ಸ್ಥಲ

ಹರಪೂಜಾಸ್ತೋಮಮೋ ಧೂರ್ಜಟಿಯ ಪರಮಭಕ್ತೈಂಗನಾ ಮೂರ್ತಿಯೋ ಶಂ
ಕರಸಮ್ಯಜ್ಞಾನವಲ್ಲೀ ಕುಸುಮವಿಸರಮೋ ಸರ್ವಸೌಂದರ್ಯರೂಪೋ
ವರವೈರಾಗ್ಯಪ್ರದೀಪಾಂಕುರಮೊ ಬಗೆಯೆನಲ್ಪೂಜೆಯಾನಂದದಿಂ ಸಾ
ದರದಿಂದೊಪ್ಪಿರ್ದಳಾಹಾ ಉಡುತಡಿಯ ಮಹಾದೇವಿಯಾಶ್ಚರ್ಯದಿಂದಂ ||

ಇಂತು ಚೆನ್ನಮಲ್ಲಿಕಾರ್ಜುನನ ಪೂಜಾರಸಪಯೋಧಿಯೊಳುದ್ಭವಿಸಿ ಬೆಳೆವ ಚಂದ್ರಕಳೆ ಯಂತೆ ಮೆರೆವುತಿಪ್ಪುಡುತಡಿಯ ಮಹಾದೇವಿಯರು ಗುರುಕರುಣಸ್ಮರಣೆ ಸಹಿತ ಇಂದು ಧರಂಗೆ ವಂದನಂ ಗೆಯ್ದು, ಸಾತ್ವಿಕರಸಂ ಸರ್ವಾಂಗದೊಳ್ತೀವಿ ನಿಂದಿರ್ದು, ಕೈಮುಗಿದತ್ಯ ಧಿಕನಿತ್ಯನೇಮಸಂಪನ್ನೆಯಾಗಿ, ಸತ್ಯಪ್ರಸಾದ ಸ್ವೀಕಾರ ನಿಮಿತ್ತಂ ಬಿನ್ನೈಸಿ ಬೀಳ್ಕೊಂಡು ತಿರುಗಿ ಬಪ್ಪಾಗಳು,

ಕಟ್ಟಿದಿರ ರಾಜಾಂಗಣದೊಳು ರುದ್ರಾಕ್ಷಿಯ ಬನಂ ಬಳಸಿನಿಂದಂತೆ, ಚಂದ್ರಮಂಡಲದ ಬೀಡುಬಿಟ್ಟಂತೆ, ಬೆಳಗಿನ ಬಳಗವೊಬ್ಬುಳಿಸಿದಂತೆ, ಪುಣ್ಯದ ಮೊತ್ತಮೊತ್ತರಿಸಿದಂತೆ, ಭಾಗ್ಯದ ಬೆಳೆ ಫಲವಾದಂತೆ, ಸಾಮರ್ಥ್ಯಂ ಸಂದಣಿಸಿದಂತೆ, ಮುಕ್ತಿಯ ಬಲಂ ನೆಲಸಿದಂತೆ ತನ್ನ ಬರವಂ ಬಯಿಸಿ ಮೂರ್ತಿಗೊಂಡ ಮಹಾಮಹೇಶ್ವರರ ತಿಂತಿಣಿಯಂ ಕಂಡು ಸಂತೈಸಲರಿ ದೆನಿಪ ಹರುಷದಿಂ ಹಾರಯಿಸಿ ಪುಳಕದಿಂ ಪೂರಯಿಸಿ ಉರ್ಬಿ ಕೊರ್ಬಿ ಬಿಬ್ಬನೆ ಬಿರಿದು ಶರ್ವನ ಕರುಣಮಂ ಪಡೆದು ಸರ್ವಾಂಗಪ್ರಣತೆಯಾಗಿ, ಮೃಡಭಕ್ತರ್ಗೆ ಕುಡಿತೆವೊಂಗಳಿ ನಾರಾಧಿಸಿ ತಣಿವನಿತ್ತು ಕರುಣಮಂ ಪೊತ್ತು ಕಿಂಕರತೆಯಿಂದವರಾಜ್ಞೆಯಂ ಪೊತ್ತಾರೋಗಣೆಗೆ ನಡೆತಂದೆಡೆಮಾಡಿದೆಡೆಯೊಳಿಕ್ಕಿದ ಪಟ್ಟಗದ್ದುಗೆಯನಳ್ಕರಿಂದವಷ್ಟಂಭಿಸ ಲೊಡಂ, ಬಾಸಣಿಸಿ ಬಂದ ಮಲ್ಲಿಕಾರ್ಜುನನ ಪ್ರಸಾದಾಮೃತಕ್ಕೆ ಪೊಡಮಟ್ಟು, ಸವಿಗಳಂ ಸಾಗಿಸದೆ ಷಡುರಸಾಯ ನಮಂ ಬಡಿಸದೆ, ಇನಿದು ಮೃದುವಂ ಬಯಸಿ ಸೋಂಕದೆ, ಚೆಲುವಂ ಚಮತ್ಕರಿಸದೆ, ಕಂಪನಿಂಪುಗೆಯ್ಯದೆ, ಸವಿದನಿಯನಾಲಿಸದೆ ಪ್ರಸಾದಮಂ ಪಾತ್ರೆಯೊಳು ಭಂಡಾರಿಸುವಂತೆ ಏಕನಿಷ್ಠೆಯಿಂ ಭಯಭಕ್ತಿಯಿಂ ಕೈಕೊಂಡು ಹಸ್ತಪ್ರಕ್ಷಾಲನಂಗೆಯ್ದು ಕೈಘಟ್ಟಿಯನಾದರಿಸಿ ತಾಂಬೂಲಮನಾಂತು ಸತ್ಯಶರಣರ ಮೊತ್ತದ ನಡುವೆ ಬಿತ್ತರಂಬಡೆಯೆ ಕುಳ್ಳಿರ್ದು, ಬಳ್ಳಿವರಿವ ಗೋಷ್ಠಿಗಡರ್ಪಾಗಿ, ಭಕ್ತಿಯ ಬೀಜಂಗಳಂತಿರ್ದ ಪುರಾತನರ ಗೀತಂಗಳಂ ಚಿತ್ತಭೂಮಿಯೊಳ್ಬಿತ್ತಿ ಆನಂದಾಶ್ರುಗಳನೆರೆದು ಪುಳಕದ ಗೊಬ್ಬರಮನಿಕ್ಕಿ ಭಕ್ತಿ ಜ್ಞಾನವೆಂಬ ಶಶಿರವಿಗಳಿಂದ ಬಳೆಯಿಸಿ ಪ್ರಸಂಗಕುಸುಮಮನಲರ್ಚಿಸಿ ಪರಿಣಾಮಫಲಮನೆಯ್ದಿ ಗೀತ [ಕಲ್ಪ]ವೃಕ್ಷಫಳರಸಮಂ ಸವಿಸವಿದಾಗಳಾಗಳಿನ ಶಿವಾನುಭಾವಕ್ಕೆ ನವಗೀತಮಂ ಪಾಡಿ, ಶರಣರಂ ನೋಡಿ ತುಷ್ಟಿಯಂ ನೀಡಿ ನಿಷ್ಟೆಯಂ ಕೂಡಿ ಸಂತೋಷಮಂ ಮಾಡಿ ಭಕ್ತಿಯಂ ಬೇಡಿ ಸುಖರಸದೊಳ್ಮೂಡಿ ಲೀಲೆಮಿಕ್ಕಾಡಿ ಭಕ್ತಿ ರಸದೊಳದ್ದು ಶಿವಜ್ಞಾನದೊಳೆಳ್ದು ವೈರಾಗ್ಯಮಂ ತಾಳ್ದು ಮಾಯೆಯಂ ತೂಳ್ದು ಪಾಪಮಂ ಪೋಳ್ದು ಜನನಮಂ ಸೀಳ್ದು ದುರಾಸೆಯಂ ಪೂಳ್ದು ನಿತ್ಯಸುಖದೊಳ್ಬಾಳ್ದು ನಿಶ್ಚಿಂತ ನಿವಾಸ ನಿರತಿಶಯ ಪರಮ ಗೋಷ್ಠಿಸಂತುಷ್ಟಚಿತ್ತೆಯಾಗಿ ಮಹದೇವಿಯಕ್ಕನಿಪ್ಪಲ್ಲಿ,

