ಚಂಡೇಶನಭವನಘದೋ
ರ್ದಂಡಂ ಹೇರೂರೊಳೆಸೆವ ಹೆಂಗೂಸಂ ತಾಂ |
ಗಂಡುಡುಗೆಯುಡಿಸಿದಮರರ
ಗಂಡಂ ಮದನಾರಿ ಹಂಪೆಯ ವಿರೂಪಾಕ್ಷಂ ||

ಎಂತೆನಲ್ ರಂಜಿಪುತ್ತರ ದಿಶಾಭಾಗದೊಳ್
ಸಂತತಂ ಸೊಗಯಿಸುತ್ತಿರ್ಪುದತಿ ರಾಗದೊಳ್
ಹೇರೂರೆನಿಪ್ಪ ಪುರವಾ ಪುರದೊಳೊಪ್ಪುತಿರೆ
ಮಾರಮದ ಮರ್ದನನ ಭಕ್ತಿಯಿಂದೊಪ್ಪುತಿರೆ
ತನ್ನ ಪೆಸರೆಸೆವ ಶಿವಭಕ್ತನೆಂಬುದು ನೋಡ
ತನ್ನ ಭಕ್ತಿಗೆ ಮಿಗಿಲೆನಿಪ್ಪಳೊರ್ವಳ್ ನೋಡ
ಹೇರೂರ ಹೆಂಗೂಸೆನಿಪ್ಪ ಮಗಳೊಪ್ಪಿರಲ್
ಸಾರಾಯ ಸದ್ಭಕ್ತಿಯುಕ್ತಿಯಿಂದೊಪ್ಪಿರಲ್
ಮೆಲ್ಲ ಮೆಲ್ಲನೆ ಯೌವನಂ ಹ[ತ್ತೆ] ಸಾರಿತ್ತು
ವಲ್ಲಭಂ ಶಿವನಾಗವೇಳ್ಕೆಂದು ಬಯಸಿತ್ತು       ೧೦

ಕಡೆಗಣ್ಣ ಕುಡಿವೆಳಗು ಗಂಡುಗೆದರುತ್ತಮಿರೆ
ಕಡು ಚೆಲ್ವ ಮುಡಿ ಹೂದುರುಂಬಿಂಗೆ ಬಯಸುತಿರೆ
ಒಳಗೆ ಕರಣಪ್ರತತಿ ಪೊರಮಡುವ ಛಂದದಿಂ
ತೊಳಗುವ ಪಯೋಧರಂ ಪೊಣ್ಮಿದವು ಚಂದದಿಂ
ಬಾಸೆ ಮೊಲೆಯಾಸೆಯಂ ಮರೆದು ಮಧ್ಯಮನಪ್ಪೆ
ಮೀಸಲು ನಿತಂಬವುಡಿಗೆಯನೊತ್ತರಿಸುತೊಪ್ಪೆ
ಪುರುಷಚಿಹ್ನಂ ಪುಟ್ಟುವಾಸ್ಥಳಮಿದೆಂಬಂತೆ
ಸುರುಚಿರ ಸ್ಮರಮಂದಿರಂ ಸೊಗಯಿಸಿತ್ತಿಂತೆ
ನಿಂದ ರೂಪಿಂ ಲಿಂಗದಾಗ ನೆಲಸುತ್ತಮಿರೆ
ಬಂದ ಜವ್ವನವೆರವಿನಂತೆ ತೋರುತ್ತಮಿರೆ          ೨೦

ಮನದೊಳಿರೆ ಗಂಡು ರೂಪವಯವಂ ಹೆಣ್ಣಾಗೆ
ತನುವಿನೊಳ್ ಹೆಣ್ಣು ಚೋಹವನೆ ತೊಟ್ಟನುವಾಗೆ
ಬಂದ ಜವ್ವನಮುಮಂ ನಿಂದ ಸೌಂದರಿಯಮಂ
ತಂದೆ ಕಾಣುತ್ತೆ ಬೆರಗಿಂದಾಂತು ಚೋದ್ಯಮಂ
ಈ ಮಗಳ ಜವ್ವನಕ್ಕಿನ್ನೊಂದು ಸರಿಯುಂಟೇ
ಈ ಮಗಳ್ ಗಂಡಾದಡೆನಗೆ ತೀರದುದುಂಟೆ
ಇವಳ ಹರಯಂ ಶಿವನರ್ಚಿಸುತ್ತಿರ್ದಪುದು
ಇವಳಿಚ್ಛೆ ಗಂಡುರೂಪಿಂಗೆಳಸುತಿರ್ದಪುದು
ಆರ್ಗೀವೆನೀ ಮಗಳನಾಳಲಾರ್ಪವರಾರು
ಆರ್ಗೆ ಕೊಡುವೆಂ ಜವ್ವನಕ್ಕೆ ಪಾಸಟಿ ಯಾರು  ೩೦

ಎಂದು ಚಿಂತಿಸುತವಿರ್ಪನ್ನೆಗಂ ಸೋದರಂ
ಬಂದಳಾಗಳೆ ತನ್ನ ಕಿರಿಯಳತ್ಯಾದರಂ
ಜೈನಂಗೆ ಕೊಟ್ಟ ತನ್ನೊಡಹುಟ್ಟಿದಳ್ಬಂದು
ನಾನಾನಿರೋಧದಿಂ ಮುನಿಸಿನಿಂ ನಡೆತಂದು
ಎನ್ನಯ ಸುತಂಗೆ ಮಗಳಂ ಕುಡುಲುವೇಳ್ಕೆನುತೆ
ಎನ್ನ ಪುತ್ರಂಗೆ ಪಾಸಟಿ ಕುಡುವುದೆಂದೆನುತೆ
ಸೋದರಂ ಸ್ವಾಧೀನದಿಂದೆ ಮಗಳಂ ಬೇಡೆ
ಸೋದರಳಿಯಂಗೆ ಜೈನಂಗೆ ಕುಡಲನುಮಾಡೆ
ಲಗ್ನಮಂ ಪೇಳುತಿರೆ ತಿಂಗಳೆರಡಂದಲ್ಲಿ
ಭಗ್ನಮತಿಗಳ ಮದುವೆ ಸಂಭ್ರಮಿಸುತಿರಲಲ್ಲಿ ೪೦

