರು ಹೊತ್ತು ಬರುತ್ತಿದ್ದ. ಅವನನ್ನು ಕರೆದು ಆಕೆಗೆ ನೀರು ಕುಡಿಸಿದ ಆ ಯುವಕ. ಅದುವರೆಗೂ ಆಕೆಯನ್ನು ನೋಡಿರದ ಆ ಮೇನೆ ಹೊತ್ತ ಸೇವಕರು ಆಕೆಯ ಸೌಂದರ್ಯ ಕಂಡು ಬೆರಗಾದರು.

ಮೇನೆ ಮಿಚಿನೀ ಗ್ರಾಮ ತಲುಪಿತು. ನೀರು ಕುಡಿದು ದಣಿವಾರಿಸಿ ಬರುತ್ತೇವೆಂದು ಮೇನೆಯನ್ನು ಕೆಳಗಿಳಿಸಿ ಸೇವಕರು ಗ್ರಾಮದೊಳಗೆ ಹೋದರು. ಅಲ್ಲಿದ್ದ ಒಬ್ಬ ನವಾಬನಿಗೆ ಮೇನೆಯೊಳಗಿನ ಸುಂದರಿಯ ಬಗ್ಗೆ ವರ್ಣಿಸಿದರು. ಅದನ್ನು ಕೇಳಿದ ನಂತರ ಆ ನವಾಬ ಕೆಲವು ಜೊತೆಗಾರರನ್ನು ಕೂಡಿಕೊಂಡು ಮೇನೆಯಿದ್ದೆಡೆಗೆ ಬಂದ. ಆ ಯುವಕನನ್ನು ಕಡಿದು ಹಾಕಿ, ಕೂಗಿ ಚೀರುತ್ತಿದ್ದ ಆ ಯುವತಿಯನ್ನು ಬಲಾತ್ಕರಿಸಿ ಎತ್ತಿಕೊಂಡು ಹೋದ.

ಆ ತಂಡದಲ್ಲಿ ಒಬ್ಬ ಸೇವಕ ಹೇಗೋ ತಪ್ಪಿಸಿಕೊಂಡ. ಯಜಮಾನನನ್ನೂ ಆತನ ಸರಂಜಾಮುಗಳನ್ನೂ ಅಲ್ಲೇ ಬಿಟ್ಟು ಓಟಕಿತ್ತ. ಓಡುತ್ತಾ ಹೋಗುವವನಿಗೆ ಕೊಂಚ ದೂರದಲ್ಲಿ ಯಾರೋ ಕೆಲವರು ಕುದುರೆ ಏರಿಬರುವ ಸದ್ದು ಕೇಳಿಸಿತು. ಇನ್ನಾವ ಅಪತ್ತೋ ಎಂದು ಹೆದರಿ ಅಡಗಿ ಕುಳಿತ. ಅವನಿಗೆ ಸವಾರರು ಸಿಖ್ಖರಂತೆ ಕಂಡು ಬಂದುದರಿಂದ ಮತ್ತೆ ಧೈರ್ಯ ಬಂತು. ಹತ್ತಿರ ಬಂದಾಗ ಅವರನ್ನು ಕೂಗಿ ನಿಲ್ಲಿಸಿ ನವಾಬನ ದುಷ್ಕೃತ್ಯದಿಂದ ತನ್ನ ಯಜಮಾನನಿಗೆ ಒದಗಿದ ದುರ್ಗತಿಯನ್ನು ವಿವರಿಸಿದ ಆ ಸೇವಕ.

ಆ ಸವಾರರ ಮುಖಂಡ ಮತ್ತಾರೂ ಆಗಿರದೆ ವೀರ ಹರಿಸಿಂಹನೇ ಆಗಿದ್ದ. ಅನತಿ ದೂರದಲ್ಲಿದ್ದ ತನ್ನ ಶಿಬಿರದಿಂದ ಆತ ಏಕೋ ಅತ್ತ ಬಂದಿದ್ದ. ಈ ಸುದ್ದಿ ಕೇಳಿದುದೇ ತಡ ಆತನ ಕಣ್ಣಿನಲ್ಲಿ ಕಿಡಿಹಾಯಿತು. ಎಲ್ಲರೂ ಆ ಗ್ರಾಮಕ್ಕೆ ಧಾವಿಸಿದರು. ಆ ನವಾಬನನ್ನು ಹೆಡಮುರಿಗೆ ಕಟ್ಟಿ ಆ ಯುವತಿಯನ್ನು ರಕ್ಷಿಸಿದರು.