ಶೈವಸುಖಪ್ರಸಂಗಕ್ಕೆ ಕಂಟಕಂ ಬಪ್ಪಂತೆ ಕೌಶಿಕರಾಜನ ವಿಳಾಸಿನಿಯರ್ ಬರೆ, ಮಹದೇವಿ ಯರ ಮನದನುರಾಗವಿಳಿವಂತೆ ಪ್ರಭಾಕರಂ ಪಶ್ಚಿಮವಾರ್ಧಿಯೊಳಿಳಿಯೆ, ಮನದುಮ್ಮಳಂ ಕವಿವಂತೆ ತಮಂ ಕವಿಯೆ, ಶರಣರಂ ಪಿಂಗಲಾರದಂಗಲಾಚಿ ಸಂಸಾರಕ್ಕೆ ಸುರುಳ್ದು ಕಾಮಕ್ಕೆ ಕೆರಳ್ದು ಅಲ್ಪ ಸುಖಕ್ಕೆ ತೆರಳ್ದು ಮನವಲ್ಲದ ಮನದೊಳೆಂತಕ್ಕೆ ಮಹೇಶ್ವರರಂ ಮಹಮನೆಗೆ ಬಿಜಯಂಗೆಯ್ಯವೇಳ್ದು, ಬಿನ್ನಪಂಗೆಯ್ದು, ಕರ್ರನೆ ಕಂದಿ ಸುರ್ರನೆ ಸುಯ್ದು ಸುಮ್ಮಾನವುಡುಗಿ ನಡೆವುತ್ತಯ್ಯೋ ಶಿವನೆ ಉಳಿವ ಕರೆವ ನೇಹವುಂಟೆ? ಸಂಸಾರಕ್ಕಂ ನಿಮ್ಮಲ್ಲಿಗೆಡೆಯಾಡುವ ಭಕ್ತಿಯುಂಟೆ? ಏನಯ್ಯ ಶಿವನೆ, ಏನಂ ಪೇಳ್ವೆನೀ ಲಜ್ಜೆಯ ಮಾತನೆಂದು ಚೆನ್ನಮಲ್ಲಿಕಾರ್ಜು ನಂಗೆ ಮೊರೆಯಿಟ್ಟು ಮುಳಿದು ಗೀತಮಂ ಪಾಡುತ್ತೆ ಭಂಡಾರದ ಮನೆಯಲ್ಲಿಗೆ ಬಂದಾ ಭರಣಮಂ ತೆಗೆದು ಬಿಸುಟ್ಟು ಮೈಲಿಗೆಯನುಟ್ಟು ದುಮ್ಮಾನಮಂ ತೊಟ್ಟು ನಿರ್ವೇದಮಂ ಮುಂದಿಟ್ಟು ಸಿಂಗರಕ್ಕೆ ಸಲ್ಲದೆ ತಾಂಬೂಲಮನೊಲ್ಲದೆ ಪರಿಮಳದೊಳು ನಿಲ್ಲದೆ ಕೈಗೊಟ್ಟು ಬರ್ಪ ಕೆಳದಿಯರ ಮೇಲೆ ಕರಪಲ್ಲವನಿಟ್ಟು ಮೆಲ್ಲಮೆಲ್ಲನೆ ನಡೆತಪ್ಪಾಗಳು, ಸೆಜ್ಜೆಯ ಮನೆಯೊಳಾಸೆಗೆಯ್ವುತ್ತಿಪ್ಪ ಕೌಶಿಕರಾಜಂ ಹಾವುಗೆಯ ದನಿಗೆ ಭಾವರಸಂ ತಳವೇರೆ ನೆಲನುಗ್ಘ ಡಣೆಗೆ ನಲಿವು ಬಲವೇರೆ, ನಡೆತಂದು ಮಹಾದೇವಿಯರು ಸಿರಿಮಂಚದೊಳು ಮೆಯ್ಯನೀಡಾಡೆ ಮಾಸಿದ ರೂಪು ಮನೋಹರಮಾಗೆ ಅವಯವದ ಚೆಲುವಾಭರಣವನೇಳಿಸೆ ಕಾಯಮರೀಚಿ ದುಕೂಲಮಂ ಮರೆಯಿಸೆ ಸಹಜಾಮೋದವನುಲೇಪನವನಿಳಿಕೆಯ್ಯೆ ನಿಜಶ್ವಾಸಂ ವೀಳಯ ಮನುಲ್ಲಂಘಿಸೆ ನೂಂಕುವಂಗಸೋಂಕು ಆಲಿಂಗನ ಸುಖಮಂ ನೂರ್ಮಡಿಸೆ ಸೆ ಸ್ವಭಾವ ಸರಸಾಂಗಂ ಸುರತಾಮೃತಾಬ್ಧಿಯಂಸೂಸೆಪರುಷದ ಪುತ್ಥಳಿಯ ಮುನಿಸಿದ ಸೋಂಕು ಕರ್ಬೊನ್ನ ಪ್ರತಿಮೆಗೆ ವರ್ಣೋತ್ಕರ್ಷವೆಂಬಂತೆ ಮಹದೇವಿಯರುದಾಸೀನಮೆ ಕೌಶಿಕರಾಜಂಗೆ ಕಾಮಸಾಮ್ರಾಜ್ಯಮಾಗಿರೆ, ಮಹಾಭಕ್ತೆ ಬೆಳಗಪ್ಪುದಂ ಬಯಸುತ್ತಿರೆ ಕೌಶಿಕಂ ಬಯಸದಿರೆ ಅರಸನೊಡತಣ ವಿರೋಧದನುಭವಂ ಕನಸಿನ ಕೂಟದಂತಾಗೆ ಪಾರ್ವತಿದೇವಿಯರ ಶಾಪದ ನುಭವಮಂ ಶರೀರಕ್ಕಾದ ದುಃಖಮಂ ಸಾಕ್ಷಿಯಾಗಿ ನೋಳ್ಪಂತೆ ವಿಷಮಸಂಯೋಗದೊಳಿಪ್ಪಾ ಗಳಾ ಮಹಾದೇವಿಯರ ಶಿವಜ್ಞಾನಭಾನು ಉದಯಿಪಂತೆ ಸೂರ್ಯೋದಯಮಾಗೆ, ಕೌಶಿಕಂ ಕಂಗೆಟ್ಟು ಮುಂಗಾಣದೆ ಬೆರಗಾಗಿ ನಿಲೆ, ಮಹಾದೇವಿಯರೆಳ್ದು ನಡೆತಂದು ಮುಖಪ್ರಕ್ಷಾಲನಂ ಮಾಡಿ ಭಸಿತಮನಿಟ್ಟಾಭರಣಮಂ ತೊಟ್ಟು ನಿತ್ಯನೇಮ ಸಂಪನ್ನೆಯಾಗಿ ಶಿವಭಕ್ತರೊಳವಿರಳ ಗೋಷ್ಠಿಯಿಂ ಪಲಕೆಲವು ದಿನಮೀ ತೆರದೊಳಿಪ್ಪಲ್ಲಿ,

