ಶ್ರೀಗಿರಿಜೆಯರಸ ಕರುಣೋ
ದ್ಯೋಗದಿ ಶಿಶುವಾಗಿ ಮೆರೆ[ದ]ನಮ್ಮೆಯ ಮುಗ್ಧಾ |
ಭೋಗಕೆ ಕಾರುಣ್ಯಾಮೃತ
ಯೋಗಕ್ಕಂ ಮೆಚ್ಚಿ ಹಂಪೆಯ ವಿರೂಪಾಕ್ಷಂ ||

ಶ್ರೀ ವಿರೂಪಾಕ್ಷನಿಹ ಪುರಕೆಯುತ್ತರದಲ್ಲಿ
ಭೂವರರುಮೆಸೆವ ಬಿಜ್ಜಾವರದಿ ಶಿವನಲ್ಲಿ
ಒಪ್ಪಿಹಂ ಪರಮೇಶ ನಾಗಭೂಷಣನಂದು
ಸರ್ಪಭೂಷಣನಾಗಲೆಲ್ಲರಿಗೆ ಕೃಪೆನಿಂದು
ಆ ಪುರದಿ ಶಂಕರನೆನಿಪ್ಪ ವಿಪ್ರನುಮಿರ್ಪ
ಕಾಪಾಲಿಗತ್ಯಂತ ಹರುಷಮಯನೆಂದಿರ್ಪ
ಆತಂಗೆಯರಸಿ ಸಕಲೈಶ್ವರ್ಯ ಸಂಪನ್ನೆ
ನೂತನದ ರತಿಯೆನಿಸಿ ಮೆರೆವ ಗುಣಸಂಪನ್ನೆ
ಭಾಗೀರಥೀ ಎಂಬ ಪೆಸರಿಂದಲೆಸೆದಿಹಳು
ನಾಗಭೂಷಣನನಾವಾಗ ಭಜಿಸುತ್ತಿಹಳು        ೧೦

ಉಮ್ಮಹದೊಳೊಬ್ಬ ಮಗಳಾಗೆ ಮುದ್ದಾಡುವೆಂ
ನಮ್ಮಮ್ಮೆ ನಮ್ಮವ್ವೆಯೆಂದು ಕೊಂಡಾಡುವೆಂ
ಎಂದು ನೆನೆವುತ್ತಿರಲು ದೇವಿಯಾಗಳು ಮೆಚ್ಚಿ
ತಂದಿರಿಸಿದಳು ತನ್ನ ಭಕ್ತಿಯ ಗುಣಕೆ ಮೆಚ್ಚಿ
ಅವಳುದರದೊಳು ಬಂದು ಪೊಕ್ಕಳಂತಮ್ಮವ್ವೆ
ಶಿವನ ಸದ್ಭಕ್ತಿಯೇ ಕರುವಾದ ನಮ್ಮವ್ವೆ
ಹರನ ಕರುಣೋದಯದಲವರ ಬಸಿರೊಳು ಬಂದು
ದುರಿತಾಂತಕನ ಕರುಣರಸವದನೆ ಲೇಸೆಂದು
ಉದಯವಾದಳು ಕಾಮಧೆನುವಿನ ಶಿಶುವಂತೆ
ಸುಧೆಯ ವಾರಾಶಿಯಲಿ ಉದಯಿಸಿದ ಶಶಿಯಂತೆ         ೨೦

ಕಂಡರುತ್ಸವದಿಂದೆ ತಂದೆ ತಾಯ್ನಂಟರುಂ
ತಂಡತಂಡದಲಿ ಹರುಷಂಗೊಂಡರಿಷ್ಟರುಂ
ನಮ್ಮಕ್ಕ ನಮ್ಮಮ್ಮ ನಮ್ಮಜ್ಜಿಯೆಂದವರು
ನಮ್ಮಕ್ಕ ನಮ್ಮವ್ವ ನಮ್ಮಮ್ಮೆಯೆಂದವರು
ಅಮ್ಮವ್ವೆ ಎಂದೆಂಬ ಪೆಸರದೇ ಲೇಸೆಂದು
ಅಮ್ಮಮ್ಮ ಜಗವರಿಯೆ ಮೆರೆವುತಿರೆ ಸಲೆ ಸಂದು
ಬಳೆವುತಿರ್ದಳು ಶಿವೆಯ ಕರುಣರಸ ಬಳೆವಂತೆ
ತೊಳಗುತಿರ್ದಳು ಶಿವೆಯ ಸಕಲಗುಣ ಬಳೆವಂತೆ
ಬಳೆವುತಂ ಶಿವಕಥನ ತಳೆವುತುಂ ಹರಕಥನ
ಕೆಳೆಗೊಂಡ ನುಡಿಯೆಲ್ಲವುಂ ಪುರಹರನ ಕಥನ      ೩೦

ಏಗಳುಂ ಪುರಹರನ ಸ್ಮರಹರನ ವರಕಥನ
ಬೀಗಿ ಬೆಳೆದೊಲೆದಾಡುತುಂ ಪುರಹರನ ಕಥನ
ಸುವ್ವಾಲೆಯೊಳಗೆ ತಾಂ ಶೂಲಿಯಂ ಪಾಡುತಂ
ದೇವಾಲಯಕ್ಕೆಯ್ದಿ ದೇವನಂ ಕಾಣುತುಂ
ಓವಿ ಕೊಂಡಾಡುತುಂ ದೇವನಂ ಪಾಡುತುಂ
ದೇವ ಮಗನಾಗಬೇಕೆಂಬಂತೆ ನೋಡುತುಂ
ಇಂತಿರಲು ಕನ್ನಿಕಾ ಪ್ರಾಯವಧು ತೋರುತಿರೆ
ಸಂತೋಷದಿಂದೆ ತಾಯ್‌ತಂದೆಗಳ ಕಾಣುತಿರೆ
ಶಂಕರಂ ಭಾಗೀರಥಿಯು ನೋಡಿ ನಲಿವುತಿರೆ
ಶಂಕಿಸುತೆ ಕೂಸುಮಂ ನೋಡಿ ತೂಪಿರಿವುತಿರೆ   ೪೦

ಕರೆಸಿ ಕೊಟ್ಟರು ಸೋದರಳಿಯಂಗೆಯಾಗಳುಂ
ವರನಲ್ಲಿ ಸ್ಥಿರನಲ್ಲವೆಂದರಿಯದಾಗಳುಂ
ಈ ಪರಿಯಲುಂ ಕೆಲವು ದಿವಸಂ ಸಲುತಮಿರಲು
ಆ ಪುರಕಮ್ಮವ್ವೆಯೆಂಬ ನಾಮಂ ಮಿಗಲು
ಶಂಕರಮ್ಮವ್ವೆಗಂ ಮಗನಾಗಬೇಕಾಗಿ
ಶಂಕಿಸದೆಯವಳ ವರನಂ ಕರೆದ ತನಗಾಗಿ
ಆಗಳಮ್ಮವ್ವೆಗಾ ವೈಧವ್ಯವಾಗಿರಲು
ನಾಗಭೂಷಣನು ಶಿಶುವಪ್ಪೆನೆಂದೊಲಿದಿರಲು
ಅಲ್ಲಿ ತಾನೇಕಾಂತೆಯಾಗಿರಲ್ಕಮ್ಮವ್ವೆ
ಸಲ್ಲೀಲೆಯಿಂದೆ ಶಂಕರಧ್ಯಾನಿಯಮ್ಮವ್ವೆ     ೫೦