ಕಂದಿದಳು ಕುಂದಿದಳು ಹೇರೂರ ಹೆಂಗೂಸು
ನೊಂದು ಒಳಗೊಳಗೆಯಳಲ್ವಳ್ ಬಳಲ್ವಳಂ ಕೂಸು
ನಿತ್ಯ ನೇಮಕ್ಕೆಂದು ಹರನಲ್ಲಿಗೆಯ್ತಂದು
ನಿತ್ಯನ ನಿರಾಶ್ರಯನ ಹರನ ಹತ್ತಿರೆ ಬಂದು
ಪುರಹರನ ವರನ ಶಶಿಧರನ ಹತ್ತಿರೆ ಬಂದು
ಗಿರಿಜಾವರನ ಕೃಪಾಕರನ ಹತ್ತಿರೆ ಬಂದು
ದರುಶನ ಸ್ಪರುಶನಂಗಳನೊಲ್ಮೆಯಿಂ ಮಾಡಿ
ಹರುಷದಿಂ ಪಾದೋದಕಂಗಳಿಂದಕ್ಕಾಡಿ
ಮಾರಾರಿಗಭವಂಗೆ ನಿಂದು ಬಿನ್ನೈಸಿದಳು
ಹೇರೂರ ಹೆಂಗೂಸಳುತ್ತ ಬಿನ್ನೈಸಿದಳು ೫೦

ದೇವ ಭವಿಗುರದೆನ್ನನೊಯ್ದು ಕೊಟ್ಟಪರಯ್ಯ
ದೇವ ಸವಣಂಗೆ ಹೆಂಡತಿ ಮಾಡಿದಪರಯ್ಯ
ಭವಿಯ ನಾನೆಂತು ನೋಡುವೆನಯ್ಯ ಶಂಕರಾ
ಭವಿಯ ನುಡಿ ಕರ್ಣಕ್ಕೆ ಶೂಲ ಶಶಿಶೇಖರಾ
ಭವಿಯ ಕೂಟಂ ಕಾಳಕೂಟದಿಂ ಪಿರಿದೆನಗೆ
ಭವಿಯ ಸಂಸರ್ಗ ದಳ್ಳುರಿಯ ಸಂಗವದೆನಗೆ
ಬೆಳಗಿನೊಳಗಿರ್ದು ಕತ್ತಲೆಯೊಳಿರಲಾರ್ಪೆನೆ
\ಜಿಚಿ<uಡಿಳಗಿರ್ದು[ವ]ಜ್ಞಾನಕೊಳಗಪ್ಪೆನೆ
ಅಮೃತದೊಳಗಿರ್ದು ವಿಷದೊಳಗೆ ಪುಗಲಾರ್ಪೆನೆ
ವಿಮಳ ಪುಣ್ಯದೊಳಿರ್ದು ಘೋರಕ್ಕೆ ಪೋಪೆನೆ               ೬೦

ಭವಿಗೆ ಹೆಂಡತಿಯಪ್ಪ ಹೆಣ್ಣಂದವೇಕೆನಗೆ
ಭವಿಯೊಡನೆ ಬೆರಸುವ ಶರೀರವಿಂತೇಕೆನಗೆ
ಭವ ಭರ್ಗ ಭಾಳಾಕ್ಷ ಭೀಮ ಕರುಣಿಪುದೆನಗೆ
ಶಿವ ಸುರನದೀ ಜಟಾಸ್ತೋಮ ಕರುಣಿಪುದೆನಗೆ
ಹರ ಕಾಮಹರ ಕಾಲಹರನೆ ಕರುಣಿಪುದೆನಗೆ
ಸುರನರೋರಗನಿಕರ ಗುರುವೆ ಕರುಣಿಪುದೆನಗೆ
ಅಯ್ಯ ನಾನಾರೆನಭವಾ ಭವಿಯ ಸಂಗಮಂ
ಕಯ್ಯ ಮೇಲೀಗ ಹೆಣ್ಣಾಗಿರ್ಪ ಭಂಗಮಂ
ಎಂದಿಂತು ಕವಿದಿರ್ಪ ಕಾರ್ಪಣ್ಯಮಂ ತೋರಿ
ಸಂದಣಿಪ ತನ್ನಳಲನಳ್ಕರಿಂದಂ ತೋರಿ       ೭೦

ನೇಮವಂ ಮಾಡುವಾ ಹೊತ್ತಿನೊಳ್ಮೊರೆಯಿಟ್ಟು
ಕಾಮಾರಿಗನುದಿನಂ ಪ್ರೇಮದಿಂ ಶಿವದಿಟ್ಟು
ಬಿಡದಿಂತಹರ್ನಿಶಂ ಭಕ್ತಿಯಿಂದಲೆದಲೆದು
ಅಡಿಗಡಿಗೆ ಶಿವನ ಸದ್ಭಕ್ತಿಯಿಂದಲೆದಲೆದು
ಭೇದವಿಲ್ಲದ ಭಕ್ತಿಭಾವದಿಂದಂ ಮುನಿದು
ಆದರಂ ಮಿಗಲೇಕನಿಷ್ಠೆಯಿಂದಂ ಮುನಿದು
ಇರಲಿಂತು ತಿಂಗಳೆರಡಾಗೆ ಬಂದುದು ಮದುವೆ
ನೆರೆದು ಸಾರಿಸುವ ಹೆಂಗೂಸಿಂಗೆ ಹುಸಿ ಮದುವೆ
ಮಂಟಪಂ ವೇದಿಕೆಗಳೊಪ್ಪದಿಂ ಸಮೆದಿರಲು
ನಂಟರುಂ ನಲ್ಲರುಂ ಹರುಷದಿಂ ನೆರೆದಿರಲು      ೮೦

