ಕಾರುಣ್ಯಾಂಬುಧಿ ಮಹಿಮಾ
ಗಾರಂ ಬೋಳೆಯ ಬಲ್ಲಹಂ ಭಕ್ತಿಸುಧಾ |
ಕಾರಂ ಮಿಗೆ ಮೆರೆದಂ ಕೋ
ಳೂರೊಳ್ ಕೊಡಗೂಸನೆಮ್ಮ ಹಂಪೆಯ ರಾಯಂ ||

ಉತ್ತರ ದಿಶಾಭಾಗದೊಳಗೊಂದು ಶಿವಪುರಂ
ಬಿತ್ತರಿಪ ಕೋಳೂರೆನಿಪ್ಪ ಪೆರ್ಮೆಯ ಪುರಂ
ಅಲ್ಲಿರ್ಪಳೊರ್ವ ಶಿವಭಕ್ತೆ ಶಂಕರಯುಕ್ತೆ
ಸಲ್ಲಲಿತ ಸತ್ಯಭಾಷಿಣಿ ಭೂಮಿಗತಿಶಕ್ತೆ
ತನಗೋರ್ವ ಮಗಳುಂಟು ಕೋಳೂರು ಕೊಡಗೂಸು
ಮನಸಿಜಾರಿಗೆ ಮುನಿದು ಮುದ್ದಿಸುವಳಾ ಕೂಸು
ಆಗಿರ್ಪ ಶಿವಭಕ್ತೆಗೊಂದು ನೇಮಂ ನೋಡ
ನಾಗಭೂಷಣನೊಲಿವ ಸುಖದ ನೇಮಂ ನೋಡ
ಸೋಮವಾರದ ನೇಮವಾ ಕಲ್ಲಿನಾಥಂಗೆ
ಸೋಮವಾರದೆ ಹಾಲೊಳಭಿಷೇಕವೀಶಂಗೆ           ೧೦

ಇರಲೊಂದು ಸೋಮವಾರದೊಳೆ ಹಾಲಂ ಕೊಂಡು
ಚರಿತದಿಂದಭಿಷೇಕಮಂ ಮಾಡಿ ಬರೆ ಕಂಡು
ಕೊಡಗೂಸು ಬೆಸಗೊಂಡಳೆಲ್ಲಿರ್ದೆಯೆಲೆ ತಾಯೆ
ಗಡಿಗೆವಾಲಂ ಕೊಂಡು ಹೋದಿರೆಲ್ಲಿಗೆ ತಾಯೆ
ಆರ್ಗೆ ಕೊಂಡೊಯ್ದೆ ನೊರೆವಾಲನಿಂತೆಲೆಯವ್ವ
ಆರ್ಗೆರೆದು ಬಂದೆ ಸವಿವಾಲನಿಂತೆಲೆಯವ್ವ
ಎನೆ ಮಗಳ ಮುದ್ದುಮಾತಂ ಕೇಳಿ ನಿಲುವುತಂ
ನಿನಗೆ ಪೇಳ್ದಪೆನವ್ವ ಕೇಳೆಂದು ಪೇಳುತಂ
ಕಲ್ಲಿನಾಥಂಗೆ ಶರ್ವಂಗೆ ಸರ್ವೇಶಂಗೆ
ಸಲ್ಲೀಲೆಯಿಂ ಶಂಕರಂಗೆ ಗಿರಿಜೇಶಂಗೆ ೨೦

ಹಾಲನೊಯ್ದೆರೆದು ಬಂದೆಂ ಮಗಳೆ ಕೇಳೆನಲು
ಬಾಲೆ ಬೆರಗಾಗಿರ್ದದಾರವ್ವದಾರೆನಲು
ದೇವನೆಂದಾರವ್ವದೆಂತಿರ್ಪನೆಂದೆನಲು
ದೇವನಂ ಪೇಳವ್ವ ತಾಯೆ ನೀಂ ಪೇಳೆನಲು
ಆರೆಂಬ ಸಂದೇಹಮಂ ನುಡಿವರೇ ಮಗಳೆ
ಮಾರಾರಿಯಂ ಶಿವನ [ನಾ] ತಂದೆಯಂ ಮಗಳೆ
ಅಯ್ದು ಮುಖ ಈರೈದು ಭುಜದ ಸರ್ವಜ್ಞನಂ
ಎಯ್ದೆ ಗಜಚರ್ಮಮಂ ಪೊದೆದಿರ್ದ ತಜ್ಞನಂ
ಪುಲಿದೊಲವನುಟ್ಟ ಪುಣ್ಯಪ್ರಕರ ಸೇವ್ಯನಂ
ನಲಿದು ಡಮರುಗ ತ್ರಿಶೂಲವಿಡಿದಿರ್ದ ಭವ್ಯನಂ         ೩೦