ಒಂದು ದಿನವರಸನೊಡತಣ ಸುರತ ಶ್ರಾಂತಿಯಿಂ ಮಹದೇವಿಯರ್ಬಳಲ್ದು ಮರೆ ದೊರಗಿರೆ ಪಲಂಬರ್ಮಾಹೇಶ್ವರರ್ದೂರ ದೇಶಾಂತರದಿಂದ ಬಳಲ್ದು ಬಂದು ಪುರಮಂ ಪೊಕ್ಕರಮನೆಯ ಬಾಗಿಲೊಳು ನಿಂದು ಪಡಿಯರಂಗೆ ಸೂಚಿಸಲವಂ ಬಂದರಸಂಗೆ ಬಿನ್ನೈಸೆ, ಭಕ್ತರ್ಭಕ್ತರೆಂದು ಕುಂದದೆ ಹೋದುದೊಂದುಂ ದಿನವಾದಡಂ ದೇವಿಯರು ಸುಖನಿದ್ರೆ ಯೊಳಿರ್ಕೆ ಪೋಗುಪೋಗು ಸಮಯವಿಲ್ಲ ಸಮಯವಿಲ್ಲೆಂದು ಬಂದ ಪಡಿಯರನಂ ಕೌಶಿಕಂ ಗಜರಿ ಗರ್ಜಿಸಿ ನುಡಿಯೆ, ತೊಟ್ಟನೆ ನಿದ್ರೆಕೆಟ್ಟೆದ್ದು ಕೆಟ್ಟೆಂ ಕೆಟ್ಟೆನಾರನೆಂದಪೈ? ಶಿವಭಕ್ತರನೆ? ಬೆಂದೆಂ ಬೆಂದೆಂ ಶಿವಶಿವಾ ಸುಡುಸುಡು ಕೆಟ್ಟ ಭವಿಯೆ, ಫಡಫಡ ಪಚ್ಚಪಸಿಯ ಪಾತಕನೆ, ನಿನ್ನ ಸಂಗದಿಂ ಭಕ್ತರ ನಿಂದೆಯಂ ಕೇಳ್ವಂತಾದುದಿನ್ನೇವೆನಿನ್ನೇವೆನೆನುತ್ತೇಳ್ವುದುಂ, ಮಹದೇವಿ ಯರ ಚರಣದೊಳ್ಕೌಶಿಕರಾಜಂ ಬೀಳ್ದೀ ಒಂದಪರಾಧಮಂ ಸೈರಿಸುವುದೆಂದು ದೈನ್ಯದಿಂ ನುಡಿಯೆ, ನಿನ್ನ ಮೂರು ತಪ್ಪಿನೊಳೊಂದು ತಪ್ಪು ಸಂದುದೇಳೇಳು ಮುನಿಸಿಲ್ಲೇಳೆನುತ್ತೆ, ವಿಳಾಸಿನಿಯರ ಕೈವಿಡಿದು ಗಳಗಳನೆ ನಡೆತಂದು ಪೊರಗೆ ನಿಂದಿರ್ದ ಮಾಹೇಶ್ವರಕೋಟಿಗೆ ಭಯಭಕ್ತಿಯಿಂ ಮೆಯ್ಯಿಕ್ಕಿ ನಿಂದು, ಕೈಯ್ಯಂ ಮುಗಿದು ಒಡಗೊಂಡು ಬಂದುಚ್ಚಾಸನತೊಳ್ಬಿ ಜಯಂಗೆಯ್ಸಿ ಪಾದಪ್ರಕ್ಷಾಲನದೊಡನೆ ಪಾದೋದಕ ಸಂಪನ್ನೆಯಾಗಿ ದೇವಾರ್ಚನೆಗೆಡೆ ಮಾಡಿಸಿ, ಬೇರೆ ಬೇರೆ  ಸಿಂಹಾಸನವಗ್ಘವಣಿದೀಪ ಗಂಧಾಕ್ಷತೆ ಹೊಸ ಪುಷ್ಪ ನವಧೂಪವಾರತಿ ನೈವೇದ್ಯ ತಾಂಬೂಲ ಮೊದಲಾದ ಶೈವಪರಿಕರಂಗಳಂ ನೀಡಿ, ತಾನೆ ಪರಿಚಯಂಗಳಂ ಮಾಡಿ, ಹರಭಕ್ತರ್ ಪರಕೆಗಳಂ ಕೊಟ್ಟು ಹರುಷದಿಂದಿಷ್ಟಲಿಂಗಕ್ಕಾರೋಗಣೆಯನಿತ್ತು, ಪ್ರಸಾದಮಂ ಹೊತ್ತು ಸತ್ಯಸಂತುಷ್ಟರಾಗಿ ಸುಖಮುಖದೊಳಿರೆ, ಕಂಡು ಕಂಡು ಹಿಗ್ಗಿ ಹೊರೆಯೇರಿ ಭಂಡಾರಿಗಳಂ ಕರೆದು ಮಹೇಶ್ವರಾರಾಧನೆಗೆ ಹತ್ತು ಸಾಸಿರ ಹೊನ್ನಂ ಕೊಡುವುದೆನಲವರ್ ಕೌಶಿಕರಾಜಂ ವೈಹಾಳಿಯೊಳಿರ್ದಪಂ ಬಂದಬಳಿಕ್ಕೆ ಬಿನ್ನಪಂಗೆಯ್ದಲ್ಲದೆ ಕುಡಲಮ್ಮೆವೆಂದು ನುಡಿಯಲಾ ಮಾತಿಂಗೆ ಕಟ್ಟಭಿಮಾನಿ ಕಂದಿ ಕುಂದಿ ಬಿಸುಸುಯ್ದು ತನ್ನ ಮೈಯೊಳಗಿರ್ಪ ವಜ್ರದ ಕಂಕಣಂ ಬಾಹುಪೂರಯಂ ನೀಲದ ಮುತ್ತಿನೋಲೆ ಮೊದಲಾದ ಸರ್ವಾಭರಣಂಗಳಂ ನೆಟ್ಟನೆ ತೆಗೆದು ನಿಷ್ಠೆಯಿ ಒಟ್ಟಯಿಸಿ ಮುಟ್ಟಿದ ಮನದ ಕಟ್ಟಕ್ಕರ ಭಕ್ತೆ ಭಕ್ತಕುಲಚಿಂತಾಮಣಿ ಶಿವಜ್ಞಾನಸಂಪನ್ನೆ ವೈರಾಗ್ಯನಿಧಿಯೆನಿಪ್ಪುಡುತಡಿಯ ಮಹಾದೇವಿ ಹೊಸ ಹೊಂಗಳಂ ಕೈ ಹಸವೋಡಲಾರಾಧಿಸಿ ಮನಂದಣಿಯೆ ಮನ್ನಿಸಿ ಕಣ್ತೀವಿ ನೋಡಿ ತನು ದಣಿಯಲೆರಗಿ ಹರಭಕ್ತರಂ ಸರಾಗದಿಂ ಕಳುಪಿ ಮರಳ್ದುಬಂದು, ಮಾಡಿತ್ತ ನೆರೆಯದೆ ಆರಾಧನೆಗೆ ಲವಲವಿಪ ಮನದ ಮೊನೆಯ ಮರುಕದನುತಾಪವೆತ್ತಿ ದೇವಾ, ಶಿವಲಾಂಛನವನೇರಿಸಿಕೊಂಡು ಮನೆಗೆ ಬಂದವರಂ ಕಡೆಗಣಿಸಿ ಎಂತು ನೋಡುತಿಪ್ಪೆಂ, ಅವರ್ಗೆ ಸತ್ಕಾರವಂ ಮಾಡಲಿಲ್ಲದಿರ್ದಡೆನ್ನನೀ ಧರೆಯ ಮೇಲಿರಿಸುವ ಕಾರಣವೇನಭವಾ, ನಿನ್ನವಳೆಂದೆನ್ನ ಮುದ್ದುತನವಂ ಸಲಿಸುವಡಿರಿಸು ವುದಲ್ಲಾ ಕೈಲಾಸಕ್ಕೆ ಕೊಂಡೊಯ್ವುದೆಂದು ಚೆನ್ನಮಲ್ಲಿಕಾರ್ಜುನಂಗೆ ಗೀತಮಂ ಪಾಡುತಿರ್ಪ ಸಮಯದೊಳು, ಕೌಶಿಕರಾಜಂ ವೈಹಾಳಿಯಿಂ ಬಂದಾ ವೃತ್ತಾಂತಮಂ ಕೇಳ್ದು, ಭಂಡಾರಿಗಳಂ ಜರೆದು ಬೀಯಗದ ಕೈಯನೊಪ್ಪಿಕೊಟ್ಟು ಹೊನ್ನರಾಸಿಗಳಂ ಮುಂದೆ ಸುರಿದು ಮುನ್ನಿನಿಂದಿ ಮ್ಮಡಿ ತೊಡಿಗೆಗಳನಿತ್ತು ಮುನಿಸಂ ತಿಳುಪಿ ಹೋಗಲೊಡಂ,

ಸತ್ಯಭಕ್ತೆ ಸಾಂತಚಿತ್ತೆಯಾಗಿ ಶಿವಲಿಂಗಾರ್ಚನೆಯಂ ಮಾಡಿ ಪ್ರಸಾದಸಂತುಷ್ಟೆಯಾಗಿ ಮಹದೇವಿಯರಿಂತು ಕೆಲವುದಿನಂ ಸಂತಸುಖದೊಳಿರ್ದೊಂದು ದಿವಸಂ ಶಿವಪೂಜೆಗೆಂದು ಸುಪ್ರಭಾತದೊಳೆಳ್ದು ನಿರ್ಮಳೀಕೃತಸರ್ವಾಂಗೆಯಾಗಿ ನವ್ಯಾಭರಣ ಭೂಷಿತೆಯಾಗಿ ದಿವ್ಯ ಚಂದನ ಕಸ್ತೂರಿ ಮೃಗಮದಾನುಲೇಪನಭರಿತ ಶರೀರೆಯಾಗಿ ನವೀನ ಕದಂಬಕುಸುಮ ಸೌರಭ್ಯಾಭರಣ ಸಮ್ಮೋಹನದಿಂ ಮೆಲ್ಲಮೆಲ್ಲನೆ ನಡೆತಂದು ಮಲ್ಲಿಕಾರ್ಜುನನರ್ಚನೆಗೆ ಸಲ್ಲೀಲೆಯಿಂ ಕುಳ್ಳಿರ್ದ ಸಮಯದೊಳು, ಅನಂಗನಂ ಸಾಂಗನಂ ಮಾಡಲೆಂದು ರತಿದೇವಿ ಶಿವನಂ ಪೂಜೆಗೆಯ್ದು ಬೇಡಿಕೊಳಲ್ಬಂದಳೊ, ಧರ್ಮರಾಜನಂ ರೂಹುಗೊಳಿಸಲೆಂದು ಛಾಯಾದೇವಿ ದೇವಾರ್ಚನೆಗೆ ನಿಂದಳೊ, ಭಾಳಲೋಚನದಿಂ ಕಾಮನನುರುಪಿತನರಿದಾತನಂ ಬಿಟ್ಟು ಶಿವನಂ ಪೊರ್ದಿ ಬರ್ದುಂಕುವೆವೆಂದು ಪಂಚಬಾಣಂಗಳ್ಬಂದು ಹೆಣ್ಣಂದಮಂ ಕೈಕೊಂಡು ಲಿಂಗಾರ್ಚನೆಗೆ ನಿಂದವೊ, ವಲ್ಲಭನಪ್ಪ ಶಶಿಯಂ ಬೇಡಿ ರೋಹಿಣೀದೇವಿ ಶಿವನ ಮುಂದೆ ನಿಂದಳೊ ಎಂಬ ಸಂಶಯಮನಿಂಬುಗೊಂಡಿರ್ದ ಮಹದೇವಿಯರಿರವಂ ನೋಳ್ಪ ನೆಂದು ಕೌಶಿಕರಾಜಂ ಬಂದು ಕಳವಿನಿಂ ನಿಂದುನೋಡಿ ನೋಡಿ ನಿಲಲಾರದೆ ರೂಪಿಂಗೆ ಕೌತುಕಂಗೊಂಡು ಜವ್ವನಕ್ಕೆ ಜಾಣಳಿದು ನೋಟಕ್ಕಳುಕಿ ಸುಕುಮಾರತೆಯೊಳ್ಸಿಲುಕಿ ಸಿಂಗರ ದೊಳ್ಬೀಳ್ದು ಸೊಬಗಿನೊಳ್ಪೊರಳ್ದು ವಿಲಾಸದೊಳ್ಬಳಸಿ ಆಲಿಂಗನಕ್ಕೆ ಲವಲವಿಸಿ ಮನವುರ ವಣಿಸಿ ಬುದ್ದಿಯರಿತು ಅಹಂಕಾರವುಣ್ಮಿ ಚಿತ್ತಂ ಚಿಗುರ್ತು, ಕೆತ್ತುವಧರದಿಂ ಕಂಪಿಸುವ ಕೈಗಳಿಂ ತವಕಿಸುವ ತೋಳ್ಗಳಿಂ ಲಂಘಿಸುವಂಗದಿಂ ನಟ್ಟ ದಿಟ್ಟಿಯಿಂ ಪರಿತಂದು ತನ್ನ ಪುಣ್ಯದ ಫಲವನಪ್ಪುವಂತಾಲಿಂಗಿಸಲೊಡಂ, ಶಿವಭಾವಂ ಜಗುಳ್ದು ಅಚಲಿತವರೆಗೊರತೆಯಾಗಿ ಭಕ್ತಿಯೊಳಸೋರ್ದು ಭರಂ ತಪ್ಪಿ ಮನಂ ಮೊಟ್ಟೆಯಾಗಿ ಸಿಡಿಮಿಡಿಗೊಂಡು ತಿರುಗಿ ನೋಡಿ ಕೌಶಿಕನ ಮೊಗಮಂ ಕಂಡಲಗಿನ ಮೊನೆಯಂ ಕಂಡಂತಳ್ಕಿ ಬಳ್ಕಿ ಕುಕ್ಕುಳಂಗುದಿದೇಳ್ದು ಬೀಸಿ ಬಿದಿರ್ದು, ಎಲೆಲೆ ಭವಿಯೆ, ಶಿವಾರ್ಚನೆಯ ಸಮಯದೊಳು ಮುಟ್ಟುವರೆ, ಚಿಃ ಚಿ, ಪೊಲ್ಲದುದನೆಗೆಯ್ದೆ, ಶಿವ ಪೂಜಾಸುಖಮನರಿಯದ ಮಾನಸಗುರಿಯೆ, ಮಾಣ್ಮಾಣಿಂದಿನೊಳೆ ರಡುಂ ತಪ್ಪು ಪೋದವದಕ್ಕೇನೆನುತ್ತಾವಾತನಂ ಕಳುಪಿ ಕಡು ನೊಂದು ಮತ್ತೊಮ್ಮೆ ಪರಿಮ ಳೋದಕದಿಂ ಮಿಂದು ನವ್ಯದೂಕೂಲಮನುಟ್ಟು ಭಸಿತಮನಲಂಕರಿಸಿ ರುದ್ರಾಕ್ಷಗಳಂ ಸಿಂಗರಿಸಿ ಲಿಂಗಾರ್ಚನೆಯಂ ಮಾಡಿ ದುಮ್ಮಾನದಿಂ ಪ್ರಸಾದಮಂ ಕೈಕೊಂಡು ತಾಂಬೂಲ ಮನಾದರಿಸಿ ಕೌಶಿಕನಿಚ್ಛೆಗೆ ಜಾರಿ ದೇಹಮಂ ಮಾರಿ ಭವಿಯ ಸಂಗಕ್ಕೆ ತಾರಿ ಚಿತ್ತಮಂ ತೂರಿ ಸಲುಗೆಯಂ ಮೀರಿ ನಿಷ್ಠೆಯನೇರಿ ಮಲ್ಲಿಕಾರ್ಜುನಂಗೆ ದೂರಿ ಕರುಣಮಂ ತೋರಿ ಲಲ್ಲೆಯಂ ಬೀರಿ ಪಲಕಾಲಂ ಸಾರಿ ಲಿಂಗಪೂಜೆಯ ಸುಖಮಂ ಭವಿಯ ಕೂಟದ                   ದುಃಖವನನುಭವಿಸುತ್ತಿರ್ಪಲ್ಲಿ,

