ಅರುಹಕುಲಕುಮುದ ಭಾಸ್ಕರ
ನರುಹದ್ವಿಪಸಿಂಹ ಹಂಪೆಯ ವಿರೂಪಾಕ್ಷಂ |
ಶರಣರ್ ಜಯವೆನೆ ಮೆರೆದಂ
ಪರಿವಳಿಗೆಯ ವೈಜಕವ್ವೆಯಂ ಧಾರುಣಿಯೊಳ್ ||

ಒಂದು ಶಿವಪುರಂ ವಿರಾಜಿಸಿರ್ಪುದುತ್ತರಾದಿಸೆಯಲ್ಲಿ
ಇಂದುಧರನ ಹರನ ಶರಣವೃಂದದಿಂದಲೊಪ್ಪುತಲ್ಲಿ
ಶಿವನ ಭಕ್ತನೊರ್ವನಿಪ್ಪನಾತನರಸಿ ಪರಮಭಕ್ತೆ
ಭವನ ಭಾವಭರಿತಚರಿತೆ ಸರ್ವಲಕ್ಷಣ ಪ್ರಯುಕ್ತೆ
ಅಂತವರ್ಗೆ ಪುಟ್ಟಿದಳು ವಿವೇಕನಿಧಿಯೆನಿಪ್ಪ ಬಾಲೆ
ಕಂತುಹರನನೊಲಿಸಬಲ್ಲ ನಿರ್ವಿಕಾರಯುಕ್ತಶೀಲೆ
ನಾಮವಾಕೆಗೋಜೆವೆತ್ತ ವೈಜಕವ್ವೆಯೆಂಬುದಾಗೆ
ಸೋಮಧರನ ಕಿವಿಗೆ ಸವಿಗಳೀವ ಕರ್ಣಪೂರಮಾಗೆ
ಬೆಳೆವುತಿರ್ದಳಿಂದುಕಳೆಗೆ ಮುಖದ ಬೆಳಗನೀವುತಲ್ಲಿ
ಬಳೆವುತಿರ್ದಳಮಮ ನಿತ್ಯನೇಮದಚಲ ಭಕ್ತಿಯಲ್ಲಿ    ೧೦

ಬೆಳೆಯೆ ಬಾಲಲೀಲೆ ಕಳೆದು ಯೌವನಂ ತಳಿರ್ತು ತೋರೆ
ತೊಳಗುವಂಗರೇಖೆ ಕನಕಲತೆಯನಳಿದು ಕಳಿದು ಮೀರೆ
ಪದತಳಂ ಸರಾಗನಳಿನದಳದ ಕೆಂಪನೇಳಿಸುತ್ತೆ
ಮುದದೆ ಗುಲ್ಫಗಳ್ಸುವರ್ಣ ಘಟಿಕೆಯಂತೆ ರಂಜಿಸುತ್ತೆ
ಜಾನುದೇಶವಾನತರ್ಗನೂನ ಪದವನಿತ್ತು ತಣಿಪೆ
ಭೂನುತಂಗಳೂರುದಂಡವಲ್ಲಿ ಕದಳಿಯೊಳ್ಪನರಿಪೆ
ಕೃತಕಗಿರಿಯಸಿರಿಯನೆಳೆದು ಸೆಳೆದುಕೊಂಡ ಜಘನವೊಪ್ಪೆ
ಆ ತನುವಿಂಗೆ ಪೊಗುವಡಡ್ಡವಾದ ತೆರದೆ ತ್ರಿವಳಿಯೊಪ್ಪೆ
ಪೊಕ್ಕು ಗುಣ್ಪನರಿವಡತನುಗರಿದೆನಿಪ್ಪ ನಾಭಿಯೆಸೆಯೆ
ಮಿಕ್ಕು ಮೀರಿ ಸೈತನಾಗಿ ಸೂಸದಡರ್ದ ಬಾಸೆ ಮೆರೆಯೆ          ೨೦

ಮಿಸುಪ ಮೊಲೆ ಮನೋಜ ಕುಂಭಿಕುಂಭಯುಗಮನೆಯ್ದೆ ತೆಗಳೆ
ಎಸೆವ ತೋಳ ಮೊದಲನಂಗಖಡ್ಗಲತೆಯ ಹೊಗರನುಗುಳೆ
ವದನಮಂಡಲಂ ಮೃಗಾಂಕಬಿಂಬವಂ ನಗುತ್ತೆ ಪಳಿಯೆ
ಸುದತಿಯಕ್ಷಿ ಮದನಬಾಣದುದಯಮಂ ನಿಮಿರ್ಚಿ ಕಳೆಯೆ
ಕುಂತಳಂ ಕವರ್ತು ಕೊರ್ವಿ ಕುಸುಮಗಂಧದಿಂದೆ ಮೆರೆಯೆ
ಇಂತು ವೈಜಕವ್ವೆಗೊಪ್ಪಿ ಯೌವನಂ ಪೊದಳ್ದು ಮೆರೆಯೆ
ತಂದೆ ಕಂಡು ಮಗಳ ರೂಪ ಯೌವ್ವನಕ್ಕೆ ನೇಹದಿಂದೆ
ಇಂದುಮುಖಿಗೆ ವರನನರಸವೇಳ್ಕುಮೆಂಬ ಚಿತ್ತದಿಂದೆ
ಇರುತಿರಲ್ಕೆ ಬಂದಳೂರ್ಗೆ ತನ್ನ ತಂಗಿ ನೋಡಲೆಂದು
ಪರಿವಳಿಗೆಯೊಳಿರ್ಪ ಜೈನನರಸಿ ಹರುಷದಿಂದೆ ಬಂದು            ೩೦

ಸುಖದೊಳಿರ್ದ ವೈಜಕವ್ವೆಯಿರವನಳ್ಕರಿಂದೆ ನೋಡಿ
ನಿಖಿಳ ಸಂಪದಕ್ಕೆ ನೆಲೆಯಿದಪ್ಪುದೆಂದು ಮತ್ತೆ ನೋಡಿ
ತನ್ನ ಪುತ್ರನಪ್ಪ ನೇಮಿಸೆಟ್ಟಿಗುಚಿತವೀಕೆಯೆಂದು
ಉನ್ನತಪ್ರಮೋದ ಯೌವನಂ ಸಮಾನವಪ್ಪುದೆಂದು
ನೆನೆದು ನೋಡಿನುಡಿದಳಣ್ಣನಲ್ಲಿ ನಲಿದು ಸಲುಗೆಯಿಂದೆ
ಮನದೊಳುತ್ಸವಂಬಡುತ್ತೆ ಬೇಡಿದಳ್ ವಿಮೋಹದಿಂದೆ
ನಿನ್ನ ಮಗಳನೆನ್ನ ನಿಜತನೂಭವಂಗೆ ಕುಡುವುದೆಂದು
ಸನ್ನುತಂ ಸಲಕ್ಷಣಂ ವರಾನ್ವಿತಂ ಸಮಾನವೆಂದು
ನುಡಿಯೆ ಕೇಳ್ದು ಸೋದರಳಿಯನಾದಡೇನು ಭವಿಗೆ ಕುಡೆನು
ಮೃಡನ ಭಕ್ತರಾವು ಸವಣಗುನ್ನಿಗಳಿಗೆ ಹೆಣ್ಣ ಕುಡೆನು     ೪೦