ಮಾರನೆಯ ದಿನ ಹರಿಸಿಂಹನ ನವಾಬನನ್ನು ಗ್ರಾಮದ ಮಧ್ಯೆ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಿಸಿದ. ಅಬಲೆಯರ ಮೇಲೆ ಅತ್ಯಾಚಾರ ಮಾಡುವವರಿಗೆ ಏನು ಗತಿ ಮಾಡಬೇಕು ಎಂಬುದನ್ನು ತೋರಿಸಿದ.

ಆಡಿದಂತೆ ಮಾಡಿದ

ಸೀಮಾ ಪ್ರಾಂತದ ಗಡಿಯಲ್ಲಿದೆ ಪೇಶಾವರ್. ಅಲ್ಲಿಂದಾಚೆಗೆ ಆಫ್‌ಘಾನಿಸ್ತಾನ್. ಸೀಮಾ ಪ್ರಾಂತ ಈಗ ಸ್ವತಂತ್ರ. ಪೇಶಾವರ್ ಈಗ ನಲ್ವಾನ ಕೇಂದ್ರ. ಸೀಮೆಯಾಚೆಯ ವೈರಿಗಳು ತಾವು ಕಳೆದುಕೊಂಡ ಸೀಮಾ ಪ್ರಾಂತವನ್ನು ಮರಳಿ ಪಡೆಯಲು ಯತ್ನಿಸುತ್ತಿರುವುದು ಆತನಿಗೆ ಗೊತ್ತು. ಅದನ್ನು ತಡೆಯಲು ಜಮರೋದಿನಲ್ಲಿ ಆತ ಒಂದು ಪ್ರಬಲ ದುರ್ಗವನ್ನು ಹೊಸದಾಗಿ ನಿರ್ಮಿಸಿದ. ಮಹಾಸಿಂಹನನ್ನು ಅದರ ಅಧಿಪತಿಯಾಗಿ ನೇಮಿಸಿದ.

ಆಫ್‌ಘಾನಿಸ್ತಾನದವರಿಗೆ ಜಮರೋದ್ ದುರ್ಗವನ್ನು ಕಂಡರೆ ಎಲ್ಲಿಲ್ಲದ ಸಿಟ್ಟು. ಅವರ ಪರಾಜಯ ಮತ್ತು ನಷ್ಟಗಳಿಗೆ ಸಾಕ್ಷಿಯಾಗಿರುವ, ಅವರ ಮುಂದಿನ ಯೋಜನೆಗಳಿಗೆ ಅಡ್ಡಿಯಾಗಿರುವ ಆ ಪ್ರಬಲ ದುರ್ಗವನ್ನು ಹೇಗಾದರೂ ಮಾಡಿ ಉರುಳಿಸಬೇಕು. ಇದು ಅವರ ಆಸೆ. ಆದರೆ ಆಸೆಯಿದ್ದರೇನು ಶಕ್ತಿ ಬೇಕಲ್ಲ?  ಕೊನೆಯ ಪಕ್ಷ ತಮಗೆ ಅನುಕೂಲವಾದ ಸಂದರ್ಭವನ್ನಾದರೂ ಕಾಯಬೇಕು. ಹಾಗೆ ಅವರು ಸಮಯ ಕಾಯುತ್ತಿದ್ದರು.

ಆ ಸಂದರ್ಭವೂ ಬಂತು. ಲಾಹೋರಿನಲ್ಲಿ ಮಹಾರಾಜನ ಮುದ್ದಿನ ಮಗ ನೈನಿಹಾಲ್ ಸಿಂಹನಿಗೆ ವಿವಾಹ ನಿಶ್ಚಯವಾಯಿತು. ಸೀಮಾ ಪ್ರಾಂತವನ್ನುಳಿದು ಉಳಿದ ಎಲ್ಲ ಕಡೆಗಳಿಂದ ಸಿಖ್ ಸೈನಿಕರು ವಿವಾಹವನ್ನು ನೋಡಲೆಂದು ಲಾಹೋರಿಗೆ ಮರಳಿದರು. ಇದೇ ಸಮಯವೆಂದು ಶತ್ರುಗಳು ಭಾರಿ ಸಂಖ್ಯೆಯಲ್ಲಿ ಬಂದು ಜಮರೋದನ್ನು ಮುತ್ತಿದರು.