ಕದಿರಕಾಯಕದಿಂದೆ ಮುಂಜಿಯಂ ಮಾಡುವಳು
ಮದನವೈರಿಯ ಮನದ ಭಾವದೊಳ್ ಕೂಡುವಳು
ದೇವನಂ, ನಂಬಿದರ ಕಾವನಂ ಪಾಡುವಳು
ಜೀವನಂ ಭಕ್ತಿರಸ ಭಾವನಂ ಪಾಡುವಳು
ಪಂಪಾಧಿನಾಥನಂ ಪರಶಿವನ ಪಾಡುವಳು
ಹಂಪೆಯ ವಿರೂಪಾಕ್ಷಲಿಂಗನಂ ಪಾಡುವಳು
ಹರನ ರೂಪೆಂದು ಶರಣರುಗಳಂ ಕಾಣುವಳು
ಪರಮನಿರವೆಂದವರ ಚರಣಕ್ಕೆ ಬೀಳುವಳು
ತನ್ನಿಂದ ತಾನುರ್ಬಿ ಶರ್ವನಂ ಪಾಡುತಿರೆ
ತನ್ನ ಮನೆಗೊರ್ವ ದೇಶಾಂತ್ರಿ ಜಂಗಮವು ಬರೆ  ೬೦

ತನ್ನ ಮನಮೂರ್ತಿ ಶರಣನದೊರ್ವ ಮನೆಗೆ ಬರೆ
ಕಣ್ಣಿಲ್ಲದಂಧಂಗೆ ಕಣ್ ಬಂದ ತೆರದೊಳಿರೆ
ಕಯ್ಯಂ ಕದಿರಂ ಹಂಜಿಯಂ ಬಿಸುಟು ಶರಣೆಂದು
ಅಯ್ಯ ಒಳಯಿಂಕೆ ಬಿಜಯಂಗೆಯ್ಯೆನುತಲಿಂದು
ಗದ್ದುಗೆಯನಿಕ್ಕಿ ಮೂರುತಿಗೊಳಿಸಿ ಸತ್ಕರಿಸಿ
ಶುದ್ಧಶೈವಾಚಾರಗಳನು ತಾನಳವಡಿಸಿ
ಮುದ್ದುಮಾತಿಂದಮೃತ ವಚನಗಳ ಬಿತ್ತರಿಸಿ
ಸಿದ್ಧಗಧಿಪತಿಯ ಕೇಳಿದಳಲ್ಲಿ ಬಿತ್ತರಿಸಿ
ಆವ ಕಡೆಯಿಂದ ಬಿಜಯಂಗೆಯ್ದಿರಯ್ಯಗಳೆ
ನೀವು ಬರಲಾಂ ಧನ್ಯನಾದೆನೆಮ್ಮಯ್ಯಗಲೆ          ೭೦

ಎಂದ ವಾಕ್ಯಗಳಿಗಾಯಯ್ಯಗಳು ಪರಿಣಮಿಸಿ
ಎಂದ ಮುಗ್ಧೆಯ ಹದನನರಿದವಳಿಗೆಚ್ಚರಿಸಿ
ಪೇಳಿದನು ನಾವು ದೇಶಾಂತ್ರಿಗಳು ಕಾಣವ್ವ
ಭಾಳಲೋಚನನ ಭಕ್ತರು ನಾವು ಕಾಣವ್ವ
ರುದ್ರಲೋಕದ ರುದ್ರನವತಾರ ನಾವವ್ವ
ರುದ್ರನೀ ಪರಿಯಲಿಹನಾಗಿ ಕೇಳೆಮ್ಮಮ್ಮ
ಆತನೆಂತಿಪ್ಪನೆಂಬುದನೆನಗೆ ಪೇಳಯ್ಯ
ರೀತಿ ಚಾರಿತ್ರಗಳ ಕುರುಹೇನು ಪೇಳಯ್ಯ
ಎನಲು ನಮ್ಮವ್ವ ನಮ್ಮಮ್ಮ ನೀ ಕೇಳೆಂದು
ಅನುಪಮನ ಘನಚರಿತ್ರವನು ನೀಂ ಕೇಳೆಂದು            ೮೦

ಜೆಡೆಯೊಳಗೆ ಗಂಗೆ ಸೂರಿಯ ಚಂದ್ರರಿರುತಿಹರು
ಕಿಡಿಗಣ್ಣು ಕಿವಿಯಲ್ಲಿ ಫಣಿಗಳುಂ ಇರುತಿಹವು
ಕೊರಲೊಳ್ ಗರ[ಳ] ಸುರರಕೋಟಿ ಮಾಲೆಗಳಿಹವು
ಕರದಲ್ಲಿ ಬ್ರಹ್ಮದಲೆ ಮುರಿದಿಕ್ಕಿಯಿರುತಿಹವು
ತೊಡುವುದಂ ಕರಿದೊವಲು ಉಡುವುದಂ ಪುಲಿದೊವಲು
ತೊಡವು ಹಾವುಗಳು ಭಸ್ಮಾಂಗಮುಂ ಶಿವಗೆನಲು
ಪಡುವುದಂ ಸುಡುಗಾಡು ಕಡೆಗೆಯದರೊಳಗಾಟ
ಒಡನೆಯಿರ್ಪವರೆಲ್ಲ ಮರುಳ್ಗಳವರೊಳೆಯಾಟ
ತಂದೆ ತಾಯಿಗಳಿಲ್ಲ ತಂದೆ ಮೂಜಗಕೆಲ್ಲ
ಬಂಧು ಬಳಗಗಳಿಲ್ಲ ಪೊರೆವೊಡೆಯ ತಾ[ನೆ]ಲ್ಲ                ೯೦

ದೇಶಿಗನು ತಾನೆ ದೇಶಾಧಿಪತಿಯುಂ ತಾನೆ
ಆಶೆಯೊಬ್ಬರುವಿಲ್ಲವಾಶಾಂಬರಂ ತಾನೆ
ಹೇಳುವರೆ ತಂದೆತಾಯಕ್ಕ ತಂಗಿಯರಿಲ್ಲ
ಕೇಳವ್ವ ಹೊಟ್ಟೆಯಂ ನೋಡಿ ಹೊರೆವವರಿಲ್ಲ
ಹಸಿದನೆಂದರೆ ಮರುಗಿ ಇಕ್ಕುವವರುಗಳಿಲ್ಲ
ಬಸವಳಿದ[ರುಂ] ಬಳಲಿಕೆಯನಾರಿಸುವರಿಲ್ಲ
ಈ ಪರಿಯೊಳಿರುತಿರ್ಪ ಶಿವನ ಕಾಣ್ಬರೆ ಇಂತು
ದ್ವೀಪ ದ್ವೀಪವ ತೊಳಲಿ ತಪ್ಪದೆಮ್ಮನು ಭ್ರಾಂತು
ಅಕ್ಕಟಾ ಶಿವಗಾರು ಇಲ್ಲವೇ ಅಯ್ಯಗಳೆ
ಮುಕ್ಕಣ್ಣ ಶಿವಗೆ ಇನ್ನಾರು ಗತಿಯಯ್ಯಗಳೆ   ೧೦೦