ಎಂಬ ನುಡಿಗೆ ತಂಗಿ ಒಟ್ಟಿವೊರಲಿಯಳುತೆ ಬೇಡಿ ಕಾಡಿ
ನಂಬಿ ನಚ್ಚಿ ಬೆನ್ನ ಬಂದ ಸೋದ[ರಿ]ಕ್ಕೆ ಲೇಸುಮಾಡಿ
ನುಡಿದರಪ್ಪುರಪ್ಪುದೆನ್ನ ಸೊಸೆಯನಿಂತು ಬಿಡುವಳಲ್ಲ
ಕುಡದೆ ನಿಂದಡಣ್ಣ ತನುವನಳಿವಳಲ್ಲಡುಳಿವಳಲ್ಲ
ಎಂದು ನುಡಿವೊಂದುಪಾಸವೆರಡುಪಾಸವಿರ್ದಳಲ್ಲಿ
ಅಂದು ನೆರೆಯ ಹೊರೆಯ ನಂಟರಿಷ್ಟರೆಲ್ಲ ನೆರೆವುತಲ್ಲಿ
ನೋಡ ನಿನ್ನ ತಂಗಿ ಪಟ್ಟಿರುತ್ತೆ ಸತ್ತಡಕಟ ಲೇಸೆ
ಬೇಡ ಜೈನರಾದಡೇನು ಮಗಳನೀವುದೀವು[ದೈ]ಸೆ
ಪಿರಿಯರಲ್ಲಿ ನಂಟರಲ್ಲಿ ನಲ್ಲರಲ್ಲಿ ಚಲವಿದೇಕೆ
ಗುರುವಿನಲ್ಲಿ ಗೋತ್ರದಲ್ಲಿ ತಂದೆಯಲ್ಲಿ ಬಲ್ಪಿದೇಕೆ            ೫೦

ಎಂದು ಪೇಳೆ ಭಕ್ತನಲ್ಲಿ ಕಂದಿ ಕುಂದಿ ಮನವನಿಳಿಪಿ
ನೊಂದು ಸುಯ್ದೊಡಂಬಡುತ್ತೆ ಬಂಧುಜನವನೆಯ್ದೆ ಕಳುಪಿ
ಇಹದ ಕೀರ್ತಿಗಂಜಿ ಪರದ ಗತಿಯನೆಯ್ದೆ ಮರೆದು ಕಳೆದು
ಅಹಹ ಕೊಡುವೆನೆಂಬ ಬುದ್ದಿ ಚಿತ್ತದೊಳಗೆ ಬೇಗ ಹೊಳೆದು
ಕೊಟ್ಟೆನೇಳು ತಂಗಿ ಬ[ಟ್ಟೆ]ಗುತ್ತತನವಿದೇವುದೆಂದು
ಕೊಟೆನವ್ವ ಪುತ್ರಿಯಂ ಸಧರ್ಮದಿಂದೆ ರಕ್ಷಿಸೆಂದು
ನುಡಿಯೆ ಪುಳಕವೇಳಲೆದ್ದು ಪರಮಹರುಷಚಿತ್ತೆಯಾಗಿ
ಒಡನೆ ಹುಟ್ಟಿದಣ್ಣನಂ ಸರಾಗದಿಂದವಪ್ಪಿ ಪೋಗಿ
ಕರೆಯಿಸಲ್ಕೆ ಬಂದ ಜೋಯಿಸಂಗೆ ದಕ್ಷಿಣೆಗಳನ್ನಿತ್ತು
ಹರುಷದಿಂದೆ ಲಗ್ನಮಂ ಸಮೀಪದಿನದೊಳೊಲಿದು ಹೊತ್ತು         ೬೦

ಇರೆ ವಿವಾಹ ಮಂಟಪಂ ಸವಿಸ್ತರಂ ನಿಮಿರ್ಚಿತಲ್ಲಿ
ಅರರೆ ತಳಿರ ತೋರಣಂಗಳೊಪ್ಪಿ ನೆಗೆದವಲ್ಲಿಗಲ್ಲಿ
ನಡುವೆ ವೇದಿಕಾವಿಳಾಸವಾಗಳೊಪ್ಪುತಿರ್ದವಲ್ಲಿ
ಮಡದಿಯರ್ಕಳಿಂಡೆ ದಿಂಡೆ ತೊಂಡಿಲಿಂದ ಮೆರೆಯಲಲ್ಲಿ
ಇಂತು ಮದುವೆಯುತ್ಸವಂ ವಿರಾಜಿಸುತ್ತಮಿರ್ದುದಿತ್ತ
ಕಂತು ಹರನ ಭಕ್ತೆ ವೈಜಕವ್ವೆ ನಿತ್ಯ ನೇಮದತ್ತ
ಬಂದು ಶಿವನ ಮುಂದೆ ನಿಂದು ಸೂಸಿ ಸುಯ್ದು ಘಾಸಿಯಾಗಿ
ಇಂದುಮೌಳಿ ಕರುಣಿಸೆನುತೆ ನಿತ್ಯನೇಮಹಸ್ತೆಯಾಗಿ
ದೇವ ಭವಿಗೆ ಮದುವೆ ಬಂದು ತಾಪಿಸಿರ್ದುದೇವೆನಯ್ಯ
ಭಾವಿಸಲ್ಕೆ ಭವಿಯ ಸೋಂಕನಾವ ತೆರದೊಳಾರ್ಪೆನಯ್ಯ            ೭೦

\ಜಿಚಿ<uಡಿಳಗೆ ಪುಟ್ಟಿ ಮರವೆಯೊಳಗದೆಂತು ಪುಗುವೆನಯ್ಯ
ಬೆಳಗಿನೊಳಗೆ ಬೆಳೆದು ತಮದೊಳೆಂತು ಪೋಗಿ ಬೀಳ್ವೆನಯ್ಯ
ನಿಮ್ಮನರಿಯದಚ್ಚ ಬಚ್ಚಬರಿಯ ಭವಿಗಳಲ್ಲಿ ದೇವ
ನಿಮ್ಮನೆಂತು ನೆನೆವೆನೆಂತು ನೋಳ್ಪೆನೆಂತದೆಂತು ದೇವ
ಏಕೆ ಭಕ್ತರೊಳಗೆ ಬರಿಸಿ ಭವಿಗಳೊಳಗೆ ನೂಂಕಿದಪ್ಪೆ
ಏಕೆ ನಿಮ್ಮನರಿಪಿಯರಿಯಲೀಯದಿರಿದು ನೋಡಿದಪ್ಪೆ
ಕರುಣಿಯೆಂಬರಭವ ಕರುಣವಿಲ್ಲದಂತಿರ್ಪಿರಯ್ಯ
ತರುಣಿಯೊರಲುತಿದ್ದೆನೆನ್ನನಕ್ಕಟಾ ವಿಚಾರಿಸಯ್ಯ
ದೇವ ಚಂದ್ರಮೌಳಿ ಶೂಲಿ ಗರಳಕಂಠ ಕರುಣಿಸಯ್ಯ
ದೇವಸಲಿಲಶಯನನಯನಚರಣಕಮಲ ಕರುಣಿಸಯ್ಯ           ೮೦