ಹರಿಬೊಮ್ಮರಾದ್ಯಂತವರಿಯದಿಹ ಜ್ಯೋತಿಯಂ
ಶರಣರೊಡನೊಡನೆ ಬರುತಿರ್ಪ ವಿಖ್ಯಾತಿಯಂ
ಉಪಮನ್ಯುವಿಂಗೆ ಪಾಲ್ಗಡಲನಿತ್ತಭವನಂ
ತಪನಶತಕೋಟಿಗೆ ಘನಪ್ರಭಾವಿಭವನಂ
ಅರಿಯವ್ವ ಬೊಮ್ಮಾಂಡಮಂ ಹೆತ್ತ ತಂದೆಯಂ
ಅರಿಯವ್ವ ಮನ್ಮನೋರಥವೀವ ತಂದೆಯಂ
ಎಂದಲ್ಲಿ ಪೇಳ್ದ ಮಾತೆಯ ಮಾತು ಗುರುವಾಗಿ
ಇಂದುಧರಮೂರ್ತಿ ತನ್ನೊಳಗೆ ಹೊಸಕರುವಾಗಿ
ಎಡೆಗೊಂಡಳೆಡೆಗೊಂಡಳಭವನಂ ಕೊಡಗೂಸು
ನುಡಿಯನುಡಿಗಿದಳಲ್ಲಿ ತಾಯೊಡನೆ ಕೊಡಗೂಸು ೪೦

ಮನದ ಬಸುರೊಳಗೆ ಗರ್ಭಿಣಿಯಾದಳಾ ಕೂಸು
ನೆನಹಿನೊಳು ರತಿಯನೆಡೆಗೊಂಡಳಾ ಕೊಡಗೂಸು
ಶಂಭು ಮನದೊಳ್ಬೆಳೆಯೆ ಬಯಕೆ ಕಂಗಳೊಳೆಸೆಯೆ
ದಂಬಳಿದು ಮತ್ತೊಂದು ಬಗೆ ಸೊಗಯಿಸದೆ ಬೆಳೆಯೆ
ಆನೊಮ್ಮೆ ಹಾಲನೆರೆವುದನೆಂದು ಕಾಣ್ಬೆನೊ
ಆನೊಮ್ಮೆ ಶಿವನ ವದನವೆಂದು ಕಾಣ್ಬೆನೋ
ಎಂದು ತಾಯ್ ಹೋಹಾಗಳೊಮ್ಮೆಯುಂ ಕೇಳುತಿರೆ
ಕಂದ ನೀಂ ಬರಲಾರೆ ಬೇಡವ್ವಯೆನುತಮಿರೆ
ಮನೆಯೊಳಂಗಣದೊಳಗೆ ಶೂಲಿಯಂ ಪಾಡುತಂ
ಮನದೊಳ್ಮನೋಹರನನೊಲಿದು ಕೊಂಡಾಡುತಂ  ೫೦

ಒರಳಕ್ಕಿ ಮಿದಿವಲ್ಲಿ ಪರಮನಂ ಪಾಡುತಂ
ನೆರೆದ [ಕ]ಳ್ಳುಂಬಳ್ಳಿಯೊಳಗೆ ನಲಿದಾಡುತಂ
ಅಟ್ಟುಗೂಳೊಳ್ ಕಲ್ಲಿನಾಥನಂ ಪಾಡುತಂ
ಹೆಟ್ಟುಗೆಯರೊಳ್ ಕಲ್ಲಿನಾಥನಂ ಹೊಗಳುತಂ
ಬೆಳೆವುತಿರ್ದಳು ಹರನೊಳಗಿರಿಸಿ ಕೊಡಗೂಸು
ತಳೆವುತಿರ್ದಳು ಶಿವನ ಭಾವಮಂ ಕೊಡಗೂಸು
ಇರುತಮಿರೆ ಹತ್ತು ಸಂವತ್ಸರಂ ತನಗಾಗೆ
ಹರನ ಕರುಣಂ ತನ್ನ ದೆಸೆಗೆ ಹತ್ತಿರೆಯಾಗೆ
ಒಂದು ದೆವಸಂ ಮಾತೆ ಮಾಣಿಕಂಗಂಡಿರ್ದು
ಇಂದುಧರನಭಿಷೇಕದತ್ತ ಚಿಂತಿಸುತಿರ್ದು                                 ೬೦

