ನುತಪಾಂಡ್ಯಮಹಾದೇವಿಯ
ವಿತತ ಚರಿತ್ರಮನೆ ಪೇಳ್ವೆನೆನ್ನರಿವನಿತಂ |
ಹುತವಹಲೋಚನ ಹಂಪೆಯ
ಪತಿ ರಕ್ಷಿಸುಗಿಳೆಯೊಳಧಿಕ ಕರುಣೋದಯದೊಳ್ ||

ಎಸೆವ ಪಾಂಡ್ಯದೇಶಂ ರಂಜಿಸುವುದು
ಹೊಸ ಹೊಸ ವಸ್ತುಗಳಿಂ ಶೋಭಿಸುವುದು
ಅದನಾಳ್ವರಸಂ ಪಾಂಡ್ಯನೆನಿಪ್ಪಂ
ಮುದದಿಂ ಘನ ತೇಜದಿನೆಸೆದಿಪ್ಪಂ
ಆತಂಗೆ ಮಹಾದೇವೀಪದದಿಂ
ಖ್ಯಾತ ಪಟ್ಟಮಹಿಷೀಘನಪದದಿಂ
ಎಸೆವ ಪಾಂಡ್ಯ ಮಹಾದೇವಿಯೆನಿಪ್ಪಳು
ವಸುಮತಿಯೊಳು ಸ್ತ್ರೀರೂಪದೊಳ್ಳಿಪ್ಪಳು
ಚೋಳಭೂಪಕುಲವರ್ಧನೆಯೆನಿಪಳು
ಭಾಳನೇತ್ರನಂ ಮನದೊಳು ನೆನೆವಳು ೧೦

ಸಿರಿಯುಪ್ಪಿನ ಕಡಲೊಳು ಪುಟ್ಟಿರೆ ತಾ
ನುರು ನಿರ್ಮಳಕುಲದೊಳ್ ಪುಟ್ಟಿರೆ ತಾ
ನತಿ ಭೂಬಲಗುಣಿ ಲಕ್ಷ್ಮಿಯೆನುತ್ತಂ
ಮತಿ ಮಿಗೆ ಬಹುಜನಭಾಗ್ಯೆಯೆನುತ್ತಂ
ಸ್ಥಿರಭಾವದೊಳಾನಿಪ್ಪೆಂ ಮುದದೊಳು
ವರನೊರ್ನನೆ ಮತ್ತರಿಯೆಂ ಮನದೊಳು
ಎಂದೆನುತಂ ತಾಂ ಸಿರಿಯಂ ಗೆಲುತಂ
ಚಂದದಿಂದೆ ಶಿವಭಕ್ತಿಯೊಳಿರುತಂ
ಭಸಿತಮನಲ್ಲದೆ ಪಣೆಯೊಳು ಪೂಸಳು
ಲಸಿತ ಶಿವಾರ್ಚನೆಯಲ್ಲದೆ ಮಾಡಳು          ೨೦

ಮತ್ತಾಕೆಯ ಚಿತ್ತಂ ಶಿವನತ್ತಲು
ಬಿತ್ತರದಿಂ ಕಾಯಂ ಪತಿಯತ್ತಲು
ನೋಟಂ ಪತಿಯೊಳು ಕೂಟಂ ಶಿವನೊಳು
ಮಾಟಂ ಗೃಹದೊಳು ಬೇಟಂ ಹರನೊಳು
ಸಂಧ್ಯಾದೇವತೆಯೊಲು ಜಗವಂದ್ಯಳು
ಸಂಧ್ಯಾನಟವರ್ಚನೆಯೊಳು ವಂದ್ಯಳು
ಮುಕುರದ ಕಾಂತಿಯ ತೆರದೊಳು ತನ್ನೊಳು
ಸಕಲ ಭಾವಮಂ ತೋರ್ಪಳು ಮುದದೊಳು
ನೋಡಿದರಂ ಪಾವನವಂ ಮಾಳ್ಪಳು
ಬೆಡಿದರ್ಗೆ ಸುರಧೇನುವದಪ್ಪಳು  ೩೦

ಭಾಷೆಗಳಿಂ ಭಾರತಿಯಂ ಮಿಗುವಳು
ವೇಷದಿಂದೆ ರತಿಯಿರವಂ ಪಳಿವಳು
ಪರಹಿತಗುಣದಿಂ ಧರೆಯಂ ಜರೆವಳು
ಚರಿತದೊಳಮರುಂಧತಿಗೆಣೆಯಪ್ಪಳು
ವಿಭವದೊಳಾ ಶಚಿಯಂ ಗಹಗಹಿಪಳು
ಶುಭರುಚಿಯಂ ರೋಹಿಣಿಯಂ ಗೆಲುವಳು
ನುಡಿಯೊಳಗಮೃತದ ಸರಿಯಂ ಸುರಿವಳು
ನಡೆಗಳೊಳಂ ಹಂಸೆಗಳಂ ಗೆಲುವಳು
ಬಡನಡುವಿಂ ಸಿಂಗಂಗಳ ಗೆಲುವಳು
ತೊಡೆಗಳ ರುಚಿಯಿಂ ಬಾಳೆಯ ಪಳಿವಳು         ೪೦