ಅಯ್ಯಲಾ ಕೃಪಾಳುವೆ ದಯಾಳುವೇ ನಿರೀಕ್ಷಿಸಯ್ಯ
ಅಯ್ಯಲಾ ಸದಾಶಿವಾ ಶಿವಾಧವಾ ಪರೀಕ್ಷಿಸಯ್ಯಾ
ಎಂದು ಪುಯ್ಯಲಿಡುವ ಪುಯ್ಯಲಂ ಪುರಾರಿಯಾಲಿಸುತ್ತೆ
ಬಂದು ವೈಜಕವ್ವೆಗೊಂದು ಮರಹನಲ್ಲಿ ಕೀಲಿಸುತ್ತೆ
ಕನಸಿನೊಳಗೆ ನಿಂದು ವೈಜಕವ್ವೆ ನಿನಗೆ ಚಿಂತೆ ಬೇಡ
ಅನುದಿನಂ ಸಮೀಪದಿಂದವಗಲೆನವ್ವ ನಂಬು ನೋಡ
ಮದುವೆಯಾಗಿ ಪೋಗು ಮಗಳೆ ಮೆರೆವೆನಲ್ಲಿ ನಿನ್ನನೆಂದು
ಮದನವೈರಿ ಕರುಣದಿಂದೆ ನಿಂದು ಬೆಸಸಿ ಪೋಗಲಂದು
ಮೆಲ್ಲನೆಚ್ಚರೊಳಗೆ ಸಂದು ವೈಜಕವ್ವೆ ತಿಳಿದು ನೋಡಿ
ಅಲ್ಲಗಲ್ಲಿಗಡರ್ದು ನಳನಳಿಪ್ಪ ಪುಳಕದೊಳಗೆ ಕೂಡಿ         ೯೦

ಶುಂಭು ಬೆಸಸಿತಕ್ಕೆ ಮನವನಿಂಬುಗೆಯ್ದು ನಂಬಿ ನಚ್ಚಿ
ದಂಭರಹಿತೆ ಜೈನರಹಿತೆ ಶರ್ವಸಹಿತೆ ಮೆಚ್ಚಿ ಮಚ್ಚಿ
ಇರೆ ವಿವಾಹದುತ್ಸವಂ ವಿರಾಜಿಸುತ್ತಮಿರ್ದುದಲ್ಲಿ
ತರುಣಿಯರ್ಕಳೆಸೆದ ಸಿಂಗರಂಗಳೊಪ್ಪುತಿರ್ದುದಲ್ಲಿ
ಆಗಳೆಲ್ಲ ತೆರದ ಸಂಭ್ರಮಂಗಳೊಳಗೆ ನಲಿದು ಬಂದು
ರಾಗದಿಂದೆ ಮದುವೆ ಮಂಟಪಾಂತರಂಗಳೊಳಗೆ ನಿಂದು
ಸಕಲ ವಸ್ತುನಿಕರಹಸ್ತವಾದ ಬಂಧುಜನಗಳೊಳಗೆ
ಸುಕರವೆನಿಪ ಮುಕುರಕಳಸ ಲಲಿತ ಲಲನೆಯರ್ಕಳೊಳಗೆ
ವರನಿರಲ್ಕೆ ವೈಜಕವ್ವೆಗೊಪ್ಪೆ ಸಿಂಗರಂಗಳಾಗೆ
ತರುಣಿಯರ್ಕಳಿಂಬುಗೊಂಡು ಬರ್ಪ ಗಾಡಿ ಗಮಕವಾಗೆ   ೧೦೦

ತಂದು ತಂಡುಲಂಗಳೊಳಗೆ ಬೇರೆ ಬೇರೆ ನಿಲಿಸಲಲ್ಲಿ
ಅಂದು ನಡುವೆ ತೆರೆ ವಿರಾಜಿಸಲ್ಕೆ ಬಂಧುನಿಕರವಲ್ಲಿ
ಆಯತಪ್ರಣಾದಚಿತ್ತರಾಲಿಸುತ್ತೆ ನೋಡೆ ನೋಡೆ
ಜೋಯಿಸನ ಮುಹೂರ್ತವಚನದೊಡನೆ ತೆರೆಗಳಲ್ಲಿ ಕೂಡೆ
ವೈಜಕವ್ವೆಗಳಿಗೆ ಸೋಲ್ತ ನೇಮಿಸೆಟ್ಟಿಯೊಪ್ಪವಾಗೆ
ಮೂಜಗಂಗಳರಿಯೆ ಮುಂದೆ ಮೆರೆವುದಕ್ಕೆ ಚಿಹ್ನಮಾಗೆ
ವರ ಸುವಾಸಿನೀಜನಂಗಳೆತ್ತುವಾರತಿಗಳು ಮೆರೆಯೆ
ಪರಸುತಿಪ್ಪ ಪರಕೆ ಮಂಗಳಂಗಳಂ ನಿಮಿರ್ಚಿ ಕರೆಯೆ
ಇಂತು ಮದುವೆ ಬೆಳೆವುತಿರೆ ಚತುರ್ಥಿಯಂ ನಿಮಿರ್ಚಿ ಕಳೆದು
ಮುಂತೆ ಪರಿವಳಿಗೆಗೆ ನಡೆದು ಪೊಕ್ಕು ಸುಖವನೊಲಿದು ತಳೆದು  ೧೧೦

ತಮದ ನಡುವೆ ನಿರ್ಮಳ ಪ್ರಭಾಕರಾಂಶುವಿರ್ಪ ತೆರದೆ
ಅಮಮ ತರುಗಳೊಳಗೆ ಚಂದನಂ ವಿರಾಜಿಸಿರ್ಪ ತೆರದೆ
ನೇಮಿಸೆಟ್ಟಯೊಡನೆ ವೈಜಕವ್ವೆ ಸುಖದೊಳೊಂದಿರುತ್ತೆ
ಕಾಮಹರನನೊಳಗೆ ನೆನೆಯುತೊಳಗೆ ಕಂಡು ಪೂಜಿಸುತ್ತೆ
ಭಸಿತ ರುದ್ದರಕ್ಕೆಯಂ ಮನೋಶರೀರದೊಳಗೆ ತಳೆದು
ಪುಸಿವು ಕಾಮವಾಸೆ ಲೋಭವೆಂಬ ಕಸವನುಡುಗಿ ಕಳೆದು
ಹೃದಯನಿಳಯ ಕಮಳವಳಯ ಕರ್ಣಿಕಾ ಸುಪೀಠದೊಳಗೆ
ಸದಮಳ ಪ್ರಕಾಶರಾಶಿ ರೂಪಲಿಂಗವೊಳಗೆ ತೊಳಗೆ
ಮನದ ಪುಷ್ಪಪೂಜೆ ನೆಗಳೆ ನೇಹದುಸುರ ಧೂಪವೆಸೆಯೆ
ನೆನಹಿನರಿವಿನಚ್ಚ ಬೆಳಗಿನ ಪ್ರಕಾಶದೀಪವೆಸೆಯೆ ೧೨೦

ಭಕ್ತಿಯೋಗರಂ ವಿರಾಜಿಸಲ್ಕೆ ಶಿವನನೆಯ್ದೆ ತಣಿಸಿ
ಮುಕ್ತಿ ಸುಖದೊಳಿಂತು ಬಾಳುತಿರ್ಪಳಬಳೆ ಭವವನಿಳಿಪಿ
ಜಲದ ಜಲಜದಂತೆ ಪವನನಂತೆ ತರಣಿ ಕಿರಣದಂತೆ
ತಿಲದ ತೈಲದಂತೆ ನನ್ನಿಯಂತೆಯಾತ್ಮ ತೇಜದಂತೆ
ಜೈನರೊಳಗೆ ಹೊದ್ದಿ ಹೊದ್ದದಿರ್ಪಳಮಮ ನಿರ್ಮಳಾಂಗಿ
ದಾನನಿಧಿ ನವೀನಭಕ್ತೆ ಮಾನಶೀಲೆ ಸುರುಚಿರಾಂಗಿ
ವಿಮಳಭಕ್ತೆ ಶಾಂತಿಯುಕ್ತೆ ಯತಿವಿರಕ್ತೆ ವೈಜಕವ್ವೆ
ಅಮಮ ಗುಪ್ತೆ ಭವಸಮಾಪ್ತೆ ಶೈವಶಕ್ತೆ ವೈಜಕವ್ವೆ
ಇಂತೆನಿಪ್ಪ ಗುಣಗಣಕ್ಕೆ ನಿಳಯಮೆನಿಸಿ ನೆನೆವುತಿರ್ದು
ಸಂತತಂ ಪುರಾರಿಯಂ ಸರಾಗದಿಂದೆ ಬಯಸುತಿರ್ದು         ೧೩೦