ಮತ್ತೊಂದು ದೆವಸಂ ಕೌಶಿಕರಾಜನುಂ ತಾನುಂ ಕಾಮಾನುರಾಗರಸದೊಳಾಳ್ದು ಸುರತಾಂ ತ್ಯಸಮಯಶ್ರಾಂತಿಭರಜನಿತ ಸುಖಸ್ವೇದಮಯ ಶರೀರೆಯಾಗಿರಲಲ್ಲಿಗೆ ನೀಲ್ದ ಕೆಂಜೆಡೆಗಳ ತಾಳ್ದ ಕರ್ಣಕುಂಡಲಂಗಳ ಕಕ್ಷದೊಳ್ಮೆರೆದ ಶಿವಲಿಂಗದ ಸರ್ವಾಂಗ ಭಸಿತೋದ್ಧೂಳನದ ಉಟ್ಟ ಧವಳಾಂಬರದ ತೊಟ್ಟ ರುದ್ರಾಕ್ಷೆಯ ಮೆಟ್ಟಿದ ಹಾವುಗೆಯ ಮುಂದಣ ಮಾಹೇಶ್ವರರ ಹಿಂದಣ ಶಿಷ್ಯವರ್ಗದ ವಿಳಾಸಂ ಪುಣ್ಯಮಯ ಲಾವಣ್ಯಮಂ ಪಸರಿಸೆ ಮಹದೇವಿಯರಾ ರಾಧ್ಯದೇವರ್ಭೋಂಕನೆ ಬರೆ, ಘಳಿಲನೆ ಕಂಡು ದುಕೂಲಮಂ ಮರೆದು ಭಯರಸಮನು ಟ್ಟಿರ್ದಪರಿಯೊಳೇಳ್ದು ಮಂಚದಿಂದುರವಣಿಸುತ್ತಿಳಿದು ಗುರುವಿನ ಶ್ರೀಪಾದಕ್ಕೆ ಹುಟ್ಟಿದ ಮಾರ್ಗದಿಂದಷ್ಟಾಂಗಂಪ್ರಣತೆಯಾದ ಮಹದೇವಿಯಂ ಕಂಡು ಕಣ್ಮುಚ್ಚಿಕೊಂಡು, ಮಗಳೆ ದುಕೂಲಮಂ ಬಾಸಣಿಸಿಕೊಳೆಂದು ಬೇಗದಿಂ ಶ್ರೀಗುರು ಬೆಸಸೆ, ತಗ್ಗಿ ಕಗ್ಗಿ ಸಿಗ್ಗಾಗಿ ಬಳಿಕ್ಕರಿದು ಸಂವರಿಸಿಕೊಳುತ್ತಂ, ಮಂಚದ ಮೇಲಣ ಸಪುರ ವಸ್ತ್ರಮಂ ತೆಗೆಯಲೆಂದು ಕೈನೀಡೆ, ಕೌಶಿಕಂ ಕಂಡು ಕಡು ನಾಚಿ, ತೆಗೆ ತೆಗೆ ನಿನಗೇನತ್ಯಂತ ಭಕ್ತೆಗೆ ಮೀರಿದ ವಿರಕ್ತಗೆ ಸೀರೆ ಏಕೆಂದು ಕೈಯ ದುಕೂಲಮಂ ಸೆಳೆಯಲು, ಹಾ ಮೂರುಂ ತಪ್ಪು ತೀರ್ದುದೆನ್ನಿಚ್ಚೆ ಸಾರ್ದುದು, ಭವಿಸಂಗವೊಳಸೋರ್ದುದು, ವಿರಕ್ತಿ ನಿಮಿರ್ದುದು ಭಕ್ತಿ ಬೆಳೆದುದು ನಿಷ್ಠೆಯುಳಿದುದು ಬರ್ದುಂಕಿದೆಂ ಬರ್ದುಂಕಿದೆನೆನುತ್ತಾಶಾರಹಿತೆ ಕೇಶಾಂಬರಿಯಾಗಿ ತಿರುಗಿಬಂದು, ಧವಳಾರ ದೊಳಗಿರ್ದ ಚೆನ್ನಮಲ್ಲಿಕಾರ್ಜುನನಂ ಕರಸ್ಥಲದೊಳ್ಬಿ ಜಯಂಗೆಯ್ಸಿಕೊಂಡು ನಡೆತಂದು ತಂದೆತಾಯಿಗಳ್ಗೆ ಪೇಳ್ದು ಗುರುಚರಣಕ್ಕೆರಗಿ ತದನುಜ್ಞೆಯಂ ಪಡೆದು ಬೀಳ್ಕೊಂಡಾಭರಣಮಂ ಕಳೆದಭವಭಕ್ತರ್ಗಿತ್ತು ಅಶನಾದಾಸೆಯಂ ತೃಷೆಯಂ ಬೆಸನದ ಬೇಗೆಯಂ ವಿಷಯದ ವಿಹ್ವಳ ತೆಯಂ ತಾಪತ್ರಯದ ಕಲ್ಪನೆಗಳಂ ಗೆಲಿದೆನಿನ್ನೇನಿನ್ನೇನೆನ್ನಿಚ್ಛೆಯಾದುದು ಚನ್ನಮಲ್ಲಾ ಕಾರ್ಜುನಾ, ನಿನಗಂಜೆನಂಜೆನೆಂದು ಗೀತಮಂ ಪಾಡಿ ಸಪ್ತಾಂಗರಾಜ್ಯಮಂ ಕಾಲಲೊದೆದು ಪರಿಜನಮಂ ಲೆಕ್ಕಿಸದೆ ಪುರಜನಮಂ ಕೈಕೊಳ್ಳದೆ ಭೋಗಮಂ ಸಾಗಿಸದೆ ಆಸೆಯನುಲ್ಲಂಘಿಸಿ ಅಳಿಪನುಳುಪಿ ಭಕ್ತಿ ಜ್ಞಾನ ವೈರಾಗ್ಯ ಶೈವಸಾಮ್ರಾಜ್ಯಭಾರಮನಾಂತು ಸಹಜಭಕ್ತೆ ಸಮ್ಯಜ್ಞಾನಿ ಸತ್ಯಭಾಷಿಣಿ ಪರಮ ವೈರಾಗ್ಯನಿಧಿಯೆನಿಪ್ಪುಡುತಡಿಯ ಮಹಾದೇವಿ ಪುರಮಂ ಪೊರಮಟ್ಟು ಶ್ರೀ ಪರ್ವತಾಭಿಮುಖಿಯಾದಳಂತುಮಲ್ಲದೆಯುಂ,

 

ಸ್ಥಲ

ಒದೆದು ಸಮಸ್ತ ರಾಜ್ಯಸುಖಮಂ ಬಿಸುಟೊಲ್ಲದೆಯಲ್ಪ ಭೋಗಸಂ
ಪದವನೆ ನೂಂಕಿ ಸಂಸೃತಿಯ ದಂದುಗಮಂ ಬಿದಿರ್ದಾಸೆಯೆಂಬಿವಂ
ವಿದಳಿಸಿ ಕಾಮಮತ್ತಗಜಮಸ್ತಕದುರ್ಮದಮಂ ಸಡಿಲ್ಚಿಮಾ
ಣದೆ ಮಹದೇವಿಯಾಹ ಪೊರಮಟ್ಟಳನೂನ ವಿರಕ್ತಿ ಶಕ್ತಿಯಿಂ ||