ಹಾಲನಭಿಷೇಕಕ್ಕೆ ಕೊಂಡೊಯ್ವರಿಲ್ಲೆಂದು
ಬಾಲೆಯಂ ಬೋಳೈಸಿ ಕೇಳಿ ನೋಡುವೆನೆಂದು
ಮಗಳೆ ಏನವ್ವ ನಲವಿಂ ಕಲ್ಲಿನಾಥಂಗೆ
ಬಗೆಗಗೋಚರವೆನಿಪ ಲೋಕೈಕನಾಥಂಗೆ
ನೀಲಕಂಠಂಗೆ ನಿತ್ಯಂಗೆ ನಿರ್ಮಾಯಂಗೆ
ಹಾಲನೆರೆ ಹೋಗವ್ವ ಸದ್ಗುಣನಿಕಾಯಂಗೆ
ಎನೆ ಜೀವವಿಮ್ಮಡಿಸಿದಂತಲ್ಲಿ ಪುಳಕಿಸುತೆ
ಮನಸಿಜಾರಿಯನಲ್ಲಿ ಕಂಡಂತೆ ಕಾಮಿಸುತೆ
ನಿಂದೆಡೆಯೊಳುಂ ನಿಲ್ಲದಲ್ಲಿ ಸಂಭ್ರಮಿಸುತ್ತೆ
ಸಂದಣಿಪ ಹರುಷದಿಂ ಹೆಚ್ಚಿ ಸಡಗರಿಸುತ್ತೆ   ೭೦

ಇಂದೆಮ್ಮ ದೇವಂಗೆ ನಾ ಹಾಲನೆರೆದಪೆಂ
ಇಂದೆಮ್ಮ ತಂದೆಯಲ್ಲಿಗೆ ನಲಿದು ಪೋದಪೆಂ
ನಿಮಗುಂಟೆ ಇಂತಪ್ಪ ಸಂತೋಷವೆಂದೆನುತೆ
ನಿಮಗೆಲ್ಲ ಇಂತಪ್ಪ ದೇವನುಂಟೇ ಎನುತೆ
ನೆರೆಮನೆಯ ಮಕ್ಕಳೊಳಗಕ್ಕರಿಂ ನುಡಿವುತಂ
ಅರಿಸಿನವನರೆವುತಂ ಮೈದೊಳೆದು ಪೆಚ್ಚುತಂ
ಹರಿತಂದು ಮನೆಯೊಳಂಗಣದೊಳಂ ನಲಿವುತಂ
ಹರುಷದಿಂದಂ ದಣಿಂಬವನುಟ್ಟು ಮೆಚ್ಚುತಂ
ಅಂಜನವನೆಚ್ಚುತಂ ಬೈತಲೆಯನಳವಡಿಸಿ
ರಂಜಿಸುವ ಭಾಳದೊಳು ಭಸಿತಮಂ ಕೆಳೆಗೊಳಿಸಿ   ೮೦

ಹೊಸ ಹೂವಿನೋಲೆಯಂ ತಿರುಹಿ ತಿರುಹಿಕ್ಕುತಂ
ಎಸೆವ ತಾಯಂ ನೋಡಿ ಸಂತಸದೊಳುಕ್ಕುತಂ
ಮೇಲುದಂ ಕಳೆ ಕಳೆದು ಮತ್ತೊಮ್ಮೆ ಹೊದೆವುತಂ
ಹಾಲಗಡಿಗೆಯ ಮೇಲೆ ಬಟ್ಟಲಂ ಮುಚ್ಚುತಂ
ಮನದೊಳಗೆ ಶಿವಮೂರ್ತಿ ಕೈಯ್ಯೊಳಗೆ ಹಾಲೊಪ್ಪೆ
ತನುವಿನೊಳು ಹರಭಕ್ತಿ ಕರಣದೊಳು ಹರನೊಪ್ಪೆ
ಮಗಳ ಸಂಭ್ರಮಕಲ್ಲಿ ತಾಯಿ ಬೆರಗಾಗುತಿರೆ
ಮಗಳೆ ಹದುಳಂ ಹದುಳ ಹೋಗೆಂದು ಕಳುಹುತಿರೆ
ಕೈಲಾಸಪುರಕಿದೆ ಪರಸ್ಥಾನವೆಂಬಂತೆ
ಶೈಲಜಾಪತಿಯೆಡೆಗೆ ಪಯಣಮಂ ಮಾಳ್ಪಂತೆ ೯೦

