“ಗಂಡಸು ಮೇಲು ಹೆಂಗಸು ಕೀಳೆಂಬ ಭಾವನೆಯನ್ನು ನಾನು ಕನಸಿನಲ್ಲೂ ಒಪ್ಪುವವನಲ್ಲ….. ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ; ಅಬಲೆಯೂ ಅಲ್ಲ; ಅವಳೊಂದು ಮಹಾಶಕ್ತಿ”
ಕುವೆಂಪು

ನಮ್ಮ ದೇಶದ ಚರಿತ್ರೆಯಲ್ಲಿ ಸಾಮಾಜಿಕ ಅಸಮಾನತೆಯನ್ನುಂಟು ಮಾಡಿ, ಆ ಮೂಲಕ ಅನೇಕ ಅನ್ಯಾಯ, ಶೋಷಣೆಗಳಿಗೆ ಕಾರಣವಾದ ಅಂಶಗಳಲ್ಲಿ ಜಾತಿಭೇದ, ವರ್ಗಭೇದ, ಲಿಂಗಭೇದಗಳು ಮುಖ್ಯವಾಗಿವೆ. ಸಾಮಾಜಿಕ ಅಸಮಾನತೆಯು, ಆರ್ಥಿಕ, ಧಾರ್ಮಿಕ ಮತ್ತಿತರ ಅಸಮಾನತೆಗಳಿಗೂ ಕಾರಣವಾಗುತ್ತದೆ. ಗಂಡು – ಹೆಣ್ಣು ಎಂಬುದು ಒಂದು ಜೈವಿಕ ವಾಸ್ತವ. ಅದನ್ನು ಹೊರತುಪಡಿಸಿದರೆ ಅನೇಕಾನೇಕ ವಿಚಾರಗಳಲ್ಲಿ ಅವೆರಡೂ ಏಕಜೀವಿಗಳೇ ಆಗಿವೆ. ದೈಹಿಕವಾಗಿಯೂ ಪೂರ್ತಿ ಹೆಣ್ಣು, ಗಂಡು ಬೇರೆ ಬೇರೆಯಲ್ಲ. ಹೆಣ್ಣಿನಲ್ಲಿ ಗಂಡಿನ ಅಂಶಗಳೂ, ಗಂಡಿನಲ್ಲಿ ಹೆಣ್ಣಿನ ಅಂಶಗಳೂ ಇರುವ ಕಾರಣವಾಗಿಯೇ ಅರ್ಧನಾರೀಶ್ವರ, ವಾಗರ್ಥ= ಪಾರ್ವತೀ ಪರಮೇಶ್ವರ ಕಲ್ಪನೆಗಳು ಹಿಂದಿನಿಂದಲೂ ಇದ್ದು, ಅದನ್ನು ಆಧುನಿಕ ವೈದ್ಯಕೀಯ ವಿಜ್ಞಾನವೂ ಒಪ್ಪುತ್ತದೆ.

ಸಾಮಾಜಿಕ, ಕೌಟುಂಬಿಕ ನೆಲೆಗಳಲ್ಲಿ ಹೆಣ್ಣು, ಆಕೆ ಹೆಣ್ಣಾಗಿರುವುದರಿಂದಲೇ ಹೆಚ್ಚು ಅವಮಾನ, ನಿಂದೆ, ತಿರಸ್ಕಾರ, ಹೀನಾಯಗಳಿಗೆ ಈಡಾಗಿದ್ದಾಳೆ. ಕೆಲವು ಬುಡಕಟ್ಟುಗಳಲ್ಲಿ, ಗುಡ್ಡಗಾಡು ಜನಜಾತಿಗಳಲ್ಲಿ ಹೆಣ್ಣಿಗೂ ಹೆಚ್ಚಿನ ಸ್ವಾತಂತ್ರ್ಯವಿರುವುದನ್ನು, ಗಂಡಿನ ಸಮಬಲ ವಾಗಿ ದುಡಿಯುವುದನ್ನು ಜನಾಂಗೀಯ ಅಧ್ಯಯನಕಾರರು ಗುರುತಿಸಿದ್ದಾರೆ. ಅದರಂತೆ ವೇದಕಾಲದಲ್ಲಿ ಹೆಣ್ಣು, ಪುರುಷನ ಸಮಸಮನಾಗಿ ಅಧ್ಯಯನ ನಡೆಸುವ, ಯಜ್ಞ ಯಾಗ ನಡೆಸುವ ವಿಚಾರಗಳನ್ನು ಕೆಲವರು ಎತ್ತಿ ತೋರುತ್ತಾರೆ. ಆದರೆ ಧರ್ಮದ ಹಿಡಿತ ಸಮಾಜದ ಮೇಲೆ ತುಂಬ ಬಲವತ್ತರವಾಗಿದ್ದಾಗ ಹೆಣ್ಣಿಗೆ ಉಸಿರುಗಟ್ಟಿಸುವ ಸ್ಥಿತಿಯೇ ಇರುವುದನ್ನು ಇತಿಹಾಸ ಸಾರುತ್ತದೆ. ವೇದಕಾಲದಲ್ಲಿ ಕೂಡ ಯಾವ ಋಷಿ, ಮುನಿಗಳೂ ಸ್ತ್ರೀಯರಾಗಿ ರಲಿಲ್ಲ; ಕೇವಲ ಋಷಿಪತ್ನಿ, ಮುನಿಪತ್ನಿಯರ ಉಲ್ಲೇಖ ಬಂದರೆ ಸಾಲದು. ಯಾವ ವೇದ, ಉಪನಿಷತ್ತುಗಳನ್ನು ಮಹಿಳೆಯರು ಬರೆಯುವಂತಿರಲಿಲ್ಲ. ಅವುಗಳ ಶಾಸ್ತ್ರೀಯ ಪಠಣ ಮಾಡುವಂತಿರಲಿಲ್ಲ. ಬೌದ್ಧ, ಜೈನ, ಶೈವ, ಕ್ರಿಶ್ಚಿಯನ್, ಶಿಖ್, ಇಸ್ಲಾಂ…… ಮುಂತಾದ ಧರ್ಮ ಪ್ರವರ್ತಕರು, ಧರ್ಮಗುರುಗಳು ಗೌರವದ ಸ್ಥಾನದಲ್ಲಿರುವವರು ಒಬ್ಬರೂ ಹೆಣ್ಣಾಗಿ ರುವ ಉದಾಹರಣೆಗಳಿಲ್ಲ.

ಪ್ರಾಚೀನ ಕಾಲದಿಂದಲೂ ದಾಸ್ಯ, ಗುಲಾಮಗಿರಿಗೆ ಹೆಣ್ಣು ಈಡಾಗುತ್ತ ಬಂದಿದ್ದಾಳೆ. ರಾಜನಿಗೆ ಸೋತವರು ನೀಡುತ್ತಿದ್ದ ಕಾಣಿಕೆಗಳಲ್ಲಿ ಹೆಣ್ಣು ಕೂಡ ಒಂದು ವಸ್ತುವಾಗಿದ್ದಳು. ರಾಜನಿಗೆ, ಸಾಮಂತನಿಗೆ, ಉನ್ನತ ಸ್ಥಾನದಲ್ಲಿರುವವರಿಗೆ ನೀಡಬಹುದಾದ ದಾನಗಳಲ್ಲಿ, ಮೆಚ್ಚುಗೆಗಳಲ್ಲಿ ‘ಸ್ತ್ರೀಗಾಣ್ಕೆ’ಯು ಒಂದಾಗಿತ್ತು. ಅದೇ ರೀತಿ ರಾಜನೂ ತನಗೆ ಬೇಕಾದವರಿಗೆ ಮೆಚ್ಚುಗಾಣ್ಕೆಯಾಗಿ, ಪಡಿಯಾಗಿ ಹೆಣ್ಣನ್ನು ನೀಡಬಹುದಾಗಿತ್ತು. ಪಂಪನಿಗೆ ಆಶ್ರಯ ನೀಡಿದ ರಾಜ ಅರಿಕೇಸರಿ ಕವಿಗೆ ನೀಡಿದ ವಸ್ತು ವಿಸ್ತರಗಳಿವು. “ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಣಂ ಲೆಕ್ಕಮಿಲ್ಲೆನಿಸಿ” ಪಂಪನಿಗೆ ಆತ ನೀಡುತ್ತಾನೆ. ಕನ್ಯೆಯನ್ನು ಆಕೆಯ ಅಭಿಮತ ವನ್ನಾಗಲಿ, ಇಷ್ಟಾನಿಷ್ಟಗಳನ್ನಾಗಲಿ ಗಮನಿಸದೆ ದಾನವಾಗಿ, ಕಾಣಿಕೆಯಾಗಿ, ಶುಲ್ಕವಾಗಿ, ವಸ್ತುಪಡಿಯಾಗಿ, ಒತ್ತೆಯಾಗಿ ನೀಡುವುದನ್ನು ಧಾರಾಳವಾಗಿ ಕಾಣಬಹುದು. ತತ್ವ, ಮೌಲ್ಯ ಗಳ ವೈಭವೀಕರಣದ ಪಾಶದಲ್ಲಿಯೂ ಹೆಣ್ಣನ್ನು ತುಳಿಯುತ್ತಿದ್ದ, ಸಾವಿಗೆ ನೂಕುತ್ತಿದ್ದ ಆಚರಣೆಗಳಿಗಂತೂ ಲೆಕ್ಕವಿಲ್ಲ. ಸತಿ ಪದ್ಧತಿಯ ಸಾವಿರಾರು ಶಾಸನಗಲ್ಲುಗಳು ಇದಕ್ಕೆ ದಾಖಲೆಯಾಗಿವೆ. ಉರಿವ ಬೆಂಕಿಯಲ್ಲಿ ಹಾಕಿ ಕೊಂದು, ಅಲ್ಲಿಯೇ ಗುಡಿ ಕಟ್ಟಿ ನಂತರ ಆರಾಧನೆ ಮಾಡುತ್ತ ಬಂದುದೊಂದು ದೊಡ್ಡ ದುರಂತ; ಪರಲೋಕ ಗತಿಯ ನೆವದಲ್ಲಿ ನಡೆದ ದೊಡ್ಡ ಶೋಷಣೆ.

ಯಾವುದೇ ಬಗೆಯ ದುಡಿಮೆಯಲ್ಲಿ ಮಹಿಳೆಯ ಶಕ್ತಿ, ಸತ್ವ, ರೂಪ, ಸೌಂದರ್ಯಗಳ ಗರಿಷ್ಠ ಪ್ರಯೋಜನ ಪಡೆದ ವ್ಯವಸ್ಥೆಯು ಅದರಿಂದ ಬರುವ ಆದಾಯ, ಅಧಿಕಾರಗಳ ಕೇಂದ್ರದಿಂದ ಅವಳನ್ನು ದೂರಕ್ಕಿರಿಸಿ ನಡೆಸಿದ ವಂಚನೆಯು ತುಂಬ ಶಿಸ್ತಿನಿಂದ, ನೈತಿಕ ಕಟ್ಟಳೆಗಳಿಂದ ಕೂಡಿದೆ. ರಾಣೀವಾಸದ ಹತ್ತಾರು, ನೂರಾರು ಜನ ‘ಪೆಂಡಿರು’ಗಳಿಂದ ಮತ್ತು ದೇವಾಲಯಗಳ ‘ಸೂಳೆ’, ‘ನರ್ತಕಿ’ಯರವರೆಗೂ ಭೋಗದ ಬದುಕಿಗೆ ಬಲಿಯಾದ ಚೇತನ ಗಳನ್ನು ಶಾಸನಗಳಲ್ಲಿ ಕಾವ್ಯಗಳಲ್ಲಿ ಗುರುತಿಸಬಹುದು. ಆಧುನಿಕ ಯುಗದ ಪ್ರಜಾಪ್ರಭುತ್ವ ವೇನೋ ಲಿಂಗಭೇದವನ್ನು ತಾತ್ವಿಕವಾಗಿ ಒಪ್ಪುವುದಿಲ್ಲ; ಆದರೆ ವಾಸ್ತವದಲ್ಲಿ ಆ ತತ್ವ ಪೂರ್ಣ ಅಸ್ತಿತ್ವದಲ್ಲಿಯೇ ಬಂದಿಲ್ಲ. ಹೆಣ್ಣುಮಗು ಬೇಡವೆಂಬ ಮನೋಭಾವ, ಹೆಣ್ಣು ಭ್ರೂಣಹತ್ಯೆ, ಲಿಂಗ ಅನುಪಾತದ ತಾರತಮ್ಯ, ಉದ್ಯೋಗಗಳಲ್ಲಿ ಇರುವ ಪುರುಷ ಪ್ರಭುತ್ವ, ರಾಜಕೀಯದಲ್ಲಿ ಬಾರದ ಸಮಾನತೆ, ಆರ್ಥಿಕ ಪರಾವಲಂಬನೆಗಳಿಂದ ಹೆಣ್ಣು ಇಂದಿಗೂ ಅಪಾರ ಶೋಷಣೆಗೆ, ಅನ್ಯಾಯಕ್ಕೆ ಗುರಿಯಾಗಿ ದನಿ ಕಳೆದುಕೊಂಡಿರುವುದು ನಿಜ. ಒಟ್ಟು ಜನಾಂಗದಲ್ಲಿ ಅರ್ಧದಷ್ಟಿರುವ ಮಹಿಳೆ ಅವಕಾಶ, ಸೌಲಭ್ಯ, ಅಧಿಕಾರ, ಸಂಪತ್ತುಗಳ ವಿಚಾರದಲ್ಲಿ ಸಂಪನ್ಮೂಲ ವಿತರಣೆಯಲ್ಲಿ ನ್ಯಾಯವಾದ ಪಾಲನ್ನು ಈ ವರೆಗೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಸಾಹಿತ್ಯ-ಸಂಸ್ಕೃತಿಗಳ ಸಂದರ್ಭದಲ್ಲಿ ಸ್ತ್ರೀ ಸಮಾನತೆಯ ಇಂದಿನ ಚಿಂತನೆ, ಪರಿಕಲ್ಪನೆ ಗಳಿಗೆ ನಾವು ಪಾಶ್ಚಾತ್ಯ ವಿಚಾರಗಳಿಂದ ಪ್ರಭಾವಿತರಾಗಿದ್ದೇವೆ. ಮಹಿಳಾಪರವಾದ ಇಂದಿನ ಹೋರಾಟಗಳಿಗೆ ಇದೇ ಆಧಾರವೂ ಆಗಿದೆ. ಆಧುನಿಕ ಶಿಕ್ಷಣದ ಮೂಲಕ ಹುಟ್ಟಿದ ಅಲೋಚನೆಗಳಿಂದಾಗಿ ರಾಜಾ ರಾಮಮೋಹನರಾಯ ಅವರಂಥವರು ಬಾಲ್ಯವಿವಾಹ, ಸತೀಪದ್ಧತಿ, ವಿಧವಾ ವಿವಾಹ ಕುರಿತು ಗಾಢವಾಗಿ ಯೋಚಿಸಿ, ಪ್ರತಿರೋಧ ಎದುರಿಸಿ ಕಾನೂನು ಮೂಲಕ ಹೊಸ ವಾತಾವರಣ ನಿರ್ಮಿಸಲು ಚಾರಿತ್ರಿಕವಾದ ಹೋರಾಟ ಮಾಡಿ ದ್ದಾರೆ. ಅಂಬೇಡ್ಕರ್, ಲೋಹಿಯಾ, ಗಾಂಧೀ, ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ಎಂ. ಎನ್.ರಾಯ್ ಅವರ ವಿಚಾರಧಾರೆಗಳೂ ಇದಕ್ಕೆ ಪೂರಕವಾಗಿ ನಿಂತಿವೆ. ಮಹಾದೇವ ಗೋವಿಂದ ರಾನಡೆ, ರಮಾಬಾಯಿ, ಆನಂದಿಬಾಯಿ ಜೋಷಿ, ಮಿಸ್ ಸೊರಾಬ್ಜಿ, ಆನಿ ಜಗನ್ನಾಥನ್, ರುಕ್ಮಾಬಾಯಿ ಮೊದಲಾದವರು ಸ್ತ್ರೀ ಸಮಾನತೆ, ಸ್ವಾತಂತ್ರ್ಯಗಳಿಗೆ ದುಡಿದಿ ದ್ದಾರೆ. ಇಂದು ಮಹಿಳೆ ನಿಧಾನವಾಗಿ ಎಲ್ಲ ರಂಗಗಳಲ್ಲಿ ಸ್ವಂತಿಕೆ, ಸ್ವಾತಂತ್ರ್ಯ, ಸಮಾನತೆ ಪಡೆಯಲು ಯತ್ನಿಸುವ ಸಂದರ್ಭ ರೂಪಗೊಳ್ಳುತ್ತಿರುವುದು ಆರೋಗ್ಯಪೂರ್ಣ ಬೆಳವಣಿಗೆ ಯಾಗಿದೆ. ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗಗಳಲ್ಲಿ ಗಂಡು, ಹೆಣ್ಣು ಅಸಮಾನತೆ ದೂರ ವಾಗುತ್ತಿದೆ. ಹೀಗೆ ಕೆಲವು ಆಶಾದಾಯಕ ಅಭಿವೃದ್ದಿಗೆ ಕಾಲಿಡುತ್ತಿರುವಾಗಲೂ, ಸಿನೇಮಾ, ಟಿವಿ, ಜಾಹೀರಾತು, ಸೌಂದರ್ಯ ಸ್ಪರ್ಧೆ, ಉಡುಪು ಸ್ಪರ್ಧೆಗಳಂತಹ ಸೂಕ್ಷ್ಮ ಶೋಷಣೆ ಪ್ರವೇಶ ಪಡೆಯುತ್ತಿದೆ. ಆಧುನಿಕ ಜಗತ್ತು ಬರುಬರುತ್ತ ಭೌತಿಕ ಭೋಗ ಲಾಲಸೆಗಳ, ಒಡವೆ, ಹಣ ಜೂಜಾಟದ ವ್ಯವಸ್ಥೆಯಾಗಿ ಪರಿವರ್ತನೆಯಾಗುತ್ತಿರುವುದರಿಂದ, ಅದು ಸೃಷ್ಟಿಸುವ ಆಮಿಷಗಳಿಗೆ ಮಹಿಳೆ ಬಲಿಯಾಗುವ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಇಂತಹ ಅಪಾಯಕರ ಬೆಳವಣಿಗೆಗಳ ಬಗೆಗೆ ಸದಾ ಎಚ್ಚರ, ಅರಿವು, ಹೋರಾಟಗಳು ಅನಿವಾರ್ಯವೇ ಆಗಿವೆ.