ದೇವ ಭವಿಗಳೊಳಗಣಿರವಿದೆಂದು ಮಾಣ್ಬುದೆಂದೆನುತ್ತೆ
ದೇವ ನಿನ್ನನೆನ್ನ ಕಣ್ಗಳಾರೆ ಕಾಬೆನೆಂದೆನುತ್ತೆ
ದೇವ ಚಿತ್ತವೃತ್ತಿ ತಣಿಯೆ ಪೂಜಿಸುವೆನದೆಂದೆನುತ್ತೆ
ದೇವ ಜೈನರೊಳಗೆ ಸಿಲ್ಕಿದೆಂ ಪುರಾರಿ ಬಿಡಿಸೆನುತ್ತೆ
ಇಂತು ಶಂಕರಂಗೆ ಸಾರಿ ತೋರಿ ಮೀರಿ ದೂರಿಸುತ್ತೆ
ಚಿಂತೆ ಬಲಿಯೆ ಭಕ್ತಿ ನಲಿಯೆ ಶುಂಭುವೊಲಿಯೆ ಭಾವಿಸುತ್ತೆ
ಇರಲಿರಲ್ಕೆ ನೇಮಿಸೆಟ್ಟಿ ಹರುಷದಿಂದೆ ಮನೆಗೆ ಬಂದು
ಕರೆದು ವೈಜಿ ಕೇಳ ಸಕಳ ಋಷಿಯರೆಲ್ಲ ನೆರೆದುಬಂದು
ಚರಿಗೆ ಮಾಡಿದಪ್ಪರಿಲ್ಲಿ ಬೋನಮಂ ವಿರಾಜಿಸೆಂದು
ಸರಸ ವಸ್ತುನಿಕರಮಂ ಸರಾಗದಿಂದೆ ಮುಂದೆ ತಂದು        ೧೪೦

ತೋರಿ ಕೊಟ್ಟು ವೈಜಕವ್ವೆಗಿನಿದೆನಿಪ್ಪ ಮಾತನಾಡೆ
ಮೀರಿದಂತೆ ಮುಳಿಯದಂತೆ ಬೋಳವಣೆಯನೆಯ್ದೆ ಕೂಡೆ
ಮಾಡುತಿರ್ದಳಲ್ಲಿ ಬೋನಮಂ ಮಹೇಶಭಕ್ತಿಯುಕ್ತೆ
ನೋಡೆ ನೊಡೆ ಮೃಡ ವಿವೇಕನಿಧಿ ದಯಾಂಬುನಿಧಿ ವಿರಕ್ತೆ
ಹಾಲಲವುಗು ಹಾಲಲುಂಡೆ ಹಾಲಮಂಡಿಗೆಗಳನಟ್ಟು
ಮೇಲೆನಿಪ್ಪ ತರಗು ಹೂಸಣಂಬುಮಂ ತೆರಳ್ಕೆಯಿಟ್ಟು
ಲಡ್ಡುಗೆಗಳನೆಸೆವ ಬೀಸುವೂರಿಗೆಗಳನೆಯ್ದೆ ಸಾರ್ಚಿ
ಇಡ್ಡಲಿಗೆಯನಣ್ಣೆವಾಲ ಪಾಯಸುಗಳಂ ನಿಮಿರ್ಚಿ
ಚಂದ್ರಿಕಾ ಸುಬೀಜವೆನಿಪ ಕಳವೆಯೋಗರಂಗಳಾಗೆ
ಸಾಂದ್ರರುಚಿಯ ಕಂಪನಾಂತ ಶಾಕಪಾಕತತಿಯುಮಾಗೆ       ೧೫೦

ಕಿವಿಗೆ ಕಣ್ಗೆ ಜಿಹ್ವೆಗೆಯ್ದೆ ನಾಸಿಕಕ್ಕೆ ತನುಗೆ ಮೆರೆವ
ರವದ ಚೆಲ್ವ ರುಚಿ ಸುಗಂಧ ಮೃದುಗಳಿಂದೆ ಸವಿಗಳೊರೆವ
ಮಧುರವಾಮ್ಲ ಕಟುಕ ತಿಕ್ತ ಲವಣ ಕೈಪೆವೆಸರನುಳ್ಳ
ಮಧುಗೆ ವಿಧುಗೆ ಸುಧೆಗೆ ಮಿಗಿಲೆನಿಪ್ಪ ರುಚಿಯ ರೂಪನುಳ್ಳ
ಸಕಳ ಸುಖವನಾಂತು ಷಡ್ರಸಾಯನಂಗಳೊಪ್ಪೆ ಮಾಡಿ
ಸುಕರಚಿತ್ತೆ ಸಚ್ಚರಿತ್ರೆ ವೈಜಕವ್ವೆ ಮಾಡಿ ನೋಡಿ
ಅಕ್ಕಟಾ ಸುವಸ್ತುವಂ ಮಹೇಶ ನಿನಗೆ ಸಲ್ಲಿಸಲಿಲ್ಲ
ತಕ್ಕ ಭಕ್ತವಿತತಿಗೆಯ್ದೆ ತವಕದಿಂದೆ ತಣಿಸಲಿಲ್ಲ
ಇಂತು ಮಾಡಿದಯ್ಯಯೆನ್ನ ತಂದೆ ಭವಿಗಳಲ್ಲಿ ಕೂಡಿ
ಕಂತುವೈರಿ ನಿಮಗೆ ಭಕ್ತಿಮಾಡಿಲಿಲ್ಲದಂತೆ ಮಾಡಿ                        ೧೬೦

ಇಂತಿವಂ ಪುರಾರಿ ನಿಮ್ಮನರಿಯದಚ್ಚ ಪಾಪಿಗಳ್ಗೆ
ಎಂತು ಮಾಡಿ ನೋಡಿ ಕೊಡುವೆನಯ್ಯ ಸವಣಗುನ್ನಿಗಳ್ಗೆ
ಎಂದಳಲ್ದು ಕಂದಿ ಕುಂದಿ ನೊಂದು ಕಣ್ಣನೀರನಿಕ್ಕೆ
ಬಂದು ತಾಗಿತಭವನಂ ಸಮರ್ಥ ಸತ್ಯ ಭಕ್ತಿಯಕ್ಕೆ
ತಾಗೆ ಶಂಭುವರಿದು ಮಚ್ಚಿ ಕರುಣದಿಂದೆ ಗಿರಿಜೆಗೆಂದ
ರಾಗವಲರೆ ನುಡಿದನಲ್ಲಿ ಕೇಳ ನಿನಗೆ ಪೇಳ್ವೆನೊಂದ
ವೈಜಕವ್ವೆಯಕ್ಕೆಯಂ ಸಡಿಲ್ಚಿಕೊಂಡು ಬರ್ಪೆನೆಂದು
ರಾಜಿಸುತ್ತೆ ದೇವ ಶರಣವೇಷದಿಂ ಬರುತ್ತವಂದು
ದಶಭುಜಂಗಳಂ ಭುಜದ್ವಯಂಗಳಾಗೆ ನಿರ್ಮಿಸುತ್ತೆ
ಎಸೆವ ಪಂಚಮುಖವನೊಂದು ವದನದೊಳಗೆ ರಂಜಿಸುತ್ತೆ   ೧೭೦