ದುರ್ಗಾಧಿಪತಿ ಮಹಾಸಿಂಹ ಪೇಚಿಗೆ ಸಿಕ್ಕಿಕೊಂಡ. ಹೋರಾಡಲು ಬೇಕಾದಷ್ಟು ಸೈನ್ಯ ಈಗ ದುರ್ಗದಲ್ಲಿಲ್ಲ. ಪೇಶಾವರಿಗೆ ಸುದ್ದಿ ತಿಳಿಸೋಣ ಎಂದರೆ ಶತ್ರುಗಳು ಎಲ್ಲ ದಾರಿಗಳನ್ನು ತುಂಬಾ ಎಚ್ಚರಿಕೆಯಿಂದ ಕಾಯುತ್ತಿದ್ದಾರೆ. ತಾನೇನು ಮಾಡಬೇಕು? ಅಷ್ಟರಲ್ಲಿ ಹರಶರಣ ಕೌರ್, ಏಕೋ ಆ ಹೊತ್ತಿಗೆ ಆ ದುರ್ಗದಲ್ಲಿದ್ದವಳು, ಮತ್ತೆ ತಾಯ್ನಾಡಿನ ಸೇವೆಗೆ ಬಂದಳು. ಪೇಶಾವರ್‌ಗೆ ಸುದ್ದಿ ಮುಟ್ಟಿಸುವ ಹೊಣೆಯನ್ನು ತಾನು ಹೊತ್ತಳು. ಸರಿ ರಾತ್ರಿಯಲ್ಲಿ ಬೆಕ್ಕಿನಂತೆ ಸದ್ದು ಮಾಡಿ ನಾಗಾಲಿಯಲ್ಲಿ ನಡೆದು ದುರ್ಗದಿಂದ ತಪ್ಪಿಸಿಕೊಂಡು ಹೋದಳು. ಕೆಲವೇ ಗಂಟೆಗಳಲ್ಲಿ ಸುರಕ್ಷಿತವಾಗಿ ಆಕೆ ಪೇಶಾವರನ್ನು ತಲುಪಿದ ಕುರುಹಾಗಿ ಗುಂಡಿನ ಸಪ್ಪಳ ಜಮ್‌ರೋಂದಿಗೆ ಕೇಳಿಸಿತು.

ಒಂದು ಗುಂಡು ಹರಿಸಿಂಹನ ಗಂಡೆದೆಯನ್ನು ಹೊಕ್ಕಿತು.

ಪೇಶಾವರಿನಲ್ಲಿ ಹರಿಸಂಹ ಆ ವೇಳೆಗೆ ರೋಗಿಯಾಗಿ ಬಳಲುತ್ತಿದ್ದ. ವೈದ್ಯರು ಓಡಾಡಲೇಬಾರದು ಎನ್ನುವಷ್ಟು ಆತನ ಆರೋಗ್ಯ ಹದಗೆಟ್ಟಿತ್ತು. ಆದರೆ ಕೌರ್ ತಂದ ಸುದ್ದಿ ಕೇಳಿದ ಯಾವ ವೀರ ತಾನೇ ಸುಮ್ಮನೆ ಕೂರಬಲ್ಲ? ನಲ್ವಾನಿಗಂತೂ ಅದು ಸಾಧ್ಯವೆ ಇಲ್ಲ. ವೈದ್ಯರ ಚಿಕಿತ್ಸೆಗಿಂತ ಶತ್ರುಗಳ ಆಹ್ವಾನವೇ ಅವನನ್ನು ಚೇತರಿಸುವಂತೆ ಮಾಡಿತೋ ಎನ್ನುವಷ್ಟು ಉತ್ಸಾಹದಿಂದ ತನ್ನ ಸೈನ್ಯವನ್ನು ತೆಗೆದುಕೊಂಡು ಶೀಘ್ರವಾಗಿ ಜಮರೋದಿಗೆ ಬಂದ. ಆತ ಬಂದುದನ್ನು ಕಂಡ ಮಹಾಸಿಂಹ ಇತ್ತ ಕೋಟೆಯ ಬಾಗಿಲು ತೆಗೆದು ತಾನೂ ಶತ್ರುಗಳ ಮೇಲೆ ಬಿದ್ದ. ನಲ್ವಾ ಬಂದ ಎಂಬ ಸುದ್ದಿಯೇ ಶತ್ರುಗಳ ಕುಸಿತಕ್ಕೆ ಸಾಕಾಯಿತು. ಅವನ ಸೈನಿಕರ ಪರಾಕ್ರಮ ಅವರನ್ನು ಹಿಮ್ಮೆಟ್ಟಿಸಿತು.