ಮುತ್ತೈದೆಯರ್ತರಂಗೊಂಡು ಸಿಂಗರಿಸುತಿರೆ
ಹೆತ್ತ ತಾಯ್ತಂದೆಗಳ್ನಲಿನಲಿದು ಪೆರ್ಚುತಿರೆ
ಕಳಸ ಕನ್ನಡಿಯ ನಾರೀನಿಕರವೊಪ್ಪುತಿರೆ
ಗಳಿಗೆವಟ್ಟಲ ಮುಂದೆ ಜೋಯಿಸರ್ಮೆರೆವುತಿರೆ
ಅಂಗನೆಯರಾನಂದದಿಂದೆ ಸಂಭ್ರಮಿಸುತಿರೆ
ಮಂಗಳಮಯಂ ಮನೆಯ ಮುಂದೆ ಕರ ಮೆರೆವುತಿರೆ
ಹೇರೂರ ಹೆಂಗೂಸಿದೆಲ್ಲಮಂ ಕಾಣುತಂ
ಮಾರಾರಿಯೊಡನೆ ಮನದೊಳ್ಜಗಳವಾಡುತಂ
ಮುದುವೆಯಂ ನೋಡುತಂ ಬೆಚ್ಚುತಂ ಸುಯ್ವುತಂ
ಹೃದಯದೊಳ್ನೋವುತಂ ಪರಮಂಗೆ ಮುಳಿವುತಂ          ೯೦

ನಿಂದು ಬೆರಗಾಗುತಂ ಸಂದಣಿಸಿ ನೋಡುತಂ
ಇಂದುಮುಖಿಯರ ನಡುವೆ ಬಾಡಿ ಬಸವಳಿವುತಂ
ತನು ಹಂದರಲಿ ತನ್ನ ಮನವಾ ಶಿವನ ಮೇಲೆ
ಮುನಿಸು ತನ್ನೊಳ್ ತನ್ನ ಮಾತು ಕರ್ತನ ಮೇಲೆ
ಆಗಿರ್ಪ ಹೇರೂರ ಹೆಂಗೂಸನೊಪ್ಪದಿಂ
ಸಾಗಿಸುತೆ ಸಿಂಗರಿಸಿ ಕೈಗೊಡುತ್ತೊಪ್ಪದಿಂ
ತಂದು ಮೆಟ್ಟಕ್ಕಿಯೊಳ್ ಬಲ್ಪಿನಿಂ ನಿಂದಿರಿಸಿ
ಮುಂದೆ ಕಟ್ಟಿದಿರಾಗಿ ಜೈನನಂ ತಂದಿರಿಸಿ
ಭಕ್ತೆ ಭವಿಯಂ ನೋಡಲಾಗದೆಂಬಂದದಿಂ
ಯುಕ್ತಿಗೆಟ್ಟವರೆಲ್ಲ ತೆರೆವಿಡಿಯೆ ಚಂದದಿಂ       ೧೦೦

ಮುಂದೆ ಹೆಣ್ಚೋಹ ಜಲದೊಳಲ್ಕಸುಗೆಂಬಂತೆ
ತಂದೆ ಕೈನೀರೆರೆದನಂದು ಸೂಚಿಸುವಂತೆ
ತಂಡ ತಂಡದ ಸತಿಯರಾರತಿಗಳೊಡಗೂಡಿ
ಗಂಡನಿ[ವ] ಸಯವಲ್ಲವೆನಗೆಂದು ಹರಗೂಡಿ
ಮೊಗದ ಜವನಿಕೆ ತೆರೆಯೆ ಕಣ್ಣ ಜವನಿಕೆ ಮುಗಿಯೆ
ಸೊಗಯಿಸದೆ ಕಣ್ಮುಚ್ಚಿ ಮದವಳಿಗೆ ಮನ ಸುಗಿಯೆ
ಜೈನನಂ ತಂದು ಹೋಮದ ಹಸೆಯ ಮೇಲಿರಿಸಿ
ಮಾನಿನಿಯನಲ್ಲಿ ತಾಯ್ತಂದೆಗಳ್ಬೋಳಯಿಸಿ
ಒಡಗೊಂಡು ಬಂದು ವಿಷಭೂರುಹದ ಕೆಲದಲ್ಲಿ
ನಡೆಯದೊಂದಮೃತವಳ್ಳಿಯನಿರಿಸುವಂತಲ್ಲಿ      ೧೧೦

ಭವಿಯ ಕೆಲದಲ್ಲಿ ಶಿವಭಕುತೆಯಂ ಕುಳ್ಳಿರಿಸೆ
ಶಿವಭಕುತೆಗಘಿರೋಧಂ ಮನದೊಳಂಕುರಿಸೆ
ಎಡದ ಭಾಗಂ ಪಾಪದೇರ್ವಡೆದ ತೆರನಾಗೆ
ಎಡದ ಭಾಗಂ ತನ್ನದಲ್ಲೆಂಬ ತೆರನಾಗೆ
ಮೊಗದ ಹೊಗೆಯೊಡನೆ ಹೋಮದ ಹೊಗೆ ಕರಂ ನಿಮಿರೆ
ಬಗೆಯ ಕಿಚ್ಚಿನ ಕೂಡೆ ಹೋಮಗಿಚ್ಚಂತಡರೆ
ಕಾಮಿನೀರೂಪರಿವ ಕಾಮ ಹೋಮದ ತೆರದೆ
ಹೋಮವಿರಲಂತಂತೆ ಮದುವೆಯಾಯಿತ್ತುರದೆ
ಮಕ್ಕಳಾಟದ ಮದುವೆಯಂತೆ ತನಗಾಗುತಿರೆ
ಮಿಕ್ಕವರ್ಗೆ ದಿಟ ಮದುವೆಯಂತೆ ತೋರುತ್ತಮಿರೆ      ೧೨೦

ಇರೆ ತಂದು ಮುಂದಿಟ್ಟರೆಲ್ಲ ಭೂಮವನೆಲ್ಲ
ಹರನ ಕಂಡಲ್ಲದಿನ್ನೆನಗೂಟವಿಲ್ಲಿಲ್ಲ
ಎನುತೆ ನಡೆತಂದಳಾ ಮುದದಿಂದೆ ಶಿವನೆಡೆಗೆ
ಮನ ವೇಗದಿಂ ಬಂದು ಬಿನ್ನೈಪ ಮನದೆಡೆಗೆ
ನಡೆತಂದಳಳಲುತ್ತೆ ಹೇರೂರ ಹೆಂಗೂಸು
ಮೃಡನಲ್ಲಿಗತಿಕೋಪದಿಂ ಬಂದಳಾ ಕೂಸು
ಬಂದು ನಿಂದಾಕ್ಷೇಪಿಸುತೆ ಬಿನ್ನಹಂ ಮಾಡಿ
ಇಂದುಧರನಂ ಮನದ ಮುನಿಸಿನಿಂದ ನೋಡಿ
ಲೇಸಾಗಿ ಮಾಣಿಸದೆ ಮದುವೆಯಂ ಮಾಡಿದೈ
ಲೇಸು ಲೇಸಕ್ಕಕ್ಕು ಭವಿಯೊಡನೆ ಕೂಡಿದೈ         ೧೩೦