ಹೆರೆಯನಲ್ಲಿ ಕಿರಿಯ ಜೆಡೆಗೆ ಮಿರುಪ ಕುಸುಮವಾಗಿ ಮಾಡಿ
ಮೆರೆವ ಕೊರಲ ಗರಮಂ ಶರೀರವರ್ಣದೊಳಗೆ ಕೂಡಿ
ಪುಲಿದೊವಲ್ವಿಭೂತಿ ಭೂಷಣಂ ವಿಶೇಷಮಾಗಲೊಪ್ಪೆ
ನಲಿದು ಕುಣಿವ ಕುಂಡಲಂಗಗಳುಭಯ ಗಂಡತಟದೊಳೊಪ್ಪೆ
ಸುಲಿದು ಪಲ್ಲ ಬೆಳಪ ಕಣ್ಗಳಭವನಲ್ಲಿ ಚೆಲ್ವುಗೊಂಡು
ನಲಿವುತಜಕಪಾಲಪಾತ್ರವೊಪ್ಪೆ ಕರದೊಳಾಂತುಕೊಂಡು
ಬಂದು ಪರಿವಳಿಗೆಯ ನೇಮಿಸೆಟ್ಟಿಯಿಪ್ಪ ಮನೆಯ ಮುಂದೆ
ನಿಂದು ವೈಜಕವ್ವೆ ಕಾಣ್ಬ ಕೇಳ್ವ ತೆರದೆ ಕರುಣದಿಂದೆ
ಭವನ ವೇಷವಚ್ಚಶರಣ ವೇಷದಿಂದೆ ರಂಜಿಸುತ್ತೆ
ಶಿವನ ಕರುಣವಕ್ಕೆ ನಿಮಗೆ ಭಿಕ್ಷೆಯೀವುದೆಮಗೆನುತ್ತೆ            ೧೮೦

ಇರೆ ಸದರ್ಥೆ ವೈಜಕವ್ವೆ ಹರುಷದಿಂದೆ ಕೇಳುತಂದು
ಸರವನಾಲಿಸುತ್ತೆ ಕಿವಿ[ಯೆ] ಕಣ್ಗಳಾದ ತೆರದೆ ಬಂದು
ನೆನೆವ ಮನವೆ ಕಾಮಧೇನುವಾದ ತೆರದೆ ಬಂದಿರಯ್ಯ
ಮನದ ಬಯಕೆ ಭಾವಿಸಲ್ಕೆ ರೂಪುಗೊಂಡ ತೆರದೊಳಯ್ಯ
ಎನುತೆ ಪುಳಕಿಸುತ್ತೆ ಕಂಪಿಸುತ್ತೆ ಪದದ ಮೇಲೆ ಬಿದ್ದು
ವಿನುತಭಕ್ತೆ ಹರುಷಚಿತ್ತೆಯಾಗಿ ಬೀಗಿ ಮೆಲ್ಲನೆದ್ದು
ದೇವ ಪಾತ್ರೆ ಕಿರಿದು ವಸ್ತು ಪಿರಿದದಂತು ಮಾಳ್ಪೆನೆಂದು
ಭಾವಭಕ್ತಿಭರಿತೆ ತೀವುತಿರ್ದಳಲ್ಲಿ ತಂದು ತಂದು
ತಂದು ತೀವಲೊಳಕೊಳುತ್ತವಿರ್ದುದಲ್ಲಿ ಕಿರಿಯಪಾತ್ರೆ
ಅಂದು ಕೌತುಕಂಬಡುತ್ತವಿಕ್ಕಿದಳ್ ಸರೋಜನೇತ್ರೆ ೧೯೦

ಒಳಗೆ ತೀರೆ ಪಾತ್ರೆ ತೀವೆ ವೈಜಕವ್ವೆ ನೋಡಿ ನಲಿದು
ಎಳಸಿ ಹಿಗ್ಗಿ ಬಳಸಿ ಹೆಚ್ಚಿ ನಚ್ಚಿ ಮಚ್ಚಿ ಪವಣನರಿದು
ದೇವ ಪೋಗವೇಳ್ಕುದಭವ ಕರುಣಿಸಿನ್ನಿರಲ್ಕೆವೇಡ
ದೇವ ಮತ್ತೆ ಭವಿಗಳಿಲ್ಲಿ ಬಂದು ಸುಳಿಯೆ ಕಾಣಬೇಡ
ಎನೆ ವಿಭೂತಿಯಂ ಕೊಡುತ್ತೆ ಮಾತನಾಡಿ ಹೊತ್ತುಗಳೆದು
ತನು ಸುರುಳ್ದುದೇಕೆ ವೈಜಕವ್ವೆ ನಿನಗೆ ಚಿಂತೆ ಪಿರಿದು
ಎನುತಿರಲ್ಕೆ ಬರುತೆ ನೇಮಿಸೆಟ್ಟಿ ರಿಸಿಯರೆಲ್ಲರಂದು
ಮನದೊಳತಿ ವಿರೋಧದಿಂದೆ ನೋಡೆ ನೋಡೆ ನೆಗೆದನಂದು
ನೆಗೆಯೆ ಋಷಿಯರೆಲ್ಲ ಮುಟ್ಟುಪಡವಿದಾದುದೊಲ್ಲೆವೆಂದು
ಬಗೆಯೊಳತಿ ವಿಷಾದವೇರಿ ನೊಂದು ತಿರುಗಿ ಪೋಗಲಂದು           ೨೦೦

ಮನೆಗೆ ಬಂದು ನೇಮಿಸೆಟ್ಟಿ ಮುನಿದು ಸುಯ್ದು ನುಡಿದನಂದು
ವನಿತೆ ನೀನಿದೇಕೆ ಇಂತು ಮಾಡಿಯೆನ್ನನಿರಿದೆಯೆಂದು
ರಿಸಿಯರೋಗರಂಗಳಂ ತಪಸ್ವಿಗಿಕ್ಕಿ ಕೆಡಿಸಿ ಕಳೆದೆ
ಹೊಸೆದ ಹೂವಿನಂತೆ ರಿಸಿಯರೆಲ್ಲ ಪಸಿದು ಪೋದರುರದೆ
ಗೊರವರೆಂಜಲಾಯ್ತು ಮುಟ್ಟುಪಡವನಿಂತು ಮಾಡಿ ನಿಂದೆ
ಅರುಹನ ವ್ರತಕ್ಕೆ ಹೊಲ್ಲಗೆಯ್ದು ಕುಂದನಿಂದು ತಂದೆ
ಎಂದ ನೇಮಿಸೆಟ್ಟಿಗಂದು ನುಡಿದಳೆಮ್ಮ ವೈಜಕವ್ವೆ
ಇಂದುಧರನ ಭಕ್ತಿಯುಕ್ತೆ ನಿಜದ ನೀರೆ ವೈಜಕವ್ವೆ
ಶಿವನ ನೊಸಲನಯನದೆಂಜಲೆಂಬುದರಿಯ ಲೋಕವೆಲ್ಲ
ಭವನ ಕರುಣದಿಂದವಿಪ್ಪದೆಂಬುದರಿಯ ಭುವನವೆಲ್ಲ    ೨೧೦