ಹಿಮ್ಮೆಟ್ಟುತ್ತಿರುವ ಆ ಸೇನೆಯನ್ನು ಹಾಗೇ ಏಕೆ ಬಿಡಬೇಕು? ಆದಷ್ಟೂ ಹಿಂಬಾಲಿಸಿ ಅದನ್ನು ಘಾಸಿ ಮಾಡಬೇಕು. ಸಾಧ್ಯವಾದಷ್ಟೂ ಶತ್ರುವಿನ ಜಾಗವನ್ನು ಹಿಡಿದು ಜಮಾಯಿಸಿ ಕೂರಬೇಕು. ಮಹಾಸಿಂಹ ಶತ್ರುಗಳ ಬೆನ್ನು ಹತ್ತಿದ. ಹರಿಸಿಂಹನು ಸುಮ್ಮನೆ ಹೇಗೆ ಕುಳಿತಾನು? ಅವನ ಸ್ನೇಹಿತರು, ಸೈನಿಕರು ಬೇಡವೆಂದು ಎಷ್ಟೆಷ್ಟೋ ಹೇಳಿ ನೋಡಿದರು. ಬಳಲಿರುವುದರಿಂದ ವಿಶ್ರಾಂತಿ ಪಡೆಯಲು ಒತ್ತಾಯಿಸಿದರು. ಆದರೆ ಒಬ್ಬೊಬ್ಬ ದುಷ್ಟನನ್ನೂ ಶಿಕ್ಷಿಸುತ್ತೇನೆ, ಜೀವದುಸಿರು ಆದರೆ ಒಬ್ಬೊಬ್ಬ ದುಷ್ಟನನ್ನೂ ಶಿಕ್ಷಿಸುತ್ತೇನೆ, ಜೀವದುಸಿರು ಇರುವವರೆಗೆ ಹಿಂಸೆಗೊಳಗಾದ ಸೋದರಿಯರ ಕಣ್ಣೀರು ಒರೆಸಲು ಈ ಬಾಳು ಮುಡಿಪಾಗಿಡುತ್ತೇನೆ ಎಂದು ಪ್ರತಿಜ್ಞೆತೊಟ್ಟ ವೀರ ನಲ್ವಾ  ಅವರ ಒತ್ತಾಯಕ್ಕೆ ಬಾಗಲೇ ಇಲ್ಲ. ಕುದುರೆ ಏರಿ ಸಿಂಹನೊಂದಿಗೆ ತಾನೂ ಶತ್ರುಗಳ ಬೆನ್ನಟ್ಟಿದ.

ಓಡುವ ಶತ್ರುಸೈನ್ಯ ಖೈಬರ್ ಘಾಟಿನಲ್ಲಿ ಆಶ್ರಯ ಪಡೆಯಿತು. ಸಿಖ್ ಸೈನ್ಯದ ಪ್ರಗತಿಯನ್ನು ತಡೆಯಲು ಶತ್ರುಗಳಿಗೆ ಖೈಬರ್‌ನ ಇಕ್ಕಟ್ಟಿನ ದಾರಿಗಿಂತಲೂ ಆಯಕಟ್ಟಿನ ಜಾಗ ಇನ್ನಾವುದು?  ಅವರ ಸೇನಾಪತಿ ಶಮಸಖಾನ್ ಇಲ್ಲೇ ತನ್ನ ರಕ್ಷಣೆಯನ್ನು ಸಜ್ಜುಗೊಳಿಸಿದ. ಬೆನ್ನಟ್ಟಿ ಬಂದ ಸಿಖ್ ವೀರರಿಗೆ ಇಲ್ಲೀಗ ಗುಂಡಿನ ಸ್ವಾಗತ ಕಾದಿತ್ತು. ತೋಪುಗಳಿಂದ ಬೆಂಕಿಯ ಮಳೆ ಸುರಿಯಿತು. ಸಿಖ್ಖರೂ ವೀರಾವೇಶದಿಂದ ಪ್ರತ್ಯುತ್ತರ ಕೊಟ್ಟರು. ಆದರೆ ಅಷ್ಟರಲ್ಲಿ ಎಲ್ಲಿಂದಲೋ ಹಾರಿ ಬಂದ ಒಂದು ಗುಂಡು ಹರಿಸಿಂಹನ ಗಂಡೆದೆಯನ್ನು ಹೊಕ್ಕಿತು. ರಕ್ತ ಧಾರಾಕಾರವಾಗಿ ಸುರಿಯಿತು.