ಅನುಪಮ ಮಲ್ಲಿಕಾರ್ಜುನನ ಭಕ್ತಿಯ ಭಾವಕಿ ಚೆನ್ನಮಲ್ಲಿಕಾ
ರ್ಜುನನ ಸದಾ ನಿಧಾನನಿಳಯಂ ಕರುಣಾಕರ ಚೆನ್ನಮಲ್ಲಿಕಾ
ರ್ಜುನನ ಸುಖಂ ಬರುತ್ತವೆಸೆದಳ್ಮಹದೇವಿ ಮನೋನುರಾಗದಿಂ
ದನುನಯದಿಂದೆ ಶ್ರೀಗಿರಿಗೆ ಬಪ್ಪ ಭರಂ ಹಿರಿದಾ ವಿರಕ್ತಿಯಿಂ ||

ಪೊರಮಟ್ಟಳುಡುತಡಿಯ ಪುರಮಂ ಮಹಾದೇವಿ
ನೆರೆ ಮನದ ಪಾವನದ ಘನ ವಿರಕ್ತಿಯನೋವಿ
ಒಡನೆ ಬರುತಿರ್ಪ ಪುರಜನಮಂ ಪರೀಕ್ಷಿಸದೆ
ನಡೆವ ಪರಿಚಾರಿಕೆಯರಕ್ಕೆಯಂ ಲೆಕ್ಕಿಸದೆ
ಒಟ್ಟಿ ಒರಲುವ ಮಾತೆ ಪಿತರಂ ವಿಚಾರಿಸದೆ
ಬಟ್ಟೆಯೊಳು ಕಾಲ್ಗಡ್ಡಬೀಳ್ದರಂ ಲಾಲಿಸದೆ
ಪುರದ ಪುಣ್ಯಂ ಹೆಣ್ಣುರೂಪಾಗಿ ಪೋಪಂತೆ
ಪುರದ ಹರಭಕ್ತಿ ಪರ್ವತಕೆಯ್ದಿ ನಡೆವಂತೆ
ಬರುತಿರ್ದಳತಿಭಕ್ತೆ ಉಡುತಡಿಯ ಮಹಾದೇವಿ
ಪರಮ ವೈರಾಗ್ಯರಸವೈದೆ ತನುವಂ ತೀವಿ      ೧೦

ನಿಷ್ಠೆ ಪಾದದ ರಕ್ಷೆಯಾಗುತಿರೆ ನಡೆವುತಂ
ಉಟ್ಟ ಕೇಶಾಂಬರಂ ದಟ್ಟಯಿಸೆ ಮೆರೆವುತಂ
ಎಡೆಗೊಂಡ ವೈರಾಗ್ಯವಲ್ಲಿ ಬೆಳುಗೊಡೆಯಾಗೆ
ನಡೆಯಿಸುವ ಸಂಬಳಂ ಮೃಡಭಕ್ತಿ ತಾನಾಗೆ
ಮಲ್ಲಿನಾಥಂ ಕರಸರೋಜಮಧ್ಯದೊಳೊಪ್ಪೆ
ಅಲ್ಲಿಯಂಗುಲಿಯ ಪಂಚಾವರಣದೊಳಗೊಪ್ಪೆ
ಬಂದು ಪರ್ವತಮೂಲಮಂ ಸಾರುತಿಪ್ಪಲ್ಲಿ
ಸಂದಣಿಪ ನಿಷ್ಠೆಯಿಂ ನಡೆದು ಬರುತಿಪ್ಪಲ್ಲಿ
ತಾಯಿ ಬಳಲ್ದವ್ವಯೆಂದೆನುತೆ ಮುಟ್ಟುವ ತೆರದೆ
ವಾಯು ತೀಡುತ್ತಮಿರೆ ಕಂಪು ತಂಪಿನ ಭರದೆ        ೨೦

ಮಲ್ಲಿನಾಥಂ ಕರುಣಿಪಂ ಬನ್ನಿಮೆಂಬಂತೆ
ಪಲ್ಲವಂಗಳ್ ಪವನನಿಂದವಲುಗಲ್ಕಿಂತೆ
ಬಗೆದುದಂ ಶಿವನೀವನೆಂದು ಕರೆವಂದದಿಂ
ಖಗಸಂಕುಳಂ ಕರೆವುತಿರ್ದವಾನಂದದಿಂ
ಬರೆವರೆ ಶಿವಾಲಯಂಗಳ ವೃಷಭಕೇತನಂ
ಹರಭಕ್ತೆಯತ್ತಲೊಲವರವಾಗೆ ನೂತನಂ
ಪೂಗಿಡು ಮಹಾದೇವಿಯರ ಪೂಜೆಗೆಂದೆಳಿಸಿ
ರಾಗದಿಂ ಮೊಗವಲರ್ದು ಹಿಗ್ಗಿ ಹೆಚ್ಚಿರೆ ಬಯಸಿ
ಹಳ್ಳದೊಳು ಹೊದರಿನೊಳು ಬೆತ್ತದೊಳು ಬಿದಿರ್ಗಳೊಳು
ಕೊಳ್ಳದೊಳು ಕೊಳಗಳೊಳು ಕೆರೆಗಳೊಳು ತೊರೆಗಳೊಳು            ೩೦

ಬೆಟ್ಟದೊಳು ಘಟ್ಟದೊಳು ಸರುವಿನೊಳು ದರುವಿನೊಳು
ಇಟ್ಟಣಿಪ ಹುಲಿಹುಲ್ಲೆಯಿಮ್ಮಾವು ಮರಗಳೊಳು
ಕೂಡೆ ಪೆರ್ಬುಲಿ ಕಡವು ಕರಡಿ ಸಾರಂಗದೊಳು
ಕಾಡಾನೆ ಕಾಳ್ಕೋಣನೆನಿಪ ಮೃಗವೃಂದದೊಳು
ಮಲ್ಲಿನಾಥನನಲ್ಲಿ ನೆನೆವುತಂ ನಡೆವುತಂ
ಮಲ್ಲಿನಾಥನ ನಿಷ್ಠೆಯಿಂದೆ ಸುಖವಡೆವುತಂ
ಬಂದು ಪರ್ವತಮಲ್ಲಿನಾಥನಂ ನೆರೆ ಕಂಡು
ನಿಂದು ಪೊಡವಟ್ಟು ನಯದಿಂದೆ ನೇಹಂಗೊಂಡು
ಗೀತಮಂ ಪಾಡುತಂ ಪೊರಮಟ್ಟು ನಡೆತಂದು
ನೂತನ ಶ್ರೀಶೈಲದೊಳಗೆ ಚಿತ್ತಂ ಸಂದು   ೪೦

ಎಲ್ಲಿ ಲತೆವನೆಗಳುಂಟಲ್ಲಲ್ಲಿ ಮಹದೇವಿ
ಸಲ್ಲಲಿತ ಪುಷ್ಪವಾಟದೊಳಲ್ಲಿ ಮಹದೇವಿ
ಕಲ್ಲ ಗವಿಗಳ ನಡುವೆ ಮಲ್ಲಿನಾಥನ ಪೂಜೆ
ಎಲ್ಲಿ ತಿಳಿಗೊಳವಲ್ಲಿ ಮಲ್ಲಿನಾಥನ ಪೂಜೆ
ಬಾಲ ಸಹಕಾರದೊಳು ನೀಲಕಂಠನ ಪೂಜೆ
ಲೀಲೆಯಿಂ ಹಿಮಶಿಲಾವಲಿಯವಿಲಸಿತ ಪೂಜೆ
ಒದವಿ ಹಂಸಗಳಿಪ್ಪ ನದಿಯ ತಡಿಯೊಳು ಪೂಜೆ
ವಿದಳಿತಾಂಬುಜಯುತ ತಟಾಕ ತೀರದ ಪೂಜೆ
ನಿರ್ಜರ ನಿವಾತ ನಿಃಸಂಗ ನಿರ್ಮಳ ಪೂಜೆ
ನಿರ್ಜಿತಾನಂಗ ಮಂಗಳಮಯ ಮಹಾಪೂಜೆ          ೫೦

ಯಾಗಿ ಪರ್ವತದೊಳಿರೆ ತಂದೆ ತಾಯ್ಗಳು ಬಂದು
ರಾಗವಳಿದಲ್ಲಿ ಮಗಳಂ ಕಂಡು ಮಿಗೆ ನೊಂದು
ಏನವ್ವ ಮಹದೇವಿ ಇಂತಿಪ್ಪರೇ ಮಗಳೆ
ನಾನಾ ನಿರೋಧದೊಳು ಸಂದಿಪ್ಪರೇ ಮಗಳೆ
ಶಶಿಸೋಂಕೆ ಕಂದುವಂಗಂ ಬಿಸಿಲಿಗಾಂತುದೆ
ಉಸುರನಾನದ ತನುವು ಬಿರುಗಾಳಿಗಾಂತುದೆ
ಮೃದುಪದಂ ಕಲುನೆಲಕೆ ಸೇರಿದ್ದವೇ ಮಗಳೆ
ಒದವಿ ಪಲ ಉಪವಾಸವಳವಟ್ಟವೇ ಮಗಳೆ
ಎಂದು ಮಾತಂ ಕೇಳ್ದು ಮಹದೇವಿ ನಸುನಗುತೆ
ನೊಂದು ನುಡಿದಳು ಪರಮ ವೈರಾಗ್ಯದೊಳು ಮಿಗುತೆ        ೬೦

