-೧-

ಕಾವ್ಯಕ್ಕಿಂತ ಜೀವನ ದೊಡ್ಡದು ಎಂಬ ಮಾತಿನ ಅರ್ಥ ಯಾವ ವಿವರಣೆಯನ್ನೂ ನಿರೀಕ್ಷಿಸದಷ್ಟು ಸರಳವಾದುದು. ಆದರೆ, ಕಾಲದಿಂದ ಕಾಲಕ್ಕೆ ಕವಿಗಳ ಕಾವ್ಯ ನಿರ್ಮಿತಿಗೆ ವಸ್ತುವಾಗುವಂತಹ ಮಹಿಮಶಾಲಿಯಾದ ವ್ಯಕ್ತಿತ್ವದಿಂದ ಜೀವನವನ್ನು ದೊಡ್ಡದು ಮಾಡಿದ ಮಹಾವ್ಯಕ್ತಿಗಳ ಚಾರಿತ್ರದ ವಿಚಾರದಲ್ಲಿ ಈ ಮಾತು ವಿಶೇಷವಾದ ಅರ್ಥವನ್ನು ಪಡೆಯುವಂತೆ ತೋರುತ್ತದೆ. ತಮ್ಮ ಮಹತ್ವದಿಂದ ತಮ್ಮ ಸಮಕಾಲೀನವಾದ ಬದುಕಿಗೆ ಒಂದು ವಿಸ್ತಾರವನ್ನೂ, ತೀವ್ರತೆಯನ್ನೂ, ಜೀವಂತತೆಯನ್ನೂ, ಮೌಲ್ಯಪ್ರಜ್ಞೆಯನ್ನೂ ತಂದುಕೊಟ್ಟು, ತಮ್ಮ ಹಾಗೂ ತಮ್ಮ ಸಮಕಾಲೀನರಿಗೆ ಮಾತ್ರವಲ್ಲದೆ, ಎಲ್ಲ ಕಾಲಕ್ಕೂ ಬದುಕಿನ ಬೆಲೆಯನ್ನು ಹೆಚ್ಚಿಸುವುದರ ಮೂಲಕ ‘ಜೀವನ ದೊಡ್ಡದು’ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟ ಮಹಾ ವ್ಯಕ್ತಿಗಳ ಬದುಕು ಮತ್ತೆ ಮತ್ತೆ ಕವಿಗಳ ಕಾವ್ಯಕ್ಕೆ ಸ್ಫೂರ್ತಿಯನ್ನೊದಗಿಸುತ್ತಾ, ಅವುಗಳಲ್ಲಿ ಪ್ರಕಟವಾಗುತ್ತದೆ. ಇಂಥದೊಂದು ದೊಡ್ಡ ಜೀವನ ಬಸವಣ್ಣನವರದು.

ಬಸವಣ್ಣನವರ ಜೀವನ ಮೊದಲು ಕನ್ನಡದಲ್ಲಿ ಪ್ರಕಟವಾದದ್ದು ಹರಿಹರನ ‘ಬಸವರಾಜದೇವರ ರಗಳೆ’ಯಲ್ಲಿ. ಈ ದೃಷ್ಟಿಯಿಂದ ‘ಬಸವರಾಜದೇವರ ರಗಳೆ’ಗೆ ಬಸವಣ್ಣನವರನ್ನು ಕುರಿತ ಪ್ರಥಮಕೃತಿ ಎಂಬ ಪ್ರಶಸ್ತಿ ಸಲ್ಲಬಹುದಾದರೂ, ಬಸವಣ್ಣನವರನ್ನು ಕುರಿತ ಪ್ರಥಮ ಕೃತಿ ಬಸವಣ್ಣನವರ ವಚನಗಳೇ ಎಂಬ ಮಾತನ್ನು ಮರೆಯಬಾರದು. ಬಸವಣ್ಣನವರೆ ತಮ್ಮನ್ನು ಕುರಿತು ತಾವೇ ಬರೆದುಕೊಂಡ ಕಾವ್ಯ ಅವು. ಬಸವಣ್ಣನವರ ವ್ಯಕ್ತಿ ಚಿತ್ರಕ್ಕೆ ಅವರ ವಚನಗಳಿಗಿಂತ ಸಮರ್ಪಕವಾದ ಸಾಕ್ಷ್ಯ ಬೇರೆ ದೊರೆಯಲಾರದು. ಆದರೆ ಬಸವಣ್ಣನವರ ಬದುಕನ್ನು ಮೊಟ್ಟ ಮೊದಲು ಕನ್ನಡದಲ್ಲಿ ಅತ್ಯಂತ ಉತ್ಸಾಹದಿಂದ, ಶ್ರದ್ಧೆಯಿಂದ ಕೃತಿ ಮಾಡಿದವನು ಹರಿಹರ. ಬಸವಣ್ಣನವರ ಜೀವಿತ ಕಾಲಕ್ಕೆ ಬಹುಮಟ್ಟಿಗೆ ಸಮೀಪಕಾಲದವ ನಾಗಿರಬಹುದಾಗಿದ್ದ ಹರಿಹರ, ಬಸವಣ್ಣನವರ ಬದುಕನ್ನು ತನ್ನ ಕಾವ್ಯಕ್ಕೆ ವಸ್ತುವನ್ನಾಗಿ ಎತ್ತಿಕೊಂಡಾಗ, ಬಸವಣ್ಣನವರನ್ನು ಕುರಿತ ಎಷ್ಟೋ ಸಂಗತಿಗಳೂ ಇನ್ನೂ ಬಿಸಿಬಿಸಿಯಾಗೇ ಇದ್ದಿರಬೇಕು. ಜನಮನದಲ್ಲಿ ಬಸವಣ್ಣನವರನ್ನು ಕುರಿತು ಮನೆಮಾಡಿಕೊಂಡ ವಾರ್ತೆಗಳು; ಕೊಂಡಿ ಕಳಚಿ ಚದುರಿಬಿದ್ದ ಮುತ್ತಿನಂಥ ನೆನಪುಗಳು; ಕುತೂಹಲದ ನಾಲಗೆಗಳಲ್ಲಿ ಬಳ್ಳಿವರಿದ ಪವಾಡ ಸಂಗತಿಗಳು; ಕಿವಿಯಿಂದ ಕಿವಿಗೆ ಗರಿಗೆದರಿ ಹಾರಾಡುತ್ತಿದ್ದ ಉತ್ಪ್ರೇಕ್ಷಿತ-ಕಲ್ಪಿತ ವಿಷಯಗಳು; ಅಂದಿಗೆ ಲಭ್ಯವಾದ ವಾಸ್ತವಿಕ ಹಾಗೂ ಐತಿಹಾಸಿಕ ಸಾಮಗ್ರಿಗಳು; ಅವರಿವರಿಂದ  ಕೇಳಿದ ಅಥವಾ ಅಲ್ಲಲ್ಲಿ ದೊರೆತ ಬಸವಣ್ಣನವರ ವಚನಗಳು- ಅವು ಕೂಡಾ ಅಂದು, ಇವತ್ತಿನ ಹಾಗೆ ಸಮಗ್ರವಾಗಿ ನೋಡಲು ದೊರಕುತ್ತಿದ್ದುದು ಅಸಂಭವ- ಮತ್ತು ಆ ವಚನಗಳಲ್ಲಿ ಮಿನುಗುತ್ತಿದ್ದ ಆ ವ್ಯಕ್ತಿತ್ವದ ಸುಳುಹು-ಹೊಳಹುಗಳು, ಇಷ್ಟೆಲ್ಲಾ ಹಿನ್ನೆಲೆ ಇಂಥ ಜ್ವಲಂತವಾದ ವ್ಯಕ್ತಿತ್ವಕ್ಕೆ ಪ್ರಥಮ ಕವಿಯಾಗುವ ಪುಣ್ಯಕ್ಕೆ ಪಾತ್ರನಾದ ಹರಿಹರನಿಗೆ ಇದ್ದರೂ, ಅವನು ಬಸವಣ್ಣನವರ ಜೀವನವನ್ನು ಚಿತ್ರಿಸುವಲ್ಲಿ ಅನುಸರಿಸಿರುವ ಕ್ರಮ ಅಪ್ಪಟ ಪೌರಾಣಿಕವೇ ಆಗಿರುವುದು ಸೋಜಿಗದ ಸಂಗತಿ. ನಮ್ಮ ಕವಿಗಳಿಗೆ ಐತಿಹಾಸಿಕ ಪ್ರಜ್ಞೆಯೆ ಸಾಲದೆಂಬುದೂ, ಎಂತಹ ಐತಿಹಾಸಿಕ ಸಂಗತಿಗಳನ್ನೂ ಪುರಾಣದಲ್ಲಿ ಅದ್ದಿ ತೆಗೆದು, ರಮ್ಯೋಜ್ವಲವಾಗಿ ರೂಪಿಸುವುದರಲ್ಲಿ ನಿಸ್ಸೀಮರೆಂಬುದೂ, ತಿಳಿದಿರುವ ಸಂಗತಿಯಾದರೂ, ಹೆಮ್ಮೆಪಡುವ ವಿಷಯವೇನೂ ಅಲ್ಲ. ನಮ್ಮ ಕವಿಗಳಿಗೆ ವ್ಯಕ್ತಿಯ ‘ಚರಿತ್ರೆ’ ಮುಖ್ಯವಲ್ಲ, ಚಾರಿತ್ರ್ಯ ಮುಖ್ಯ; ಆ ಚಾರಿತ್ರ್ಯವನ್ನು ಪುರಾಣದ ನೆಲೆಗೇರಿಸಿ ಅತಿಶಯವನ್ನಾಗಿ ಮಾಡಿ ಹೇಳುವುದರಲ್ಲಿ ಆಸಕ್ತಿ. ಈ ದೃಷ್ಟಿಯಿಂದ ಬಸವಣ್ಣನವರಿಗೆ ಬಹುಮಟ್ಟಿಗೆ ಸಮೀಪಕಾಲದವನಾದ ಹರಿಹರನಿಂದ, ಬಸವಣ್ಣನವರ ‘ಚರಿತ್ರೆ’ಯನ್ನು ನಿರೀಕ್ಷಿಸಿದರೆ ನಾವು ನಿರಾಶರಾಗಬೇಕಾಗುತ್ತದೆ. ಆದರೂ ಹರಿಹರನ ಈ ಕೃತಿಯಲ್ಲಿ ಕಂಡುಬರುವ ಬಸವಣ್ಣನವರ ‘ಚರಿತ್ರೆ’ ಮುಂದೆ ಅವರನ್ನು ಕುರಿತು ಕೃತಿರಚನೆಮಾಡಿದ ಕವಿಗಳ ಕಾವ್ಯಗಳಲ್ಲಿನದಕ್ಕಿಂತ ಹೆಚ್ಚು ವಿಶ್ವಸನೀಯವಾದುದು ಎಂಬುದರಲ್ಲಿ ಸಂದೇಹವಿಲ್ಲ.[1]

ಹರಿಹರನು ಬಸವಣ್ಣನವರನ್ನು ಕುರಿತು ಬರೆದ ಕೃತಿಗೆ ಇರಿಸಿದ ಹೆಸರು ‘ಬಸವರಾಜದೇವರ ರಗಳೆ.’ ಹರಿಹರನ ಬಸವಣ್ಣ ಮೊದಲನೆಯದಾಗಿ ‘ಬಸವರಾಜ’ (ರಾಜ ಎಂಬ ಹೆಸರನ್ನು ಗಮನಿಸಿ. ಹರಿಹರನ ಪಾಲಿಗೆ ಅವನೆ ರಾಜ; ಮಂತ್ರಿ ಅಲ್ಲ!); ಎರಡನೆಯದಾಗಿ ‘ರಾಜ’ನಾದ ಈ ಬಸವ ‘ದೇವ’ರಾದ ಕತೆ ಇದು. ಈ ಹಣೆಹೆಸರಿನಲ್ಲಿ ಸೂಚಿತವಾಗುವ ಉದ್ದೇಶದಲ್ಲಿ, ಬಸವಣ್ಣನವರ ಬದುಕು ಕೇವಲ ಮಾನುಷ ಚಾರಿತ್ರವಲ್ಲ, ಅವತಾರದ ಮಾನುಷ ರೂಪದ ಚಾರಿತ್ರವೆಂಬುದು ಸೂಚಿತವಾಗಿದೆ.

ಬಸವಣ್ಣನವರು ಅಲೌಕಿಕ ವ್ಯಕ್ತಿ ಎಂಬುದನ್ನು ಯಾವಾಗ ಹರಿಹರ ಒಪ್ಪಿಕೊಂಡನೋ, ಆಗ ಆ ವ್ಯಕ್ತಿತ್ವದ ‘ಅವತಾರ’ ಕಾರಣ, ಉದ್ದೇಶ, ಪ್ರಯೋಜನಗಳನ್ನು ಸಮರ್ಥಿಸುವ ಪೌರಾಣಿಕ ಹಿನ್ನೆಲೆಯೊಂದನ್ನು ಕಲ್ಪಿಸುವ ಪ್ರಯತ್ನದಲ್ಲಿ ಕವಿಕಲ್ಪನೆ ಪ್ರವೃತ್ತವಾಗುತ್ತದೆ. ಹರಿಹರನ ಪ್ರಕಾರ ಈ ಶಿವಶರಣರು ಅವತರಿಸಿದ್ದಕ್ಕೆ ಕಾರಣ, ಅವರು ಕೈಲಾಸದಲ್ಲಿ ಎಸಗಿದ ಯಾವುದೋ ಒಂದು ಪ್ರಮಾದವೋ ಅಚಾತುರ‍್ಯವೋ ಎನ್ನುವುದು: ಒಮ್ಮೆ ಕೈಲಾಸದ ಶಿವನ ಸಭೆಯಲ್ಲಿ ವೃಷಭಮುಖನೆಂಬ ಗಣೇಶ್ವರನು, ಶಿವನ ಅಪ್ಪಣೆಯ ಪ್ರಕಾರ, ಪುಷ್ಪ ಪ್ರಸಾದವನ್ನು ವಿನಿಯೋಗಿಸುವಾಗ, ಎಲ್ಲರಿಗೂ ಕೊಟ್ಟು ಶಿವಕುಮಾರನಾದ ಷಣ್ಮುಖನಿಗೆ ಕೊಡುವುದು ತಪ್ಪಿ, ಶಿವನು ಎಲ್ಲರಿಗೂ ಕೊಟ್ಟೆಯ ಎಂದು ಕೇಳಿದಾಗ, ಎಲ್ಲರಿಗೆ ಕೊಟ್ಟೆನೆಂದು ‘ಸುಳ್ಳು’       ಹೇಳಿದ ಕಾರಣದಿಂದ, ಶಿವನು ಆಕ್ಷೇಪಿಸಿ “ಇದಱಿಂದ [ವೊ]ಂದು ಜನನಂ ನಿನಗೆ ದೊರಕಿತ್ತು, ಮುದದಿಂದ ಹೋಗಯ್ಯ ಜನನವಂ ನೀ ಹೊತ್ತು, ಧರಣಿಯೊಳು ವೃಷಭಮುಖ ಹುಟ್ಟು” [೧-೬೩ ರಿಂದ ೬೫] ಎಂದು ಬೆಸಸಲಾಗಿ, ಭವ ಬಂಧನ ಭವಪಾಶಕ್ಕೆ ಒಳಗಾಗಿ ಬಸವಣ್ಣನೆಂಬ ಅಭಿದಾನದಿಂದ ಮರ್ತ್ಯಕ್ಕೆ ಬರಬೇಕಾಗುತ್ತದೆ. ಹರಿಹರನು ತನ್ನ ಶರಣ-ಶರಣೆಯರ ‘ಅವತಾರ’ದ ಸಂಗತಿಯನ್ನು ನಿರೂಪಿಸುವಲ್ಲಿ ಇದೇ ಮಾದರಿಯನ್ನು ಅಥವಾ ಕಾವ್ಯತಂತ್ರವನ್ನು ಅನುಸರಿಸಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ಮಹಾವ್ಯಕ್ತಿಗಳ ಅವತಾರಕ್ಕೆ ಕಾರಣ, ಅವರು ಆ ಅಮರ್ತ್ಯ ಭೂಮಿಕೆಯಲ್ಲಿ ತಪ್ಪಿನಡೆದದ್ದೆ- ಎಂಬ ಒಂದು ಸಂಗತಿಯನ್ನು ಹರಿಹರ ತನ್ನ ಕಥಾತಂತ್ರದ ಬಹುಮುಖ್ಯವಾದ ಅಂಶವನ್ನಾಗಿ ಮಾಡಿಕೊಂಡು ತನ್ಮೂಲಕ ತನ್ನ ಪರಂಪರೆಯೊಂದನ್ನು ಸ್ಥಾಪಿಸಿದ್ದಾನೆ. ಹರಿಹರನ ಈ ಪರಂಪರೆ, ಮುಂದಿನ ಕೆಲವು ಕವಿಗಳಿಗೆ ಒಂದು ಸಂಪ್ರದಾಯವಾಗಿ ಪರಿಣಮಿಸಿತಾದರೂ, ಹದಿನೈದನೆಯ ಶತಮಾನದ ಹೊತ್ತಿಗೆ, ಬಸವಾದಿ ಮಹಾಮಹಿಮರ ಅವತಾರಕ್ಕೆ ಹರಿಹರನು ಕಲ್ಪಿಸಿದ ‘ಕಾರಣ’ದ ಬಗ್ಗೆ ಅಸಮಾಧಾನ ಮೂಡಿ, ಅವನನ್ನು ಖಂಡಿಸುವ ಪ್ರತಿಕ್ರಿಯೆ, ಗೂಳೂರು ಸಿದ್ಧವೀರಣ್ಣೊಡೆಯರ ‘ಶೂನ್ಯ ಸಂಪಾದನೆ’ಯಲ್ಲಿ ಪ್ರಕಟವಾಗಿದೆ. ಈ ಶೂನ್ಯ ಸಂಪಾದನಕಾರನ ಪ್ರಕಾರ ಬಸವಾದಿ ಪ್ರಮಥರು ಸಾಕ್ಷಾತ್ ಶಿವನ ಅವತಾರವೇ; ಅವರು-ಹರಿಹರನು ಭಾವಿಸಿದಂತೆ-ಶಿವಗಣಗಳಲ್ಲಿ ಒಬ್ಬರಲ್ಲ. ಅಥವಾ ಶಾಪದಿಂದ ಬಂದವರೂ ಅಲ್ಲ, ಎನ್ನುವ ಅಭಿಪ್ರಾಯ ಅತ್ಯಂತ ರಭಸದಿಂದ ಪ್ರತಿಪಾದಿತವಾಗಿದೆ. ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯಲ್ಲಿ ಬರುವ ಈ ಮಾತನ್ನು ಗಮನಿಸಿ: “ಇಂತೀ ಗುರುಲಿಂಗಜಂಗಮ ಮೂಱು ಆ ನಿಃಕಲಪರಶಿವಲಿಂಗವು ತಾನೆ. ಆ ಪರಶಿವಲಿಂಗವು ಜಗಹಿತಾರ್ಥವಾಗಿ ಮೂರಾಗಿ ಮರ್ತ್ಯಕ್ಕೆ ಅವತರಿಸಿದರೆ, ಇದೇನು ಕಾರಣ ಮರ್ತ್ಯಕ್ಕೆ ಬಂದರೆಂದು ಸಂಕಲ್ಪಿಸಿ, ಶಾಪದಿಂದ ಬಂದರೆಂದು ಆವನಾವನೊಬ್ಬ ನುಡಿವುತಿದ್ದಾನು, ಅವನು ಇಪ್ಪತ್ತೆಂಟು ಕೋಟಿ ನರಕದಲ್ಲಿ ರವಿಶಶಿವುಳ್ಳನ್ನೆಬರ ನರಕವನನುಭವಿಸುತಿರ್ಪನು.”[2] ಇದು ಬಸವಾದಿಗಳನ್ನು ‘ಶಾಪದಿಂದ ಬಂದರೆಂದು’ ಸಂಕಲ್ಪಿಸಿ ನುಡಿದ ಹರಿಹರನಿಗೆ (ಇಲ್ಲಿ ಅವನ ಹೆಸರು ಹೇಳುವುದೂ ನಿಕೃಷ್ಟವೆಂಬಂತೆ ಅಸಹನೆಯಿಂದ ‘ಆವನಾವನೊಬ್ಬ’ ಎನ್ನುತ್ತದೆ ಈ ವಿಡಂಬನ ಶೈಲಿ!) ಗೂಳೂರು ಸಿದ್ಧವೀರಣ್ಣೊಡೆಯನು ವಿಧಿಸುವ ಶಿಕ್ಷೆಯ ವೈಖರಿ. ಇಷ್ಟಕ್ಕೇ ನಿಲ್ಲದೆ, ಹರಿಹರನ ಕ್ರಮವನ್ನು ಈ ಒಂದು ವಿಚಾರದಲ್ಲಿ ಅನುಸರಿಸಿದ, ಅನುಸರಿಸಬಹುದಾದ ಇತರ ಕವಿಗಳನ್ನೂ ಕುರಿತು “……..ಇಂತೀ ಪರಶಿವಲಿಂಗವು ತನ್ನ ಲೀಲಾವಿನೋದಕ್ಕೆ ದೇವ ಭಕ್ತನೆಂಬ ಉಭಯನಾಮವ ಧರಿಸಿದ ಕ್ರಿಯಾಂಗವನಱಿಯದೆ ಶಾಪದಿಂದ ಬಂದರೆಂದು ಸಂಕಲ್ಪಿಸಿ ನುಡಿದವರಿಗೆ ನಾಯಕ ನರಕ ತಪ್ಪದು”[3] ಎಂಬ ಎಚ್ಚರಿಕೆಯನ್ನು ಕೊಡಲಾಗಿದೆ. ಹರಿಹರನು ಬಸವಾದಿಗಳ ಅವತಾರದ ಬಗ್ಗೆ ಶಾಪದ ಕಾರಣವನ್ನು ಕಲ್ಪಿಸಿದನೆಂಬಷ್ಟಕ್ಕೆ ಈ ಪ್ರತಿಭಟನೆ ಬಂದಂತೆ ತೋರಿದರೂ, ಹರಿಹರನು, ಬಸವ ಅಲ್ಲಮಪ್ರಭು ಮಹಾದೇವಿ ಇವರುಗಳನ್ನು ಕುರಿತು ಬರೆಯುವಾಗಲೂ, ಅವರು ಕೈಲಾಸದಲ್ಲೆಸಗಿದ ಯಾವುದೋ ಪ್ರಮಾದ ಅವರ ‘ಅವತಾರ’ಕ್ಕೆ ಶಾಪರೂಪದ ಕಾರಣವಾಯಿತೆಂದು ಹೇಳಿದ್ದು ಮಾತ್ರವಲ್ಲದೆ, ಅವರು ಮರ್ತ್ಯಕ್ಕೆ ಬಂದ ಮೇಲೆ ಸ್ವಲ್ಪ ಮಟ್ಟಿಗೆ ಲೌಕಿಕ ಭೋಗಗಳಲ್ಲಿ ಮಗ್ನರಾಗಿದ್ದರೆಂಬಂತೆ ಚಿತ್ರಿಸಿರುವುದೂ, ಹರಿಹರನ ನಂತರದ ಕೆಲವರಿಗೆ ಹಿತವಾಗದೆ ಹೋಯಿತೆಂಬ ಸಂಗತಿ ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯ ಸಂಪಾದನೆಯಲ್ಲಿ ಹೀಗೆ ಪ್ರಕಟವಾಗಿದೆ ಎಂದು ತೋರುತ್ತದೆ. ಹರಿಹರನು, ಈ ಶಿವಶರಣರು ಶಿವನ ಅಂಶಗಳೆಂದು ಹೇಳಿದರೆ, ಗೂಳೂರು ಸಿದ್ಧವೀರಣ್ಣೊಡೆಯನು, ಬಸವಾದಿಗಳು ಸಾಕ್ಷಾತ್ ಶಿವನೇ ಎಂದು ಸಾರುತ್ತಾನೆ. ಒಟ್ಟಿನ ಮೇಲೆ ಈ ಮಹಾ ವ್ಯಕ್ತಿಗಳು ಅವತಾರ ಪುರುಷರೂ, ಅಲೌಕಿಕ ವ್ಯಕ್ತಿಗಳೂ ಎಂಬುದು, ಶೂನ್ಯ ಸಂಪಾದನೆಕಾರನ ಹಾಗೂ ಹರಿಹರಾದಿ ಕವಿಗಳ ಏಕಾಭಿಪ್ರಾಯ. ಆದರೆ ಹರಿಹರನು ಈ ಅವತಾರ ಪುರುಷರ ಜನನಕ್ಕೆ ಕಲ್ಪಿಸಿದ ‘ಶಾಪ’ದ ಕಾರಣವನ್ನು ಕುರಿತು ಈ ಶೂನ್ಯ ಸಂಪಾದನಕಾರರು ಎತ್ತಿರುವ ಆಕ್ಷೇಪಣೆಯೂ, ಅದು ಪ್ರಕಟಿತವಾಗಿರುವ ರೀತಿಯಲ್ಲಿರುವ ಆಗ್ರಹವೂ ಸಮರ್ಪಕವಾಗಿದೆಯೆಂದು ನಮಗೆ ತೋರುವುದಿಲ್ಲ. ಶ್ರೀ ಪಿ.ಬಿ. ದೇಸಾಯಿಯವರೂ, “ಕೈಲಾಸದಲ್ಲಿ ಉದ್ದೇಶ ಪೂರ್ವಕವಾದ ಸುಳ್ಳನ್ನು ಹೇಳಿ, ಶಪಿತನಾಗಿ, ಬಸವಣ್ಣನವರು ಮರ್ತ್ಯದಲ್ಲಿ ಹುಟ್ಟಬೇಕಾಯಿತೆಂದು ಹರಿಹರನು ಕಲ್ಪಿಸಿದ ಸಂಗತಿ, ಬಸವಣ್ಣನವರ ಉತ್ತಮ ಚಾರಿತ್ರ್ಯಕ್ಕೆ ಪರೋಕ್ಷವಾಗಿ ಕಳಂಕ ಬಳಿಯುವಂತೆ ತೋರುವ ಕಾರಣದಿಂದಲೋ ಏನೊ ಹರಿಹರನ ಬಗ್ಗೆ ಅವನ ಅನುಯಾಯಿಗಳಿಗೆ ವಿಶ್ವಾಸ ಕಡಮೆಯಾಗಲು ತಕ್ಕಮಟ್ಟಿಗೆ ಕಾರಣವಾದಂತೆ  ತೋರುತ್ತದೆ”[4] ಎಂದು ತರ್ಕಿಸಿದ್ದಾರೆ. ಆದರೆ ನಮಗೇನೋ ಹರಿಹರನ ಈ ಕಲ್ಪನೆಯಲ್ಲಿ ಯಾವ ದೋಷವೂ ಕಾಣದು; ಅದರ ಬದಲು ಹರಿಹರನ ಈ ಕಲ್ಪನೆ ಬೇರೊಂದು ಅರ್ಥದಲ್ಲಿ ಅತ್ಯಂತ ಧ್ವನಿಪೂರ್ಣವಾಗಿದೆ ಎನ್ನಿಸುತ್ತದೆ. ಈ ಅಮರ್ತ್ಯಚೇತನಗಳು, ಕೈಲಾಸದಲ್ಲಿ ಮಾಡಿದ ಯಾವುದೋ ಪ್ರಮಾದದಿಂದ, ಶಿವನ ‘ಶಾಪ’ಕ್ಕೆ ಒಳಗಾಗಿ ಈ ಮರ್ತ್ಯದಲ್ಲಿ ಅವತರಿಸಲು ಕಾರಣವಾಯಿತೆಂಬ ಮಾತಿನಲ್ಲಿ, ಹರಿಹರ, ‘ಅವತಾರ’ದ ಕಲ್ಪನೆಯ ಬಗ್ಗೆ ಹಿಂದೂ ಸಂಪ್ರದಾಯದಿಂದ ಭಿನ್ನವಾದ ಒಂದು ವ್ಯಾಖ್ಯಾನವನ್ನು ಕೊಡುವುದರ ಮೂಲಕ, ಈ ಮರ್ತ್ಯದ ಮಹತ್ತನ್ನು ಎತ್ತಿ ಹೇಳಿದ್ದಾನೆ ಎಂದು ನಮಗೆನ್ನಿಸುತ್ತದೆ. ‘ಅವತಾರ’ ಎಂದರೆ ಭಾರತೀಯ ಸಂಪ್ರದಾಯದ ಪ್ರಕಾರ, ಭಗವಂತನೇ ಲೋಕ ಕಲ್ಯಾಣಾರ್ಥವಾಗಿ ಇಳಿದುಬರುವುದು ಎಂದರ್ಥ. ಗೂಳೂರು ಸಿದ್ಧವೀರಣ್ಣೊಡೆಯನು ಬಸವಾದಿಗಳ ‘ಅವತಾರ’ವನ್ನು ಈ ಅರ್ಥದಲ್ಲಿ ನೋಡಿ, ಹರಿಹರನು ಇದರಿಂದ ಭಿನ್ನವಾಗಿರುವ ಕಾರಣ ಆಕ್ಷೇಪಿಸಿದ್ದಾನೆ. ಈ ಆಕ್ಷೇಪಣೆಯ ರಭಸದಲ್ಲಿ, ಗೂಳೂರು ಸಿದ್ಧವೀರಣ್ಣೊಡೆಯನು ಬಸವಾದಿಗಳು ಮನುಷ್ಯರೆಂಬುದನ್ನೇ ಮರೆತು, ಅವರು ಶುದ್ಧರೂ ಪರಿಪೂರ್ಣರೂ ಆಗಿದ್ದರೆಂಬುದನ್ನು ಒತ್ತಿಹೇಳಲು ಹೊರಟು ಅವನ ಹೇಳಿಕೆ ಅವಾಸ್ತವವೂ, ಬಸವಾದಿಗಳ ಮಾನುಷ ವ್ಯಕ್ತಿತ್ವಕ್ಕೆ ಗಮನವನ್ನೆ ಕೊಡದ ಅತಿರೇಕಕ್ಕೆ ಹೋಗಿರುವುದೂ ಕಂಡುಬರುತ್ತದೆ. ಮೂಲತಃ ‘ಅಮರ್ತ್ಯಚೇತನ’ಗಳಾದ ಬಸವಾದಿಗಳು ಕೈಲಾಸದಲ್ಲಿ ಮಾಡಿದ ಯಾವುದೋ ತಪ್ಪಿನ ಕಾರಣದಿಂದ ಅವರು ಈ ನೆಲಕ್ಕೆ ಅವತರಿಸಿದರೆಂಬ ಹರಿಹರನ ಮಾತಿನಲ್ಲಿ, ಈ ಮರ್ತ್ಯವೆಂಬುದು, ವ್ಯಕ್ತಿಗಳು ಕೈಲಾಸದಂಥ ಅಮರ್ತ್ಯ ಭೂಮಿಕೆಯಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಸಾಧನರಂಗ, ಸಂಸ್ಕಾರಕ್ಷೇತ್ರ ಎನ್ನುವ ಅರ್ಥ ಧ್ವನಿತವಾಗುತ್ತದೆ. ಇದು ವೀರಶೈವ ಧರ್ಮವು ಮರ್ತ್ಯವನ್ನು ಕುರಿತು ತಾಳುವ ನಿಲುವಿಗೂ ಸಮ್ಮತವಾಗಿದೆ. ವೀರಶೈವ ಧರ್ಮದ ಪ್ರಕಾರ, ಈ ಮರ್ತ್ಯವೆಂಬುದು, ಕೇವಲ ಮಿಥ್ಯೆಯಲ್ಲ ಮತ್ತು ಜೀವ ತಪ್ಪಿಸಿಕೊಂಡು ಓಡಬೇಕಾದ ಸ್ಥಳವಲ್ಲ; ಇದೊಂದು ಆತ್ಮಸಂಸ್ಕಾರ ಕ್ಷೇತ್ರ. ಬಸವಣ್ಣನವರ ಮಾತಿನಲ್ಲಿ ಹೇಳಬೇಕಾದರೆ “ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ.” ಇಲ್ಲಿ ಜೀವ ಪುಟಗೊಂಡು, ಕಾಳಿಕೆಯನ್ನು  ಕಳೆದುಕೊಂಡು, ಶಿವಚಾರಿತ್ರ್ಯದ ಮುದ್ರೆಯನ್ನೊತ್ತಿಕೊಂಡು ಇಲ್ಲಿಯೂ ಸಲ್ಲುವ, ಅಲ್ಲಿಯೂ ಸಲ್ಲುವ ಯೋಗ್ಯತೆಯನ್ನು ಪಡೆಯಬೇಕು. ಆದ ಕಾರಣ ಕೈಲಾಸದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲೆಂದು ಬಸವಾದಿಗಳು ಈ ಮರ್ತ್ಯಕ್ಕೆ ಬಂದರೆಂದು ಭಾವಿಸುವುದರಿಂದ ಈ ಮರ್ತ್ಯದ ಬೆಲೆ ಹೆಚ್ಚುತ್ತದೆ. ಈ ಜೀವ ತನ್ನ ಸಂಸ್ಕಾರಕ್ಕೆ, ಆಧ್ಯಾತ್ಮಿಕ ಸಾಧನೆಗೆ ಈ ಮರ್ತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎನ್ನುವುದು ಬಹು ಮಹತ್ವದ ಸಂಗತಿ.[5] ಚಾಮರಸನು ಈ ಒಂದು ಅಭಿಪ್ರಾಯವನ್ನೆ ಪ್ರಭುಲಿಂಗಲೀಲೆಯ ಆರಂಭದ ಭಾಗದಲ್ಲಿ ಬಹು ಸೊಗಸಾಗಿ ನಿರೂಪಿಸಿದ್ದಾನೆ; “ಭೋಗ ಭೂಮಿಯ ಭೋಗ ತನುವಿನಲಾಗದು ಅನುಪಮ ಸಿದ್ಧಿ, ಕರ್ಮೋದ್ಯೋಗ ಭೂಮಿಯ ಕರ್ಮತನುವಿನಲಲ್ಲದೆ”[6] ಎಂಬ ಮಾತಿನಲ್ಲಿ. ಈ ಮರ್ತ್ಯ, ಕರ್ಮಭೂಮಿ; ಕೈಲಾಸಾದಿಗಳು, ಭೋಗಭೂಮಿ. ಅನುಪಮಸಿದ್ಧಿ ಸಾಧಿತವಾಗಬೇಕಾದರೆ ಈ ಭೋಗಭೂಮಿಯ ಭೋಗತನುವಿನಲ್ಲಿ ಸಾಧ್ಯವಿಲ್ಲ;  ಆದ್ದರಿಂದ ‘ಯೋಗ ಯೋಗ್ಯರು’ ‘ಕರ್ಮೋದ್ಯೋಗ ಭೂಮಿಯ ಕರ್ಮತನು’ ವನ್ನಾಶ್ರಯಿಸಿ ಮರ್ತ್ಯಕ್ಕೆ ಬರಬೇಕಾಗುತ್ತದೆ ಎಂಬುದು ಆ ಮಾತಿನ ಅರ್ಥ. ಅವತಾರಕ್ಕೆ ಎಷ್ಟು ರೀತಿಗಳಿವೆಯೋ ಏನೋ; ಆದರೆ ಈ ಕೆಲವು ವಿಚಾರಗಳನ್ನು ಗಮನಿಸಿದರೆ ಅವತಾರದ ಕ್ರಮವನ್ನು ಎರಡೆಂದು ಎಣಿಸಬಹುದು. ಒಂದು, ನಿತ್ಯಶುದ್ಧವಾದ ದೈವೀಚೇತನ ಲೋಕಕಲ್ಯಾಣಕ್ಕಾಗಿ, ಮರ್ತ್ಯದೇಹವೊಂದನ್ನು ಆಶ್ರಯಿಸಿ ಇಳೆಗಿಳಿದು ಬರುವುದು; ಇನ್ನೊಂದು, ‘ಅನುಪಮಸಿದ್ಧಿ’ಯನ್ನು ಪಡೆಯದಿದ್ದ ಯೋಗ ಯೋಗ್ಯ ಅಮರ್ತ್ಯ ಚೇತನಗಳು, ಯಾವುದೋ ನೆಪದಿಂದ ಭೋಗಭೂಮಿಯ ಭೋಗ ತನುವಿನಲ್ಲಿ, ಇಳೆಯಲ್ಲಿ ಹುಟ್ಟಿ, ತಮ್ಮ ಸಾಧನೆಯಿಂದ ಸಿದ್ಧಿಯನ್ನು ಸಂಪಾದಿಸುವುದರ ಮೂಲಕ ಲೋಕಕಲ್ಯಾಣವನ್ನೂ ಸಾಧಿಸುವುದು. ಮೊದಲನೆಯದು ಗೂಳೂರು ಸಿದ್ಧವೀರಣ್ಣೊಡೆಯನಿಗೆ ಸಮ್ಮತವಾದುದು; ಎರಡನೆಯದು ಹರಿಹರನಿಗೆ ಸಮ್ಮತವಾದುದು, ಹಾಗೂ ವೀರಶೈವ ದರ್ಶನಕ್ಕೆ ಉಚಿತವಾದುದು. ಈ ಅಮರ್ತ್ಯ ಚೇತನಗಳು, ಹೀಗೆ ‘ಅನುಪಮಸಿದ್ಧಿ’ಗಾಗಿ ಇಳಿಯಬೇಕಾದರೆ ಒಂದು ಕಾರಣಬೇಕಲ್ಲ? ಅದಕ್ಕೆಂದೇ ಹರಿಹರ ‘ಶಾಪ’ದ ಸಂದರ್ಭವನ್ನು ನಿರ್ಮಿಸಿದ್ದಾನೆ. ಅವರು ಇನ್ನೂ ‘ಸಿದ್ಧಿ’ಯನ್ನು ಪಡೆದವರಾಗದ ಕಾರಣದಿಂದಲೇ ಕೈಲಾಸದಂಥ ಅಮರ್ತ್ಯ ಭೂಮಿಕೆಯಲ್ಲಿ ‘ಪ್ರಮಾದ’ವೆಸಗಲು ಕಾರಣವಾಯಿತು. ಆದುದರಿಂದಲೇ ಅವರು ಮಹಾಸಾಧಕರಾಗಿ ಈ ಮರ್ತ್ಯದಲ್ಲಿ ಕಾಣಿಸಿಕೊಳ್ಳಲು ಅದು ನೆಪವಾಯಿತು. ಯಾವ ದೃಷ್ಟಿಯಿಂದ ನೋಡಿದರೂ ಹರಿಹರನು ಈ ಮಹಾವ್ಯಕ್ತಿಗಳ ಅವತಾರಕ್ಕೆ ಕಲ್ಪಿಸಿರುವ, ಹಿನ್ನೆಲೆ ಅತ್ಯಂತ ಉಚಿತವಾಗಿದೆ; ವೀರಶೈವ ಧರ್ಮವು ಮರ್ತ್ಯವನ್ನು ಕುರಿತು ತಾಳುವ ನಿಲುವಿಗೆ ಅತ್ಯಂತ ಸೊಗಸಾದ ಪೌರಾಣಿಕ ಪ್ರತಿಮೆಯಾಗಿದೆ. ಸ್ವರ್ಗದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಜೀವ ಈ ಭೂಮಿಗೆ ಬರಬೇಕು[7] (ಶಾಪದಿಂದಲಾದರೂ ಬಂದಿರಲಿ, ಅನುಗ್ರಹದಿಂದಲಾದರೂ ಬಂದಿರಲಿ) ಎಂಬ ಭಾವನೆಯೇ ಸೊಗಸಾಗಿದೆ- ಇಲ್ಲಿ ಮನುಷ್ಯನಾದವನು ನಡೆದುಕೊಳ್ಳಬೇಕಾದ ರೀತಿಯ ನಿರ್ದೇಶನದ ದೃಷ್ಟಿಯಿಂದ ಮತ್ತು ಮರ್ತ್ಯದ  ಮಹತ್ತನ್ನು ಸಮರ್ಥಿಸುವ ದೃಷ್ಟಿಯಿಂದ.

