ಹರಿಹರ ಭಕ್ತ ಕವಿ. ಶಿವನನ್ನು ಅರ್ಚಿಸುವುದು, ಅರ್ಚನೆಯ ಆನಂದದಲ್ಲಿ ವ್ಯಕ್ತಿತ್ವವನ್ನು ಕರಗಿಸುವುದು, ಶಿವನ ಕೃಪೆಯನ್ನು ಸಂಪಾದಿಸುವುದು ಬದುಕಿನ ಗುರಿ ಎಂಬ ನಂಬಿಕೆಯಲ್ಲಿ ಬದುಕಿದವನು. ಈ ಒಂದು ನಂಬಿಕೆಯೆ ಅವನ ವ್ಯಕ್ತಿತ್ವದ ತಳಹದಿಯಾದದ್ದರಿಂದ, ತನ್ನನ್ನು ಬಹಿರಂಗವಾಗಿ ನಿಯಂತ್ರಿಸುವ ಎಲ್ಲ ರೀತಿಯ ಪ್ರಭುಶಕ್ತಿಯನ್ನೂ ನಿರಾಕರಿಸಿ ಸ್ವತಂತ್ರವಾಗಿ ನಿಂತವನು; ಅಷ್ಟೇ ಅಲ್ಲ, ಅಂಥ ಪ್ರಭುಶಕ್ತಿಯ ಆಶ್ರಯದಿಂದ ದೊರೆಯಬಹುದಾದ ಸುಖ, ಸಂಪತ್ತು, ಕೀರ್ತಿ, ಗೌರವ ಇತ್ಯಾದಿ ಆಮಿಷಗಳನ್ನು ಅತ್ಯಂತ ನಿಕೃಷ್ಟವಾಗಿ ಕಂಡು, ತನ್ನ ವ್ಯಕ್ತಿತ್ವವನ್ನು ಆ ಪರಾತ್ಪರವಾದ ಶಿವನ ಸೇವೆಗೆ ಸಮರ್ಪಿಸಿಕೊಂಡವನು.

ಹರಿಹರನ ಈ ನಿಲುವು ಶಿವಪರವಾಗಿದ್ದರೂ ಜೀವನವಿರೋಧಿಯಾಗಿಲ್ಲ ಎನ್ನುವುದೇ ಹರಿಹರನ ದರ್ಶನವನ್ನು ಕುರಿತು ಹೇಳುವಾಗ ಗುರುತಿಸಬೇಕಾದ ಮೊದಲ ಸಂಗತಿ.[1] ಭಕ್ತ ಕವಿಯಾದ ಹರಿಹರ, ಪರಮ ವೈರಾಗ್ಯವನ್ನೆ ತಾತ್ವಿಕವಾಗಿ ಎತ್ತಿ ಹಿಡಿದು, ಈ ಲೋಕದ ಭೋಗ ಐಶ್ವರ್ಯ ಇತ್ಯಾದಿಗಳು ಅಲ್ಪವೆಂಬ ಅರಿವನ್ನು ಬೆಳೆಯಿಸಿಕೊಂಡರೂ, ಆ ಕಾರಣಕ್ಕಾಗಿ ಇಹದ ಬದುಕು ತುಚ್ಛವೆಂದಾಗಲಿ, ಸಂಪೂರ್ಣ ನಿರಾಕರಣೆಗಷ್ಟೇ ಅರ್ಹವಾದದ್ದೆಂದಾಗಲಿ ರಭಸದಿಂದ ಹೇಳುವ ಸ್ವಭಾವದವನಲ್ಲ. ಈ ಬದುಕು ಒಂದು ಸಾಧನಾರಂಗ, ಶಿವಾರ್ಚನೆಗೆ ಒಂದು ವೇದಿಕೆ, ಶಿವ ಕೃಪೆಯ ಸಂಪಾದನೆಗೆ ಒಂದು ಮಾರ್ಗ ಎಂಬುದನ್ನು ಮರೆಯಲಿಲ್ಲ.

ಹರಿಹರ ವಚನಕಾರರ ವಿಚಾರ ಕ್ರಾಂತಿಯ ಅನಂತರ ಬಂದವನು ಎಂಬುದನ್ನು ನೆನೆದರೆ, ಹರಿಹರನ ಈ ಜೀವನದರ್ಶನ ಈ ರೀತಿಯಾದದ್ದು ಆಶ್ಚರ್ಯವಲ್ಲ ಎಂದು ಯಾರಿಗಾದರೂ ಅನಿಸುತ್ತದೆ. ವಚನಕಾರರ ಬದುಕು, ಚಿಂತನೆ, ಅವರ ಅಭಿವ್ಯಕ್ತಿಯಲ್ಲಿನ ಹೊಸತನ, ಅವರ ಒಲವು-ನಿಲುವುಗಳು ಹರಿಹರನ ಮೇಲೆ ಎಂತಹ ಪ್ರಭಾವವನ್ನು ಬೀರಿವೆ, ಪರಿಣಾಮವನ್ನು ಮಾಡಿವೆ ಎಂಬುದನ್ನು ಮತ್ತೆ ಬೇರೆಯಾಗಿ ಹೇಳಬೇಕಾಗಿಲ್ಲ. ಇಹ-ಪರವನ್ನು ಕುರಿತು ವಚನಕಾರರು ತಾಳಿದ ಧೋರಣೆಯನ್ನು ಹರಿಹರ ಮುಖ್ಯವಾಗಿ ನೂತನರನ್ನು ಕುರಿತು ಬರೆದ ರಗಳೆಗಳಲ್ಲಿ ಎತ್ತಿ ಹಿಡಿದಿದ್ದಾನೆ.

ಹರಿಹರನ ರಗಳೆಗಳ ಹಿಂದೆ ಒಂದು ಸಿದ್ಧ ಮಾದರಿ ಇದೆ. ಅದು ಪುರಾತನರನ್ನು ಕುರಿತ ರಗಳೆಗಳಲ್ಲಿ ಒಂದು ತೆರನಾಗಿದ್ದರೆ, ನೂತನರನ್ನು ಕುರಿತ ರಗಳೆಗಳಲ್ಲಿ ಬೇರೊಂದು ತೆರನಾಗಿದೆ. ಪುರಾತನರ ರಗಳೆಗಳ ಪ್ರಕಾರ, ಅದರಲ್ಲಿನ ಕಥಾನಾಯಕರಿಗೆ ಶಿವಭಕ್ತಿ ಜನ್ಮಸಿದ್ಧವಾದದ್ದು. ಹುಟ್ಟಿನೊಡನೆ ಬಂದ ಈ ಶಿವಭಕ್ತಿ ಬಹುಮಟ್ಟಿಗೆ ಗುಪ್ತವಾಗಿ ಇದ್ದುದು, ಕಾಲಕ್ರಮೇಣ ಶಿವನ ಇಚ್ಛೆಯಂತೆ ತಕ್ಕ ಕಾಲದಲ್ಲಿ ಅನಾವರಣವಾಗುತ್ತದೆ. ಶಿವನೇ ಒಂದು ಸಂದರ್ಭವನ್ನು ನಿರ್ಮಿಸಿ ತನ್ನ ಭಕ್ತರ ಅನುಪಮವಾದ ಭಕ್ತಿಯ ‘ಪ್ರದರ್ಶನ’ಕ್ಕೆ ಒಂದು ಪರೀಕ್ಷಾವಕಾಶವನ್ನು ಕಲ್ಪಿಸಿ, ಅದು ಝಗ್ಗನೆ ಪ್ರಕಟವಾಗುವುದನ್ನು ಕಂಡು ತಾನೇ ಹಿಗ್ಗಿ, ಅದನ್ನು ತನ್ನ ಪ್ರಿಯತಮೆಯಾದ ಪಾರ್ವತಿಗೋ, ಆಪ್ತನಾದ ನಂದೀಶನಿಗೋ, ಮತ್ತಿತರ ಪರಿವಾರದವರಿಗೋ ತೋರಿಸಿ, ಹೇಳಿ, ಹೊಗಳಿ ಕೊಂಡಾಡುವುದು, ಅಥವಾ ಆಯಾ ಭಕ್ತರ ಮಹಿಮಾತಿಶಯಗಳನ್ನು ವ್ಯಾಖ್ಯಾನ ಮಾಡುವುದು, ಅನಂತರ ಅವರಿಗೆ ಗಣಪದವಿಯನ್ನು ಕರುಣಿಸುವುದು -ಇದು ಪುರಾತನರ ರಗಳೆಗಳ ರಚನೆಯಲ್ಲಿ ಹರಿಹರನು ಅನುಸರಿಸುವ ಒಂದು ಸಿದ್ಧ ಮಾದರಿ[2] ಇಲ್ಲೆಲ್ಲಾ ಮುಖ್ಯಪಾತ್ರಗಳು ಶಿವಸಂಕಲ್ಪದ ಕೀಲು ಕೊಟ್ಟು ಇರಿಸಿದಂತೆ ಒಂದೇ ವಿಧಾನದಲ್ಲಿ ನಡೆದುಕೊಳ್ಳುತ್ತವೆ.