ಹೆಣ್ಣು ಕೇವಲ ‘ಹೆಣ್ಣು’ ಎಂಬ ಕಾರಣದಿಂದ ನಡೆಯುವ ದೈಹಿಕ, ಮಾನಸಿಕ, ಬೌದ್ದಿಕ, ಸಾಂಪತ್ತಿಕ, ಶೋಷಣೆಯನ್ನು ತಡೆಯುವುದೇ ಲಿಂಗಭೇದ ನಿರಸನವಾಗಿದೆಯಷ್ಟೆ. ಕೌಟುಂಬಿಕ ಸ್ತರಗಳಲ್ಲಿ, ವ್ಯಕ್ತಿಗತ ನೆಲೆಯಲ್ಲಿ, ಸಾಮಾಜಿಕ ಸಂದರ್ಭದಲ್ಲಿ ಹೆಣ್ಣಿಗೆ ಆಗುವ ಅವಮಾನ ಆಘಾತ, ಶೋಷಣೆಗಳನ್ನು ಕನ್ನಡ ನಾಡಿನ ಶಿವಶರಣರು ಮೊದಲು ಗಟ್ಟಿಯಾಗಿ ತಾತ್ವಿಕವಾಗಿ ಪ್ರಶ್ನಿಸಿದರು; ಪ್ರತಿಭಟಿಸಿದರು. ಅವರ ಭಕ್ತಿ, ಸಾಧನೆ, ಗುರಿ, ಉದ್ದೇಶಗಳಲ್ಲಿ ಸರ್ವಸಮಾನತೆ ಪ್ರಧಾನವಾಗಿತ್ತು. ಸಾಮಾಜಿಕ ಸಮಾನತೆ, ಸಾಮರಸ್ಯ, ಸಹಜೀವನಗಳಿಗಾಗಿ ಅವರು ಭಕ್ತಿ ಯನ್ನು ಒಂದು ಮಂತ್ರದಂಡವಾಗಿ ಬಳಸಿದರು. ಭಾವುಕ ಭಕ್ತಿಗಿಂತ, ವಿವೇಕದ ಭಕ್ತಿಗೆ; ಅಂಧ ಆಚರಣೆಗಿಂತ, ಅರಿತ ಆಚರಣೆಗೆ; ಕೇವಲ ಮಾತಿಗಿಂತ, ನಡೆನುಡಿ ಒಂದಾಗುವಿಕೆಗೆ ಅವರು ಒತ್ತು ನೀಡಿದರು. ಈ ದಾರಿಯಲ್ಲಿ ಸಾಗುವವರು ಜಾತಿ, ಮತ, ಪ್ರಾಂತ, ಪ್ರದೇಶ, ವರ್ಗ, ಪಂಗಡ, ಲಿಂಗ, ವಯೋಮಾನಗಳ ಕಾರಣ ಅರ್ಹತೆ, ಅನರ್ಹತೆ ಹೊಂದುತ್ತಿರಲಿಲ್ಲ. ಅಲ್ಲಿ ಪ್ರತಿ ಕಾಯಕಗಳೆಲ್ಲ ಪ್ರತಿಷ್ಠೆ ಪಡೆದವು. ಎಲ್ಲ ಜನರೂ ಷಟ್‌ಸ್ಥಲಕ್ಕೆ ಅರ್ಹರಾದರು. ಹಾಗಾಗಿ ಹೆಣ್ಣು-ಗಂಡು ವಿಷಮತೆಯೂ ಅಲ್ಲಿ ನಿವಾರಣೆಯಾಯಿತು. ಗಡ್ಡಮೀಸೆ ಬಂದರೆ, ಮೊಲೆಮುಡಿ ಬಂದರೆ, ಗಂಡು-ಹೆಣ್ಣೆಂಬ ವರ್ಗೀಕರಣ ಕೇವಲ ಜೈವಿಕ ಮೇಲ್ಪದರಿನದ್ದು ಎಂಬುದನ್ನು ‘ಒಳಗೆ ಸುಳಿವ ಆತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ’ ಎಂಬ ತತ್ವವಾಗಿಸಿ ದರು; ‘ಹೆಣ್ಣು ಸಾಕ್ಷಾತ್ ಕಪಿಲಮಲ್ಲಿಕಾರ್ಜುನ’ ಎಂಬ ಭಾವವಾಗಿಸಿದರು. ಶರಣರ ಈ ದೃಷ್ಟಿಕೋನ ಫಲಿತವಾದುದನ್ನು ಅನೇಕ ಜನ ಶರಣೆಯರು ಅನುಭವ ಮಂಟಪ ಪ್ರವೇಶಿಸು ವಲ್ಲಿ, ವಚನ ರಚಿಸುವಲ್ಲಿ, ಅನುಭಾವ ತತ್ವ ಸಾರುವಲ್ಲಿ ಕಂಡುಕೊಳ್ಳಬಹುದು. ಅಕ್ಕಮಹಾ ದೇವಿ, ಮೋಳಿಗೆ ಮಹಾದೇವಿ, ಅಕ್ಕಮ್ಮ, ಸಂಕವ್ವೆ, ಕಾಳವ್ವೆ, ನೀಲಮ್ಮ, ರೆಮ್ಮವ್ವೆ ಮುಂತಾದ ಎಲ್ಲ ವರ್ಗದ ಶರಣೆಯರು ಆ ಕಾಲಕ್ಕೆ ಅಪರೂಪವಾದ ಕಾರ್ಯಸಾಧನೆ ಮಾಡಿ, ಅಸಾಧ್ಯ ಎಂಬಂತಿದ್ದ ಸ್ವಾತಂತ್ರ್ಯ ಪಡೆದರು; ಸಮಾನತೆ ಸಾಧಿಸಿದರು. ‘ಹೆಣ್ಣು’ ಎಂದರೆ ಕೀಳು, ಮೂಢ, ಹುಣ್ಣು, ಅಸಮರ್ಥ ಎಂಬ ಬಾಲಿಶ ಭಾವನೆಗಳನ್ನು ಕಿತ್ತು ಹಾಕಲೆಂದು ‘ಶರಣಸತಿ ಲಿಂಗಪತಿ’ ಭಾವವನ್ನು ಹೊಸದಾಗಿ ಬಿತ್ತಿ ಬೆಳೆದು, ಹೊಸ ನಂಬಿಕೆಯನ್ನು ಅಸ್ತಿತ್ವಕ್ಕೆ ತಂದರು. ಜಗದಗಲವಾದ ಮುಗಿಲಗಲವಾದ ಅನುಪಮ ‘ಲಿಂಗ’ ಮಾತ್ರ ‘ಗಂಡು’ ಇತರ ಎಲ್ಲ ಗಂಡು, ಹೆಣ್ಣುಗಳೆಲ್ಲರೂ ‘ಹೆಣ್ಣು’ಗಳೇ ಎಂಬ ಭಾವ ವಿನೂತನವಾಗಿದ್ದು, ಅದು ಆಳದಲ್ಲಿ ಲಿಂಗಭೇದವನ್ನು ಇಲ್ಲವಾಗಿಸುವ ತತ್ವವೇ ಆಗಿದೆ. ಅಂಗಭಾವ ಅಳಿದು ಲಿಂಗಭಾವ ರೂಢಗೊಂಡರೆ ಅಲ್ಲಿ ಪುರುಷನೂ ಇಲ್ಲ, ಸ್ತ್ರೀಯೂ ಇಲ್ಲ. ಎಲ್ಲರೂ ಒಂದೇ ಆಗಿದ್ದು ಲಿಂಗಸ್ವರೂಪಿಗಳೇ ಎನಿಸುವ ಪರಿಕಲ್ಪನೆಯ ಮೂಲಕ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಏಕತೆಗೆ, ಸರ್ವಸಮಾನತೆಗೆ ನಾಂದಿ ಹಾಡಿದರು. ಲಿಂಗಭೇದ ತೊಡೆಯುವಲ್ಲಿ ವಚನಕಾರರ ಚಿಂತನೆಗಳು ಕ್ರಾಂತಿಕಾರಕವಾಗಿದ್ದು, ಹೆಣ್ಣಿನ ಬಗೆಗಿನ ಸಾವಿರಾರು ವರ್ಷಗಳ ಹಳತು ಬುದ್ದಿಯನ್ನು ಬಡಿದೆಚ್ಚರಿಸಿದವು; ಹೊಸ ವಿವೇಕಕ್ಕೆ ಕಾರಣವಾದವು.

ವಚನಕಾರರ ಸರ್ವಸಮಾನತಾ ಪ್ರಜಾತಾಂತ್ರಿಕ ಧೋರಣೆಗಳಿಂದ ಪ್ರಭಾವಿತನಾಗಿ, ಭಕ್ತಿತತ್ವದ ಮೂಲಕ ಅನ್ಯಾಯ, ಶೋಷಣೆಗಳಿಗೆ ಇತಿಶ್ರೀ ಹಾಡಿ ಹೊಸ ಸಮಾಜ ವ್ಯವಸ್ಥೆಯ ನಿರ್ಮಾಣದಲ್ಲಿ ಕಾವ್ಯಾಭಿವ್ಯಕ್ತಿಗೆ ತೊಡಗಿದ ಕನಸುಗಾರ ಮಹಾಕವಿ ಎಂದರೆ ಹರಿಹರ. ಆ ಕಾಲದ ಅನೇಕ ವೈರುಧ್ಯಗಳು ಅವನಲ್ಲಿ ಕಿಡಿ ಹೊತ್ತಿಸಿವೆ; ಅರ್ಥಹೀನ ಆಚರಣೆಗಳು ಕಣ್ಣು ಕೆಂಪಾಗಿಸಿವೆ; ಪ್ರಭುತ್ವ ಅವನಲ್ಲಿ ನಿರಾಶೆ ಹುಟ್ಟಿಸಿದೆ. ಹಾಗಾಗಿ ಹಂಪೆಯ ವಿರೂಪಾಕ್ಷನ ಸಾಕ್ಷಿತ್ವದಲ್ಲಿ ತನ್ನದೇ ಉದಿತೋದಿತ ಮಾರ್ಗವನ್ನು ಶೋಧಿಸಿಕೊಂಡ ಆ ಕವಿ, ಜಾತಿ ಭೇದ, ವರ್ಗಭೇದ, ಲಿಂಗಭೇದಗಳನ್ನು ನಿರಾಕರಿಸಿ ಹೊಸ ದೃಷ್ಟಿಯಿಂದ ನೂತನ ಕವಿತಾ ಸೃಷ್ಟಿಗೆ ತೊಡಗಿದನು. ಶರಣರ ಧಾರ್ಮಿಕ ಚಿಂತನೆಗಳನ್ನು ಆಂಶಿಕವಾಗಿ ಸಾಮಾಜಿಕ ಚಿಂತನೆ ಗಳನ್ನು ಪೂರ್ಣಪ್ರಮಾಣದಲ್ಲಿ ರೂಢಿಸಿಕೊಂಡು ಭಾಷೆ, ಅಭಿವ್ಯಕ್ತಿ, ವಸ್ತು, ವಿವರ, ವರ್ಣನೆ ಗಳಲ್ಲಿ ತನ್ನದೇ ಮಾದರಿಗಳನ್ನು ರೂಪಿಸಿಕೊಂಡು ಜನವರ್ಗದ ಉತ್ಥಾನಕ್ಕೆ ಏಕಪ್ರಕಾರವಾಗಿ ಏಕವ್ಯಕ್ತಿಯಾಗಿ ದುಡಿದನು. ಹರಿಹರ ಚಂಪೂಕಾವ್ಯವನ್ನು ಬರೆದರೂ ಹಿಂದಿನ ಕನ್ನಡ ಚಂಪೂಕವಿಗಳಿಗೆ ಆತ ಭಿನ್ನನಾಗಿದ್ದಾನೆ. ಮೊದಲ ಸಲ ರಾಮಾಯಣ, ಮಹಾಭಾರತದ ಕಥನಗಳಿಗೆ ಪರ್ಯಾಯವೆಂಬಂತೆ ಶಿವ-ಪಾರ್ವತಿಯರ ವಿವಾಹ ಪ್ರಸಂಗ ಎತ್ತಿಕೊಂಡ ದ್ದಲ್ಲದೆ, ಇಡೀ ಕೃತಿಯನ್ನು ನಾಯಿಕಾ ಪ್ರಧಾನವಾಗಿಸುತ್ತಾನೆ. ಹೆಣ್ಣೊಬ್ಬಳ ಹೆಸರಿನಲ್ಲಿ ಬಂದ ಮೊದಲ ಕನ್ನಡ ಕಾವ್ಯವೇ ‘ಗಿರಿಜಾಕಲ್ಯಾಣ ಮಹಾಪ್ರಬಂಧಂ’ ಆಗಿದೆ. ಅಲ್ಲಿ ಗಿರಿಜೆಯೇ ನಾಯಕಿ, ಕಾವ್ಯವು ಅವಳ ಬಾಲ್ಯ, ಯೌವ್ವನ, ವಿವಾಹಗಳ ಕಥನವಾಗಿದೆ.

ಹಾಗೆಯೇ ಹರಿಹರನು ರಗಳೆಗಳ ಮೂಲಕ ಕೆಲವು ಶಿವಭಕ್ತೆಯರ ಕಥನ ವಿವರಿಸುತ್ತ, ಹೆಣ್ಣಿನ ಭಕ್ತಿ ಸಾಧನೆಗಳ ಲೋಕವನ್ನು ತೆರೆದು ತೋರುತ್ತಾನೆ. ಅವನು ತನ್ನ ರಗಳೆಗಳಲ್ಲಿ ಹೆಣ್ಣನ್ನು ಇತರ ಕವಿಗಳಂತೆ ಕೇವಲ ಸೌಂದರ್ಯದ ಗಣಿ, ಭೋಗದ ಬೊಂಬೆಯಂತೆ ಚಿತ್ರಿಸದೆ ಸ್ವತಂತ್ರ ವ್ಯಕ್ತಿತ್ವದ ಸ್ವಾಭಿಮಾನ, ದುಡಿಮೆ, ಸಂವೇದನೆಗಳಿಂದ ಕೂಡಿದ ಸಹಜ ವ್ಯಕ್ತಿಗಳನ್ನಾಗಿಸಿದ್ದಾನೆ. ಅವನಲ್ಲಿ ಅನೇಕ ಕಡೆ ಹೆಣ್ಣು ಗಂಡಿನಂತೆ ಸ್ವತಂತ್ರಳು, ಸ್ವವಿಚಾರ, ವಿವೇಕ ಉಳ್ಳವಳು ಆಗಿದ್ದಾಳೆ. ಇದಕ್ಕೆ ಅಪವಾದ ಎಂಬಂತೆ ಒಂದೆರಡು ರಗಳೆಗಳಲ್ಲಿ ಪುರುಷನ ನೆರಳಿನಂತೆ ಕಾಣುವ ಪಾತ್ರಗಳಿವೆಯಾದರೂ, ಆ ಕಾಲಕ್ಕೇ ಅಪೂರ್ವವಾದ ಸ್ವಾತಂತ್ರ್ಯ ಸಮಾನತೆ ಹೊಂದಿರುವ ಅನೇಕ ಸ್ತ್ರೀ ಪಾತ್ರಗಳಿರುವುದು ಗಮನಾರ್ಹವಾಗಿದೆ. ಹರಿಹರನ ಒಟ್ಟು ೧೦೮ ರಗಳೆಗಳಲ್ಲಿ ನೇರವಾಗಿ ಹೆಣ್ಣಿನ ಹೆಸರಿನಲ್ಲಿಯೇ ಬರುವ ರಗಳೆಗಳು ಇಂತಿವೆ.

೧. ಕಾರಿಕಾಲಮ್ಮೆಯರ ರಗಳೆ
೨. ಪಾಂಡ್ಯ ಮಹಾದೇವಿಯರ ರಗಳೆ
೩. ಕೊಳೂರು ಕೊಡಗೂಸಿನ ರಗಳೆ
೪. ಅಮ್ಮವ್ವೆಯ ರಗಳೆ
೫. ಹೇರೂರು ಹೆಣ್ಣಿನ ರಗಳೆ
೬. ನಿಂಬಿಯಕ್ಕನ ರಗಳೆ
೭. ವೈಜಕವ್ವೆಯರ ರಗಳೆ
೮. ಮಹಾದೇವಿಯಕ್ಕನ ರಗಳೆ

ಇವುಗಳಲ್ಲದೆ ‘ಚೋಳಿಯಕ್ಕನ ರಗಳೆ’ ಎಂಬುದನ್ನು ಕವಿ ಬರೆದುದಾಗಿ ತಿಳಿದುಬರುತ್ತದೆ. ಹೆಣ್ಣನ್ನು ಪ್ರಧಾನ ಪಾತ್ರವಾಗಿಸಿಕೊಂಡು ಚರಿತ್ರೆ ಹೇಳುವ ಕ್ರಮ ನಮಗೆ ನೋಡಲು ಎದುರಾ ಗುವುದೇ ಹರಿಹರನಲ್ಲಿ.

ಈಗಲೂ ಜನರಲ್ಲಿ ಗಂಡುಮಗು ಹುಟ್ಟಬೇಕು; ವಂಶ ಉದ್ಧಾರವಾಗುತ್ತದೆ. ಹೆಣ್ಣು ಹುಟ್ಟಬಾರದು; ಅದೊಂದು ಶಾಪ ಎಂಬ ರೂಢಿ ಮೂಲ ಭಾವನೆ ಜೀವಂತವಾಗಿರುವಾಗ ಹರಿಹರನ ರಗಳೆಗಳಲ್ಲಿ ಇದನ್ನು ಪ್ರತಿಭಟಿಸಿರುವ ಕೆಲವು ಅಪರೂಪದ ನಿದರ್ಶನಗಳಿವೆ. ಮಾನಕಂಜರ ರಗಳೆಯಲ್ಲಿ ಭಕ್ತನಾದ ಮಾನಕಂಜರ ಮಕ್ಕಳಿಲ್ಲದ ಚಿಂತೆಯಲ್ಲಿ ಶಿವನ ಭಕ್ತಿಯಲ್ಲಿ, ಆರಾಧನೆಯಲ್ಲಿ ತೊಡಗಿದ್ದಾಗ (ಹೆಂಡತಿ ಗಂಡುಮಗು ಕೇಳಲು ಹೇಳಿದರೂ ಕೂಡ) ‘ಒಂದು ಹೆಣ್ಣುಮಗು ಕರುಣಿಸು’ ಎಂದು ಕೇಳಿ ಪುತ್ರಿಯನ್ನು ಪಡೆಯುತ್ತಾನೆ. ಮಹಾದೇವಿಯಕ್ಕನ ರಗಳೆಯಲ್ಲಿ ಮಹಾದೇವಿಯ ತಂದೆ-ತಾಯಿಯರು ಭಕ್ತಿಭಾವದಿಂದ ‘ಪಾರ್ವತಿಗೆ ದೇವಿಯೆಮಗೊರ್ವ ಪುತ್ರಿಯನೀವುದೆಲೆ ತಾಯೆ’ ಎನ್ನುತ್ತಾರೆ. ಹೆಣ್ಣು ಮಗುವನ್ನು ದೇವರಲ್ಲಿ ಕೇಳಿ ಹಾರೈಸಿ ಪಡೆಯುವ ಈ ಪ್ರಸಂಗಗಳು, ‘ಹೆಣ್ಣಿರಲಿ, ಗಂಡಿರಲಿ ಒಟ್ಟು ಒಂದು ಮಗುವಿರಲಿ’ ಎಂಬ ಸಮಭಾವದ ತಂತ್ರವನ್ನು ಪುರಸ್ಕರಿಸುತ್ತವೆ. ಹೆಣ್ಣಿಗೆ ಶಿವನ ಪೂಜೆ ಮಾಡುವ, ಭಕ್ತಿ ಸಲ್ಲಿಸುವ ದಾನ ಧರ್ಮ ಮಾಡುವ, ಶಿವಾಲಯಕ್ಕೆ ಪ್ರವೇಶ ಪಡೆದು ಆರಾಧನೆ ನಡೆಸುವ ಸ್ವಾತಂತ್ರ್ಯ, ಹಕ್ಕು, ಸಮಾನತೆಗಳಿರುವ ಅನೇಕ ಭಕ್ತೆಯರನ್ನು ಈ ರಗಳೆಗಳಲ್ಲಿ ಕಾಣಬಹುದು.

ಹರಿಹರನ ರಗಳೆಗಳಲ್ಲಿ ಭಕ್ತರ ಅಧಿದೈವವಾಗಿ, ಕವಿಯ ಆರಾಧ್ಯ ದೈವವಾಗಿ ಹಂಪೆಯ ವಿರೂಪಾಕ್ಷ (ಶಿವ) ಬರುತ್ತಾನೆ. ರಗಳೆಯ ಆರಂಭದಲ್ಲಿ ಕೊನೆಯಲ್ಲಿ ವಿರೂಪಾಕ್ಷಸ್ತುತಿ ಬಂದೇ ಬರುವುದು ಸಾಮಾನ್ಯ. ಆದರೆ ಅನೇಕ ಎಡೆಗಳಲ್ಲಿ ಕವಿ ಪಾರ್ವತಿಯನ್ನೂ ಗೌರವದ, ಪೂಜನೀಯವಾದ ದೇವಿಯಾಗಿಸಿದ್ದಾನೆ. ಶಿವನು ತನ್ನ ಭಕ್ತರ ಅಗ್ಗಳಿಕೆಯನ್ನು ಆಕೆಯ ಎದುರಲ್ಲಿ ಬಣ್ಣಿಸಿ ನಂತರ ಗಣಪದವಿ ನೀಡುತ್ತಾನೆ. ಮೆರೆಮಿಂಡದೇವರ ಭಕ್ತಿಯ ವಿಶೇಷತೆ ಯನ್ನು ನಂದೀಶನಿಗೆ ವರ್ಣಿಸಿ, ಕೈಲಾಸಕ್ಕೆ ಕರೆತಂದು ಅವನನ್ನು ‘ಶೈಲಜೆಗೆ ತೋರುತಂ’ ಗಣಪದವಿಯಲ್ಲಿರಿಸುತ್ತಾನೆ. ಒಲಘಾಂಡಮೂರ್ತಿಗಳ ಭಕ್ತಿಗೆ ಮೆಚ್ಚಿ ‘ಲಲನೆ ಗಿರಿಜೆಗೆ ಪೇಳ್ದು ಹರುಷಮಂ ಮುಂದಿಟ್ಟು’ ಕರೆತರುತ್ತಾನೆ. ಪೆರುಮಳಿಯ ಕುರುಂಬರ ಭಕ್ತಿಗೆ ಒಲಿದು ಗಣಪದವಿ ನೀಡಿ ‘ನೋಡು ಗಿರಿಜೆ ಎನ್ನೊಳ್ ಸತಿಯುಕ್ತನ’ ಎಂದು ಹೇಳಿದರೆ, ಪೊಯ್ಯಡಿ ಯರ ರಗಳೆಯಲ್ಲಿ ಶಿವಭಕ್ತನಾದ ಆಶುಕವಿಯ ಭಕ್ತಿಗೆ ಒಲಿದು ‘ಗಿರಿಜೆಗರುಪಿದನೆನ್ನ ಭಕ್ತ ಕವಿತೆಯನಲ್ಲಿ…. ಆನಿಲ್ಲಿಗಾತನಂ ತರ್ಪೆ’ ಎಂದು ತಿಳಿಸುವನು. ಹೀಗೆ ಶಿವ ಗಿರಿಜೆಗೂ ತನ್ನ ಲೀಲೆಯಲ್ಲಿ, ಭಕ್ತರ ಕಥನದಲ್ಲಿ ಒಂದು ಹಿರಿಯ ಸ್ಥಾನ ನೀಡುವನು. ಬೇಡರ ಕಣ್ಣಪ್ಪ, ನಿಂಬಿಯಕ್ಕ, ಸಿರಿಯಾಳ, ನಂಬಿಯಣ್ಣ, ಕುಂಬಾರ ಗುಂಡಯ್ಯ ಮುಂತಾದ ರಗಳೆಗಳಲ್ಲಿ ಪಾರ್ವತಿ ಶಿವನೊಂದಿಗೆ ಸಂವಾದ, ವಾದ ವಿವಾದಗಳಿಗೂ ಇಳಿಯುತ್ತಾಳೆ. ಕವಿ ರಗಳೆಗಳಲ್ಲಿ ಶಿವನೊಂದಿಗೆ ಪಾರ್ವತಿಗೂ ಒಂದು ಮಿತಿಯಲ್ಲಿ ಅಸ್ತಿತ್ವ, ಗೌರವ, ಸ್ವಾತಂತ್ರ್ಯ ನೀಡಿದ್ದಾನೆ.