ಹರಿಹರನ ಕಾಲಕ್ಕಾಗಲೆ ಬಸವಣ್ಣನವರು- ಕೊಂಚಕಾಲದ ಹಿಂದೆ ಬದುಕಿ ಗತಿಸಿದ  ಮನುಷ್ಯ ವ್ಯಕ್ತಿಗಳೆ ಆಗಿದ್ದರೂ- ಜನಮನದಲ್ಲಿ ಅವರು ಅಲೌಕಿಕ ವ್ಯಕ್ತಿಗಳೆಂಬ ಭಾವನೆ ಪ್ರಚಲಿತವಾಗಿದ್ದಿರಬೇಕು. ಈ ಜನಮನದ ಭಾವನೆಗೆ ಹರಿಹರನು ಒಂದು ರೂಪವನ್ನು ತನ್ನ ‘ಬಸವರಾಜದೇವರ ರಗಳೆ’ಯಲ್ಲಿ ಕೊಡಬೇಕಾಯಿತು. ಹರಿಹರನ ದೃಷ್ಟಿಯಲ್ಲಿ ಬಸವಣ್ಣನವರು ಒಬ್ಬ ಕಾರಣ ಪುರುಷರು. ಹರಿಹರ ಮತ್ತೆ ಮತ್ತೆ ಈ ಕೃತಿಯ ಉದ್ದಕ್ಕೂ, ಬಸವಣ್ಣನವರ ಬಗೆಗೆ ‘ಕಾರಣಿಕ’ -ಎಂದರೆ ಯಾವುದೋ ಒಂದು ಮಹತ್ವದ ಕಾರಣಕ್ಕಾಗಿ ಅವತರಿಸಿದವರು -ಎನ್ನುವ ಮಾತನ್ನು ಹೇಳಿ, ಅದನ್ನು ಸಮರ್ಥಿಸುತ್ತಾನೆ. ಹರಿಹರನ ಪ್ರಕಾರ, ಬಸವಣ್ಣನವರ ಜೀವನದ ‘ಕಾರಣ’, ಶಿವಸಮಯೋದ್ಧರಣ. ಪ್ರಥಮ ಸ್ಥಲದಲ್ಲೆ ಬಸವಣ್ಣನವರು ಬಾಲ್ಯದಲ್ಲಿ ಬೆಳೆದ ರೀತಿಯನ್ನು ಕುರಿತು ಹರಿಹರ ‘ಬಸವಂ ಪರಸಮಯಕ್ಕುಬ್ಬಸಮಂ ಮಾಡುತೆ….. ಬೆಳೆವುತ್ತಿರ್ದಂ’ (೧-೧೫೯) ಎನ್ನುತ್ತಾನೆ. ಇನ್ನೊಂದೆಡೆ ‘ಪರಸಮಯದ ಗರ್ವಮಂ ನಿಲಿಸಿ ಭಕ್ತರಂ ಗೆಲಿಸಿ, ಪ್ರತ್ಯಕ್ಷಂಗಳಂ ತೋಱಿ’ (೪:೫೯-೬೦) ಎಂಬ ಮಾತು ಬರುತ್ತದೆ. ಮತ್ತೊಂದೆಡೆ ‘ಶಿವಸಮಯವನುದ್ಧರಿಸುವೆ ಪರಸಮಯಮಂ ಸಂಹರಿಸುವೆ’ (೮: ೪೫-೪೬) ಎನ್ನುವ ಮಾತಿದೆ. ಇಲ್ಲೆಲ್ಲಾ ಶಿವಸಮಯದ ಉದ್ಧರಣ, ಪರಸಮಯದ ಗರ್ವವನ್ನು ಮುರಿದು ಅದನ್ನು ಸಂಹರಿಸುವ “ಕಾರಣಿಕತನ”ವನ್ನು ತನ್ನ ಅವತಾರದ ಉದ್ದೇಶವನ್ನಾಗಿ ಬಸವಣ್ಣನು ಮಾಡಿಕೊಂಡನೆಂಬ ಅರ್ಥ ಬರುತ್ತದೆ. ಇಲ್ಲಿನ ಪರಸಮಯ, ಬಸವಣ್ಣನವರ ಕಾಲದಲ್ಲಿ ಪ್ರವರ್ತನಗೊಂಡ ವೀರಶೈವ ಧರ್ಮಕ್ಕೆ ಪ್ರತಿಸ್ಫರ್ಧಿಯಾಗಿ ನಿಂತ ವೈದಿಕ ಧರ್ಮ ಎನ್ನುವುದು ನಿರ್ವಿವಾದವಾಗಿ ಈ ಕೃತಿಯ ಉದ್ದಕ್ಕೂ ಸ್ಪಷ್ಟವಾಗಿದೆ. ‘ಕಾರಣಿಕ’ ಎಂಬ ವಿಶೇಷಣವನ್ನು ಹರಿಹರ ಪ್ರಜ್ಞಾಪೂರ್ವಕವಾಗಿಯೇ ಹೇಳಿಕೊಂಡು ಹೋಗಿದ್ದಾನೆ. ತನ್ನ ಕೃತಿಯ ಇತರ ಪಾತ್ರಗಳ ಬಾಯಲ್ಲೂ ಹೇಳಿಸಿದ್ದಾನೆ. ‘ಧಾರುಣಿಗೆ ಕಾರಣಿಕನಪ್ಪ ಬಸವಂ’ (೨:೧) ‘ಪಾಷಂಡಿ ಭೂಮಿಯೊಳು ಶಿವಭಕ್ತಿಯನಾರಂಭಿಸಿ, ಸಾಮರ್ಥ್ಯವಂ ಬಿತ್ತಿ, ಪ್ರತ್ಯಕ್ಷಂಗಳಂ ತೋರಿ, ಗಣಪರ್ವಮಂ ಸುಫಲಂ ಮಾಡಲೆಂದು ಬಂದ ಕಾರಣಿಕ ಬಸವಂ’ (೮:೫೬-೫೯) ಎಂದು ಕವಿಯೇ ಸ್ತುತಿಸಿದ್ದಾನೆ. ಕಪ್ಪಡಿ ಸಂಗಮಕ್ಕೆ ಬಂದ ಬಸವಣ್ಣನನ್ನು ಕಂಡು ಈಶಾನ ಗುರುಗಳು ಈತ ಕಾರಣಿಕ ನಾಗಲೆವೇಳ್ಕುಂ (೨:೬೬-೬೭) ಎಂದುಕೊಳ್ಳುತ್ತಾರೆ. ‘ಶರಣ ಕಾರಣಿಕ ನೀತಂ’ (೫:೯೪) ‘ಈತಂ ಕಾರಣಿಕನೀತಂ’ (೫:೯೪) ಎಂದು ಬೆರಗಾಗುತ್ತಾರೆ ಬಿಜ್ಜಳನ ಭಂಡಾರದವರು. ಅಂತೂ ಹರಿಹರನ ಪಾಲಿಗೆ ಬಸವಣ್ಣ ‘ಕಾರಣಿಕ’ ವ್ಯಕ್ತಿ. ಶಿವಸಮಯವನ್ನುದ್ಧರಿಸಿ, ಪರಸಮಯವನ್ನು ಭಂಗಿಸಿ, ಪ್ರತ್ಯಕ್ಷ (ಪವಾಡ) ಹಾಗೂ ಸಾಮರ್ಥ್ಯಗಳನ್ನು ಮೆರೆಯಲೆಂದು ಬಂದವನು. ಈ ‘ಕಾರಣಿಕ’ನ ಚರಿತ್ರೆ ಅಘಟಿತ ಘಟನೆಗಳಿಂದಲೆ ಚಿತ್ರಿತವಾಗಿದೆ : ಬಸವಣ್ಣನವರು ಸಂಗಮ ಕ್ಷೇತ್ರದಲ್ಲಿ ನಂದೀಶ್ವರನ ಮುಖದಿಂದ ಇಷ್ಟಲಿಂಗವನ್ನು ಪಡೆದದ್ದು; ಬಿಜ್ಜಳನ ಭಂಡಾರದಲ್ಲಿ ಗಣಕರು ಮಾಡಿದ ತಪ್ಪನ್ನು ತೋರಿಸಿಕೊಟ್ಟದ್ದು; ಬದನೆಕಾಯನ್ನು ಲಿಂಗವನ್ನಾಗಿ ಮಾಡಿದ್ದು: ತಾವು ಶಿವನಿಗರ್ಪಿಸಿದ ಕೇತಕೀ ಕುಸುಮವನ್ನು ಎಲ್ಲಾ ಶಿವಶರಣರ ಕರಂಡಗೆಯ ಲಿಂಗದಲ್ಲಿ ತೋರಿಸಿದ್ದು; ಕಂಬಳಿಯ ನಾಗಿದೇವನ ಉಂಗುಟದಿಂದ ಹಾಲಿನ ಹೊಳೆ ಹರಿಯಿಸಿದ್ದು; ಬಸವನು ನಿದ್ದೆಯಲ್ಲಿದ್ದಾಗ ಜಂಗಮರು ಬಂದು ಹೋದಾಗ, ಅವನ ಪ್ರಾಣ ಅವರ ಹಿಂದೆಯೇ ಹೋದದ್ದು; ಬಿಜ್ಜಳನ ಭಂಡಾರದ ಹೊನ್ನು ತನಿಖೆಯ ಕಾಲದಲ್ಲಿ ಇಮ್ಮಡಿಯಾದದ್ದು; ಮಹಾದೇವಿ ಶೆಟ್ಟಿಯರಿಗಾಗಿ ಶಿವನಿಂದ ಹೊನ್ನಿನ ಮಳೆಯನ್ನೇ ಕರೆಯಿಸಿದ್ದು- ಇತ್ಯಾದಿಗಳನ್ನು ನೋಡಿದರೆ ಹರಿಹರನ ಕಾವ್ಯ ಎಂಥ ಪೌರಾಣಿಕ ಪಥವನ್ನು ಹಿಡಿದಿದೆ ಎಂಬುದು ಗೊತ್ತಾಗುತ್ತದೆ. ಕಾರಣಿಕತನ ಮತ್ತು ಪವಾಡಗಳು ಸೇರಿದರೆ ಮೂಡುವುದು ಜೀವನ ಚರಿತ್ರೆ ಅಲ್ಲ; ಪುರಾಣ. ಇಷ್ಟಾದರೂ “ಬಸವಣ್ಣನ ಅಲೌಕಿಕ ಕಾರ್ಯಗಳನ್ನೂ ಅದ್ಭುತಗಳನ್ನೂ ಮಹಿಮೆಗಳನ್ನೂ ಹರಿಹರನು ಮೇಲಿಂದ ಮೇಲೆ ಉದ್ಘೋಷಿಸಿದರೂ ಆತನ ಸರಳವಾದ ಮಾನವ ಹೃದಯವನ್ನು ಮಾತ್ರ ಎಲ್ಲಿಯೂ ಮರೆ ಮಾಡಿಲ್ಲ”[8] ಎಂಬುದು ಗಮನಾರ್ಹವಾದ ಸಂಗತಿಯಾಗಿದೆ.

-೨-

ಹರಿಹರನು ತನ್ನ ಈ ರಗಳೆಯಲ್ಲಿ ಬಸವಣ್ಣನವರ ಬದುಕನ್ನು ನಾಲ್ಕು ಘಟ್ಟಗಳಲ್ಲಿ ಚಿತ್ರಿಸಿದ್ದಾನೆ. ಮೊದಲನೆಯದು, ಬಸವಣ್ಣನವರ ಜನನ ಬಾಲ್ಯ ಮತ್ತು ಪರಂಪರಾಗತವಾದ ಧರ್ಮದ ಬಗ್ಗೆ ಅವರು ತೋರಿದ ದಿಟ್ಟತನದ ಪ್ರತಿಕ್ರಿಯೆ, ಗೃಹತ್ಯಾಗ, ಕಪ್ಪಡಿ ಸಂಗಮಕ್ಕೆ ಬಂದದ್ದು. ಬಾಗೆವಾಡಿಯಲ್ಲಿ ಕಮ್ಮೆಗುಲದ ವಿಪ್ರನಾದ ಮಾದಿರಾಜನಿಗೂ ಅವನ ಸತಿ ಮಾದಲಾಂಬೆಗೂ ಮಗನಾಗಿ ಹುಟ್ಟಿ ‘ಲಿಂಗಮಂ ತೋಱೆ ಕಣ್ದೆರೆದು ಸುಖಿಯಾಗು’ತ್ತ ಬೆಳೆದ ಬಸವಣ್ಣನವರು ಎಳೆಯಂದಿನಲ್ಲೆ ತಂದೆ ತಾಯಂದಿರನ್ನು ಕಳೆದುಕೊಂಡು, ಶಿವಭಕ್ತಿಯೇ ಮುಪ್ಪುಗೊಂಡಂತಿದ್ದ ಮುತ್ತಜ್ಜಿಯ ಆರೈಕೆಯಲ್ಲಿ ಬೆಳೆದು ಯೌವನಸ್ಥರಾಗುತ್ತಾರೆ. ಒಂದು ದಿನ “ಕರ್ಮಲತೆಯಂತಿರ್ದ ಜನ್ನಿವಾರಮಂ ಕಳೆದು ಬಿಸುಟು, ಹೋತಿನ ಗಂಟಲಂ ಬಿಗಿವಂತಿರ್ದ ಮೌಂಜಿಯಂ ಪಱಿದು ಬಿಸುಟು” (೨; ೪೨-೪೪), ಮನೆಮಠ ಬಂಧು ಬಾಂಧವರನ್ನು ವಿಚಾರಿಸದೆ ಕಪ್ಪಡಿ ಸಂಗಮಕ್ಕೆ ಬರುತ್ತಾರೆ. ಬಸವಣ್ಣನ ಬದುಕಿನ ಈ ಹಂತದಲ್ಲಿ ಎರಡು ಮುಖ್ಯವಾದ ಅಂಶಗಳಿವೆ: ಒಂದು ಬಸವಣ್ಣನು “ಲಿಂಗಮಂ ತೋಱೆ ಕಣ್ತೆರೆದು ಸುಖಿ”ಯಾದನೆಂದು ಹರಿಹರ ಹೇಳುವಲ್ಲಿ, ಬಸವಣ್ಣನವರ ಶಿವಭಕ್ತಿ ಅವರ ಹುಟ್ಟಿನೊಡನೆಯೆ ಬಂದದ್ದು ಎನ್ನುವುದು ಸೂಚಿತವಾಗಿದೆ. ಎರಡನೆಯದು, ಅವರು ತಮಗೆ ವಿಪ್ರಕುಲದಿಂದ ಬಂದ ಜನಿವಾರ ಮತ್ತು ಮೌಂಜಿಗಳನ್ನು ಹರಿದು ಬಿಸುಟ ಸಂದರ್ಭದಲ್ಲಿ ಕಂಡುಬರುವ ಕ್ರಾಂತಿಕಾರಕ ಮನೋಧರ್ಮ. ತನ್ನ ಪೂರ್ವ ಪರಂಪರೆಯಿಂದ ಭಿನ್ನವಾದ ಒಂದು ಹಾದಿಯನ್ನು ತುಳಿಯುವ ಸಂಕಲ್ಪ ರೂಪದ ಈ ಪ್ರತಿಕ್ರಿಯೆಯ ಹಿಂದೆ ಇರುವ ಆ ದಿಟ್ಟತನ, ತನಗೆ ಸರಿತೋರದ್ದನ್ನು ಕಣ್ಣುಮುಚ್ಚಿಕೊಂಡು ಅನುಸರಿಸುವುದರಲ್ಲಿ ಅರ್ಥವಿಲ್ಲ ಎಂಬ ವೈಚಾರಿಕ ಪ್ರಜ್ಞೆ ಇಲ್ಲಿ ಸ್ಫುಟವಾಗಿ ಪ್ರಕಟಗೊಂಡಿದೆ. ಈ ಕ್ರಿಯೆ ನಡೆದದ್ದು ಉಪನಯನ ಸಂದರ್ಭದಲ್ಲಿ ಎಂದೇನೂ ಇಲ್ಲಿ ಸೂಚಿತವಾಗಿಲ್ಲ. ಆದರೆ ಈ ಸಂದರ್ಭ ಮಾತ್ರ ಅತ್ಯಂತ ಕ್ರಾಂತಿಕಾರಕವಾದ ಘಟನೆಯಾಗಿ ತೋರುತ್ತದೆ. ಇಂಥ ಪ್ರಸಂಗವನ್ನು ಹರಿಹರ ತೀರಾ ಸರಳವಾಗಿ, ತಣ್ಣಗೆ ಹೇಳಿ ಕೈ ತೊಳೆದುಕೊಂಡಿದ್ದಾನೆ. ಆದರೂ ಬಸವಣ್ಣನವರ ವ್ಯಕ್ತಿತ್ವದ ಬಹುಮುಖ್ಯ ಲಕ್ಷಣಗಳಾದ ಭಕ್ತಿ ಹಾಗೂ ವಿಮರ್ಶನ ಪ್ರಜ್ಞೆ ಇವುಗಳು ಇಲ್ಲಿ ಸೂಚಿತವಾಗಿವೆ.

ಬಸವಣ್ಣನವರ ಬದುಕಿನ ಎರಡನೆಯ ಘಟ್ಟ, ಕಪ್ಪಡಿಯ ಸಂಗಮದಲ್ಲಿ ಅವರು ನಡೆಯಿಸಿದ ಏಕಾಂತ ಭಕ್ತಿಸಾಧನೆ ಮತ್ತು ಸಂಗಮನಾಥನಿಂದ ಅವರಿಗೆ ದೊರೆತ ಲೋಕ ಕಲ್ಯಾಣದ ನಿರ್ದೇಶನ. ಎರಡೂವರೆ ಸ್ಥಲಗಳಷ್ಟು ವಿಸ್ತಾರದಲ್ಲಿ ಹರಿಹರನು ಬಸವಣ್ಣನವರ ಏಕಾಂತ ಭಕ್ತಿಸಾಧನೆಯನ್ನು ಮೈದುಂಬಿ ವರ್ಣಿಸಿದ್ದಾನೆ. ಈ ಸಂದರ್ಭದಲ್ಲಿ ಕಂಡುಬರುವ  ಬಸವಣ್ಣನ ಭಕ್ತಿಯ ತೀವ್ರತೆ, ಅವರ ಪೂಜಾವಿಧಾನ, ಸಂಗಮೇಶ್ವರನಿಗೂ ಅವರಿಗೂ ಇದ್ದ ವಾತ್ಸಲ್ಯ ಮತ್ತು ಮಧುರಭಾವ ಮಿಶ್ರಿತವಾದ ಅನ್ಯೋನ್ಯ ಸಂಬಂಧದ ರಮ್ಯತೆ, ಅತಿಶಯವಾಗಿ ಮೈದೋರಿದೆ. ಸಂಗಮನಾಥನು ಇಲ್ಲಿಯೆ ಬಸವಣ್ಣನನ್ನು ಕುರಿತು ‘ಎಲೆ ಮಗನೆ ಬಸವ ಬಸವಣ್ಣ ಬಸವಿದೇವಿ ನಿನ್ನಂ ಮಹೀತಳದೊಳು ಮೆಱೆದಪೆವು, ನೀಂ ಬಿಜ್ಜಳರಾಯನಿಪ್ಪ  ಮಂಗಳವಾಡಕ್ಕೆ ಪೋಗು, [೪:೨೪-೨೫] ಎಂದು ಅಪ್ಪಣೆಮಾಡಿ, ಅವನಿಗೆ ಅಭಯವನ್ನು ಕೊಟ್ಟು ನಂದೀಶ್ವರನ ಮುಖದಿಂದ ಇಷ್ಟಲಿಂಗ ದೀಕ್ಷೆಯನ್ನು ಕೊಡಿಸಿ ಅವನನ್ನು ಮಂಗಳವಾಡದ ಕಾರ್ಯಕ್ಷೇತ್ರಕ್ಕೆ ಕಳುಹಿಸಿಕೊಡುತ್ತಾನೆ.