ಹರಿಹರನ ರಚನಾತಂತ್ರದ ಇನ್ನೊಂದು ಮಾದರಿ ಎಂದರೆ, ಅವನ ರಗಳೆಯ ಕಥಾನಾಯಕರು-ಇದು ಮುಖ್ಯವಾಗಿ ನೂತನರನ್ನು ಕುರಿತ ರಗಳೆಗಳಲ್ಲಿ-ತಾವು ಕೈಲಾಸದಲ್ಲಿ ಮಾಡಿದ ಯಾವುದೋ ಪ್ರಮಾದದಿಂದಾಗಿ, ಶಪಿತರಾಗಿಯೋ, ನಿರ್ದೇಶಿತರಾಗಿಯೋ, ಅನುಗ್ರಹೀತರಾಗಿಯೋ ಈ ಮರ್ತ್ಯಕ್ಕೆ ಇಳಿದು ಬಂದು, ಲೋಕೋದ್ಧಾರಕರಾಗಿ, ತಮ್ಮನ್ನೂ ಹಾಗೂ ಸುತ್ತಣ ಲೋಕವನ್ನೂ ತಿದ್ದುತ್ತಾ ಮತ್ತೆ ಕೈಲಾಸಕ್ಕೆ ಹಿಂದಿರುಗುವಂತೆ ಚಿತ್ರಿತವಾಗಿರುವುದು. ಬಸವ, ಅಲ್ಲಮ, ಅಕ್ಕ ಮಹಾದೇವಿ-ಇಂಥವರನ್ನು ಕುರಿತು ಹರಿಹರನು ಬರೆದ ರಗಳೆಗಳ ರಚನಾಕ್ರಮ ಇದು. ಕೈಲಾಸದಲ್ಲಿ ವೃಷಭಮುಖನೆಂಬ ಗಣೇಶ್ವರನು ಶಿವನ ಅಪ್ಪಣೆಯ ಪ್ರಕಾರ ಪುಷ್ಪ ಪ್ರಸಾದವನ್ನು ವಿನಿಯೋಗಿಸುವಾಗ, ಷಣ್ಮುಖನಿಗೆ ಕೊಡುವುದನ್ನು ಮರೆತ. ಶಿವನು, ಪ್ರಸಾದವನ್ನು ಎಲ್ಲರಿಗೂ ಕೊಟ್ಟೆಯಾ ಎಂದು ಕೇಳಿದಾಗ, ವೃಷಭಮುಖನು ಕೊಟ್ಟೆನೆಂದು ಸುಳ್ಳು ಹೇಳುತ್ತಾನೆ. ಹೀಗೆ ಸುಳ್ಳು ಹೇಳಿದ ಕಾರಣದಿಂದ ಶಿವನು ಆಕ್ಷೇಪಿಸಿ “ಇದಱಿಂದ [ವೊಂ]ದು ಜನನಂ ನಿನಗೆ ದೊರಕಿತ್ತು, ಮುದದಿಂದ ಹೋಗಯ್ಯ ಜನನವಂ ನೀ ಹೊತ್ತು, ಧರಣಿಯೊಳು ವೃಷಭಮುಖ ಹುಟ್ಟು”- ಎಂದು ಕಳುಹಿಸಿ ಕೊಡುತ್ತಾನೆ. ಈ ವೃಷಭಮುಖನೇ ಮರ್ತ್ಯದಲ್ಲಿ ಬಸವಣ್ಣನವರಾಗಿ ಹುಟ್ಟುತ್ತಾನೆ. ಒಮ್ಮೆ ಕೈಲಾಸದಲ್ಲಿ ಗುಪ್ತಗಣನಾಥನೊಬ್ಬನು ಪಾರ್ವತಿಗೆ ನಮಸ್ಕರಿಸುತ್ತಿರುವಾಗ ಅವನ ಕಾಲು ಮಹದೇವಿ ಎಂಬ ಹೆಸರಿನ ಭಕ್ತೆಯೊಬ್ಬಳಿಗೆ ತಾಕುತ್ತದೆ. ಆಗ ಆಕೆ ಗುಪ್ತಗಣನಾಥನನ್ನು ಪಾರ್ವತಿಯ ಸಮ್ಮುಖದಲ್ಲೇ ‘ಭವಿ’ ಎಂದು ಬಯ್ಯುತ್ತಾಳೆ. ಆಗ ಭಕ್ತನನ್ನು ಭವಿ ಎಂದು ಕರೆದ ತಪ್ಪಿಗಾಗಿ, ಮಹದೇವಿ ಒಂದು ಜನ್ಮವನ್ನು ಮರ್ತ್ಯದಲ್ಲಿ ಪಡೆದು, ಅನಂತರ ಕೈಲಾಸಕ್ಕೆ ಬರಬೇಕೆಂದು ಪಾರ್ವತಿಯು ಶಾಪ ಕೊಡುತ್ತಾಳೆ. ಈಕೆಯೇ ಬಸವಣ್ಣನವರ ಸಮಕಾಲೀನಳಾದ ಅಕ್ಕಮಹಾದೇವಿ. ಹೀಗೆಯೇ ಒಮ್ಮೆ ಕೈಲಾಸದಲ್ಲಿ ನಿರ್ಮಾಯನೆಂಬ ಗಣೇಶ್ವರನು, ಸುರಸತಿಯರಲ್ಲಿ ಒಬ್ಬಳನ್ನು ಅಳುಪಿಂದ ನೋಡಿದ ಕಾರಣದಿಂದ, ಮರ್ತ್ಯದಲ್ಲಿ ಅಲ್ಲಮನೆಂಬ ಹೆಸರಿನಿಂದ ಜನಿಸುವ ಆದೇಶವನ್ನು ಪಡೆಯುತ್ತಾನೆ. ಹೀಗೆ ಹುಟ್ಟಿದವನೇ ಅಲ್ಲಮಪ್ರಭು. ಬಸವ, ಅಲ್ಲಮ, ಅಕ್ಕಮಹಾದೇವಿ ಇಂತಹ ಚಾರಿತ್ರಿಕ ವ್ಯಕ್ತಿಗಳ ಜನನಕ್ಕೆ ಹರಿಹರನು ತನ್ನ ಕಾವ್ಯ ಸಂದರ್ಭದಲ್ಲಿ ಕಲ್ಪಿಸಿದ ಪೌರಾಣಿಕ ಹಿನ್ನೆಲೆ ಇಂಥದು. ಹರಿಹರನ ಈ ಕಲ್ಪನೆಯನ್ನು ಮುಂದಿನ ಶೂನ್ಯ ಸಂಪಾದನೆಕಾರರು ಪ್ರತ್ಯಕ್ಷವಾಗಿ ಪ್ರತಿಭಟಿಸಿದ್ದಾರೆ; ಮತ್ತೆ ಕೆಲವರು ತಮ್ಮ ವಿರೋಧವನ್ನು ಪರೋಕ್ಷವಾಗಿ ಪ್ರಕಟಿಸಿದ್ದಾರೆ. ಆದರೆ ನಮಗೆ ತೋರುವ ಮಟ್ಟಿಗೆ ಹರಿಹರನ ಕಲ್ಪನೆ ಪ್ರತಿಭಟನಾರ್ಹವಾದದ್ದೆಂದೇನೂ ಅನಿಸುವುದಿಲ್ಲ; ಅದರ ಬದಲು  ಹರಿಹರನ ಜೀವನ ದರ್ಶನದ ಬಹು ಮುಖ್ಯವಾದ ಅಂಶವೊಂದು ಈ ಕೆಲವು ರಗಳೆಗಳ ಪೂರ್ವಪೀಠಿಕೆಯಲ್ಲಿ ಅಭಿವ್ಯಕ್ತವಾಗಿದೆ ಎಂದು ತೋರುತ್ತದೆ.

“ಮೂಲತಃ ಅಮರ್ತ್ಯಚೇತನಗಳಾದ ಬಸವಾದಿಗಳು ಕೈಲಾಸದಲ್ಲಿ ಮಾಡಿದ ಯಾವುದೋ ತಪ್ಪಿನ ಕಾರಣದಿಂದ ಈ ನೆಲಕ್ಕೆ ಅವತರಿಸಿದರೆಂಬ ಹರಿಹರನ ಮಾತಿನಲ್ಲಿ, ಈ ಮರ್ತ್ಯವೆಂಬುದು ವ್ಯಕ್ತಿಗಳು ಕೈಲಾಸದಂಥ ಅಮರ್ತ್ಯ ಭೂಮಿಕೆಯಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಸಾಧನಾರಂಗ, ಸಂಸ್ಕಾರಕ್ಷೇತ್ರ ಎನ್ನುವ ಅರ್ಥ ಧ್ವನಿತವಾಗುತ್ತದೆ. ಇದು ವೀರಶೈವ ಧರ್ಮವು ಮರ್ತ್ಯವನ್ನು ಕುರಿತು ತಾಳುವ ನಿಲುವಿಗೂ ಸಮ್ಮತವಾಗಿದೆ. ವೀರಶೈವ ಧರ್ಮದ ಪ್ರಕಾರ ಈ ಮರ್ತ್ಯವೆಂಬುದುದು ಕೇವಲ ಮಿಥ್ಯೆಯಲ್ಲ, ಮತ್ತು ಜೀವ ತಪ್ಪಿಸಿಕೊಂಡು ಓಡಬೇಕಾದ ಸ್ಥಳವಲ್ಲ: ಇದೊಂದು ಆತ್ಮಸಂಸ್ಕಾರ ಕ್ಷೇತ್ರ. ಬಸವಣ್ಣನವರ ಮಾತಿನಲ್ಲಿ ಹೇಳಬೇಕಾದರೆ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ.’ ಇಲ್ಲಿ ಜೀವವು ಪುಟಗೊಂಡು ಕಾಳಿಕೆಯನ್ನು ಕಳೆದುಕೊಂಡು, ಶಿವಚಾರಿತ್ರದ ಮುದ್ರೆಯನ್ನೊತ್ತಿಸಿಕೊಂಡು ಇಲ್ಲಿಯೂ ಸಲ್ಲುವ ಅಲ್ಲಿಯೂ ಸಲ್ಲುವ ಯೋಗ್ಯತೆಯನ್ನು ಪಡೆಯಬೇಕು. ಆದಕಾರಣ ಕೈಲಾಸದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲೆಂದು ಬಸವಾದಿಗಳು ಈ ಮರ್ತ್ಯಕ್ಕೆ ಬಂದರೆಂದು ಭಾವಿಸುವುದರಿಂದ, ಈ ಮರ್ತ್ಯದ ಬೆಲೆ ಹೆಚ್ಚುತ್ತದೆ. ಈ ಜೀವ ತನ್ನ ಸಂಸ್ಕಾರಕ್ಕೆ, ಆಧ್ಯಾತ್ಮಿಕ ಸಾಧನೆಗೆ ಈ ಮರ್ತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎನ್ನುವುದು ಬಹು ಮಹತ್ವದ ಸಂಗತಿಯಾಗಿದೆ.”[3]