ಸೂಕ್ಷ್ಮ ನಿರೀಕ್ಷಣೆ, ಮುಂದಾಲೋಚನೆ, ವ್ಯವಹಾರ ಜ್ಞಾನ, ಕುಶಲತೆ, ಬುದ್ದಿಮತ್ತೆಗಳಲ್ಲಿ ಸರಿಸಾಟಿಯಿಲ್ಲದ ಹೆಂಗಳೆಯರನ್ನು ಕವಿ ಚಿತ್ರಿಸಿದ್ದು, ಅವರು ‘ಹೆಂಗಸಿನ ಬುದ್ದಿ’ ಎಂಬ ಪುರುಷದೃಷ್ಟಿಯ ಎಂದಿನ ಉಪೇಕ್ಷೆಯನ್ನು ಕಿತ್ತೆಸೆದು ಬಿಡುತ್ತಾರೆ. ಮಲುಹಣ ರಗಳೆಯಲ್ಲಿ ತಾಯಿ ಇಬ್ಬರೂ ಪ್ರೇಮಿಗಳನ್ನು ದೂರ ಮಾಡಿದಾಗ, ಮಲುಹಣ ಪ್ರೇಮದಿಂದ ಹುಚ್ಚ ನಂತಾಗಿ ಹಿಮದಲ್ಲಿ ಸಿಕ್ಕು ಸಾಯುವಂತಾಗುತ್ತಾನೆ. ಆಗ ಮಲುಹಣಿ ‘ನನಗಾಗಿ ತಾಯಿಯಲ್ಲಿ ಅವರಿವರಲ್ಲಿ ಬೇಡುವುದು ಬೇಡ ಶಿವನಲ್ಲಿ ಬೇಡು, ಶಾಶ್ವತವಾಗಿ ಸಿಗುತ್ತೇನೆ’ ಎಂದು ದಾರಿತೋರುತ್ತಾಳೆ. ಉದ್ಭಟಯ್ಯ ಪುರಸಹಿತ ಕೈಲಾಸಕ್ಕೆ ಸಾಗಿ ಹೋಗಲು ಅವನ ಸತಿಯ ಪ್ರೇರಣೆ, ಸೂಚನೆಯೇ ಕಾರಣ. ಹಾವಿನಹಾಳ ಕಲ್ಲಯ್ಯನ ಮಗಳು ಕಲ್ಲವ್ವೆ ಶಿವಪೂಜೆಗೆಂದು ನೀರು ತರುವಾಗ, ಮಡಿಕೆಯನ್ನು ಬ್ರಾಹ್ಮಣನೊಬ್ಬ ಮುಟ್ಟಲು ನೀರು ಅಪವಿತ್ರವಾಯಿತೆಂದು ಮಡಿಕೆಯನ್ನು ಒಡೆಯುತ್ತಾಳೆ. ಸಮಾಜದಲ್ಲಿ ಇತರ ಜಾತಿಗಳನ್ನು ದೂರಕ್ಕಿರಿಸಿ ತಾನೇ ಶ್ರೇಷ್ಠ ಎಂದು ಬೀಗುತ್ತಿದ್ದ ಬ್ರಾಹ್ಮಣನನ್ನೇ ಅವಳು ಅಸ್ಪೃಶ್ಯಗೊಳಸಿ ಬೆರಗಾಗಿಸುತ್ತಾಳೆ. ಮಹಾದೇವಿ ಕುಟುಂಬದ ಮೇಲೆ ಬಂದ ಆಪತ್ತನ್ನು ನಿವಾರಿಸುತ್ತಾಳೆ; ತನ್ನ ಪೂಜೆ, ಭಕ್ತಿಯನ್ನು ಕಾಪಾಡುತ್ತಾಳೆ. ಆಕೆ ಕೌಶಿಕನ ಒತ್ತಾಯಕ್ಕೆ ವಿವಾಹವಾದರೂ ಮೂರು ಕರಾರುಗಳಿಂದ ಅರಮನೆ ಸೇರಿ, ಕರಾರು ಒಪ್ಪಿದವರು ಅವುಗಳನ್ನು ಉಲ್ಲಂಘಿಸಿದಾಗ ಅವಳು ತನ್ನದೇ ಸ್ವಾತಂತ್ರ್ಯದಿಂದ ಬದುಕಿನ ದಾರಿ ನಿರ್ಧರಿಸುತ್ತಾಳೆ.

ಹರಿಹರ ಹೆಣ್ಣಿನ ಚಿತ್ರಣದಲ್ಲಿಯೂ, ಪರಿಸರ ಪರಿಸ್ಥಿತಿಗಳ ಗ್ರಹಿಕೆಯಲ್ಲಿಯೂ ತುಂಬ ಸೂಕ್ಷ್ಮದ, ನಯ ನಾಜೂಕಿನ ಭಾವ ತೋರಿದ್ದಾನೆ. ಭಕ್ತರು ಗಣಪದವಿ ಪಡೆಯಲು ಕೈಲಾಸಕ್ಕೆ ಬಂದರೆ, ಶಿವನ ಸುತ್ತಲೂ ಗಣಪದವಿಯಲ್ಲಿದ್ದ ಭಕ್ತರಿರುವುದು ವಾಡಿಕೆ. ಆದರೆ ಮಹಾದೇವಿ ಯಕ್ಕನ ರಗಳೆಯಲ್ಲಿ ಶಿವನಾಜ್ಞೆಯಂತೆ ಗುಪ್ತಗಣನಾಥ ಪಾರ್ವತಿಯ ಭವನಕ್ಕೆ ಬರುತ್ತಾನೆ. ಅಲ್ಲಿ ಆತ ಪಾರ್ವತಿಯನ್ನು ಕಂಡುದು ಈ ಜನರೊಂದಿಗೆ;

ಕಾರಿಕಾಲಮ್ಮೆಯಂ ವಿನಯದಿಂ ನೋಡುತಂ
ಬಾರ ಮಾಂಗಾಯಕ್ಕ ನಾಚಿಯೆಂದುಬ್ಬುತಂ
ಕರೆದು ಯಸ್ಯಜ್ಞಾನಿದೇವಿಯಂ ಪೊಗಳುತಂ
ಕರುಣದಿಂ ಕೋಳೂರ ಕೊಡಗೂಸ ನೋಡುತಂ
ಚಂಗಳೆಯವ್ವೆಯನೊಲಿದು ನೋಡಿಕೊಂಡಾಡುತಂ
ಮಂಗಳಾನನೆ ಬಿಜ್ಜಳವ್ವೆಗೊಲವೀವುತಂ
ನಿಂಬಿಯಕ್ಕನ ಮೇಲೆ ಕರತಳವನೆಳೆವುತಂ

ಹೀಗೆ ಪಾರ್ವತಿಯ ಸುತ್ತಲಿದ್ದವರೆಲ್ಲ ಅಪ್ರತಿಮ ಭಕ್ತೆಯರು, ಶರಣೆಯರು. ಹೆಣ್ಣಿಗೂ ಕೈಲಾಸಪ್ರಾಪ್ತಿ, ಗಣಪದವಿ ನೀಡುವ ಕವಿಯು ಭಕ್ತಿಯಲ್ಲಿ ಸಾಧನೆಯಲ್ಲಿ, ಕಾಯಕದಲ್ಲಿ, ಬುದ್ದಿಯಲ್ಲಿ, ಕೌಶಲದಲ್ಲಿ ಗಂಡು, ಹೆಣ್ಣು ಭೇದವಿಲ್ಲವೆಂದು ಸೂಚಿಸುತ್ತಾನೆ. ಹರಿಹರ ಅನೇಕ ಭಕ್ತೆಯರನ್ನು, ಶರಣೆಯರನ್ನು ನಾನಾ ಕಾಯಕದ ನಾರಿಯರನ್ನು ಚಿತ್ರಿಸಿದ್ದು ಅವು ಗಳಲ್ಲಿ ವೈವಿಧ್ಯತೆ ಸಹಜವಾಗಿದೆ. ಕವಿ ಎಲ್ಲಿಯೂ ಹೆಣ್ಣಿಗೆ ಅಸಡ್ಡೆ, ತಿರಸ್ಕಾರ ತೋರುವು ದಿಲ್ಲ. ಇದರೊಂದಿಗೆ ಅವರ ಮೇಲಿನ ಶೋಷಣೆ, ದಬ್ಬಾಳಿಕೆಗಳನ್ನೂ ಒಂದೆರಡು ಕಡೆಗಳಲ್ಲಿ ಚಿತ್ರಿಸಿದ್ದಾನೆ.

ಲಿಂಗಭೇದ ನಿರಸನ ರಗಳೆಗಳ ಪ್ರಸ್ತುತ ಸಂಕಲನದಲ್ಲಿ ನ್ಯಾಯವಾಗಿ ನಿಂಬಿಯಕ್ಕನ ರಗಳೆ ಸೇರಬೇಕಾಗಿತ್ತೆ? ಎಂಬ ಪ್ರಶ್ನೆಯನ್ನು ನಾನು ಗಂಭೀರವಾಗಿ ಎದುರಿಸಿರುವೆ. ಆಕೆ ತನ್ನ ದೇಹದಿಂದ ಭಕ್ತರ ಕಾಮ ತಣಿಸುತ್ತಿರಬೇಕಾದರೆ, ಅದು ಅವಳ ಉದ್ಯೋಗವಾಗಿರ ಬೇಕು. ವೃತ್ತಿಯಾಗಿ ಅದು ತನಗೆ ತಾನೇ ಕೀಳಲ್ಲ, ಮೇಲಲ್ಲ. ಆ ಕಾರಣದಿಂದ ಏನೂ ಈ ರಗಳೆಯನ್ನು ಕೈಬಿಡಲಿಲ್ಲ. ಆದರೆ ರಗಳೆಯನ್ನು ತುಸು ಸರಿಯಾಗಿ ಗಮನಿಸಿದರೆ ಅದು ಮಹಿಳಾ ಸಮಾನತೆಗಿಂತ ಒಂದು ಸ್ತ್ರೀ ಶೋಷಣೆಯ ವ್ಯಥೆಯೇ ಆಗಿರುವುದು ವಿದಿತವಾಗು ತ್ತದೆ. ಅನಾಥಳಾದ ಹೆಣ್ಣನ್ನು, ಹೊಟ್ಟೆ ಹೊರೆಯಲು ದಾರಿಗಾಣದ ಹೆಣ್ಣನ್ನು ಸಮಾಜ ಬಹುಶಃ ಸೂಳೆಗಾರಿಕೆಗೆ ದೂಡಿದ ಕ್ರೌರ್ಯ ಅಲ್ಲಿದೆ. ಅದನ್ನು ಆಕೆ ಎಲ್ಲಿಯೂ ಪ್ರತಿಭಟಿಸದೆ, ಒಪ್ಪಿಕೊಂಡು ಬಿಡುತ್ತಾಳೆ. ಹಾಗಾಗಿ ಅದೊಂದು ರಗಳೆ ಹೆಣ್ಣು ನಾಯಕಿ ಆಗಿರುವ ರಗಳೆ ಎನಿಸಿದರೂ ಪ್ರಸ್ತುತ ಸಂಕಲನದ ಆಶಯವನ್ನು ಸಮರ್ಥಿಸುವುದಿಲ್ಲ ಎಂಬ ಕಾರಣದಿಂದ ಇಲ್ಲಿ ಸೇರ್ಪಡೆಗೊಳಿಸಿಲ್ಲ.

ಹರಿಹರ ಕವಿ ಪೂರ್ಣ ಪ್ರಮಾಣದಲ್ಲಿ ಅಂದು ಹೆಣ್ಣು-ಗಂಡು ಭೇದ ತೊಡೆದು ಹಾಕಲು ಹೋರಾಡಿದ್ದನು ಎಂಬ ಸರಳ ಸಮರ್ಥನೆಯಲ್ಲಿ ಈ ಕೃತಿ ರೂಪಿತಗೊಂಡಿಲ್ಲ. ಹರಿಹರನಲ್ಲಿ ಕೂಡ ಕೆಲವು ಸಮಸ್ಯೆ, ದ್ವಂದ್ವಗಳಿದ್ದೇ ಇವೆ. ಆದರೆ ರಗಳೆಗಳಲ್ಲಿ ಸಾಮಾಜಿಕ ವಿಷಮತೆ, ಶೋಷಣೆಗಳಿಗೆ ಕಾರಣವಾಗುವ ಕೆಲವು ವಿಚಾರಗಳ ಪ್ರತಿಭಟನೆ ಗಟ್ಟಿಯಾಗಿದೆ. ಜಾತಿಯನ್ನು, ಜಾತಿಯ ಮೇಲು ಕೀಳುಗಳನ್ನು, ಸ್ಪೃಶ್ಯಾಸ್ಪೃಶ್ಯತೆಯನ್ನು ಹರಿಹರ ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ನಂತರ ಬಡವ, ಶ್ರೀಮಂತ, ರಾಜ, ಸೇವಕ ಇತ್ಯಾದಿ ಪ್ರತಿಷ್ಠೆಗಳ ವರ್ಗ ಭೇದಕ್ಕಾಗಿ ದನಿ ಎತ್ತಿ ಅವುಗಳನ್ನು ತಳ್ಳಿ ಹಾಕುತ್ತಾನೆ. ವೃತ್ತಿ ಭೇದವು, ವೃತ್ತಿಗೌರವ ಭೇದವಾಗಲು ಆತ ಬಿಡುವುದಿಲ್ಲ. ಹಾಗೆಯೇ ಒಂದು ಮಿತಿಯಲ್ಲಿ ಆತ ಹೆಣ್ಣಿನ ಬಗ್ಗೆ ಗೌರವದಿಂದ ಚಿಂತಿಸಿದ್ದು ಗಂಡು-ಹೆಣ್ಣುಗಳ ಸಮಾನತೆ ಅವನಿಗೆ ಮುಖ್ಯವಾಗಿದೆ. ಶರಣರ ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವನಿಗೆ’ ಎಂಬುದಾಗಲಿ, ‘ಒಳಗೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ’ ಎಂಬುದಾಗಲಿ ಕವಿಗೆ ಮಾನ್ಯವಾಗಿದೆ. ಪ್ರಸ್ತುತ ಸಂಕಲನದ ಶಿವಭಕ್ತೆಯರ ರಗಳೆಗಳಿಂದಾಗಿ ಹರಿಹರ ಕವಿಯ ಲಿಂಗಭೇದ ನಿರಸನ ದೃಷ್ಟಿಕೋನ ವ್ಯಕ್ತ ಗೊಂಡು, ಆತನ ಅನೇಕ ನೂತನ ಪ್ರಯೋಗಗಳಲ್ಲಿ ಇದೂ ಒಂದಾಗಿ ಗಮನ ಸೆಳೆಯುತ್ತದೆ. ಇದರಿಂದ ಆ ಕವಿಯನ್ನು ಭಿನ್ನ ನೆಲೆಯಲ್ಲಿ ಗ್ರಹಿಸಲು ಮಾತ್ರವಲ್ಲದೆ, ಇನ್ನೂ ಆಳಕ್ಕಿಳಿದು ಅವನ ಕೃತಿಗಳನ್ನು ಅಭ್ಯಸಿಸಲು ಸಾಧ್ಯವಾಗಬಹುದು. ಈ ಸಾಧ್ಯತೆಯನ್ನು ಬೆಂಬಲಿಸುತ್ತದೆ “ಬಸವಣ್ಣನವರು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಮಹಾಕ್ರಾಂತಿಯನ್ನೇ ಹರಿಹರ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ”  ಎಂದು ಹೇಳಿರುವ ಶ್ರೀ ಕುವೆಂಪು ಅವರ ಮಾತು.

ಕಾರಿಕಾಲಮ್ಮೆಯರ ರಗಳೆ

ತಮಿಳು ಭಕ್ತರ ಕಥಾನಕಗಳನ್ನು ರಗಳೆಗಳ ಮೂಲಕ ಕನ್ನಡಕ್ಕೆ ತಂದು ಭಕ್ತಿ ಸಂಪ್ರದಾಯಕ್ಕೆ ಹಾಡು-ಕಥನಗಳಿಂದ ಶ್ರೀಕಾರ ಹಾಕಿದ ಹರಿಹರ ಕವಿ, ಅಲ್ಲಿಯ ಶಿವಭಕ್ತೆ ಯರನ್ನೂ ಅದೇ ಉತ್ಸಾಹ, ಅದೇ ಗೌರವದಿಂದ ಕನ್ನಡ ಸಂಸ್ಕೃತಿಗೆ ಪರಿಚಯಿಸುತ್ತಾನೆ. ಕಾರಿಕಾಲಮ್ಮೆ ತಮಿಳು ಭಕ್ತೆಯರಲ್ಲಿ ತುಂಬ ಜನಪ್ರಿಯಳು; ಅಲ್ಲಿಯ ದೇಗುಲಗಳಲ್ಲಿ ಅವಳ ಮೂರ್ತಿಗೂ ಪೂಜೆ, ಆರಾಧನೆ, ನಮನ ಸಲ್ಲುತ್ತವೆ. ಕಾರಿಕಾಲು ಊರಿನಲ್ಲಿದ್ದ ಕಾರಿಕಾಲಮ್ಮೆ ತುಂಬಿದ ಸಂಸಾರದ ಸೊಸೆ; ಮನೆಯವರಿಗೂ ತಿಳಿಯದಂತೆ ‘ನೂತನದ ಶಿವಭಕ್ತಿಯಂ ಮನದೊಳೊಪ್ಪುತಂ ಗುಪ್ತ ಮಾಹೇಶ್ವರಿ’, ಶಿವನ ನೆನಹು, ಪೂಜೆ ಸರ್ವದಾ ಮನ, ಭಾವ, ಬುದ್ದಿಯಲ್ಲಿ ತುಂಬಿಕೊಂಡ ಸಾಧ್ವಿಯಾಕೆ. ಆಕೆಯ ಗಂಡ ಮಾಣಿಕಸೆಟ್ಟಿಗೆ ಕಾಣಿಕೆಯಾಗಿ ಬರುವ ಎರಡು ಸೊಗಸಾದ ಹಣ್ಣುಗಳಲ್ಲಿ ಒಂದನ್ನು ಸಾಧುವೇಷದ ಶಿವನಿಗೆ ಭಕ್ತಿಯಿಂದ ನೀಡುತ್ತಾಳೆ. ಅದೂ ‘ಮನದ ಗರ್ಭಿಣಿ ಜಿಹ್ವೆಯಿಂದ ಬೆಸಲಪ್ಪಂತೆ’ ಯಾರಿಗೂ ಅರಿಯದಂತೆ ನೀಡುತ್ತಾಳೆ.

ಊಟಕ್ಕೆ ಬರುವ ಮಾಣಿಕಸೆಟ್ಟಿ ತನ್ನೆದುರಲ್ಲಿ ಒಬ್ಬ ಭಕ್ತ ಮನೆಯಿಂದ ಹೊರಟು ಹೋದುದನ್ನು ಗಮನಿಸಿ, ಊಟಕ್ಕೆ ಕೂತಾಗ ಹಣ್ಣು ತರಲು ಹೆಂಡತಿಗೆ ಹೇಳುತ್ತಾನೆ. ಆಕೆ ಉಳಿದಿದ್ದ ಒಂದು ಹಣ್ಣನ್ನು ತಂದು ನೀಡುವಳು. ಸಂದೇಹ ಬಲಿತು ಆತ ಇನ್ನೂ ಒಂದು ಹಣ್ಣು ಕೇಳುತ್ತಾನೆ. ಕಾರಿಕಾಲಮ್ಮೆ ಶಿವನನ್ನು ನೆನೆದು ಬುಟ್ಟಿಗೆ ‘ಹರಣಮಂ ಬೆರೆಸಿ’ ಕೈಹಾಕುತ್ತಾಳೆ.