ಇನ್ನು ಹರಿಹರನ ಪ್ರಕಾರ ಬಸವಣ್ಣನ ಬದುಕಿನ ಮೂರನೆಯ ಫಟ್ಟ, ಬಿಜ್ಜಳರಾಯನ ಮಂಗಳವಾಡದ ಕಾರ್ಯಕ್ಷೇತ್ರದಲ್ಲಿ. ಇಲ್ಲಿ ಬಸವಣ್ಣನು ಕರಣಿಕನಾಗಿ, ಭಾಂಡಾರಿಯಾಗಿ ದಂಡಾಧೀಶನಾಗಿ, ಗಂಗಾದೇವಿ ಮಾಯಿದೇವಿಯರನ್ನು ಮದುವೆಮಾಡಿಕೊಂಡು ಸಂಸಾರಿಯಾಗಿ, ಶರಣಜನ ಕಿರಣ ಕೇಂದ್ರವಾಗಿ, ನಿತ್ಯ ಲಿಂಗಾರ್ಚನೆ ನಿತ್ಯ ದಾಸೋಹದ ಶಿವಪೂಜಾ ಸಂಭ್ರಮದಲ್ಲಿ ‘ಸಾಮರ್ಥ್ಯಂಗಳಂ ತೋರಿ’, ಬೇಡಿದವರಿಗೆ ಬೇಡಿದ್ದನ್ನು ನೀಡುತ್ತಾ, ಶಿವಸಮಯವನ್ನುದ್ಧರಿಸುತ್ತಾ, ಪರಸಮಯವನ್ನು ಭಂಗಿಸುತ್ತಾ  ‘ಬಸವನ ಮಾತೆ ಮಾತು, ಬಸವಣ್ಣನ ಭಕ್ತಿಯೆ ಭಕ್ತಿ… ಬಸವನ ನೇಮವೆ ನೇಮವುರ್ವಿಯೊಳ್’ (೮-೧) ಎನ್ನುವ ಪ್ರಶಂಸೆಗೆ ಪಾತ್ರನಾಗುತ್ತಾನೆ.

ಇಲ್ಲಿಯವರೆಗೆ ಮೂರು ಘಟ್ಟಗಳಲ್ಲಿ ವಿಸ್ತಾರವಾದ ನದಿಯಂತೆ ಹರಿದುಬಂದ ಹರಿಹರನ ಕಥಾಪ್ರವಾಹ, ಬಸವಣ್ಣನವರ ಕಡೆಗಾಲದ ಬದುಕನ್ನು ಚಿತ್ರಿಸುವ ಹೊತ್ತಿಗೆ ತಟಕ್ಕನೆ ಅವಸರದ ಪ್ರಪಾತದಲ್ಲಿ ಧುಮ್ಮಿಕ್ಕಿ ಸದ್ದಿಲ್ಲದೆ ನಿಂತುಹೋದಂತೆ ಚಿತ್ರಿತವಾಗಿರುವುದು ಆಶ್ಚರ್ಯದ, ಕುತೂಹಲದ, ಸಮಸ್ಯೆಯ ಸಂಗತಿಯಾಗಿದೆ. ಕೇವಲ ಒಂದೇ ಒಂದು ಸ್ಥಲದಲ್ಲಿ, ಕಲ್ಯಾಣದ (?) ಕ್ರಾಂತಿಯಾಗಿ, ಬಿಜ್ಜಳನ ಕೊಲೆಯಾಗಿ, ಬಸವಣ್ಣನವರು ‘ಸಾಕು ಮಾಡೈ ತಂದೆ ಲೋಕದಾಟವನಿನ್ನು’ (೧೩:೭೧) ಎನ್ನುತ್ತಾ ಮರ್ತ್ಯಲೋಕದಿಂದ ನಿರ್ಗಮಿಸಿದಂತೆ ನಿರೂಪಿತವಾಗಿದೆ.

-೩-

ಈ ನಾಲ್ಕು ಘಟ್ಟಗಳಲ್ಲಿ ಚಿತ್ರಿತವಾಗಿರುವ ಬಸವಣ್ಣನವರ ಜೀವನಕಥೆ, ವಿಮರ್ಶಕ ನಾದವನಿಗೆ ಕೆಲವು ಸ್ವಾರಸ್ಯವಾದ ಸಂಗತಿಗಳನ್ನು ತೆರೆಯುವುದಷ್ಟೆ ಅಲ್ಲದೆ, ಹಲವು ಸಂದೇಹ- ಸಮಸ್ಯೆಗಳನ್ನು ಮುಂದಿಡುತ್ತದೆ.

ಬಸವಣ್ಣನವರ ಕಿರಿಯಂದಿನಲ್ಲೆ ತಂದೆ ತಾಯಿಯರು ತೀರಿಕೊಂಡು, ಅವರು ‘ಶಿವಭಕ್ತಿ ಮುತ್ತಂತಿರ್ದ ಮುತ್ತಬ್ಬೆಯ ಪಕ್ಕದೊಳು ಶಿವಪ್ರಸಾದ ಸಂತುಷ್ಟ ಹೃದಯ’ (೨:೮೯)ರಾಗಿ ಬೆಳೆದರು ಎಂದು ಹರಿಹರನು ಹೇಳುತ್ತಾನೆ. ಈ ಸಂದರ್ಭದಲ್ಲಿ ಬಸವಣ್ಣನವರು ‘ಪುಸಿಯ ತಾಯ್ತಂದೆಗಳ್ ಪೋದುದಂ ಕಂಡು ಆದರಂ ಮಿಕ್ಕು ಸಂಸಾರದ ಭಾರವಿಳಿದು ನಲಿನಲಿದಾಡಿ’ದ (೨:೭-೮) ರೆಂದು ಹೇಳಿರುವುದು ಅತ್ಯಂತ ಅನುಚಿತವಾಗಿದೆ. ಇಲ್ಲಿ ‘ಸಂಸಾರದ ಭಾರ’ವೆಂದರೆ ಬಸವಣ್ಣನವರ ಪಾಲಿಗೆ ಅವರ ತಂದೆ ತಾಯಂದಿರೇ ಎಂಬ ಅಪಾರ್ಥ ಬರುವುದಲ್ಲದೆ, ಇನ್ನೂ ಸಂಸಾರವೆಂದರೇನೆಂದು ತಿಳಿಯದ ಎಳಹರೆಯದಲ್ಲಿ ತಂದೆ ತಾಯಂದಿರನ್ನು ಕಳೆದು ಕೊಂಡ ಮಗ ‘ನಲಿನಲಿದಾಡಿ’ದ್ದು ಆ ಸಂದರ್ಭದಲ್ಲಿ ಮಾನವೀಯತೆಯ ದೃಷ್ಟಿಯಿಂದ ಅತ್ಯಂತ ಅಪಚಾರದ ನಡವಳಿಕೆಯಾಗುತ್ತದೆ. ಇದು ಬಸವಣ್ಣನವರ ಅತ್ಯಂತ ವೈರಾಗ್ಯಪರವಾದ ಮನೋಧರ್ಮದ ಸಂಕೇತವಾಗಿದೆ ಎಂದೇನಾದರೂ ಸಮರ್ಥಿಸಲು ಹೊರಟರೆ ಅದು ಮನುಷ್ಯತ್ವವಿಲ್ಲದ ವೈರಾಗ್ಯವಾಗುತ್ತದೆ. ಈ ತಂದೆ ತಾಯಂದಿರೆಂಬ ಸಂಸಾರದ ಭಾರವಿಳಿದುದಕ್ಕೆ ನಲಿನಲಿದಾಡಿದ ಬಸವಣ್ಣ ಮುಂದೆ, ಸಂಗಮ ಕ್ಷೇತ್ರದಿಂದ ಹಿಂದಿರುಗಿ ಮಂಗಳವಾಡದಲ್ಲಿ ‘ಸತ್ಕುಲ ಸಾದೃಶ್ಯ ಸುಶೀಲೆಯರಪ್ಪ ಗಂಗಾದೇವಿ ಮಾಯಿದೇವಿಯರೊಡತಣ ವಿವಾಹ ಸಂಪದದಿಂ’ (೬:೨-೩) ಸದ್ದಿಲ್ಲದೆ ಸಂಸಾರಿಯಾದಾಗ, ಈ ‘ಸಂಸಾರದ ಭಾರ’ವೇರಿದ್ದರ ಬಗೆಗೆ ಅವರಲ್ಲಿ ಏನೇನೂ ಘರ್ಷಣೆ ನಡೆಯಲಿಲ್ಲವೆಂಬಂತೆ ಹರಿಹರನು ಚಿತ್ರಿಸಿರುವುದರ ಔಚಿತ್ಯವೂ ಪ್ರಶ್ನಿಸಬೇಕಾದದ್ದಾಗಿದೆ. ಹಾಗೆಯೆ ತಂದೆ ತಾಯಂದಿರನ್ನು ಕಳೆದುಕೊಂಡ ಬಸವಣ್ಣ ಶಿವಭಕ್ತಿ ಮುತ್ತಂತಿರ್ದ ಮುತ್ತಬ್ಬೆಯ ಪಕ್ಕದಲ್ಲಿ ಬೆಳೆದನಲ್ಲ, ಆಕೆಯ ಹೆಸರೇನು ಮತ್ತು ಆತ ಪರಮ ವೈರಾಗ್ಯದಿಂದ ಕಪ್ಪಡಿ ಸಂಗಮಕ್ಕೆ ಹೋದ ನಂತರ ಈ ಮುತ್ತಬ್ಬೆ ಏನಾದಳು- ಎನ್ನುವುದರ ಬಗೆಗೆ ಹರಿಹರ ಮೌನವಾಗಿದ್ದಾನೆ.

ಬಸವಣ್ಣನವರ ಜೀವನವನ್ನು ಚಿತ್ರಿಸುವಲ್ಲಿ ಹರಿಹರ ಒಂದು ರೀತಿಯ ವಿಲೋಮ ಕ್ರಮವನ್ನು ಅನುಸರಿಸಿದಂತೆ ತೋರುತ್ತದೆ: ಸಾಮಾನ್ಯವಾಗಿ ಗೊತ್ತಿರುವಂತೆ,  ಸಂಸಾರದಲ್ಲಿದ್ದು ಅದರ ಕೋಟಲೆಯಿಂದ ಬೆಂದು, ವೈರಾಗ್ಯಪರರಾಗಿ ಗೃಹ ತ್ಯಾಗ ಮಾಡಿ, ಏಕಾಂತವಾಸಿಗಳಾಗಿ ಸಾಧನೆಯನ್ನು ಮುಂದುವರಿಸುವುದು ಒಂದು; ಅಥವಾ ಎಳೆಯಂದಿನಿಂದಲೆ ಸಹಜ ವಿರಾಗಿಗಳಾಗಿದ್ದು ಭಗವತ್ ಪರವಾದ ವ್ಯಾಕುಲದಿಂದ ಸಾಧನೆ ಮಾಡುತ್ತಾ, ಸಾಂಸಾರಿಕ ಸುಖಕ್ಕೆ ಮನಸೋಲದೆ ಬದುಕುವ ಸಾಧಕರ ರೀತಿ ಇನ್ನೊಂದು. ಆದರೆ ಬಸವಣ್ಣನವರ ಸಾಧನೆಯ ಕ್ರಮ ಈ ಎರಡು ರೀತಿಗಳಿಂದಲೂ ಹೊರತಾಗಿದೆ. ಬಸವಣ್ಣನವರು- ಹರಿಹರನ ಪ್ರಕಾರ -ಸಂಸಾರ ಏನೆಂದು ತಿಳಿಯದ ಮುನ್ನವೆ ಪರಮವೈರಾಗ್ಯಯುಕ್ತರಾಗಿ ‘ಮನೆನೆಳಲಂ ನೆನೆಯದೆ, ಅರ್ಥಮಂ ಲೆಕ್ಕಿಸದೆ, ವೃತ್ತಿಯಂ ವಿಚಾರಿಸದೆ, ಬಂಧುಗಳಂ ಬಗೆಯದೆ, ಪುರ ಜನಮಂ ಪರಿಕಿಸದೆ ಹರಭಕ್ತಿಯೊಳಾತುರದಿಂ ಬಾಗೆವಾಡಿಯಂ ಪೊಱಮಟ್ಟು’ (೨: ೪-೬) ಕಪ್ಪಡಿಸಂಗಮ ಕ್ಷೇತ್ರಕ್ಕೆ ಬಂದು ಏಕಾಂತ ಸಾಧನೆಯಲ್ಲಿ ತೊಡಗುತ್ತಾರೆ. ತಾರುಣ್ಯದ ಬಹುಭಾಗವನ್ನು ಈ ಏಕಾಂತ ಸಾಧನೆಯಲ್ಲಿ ಕಳೆದ ನಂತರ ಅವರು ಮತ್ತೆ ಮಂಗಳವಾಡಕ್ಕೆ ಬಂದು ಸಂಸಾರಸ್ಥರಾಗಿ ತಮ್ಮ ಸಾಧನೆಯನ್ನು ಮುಂದುವರಿಸುತ್ತಾರೆ. ಮೊದಲಿನ ಆ ಪರಮ ವೈರಾಗ್ಯ ಸ್ಥಿತಿಗೂ, ಅನಂತರ ಮತ್ತೆ ಜನದ ನಡುವೆ ಬಂದು, ಒಬ್ಬಳಲ್ಲ ಎಂದು ಇಬ್ಬರು ಹೆಂಡಿರನ್ನು ಕಟ್ಟಿಕೊಂಡು ಸಂಸಾರಿಗಳಾಗಿ ನಿಂತ ಮನೋಧರ್ಮಕ್ಕೂ ಸಂಬಂಧವನ್ನು ಕಲ್ಪಿಸುವುದು ಕಷ್ಟವಾಗುತ್ತದೆ. ಸಂಗಮಕ್ಕೆ ಎಳೆಯಂದು ಹೊರಡುವಂದು ನಿಜವಾದ ವೈರಾಗ್ಯದಿಂದಲೇ ಹೊರಟರೆಂಬುದನ್ನು ಮೆಚ್ಚಿಕೊಂಡರೂ, ಅನಂತರ ಬಂದು ಸಂಸಾರವನ್ನೊಪ್ಪಿ ಕೊಂಡದ್ದು ಶಿವನ ಪ್ರೇರಣೆಯಿಂದಲೆ, ಲೋಕ ಕಲ್ಯಾಣದ ಉದ್ದೇಶದಿಂದಲೆ ಆದ ಒಂದು ಘಟನೆ ಎಂದು ಸಮಾಧಾನ ಹೇಳಬೇಕಾಗುತ್ತದೆ.

ಬಸವಣ್ಣನವರ ಕಪ್ಪಡಿ ಸಂಗಮದ ಸಾಧನಾರಂಗದಲ್ಲಿ ಅವರಿಗೆ ಆದದ್ದು ಸಾಕ್ಷಾತ್ಕಾರವೋ, ಸಿದ್ಧಸ್ಥಿತಿಯೋ ತಿಳಿಯುವುದಿಲ್ಲ. ಸಂಗಮನಾಥ ಆಗಾಗ ಬಸವಣ್ಣನ ನಿದ್ರಾಸಮಾಧಿಯಲ್ಲಿ ಸ್ವಪ್ನದರ್ಶನವನ್ನಿತ್ತು ನಿರ್ದೇಶನ ಕೊಟ್ಟಂತೆ ಚಿತ್ರಿತವಾಗಿದೆ. ಅಲ್ಲದೆ ಸಂಗಮೇಶ್ವರನು ನಂದೀಶ್ವರನ ಮೂಲಕ ಬಸವಣ್ಣನವರಿಗೆ ಇಷ್ಟಲಿಂಗದೀಕ್ಷೆಯನ್ನು ಕೊಡಿಸಿ, ಅವರ ಸಾಧನ ಕ್ಷೇತ್ರದ ಪರಿಸರವನ್ನು ಮಂಗಳವಾಡದ ಕಾರ್ಯಕ್ಷೇತ್ರಕ್ಕೆ ಸ್ಥಳಾಂತರಗೊಳಿಸುತ್ತಾನೆ. ಆದಕಾರಣ ಬಸವಣ್ಣನವರು ಕಪ್ಪಡಿ ಸಂಗಮದಲ್ಲಿರುವಾಗಲೆ ಅವರು ಮುಂದೆ ಕೈಕೊಳ್ಳಬೇಕಾದ ಧಾರ್ಮಿಕ ಸಾಮಾಜಿಕ ಕ್ರಾಂತಿಯ ನಿರ್ದೇಶನಕ್ಕೆ ತಕ್ಕ ಅಧ್ಯಾತ್ಮಿಕ ಶಕ್ತಿಯನ್ನು ಸಂಗಮದಲ್ಲಿ ಸಾಧನೆಯ ಮೂಲಕ ಸಂಚಯನ ಮಾಡಿಕೊಂಡರೆಂದು ಭಾವಿಸುವುದು ಹೆಚ್ಚು ಉಚಿತವಾಗುತ್ತದೆ. ಹರಿಹರನ ಪ್ರಕಾರ ಇಲ್ಲಿ ಅವರ ಭಕ್ತಜೀವನದಲ್ಲಿ ಆದ ಅತ್ಯಂತ ಗಮನಾರ್ಹವಾದ ಒಂದು ಘಟನೆಯೆಂದರೆ, ಸ್ಥಾವರ ಲಿಂಗಾರ್ಚಕರಾಗಿ ದೇಗುಲವಾಸಿಗಳಾಗಿದ್ದ ಅವರು ನಂದೀಶ್ವರನ ಮುಖದಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ದೇಹವೇ ದೇಗುಲವೆಂಬ ಭಾವನೆಗೆ ಪರಿವರ್ತಿತವಾದದ್ದು. ಇದಂತೂ ಬಸವಣ್ಣನವರು ಸ್ಥಾವರ ಲಿಂಗಾರ್ಚನೆಯಿಂದ, ಇಷ್ಟಲಿಂಗಾರ್ಚನೆಯ ವಿಧಾನಕ್ಕೆ  ಪರಿವರ್ತನ ಹೊಂದಿದ್ದರ ಮತ್ತು ಲೋಕಕಲ್ಯಾಣಕ್ಕೆ ಶಿವನಿಂದ ಅಧಿಕಾರ ಮುದ್ರೆಯನ್ನು ಪಡೆದದ್ದರ ಸಂಕೇತವಾಗಿದೆ. ಬಸವಣ್ಣನವರಿಗೆ ದೇವಸ್ಥಾನದ ನಂದಿಯಿಂದ ಇಷ್ಟಲಿಂಗ ಪ್ರಾಪ್ತಿಯಾಯಿತು ಎಂಬ ಈ ಸಂಕೇತ ಒಂದು ಐತಿಹಾಸಿಕ ಸಂಗತಿಯನ್ನು ಸ್ಪಷ್ಟಗೊಳಿಸುತ್ತದೆ: “ಬಸವಣ್ಣನವರು ವೀರಶೈವರಾದದ್ದು ಕಪ್ಪಡಿ ಸಂಗಮದಲ್ಲಿ ಎಂಬುದನ್ನು, ಅವರಿಗೆ ದೀಕ್ಷೆಯನ್ನು ಕೊಟ್ಟವರು ಯಾರೋ ನಮಗೆ ತಿಳಿಯದು”[9] -ಎಂಬ ಸಂಗತಿಯನ್ನು.

ಕಪ್ಪಡಿಯ ಸಂಗಮದಿಂದ ಮಂಗಳವಾಡಕ್ಕೆ ಬರುವಾಗ ಬಸವಣ್ಣನವರು ಶಿವನಿಂದ ವಿಶೇಷ ಆಶ್ವಾಸನೆ ಮತ್ತು ಭರವಸೆಗಳನ್ನು ಪಡೆದು ಬಂದದ್ದರಿಂದಲೋ ಏನೋ ಅವರು ಮಂಗಳವಾಡದಲ್ಲಿ ಸಂಸಾರಿಯಾಗಿ ಬದುಕುವಾಗ ಹರಿಹರನ ಪ್ರಕಾರ ಅವರ ವ್ಯಕ್ತಿತ್ವದಲ್ಲಿ ಸಂಸಾರವನ್ನು ಕುರಿತ ಯಾವ ಘರ್ಷಣೆಯೂ ಉಂಟಾದಂತೆ ಕಾಣುವುದಿಲ್ಲ. ಈ ಸಂಗತಿಯನ್ನು ಇಂದು ನಮಗೆ ಕಾಣಸಿಗುವ ಬಸವಣ್ಣನವರ ವಚನಗಳಲ್ಲಿ ವ್ಯಕ್ತವಾಗಿರುವ ಅವರ ಅಂತರಂಗದ ತಾಕಲಾಟಗಳೊಂದಿಗೆ ಹೋಲಿಸಿದಾಗ, ಹರಿಹರನ ಚಿತ್ರಣಕ್ಕೂ, ವಚನಗಳಲ್ಲಿ ಕಂಡುಬರುವ ಬಸವಣ್ಣನವರ ಚಿತ್ರಕ್ಕೂ ಸಾಮ್ಯವೇ ಇಲ್ಲದಿರುವುದು ಆಶ್ಚರ್ಯದ ಸಂಗತಿಯಾಗಿದೆ. ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಸಂಸಾರವನ್ನು ಕುರಿತ ಅವರ ಕ್ರಿಯೆ, ಪ್ರತಿಕ್ರಿಯೆಗಳ ಘರ್ಷಣೆಯನ್ನೂ, ಸಂಸಾರದಿಂದ ಪಾರಾಗಲೆಂದು ಅವರು ಕೂಡಲಸಂಗನಲ್ಲಿ ಪರಿಪರಿಯಾಗಿ ಮೊರೆಯಿಡುವ ರೀತಿಯನ್ನೂ ನೋಡಿದರೆ, ಇವು ಸಿದ್ಧಪೂರ್ವ ಸ್ಥಿತಿಯ ಚಿತ್ರವನ್ನೆ ಕೊಡುತ್ತವೆ. ಅಷ್ಟೇ ಅಲ್ಲದೆ, ಈ ವ್ಯಕ್ತಿ ಒಂದು ಕಾಲಕ್ಕೆ ಕಪ್ಪಡಿ ಸಂಗಮದ ಸಾಧನಾ ರಂಗದಲ್ಲಿ ಶಕ್ತಿ ಸಂಚಯನ ಮಾಡಿಕೊಂಡು, ಶಿವನ ಆಶ್ವಾಸನೆಯನ್ನು ಹೊತ್ತು ಬಂದದ್ದು ನಿಜವೆ ಎಂಬ ಶಂಕೆ ನಮಗೆ ತೀರ ಸಹಜವಾಗಿ ಉಂಟಾಗುತ್ತದೆ. ಇನ್ನೂ ಸ್ವಾರಸ್ಯವಾದ ಸಂಗತಿಯೆಂದರೆ ಬಸವಣ್ಣನವರ ಯಾವ ವಚನದಲ್ಲಿಯೂ, ತಾವು ತಮ್ಮ ಪೂರ್ವಾಶ್ರಮದಲ್ಲಿ ಕಪ್ಪಡಿಯ ಸಂಗಮದಲ್ಲಿ ಕೆಲವು ಕಾಲ ಇದ್ದು, ಸಾಧಕರಾಗಿ ಶಿವನ ಕೃಪಾನುಗ್ರಹಕ್ಕೆ ಪಾತ್ರರಾದೆವೆಂಬ ಮಾತು ಸ್ಫುಟವಾಗಿ ಬಂದಂತೆ ನಮಗೆ ತೋರುವುದಿಲ್ಲ. ಬಸವಣ್ಣನವರ ವಚನಗಳನ್ನೆ ಪ್ರತ್ಯೇಕವಾಗಿ ನೋಡಿದರೆ, ಅವೆಲ್ಲವೂ ಬಹುಮಟ್ಟಿಗೆ ಅವರು ಸಂಸಾರಸ್ಥರಾಗಿ, ಬಿಜ್ಜಳನ ಭಂಡಾರಿಯಾಗಿದ್ದು, ಶರಣದಾಸೋಹದ ನಡುವೆ ಇದ್ದಾಗಿನ ಮನಃಸ್ಥಿತಿಯನ್ನೆ ಚಿತ್ರಿಸುತ್ತವೆ. ಅಲ್ಲದೆ ಅವರ ಮನಸ್ಸು ಈ ಸಂಸಾರದ ದಂದುಗದಿಂದ ಪಾರಾಗಿ ಸಂಗಮನಾಥನ ಕಡೆಗೇ ಬಲವಾಗಿ ತುಡಿಯುವ ನಿಜವಾದ ವೈರಾಗ್ಯದ ಲಕ್ಷಣಗಳನ್ನು ಅವರ ವಚನಗಳು ಪ್ರಕಟಿಸುತ್ತವೆ. ವಚನಗಳ ಹೇಳಿಕೆ ಹೀಗಿರುವಾಗ, ಬಸವಣ್ಣನವರು ಕಪ್ಪಡಿಸಂಗಮದಲ್ಲಿ ತಮ್ಮ ಸಾಧಕ ಜೀವನವನ್ನು ರೂಪಿಸಿಕೊಂಡರು ಎಂಬ ಹರಿಹರನ ನಿರೂಪಣೆ ಎಷ್ಟರ ಮಟ್ಟಿಗೆ ವಾಸ್ತವವೋ, ಅಥವಾ ಕಲ್ಪನೆಯೋ ಹೇಳುವುದು ಕಷ್ಟ. ಆದರೆ ಬಸವಣ್ಣನವರ ಜೀವನವನ್ನು ಕುರಿತು ಬರೆದವರೆಲ್ಲರೂ, ಬಸವಣ್ಣನವರ ಜೀವನದ ಬಹುಮುಖ್ಯವಾದ ಭಾಗ ಕಪ್ಪಡಿಯ ಸಂಗಮದಲ್ಲಿ ಕಳೆಯಿತೆಂಬಂತೆ ಹೇಳಿರುವುದನ್ನು ನೋಡಿದರೆ, ಹರಿಹರನ ನಿರೂಪಣೆಯನ್ನು ತಳ್ಳಿಹಾಕುವುದು ಕಷ್ಟ ವಾಗುತ್ತದೆ. ಈ ಸಂದರ್ಭದಲ್ಲಿ ವಚನಗಳಲ್ಲಿ ಕಂಡುಬರುವ ಬಸವಣ್ಣನವರ ಅಂತರಂಗದ ಘರ್ಷಣೆಯನ್ನು ಕುರಿತು, ಎಂಥ ಸಾಧಕನಿಗೂ ಸಹ ಸಂಸಾರದ ಕೋಟಲೆಯ ನಡುವೆ ಇಂಥ ತಾಕಲಾಟದ ಪರಿಸ್ಥಿತಿಯುಂಟಾಗುವುದು ಸಾಧ್ಯವೆಂಬ ಅರ್ಥವನ್ನು ಕೊಟ್ಟುಕೊಳ್ಳಬೇಕಾಗುತ್ತದೆ.

ಬಸವರಾಜದೇವರ ರಗಳೆಯಲ್ಲಿ ಅವರ ಭಕ್ತಜೀವನವಷ್ಟೇ ಪ್ರಮುಖವಾಗಿದೆಯಲ್ಲದೆ, ಅವರು ಒಂದು ರಾಜ್ಯದ ದಂಡಾಧೀಶರಾಗಿದ್ದುಕೊಂಡು ಯಾವ ಬಗೆಯ ರಾಜಕೀಯ ವ್ಯವಹಾರವನ್ನು ನಡೆಯಿಸುತ್ತಿದ್ದರೆಂಬ ಬಗೆಗೆ ಹರಿಹರ ಗಮನವನ್ನೇ ಕೊಡುವುದಿಲ್ಲ. ಅಷ್ಟೇ ಅಲ್ಲ, ಬಸವಣ್ಣನವರ ಸಾಂಸಾರಿಕ ಜೀವನ ಹೇಗಿತ್ತೋ ಅದೂ ತಿಳಿಯುವಂತಿಲ್ಲ- ಅವರಿಗೆ ಸಿದ್ಧರಸನೆಂಬ ಮಗುವಾಯಿತು, ಅದನ್ನವರು ಒಮ್ಮೆ ಆಡಿಸಿದರು ಎಂಬಷ್ಟನ್ನು ಹೊರತು!