ಈ ಮರ್ತ್ಯದ ಮಹತ್ವವನ್ನು ಹರಿಹರನ ರಗಳೆಯ ಎಲ್ಲಾ ಕಥಾನಾಯಕರೂ ಒಪ್ಪಿಕೊಳ್ಳುತ್ತಾರೆ. ಹಾಗೆ ನೋಡಿದರೆ ಹರಿಹರನ ರಗಳೆಗಳ ಮುಖ್ಯ ಪಾತ್ರಗಳೆಲ್ಲಾ ಸಂಸಾರಿಗಳೇ, ಗೃಹಸ್ಥರೇ. ಅವರು ಯಾರೂ ಶಿವಭಕ್ತಿಯ ಹೆಸರಿನಲ್ಲಿ ಹೆಣ್ಣನ್ನಾಗಲೀ, ಹೊನ್ನನ್ನಾಗಲೀ ಕಡೆಗಣಿಸಿ ನಡೆದವರಲ್ಲ; ಹಾಗೆಂದು ಅವುಗಳಲ್ಲೆ ನಿಮಗ್ನರಾದವರೂ ಅಲ್ಲ. ಈ ಲೋಕದ ರೂಪ, ರಂಗು, ಅದು ತರುವ ಸುಖ ಇದೆಲ್ಲವೂ ತಿರಸ್ಕರಣೀಯವೆಂದು- ಜೈನಕಾವ್ಯಗಳಲ್ಲಿನ ವೈರಾಗ್ಯ ಪರವಾದ  ಪಾತ್ರಗಳಂತೆ- ಪ್ರತಿಭಟಿಸುವ, ನಿಕೃಷ್ಟವಾಗಿ ನೋಡುವ ರಭಸ ಇಲ್ಲಿಲ್ಲ. ಇವರಾರೂ ಪರದ ಹೆಸರಿನಲ್ಲಿ ಇಹವನ್ನು ನಿರಾಕರಿಸುವುದಿಲ್ಲ. ಹರಿಹರನು ತನ್ನ ಪುಷ್ಪ ರಗಳೆಯಲ್ಲಿ ಎಷ್ಟೊಂದು ವಿರಾಮವಾಗಿ, ಹೂದೋಟದ ಸೊಗಸನ್ನು, ಒಂದೊಂದು ಹೂವಿನ ಸೊಗಸು ಸ್ವಭಾವಗಳನ್ನು ಬಿಡುಗಣ್ಣಿನಿಂದ ಬಣ್ಣಿಸುತ್ತಾನೆ! ‘ಗಿರಿಜಾ ಕಲ್ಯಾಣ’ದಲ್ಲಿ ತಪಸ್ಸಿಗೆ ಕುಳಿತ ಪಾರ್ವತಿಯ ಸುತ್ತ ಬಂದು ಹೋಗುವ ಋತುಗಳ ರಿಂಗಣಗುಣಿತವನ್ನೂ, ಅವುಗಳ ವೈವಿಧ್ಯವನ್ನೂ ಉತ್ಸಾಹದಿಂದ ವರ್ಣಿಸುತ್ತಾನೆ. ಆದರೆ ಹೂವುಗಳ ಸೊಗಸೆಲ್ಲವೂ ಭೋಗಿಗಳ ಸುಖಕ್ಕಲ್ಲ, ಅದೇನಿದ್ದರೂ ಮಹಾದೇವನ ಸಿರಿಮುಡಿಯ ಸಿಂಗಾರಕ್ಕಾಗಿ; ಋತುಗಳ ರಿಂಗಣಗುಣಿತವೆಲ್ಲವೂ ಪಾರ್ವತಿಯನ್ನು ಶಿವಸಾಕ್ಷಾತ್ಕಾರಕ್ಕೆ ಅನುಗೊಳಿಸುವ ಪೂರ್ವಸಿದ್ಧತೆಗಾಗಿ- ಎನ್ನುವುದೇ ಅವನ ನಿಲುವು. ನಂಬಿಯಣ್ಣನ ರಗಳೆ ಮತ್ತು ಮಲುಹಣನ ರಗಳೆಗಳಲ್ಲಿ ಕವಿ ರಮಣೀಯವಾದ ಭೋಗದ ಉತ್ಕಟವಾದ ವರ್ಣನೆಯನ್ನು ನಿಸ್ಸಂಕೋಚವಾಗಿ ತಂದಿದ್ದಾನೆ. ಆದರೆ ಈ ಎಲ್ಲ ಭೋಗವೂ ಕ್ರಮ ಕ್ರಮೇಣವಾಗಿ ‘ಯೋಗ’ವಾಗಿ ಪರಿವರ್ತಿತವಾಗುವ ಕ್ರಿಯೆಯನ್ನು ಕವಿ ಅತ್ಯಂತ ಸಹಜವಾಗಿ ಚಿತ್ರಿಸುತ್ತಾನೆ. ತಿರುನೀಲಕಂಠರ ರಗಳೆಯಲ್ಲಿ ತೊಂಬತ್ತು ವರ್ಷಗಳವರೆಗೆ ಸತಿಪತಿಯರು ಪರಸ್ಪರ ‘ಮುಟ್ಟಿದರೆ ಶಿವನಾಣೆ’ ಎಂಬುದನ್ನು ಅಖಂಡವಾಗಿ ಕಾಯ್ದುಕೊಂಡು ಬಂದು, ಮುಪ್ಪಿನ ಮುದುಕರಾದಾಗ, ಶಿವ ಅವರನ್ನು ಪರೀಕ್ಷೆಗೆ ಒಡ್ಡಿ ಅವರ ಮಹತ್ವವನ್ನು ಲೋಕಕ್ಕೆ ಪ್ರಕಟ ಮಾಡುತ್ತಾನೆ. ಆದರೆ ಈ ಸಂದರ್ಭದಲ್ಲಿ, ಉಳಿದ ಅನೇಕ ಶರಣರ ವಿಚಾರದಲ್ಲಿ ನಡೆದುಕೊಂಡಂತೆ ಅವರನ್ನೂ ವಿಮಾನವೇರಿಸಿ ಕೈಲಾಸಕ್ಕೆ ಕರೆದುಕೊಂಡು ಹೋಗಬಹುದಾಗಿತ್ತು; ಆದರೆ ಶಿವ ಹಾಗೆ ಮಾಡಲಿಲ್ಲ. ಯೌವನದಿಂದ ಮೊದಲುಗೊಂಡು ಅನೇಕ ವರ್ಷಗಳವರೆಗೆ ಅನುಭವಿಸಬಹುದಾಗಿದ್ದ ದಾಂಪತ್ಯ ಸುಖವನ್ನೆ ಬಿಟ್ಟುಕೊಟ್ಟು, ಒಬ್ಬರನ್ನೊಬ್ಬರು ಮುಟ್ಟದಂತೆ ‘ಆಣೆ’ಗಾಗಿ ಬದುಕಿದ ಈ ದಂಪತಿಗಳ ಮೇಲಿನ ಕನಿಕರದಿಂದ,  ಶಿವ ಅವರಿಗೆ ನವಯೌವನವನ್ನು ಕರುಣಿಸಿ, ‘ಇನ್ನಷ್ಟು ವರ್ಷ ಈ ಭೂಮಿಯ ಮೇಲೆ ಸುಖವಾಗಿ ಇದ್ದು ಅನಂತರ ನಮ್ಮಲ್ಲಿಗೆ ಬನ್ನಿ’ ಎನ್ನುತ್ತಾನೆ. ಇಲ್ಲಿ ಕಾಣುವ ಶಿವನ ನಿಲುವು ಗಮನಿಸಬೇಕಾದದ್ದು. ಅಲ್ಲದೆ ಈ ಮರ್ತ್ಯಭೋಗದ ವಿಚಾರದಲ್ಲಿ ಹರಿಹರನು ತಾಳಿದ ನಿಲುವು ಇದು ಎಂಬುದನ್ನೂ ಗುರುತಿಸಿಕೊಳ್ಳಬೇಕಾಗಿದೆ. ಭಕ್ತಿ ವೈರಾಗ್ಯಗಳ ಹೆಸರಿನಲ್ಲಿ, ಈ ಲೋಕದ ಭೋಗ ವೈಭವಗಳನ್ನು  ಉದ್ದೇಶಪೂರ್ವಕವಾಗಿ ಕೀಳ್ಗಳೆದು ನೋಡುವ ಜೀವನ ವಿರೋಧಿಯಾದ ನಿಲುವನ್ನು ಹರಿಹರನು ಎತ್ತಿಹಿಡಿಯಲಿಲ್ಲ. ಅದರ ಬದಲು ಇಹದ ಬದುಕಿನಲ್ಲೆ ಜೀವ ಪಕ್ವವಾಗುತ್ತ ಲೋಕದ ಭೋಗವನ್ನು ಯೋಗವನ್ನಾಗಿ ಪರಿವರ್ತಿಸುವುದು ಸಾಧ್ಯ ಎಂಬ ದರ್ಶನವನ್ನು ಪ್ರಕಟಿಸಿದ್ದಾನೆ.

ಹರಿಹರನ ಸಾಧನೆಯ ವಿಶೇಷತೆಯೆಂದರೆ ಭಕ್ತಿಯ ಒರೆಗಲ್ಲಿನಲ್ಲಿ ವರ್ಣ-ವರ್ಗಗಳ ಮೂಲವನ್ನು ತಿಕ್ಕಿ ಪರೀಕ್ಷಿಸಿ, ಎಲ್ಲಕ್ಕಿಂತ ಮಿಗಿಲಾದದ್ದು ‘ಭಕ್ತನಾಗಿರುವಿಕೆ’, ಎನ್ನುವುದನ್ನು ಎತ್ತಿ ಹಿಡಿದದ್ದು. ನಿಜವಾದ ಭಕ್ತನಾಗುವುದು, ಅಥವಾ ಶಿವನಿಗೆ ಪ್ರಿಯವಾಗುವುದು, ಎಲ್ಲಕ್ಕಿಂತ ಶ್ರೇಷ್ಠವಾದ ಪದವಿ ಎಂಬುದನ್ನು ಹರಿಹರನು ತನ್ನ ಎಲ್ಲ ರಗಳೆಗಳ ಮೂಲಕ ಪ್ರತಿಪಾದಿಸಿದ್ದಾನೆ. ಈ ಪದವಿಯ ಎದುರಿನಲ್ಲಿ ವರ್ಣವರ್ಗಗಳ ತರ-ತಮಗಳು ಯಾವ ಲೆಕ್ಕಕ್ಕೂ ಬರುವುದಿಲ್ಲ. ಆದುದರಿಂದಲೆ ಹರಿಹರನು ವರ್ಣ ಹಾಗೂ ವರ್ಗಗಳನ್ನು ಸಾಮಾಜಿಕ ನೆಲೆಯಲ್ಲಿ ನೋಡುವುದೇ ಇಲ್ಲ. ಆದರೆ ವಿವಿಧ ವರ್ಣ ಹಾಗೂ ವರ್ಗದಿಂದಲೇ ತನ್ನ ಕಥಾನಾಯಕರನ್ನು ಆರಿಸಿಕೊಂಡ ಹರಿಹರ, ಒಂದು ಅದ್ಭುತವಾದ ಸಾಮಾಜಿಕ ಕ್ರಾಂತಿಯನ್ನು ತನ್ನ ಕಾವ್ಯವಸ್ತುವಿನ ಮೂಲಕ ತಂದನೇನೋ ಎಂದು ಭಾಸವಾಗುತ್ತದೆ. ಅವನ ರಗಳೆಗಳ ಕಥಾನಾಯಕರೆಲ್ಲಾ ಸಾಮಾನ್ಯ ಸಾಮಾಜಿಕ ಸ್ತರದಿಂದ ಬಂದ ಜನಸಾಮಾನ್ಯರೇ. ತಿರುನೀಲಕಂಠ ಕುಶವ; ಚನ್ನಯ್ಯ ಮಾದಾರ ಕುಲದವನು; ಇಳೆಯಾಂಡ ಗುಡಿಮಾರ ಒಕ್ಕಲಿಗ; ಕಣ್ಣಪ್ಪ ಬೇಡರವನು; ಗುಂಡಯ್ಯ ಕುಂಬಾರ; ಅತಿಭಕ್ತ ಬೆಸ್ತರವನು; ತಿರುಕುರುಂಪೆ ತೊಂಡ ಅಗಸರವನು; ಅರಿವಾಳ್ತಾಂಡ ಕೂಲಿಯವನು. ಕನ್ನಡ ಸಾಹಿತ್ಯದಲ್ಲೇ, ಒಬ್ಬ ಬೇಡರವನು, ಕೂಲಿಯವನು, ಬೆಸ್ತರವನು, ಮಾದಾರ, ಕುಂಬಾರ, ಅಗಸ ಇತ್ಯಾದಿ ‘ಜನ’ಗಳು ಕಾವ್ಯದ ಕಥಾನಾಯಕರಾದುದು ಮೊಟ್ಟಮೊದಲಿಗೆ ದಂಗುಬಡಿಸುವ ಸಂಗತಿಯಾಗಿದೆ. ರಾಜಾಧಿರಾಜರೂ, ವೀರಾಧಿವೀರರೂ, ಪೌರಾಣಿಕ ವ್ಯಕ್ತಿಗಳೂ, ದೇವಾನುದೇವತೆಗಳೂ-ಕಾವ್ಯದ ನಾಯಕರಾಗಲು ಮಾತ್ರ ಅರ್ಹರೆಂಬ ಪರಂಪರಾಗತವಾದ ಸಾಹಿತ್ಯಕ ಧೋರಣೆಯನ್ನು ತಲೆಕೆಳಗುಮಾಡಿ, ಹರಿಹರನು ಮೊಟ್ಟಮೊದಲಿಗೆ ಜನಸಾಮಾನ್ಯರನ್ನು, ಅದರಲ್ಲೂ ‘ದಲಿತವರ್ಗ’ದವರನ್ನು ತನ್ನ ಕಥಾನಾಯಕರನ್ನಾಗಿ ಮಾಡಿಕೊಂಡದ್ದು ನಿಜಕ್ಕೂ ಕ್ರಾಂತಿಕಾರಕವಾದ ಬದಲಾವಣೆ ಎಂಬುದೇನೋ ನಿಜವೆ. ಆದರೆ ಆ ವ್ಯಕ್ತಿಗಳೆಲ್ಲಾ ಸಾಮಾಜಿಕವಾಗಿ ಸಾಮಾನ್ಯರಾದರೂ, ತಮ್ಮ ನಡವಳಿಕೆಯಿಂದ ಅಸಾಮಾನ್ಯರೇ; ಅಲ್ಲದೆ ಇವರು ಯಾವ ಸಾಮಾಜಿಕ ಸ್ತರಗಳಿಂದ ಬಂದಿದ್ದಾರೋ, ಆ ‘ವರ್ಗ’ವನ್ನು ಕೇವಲ ಹೆಸರಿಗೆ ಮಾತ್ರ ಪ್ರತಿನಿಧಿಸುತ್ತಾರೆಯೆ ಹೊರತು, ಆ ವರ್ಗದ ಉಸಿರನ್ನು ಖಂಡಿತವಾಗಿಯೂ ಪ್ರತಿನಿಧಿಸುವುದಿಲ್ಲ. ಅವರು ತಮ್ಮ ‘ವರ್ಗ’ ಸಾಮಾಜಿಕವಾಗಿ ಶೋಷಣೆಗೆ ಒಳಗಾದದ್ದನ್ನಾಗಲಿ, ಶೋಷಕರ ಮೇಲಿನ ಆಗ್ರಹವನ್ನಾಗಲೀ, ತತ್ಪರಿಣಾಮವಾದ ನೋವು-ಸಂಕಟ-ಬಡತನ ಇತ್ಯಾದಿಗಳನ್ನಾಗಲಿ ಹೇಳಿಕೊಳ್ಳುವುದೇ ಇಲ್ಲ. ಒಟ್ಟಿನಲ್ಲಿ ಅವರು ತಮ್ಮ ವರ್ಗದ ವೇದನೆಗಳ, ಸಂವೇದನೆಗಳ ಪ್ರತಿನಿಧಿಗಳಾಗುವುದೇ ಇಲ್ಲ. ಅವರ ವೇದನೆ-ಸಂವೇದನೆಗಳೇನಿದ್ದರೂ, ಶಿವಭಕ್ತಿಗೆ ಸೀಮಿತವಾದದ್ದು. ಹೀಗಾಗಿ ಹರಿಹರನ ರಗಳೆಗಳ ನಾಯಕರು, ಸಾಮಾನ್ಯ ಸಾಮಾಜಿಕ ಸ್ತರಗಳಿಂದ ಬಂದವರೆಂಬ ಒಂದು ಕಾರಣದಿಂದ, ಅವನಲ್ಲಿ ಉಳಿದ ಕವಿಗಳಲ್ಲಿ ಕಾಣದ ಸಾಮಾಜಿಕ ಪ್ರಜ್ಞೆಯನ್ನು ಕಾಣಬಹುದೆಂದು ಹೊರಟವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಗುರುತಿಸಲು ಹೊರಡುವ ಸಂಶೋಧಕರಿಗೆ ಹರಿಹರನಷ್ಟು ನಿರಾಶೆಯನ್ನು ಇನ್ನು ಯಾರೂ ಉಂಟುಮಾಡಲಾರರು!