ಇಂದುಧರನಲ್ಲಿಂದೆ ಮುನ್ನವಂಜುತ್ತೊಂದು
ತಂದಮೃತ ಫಲವನೊಲಿದಿರಿಸೆ ಸ್ನೇಹದೊಳಂದು
ಕಂಡಾಗಳಾ ಹಣ್ಣ ಬಸುರೊಳಗೆ ಬಂದಂತೆ
ಕಂಡು ಪರಮನ ಪರಮ ಹರುಷದೊಳಗದ್ದಂತೆ

ಇಲ್ಲದ ಹಣ್ಣು ಬಂದುದನ್ನು ಕಂಡು ಆಕೆಗೆ ಶಿವನ ಲೀಲೆಯ ಅರ್ಥವಾಗುತ್ತದೆ. ಅದನ್ನಾಕೆ ಗಂಡನಿಗೆ ನೀಡಿ ‘ಇದು ಇನ್ನೊಂದು ಹಣ್ಣುಕೊಳ್ಳಿ’ ಎಂದರೆ, ಆತ ಅದನ್ನು ಪರೀಕ್ಷಿಸಿ ನೋಡಿ ಅದು ಈ ನೆಲದ ಹಣ್ಣಲ್ಲವೆಂದು ಭಾವಿಸಿ ನಿಜವಾಗಿ ನಡೆದುದೇನು? ಎಂದು ಒತ್ತಾಯದಿಂದ ಕೇಳುತ್ತಾನೆ. ಅನಿವಾರ್ಯವಾಗಿ ಕಾರಿಕಾಲಮ್ಮೆ ನಡೆದ ಚರಿತಾರ್ಥ ಹೇಳಿಬಿಡುತ್ತಾಳೆ. ಮಾಣಿಕಸೆಟ್ಟಿ ಆಕೆ ಅಪ್ರತಿಮ ಶಿವಭಕ್ತೆ ಎಂದರಿದು ‘ಸತಿಯೆಂಬ ಭಾವಮುನುಡಿಗಿದಂ’. ಆತ ಅವಳಿಗೆ ದೀರ್ಘದಂಡ ನಮಸ್ಕರಿಸಿ ‘ಇನ್ನೆನಗೆ ನೀವೆ ಗುರುಸ್ಥಾನ ವಲೆ ತಾಯಿ’ ಎಂದು ಶರಣಾಗುವನು. ‘ಗುರು’ ತತ್ವಕ್ಕೆ ಗಂಡು ಹೆಣ್ಣೆಂಬ ಭೇದವಿಲ್ಲ ವಾಗುತ್ತದೆ. ಕಾರಿಕಾಲಮ್ಮೆಗೆ ತನ್ನ ಗುಪ್ತಭಕ್ತಿ ಹೀಗೆ ಪ್ರಕಟವಾಯ್ತೆಂಬ ಅಳಲು, ಚಿಂತೆ ಅತಿಯಾಗಿ ‘ಭಕ್ತಿ ಹರಿಹಂಚಾಯಿತಿನ್ನೆಂತು ಸೈರಿಪೆಂ’ ಎಂಬ ಭಾವದಲ್ಲಿ ಮನೆಬಿಟ್ಟು ಹೊರಟು ಬಿಡುತ್ತಾಳೆ. ಇಲ್ಲಿಂದ ಮುಂದೆ ಆಕೆಯ ಬದುಕಿನ ಇನ್ನೊಂದು ದಾರಿ ಮೊದಲಾಗುತ್ತದೆ.

ಸಂಸಾರ ಪಾಶಗಳನ್ನೆಲ್ಲ ಕಿತ್ತೊಗೆದು ‘ಪುರದ ಪುಣ್ಯವ್ರಜಂ ನೆರೆದು ಪೊರಮಡುವಂತೆ’ ಊರು, ದೇಶ, ಕೋಶ ಬಿಟ್ಟು ಆಕೆ ಶಿವಧ್ಯಾನದಲ್ಲಿ ಕಾಡಿನೆಡೆಗೆ ಮುನ್ನಡೆಯುತ್ತಾಳೆ. ಅವಳು ಮಾಯಾ ಮೋಹಗಳನ್ನು ತುಳಿದು ನಡೆದರೂ ತರುಣಿಯೂ, ಸುಂದರಿಯೂ ಆದ ಆಕೆಯ ಮೋಹಕ್ಕೆ ವಶವಾಗಿ ಅನೇಕ ಕಾಮಾಸಕ್ತರು ಬೆನ್ನು ಬೀಳುತ್ತಾರೆ. ಅದಕ್ಕೆ ಅವಳು ಕಡುನೊಂದು, ಶರೀರದ ಅನಿತ್ಯತೆ ಮನಗಾಣಿಸುತ್ತಾಳೆ. ತನ್ನ ದೇಹದ ಅವಯವ ಕಿತ್ತು ಈಡಾಡಿ ವಿರೂಪಳಾಗಿ, ತುಂಬ ಕೃಶವಾಗಿ ಬಿಡುತ್ತಾಳೆ. ಆಗ ಕಾಮಾರ್ಥಿಗಳು ದೂರ ಹೋಗಿ ಅವಳ ದಾರಿ ಅಡೆತಡೆಯಿಲ್ಲದಾಗುತ್ತದೆ. ಕಾಡಿಗೆ ಹೋಗಿ ‘ಶಿವನೇ ನಿನ್ನ ಅನುಪಮ ನರ್ತನ ತೋರು’ ಎಂದಾಗ, ಶಿವ ಬಂದು ಭಕ್ತಳೆದುರು ಲೋಕವಿಲಕ್ಷಣ ನೃತ್ಯವಾಡುತ್ತಾನೆ.

ತಾನಾಡೆಯುಮೆಯಾಡೆ ಹರಿಯಜರ್ ಸುರರಾಡೆ
ತಾನಾಡೆ ಜಗವಾಡೆ ಜೀವರಾಶಿಗಳಾಡೆ
ಆಡುತಿರ್ದಂ ವಿರೂಪಾಕ್ಷ ಶಿವನಮ್ಮಮ್ಮ

ಅಂತಹ ನರ್ತನದಿಂದ ಕಾರಿಕಾಲಮ್ಮೆ ಭಯ, ವಿಸ್ಮಯ, ಬೆರಗುಗಳಿಂದ ಮೂಕವಾಗಿರಲು ‘ಕೈಲಾಸಕ್ಕೆ ಬಾ’ ಎಂದು ಶಿವನು ಹೊರಟು ಹೋಗುತ್ತಾನೆ. ಈವರೆಗೆ ಶರಣರು ಹೋದ ದಾರಿಯಲ್ಲಿ ಆಕೆ ತಲೆ ಕೆಳಗಾಗಿ ಕಾಲು ಮೇಲಾಗಿ ನಿಧಾನವಾಗಿ ನಡೆದು ಕೈಲಾಸಕ್ಕೆ ಹೋಗುತ್ತಿ ರಲು, ಶಿವಭಕ್ತ ಚೇರಮ ನಾಯನಾರರು ಬಂದು ಈ ತೆರನಲ್ಲಿ ನಡೆದು ಎಂದಿಗೆ ಕೈಲಾಸಕ್ಕೆ ಬರುವಿರಿ ನೀವು? ಎಂದು ಹಾಸ್ಯವಾಡುತ್ತಾರೆ. ಈ ಮಾತುಗಳಿಂದ ನಾಚಿಕೆ, ದುಗುಡಗಳಿಂದ ದೈನ್ಯದಿಂದಿದ್ದ ಆಕೆಯನ್ನು ಶಿವನು ‘ಅರಿದು ಶರ್ವಂ ತನ್ನ ಮನದ ಕೈಯಂ ನೀಡಿ’ ಎತ್ತಿ ಕೈಲಾಸಕ್ಕೆ ಕರೆತರುತ್ತಾನೆ. ಕೊನೆಗೆ ಅವಳಿಗೆ ಗಣಪದವಿ ಸಲ್ಲಿಸುತ್ತದೆ.

ಹರಿಹರ ಕವಿಯ ಈ ರಗಳೆ ಸಾಂಪ್ರದಾಯಿಕವಾಗಿ ಸಾಮಾನ್ಯ ಭಕ್ತರ ಒಂದು ಕಥನದಂತೆ ಕಾಣಿಸಿದರೂ, ತನ್ನೊಳಗೆ ಅನೇಕ ಸೂಕ್ಷ್ಮಗಳನ್ನು ಹುದುಗಿಸಿಕೊಂಡಿದೆ. ಗುಪ್ತ ಶಿವಭಕ್ತರಂತೆ ಗುಪ್ತಶಿವಭಕ್ತೆಯಾಗಿ ಕಾರಿಕಾಲಮ್ಮೆ ಎಲ್ಲ ಭಕ್ತರಂತೆ ಗೌರವದ ಸಾಧನೆ ಮಾಡುತ್ತಾಳೆ. ಇಲ್ಲಿ ಸ್ತ್ರೀ ಎಂಬದೊಂದು ತೊಡಕಾಗಿ ಕಾಣಿಸುವುದಿಲ್ಲ. ಬಹುಶಃ ಮನೆಯ ಜನರು ಆಕೆಯ ಈಶಭಕ್ತಿಯ ತೀವ್ರತೆಯಿಂದ ತೊಂದರೆ, ಅಸಹಕಾರ ನೀಡುತ್ತಿದ್ದರೆಂಬುದೂ ಅದೇ ಅವಳಿಗೆ ಮನೆಬಿಟ್ಟು ತೆರಳಲು ಕಾರಣವಾಯಿತೆಂದೂ ಹಣ್ಣಿನ ಕಥೆಯ ಮೂಲಕ ತಿಳಿಯುತ್ತದೆ. ಏಕಾಂಗಿಯಾದ ತರುಣಿಯನ್ನು ಈ ಸಮಾಜದ ಪುರುಷರು ಭೋಗವಸ್ತುವೆಂದು ಕಾಣವಲ್ಲಿ, ಅವಳನ್ನು ವಶಪಡಿಸಿಕೊಳ್ಳಲು ಬೆಂಬತ್ತುವಲ್ಲಿ ವಾಸ್ತವ ಕಣ್ಣಿಗೆ ರಾಚುತ್ತದೆ. ಆದರೆ ಆಕೆ ನಂತರ ಜನರಿಂದ ದೂರವಾಗಲು, ತನ್ನಯ ರೂಪು ಆಕರ್ಷಣೆ ಕಡಿಮೆಯಾಗಲು ಬಹುಶಃ ಹಠಯೋಗ ಸಾಧನೆ ಮಾಡಿರುವಂತಿದೆ. ಅಲ್ಲಿಯ ವಿವರಗಳು, ನಂತರ ಆಕೆ ತಲೆಕೆಳಗಾಗಿ ನಡೆದು ಹೋಗುವ ವರ್ಣನೆಗಳು ಇದನ್ನು ಸಮರ್ಥಿಸುವಂತಿವೆ. ಭಕ್ತಿಸಾಧನೆಯಲ್ಲಿ ತೊಡಗುವ ಒಂದು ಹೆಣ್ಣನ್ನು ಭಕ್ತನೇ ಆದ ಚೇರಮ ಹೀಯಾಳಿಸುವುದೂ ಲಿಂಗ ತಾರತಮ್ಯದ ಇನ್ನೊಂದು ಮುಖವೇ ಆಗಿದೆ. ಆದರೆ ಕಾರಿಕಾಲಮ್ಮೆ ಮನೆಯವರು ಸಮಾಜ, ಭಕ್ತರು ಒಡ್ಡುವ ಎಲ್ಲಾ ಅಡೆತಡೆ ದಾಟಿ ತನ್ನ ನಿರ್ಧಾರ ಸಾಧನೆ, ಶಕ್ತಿ, ಚೈತನ್ಯಗಳಿಂದ ಸಾಧನೆಯ ಹೈಮಾಚಲವೇರಿ ನಿಲ್ಲುವ ಸ್ತ್ರೀಶಕ್ತಿಯ ಗೌರವದ ಪ್ರತೀಕವಾಗುತ್ತಾಳೆ. ಎಲ್ಲೆಡೆಗೂ ಅವಳು ಏಕಾಂಗಿಯಾಗಿ ಪರಿಸ್ಥಿತಿ ಎದುರಿಸುತ್ತಾಳೆ. ಯಾವ ಒಬ್ಬ ಪುರುಷನೂ ಅವಳ ಸಹಾಯಕ್ಕೆ ಬರುವುದಿಲ್ಲ. ಕೊನೆಗೆ ಸ್ವತಃ ಶಿವನು ಪಾರ್ವತಿಗೆ ‘ಈಕೆ ನನ್ನ ತಾಯಿಯಲ್ಲವೆ? ದೇವಿ ಈಕೆಗೆ ನೀನು ನಮಸ್ಕರಿಸು’ (ಮರುಳೆನಲ್ಕಾಗದೆಲೆ ದೇವಿ ಪೊಡಮಡುವುದೆನೆ) ಎನ್ನುವಲ್ಲಿ ಕವಿ ಕಾರಿಕಾಲಮ್ಮೆಗೆ ಅತಿಶಯದ ಸ್ಥಾನಮಾನ ನೀಡಿರುವುದನ್ನು ಗುರುತಿಸಬೇಕು. ಹರಿಹರ ಕವಿ ಕಾರಿಕಾಲಮ್ಮೆ ರಗಳೆಯ ಮೂಲಕ ಸ್ತ್ರೀಶಕ್ತಿಯ ಹಿರಿಮೆ ಗರಿಮೆಗಳನ್ನು ಎತ್ತಿತೋರಿ ಭಕ್ತಿ, ಅನುಭಾವ, ಆಧ್ಯಾತ್ಮ ಎಂಬುದು ಪುರುಷರಿಗೆ ಮಾತ್ರವಲ್ಲ, ಲಿಂಗಭೇದವಿಲ್ಲದೆ ಎಲ್ಲರಿಗೂ ಸಾಧನವಹುದು ಸಾಧ್ಯವಹುದು ಎಂಬ ಸತ್ಯವನ್ನು ಎತ್ತಿ ಹಿಡಿದಿದ್ದಾನೆ.

ತಿರುನೀಲನಕ್ಕರ ರಗಳೆ

ಇದು ತಮಿಳು ಶಿವಬಕ್ತರಲ್ಲಿ ಒಬ್ಬನಾದ ತಿರುನೀಲನ ಕಥನವಾಗಿದ್ದರೂ, ಇದರಲ್ಲಿ ಆತನ ಮಡದಿಯ ಭಕ್ತಿಯ ಪ್ರಸಂಗವೊಂದರಿಂದಾಗಿ ಈ ರಗಳೆ ಲಿಂಗಭೇದವನ್ನು ಮೀರುವಲ್ಲಿ ಮಹತ್ವ ಪಡೆದಿದೆ. ಶಿವನಲ್ಲಿ ನಿಷ್ಠೆ, ಭಕ್ತಿಯಿಟ್ಟ ತಿರುನೀಲ ನಿತ್ಯ ಶಿವನ ಆರಾಧನೆಯಲ್ಲಿ ಮತ್ತು ತನುಮನಧನದಿಂದ ಶಿವಭಕ್ತರ ಸೇವೆ ಸಲ್ಲಿಸುತ್ತ ಸುಖಿಯಾಗಿದ್ದನು. ಆದಕ್ಕೆ ಅವನ ಹೆಂಡತಿಯೂ ಸಹಯೋಗ ನೀಡುತ್ತ, ಪತಿಗೆ ತಕ್ಕ ಸತಿಯಾಗಿದ್ದಳು. ಅವಯಂತಿಗೆ ಹೋಗಿ ಸಪತ್ನಿಕನಾಗಿ ಶಿವಾಲಯದ ಶಿವನನ್ನು ಆರ್ದ್ರಭಕ್ತಿಯಿಂದ ಒಲಿಸಿಕೊಳ್ಳಲು ತಿರುನೀಲ ನಿರ್ಧರಿಸುತ್ತಾನೆ. ಶಿವಾಲಯಕ್ಕೆ ಬಂದು ವಿಧವಿಧ ಶಾಸ್ತ್ರೋಕ್ತ ಪೂಜೆಯಲ್ಲಿ ತೊಡಗುವನು.

ಮುಂದೆ ನಿಂದು ಕಯ್ಯಂ ಮುಗಿವುತ್ತಂ
ಕುಂದುದೆ ದೇವನನುರೆ ನೋಡುತ್ತಂ
ಪಂಚಾಕ್ಷರ ಮಂತ್ರಮಂ ಜಪಿಸುತ್ತಂ
ಸಂಚಿತ ಪಾಪವನುರೆ ತೆವರುತ್ತಂ

ಹೀಗೆ ಗಾಢ ಭಕ್ತಿ ಸಾಗುತ್ತಿರುವಾಗಲೇ ಒಂದು ಚಿಕ್ಕ ಘಟನೆ ಸಂಭವಿಸುತ್ತದೆ. ಶಿವಲಿಂಗದ ಮೇಲೆ ಒಂದು ಜೇಡರ ಹುಳು ಇರುವುದನ್ನು ತಿರುನೀಲನ ಪತ್ನಿ ಕಂಡು, ಅದು ಪೂಜೆಯಲ್ಲಿ ಬಂದುದಾಗಲಿ, ಶಿವನ ದೇಹದ ಮೇಲೆ ಕೂತುದಾಗಲಿ ಸರಿಯಲ್ಲ ಎಂದು ಭಾವಿಸುತ್ತಾಳೆ. ಶಿವನ ‘ಕಾಯಕಾಂತಿ ಕುಂದುಗುಮೆಂದೊಯ್ಯನೆ’ ಬಾಯಿಯಿಂದ ಚೆನ್ನಾಗಿ ಊದಿ ಹುಳು ಓಡಿಸುತ್ತಾಳೆ. ‘ಉಫ್ ಉಫ್’ ಎಂದು ಊದಿದ್ದು ಧ್ಯಾನದಲ್ಲಿದ್ದ ತಿರುನೀಲನಿಗೆ ಕೇಳಿಸಿ ಕಣ್ಣು ತೆರೆದು ಕಂಡರೆ, ಹೆಂಡತಿ ಲಿಂಗಕ್ಕೆ ಊದುತ್ತಿರುವುದು ತಿಳಿಯುತ್ತದೆ.

ಹೆಂಡತಿಯ ಒಳ್ಳೆಯ ಉದ್ದೇಶ ಅರಿಯದೆ ಅವನು ತಪ್ಪು ತಿಳಿದುಕೊಂಡು ತುಂಬ ಕೋಪಭರಿತವಾಗುವನು. ‘ಎಲೆ ಪಾತಕಿ ಇಂತೇತಕೆ ಮಾಡಿದೆ’ ಎಂದು ಪ್ರಶ್ನಿಸಿದಾಗ, ಅವಳು ತಾಳ್ಮೆಯಿಂದ ಜೇಡರ ಹುಳವನ್ನು ಶಿವನಂಗದಿಂದ ಓಡಿಸಲು ಹಾಗೆ ಮಾಡಿರುವುದಾಗಿ ತಿಳಿಸಿ ಹೇಳುತ್ತಾಳೆ. ಅದಕ್ಕೆ ಅವನು ಹೇಳುವುದು ವಿಚಿತ್ರವಾಗಿದೆ.

ಕೆಟ್ಟಿಹ ಲಾಲಾಂಬುಗಳಿಂದೊಪ್ಪುವ
ಶಿವನ ಶರೀರವನೆಂಜಲಿಸಿದೆ ನೀಂ

ಎಂದು ಆರೋಪಿಸಿ ಆಕೆಯನ್ನು ಹೊರಹಾಕಿ ಬಿಡುತ್ತಾನೆ. ಮುಂದೆ ತಾನೊಬ್ಬನೇ ಪೂಜೆ ಮಾಡಿಕೊಂಡು ಮನೆಗೆ ಬರುತ್ತಾನೆ. ಅತ್ತ ಅವಳು ಅಲ್ಲಿ ಇಲ್ಲಿ ಅಲೆದು ರಾತ್ರಿಯಾಗುತ್ತಲೇ ಶಿವನ ಗುಡಿಯಲ್ಲಿಯೇ ಬಂದು ಧ್ಯಾನದಲ್ಲಿ ಕೂತು ಮೈಮರೆಯುತ್ತಾಳೆ. ಮನೆಯಲ್ಲಿ ಮಲಗಿದ ತಿರುನೀಲಕ್ಕರನಿಗೆ ವಿಚಿತ್ರವಾದ ಒಂದು ಕನಸಾಗುತ್ತದೆ. ಶಿವನೇ ಕನಸಿನಲ್ಲಿ ಕಾಣಿಸಿ ಕೊಂಡು ತಿರುನೀಲನಿಗೆ ಹೇಳುವ ಅರ್ಥಪೂರ್ಣ ವಿಚಾರ ಅನನ್ಯ-ಅಸಾಧಾರಣವಾದುದು;

ರುದ್ರಂ ತಾನೇ ಕನಸಿನೊಳಾಗಲು
ಬಂದು ನುಡಿದನೆಲೆ ಇಂತಾ ವಧುವಿನ
ಸಂದಾ ಫೂತ್ಕೃತ ಮಟ್ಟದ ತನುವಿನ
ಬೊಕ್ಕೆಗಳಂ,ನೋಡೆನುತುಂ ತೋರಲು

ತನ್ನ ಸತಿಯ ಉಗುಳು ಸಿಡಿಯದ ತಾಣದಲ್ಲಿ ಶಿವನಿಗೆ ಬೊಕ್ಕೆಗಳಿರುವುದನ್ನು ಎಂಜಳುಗುಳು ತಾಗಿದಾಗಲೆಲ್ಲ ಲಿಂಗದೇಹ ಪ್ರಕಾಶಿಸುವುದನ್ನು ಕಂಡು ತಿರುನೀಲನಕ್ಕರನು ಕಂಪಿಸಿ ಬಿಡು ತ್ತಾನೆ. ಎಲ್ಲಾ ಪುರುಷ ಗರ್ವ ಜರ್ರನೆ ಇಳಿದು ಹೋಗುತ್ತದೆ.