ನೇಮಿಸೆಟ್ಟಿ ನೀನದಕ್ಕೆ ಮರುಳನಾಗಿ ಕೆಟ್ಟು ನುಡಿದೆ
ಭೂಮಿಯೊಳಗೆಯರುಹನೆಂದದಾರದೆಲ್ಲಿ ಬರಿದೆ ಮುನಿವೆ
ವೇದದೊಳಗೆ ಶಾಸ್ತ್ರದೊಳಗೆ ನೋಡಲಿಲ್ಲ ನುಡಿಯಲಿಲ್ಲ
ವಾದಿದೇವರಾದಿಯಲ್ಲಿ ಹೇಳಲಿಲ್ಲ ಕೇಳಲಿಲ್ಲ
ಬಯಲ ಬರಿಯ ಬೊಂಬೆಗಳಿಗೆ ಭಕ್ತಿಮಾಡಿ ಮರುಗಲೇಕೆ
ಅಯಶವಿಹದ ಪರದ ನರಕ ಬರಿದೆ ಕೆಟ್ಟು ಪೋಗಲೇಕೆ
ಎಂದು ವೈಜಕವ್ವೆಗುತ್ತರಕ್ಕೆ ತೆರಹುಗಾಣದಿರ್ದು
ನೊಂದು ನೇಮಿಸೆಟ್ಟಿ ಕೋಪದಿಂದೆ ಬಂದು ಹತ್ತೆ ಸಾರ್ದು
ತನ್ನ ಭಾಗ್ಯಕುಸುಮಮಾಲೆಗಲಸಿ ಪೊಸೆದು ಬಿಸುಡುವಂತೆ
ತನ್ನ ಪುಣ್ಯಫಲವನಂದು ಜಡಿದು ಘಾಸಿಮಾಡುವಂತೆ      ೨೨೦

ಪಾಪಿ ಮುಟ್ಟೆ ಬಡಿದನಲ್ಲಿ ವೈಜಕವ್ವೆ ಸೆಡೆದು ನೋಯೆ
ಕೋಪಿ ಬಡಿದನಲ್ಲಿ ರಜತಗಿರಿಯೊಳಭವನೆಯ್ದೆ ನೋಯೆ
ಬಡಿಯೆ ವೈಜಕವ್ವೆ ಶಿವನನಂದು ನೆನೆವುತಿರ್ದಳಲ್ಲಿ
ಮೃಡನನಂತರಂಗದೊಳಗೆ ಭಾವಿಸುತ್ತಲಿರ್ದಳಲ್ಲಿ
ಇರಲಿರಲ್ಕೆ ಭಕ್ತೆ ನೋಯೆ ನೊಡಲಾರೆನೆಂಬ ತೆರದೆ
ತರಣಿಯಿಳಿದನಪರಜಳಧಿವಳಯದೊಳಗೆ ಮೆಲ್ಲನುರದೆ
ಇಳಿಯೆ ವೈಜಕವ್ವೆಯೊಡನೆ ವೇಳೆಗೊಂಡ ತೆರದೆ ಬಳಲೆ
ನಳಿನ ಸಮಿತಿ ಮುಗಿಯೆ ಕುಮುದವಲರೆ ಚಕ್ರವಾಕವಗಲೆ
ಕವಿಯೆ ತಮವನಂತರಂ ಸುತಾರಕಾಳಿ ಘಳಿಲನೊಗೆಯೆ
ನವಕರಂಗಳಿಂದ ಬೆಳಗುತೋಷಧೀಶನಂದು ನೆಗೆಯೆ ೨೩೦

ವೈಜಕವ್ವೆ ನೊಂದು ಕಂದಿ ಕುಂದಿ ಮಧ್ಯನಿಶಿಯೊಳೆಯ್ದೆ
ರಾಜಶೇಖರಂಗೆ ಪುಯ್ಯಲಿಕ್ಕೆ ನೋವು ಶಿವನನೆಯ್ದೆ
ಕನಸಿನಲ್ಲಿ ಮುನ್ನ ಬಂದ ತೆರದೆ ಶಂಭುವೊಲಿದು ಬಂದು
ಮನದ ಮೊನೆಯ ಕೊನೆಯ ಭಾವದಚಲ ದೀಪ್ತಿಯೊಳಗೆ ನಿಂದು
ನಿನಗೆ ಚಿಂತೆ ಬೇಡ ಬೇಡ ವೈಜಕವ್ವೆ ನಾಳೆ ನೋಡ
ಜಿನನ ಶಿರವನೊಡೆದು ಜಡಿದು ಮೂಡಿ ನಿಲುವೆನಂಜಬೇಡ
ಎಂದು ಬೆಸಸಿ ಪೋಗೆ ಮೆಲ್ಲನೆಚ್ಚರೊಳಗೆ ಸಂದು ತಿಳಿದು
ಇಂದುಧರನ ಕೃಪೆಯಿದೆಂದು ಹರುಷಚಿತ್ತೆ ಮನದೊಳರಿದು
ಇರೆ ಪುರಾರಿ ಜಿನನನೊಡೆದು ಮೂಡುವುದನೆ ನೋಳ್ಪೆನೆಂದೆ
ತರಣಿಯೊಗೆದನಲ್ಲಿ ವೈಜಕವ್ವೆಗಿತ್ತ ನಲಿವನಂದೆ ೨೪೦

ಅ[ರುಹ]ತೆಲ್ಲರರಿಯ[ಲೆ]೦ದು ಭಸತಮಂ ತೆರಳ್ಚಿ ಪೂಸಿ
ಅರೆವರುಳ್ಗಳೆನಿಪ ಜೈನ ಮಲಿನ ಕುಲದ ಕಲೆಗೆ ಹೇಸಿ
ಸುಲಿದ ಪಲ್ಲ ಸುಲಲಿತಾಂಗಿ ಧವಳವಸನದಮೃತಮೂರ್ತಿ
ಛಲದ ಲಲನೆ ನಲವಿನೊಲ[ವೆ] ಶಿವನ ಭವನ ಭುವನಕೀರ್ತಿ
ವೈಜಕವ್ವೆ ನಿಳಯದೊಳಗೆ ಸುಖದೊಳೊಪ್ಪುತಿರ್ದಳಿತ್ತ
ರಾಜಿಸುತ್ತೆ ಧರಣಿಯೊಳಗೆ ಜೈನರೆಲ್ಲ ಬಸದಿಯತ್ತ
ಬಂದು ಕದವನೊತ್ತಿ ಹೋಗದಿರ್ದಡಲ್ಲಿ ಸವಣರೆಲ್ಲ
ನಿಂದು ಕೌತುಕಂಬಡುತ್ತೆ ವಿಕೃತವೇಷನಿಹಿತರೆಲ್ಲ
ಹಾರೆ ದಬ್ಬುಕಂಗಳಿಂದೆ ಒತ್ತಿ ಒತ್ತಿ ನೂಂಕಿ ಸೆಡೆಯೆ
ಮೇರೆಯಿಲ್ಲದಚಲ ಕಠಿಣ ತರುಗಳಿಂದೆ ಒತ್ತಿ ಕೆಡೆಯೆ        ೨೫೦