ಹರಿಹರನಿಗೆ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಸಮಸ್ಯೆಗಳು ಮುಖ್ಯವೇ ಅಲ್ಲ. ಅವನ ಭಕ್ತಿಸಾಧನೆ ಹೇಗೆ ಒಂದು ವೈಯಕ್ತಿಕ ಸಂಗತಿಯೋ, ಸಮಸ್ಯೆಯೋ, ಹಾಗೆಯೇ ಅವನ ರಗಳೆಗಳ ನಾಯಕರ ಸಮಸ್ಯೆ ಕೂಡಾ ವ್ಯಕ್ತಿನಿಷ್ಠವಾದದ್ದು. ಸಾಮಾನ್ಯ ಸಾಮಾಜಿಕ ನೆಲೆಗಳಿಂದ ಬಂದ ಅವನ ರಗಳೆಯ ನಾಯಕರ ಗಮನವೆಲ್ಲಾ, ತಾವು ಬದುಕುವ ಸಮಾಜದ ಕಡೆಗೆ ಇಲ್ಲವೇ ಇಲ್ಲ: ಅದೇನಿದ್ದರೂ ಶಿವನಿಗೂ ತಮಗೂ ಇರುವ ವೈಯಕ್ತಿಕ, ಗುಪ್ತ ಭಕ್ತಿಯ ಕಡೆಗೆ ಮಾತ್ರ.[4] ತಾವಾಯಿತು, ತಮ್ಮ ದೇವರಾಯಿತು. ಇದಲ್ಲದೆ ಬೇರೆ ಚಿಂತೆಯೆ ಅವರಿಗಿಲ್ಲ. ಶಿವನು ಒಲಿವನೋ ಒಲಿಯನೋ ಎಂಬ ಚಿಂತೆಯೇ ಅವರಿಗೆ, ‘ಹಾಸಲುಂಟು ಹೊದಿಯಲುಂಟು’. ಹೀಗಿರುವಾಗ ಅವರ ಗಮನ ಹಾಗೂ ಗುರಿಯೆಲ್ಲ ಶಿವಪರವಾಗಿ ಅಥವಾ ಶಿವಶರಣರಿಗಾಗಿ ಮತ್ತು ಅವರ ಸೇವೆಗಾಗಿ. ಯಾವ ಹೊತ್ತಿನಲ್ಲಿ ಯಾವ ಭಕ್ತ ಬಂದು ಕೇಳಿದರೂ ಇವರು ಇಲ್ಲ ಎನ್ನುವವರಲ್ಲ. ಇಳೆಯಾಂಡ ಗುಡಿಮಾರನಂಥ ಬಡ ಒಕ್ಕಲಿಗನೂ ಮನೆಗೆ ಬಂದ ಶರಣನ ಸಂತೃಪ್ತಿಗಾಗಿ, ಅವನ ಚಳಿಯನ್ನು ನೀಗಲೆಂದು ಮನೆಯ ಮಾಳಿಗೆಯ ಜಂತೆಯನ್ನೆ ಕಡಿದು ಬೆಂಕಿ ಮಾಡುತ್ತಾನೆ; ಭೋರ್ಗರೆವ ಮಳೆಯಲ್ಲಿ ತನ್ನ ಗದ್ದೆಗೆ ಹೋಗಿ ಮೊಳೆವ ನೆಲ್ಲನ್ನು ಕಿತ್ತು ತಂದು ಅಂಬಲಿ ಮಾಡಿಸುತ್ತಾನೆ. ಮಾನಕಂಜರನೆಂಬ ಭಕ್ತನೊಬ್ಬ, ಶಿವಶರಣನ ಬಯಕೆಯಂತೆ, ಹಸೆಮಣೆಯ ಮೇಲಣ ಮಗಳ ತಲೆಗೂದಲನ್ನೆ ಕತ್ತರಿಸಿ ದಾನ ಮಾಡುತ್ತಾನೆ. ಅತಿಭಕ್ತನೆಂಬ ಬೆಸ್ತ, ತನ್ನ ಮೀಸಲು ನಿಯಮದ ಪ್ರಕಾರ ಮೊದಲು ಬಲೆಗೆ ಬಿದ್ದ ಮೀನನ್ನು ಮತ್ತೆ ನೀರಿಗೆ ಬಿಡುವುದು ಅವನ ವ್ರತ; ಆದರೆ ಒಂದು ದಿನ ಮೊದಲು ಸಿಕ್ಕಿದ ಮೀನೆ ಮತ್ತೆ ಮತ್ತೆ ಸಿಕ್ಕಿದಾಗ, ಅದನ್ನು ಶಿವನಿಗೆ ಮೀಸಲು ಬಿಟ್ಟು ತಾನು ಉಪವಾಸ ನಿಲ್ಲುತ್ತಾನೆ. ಬೇಡರ ಕಣ್ಣಪ್ಪ ಶಿವಲಿಂಗದ ಕಣ್ಣಿಗೆ ಬದಲು ತನ್ನ ಕಣ್ಣನ್ನೆ ಕಿತ್ತು ಜೋಡಿಸುತ್ತಾನೆ. ಒಲಘಾಂಡಮೂರ್ತಿಗಳು ತಮ್ಮ ಮೊಳಕೈಯನ್ನೆ ಗಂಧವಾಗಿ ತೇದು ಶಿವನಿಗೆ ಅರ್ಪಿಸುತ್ತಾರೆ. ಕಾರಿಕಾಲಮ್ಮೆ ತಲೆಕೆಳಗಾಗಿ ನಡೆದು ಕೈಲಾಸದ ಕಡೆ ಹೋಗುತ್ತಾಳೆ. ಭಕ್ತರ ಈ ನಡವಳಿಕೆಗಳನ್ನು ನೋಡಿ-ಅವರ ವ್ಯವಹಾರ ಜ್ಞಾನಶೂನ್ಯತೆಗೆ-ಒಂದೆಡೆ ನಗು ಬಂದರೂ, ಮತ್ತೊಂದೆಡೆ ಆ ನಡವಳಿಕೆಯ ಹಿಂದಿರುವ ನಿಷ್ಠೆಯನ್ನು ನೋಡಿ ಆಶ್ಚರ್ಯವಾಗುತ್ತದೆ. ಈ ಭಕ್ತರು ಶಿವನಿಗಾಗಿ, ಶಿವ ಶರಣರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರು. ಅವರಿಗೆ ಕಷ್ಟ, ದಾರಿದ್ರ್ಯ, ಇತ್ಯಾದಿಗಳು ಸಾಮಾಜಿಕ ಸಮಸ್ಯೆಗಳಾಗಿ ಕಾಣುವುದೇ ಇಲ್ಲ. ಅವೆಲ್ಲಾ ಆಧ್ಯಾತ್ಮಿಕ ಸಾಧನೆಗೆ ಒದಗಿ ಬಂದ ‘ವರ’ಗಳೆಂದೇ ಅವರ ನಂಬಿಕೆ. ದಾರಿದ್ರ್ಯ, ದುಃಖ ಇತ್ಯಾದಿಗಳನ್ನು ಭಕ್ತಿಯ ಹೆಸರಿನಲ್ಲಿ ವೈಭವಿಸುವುದೇ ಈ ದೇಶದ ತತ್ವದೃಷ್ಟಿಯಾಗಿರುವುದರಿಂದ, ಹರಿಹರನ ಭಕ್ತರೂ ಈ ಪರಂಪರೆಗೆ ಹೊರತಲ್ಲ. ಆದುದರಿಂದ ಈ ಭಕ್ತಾದಿಗಳು, ತಾವು ಬದುಕುವ ಸಮಾಜವನ್ನು ಪ್ರತಿನಿಧಿಸುವರೆಂದಾಗಲಿ, ತಮ್ಮ ಸಾಮಾಜಿಕ ಸಮಸ್ಯೆಗಳಿಗೆ ಪ್ರತಿಕ್ರಿಯೆಗಳನ್ನು ದಾಖಲು ಮಾಡುತ್ತಾರೆಂದಾಗಲಿ, ನಿರೀಕ್ಷಿಸುವುದೇ ಸರಿಯಲ್ಲ.