ಎನ್ನೆಡೆಗೆ ಬಾರ ನಾನನ್ಯಳಾಗಿ ಕಾಣೆ
ಚೆನ್ನಾಗಿ ನೋಡಿ ರಕ್ಷಿಸುವೆ ನಾಂ ತನ್ನಾಣೆ
ಜೆಡೆಯ ಹಿಕ್ಕಂ ಬಿಡಿಸಿ ಮುಡಿಯ [ಸೀ]ರಂ ಬಿಡಿಸಿ
ಇಡಿದ ರವಿ ಶಶಿ ಕೊರಲ ತೊಡರ್ದ ಗರಳವ ಬಿಡಿಸಿ
ರುಂಡಮಾಲೆಯ ತೆಗೆಸಿ ಕೆಂಡಗಣ್ಣಂ ಬಿಡಿಸಿ
ಪುಂಡರೀಕಾಜಿನವ ಗಜಚರ್ಮವಂ ಬಿಡಿಸಿ
ಕಲ್ಲೊಳಗೆ ಕಾಡೊಳಗೆ ಮಸಣದೊಳಗಂ ತಿರಿಗಿ
ಹಳ್ಳಿಗ[ಳ] ಮುಳ್ಳೊಳಗೆ ಮಸಣದೊಳಗಂ ತಿರಿಗಿ
ಮರುಳುಗಳೊಳಾಡುವರೆ ಘನಬುದ್ದಿಯುಳ್ಳವರು
ತಿರಿದು ಉಣಲೀಸುವರೆ ದೆಸೆದಿಕ್ಕು ಉಳ್ಳವರು         ೧೧೦

ಎಂಬ ನುಡಿಗಾ ಶರಣ ಹರುಷ ಪುಲಕವ ತಾಳ್ದು
ನಂಬುಗೆಯ ಮುಗ್ಧೆಯೆಂದೆನುತೆ ಹರುಷವ ತಾಳ್ದು
ನಾವು ಹಸಿದೆವು ನಮಗೆ ಬೋನಮಂ ನೀಡೆನಲು
ಭಾವೆ ಜಂಗಮಗೆಯಾರೋಗಣೆಯ ಕುಡುತಿರಲು
ಶರಣಂಗೆ ನೈವೇದ್ಯಮಂ ಸಂದು ಎಡೆಮಾಡಿ
ಹರುಷದಿಂ ಶರಣನಾರೈಸಿ ಸುಖದೊಳು ಮೂಡಿ
ಕೈ[ಯೆ]ರೆದು ವೀಳೆಯಂಗಳನಿತ್ತವರ ಕಳಿಪಿ
ಸುಯ್ವುತುಂ ಉಮ್ಮಳಿಸುತುಂ ಶಿವಗೆ ಮನವಳಿಪಿ
ಕಂಡು ನೇಹದಿ ಮರುಗುತಮ್ಮವ್ವೆಯಕ್ಕಟಾ
ಖಂಡೇಂದು ಮೌಳಿ ನಿನಗಾರುವಿಲ್ಲಕ್ಕಟಾ          ೧೨೦

ಬಾರಯ್ಯ ಶಿವನೆ ಮಕ್ಕಳಿಲ್ಲದ ಬಂಜೆ
ಬಾರಯ್ಯ ಎನ್ನ ಸಾರಲ್ಕೆ ಮನುಜರಿಗಂಜೆ
ಮುಂಡೆಜಡೆಗಟ್ಟಿ ನೀರೆರೆವರಿಲ್ಲಕ್ಕಟಾ
ಕೆಂಡವಂ ಹಣೆಯೊಳಗೆ ತಾಳುವರೆಯಕ್ಕಟಾ
ಬಾರಯ್ಯ ಶಿವನೆ ನಾನಾರಯ್ವೆನೆಲೆ ತಂದೆ
ಆರಯ್ವೆ ನಿನ್ನ ಮಗನೆಂದುವಾನೆಲೆ ತಂದೆ
ಅಡವಿಯಲಿ ಬೆಟ್ಟದಲಿ ತಿರುಗದಿರು ಕಂಡಯ್ಯ
ಮಡುವಿನಲಿ ಹಳ್ಳದಲಿ ಮುಳುಗಿ ಹೋದಪೆಯಯ್ಯ
ಜೆಡೆಯ ಬಿರ್ಚಿಯೆ ನೀರನೆರೆದು ಸಾಗಿಸುವೆ ಬಾ
ಕಿಡಿಗಣ್ಣಿಗೀವೆ ಕರ್ಪುರದಂಜನವನು ಬಾ          ೧೩೦

ಕರಿಯ ಕುಪ್ಪಸವ ತೆಗೆದೀವೆ ವಸ್ತ್ರವನು ಬಾ
ಗರಳವುಂ ಬಿಡಲೌಷಧವ ನಿನಗೆ ಈವೆ ಬಾ
ಭಸಿತಮಂ ಬಿಡಿಸಿ ಪರಿಮಳವ ಪೂಸುವೆನು ಬಾ
ಹೊಸಪರಿಯ ಸಾಗಿಸುವೆ ಲೇಸು ಮಗನಾಗಿ ಬಾ
ತಿರಿದು ಉಣಲೇಕೆ ಹಾಲೆರೆದು ಸಾಗಿಸುವೆ ಬಾ
ಹೊರೆವರಿಲ್ಲದೆ ಮರುಳರಂತೆ ಇರಬೇಡ ಬಾ
ಎರವಾಗಿ ನೋಡೆ ನಾಂ ಹೊರೆವೆ ತಾಯಂತೆ ಬಾ
ಪರಿಪರಿಯಲುಪಚಾರ ಮಾಳ್ಪೆ ನಿನ್ನಾಣೆ ಬಾ
ಎಂಬ ಮಾತುಂ ಶಿವಗೆ ತುಂಬಿತ್ತು ಕರ್ಣದಲಿ
ಶಂಭು ಈಕೆಗೆ ಮಗನು ಆಹೆನುತೆ ಗಿರಿಜೆಯಲಿ     ೧೪೦