ಬೆಳಗಾಗಲು ಆತ ಓಡೋಡಿಕೊಂಡು ಶಿವಾಲಯಕ್ಕೆ ಬಂದು, ಧ್ಯಾನಮಗ್ನ ಸತಿಯನ್ನು ಕಂಡು ‘ಶಿವಶಾಸನದಿಂ ಕೂಡಿಕೊಳುತ್ತಂ’ ಮನೆಗೆ ಬರುತ್ತಾನೆ. ಅಂದಿನಿಂದ ಮುಂದೆ ಆ ದಂಪತಿಗಳಿಬ್ಬರೂ ಕ್ಲೇಷವಿಲ್ಲದೆ ಶಿವನನ್ನು, ಶಿವಭಕ್ತರನ್ನು ಪೂಜಿಸುತ್ತ ಸುಖದಿಂದಿರುತ್ತಾರೆ. ರಗಳೆಯ ಮುಂದಿನ ವಿವರದಲ್ಲಿ ಜ್ಞಾನಾಚಾರ್ಯ, ನೀಲಕಂಠಪಾಣ ಮುಂತಾದ ಭಕ್ತರನ್ನು ಏಕಮನದಿಂದ ಆದರಿಸಿ ಕೊನೆಗೆ ಶಿವಗಣಕ್ಕೆ ಸೇರುವ ವೃತ್ತಾಂತವಿದೆ.

ಈ ರಗಳೆಯಲ್ಲಿ ಎಲ್ಲಿಯೂ ತಿರುನೀಲನಕ್ಕರನ ಹೆಂಡತಿಯ ಹೆಸರು ಬಾರದೆ, ಆಕೆ ಆತನ ‘ವಧು’ ಎಂದೇ ಪರಿಚಿತಳಾಗುತ್ತಾಳೆ. ಆದರೆ ಶಿವನ ಅಗ್ರಗಣ್ಯ ಭಕ್ತನಾಗಿ ವೇದೋಕ್ತ ಪೂಜೆ ಸಲ್ಲಿಸುತ್ತ, ತನಗೆ ಹೆಂಡತಿ ಕೇವಲ ಭಕ್ತಿಯಲ್ಲಿ, ಪೂಜೆಯಲ್ಲಿ ಸಹಾಯಕಿ ಮಾತ್ರ ಎಂದು ಭಾವಿಸಿದ್ದ ತಿರುನೀಲನಕ್ಕರನಲ್ಲಿ ಪುರುಷ ಗರ್ವ ತುಂಬಿಕೊಂಡಿತ್ತು. ತನ್ನ ಹಾಗೆ ಹೆಂಡತಿಯೂ ಭಕ್ತಿಯಲ್ಲಿ ಪ್ರತ್ಯೇಕ ಅಸ್ತಿತ್ವ ಮತ್ತು ವ್ಯಕ್ತಿತ್ವ ಹೊಂದಿದವಳು ಎಂಬ ವಿಚಾರವೇ ಆತನ ತಲೆಗೆ ಹೊಳೆದಿರಲಿಲ್ಲ. ಆಕೆ ಶಿವಲಿಂಗದ ಮೇಲಿನ ಹುಳುವನ್ನು ಊದಿ ಓಡಿಸಿದ್ದು ಸ್ವತಃ  ವಿಚಾರದಿಂದ, ಶಿವನ ಮೇಲಿನ ಅಸೀಮ ಭಕ್ತಿಯಿಂದ, ಪ್ರೀತಿಯಿಂದ. ಅವಳು ಊದಿದ್ದರಿಂದ ಪೂಜೆ ಮಲಿನಗೊಂಡಿತು, ಅವಳ ಎಂಜಲು ಸಿಡಿದು ಶಿವನಿಗೆ ಅಪಚಾರವಾಯಿತೆಂದು ಭಾವಿಸುವಲ್ಲಿಯೇ ಪುರುಷ ಶ್ರೇಷ್ಠತೆಯ ಅಹಂ, ಸ್ತ್ರೀ ಕನಿಷ್ಠತೆಯ ಪರಂಪರಾಗತ ತಿಳುವಳಿಕೆಗಳೇ ಕೆಲಸ ಮಾಡಿವೆ. ಈ ಪುರುಷ ಅಹಂ ಅನ್ನು ಶಿವನು ಕನಸಿನಲ್ಲಿ ಬಂದು ‘ಆಕೆ ಊದದೆ, ಉಗುಳದೆ ಉಳಿದ ದೇಹದ ಭಾಗದಲ್ಲಿ ಬೊಕ್ಕೆಗಳಿವೆ’ ಹೇಳುವಲ್ಲಿ ಭುಂಜಿಸಲಾಗಿದೆ. ತಿರುನೀಲನಲ್ಲಿದ್ದ ಹೆಂಡತಿಯ ಬಗೆಗಿನ ಸಿಟ್ಟು, ತಿರಸ್ಕಾರಗಳನ್ನು ಶಿವನು ಸಮ್ಮತಿಸುವುದಿಲ್ಲ. ಹೀಗೆ ಚಿಕ್ಕ ಘಟನೆಯಲ್ಲಿಲಿಂಗ ತಾರತಮ್ಯವನ್ನು, ಅದೂ ಭಕ್ತಿಯಲ್ಲಿ, ಆರಾಧನೆಯಲ್ಲಿ ಪೂರ್ತಿಯಾಗಿ ನಿವಾರಿಸುವ ಧಾಟಿ ಇಲ್ಲಿದೆ. ಹಾಗಾಗಿ ತಿರುನೀಲನಕ್ಕರ ಶಿವಶಾಸನದಂತೆ ಪತ್ನಿಯಲ್ಲಿ ಕ್ಷಮೆ ಕೋರಿ, ಅವಳೊಂದಿಗೆ ಶಿವಭಕ್ತಿಯನ್ನು ಮುಂದುವರೆಸಿ ಅಹಂ ಕಳೆದುಕೊಳ್ಳುತ್ತಾನೆ. ಸತಿಪತಿಗಳು ಒಂದಾಗಿ (ಸರಿಸಮಾನ ಎಂಬ ಭಾವದಲ್ಲಿ) ನಡೆಸುವ ನಂತರದ ಭಕ್ತಿ ಶಿವನಿಗೆ ಹಿತವಾಗುತ್ತದೆ.

ರಗಳೆಯ ಆರಂಭದಲ್ಲಿ ಪುರವರ್ಣನೆ ಬಂದಿದ್ದು ಅಲ್ಲಿ ಕೇವಲ ಊರ ಹೆಂಗಳೆಯರ ವಿವರಗಳಿವೆ. ಅಲ್ಲಿಯ ಯವತೀಜನ, ಹಂಸಾಂಗನೆಯರು, ಮಲ್ಲಿಗೆದುರುಬಿನ ಮಡದಿ ಯರು, ಸದ್ವಿಜಕಾಂತೆಯರು…… ಮಹಿಳೆಯರೆಲ್ಲ ವಿಶೇಷ ಸ್ವಾತಂತ್ರ್ಯವನ್ನು ಹಕ್ಕುಗಳನ್ನು ಹೊಂದಿರುವುದನ್ನು ಗುರುತಿಸಬಹುದು.

ಪಾಂಡ್ಯಮಹಾದೇವಿಯರ ರಗಳೆ

ಪಾಂಡ್ಯ ದೇಶದ ಅರಸನ ಸತಿಯಾದ ಪಾಂಡ್ಯಮಹಾದೇವಿ ಪತಿವ್ರತೆ, ಸಾಧ್ವಿ, ಹರನ ಭಕ್ತೆ, ‘ಚಿತ್ತಂ ಶಿವನತ್ತಲು ಬಿತ್ತರದಿಂ ಕಾಯಂ ಪತಿಯತ್ತಲು’ ಆಗಿದ್ದಾಕೆ. ಅವಳು ಭಾಷೆ ಗಳಲ್ಲಿ ಭಾರತಿಯನ್ನು, ವೇಷದಲ್ಲಿ ರತಿಯನ್ನು ಹೋಲುವ ಅಪೂರ್ವದ ರುಚಿಶುಚಿ ಹೊಂದಿದಾಕೆ.

ನುಡಿಯೊಳಗಮೃತದ ಸರಿಯಂ ಸುರಿವಳು
ನಡೆಗಳೊಳಂ ಹಂಸೆಗಳಂ ಗೆಲುವಳು

ಇಂತಹ ನಡೆನುಡಿಯ ಮಹಾದೇವಿ ಹರನ ಭಕ್ತಿಯಲ್ಲಿ ತತ್ಪರಳಾಗಿದ್ದಳು. ತನ್ನ ಗಂಡನಿಗೆ ಆಗಾಗ ನಿಜಭಕ್ತಿಯ ಸಾರವನ್ನು ತಿಳಿಸಲು ಯತ್ನಿಸುತ್ತಾಳೆ. ಜ್ಞಾನಮುನೀಂದ್ರನನ್ನು ಬರಮಾಡಿ ಕೊಂಡು ಅವರಿಂದ ಶಿವನ ಭಕ್ತಿ, ಗುಣ, ಕೀರ್ತನೆಗಳನ್ನು ಕೇಳುವಂತೆ ಮಾಡಿಸಿ ಪಾಂಡ್ಯರಾಜ ನನ್ನು ಶಿವಭಕ್ತಿಯ ದಾರಿಗೆ ತರುತ್ತಾಳೆ. ಅಕ್ಕಮಹಾದೇವಿಯ ಮತ್ತು ಇತರ ಕೆಲವು ಶಿವಭಕ್ತೆಯರ ರಗಳೆಗಳಲ್ಲಿ ಪತಿಗಳನ್ನು (ಭವಿಗಳನ್ನು) ಶಿವಭಕ್ತಿಗೆ ತರಲಾರದೆ ಸಂಘರ್ಷಗಳೇ ರ್ಪಟ್ಟರೆ, ಇಲ್ಲಿ ಮಹಾದೇವಿ ಶಿವನ ಭಕ್ತಿಯ ಅಧಿಕ್ಯ ವಿವರಿಸಿ ರಾಜನನ್ನು ಪರಿವರ್ತಿಸುತ್ತಾಳೆ. ರಾಜ ಸತಿಯ ದಾರಿ ಹಿಡಿದು, ಸಾಧನೆ ನಡೆಸಿ ಶಿವನ ವಿಶ್ವಾಸಕ್ಕೆ ಭಾಜನನಾಗುತ್ತಾನೆ. ಮಹಾದೇವಿಯ ಭಕ್ತಿಗೆ ರುದ್ರಕನ್ನಿಕಾ ಪದ ಲಭಿಸುತ್ತದೆ.

ಪ್ರಸ್ತುತ ರಗಳೆಯಲ್ಲಿಯ ಜೈನ ವಿರೋಧಿ ಧೋರಣೆಯನ್ನು ಹೊರತುಪಡಿಸಿದರೆ, ಸ್ತ್ರೀ ಶಕ್ತಿ-ಸಾಮರ್ಥ್ಯಗಳಿಗೆ ಹರಿಹರ ನೀಡುವ ಮಹತ್ವ ವಿದಿತವಾಗುತ್ತದೆ. ಭಕ್ತರು ಅನೇಕ ರಗಳೆಗಳಲ್ಲಿ ನಾಯಕರಾದಂತೆ, ಪಾಂಡ್ಯಮಹಾದೇವಿ ಈ ಕಿರುರಗಳೆಯಲ್ಲಿ ನಾಯಕಿಯಾಗಿ ಪ್ರಧಾನಳು ಮತ್ತು ಗಟ್ಟಿ ವ್ಯಕ್ತಿತ್ವ ಹೊಂದಿದವಳು ಆಗಿದ್ದಾಳೆ. ರಾಜನಿಗಿಂತ ರಾಣಿಯೇ ಧಾರ್ಮಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಯಲ್ಲಿ ನಿರ್ಣಯಾತ್ಮಕ ಪಾತ್ರವಹಿಸುವ ಸಕಾರಾತ್ಮಕ ಬೆಳವಣಿಗೆಗೆ ಇದು ಪೂರಕವಾಗಿದೆ.

ಕೋಳೂರು ಕೊಡಗೂಸಿನ ರಗಳೆ

ಕೋಳೂರಿನಲ್ಲಿ ‘ಸಲ್ಲಲಿತ ಸತ್ಯಭಾಷಿಣಿ ಭೂಮಿಗತಿಶಕ್ತೆ’ ಶಿವನ ಭಕ್ತಳಿದ್ದಳು. ಪ್ರತಿ ಸೋಮವಾರ ಶಿವನಿಗೆ ಹಾಲಿನ ಅಭಿಷೆಕದಿಂದ ಪೂಜಿಸುವ ನೇಮ ಹೊಂದಿದ್ದಳು. ತಪ್ಪದೇ ಹತ್ತು ವರ್ಷ ಈ ನೇಮ ಪಾಲಿಸಿಕೊಂಡು ಬರುತ್ತಾಳೆ. ಆಕೆಗೆ ಒಬ್ಬಳೇ ಮಗಳು ಕೊಡಗೂಸು, ತಾಯಿಯ ಹಾಗೆ ಶಿವನ ಪೂಜೆಗೆ ಹೋಗುವ ಹಿರಿಯಾಸೆ ಇದ್ದರೂ, ಚಿಕ್ಕವಳೆಂದು ತಾಯಿ ಆಕೆಗೆ ಸಮ್ಮತಿಸುತ್ತಿಲ್ಲ. ಒಂದು ಸೋಮವಾರ ರಸಜ್ವಲೆಯಾದ ಕಾರಣ ತಾಯಿ ಶಿವನ ಪೂಜೆ ನಿಲ್ಲಬಾರದೆಂದು ಕೊಡಗೂಸನ್ನು ಕರೆದು ‘ಹಾಲನೆರೆ ಹೋಗವ್ವ ಸದ್ಗುಣನಿಕಾಯಂಗೆ’ ಎಂದು ಸೂಚಿಸಿಬಿಡುವಳು. ಕೊಡಗೂಸಿಗೆ ಆನಂದವೇ ಆನಂದ.

ಇಂದೆಮ್ಮ ದೇವಂಗೆ ನಾ ಹಾಲನೆರೆದಪೆಂ
ಇಂದೆಮ್ಮ ತಂದೆಯಲ್ಲಿಗೆ ನಲಿದು ಪೋದಪೆಂ

ಎಂದು ಹರುಷದಿಂದ ಸಿಂಗರಗೊಂಡು ಹಾಲಿನೊಂದಿಗೆ ಶಿವನಿಲಯಕ್ಕೆ ಬರುತ್ತಾಳೆ. ಅವಳು ನಿಂತಲ್ಲಿ, ಬರುವಲ್ಲಿ ‘ತನುವಿನೊಳು ಹರಭಕ್ತಿ ಕರಣದೊಳು ಹರನೊಪ್ಪೆ’ ಎಂಬ ಭಾವದಲ್ಲಿ ಲೀನವಾಗಿದ್ದಾಳೆ.

ಪ್ರತಿ ಸೋಮವಾರ ತಾಯಿ ಬಂದು ಶಿವನಿಗೆ ಹಾಲು ಕುಡಿಸಿ ಬರುತ್ತಿದ್ದುದನ್ನು ಅಕ್ಷರಶಃ ನಂಬುವ ಮುಗ್ಧೆ ಕೊಡಗೂಸು, ಲಿಂಗಕ್ಕೆ ಹಾಲು ಕುಡಿಯೆಂದು ಭಕ್ತಿಭಾವದಲ್ಲಿ ಕೇಳುತ್ತಾಳೆ. ‘ಎನ್ನ ರನ್ನವೆ ಎನ್ನ ಹೊನ್ನೆ ಹಾಲ್ಗುಡಿಯಯ್ಯ’ ಎಂದೆಲ್ಲ ವಿಧ ವಿಧದಲ್ಲಿ ಕೋರುವಳು. ಲಿಂಗದಿಂದ ಯಾವ ಪ್ರತಿಕ್ರಿಯೆ ಬಾರದಾದಾಗ ಸಹಜವಾಗಿ ತಳಮಳಿಸುವಳು; ವಿಷಾದಿಸು ವಳು, ನಿರಾಶೆ ಹೊಂದುವಳು. ‘ಹಾಲನೆಂತಾದಡಂ ಕುಡಿಯಯ್ಯ ಕುಡಿಯಯ್ಯ’ ಎಂದು ಹಲಬುತ್ತ, ಹಾಲು ಕುಡಿಯದೇ ಹೋದರೆ ಮನೆಗೆ ಹೋಗುವುದಿಲ್ಲ, ತಾಯಿಯನ್ನು ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಳು. ಆಕೆಯ ಭಕ್ತಿ, ಅದಕ್ಕೂ ಮಿಗಿಲಾದ ಮುಗ್ಧತೆ, ಸರಳತೆ, ನಂಬಿಕೆಗೆ ಕರಗುವ ಶಿವನು ಅವಳ ಕೈಯ ಬಟ್ಟಲು ತೆಗೆದುಕೊಂಡನು.

ಹಾಲೊಳಗೆ ಭಕ್ತಿಸರ್ಕರೆಯ ಸವಿಯಂ ಕುಡಲು
ಹಾಲನಾರೋಗಿಸಿದನಿಳೆ ಕೌತುಕಂಬಡಲು

ಹಾಲಿನೊಂದಿಗೆ ಹಾಲು ಮನದ ಕೊಡಗೂಸನ್ನು ತೆಗೆದುಕೊಂಡು ಶಿವನು ಕೈಲಾಸಕ್ಕೆ ಕರೆದೊಯ್ದು ಗಣಪದವಿ ನೀಡುತ್ತಾನೆ.

ಬಹುಶಃ ವಿಧವೆಯಾಗಿದ್ದ ಕೊಡಗೂಸಿನ ತಾಯಿ ತಾನೇ ಸ್ವತಃ ಧೈರ್ಯದಿಂದ ಮನೆಯ ಎಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದಳು ಹಾಗೂ ಸಾಕಷ್ಟು ಧಾರ್ಮಿಕ ಸ್ವಾತಂತ್ರ್ಯ ಸಮಾನತೆಗಳನ್ನು ಹೊಂದಿದ್ದಳು. ರಸಜ್ವಲೆಯಾಗಿದ್ದ ಕಾರಣ ತಾನೇ ಆ ದಿನದ ಪೂಜೆ ಬಿಟ್ಟುಕೊಡುತ್ತಾಳೆ. ಹೊರತು, ಅದಕ್ಕಾಗಿ ಅವಳನ್ನು ಅಲ್ಲಿ ಯಾರೂ ತಡೆದಿರಲಿಲ್ಲ ಎಂಬುದು ಗಮನಾರ್ಹ. ಆದರೆ ಅಂತಹ ಸ್ಥಿತಿಯಲ್ಲಿ ದೇವಾಲಯ ಪ್ರವೇಶಿಸಿ ಪೂಜೆ ಮಾಡಬಾರದೆಂಬ ಒಂದು ನಂಬಿಕೆಯನ್ನು ಅವಳು ಅನುಸರಿಸಿದಂತಿದೆ. ಕೊಡಗೂಸು ವಯಸ್ಸಿನಲ್ಲಿ ಚಿಕ್ಕವಳಾ ದರೂ ತಾಯಿಯ ಬದಲಾಗಿ ತಾನೇ ನೇರವಾಗಿ, ಧೈರ್ಯದಿಂದ ಶಿವನ ಪೂಜೆಗೆಂದು ದೇವಾಲಯಕ್ಕೆ ಬರುತ್ತಾಳೆ. ಅವಳ ಭಕ್ತಿಯ ಭಾವಕ್ಕೆ ಓಗೋಡುವ ಶಿವನು ಅವಳಿಗೆ ಗಣಪದವಿ ನೀಡುವುದರೊಂದಿಗೆ, ಆಕೆಯ ಹಾಲಿನ ಬಟ್ಟಲನ್ನು ದೇವ ಭಂಡಾರದಲ್ಲಿಟ್ಟು ತನಗೆ ಬೇಕಾದಾಗ ಅದರಿಂದಲೇ ಹಾಲು ಕುಡಿಯುವುದಾಗಿ ತಿಳಿಸುವನು. ಭಕ್ತಿಯ ನೆಲೆಯಲ್ಲಿ ಕೊಡಗೂಸಿನ ತಾಯಿಯಾಗಲಿ, ಮಗು ಕೊಡಗೂಸಾಗಲಿ ಗಂಡಿನಂತೆಯೇ ಇಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸಮಾನತೆ ಹೊಂದಿರುವುದನ್ನು ಕಾಣಬಹುದಾಗಿದೆ. ಅವರು ತಮಗೆ ಬೇಕಾದಾಗ ಶಿವಾಲಯ ಪ್ರವೇಶಿಸಬಲ್ಲರು; ಪೂಜೆ ಸಲ್ಲಿಸಬಲ್ಲರು.