ತಮ್ಮ ಸಾಮಾಜಿಕ ಪರಿಸರದ ಬಗೆಗೆ ‘ದಿವ್ಯ ನಿರ್ಲಕ್ಷ್ಯತೆ’ಯನ್ನು ತಾಳಿದ ಈ ‘ಅಸಾಮಾನ್ಯ ಸಾಮಾನ್ಯ’ ವ್ಯಕ್ತಿಗಳನ್ನು ಕುರಿತು ಬರೆದ ಹರಿಹರ, ವರ್ಣ ಹಾಗೂ ವರ್ಗಗಳ ಬಗೆಗೆ ತನ್ನ ಪ್ರತಿಕ್ರಿಯೆಯನ್ನು ಪರೋಕ್ಷವಾಗಿ ಮತ್ತು ಪ್ರಾಸಂಗಿಕವಾಗಿ ದಾಖಲು ಮಾಡಿದ್ದಾನೆಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಒಂದೆಡೆ ಐಶ್ವರ್ಯ-ಅಧಿಕಾರಗಳಿಂದ ಪ್ರತಿಷ್ಠಿತರಾದ ‘ಉಚ್ಚ ವರ್ಗ’ದ ವ್ಯಕ್ತಿಯನ್ನು, ಆದಾವುದೂ ಇಲ್ಲದ ‘ಹೀನಕುಲ’ದ ವ್ಯಕ್ತಿಯೊಂದಿಗೆ, ಉಚ್ಚವರ್ಣದಲ್ಲಿ ಹುಟ್ಟಿ, ವೇದಶಾಸ್ತ್ರ ಪಾರಂಗತರಾದ ವ್ಯಕ್ತಿಗಳನ್ನು, ಸಾಮಾಜಿಕ ಕೆಳವರ್ಣಕ್ಕೆ ಸೇರಿದ, ‘ಅವಿದ್ಯಾವಂತ’ ವ್ಯಕ್ತಿಗಳೊಂದಿಗೆ ಹೋಲಿಸಿ, ಅವರ ವರ್ಣ ಹಾಗೂ ವರ್ಗ ಪ್ರತಿಷ್ಠೆಗಳನ್ನು ಶಿವಭಕ್ತಿಯ ಒರೆಗಲ್ಲಿನಲ್ಲಿ ಹರಿಹರ ಉಜ್ಜಿ ನೋಡಿದ್ದಾನೆ. ಇದಕ್ಕೆ ನಿದರ್ಶನವಾಗಿವೆ ಮಾದಾರ ಚೆನ್ನಯ್ಯನ ರಗಳೆ, ಬೇಡರಕಣ್ಣಪ್ಪ ಮತ್ತು ಸಾಮವೇದಿಗಳ ರಗಳೆಗಳು.

ಬೇಡರ ಕಣ್ಣಪ್ಪನ ರಗಳೆಯಲ್ಲಿ ಹರಿಹರ ಮುಖ್ಯವಾಗಿ ‘ವರ್ಣ’ದ ಬಗ್ಗೆ ಯೋಚನೆ ಮಾಡಿದರೆ, ಮಾದಾರ ಚೆನ್ನಯ್ಯನ ರಗಳೆಯಲ್ಲಿ ‘ವರ್ಗ’ದ ಬಗ್ಗೆ ಯೋಚನೆ ಮಾಡಿದ್ದಾನೆ. ಮತ್ತು ಶ್ವಪಚಯ್ಯಗಳ ರಗಳೆಯಲ್ಲಿ ವೇದ ಶಾಸ್ತ್ರಾಗಮ ಪರಿಣತನಾದ ವ್ಯಕ್ತಿಯ ವಿದ್ವತ್ತಿನ ಬಗೆಗೆ ಯೋಚನೆ ಮಾಡಿದ್ದಾನೆ. ವ್ಯಕ್ತಿಗಳಿಗೆ ಪ್ರತಿಷ್ಠೆಯನ್ನು ತಂದು ಕೊಟ್ಟು, ತಾವು ಎಲ್ಲರಿಗಿಂತ ಶ್ರೇಷ್ಠರೆಂಬ ಭಾವನೆಯನ್ನು ಸಾಮಾಜಿಕವಾಗಿ ಉಂಟು ಮಾಡುವ ಅಂಶಗಳು ಇವು: ತಾನು ಹುಟ್ಟಿನಿಂದ ಶ್ರೇಷ್ಠನೆಂಬ ವರ್ಣ ಪ್ರತಿಷ್ಠೆ; ಐಶ್ವರ್ಯ ಅಧಿಕಾರಗಳಿಂದ ಶ್ರೇಷ್ಠನೆಂಬ ವರ್ಗ ಪ್ರತಿಷ್ಠೆ; ವೇದವೇದಾಂಗ ಪಾರಂಗತ್ವದಿಂದ ಇತರರಿಗಿಂತ ಶ್ರೇಷ್ಠನೆಂಬ ವಿದ್ವತ್ ಪ್ರತಿಷ್ಠೆ. ಈ ಮೂರು ಪ್ರತಿಷ್ಠೆಗಳು, ಶಿವಭಕ್ತಿಯ ಒರೆಗಲ್ಲಿನಲ್ಲಿ ಎಷ್ಟು ಜಳ್ಳು ಎಂಬುದನ್ನು ಹರಿಹರನು ಈಗ ಹೇಳಿದ ಮೂರು ರಗಳೆಗಳ ಮೂಲಕ ತೋರಿಸಿಕೊಟ್ಟಿದ್ದಾನೆ. ಬೇಡರ ಕಣಪ್ಪನ ರಗಳೆಯಲ್ಲಿ, ವ್ಯಾಧವೃತ್ತಿಯಲ್ಲಿರುವ ಬೇಡರವನ ಅಶಾಸ್ತ್ರೀಯ ಆರಾಧನೆಗೂ, ಉಚ್ಚವರ್ಣದ ಶಿವಬ್ರಾಹ್ಮಣನ ಸಾಂಪ್ರದಾಯಿಕ ಪೂಜೆಗೂ ಇರುವ ವ್ಯತ್ಯಾಸವನ್ನು ಗುರುತಿಸಿ, ಶಿವನಿಗೆ ಕಣ್ಣಪ್ಪನ ಆರಾಧನೆಯೇ ಯಾಕೆ ಇಷ್ಟವಾಯಿತೆಂಬುದನ್ನು ಹರಿಹರ ಎತ್ತಿ ಹಿಡಿಯುತ್ತಾನೆ. ಉತ್ತಮ ವರ್ಣದಲ್ಲಿ ಹುಟ್ಟಿದವನು ಮಾಡಿದರೆ, ಶಾಸ್ತ್ರಾನುಸಾರವಾಗಿ ಮಾಡಿದ ಮಾತ್ರಕ್ಕೆ ಆ ಪೂಜೆ ಶ್ರೇಷ್ಠವಲ್ಲ; ಹಾಗೆಯೆ ಜಾತಿಯಲ್ಲಿ ಕೀಳಾದರೂ, ಆರಾಧನೆಯ ವಿಧಾನ ಅಶಾಸ್ತ್ರೀಯವೂ, ರೂಕ್ಷವೂ ಆದ ಮಾತ್ರಕ್ಕೆ, ಆ ಪೂಜೆ ಕನಿಷ್ಠವಲ್ಲ. ಯಾಕೆಂದರೆ ಆಯಾ ಆರಾಧನೆಗಳನ್ನು ಅಳೆಯಬೇಕಾದದ್ದು, ಪೂಜಿಸುವ ವ್ಯಕ್ತಿಗಳ ಅಂತರಂಗದ ನಿಷ್ಠೆಯಿಂದ ಮಾತ್ರ. ಇದು ಶಿವನು ಆ ಇಬ್ಬರು ಆರಾಧಕರನ್ನು ಪರೀಕ್ಷಿಸುವ ಸಂದರ್ಭದಿಂದ ಸ್ಪಷ್ಟವಾಗುತ್ತದೆ. ಶಿವಲಿಂಗದ ಕಣ್ಣಲ್ಲಿ ರಕ್ತ ಸುರಿಯಲು ಶುರುವಾದಾಗ, ಶಾಸ್ತ್ರೀಯವಾಗಿ ಪೂಜಿಸುತ್ತಿದ್ದ ಶಿವ ಬ್ರಾಹ್ಮಣ, ತನ್ನ ಶಾಸ್ತ್ರ ಜ್ಞಾನದಿಂದ ‘ಇದು ಅರಸಿಂಗೆ ಕೇಡಿತ್ತೋ ದೇಶಕ್ಕೆ ಪೊಲ್ಲದೋ’ ಎಂದು, ಅದೊಂದು ಉತ್ಪಾತವೆಂದು ತರ್ಕಿಸುತ್ತಾನೆ. ಆದರೆ ಅದೇ ದೃಶ್ಯವನ್ನು ಕಣ್ಣಪ್ಪನು ಕಂಡಾಗ ‘ಎಲೆ ತಂದೆ, ಎನ್ನವನೆ ಏನಾದುದೈ’ ಎಂದು ತಳಮಳಿಸಿ, ತನ್ನ ಕಣ್ಣನ್ನೆ ಕಿತ್ತು ಶಿವಲಿಂಗದ ಕಣ್ಣಿಗೆ ಬದಲಾಗಿ ಜೋಡಿಸುತ್ತಾನೆ. ಈ ನಡವಳಿಕೆ ತಾನೊಲಿದ ದೈವದ ವಿಚಾರದಲ್ಲಿ ಮುಗ್ಧವಾದ ಹಾಗೂ ಗಾಢವಾದ ಅನುರಕ್ತಿ ಇದ್ದವರಿಗೆ ಮಾತ್ರ ಸಾಧ್ಯ. ನಿಜವಾದ ಭಕ್ತಿ, ನಿಜವಾದ ಪ್ರೀತಿಯಂತೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಸಿದ್ಧವಾಗುತ್ತದೆ. ಈ ಕಾರಣದಿಂದಲೆ ಕಣ್ಣಪ್ಪನ ಪೂಜೆ, ಶಿವ ಬ್ರಾಹ್ಮಣನ ಪೂಜೆಗಿಂತ ಶಿವನಿಗೆ ಹೆಚ್ಚು ಪ್ರಿಯವಾಗುತ್ತದೆ. ಈ ಒಂದು ಸಂಗತಿಯನ್ನೆ ವೈಭವಿಸಿ, ಶಿವನು ಪಾರ್ವತಿಗೆ ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾನೆ.