ಎಚ್ಚರಿಸಿ ಇಳಿತಂದು ನಿಂದನಾರಣ್ಯದಲಿ
ಸಚ್ಚರಿತ ಶಿವನೊಪ್ಪುಘಿ;ಣಿಟ ವಿಂಧ್ಯದಲಿ
ಈಕೆಯುದರದಲಿ ಜನಿಸಿದೊಡೆ ಮನುಜರು ನೆರೆದು
ಲೋಕಹೊರಗೆಂಬುದಿದು ಬುದ್ದಿಯಲ್ಲಂ ಪಿರಿದು
ವೃಕ್ಷದೊಳಗಂ ತೊಟ್ಟಿಲಲ್ಲಿ ತಾಂ ಶಿಶುವಾಗಿ
ಲಕ್ಷಣಯುತಂ ಶಿವನು ಇರ್ದನುನ್ನತನಾಗಿ
ಬಿಟ್ಟ ಕೆಂಜೆಡೆಗಳೇ ಎಳೆಯ ಕೆಂಜೆಡೆಯಾಗಿ
ನೆಟ್ಟನಾ ಮುಡಿದ ಸೂರಿಯನುವರಳೆಲೆಯಾಗಿ
ಹಣೆಯ ಕಣ್ಣೆಸೆವ ಕರ್ಪಿನ ತಿಲಕವಾಗಿರಲು
ಫಣಿ ಕುಂಡಲಂಗಳುಂ ಮಾಗಾಯ್ಗಳಾಗಿರಲು ೧೫೦

ಪೊಳೆವ ಅರಳೆಲೆಯದುಂ ಎಸೆವ ಶಿಶಿಯಾಗಿರಲು
ಗಳದ ವಿಷವದು ಪುಲಿಯುಗುರಿನಂದವಾಗಿರಲು
ತರದ ಕರಗಳವೆರಡು ಕರವಾಗಿಯೊಪ್ಪಿರಲು
ಬೆರಳ ಉಂಗುರವಜನ ಶಿರವದೇಯೊಪ್ಪಿರಲು
ಆದಿಯಾಧಾರವೆ ಉಡಿದಾರವಾಗಿರಲು
ವೇದವಾದಂಗಳೇ ಗೆಜ್ಜೆಗಳುಮಾಗಿರಲು
ಬಟ್ಟಬಯಲೆ ತನಗೆ ತೊಟ್ಟಿಲಾಗೆಸೆದಿರಲು
ಕಟ್ಟಿರ್ದ ನೇಣುಗಳೆಯಾಗಮವವಾಗಿರಲು
ಜ್ಞಾನಪ್ರಭಾವದಿಂ ಬೆಳಗುಮಯ ತಾನಾಗಿ
ನಾನಾ ಸುಚಾರಿತ್ರವೆಲ್ಲವಂಗಮದಾಗಿ     ೧೬೦

ಮುಟ್ಟಿ ದೃಢವಾಗಿ ಸದ್ಭಕ್ತಿಯಂ ಪಿಡಿದಿರಲು
ತೊಟ್ಟಿಲಂ ತನಗೆ ತಾನೇ ತೂಗಿಕೊಳುತಿರಲು
ಇತ್ತ ಶಿವನಿರೆಯತ್ತಲಮ್ಮವ್ವೆ ಗೃಹದೊಳುಂ
ಚಿತ್ತಜಾರಿಯ ನೆನೆವುತಂ ತನ್ನ ಮನದೊಳುಂ
ಹಂಜಿಯಂ ಮಾಡುತಿರಲಾಲಸ್ಯಮಂಕುರಿ
ಓಜೆಯಿಂದೆಂದ ನಾಗೇಶ್ವರಂ ಬಿತ್ತರಿಸಿ
ಮಗನ ಬೇಡಿದೆಯವ್ವ ಕಾನನದೊಳಹನೆ ಬಾ
ಮಿಗೆ ಕಾಡಕುರಳ ತಹ ನೆವವಾಗಿ ನೀನು ಬಾ
ಶಿವ ನಿನಗೆ ಶಿಶುವಾಗಿ ಬಂದಹನೆ ತಾಯಿ ಬಾ
ಭವಹರಂ ಮಗನಾಗಿ ಬಂದಹನೆಯಮ್ಮ ಬಾ            ೧೭೦

ಕಂಡ ಕನಸಿಂಗೆ ಹಿಂಡೇಳ್ವ ಪುಳಕಂಗಳಿಂ
ಕೊಂಡಾಗ ಹೆಡಗೆಯಂ ಹರುಷಾಸ್ಪದಂಗಳಿಂ
ನೇಹವಿರ್ದೆಡೆಗೆ ಮೋಹನವೆಯ್ದಿ ಬರ್ಪಂತೆ
ಸೋಹವಿರ್ದೆಡೆಗೆ ಸತ್‌ಕ್ರಿಯೆಯೆಯ್ದಿ ಬರ್ಪಂತೆ
ಅರಸಿ ಬರುತಿರೆ ಜಗನ್ಮಯನ ಸದ್ಭಕ್ತೆ ತಾಂ
ಕರೆವುತಿರ್ದಳ್ಮುಕ್ತಿಮಯನ ಸಚ್ಚರಿತೆ ತಾಂ
ಏ ಶಿವನೆ ಬಾ ಶಿವನೆ ಕೂ ಶಿವನೆ ಆ ಶಿವನೆ
ಲೇಸು ಮಾಡಿದೆ ಶಿವನೆ ಆಶೆ ಮಾಣಿಸು ಶಿವನೆ
ನಾಗೇಶ ಬಾರಯ್ಯ ನೀನು ಎನ್ನಯ ಮಗನು
ಆಗಯ್ಯ ನಿನ್ನೊಳಗೆ ಮುನಿದೆನಯ್ಯಾ ನಾನು                  ೧೮೦

ಏನು ನಟ್ಟಡವಿಯೊಳು ತಾನೊಬ್ಬಳೇ ಬರಲು
ತನತನಗೆ ಹರಿಣ ಸಾರಂಗ ಹರಿವುತ್ತಿರಲು
ಹಿಂದೆ ಮರಿಗಳು ಹತ್ತಿ ಬೆನ್ನಲ್ಲಿ ಬರುತಿರಲು
ನೊಂದಕ್ಕಟಾ ಮಕ್ಕಳಿಲ್ಲದಿಹುದೆನ್ನಳಲು
ನಿನ್ನ ತಾಗುವುದು ನಾಗೇಶನೀ ಮೃಗಗಳೊಳು
ಎನ್ನ ಪುಟ್ಟಿಸದಾದೆ ಯಾಕಯ್ಯ ಮೃಗಗಳೊಳು
ಕೋಡಗಂಗಳು ತಮ್ಮ ಮರಿಯ ಹೊಟ್ಟೆಯೊಳಿಕ್ಕಿ
ಓಡಿ ಕೊಂಬಿಗೆ ಪಾರಲವ ಕಂಡು ಮನವುಕ್ಕಿ
ಅಯ್ಯಯ್ಯ ಶಿವನೆ ವಾನರದಿಂದ ಕಡೆಯಾದೆ
ನಯ್ಯಯ್ಯ ಭವನೆ ಈ ನರಕದೊಳಗಾನಾದೆ         ೧೯೦