ಭವಿಯ ಹವಣೇ ಮೀರಿ ನಿನ್ನ ಹವಣೇ ದೇವ
ಶಿವನೆ ನೀ ನೋಡುವಡೆ ಹರಣದನಿತೇ ದೇವ
ನಂಬಿರ್ದವಳನು ನೀನಿಂತುಪೇಕ್ಷಿಸುವರೇ
ನಿಂಬಿ ನಂಬಿಗಳರಸ ಇಂತು ಮಾಡಿಸುವರೇ
ದೇವ ಇನ್ನೆಂತು ಮಾಣಿಪೆ ಮದುವೆಯಾಯಿತ್ತು
ದೇವ ಭವಿಯೊಡನೆ ಪುದುವಾಳ್ವುದೆನಗಾಯಿತ್ತು
ದೇವ ಭವಿಯೊಡನಿರ್ಪ ಪಾಪವಿಂತಾಯಿತ್ತು
ದೇವ ನರಕದ ಬಟ್ಟೆ ತಪ್ಪದೆನಗಾಯಿತ್ತು
ಪುರವನುರುಪಿದ ಕಲಿಯೆ ಸುಮ್ಮನೆಕಿರ್ದಪಯ್
ಗರಳಧರ ನೀನೇತಕಿಂತುಸುರದಿರ್ದಪಯ್     ೧೪೦

ಕಾಲಹರ ಕರ್ಮಹರ ಉಸುರದೇಕಿರ್ದಪಿರಿ
ನೀಲಕಂಠಾ ಕರುಣಿ ನೀವುಸುರದಿರ್ದಪಿರಿ
ಕಲ್ಲಲಿಟ್ಟಂಗೆ ಕೈಯೊಡನೆ ವರಗಳನಿತ್ತೆ
ಎಲ್ಲರರಿಯಲ್ ವೈಜಕವ್ವೆಗೆ ವರವನಿತ್ತೆ
ಬಲ್ಲಿದನೆ ಬಾಣಾಸುರನ ಬಾಗಿಲಂ ಕಾಯ್ದೆ
ಸಲ್ಲೀಲೆಯಿಂ ಬಸವದಣ್ಣಾಯಕಂಗಾದೆ
ಹುಲ್ಲ ಹೊತ್ತಡಕುವಾ ಚೆನ್ನಯ್ಯನೊಡನುಂಡೆ
ಚಲ್ಲವಾಡುತೆ ನಿಂಬಿಯಕ್ಕಗಳನೊಂಳಕೊಂಡೆ
ಕೊಡಗೂಸಿನಿನಿನುಡಿಗೆ ಮೃಡ ನಂಬಿ ಪಾಲ್ಗುಡಿದೆ
ಒಡೆಯ ಎನ್ನಲ್ಲಿ ತಪ್ಪೇನ ಕಂಡಿರಿ ತಂದೆ        ೧೫೦

ಕರುಣಾಕರನುಮೆಂಬ ಬಿರಿದು ನಿಮಗರತವೆ
ವರಮೂರ್ತಿ ನೀನೆಂಬ ಹೆಸರೇನು ಬರತವೆ
ಇಂತಿಂತು ಭಕ್ತರೆಲ್ಲರ ಹೃದಯದೊಳಗಿರ್ಪೆ
ಎಂತೆಂತು ಕಾಡಿದಪೆಯದಕೇನು ನೋಡಿರ್ಪೆ
ಎಂತಕ್ಕೆ ಮುಂದೆ ನಾಲ್ಕುಂ ದಿನಂ ನೋಡಿದಪೆ
ಭ್ರಾಂತು ಬೇಡಲೆ ದೇವ ನಿನ್ನನೊಡಗೂಡಿದಪೆ
ಅಯ್ದನೆಯ ದಿನವೈದು ಮುಖದೊಳಗೆ ನೋಡೆನ್ನ
ನೆಯ್ದಿಕೊಂಬೆಂ ದೇವ ಬೆನ್ನಂ ಬಿಡೆಂ ನಿನ್ನ
ನೆಂದು ಬಿನ್ನಪಮಾಡಿ ಮನೆಗೆ ಮರಳಿದು ಬಂದು
ಕಂದಿ ಮೈಗುಂದಿ ಮನೆಯೊಳಗೆ ತಾಪಿಸುತಂದು      ೧೬೦

ನಾಲ್ಕು ದಿನವುಂ ನಾಲ್ಕು ಬರಿಸಂಗಳಾಗುತಿರೆ
ನಾಲ್ಕು ದಿನವುಂ ನಾಲ್ಕು ಜುಗವಾಗಿ ತೋರುತಿರೆ
ನಿಬ್ಬಣಿಗರೆಲ್ಲ ನೆರೆದುಂ ಚತುರ್ಥಿಯ ಮಾಡಿ
ಅಬ್ಬರಿಸಿಯಾನಂದದಿಂ ಬಂಡಿಯಂ ಹೂಡಿ
ಭವವನುತ್ತರಿಪ ಗಿರಿಯುಮನೇರುವಂದದಿಂ
ಭವನಲ್ಲಿಗೊಯ್ವಂದದೊಳಗಿರಿಸುವಂದದಿಂ
ಹೆಣ್ಣಂ ನಿಮಗೆ ಕೊಟ್ಟು ಗಂಡುಗೊಂಡೆವು ದಿಟಂ
ಹೆಣ್ಣಲ್ಲ ಪುತ್ರನೋಪಾದಿಯಪ್ಪುದು ದಿಟಂ
ಎಂದು ನುಡಿಯಲ್ಮುಂದೆ ಸೂಚನೆಯದಾಗುತಿರೆ
ತಂದೆ ತಾಯ್ಗಳ್ಮಗಳನಪ್ಪಯಿಸಿ ಕೊಡುತಮಿರೆ ೧೭೦