ಬಸವರಾಜದೇವರ ರಗಳೆಯಲ್ಲಿ ತುಂಬ ತೊಡಕಾಗಿರುವುದು ಬಸವಣ್ಣ ಮತ್ತು ಬಿಜ್ಜಳ ಇವರ ಸಂಬಂಧದಲ್ಲಿ. ಬಸವಣ್ಣನವರು ಬಿಜ್ಜಳನಲ್ಲಿ ಭಂಡಾರಿಗಳೂ ದಂಡಾಧೀಶರೂ ಆಗಿದ್ದರೆಂಬುದು ತಿಳಿದಿದ್ದರೂ, ತನ್ನ ಈ ಕೃತಿಗೆ ಹೆಸರಿಡುವಾಗ ‘ಬಸವರಾಜ ದೇವರ ರಗಳೆ’ ಎಂದು ಕರೆದಿರುವುದನ್ನು ನೋಡಿದರೆ, ಹರಿಹರನ ಪಾಲಿಗೆ ಬಸವಣ್ಣನೆ ‘ರಾಜ’ನಾಗಿ ವಿರಾಜಿಸಿದ್ದಾನೆ. ಕಪ್ಪಡಿಯ ಸಂಗಮಕ್ಷೇತ್ರದಿಂದ, ಮಂಗಳವಾಡಕ್ಕೆ ಬಸವಣ್ಣನು ಬರುವ ಸಂದರ್ಭದಲ್ಲಿ ‘ಬಿಜ್ಜಳರಾಯನಿಂದ ವಂದಿಸಿಕೊಳುತಿರ್ಪುದೆಂದು ಬಸವಂಗುಸಿರ್ದಂ ಗುರು ಸಂಗಮೇಶ್ವರಂ’ (೫: ೧) ಎಂದ ಮೇಲೆ ಬಿಜ್ಜಳ ಬಸವಣ್ಣನವರ ಸಂಬಂಧದಲ್ಲಿ ರಾಜ-ಮಂತ್ರಿಗಳ ನಡವಳಿಕೆ ಎಲ್ಲಿಂದ ಬರಬೇಕು! ಬಸವಣ್ಣನವರು ಮಂಗಳವಾಡಕ್ಕೆ ಬಂದು ಸಚಿವ ಸಿದ್ಧದಂಡಾಧೀಶನ ಸಂಪತ್ತಿಗೆ ಅಧಿಕಾರಿಯಾದ ತರುಣದಲ್ಲಿ ಬಿಜ್ಜಳನು ಬಸವಣ್ಣನವರನ್ನು ಕುರಿತು-

ಸರ್ವಭಂಡಾರವೆಲ್ಲಂ ನಿನಗೆ ಬಸವಣ್ಣ
ಉರ್ವರೆಯ ಧನವೆಲ್ಲವುಂ ನಿನಗೆ ಬಸವಣ್ಣ
ಎನ್ನ ರಾಜ್ಯದ ಶಿಕ್ಷೆರಕ್ಷೆ ನಿನ್ನದು ಬಸವ
ಎನ್ನ ತೇಜೋಭಿಮಾನಂ ನಿನ್ನದೆಲೆ ಬಸವ
ನಿನ್ನಂತೆ ಇನ್ನುಂಟೆ ಭಂಡಾರಿ ಬಸವಣ್ಣ
(೫:೧೫೯-೧೬೩)

ಎಂದು ಹೊಗಳಿ ಬಸವಣ್ಣನವರನ್ನು ಪಟ್ಟದಾನೆಯ ಮೇಲೆ ಕೂರಿಸಿ ಮೆರೆಯಿಸಿ ದಂಡನಾಥ ಪದವಿಯನ್ನು ನೀಡುತ್ತಾನೆ. ಅನಂತರ ಬಸವಣ್ಣನವರು ರಾಜಸಭೆಗೆ ಬಂದು ಬಿಜ್ಜಳನಿಗೆ ‘ಸಮಗದ್ದುಗೆ’ಯಾಗಿ ಕುಳ್ಳಿರುತ್ತಾರೆ. ಎಲ್ಲಿಯೂ ಹರಿಹರ ಅವರನ್ನು ಬಿಜ್ಜಳನಿಗೆ ಕಡಿಮೆಯಾದ ಕೆಳಗಿನ ‘ಗದ್ದುಗೆ’ಯಲ್ಲಿ ಕೂರಿಸುವುದಿಲ್ಲ! ಅಷ್ಟೇ ಅಲ್ಲ, ಬಿಜ್ಜಳನು ‘ಬಸವರಾಜನ ಶಿವಕಳಾ ಪರಿಪೂರ್ಣತೇಜಃ ಪ್ರತಾಪ ರೂಪಿಂಗೆ’ ಮನಸ್ಸಿನಲ್ಲೇ ಎರಗುತ್ತಾನೆ. ಆಗಾಗ ಬಿಜ್ಜಳನು ‘ಪರಸಮಯಿಗಳ’ ಚಾಡಿಮಾತಿಗೆ ಕಿವಿಗೊಟ್ಟು ಬಸವಣ್ಣನವರನ್ನು ವಿಚಾರಿಸಿಯೋ, ಪರೀಕ್ಷಿಸಿಯೋ ನೋಡಿದಾಗ, ಬಸವಣ್ಣನವರ ಮಹಿಮಾ ಸಾಮರ್ಥ್ಯಗಳನ್ನು ಕಂಡು ಅಂಜಿ ಅವರ ‘ಪದತಳಕ್ಕೆರಗಿ ತಪ್ಪು ದಂಡಕ್ಕೆ ಪನ್ನಿಚ್ಛಾಸಿರ ಹೊನ್ನಂ ಕೊಟ್ಟು’ (೬:೮೬-೮೭) ಗೌರವಿಸುತ್ತಾನೆ. ಬಸವಣ್ಣನವರ ಮೇಲೆ ಭಂಡಾರದ ಹೊನ್ನಿನ ದುರುಪಯೋಗದ ಆರೋಪಣೆ ಬಂದಾಗ ಕೂಡ ಬಿಜ್ಜಳನು ‘ಮೆಲ್ಲ ಮೆಲ್ಲಗೆ ಮಾತು ಮಾತಿಂ ಲೆಕ್ಕದ ಮಾತಂ ತೆಗೆದು, ಬಸವಣ್ಣನವರ ಮೊಗಮಂ ನೋಡುತಾಕ್ಷೇಪದಿಂ ಕೈಮುಗಿದು- ನಿಮ್ಮ ನಂಬಿ ಭಂಡಾರಮಂ ಕೊಟ್ಟಡೆ ಎನ್ನನಿಂತು ಕೆಡಿಸುವರೆ?’ (೮: ೧೧೨-೧೧೬) ಎಂದು ವಿಜ್ಞಾಪಿಸಿ ಕೊಳ್ಳುತ್ತಾನೆ. ಆಗ ಬಸವಣ್ಣನವರು ‘ಕೇಳೆಲೆ ಸಜ್ಜನರನಱಿಯದ ಬಿಜ್ಜಳ ಭೂಪ’ ಎಂದು ತಮ್ಮ ನಿಷ್ಕಪಟತೆಯನ್ನು ಒತ್ತಿಹೇಳಿ, ಶಿವನ ಮಹಿಮೆಯನ್ನು ಸಾರಿ ರುದ್ರಾವತಾರರಾಗಿ ಆಸ್ಘೋಟಿಸಿ ನುಡಿಯುತ್ತಾರೆ. ಆಗ ಬಿಜ್ಜಳನು ‘ಧರೆಗಿಳಿದು, ಜೀವನ್‌ಮೃತಕನಾಗಿ ಬಸವನ ಚರಣದೊಳು ದೊಪ್ಪನೆ ಬಿಳ್ದು- ಮುಂದರಿಯದ ಮೂರ್ಖಂಗೆ ಶರಣರನಱಿಯದ ನಿರಪರಾಧಿಗೆ ಕರುಣಿಸುವುದು ಎಂದು ಪನ್ನಿಚ್ಛಾಸಿರ ಲಕ್ಷ ವಸ್ತುವಂ ಚರಣದ ಮೇಲೆ ಸುರಿದು… ಅವರಂ ಮಹಮನೆಗೆ ಬಿಜಯಂಗೆಯ್ಸಿ’ (೮: ೧೪೩-೧೪೫)ವಿಸ್ಮಿತ ಚಿತ್ತನಾಗಿ ಮೂಕನಾಗುತ್ತಾನೆ. ಈ ಕೆಲವು ಸಂಗತಿಗಳನ್ನು ನೋಡಿದರೆ ಹರಿಹರನ ಚಿತ್ರಣದಲ್ಲಿ ಬಿಜ್ಜಳನದು ತೀರಾ ಕನಿಕರ ತರಿಸುವ ಪಾತ್ರವಾಗಿದೆ. ಬಸವಣ್ಣನವರು ಕಥಾನಾಯಕರಾದುದರಿಂದ, ಬಹುಶಃ ಹರಿಹರನು ಬಿಜ್ಜಳನ ಪಾತ್ರವನ್ನು ಪ್ರತಿನಾಯಕನಂತೆ ಚಿತ್ರಿಸಲೂ ಯತ್ನಿಸಿರಬಹುದು. ಆದರೆ ಬಸವಣ್ಣನವರ ‘ನಾಯಕ’ತನಕ್ಕೆ ಹರಿಹರನು ಒದಗಿಸಿರುವ ಅನಗತ್ಯವಾದ ದೊಡ್ಡಸ್ತಿಕೆಯ ಪ್ರಭಾವಳಿಯಿಂದ ಒಳ್ಳೆಯ ಪರಿಣಾಮವೇನೂ ಆಗುವುದಿಲ್ಲ. ಹಾಗೆಯೇ ‘ಪ್ರತಿನಾಯಕ’ನಂತೆ ತೋರುವ ಬಿಜ್ಜಳನ ಪಾತ್ರದಲ್ಲಿ, ಪ್ರತಿನಾಯಕನಿಗೆ ಇರಬೇಕಾದ ಘನತೆ ಗಾಂಭೀರ್ಯಗಳನ್ನೂ ಹರಿಹರನು ತಂದಿಲ್ಲ. ಅವನೊಬ್ಬ ಅಸಹಾಯಕ, ದುರ್ಬಲ, ಭೀತವ್ಯಕ್ತಿ, ಎರಗಿವಿಯ ಮರುಳು; ಸಜ್ಜನರನರಿಯದ ಬಿಜ್ಜಳಭೂಪ. ಹೆಜ್ಜೆ ಹೆಜ್ಜೆಗೂ ಪರಾಭವಕ್ಕೆ ಒಳಗಾಗುತ್ತಾ, ತಪ್ಪು ದಂಡವನ್ನು ತೆತ್ತು ಬಸವಣ್ಣನವರ ಪದತಳಕ್ಕೆರಗುತ್ತಾ ಕನಿಕರಕ್ಕೆ ಗುರಿಯಾಗುವ ಪಾತ್ರ. ಬಸವಣ್ಣನವರ ಪಾತ್ರದ ಘನತೆಯನ್ನು- ಅದರಲ್ಲಿಯೂ ತಮಗೆ ತಾವೇ ದೊಡ್ಡವರಾಗಿ ನಿಲ್ಲುವ ಆಂತರಿಕ ಸತ್ವ ಉಳ್ಳವರನ್ನು- ಎತ್ತಿತೋರಿಸಲು ಹರಿಹರ ಬಿಜ್ಜಳನ ಪಾತ್ರವನ್ನು ಇಷ್ಟರಮಟ್ಟಿಗೆ ತಗ್ಗಿಸಬೇಕಾದ ಅವಶ್ಯಕತೆಯೇನೂ ಇರಲಿಲ್ಲ. ಹಾಗೆ ನೋಡಿದರೆ ಬಿಜ್ಜಳನು ಬಸವಣ್ಣನವರಿಗೆ ಪ್ರತಿಸ್ಪರ್ಧಿಯೂ ಅಲ್ಲ, ಪ್ರತಿನಾಯಕನೂ ಅಲ್ಲ. ಆದರೆ ಹರಿಹರನು ಅವನನ್ನು ಪ್ರತಿಪಕ್ಷದ ನಾಯಕನಂತೆ ಇರಿಸಿಕೊಂಡದ್ದರಿಂದ ಉದ್ದೇಶಪೂರ್ವಕವಾಗಿ ಬಿಜ್ಜಳನ ಪಾತ್ರದ ಘನತೆಯನ್ನು ಹೀಗೆ ತಗ್ಗಿಸಿದ್ದಾನೆಂದು ಹೇಳಲೇಬೇಕಾಗಿದೆ. ಆ ಪ್ರತಿಪಕ್ಷ, ಬಸವಣ್ಣನವರ ಕಾಲದಲ್ಲಿ ಪ್ರವರ್ತನಗೊಂಡ ವೀರಶೈವಧರ್ಮಕ್ಕೆ ಸ್ಪರ್ಧಿಯಾದ, ವೈದಿಕ ಧರ್ಮವೇ ಅಗಿತ್ತೆಂಬುದು ಸ್ಪಷ್ಟವಾಗಿದೆ. ಬಸವಣ್ಣನವರ ಹೊಸ ಧರ್ಮದ ಪ್ರತಿಪಕ್ಷವಾದ ವೈದಿಕ ಧರ್ಮದ ಅನುಯಾಯಿಗಳಾದ ನಾರಾಯಣಭಟ್ಟ, ಮಂಚ್ಯಣಕ್ರಮಿತ, ಕೂಚಿಗಂ, ಪೂಚಿಪೆದ್ದಿ, ಸೌರಿಭಟ್ಟ, ವಿಷ್ಣುಪೆದ್ದಿ ಮೊದಲಾದ ವೈಷ್ಣವರ ಪರವಹಿಸಿ ಬಿಜ್ಜಳನು ನಡೆದುಕೊಂಡಂತೆ ಹರಿಹರನು ಚಿತ್ರಿಸಿದ್ದಾನೆ. ಬಸವಣ್ಣನವರು ಪರಸಮಯದ ಗರ್ವವನ್ನು ಮುರಿದು ಶಿವಸಮಯವನ್ನು ಉದ್ಧರಿಸಲೆಂದು ಬಂದ ಕಾರಣಿಕರೆಂದು ಹರಿಹರನು ಮೇಲಿಂದ ಮೇಲೆ ಹೇಳಿರುವುದನ್ನು ನೋಡಿದರೆ, ಬಸವಣ್ಣನವರು ಭಂಗಿಸಿದ ಆ ಪರಸಮಯ, ಬಿಜ್ಜಳನ ನಾಯಕತ್ವದಲ್ಲಿ ನಿಂತ ಈ ವೈದಿಕ ಧರ್ಮವಲ್ಲದೆ ಬೇರೆ ಅಲ್ಲ; ಆದಕಾರಣ ಪರಸಮಯದ ಗರ್ವವನ್ನು ಮುರಿಯುವುದು ಎಂದರೆ ಬಿಜ್ಜಳನ ಗರ್ವವನ್ನು ಮುರಿಯುವುದು ಎನ್ನುವ ವಿಪರೀತಾರ್ಥ ಬಸವಣ್ಣನವರ ನಡವಳಿಕೆಯಲ್ಲಿ ಚಿತ್ರಿತವಾಗಿದೆ.[10] ಅಷ್ಟೆ ಅಲ್ಲ, ವೈದಿಕ ಧರ್ಮದ ನಾರಾಯಣಭಟ್ಟ, ಮಂಚ್ಯಣಕ್ರಮಿತ ಇತ್ಯಾದಿ ವ್ಯಕ್ತಿಗಳನ್ನು ಕುರಿತು ‘ಛಾಂದಸರು, ವೇದಜಡರು, ಮಟ್ಟಿಯ ಮರುಳ್ಗಳು, ವೃಥೋತ್ಸಾಹಿಗಳು, ಹೆಬ್ಬೇಳಿಗಳು, ದರ್ಭೆಯ ನಿರ್ಭಾಗ್ಯರು’ (೧೦:೨೭-೨೮) ಎಂದು ವರ್ಣಿಸುತ್ತಾನೆ. ಅವರ ಕೆಲಸವೇನಿದ್ದರೂ ಬಸವಣ್ಣನವರ ತಪ್ಪುಗಳನ್ನು ಕೆದಕಿ ಬಿಜ್ಜಳನ ಕಿವಿಯಲ್ಲಿ ಊದಿ ಬಸವಣ್ಣನವರಿಗೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಪ್ರೇರಿತವಾದದ್ದು. ‘ಕಾಗೆಗಳಂತಱಚಿ, ಗೂಗೆಗಳಂತೆ ಪಲುಂಬಿ, ಕತ್ತೆಗಳಂತೊಱಲಿ, ಕೋಡಗಗಳಂತೆ ಪಲುಗಿರಿದು, ನರಿಗಳಂತೆ ಜಿನುಗಿ ಕಾಳ್ಗೆಡೆವ ಕರ್ಮಿ’ (೮: ೯೩-೧೦೧)ಗಳು ಇವರು. ಹರಿಹರನು ಈ ವೈದಿಕ ಧರ್ಮದವರ ಬಗ್ಗೆ ತೋರಿರುವ ವೈಯಕ್ತಿಕ ಅಸಹನೆ ಮಿತಿಮೀರಿದ್ದು ಎನ್ನಿಸುತ್ತದೆ. ಅದರಲ್ಲೂ ಬಸವಣ್ಣನವರ ಪಾತ್ರವನ್ನು ಅಲ್ಲಲ್ಲಿ ವೈದಿಕರ ವಿರುದ್ಧವಾದ ಆಗ್ರಹ ಅಕ್ರೋಶಗಳಿಗೆ ಮಾಧ್ಯಮವನ್ನಾಗಿ ಮಾಡಿರುವುದು ತೀರಾ ವಿಷಾದನೀಯವಾದ ಸಂಗತಿ: ತುಂಬಿದ ಸಭೆಯಲ್ಲಿ ಮಾಲೆಗಾರನೊಬ್ಬನು ತಂದು ಒಪ್ಪಿಸಿದ ಕೇತಕೀ ಕುಸುಮವನ್ನು ಬಸವಣ್ಣನವರು ಶಿವಲಿಂಗಕ್ಕೆ ಆರ್ಪಿಸಿದ್ದನ್ನು ಕಂಡು, ನಾರಾಯಣ ಭಟ್ಟನು ‘ಕೇದಗೆ ಹೂವನ್ನು ಶಿವನಿಗೆ ಅರ್ಪಿಸುವುದು ಶೈವಾಗಮಗಳಿಗೆ ವಿರುದ್ಧವಾದ ವ್ಯವಹಾರ’ವೆಂದು ಆಕ್ಷೇಪಿಸಿದಾಗ, ಬಸವಣ್ಣನವರು ಆತನನ್ನು ‘ಎಲೆ ಮರುಳು ವಿಪ್ರ, ಎಲೆ ದ್ವಿಜಾಧಮಾ, ಎಲೆ ಕರ್ಮದ ಕಡುಜಡನೆ ಕೇಳು’ (೬:೭೬-೭೭) ಎಂದು ಸಂಬೋಧಿಸುತ್ತಾರೆ. ಬಿಜ್ಜಳನನ್ನು ಕುರಿತು ಒಮ್ಮೆ ‘ಎಲೆ ಬುದ್ಧಿಯಿಲ್ಲದ ಭೂಪ, ಎರಗಿವಿಯ ಮರುಳೆ’ (೧೦:೪೪) ಎನ್ನುತ್ತಾರೆ. ‘ಮೃದು ವಚನವೇ ಸಕಲ ಜಪಂಗಳಯ್ಯ’, ‘ಅಯ್ಯಾ ಎಂದೊಡೆ ಸ್ವರ್ಗ, ಎಲವೋ ಎಂದೊಡೆ ನರಕ’ -ಎಂದ ವಚನಕಾರ ಬಸವೇಶ್ವರರ ಆ ವ್ಯಕ್ತಿತ್ವಕ್ಕೂ, ಬಯಲು ನಾಟಕದ ಪಾತ್ರದ ಹಾಗೆ ಆವೇಶದಿಂದ, ವೈದಿಕರ ಮೇಲೆ ಹಾಗೂ ಬಿಜ್ಜಳನ ಮೇಲೆ ಎಗರಿ ಬೀಳುವ ಹರಿಹರನ ಬಸವಣ್ಣನವರ ನಡವಳಿಕೆಗೂ ಎಂತಹ ವ್ಯತ್ಯಾಸ ಕಾಣಿಸುತ್ತದೆ![11] ಹರಿಹರನ ಚಿತ್ರಣದಲ್ಲಿ ಕಂಡುಬರುವ ಬಸವ-ಬಿಜ್ಜಳರ ಸಂಘರ್ಷ ಅಂದು ವೀರಶೈವ ಧರ್ಮ, ವೈದಿಕ ಧರ್ಮದೊಂದಿಗೆ ಸೆಣಸಬೇಕಾಗಿ ಬಂದ ಐತಿಹಾಸಿಕ ಸತ್ಯದ ಸಾಂಕೇತಿಕ ರೂಪದಂತಿದೆ.

ಬಸವಣ್ಣನವರ ಬದುಕಿನ ಇನ್ನೂ ಎಷ್ಟೋ ಘಟನಾವಳಿಗಳನ್ನು ನಿರೀಕ್ಷಿಸುವ ಓದುಗನಿಗೆ, ಬಸವರಾಜದೇವರ ರಗಳೆಯ ಹದಿಮೂರನೆಯ ಸ್ಥಲ, ಅತ್ಯಂತ ಅವಸರದಿಂದ ಅವರ ಬದುಕಿನ ಕಥೆಗೆ ಮಂಗಳ ಹಾಡಿದಂತೆ ರಚಿತವಾಗಿರುವುದು ತುಂಬ ಕುತೂಹಲದ ಮತ್ತು ನಿರಾಶೆಯ ಸಂಗತಿಯಾಗಿದೆ. ಬಸವಣ್ಣನವರ ಕೇಂದ್ರದ ಸುತ್ತ ಅಲ್ಲಮ, ಅಕ್ಕಮಹಾದೇವಿ, ಚನ್ನಬಸವ, ಇತ್ಯಾದಿ ವ್ಯಕ್ತಿಗಳು ಬಂದು ಕೂಡಿಕೊಂಡದ್ದಾಗಲಿ, ಅನುಭಾವಗೋಷ್ಠಿ ಏರ್ಪಟ್ಟ ವಿಷಯಗಳಾಗಲಿ, ಬಿಜ್ಜಳನ ಕೊಲೆಗೆ ಒದಗಿದ ಮುಖ್ಯವಾದ ಕಾರಣಗಳೇನು ಎಂಬುದಾಗಲಿ ನಮಗೆ ಇಲ್ಲಿ ತಿಳಿಯುವುದಿಲ್ಲ. ಅಲ್ಲಮಪ್ರಭು ಬಂದು ‘ಬಸವಂಗೆ ಲಿಂಗದನುವಂ ತೋರಿ’ ಕದಳಿಯ ಮಾರ್ಗವನ್ನು ಹಿಡಿದನೆಂಬ ಒಂದು ಮಾತು, ಅನಂತರ ‘ಶಿವದ್ರೋಹಮಂ ಗೈದ ಬಿಜ್ಜಳನ ಕೊಲಿಸುತುಂ’ ಎಂಬ ಇನ್ನೊಂದು ಮಾತು, ‘ಸಾಕು ಮಾಡೈ ತಂದೆ ಲೋಕದಾಟವನಿನ್ನು’ ಎನ್ನುತ್ತಾ ಬಸವಣ್ಣನವರು ಕಪ್ಪಡಿಯ ಸಂಗಮಕ್ಕೆ ಬಂದು ಬಯಲಾದರು ಎಂಬ ಮತ್ತೊಂದು ಮಾತು- ಇಷ್ಟರಲ್ಲಿಯೆ ಮುಗಿದಿದೆ.