ಶಿವಭಕ್ತರಾಗಿಯುಂ ನೀವಿಂತು ನುಡಿವರೆ
ಶಿವಪೂಜೆಯೇಕಾಂತಮಂ ಬಿಡಿಸ ಬಗೆವರೆ
ಭವಿಯ ಸಂಗಂ ತಪ್ಪಿ ಭವನಸಂಗವನಪ್ಪಿ
ಶಿವಭಕ್ತಿರಸಭರಿತ ಶರನಿಧಿಯ ನಡುವೊಪ್ಪಿ
ಇರ್ಪುದಂ ಕೆಡಿಸುವರು ಮಾತೆಪಿತರೆನಗಲ್ಲ
ಸರ್ಪಭೂಷಣನ ಭಕ್ತಾಳಿಗಿದು ನುಡಿಯಲ್ಲ
ಎನೆ ಮಾತೆ ಪಿತರಲ್ಲಿ ನೆರೆ ಕೌತುಕಂಬಟ್ಟು
ತನುಜೆಗೆಂದೆರಡುಂ ಸಹಸ್ರಪೊನ್ನಂ ಕೊಟ್ಟು
ಹೊದರತ್ತಲು ತಂದೆ ತಾ[ಯಿಗ]ಳು ಸೋಜಿಗಂ
ಆದುದುಡುತಡಿಯೊಳಿತ್ತಲು ಕಾಮನೂಳಿಗಂ           ೭೦

ಕೌಶಿಕನನಯ್ದುಂ ಶರಂಗಳಿಂದೆಸುತಮಿರೆ
ಆಸೆ ಮಹದೇವಿಯತ್ತಲು ಮಿಕ್ಕು ಪರಿವುತಿರೆ
ಮಹದೇವಿಯೊಲಿವಂದಮಂ ಕೌಶಿಕಂ ನೆನೆದು
ಬಹುವಿಧದ ವೇಷಮಂ ತನುವಿನೊಳು ನೆರೆ ತಳೆದು
ಭಸಿತಮಂ ರುದ್ರಾಕ್ಷೆಯಂ ಜೆಡೆಯನಳವಡಿಸಿ
ಎಸೆವ ಹೊರವೇಷಮಂ ತನುವಿನೊಳು ಸಿಂಗರಿಸಿ
ತನ್ನಂದದಿಂ ಭಕ್ತರಂ ನಾಲ್ವರಂ ಕೂಡಿ
ಉನ್ನತ ಸ್ಮರತಾಪದಗ್ಧಚಿತ್ತಂ ನೋಡಿ
ನಡೆತಂದನುರವಣಿಸಿ ಪರ್ವತದ ದೆಸೆಗಾಗಿ
ಮೃಡವೇಷಮಂ ಹೊರಗೆ ಧರಿಯಿಸುತೆ ಮರುಳಾಗಿ      ೮೦

ಬಂದು ಶಿಖರವನೇರಿ ಮಹದೇವಿಯಂ ಕಂಡು
ಇಂದುಮುಖಿಯಂ ಸುಖದ ಸುಮ್ಮಾನಿಯಂ ಕಂಡು
ಭಕ್ತನಾದೆಂ ಮಹಾದೇವಿ ಕರುಣಿಪುದೆನಗೆ
ಯುಕ್ತಿಯಿಲ್ಲದ ಕಿಂಕರಂಗೆ ಕರುಣಿಪುದೆನಗೆ
ಸುಖದ ಸುಗ್ಗಿಯ ಸದಾವರದೆ ಕರುಣಿಪುದೆನಗೆ
ಮುಖದ ಮುನಿಸಿನ ತಿಳಿವಿನಬಳೆ ಕರುಣಿಪುದೆನೆಗೆ
ಎಂದು ಕಾಲ್ವಿಡಿದಿರ್ದ ಕೌಶಿಕನನೀಕ್ಷಿಸುತೆ
ನೊಂದು ಕಡು ನೊಂದು ನೆರೆನೊಂದಳಲಿ ನಸುನಗುತೆ
ಬಿಟ್ಟಪ್ಪೆನೆಂದಡಂ ಬಿಡದು ನಿನ್ನಯ ಮಾಯೆ
ಒಟ್ಟಯಿಸಿ ಬಂದಡೊಡವಂದಪ್ಪುದೀ ಮಾಯೆ ೯೦

ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ
ರಾಗದಿಂ ಸವಣಂಗೆ ಕಂತಿಯಾಯಿತು ಮಾಯೆ
ಭಗವಂಗೆ ಮಾಸಕ[ಬ್ಬೆ]ಯ ಚೋಹವಾಯ್ತಯ್ಯ
ಬಗೆವರಾರವರವರ್ಗವರಂದವಾಯ್ತಯ್ಯ
ಗಿರಿಯನೆರಿದಡಿರದೆ ಗಿರಿಯನೇರತು ಮಾಯೆ
ಪರಿದಡವಿಯಂ ಪೊಕ್ಕಡೊಡನೆ ಪೊಕ್ಕುದು ಮಾಯೆ
ಬೆನ್ನಕೈಯಂ ಬಿಡದು ಭಾಪು ಸಂಸಾರವೆ
ಎನ್ನ ನಂಬಿಸಿತು ಮಝ ಪೂತು ಸಂಸಾರವೆ
ಕರುಣಾಕರಾ ನಿನ್ನ ಮಾಯೆಗಂಜುವೆನಯ್ಯ
ಪರಮೇಶ್ವರಾ ಮಲ್ಲಿನಾಥ ಕರುಣಿಪುದಯ್ಯ          ೧೦೦

ಇನ್ನೇವೆನಿನ್ನೇವೆನಯ್ಯೋ ಮಹಾದೇವ
ಪನ್ನಗಾಭರಣ ಕರುಣಿಸುವುದೆಲೆ ಮಹಾದೇವ
ಎಂದು ವೈರಾಗ್ಯದಿಂದಂ ಗೀತವಂ ಪಾಡಿ
ಮುಂದಿರ್ದ ಕಾಮುಕನನತಿ ರೋಷದಿಂ ನೋಡಿ
ಎಲೆಲೆ ಕೌಶಿಕ ಹೋಗು ನೀನೇಕೆ ನಾನೇಕೆ
ನೆಲನರಿಯೆ ನಿನ್ನೊಡನೆ ಪುದುವಾಳ್ವುದೆನಗೇಕೆ
ತಮವೆತ್ತ ಬೆಳಗೆತ್ತ ಶಿಖಿಯೆತ್ತ ತಂಪೆತ್ತ
ಭ್ರಮೆಯೆತ್ತ ತಿಳಿವೆತ್ತ ಬಿಸಿಲೆತ್ತ ಶಶಿಯೆತ್ತ
ನೀನೆತ್ತ ನಾನೆತ್ತ ಪೋಗು ಪೋಗೆಲೆ ಮರುಳೆ
ಏನೆಂದು ಬಂದೆ ಎಲೆ ತರಳ ನಿನಗಾಂ ಪುರುಳೆ       ೧೧೦

ನಿನ್ನ ವೇಷಂ ನಿನಗೆ ಎನ್ನ ವೇಷವದೆನೆಗೆ
ನಿನ್ನ ಪವಣೇ ಘನ ಘನಂ ಭಕ್ತರೂರ್ವರೆಗೆ
ನಿನ್ನ ಪುಣ್ಯದ ಬೆಳಸು ನಿನಗಿಲ್ಲ ಕೌಶಿಕನೆ
ಎನ್ನ ಭಾಗ್ಯದ ಪಲವನೀಶ್ವರಂ ತಪ್ಪುವನೆ
ಎನ್ನಂತೆ ಬಾಳ್ವುದೆನಗಿಂತಿದೇ ಘನವೆನಗೆ
ಇನ್ನೇಕೆ ನಿನ್ನ ಸಂಗಂ ಬೇಡ ಬೇಡೆನಗೆ
ಎಂದಿಂತು ಬಿಡ ನುಡಿಯೆ ಕೌಶಿಕಂ ಮನನೊಂದು
ಬಂದು ತನ್ನೊಳಗೊಂದನಾಳೋಚಿಸಿದನಂದು
ಶಿವನ ಭಕ್ತರ್ಗೆ ಹೊನ್ನಿತ್ತು ನೋಡುವೆನೆಂದು
ಅವರ ಮಾತಂ ಮೀರಳಿದನೆ ಮಾಡುವೆನೆಂದು   ೧೨೦

ಕಲುಮಠದ ರಾಜಗುರುಗಳಿಗೆ ಹೊನ್ನೀವುತಂ
ಹುಲುಮಠದ ಮುಖ್ಯರ್ಗೆ ಲಂಚಮುಮನೀವುತಂ
ಇರ್ದ ಮಾಹೇಶ್ವರರ್ಗೆಯ್ದೆ ಹೊನ್ನೀವುತಂ
ಸಾರ್ದ ಶರಣರ್ಗಿತ್ತು ಕುಟಿಲವಂ ಮಾಡುತಂ
ಒಂದು ದಿನವೆಲ್ಲ ಕೃತಸಂಕೇತರಾಗುತಂ
ಬಂದು ನೆರೆದರ್ಭಕ್ತರೊಂದೆಡೆಯೊಳೊಗ್ಗುತಂ
ಮಕುಟದ ಮಹಾಮಹಿಮರಲ್ಲಿ ಕೆಲಬರು ಬೇರೆ
ವಿಕಸಿತಾನನರಾಗಿ ಮೆರೆದ ಶರಣರು ಬೇರೆ
ಕಕ್ಷದ ಕರಸ್ಥಲ ಶಿರಸ್ಥಲದವರು ಬೇರೆ
ವಕ್ಷಸ್ಥಲಂ ಮುಖಸ್ಥಲದ ಶರಣರು ಬೇರೆ   ೧೩೦