ಪೊರಮಟ್ಟವಲ್ಲಿ ಬಂಡಿಗಳೆಯ್ದೆ ಗಳಗಳನೆ
ಮರುಗಿ ಮನದೊಳಗತ್ತಳಾ ಕೂಸು ಗಳಗುಳನೆ
ಮದುವೆಯಲ್ಲದೆ ಮತ್ತೆ ಪಯಣಮಂ ಮಾಡಿದೈ
ಮದನಾರಿ ನಿಮ್ಮನಿಂತಗಲ್ವಂತೆ ಮಾಡಿದೈ
ಅಗಲೆನಗಲೆಂ ನಿನ್ನ ಬೆನ್ನಂ ಬಿಡೆಂ ದೇವ
ಮಗಳೆನ್ನದೆನ್ನ ಪರಿಯಂ ನೋಳ್ಪುದೆಲೆ ದೇವ
ಎಂದು ಚಿಂತಿಸುತವಿರಲಾ ಮೊದಲ ಜಾವದೊಳ್
ನಿಂದವಾಗಳೆ ಬಂಡಿ ಭರದೊಳಾರಣ್ಯದೊಳ್
ಹಸಿದು ನಿಬ್ಬಣಿಗರೆಲ್ಲಂ ಬಂಡಿಯಿಂದಿಳಿದು
ಎಸೆವ ಕಟ್ಟುಂಗೂಳನಾನಂದದಿಂ ತೆಗೆದು ೧೮೦

ಮದವಳಿಗೆ ಹಸಿದೆ ಕೊಲ್ಲಾರಿಯಿಂದಿಳಿಯವ್ವ
ಹದುಳದಿಂದಿಳಿ ಮೆಲ್ಲನಿಳಿಯವ್ವ ಬಾರವ್ವ
ಇಳಿಯೆನುಣ್ಣೆಂ ನೇಮವಂ ಮಾಡೆನಿನ್ನುವುಂ
ಬಳವೆತ್ತವನನಾಳ್ದನಂ ಕಾಣೆನಿನ್ನುವುಂ
ಎನಲಲ್ಲಿ ಪರಿದರಿಸಿದರು ಶಿವನ ನಿಳಯಮಂ
ಮನವಾರೆ ಕಂಡರಾ ಸರ್ವಸುಖನಿಳಯಮಂ
ಕಂಡುಬಂದೆವು ಶಿವಾಲಯವದೇ ಹೋಗವ್ವ
ಖಂಡೇಂದುಮೌಳಿಯಂ ಕಂಡು ಸುಖಿಯಾಗವ್ವ
ಎಂದು ಮಾತಂ ಕೇಳ್ದು ಹೇರೂರ ಹೆಂಗಸು
ಸಂದೇಹವಿಲ್ಲದೈತಂದಳಾ ಹೆಂಗಸು  ೧೯೦

ಅಂಗನೆಯ ಜನ್ಮದಿಂದಿಳಿವಂತಿರಿಳಿತಂದು
ಸಂಗಡಕ್ಕೊಬ್ಬ ಸತಿಯಂ ಕೊಂಡು ನಡೆತಂದು
ದೇವನಾಗಲ್ವೇಳ್ಕು ನಾನಾಗವೇಳ್ಕೆಂದು
ಭೂವಳಯದೊಳಗೊಂದು ಹೊಸತು ಮಾಡುವೆನೆಂದು
ಬಂದು ಶಿವನಿಳಯದೊಳ್ ಶಂಭುವಂ ಕಾಣುತಂ
ಮುಂದೆ ಪ್ರಜ್ವಲಬಿಂದು ಕಂಗಳೊಳ್ ತೀವುತಂ
ಬೆವರ ಬಿಂದುಗಳಡಿಸಿ[ಯ]ಳಕಂಗಳೊಳಗೇಳೆ
ಅಮರ್ದ ಕಂಪನವುಕ್ಕಿ ಗದುಗದುಕೆ ಮಿಕ್ಕೇಳೆ
ಭುಜಮಂಡಲಂ ಕೆತ್ತೆ ತವಕದುರವಣೆಯೆತ್ತೆ
ನಿಜಹೃದಯ ಮುಂಕೊಳಿಸೆ ಚಿತ್ತವೊಲಿದಚ್ಚೊತ್ತೆ                ೨೦೦

ಹೊಸ ಮುನಿಸು ಲಿಂಗಕ್ಕೆ ಸವಿಗಳಂ ಸವಿಸುತಿರೆ
ಶಶಿಧರನ ಮನಕೆ ಕತಸುಖಗಳೆಯ್ದುತ್ತಮಿರೆ
ಬಂದಪ್ಪಿದಳ್ ತಪ್ಪಿದಳ್ ಹೆಣ್ಣು ಜನ್ಮಮಂ
ನಿಂದಪ್ಪಿಕೊಂಡಪ್ಪಿದಳ್ ಭಕ್ತೆ ಕಾಯಮಂ
ಲಿಂಗದೊಳ್ ತಲೆಯಿಟ್ಟು ಸರ್ವಾಂಗದೊಳುವಪ್ಪಿ
ಲಿಂಗದೊಳ್ಪುಗುವಂಘಿರಮರ್ದಪ್ಪಿ ನಿಮಿರ್ದಪ್ಪಿ
ಒಟ್ಟಿ ಒರಲುತಲಪ್ಪಿ ನಿಷ್ಠೆ ನಿಲವಿನಲಪ್ಪಿ
ಮುಟ್ಟಿ ಲಿಂಗವ ನೇಹರಸದಿಂದೆ ಬಿಗಿಯಪ್ಪಿ
ಅಪ್ಪಿದಡೆ ಲಿಂಗದೊಳಗಿಂಗಿದವು ಮೊಲೆಯಲ್ಲಿ
ಒಪ್ಪಿದವು ಹೆಣ್ಣುಡಿಗೆ ಗಂಡುಡಿಗೆಗೊಂಡಲ್ಲಿ    ೨೧೦