ಅಮ್ಮವ್ವೆಯ ರಗಳೆ

ಬಿಜ್ಜಾವರದ ಶಂಕರ, ಭಾಗೀರಥಿ ದಂಪತಿಗಳು ಶಿವನಲ್ಲಿ ತಮಗೆ ಹೆಣ್ಣುಮಗು ಬೇಕೆಂದು ಹಾರೈಸಿ ಪಡೆದ ಮಗುವೇ ಅಮ್ಮವ್ವೆ. ಮಗು ಶಿವಪೂಜೆಯಲ್ಲಿ ಬೆಳೆಯುತ್ತದೆ; ಆಕೆ ಸುಂದರ ತರುಣಿಯಾಗಿ ಬೆಳೆಯುತ್ತಾಳೆ. ಒಮ್ಮೆ ಶಿವಪೂಜೆಯಲ್ಲಿರುವಾಗ ತನಗೆ ಶಿವನೇ ಮಗನಾಗ ಬೇಕೆಂದು ಆ ಬಾಲೆ ಬಯಸುತ್ತಾಳೆ. ಶಿವನು ಅದಕ್ಕೆ ಒಪ್ಪಿಕೊಂಡಿರುತ್ತಾನೆ. ತಮ್ಮ ಸೋದರಳಿಯನಿಗೆ ಶಂಕರ ಭಾಗೀರಥಿ ದಂಪತಿಗಳು ಮಗಳನ್ನು ವಿವಾಹ ಮಾಡಿಕೊಡುತ್ತಾರೆ. ಆದರೆ ಕೆಲ ದಿನಗಳಲ್ಲಿಯೇ ಗಂಡನನ್ನು ಕಳೆದುಕೊಂಡು ಅಮ್ಮವ್ವೆ ವಿಧವೆಯಾಗುತ್ತಾಳೆ.

ಒಂದು ದಿನ ಮನೆಗೆ ಬಂದ ಜಂಗಮನಿಗೆ ಶಿವನೆಲ್ಲಿಹ, ಎಂತಿಹನಾತ ಎಂದು ಆಕೆ ಮುಗ್ಧತೆಯಿಂದ ಕೇಳುತ್ತಾಳೆ. ಅದಕ್ಕೆ ಜಂಗಮ ದ್ವಂದ್ವದಲ್ಲಿ ಶಿವನಿಗೆ ಮನೆಮಠವಿಲ್ಲ, ತಂದೆ ತಾಯಿಗಳಿಲ್ಲ ಎಂದು ಹೇಳುತ್ತಾನೆ. ಶಿವನಿಗೆ ಯಾರೂ ಇಲ್ಲವೆ? ದಿಕ್ಕು ದೆಸೆ ಇಲ್ಲದ ಪರದೇಶಿಯೇ? ಎಂದು ಆಕೆ ಹಳಹಳಿಸುತ್ತಾಳೆ.

ಎನ್ನೆಡೆಗೆ ಬಾರ ನಾನನ್ಯಳಾಗಿಯೆ ಕಾಣೆ
ಚೆನ್ನಾಗಿ ನೋಡಿ ರಕ್ಷಿಸುವೆ ನಾಂ ತನ್ನಾಣೆ
…………………………………
ಬಾರಯ್ಯ ಶಿವನೆ ನಾಂ ಮಕ್ಕಳಿಲ್ಲದ ಬಂಜೆ
ಬಾರಯ್ಯ ಎನ್ನ ಸಾರಲ್ಕೆ ಮನುಜರಿಗಂಜೆ

ಎಂದು ಶಿವನನ್ನು ಮಗುವಾಗಿ ಬರುವಂತೆ ಕರೆದು ಪ್ರಾರ್ಥಿಸುತ್ತಾಳೆ. ಜೆಡೆ ಬಿಡಿಸಿ, ನೀರು ಹಾಕಿ, ಹಾಲು ನೀಡಿ, ಪರಿಮಳ ಪೂಸಿ ಆರೈಯ್ಕೆ ಮಾಡುವುದಾಗಿ ಹಂಬಲಿಸುವಳು. ತಾಯಂತೆ ಉಪಚರಿಸುವೆ ‘ಮಗುವಂತೆ ಬಾ’ ಎಂಬ ಆಕೆಯ ಕರೆ ಶಿವನ ಕಿವಿ ತುಂಬುತ್ತದೆ. ಅವಳ ಗರ್ಭದಲ್ಲಿ ಮಗುವಾಗಿ ಜನಿಸಿದರೆ ಲೋಕಾಪವಾದ ಅವಳಿಗೆ ತಟ್ಟುವುದೆಂದು ವಿಚಾರಿಸಿ, ಶಿವನು ಕಾಡಿನ ಗಿಡದ ಕೆಳಗಿನ ತೊಟ್ಟಿಲೊಂದರಲ್ಲಿ ಶಿಶುವಾಗಿ ಬರುತ್ತಾನೆ. ಹತ್ತಿ ಹಿಂಜುತ್ತಾ ಕೂತ ಅಮ್ಮವ್ವೆಗೆ ಕಾಡಿನಲ್ಲಿರುವ ಅನಾಥ ಶಿಶುವಿನ ಸುದ್ದಿ ಮುಟ್ಟುತ್ತದೆ. ಏನನ್ನೂ ಲೆಕ್ಕಿಸದೆ ಕಾಡಿಗೆ ಓಡುತ್ತಾಳೆ. ಅಲ್ಲಿರುವ ಅನಾಥ ಮಗು ಕಂಡು;

ಬರ್ದುಕಿದೆಂ ಕಣ್ಣ ಪುಣ್ಯಂ ಮುಂದೆ ಇದೆ ಎನುತೆ
ಬರ್ದಕಿದೆಂ ಎನ್ನ ಮನದಾನಂದ ಇದೆ ಎನುತೆ

ಸಂತಸ, ಸಡಗರದಿಂದ ಬೀಗುವಳು. ದೇವರಿತ್ತ ಶಿಶುವನ್ನು ತಾನು ಸಾಕಿ ಸಲಹುವುದಾಗಿ ಮನೆಗೆ ತರುವಳು. ಬಂಜೆ ಎಂಬ ಶಾಪ ಕರಗಿ ತಾಯಾಗಿ, ‘ಎಣ್ಣೆಯಂ ಪೂಸಿ ಮೆಯ್ಯೊತ್ತಿ ಮಜ್ಜನಕೆರೆದು’ ನಾನಾ ತೆರನ ಲಾಲನೆ ಪಾಲನೆಗಳಲ್ಲಿ ತೊಡಗಿ ಮಾತೃತ್ವದ ಅನನ್ಯ ಸುಖ ಸವಿಯುತ್ತಾಳೆ. ಆಕೆ ‘ಸಕಲವಂ ರಕ್ಷಿಸುವ ದಾತನಂ ರಕ್ಷಿಪಳು, ಜೋ ಜಂಗಮಾಕಾರ ಶರಣರಾಧಾರ ಜೋ’ ಎಂದು ಹಾಡಿ ವಾತ್ಸಲ್ಯ ರಸದ ಧಾರೆ ಎರೆಯುವಳು.

ಅವಳ ಮಾತೃಪ್ರೇಮವನ್ನು, ಸಾಕುಮಗುವಿನೊಂದಿಗೆ ಆಕೆಗೆ ಇರುವ ಸಂಬಂಧವನ್ನು ಪರೀಕ್ಷಿಸಿ ನೋಡಲು ಬಗೆದು ಶಿವನು ಒಂದು ತಂತ್ರ ಹೂಡುವನು. ಒಂದು ದಿನ ತೊಟ್ಟಿಲಲ್ಲಿ ಮಲಗಿದ ಮಗುವಿಗೆ ಕೈಕಾಲು ನಡುಗಿ, ಕಣ್ಣುಗಳು ಬೆಳುಪೇರಿ, ಮೈ ಬೆವೆತು ಒದ್ದಾಡುತ್ತದೆ. ಅಮ್ಮವ್ವೆ ಕಂಗಾಲಾಗುತ್ತಾಳೆ. ಕಾಡಿನಲ್ಲಿ ಬಿಟ್ಟು ಹೋದ ತಂದೆ ತಾಯಿಯರನ್ನು ಜರಿದು, ಉಪಚರಿಸಿ, ಗುಣಕಾಣದೆ ಭಯ ಶೋಕದಿಂದ ಭರಿತಳಾಗಿ ಬಿಡುವಳು. ಮಗುವಿನ ಸಾವಿಗೆ ಹೆದರಿ, ತಾನೇ ಮೊದಲು ಜೀವ ಬಿಡಲು ನಿರ್ಧರಿಸಿ, ಕೊರಳನ್ನು ಇರಿದುಕೊಳ್ಳುವ ವಿಚಾರಕ್ಕೆ ಬರುವಳು.

ಕಂದ ನಿನ್ನಯ ನೋವ ನಾಂ ನೋಡಲಾರನೈ
ಮುಂದೆ ನಿನಗಿಂದ ಸಾವೆಂ ತಾಳಲಾರನೈ
ಈಳಿಗೆಯ ತಂದಿಕ್ಕಿಕೊಂಡಾಗಳೇ ಕೊರಲ್ಗೆ
ಬಾಲಕನ ನೋವ ನೋಡಲುಮಾರದೆಯೆ ಕೊರಲ್ಗೆ

ಮಗುವಿನ ಸಾವು ಕಾಣುವುದಕ್ಕಿಂತ, ತಾನೇ ಸಾಯುವುದು ಒಳಿತು ಎಂದು ತನ್ನ ಕುತ್ತಿಗೆ ಕತ್ತರಿಸುವಷ್ಟರಲ್ಲಿ ಶಿವ ತೊಟ್ಟಿಲಿನಿಂದ ಎದ್ದು ಬಂದು ಆಕೆಯ ಕೈಯ ತಡೆಯುತ್ತಾನೆ. ಭಕ್ತಿಗೆ ಮೆಚ್ಚಿದೆ, ವರ ಕೇಳು ಎಂದಾಗ ಕೂಡ ಆಕೆ ‘ಮಗು ನೀನು ಸುಖವಾಗಿ ಇರು’ ಎಂದೇ ಕೇಳುತ್ತಾಳೆ. ಇಂತಪ್ಪ ಹಿತವೆಯರುಂಟೆ ಎಂದು ಅಚ್ಚರಿಪಡುವ ಶಿವ ಅವಳನ್ನು ತನ್ನ ತಾಯಿ ಎಂದೇ ಭಾವಿಸಿ ಗಣಪದವಿ ನೀಡುತ್ತಾನೆ.

ಈ ರಗಳೆಯಲ್ಲಿ ಅಮ್ಮವ್ವೆಯ ಶಿವಭಕ್ತಿಯ ಭರವನ್ನು ತೋರುವ ಆಶಯ ಕವಿಗೆ ಇರಬಹುದು. ಆದರೆ ಈ ಕಥನವು ಅದರಾಚೆಗೂ ಅರ್ಥಪೂರ್ಣ ಕಾಣ್ಕೆಗಳನ್ನು ನೀಡುತ್ತದೆ. ಮೊದಲನೆಯದಾಗಿ ಅಮ್ಮವ್ವೆಗೆ ಜನರೆಲ್ಲ ‘ಬಾಲಕರಿಲ್ಲದ ಬಾಲೆದ್ಯಾತರ ಜನ್ಮ’ ಎಂದು ವ್ಯಂಗ್ಯ, ಕುಹಕ, ಚುಚ್ಚುಮಾತು ಆಡಿದಂತಿದೆ. ಸಮಾಜದಲ್ಲಿ ವಿವಾಹಿತ ಹೆಣ್ಣಿಗೆ, ಮಕ್ಕಳಾಗ ದಿದ್ದರೆ ಬಂಜೆ ಎಂದು ನಿಂದಿಸುವುದು ಇಂದಿಗೂ ಅಲ್ಲಲ್ಲಿ ಕಂಡುಬರುತ್ತಿರುವಾಗ, ಅಂದು ಇದು ಇನ್ನೂ ಪ್ರಖರವಾಗಿತ್ತೆಂಬುದು ಸ್ವಯಂಸಿದ್ಧ. ಅಂತಹ ಕಠೋರ, ಅಪ್ರಿಯ ಬಂಜೆಯ ಪೀಠದಿಂದ ದೂರವಾಗಲು ಅಮ್ಮವ್ವೆ ಕೇಳಿದವರಿಗೆಲ್ಲ ‘ಶಿವನೇ ನನ್ನ ಮಗ’ ಎಂದಿರುವುದು ದೊಡ್ಡ ತತ್ವವಾಗಿದೆ. ಎರಡನೆಯದಾಗಿ ಹೊಟ್ಟೆಯ ಮಕ್ಕಳಿಲ್ಲದಿದ್ದರೆ, ಅನಾಥ ಮಗುವನ್ನು ಸಾಕಿ ಭೇದವಿಲ್ಲದಂತೆ ಪ್ರೀತಿ, ವಾತ್ಸಲ್ಯ ನೀಡಬಹುದು; ಪಡೆಯಬಹುದು. ಹೀಗೆ ಅಮ್ಮವ್ವೆ ಬಂಜೆ ಎಂಬುದನ್ನು ತನ್ನದೇ ತೆರನಲ್ಲಿ ನೀಗಿಕೊಂಡು, ಅನಾಥ ಶಿಶುವಿಗೆ ತಾಯಿಯಾಗಿ ಅಪಾರ ಮಾನವೀಯತೆ ಮೆರೆಯುತ್ತಾಳೆ. ಈ ಮೂಲಕ ಸಮಾಜದಲ್ಲಿ ಪುರುಷರಿಂದ ಮಾತ್ರ ವಲ್ಲದೆ ಸ್ತ್ರೀಯರಿಂದಲೂ ಮೂದಲಿಕೆಗೆ ಒಳಗಾಗುತ್ತಿದ್ದ ಬಂಜೆಯರಿಗೆ ದೊಡ್ಡ ದಾರಿ ತೋರುತ್ತಾಳೆ. ಇದು ಬದುಕಿನ ಸ್ವೀಕರಣೆಗೆ ಸ್ತ್ರೀಯೊಬ್ಬಳ ಛಲವಂತಿಕೆ ಜಾಣ್ಮೆಗೆ ನಿದರ್ಶನ ವಾಗುತ್ತದೆ. ಅಮ್ಮವ್ವೆ ಒಬ್ಬಂಟಿಗಳಾದರೂ ಜಗತ್ತನ್ನು ಎದುರಿಸುತ್ತಾಳೆ ಎಂಬುದು ಇಲ್ಲಿ ಆಶಾದಾಯಕ ಅಂಶವೇ ಸರಿ.

ವೈಜಕವ್ವೆಯ ರಗಳೆ

ಶಿವಭಕ್ತರೆನಿಸಿದ್ದ ದಂಪತಿಗಳ ಒಬ್ಬಳೇ ಪುತ್ರಿಯಾದ ವೈಜಕವ್ವೆ ಬೆಳೆದು ನಿಂತ ತರುಣಿ ಯಾಗಿ ‘ವದನಮಂಡಲಂ ಮೃಗಾಂಕಬಿಂಬವಂ ನಗುತ್ತೆ ಪಳಿಯೆ’ ರೂಪಾತಿಶಯ ಹೊಂದಿ ದ್ದಳು. ಆದರೆ ವೈಜಕವ್ವೆಯ ಸೋದರತ್ತೆ (ತಂದೆಯ ತಂಗಿ) ಜೈನರಾಗಿದ್ದ ತಮಗೆ, ವೈಜಕವ್ವೆ ಯನ್ನು ಸೊಸೆಯಾಗಿ ನೀಡಬೇಕೆಂದು ಬಯಸುತ್ತಾಳೆ. ತಂದೆ-ತಾಯಿಗಳು ಒಪ್ಪದಿದ್ದಾಗ ಸೋದರತ್ತೆ ಒತ್ತಾಯ ಮಾಡುವಳು. ಉಪವಾಸ ಬೀಳುವಳು. ಕೊನೆಗೆ ಊರಿನ ಜನರೆಲ್ಲರ ಸಲಹೆಯಂತೆ ಭವಿಗಳಿಗೆ ಮಗಳನ್ನು ವಿವಾಹ ಮಾಡಿಕೊಡಬೇಕಾಗುತ್ತದೆ. ಇದು ವೈಜಕವ್ವೆಗೆ ಅಸಹನೀಯವಾಗಿ ಶಿವನನ್ನು ಪೂಜಿಸಿ ‘\ಜಿಚಿ<uಡಿಳಗೆ ಪುಟ್ಟಿ ಮರೆವೆಯೊಳಗೆಂತು ಪುಗುವೆ ನಯ್ಯ’ ಎಂದು ತನ್ನಳಲು ತೋಡಿಕೊಳ್ಳುವಳು. ಆಕೆಯ ತಳಮಳ, ಚಿಂತೆ, ದುಗುಡಗಳನ್ನರಿತ ಶಿವ ಕನಸಿನಲ್ಲಿ ಬಂದು ‘ವೈಜಕವ್ವೆ ನಿನಗೆ ಚಿಂತೆ ಬೇಡ, ಮದುವೆಯಾಗು ಪೋಗು ಮಗಳೆ’ ಎನ್ನುತ್ತಾನೆ. ಜೈನ ವರನೊಂದಿಗೆ ಆಕೆಯ ವಿವಾಹವಾಗುತ್ತದೆ. ವೈಜಕವ್ವೆ ಮತ್ತು ನೇಮಿಸೆಟ್ಟಿ ಯರ ದಾಂಪತ್ಯದ ಬದುಕಿನ ಅರ್ಥಪೂರ್ಣ ವಿವರಣೆಯಿದು;

ತಮದ ನಡುವೆ ನಿರ್ಮಳ ಪ್ರಭಾಕರಾಂಶುವಿರ್ಪ ತೆರದೆ
ಅಮಮ ತರುಗಳೊಳಗೆ ಚಂದನಂ ವಿರಾಜಿಸಿರ್ಪ ತೆರದೆ

ವೈಜಕವ್ವೆ ಭವಿಗಳಲ್ಲಿ ಇರುವಂತಾಗುತ್ತದೆ. ಪತಿಯ ಮನೆಯಲ್ಲಿ ಕೂಡ ಅವಳು ಗುಪ್ತ ಭಕ್ತಳಾಗಿ ಶಿವನನ್ನು ಆರಾಧಿಸುತ್ತಿದ್ದಳು.

ಒಂದು ದಿನ ನೇಮಿಸೆಟ್ಟಿ ಹಲವು ಹಣ್ಣು, ಸಾಮಗ್ರಿ ತಂದಿಟ್ಟು ಜೈನಯತಿಗಳು ಚರಿಗೆಗೆ ಬರಲಿದ್ದು, ಬೋನವನ್ನು ಸಿದ್ಧಪಡಿಸಲು ಪತ್ನಿಗೆ ತಿಳಿಸುತ್ತಾನೆ. ಆಕೆ ಸೊಗಸಾದ ಹಾಲ ಮಂಡಿಗೆ, ತರಗು, ಲಡ್ಡುಗೆ, ಬೀಸುವೂರಿಗೆ, ಇಡ್ಡಲಿಗೆ, ಪಾಯಸ ಹೀಗೆ ನಾನಾ ತೆರನಾದ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಾಳೆ. ಎಲ್ಲಸಿದ್ಧಗೊಳ್ಳುವ ಹೊತ್ತಿಗೆ ಸಾಧುವೇಷದ ಶಿವ ಭಿಕ್ಷೆ ನೀಡಿ ಎಂದು ಮನೆಯೆದುರು ಬರುವನು. ಈ ಸಾಧುಶರಣ ರೂಪವನ್ನು ದನಿಯನ್ನು ಕೇಳಿ ಆಕೆಗೆ ಆನಂದವಾಗುತ್ತದೆ.

ನೆನೆವ ಮನವೆ ಕಾಮಧೇನುವಾದ ತೆರದೆ ಬಂದಿರಯ್ಯ
ಮನದ ಬಯಕೆ ಭಾವಿಸಲ್ಕೆ ರೂಪಗೊಂಡ ತೆರದೊಳಯ್ಯ

ಭಿಕ್ಷೆಗಾಗಿ ಬಂದ ಸಾಧುವನ್ನು ಕಂಡು ‘ಬಂದುದು ಸಂತಸವೆ ಸರಿ, ಆದರೆ ಕೈಯಲ್ಲಿ ಇಷ್ಟು ಕಿರಿದಾದ ಭಿಕ್ಷಾಪಾತ್ರೆಯೆ’ ಎಂದು ನಕ್ಕು, ಅದು ತುಂಬುವಂತೆ ಸುರಿವೆನೆಂದು ಅದೇ ತಾನೇ ಮಾಡಿದ್ದ ಅಡುಗೆಯ ಒಂದು ಭಾಗವನ್ನು ನೀಡುವಳು. ಆತನ ಕೈಯ ಪಾತ್ರೆಯ ಎರಡರಷ್ಟು ಸುರಿದರೂ ಪಾತ್ರೆ ತುಂಬಲಿಲ್ಲ. ಆಗ ತಾನು ಮಾಡಿದ ಎಲ್ಲ ರುಚುರುಚಿಯಾದ ಅಡುಗೆಯನ್ನು ತಂದು ಪಾತ್ರೆಗೆ ಸುರಿದು, ಹೋಗಲು ತಿಳಿಸುವಳು. ಆತ ನಗುತ್ತ ‘ಹೊರಟೆ ಈ ವಿಭೂತಿ ಸ್ವೀಕರಿಸು’ ಎಂದು ಪ್ರಸಾದ ನೀಡುವುದಕ್ಕೂ, ನೇಮಿಸೆಟ್ಟಿ ಋಷಿಗಳೊಂದಿಗೆ ಮನೆಗೆ ಬರುವುದಕ್ಕೂ ಸರಿಯಾಯಿತು. ಅಡುಗೆ ಇಲ್ಲದೆ ಜೈನಯತಿಗಳು ವ್ರತ ತಪ್ಪಿತೆಂದು ತಿರುಗಿ ಹೋಗುತ್ತಾರೆ. ನೇಮಿಸೆಟ್ಟಿಗೆ ಅಪಾರ ಸಿಟ್ಟು ಒತ್ತರಿಸಿ ಬರುತ್ತದೆ. ಎಲ್ಲ ಅಡುಗೆಯನ್ನು ‘ಗೊರವನೆಂಜಲು’ ಮಾಡಿದುದೇಕೆ ಎಂದು ಆತ ಕೇಳಿದರೆ, ‘ಲೋಕಗಳೆಲ್ಲ ಶಿವನೆಂಜಲು’ ಎಂದಾಕೆ ದಿಟ್ಟತನದಿಂದ ಉತ್ತರಿಸುತ್ತಾಳೆ. ಹೆಂಡತಿಯ ಉತ್ತರದಿಂದ ಆತ ಇನ್ನೂ ಕುಪಿತಗೊಂಡು, ವಿವೇಕ ಕಳೆದುಕೊಂಡು ವೈಜಕವ್ವೆಯನ್ನು ಬೇಕಾಬಿಟ್ಟಿ ಹೊಡೆದುಬಿಡುತ್ತಾನೆ.