ಸರ್ವಗಣ ಸಂತಾನವೊಬ್ಬುಳಿಸಿ ಕುಳ್ಳಿರಲು
ಪರ್ವತದ ಮಧ್ಯದೊಳಗುರ್ವಿಸುತೆ ಕುಳ್ಳಿರಲು
ಬಿನ್ನೈಸಿದಂ ಕೌಶಿಕಂ ನಿಂದು ಮೈಯಿಕ್ಕಿ
ತನ್ನ ಲಜ್ಜೆಯನರಿಯದಾತುರಂ ಮೈಯಿಕ್ಕಿ
ದೇವ ಉಡುತಡಿಯಲಿರ್ಪೆಂ ಪೆಸರ್ಕೌಶಿಕಂ
ದೇವ ಮಹದೇವಿ ಮಮಜೀವ ಜೀವಾತ್ಮಕಂ
ಭವಿ ಎಂದು ಬಿಟ್ಟಳಾಂ ಭಕ್ತನಾದೆಂ ದೇವ
ಶಿವಭಕ್ತೆಯಂ ಕೂಡಿಕೊಡುವುದೆನ್ನೊಳು ದೇವ
ಎನೆ ಮಹೇಶ್ವರರೆಲ್ಲೊಡಂಬಟ್ಟು ಕೇಳುತಂ
ತನತನಗೆ ತಪ್ಪಿಲ್ಲ ನಿನ್ನೊಳೆಂದುಬ್ಬುತಂ ೧೪೦

ಕರೆ ಮಹಾದೇವಿಯನೆನುತ್ತೊಬ್ಬನಂ ಕಳುಪೆ
ಶರಣರನುಮತಿಗೊಟ್ಟು ಕರೆಯೆಂದು ನೆರೆ ಕಳುಪೆ
ಬರುತಿರ್ದಳಿತ್ತಲತ್ತಲು ನೆನೆದು ಮಹದೇವಿ
ಪರಮ ವೈರಾಗ್ಯನಿಧಿ ಶಿವಭಕ್ತಿ ಸದ್ಭಾವಿ
ಮುನ್ನವೇಯರಿದು ಸಾಹಿತ್ಯ ದಿವ್ಯಜ್ಞಾನಿ
ಉನ್ನತ ಶಿವಾರ್ಚನಾನಿರತೆ ಪರಮಧ್ಯಾನಿ
ಪರ್ವತದ ಮಲ್ಲಿನಾಥನ ಮುಂದೆ ಬಂದೊಂದು
ಶರ್ವಾಣಿಯಾಜ್ಞೆಯಿಂ ಶಕ್ತಿಯಂ ನೆರೆ ತಂದು
ಗಳಗಳನೆ ಮೇಲೊಂದು ನಿಳಯಮುಮನಳವಡಿಸಿ
ಪುಳಕಿಸುತೆ ಶಕ್ತಿಪ್ರತಿಷ್ಠೆಯನಲಂಕರಿಸಿ           ೧೫೦

ಆ ಪೀಠದೊಳು ನಿತ್ಯನಿಧಿ ಮಲ್ಲಿನಾಥನಂ
ಕಾಪಾಲಿಯಂ ಶೂಲಿಯಂ ಮಲ್ಲಿನಾಥನಂ
ಕಾಮದಹನಂ ವ್ರೋಕೇಶಿಯಂ ಭೀಮನಂ
ಸೋಮಧರನಂ ಸ್ವಾಮಿಯಂ ಸಾರ್ವಭೌಮನಂ
ಮಾಡಿತೆ ಮುಹೂರ್ತವೆಂಬಂತೆ ಬಿಜಯಂಗೈಸಿ
ನೋಡಿ ಘನಶಕ್ತಿಯೊಳು ಶಂಭುವಂ ಮೈಳೈಸಿ
ಕುಳ್ಳಿರ್ದಳಚಳೆ ನಿರ್ಮಳ ನಿಷ್ಕಳಾಯುಕ್ತೆ
ಕುಳ್ಳಿರ್ದಳಕಳಂಕಚರಿತೆ ಪರಮವಿರಕ್ತೆ
ಇರ್ದಳಾನಂದನಿಧಿ ಸುಖತರ ಸುಧಾವಾಣಿ
ಇರ್ದಳತ್ಯನುಪಮ ಸುಸಂಗಿ ಲಿಂಗಪ್ರಾಣಿ          ೧೬೦

ಇರೆ ಬಂದ ಭಕ್ತನಾ ಮಹದೇವಿಯಂ ಕಂಡು
ಹರನನಗಲದ ಭಕ್ತಿಭರತೆಯಿರವಂ ಕಂಡು
ಕರೆಯಲಮ್ಮದೆ ನೋಡಿ ಕಣ್ಮುಚ್ಚಿ ಪೊಡವಟ್ಟು
ತಿರುಗಿ ಬಂದಂ ಭಕ್ತರಗಚ್ಚರಿವಟ್ಟು
ಬಂದು ಬೆರಗಾಗಿ ಭರದಿಂದೆ ಬಿನ್ನೈಸಿದಂ
ಇಂದುಮುಖಿಯಿರವಿನಾ ನುಡಿಯ ಮೇಳೈಸಿದಂ
ಏನೆಂಬೆನಾ ಮಹಾದೇವಿಯ ಚರಿತ್ರಮಂ
ಈ ನೆಲದೊಳತ್ಯಧಿಕವೆನಿಸುವ ವಿಚಿತ್ರಮಂ
ಚೆನ್ನಮಲ್ಲಯ್ಯನಂ ಚೆನ್ನಪೀಠದೊಳಿಟ್ಟು
ತನ್ನಸುವನಾ ಲಿಂಗದಂಘ್ರಿಯೊಳಗಿರದಿಟ್ಟು  ೧೭೦

ಇರ್ದಪಳದಿಂತುವಾರ್ಗಂ ಚಿಂತಿಸಲ್ಕರಿದು
ಸಾರ್ದಳೆರಡಿಲ್ಲದಿರವಂ ಪುಟ್ಟಿಸಲ್ಕರಿದು
ನೋಡಬಾರದು ನುಡಿಯಿಸುವ ಮಾತದೆಲ್ಲಿಯದು
ಆಡಂಬರಂ ಕೊಳ್ಳದತ್ಯಧಿಕವಾದುದಿದು
ಅತಿ ನಿಬಿಡವತಿಸಾಂದ್ರವತಿ ಸುಖಂ ಲಿಂಗದೊಳು
ಅತಿಮಾತ್ರವತಿಸೂಕ್ಷ್ಮ ವತಿಭರಂ ಲಿಂಗದೊಳು
ಎನೆ ಕೇಳ್ದು ಶರಣರೆಲ್ಲಾ ಹಾಯೆನುತ್ತೆಳ್ದು
ತನತನಗೆ ಪರಿತಂದು ಪರಮಸುಖಮಂ ತಾಳ್ದು
ತೆಗೆದಪ್ಪಿಕೊಂಡು ಮಹದೇವಿಯಂ ಮುಂಡಾಡಿ
ಬಗೆವೆಚ್ಚಿ ಮುದದಿಂದವೆಲ್ಲರುಂ ಕೊಂಡಾಡಿ ೧೮೦

ಹೋಗು ಕೌಶಿಕರಾಜ ಹೋಗು ನಿನಗಳವಲ್ಲ
ರಾಗರಹಿತೆಯ ಚಿತ್ತವತಿ ಕೂರಿತಿಂಬಿಲ್ಲ
ಎಂದಾತನಂ ಕಳುಪಿ ಮಹದೇವಿಯಂ ನೋಡಿ
ಬಂದ ಗಣಸಂಕುಳಂ ಪರಕೆಯಂ ನೆರೆ ನೀಡಿ
ನಿನ್ನಂತೆ ಗುರುಕರುಣವಾರ್ಗುಂಟು ಮಹದೇವಿ
ನಿನ್ನಂತೆ ಭಯ ಭಕ್ತಿಯಿನ್ನುಂಟೆ ಮಹದೇವಿ
ಮಲ್ಲಿನಾಥನ ಪರಮ ಕೀರ್ತಿಲತೆ ನೀನವ್ವ
ಮಲ್ಲಿನಾಥನ ಸಕಳ ಸುಖಮೂರ್ತಿ ನೀನವ್ವ
ಎಲೆ ನಿತ್ಯಮುಕುತೆ ನಿತ್ಯ ಪ್ರಕಾಶಿತೆ ನೀನೆ
ಸಲೆ ಸಂದ ನಿರುಪಮಜ್ಞಾನ ಸಂಪದೆ ನೀನೆ  ೧೯೦

ಎಂದು ಕರುಣಿಸುವ ಗಣಸಂಕುಳಕ್ಕೆರಗುತಂ
ಬಂದ ಮಾಹೇಶ್ವರರನಳ್ಕರಿಂ ಕಳುಪುತಂ
ತನ್ನಯ ಪೊಗಳ್ಕೆಗಂತಂತು ಮಿಗೆ ನಾಚುತಂ
ಚೆನ್ನಮಲ್ಲಯ್ಯನತ್ತಲು ನೆನಹ ಸಾರ್ಚುತಂ
ಬಂದ ಕಿನ್ನರಬೊಮ್ಮಿತಂದೆಯಂ ಕಾಣುತಂ
ಅಂದಂದಿನುಚಿತಕ್ಕೆ ಗೀತಮಂ ಪಾಡುತಂ
ಪಲಕೆಲವು ದಿವಸವೀ ತೆರದಿ ಸುಖದಿಂದಿರ್ದು
ಚಲಿಸದಗಲದೆ ಮಿಸುಕದಲಸದೊಲವಿಂದಿರ್ದು
ನರಲೋಕದೊಳಗಿರವು ಬೇಡ ಸಾಲ್ಗಿನ್ನೆಂದು
ಗಿರಿಸುತೆಯ ಶಾಪವಾದುದು ತೀರಿತಿನ್ನೆಂದು ೨೦೦