ಜಡೆ ನಿಮಿರ್ದೊಪ್ಪೆ ಹೊಸ ಮೀಸೆ ನಸುಗಪ್ಪಾಗೆ
ಅಡಸಿರ್ದ ಕಿವಿಯೋಲೆ ಕರ್ಣಾಭರಣಮಾಗೆ
ಲಿಂಗದಪ್ಪಿಂ ಪುರುಷಚಿಹ್ನವೊಗೆದುದು ತನಗೆ
ಅಂಗಸಾರಂ ಗಂಡುರೂಪಾಗಿ ತೊಳತೊಳಗೆ
ಹೇರೂರ ಹೆಂಗೂಸು ಗಂಡುತನಮಂ ಕೊಂಡು
ಮಾರಾರಿ ತನಗಿತ್ತ ಪುರುಷಚಿಹ್ನಂಗಂಡು
ಮನದಪ್ಪಿನೊಳ್ಬಿಡದೆ ತನುವಿನಪ್ಪಂ ಬಿಟ್ಟು
ಮನವಾರೆ ಗಂಡಾದ ಸಂತೋಷಮಂ ತೊಟ್ಟು
ಹೆಚ್ಚಿದಂ ಹಿಗ್ಗಿದಂ ಹೊಂಗಿದಂ ಸುಖದೊಳಗೆ
ನಚ್ಚಿದಂ ಮಚ್ಚಿದಂ ಶಿವಭಕ್ತಿಭರದೊಳಗೆ       ೨೨೦

ಹೇರೂರ ಶಿವಭಕ್ತನಾಗಿ ಕುಳ್ಳಿರ್ದಿರಲು
ಪೂರೈಸಿ ಪರಮಪುರುಷಾಕಾರನಾಗಿರಲು
ಆಗಮಸ್ಥಾನದೊಳ್ ಭಸಿತಮಂ ತೀವಿಟ್ಟು
ರಾಗದಿಂದಂ ಶಿವನ ಭಕ್ತಿಯಂ ಮುಂದಿಟ್ಟು
ನಿತ್ಯನೇಮಂ ಮಾಡಿ ಶಿವಭಕ್ತನೊಪ್ಪಿದಂ
ನಿತ್ಯನಿಧಿ ಹೇರೂರ ಹರಭಕ್ತನೊಪ್ಪಿ[ದಂ]
ಹೆಣ್ಣಳಿದು ಗಂಡಾದ ಗಂಡುಗೂಸೊಪ್ಪಿರಲು
ಬಣ್ಣವೇರಿದ ಹೇಮದಂತೆ ಕುಳಿರ್ದಿರಲು
ಇತ್ತಲಾ ನಿಬ್ಬಣಿಗರೆಲ್ಲರುಂ ಮಿಗೆ ಪಸಿದು
ಹೊತ್ತು ಹೋಯಿತ್ತು ಬಿಸಿಲಾಯ್ತು ತಳ್ವಿದಳೆಂದು            ೨೩೦

ಒಡನಿರ್ದ ಕೆಳದಿಯಂ ಮುದದಿಂದೆ ಕರೆಯೆನಲ್
ಕಡುವೇಗದಿಂ ಪೋಗಿ ಕರೆದು ತಾಯೆನುತಿರಲ್
ನಡೆದು ಬಂದವರು ಮದವಳಿಗೆಯಂ ಕಾಣದಿರೆ
ಒಡನೆ ನುಡಿಯದೆಯಿರ್ಪ ಸಬುದಮಂ ಕೇಳದಿರೆ
ಬಂದವರು ಬೆಸಗೊಂಡರಲ್ಲಿ ಬೆಬ್ಬಳೆಗೊಂಡು
ನಿಂದು ಬೆಸಗೊಂಡರಂತಲ್ಲಿ ವಿಸ್ಮಯಗೊಂಡು
ಮದವಳಿಗೆ ಬಂದಳೆಲೆ ಭಕ್ತರೇ ಕಂಡಿರೇ
ಸುದತಿಯೆಲ್ಲಿಗೆ ಹೋದಳೆಲೆಯಯ್ಯ ಬಲ್ಲಿರೇ
ಈಗಳಿರ್ದಪಳೆತ್ತ ಹೋದಳಿದು ಸೋಜಿಗಂ
ಈಗಳೆಲ್ಲಿಗೆ ಮಾಯವಾದಳಿದು ಸೋಜಿಗಂ    ೨೪೦

ಎನೆ ನಿಮ್ಮ ಮದವಳಿಗೆಯಂ ಕದ್ದುಕೊಂಡೆವೆ
ಮನವಾರೆಯರಸಿಕೊಂಬುದು ನಾವು ಬಲ್ಲೆವೆ
ಕಾಣೆವಾವೆಂದು ಕಿವಿಯಂ ಮುಚ್ಚಿಕೊಳುತಮಿರೆ
ಮಾಣದಾ ನಿಬ್ಬಣಿಗರೆಲ್ಲ ಬಂದರಸುತಿರೆ
ಅತ್ತೆ ಮಾವಂದಿರಲ್ಲಲ್ಲಿ ಪೊಕ್ಕರಸುತಿರೆ
ಸುತ್ತಲುಂ ಮದವಣಿಗನೊಳಗಾಗಿಯರಸುತಿರೆ
ಮಗುವು ಮುನ್ನವೆ ಕದ್ದು ತಮ್ಮೂರ್ಗೆ ಹೋದಳೊ
ಮಗಳನಿನ್ನೆಲ್ಲಿಯುಂ ಕಾಣೆವೇನಾದಳೊ
ಎಂದು ಹೇರೊರ್ಗೆ ತಮ್ಮೊಳಗಿರ್ವರಂ ಕಳುಪೆ
ಬಂದವರ್ ತಾಯ್ತಂದೆಗಳಿಗೆ ಸುದ್ದಿಯನರಿಪೆ ೨೫೦