ನಾಗನಾಥನೆಯನಾಥರನಾಥ ಬಾರಯ್ಯ
ಆಗಮನಿಗಮ ನಿಲುಕದಾಧಾರ ಬಾರಯ್ಯ
ಅರುಪಿ ಕಾಣಿಸಿಕೊಳ್ಳದಾದ ಗರುವಿಕೆ ಇರವು
ಮರೆಮಾಡಿಕೊಂಡಿರ್ಪುದಾವ ಗುರುತನದಿರವು
ಕರೆಯೆ ಕಾಣಿಸದಿರಲು ಕಳ್ತಲೆಯದಾಗಿಯಿದೆ
ಪರಮೇಶ ನಿನ್ನ ಕಾಣ[ದಿ]ರೆ ಭಯವಾಗಿಯಿದೆ
ಎನೆ ಕೇಳ್ದು ತಾನಳುವ ನೆವದಿಂದೆ ದನಿಮಾಡೆ
ಘನಮಹಿಮ ಶಿಶುತನದ ನಟನೆಯಿಂ ಧ್ವನಿಮಾಡೆ
ಆಲಿಸುತೆ ಕೇಳುತ್ತೆ ಪರಿದಳಾ ಅಳುವೆಡೆಗೆ
ಬಾಲತನಮಂ ಮೆರೆವ ಸೂತ್ರಧಾರಕನೆಡೆಗೆ ೨೦೦

ಮುದದಿ ಕಂಡಳು ಬಾಲಶಶಿಧರನ ಕಂಡಂತೆ
ಸದುಭಕ್ತನಾಗಿರ್ದು ಪರಶಿವನ ಕಂಡಂತೆ
ಬರ್ದುಕಿದೆಂ ಕಣ್ಣ ಪುಣ್ಯಂ ಮುಂದೆ ಇದೆ ಎನುತೆ
ಬರ್ದುಕಿದೆಂ ಎನ್ನ ಮನದಾನಂದ ಇದೆ ಎನುತೆ
ಇಲ್ಲಿರಿಸಿ ಹೋದರಾರಯ್ಯ ಚೆನ್ನನೆ ನಿನ್ನ
ಇಲ್ಲಿಗೇತಕೆ ಬಂದೆ ಎನ್ನ ಭಾಗ್ಯದ ಚಿಣ್ಣ
ಇಲ್ಲಿರಿಸಿಹೊದರಾರಯ್ಯೊ ಕಂದನೆ ನಿನ್ನ
ಬಲ್ಲ ಠಾವಲ್ಲ ಆರೂ ಇಲ್ಲ ಬಾ ನಿನ್ನ
ಕರಡಿಗಳು ಬಂದು ನಿನ್ನಂ ತಿನ್ನವೇ ಅಣ್ಣ
ಅರವರಿಸದಿಲ್ಲಿರಿಸಿ ಹೋದರಾರೈ ಅಣ್ಣ             ೨೧೦

ಆರಿರಿಸಿದವರೆಂದು ಅತ್ತಿತ್ತ ನೋಡುತುಂ
ಆರುವಂ ಕಾಣದೆ ಮನದಿ ನೊಂದು ಬಾಡುತುಂ
ಈತ ನಾನರಸುತಿಹ ಶಿವನೆ ತಾನಾಗದಿರ
ಈತನೇ ನಾಗೇಶ ಮಹಿಮ ತಾನಾಗದಿರ
ಈತ ನಾನರಸುತಿರ್ಪಾ ಹರನು ತಾನಕ್ಕು
ಈತನಾಜೆಡೆಯೆ ಕಿರುಜೆಡೆಯಾದವಕ್ಕಕ್ಕು
ಈತನರಳೆಲೆಯು ಮೃಗಧರನೆಂ[ದೆ] ತಾನಕ್ಕು
ಈತನ ಕೊರಲಕಪ್ಪು ಹುಲಿಯುಗುರು ತಾನಕ್ಕು
ಈತನಾ ಮಾಗಾಯಿ ನಾಗಾಭರಣಮಕ್ಕು
ಈತನಡವಿಯೊಳಿರ್ಪನೆಂದೊಡದು ತಾನಕ್ಕು           ೨೨೦

ಎಂದು ಸಂತೋಷದಿಂ ಪೆರ್ಚುತ್ತಲಮ್ಮವ್ವೆ
ಚಂದ್ರಶೇಖರನ ಮುದ್ದಾಡಿಸುತಲಮ್ಮವ್ವೆ
ಎಂದೆತ್ತಿ ತಳ್ಕೈಸಿ ತನುವಾರೆ ಬಿಗಿದಪ್ಪಿ
ಕಂದ ಮೈ ಕಂದಿತೇ ಎನುತೆ ಬಸುರಲಿಯಪ್ಪಿ
ಎನ್ನ ನೆನಹಿಂಗೆ ಶಿಶುವಾಗಿ ಬಂದವನೆ ಬಾ
ನಿನ್ನ ನೆನಹಿಂಗೆನ್ನ ಬಯಸಿದುದನೀವೆ ಬಾ
ಬಾರಯ್ಯ ತಮ್ಮ ನಮ್ಮಯ ಮನೆಗೆ ಹೋದಪೆವು
ಧಾರುಣಿಗೆ ನಿನ್ನ ಹೊಸ ಶಿಶುತನವ ಬೀರುವೆವು
ಎನುತೆ ತೊಟ್ಟಿಲನೆತ್ತಿ ಹೊತ್ತುಕೊಳುತುಂ ಬರುತೆ
ಮನಸಿಜಾರಿಯ ಹೊತ್ತ ನಂದಿಯಂದದಿ ಬರುತೆ         ೨೩೦

ತನ್ನ ಮನೆಗೆಯ್ತಂದು ರನ್ನದಾರುತಿಯೆತ್ತಿ
ಪನ್ನಗಾಭರಣನಂ ಕರುಣವೆರಸುಂ ಮುತ್ತಿ
ಆಗ ಮಗನುಮ ನಾಗಾನಾಥಂ ಪೆಸರನಿಟ್ಟು
ನಾಗಾಜಿನಾಂಬರಂಗಂ ಭಸಿತಮುಮನಿಟ್ಟು
ಎಣ್ಣೆಯಂ ಪೂಸಿ ಮೆಯ್ಯೊತ್ತಿ ಮಜ್ಜನಕೆರೆದು
ಬೆಣ್ಣೆಯುಮನಿಕ್ಕಿ ಕಣ್ಣಿಂಗೆಯಂಜನಮೊರೆದು
ತೊಟ್ಟಿಲಲಿ ಮಲಗಿಸಿದಳಾ ಸೃಷ್ಟಿಕರ್ತನಂ
ಅಟ್ಟರಸಲೆಯ್ದಿ ಸಿಲುಕದ ವಿಮಲಚರಣನಂ
ಶರಣರಂ ಕರುಣದಿಂ ಪೊರೆವನಂ ಗರುವನಂ
ಹರಿಣನಂ ಕರದೊಳಗೆ ಧರಿಸಿಕೊಂಡಿರ್ಪನಂ          ೨೪೦