ಪೊರಮಟ್ಟಳಲ್ಲಿ ಕೊಡಗೂಸು ಹಾಲಂ ಕೊಂಡು
ಪೊರಮಟ್ಟಳಭವನಾಕೃತಿಯನೊಲಿದೊಳಕೊಂಡು
ನಡೆತಂದಳಡಿಗಡಿಗೆ ಜನನಪದವರೆಯಾಗೆ
ಮೃಡನರೂಪಂ ಕಾಣ್ಬ ತವಕವಿರ್ಮಡಿಯಾಗೆ
ಬಂದು ಶಿವನಿಳಯಮಂ ಪೊಕ್ಕಳಾ ಕೊಡಗೂಸು
ನಿಂದಳಾ ರಂಗಮಂಟಪದೊಳಗೆ ಕೊಡಗೂಸು
ತನ್ನ ಭಾವಂ ಬಲಿದು ಶಿವಮೂರ್ತಿ ಲಿಂಗದೊಳು
ಮುನ್ನವೇ ತೋರುತ್ತಮಿರ್ದುದಾ ಲಿಂಗದೊಳು
ಬೀಜದೊಳಗಂಕುರಂ ಹೊಳೆ ಹೊಳೆದು ತೋರ್ಪಂತೆ
ತೇಜದೊಳಗಣ ಮೂರ್ತಿ ಥಳಥಳಿಸಿ ಹೊಳೆವಂತೆ      ೧೦೦

ಇರೆ ಕಂಡು ಪುಳಕಿಸುತೆ ಹರನ ಹತ್ತಿರೆ ಬಂದು
ಹರುಷದಿಂದಂ ಶರ್ವನೆಡದ ದೆಸೆಯೊಳು ನಿಂದು
ಗಡಿಗೆವಾಲಂ ತನ್ನ ಕೈಯ ಬಟ್ಟಲೊಳೆರೆದು
ಪಿಡಿದು ನಿಂದಿರ್ದು ಶಿವನಂ ನೋಡಿ ಸುಖವಿಡಿದು
ಎನ್ನ ರನ್ನವೆ ಎನ್ನ ಹೊನ್ನೆ ಹಾಲ್ಗುಡಿಯಯ್ಯ
ಎನ್ನ ಪರಿಸವೆ ಎನ್ನ ಚೆನ್ನೆ ಹಾಲ್ಗುಡಿಯಯ್ಯ
ಎನ್ನರಸ ನೊರೆವಾಲನೊಲ್ಮೆಯಿಂ ಸವಿಯಯ್ಯ
ಎನ್ನ ಸುಖನಿಧಿಯೆ ನೀನೆನ್ನಾಣೆ ಸವಿಯಯ್ಯ
ಎಮ್ಮವ್ವೆ ಕಳುಹಿದಳದೇಕುಸುರದಿರ್ದಪ್ಪೆ
ಎಮ್ಮಯ್ಯ ದಮ್ಮಯ್ಯ ಸುಮ್ಮನೇಕಿರ್ದಪ್ಪೆ    ೧೧೦