ಬಂಡಿಯಿಂದಿಳಿದು ಕಟ್ಟುಂಗೂಳನುಣಲೆಂದು
ಬೆಂಡಾದ ಹೇರೂರ ಹೆಂಗೂಸನೊಲಿದಂದು
ಕರೆಯೆ ನೇಮಕ್ಕೆಂದು ಶಿವನಲ್ಲಿಗೈತಂದು
ಇರಲಿರಲ್ಕಾಣಬಾರದೆ ಕೌತುಕದೊಳಂದು
ಸುತ್ತಿ ನಿಂದರಸಿ ತೊಳಲಿದೆವೆಲ್ಲಿ ಕಾಣೆವೆನೆ
ಇತ್ತಲೆಯ್ತಂದಳೆಂದಿಲ್ಲಿಗೆಯ್ತಂದೆವೆನೆ
ಪೊರಮಟ್ಟರಲ್ಲಿ ಶಿವಭಕ್ತನುಂ ಭಕ್ತೆಯುಂ
ಪೊರಮಟ್ಟರೊಡನೊಡನೆ ಶಿವನ ಭಕ್ತಾಳಿಯುಂ
ಎತ್ತಿದ ವೃಷಧ್ವಜಂ ಗಗನದೊಳ್ಕುಣಿವುತಂ
ಸುತ್ತಿ ಮಿಗೆ ಭಕ್ತರುಂ ವೀರರುಂ ನೆರೆವುತಂ           ೨೬೦

ಭವಿಗಳ್ಗೆ ಕುಡಬೇಡೆನಲ್ಕುಡುವುದುಂ ಮಾಣೆ
ಭವಿ ನೆಂಟರೆಂದುಂಟೆ ಭಕ್ತರೆಂಬುದು ಕಾಣೆ
ಭವಿಗೆ ಕುಡುವರೆ ಮಗಳನಕಟ ಸದುಭಕ್ತೆಯಂ
ಭವನೊಳ್ ಸದಾಚಾರನೆಲೆಗೊಂಡ ಯುಕ್ತೆಯಂ
ಎಂದು ತಂದೆಯನೆಲ್ಲರುಂ ಮರಳ್ಮಾಡುತಂ
ಬಂದರಾ ಶಿವಭಕ್ತಿರಾಡುತಂ ಪಾಡುತಂ
ಕಡು ಮುಳಿಸಿನಿಂ ಶಂಭುವಿನ ನಿಳಯಮಂ ಪೊಕ್ಕು
ಮೃಡಭಕ್ತನಿರೆ ಕಂಡು ಕೇಳ್ದರೆಲ್ಲಂ ಮಿಕ್ಕು
ಕೇಳೆ ಗಂಡುಡಿಗೆಯುಟ್ಟಿರ್ದ ಶರಣಂ ಕಂಡು
ಶೂಲಿಯಣುಗರನರಿದು ನೆನೆದು ಚಿತ್ತಂಗೊಂಡು             ೨೭೦

ಭಕ್ತರಂ ಕಾಡಲೇಕಿನ್ನು ಪೇಳ್ದಪೆನೆನುತೆ
ಭಕ್ತಿಯುಕ್ತಂ ನೊಳ್ಪೆನೆಂದು ಮನದೊಳಗೆನುತೆ
ಆರನರಸಿಹಿರಿ ಎಲೆ ಭಕ್ತರಿರ ಬನ್ನಿರೇ
ಮಾರಾರಿಯಣುಗನಂ ನೋಡುವಿರಿ ಬನ್ನಿರೇ
ಎನಲು ತಾಯ್ತಂದೆಗಳು ಮಗಳ ದನಿಯಂ ಕೇಳ್ದು
ಮನವಾರೆ ತಿರಿಗಿ ಕಾಣದೆ ಕೌತುಕಂದಾಳ್ದು
ಮಗಳ ದನಿಯಾದಪುದು ಗಂಡುರೂಪಿದು ಚಿತ್ರ
ಅಗಜೆಯರಸಂ ತಾನೆ ಬಲ್ಲನಿಳೆಗಿದು ಚಿತ್ರ
ಎನುತಮಿರೆ ಬನ್ನಿರೇ ನಿಮ್ಮ ಮಗಳಾನೆಂದು
ಮನಸಿಜಾರಿಯೆ ಗಂಡು ಮಾಡಿದಂ ತಾನಿಂದು            ೨೮೦

ಪಾರ್ವತೀಪ್ರಿಯನೊಲಿದು ಗಂಡು ಮಾಡಿದನಿಂದು
ಸರ್ವೇಶನೊಲಿದೆನ್ನ ಗಂಡುಮಾಡಿದನಿಂದು
ಚಂಡೇಶನೊಲಿದೆನ್ನ ಗಂಡುಮಾಡಿದನಿಂದು
ಕಂಡು ಬಳಲಲ್ಬೇಡ ಗಂಡಾದೆ ನಾನಿಂದು
ಎಂದು ಮುನ್ನಿನ ಮೈಯ ಕುರುಹೆಲ್ಲವಂ ತೋರಿ
ಬಂದ ತಾಯ್ತಂದೆಗಳಿಗಲ್ಲಿ ನಂಬುಗೆಯೇರಿ
ಬೆರಗಾಗಿ ಕೊಂಡಾಡಿದರ್ ಭಕ್ತ ಜನವೆಲ್ಲ
ಪೊರಮಡಿಸಿದರ್ ಸವಣನಿಬ್ಬಣಿಗರುಮನೆಲ್ಲ
ಆಡಿದರ್ ಹಾಡಿದರ್ ಶಂಕರನ ಮಹಿಮೆಯಂ
ನೋಡಿದರ್ ಕೂಡಿದರ್ ಶಿವನ ಸದ್ಭಕ್ತಿಯಂ         ೨೯೦

ಅಂದಿನಿರುಳಲ್ಲಿ ಗಣಪರ್ವವಂ ಮಾಡುತಂ
ಮುಂದೆ ಬೆಳಗಾಗೆ ಮಗನಂ ನೋಡಿ ಹಿಗ್ಗುತಂ
ಹೇರೂರ್ಗೆ ನಡೆಯೆನಲ್ ಬಾರೆನೆಂದುಂ ಬಾರೆ
ಆರ ಮಾತಂ ಕೇಳೆನಭವನಂ ಹೆರಸಾರೆ
ಎಂದು ಹೇರೂರ ಭಕ್ತಂ ದೇವನಂ ಬೇಡಿ
ಬಂದು ಶಿವಪುರವನಲ್ಲಡವಿಯೊಳ್ ನೆರೆಮಾಡಿ
ಭಕ್ತರೊಡಗೂಡಿ ಸರ್ವೇಶನಂ ಪೂಜಿಸುತೆ
ಯುಕ್ತಿ ಹೊದ್ದದ ನಿಷ್ಠೆ ನೆಲೆಗೊಳಲು ಪೂಜಿಸುತೆ
ಶಿವಭಕ್ತಿಗೋಷ್ಠಿಯೊಳ್ ನಿಚ್ಚಲೋಲಾಡುತಂ
ಶಿವಭಕ್ತಿ ಸುಖದೊಳಗೆ ಮೂಡಿ ಮುಳುಗಾಡುತಂ   ೩೦೦