ಕಲುಮಠದ ಹುಲುಮಠದ ಶಿವಮುಖ್ಯರಂ ಕರೆದು
ಒಲುಮೆಯಿಂ ಮಲ್ಲಿನಾಥನ ಮುಂದೆ ಭರವಿಡಿದು
ಚೆನ್ನಮಲ್ಲಯ್ಯಂಗೆ ಮಜ್ಜನಕೆ ಪೂಜನೆಗೆ
ಉನ್ನತಾರೋಗಣೆಗೆ ನವಧೂಪದಾರತಿಗೆ
ಬೇಡಿದನಿತುಂ ಹೊನ್ನನಿತ್ತು ವಿಸ್ತರಿಸುತಂ
ಬೇಡಿಕೊಂಡವರನೋರಂತೆ ಉಪಚರಿಸುತಂ
ಎಂದುವುಂ ಕುಂದದಂತಲ್ಲಿ ಸಮಗಟ್ಟುತಂ
ನಿಂದು ಪರ್ವತ ಮಲ್ಲಿನಾಥಂಗೆಯರಿಪುತಂ
ನಡಯಿಪುದು ಚೆನ್ನಮಲ್ಲಯ್ಯಂಗಿದೆಲ್ಲವಂ
ಮೃಡನಂ ಬಿಡೆಂ ಮಾಳ್ಪುದೀವೊಂದು ಸೊಲ್ಲುಮಂ            ೨೧೦

ಎನುತೆನುತೆ ಚೆನ್ನಮಲ್ಲಯ್ಯನಲ್ಲಿಗೆ ಬಂದು
ಮನವೊಸೆದು ಕೈಮುಗಿದು ಕಾರ್ಪಣ್ಯದೊಳು ನಿಂದು
ದೇವ ಕರುಣಿಪುದು ಕೈಲಾಸಕ್ಕೆ ಬಟ್ಟೆಯಂ
ದೇವ ಗಿರಿಜೆಯ ಚರಣಮಂ ಕಾಣ್ಬ ನಿಷ್ಠೆಯಂ
ಭವಿಯ ಸಂಗದ ತನುವನಿದನೊಲ್ಲೆನಿದನೊಲ್ಲೆ
ಅವಯವಂ ಭೀಭತ್ಸುವಿದನೊಲ್ಲೆನಾಂ ಬಲ್ಲೆ
ಎನಗೆ ನಿರ್ಮಳಕಾಯಮಂ ಕರುಣಿ ಕುರಣಿಪುದು
ಎನಗೆ ದಿವ್ಯಾವಯವಮಂ ದೇವ ಕರುಣಿಪುದು
ಎಂದು ಬಿನ್ನೈಸೆ ಬಂದುದು ವಿಮಾನಂ ಕೂಡೆ
ಇಂದು ಬಿಂಬದ ಬೆಳಗನೇಳಿಸುತ್ತಂ ಕೂಡೆ            ೨೨೦

ಒಡನೆ ಬಂದುರು ಗಣಾಧ್ಯಕ್ಷರಾನಂದದಿಂ

ನಡುವೆ ನಿಲುತಂ ಪರ್ವತಾಗ್ರದೊಳು ಛಂದದಿಂ
ಬಂದ ಪುಷ್ಪಕದ ನಡುವಣ ದಿವ್ಯದೇಹದೊಳು
ತಂದು ಮಹದೇವಿಯಂ ಪೊಗಿಸಿದರ್ಕಾಯದೊಳು
ಮುಂದಿರ್ದ ಕಾಯವದು ಮಾಯವಾಗುತ್ತಮಿರೆ
ಮುಂದಣ ಗಣೇಶ್ವರರು ನೋಡಿ ಬೆರಗಾಗುತಿರೆ
ಪುಷ್ಪವೃಷ್ಟಿಯ ನಡುವೆ ದೇವಗಣತತಿಯೊಳಗೆ
ಪುಷ್ಪಕಂ ನೆಗೆದುದಾಕಾಶ ದುಂದುಭಿಯೊಳೆಗೆ
ಪರ್ವತದ ಶಿವಭಕ್ತಕುಲವೊಲಿದು ನೋಡುತಿರೆ
ಪರ್ವಿದುದು ಗಗನತಳವಂ ಜಗಂ ಹೊಗಳುತಿರೆ         ೨೩೦

ಬಂದು ನಂದೀಶ್ವರನ ಬಾಗಿಲೊಳಗೊಲಿದಿಳಿದು
ಮುಂದೆ ಮೈಯಿಕ್ಕುತಂ ನಡೆತಂದಳುರೆನಲಿದು
ಪಾರ್ವತಿಯ ಮುಖಕಮಳವಿಮಳಾರ್ಕ ತೇಜಂಗೆ
ಪಾರ್ವತಿಯ ಭುಜಲತಾವೃತಕಲ್ಪ ಭೂಜಂಗೆ
ಗೌರೀಕಟಾಕ್ಷ ವರಕೌಮುದೀಭೂಷಂಗೆ
ಗೌರೀಕುಚಾಲಿಂಗನಾನಂದವೇಷಂಗೆ
ಗಿರಿಜಾಮನೋನಳಿನ ವನರಾಜಹಂಸಂಗೆ
ಗಿರಿಜಾವಚೋವರ್ಣಕರ್ಣಾವತಂಸಂಗೆ
ಎರಗಿದಳು ಮಹದೇವಿಯರ್ಧನಾರೀಶಂಗೆ
ತುರುಗಿದ ಶಿರೋಮಾಲೆಗಳ ಮಹಾವೇಷಂಗೆ    ೨೪೦

ಎರಗೆ ಕಂಡಭವನಾನಂದದಿಂದೇಳೆಂದು
ಕರೆಗೊರಲನತಿ ಕರುಣದಿಂದೆ ನೋಡುತ್ತಂದು
ಗಿರಿಜೆ ಬಲ್ಲಾ ನಮ್ಮರುದ್ರಕನ್ನಿಕೆಯೀಕೆ
ವರ ಗುಪ್ತಗಣನಾಥನಿಂದಿಳೆಗೆ ಪೋದಾಕೆ
ಹುಟ್ಟಿ ಶಿವಭಕ್ತರ್ಗೆ ಬೆಸಕೈದ ಕನ್ನೆಯಂ
ನಿಷ್ಠೆ ನೆಲೆಗೊಂಡ ನಿಜಭಕ್ತಿಯೊಳಭಿನ್ನೆಯಂ
ನಿನ್ನನುಜ್ಞೆಯನಿಂ[ತು] ಹೊತ್ತು ನಡೆದವರುಂಟೆ
ನಿನ್ನ ಶಾಪವನಿಳೆಯೊಳನುಭವಿಸಿದವರುಂಟೆ
ಪದವಿಯಂ ರಾಜ್ಯಮಂ ಬಿಸುಟು ಹೋದವರುಂಟೆ
ಅದಿರದೇ ಶ್ರೀಶೈಲದೊಳಗೆ ಪೊಕ್ಕವರುಂಟೆ       ೨೫೦

ಭವಿಯ ಸಂಗದ ಶರೀರವನೊಲ್ಲದವರುಂಟೆ
ನವ ದಿವ್ಯ ದೇಹದಿಂದೈತಂದರಿಂತುಂಟೆ
ಎಂದು ಕೊಂಡಾಡುತಂ ಮುನ್ನಿನಂದದೊಳಿರಿಸಿ
ಇಂದುಮುಖಿ ಮಹದೇವಿಯಂ ಕರುಣದಿಂದಿರಿಸಿ
ರುದ್ರಕನ್ನಿಕೆಯರೊಳು ಸಲಿಸಿ ಕರುಣಾಕರಂ
ಭದ್ರಗುಣಗಣಯುಕ್ತ ಶಶಿಕಳಾ ಶೇಖರಂ
ಶ್ರೀ ಮಹಾದೇವನಪ್ರತಿಮ ಗುರುವೊಪ್ಪಿದಂ
ಶ್ರೀ ಮಹಾಮಹಿಮನಾನಂದಮಯನೊಪ್ಪಿದಂ
ಆಕಾಶಗಂಗಾಂತರಾಕೇಶನೊಪ್ಪಿದಂ
ಲೋಕೈಕ ವಿಭವ ವಿಭುವಭವನಿಂತೊಪ್ಪಿದಂ ೨೬೦

ಮೃಗಧರ ತರಣಿ ಪವನಸಖ ನಯನನೊಪ್ಪಿದಂ
ಅಗಜೇಶ ದೇವರಾದಿತ್ಯನಿಂತೊಪ್ಪಿದಂ
ಕಮಳಜ ಶಿರೋದ್ಭಿನ್ನನುತ ಪರಶುವೊಪ್ಪಿದಂ
ವಿಮಳತರ ವಿಷ್ಣುವಂದಿತ ಪಾದನೊಪ್ಪಿದಂ
ವಿಷಗಳಂ ವಿಷಧರದ ಶಾಂತನಿಂತೊಪ್ಪಿದಂ
ವಿಷಮತರ ಪುರದಹನದಾವಾಗ್ನಿಯೊಪ್ಪಿದಂ
ಪಂಪಾಪುರಾಂಭೋಜ ಗಗನಮಣಿಯೊಪ್ಪಿದಂ
ಹಂಪೆಯ ವಿರೂಪಾಕ್ಷನನವರತಮೊಪ್ಪಿದಂ  ೨೬೮

ಮೃಡನಪ್ರತಿಮಂ ಶರ್ವಂ
ಕೊಡುಗೆಮಗನವಧಿ ವಿರಕ್ತಿಯಂ ಭಕ್ತಿಯನಾ |
ಉಡುತಡಿಯ ಮಹಾದೇವಿಯ
ಕಡುಸಲುಗೆಯ ಕಂದನೆಂದು ಹಂಪೆಯರಾಯಂ ||