ಮತ್ತಕರಿಗಳಿಂದೆ ಒತ್ತಿ ನೂಂಕಿಸುತ್ತೆ ಬಾಡಿ ಬಳ್ಕಿ
ಮತ್ತಯುಂ ಸಹಸ್ರ ಬಾರಿಯಂತುಮಿರದೆ ನೂಂಕುತಳ್ಕಿ
ಜೈನರೆಲ್ಲ ಜಂಗು ಜರಿದು ಋಷಿಯರೆಲ್ಲ ಮಟ್ಟವಾಗಿ
ಮಾನವಳಿದು ಮೌನವುಳಿದು ಹೀನಮನದ ದೀನರಾಗಿ
ಏಕೆ ಜಿನಕವಾಟವಿಕ್ಕಿತದ್ಭುತ ಪ್ರಕಾರವೆಂದು
ಏಕೆ ತಾನಿದಾದಪುದು ನಿರೋಧವೆಂದು ಮುಳಿದು ನೊಂದು
ನಮ್ಮ ಪುರದೊಳಿಂದು ನಿನ್ನೆ ಧರ್ಮಹಾನಿಗೆಯ್ದರುಂಟೆ
ಉಮ್ಮಳಕ್ಕೆ ಕಜ್ಜವೇನೊ ಜೀವತತಿಯನಳಿದರುಂಟೆ
ಇಲ್ಲದಿರ್ದಡರುಹನಿಂತು ಕದವನಿಕ್ಕಿಕೊಂಬನಲ್ಲ
ಎಲ್ಲರಂತೆ ಭೂತಹಿಂಸೆ ಮಾಳ್ಪ ಸಮಯವಿಂತಿದಲ್ಲ      ೨೬೦

ಜೀವತತಿಗೆ ನೋವು ಬಂದಡರುಹನಿಲ್ಲಿ ನಿಲ್ವನಲ್ಲ
ಭಾವಿಸಲ್ಕೆ ಸುಮ್ಮನಿರದೆ ಪೇಳಿರೆಮಗೆ ಜೈನರೆಲ್ಲ
ಎಂದಡಲ್ಲಿ ನೇಮಿಸೆಟ್ಟಿ ನಿನ್ನೆ ಬಡಿದೆನೆನ್ನ ಸತಿಯ
ನಿಂದು ಕದವನಿಕ್ಕಿತೇನನೆಂಬೆನೆನ್ನನಗಲ್ದ ಮತಿಯ
ನೆನಲು ಜೈನರೆಲ್ಲರುಂ ತೆರಳ್ಚಿ ಕೂಡಿಕೊಂಡು ಬಂದು
ವನಿತೆ ವೈಜಕವ್ವೆಯಲ್ಲಿಗೆಲ್ಲರೆಯ್ದೆ ಸಾರ್ದು ನಿಂದು
ಚರಣದಲ್ಲಿ ಬಿದ್ದು ವೈಜಕವ್ವೆ ನಿನ್ನ ನೋವಿನಿಂದೆ
ಅರುಹನಲ್ಲಿ ಕದವನಿಕ್ಕಿಕೊಂಡು ಕಾಡುತಿರ್ದನಿಂದೆ
ಬಂದು ಕದವನಿಂದು ತೆರೆಯಿಸುತ್ತೆ ಕರುಣಿಸೆಂದು ನುಡಿಯೆ
ಇಂದುವದನೆ ನಗುತೆ ನುಡಿದಳಲ್ಲಿ ಪಿರಿಯರೆಯ್ದೆ ಸೆಡೆಯೆ        ೨೭೦

ಏಕೆ ಬಂದಿರಣ್ಣ ವೈಜಕವ್ವೆಯೆತ್ತಲರುಹನೆತ್ತ
ಲೋಕನಾಥನರುಹಶಿರವನೊಡೆದು ಮೂಡಿ ನಿಂದನತ್ತ
ನೀವು ಬೇಡಿಕೊಳಲಿದೇಕೆ ನಾನೆ ಬಪ್ಪೆನೆನ್ನ ಗತಿಗೆ
ನೀವಿದೇಕೆ ಬೇಡವಾಯಸಂಗೊಳಲ್ಕೆ ನೋಡ ಧರೆಗೆ
ಹೊಸತು ಮಾಳ್ವೆನೆನುತೆ ನಡೆದಳಭವಭಕ್ತೆ ವೈಜಕವ್ವೆ
ಅಸಮನಯನಚಲಭಕ್ತಿ ನೆಲಸಿನಿಂದ ವೈಜಕವ್ವೆ
ಬಕನಿಕಾಯಮಧ್ಯದೊಳಗೆ ನಡೆವ ರಾಜಹಂಸೆಯಂತೆ
ಸಕಲ ಜೈನಕುಲದ ನಡುವೆ ವೈಜಕವ್ವೆ ನಡೆವುತಿಂತೆ
ಬಂದು ಶಿವಕವಾಟದಲ್ಲಿ ನಿಂದು ನೋಡುತಚಲಭಕ್ತೆ
ಇಂದುವದನೆ ಸುಕೃತ ಸದನೆ ದೇವರಲ್ಲಿ ಸಹಜಯುಕ್ತೆ  ೨೮೦

ದೇವ ಸತ್ಯ ನಿತ್ಯ ಭರ್ಗ ಭೀಮ ರುದ್ರ ಕರುಣಿಸಯ್ಯ
ದೇವ ಸಕಲ ಭುವನತಿಮಿರಹರಣ ಕಿರಣ ಕರುಣಿಸಯ್ಯ
ದೇವ ವಹ್ನಿಮಿತ್ರ ಕುಮುದಮಿತ್ರನಯನ ಕರುಣಿಸಯ್ಯ
ದೇವ ದುರಿತನಿಕರದೂರ ಭುಜಗಹಾರ ಕರುಣಿಸಯ್ಯ
ದೇವ ಗಿರಿಶ ಗಿರಿಜೆಯರಸ ತತ್ವದರ್ಶ ಕರುಣಿಸಯ್ಯ
ದೇವ ಚಂದ್ರ ಸುರನದೀ ಕಳಾಪಜೂಟ ಕರುಣಿಸಯ್ಯ
ಎಂದು ಹೊಗಳ್ವ ತುತಿಗಳೊಡನೆ ಶಾಂತಿ ಕುಸುಮವರಳ್ವ ತೆರದೆ
ಇಂದುಧರನ ನಿಜದ ಪರಮಭಕ್ತಿ ತೆರಹುಗುಡುವ ತೆರದೆ
ಶಿವನ ಕಣ್ಗಳೆವೆಯ ಸಂಪುಟಂಗಳಲ್ಲಿ ಸಾರ್ವತೆರದೆ
ಭವನ ನಿಷ್ಠೆಯೊಗ್ಗು ಹಿಗ್ಗಿ ತನ್ನೊಳೆಡೆಯನೀವ ತೆರದೆ           ೨೯೦

ಶಿವಕವಾಟವಲ್ಲಿ ತೆರೆಯಲೊಳಗೆ ತೋರುತಿರ್ದುದರರೆ
ನವ ಮರೀಚಿ ಮಸಗಿ ದೆಸೆಗೆ ಪರಿದು ತೊಳಿಗಿ ಬೆಳಗಲರರೆ
ಜಿನನ ಶಿರವನೊಡೆದು ಶಿವನ ಲಿಂಗವಲ್ಲಿ ಬೆಳೆದು ನೆಗೆಯೆ
ಅನಘನಪ್ರಮಾಣನತುಳತೇಜನಮಳ ಕಾಂತಿಯೊಗೆಯೆ
ಜೈನರೆಲ್ಲ ಕಂಡು ಕಣ್ಗಳುರಿದು ತನುಗಳುರಿದು ಬೀಳೆ
ಮಾನವಳಿದು ಗಂಡುಗೆಟ್ಟನೂನ ದುಃಖಜಲದೊಳಾಳೆ
ನೆರೆದ ಋಷಿಯರೆಲ್ಲ ಬೆಂದ ಮರದ ತೆರದೆ ಜಂಗು ಜರಿಯೆ
ಪರಮ ಪಂಡಿತರ್ಕಳೆಲ್ಲ ಮೆಲ್ಲ ಮೆಲ್ಲನೆದ್ದು ಸರಿಯೆ
ಆಗಳಲ್ಲಿ ವೈಜಕವ್ವೆ ಶಿವನನಪ್ಪಿ ಭವನನಪ್ಪಿ
ರಾಗವಲರೆ ಚರಣತಳವನಪ್ಪಿ ಮತ್ತೆ ಮಾಣದಪ್ಪಿ            ೩೦೦