ಹೇರೂರ ಹೆಂಗೂಸು ಗಂಡಾದಳೆಂಬ ನುಡಿ
ಧಾರುಣಿಯೊಳಗೆ ಹತ್ತುಮಡಿ ತೀವುತಿರೆ ಕೂಡಿ
ಇಂತು ಪಲವುಂ ಕಾಲವಗಲದರ್ಚಿಸುತಿರ್ದು
ಕಂತುಮದಹರನ ಶಂಕರನ ಹತ್ತಿರೆ ಸಾರ್ದು
ದೇವ ಮರ್ತ್ಯದೊಳಿರವು ಸಾಕೆನಗೆ ಶಂಕರಾ
ದೇವ ಕೈಲಾಸಕ್ಕೆ ಕೊಂಡೊಯ್ಯೊ ಶಶಿಧರಾ
ಎಂಬ ಬಿನ್ನಪದೊಳಗೆ ಹೂಮಳೆಗಳೆಳರಗಿದವು
ಅಂಬರಸ್ಥಳದೊಳಗೆ ವಾದ್ಯತತಿ ಮೊಳಗಿದವು
ಬಂದುದಾಗಳೆ ಪುಷ್ಪಕಂ ಕಾಂತಿಯಪ್ಪಿನಂ
ಬಂದು ಪುಷ್ಪಕದೊಳಗೆ ಕುಳ್ಳಿರಿಸೆ ಭಕ್ತನಂ            ೩೧೦

ಮೀರಿ ನೆಗೆಯಿತ್ತು ಶಿವಲೋಕಕನುರಾಗದಿಂ
ತೋರಿದಂ ಕೀರ್ತಿಯಂ ಜಗಕೆ ಸಂತೋಷದಿಂ
ಬಂದು ನಂದೀಶ್ವರನ ಬಾಗಿಲೊಳೆ ನಿಂದಿರ್ದು
ಇಂದುಧರನೊಲಗಕ್ಕತುಳ ಸುಖಮಂ ಸಾರ್ದು
ಶರ್ವಂಗೆ ಶಾಂತಂಗೆ ಸತ್ಯಂಗೆ ನಿತ್ಯಂಗೆ
ಸರ್ವಂಗಸಾಧ್ಯಂಗೆ ರುದ್ರಂಗೆ ಭದ್ರಂಗೆ
ದೇವಂಗೆ ದೇವರ ಶಿಖಾಮಣಿಗೆ ಈಶಂಗೆ
ಭಾವಗಮ್ಯಂಗೆ ನಿಜಭಕ್ತಜನ ಹರುಷಂಗೆ
ಬಂದು ಮೈಯಿಕ್ಕಿದಂ ಶಿವಭಕ್ತನೊಲ್ಮೆಯಿಂ
ಅಂದು ನಿಜಹಸ್ತದಿಂದೆತ್ತಿದಂ ನಲ್ಲೆಯಿಂ    ೩೨೦

ನೋಡು ನಂದೀಶ ಇಂತಪ್ಪುದೊಂದರಿದುಂಟೆ
ನೋಡೆನ್ನನೇಕಚಿತ್ತದಲರ್ಚಿಸಿದರುಂಟೆ
ಭವಿಗಂಜಿ ಭವಕಂಜಿ ಎನ್ನನಪ್ಪಿದರುಂಟೆ
ಭವದ ಬೆಂಬಳಿವಿಡಿಯದೆನ್ನನಪ್ಪಿದರುಂಟೆ
ಎನ್ನಪ್ಪಿನಿಂದ ಹೆಣ್ಣು ಗಂಡಾದರಿಂತುಂಟೆ
ಎನ್ನ ಭಕ್ತರ್ಗೆ ಮೂಲೋಕದೊಳು ಸರಿಯುಂಟೆ
ಎಂದು ಕೊಂಡಾಡುತಂ ಗಣಕುಲಕೆ ತೋರುತಂ
ಸಂದಣಿಪ ಸುಖದಿಂದೆ ಹೆಚ್ಚಿ ಕಳೆಯೇರುತಂ
ಹೇರೂರ ಭಕ್ತಂಗೆ ಗಣಪದವಿಯಂ ಕೊಟ್ಟು
ಕಾರುಣ್ಯನಿಧಿಯೊಲಿದು ಹರುಷದಿಂ ಮುಂದಿಟ್ಟು                   ೩೩೦

ಏಕನಿಂತೊಪ್ಪಿದನನೇಕ ನಿಂತೊಪ್ಪಿದಂ
ಸಾಕಾರನೆನಿಸುವ ನಿರಾಕಾರನೊಪ್ಪಿದಂ
ಕಾಮಹರನೊಪ್ಪಿದಂ ಕರ್ಮಹರನೊಪ್ಪಿದಂ
ಸೋಮಧರನೊಪ್ಪಿದಂ ತ್ರಿಪುರಹರನೊಪ್ಪಿದಂ
ತಾನೊಲಿಯೆ ಪಾಪವಂ ಪುಣ್ಯಮಂ ಮಾಡುವಂ
ತಾನೊಲ್ಲದಿರೆ ಪುಣ್ಯವಂ ಪಾಪವೆನಿಸುವಂ
ವಿಮಲತರ ನೀಲಕಂಧರ ನಿತ್ಯನೊಪ್ಪಿದಂ
ಅಮಮ ಹಂಪೆಯ ವಿರೂಪಾಕ್ಷನಿಂತೊಪ್ಪಿದಂ          ೩೩೮

ಗಂಡನನಪ್ಪದ ಮುನ್ನವೆ
ಕಂಡಾ ಹೇರೂರ ಹೆಣ್ಣಿನಂದೊಲವಿಂದಂ |
ಗಂಡಂ ಮಾಡಿದನಮರರ
ಗಂಡಂ ಮದನಾರಿ ಹಂಪೆಯ ವಿರೂಪಾಕ್ಷಂ ||