ದೈವ ಪದಂಗಳನುರೆ ಪಾಲಿಸುವಳು
ದೈವ ಗಡಣಮಂ ಸಲೆ ಮನ್ನಿಸುವಳು
ಶಿವನಲ್ಲದೆ ಬೇರೊಂದಂ ನೆನೆಯಳು
ತವೆ ಪಂಚಾಕ್ಷರಮಲ್ಲದೆ ನುಡಿಯಳು
ಘನ ಶಿವಪೂಜೆಯನಲ್ಲದೆ ನೋಡಳು
ವಿನಯದೊಳೀಶನನಲ್ಲದೆ ಬೇಡಳು
ಶಿವಪ್ರಸಾದಮುಮಲ್ಲದೆ ಕೊಳ್ಳಳು
ಭವಪಾಶಂಗಳ ಬಲೆಯೊಳು ನಿಲ್ಲಳು
ಪತಿಯ ಮನಕ್ಕುರೆ ಹಿತವೆಯೆನಿಪ್ಪಳು
ಸತಿಯರ ಬಳಗಕೆ ತಿಲಕವೆನಿಪ್ಪಳು ೫೦

ನಿಜಪತಿಯೆನಿಪಾ ಪಾಂಡ್ಯಗೆ ನಲವಿಂ
ಸುಜನಸ್ತುತೆ ಸದ್ಭಕ್ತಿಯನೊಲವಿಂ
ಬೋಧಿಸುತಾತನ ಭಕ್ತನ ಮಾಡಲು
ಬಾಧೆಯಿಲ್ಲದಿಪ್ಪಿರವಂ ತೋರಲು
ಜ್ಞಾನಮುನೀಂದ್ರನನಲ್ಲಿಗೆ ಕರಸುತೆ
ಮಾನಿನಿಯವರಂ ಸಲೆ ಸತ್ಕರಿಸುತೆ
ನಿಜಪತಿಚರಿತಮನವರಿಗೆ ಪೇಳುತೆ
ಗಜಬಡಿಸುವ ಜಿನಮತವಂ ಪೇಳುತೆ
ಸುಮ್ಮನಿರಲು ಜ್ಞಾನೇಶಂ ಕೇಳುತೆ
ಘಮ್ಮನೆ ಮನದೊಳು ಶಿವನಂ ನೆನೆವುತೆ                              ೬೦

ಜೈನರ ಮತಮಂ ಗೆಲ್ದಾ ಧರೆಯೊಳು
ಜೈನರನಾ ಶೂಲಂಗಳ ತುದಿಯೊಳು
ಸಿಕ್ಕಿಸುತಾ ಪಾಂಡ್ಯನೃಪಗೊಲವಿಂ
ಮುಕ್ಕಣ್ಣನ ದೀಕ್ಷೆಯನತಿ ನಲವಿಂ
ಕೊಟ್ಟಾ ಜ್ಞಾನಮುನೀಶಂ ಪೋಗಲು
ನೆಟ್ಟನೆ ಪತಿಸದ್ಭವನದೊಳಾಗಲು
ಮುದದಿಂದಾತನೆ ಗತಿಮತಿಯೆನುತಂ
ಸದಮಳ ನಿಜಪತಿಯೇ ಶಿವನೆನುತಂ
ಕೊಂಡಾಡುತೆ ಶಿವಭಾವಮನಾಗಳು
ತಂಡದಿಂದೆ ಶಿವಭಾವಮನಾಗಳು           ೭೦

ಪತಿಯೊಳು ಭಾವಿಸಲಂತಾ ಭಾವಕೆ
ಮತಿ ಮಿಗಲಾಕೆಯ ಮುನ್ನಿನ ಭಾವಕೆ
ಮೆಚ್ಚಿ ಶಿವಂ ನಿಜರೂಪಂ ತೋರುತೆ
ಚೆಚ್ಚರದಿಂ ಕರುಣವನುರೆ ಬೀರುತೆ
ರಜತಗಿರಿಗೆ ಕೊಂಡೊಯ್ಯಲ್ ನೆನೆವುತೆ
ಸುಜನಸ್ತುತ ಪುಷ್ಪಕಮಂ ಬರಿಸುತೆ
ಮುದದಿಂದಾಕೆಯನದರೊಳಗಿರಿಸುತೆ
ಸದಮಳ ನೃಪವೆರಸಾಕೆಯನಿರಿಸುತೆ
ತಳರಲೊಡನೆ ಕೈಲಾಸಕ್ಕದು ಬರೆ
ತಳುವಿಲ್ಲದವರ್ ಭರದಿಂದಿಳಿತರೆ           ೮೦

ವರ ಪಾಂಡ್ಯಮಹಾದೇವಿಯ ಪರಿಯಂ
ಗಿರಿಜೆಗೆ ಪೇಳುತ್ತಾತನ ಪರಿಯಂ
ಆಕೆಯ ಭಾವದ ಭೇದವನುಸುರುತೆ
ಲೋಕಸ್ತುತ ನಿಜ ಭಕ್ತಿಯನುಸುರುತೆ
ರುದ್ರಕನ್ನಿಕಾಪದಮಂ ಕೊಡುತಂ
ರುದ್ರಂ ಪಾಂಡ್ಯಗೆ ಸುಖಮಂ ಕೊಡುತಂ
ಗಣಪದವೀವುತ್ತಾಸ್ಥಾನಿಕೆಯೊಳು
ಫಣಿಕುಂಡಲನತಿ ಹರುಷೋದಯದೊಳು
ಮೆರೆದಿರ್ದಂ ಪಂಪಾಪುರದೀಶಂ
ಮೆರೆದಿರ್ದಂ ಪಂಪಾಂಬಿಕೆಯರಸಂ  ೯೦

ಪಾಂಡ್ಯನ ಸತಿಯೆಂದೆನಿಸುವ
ಪಾಂಡ್ಯ ಮಹಾದೇವಿಯಧಿಕ ಭಕ್ತಿಗೆ ಮೆಚ್ಚುತೆ |
ಮಂಡಿತ ಹಂಪೆಯ ರಾಯಂ
ಕೊಂಡಾಡುತೆ ರುದ್ರಕನ್ನಿಕಾ ಪದವಿತ್ತಂ ||