ಸಕಲವಂ ರಕ್ಷಿಸುವ ದಾತನಂ ರಕ್ಷಿಪಳು
ಅಖಿಲರಂ ರಕ್ಷಿಸುವ ನಿರ್ಮಾಯನಂ ರಕ್ಷಿಪಳು
ತೊಟ್ಟಿಲಲಿ ಪಟ್ಟಿರಿಸಿ ಜೋಗುಳಂ ಪಾಡುವಳು
ಕಟ್ಟಳ್ಕರಿಂದೆ ಸಂತೋಷದಿಂ ಪಾಡುವಳು
ನಿದ್ದೆ ಬಾರದೆ ಎನುತ್ತುಂ ತೂಗುತಿಹಳಾಕೆ
ಅರ್ಧಶಶಿಧರನ ಹಾಡುತ್ತ ಹರಸುತಲಾಕೆ
ಜೋ ಸುಕೃತಮಯನೆ ಸರ್ವೈಶ್ವರ್ಯಕಾಯ ಜೋ
ಜೋ ಸುಪ್ರಭಾಮಯನೆಯಾದಿಗಾಧಾರ ಜೋ
ಜೋ ಮಂಗಳಾಕಾರ ಮೂದೇವದಾತ ಜೋ
ಜೋ ಜಂಗಮಾಕಾರ ಶರಣರಾಧಾರ ಜೋ         ೨೫೦

ಜೋ ಜೋ ಮಹಾದೇವ ದೇವ ದೇವೇಶ ಜೋ
ಜೋ ಜೋ ಅನಾಥರಿಗೆ ದಾತಾರ ತಂದೆ ಜೋ
ಎಂಬ ಜೋಗುಳವನಾಲಿಸಿ ನಿದ್ರೆಯಂ ಮಾಡಿ
ಯಂಬಕತ್ರಯನು ನಾದಕ್ಕೆ ಮೆಚ್ಚಂ ಕೂಡಿ
ಮೆಚ್ಚಿದಂದದೆ ಕಾಲ ಕಯ್ಗಳಂ ಅಲುಗುತಿರೆ
ಬೆಚ್ಚುತಿವೆಯಂಗಂಗಂಳೆಂಬಂತೆ ತೋರುತಿರೆ
ಅಂಜಲೇಕಯ್ಯ ಮೃತ್ಯುಂಜಯನ ಪೆಸರಣ್ಣ
ಕಂಜಭವಶಿರಧರನ ಮುಕ್ಕಣ್ಣ ಪೆಸರಣ್ಣ
ಎನುತಲಮ್ಮವ್ವೆ ದೇಶಾಖಿರಾಗದೆ ಪಾಡಿ
ಘನಮಯನ ದೇಶಿ ಗುಜ್ಜರಿಗಳಿಂದಂ ಪಾಡಿ   ೨೬೦

ಗೌಳ ರಾಮಕ್ರಿ ಗುಂಡಕ್ರೀಗಳಿಂ ಪಾಡಿ
ಭೌಳಿ ಮಲಹರಿ ಗುಜ್ಜರೀ ರಾಗದಿಂ ಪಾಡಿ
ಆಹರಿ ವರಾಳಿಯಿಂ ನಾಗೇಶನಳುತಲಿರೆ
ಆಹ ರಕ್ಷೆಗಳಸಮಾಕ್ಷಂಗೆ ಕಟ್ಟುತಿರೆ
ಇಂತು ಶಿವಭ್ರಾಂತೆಯಾಗುತ್ತಲಿರಲಮ್ಮವ್ವೆ
ಚಿಂತಾಯಕನ ಶಿಶುತನಕೆ ಹಿಗ್ಗುತಮ್ಮವ್ವೆ
ಇಂತು ಶಿವನಂ ಪಾಡಿ ತಾಯಪ್ಪ ನಮ್ಮವ್ವೆ
ಕಂತುಹರನಂ ಕೆಳೆಗೊಳುತ್ತಿರಲ್ ನಮ್ಮವ್ವೆ
ಅಮ್ಮವ್ವೆಗಾರು ಸರಿಶಿವನೊಲವದಾರ್ಗುಂಟು
ಅಮ್ಮವ್ವೆ ಮಾಡಿದಾ ಪುಣ್ಯಫಲವಾರ್ಗುಂಟು    ೨೭೦

ಎರೆವ ಹಾಲದು ತಾನೆ ಕರುಣಾಮೃತವದಾಯ್ತು
ಹೆರೆನೊಸಲಿಗೆರೆದುದಕವಾನಂದ ಜಲವಾಯ್ತು
ಇಟ್ಟ ಭಸಿತದ ತಿಲಕ ಉರಿಗಣ್ಣೆ ತಂಪಾಯ್ತು
ದಿಟ್ಟಿಗೆ ನಿವಾಳಿಸಿದ ಬೇವೆ ಹೋಮವದಾಯ್ತು
ತೊಟ್ಟಿಲ ಕೆಳಗೆ ಇಟ್ಟ ಅಗ್ನಿ ಧೂಪವದಾಯ್ತು
ಮುಟ್ಟಿಸಿದ ದೀಪವೆ ನಿರಂಜನಾರತಿಯಾಯ್ತು
ಚಿಣ್ಣಂಗೆ ಮೊಲೆವಾಲೆ ಪುಣ್ಯದುಣಿಸಿಂಗಾಯ್ತು
ಚಿಣ್ಣ ಜೋ ಎಂಬುದೇ ನಾದದುನ್ನತಿಯಾಯ್ತು
ತೊಟ್ಟಿಲಲೆಸೆವ ನೇಣೆ ಶಿವದಾರ ತಾನಾಯ್ತು
ತೊಟ್ಟಿಲೇ ಶಿವಗೆ ತಾಂ ಸೆಜ್ಜಾಗೃಹಮದಾಯ್ತು         ೨೮೦

ಇಂತೊಪ್ಪುತಿರ್ದ ನಾಗೇಶ ಶಿಶುತನದಿಂದೆ
ಸಂತಸದೆ ಭಕ್ತವತ್ಸಲ ತನ್ನ ನಲವಿಂದೆ
ನೆನೆದನೊಂದನುವ ನೇಹವ ನೋಡಬೇಕೆಂದು
ಮನವಾರೆ ಈಕೆಯುಮ ತಾಂ ಮೆರೆಯಬೇಕೆಂದು
ಇರ್ದಿರ್ದು ಕಣ್ಣಾಲಿ ಮೇಲಕಂ ಸೇರುತಿರೆ
ಇರ್ದಿರ್ದು ಕೈಕಾಲುಗಳ ನೀಡಿ ನಡುಗುತಿರೆ
ಮೊಗ ಬೆವತು ಕಣ್ಗಳಿದು ಮೆಯ್ ತಣ್ಣನಾಗುತಿರೆ
ಮೊಗಸಿ ಬೆಮರುಂ ಅಳ್ಳೆ ಹೊಯ್ವುತ್ತ ನಿಗುರುತಿರೆ
ಕಾಲು ಕಯ್ಯುಂ ಬೆರತು ಮೇಲು ಬೆಮರಿಕ್ಕುತಿರೆ
ಮೇಲಕ್ಕೆ ನೆತ್ತಿವಾಯ್ ಕಣ್ಣುಮುಚ್ಚುತ್ತಮಿರೆ ೨೯೦