ಮರುದಿನ ಜೈನರೆಲ್ಲ ಬಸದಿಗೆ ಹೋಗಿ ಬಾಗಿಲು ನೂಕಿದರೆ ಬಾಗಿಲು ತೆರೆಯಲಿಲ್ಲ. ಎಲ್ಲರೂ ಒಂದಾಗಿ ಬೇಕಾದಂತೆ ಯತ್ನಿಸಿದರೂ ತೆರೆಯಲು ಸಾಧ್ಯವಾಗಲಿಲ್ಲ. ‘ಜೀವ ಹಿಂಸೆ ಮಾಡಿದವರಾರು?’ ಎಂದು ಪ್ರಶ್ನೆ ಆರಂಭವಾಗುತ್ತದೆ. ನೇಮಿಸೆಟ್ಟಿ ತನ್ನ ಹೆಂಡತಿಯನ್ನು ಬಡಿದ ಅಂಶ ತಿಳಿಯುತ್ತದೆ. ಅವರೆಲ್ಲ ವೈಜಕವ್ವೆಯ ಹತ್ತಿರ ಬಂದು ಕ್ಷಮೆ ಕೋರಿ “ನಿನ್ನ ನೋವಿನಿಂದ ಅರುಹನಲ್ಲಿ ಕದವನಿಂದು ಇಕ್ಕಿಕೊಂಡು ಕಾಡುತಿರ್ದ” ಕಾರಣ ಬಂದು ಕದ ತೆರೆ ಎಂದು ದೈನ್ಯದಿಂದ ಕೇಳುವರು. ಆಕೆ ಬಸದಿಗೆ ಬಂದು ಶಿವಭಕ್ತಿ ಮಾಡಿ ಪ್ರಾರ್ಥನೆಯಿಂದ ‘ಶಿವನೇ ಬಾಗಿಲು ತೆಗೆ’ ಎಂದರೆ ನಿಧಾನವಾಗಿ ಬಾಗಿಲು ತೆರೆಯುತ್ತವೆ. ಒಳಗೆ ಅರುಹನ ಮೂರುತಿಗೆ ಶಿವನ ತಲೆ ಮೂಡಿದೆ. ಪಂಡಿತರು, ಶ್ರಾವಕರು ಎಲ್ಲ ನಿಬ್ಬೆರಗಾಗುತ್ತಾರೆ. ‘ಪರರ ಸಮಯದೊಳಗೆ ನಿಂದು ಭಕ್ತಿಯುಕ್ತೆ’ಯಾದ ವೈಜಕವ್ವೆಗೆ ಗಣಪದವಿ ಲಭಿಸುತ್ತದೆ.

ಪವಾಡಾತ್ಮಕ ವಿಚಾರ, ಜೈನ-ಶೈವ ಮೇಲಾಟಗಳನ್ನು ಹೊರತು ಪಡಿಸಿದರೆ, ರಗಳೆಯಲ್ಲಿ ಸ್ತ್ರೀಯೊಬ್ಬಳ ವ್ಯಕ್ತಿತ್ವದ ಗಟ್ಟಿತನ ಅನಾವರಣವಾಗಿದೆ. ಪರಸಮಯಿಗಳ ಮನೆಯಲ್ಲಿಯೂ ತನ್ನ ಆಸೆ, ಆಕಾಂಕ್ಷೆ, ಶ್ರದ್ಧೆ, ಆರಾಧನೆಗಳನ್ನು ವೈಜಕವ್ವೆ ಬಿಡುವುದಿಲ್ಲ. ಹಸಿದವನಿಗೆ ನೀಡುವ ಧರ್ಮ ಪಾಲಿಸಿ, ಗಂಡನಿಗೆ ದಿಟ್ಟಳಾಗಿ ಉತ್ತರಿಸುತ್ತಾಳೆ. ಎಲ್ಲಿಯೂ ಹೆದರುವು ದಿಲ್ಲ. ಪಾಪಪ್ರಜ್ಞೆ ಹೊಂದುವುದಿಲ್ಲ. ಗಂಡನಿಂದ ಹೊಡೆತ ತಿಂದರೂ ತನ್ನಯ ಅಭಿಮತ ದಿಂದ ಹಿಂದೆ ಸರಿಯಲಿಲ್ಲ. ಹೆಣ್ಣಿಗೆ ನೀಡುವ ಮಾನಸಿಕ, ದೈಹಿಕ ಶಿಕ್ಷೆ ಅಕ್ಷಮ್ಯ ಎಂಬುದನ್ನು ಸಾರುವಂತೆ, ಬಸದಿಯ ಬಾಗಿಲುಗಳು ತೆರೆಯುವುದಿಲ್ಲ. ಜೀವಹಿಂಸೆ ಎಂದರೆ ಹೆಂಡತಿಗೆ ಗಂಡ ಹೊಡೆಯುವುದೂ ಆಗಿದೆ ಎಂಬುದನ್ನು ಕವಿ ಸ್ಪಷ್ಟವಾಗಿ ಹೇಳಿದ್ದಾನೆ. ವೈಜಕವ್ವೆ ವೈಯಕ್ತಿಕ ನೆಲೆಯಲ್ಲಿ ಪುರುಷ ಪ್ರಧಾನ ಸಾಮಾಜಿಕ, ಧಾರ್ಮಿಕ ವ್ಯವಸ್ಥೆಗಳನ್ನು ಎದುರಿಸು ತ್ತಾಳೆ. ಪ್ರತಿಭಟಿಸುತ್ತಾಳೆ. ಅದಕ್ಕೆ ಹಿಂಸೆ, ಅವಮಾನ ಎದುರಿಸಿದರೂ ಆಕೆ ವಿಚಲಿತವಾಗು ವುದಿಲ್ಲ. ಋಷಿ-ಮುನಿಗಳಿಗೆ ಮಡಿಯಲ್ಲಿ ಮಾಡಿ ನೀಡುವ ವ್ರತಕ್ಕಿಂತ, ಹಸಿದವನಿಗೆ ಅನ್ನ ನೀಡುವ ಸ್ತ್ರೀ ತತ್ವವನ್ನು ಪ್ರತಿನಿಧಿಸುವ ವೈಜಕವ್ವೆ ಸಂಪ್ರದಾಯಕ್ಕೆ, ಆಚರಣೆ, ನಂಬಿಕೆ, ಕುರುಡು ಧಾರ್ಮಿಕತೆಗೆ ದೊಡ್ಡ ಸವಾಲಾಗಿದ್ದಾಳೆ.

ಹೇರೂರ ಹೆಣ್ಣಿನ ರಗಳೆ

ಆರಂಭದಲ್ಲಿ ಹೇರೂರ ಹೆಣ್ಣಿನ ರಗಳೆಯೂ, ಹಿಂದಿನ ವೈಜಕವ್ವೆ ರಗಳೆಯ ಧಾಟಿಯಲ್ಲಿಯೇ ಬರುತ್ತದೆ. ಶಿವಭಕ್ತರ ಮಗಳಾದ ಹೇರೂರು ಹೆಣ್ಣು ಸುಂದರ ತರುಣಿಯಾಗಿ ಬೆಳೆಯುತ್ತಾಳೆ. ಇಲ್ಲಿಯೂ ಜೈನರಾದ ಸೋದರತ್ತೆ ತವರಿಗೆ ಬಂದು ತನ್ನ ಮಗನಿಗಾಗಿ ಹೆಣ್ಣು ಕೇಳಿ, ಒತ್ತಾಯಿಸುತ್ತಾಳೆ. ಆಕೆಯ ತಂದೆ ತಾಯಂದಿರು ಮನಸ್ಸಿಲ್ಲದಿದ್ದರೂ ಒಪ್ಪುತ್ತಾರೆ.  ಹೇರೂರು ಹೆಣ್ಣು ಶಿವನೆದುರು ಗೋಳಾಡುತ್ತಾಳೆ ಮತ್ತು ‘ಕಯ್ಯ ಮೇಲೀಗ ಹೆಣ್ಣಾಗಿರ್ಪ ಭಂಗಮಂ’ ಅನುಭವಿಸುತ್ತಾಳೆ. ಆದರೂ ಮನೆಯವರ ಸಮಾಜದ ಜನರ ಒತ್ತಾಸೆಗೆ ಅವಳು ‘ತನು ಹಂದರದಲಿ ತನ್ನ ಮನವಾ ಶಿವನ ಮೇಲೆ’ ತೆರನಲ್ಲಿ ವಿವಾಹ ಜರಗುತ್ತದೆ. ಅಲ್ಲಿ ಒಂದು ಸ್ಪಷ್ಟವಾದ ಹೇಳಿಕೆಯಿದೆ.

ಮಕ್ಕಳಾಟದ ಮದುವೆಯಂತೆ ತನಗಾಗುತ್ತಿರೆ
ಮಿಕ್ಕವರ್ಗೆ ದಿಟ ಮದುವೆಯಂತೆ ತೋರುತ್ತಿರೆ

ಮದುವೆ ದಿನ ಆಕೆ ಶಿವಾಲಯಕ್ಕೆ ಬಂದು ‘ಭವಿಯೊಡನೆ ವಿವಾಹವೆ?’, ಎಂದು ಶಿವನನ್ನು ಕೇಳಿ, ಇದಕ್ಕೆ ಪರಿಹಾರ ನೀಡದಿರೆ, ಐದನೆಯ ದಿನ ಶಿವನನ್ನೇ ಕೂಡುವುದಾಗಿ (ಸಾಯುವು ದಾಗಿ) ಪ್ರತಿಜ್ಞೆ ಮಾಡುತ್ತಾಳೆ.

ಮನೆಯವರೆಲ್ಲ ನಾಲ್ಕನೆಯ ದಿನ ಮಗಳನ್ನು ಕಳಿಸಿ ಹರಸಿ, ಬೀಳುಕೊಡುತ್ತಾರೆ. ಆಕೆಯನ್ನು ಬಂಡಿಯಲ್ಲಿ ಕರೆದುಕೊಂಡು ಗಂಡಿನವರು ಬರುವಾಗ ಅರಣ್ಯದಲ್ಲಿ ಊಟಕ್ಕೆ ನಿಲ್ಲುವರು. ಹೇರೂರು ಹೆಣ್ಣು ಶಿವಪೂಜೆ ಇಲ್ಲದೆ ಊಟವಿಲ್ಲ ಎನ್ನುವಳು. ಇತರರೆಲ್ಲ ದೂರದಲ್ಲಿರುವ ಶಿವಾಲಯಕ್ಕೆ ಆಕೆಯನ್ನು ಕಳಿಸುತ್ತಾರೆ. ಆಕೆ ಶಿವಾಲಯದ ಒಳಹೊಕ್ಕು ‘ಈ ವಿವಾಹ ಬೇಡ ಶಿವನೇ ನನ್ನನ್ನು ನಿನ್ನೆಡೆಗೆ ಕರೆದುಕೊಳ್ಳು’ ಎಂದು ಹಾರೈಸಿ ಬಿಗಿಯಾಗಿ ಲಿಂಗವನ್ನಪ್ಪಿ ಕೂತು ಬಿಡುವಳು. ಅಲ್ಲಿ ಅಘಟಿತವೊಂದು ಘಟಿಸುತ್ತದೆ. ಅದು ವಿಚಿತ್ರ;

ಲಿಂಗದಪ್ಪಿಂ ಪುರುಷ ಚಿಹ್ನವೊಗೆದುದು ತನಗೆ
ಲಿಂಗಸಾರಂ ಗಂಡುರೂಪಾಗಿ ತೊಳತೊಳಗೆ

ಹೆಣ್ಣಾಗಿದ್ದ ಆಕೆ ನೋಡುತ್ತಿರುವಂತೆ ಸುಂದರ ತರುಣ ಪುರುಷನಾಗಿ ಬಿಟ್ಟ ಕೌತುಕವಾಗುತ್ತದೆ. ಗಂಡಿನ ಮನೆಯವರು ಹೆಣ್ಣು ಎಲ್ಲಿ ಹೋದಳೆಂದು ಹುಡುಕುತ್ತ ಬರುತ್ತಾರೆ. ಒಳಗೆ ಲಿಂಗಪೂಜೆಯಲ್ಲಿರುವ ತರುಣನನ್ನು ‘ಇತ್ತ ಬಂದ ಹೆಣ್ಣು ಎಲ್ಲಿ?’ ಎಂದು ವಿಚಾರಿಸುತ್ತಾರೆ. ಆತನೇ ಅವಳೆಂದು ಯಾರೂ ಗುರುತಿಸಲಿಲ್ಲ. ಸುದ್ದಿ ತಂದೆ-ತಾಯಿಯರ ಹತ್ತಿರ ಹೋಗು ತ್ತದೆ. ಅವರೂ ಧಾವಿಸಿ ಬರುತ್ತಾರೆ. ಎಲ್ಲೆಡೆ ಹುಡುಕಿ ಬಳಲಿ ಶಿವಾಲಯಕ್ಕೆ ಬರುವರು. ಅಲ್ಲಿಯ ತರುಣ ಅವರನ್ನು ಕರೆದಾಗ, ಧ್ವನಿಯ ಗುರುತು ಸಿಕ್ಕರೂ ವೇಷ ತಿಳಿಯದೆ ಬೆರಗಾಗುತ್ತಾರೆ. ಆಗ ಆ ತರುಣನೇ ಮುಂದೆ ಬಂದು ತಾನೇ ಹೇರೂರು ಹೆಣ್ಣು ಎಂದು ತಿಳಿಸುತ್ತಾನೆ. ಒಲ್ಲದ ವಿವಾಹ, ಶಿವನ ಅಗಲಿಕೆಗಳಿಂದ ಕಂಗೆಟ್ಟು ತಾನು ಶಿವನಿಗೆ ಅರ್ಪಿತ ವಾದುದನ್ನು ತಿಳಿಸುತ್ತಾನೆ.

ಚಂಡೇಶನೊಲಿದೆನ್ನ ಗಂಡು ಮಾಡಿದನಿಂದು
ಕಂಡು ಬಳಲಲ್ಬೇಡ ಗಂಡಾದೆ ನಾನಿಂದು

ಎಂದು ಹೇಳಿ, ತಾನೀಗ ಶಿವನನ್ನು ಅಗಲಲಾರೆ ಎಂದುಬಿಡುವನು. ಗಂಡಿನವರು ಬೆರಗಾಗಿ ಹೊರಟು ಹೋಗುತ್ತಾರೆ. ಹೇರೂರು ಹೆಣ್ಣಿಗೆ ಗಣ ಪದವಿ ದೊರೆಯುತ್ತದೆ.

ಹೆಣ್ಣು, ಗಂಡು ಭೇದಭಾವವನ್ನು ಜೈವಿಕ ಪರಿಧಿಯಾಚೆಗೆ ಹೋಗಿ ಅಸಮಾನತೆಯನ್ನು  ಕಿತ್ತುಹಾಕುವ ಆಶಯ ಹೊಂದಿದ ರಗಳೆ ಇದು. ಹೆಣ್ಣು ಗಂಡುಗಳ ನಡುವಿನ ತೆಳುವಾದ ಒಂದು ಚಿಕ್ಕದಾದ ಅತ್ಯಂತ ಸೂಕ್ಷ್ಮ ಗೆರೆ ಎಂದರೆ ದೈಹಿಕ ಭಿನ್ನತೆ ಮಾತ್ರ. ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ಇದರಾಚೆ ಎರಡೂ ಒಂದೇ ಅಲ್ಲವೆ? ಹಾಗಾಗಿ ಹೆಣ್ಣಿಗೆ ಇಲ್ಲದ ಹಿಂಸೆ, ವಂಚನೆ, ಮೋಸ, ಶೋಷಣೆ ಯಾಕೆ? ಹೇರೂರು ಹೆಣ್ಣು ಭಾವದಲ್ಲಿ ಗಂಡಾಗಿ, ರೂಪದಲ್ಲಿ ಹೆಣ್ಣಾಗಿದ್ದಳು. ಆಕೆಯ ಎಲ್ಲ ಬಗೆಯ ಆಯ್ಕೆ ಸ್ವಾತಂತ್ರ್ಯಗಳು ಕೌಟುಂಬಿಕವಾಗಿ, ಸಾಮಾಜಿಕವಾಗಿ ಹತ್ತಿಕ್ಕಲ್ಪಟ್ಟಾಗ, ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಆಸ್ಪದವೇ ಇಲ್ಲವಾದಾಗ ತುಳಿಯಲ್ಪಟ್ಟ ಹೆಣ್ಣು, ಗಂಡಾಗುತ್ತಾಳೆ. ಶರಣರ ತಾತ್ವಿಕತೆಯ ಮೇರೆಗೆ ಲಿಂಗವನ್ನು ಒಪ್ಪಿದವರಿಗೆ, ಲಿಂಗವನ್ನು ಅಪ್ಪಿದವರಿಗೆ ಗಂಡು-ಹೆಣ್ಣೆಂಬ ರೂಪದ ಭೇದ-ಭಾವವಿಲ್ಲ. ಗಂಡಿರಲಿ, ಹೆಣ್ಣಿರಲಿ ಎಲ್ಲ ಭಕ್ತರೂ ಅಂಗಸತಿಯರೇ ಆಗುತ್ತಾರೆ. ಅವರಿಗೆ ಲಿಂಗವೇ ಪತಿಯಲ್ಲವೇ? ‘ಗಂಡನನಪ್ಪದ ಮುನ್ನವೆ ಕಂಡಾ ಹೇರೂರ ಹೆಣ್ಣಿನಂದೊಲವಿಂದಂ ಗಂಡಂ ಮಾಡಿದ’ ಹಂಪೆಯ ವಿರೂಪಾಕ್ಷ ಎಂದು ಕವಿ ಹೇಳುವಲ್ಲಿ ಸಾಂಕೇತಿಕ ಅರ್ಥವಿದೆ; ಸಮಾನತೆಯ ತುಡಿತವಿದೆ. ಹೇರೂರು ಹೆಣ್ಣಿನ ತಾರುಣ್ಯ ವರ್ಣಿಸು ವಾಗಲೇ ಚಿಕ್ಕದಾದ ಸುಳಿಹು ಮುಂಚಿತವಾಗಿ ಬಂದಿದೆ. ತಂದೆ ತಾಯಿಯರು ಸುಂದರವಾದ ಮಗಳಿಗೆ ತಕ್ಕ ವರನನ್ನು ಹುಡುಕುತ್ತಿದ್ದರೆ, ತರುಣಿ ಮಾತ್ರ ಒಳಗೊಳಗೆ ಗಂಡಾಗಬೇಕೆಂಬ ಭಾವದಿಂದಲೂ, ತನಗೆ ಶಿವನೇ ವಲ್ಲಭನಾಗಬೇಕು ಎಂತಲೂ ಬಯಸುತ್ತಿದ್ದಳು. ಸಮಾನತೆ ಯನ್ನು ಬಿಂಬಿಸುವ ಈ ರಗಳೆ ಇನ್ನೂ ಹಲವು ಭಿನ್ನ ಅನ್ವಯಗಳಿಗೂ ಆಸ್ಪದ ಒದಗಿಸು ವಂತಿದೆ.

ಮಹಾದೇವಿಯಕ್ಕನ ರಗಳೆ

ಕನ್ನಡನಾಡಿನ ಶಿವಶರಣೆ, ಮಹಿಳಾ ಸ್ವಾತಂತ್ರ್ಯ ಸಮಾನತೆಯ ದೊಡ್ಡ ಪ್ರತಿನಿಧಿ, ಮೊದಲ ಅನುಭಾವಿ ಕವಿ, ದಿಟ್ಟ ಹೋರಾಟಗಾರ್ತಿ ಎಂಬೆಲ್ಲ ಖ್ಯಾತಿಗೆ ಭಾಜನಳಾದ ಮಹಾದೇವಿಯಕ್ಕನ ಬಗ್ಗೆ ವಚನಕಾರರನ್ನು ಬಿಟ್ಟರೆ ಮೊದಲ ಚಿತ್ರಣ ಲಭಿಸುವುದೇ ಹರಿಹರನಲ್ಲಿ. ಆಕೆಯ ಬದುಕಿನ ಪೂರ್ವಾರ್ಧದ ಬಗ್ಗೆ ರಗಳೆ ಮಾಹಿತಿ ನೀಡುವಂತೆ ಉತ್ತರಾರ್ಧದ ಬಗ್ಗೆ ವಿವರ ನೀಡಲಾರದು. ಮಹಿಳಾ ಸಮಾನತೆಯ ಪರಿಭಾವನೆಯ ಸಂದರ್ಭ ದಲ್ಲಿ ಮಹಾದೇವಿಯಕ್ಕ ದೊಡ್ಡ ಹೆಸರು, ಹಿರಿಯ ಸಾಧನೆ, ಅಪರೂಪದ ನಿದರ್ಶನ.