ಮಾದಾರ ಚನ್ನಯ್ಯನ ರಗಳೆ ಮುಖ್ಯವಾಗಿ ‘ವರ್ಗ ಪ್ರತಿಷ್ಠೆ’ಯನ್ನು ಕುರಿತದ್ದು. ಹುಲ್ಲು ಮಾರುವ ಮಾದಾರ ಚನ್ನಯ್ಯ, ರಾಜಾಧಿರಾಜನಾದ ಕರಿಕಾಲಚೋಳ-ಇವರಲ್ಲಿ ಒಬ್ಬ ಸಾಮಾಜಿಕವಾಗಿ ಕೆಳವರ್ಗದವನು, ಇನ್ನೊಬ್ಬ ಮೇಲುವರ್ಗದವನು. ಆದರೆ ಆಧ್ಯಾತ್ಮಿಕವಾಗಿ  ‘ಕೆಳವರ್ಗ’ದ ಮಾದಾರ ಚನ್ನಯ್ಯನೇ ಶ್ರೇಷ್ಠನೆಂದು ಎತ್ತಿಹಿಡಿಯಲ್ಪಟ್ಟಿದ್ದಾನೆ. ಕರಿಕಾಲ ಚೋಳನೂ ಶಿವಭಕ್ತ, ಮಾದಾರ ಚನ್ನನೂ ಶಿವಭಕ್ತ. ಚನ್ನಯ್ಯನದು ಅತ್ಯಂತ ಗುಪ್ತವಾದ ಭಕ್ತಿ, ಕರಿಕಾಲ ಚೋಳನದು ಎಲ್ಲರಿಗೂ ಕಾಣಿಸುವ ವೈಭವದ ಆರಾಧನೆ. ಒಂದು ದಿನ ಚನ್ನಯ್ಯ ತನ್ನ ಗುಡಿಸಿಲಿನಲ್ಲಿ ಅಂಬಲಿಯನ್ನು ಶಿವಾರ್ಪಿತ ಮಾಡಿ ಉಣ್ಣುವ ಹೊತ್ತಿನಲ್ಲಿ, ಇತ್ತ ಕರಿಕಾಲಚೋಳನ ಅರಮನೆಯ ಪೂಜಾಮಂದಿರದಲ್ಲಿ ಅವನು ಸಮರ್ಪಿಸಿದ ದಿವ್ಯಾನ್ನವನ್ನು ಶಿವನು ಸ್ವೀಕರಿಸದೆ, ಮಾದಾರ ಚನ್ನಯ್ಯನು ಶಿವಾರ್ಪಿತ ಮಾಡಿದ ಅಂಬಲಿಯ ಸವಿಯುಂಡ ಪರಿಯನ್ನು ಶಿವನು ರಾಜನಾದ ಕರಿಕಾಲಚೋಳನಿಗೆ ಬಣ್ಣಿಸಿ ಹೇಳುತ್ತಾನೆ. ಆಗ ರಾಜನಾದ ಕರಿಕಾಲ ಚೋಳನು ಆಶ್ಚರ್ಯಪಟ್ಟು ‘ಪರಮನಿಗೆ ಉಣಲಿತ್ತ ಶರಣನಂ ನೋಡುವೆಂ’ ಎನ್ನುತ್ತ ಚನ್ನಯ್ಯನ ಗುಡಿಸಲಿಗೆ ಬರುತ್ತಾನೆ. ಚನ್ನನು ಬೆದರಿ ‘ಎನ್ನ ಕುಲಮಂ ನೋಡದೆ ಇಂತು ಬರ್ಪರೆ’ ಎಂದು ಬಿನ್ನವಿಸಿ ಕೊಂಡಾಗ, ರಾಜನಾದ ಚೋಳನು ‘ಶರ್ವನೊಡನುಂಡ ನಿಮ್ಮ ಜಾತಿಗಾಂ ಸರಿಯೇ? ಸರ್ವಜ್ಞ ನಿಮ್ಮ ಕೆರವಿಂಗೆನ್ನ ಶಿರ ಸರಿಯೆ’ ಎನ್ನುತ್ತಾನೆ. ಇದೊಂದು ಅಪೂರ್ವ ಸಂದರ್ಭ; ಅರಮನೆಯೇ  ಬಡ ಗುಡಿಸಲ ಬಳಿಗೆ ಬಂದ ಸಂದರ್ಭ. ರಾಜಾಧಿರಾಜನ ವರ್ಣ ಹಾಗೂ ವರ್ಗ ಪ್ರತಿಷ್ಠೆಗಳು, ಶಿವನೊಲಿದ ಮಾದಾರ ಚನ್ನಯ್ಯನ ಶಿವಭಕ್ತಿಯ ಪೆಂಪಿಗೆ ಶರಣಾದ ಈ ಪ್ರಸಂಗ, ಸಮಸ್ತ ಭೋಗ ವೈಭವಗಳ ಬಗೆಗೆ ಹರಿಹರನು ತಾಳಿದ ನಿಲುವನ್ನು ಸೂಚಿಸುತ್ತದೆ. ನಿಜವಾಗಿಯೂ ಯಾವುದು ದೊಡ್ಡದು ಎಂಬ ಪ್ರಶ್ನೆಗೆ ಹರಿಹರನು ಕೊಟ್ಟ ಉತ್ತರ ಇದು. ಐಶ್ವರ್ಯ, ವೈಭವ, ಸದ್ವಂಶ ಇತ್ಯಾದಿಗಳೆಲ್ಲವೂ, ಆಧ್ಯಾತ್ಮಿಕ ನೆಲೆಯಲ್ಲಿ ಎಷ್ಟೊಂದು ಅರ್ಥಹೀನವೂ, ಅಲ್ಪವೂ ಆಗುತ್ತವೆಂಬುದನ್ನು ಇಲ್ಲಿ ಹರಿಹರನು ಎತ್ತಿ ಹಿಡಿದಿದ್ದಾನೆ. ಶಿವಕೃಪೆಗೆ ಪಾತ್ರನಾದವನು, ಅವನನ್ನು ಒಮ್ಮನಸ್ಸಿನಿಂದ ಆರಾಧಿಸುವವನು ಇವನೇ ನಿಜವಾದ ಶ್ರೀಮಂತ, ಜಾತಿವಂತ ಎನ್ನುವುದರ ಮೂಲಕ ‘ವರ್ಗ’ ಹಾಗೂ ‘ವರ್ಣ’ಗಳ ಬಗೆಗೆ ಹರಿಹರನು ಹೊಸತೊಂದು ವ್ಯಾಖ್ಯಾನವನ್ನೇ ಇಲ್ಲಿ ಮಾಡಿದ್ದಾನೆ.

ಇದೇ ‘ದರ್ಶನ’ವನ್ನು ಪ್ರತಿಮಿಸುವ ಇನ್ನೊಂದು ರಗಳೆ ಸಾಮವೇದಿಗಳನ್ನು ಕುರಿತದ್ದು. ಸಾಮವೇದಿ ಒಬ್ಬ ಮಹಾಬ್ರಾಹ್ಮಣ, ಸಕಲ ವೇದಶಾಸ್ತ್ರಪಾರಂಗತನಾದ ಮಹಾವಿದ್ವಾಂಸ. ಇವನು ಮೂರು ಸಾವಿರದ ಐದು ನೂರು ಶಿಷ್ಯರಿಗೆ ದಿನವೂ ಅರಣ್ಯದಲ್ಲಿ ಪಾಠಮಾಡಿ, ತನ್ನ ಸಿದ್ಧಿಯ ಬಲದಿಂದ ಗಗನಮಾರ್ಗದಲ್ಲಿ ತನ್ನ ಊರಾದ ಛತ್ತೀಸಪುರಕ್ಕೆ ಹಿಂದಿರುಗುತ್ತಾನೆ. ಒಂದು ದಿನ ಶ್ವಪಚಯ್ಯನೆಂಬ ಹೆಸರಿನ ಗುಪ್ತ ಶಿವಭಕ್ತನು-ಆತನ ಹೆಸರೇ ಸೂಚಿಸುವಂತೆ ಆತ ಶ್ವಪಚ ಕುಲದವನು-ಭವಿಗಳಾರೂ ಸುಳಿಯಬಾರದೆಂದು ಅರಣ್ಯದಲ್ಲಿ ಒಂದೆಡೆ ಶಿವನ ಆರಾಧನೆಯನ್ನು ಮಾಡಿ, ಮಧ್ಯಾಹ್ಮ ಪರ್ಯಂತ ಶಿವ ಪೂಜಾ ಸುಖದೊಳೋಲಾಡಿ, ಮೂರು ಕಲ್ಲುಗಳನ್ನು ಹೂಡಿ ಅಡುಗೆಗೆ ಇರಿಸುತ್ತಾನೆ. ಆಗ ಆ ಮಾರ್ಗವಾಗಿ ಸಾಮವೇದಿಗಳು ಬರುತ್ತಿರಲಾಗಿ, ಅವರ ನೆರಳು ತನ್ನ ಅಡುಗೆಯ ಮೇಲೆ ಬಿದ್ದೀತೆಂದು, ಶ್ವಪಚಯ್ಯನು ಪಾಕವನ್ನು ಮುಚ್ಚಲು ಬೇರೇನೂ ದಾರಿತೋರದೆ, ತನ್ನ ಕಾಲಿನ ಕೆರದಿಂದಲೇ ಆ ಪಾಕವನ್ನು ಮುಚ್ಚುತ್ತಾನೆ. ಅದನ್ನು ಕಂಡು ಬೆರಗಾದ ಸಾಮವೇದಿಗಳು, ಊರಿಗೆ ಮರಳಿದಾಗ, ಶಿವನು ಅವನ ಕನಸಿನಲ್ಲಿ ಕಾಣಿಸಿಕೊಂಡು “ಕುಲದ ಗರ್ವದೊಳಿಂತು ಕೆಟ್ಟು ಹಾಳಾದಪೈ”, ನಾನೂ ಶ್ವಪಚಯ್ಯ ಇಬ್ಬರೂ ಅಭಿನ್ನರು; ನೀನೇ ಹೋಗಿ ಅವರಲ್ಲಿ ದೀಕ್ಷೆ ಪಡೆದು ಭಕ್ತಿಯನ್ನು ಸಾಧಿಸು ಎಂದು ಆದೇಶ ನೀಡುತ್ತಾನೆ. ಈ ಸಂದರ್ಭದಲ್ಲಿ ಹರಿಹರನು, ಹುಟ್ಟಿನಿಂದ ಬ್ರಾಹ್ಮಣನಾದ ಮತ್ತು ವೇದ ವೇದಾಂತ ಪಾರಂಗತನಾದ ವಿದ್ವಾಂಸನ ವಿದ್ವತ್ತಿನ ನಿಷ್ಪ್ರಯೋಜಕತೆಯನ್ನು ಚಿತ್ರಿಸಿದ್ದಾನೆ. ಸಾಮವೇದಿಯಂಥ ಮಹಾ ವಿದ್ವಾಂಸನ ನೆರಳು, ತಾನು ಮಾಡಿದ ಪಾಕದ ಮೇಲೆ ಬಿದ್ದೀತೆಂದು, ತನ್ನ ಕಾಲಿನ ಕೆರದಿಂದಲೇ ಪಾಕವನ್ನು ಮುಚ್ಚಿದ ಶ್ವಪಚಯ್ಯಗಳ ನಡವಳಿಕೆಯ ಮೂಲಕ, ಹರಿಹರ, ವೇದ-ಶಾಸ್ತ್ರ ಪಾರಂಗತರ ಬಗೆಗಿನ ತನ್ನ ತಿರಸ್ಕಾರವನ್ನು ಅತ್ಯಂತ ರಭಸದಿಂದ ಪ್ರಕಟಿಸಿದ್ದಾನೆ. ಶಿವನ ಒಲುಮೆ ಕೇವಲ ಸಾಂಪ್ರದಾಯಿಕ ಪೂಜಾವಿಧಾನಗಳಿಂದಾಗಲಿ, ಐಶ್ವರ್ಯ ಆಡಂಬರಗಳಿಂದಾಗಲಿ, ಅಥವಾ ವೇದವೇದಾಂತಾದಿ ಶಾಸ್ತ್ರ ಜ್ಞಾನದಿಂದಾಗಲಿ ಸಾಧ್ಯವಿಲ್ಲ; ಶಿವನನ್ನು ಒಲಿಸಬೇಕಾದರೆ, ಮುಗ್ಧವಾದ, ನಿರಾಡಂಬರವಾದ, ನಿಷ್ಠಾಭಕ್ತಿಯೊಂದೇ ಸಾಕು ಎಂಬ ನಿಲುವನ್ನು ಈ ರಗಳೆಗಳ ಮೂಲಕ ಪ್ರತಿಪಾದಿಸಿದ್ದಾನೆ.