ಹನ್ನೆರಡು ಸ್ಥಲಗಳವರೆಗೂ ಹರಿದು ಬಂದ ಕಥಾಪ್ರವಾಹ, ತಟಕ್ಕನೆ ನಿಂತು ಹೋದಂತೆ  ತೋರುವ ತೊಡಕನ್ನು ಕುರಿತು ಕೆಲವು ವಿದ್ವಾಂಸರು ಚರ್ಚಿಸಿದ್ದಾರೆ. ಈಗ ಉಪಲಬ್ಧವಾಗಿರುವುದು ಬಸವಣ್ಣನವರನ್ನು ಕುರಿತು ಹರಿಹರನ “ರಗಳೆಯ ಅರ್ಧ ಭಾಗವಷ್ಟೆ”[12] ಎಂದು ದಿವಂಗತ ವೆಂಕಣ್ಣಯ್ಯನವರು ಊಹಿಸುತ್ತಾರೆ. “ಹನ್ನೆರಡು ಸ್ಥಲಗಳಲ್ಲಿ ಅರ್ಧ ಕಥೆ ಮಾತ್ರ ಇದೆ. ಹದಿಮೂರನೆಯ ಸ್ಥಲವು ಮಿಕ್ಕಸ್ಥಲಗಳಂತಿರದೆ ಅದರಲ್ಲಿ ಕಥೆಯನ್ನು ಓಡಿಸಿಕೊಂಡು ಹೋದಂತಿದೆ. ಅಲ್ಲದೆ ಈ ಸ್ಥಲವು ಕೆಲವು ಹಸ್ತಪ್ರತಿಗಳಲ್ಲಿದೆ. ಕೆಲವುಗಳಲ್ಲಿಲ್ಲ. ಆದಕಾರಣ ಈ ಭಾಗವು ಪ್ರಕ್ಷಿಪ್ತವಾದುದೋ ಏನೋ ಎಂಬ ಸಂಶಯಕ್ಕೆ ಅವಕಾಶವಿದೆ”[13] ಎನ್ನುತ್ತಾರೆ.   ಈ ಕಥೆ ಇಲ್ಲಿ ಅರ್ಧದಷ್ಟಾಗಿದೆ ಎನ್ನಲು ಬಸವಣ್ಣನವರ ಬದುಕಿನ ಇನ್ನೆಷ್ಟೋ ಘಟನೆಗಳ ಪ್ರಸ್ತಾಪವಿಲ್ಲದಿರುವುದು ಅತ್ಯಂತ ಸ್ಪಷ್ಟವಾದ ಕಾರಣವಾದರೂ, ಹಾಗಾದರೆ ಇದು ಮೂಲತಃ ಇನ್ನೆಷ್ಟಿದ್ದಿರಬಹುದು ಎಂಬ ಊಹೆಗೆ, ಸಿದ್ಧನಂಜೇಶನು ತನ್ನ ರಾಘವಾಂಕ ಚರಿತೆಯಲ್ಲಿ, ಹರಿಹರನು ಬಸವಣ್ಣನವರನ್ನು ಕುರಿತು ಇಪ್ಪತ್ತೈದು ಸ್ಥಲದ ರಗಳೆಯನ್ನು ಬರೆದನೆಂದೂ, ಅದನ್ನು ವಿರೂಪಾಕ್ಷನೆಡೆಗೆ ಒಯ್ಯಲು ಅದು ಇನಿದು ಮಿಗಿಲಾದುದೆಂದು ಆ ಗ್ರಂಥವನ್ನು ತೆಗೆದುಕೊಂಡು ‘ಉಱಿನುಂಗಿ’ದನೆಂತಲೂ ಹೇಳಿರುವ ಸಂಗತಿ ಉತ್ತರವಾಗಿದೆ. ಡಾ. ಎಲ್. ಬಸವರಾಜು ಅವರು ಸಿದ್ಧನಂಜೇಶನ ‘ಉಱಿನುಂಗಿದನ್’ ಎಂಬ ಮಾತನ್ನು ಪರಿಶೀಲಿಸುತ್ತ “ಬಸವ ರಗಳೆಯನ್ನು ‘ಉರೆನುಂಗಿದ’ನೆಂದರೆ ಅಸಮಂಜಸ; ಅದನ್ನವನು ‘ಅರೆ ನುಂಗಿದ’ ನಾಗಬಹುದು. ಆದ್ದರಿಂದಲೇ ನಮಗೀಗ ಉಳಿದು ಬಂದಿರುವುದು ಪಂಪಾ ವಿರೂಪಾಕ್ಷನ ಉಚ್ಛಿಷ್ಟ ಪ್ರಸಾದವಾದ ಹನ್ನೆರಡೂವರೆ ಸ್ಥಲ ಮಾತ್ರ”[14] ಎಂದು ಸಮಂಜಸವಾಗಿ ತರ್ಕಿಸಿದ್ದಾರೆ. ಅಂತೂ ಹರಿಹರ ಮೂಲತಃ ಬರೆದದ್ದು ಇಪ್ಪತ್ತೆ ದು ಸ್ಥಲಗಳಷ್ಟು ವಿಸ್ತಾರವಾದ ‘ಬಸವರಾಜ ದೇವರ ರಗಳೆ’ಯನ್ನು; ಅದರಲ್ಲಿ ಅರ್ಧದಷ್ಟು ಭಾಗ ನಷ್ಟವಾದದ್ದು ನಿನ್ನೆ-ಮೊನ್ನೆ ಅಲ್ಲ, ಸಿದ್ಧನಂಜೇಶನ ಕಾಲಕ್ಕೇ (ಸು. ೧೬೫೦) ಹರಿಹರನ ಇಪ್ಪತ್ತೆ ದು ಸ್ಥಲದ ರಗಳೆಯಲ್ಲಿ ಕೇವಲ ಅರ್ಧ ಸಿಕ್ಕು, ಇನ್ನರ್ಧ ಸಿಕ್ಕಿರಲಿಲ್ಲ ಎಂದಂತಾಯಿತು. ಹಾಗೆ ಅರ್ಧದಷ್ಟು ಏಕೆ ನಷ್ಟವಾಯಿತು ಎಂಬ ಸಂಗತಿಯನ್ನು ಸಿದ್ಧನಂಜೇಶನು, ಪಂಪಾ ವಿರೂಪಾಕ್ಷನು ಅದನ್ನು ನುಂಗಿದನು ಎಂಬ ಕಥೆಯ ಸಮಾಧಾನದಲ್ಲಿ ಅಡಗಿಸಿದ್ದಾನೆ. “ಬಹುಶಃ ಹರಿಹರನು ಜೀವಂತನಾಗಿದ್ದಾಗಲೇ ಅವನು ಬರೆದ ಇಪ್ಪತ್ತೆ ದು ಸ್ಥಲಗಳ ಬಸವ ರಗಳೆಯಲ್ಲಿ ಅರ್ಧ ವಿರೂಪಾಕ್ಷನ ದೇವಾಲಯದಲ್ಲೆಲ್ಲೊ ಕಳೆದು ಹೋಗಿರಬೇಕು. ಹೀಗೆಂಬುದೇ ಮೇಲೆ ಹೇಳಿದ ಪವಾಡದ ತಾತ್ಪರ‍್ಯವಿರಬಹುದು”[15] ಎಂದು ಡಾ. ಎಲ್. ಬಸವರಾಜು ಅವರು ವ್ಯಾಖ್ಯಾನಿಸಿ, ಹರಿಹರನ ರಗಳೆಯ ಅರ್ಧಭಾಗ ನಷ್ಟವಾದ ಸಂದರ್ಭವನ್ನು ಹರಿಹರನ ಕಾಲಕ್ಕೇ ಒಯ್ದು ಮುಟ್ಟಿಸಿದ್ದಾರೆ. ಅದನ್ನು ವಿರೂಪಾಕ್ಷ ನುಂಗಿದನು ಎಂದು ಪವಾಡಮಯವಾಗಿ ಹೇಳಲಿ, ಹರಿಹರನು ಬದುಕಿದ್ದಾಗಲೆ ವಿರೂಪಾಕ್ಷನ ದೇವಾಲಯದಲ್ಲಿ ಅರ್ಧಭಾಗ ಕಳೆದುಹೋಗಿರಬೇಕು ಎಂದು ಊಹಿಸಲಿ, ಒಟ್ಟಿನಲ್ಲಿ ತಾತ್ಪರ್ಯ ಇಂದು ಉಪಲಬ್ಧವಾಗಿರುವ ಹರಿಹರನ ಈ ರಗಳೆ ಮೂಲದ ಅರ್ಧದಷ್ಟು ಮಾತ್ರ ಎನ್ನುವ ಸತ್ಯವನ್ನು ಹೇಳಿದಂತಾಯಿತು. ಆದರೆ ಡಾ. ಎಲ್. ಬಸವರಾಜು ಅವರು ಭಾವಿಸುವಂತೆ ಹರಿಹರನ ಕಾಲದಲ್ಲೆ, ಅವನು ಜೀವಂತನಾಗಿರುವಾಗಲೆ ಮುಂದಿನ ಹನ್ನೆರಡೂವರೆ ಸ್ಥಲಗಳು ‘ಎಲ್ಲೊ ಕಳೆದುಹೋಗಿರಬೇಕು’ ಎಂಬುದು, ಕೇವಲ ಚಮತ್ಕಾರವಾದ ಊಹೆಯಷ್ಟೆ. ನಮಗೆ ತೋರುವ ಮಟ್ಟಿಗೆ ಹಾಗಾಗಿರಲಾರದು. ಹರಿಹರನು ಬರೆದು, ನಷ್ಟವಾಗಿರುವ ಈ ಭಾಗದಲ್ಲಿ ಬಸವಣ್ಣನವರ ವಿಚಾರದಲ್ಲಿ ತೀರ ಭಾವುಕತೆ ಉಳ್ಳವರಿಗೆ ಅಪ್ರಿಯವಾಗಬಹುದಾದ ಸಂಗತಿಗಳೆಷ್ಟೋ ಇದ್ದುದರಿಂದಲೊ, ಅಥವಾ ಬಸವಣ್ಣನವರ ಕಡೆಗಾಲದ ಬಗೆಗೆ, ಅವರೇ ಕೊಲೆಯಾದರೆಂದೋ, ಅವರು ತಾವು ಕಟ್ಟಿದ ಸೌಧ ಕಣ್ಣೆದುರಿಗೇ ಕುಸಿದು ಬೀಳುತ್ತಿರುವುದನ್ನು ಕಂಡು ನಿರಾಶರಾಗಿ ಆತ್ಮಹತ್ಯೆ ಮಾಡಿಕೊಂಡರೆಂದೋ, ಅಪ್ರಿಯವಾಗಬಹುದಾದ ಇಂಥವೇ ಕೆಲವು ವಾಸ್ತವ ಸಂಗತಿಗಳಿಗೆ ಹರಿಹರನು ಆ ಭಾಗದಲ್ಲಿ  ಅಭಿವ್ಯಕ್ತಿಯನ್ನು ನೀಡಿದನೆಂಬ ಕಾರಣದಿಂದಲೊ, ಏನೊ, ಹರಿಹರನ ಕಾಲದಲ್ಲೊ ಅಥವಾ ಅನಂತರದ ಕಾಲದಲ್ಲೊ, ಒಟ್ಟಿನಲ್ಲಿ ಹರಿಹರನಿಂದ ಹಿಡಿದು ಸಿದ್ಧನಂಜೇಶನು ‘ರಾಘವಾಂಕ ಚರಿತೆ’ಯನ್ನು ಬರೆಯುವುದರೊಳಗಿನ ಅವಧಿಯಲ್ಲಿ, ಈ ಮುಂದಿನ ಭಾಗವನ್ನು ವೀರಶೈವ ಮತ-ಧರ್ಮವೆ ನಿರ್ಮೂಲನ ಮಾಡಿರುವುದು ಸಾಧ್ಯವೆಂದು ನಮಗೆ ತೋರುತ್ತದೆ. ಹೀಗಾಗಿ ಸಿದ್ಧನಂಜೇಶನ ಕಾಲಕ್ಕೆ, ಹರಿಹರ ಬರೆದದ್ದು ಇಪ್ಪತ್ತೆ ದು ಸ್ಥಲದ ರಗಳೆ ಎಂದೂ, ಅದರಲ್ಲಿ ಆಗ ಉಪಲಬ್ಧವಾದದ್ದು ಕೇವಲ ಹನ್ನೆರಡು ಸ್ಥಲಗಳೆಂದೂ, ಸ್ಪಷ್ಟವಾಗಿ ‘ರಾಘವಾಂಕ ಚರಿತೆ’ಯಿಂದ ತಿಳಿದುಬರುತ್ತದೆ. ನಷ್ಟವಾದ ಇನ್ನರ್ಧ ಭಾಗದ ಬಗೆಗೆ ಪ್ರಶ್ನಿಸುವ ಸಂಶೋಧಿಸುವ  ಬುದ್ಧಿಗೆ ಸಿದ್ಧನಂಜೇಶನು ತನ್ನದೆ ಅಥವಾ ತನ್ನ ಕಾಲಕ್ಕೆ ಪ್ರಚಲಿತವಾಗಿರಬಹುದಾಗಿದ್ದ ದಂತ ಕಥೆಯ ‘ಬಾಯಿ ಕುಕ್ಕೆ’ಯನ್ನು ಕಟ್ಟಿದಂತೆ ತೋರುತ್ತದೆ. ಹನ್ನೆರಡು ಸ್ಥಲಕ್ಕೇ ಕಥೆ ಹೀಗೆ ನಿಂತು ಹೋದದ್ದನ್ನು ಕಂಡು, ಆ ಕಥೆಗೆ ಯಾರೋ ಒಂದು ಮುಕ್ತಾಯದ ಭಾವವನ್ನು ತಂದುಕೊಡಲೆಂದು ಅವಸರದಿಂದ ತೇಪೆ ಹಾಕಿದಂತೆ ತೋರುವ ಹದಿಮೂರನೆ ಸ್ಥಲ ಕೂಡ ಹರಿಹರನದೆಂದು ನಂಬಲು ಸಾಕಷ್ಟು ಪ್ರಮಾಣಗಳಿಲ್ಲ.[16]

ಈಗ ದೊರೆತಿರುವ ಹನ್ನೆರಡು ಸ್ಥಲದ ಕಾರ್ಯಕ್ಷೇತ್ರವೆಲ್ಲಾ ಬಾಗೆವಾಡಿ, ಕಪ್ಪಡಿ ಸಂಗಮ ಮತ್ತು ಮಂಗಳವಾಡಕ್ಕೆ ಸಂಬಂಧಪಟ್ಟದ್ದು. ಆದರೆ ಇಲ್ಲಿ ಕಲ್ಯಾಣದ ಪ್ರಸ್ತಾಪವೇ ಇಲ್ಲ! ಬಸವಣ್ಣನವರ ಅನುಭವ ಮಂಟಪದ ವಿಚಾರವಾಗಲಿ, ಅನೇಕ ಶರಣ ಶರಣೆಯರು ಸಂದಣಿಸಿದ  ಸಂಗತಿಯಾಗಲಿ, ಕಲ್ಯಾಣದ ಕೇಂದ್ರದಲ್ಲೇ ನಡೆದದ್ದು. ‘ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತಿರ್ದುದಯ್ಯಾ ಶಿವನ ಪ್ರತಾಪ’ ಎಂಬ ಪ್ರಶಂಸೆ ಸಂದದ್ದು ಕಲ್ಯಾಣದ ಬಸವಣ್ಣನವರಿಗೆ. ಹರಿಹರನ ಹನ್ನೆರಡೂವರೆ ಸ್ಥಲದ ಬಸವ ರಗಳೆಯಲ್ಲಿ ನಾವು ಕಾಣುವುದು ಮಂಗಳವಾಡದ ಬಸವಣ್ಣನನ್ನು. ಬಸವಣ್ಣನವರು ಬಾಗೆವಾಡಿಯಿಂದ ಹೊರಟು ಕಪ್ಪಡಿ ಸಂಗಮದ ಸಾಧನರಂಗದಲ್ಲಿದ್ದು, ಶಿವನ ನಿರ್ದೇಶನದ ಮೇರೆಗೆ ಬಂದದ್ದು ಬಿಜ್ಜಳರಾಯನಿದ್ದ ಮಂಗಳವಾಡಕ್ಕೆ. “ಕೆಲವರು ಮಂಗಳವಾಡ ಮತ್ತು ಕಲ್ಯಾಣ ಎರಡೂ ಒಂದೇ ಎಂದು ತಪ್ಪು ತಿಳಿದಿದ್ದಾರೆ; ವಾಸ್ತವವಾಗಿ ಮಂಗಳವಾಡ ಮತ್ತು ಕಲ್ಯಾಣ ಇವೆರಡೂ ಬೇರೆ ಬೇರೆಯ ಸ್ಥಳಗಳು”[17] “ಬಿಜ್ಜಳನು ಮಹಾಮಾಂಡಲಿಕನಾಗಿರುವವರೆಗೂ ಮಂಗಳವಾಡವು ಆತನ ರಾಜಧಾನಿಯಾಗಿದ್ದುದರ ಜೊತೆಗೆ, ಅವನ ಕಾಲಕ್ಕೆ ಅದು ಒಳಸಂಚುಗಳ ಕೇಂದ್ರ ಕಾರ್ಯಾಲಯವೂ ಆಗಿತ್ತು.”[18] “ಬಿಜ್ಜಳನು ಚಾಳುಕ್ಯ ಸಾಮ್ರಾಜ್ಯಕ್ಕೆಲ್ಲ ಚಕ್ರವರ್ತಿಯಾದ ಮೇಲೆ ವಂಶಪರಂಪರಾಗತವಾಗಿ ತನ್ನ ಹಿರಿಯರಿಗೂ ತನಗೂ ರಾಜಧಾನಿಯಾಗಿದ್ದ ಮಂಗಳವಾಡವನ್ನು ಬಿಟ್ಟು ಕಲ್ಯಾಣವನ್ನು ತನ್ನ ನೆಲೆವೀಡಾಗಿ ಮಾಡಿಕೊಂಡನು.”[19] “ಸುಮಾರು ಇದೇ ಕಾಲದಲ್ಲೆ ಬಸವಣ್ಣನವರೂ ಕಲ್ಯಾಣವನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡಂತೆ ತೋರುತ್ತದೆ.”[20] ಇದರಿಂದಾಗಿ ಬಸವಣ್ಣನವರ ಕಾರ್ಯರಂಗ ಮಂಗಳವಾಡದಿಂದ ಕಲ್ಯಾಣಕ್ಕೆ ಸ್ಥಳಾಂತರವಾದದ್ದು ಸಹಜವಾಗಿದೆ. ಹೀಗಾಗಿ ಹರಿಹರನ ಬಸವರಾಜ ದೇವರ ರಗಳೆಯಲ್ಲಿ ದೊರೆಯದೆ ಹೋಗಿರುವ ಇನ್ನರ್ಧ ಭಾಗದಲ್ಲಿ, ಬಸವಣ್ಣನವರು ನಡೆಯಿಸಿದ ಶಿವಾನುಭವ ಗೋಷ್ಠಿಗಳ ವಿಚಾರವೂ, ಕಲ್ಯಾಣವು ಬಸವಜ್ಯೋತಿಗೆ ಪ್ರಣತೆಯಂತೆ ಆದ ಘಟನೆಗಳೂ, ಬಿಜ್ಜಳನ ಸಾವಿಗೆ, ತತ್ಪರಿಣಾಮರೂಪದ ಕಲ್ಯಾಣಕ್ರಾಂತಿಗೆ ಪ್ರಚೋದಕವಾದ ಸಂಗತಿಗಳೂ ಚಿತ್ರಿತವಾಗಿದ್ದಿರಬಹುದು. ಈ ನಿರೂಪಣೆಯಲ್ಲಿ ನಾವು ಆಗಲೇ ಊಹಿಸಿದಂತೆ ಕೆಲವು ಅಪ್ರಿಯವಾದ ಅಥವಾ ನುಂಗಲಾರದ ಸಂಗತಿಗಳಿದ್ದ ಕಾರಣ, ವೀರಶೈವ ಧರ್ಮದವರೆ ಆ ಭಾಗವನ್ನು ತೆಗೆದುಹಾಕಿರುವ ಸಂಭವ ಉಂಟು. ಹಾಗೆ ತೆಗೆದುಹಾಕಿರುವ ಘಟನೆ ಹರಿಹರನ ಕಾಲದಿಂದ ಹಿಡಿದು, ಸಿದ್ಧನಂಜೇಶನ ಕಾಲದವರೆಗಿನ ಅವಧಿಯಲ್ಲಿ ನಡೆದಿರಬೇಕು. ಹರಿಹರನು ತನ್ನ ಕಥಾನಾಯಕರ ‘ಅವತಾರ’ದ ಹಿನ್ನೆಲೆಯಾಗಿ ಕಲ್ಪಿಸಿದ ‘ಶಾಪ’ದ ಕಾರಣವೂ ಹೇಗೆ ಪ್ರತಿಭಟನೆಗೆ ಗುರಿಯಾಯಿತೆಂಬುದನ್ನು ಆಗಲೇ ಹಿಂದೆ ಹೇಳಿದ್ದೇವೆ. ಹನ್ನೆರಡೂವರೆ ಸ್ಥಲದ ನಂತರ ಇನ್ನೂ ಯಾವ ಯಾವ ಇಂಥ ಆಕ್ಷೇಪಣೀಯವಾದ ಭಾಗಗಳಿದ್ದುವೋ ಏನೊ, ಇದರಿಂದಾಗಿ ಹರಿಹರನ ವಿಚಾರಕ್ಕೆ ಮುಂದಿನವರಿಗೆ ಅಂಥ ಅಕ್ಕರೆ ಬೆಳೆಯದಾಯಿತು. ಬರುಬರುತ್ತಾ, ಕನ್ನಡದಲ್ಲಿ ಪ್ರಪ್ರಥಮವಾಗಿ ಬಸವಣ್ಣನವರ ವಿಷಯದಲ್ಲಿ ಕೃತಿ ಮಾಡಿದ ಹರಿಹರನಿಗೆ ನ್ಯಾಯವಾಗಿ ಸಲ್ಲಬೇಕಾದ ಸ್ಥಾನವೂ ಸಲ್ಲದೆ, ಸೋಮನಾಥನ ತೆಲುಗು ಬಸವ ಪುರಾಣಕ್ಕೆ, ಅನಂತರ ಅದರ ಕನ್ನಡ ಅನುಸರಣ ಕೃತಿಯಾದ ಭೀಮಕವಿಯ ಬಸವ ಪುರಾಣಕ್ಕೆ ಪ್ರಾಶಸ್ತ್ಯ ದೊರೆತು ಹರಿಹರನ ರಗಳೆಯ ಗ್ರಂಥಕ್ಕೆ ಪುರಸ್ಕಾರ ದೊರೆಯದೆ ಹೋದದ್ದೂ ಭೀಮಕವಿ, ಷಡಕ್ಷರಕವಿ ಮೊದಲಾದವರು ಹರಿಹರನು ಬಸವರಾಜದೇವರ ರಗಳೆಯನ್ನು ಬರೆದನೆಂಬುದನ್ನು ಕೂಡಸ್ಮರಿಸದೆ ಇರುವುದೂ, ಹರಿಹರನ ಕೃತಿಯ ‘ಉತ್ತರಾರ್ಧ’ದ ಬಗೆಗೆ ಬೆಳೆದು ಬಂದ ಅಸಮ್ಮತಿಯನ್ನೇ ಧ್ವನಿಸುವಂತೆ ತೋರುತ್ತದೆ.

-೪-

ಹರಿಹರನ ಬಸವರಾಜದೇವರ ರಗಳೆ, ಅಪೂರ್ಣವಾಗಿ ಉಪಲಬ್ಧವಾಗಿದ್ದರೂ ಈಗ ದೊರೆತ ಭಾಗದಲ್ಲಿ ಅನೇಕ ಅತೃಪ್ತಿಕರವಾದ, ಪ್ರಶ್ನಾರ್ಥಕವಾದ, ಸಮಸ್ಯಾತ್ಮಕವಾದ ಸಂಗತಿಗಳಿದ್ದರೂ ಬಸವಣ್ಣನವರ ಭಕ್ತ ಜೀವನದ ಚಿತ್ರ ಮಾತ್ರ ಸೊಗಸಾಗಿದೆ. ಅವರ ಭಕ್ತ ಜೀವನದ ಹಾರೈಕೆ-ಹಂಬಲ-ತುಡಿತ-ಉತ್ಕಟತೆಗಳು; ಲಿಂಗಾರ್ಚನೆ ಜಂಗಮ ದಾಸೋಹದಲ್ಲಿ ಅವರಿಗಿದ್ದ ಶ್ರದ್ಧೆ ಆಸಕ್ತಿಗಳು; ಜಂಗಮವೇ ತಮ್ಮ ಪ್ರಾಣವೆಂದು ತಾವು ತಪ್ಪು ಮಾತನ್ನಾಡಿ, ಇನ್ನೊಬ್ಬರ ಮನಸ್ಸನ್ನು ನೋಯಿಸಿದೆನಲ್ಲಾ ಎಂಬ ಪಶ್ಚಾತ್ತಾಪದಿಂದ ಕಿನ್ನರಿ ಬೊಮ್ಮಯ್ಯನನ್ನು ಉಳ್ಳಿಯ ಉತ್ಸವದಿಂದ ಒಲಿಸಿದ ರೀತಿ; ಕಂಬಳಿಯ ನಾಗಿದೇವನೆಂಬ ಅಂತ್ಯಜನ ಮನೆಯಲ್ಲಿ ಊಟ ಮಾಡಿ ‘ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನು ಒಂದೇ ಎಂಬೆ’ ಎಂದು ತೋರಿಸಿದ ಸಂದರ್ಭ; ಹಸುಗಳನ್ನು ಕಳ್ಳರು ಕದ್ದೊಯ್ದರೆಂದು ಕೇಳಿದಾಗ, ಕೂಡಲೇ ಅವರು ತಾಯನ್ನಗಲಿದ ಕರುಗಳ ಪಾಡನ್ನು ನೆನೆದು, ಕರುಗಳನ್ನು ಬಿಚ್ಚಿ ಹಸುಗಳ ಕಡೆ ಕಳುಹಿಸಿದ ಸಂದರ್ಭದಲ್ಲಿ ವ್ಯಕ್ತವಾಗುವ ಮಾನವೀಯತೆ; ತಮ್ಮ ಸತಿಯನ್ನೂ ಸಹ ಸುಖಿ ಜಂಗಮನಿಗೆ  ಒಪ್ಪಿಸಿ ತಾವು ನಿರ್ವಿಕಾರರಾಗಿ ಕುಳಿತ ಪ್ರಸಂಗದ ಅಪೂರ್ವ ಸಮರ್ಪಣ ಶ್ರದ್ಧೆ; ತಮ್ಮ ಸತಿಯ ಕಿವಿಯ ಓಲೆಗೆ ಕಳ್ಳನೊಬ್ಬ ಕೈಹಾಕಿದಾಗ “ಎಲೆಲೆ ಸಂಗನ ಕರಂ ನೊಂದುದೇ, ಬೆಸಸುವಲ್ಲಿಂ ಮುನ್ನವೆ ಕೊಡದೆ ನಿಲ್ವುದೇ” ಎಂದ ಸನ್ನಿವೇಶದಲ್ಲಿ ಪ್ರಕಟವಾಗುವ ಅವರ ಮನಸ್ಸಿನ ಪರಿಪಾಕ- ಇಷ್ಟು ಸಾಕು ಬಸವಣ್ಣನವರ ವ್ಯಕ್ತಿತ್ವದ ಮಹತ್ತನ್ನು ಸಾರಲು.

ಹರಿಹರನು ಬಸವಣ್ಣನವರ ಸಾಂಸಾರಿಕ ಜೀವನವನ್ನಾಗಲಿ, ರಾಜಕೀಯ ಜೀವನವನ್ನಾಗಲಿ ಚಿತ್ರಿಸುವ ಕಡೆಗೆ ಉತ್ಸಾಹವನ್ನೇ ಪ್ರಕಟಿಸಿಲ್ಲ. “ಬಸವಣ್ಣನ ಬಾಹ್ಯ ಚರಿತ್ರೆಗಿಂತ ಅಂತರಂಗ ಚರಿತ್ರೆ ಅಂದರೆ ಭಕ್ತಿ ಜೀವನದ ರಸಚಿತ್ರವನ್ನು ಹರಿಹರನು ಅದರಲ್ಲಿ ಸಂಪೂರ್ಣ ತನ್ಮಯನಾಗಿ ಕೊಟ್ಟಿದ್ದಾನೆ.”[21]

ಹರಿಹರನು ಬಸವಣ್ಣನವರ ಈ ಭಕ್ತಿ ಜೀವನದ ರಸಚಿತ್ರವನ್ನು ಪರಸ್ಪರ ವಿರುದ್ಧವೆಂಬಂತೆ ತೋರುವ ಎರಡು ಪರಿಸರಗಳಲ್ಲಿ ಚಿತ್ರಿಸಿದ್ದಾನೆ: ಒಂದು, ಅವರು ಕಪ್ಪಡಿ ಸಂಗಮದಲ್ಲಿ ನಡೆಯಿಸಿದ ಸ್ವಾತ್ಮಸಾಧನಾ ರೂಪದ ಏಕಾಂತ ಭಕ್ತಿ; ಮತ್ತೊಂದು ಬಿಜ್ಜಳನ ಭಾಂಡಾರಿ- ಯಾದನಂತರ ಮಂಗಳವಾಡದ ಮಹಮನೆಯಲ್ಲಿ ತಂಡ ತಂಡವಾಗಿ ಬಂದ ಮಾಹೇಶ್ವರರ ನಡುವೆ, ಬೇಡಿದವರಿಗೆ ಬೇಡಿದ್ದನ್ನು ನೀಡುತ್ತಾ, ವಿವಿಧ ಮನಃಸ್ಥಿತಿಯ ಸಾಧಕರ ಸಂತೆಯ ನಡುವೆ, ಅವರ ಶಿವಪೂಜಾ ಸಂಭ್ರಮದಲ್ಲಿ ಕೂಡಿಕೊಂಡ ಲೋಕಾಂತ ಭಕ್ತಿ. ಕಪ್ಪಡಿ ಸಂಗಮದಲ್ಲಿ ಬಸವಣ್ಣನವರು ನಡೆಯಿಸಿದ ಏಕಾಂತ ಭಕ್ತಿಯ ಬಣ್ಣನೆಯಲ್ಲಿ ಹರಿಹರನು ತನ್ನ ಭಕ್ತ ಹೃದಯದ ಬಯಕೆಯನ್ನು ಅತ್ಯಂತ ಭಾವಗೀತಾತ್ಮಕವಾಗಿ ತೋಡಿಕೊಂಡಿದ್ದಾನೆ. ಬಸವಣ್ಣನವರ ಭಕ್ತಜೀವನದ ದಿನಚರಿಯ ಪುಟವೊಂದರಂತೆ ತೋರುವ ಈ ಭಾಗ ಹರಿಹರನ ‘ಪುಷ್ಪರಗಳೆ’ ಮತ್ತು ‘ಲಿಂಗಾರ್ಚನೆಯ ರಗಳೆ’ಗಳನ್ನು ನೆನಪಿಗೆ ತರುತ್ತದೆ. ಬಸವಣ್ಣನವರು ಬೆಳಿಗ್ಗೆ ಎದ್ದು ‘ಅಳಿಯೆಱಗದ, ಅನಿಲನಲುಗದ, ರವಿಕರಂ ಪುಗದ’ ಹೂವುಗಳನ್ನು, ತೋಟದಲ್ಲಿ ಗಿಡಗಿಡಗಳಿಂದ ಬೇಡಿ ಪಡೆದು, ಮಾಲೆ ಮಾಡಿ, ಸಂಗಮೇಶನಿಗೆ ಅಭಿಷೇಕ ಮಾಡಿ, ನಾನಾ ವಿಧವಾಗಿ ಅರ್ಚಿಸಿ ‘ಪೂಜೆಯಂ ನೋಡಿ ಮೆಚ್ಚದೆ ಪೂಜೆಯಂ ಮಾಡಿ’ ‘ನಯನಂಗಳೊಳು ಪೂಜೆ ಬರೆದಂತೆ ನೋಡುತುಂ’, ಕೂಡಲ ಸಂಗನನ್ನು ಕುರಿತು-

ಎನ್ನನತಿ ಕರುಣದಿಂ ನೋಡು ಕೂಡಲಸಂಗ
ಎನ್ನ ಮನದಕ್ಕಱೊಳು ಕೂಡು ಕೂಡಲಸಂಗ
ಎನ್ನ ಕಣ್ಣೊಳಗೆ ಪರಿದಾಡು ಕೂಡಲಸಂಗ
ಎನ್ನ ಮನದೊಳಗೆ ಕುಣಿದಾಡು ಕೂಡಲಸಂಗ
(೩:೯೫-೯೮)

ಎಂದು ಬೇಡಿಕೊಳ್ಳುವ ಈ ಏಕಾಂತ ಪ್ರೇಮಾಲಾಪ ತುಂಬ ಮಧುರವಾಗಿದೆ. ಇಲ್ಲಿ ಕೂಡಲಸಂಗ ಮತ್ತು ಬಸವಣ್ಣ ಇವರಿಬ್ಬರೆ. ಮತ್ತೆ ಮೂರನೆಯವರ ಕೋಟಲೆಯಿಲ್ಲದೆ, ಆತ್ಮನಿವೇದನೆಯ ಮತ್ತು ಕೃಪಾನುಗ್ರಹದ ಪರಸ್ಪರ ವಿನಿಮಯದ ವಾತ್ಸಲ್ಯ ವಲಯದ ಮಧುರ ಮೌನದಲ್ಲಿ ಬಸವಣ್ಣನವರ ಬದುಕು ಕೂಡಲಸಂಗನ ಕರುಣೆಯ ಕಿರಣದಲ್ಲಿ ಮೆಲ್ಲನೆ ಅರಳುತ್ತಿರುವ ಹೂವಿನಂತೆ ಮನೋಹರವಾಗಿದೆ. ಈ ಭಾಗದ ಏಕಾಂತ ಭಕ್ತಿಯ ಪ್ರಶಾಂತ ಮೌನಕ್ಕೂ, ಮಂಗಳವಾಡದ ಆ ಮಹಮನೆಯ ಲೋಕಾಂತ ಭಕ್ತಿಯ ತುಮುಲಮಯ ಶಿವಲಿಂಗ ಪೂಜಾ ಸಂಭ್ರಮಕ್ಕೂ ವ್ಯತ್ಯಾಸವಿದೆ. ಅಲ್ಲಿ-

ಮಜ್ಜನಕ್ಕೆರೆವುತುಂ ಕರಗುತಿರ್ಪರ್ ಕೆಲರು
ಉಜ್ಜಳದ ಲಿಂಗಮಂ ನೋಡುತಿರ್ಪರ್ ಕೆಲರು
ಪೂಜೆಯಂ ಮಾಡಿ ಪುಟವೆದ್ದಾಡುವರ್ ಕೆಲರು
ಪೂಜಿಸುತೆ ಕಂಪಿಸುತೆ ಕೈಮಱೆವವರ್ ಕೆಲರು
…………………………………………….
ಹಾಡಲೆಂದನುಗೆಯ್ದು ನೋಡುತಿಪ್ಪರ್ ಕೆಲರು
ನೋಡಲೊಂದನುಗೆಯ್ದು ಹಾಡುತಿಪ್ಪರ್ ಕೆಲರು
ಆಡುತಾಡುತೆ ಮೀಱಿ ಮಸಗಿ ಕುಣಿವರ್ ಕೆಲರು
(೭: ೮೫-೮೮; ೯೩-೯೫)

ಇಂಥ ಭಕ್ತಜನ ಜಂಗುಳಿಯ ನಡುವೆ ಬಸವಣ್ಣನವರು ಕಿಂಕರಭಾವದಿಂದ ಬೇಡಿದವರಿಗೆ  ಬೇಡಿದ್ದನ್ನು ನೀಡುತ್ತಾ ಈ ಶಿವಲಿಂಗ ಪೂಜಾಸಂಭ್ರಮದಲ್ಲಿ ತಾವು ಭಾಗಿಯಾಗಿರುತ್ತಾರೆ. ಈ ಎರಡೂ ಪರಿಸರಗಳಲ್ಲೂ ಬಸವಣ್ಣನವರ ಭಕ್ತಿ ಉಜ್ವಲವಾಗಿ ಪ್ರಕಟವಾಗಿದೆ. ಒಂದರಲ್ಲಿ ಕಿರುತೊರೆಯ ಲಾಲಿತ್ಯ, ಏಕಾಂತತೆಗಳು ತೋರಿದರೆ, ಮತ್ತೊಂದರಲ್ಲಿ ಹತ್ತು ದಿಕ್ಕಿನ ಹಳ್ಳಗಳನ್ನು ತನ್ನಲ್ಲಿ ಕೂಡಿಸಿಕೊಂಡು ಭೋರ್ಗರೆಯುವ ಹೊನಲಿನ ಆವೇಶ-ಸಂಭ್ರಮಗಳು ಗೋಚರಿಸುತ್ತವೆ. ಮೊದಲನೆಯದರಲ್ಲಿ ಬಸವಣ್ಣನವರು ಸಂಗಮನಾಥನಿಂದ ಲೋಕಸಂಗ್ರಹಕ್ಕಾಗಿ ಪಡೆದ ನಿರ್ದೇಶನ ಮತ್ತು ಅಧಿಕಾರ ಸಂಪಾದನೆಗಳು ಕಂಡುಬಂದರೆ, ಎರಡನೆಯದರಲ್ಲಿ ಅವರು ತಮ್ಮ ಸಾಧನೆಯನ್ನು ಸಮೂಹದೊಂದಿಗೆ ವಿಲೀನಗೊಳಿಸಿದ, ಭಕ್ತಜೀವನದ ನಿರ್ದೇಶಕರಂತೆ ತೋರುತ್ತಾರೆ.