ನೊರೆಯಾರಿ ಬಿಸಿಗುಂದಿ ಸವಿಗೆಡುವುದೆಲೆಯಯ್ಯ
ನೊರೆವೆರಸಿ ಸವಿವಾಲನಾರೋಗಿಸೆಲೆಯಯ್ಯ
ಏಕುಸುರದಿರ್ದಪ್ಪೆ ಎಲೆ ತಂದೆ ಪೇಳೆನಲು
ಲೋಕೈಕಬಂಧು ಹಾ ಹಾಲ್ಗುಡಿವುದೆಂದೆನಲು
ಹಾಲ ಹವಣಲ್ಲವೀ ನುಡಿಯ ಸವಿ ಪಿರಿದೆಂದು
ಬಾಲೆಯ ಸ್ನೇಹ ವಚನವನೆ ಸವಿವುತ್ತಂದು
ಇರೆ ನೊಂದು ಕಂದಿದಳ್ಕುಂದಿದಳ್ ಕೊಡಗೂಸು
ಕೊರಗಿದಳ್ಕೋಡಿದಳ್ ಬಾಡಿದಳ್ ಕೊಡಗೂಸು
ಭೀತಿ ಕಾಲೂರಿ ದುಃಖಂ ತೀವಿ ಗದುಗದಿಸಿ
ಮಾತು ಹಿಮ್ಮೆಟ್ಟಿ ಹಿಂದುಳಿದು ತೊದಳಂಕುರಿಸಿ   ೧೨೦

ನಾಲಗೆಯ ಮೇಲೆ ದೈನ್ಯಾಕ್ಷರಂಗಳು ಹೊರಳೆ
ಮಾಲೆಗೊಂಡಕ್ಷಿಯೊಳ್ ಜಲಬಿಂದುಗಳ್ತೆರಳೆ
ಬಿಕ್ಕುತಂ ಗಂಟಲೊಳ್ ಬಿಗಿದ ಸೆರೆ ಬೀಗುತಿರೆ
ಅಕ್ಕೆಯೊಳು ನೇಹದಕ್ಕರವೊಡೆದು ಸುರಿವುತಿರೆ
ಹಾಲ್ಗುಡಿಯದಿರ್ದಡೆಮ್ಮವ್ವೆ ಬಡಿದಪಳಯ್ಯ
ಹಾಲ್ಗುಡಿಯದಿರೆ ಮನೆಗೆ ಹೋಗಲಂಜುವೆನಯ್ಯ
ಹಾಲನೆರೆಯದೆ ತಾಯನೆಂತು ನೋಡುವೆನಯ್ಯ
ಹಾಲವೆಂತಾದಡಂ ಕುಡಿಯಯ್ಯ ಕುಡಿಯಯ್ಯ
ಅಯ್ಯೋ ಮಹಾದೇವ ಹಾಲ್ಗುಡಿಯದಿರ್ಪರೆ
ಅಯ್ಯೋ ಕರುಣಿ ಕರುಣವಿಲ್ಲದಂತಿರ್ಪರೆ          ೧೩೦

ಎಂದತ್ತು ನಿಂದತ್ತು ನೆನೆದತ್ತು ಮುನಿದತ್ತು
ಸಂದಣಿಪ ನೇಹದಿಂದತ್ತತ್ತು ಮತ್ತತ್ತು
ಅಳುತಿರ್ಪ ಮುಗ್ಧೆಯಂ ಕಂಡು ಕರುಣಾಕರಂ
ಬೆಳೆವ ಕರುಣದ ವಶಕೆ ಸಂದು ಸರ್ವೇಶ್ವರಂ
ಸತ್ಯದಕ್ಕೆಗೆ ಶಿವನ ಚಿತ್ತ ಆಗಳೆ ಮರುಗಿ
ನಿತ್ಯನಿನ್ನಿರಬಾರದೆಂದು ಕೃಪೆಯೊಳಗೆರಗಿ
ಭಕ್ತಿವೆರೆಸಿದ ಸುಧೆಯನಲ್ಲಿ ಸವಿನೋಳ್ಪಂತೆ
ಯುಕ್ತಿ ಹೊದ್ದದ ನೇಹಮಂ ಸವಿದು ನೋಳ್ಪಂತೆ
ಆಹ ಶಿವನಲ್ಲಿ ಕೂಸಿನ ಕೈಯ ಬಟ್ಟಲಂ
ಶ್ರೀಹಸ್ತದಿಂ ಕಳೆದುಕೊಂಡನತಿ ನಿಶ್ಚಲಂ    ೧೪೦