ಹರಿಸಿಂಹ ಒಂದರೆಕ್ಷಣ ಚಿಂತಿಸಿದ. ತನ್ನ ಸಾವು ಈಗ ನಿಶ್ಚಿತವಾಗಿತ್ತು. ತಾನೇನು ಮಾಡಬೇಕು ಎಂಬ ನಿರ್ಧಾರಕ್ಕೆ ಬರಲು ಆ ವೀರನಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ತಕ್ಷಣವೇ ಕುದುರೆಯ ಕಡಿವಾಣ ಜಗ್ಗಿ ಅದನ್ನು ಹಿಂತಿರುಗಿಸಿ ನಾಗಾಲೋಟದಿಂದ ಜಮರೋದಿನ ಕಡೆ ಹೊರಟ. ತನ್ನ ಯಜಮಾನನ ಮನಸ್ಸಿನಲ್ಲಿ ಏನಿದೆ ಅನ್ನುವುದು ಅಷ್ಟು ದಿನ ಅವನ ಜೊತೆಗಿದ್ದ ಆ ಪ್ರಾಣಿಗೆ ತಿಳಿಯದೇ ಇದೆಯೇ? ಒಂದಕ್ಕೆರಡು ವೇಗದಿಂದ ಜೊಲ್ಲು ಸುರಿಸಿ ತೇಕುತ್ತಾ ಓಡಿ ಜಮರೋದನ್ನು ತಲುಪಿತು. ಆ ವೇಳೆಗಾಗಲೇ ಅದರ ವೀರ ಯಜಮಾನನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮಾತೃ ಭೂಮಿಯ ಸ್ವಾತಂತ್ರ್ಯಕ್ಕಾಗಿ, ಅಬಲೆಯರ ರಕ್ಷಣೆಗಾಗಿ ತಾನು ಬಾಲ್ಯದಲ್ಲೇ ತೊಟ್ಟ ವೀರಪ್ರತಿಜ್ಞೆಯನ್ನು ಯಶಸ್ವಿಯಾಗಿ ಪೂರೈಸಿ ಕೀರ್ತಿಯ ಸ್ವರ್ಗದಲ್ಲಿರಲು ಅದು ಹೊರಟು ಹೋಗಿತ್ತು.

ಜಮರೋದಿನ ಜನ ಕುದುರೆಯ ಮೇಲಿಂದ ಆತನ ಶವವನ್ನು ಕೆಳಗೆ ಇಳಿಸಿದರು. ದೂತರನ್ನಟ್ಟಿ ಮಹಾರಾಜಾ ರಣಜಿತ್ ಸಿಂಹನಿಗೆ ವೀರನ ಅಂತ್ಯವನ್ನು ತಿಳಿಸಿದರು. ೧೮೩೭ರ ಏಪ್ರಿಲ್ ಮೂವತ್ತರಂದು ರಾತ್ರಿ ಎಲ್ಲರೂ ಸೇರಿ ಉಚಿತ ಗೌರವದೊಡನೆ ಆತನ ಅಂತ್ಯ ಸಂಸ್ಕಾಋ ನಡೆಸಿದನು. ನಲ್ವಾ ಅಮರನಾದ. ಮುಂಬರುವ ಪೀಳಿಗೆಗಳ ಧ್ರುವ ತಾರೆಯಾದ.