-೫-

ಎಲ್ಲ ಮಹಿಮಾವಂತರಾದ ಭಕ್ತರ ಜೀವನದ ಸುತ್ತಲೂ ಪವಾಡ ಕಥೆಗಳು ಹೆಣೆದು ಹಬ್ಬುವುದು, ಜನರಿಗೆ ಆ ವ್ಯಕ್ತಿಗಳ ವಿಚಾರದಲ್ಲಿರುವ ಪೂಜ್ಯತೆಗೆ ಅತ್ಯಂತ ಸಮೃದ್ಧವಾದ ಸಾಕ್ಷ್ಯಗಳಾಗಿವೆ. ಬಸವಣ್ಣನವರ ವಿಚಾರದಲ್ಲೂ ಹಾಗೇ ಆಗಿದೆ. ಹರಿಹರನು ಬಸವಣ್ಣನವರನ್ನು ಕುರಿತು ಕೃತಿಮಾಡುವ ಕಾಲಕ್ಕೇ ಬಸವಣ್ಣನವರ ವಾಸ್ತವ ಜೀವನ ಜನಮನದಲ್ಲಿ ಪೌರಾಣಿಕತೆಯ ನಿಲುವಿಗೇರಿ, ಪವಾಡಗಳ ತೊಡವುಗಳನ್ನು ತೊಟ್ಟು ನಿಂತಿದ್ದಿರಬೇಕು. ಹರಿಹರ ಈ ರಗಳೆಯನ್ನು ಬರೆಯುವಾಗ ಬಸವಣ್ಣನವರ ‘ಸಾಮರ್ಥ್ಯ’ಗಳನ್ನು ಕುರಿತು ಹೀಗೆ ಜನಮನದಲ್ಲಿ ಪ್ರಚಲಿತವಾದ ಪವಾಡ ಸಂಗತಿಗಳನ್ನು ತನ್ನ ಕಥನದೊಳಕ್ಕೆ ಅಳವಡಿಸಿಕೊಂಡಿರಬೇಕು. ಹರಿಹರನ ಬಸವರಾಜ ದೇವರ ರಗಳೆಯಲ್ಲಿ ಎಂಟು ಪವಾಡಗಳ ಉಲ್ಲೇಖವಿದೆ. ಉಪಲಬ್ಧವಾಗದಿರುವ ಭಾಗದಲ್ಲಿ ಇನ್ನೂ ಒಂದಿಷ್ಟು ಪವಾಡಗಳಿದ್ದಿರಬೇಕು. ಈ ಪವಾಡಗಳ ಸಂಖ್ಯೆ ಮುಂದಿನ ಕವಿಗಳ ಕೃತಿಗಳಲ್ಲಿ ವರ್ಧಿಸುತ್ತಾ ಹೋಗಿದೆ. ಬಸವಣ್ಣನವರು ತಮ್ಮದೊಂದು ವಚನದಲ್ಲಿ “ಎಂಬತ್ತೆಂಟು ಪವಾಡವ ಮೆಱೆದು ಹಗರಣದ ಚೋಹದಂತಾಯಿತೆನ್ನ ಭಕ್ತಿ”[22] ಎಂದು ಹೇಳಿರುವ ಮಾತಿನಲ್ಲಿ ಬಸವಣ್ಣನವರು ಮಾಡಿದ ಪವಾಡಗಳ ಸಂಖ್ಯೆ ಎಂಬತ್ತೆಂಟು ಎಂದಂತಾಯಿತು. ಗೂಳೂರು ಸಿದ್ಧವೀರಣ್ಣೊಡೆಯರ ‘ಶೂನ್ಯ ಸಂಪಾದನೆ’ಯಲ್ಲಿ “ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ ಮುನ್ನೂರಱುವತ್ತು ಸತ್ತಪ್ರಾಣವನೆತ್ತಿ, ಮೂವತ್ತಾಱು ಕೊಂಡೆಯವ ಪರಿಹರಿಸಿ, ಎಂಬತ್ತೆಂಟು ಪವಾಡವ ಮೆಱೆದಿರಿ; ಅದು ನಿಮ್ಮ ಲೀಲಾ ವಿನೋದ”[23] ಎಂದು ಬಸವಣ್ಣನವರು ತಾವು ಮಾಡಿದ ಈ ಸಾಮರ್ಥ್ಯಗಳನ್ನು ಪ್ರಭುದೇವರ ಲೀಲಾ ವಿನೋದವೆಂದು ಪ್ರಶಂಸಿಸಿ ನುಡಿದಂತೆ ನಿರೂಪಿತವಾಗಿದೆ. ಈ ಎರಡು ಉಲ್ಲೇಖಗಳಲ್ಲಿ ಮೊದಲನೆಯದು ಪವಾಡಗಳ ಬಗ್ಗೆ ಬಸವಣ್ಣನವರ ಪ್ರತಿಕ್ರಿಯೆಯನ್ನು ತೋರಿಸುತ್ತದೆ. ಪವಾಡಗಳ ಬಗ್ಗೆ ಅವರಿಗೆ ಇದ್ದ ತಾತ್ಸಾರವನ್ನೂ ಪವಾಡಗಳನ್ನು ಮೆರೆದು ತಮ್ಮ ಭಕ್ತಿ ‘ಹಗರಣದ ಚೋಹದಂತೆ’ -ನಾಟಕದ ವೇಷದಂತೆ, ಕೇವಲ ಪ್ರದರ್ಶನಕ್ಕೆ ಇಟ್ಟ ಹಾಗೆ-ಆಯಿತಲ್ಲಾ ಎಂಬ ಕೊರಗು ಕಾಣಿಸುತ್ತದೆ. ಬಸವಣ್ಣನವರು ತಮ್ಮ ಅಂತರಂಗದ ಅವಗುಣಗಳನ್ನು ಬಿಚ್ಚಿಡುವುದರಲ್ಲಿ ಎಷ್ಟು ಉತ್ಸಾಹಿಗಳಾಗಿದ್ದರೋ, ಅಷ್ಟೇ ಆಸಕ್ತಿ ತಾವು ಭಕ್ತರೆಂಬುದನ್ನೂ, ಶರಣರೆಂಬುದನ್ನೂ ಮುಚ್ಚಿಡುವುದರಲ್ಲಿ ಇತ್ತು. ಆದರೂ ತಮ್ಮಿಂದಾದ ಪವಾಡಗಳಿಂದಾಗಿ, ಭಕ್ತಿ ಎನ್ನುವುದು ಕೇವಲ ಪ್ರದರ್ಶನದ ವಸ್ತುವಾಯಿತಲ್ಲ ಎಂದು ಅವರು ಕೊರಗಿರುವುದನ್ನು ಈ ವಚನದಲ್ಲಿ ಕಾಣುತ್ತೇವೆ. ಎರಡನೆಯ ಉಲ್ಲೇಖವಂತೂ, ಎಂಬತ್ತೆಂಟು ಪವಾಡಗಳ ಜತೆಗೆ, ಅವರು ‘ಮುನ್ನೂರಱುವತ್ತು ಸತ್ತಪ್ರಾಣವನೆತ್ತಿ, ಮೂವತ್ತಾಱು ಕೊಂಡೆಯವ ಪರಿಹರಿಸಿ’ದ ಸಂಗತಿಯನ್ನು ತಿಳಿಸುತ್ತದೆ. ಹಾಗಾದರೆ ‘ಪವಾಡ’ ಎನ್ನುವುದು, ಮುನ್ನೂರರವತ್ತು ಸತ್ತ ಪ್ರಾಣಿಗಳನ್ನು ಬದುಕಿಸಿದ್ದರಿಂದ ಮತ್ತು ಮೂವತ್ತಾರು ಕೊಂಡೆಯವ ಪರಿಹರಿಸಿದ್ದರಿಂದ ಯಾವ ರೀತಿಯಲ್ಲಿ ಬೇರೆಯಾದದ್ದು ಎನ್ನುವ ವಿಷಯ ವಿಚಾರಣೀಯವಾದದ್ದು. ಅದರ ಚರ್ಚೆಯನ್ನಿಲ್ಲಿ ಮಾಡದೆ ಒಂದು ಮಾತನ್ನು ಹೇಳಬೇಕಾಗುತ್ತದೆ: ಬಸವಣ್ಣನವರು ತಾವು ಎಂಬತ್ತೆಂಟು ಪವಾಡಗಳನ್ನು ಮಾಡಿದೆವೆಂದು ಹೇಳಿಕೊಳ್ಳುವ ಈ ಒಂದು ವಚನವನ್ನು ಬಿಟ್ಟರೆ[24] ಅದೂ ಕೂಡಾ ಪವಾಡಗಳ ಪರವಾಗೇನೂ ಇಲ್ಲ- ಇನ್ನೆಲ್ಲೂ ತಾವು ಇಂದು ಇಂಥ ಪವಾಡವನ್ನು ಮಾಡಿದೆವೆಂಬ ಬಗೆಗೆ ಅವರ ವಚನಗಳಲ್ಲಿ ಉಲ್ಲೇಖವಿರುವಂತಿಲ್ಲ. ಅಥವಾ ಅವರು ಹಾಗೆ ಅಂಥ ಪವಾಡಮಯವಾದ ಸಾಮರ್ಥ್ಯಗಳನ್ನು ತೋರಿದ್ದರ ಸಾಕ್ಷಿಯೋ ಪ್ರತಿಕ್ರಿಯೆಯೋ ಅವರ ಸುತ್ತಮುತ್ತ ಇದ್ದ ಸಮಕಾಲೀನ ವಚನಕಾರರ ವಚನಗಳಲ್ಲಿ ಉಲ್ಲೇಖಿತವಾಗಿರುವುದು ಅತಿವಿರಳವಾಗಿದೆ ಎಂಬುದು ಆಶ್ಚರ್ಯದ ಸಂಗತಿ.[25] ಆದರೆ ಹರಿಹರನು ತನ್ನ ಬಸವರಾಜ ದೇವರ ರಗಳೆಯಲ್ಲಿ ತಂದಿರುವ ಎಂಟು ಪವಾಡಗಳು ಬಸವಣ್ಣನವರ ಪಾತ್ರ ಚಿತ್ರಣದಲ್ಲಿ, ಒಂದು ರೀತಿಯ ಕಲಾತಂತ್ರವಾಗಿ ಬಂದಿರುವುದಷ್ಟೆ ಅಲ್ಲದೆ, ಅವುಗಳನ್ನು ಪರಿಶೀಲಿಸಿದರೆ ಕೆಲವು ವಾಸ್ತವ ಸಂಗತಿಗಳೂ, ಕೆಲವು ಉತ್ಪ್ರೇಕ್ಷೆಗಳೂ, ಕೆಲವು ಸಂಕೇತಗಳೂ ಆಗಿರುವಂತೆ ತೋರುತ್ತದೆ.

ಹರಿಹರನ ಕೃತಿಯಲ್ಲಿ ಬಂದಿರುವ ಪವಾಡಗಳು ಎಂಟು: (೧) ಸಂಗಮದಿಂದ ಮಂಗಳವಾಡಕ್ಕೆ ಬಸವಣ್ಣನವರು ಬಂದಾಗ ಬಿಜ್ಜಳರಾಯನ ಅರಮನೆಯ ಕರಣಸಾಲೆಯಲ್ಲಿ ಹಣದ ಲೆಕ್ಕದ ವಿಚಾರದಲ್ಲಿ ಗಣಕರು ಮಾಡಿದ ತಪ್ಪನ್ನು ನೋಡ ನೋಡುತ್ತಲೇ ತೋರಿಸಿಕೊಟ್ಟದ್ದು. (೨) ಕೇದಗೆ ಹೂವನ್ನು ಲಿಂಗಕ್ಕೇರಿಸಿದಾಗ ನಾರಾಯಣಭಟ್ಟನು ಅದು ಆಗಮಗಳಿಗೆ ವಿರುದ್ಧವೆಂದಾಗ ಬಸವಣ್ಣನವರು ‘ದೇವಂ ಭಕ್ತರ್ ಕೊಟ್ಟಡೆ ಕೈಕೊಳ್ವಂ’ ಎಂದು ಹೇಳಿ, ಅದಕ್ಕೆ ಕುರುಹಾಗಿ ತನ್ನ ಕೆಲಬಲದ ಸಹಸ್ರ ಮಾಹೇಶ್ವರರ ಕರಂಡಗೆಗಳನ್ನು ತೆರೆಯಿಸಿ, ಅಲ್ಲಿನ ಶಿವಲಿಂಗದ ತಲೆಯ ಮೇಲೂ ಕೇದಗೆ ಹೂವಿದ್ದುದನ್ನು ತೋರಿಸಿದ್ದು. (೩) ಬಿಜ್ಜಳನ ಭಂಡಾರದ ಹಣವನ್ನು ಬಸವಣ್ಣನು ದುರುಪಯೋಗ ಮಾಡಿದನೆಂದು ಕೆಲವರು ದೂರಿದಾಗ, ಬಿಜ್ಜಳನು ತನಿಖೆ ಮಾಡಿದಾಗ ಬಿಜ್ಜಳನ ಭಂಡಾರದ ಹಣ ನೂರ್ಮಡಿ ವರ್ಧಿಸಿದ್ದು. (೪) ಒಮ್ಮೆ ಕೆಲವರು ಡಂಬಕರು ತಮ್ಮ ಕಕ್ಷಪುಟದಲ್ಲಿ ಬದನೆಕಾಯನ್ನು ಕಟ್ಟಿಕೊಂಡು ತಾವು ಶರಣರೆಂದು ಬಂದಾಗ ಅವು ಶಿವಲಿಂಗಗಳಾಗಿ ಪರಿವರ್ತಿತವಾದದ್ದು. (೫) ಬಸವಣ್ಣನು ನಿದ್ರಸ್ಥನಾಗಿರುವಾಗ ಹಲವಾರು ಜಂಗಮರು ಬಾಗಿಲಿಗೆ ಬರಲಾಗಿ, ಬಾಗಿಲು ಕಾಯುವವನು, ಬಸವಣ್ಣನವರನ್ನು ಕಾಣಲು ಇದು ಸಮಯವಲ್ಲ ಎನ್ನಲಾಗಿ, ಬಸವಣ್ಣನ ಪ್ರಾಣವೇ ಅವರ ಹಿಂದೆ ಹೋಗಿ, ಅವರು ಹಿಂದಕ್ಕೆ ಬಂದಾಗ ಆತನ ಶರೀರಕ್ಕೆ ಪ್ರಾಣ ಬಂದದ್ದು. (೬) ಕಂಬಳಿ ನಾಗಿದೇವನ ಉಂಗುಟದಿಂದ ಕ್ಷೀರ ಧಾರೆಯನ್ನು ಕರೆಯಿಸಿದ್ದು. (೭) ಕಳಿಂಗ ದೇಶದಿಂದ ಮಹಾದೇವಿಶೆಟ್ಟಿ ಮುತ್ತುರತ್ನಗಳನ್ನು ಬೇಡಲೆಂದು ಹೊರಟುಬಂದು, ಅದನ್ನು ಕೇಳದೆ ದವಸಧಾನ್ಯಗಳನ್ನು ಕೇಳಿದಾಗ ಬಸವಣ್ಣನವರು ಮೊದಲು ಸಂಕಲ್ಪಿಸಿದ್ದನ್ನೆ ಕೇಳಿರಿ ಎಂದು ನುಡಿದು, ನವರತ್ನದ ವೃಷ್ಟಿಯನ್ನು ಕರೆಯಿಸಿದ್ದು. (೮) ಶಿವನು ಸುಖೀಜಂಗಮನ ರೂಪದಲ್ಲಿ ಬಂದು ಹೆಣ್ಣನ್ನು ಬೇಡಿದಾಗ, ಅಂದು ಆ ಊರಲ್ಲಿ ಬೇರೆ ಯಾವ ಪಣ್ಯಾಂಗನೆಯರೂ ದೊರೆಯದೆ, ತನ್ನ ಸತಿಯಾದ ಮಾಯಿದೇವಿಯನ್ನೆ ಬಸವಣ್ಣನು ಕೊಟ್ಟಾಗ ಜಂಗಮದೇವರು ಸಂಗಮದೇವರಾದದ್ದು.

ಈ ಮೇಲಿನವುಗಳಲ್ಲಿ ಮೊದಲನೆಯದು ಪವಾಡ ಅಲ್ಲ;[26] ಬಸವಣ್ಣನವರ ತೀಕ್ಷ್ಣವಾದ ಬುದ್ಧಿಶಕ್ತಿ ಪ್ರಕಟವಾಗಿ, ಅವರು ಬಿಜ್ಜಳನ ಕಣ್ಣಿಗೆ ಬೀಳುವಂತಾದ ಒಂದು ವಾಸ್ತವ ಘಟನೆಯಿರಬಹುದು. ಮೂರನೆಯದಾದ, ಬಿಜ್ಜಳನ ಭಂಡಾರದ ಹೊನ್ನು ನೂರ್ಮಡಿ ಸಾವಿರಮಡಿ ಆದದ್ದು, ಪವಾಡದಂತೆ ತೋರಿದರೂ, ಬಸವಣ್ಣನವರ ಮೇಲೆ ಭಂಡಾರದ ದುರುಪಯೋಗದ ಆರೋಪಣೆ ಬಂದದ್ದನ್ನೂ, ಅದನ್ನು ಬಿಜ್ಜಳನೆ ನಿಂತು ತನಿಖೆ ಮಾಡಿದಾಗ ಅಂಥ ಯಾವ ಅಪವ್ಯಯದ ಸೂಚನೆಯೂ ದೊರೆಯದೆ ಬಸವಣ್ಣನವರು ಆ ದೋಷಾರೋಪಣೆಯಿಂದ ಪಾರಾದರೆಂಬ ವಾಸ್ತವ ಘಟನೆಯೊಂದನ್ನು ಸಾಂಕೇತಿಸುವ ಪವಾಡದ ರೂಪವಾಗಿದೆ. ಎರಡನೆಯದಾದ ಕೇದಗೆ ಹೂವಿನ ಪವಾಡ; ಐದನೆಯದಾದ  ಬಸವಣ್ಣನು ಜಂಗಮ ಪ್ರಾಣಿ ಎಂಬುದನ್ನು ತೋರಿಸುವ ಪವಾಡ; ಆರನೆಯದಾದ ಕಂಬಳಿ ನಾಗಿದೇವನ ಪವಾಡ; ಏಳನೆಯದಾದ ಕಳಿಂಗ ದೇಶದ ಮಹದೇವಿಶೆಟ್ಟಿಗೆ ಹೊನ್ನಿನ ಮಳೆ ಕರೆದ ಪವಾಡ-ಇವು ತಮ್ಮ ಅದ್ಭುತಗಳಿಂದ ಪವಾಡಗಳೇ ಆಗಿದ್ದರೂ, ಬಸವಣ್ಣನವರ ಭಕ್ತಿಗೆ, ನಿಷ್ಠೆಗೆ, ದಾನಗುಣಕ್ಕೆ ಒಡ್ಡಿದ ಕಾವ್ಯ ಪ್ರತಿಮೆಗಳಾಗಿವೆ. ನಾಲ್ಕನೆಯದಾದ, ಬದನೆಕಾಯಿ ಲಿಂಗವಾದ ಪವಾಡವಂತೂ, ಬಸವಣ್ಣನವರ ಸಾಮೀಪ್ಯದಿಂದ, ಅವರ ವ್ಯಕ್ತಿತ್ವದ ಸಂಪರ್ಕದಿಂದ, ಎಂತಹ ಡಂಬಕರೂ ಸದ್ಭಕ್ತರಾಗುತ್ತಿದ್ದರು ಎಂಬ ಸಂಗತಿಯ ಸೂಚನೆಯಾಗಿದೆ. ಆರನೆಯದಾದ ಕಂಬಳಿ ನಾಗಿದೇವನ ಪ್ರಸಂಗ ಮಾತ್ರ ಸಂಪೂರ್ಣಾರ್ಥದಲ್ಲಿ ಪವಾಡವೇ ಆಗಿದೆ. ಶಿವಭಕ್ತನಾದ ಅಂತ್ಯಜನ ಮೈಯಿಂದ ಹಾಲೂ, ಬ್ರಾಹ್ಮಣನ ಮೈಯಿಂದ ಕೆನ್ನೆತ್ತರೂ ಹುಳುಗಳೂ, ಸುರಿದುವೆಂದು ಹೇಳುವ ನೆಪದಲ್ಲಿ ಶಿವಭಕ್ತನ ಮಹಿಮೆಯನ್ನು ಪ್ರಚಾರ ಮಾಡುವ ಉದ್ದೇಶವುಳ್ಳ ಈ ಪವಾಡ, ಹಿತವಾಗಿಲ್ಲವೆಂದೇ ಹೇಳಬೇಕು. ಇನ್ನು ಎಂಟನೆಯದಾದ, ಸುಖಿ ಜಂಗಮನಿಗೆ ಅಣ್ಣನವರು ತಮ್ಮ ಸತಿಯಾದ ಮಾಯಿದೇವಿಯರನ್ನೇ ಕೊಟ್ಟ ಸಂದರ್ಭ, ಹರಿಹರನಂಥ ಕವಿ ಮಾತ್ರ ಅತ್ಯಂತ ಸಮರ್ಥವಾಗಿ ನಿರ್ವಹಿಸಬಹುದಾದ ಪ್ರಸಂಗ ಎನ್ನಿಸುತ್ತದೆ. ಅತ್ಯಂತ ಸೂಕ್ಷ್ಮವಾದ ಜಟಿಲವಾದ ಈ ಸಂದರ್ಭವನ್ನು ಹರಿಹರನು ನಿರ್ವಹಿಸಿರುವ ಜಾಣ್ಮೆಯನ್ನು, ಆ ಪ್ರಸಂಗವನ್ನು ಎಚ್ಚರಿಕೆಯಿಂದ ಓದಿಯೆ ನೋಡಬೇಕಾದದ್ದು: ಒಮ್ಮೆ ಒಬ್ಬ ಸುಖಿಜಂಗಮನು ‘ಬಸವ ಬಸವಾ ನಾವು ಹೆಂಗೂಸಿಲ್ಲದೆ ಇರ್ದುದಿಲ್ಲ’ ಎನ್ನುತ್ತಾನೆ. ಬಸವಣ್ಣನವರು ಯಾವ ಸಂಕೋಚವನ್ನೂ ಅನುಭವಿಸದೆ ಈ ಸುಖಿ ಜಂಗಮಕ್ಕೆ ಊರಿನ ಪಣ್ಯಾಂಗನೆಯರನ್ನು ಹುಡುಕಿಸಿದರೆ ಅಂದು ಯಾರೂ ದೊರೆಯದಂಥ ಪರಿಸ್ಥಿತಿ ಒದಗಿರುತ್ತದೆ. ಆಗ ಬಸವಣ್ಣನವರು ತಮ್ಮ ಸತಿ ಮಾಯಿದೇವಿಯರನ್ನೆ ಈ ಜಂಗಮಕ್ಕೆ ಕೊಡಲು ಸಂಕಲ್ಪಿಸುತ್ತಾರೆ. ಆ ಹೊತ್ತಿಗೆ ಈ ಸುದ್ದಿಯನ್ನು ತಿಳಿದು ಮಾಯಿದೇವಿಯರು ‘ಊರೊಳಗೆ ಪಣ್ಯಾಂಗನೆಯರಿಲ್ಲದಿರ್ದಡೆನ್ನ ಜಂಗಮಕ್ಕೆ ಕೊಟ್ಟಲ್ಲದೆ ಮಾಣನೆಂದು’ ಸಿಂಗರಿಸಿಕೊಂಡು ಬಸವನ ಬರವನ್ನು ಹಾರೈಸುತ್ತಿರುತ್ತಾಳೆ. ಬಸವಣ್ಣ ಬಂದೊಡನೆ, ಅವರು ಏನನ್ನೂ ಹೇಳುವ ಮುನ್ನವೆ ಈಕೆ ‘ನಡೆ ಬಸವ ನಿನ್ನ ಮನೋರಥಮಂ ಮಾಡಿದಪೆನ್’ ಎನ್ನುತ್ತ ಜಂಗಮದೇವರ ಸೆಜ್ಜೆಯ ಮನೆಗೆ ಪ್ರವೇಶಿಸಿ ಸುಖಿಜಂಗಮನನ್ನು ತಟ್ಟಿ ಎಬ್ಬಿಸಿದಾಗ ‘ಮಾಯೆಯ ಜವನಿಕೆಯಂ ತೆಗೆದಂತೆ’ ಆ ಜಂಗಮನ ಜಂಗಮವೇಷವು ಮಾಯವಾಗಿ ಸಾಕ್ಷಾತ್ ಸಂಗಮನಾಥನೆ ಕಾಣಿಸಿಕೊಂಡಾಗ, ಮಾಯಿದೇವಿಯರು, ಬಾಗಿಲ ಹೊರಗೆ ಕೂತ ಬಸವಣ್ಣನವರನ್ನು ಕುರಿತು ‘ಬಸವ ಬಸವಾ ಜಂಗಮದೇವರು ಸಂಗಮದೇವರಾದರು’ ಎನ್ನಲಾಗಿ, ಬಸವಣ್ಣನವರು ‘ತಾಯೆ ತಾಯೆ ಮುನ್ನವಾರೆಂದು ಕೊಟ್ಟೆನ್’ ಎಂದು ಅಂದಿನಿಂದ ಮೊದಲಾಗಿ ಗುಣಾನ್ವಿತೆ ಮಾಯಿದೇವಿಯರನ್ನು ‘ಶಿವನ ಲಂತಾಗಿ’ ಎಂದು ಪ್ರೀತಿಯಿಂದ ಮತ್ತು ಪೂಜ್ಯಭಾವದಿಂದ ನಡೆಯಿಸಿಕೊಳ್ಳ ತೊಡಗಿದರು.[27]