ಹಾಲೊಳಗೆ ಭಕ್ತಿಸರ್ಕರೆಯ ಸವಿಯಂ ಕುಡಲು
ಹಾಲನಾರೋಗಿಸಿದನಿಳೆ ಕೌತುಕಂಬಡಲು
ಆಗಳೆರಗಿದವಲ್ಲಿ ಹೂಮಳೆಗಳೊಪ್ಪದಿಂ
ರಾಗದಿಂ ದುಂದುಭಿಧ್ವಾನಂಗಳೊಪ್ಪದಿಂ
ಪುಟ್ಟುತಿರೆ ಬಂದುದು ಸುವರ್ಣಪುಷ್ಪಕವಲ್ಲಿ
ನೆಟ್ಟನೆ ಗಣೇಶ ವಿಲಸಿತವಾಗೆ ನಭದಲ್ಲಿ
ಬಂದ ಪುಷ್ಪಕದೊಳಗೆ ಕೊಡಗೂಸನೊಲಿದಿರಿಸಿ
ಇಂದುಧರನಾನಂದದಿಂ ನಭಕ್ಕವತರಿಸಿ
ಕೋಳೂರ ಜನವೆಲ್ಲ ನೋಡಿ ಬೆರಗಾಗುತಿರೆ
ಆಳೆದ್ದು ಶಿವಭಕ್ತರೆಲ್ಲ ಗುಡಿಗಟ್ಟುತಿರೆ          ೧೫೦

ನಡೆತಂದು ಕೈಲಾಸಮಂ ಹರುಷದಿಂ ಪೊಕ್ಕು
ಮೃಡನೊಲಿದು ಸಿಂಹಾಸನಮನೇರುತಂ ಮಿಕ್ಕು
ನೋಡು ನಂದೀಶ ಕೊಡಗೂಸಿರ್ಪ ಮಹಿಮೆಯಂ
ನೋಡು ಪಾರ್ವತಿ ಹಾಲನೆರೆದ ನಿಸ್ಸೀಮೆಯಂ
ಹಾಲ್ಗುಡಿದೆನಿಂದು ಕೊಡಗೂಸಿಂಗೆ ಶಿಶುವಾಗಿ
ಹಾಲ್ಗುಡಿಸಿದೆಂ ಭಕ್ತಿಯತ್ತಲೊಲವರವಾಗಿ
ಎಂದಲ್ಲಿ ಪೇಳುತಂ ಗಣಕುಲಕೆ ತೋರುತಂ
ತಂದ ಬಟ್ಟಲನಲ್ಲಿ ಪಾರ್ವತಿಗೆ ತೋರುತಂ
ಹಾಲನಾರೈಸುವಡೆ ನಮಗಿದೇ ಸಾಲ್ಗೆಂದು
ನೀಲಕಂಠ ಕುಬೇರಂಗೆ ಬೆಸಸುತಲಂದು          ೧೬೦

ಭಂಡಾರದೊಳಯಿಂಕೆ ತೆಗೆಯಿ ಬಟ್ಟಲನೆನುತೆ
ಕೊಂಡಾಡಿ ಕೊಡಗೂಸನೊಪ್ಪದಿಂ ಪಾಲಿಸುತೆ
ರುದ್ರ ಕನ್ನಿಕೆಯರೊಳಗಿರ್ಪವರನೊಲಿದಿತ್ತು
ರುದ್ರನಾನಂದದಿಂ ಸಕಲಸುಖಮಂ ಪೊತ್ತು
ಭಕ್ತರಿಚ್ಛೆಯನೀವ ಶಾಂತಮಯನೊಪ್ಪಿದಂ
ಭಕ್ತರೆಂದುದನೀವ ಘನ ಕರುಣಿಯೊಪ್ಪಿದಂ
ಆದಿ ಮಧ್ಯಾಂತರಹಿತಂ ಶಂಭುವೊಪ್ಪಿದಂ
ನಾದಪ್ರಿಯಂ ಭಕ್ತಿಸುಲಭನಿಂತೊಪ್ಪಿದಂ
ವ್ರೋಕೇಶಂ ಸರ್ವನಾಮನಿಂತೊಪ್ಪಿದಂ
ಕಾಮಾರಿ ಹಂಪೆಯ ವಿರೂಪಾಕ್ಷನೊಪ್ಪಿದಂ          ೧೭೦

ಮೃಡನಭಮಂ ಕೋಳೂರೊಳ್
ಕೊಡಗೂಸಂ ಮೆರೆದ ಶಂಭು ಸದ್ಭಕ್ತಿಯನಿಂ |
ತೆಡೆವರಿಯದೆಮಗೆ ಕುಡು ನೀಂ
ಕಡೆಗಣಿಸದೆ ದೇವ ಹಂಪೆಯ ವಿರೂಪಾಕ್ಷ ||