ಹರಿಹರನ ದೃಷ್ಟಿಗೆ ಭಕ್ತಿ ಎಂಬುದು ಪ್ರದರ್ಶನದ ವಸ್ತುವಲ್ಲ; ಅದೊಂದು ‘ಅಂತರಂಗದ ರತ್ನ.’ ಅದು ಸತಿಪತಿಯರ ಪ್ರೇಮದಂತೆ ಒಳಗಿನದು ಮತ್ತು ಏಕಾಂತವಾದದ್ದು. ಅವನ ರಗಳೆಗಳ ಬಹುಪಾಲು ಭಕ್ತರ ನಿಲುವು ಇದು. ಅವರೆಲ್ಲಾ ಬಹುಮಟ್ಟಿಗೆ ಗುಪ್ತ ಭಕ್ತರು. ಅವರೆಂತಹ ಉತ್ಕಟ ಭಕ್ತರೆಂದು ಅವರಿಗೆ ಗೊತ್ತು ಮತ್ತು ಅವರ ಇಷ್ಟ ದೈವಕ್ಕೆ ಗೊತ್ತು. ಈ ಒಳಮನೆಯ ಕೊಡು-ಪಡೆಯ ವ್ಯವಹಾರಕ್ಕೆ ಅವರ ಭಕ್ತಿ ಸೀಮಿತವಾಗುತ್ತದೆ. ನಿಸರ್ಗದಲ್ಲಿ ಹೂವೊಂದು ಸದ್ದಿಲ್ಲದೆ ಹಣ್ಣಾಗುವ ಕ್ರಿಯೆಯಂಥದು ಇವರ ಭಕ್ತಿಯ ರೀತಿ. ತಿರುನೀಲಕಂಠರು ಮತ್ತು ಅವರ ಹೆಂಡತಿ ತಾವು ಮಾಡಿಕೊಂಡ ಆಣೆಯನ್ನು ತೊಂಬತ್ತು ವರ್ಷದ ಮುಪ್ಪಿನ ಮುದುಕರಾಗುವ ತನಕ ಯಾರಿಗೂ ತಿಳಿಯದಂತೆ ಕಾಪಾಡಿಕೊಂಡವರು. ಮಾದಾರ ಚನ್ನಯ್ಯ, ಇಳೆಯಾಂಡ ಗುಡಿಮಾರ, ಶ್ವಪಚಯ್ಯ, ಕಾರಿಕಾಲಮ್ಮೆ -ಇಂಥವರೆಲ್ಲಾ ಅತ್ಯಂತ ಗುಪ್ತರಾಗಿ ಅನೇಕ ವರ್ಷಗಳ ಕಾಲ ಸಾಧಿಸಿದವರು. ಇವರ ಈ ಗುಪ್ತ ಭಕ್ತಿಯನ್ನು ಶಿವನು ಲೋಕಕ್ಕೆ ಪ್ರಕಟಿಸುವ ಸಂದರ್ಭವೆ ಹರಿಹರನ ರಗಳೆಗಳಲ್ಲಿ ಕಥೆಯ ಶಿಖರವೂ, ಅತ್ಯಂತ ಕ್ರಿಯಾತ್ಮಕ ಹಾಗೂ ನಾಟ್ಯಮಯವೂ ಆಗುತ್ತದೆ. ತಮ್ಮ ಗುಪ್ತ ಭಕ್ತಿ ಲೋಕಕ್ಕೆ ಯಾವ ಕಾರಣಕ್ಕೂ ಪ್ರಕಟವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿದ ಈ ಶಿವಭಕ್ತರಿಗೆ ತಮ್ಮ ಭಕ್ತಿ, ತಮಗರಿವಿಲ್ಲದೆಯೆ, ಅನಿವಾರ‍್ಯವಾಗಿ ಪ್ರಕಟವಾಗಬೇಕಾಗಿ ಬಂದಾಗ, ಅವರು ಅತ್ಯಂತ ದುಃಖಿಗಳಾಗುತ್ತಾರೆ. ಶಿವನಿಗೂ ತಮಗೂ ಇರುವ ಅಂತರಂಗದ ಈ ಸಂಬಂಧ ಬಯಲಿಗೆ ಬರುವಂತಾಯಿತಲ್ಲಾ ಎಂದು ಕೊರಗುತ್ತಾರೆ. ಆದರೆ ಈ ಕೊರಗಿನ, ದುಃಖದ ತುದಿಯಲ್ಲೆ ಕಾದಿರುತ್ತದೆ ಶಿವ ಸಾಕ್ಷಾತ್ಕಾರದ ನಿಬ್ಬೆಳಗಿನ ಬೆರಗು.

ಹರಿಹರನ ಭಕ್ತರ ಪಾಲಿಗೆ ದೇವರೆಂಬುದು ಒಂದು ಅಮೂರ್ತವಾದ ವಸ್ತುವಲ್ಲ. ಅದೊಂದು ಜೀವಂತವಾದ ನಂಬಿಕೆ ಹಾಗೂ ಜೀವಂತವಾದ ಕಾಣ್ಕೆ. ದೇವರೆಂಬುದು ಒಂದು ವ್ಯಕ್ತಿತ್ವವೆಂಬಂತೆ, ಉದ್ದಕ್ಕೂ ತನ್ನೊಡನೆ, ತನ್ನ ಯೋಗ-ಕ್ಷೇಮ ಹಾನಿ-ವೃದ್ಧಿಗಳನ್ನು ನಿಯಂತ್ರಿಸುವ ಶಕ್ತಿಯೆಂಬಂತೆ, ಅದನ್ನು ಬಹು ಬಗೆಯಾಗಿ ಗುರುತಿಸುವ, ಅರ್ಚಿಸುವ, ಹಾಡುವ, ಹೊಗಳುವ, ನೋಡುವ, ಕೂಡುವ ಸಂಭ್ರಮಗಳಿಂದ ಈ ಭಕ್ತರ ನಡವಳಿಕೆಗಳು ತರಂಗಿತವಾಗಿವೆ.

ಹರಿಹರನ ಭಕ್ತರಿಗೆ, ಭಕ್ತಿನಿಷ್ಠೆಗಳು ಗುಪ್ತವಾಗಿ ಏಕಾಂತವಾಗಿದ್ದರೂ, ಅವು ಕ್ರಮಕ್ರಮವಾಗಿ ಅವರ ವ್ಯಕ್ತಿತ್ವದ ವ್ಯವಹಾರಗಳಲ್ಲೂ ಸಹಜವಾಗಿ, ತಾನೇ ತಾನಾಗಿ ಅನುಭೂತವಾಗುವ ರೀತಿಯನ್ನು ಹರಿಹರ ನಿರೂಪಿಸುವ ಕ್ರಮ ವಿಶೇಷವಾದದ್ದು. ಅವರ ಅಂತರಂಗದ ಪ್ರವೃತ್ತಿ ಬಹಿರಂಗದ ವೃತ್ತಿಯಲ್ಲಿ ತಾದಾತ್ಮ್ಯವನ್ನು ಹೊಂದುವ ರೀತಿ ಗಮನಿಸತಕ್ಕದ್ದಾಗಿದೆ. ಇಳೆಯಾಂಡ ಗುಡಿಮಾರ ವೃತ್ತಿಯಲ್ಲಿ ಒಕ್ಕಲಿಗ; ಆದರೆ ಅವನ ಅಂತರಂಗದ ಪ್ರವೃತ್ತಿಗೂ, ಅವನ ಬಹಿರಂಗದ ಒಕ್ಕಲುತನಕ್ಕೂ ಅಭೇದವೇರ್ಪಡುವ ರೀತಿ ವಿಶೇಷವಾದದ್ದು. ಅವನು ಬಹಿರಂಗದಲ್ಲಿ ಹೊಲ ಉಳುವ ಒಂದೊಂದು ಕ್ರಿಯೆಯೂ, ಆತನ ಆಧ್ಯಾತ್ಮಿಕ ವ್ಯವಸಾಯಕ್ಕೆ ಸಂಕೇತವಾಗುತ್ತದೆ.[5] ಕುಂಬಾರ ಗುಂಡಯ್ಯನು ಮಡಕೆಯನ್ನು ಮಾಡುವ ಬಹಿರಂಗದ ವೃತ್ತಿಯಲ್ಲಿನ ಕ್ರಿಯೆ, ಆತ ತನ್ನ ಅಂತರಂಗವನ್ನು ‘ಘಟ’ವನ್ನಾಗಿ ಮಾಡುವ ಕ್ರಿಯೆಗೆ ಸಂಕೇತವಾಗುತ್ತದೆ. ಆನಯನಾರನೆಂಬ ಗೋವಳಿಗ ಹೊರಗೆ ಗೋವುಗಳನ್ನು ಕಾಯುವ ವೃತ್ತಿಯೇ, ಅವನು ತನ್ನ ಒಳಗಿನ ಸ್ವಭಾವಗಳನ್ನು ಹದಗೊಳಿಸುವ ಪ್ರವೃತ್ತಿಗೆ ಸಂಕೇತವಾಗುತ್ತದೆ. ತಿರುಕುರುಂಪೆ ತೊಂಡನೆಂಬ ಅಗಸರವನು, ಊರಜನದ ಬಟ್ಟೆಗಳನ್ನು ಒಗೆದು ಮಡಿಮಾಡುವ ಕ್ರಿಯೆಯೇ, ಅವನು ತನ್ನ ಅಂತರಂಗದ ಮಾಲಿನ್ಯವನ್ನು ತೊಳೆದು ಮಡಿಮಾಡುವ ಕ್ರಿಯೆಗೆ ಸಂಕೇತವಾಗುತ್ತದೆ.[6] ಹೀಗೆ ನಿಜವಾದ ಭಕ್ತಿಯೆಂಬುದು ಮೂಲತಃ ಅಂತರಂಗದ್ದಾದರೂ ಅದು ಬಹಿರಂಗದ ನಡವಳಿಕೆಯನ್ನು ವ್ಯಾಪಿಸಬೇಕು; ವೃತ್ತಿ ಹಾಗೂ ಪ್ರವೃತ್ತಿಗಳ ಸಾಮರಸ್ಯವೇ ಭಕ್ತಿಯ ಅತ್ಯುತ್ತಮ ಸ್ಥಿತಿ ಎಂಬುದು ಹರಿಹರನ ನಿಲುವೆಂದು ಹೇಳಬಹುದು.

ಹರಿಹರನು ಭಕ್ತಿಯ ಪರಿಕಲ್ಪನೆಯನ್ನು ಇದಕ್ಕೂ ಮಿಗಿಲಾದ ಇನ್ನೊಂದು ಮಜಲಿಗೆ ಒಯ್ಯುತ್ತಾನೆ. ಭಕ್ತನ ಪಾಲಿಗೆ ಸರ್ವವೂ ಶಿವಮಯವಾಗುವಂಥ ಸ್ಥಿತಿ ಅದು. ಇದು ತಿರುನೀಲಕಂಠರಿಗೆ ಬಂದ ಮುಪ್ಪಿನ ವರ್ಣನೆಯಲ್ಲಿ ಒಂದು ರೀತಿಯಲ್ಲಿ ಚಿತ್ರಿತವಾಗಿದ್ದರೆ, ‘ಮರುಘರ ಮಹಾತ್ಮೆ’ಯಲ್ಲಿ ಅದು ತನ್ನ ಶಿಖರವನ್ನು ಮುಟ್ಟಿದೆ. ಮರುಘರು ಪಂಚಾಕ್ಷರೀ ಮಂತ್ರವನ್ನು ಜಪಿಸುತ್ತಾ ಎಂಥ ನಿಲುವನ್ನು ತಲುಪಿದರೆಂದರೆ-

ಲೋಗರೇನೆಂದೊಡಂ ನಮಃ ಶಿವಾಯಮಾಗೆ ತನಗೆ
ಆಗಳೇನೆಂದೊಡಂ ನಮಃ ಶಿವಾಯಮಾಗೆ ತನಗೆ
ಉಲಿವ ಹಕ್ಕಿಯುಲಿವು ಪಂಚವರ್ಣದಂತೆ ತಾಗೆ ಕಿವಿಗೆ
ಕೆಲೆವ ವೃಷಭ ನಾದಮುಂ ನಮಃ ಶಿವಾಯಮಾಗೆ ತನಗೆ
ಕಣ್ಣೊಳಂ ನಮಃ ಶಿವಾಯವೆಂಬ ಲಿಖಿತವಿರ್ದತೆರದೆ
ಕಣ್ಣ ಮೊದಲ ರೂಪು ಪಂಚವರ್ಣವಾಗಿ ತೋರಲುರದೆ
[7]

ಜನ ಏನು ಮಾತನಾಡಿದರೂ ಅದು ಅವರಿಗೆ ಪಂಚಾಕ್ಷರೀ ಮಂತ್ರದಂತೆ ಕೇಳ ತೊಡಗಿತು; ಹಕ್ಕಿಯ ದನಿಯಲ್ಲಿ, ಗೂಳಿಯ ಗುಟುರಿನಲ್ಲಿ, ಹೀಗೆ ಕಿವಿಗೆ ಕೇಳಿದ್ದು, ಕಣ್ಣಿಗೆ ಕಂಡದ್ದು- ನಮಃ ಶಿವಾಯವೆಂಬ ಪಂಚಾಕ್ಷರೀ ಮಂತ್ರವಾಗಿಯೇ ಅನುಭೂತವಾಗುವ ಒಂದು ಸ್ಥಿತಿ ಇದು. ಇಂಥ ಲೌಕಿಕವೇ ಅಲೌಕಿಕವಾಗಿ ಅನುಭವಕ್ಕೆ ಬಂದ ಸ್ಥಿತಿಯನ್ನು ಬದುಕಿದ ಮರುಘರನ್ನು ಶಿವನು-ಹರಿಹರನ ಇತರ ರಗಳೆಗಳಿಗಿಂತ ಬೇರೆಯಾಗಿ-ಏನೂ ಪರೀಕ್ಷೆ ಮಾಡದೆ ನೇರವಾಗಿ ಕೈಲಾಸಕ್ಕೆ ಕರೆದುಕೊಂಡು ಹೋದನೆಂದು ಹರಿಹರನು ಚಿತ್ರಿಸಿದ್ದಾನೆ.