ಈ ಒಂದು ಸಂದರ್ಭದಲ್ಲಿ ಕಂಡುಬರುವ ಬಸವಣ್ಣನವರ ಮತ್ತು ಅವರ ಪತ್ನಿಯಾದ ಮಾಯಿದೇವಿಯವರ ನಡವಳಿಕೆಯನ್ನು ಪರಿಶೀಲಿಸಿದರೆ ಅವರ ದಾಂಪತ್ಯ ಜೀವನದಲ್ಲಿ ಗಂಡ-ಹೆಂಡಿರಿಗಿದ್ದ ಪರಸ್ಪರ ಅರಿವಿನಿಂದ ಕೂಡಿದ ಸಾಮರಸ್ಯ, ಗಂಡನ ಭಕ್ತಿಸಾಧನೆಗೆ ಹೆಂಡತಿಯಾದವಳು ಹೊಂದಿಕೊಳ್ಳುವುದರಲ್ಲಿ ಕಂಡುಬರುವ ಸಹಕಾರ ಇವು ಅತ್ಯಂತ ಮನೋಜ್ಞವಾಗಿ ಪ್ರಕಟವಾಗಿವೆ. ತನ್ನ ಸತಿಯನ್ನು ಕೊಡುವಂಥ ಪರಿಸ್ಥಿತಿ ಬಂದಾಗಲೆ ಅಣ್ಣನವರಿಗೆ ಗೊತ್ತಾಯಿತು ಈ ಜಂಗಮ ಸಾಕ್ಷಾತ್ ಶಿವನಲ್ಲದೆ ಬೇರೆ ಅಲ್ಲ ಎಂಬ ಶಿವರಹಸ್ಯ. ಒಮ್ಮೆ ಶಿವನಿಗೆ ಅರ್ಪಿತವಾದ ಆ ‘ಹೆಣ್ಣು’ ಬಸವಣ್ಣನವರ ಪಾಲಿಗೆ ತಮ್ಮ ಪತ್ನಿಯಾಗಿ ಉಳಿಯಲಿಲ್ಲ; ‘ತಾಯಿ’ಯಾಗಿ ಪರಿಣಮಿಸಿದಳು. ‘ತಾಯೆ ತಾಯೆ ಮುನ್ನವಾರೆಂದು ಕೊಟ್ಟೆನ್’ ಎಂದು ಬಸವಣ್ಣನವರು ಹೇಳಿದ ಮಾತಿನಲ್ಲಿ ಈ ನಿಲುವು ಕಾಣಿಸುತ್ತದೆ. ಅಷ್ಟೇ ಅಲ್ಲ ಅಂದಿನಿಂದ ಮಾಯಿದೇವಿ ಬಸವಣ್ಣನವರ ಪಾಲಿಗೆ ‘ಶಿವನ ಲತಾಂಗಿ’- ಸಾಕ್ಷಾತ್ ಲೋಕಮಾತೆಯೆ- ಆದಳೆಂದೂ, ಬಸವಣ್ಣನವರು ಆಕೆಯನ್ನು ಅದೇ ಭಾವನೆಯಿಂದ ಪೂಜಿಸುತ್ತಾ ನಡೆಯಿಸಿ ಕೊಂಡರೆಂದೂ ಹರಿಹರ ಚಿತ್ರಿಸಿರುವ ರೀತಿ ಅತ್ಯಪೂರ್ವವಾಗಿದೆ.[28]

-೬-

ಬಸವಣ್ಣನವರ ಬದುಕನ್ನು ಕುರಿತು ಬರೆಯುವ ಯಾರಾದರೂ, ಅವರ ವಚನಗಳನ್ನು ಮುಖ್ಯವಾದ ಆಧಾರವನ್ನಾಗಿ ಇರಿಸಿಕೊಳ್ಳದೆ ಹೋದರೆ, ಖಂಡಿತವಾಗಿಯೂ ಬಸವಣ್ಣನವರ ವ್ಯಕ್ತಿತ್ವವನ್ನು ಸಮರ್ಪಕವಾಗಿ ಚಿತ್ರಿಸಲಾರರು. ಬಸವಣ್ಣನವರ ಬದುಕನ್ನು ಮೊಟ್ಟ ಮೊದಲು ಕನ್ನಡದಲ್ಲಿ ಕೃತಿ ಮಾಡಿದ ಹರಿಹರ ತನ್ನ ಕಾಲಕ್ಕೆ ದೊರೆತಷ್ಟು ವಚನ ಸಾಮಗ್ರಿಯನ್ನು- ಹರಿಹರನ ಕಾಲಕ್ಕೆ ಬಸವಣ್ಣನವರ ವಚನಗಳು ಇಂದು ನಮಗೆ ಸಮಗ್ರವಾಗಿ ನೋಡಲು ಸಿಗುವಂತೆ  ಅಂದು ದೊರೆಯುತ್ತಿದ್ದುದು ಅಸಂಭವ- ಉಚಿತವರಿತು ಬಸವರಾಜ ದೇವರ ರಗಳೆಯಲ್ಲಿ ಅಳವಡಿಸಿಕೊಂಡಿದ್ದಾನೆ. ಎಷ್ಟೋ ಕಡೆ ಬಸವಣ್ಣನವರ ವಚನಗಳಿಗೆ ಹರಿಹರನು ರಗಳೆಯ ರೂಪವನ್ನು ಕೊಟ್ಟಂತೆ ತೋರುತ್ತದೆ; ಇನ್ನೆಷ್ಟೋ ಕಡೆ ವಚನಗಳಲ್ಲಿ ಕಾಣುವ ಬಸವಣ್ಣನವರ ಪ್ರಮುಖವಾದ ಮನೋಧರ್ಮಗಳಿಗೆ, ಸಂದರ್ಭಗಳನ್ನು ಕಲ್ಪಿಸಿ, ಅವು ಬಸವಣ್ಣನವರ ಬದುಕಿನಲ್ಲಿ ನಡೆದಿರಬಹುದಾದ ಘಟನೆಗಳೆಂಬಂತೆ ಚಿತ್ರಿಸಿದ್ದಾನೆ. ಬಸವಣ್ಣನವರ ವಚನಗಳನ್ನು ವಿವಿಧ ಸನ್ನಿವೇಶಗಳಲ್ಲಿ, ತನ್ನ ಕಥನದ ಉದ್ದೇಶಕ್ಕೆ ಹರಿಹರನು ಈ ರಗಳೆಯಲ್ಲಿ ಹೇಗೆ ಬಳಸಿಕೊಂಡಿದ್ದಾನೆ ಎಂಬುದನ್ನು ಶ್ರೀ ಬಿ.ಸಿ. ಜವಳಿ ಅವರು ತಮ್ಮ ‘ಧರ್ಮ ಭಂಡಾರಿ ಬಸವಣ್ಣ’ ಎಂಬ ಗ್ರಂಥದ ಮೊದಲ ನಲವತ್ತೆಂಟು ಪುಟಗಳಲ್ಲಿ ಅತ್ಯಂತ ಅಭಿನಂದನೀಯವಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ.[29] ಆದುದರಿಂದ ಆ ವಿಷಯವನ್ನು ನಾವು ಮತ್ತೆ ಪ್ರಸ್ತಾಪಿಸುವುದರಲ್ಲಿ  ಯಾವ ಔಚಿತ್ಯವೂ ಕಾಣುವುದಿಲ್ಲ. ಅದರ ಬದಲು ಹರಿಹರನ ರಗಳೆಯಲ್ಲಿ ವಚನ ರಚನೆಯ ಮತ್ತು ವಚನ ಸ್ವರೂಪದ ಬಗೆಗೆ ಕೆಲವು ಸ್ವಾರಸ್ಯವಾದ ಸೂಚನೆಗಳು ದೊರೆಯುತ್ತವೆ ಎನ್ನುವುದರ ಕಡೆ ನೋಡುವುದು ಉಚಿತವಾಗಿದೆ.

ಹರಿಹರನು ಬಸವರಾಜದೇವರ ರಗಳೆಯನ್ನು ಬರೆಯುವ ಕಾಲಕ್ಕೆ, ಅವರ ಎಷ್ಟೋ ವಚನಗಳು ಭಕ್ತಜನದ ಬಾಯಲ್ಲಿ ನಿತ್ಯಪಾರಾಯಣದ ಸಾಮಗ್ರಿಗಳಾಗಿದ್ದಿರಬೇಕು. ಊರಿಂದೂರಿಗೆ ಜಂಗಮರು ಅವುಗಳನ್ನು ಹಾಡಿಕೊಂಡು ತಿರುಗಾಡುತಿದ್ದಿರಬೇಕು. ಇದಕ್ಕೂ ಮುನ್ನ ವಚನಕಾರರ ಕಾಲದಲ್ಲೆ ಅವುಗಳನ್ನು ಆಗಾಗ ಹಾಡುವ ಪರಿಪಾಠವೂ ಬೆಳೆದಿರಬೇಕು. ಬಸವಣ್ಣನವರ ‘ತಾಳಮಾನ ಸರಿಸವನರಿಯೆ’ ಎಂಬ ವಚನದಲ್ಲಿ, ‘ಆನು ಒಲಿದಂತೆ ಹಾಡುವೆ’ ಎಂಬ ಮಾತಿದೆ. ಅಕ್ಕಮಹಾದೇವಿ ತನ್ನ ಒಂದು ವಚನದಲ್ಲಿ ‘ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’ ಎನ್ನುತ್ತಾಳೆ. ಇವುಗಳನ್ನು ಸಂಗೀತದ ಹಾಗೆ ಹಾಡದಿದ್ದರೂ ಒಮ್ಮೊಮ್ಮೆ ವಚನದ ಭಾವಕ್ಕೆ ಉಚಿತವಾದ ಧಾಟಿಯಲ್ಲಿ ಹಾಡುತ್ತಿದ್ದಿರಬಹುದು. ಆದರೆ ಹರಿಹರನ ಬಸವರಾಜದೇವರ ರಗಳೆಯಲ್ಲಿ ಎಲ್ಲಿಯೂ ‘ವಚನ’ ಎಂಬ ಮಾತೇ ಬರದೆ, ಅದರ ಬದಲು ‘ಗೀತ’ ಎಂಬ ಮಾತು ಬಳಕೆಯಾಗಿರುವುದನ್ನು ನೋಡಿದರೆ, ಹರಿಹರನ ಕಾಲದಲ್ಲಿ ವಚನಗಳು ‘ಗೀತ’ವಾಗಿಯೆ ಎಂದರೆ ಹಾಡುವ ಉದ್ದೇಶಕ್ಕೆಂದೆ- ವಿಶೇಷವಾಗಿ ಬಳಸಲ್ಪಡುತ್ತಿದ್ದಿರಬೇಕು. ವಚನ ಮತ್ತು ಗೀತ ಎರಡೂ ಸಮಾನಾರ್ಥಕ ಪದಗಳೆಂಬಂತೆ ವಚನಕಾರರಲ್ಲಿಯೇ ಬಳಕೆಯಾಗಿರುವುದಲ್ಲದೆ,[30] ಹರಿಹರನ ಪ್ರಕಾರ ‘ಗೀತ’ವೆಂದರೆ ‘ವಚನ’ ಎಂದೇ ಅರ್ಥವಾಗುವಷ್ಟು ನಿಸ್ಸಂದೇಹವಾಗಿ ‘ಬಸವರಾಜ ದೇವರ ರಗಳೆ’ಯಲ್ಲಿ ಈ ಮಾತು ಬಂದಿದೆ. ಅಲ್ಲದೆ ಈ ವಚನಗಳಿಗೆ ‘ಗದ್ಯ-ಪದ್ಯ’ವೆಂಬ ಹೆಸರೂ ಇದ್ದಿರಬೇಕು. ‘ಓರ್ವ ಮಾಹೇಶ್ವರಂ ಪುರಾತನ ವಿರಚಿತ ಗದ್ಯ-ಪದ್ಯಂಗಳಂ ಕೇಳಿಸುತ್ತಂ’ (ಬ.ರಾ. ದೇ.ರ : ಸ್ಥಲ ೧೨ : ೭-೮) ಎಂಬ ಮಾತಿದೆ. ಎಂದರೆ, ಇದು ಬಸವಣ್ಣನವರಿಗಿಂತ ಹಿಂದಿನ ಆದ್ಯರ ವಚನಗಳನ್ನು ಹಾಡಿದ್ದರ ಉಲ್ಲೇಖ. ಇಲ್ಲಿ ‘ವಚನ’ವನ್ನೆ ‘ಗದ್ಯ-ಪದ್ಯ’ ಎಂದು ಕರೆದಿರಬಹುದು. ಗದ್ಯದಂತೆ ತೋರುವ, ಆದರೆ ಗದ್ಯವಿಲ್ಲದ, ಪದ್ಯದಂತೆ ತೋರುವ ಈ ಪ್ರಕಾರವನ್ನು ‘ಗದ್ಯ-ಪದ್ಯ’ ಎಂದು ಕರೆದಿರುವ ಸಂಭವವೂ ಉಂಟು. ಆದರೆ ಡಾ. ಎಲ್. ಬಸವರಾಜು ಅವರು ಬಸವಣ್ಣನವರಿಗಿಂತ ಹಿಂದಿನ ‘ಆದ್ಯರ ವಚನ’ ಪರಂಪರೆಯನ್ನು ಕುರಿತು ವಿಚಾರ ಮಾಡುತ್ತಾ, ‘ಗದ್ಯ-ಪದ್ಯ’ ಎಂಬ ಪದವನ್ನು ‘ಗದ್ಯ (= ವಚನ?) ಪದ್ಯ’ ಎಂದು ಪ್ರಶ್ನಾರ್ಥಕ ಪರಿಸ್ಥಿತಿಯಲ್ಲಿರಿಸಿ ಬಸವಾದಿಗಳಿಗಿಂತ ಹಿಂದಿನ ಕೆಲವರು “ಸಂಸ್ಕೃತ ಗದ್ಯ-ಪದ್ಯ ರಚಕರೂ, ಹಲವರು ಕನ್ನಡ ವಚನಕಾರರೂ ಆಗಿದ್ದರು. ಇವರ ದಿವ್ಯ ಸಾಹಿತ್ಯವನ್ನೆ ಪ್ರಮಥರು ‘ಆದ್ಯರ ವಚನ’ವೆಂದು ಕೊಂಡಾಡಿರುವುದು…. ಇಷ್ಟು ಪ್ರಾಚೀನವಾದ ಗದ್ಯ-ಪದ್ಯ, ಆದ್ಯರ ವಚನ, ಪುರಾತನರ ಗೀತ ಇವುಗಳ ಸ್ವರೂಪವನ್ನೂ ಪರಸ್ಪರ ಸಾಮ್ಯ ಸಂಬಂಧವನ್ನೂ, ವಿಚಾರಿಸುವುದು ಫಲಪ್ರದ” ಎಂದು ಹೇಳಿ, ‘ಗೀತ’ ಎನ್ನುವುದು ವಚನ ಪ್ರಕಾರದ ಜೊತೆಗೇ ಇದ್ದ ಒಂದು ಪ್ರತ್ಯೇಕವಾದ ಪ್ರಕಾರವಾಗಿತ್ತೆಂದು ಅಭಿಪ್ರಾಯಪಡುತ್ತಾರೆ.[31] ಆದರೆ ನಮಗೆ ತೋರುವಮಟ್ಟಿಗೆ ಗದ್ಯ-ಪದ್ಯ, ವಚನ ಮತ್ತು ಗೀತ ಈ ಮೂರೂ ಒಂದೇ ಪ್ರಕಾರವನ್ನು ಕುರಿತ ವಿವರಣೆಯಿರುವಂತೆ ಕಾಣಿಸುತ್ತದೆ. ಹರಿಹರನಲ್ಲಂತೂ ಗೀತ ಎಂಬುದು ವಚನ ಎಂಬುದಕ್ಕೆ ಪರ‍್ಯಾಯ ಪದವಲ್ಲವೆ ಬೇರೆ ಅಲ್ಲ ಎಂಬುದು ಖಚಿತ.

ಹರಿಹರ ಒಂದೆಡೆ, ಬಸವಣ್ಣನವರನ್ನು ಅವರ ಶರಣಸಮೂಹ ಹೊಗಳಿದಾಗ, ಅವರು ಹೊಗಳಿಕೆಗೆ ತಗ್ಗಿ ಕಸಿವಿಸಿಗೊಂಡು ‘ಆಗಳಾಗಳಿನ ಸಂಗತಿಗೆ ಹೊಸ ಹೊಸ ಗೀತಮಂ ಕೇಳಿಸುತಿರ್ದ’ (೮ : ೬೨-೬೩) ರೆನ್ನುತ್ತಾರೆ. ಈ ಮಾತು ವಚನ ರಚನೆಯ ಸಂದರ್ಭದ ಬಗ್ಗೆ ಸೊಗಸಾದ ವ್ಯಾಖ್ಯಾನವಾಗಿದೆ. ಬಸವಣ್ಣನವರು ತಮ್ಮ ಸುತ್ತಣ ಲೋಕದ ಅಥವಾ ಮತ್ತಾವುದೋ ರೀತಿಯ ಘರ್ಷಣೆಗಳಿಗೆ, ಅದರ ಪ್ರತಿಕ್ರಿಯೆಗಳಿಗೆ ‘ಆಗಳಾಗಳಿನ ಸಂಗತಿ’ಗೆ ಹೊಸಹೊಸ ಗೀತಗಳನ್ನು ಕೇಳಿಸುತ್ತಿದ್ದರೆನ್ನುವಲ್ಲಿ, ವಚನಗಳು ಅಂದಂದಿನ ಪರಿಸ್ಥಿತಿಗೆ ಅನುಸಾರವಾಗಿ ವಚನಕಾರರ ಮನಃಸ್ಥಿತಿಯ ಪ್ರತಿಕ್ರಿಯಾ ರೂಪದ ಅಭಿವ್ಯಕ್ತಿಗಳಾಗಿವೆ ಎನ್ನುವ ಸಂಗತಿ ಸ್ಪಷ್ಟವಾಗಿದೆ.

ಈ ವಚನಗಳು ‘ಆಗಳಾಗಳಿನ ಸಂಗತಿ’ಗೆ ನೀಡಿದ ಅಭಿವ್ಯಕ್ತಿಯಾಗಿವೆ ಎನ್ನುವುದು, ಬಹಿರಂಗದ ವ್ಯಾಪಾರಗಳ ಬಗೆಗೆ ಹೇಗೊ, ಅಂತರಂಗದ ಸಾಧಕನ ಆಧ್ಯಾತ್ಮಿಕ ತುಮುಲಗಳಿಗೆ ಅಭಿವ್ಯಕ್ತಿಯನ್ನು ನೀಡುವ ವಿಚಾರದಲ್ಲೂ ಹಾಗೆಯೆ ಸತ್ಯವಾಗಿವೆ. ಬಸವಣ್ಣನವರು ಸಹಜ ಭಕ್ತರು, ಅವರ ಅಂತರಂಗ ತನ್ನ ಇಷ್ಟದೈವವಾದ ಕೂಡಲ ಸಂಗಮನನ್ನು ಕುರಿತು, ನಾನಾ ಅವಸ್ಥೆಗಳಲ್ಲಿ ತೋಡಿಕೊಂಡ ಪರಿಗಳೂ ವಚನಗಳಲ್ಲಿ ರೂಪುಗೊಂಡಿವೆ. ಅದನ್ನು ಕುರಿತು-

ನೆನೆ ನೆನೆದು ಪುಳಕಿಸುತೆ ಗೀತಮಂ ಪಾಡುತಂ
ಮುನಿದು ಸಂಗಂಗೆ ಹೊಸಗೀತಮಂ ಪಾಡುತಂ
ಮೂದಲಿಸಿ ಹಾಡುತಂ ಮುದ್ದಿಸುತೆ ಹಾಡುತಂ
ಆದರಿಸಿ ಹಾಡುತಂ ಮೇರೆಗೆಡೆ ಹಾಡುತಂ
ಗೀತಂಗಳೊಳಗೇಕನಿಷ್ಠೆ ಹೊಳೆ ಹೊಳೆವುತಿರೆ
ಗೀತಂಗಳೊಳಗಭವ ಭಕ್ತಿ ಬೆಳೆ ಬೆಳೆವುತಿರೆ
ಗೀತದೊಳು ಸಂಗನಾಧಿಕ್ಯಮೊಪ್ಪುತ್ತಮಿರೆ
ಗೀತದೊಳು ಶರಣಸಮಗ್ರವೇ ಜಿಗಿಲುತಿರೆ
ಗೀತದೊಳು ಪರದೈವ ಶೋಷಣಂ ತೋಱುತಿರೆ
ಗೀತದೊಳು ಪರಸಮಯ ಭೀಷಣಂ ಪೊಣ್ಮುತಿರೆ
ಗೀತಂ ಶಿವಂಗೆ ಕರ್ಣಾಭರಣಮಾಗುತಿರೆ
(೯ : ೧೯೫-೨೦೫)

ಎಂದು ಹರಿಹರನು ಹೇಳುವಲ್ಲಿ, ಬಸವಣ್ಣನವರ ವಚನಗಳ, ಅದರಲ್ಲೂ ಭಕ್ತ ಸ್ಥಿತಿಯನ್ನು ವರ್ಣಿಸುವ ವಚನಗಳ ಒಂದು ವಿಶ್ಲೇಷಣೆಯನ್ನೇ ಮಾಡಿದ್ದಾನೆಂದು ಅನ್ನಿಸದಿರದು. ಬಸವಣ್ಣನವರು ಸಂಗಮನಾಥನನ್ನು, ‘ಮುದ್ದಿಸುತ’ ‘ಮೂದಲಿಸುತ’ ‘ಮುನಿಯುತ್ತಾ’ ‘ಆದರಿಸುತ್ತಾ’ ಹಾಡಿದ ಏಕನಿಷ್ಠೆಯ ವಚನಗಳು ಸಾಕಷ್ಟಿವೆ; ಹಾಗೆಯೇ ಸಂಗನಾಧಿಕ್ಯವೊಪ್ಪುವ ವಚನಗಳಂತೆಯೆ ‘ಪರದೈವ ಶೋಷಣೆ’ಯ, ಮತ್ತು ‘ಪರಸಮಯ’ದ ಬಗ್ಗೆ ಭೀಷಣರಾದ ಬಸವಣ್ಣನವರ ಮನಃಸ್ಥಿತಿಯನ್ನು ಪ್ರಕಟಿಸುವ ವಚನಗಳೂ ದೊರೆಯುತ್ತವೆ. ಈ ಉಲ್ಲೇಖದ ಒಂದೊಂದು ಪಂಕ್ತಿಯ ಹಣೆಹೆಸರಿನ ಕೆಳಗೂ ಒಂದಿಷ್ಟು ವಚನಗಳನ್ನು ವಿಂಗಡಿಸಿ ನೋಡಲು ಅನುಕೂಲವಾಗುವಂಥ ರೀತಿಯಲ್ಲಿ, ಬಸವಣ್ಣನವರ ಭಕ್ತ ಸ್ಥಿತಿಯ ವಚನಗಳ ತಿರುಳನ್ನು ಸೂತ್ರೀಕರಿಸಿದ್ದಾನೆ. ಅಲ್ಲದೆ ಇಲ್ಲೆಲ್ಲ ಗೀತವೆಂದರೆ, ವಚನಸಾಹಿತ್ಯ ಪ್ರಕಾರದಿಂದ ಬೇರೆಯಾದೊಂದು ಪ್ರಕಾರವೆಂದು ಖಂಡಿತ ಅನ್ನಿಸುವುದಿಲ್ಲ.

ಬಸವಣ್ಣನವರ ವಚನಗಳ- ಒಟ್ಟಿನಲ್ಲಿ ವಚನ ವಾಙ್ಮಯದ ಲಕ್ಷಣವನ್ನು, ಹರಿಹರ ತನ್ನ ಬಸವರಾಜ ದೇವರ ರಗಳೆಯ ಹತ್ತನೆಯ ಸ್ಥಲದ ಆರಂಭದಲ್ಲಿ ಬರುವ ಎರಡು ಕಂದ ಪದ್ಯಗಳಲ್ಲಿ ಬಹುಸೊಗಸಾಗಿ ವ್ಯಾಖ್ಯಾನಿಸಿರುವುದು ಗಮನಿಸಬೇಕಾದ ಅಂಶವಾಗಿದೆ.

ಗೀತಂ ಸಂಗಸ್ತುತಿಸಂ
ಗೀತಂ ಗೀತಂ ವಿಶಾಲ ವಸುಧಾಪೂತಂ
ಗೀತಂ ಶರಣಗಣವಿ
ಖ್ಯಾತಂ ಸಂಪ್ರೀತಿಯಾದ ಗೀತಂ ನೂತಂ
ಗೀತಂ ವೇದಾಂತಾರ್ಥ
ವ್ರಾತಂ ಗೀತಂ ಸಮಸ್ತ ಶಾಸ್ತ್ರೋಪೇತಂ
ಗೀತಂ ಸಕಳಾಗಮಕುಳ
ಜಾತಂ ಗೀತಂ ಪರೈಕಭಕ್ತಿ ಸಮೇತಂ

ಇವುಗಳಲ್ಲಿ ಮೊದಲನೆಯದು ಬಸವಣ್ಣನವರ ಗೀತದ ಅಥವಾ ವಚನದ ಮುಖ್ಯ ಸ್ಥಾಯೀಭಾವವನ್ನೂ, ಮತ್ತು ಆ ವಚನಗಳ ವ್ಯಾಪಕತೆಯನ್ನೂ ಕುರಿತದ್ದು. ‘ಗೀತಂ ಸಂಗಸ್ತುತಿ ಸಂಗೀತಂ’ ಎನ್ನುವ ಮಾತಿನಲ್ಲಿ ಬಸವಣ್ಣನವರು ತಮ್ಮ ಭಕ್ತ ಮನೋಧರ್ಮಗಳನ್ನು, ಅನೇಕ ರೀತಿಯಲ್ಲಿ ಆಗಲೆ ಹಿಂದೆ ನೋಡಿದಂತೆ, ‘ಮೂದಲಿಸಿ ಹಾಡುತುಂ’, ‘ಮುದ್ದಿಸುತ ಹಾಡುತುಂ’ ‘ಮುನಿದು ಸಂಗಂಗೆ ಹೊಸಗೀತಮಂ ಪಾಡುತಂ’, ತೋಡಿಕೊಂಡ ಪರಿ ವ್ಯಕ್ತವಾಗುತ್ತದೆ. ಮೂಲತಃ ಬಸವಣ್ಣನವರ ವಚನಗಳು ‘ಸಂಗಸ್ತುತಿ’ಯನ್ನು ಕುರಿತವು. ಈ ಗೀತಗಳು ಅಥವಾ ವಚನಗಳು ಬಸವಣ್ಣನವರ ಕಾಲಕ್ಕೆ ‘ವಿಶಾಲವಸುಧಾ ಪೂತಂ’ ಆಗಿದ್ದುವು, ಎಂದರೆ ದೇಶದ ಎಲ್ಲಾ ಕಡೆ ಪ್ರಸಾರವಾಗಿ ಮನ್ನಣೆಯನ್ನು ಪಡೆದಿದ್ದುವು. ಅದಕ್ಕಿಂತ ಮಿಗಿಲಾಗಿ, ಅವು ‘ಶರಣಗಣ ವಿಖ್ಯಾತ’ ವಾಗಿದ್ದುವು. ಹೀಗೆ ಎಲ್ಲರಿಗೂ ಸಂಪ್ರೀತಿಯಾದ, ‘ಗೀತಂ ನೂತಂ’ ಎಂದರೆ, ಈ ವಚನಗಳು ಅಭಿವ್ಯಕ್ತಿಯ ಹೊಸ ಪ್ರಕಾರಗಳಾಗಿದ್ದುವು -ಎನ್ನುವ ವಿಷಯ ಈ ಒಂದು ಪದ್ಯದಲ್ಲಿ ಸ್ಪಷ್ಟವಾಗಿದೆ. ಇನ್ನು ಎರಡನೆಯ ಕಂದವಂತೂ ವಚನಕಾರರ ವ್ಯುತ್ಪತ್ತಿಯನ್ನು ಕುರಿತದ್ದು. ವಚನಕಾರರು ಕನ್ನಡದಲ್ಲಿ, ಸರಳವಾದ ಮಾತುಗಳಲ್ಲಿ ಆಧ್ಯಾತ್ಮಿಕ ಅನುಭೂತಿಗಳನ್ನು ಹೇಳಿದರೂ, ಅವರಲ್ಲಿ ಅನೇಕರಿಗೆ ಆ ಅಭಿವ್ಯಕ್ತಿಗೆ ಹಿನ್ನೆಲೆಯಾಗಿ ವೇದ ವೇದಾಂತ ಶಾಸ್ತ್ರಾಗಮಗಳ ಪರಿಜ್ಞಾನವೂ ತಕ್ಕಷ್ಟಿತ್ತೆಂಬುದನ್ನು ಕಡೆಗಣಿಸುವಂತಿಲ್ಲ. ವಚನಗಳಲ್ಲಿ ವೇದ ವೇದಾಂತ ಶಾಸ್ತ್ರಾಗಮಗಳಿಂದ ಹಿರಿಯ ವಚನಕಾರರು ವಾಕ್ಯವೇಷ್ಟನಗಳನ್ನು ಬಳಸುವುದನ್ನೂ, ಕೆಲವೆಡೆ ಮೂಲದ ವೇದಶಾಸ್ತ್ರಗಳ ಮಾತನ್ನೇ ಸರಳವಾದ ಕನ್ನಡದಲ್ಲಿ ಅನುವಾದಿಸಿ ಹೇಳಿರುವಂತೆ ತೋರುವುದನ್ನೂ ನೋಡಿದರೆ, ಪರಾಭಕ್ತಿಯ ಸ್ವರೂಪವನ್ನು (ಪರೈಕ ಭಕ್ತಿಸಮೇತಂ) ವಚನಗಳು ಪ್ರಧಾನವಾಗಿ ಪ್ರಕಟಿಸಿದರೂ, ಅವುಗಳನ್ನು ಬರೆದ ಬಸವೇಶ್ವರರಂಥ ಕೆಲವರಿಗಾದರೂ, ಸಮರ್ಪಕವಾದ ಸಂಸ್ಕೃತದ ಆಧ್ಯಾತ್ಮಿಕ ಸಾಹಿತ್ಯದ ಪರಿಜ್ಞಾನವಿತ್ತೆಂದು ಗೊತ್ತಾಗುತ್ತದೆ.[32] ವಚನಗಳಲ್ಲಿರುವ ಅನುಭಾವವೂ, ಉಪನಿಷತ್ಕಾರರ ಅನುಭವವೂ ಸ್ವರೂಪತಃ ಒಂದೇ; ವಚನಗಳು ಕನ್ನಡದ ಉಪನಿಷತ್ತುಗಳು ಎಂಬ ಪ್ರಶಂಸೆ ಇವುಗಳಿಗೆ ಸಂದಿದೆ. ಹರಿಹರನು ಹೇಳುವ ‘ಗೀತಂ ವೇದಾಂತಾರ್ಥವ್ರಾತಂ’, ‘ಗೀತಂ ಸಮಸ್ತ ಶಾಸ್ತ್ರೋಪೇತಂ’ ‘ಗೀತಂ ಸಕಳಾಗಮಕುಳಜಾತಂ’, ಎಂಬ ಈ ಮೂರು ಮಾತುಗಳು ವಚನಗಳ ಆಕರವನ್ನೂ, ಅವು ಅಭಿವ್ಯಕ್ತಪಡಿಸುವ ಆ ಪರಂಪರಾಗತವಾದ ಸತ್ವವನ್ನು ಅತ್ಯಂತ ಸೊಗಸಾಗಿ ವ್ಯಾಖ್ಯಾನಿಸುತ್ತವೆ. ಅಲ್ಲದೆ ಇಲ್ಲೆಲ್ಲಾ ಗೀತ ಎಂದರೆ ವಚನ ಪ್ರಕಾರದ ಜೊತೆಗೆ ಇದ್ದ ಬೇರೊಂದು ಪ್ರತ್ಯೇಕವಾದ ಅಭಿವ್ಯಕ್ತಿ ಪ್ರಕಾರವೆಂದು ಖಂಡಿತ ಭಾವಿಸಲು ಸಾಧ್ಯವಿಲ್ಲ.