ಇರೆ ಕಂಡು ಅಮ್ಮವ್ವೆ ಏನು ಸೋ[ಜಿ]ಗವೆನುತೆ
ಹೊರೆಯಿಳಿದು ತನು ಜಜ್ಝರಿತವಾಗಿ ಕಣ್ಗೆಡುತೆ
ಏನಯ್ಯ ತಮ್ಮ ಇಂತೇಕಾಯಿತೆಲೆ ಮಗನೆ
ಏನಿರ್ದಿದೇನು ಸೋಜಿಗ ನಿನಗೆ ಎಲೆ ಮಗನೆ
ನೀನೆನ್ನ ಸಲಹಿದಪೆ ಎಂದಿರ್ದನೆಲೆ ಕಂದ
ನೀನೆನ್ನ ಹೊರೆದಪನು ಎನುತ ನಚ್ಚಿದೆ ಕಂದ
ಭೂತ ಸೋಂಕದು ಭೂತಪತಿಯಪ್ಪೆ ನೀಂ ಮುನ್ನ
ಭೂತಿಭೂಷಣನು ಭೂತಾತ್ಮಕನು ನೀಂ ಚೆನ್ನ
ಶೂಲಿಯ ಕಪಾಲಾಸ್ಥಿಮಾಲೆಯ ಪೆಸರುಮೆಂದು
ಕಾಲಾಂತಕನ ನಾಗಭೂಷಣನ ಪೆಸರೆಂದು          ೩೦೦

ನಿನ್ನ ಮರೆಯೊಳಗೆ ಇಂತು ಮಾಡುವರೆ ಮಗನಿಗಂ
ಪನ್ನಗಧರಾ ಇಂತು ಮಾಡುವರೆ ಕೂಸಿಗಂ
ತನು ಕರಗಿ ಮನ ಜರಿದು ಮಗನ ಮೊಗ ನೋಡುತುಂ
ಕನಲುತುಂ ಕಳಲುತುಂ ಕುಂದಿ ಹಂಬಲಿಸುತುಂ
ಏಳುತುಂ ತರತರಿಸಿ ಕಣ್ಬನಿಯೊಳಾಳುತುಂ
ಕಾಲಾರಿ ಇಂತು ಮಾಳ್ಪರೆ ಎಂದು ಕೊರಗುತುಂ
ನೀನೆಲ್ಲಿ ನಾನೆಲ್ಲಿ ಇನಿತವಸ್ಥೆಯದೆಲ್ಲಿ
ನೀನೆನಗೆ ಮಗನಾಗಿ ನೋವನಿಕ್ಕಿದೆಯಿಲ್ಲ
ಇರದಾದರೇಕೆ ನಿಮ್ಮವರುಗಳು ಅಡವಿಯಲಿ
ಉರವಣಿಸಿ ಹೋದರೀ ನೋವಿಗವರಾದಿಯಲಿ       ೩೧೦

[ಹೆ]ತ್ತಾರೆ ಎತ್ತಿ ಸಲಹದೆ ಹೋದಳಕಟಕಟ
ಹೆತ್ತರಿಂದಂ ಸಾಕಿದವರಿಗತಿ ನೋವಕಟ
ಕಂದ ನಿನ್ನಯ ನೋವ ನಾಂ ನೋಡಲಾರೆನೈ
ಮುಂದೆ ನಿನಗಿಂದ ಸಾವೆಂ ತಾಳಲಾರೆನೈ
ಈಳಿಗೆಯ ತಂದಿಕ್ಕಿಕೊಂಡಾಗಳೇ ಕೊರಲ್ಗೆ
ಬಾಲಕನ ನೋವ ನೋಡಲುಮಾರದೆಯೆ ಕೊರಲ್ಗೆ
ಅರಿದುಕೊಳೆ ಕಣ್ದೆರೆದು ನೋಡಿದಂ ಕರೆಕಂಠ
ಅರಿದನು ಪರಿಚ್ಛೇದಿಸುವ ಪರಿಯ ವಿಷಕಂಠ
ಘರಿಲೆಂಬ ದನಿಯೊಳಗೆ ಪುರಹರಂ ಮೆಚ್ಚುತುಂ
ಕರಿಚರ್ಮಧರನಾಗ ಗಿರಿಜೆಯಂ ನೆನೆವುತುಂ       ೩೨೦

ಹಿಡಿಯಯ್ಯ ಕರವನೆಂದೆನುತೆ ಶಿವೆ ಬೆರಗಾಗೆ
ಮೃಡನಿಷ್ಠೆಯಂ ನೋಡೆನುತ್ತೆ ನಸುನಗೆಯೋಗೆ
ತೊಟ್ಟಿಲೇ ವೃಷಭವಾಹನಮಾಗಿಯೊಪ್ಪಿರಲು
ಕಟ್ಟಿರ್ದ ದಾರಗಳ್ ವೇದನುತಿ ಎಸೆದಿರಲು
ಕಿರಿಯ ಶಶಿ ಮೆರೆವ ಸುರುಚಿರಗಂಗೆಯೊಪ್ಪುತಿರೆ
ತುರುಗಿದೈಮೊಗ ಫಣಿಯೆ ಕುಂಡಲಗಳೊಪ್ಪುತಿರೆ
ನೊಸಲ ಕಣ್ ನಸುನಗೆಯ ಸುಲಿಪಲ್ಲು ಬೆಳಗುತಿರೆ
ವಿಷಕಂಠ ರುಂಡಮಾಲಾಭರಣಮೊಪ್ಪುತಿರೆ
ಎರಡು ಭುಜದೊಳಗೆಂಟು ಹಸ್ತಗಳ್ ಮೂಡುತಿರೆ
ಉರುತರದ ತೇಜಃಪ್ರಕಾಶ ಕೂಡುತ್ತಮಿರೆ             ೩೩೦

ಪೊದೆದ ಗಜಚರ್ಮ ಪುಲಿದೊವಲಿಂದಲೊಪ್ಪಿರಲು
ಮದನಾಂಗಭಸ್ಮಲೇಪನಕಾಯನೊಪ್ಪಿರಲು
ಎಡದ ಕಡೆಯಣ ಪಾರ್ವತಿಯು ನೋಡಿ ಹೆಚ್ಚುತಿರೆ
ನುಡಿದನೀಶ್ವರ ತಾಯಿಗಂ ಮೋಹ ಮಚ್ಚುತಿರೆ
ಇಂತಪ್ಪ ಹಿತವರುಗಳೆನಗುಂಟು ದೇವಿಯರೆ
ಇಂತಪ್ಪ ತಾಯಿಯೆನಗೆಲ್ಲುಂಟು ದೇವಿಯರೆ
ಎನುತಲ[ಮ್ಮವ್ವೆಯಂ] ಶಿರವ ಪಿಡಿದೆತ್ತುತಿರೆ
ಅನುಪಮಂ ಅಭಯಕರದಿಂದೆ ಸಂತೈಸುತಿರೆ
ಕಂದೆರೆದು ನೋಡಿದಳು ಅಘಹರನನಮ್ಮವ್ವೆ
ಇಂದುಧರನಂ ನೋಡಿ ಕಂಡಳಾಗಮ್ಮವ್ವೆ       ೩೪೦