ಪುಳಕವಡರೆ ಗದ್ಗದಂಗಳಡಸೆ ಬೆಮರ ಬಿಂದುನೆರೆಯೆ
ಇಳಿವ ಸುಖಜಲಂ ವಿಲೋಚನಂಗಳಿಂದೆ ಸೂಸಿ ಪರಿಯೆ
ಕುಣಿದು ಕುಣಿದು ತಣಿದು ಮಣಿದು ತೇಗಿ ಬೀಗಿ ವೈಜಕವ್ವೆ
ಅಣಿಯರಂಗಳುಕ್ಕಲಾಡಿ ಹಾಡಿ ನೋಡಿ ವೈಜಕವ್ವೆ
ತನ್ನ ಚರಣದಲ್ಲಿ ಬಿದ್ದ ನೇಮಿಸೆಟ್ಟಿಗೆಂದಳಂದು
ಎನ್ನ ಸಂಗವಾದ ನಿನಗೆ ಪಾಪವಾಗಲಾಗದೆಂದು
ಕರುಣದಿಂದೆ ಭಸಿತವಿಟ್ಟು ಶೈವದೀಕ್ಷೆಯಂ ತೊಡರ್ಚಿ
ಪರಮ ಪಂಚವರ್ಣ ಕರ್ಣಕುಹರನಪ್ಪುದಂ ನಿಮಿರ್ಚಿ
ಎನ್ನ ಪೆಸರ ವೈಜನಾಥದೇವರಿವರನರ್ಚಿಸುವುದು
ಉನ್ನತ ಪ್ರಮೋದಮಂ ಮಹೇಶನಲ್ಲಿ ಪೆರ್ಚಿಸುವುದು   ೩೧೦

ಎಂದು ನುಡಿವುತಿರಲಿರಲ್ಕೆ ಪುಷ್ಪವೃಷ್ಟಿ ಸುರಿದವಲ್ಲಿ
ದುಂದುಭಿ ಪ್ರಾಣಾದದೊಡನೆ ಶಂಖನಾದವೊಗೆದುದಲ್ಲಿ
ನಡುವೆ ಬಂದುದೊಂದು ಪುಷ್ಪಕಂ ಜಗಂಗಳೆಲ್ಲ ಹೊಗಳೆ
ಮೃಡನ ಭಕ್ತಸಂಕುಳಕ್ಕೆ ಸಂತಸಂಗಳೆಯ್ದೆ ನೆಗಳೆ
ಭುವನವೆಲ್ಲ ಹೊಗಳೆ ವೈಜಕವ್ವೆ ಪುಷ್ಪಕದೊಳೆ ಹೊಕ್ಕು
ಶಿವಗಣಂಗಳೊಡನೆಯಬಂರಕ್ಕೆ ನೆಗೆದು ಮೀರಿ ಮಿಕ್ಕು
ಬಂದು ನಂದಿನಾಥನಿಪ್ಪ ಬಾಗಿಲಲ್ಲಿ ಭೋಂಕನಿಳಿದು
ಇಂದುಮೌಳಿ ಶರಣೆನುತ್ತೆ ಪುಳಕತತಿಯನೊಲಿದು ತಳೆದು
ಎನ್ನ ನಿಧಿಯೆ ಎನ್ನ ಮಧುವೆ ಎನ್ನ ಸುಧೆಯೆ ಕರುಣಿಸೆಂದು
ಎನ್ನ ಗುರುವೆ ಪರಮ ಗುರುವೆ ಪರಕೆ ಕರುಣಿಸೆಂದು    ೩೨೦

ತಂದೆ ತಾಯೆ ಗತಿಯೆ ಮತಿಯೆ ಚಂದ್ರಚೂಡ ಕರುಣಿಸೆಂದು
ಬಂದು ವೈಜಕವ್ವೆ ಹರನ ಚರಣದಲ್ಲಿ ಬೀಳಲಂದು
ಶಂಭುವೊಸೆದು ನಲಿವುತೆತ್ತಿ ಶಿರದ ಮೇಲೆ ಕರವನಿಟ್ಟು
ದಂಭರಹಿತನೊಲವು ಸಹಿತ ವೀಕ್ಷಿಸುತ್ತೆ ಚಿತ್ತವಿಟ್ಟು
ಗಿರಿಜೆ ನೋಡ ವೈಜಕವ್ವೆಯಂತೆ ನಿಷ್ಠೆಯುಳ್ಳರುಂಟೆ
ಪರರ ಸಮಯದೊಳಗೆ ನಿಂದು ಭಕ್ತಿಯುಕ್ತೆಯಾದರುಂಟೆ
ಸವಿಗೆ ಸವಿಗಳೆನಿಪ ವಸ್ತುಕುಲವನೆನ್ನೊಳಿತ್ತರುಂಟೆ
ಭುವನದೊಳಗೆ ಭಕ್ತಿಯಂ ವಿರಾಜಿಸಲ್ಕೆ ಮೆರೆದರುಂಟೆ
ಎಂದು ಕೊಂಡು ಕೊನೆದು ರುದ್ರಕನ್ನಿಕಾ ನಿಯೋಗವಿತ್ತು
ಸಂದ ಗಣನಿಕಾಯದೊಳಗೆ ಸಕಳ ಸುಖಮನೆಯ್ದೆ ಹೊತ್ತು  ೩೩೦

ರಜತಗಿರಿಯ ಸಿರಿಯ ನಿಳಯದೊಳಗೆ ಬೆಳಗುತಿರ್ದನಲ್ಲಿ
ನಿಜಮರೀಚಿ ಕೋಟಿರವಿಯ ರುಚಿಯನಳಿಪನಿರ್ದನಲ್ಲಿ
ಸುರನದಿವಿರಾಜಮಾನ ಜೂಟನೊಪ್ಪುತಿರ್ದನಲ್ಲಿ
ಪರಮಭಕ್ತಜನಸಮೀಪ ರೂಪನೊಪ್ಪುತಿರ್ದನಲ್ಲಿ
ಅಂಬಕತ್ರಯಂ ನಭಃಪುರಾರಿಯೊಪ್ಪುತಿರ್ದನಲ್ಲಿ
ನಂಬಿ ನೆನೆಯಲಿಂಬುಗೊಂಬ ಶಂಭುವೊಪ್ಪುತಿರ್ದನಲ್ಲಿ
ದೇವಗಣ ಸಹಸ್ರದೊಳಗೆ ಭಾಳನಯನನೊಪ್ಪಿದಂ
ದೇವನೆನ್ನ ಹಂಪೆಯರಸ ವಿರೂಪಾಕ್ಷನೊಪ್ಪಿದಂ          ೨೨೮

ಧರೆ ಹೊಗಳೆ ಕೃಪೆಯೊಳಾಹಾ
ಪರಿವಳಿಗೆಯ ವೈಜಕವ್ವೆಯಂ ಮೆರೆದಭವಂ |
ಕರುಣಿಸುಗೆ ಭಕ್ತಿಸುಖಮಂ
ಹರುಷಂ ಮಿಗಲೆನಗೆ ಹಂಪೆಯ ವಿರೂಪಾಕ್ಷಂ ||