ಈ ಗೀತಗಳು ಅಥವಾ ವಚನಗಳು ‘ವಿಶಾಲ ವಸುಧಾಪೂತ’ವಾದುದು ಮಾತ್ರವಲ್ಲದೆ, ‘ಪನ್ನಗಲೋಕದ ದಾರವಟ್ಟದಲ್ಲಿ, ದೆಸೆಗಳ ಭಿತ್ತಿಯಲ್ಲಿ, ದಿಗ್ಗಜಗಳ ನೆತ್ತಿಯಲ್ಲಿ, ಇಂದ್ರನ ಜಿಹ್ವೆಯಲ್ಲಿ, ಶಿವನ ಕೈಲಾಸದರಮನೆಯ ಬಾಗಿಲಲ್ಲಿ’ ಬರೆಯಲ್ಪಟ್ಟವು (ಸ್ಥಲ ೧೦ : ಪದ್ಯ ೧) ಎಂಬ ಉತ್ಪ್ರೇಕ್ಷಾ ಪರಂಪರೆಯ ವರ್ಣನೆಯಲ್ಲಿ, ಈ ವಚನಗಳು ಬಸವಣ್ಣನವರ ಕಾಲದಲ್ಲಿಯೆ ವಿಶೇಷ ವಿಖ್ಯಾತವಾದುವು ಎನ್ನುವ ಸತ್ಯವನ್ನು ಹರಿಹರ ಪ್ರಕಟಿಸಿದ್ದಾನೆ. ಅಷ್ಟೆ ಅಲ್ಲದೆ ಕಳಿಂಗ ದೇಶದ ಮಹಾದೇವಿಶೆಟ್ಟಿಯರು ಒಂದು ದಿನ ಶಿವ ಪೂಜಾತತ್ಪರರಾಗಿದ್ದಾಗ ‘ಓರ್ವ ಮಾಹೇಶ್ವರಂ ಪುರಾತನ ವಿರಚಿತ ಗದ್ಯ-ಪದ್ಯಂಗಳಂ ಕೇಳಿಸುತ್ತುಂ, ಬಸವರಾಜನ ಗೀತದೊಳು- ಬೇಡಿ ಬೇಡಿದ ಶರಣಂಗೆ ನೀಡದಿರ್ದಡೆ ತಲೆದಂಡ ಕೂಡಲಸಂಗ, ಅವಧಾರು-ಎಂಬ ಗೀತಮಂ ಪಾಡೆ’ (೧೨:೧೦-೧೨) ಎಂದು ಚಿತ್ರಿಸಿರುವ ಪ್ರಸಂಗವನ್ನು ಗಮನಿಸಿದರೆ, ಬಸವಣ್ಣನವರ ಕಾಲದಲ್ಲೆ ಕೆಲವು ಮಾಹೇಶ್ವರರು ಊರಿಂದೂರಿಗೆ ಸಂಚಾರ ಮಾಡುತ್ತಾ, ಬಸವಣ್ಣನವರಿಗೆ ಹಿಂದಿನ ಪುರಾತನರ ‘ಗದ್ಯ-ಪದ್ಯ’ಗಳನ್ನೂ ಮತ್ತು ಬಸವಣ್ಣನವರ ‘ಗೀತ’ಗಳನ್ನೂ ಹಾಡುತ್ತಿದ್ದರು ಎಂಬ ಸಂಗತಿ ಇಲ್ಲಿ ಸೂಚಿತವಾಗಿದೆ. ಅಲ್ಲದೆ, ಹಾಗೆ ಆ ಒಬ್ಬ ಮಾಹೇಶ್ವರನು ಹಾಡಿದ್ದು ಕಳಿಂಗದೇಶದಲ್ಲಿ ಎಂಬ ಮಾತನ್ನು ಗಮನಿಸಿದರೆ, ಬಸವಣ್ಣನವರ ವಚನಗಳು ಅವರ ಸಮಕಾಲೀನತೆಯಲ್ಲಿಯೇ ಭಾರತದ ಬೇರೆ ಬೇರೆಯ ದೇಶದ ಜನದ ಕಿವಿಗೂ ಬೀಳುವಷ್ಟು ವ್ಯಾಪಕತೆಯನ್ನು ಪಡೆದಿದ್ದವು ಎನ್ನುವ ಸಂಗತಿ ಸೂಚಿತವಾಗುತ್ತದೆ. ಆದರೆ ಮೇಲೆ ಸೂಚಿಸಿದ ಸಂದರ್ಭದಲ್ಲಿ ಕಳಿಂಗದೇಶದ ಮಹಾದೇವಿಶೆಟ್ಟಿ, ಬಸವಣ್ಣನವರ ಗೀತವನ್ನು ಕೇಳಿ ಕೌತುಕಗೊಂಡು, ಗೀತಾರ್ಥವನ್ನು ಪರೀಕ್ಷಿಸಲೆಂದು ಮಂಗಳವಾಡಕ್ಕೆ ಬಂದನೆಂದು ವರ್ಣಿತವಾಗಿದ್ದರೂ, ಬಸವಣ್ಣನವರ ಕನ್ನಡ ಗೀತ ಅಥವಾ ವಚನ, ಕನ್ನಡ ಭಾಷೆಯನ್ನೆ ತಿಳಿಯದ ಕಳಿಂಗ ದೇಶದ ಮಹಾದೇವಿ ಶೆಟ್ಟಿಗೆ ಹೇಗೆ ಅರ್ಥವಾಗಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದರೂ, ಬಸವಣ್ಣನವರ ಮಹಿಮಾಶಾಲಿಯಾದ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಭಾರತದ ಬೇರೆ ಬೇರೆಯ ಭಾಗಗಳಿಂದ, ಬಸವಣ್ಣನವರಿದ್ದಲ್ಲಿಗೆ ಶಿವಶರಣರು ಬಂದರೆಂಬುದು ವಾಸ್ತವದ ಸಂಗತಿಯಾಗಿದೆ.

-೭-

ಬಸವರಾಜದೇವರ ರಗಳೆ, ಈಗ ದೊರಕಿರುವುದು ಕೇವಲ ಅರ್ಧವೆಂದು ಭಾವಿಸಿದರೂ, ಈಗ ಇರುವಷ್ಟನ್ನೇ ಗಮನಿಸಿದರೂ ಹರಿಹರನು ಬಸವಣ್ಣನವರ ಬದುಕಿನ ಕೆಲವು ಮುಖ್ಯವಾದ ಸಂಗತಿಗಳನ್ನೂ, ಘಟನೆಗಳನ್ನೂ, ಅವರ ವ್ಯಕ್ತಿತ್ವದ-ಅದರಲ್ಲಿಯೂ ಅವರ ಭಕ್ತ ಜೀವನದ- ಪ್ರಧಾನ ಲಕ್ಷಣಗಳನ್ನೂ ಅವನಿಗೆ ಉಪಲಬ್ಧವಾದ ವಾಸ್ತವ ಸಂಗತಿಗಳನ್ನೂ, ಅವನಿಗೆ ದೊರೆತ ವಚನಗಳ ಮತ್ತು ಪವಾಡತಂತ್ರದ ಹಂದರದಲ್ಲಿ ಬಹು ಸೊಗಸಾಗಿ ಹಬ್ಬಿಸಿದ್ದಾನೆ. ಹೊಗಳಿಕೆಯ ಬಗ್ಗೆ ಬಸವಣ್ಣನವರಿಗಿದ್ದ ತಾತ್ಸಾರ, ಶರಣರನ್ನು ಕುರಿತು ಅವರು ತಾಳಿದ್ದ ಕಿಂಕರಭಾವ, ಶಿವಸಮಯವನ್ನುದ್ಧರಿಸಿ ಪರಸಮಯವನ್ನು ಭಂಗಿಸುವ ವಿಷಯದಲ್ಲಿ ಅವರಿಗಿದ್ದ ಉತ್ಸಾಹ ಮತ್ತು ರಭಸ, ಸಂಪತ್ತು ಅಧಿಕಾರಗಳ ವಿಚಾರದಲ್ಲಿ ಅವರು ತಾಳಿದ ಅನಾಸಕ್ತಿ, ಕೆಲವು ಸಲ- ಯಾರ ಮನಸ್ಸನ್ನೂ ನೋಯಿಸದಂತೆ ನಡೆದುಕೊಳ್ಳುವುದರಲ್ಲಿ ಕಂಡು ಬರುವ ವಿನಯ ಮತ್ತು ಭೂತಾನುಕಂಪೆ, ಏಕಾಂತ ಭಕ್ತಿಯಿಂದ ಲೋಕಾಂತ ಭಕ್ತಿಯವರೆಗೂ ಬಗೆಬಗೆಯ ಹಂತಗಳಲ್ಲಿ ಶೋಭಿಸುವ ಅವರ ಭಕ್ತ ಹೃದಯದ ಚಿತ್ರಣ, ಇದೆಲ್ಲಕ್ಕೂ ಮಿಗಿಲಾಗಿ ಅವರು ಸಾಕ್ಷಾತ್ ಕೈಲಾಸದಿಂದಲೆ ಮರ್ತ್ಯಕ್ಕೆ ಕಾರಣಿಕರಾಗಿ ಬಂದಂತೆ ತೋರಿದರೂ ಅವರು ಮೂಲತಃ ಮನುಷ್ಯರೇ ಆಗಿದ್ದರು ಎಂಬ ಮಾನವೀಯ ಪ್ರಜ್ಞೆ -ಇವು ಹರಿಹರನ ಬಸವಣ್ಣನವರ ಪಾತ್ರದಲ್ಲಿ ಬಹು ಸೊಗಸಾಗಿ ಮೂರ್ತಗೊಂಡಿವೆ. ‘ಈಶನ ಮೀಸಲಪ್ಪ ಭಕ್ತ, ನಿನಗೆಣೆಯಿಲ್ಲ ಪಡಿಯಿಲ್ಲ, ಪಾಸಟಿಯಾವಂ?’ (೮ : ೫೬-೫೭) ಎಂದು ಕವಿ ಶರಣರ ಬಾಯಿಂದ ಸ್ತುತಿಸಿರುವ ಮಾತು ಬಸವಣ್ಣನವರನ್ನು ಕುರಿತು ಹರಿಹರನೇ ನುಡಿದ ಪ್ರಶಂಸೆಯಾಗಿದೆ.

ಅನುರಣನ (೧೯೭೮)

* * *


[1] ”Being nearer to this teacher in time and space the biographical information incorporated by him (Harihara) in his narration, can be treated as fairly reliable.” P.B. Desai: Basaveswara and His Times, p. 151.

[2] ಶೂನ್ಯಸಂಪಾದನೆ : ಸಂ. ಸಂ.ಶಿ. ಭೂಸನೂರಮಠ, ಪು. ೩.

[3] ಶೂನ್ಯಸಂಪಾದನೆ (ಸಂ) ಸಂ.ಶಿ. ಭೂಸನೂರಮಠ, ಪು. ೩.

[4] P.B. Desai : Basaveswara and His Times : p. 250.

[5] Man is a fallen angel ಎಂಬ ಮಾತನ್ನು ನೆನೆಯಿರಿ.

[6] ಪ್ರಭುಲಿಂಗ ಲೀಲೆಯ ಸಂಗ್ರಹ : ೧-೧೯ ಪ್ರ : ಮೈ. ವಿ. ವಿ

[7] ಹೋಲಿಸಿ : Even the Devas will have to come down again and again to attain salvation through a human body: Thus spake Vivekananda; Ed: Swami Suddhasatwananda, p.10.

[8] ಟಿ.ಎಸ್. ವೆಂಕಣ್ಣಯ್ಯ : ಬಸವರಾಜ ದೇವರ ರಗಳೆಯ ಮುನ್ನುಡಿಯಲ್ಲಿ. ಪು. xxxxi.

[9] ಡಾ. ಎಂ. ಚಿದಾನಂದಮೂರ್ತಿ: ಬಸವಣ್ಣನವರು. ಪು. ೪೯.

[10] ಬಿಜ್ಜಳನು ಸಹಜವಾಗಿಯೇ ಬಸವಣ್ಣನವರಿಂದ ಪ್ರವರ್ತನಗೊಂಡನವ ಶೈವಧರ್ಮವನ್ನು ಪ್ರತಿಭಟಿಸಿರಬಹುದು. ಅವನು ಬಸವಣ್ಣನರಿಗಿಂತ ಹಿಂದೆ ಇದ್ದ ಪ್ರಾಚೀನ ವೈದಿಕ ಪರಂಪಂರೆಯ ಶೈವಧರ್ಮದವನು. ಹರಿಹರನು ಯಾವಾಗ ಬಿಜ್ಜಳನ ಪಾತ್ರದ ಘನತೆಯನ್ನು ತಗ್ಗುವಂತೆ ಚಿತ್ರಿಸಿದನೋ, ಅದೇ ದಾರಿಯನ್ನು ಹಿಡಿದ ಮುಂದಿನ ವೀರಶೈವ ಕವಿಗಳೆಲ್ಲರೂ ಬಿಜ್ಜಳನ ಪಾತ್ರವನ್ನು ಇನ್ನೂ ಕೀಳ್ಗಳೆದು ಚಿತ್ರಿಸತೊಡಗಿದರು. ಇದನ್ನು ಪ್ರತಿಭಟಿಸಲೆಂದು ಧರಣಿ ಪಂಡಿತನು (ಸು. ೧೬೫೦) ಬಿಜ್ಜಳನನ್ನು ಜೈನನನ್ನಾಗಿ ಮಾಡಿಕೊಂಡು, ಬಸವಣ್ಣನ ಪಾತ್ರವನ್ನು ಕೋಡಂಗಿಯಂತೆ ಚಿತ್ರಿಸಿದ್ದಾನೆ. ಈ ವಿಚಾರದಲ್ಲಿ ವಿಶೇಷವಾದ ವಿಷಯಕ್ಕೆ P.B Deasi ಅವರ Basaveswara and his times ಎಂಬ ಗ್ರಂಥದ, ಆರನೆ ಅಧ್ಯಾಯವನ್ನು ನೋಡಬಹುದು.

“ಪುರಾಣಗಳನ್ನೇ ನಂಬುವುದಾದರೆ, ಬಿಜ್ಜಳನಿಗೂ ಬಸವಣ್ಣನವರಿಗೂ ಪದೇ ಪದೇ ಮನಸ್ತಾಪಗಳು ತಲೆದೋರುತ್ತಿದ್ದುವೆಂದೂ ಬಸವಣ್ಣನವರ ಪವಾಡ ಮಹಿಮೆಗಳಿಂದ ಬಿಜ್ಜಳನು ಜಿತನಾಗಿ ಶರಣಾಗತನಾಗುತ್ತಿದ್ದನೆಂದೂ ಹೇಳಬೇಕಾಗುತ್ತದೆ. ಈ ಪರಿಣಾಮವು ಬಸವಣ್ಣ ನವರಿಗಾಗಲೀ ಬಿಜ್ಜಳನಿಗಾಗಲಿ ಗೌರವವನ್ನು ತರತಕ್ಕದಲ್ಲ; ಮತ್ತು ನಮ್ಮಲ್ಲಿ ಯಾರಿಗೂ ಸಂತೋಷವನ್ನುಂಟುಮಾಡತಕ್ಕದ್ದಲ್ಲ. ಮಂತ್ರಿಯಾದವನು ತನ್ನ ಸ್ವಾಮಿಯ ತೇಜೋವಧೆಯನ್ನು ಅಡಿಗಡಿಗೂ ಮಾಡುತ್ತ ಅದೊಂದು ಜೀವಕಳೆಯಿಲ್ಲದ ಸೂತ್ರದ ಪುತ್ತಳಿಯನ್ನಾಗಿ ಮಾಡಿದನೆಂದರೆ ಮಂತ್ರಿಗೆ ಅದು ಅಪಕೀರ್ತಿದಾಯಕವೇ ಹೊರತು ಅನ್ಯಥಾ ಅಲ್ಲ. ಹಾಗೆಯೇ ಸ್ವಾಮಿಯಾದವನು ತನ್ನ ಪ್ರತಿಷ್ಠೆ ಗೌರವ ಸಾಮರ್ಥ್ಯಗಳನ್ನು ಬಿಟ್ಟುಕೊಟ್ಟು ಮಂತ್ರಿಯಾದವನಿಗೆ ಅಡಿಗಡಿಗೂ ಶರಣು ಬೀಳುತ್ತಿದ್ದನೆಂದರೆ ಆ ರಾಜನಿಗೆ ಅಪಯಶಸ್ಸೆ ಫಲವಲ್ಲದೆ ಬೇರೆಯಲ್ಲ.”

ದಿ|| ಎಂ.ಆರ್. ಶ್ರೀನಿವಾಸಮೂರ್ತಿ: ಭಕ್ತಿಭಂಡಾರಿ ಬಸವಣ್ಣನವರು;

ಪು. ೧೪೩-೧೪೪.

[11] ಎಂದರೆ ಬಸಣ್ಣನವರು ಕಟುವಾಗಿ ಮಾತಾಡಿದ್ದೇ ಇಲ್ಲವೆಂದು ಅರ್ಥವಲ್ಲ; ವೈದಿಕ ಧರ್ಮದ ವಿಚಾರವಾಗಿ ಮಾತನಾಡುವಾಗ ಕಟುವಾಗಿ ಮಾತಾಡಿದ ನಿದರ್ಶನಗಳು ವಚನಗಳಲ್ಲಿ ದೊರೆಯುತ್ತವೆ. ಆದರೆ ಒಟ್ಟಿನಲ್ಲಿ ವಚನಗಳಲ್ಲಿ ಒಡೆದು ಕಾಣುವ ಬಸವಣ್ಣನವರ ವ್ಯಕ್ತಿತ್ವ ಪ್ರಧಾನತಃ ಸುಸಂಸ್ಕೃತವಾದದ್ದು ಎಂಬುದು ಮೇಲಿನ ಅರ್ಥ.

[12] ಟಿ.ಎಸ್. ವೆಂಕಣ್ಣಯ್ಯ: ಬಸವರಾಜದೇವರ ರಗಳೆಯ ಮುನ್ನುಡಿಯಲ್ಲಿ; xxxx;(ಅಡಿ ಟಿಪ್ಪಣಿ)

[13] ಅಲ್ಲೇ, ಪು. xiv (ಅಡಿಟಿಪ್ಪಣಿ)

[14] ಡಾ. ಎಲ್. ಬಸವರಾಜು : ‘ಬಸವೇಶ್ವರನ ಜೀವಮಾನಾವಧಿ’ (ಉಪಾಯನ ; ಪು. ೧೮೧)

[15] ಅಲ್ಲೇ, ಪು. ೧೮೧.

[16] ಈಗ ಪ್ರಕಟವಾಗಿರುವ ೧೩ನೇ ಸ್ಥಲದಲ್ಲಿ ೩೭ ಪಂಕ್ತಿಗಳು ಮಾತ್ರ ಹರಿಹರ ಕೃತವೆಂದೂ, ಮುಂದಿನವು ಹರಿಹರನಲ್ಲವೆಂದೂ ಡಾ. ಎಲ್. ಬಸವರಾಜು ಅವರು ಸಾಧಾರವಾಗಿ ಪ್ರತಿಪಾದಿಸಿದ್ದಾರೆ. ಈ ಬಗ್ಗೆ ವಿವರಗಳಿಗೆ ನೋಡಿ- ‘ಬಸವೇಶ್ವರನ ಜೀವಮಾನಾವಧಿ’: ಉಪಾಯನ ; ಪು. ೧೮೧-೧೮೨.

[17] P.B. Desai : Basaveswara and His Times, p. 187

[18] ಡಾ. ಎಲ್. ಬಸವರಾಜು : ಬಸವೇಶ್ವರನ ಜೀವಮಾನಾವಧಿ, ಉಪಾಯನ : ಪು. ೧೮೦.

[19] ಅಲ್ಲೇ, ಪು. ೧೭೧.

[20] P.B. Desai : Basaveswara and His Times, p.187.

[21] ಡಾ. ರಂ.ಶ್ರೀ ಮುಗಳಿ : ಕನ್ನಡ ಸಾಹಿತ್ಯ ಚರಿತ್ರೆ, ಪುಟ. ೧೭೫.

[22] ಪ್ರೊ. ಶಿ.ಶಿ. ಬಸವನಾಳ (ಸಂ) ಬಸವಣ್ಣನವರ ಷಟ್‌ಸ್ಥಲದ ವಚನಗಳು ವ. ೮೯೧. ಪು. ೨೩೫.

[23] ಸಂ. ಶಿ. ಭೂಸನೂರಮಠ (ಸಂ) ಶೂನ್ಯ ಸಂಪಾದನೆ: ವ. ೩; ಪು. ೪೨೭.

[24] ಮೇಲೆ ಹೇಳಿದ ಇನ್ನೊಂದು ವಚನ ಶೂನ್ಯ ಸಂಪಾದನೆಯಲ್ಲಿದೆ: ಬಸವಣ್ಣನವರ ಷಟ್‌ಸ್ಥಲದ ವಚನಗಳಲ್ಲಿ ಕಂಡುಬರುವುದಿಲ್ಲ : ಆದರೆ ಬಸವಣ್ಣನವರ ಹೆಚ್ಚಿಗೆ ದೊರೆತ ವಚನಗಳು (ವ: ೯೮ : ಪು. ೯೫, ಸಂ. ಶ್ರೀ ಶ್ರೀ ಬಸವನಾಳ)- ಎಂಬ ಪುಸ್ತಕದಲ್ಲಿದೆ. ಇದೂ ಶೂನ್ಯಸಂಪಾದನೆಯಿಂದ ತೆಗೆದುಕೊಂಡದ್ದೆಂದು ಉಲ್ಲೇಖಿತವಾಗಿದೆ.

[25] ‘ಚೆನ್ನ ಬಸವಣ್ಣನವರ ವಚನಗಳು : (ಸಂ. ಡಾ. ಆರ್. ಸಿ. ಹಿರೇಮಠ) ಗ್ರಂಥದಲ್ಲಿ, ಬಸವಣ್ಣನವರ ಪವಾಡಗಳಿಗೆ ಸಂಬಂಧಿಸಿದ ಮೂರು ವಚನಗಳು-ವ, ೧೯೧, ೫೩೫, ೬೯೮-ಇವೆ. ಇವುಗಳಲ್ಲಿ ವ. ೫೩೫, ೯೬೮ ಇವು ಶೂನ್ಯ ಸಂಪಾದನೆ (ಭೂಸನೂರು ಮಠ ಸಂಪಾದಿತ)ಯಲ್ಲಿಯೂ-ವ. ೩೧, ಪು.೯೩, ವ.೧೨. ಪು. ೧೬೮-ಇವೆ.

[26] ಹರಿಹರನು ಈ ಸಂದರ್ಭವನ್ನು ನಿರೂಪಿಸುವಲ್ಲಿ ಏನೋ ತೊಡಕಿರುವ ಹಾಗೆ ತೋರುತ್ತದೆ. ನೋಡಿ : ಪಂಕ್ತಿ ೬೯-೧೦೫ (ಸ್ಥಲ ೫).

[27] ಬಸವರಾಜ ದೇವರ ರಗಳೆ : ಸ್ಥಲ ೧೨, ಸಂ ೭೫-೧೪೦ ಮತ್ತು ಸ್ಥಲ ೧೩, ಪದ್ಯ ೧.

[28] ಆಧುನಿಕ ಯುಗದ ಸಂತಶ್ರೇಷ್ಠರಾದ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಸತಿ ಶಾರದಾಮಣಿದೇವಿಯನ್ನು ಜಗನ್ಮಾತೆಯಂತೆ ಕಂಡು ಪೂಜಿಸಿ ನಡೆಯಿಸಿಕೊಂಡರೆಂಬ ಸಂಗತಿಯನ್ನು ಇಲ್ಲಿ ನೆನೆಯಬಹುದು.

[29] ಶ್ರೀ ಜವಳಿಯವರು ಹರಿಹರನ ಬಸವರಾಜದೇವರ ರಗಳೆಯಲ್ಲಿ ಚಿತ್ರಿತವಾದ ಪ್ರತಿಯೊಂದು ಘಟನೆಗೂ ಒಂದೊಂದು ವಚನದ ಆಧಾರವಿದೆ ಎಂಬ ಉದ್ದೇಶದಿಂದಲೇ (ಪು. ಧರ್ಮ ಭಂಡಾರಿ ಬಸವಣ್ಣ : ಪು. ೩೮) ಹೊರಟಿರುವುದರಿಂದ ವಿಷಯ ಪ್ರತಿಪಾದನೆಯಲ್ಲಿ ಉತ್ಪ್ರೇಕ್ಷೆಯಿದೆ ಎಂದು ನಮಗೆ ತೋರುತ್ತದೆ. ಕೆಲವು ಘಟನೆಗಳ ಚಿತ್ರಣದಲ್ಲಿ ವಚನದ ಹಿನ್ನೆಲೆಯಿದೆ ಎಂಬುದನ್ನು ಒಪ್ಪಬಹುದು.

[30] ಎರಡೆಂಬತ್ತು ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನಮನವು, ಮನ ಘನವನರಿಯದು, ಘನ ಮನವನರಿಯದು ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲಾ ಒಂದು ಮಾತಿನೊಳಗು, (ಅಲ್ಲಮನ ವಚನ ಚಂದ್ರಕೆ: ಸಂ. ಡಾ. ಎಲ್. ಬಸವರಾಜು: ವಯ ೬೨೭) ಇಲ್ಲಿ ವಚನ ಗೀತೆ ಸಮಾನಾರ್ಥಕವೆಂದು ಸ್ಪಷ್ಟ.

[31] ಎಲ್. ಬಸವರಾಜು, ಅಲ್ಲಮನ ವಚನ ಚಂದ್ರಿಕೆ; ಮುನ್ನುಡಿ : ಪು.೬ ; ೧೦-೧೨.

[32] “ಅಂದಿನ ಸಮಾಜದ ನೇತಾರರಾಗಿದ್ದ ಆ ದಾರ್ಶನಿಕ ವಚನಕಾರರ ಮಾತು ಹಾಗಿರಲಿ- ಅಂದಿನ ಅವರು ಕಟ್ಟಿದ ಸಮಾಜದ ಒಬ್ಬೊಬ್ಬ ಪ್ರಾತಿನಿಧಿಕ ವ್ಯಕ್ತಿಯ ಜ್ಞಾನದ ಮತ್ತು ವಿದ್ವತ್ತಿನ ಮಟ್ಟವೂ ಕೋಡಿ ಕೀಳುವಂತಿಲ್ಲದಿದ್ದರೂ ತೂಬಿಗೆ ಸಿಲುಕುವಂತಿತ್ತು ಎನ್ನಬಹುದು”- ಡಾ.ಎಲ್. ಬಸವರಾಜು : ಶಿವದಾಸ ಗೀತಾಂಜಲಿ : ಮುನ್ನುಡಿ ಪು. ೧೫-೧೬.