ಹರಿಹರನ ರಗಳೆಗಳು ಮುಖ್ಯವಾಗಿ ಭಕ್ತಜೀವನದ ಅಂತರಂಗದ ಕೈಪಿಡಿಗಳು. ಅವನ ದರ್ಶನಕ್ಕೆ ನಿದರ್ಶನವಾಗಿ ಒಡ್ಡಿದ ಕಥಾಪ್ರತಿಮೆಗಳು. ವಚನಕಾರರ ಜೀವನ ಹಾಗೂ ಮೌಲ್ಯಗಳಿಗೆ ಬರೆದ ಭಾಷ್ಯಗಳು.

ಅನುರಣನ (೧೯೭೮)

* * *


[1] ‘ಮನುಜರ ಮೇಲೆ, ಸಾವವರ ಮೇಲೆ, ಕನಿಷ್ಟರ ಮೇಲೆ’ ತಾನು ಕೃತಿರಚನೆ ಮಾಡುವುದಿಲ್ಲ ಎಂಬ ಹರಿಹರನ ಘೋಷಣೆ ಮೇಲು ನೋಟಕ್ಕೆ ಮಾನವತಾವಿರೋಧಿ ಎಂಬಂತೆ ಭಾಸವಾದರೂ, ಅವನ ಕೃತಿಗಳ ಕಥಾನಾಯಕರೆಲ್ಲ ಮಾನವರೆ, ಸಾಮಾನ್ಯ ಮಾನವರೆ ಎಂಬುದನ್ನು ಮರೆಯಬಾರದು. ಆದರೆ ಹರಿಹರ ತನ್ನ ಘೋಷಣೆಯಲ್ಲಿ ಪ್ರಕಟಿಸುವ ವಿರೋಧ, ಅಧಿಕಾರಾರೂಢರಾದ ರಾಜರುಗಳಾದ ‘ಮನುಜ’ರನ್ನು ಕುರಿತದ್ದು; ಇಂದ್ರ ಚಂದ್ರ ದೇವೇಂದ್ರರೆಂದು ಮುನ್ನಿನ ಕವಿಗಳಿಂದ ಸ್ತುತ್ಯರಾದ ರಾಜರುಗಳನ್ನು ಕುರಿತದ್ದು. ಆದುದರಿಂದ ಇದು ಮುಖ್ಯವಾಗಿ ರಾಜ ವಿರೋಧಿ, ಅಥವಾ ರಾಜನಿಷ್ಠ ವಿರೋಧಿ ಧೋರಣೆ ಎಂದೇ  ತಿಳಿಯಬೇಕು.

[2] ಕಂಡಾಗಿರಿಜೆ ಎನ್ನ ನೇಹದಸುವಪ್ಪನಂ
ಇಂತಪ್ಪ ಭಕ್ತನಂ ಕಂಡು ಬಲ್ಲಾ ಗಿರಿಜೆ
ಇಂತಪ್ಪ ಭಕ್ತನಂ ಕೇಳ್ದು ಬಲ್ಲಾ ಗಿರಿಜೆ

ಎಂದು ಕಣ್ಣಪ್ಪನಂ ನೋಡಿ ಕೊಂಡಾಡುತಂ
ಹರಿಹರನ ರಗಳೆಗಳು ; ಭಾಗ ೧ ; ಸಂ.ಫ.ಗು. ಹಳಕಟ್ಟಿ, ಪು, ೫೪, ಪಂ ೧೪-೧೭೧.

ಇಂತೆಲ್ಲವಂ ಮರೆದು ಕೊಳಲೂದಿದವರುಂಟೆ
ಸಂತತಂ ಪಂಚಾಕ್ಷರಿಯ ಸವಿದರಿಂತುಂಟೆ
ಮರದ ಮೇಲಾನಿರಲ್ಕರಿದು ವೊಲ್ದವರುಂಟೆ
ತರುವಿನೊಳಗಿರ್ದೆನ್ನರಿದು ನೆನೆದವರುಂಟೆ
ನೋಡಯ್ಯ ನಂದೀಶ ನೋಡಯ್ಯ ಭಕ್ತನಂ
ಅಲ್ಲೇ ; ಪು. ೬; ಪಂ, ೧೭-೨೬.

[3] ಇದೇ ಸಂಪುಟದಲ್ಲಿ : ನೋಡಿ. ಪು. ೨೫೬-೨೫೭.

[4] ಹೀಗಾದುದಕ್ಕೆ ಕಾರಣ ಬಹುಶಃ ಹರಿಹರನು, ಹುಟ್ಟಿನಿಂದ ಮೇಲ್‌ವರ್ಗದವನಾಗಿದ್ದು ತನ್ನ ಕಾವ್ಯದ ಕಥಾನಾಯಕರು ಪ್ರತಿನಿಧಿಸುವ ವರ್ಗದೊಂದಿಗೆ ತೀವ್ರವಾದ ಸಾಮಾಜಿಕ ಸಂಬಂಧವನ್ನು ಹೊಂದದೆ ಇದ್ದುದೇ ಎನ್ನಬಹುದೆ?

[5] ಸಮಚಿತ್ತವೆಂಬ ಭೂಮಿಯನೆ ಹಸನಾಗಿರಿಸಿ
ಅಮರ್ದ ಶಂಕರನ ನೆನಹೆಂಬ ನೇಗಿಲನಿರಿಸಿ
ಅರಿಷಟ್ಕಮಂ ತಂದು ಹೂಡುವೆತ್ತಂಮಾಡಿ
ಹರಿವ ಮನಮಂ ಕಟ್ಟಿ ಹಿಡಿದ ಹಗ್ಗಂಮಾಡಿ
ಗರ್ವಿಸುವಹಂಕಾರಮುಮನಚ್ಚುವಂ ಮಾಡಿ
ಸರ್ವೇಶ ನಿಷ್ಠೆಯ ತಳಿವ ಬೀಜಂ ಮಾಡಿ
ಸುರುಚಿರ ಶಿವಜ್ಞಾನ ಸಸಿಗಳಂಕುರಿಸುತಿರೆ
ಹರನ ಪರಮಾನಂದ ರಸದ ಮಳೆ ಕರೆವುತಿರೆ
ಬಿತ್ತಿ ಬೆಳೆವಂ ಶಿವನ ಸದ್ಭಕ್ತಿ ಸಸಿಗಳಂ
ಇಂತೊಳಗೆ ಭವನ ಭಕ್ತ್ಯಾರಂಭಮಂ ಮಾಳ್ಪ
ಅಂತೆಲ್ಲರರಿಯೆ ಹೊರಗಾರಂಭಮಂ ಮಾಳ್ಪ

ಹರಿಹರನ ರಗಳೆಗಳು : ಭಾಗ ೧; ಸಂ.ಫ.ಗು. ಹಳಕಟ್ಟಿ ಪು. ೭೬ : ಪಂ. ೧೩-೨೩

[6] ಪಾಪವೆಂಬ ಮಲಿನಮನದ ಸೀರೆಯಂ ತೆರಳ್ಚಿ ಕಟ್ಟಿ
ಕೋಪವೆಂಬ ಕತ್ತೆ ನಿಲಲು ಬೆನ್ನ ಮೇಲೆ ಮಾಣದೊಟ್ಟಿ
ನಡೆದು ಭವನ ಭಕ್ತಿರಸದ ಹೊಳೆಯ ತಡಿಯ ಬಳಿಗೆ ಬಂದು
ಮೃಡನೆ ಶರಣೆನುತ್ತ ದೇಹವೆಂಬ ಕಲ್ಲ ಬಳಿಗೆ ಬಂದು
ತಾಪತ್ರಯಗಳೆಂಬ ಕಿಚ್ಚಿನಿಂದ ಕುದಿಸೆ ಕುದಿವುತಿರಲು
ತಾಪವಾರೆ ವಸ್ತ್ರ ಕುಲಮನಲ್ಲಿ ಪಿಡಿದು ತೊಳೆವುತ್ತಿರಲು
ಒಗೆದನೊಗೆದ ನಮಮ ಹರನ ಪರಮಭಕ್ತಿರಸದೊಳೊಗೆದ
ಒಗೆದ ನೊಗೆದ ನಾಹ ದೇಹಭಾವವಳಿದು ಸುಖದೊಳೊಗೆದ
ಒಗೆದ ಧನಿಯ ನಾಲಿಸಿದವರ ಪಾಪ ಓಡಿಹೋಗಲೊಗೆದ
ಒಗೆಯ ಸಿಡಿದ ಹನಿಗಳೆಯ್ದಿದವರೆ ಮುಕ್ತರಾಗಲೊಗೆದ
ಏಕನಿಷ್ಠೆಯಿಂದ ತಿರುಹಿ ಮುರುಹಿ ಹಿಳಿದುಹಿಂಡಿ ಮತ್ತೆ
ಏಕನಭವನೆಂಬ ದಿಟದ ಬಿಸಿಲೊಳೊಣಗಿಸುತ್ತ ಮತ್ತೆ
ಪುರಹರ ಪ್ರಸಾದದಿಂದ ರಂಜಿಸಲ್ಕೆ ಅಂಜಿ ಇಟ್ಟು
ಶರಣ ಸಂಗದಿಂದ ಘಟ್ಟಿಸುತ್ತ ಹೊಳಹನೊಪ್ಪವಿಟ್ಟು
ಪರಮನಂಘ್ರಿಗಳ್ಗೆ ಇಚ್ಛೆಯಂತೆ ಮಡಿಸಿ ಗಳಿಗೆ ಮಾಡಿ
ತಿರುಕುರುಂಪೆ ತೊಂಡರೆಸೆವ ಮನದ ಮಡಿಯನೊಂದುಗೂಡಿ
ಸಕಲ ಭಕ್ತ ಜನಕೆ ಮನದ ಮಡಿಯನೀವುತಿರ್ಪನಲ್ಲಿ

ಹರಿಹರನ ರಗಳೆಗಳು : ಭಾಗ ೪; ಸಂ. ಫ.ಗು. ಹಳಕಟ್ಟಿ, ಪು. ೪೧-೪೨: ಪಂ. ೨೨-೩೯

[7] ಅಲ್ಲೇ, ಭಾಗ ೪, ಪು. ೬೪, ಸಂ. ೨-೭.