ಮೆಚ್ಚಿದೆಂ ಬೇಡಿಕೋ ಎನ್ನ ತಾಯೇ ಎನಲು
ಸಚ್ಚರಿತ ಸುಕುಮಾರ ಸುಖಿಯಾಗಿ ಇರು ಎನಲು
ಹೆಚ್ಚಿದಂ ಹಿಗ್ಗಿದಂ ಗಣಕುಲಂಗಳ ಕರೆದು
ಸಚ್ಚರಿತರೆಲ್ಲರುಂ ಬಂದರಾಗಳು ಪರಿದು
ಸಕಲ ದೇವಾಧಿದೇವರ್ಕಳುಘೆಯೆನುತೆ
ಸಕಲ ಮುನಿಗಳು ದೇವರಾಯ ಭಾಪೆಂದೆನುತೆ
ಸಕಲ ಸುರರುಗಳಪ್ರತಿಮನೆ ಜಯ ಜಯ ಎನುತೆ
ಸಕಲ ಗಣವೆಲ್ಲ ತ್ರಾಹಿ ತ್ರಾಹಿ ಎಂದೆನುತೆ
ನೋಡು ನಂದೀಶ ಇಂತಪ್ಪ ಹಿತವೆನುರುಂಟೆ
ನೋಡು ಎನಗಾಗಿ ಹರಣವನಿತ್ತರಿಂತುಂಟೆ             ೩೫೦

ಬೇಡಿಕೊ ಎನಲೆನಗೆ ಹರಕೆಯಿತ್ತವರುಂಟೆ
ಎಂದೆನಲು ಎನ್ನವನು ಸುಖಿಯಾಗಿರೆಂದವರುಂಟೆ
ಎಂದೆನಲು ಗಣನಿಕರವತಿಶಯಂಬಡುತಿರಲು
ಎಂದುವರಿಯದ ಪರಿಯಿದೆಂದು ಹರುಷದೊಳಿರಲು
ಹರಿಯಜಪುರಂದರರು ಜಯ ಜಯ ಎನುತ್ತಿರಲು
ಕರಗಳಂ ಮುಗಿದು ಗಣನಾಯಕರು ನಿಂದಿರಲು
ಬಂದುದೊಂದಳ್ತಿಯ ವಿಮಾನವಾನಂದದಿಂ
ಚಂದದಿಂದಮ್ಮವ್ವೆಯಂ ಇರಿಸಿ ನೇಹದಿಂ
ನಡೆದುದಾ ಪುಷ್ಪಕಂ ಧವಳಗಿರಿ ಮಂದಿರಕೆ
ಪೊಡೆದವುಂ ಭೇರಿ ಶಂಖದ ನಾದವೆನಿತಕ್ಕೆ         ೩೬೦

ಕೈಲಾಸಗಿರಿಯಲ್ಲಿ ಸಂಭ್ರಮದಿ ಗುಡಿಗಟ್ಟಿ
ಶೈಲಜಾಲಿಂಗನಾಲಿಂಗನೊಲುಮೆಯ ಮುಟ್ಟಿ
ಗಜಮುಖಗೆ ಷಣ್ಮುಖಗೆ ತೋರಿ ಕೊಂಡಾಡುತುಂ
ವಿಜಯಕಲಿ ವೀರಭದ್ರಂಗಲ್ಲಿ ತೋರುತುಂ
ನಮ್ಮ ತಂದೆಯ ಹಡೆದ ತಾಯವ್ವ ಎನುತಿರಲ್
ನಮ್ಮಮ್ಮಗಂ ಅತ್ತೆ ನಿಮ್ಮಮ್ಮನೆನುತಿರಲ್
ಅತ್ತೆಯೆಂದಂಜುತುಂ ಗಿರಿಜೆ ಹೆರಸಾರುತಿರೆ
ಹತ್ತಿರಿರ್ದಮ್ಮವ್ವೆ ತಾಯೆ ಬಾ ಎನುತಿಲಿರೆ
ನಿನ್ನ ತೊತ್ತಿನ ತೊತ್ತುವಾನೆನಿತರವಳಮ್ಮ
ನಿನ್ನ ಕರುಣೆಯ ಕೃಪೆಯದಾರ್ಗುಂಟೆ ಜಗದಮ್ಮ            ೩೭೦

ಎಂದು ಪಾರ್ವತಿಯರ್ಗೆ ಕೈಮುಗಿದು ಅಮ್ಮವ್ವೆ
ನಿಂದು ಸೈಗೆಡೆದಿರಲ್ಕೆತ್ತಿದಳು ಎಮ್ಮವೈ
ರುದ್ರಕನ್ನಿಕೆಯರೊಳಗೊಲ್ದಿರಿಸಿ ಹರ್ಷದಿಂ
ರುದ್ರಕನ್ನಿಕೆಯರೊಳಗಧಿಕತರ ಸುರಸದಿಂ
ಕಾರಿಕಾಲಮ್ಮೆ ವೈಜವ್ವೆಯೊತ್ತಿನೊಳಿರಿಸಿ
ಸಾರೆ ಮಂಗವ್ವೆ ಸುಗ್ಗಲದೇವಿಯರೊಳಿರಿಸಿ
ಎಸೆದನಾ ಹೇಮಗಿರಿಯರಸ ಸಮ್ಮಾನದಿಂ
ಶಶಿಧರಂ ಕೈಲಾಸಪುರದೊಳಾನಂದದಿಂ
ಎಸೆವ ಪಂಪಾಪತಿ ಮತಂಗಗಿರಿ ಮಧ್ಯದಿಂ
ಎಸೆವಳುನ್ಮಿಸಿದ [ಮು]ನ್ಮುಖತೀರ್ಥ ತೀರದಿಂ           ೩೮೦

ರಜತಗಿರಿ ಸಿಂಹಾಸನಾರೂಢನೊಪ್ಪಿದಂ
ಭಜಿಯಿಸುವ ಭಕ್ತರಾನಂದಮನೊಪ್ಪಿದಂ
ಅಭಯಕರಶುಭಚರಿತ ವಿಭವನಿಂತೊಪ್ಪಿದಂ
\ಭುವನಾಧಾರ ಲೋಕೈಕನಿಂತೊಪ್ಪಿದಂ
ಇಂಪೆಸೆವ ಸಂಪದದ ಪರಮನಿಂತೊಪ್ಪಿದಂ
ಪಂಪಾಂಬಿಕೆಯ ಮನೋವಾಸನಿಂತೊಪ್ಪಿದಂ
ಅನುಪಮಾನಂದಮಯ ತೇಜನಿಂತೊಪ್ಪಿದಂ
ಘನಮಹಿಮ ಹಂಪೆಯ ವಿರೂಪಾಕ್ಷನೊಪ್ಪಿದಂ          ೩೮೮

ಅಮ್ಮವ್ವೆಯ ನಿಜಭಕ್ತಿಗೆ
ನಮ್ಮಯ್ಯಂ ಮೆಚ್ಚಿ ಮೆರೆದ ಕಥನವನೊರೆದಾಂ |
ದಮ್ಮಯ್ಯ ಸಲುಹುಗೆನ್ನಂ
ಸುಮ್ಮಾನದಿಂ ದೇವ ಹಂಪೆಯ ವಿರೂಪಾಕ್ಷಾ ||