ಹರಿಹರನಲ್ಲಿ ಕಥೆಯು ಕೈಲಾಸದಿಂದ ಭೂಮಿಗಿಳಿಯುತ್ತದೆ. ಗುಪ್ತಗಣನಾಥನ ಮೇಲೆ ಕೋಪತಾಳಿದ ರುದ್ರಕನ್ನಿಕೆಯೊಬ್ಬಳಿಗೆ ಪಾರ್ವತಿ ‘ಭವಿಗೆ ಹೆಂಡತಿಯಾಗಿ, ಭಕ್ತರ್ಗೆ ಶರಣೆಂದು’ ಬರಬೇಕು ಎಂದು ಆಜ್ಞಾಪಿಸುವಳು. ಉಡುತಡಿಯ ಶಿವಭಕ್ತ ದಂಪತಿಗಳಿಗೆ ಮಹಾದೇವಿ ಜನಿಸಿ, ಲೋಕಕ್ಕೆ ಅಪೂರ್ವದ ಚೆಲುವಿನ ತರುಣಿಯಾಗಿ ಬೆಳೆಯುತ್ತಾಳೆ. ಆ ಪ್ರದೇಶದ ಅರಸನಾದ ಕೌಶಿಕನು ವೈಹಾಳಿಗೆ ಬಂದು, ಜನರ ಗುಂಪಿನಲ್ಲಿರುವ ಮಹಾದೇವಿಯನ್ನು ಕಂಡು ಕಾಮಿತನಾಗಿ ಸೋತುಹೋಗುತ್ತಾನೆ. ಅರಮನೆಯಿಂದ ರಾಜನ ಸಂದೇಶ ಹೊತ್ತ ಮಂತ್ರಿ ವಸಂತಕ, ಶಿವಭಕ್ತ ದಂಪತಿಗಳ ಹತ್ತಿರ ಬಂದು ‘ಮಹದೇವಿಯರ ದಯಾ ವಾಕ್ಯವೇ ಶರಣೆಂದು’ ಭಾವಿಸಿದ ರಾಜನಿಗೆ ಮಗಳನ್ನು ಕೊಡಬೇಕೆಂದು ಕೋರುತ್ತಾನೆ. ರಾಜನ ಬಿನ್ನಹವೆಂದರೆ ಅದು ರಾಜಾಜ್ಞೆಯೇ ಆಗಿರುತ್ತದೆ. ತಂದೆ -ತಾಯಿಯರು ಆ ಸುದ್ದಿಯನ್ನು ಮಗಳಿಗೆ ತಿಳಿಸಿದರೆ;

ಆನೇಕೆ ಭವಿಯೇಕೆ ಭಕ್ತರೀ ಮಾತೇಕೆ
ಏನಾದೊಡಂ ಭವಿಯೊಲ್ಲೆನೀ ಭ್ರಾಂತೇಕೆ

ಎಂದು ನಿರಾಕರಿಸುತ್ತಾಳೆ. ಈ ಉತ್ತರದಿಂದ ರಾಜನಿಗೆ ಅವಮಾನವಾಗುತ್ತದೆ. ಅವನು ತನ್ನ ಸಚಿವರಿಗೆ ‘ಬಲ್ವಿಂದ ಮೆಲ್ಪಿಂದವೆಂತಾದಡಂ’ ಆಕೆಯನ್ನು ಅರಮನೆಗೆ ತರುವಂತೆ ನಿರೂಪವಿಟ್ಟನು. ಸಚಿವರೆಲ್ಲ ಮತ್ತೆ ಮಹಾದೇವಿಯಕ್ಕನ ಮನೆಗೆ ಬಂದು ಆಕೆಯ ತಂದೆ-ತಾಯಿಯರಿಗೆ ಮಗಳನ್ನು ನೀಡಿದರೆ ಸಕಲ ಸುಖ, ಇಲ್ಲವಾದರೆ ದುರ್ಮರಣ ಎಂದು ತಿಳಿಸುತ್ತಾರೆ. ನಿರುಪಾಯರು, ಅಸಹಾಯಕರು ಆದ ತಂದೆ-ತಾಯಿಯರು ‘ಲೌಕಿಕನ ಕೌಶಿಕನ ಸಂಗಮಂ ಮಾಡವ್ವ’ ಎನ್ನುವರು

ಆಕೆಗೆ ಶಿವನ ಭಕ್ತಿ ಬಿಟ್ಟರೆ, ವಿವಾಹದಲ್ಲಿ, ರಾಜನಲ್ಲಿ ಸಂಪತ್ತಿನಲ್ಲಿ, ಅರಮನೆಯಲ್ಲಿ ಮನವಿಲ್ಲ, ನೆನವಿಲ್ಲ. ಕುಟುಂಬವನ್ನು ರಕ್ಷಿಸುವುದು ಮತ್ತು ರಾಜನ ನಿಷ್ಠುರವನ್ನು ದೂರ ಮಾಡುವುದೆಂದು ವಿಚಾರಿಸಿ ಅವಳು ಮೂರು ನಿರ್ಬಂಧಗಳನ್ನಿಟ್ಟು ವಿವಾಹಕ್ಕೆ ಒಪ್ಪುತ್ತಾಳೆ.

ಎನ್ನಿಚ್ಛೆಯೊಳು ಶಿವನ ಪೂಜೆಯೊಳು ನಲಿದಿಪ್ಪೆ
ಎನ್ನಿಚ್ಛೆಯೊಳು ಗುರುವಿನಂಘ್ರಿ ಸೇವೆಯೊಳಿಪ್ಪೆ

ಇವುಗಳಿಗೆ ತಪ್ಪಿದರೆ ಅರಮನೆಯಲ್ಲಿರಲಾಗದು ಎಂದು ಹೇಳಿ ವಿವಾಹಕ್ಕೆ ಒಲ್ಲದ ಮನದಿಂದ ಸಮ್ಮತಿಸುವಳು. ಕೌಶಿಕನಿಗೆ ವಿವಾಹ ತನ್ನ ಜೀವಿತದ ಅನುಪಮ ಉತ್ಸವವಾಗಿದೆ; ಅವನು ‘ಪೊಣ್ಮುವಾನಂದದಿಂದುಣ್ಮುವ ಸುಖಾಶ್ರುಗಳಿಂ ಕೆತ್ತುವ ಮೆಯ್ಯಿಂ ತಳ್ತುವ ಪುಳಕದಿಂ ….’ ಸುಖಹರ್ಷಿತನಾಗಿದ್ದಾನೆ. ಅದೇ ಹೊತ್ತಿಗೆ ಅಕ್ಕಮಹಾದೇವಿ ‘ದುಮ್ಮಾನದೊಳಳಲ್ದು ಬಾಳ್ಕೆಗೆ ಬಳಲ್ದು ಹರನೊಳು ತೊಳಲ್ದು ಬಿಸಿಲ್ಪತ್ತಿದ ಪೂವಿನಂತೆ….’ ದುಃಖದಿಂದ ಕುಗ್ಗಿದ್ದಾಳೆ. ವಿವಾಹನಂತರ ಅರಮನೆಗೆ ಬಂದ ಆಕೆ ಶಿವಪೂಜೆ ಗುರುಸೇವೆ, ಜಂಗಮ ಆರಾಧನೆಗೆ ತೊಡಗುತ್ತಾಳೆ. ‘ಪೂಜೆಯೊಳಗೆ ಬರೆದ ತೆರದಿ ಪೂಜೆಯೊಳಗೆ ಪೊಲಿದ ತೆರದಿ’ ಮಗ್ನಳಾಗಿ ಲಾಕಿಕವನ್ನೆಲ್ಲ ಮರೆತುಬಿಡುತ್ತಾಳೆ. ಒಂದೆಡೆ ಕೌಶಿಕನಿಗೆ ಉತ್ಸುಕತೆ, ಸರಸ ಆಕಾಂಕ್ಷೆ, ಭೋಗಭಾವ ಬಲಿಯುತ್ತಿದ್ದರೆ ಆಕೆಗೆ ಶಿವನಿಷ್ಠೆ ಹಿರಿದಾಗುತ್ತದೆ. ಒಂದು ಸಲ ಶರಣರಿಗೆ ಭಕ್ತಿಪೂಜೆ ನಡೆಸಿದಾಗ, ಬಿಜ್ಜಳನ ವಿಳಾಸಿನಿಯರು ಬರುತ್ತಾರೆ. ಇದು ಮಹಾದೇವಿಗೆ ಒಂದು ವಿಘ್ನ ಮತ್ತು ತನ್ನ ಪೂರ್ವದ ನಿಯಮದ ಉಲ್ಲಂಘನೆಯಾಗುತ್ತದೆ. ಇನ್ನೊಂದು ಸಲ ಆಕೆ ವಿಶ್ರಾಂತಿ ಪಡೆಯುವಾಗ ಬರುವ ಮಾಹೇಶ್ವರ ಭಕ್ತನನ್ನು ಕೌಶಿಕ ಜರಿದು ಅವಮಾನಿಸಿ ಕಳಿಸುತ್ತಾನೆ. ಕೊನೆಗೆ ಶಿವಪೂಜೆಯ ಏಕಾಂತದಲ್ಲಿದ್ದ ಮಹಾದೇವಿ ಹತ್ತಿರ ಬರುವ ಕೌಶಿಕ ಆಕೆಯ ಸೀರೆಗೆ ಕೈಯಿಕ್ಕಿದಾಗ ಅವಳು ಎಲ್ಲ ನಿರ್ಭಂಧಗಳನ್ನು ಪಾಲಿಸಲಾಗಲಿಲ್ಲ ಎಂದು ಮುನಿದು, ವಿರಕ್ತಿ ತಾಳಿ ಅರಮನೆ ಬಿಟ್ಟು ಹೊರಟು ಹೋಗುತ್ತಾಳೆ.

ಕೇಶಾಂಬರೆಯಾಗಿ ಭಕ್ತಿ ಭರದಲ್ಲಿ ಊರೂರು ಅಲೆದು ವೈರಾಗ್ಯ ಗೀತಗಳ ಹಾಡುತ್ತ ಸಾಗಿದ ಆಕೆಯನ್ನು ನಿಗ್ರಹಿಸಲು ತಂದೆ-ತಾಯಿಯರಿಗೂ ಸಾಧ್ಯವಾಗಲಿಲ್ಲ. ‘ಏನವ್ವ ಮಹಾದೇವಿ ಇಂತಿಪ್ಪರೇ ಮಗಳ’ ಎಂದು ಕೇಳಿದರೆ ಆಕೆ ನೀಡುವ ಉತ್ತರವಿದು. ‘ಶಿವಭಕ್ತ ರಾಗಿ ನೀವಿಂತು ನುಡಿವಿರೆ?’ ಶಿವನೇ ನನ್ನ ಗುರಿ, ರಾಜನಲ್ಲ, ಅರಮನೆಯಲ್ಲ ಎಂದು ಮುಂದೆ ಸಾಗುತ್ತಾಳೆ. ಆಕೆಯನ್ನು ಹೇಗಾದರೂ ಪಡೆಯಬೇಕೆಂದು ಕೌಶಿಕ ಮತ್ತೆ ಭಕ್ತನ ವೇಷ ಧರಿಸಿ ಬಂದು, ‘ನಾನೂ ಭಕ್ತನಾದೆ, ಈಗ ರಾಜನಲ್ಲ ನನಗೆ ಕರುಣಿಸು’ ಎನ್ನುವನು. ಆಗ ಆಕೆ ಹೇಳುತ್ತಾಳೆ:

ನಿನ್ನ ಪುಣ್ಯದ ಬೆಳಸು ನಿನಗಿಲ್ಲ ಕೌಶಿಕನೆ
ಎನ್ನ ಭಾಗ್ಯದ ಫಲವನೀಶ್ವರಂ ತಪ್ಪುವನೆ
ಎನ್ನಂತೆ ಬಾಳ್ವುದೆನಗಿಂತಿದೇ ಘನವೆನಗೆ
ಇನ್ನೇಕೆ ನಿನ್ನ ಸಂಗಂ ಬೇಡ ಬೇಡೆನಗೆ

ಆದರೂ ಅವನು ಶಿವಭಕ್ತರೆದುರು ದೂರು ಕೊಟ್ಟನು. ಕಲುಮಠದ ರಾಜಗುರುಗಳಿಗೆ ಹೊನ್ನನಿತ್ತು ಹುಲುಮಠದ ಗುರುಗಳಿಗೆ ಲಂಚವಿತ್ತು, ತನ್ನನ್ನು ವಿವಾಹವಾದ ಮಹಾದೇವಿ ಯನ್ನು ಮರಳಿ ಕೊಡಿಸುವುದೆಂದು ಬೆನ್ನುಬಿದ್ದನು. ಅವರೆಲ್ಲ ಧನಪಕ್ಷಪಾತಿಗಳಾಗಿ ಮಹಾದೇವಿಯಲ್ಲಿಗೆ ಬರುತ್ತಾರೆ. ಚೆನ್ನಮಲ್ಲಿಕಾರ್ಜುನ ಲಿಂಗದಲ್ಲಿ ತನ್ನ ಪ್ರಾಣವನ್ನಿಟ್ಟು ನಿಶ್ಚಲವಾಗಿ ಕೂತ ಆಕೆಯ ಸಮಾಧಿ ಸ್ಥಿತಿ ಕಂಡು ಅವರೆಲ್ಲ ನಿಬ್ಬೆರಗಾಗುತ್ತಾರೆ; ಭಯಾವಹ ರಾಗುತ್ತಾರೆ. ಆಕೆಯ ಶಕ್ತಿ, ಸಾಮರ್ಥ್ಯ ಗುರುತಿಸಿದ ಅವರೆಲ್ಲ ಕೌಶಿಕರಾಜನಿಗೆ ‘ಹೋಗು ನಿನಗಳವಲ್ಲ’ ಎಂದು ತಿಳಿಸಿ ಕಳಿಸಿ, ಮಹಾದೇವಿಯನ್ನು ಹಾಡಿ ಹೊಗಳುತ್ತಾರೆ. ಅಲ್ಲಿಂದ ಮುಂದೆ ಮಹಾದೇವಿ ಜನರು, ಊರು, ಕೇರಿ ಬಿಟ್ಟುಕೊಟ್ಟು ನಿಬಿಡಾರಣ್ಯದ ಪರ್ವತದ ಮಲ್ಲಿನಾಥನತ್ತ ಪ್ರಯಾಣ ಮಾಡುವಳು. ಶಿವನು ಆಕೆಗೆ ಮೊದಲಿನ ಗಣಪದವಿ ನೀಡಿ ಗೌರವಿಸುತ್ತಾನೆ.

ಅಕ್ಕಮಹಾದೇವಿಯ ಜನನ, ಬಾಲ್ಯ, ಸೌಂದರ್ಯ, ತಾರುಣ್ಯಗಳನ್ನು ವರ್ಣಿಸುವ ರಗಳೆಯ ಮೊದಲಿನ ಐದು ಸ್ಥಲಗಳನ್ನು ಬಿಟ್ಟು ಕೊನೆಯ ಆರನೆಯ ಮತ್ತು ಏಳನೆಯ ಸ್ಥಲದ ಭಾಗವನ್ನಿಲ್ಲಿ ಪ್ರಸ್ತುತ ಉದ್ದೇಶಕ್ಕೆ ಪೂರಕವೆಂದು ಆಯ್ದುಕೊಳ್ಳಲಾಗಿದೆ. ಮಹಾದೇವಿ ತನ್ನ ಕಾರಣ ಕುಟುಂಬಕ್ಕೆ ಬಂದ ಆಪತ್ತು ನಿವಾರಿಸುವ ಧೈರ್ಯ ತೋರಿ, ಸಮಸ್ಯೆಯನ್ನು ತಾನೇ ಎದುರಿಸಲು ಮುಂದಾಗುತ್ತಾಳೆ. ಅರಮನೆ, ಸಂಪದ, ಅಧಿಕಾರಗಳ ಆಸೆ-ಆಮಿಷಗಳನ್ನು ಮೀರಿ ತನ್ನದೇ ನಿಬಂಧನೆಗಳಿಂದ, ಕರಾರುಗಳಿಂದ ಶುಚಿಯಾಗಿ ಬದುಕುತ್ತಾಳೆ. ಆ ಸ್ವಾತಂತ್ರ್ಯ ಹರಣವಾದಾಗ ಎಲ್ಲವನ್ನು ಕಾಲಿನಿಂದ ಒದ್ದು, ಲೋಕಸಂಚಾರಿಯಾಗಿ ನಡೆಯುತ್ತಾಳೆ. ಕೌಶಿಕನ ಅಧಿಕಾರ, ಹಣ ಮದಗಳಿಗೆ, ಗುರುಮಠಗಳ ತೋರಿಕೆಯ ಧಾರ್ಮಿಕ ಪ್ರತಿಷ್ಠೆ ದರ್ಪಗಳಿಗೆ ಮಣಿಯದೆ ತನ್ನದೇ ನಿಲುವನ್ನು ಎತ್ತಿಹಿಡಿಯುತ್ತಾಳೆ. ಹೆಣ್ಣು ಅಸಹಾಯಕ, ಕೋಮಲೆ, ಮುಗ್ಧೆ, ಲೋಕದಲ್ಲಿ ಒಂಟಿಯಾಗಿ ಏನೂ ಸಾಧಿಸಲಾರಳು ಎಂಬ ಪರಂಪರಾಗತ ವಿಚಾರಗಳಿಗೆ ಏಟು ನೀಡುವ ಹಾಗೆ ಆಕೆ ಪ್ರಭುತ್ವವನ್ನು ಧಿಃಕ್ಕರಿಸುತ್ತಾಳೆ. ಧರ್ಮಗುರುಗಳನ್ನು ಎದುರಿಸುತ್ತಾಳೆ. ಕಾಮ ಮೋಹಗಳನ್ನು ವೈರಾಗ್ಯದಿಂದ, ದಂಭ ದರ್ಪಗಳನ್ನು ನಿಷ್ಠೆಯಿಂದ ಗೆಲ್ಲುತ್ತಾಳೆ. ಮಹಾದೇವಿ ನಮ್ಮ ಚರಿತ್ರೆಯಲ್ಲಿ ವಚನಕಾರ್ತಿ, ಕವಿ, ಅನುಭಾವಿಯಾಗಿ ಮಾತ್ರವಲ್ಲ; ಸ್ತ್ರೀ ಶಕ್ತಿಯ ಅಂತಃಸತ್ವದ ತತ್ವವಾಗಿ ಗಣ್ಯಳಾಗಿ ನಿಲ್ಲುತ್ತಾಳೆ. ಪುರುಷನು ಪದವಿ, ಹಣ, ಅಧಿಕಾರಗಳಿಂದ ನಡೆಸುವ ಸ್ತ್ರೀ ಶೋಷಣೆಯನ್ನು ಮೆಟ್ಟಿನಿಲ್ಲುವ ಅಪ್ರತಿಮ ವ್ಯಕ್ತಿಯಾಗಿ, ಶಕ್ತಿಯಾಗಿ ಆಕೆ ಗಮನಾರ್ಹವಾಗುತ್ತಾಳೆ. ಹೆಣ್ಣಿನ ಬಯಕೆ, ಆಸೆ, ಅಭಿಮಾನ, ಸ್ವಾತಂತ್ರ್ಯ, ಗೌರವಗಳೆಲ್ಲವನ್ನೂ ಅವಳು ಕಾಪಾಡಿಕೊಂಡು, ಸಾಧನೆಯ ದಾರಿಯೊಂದನ್ನು ಕೊರೆದು ತೋರುತ್ತಾಳೆ.

* * *

ಕೃತಜ್ಞತೆಗಳು

ಕನ್ನಡದಲ್ಲಿ ಹರಿಹರ ಕವಿಯ ಕೃತಿಗಳದ್ದೇ ಒಂದು ವಿಶಿಷ್ಟವಾದ, ವಿಸ್ತಾರವಾದ ಜಗತ್ತು. ಅದರ ಪ್ರವೇಶ, ಗ್ರಹಿಕೆಗಳಿಗಾಗಿ ನಾನು ಕಳೆದ ಐದಾರು ವರ್ಷಗಳಿಂದ ಭಿನ್ನ ಭಿನ್ನ ನೆಲೆಗಳಲ್ಲಿ ಸಮಕಾಲೀನ ಸಂದರ್ಭಕ್ಕೆ ಅರ್ಥಪೂರ್ಣವಾಗುವಂತೆ ಹುಡುಕಾಟ ನಡೆಸಿರುವೆ. ಕಾವ್ಯದ ವಿಮರ್ಶೆಯಾಗಲಿ, ಅನ್ವಯ ವಿವರಣೆಗಳಾಗಲಿ ಭೂತದೊಂದಿಗಿನ ಗುದ್ದಾಟ ಮಾತ್ರವಲ್ಲ. ಅದು ವರ್ತಮಾನದ ಜೊತೆಗಿನ ಮುಖಾಮುಖಿಯೂ ಆಗಿರುತ್ತದೆ. ಕಾವ್ಯ ಸ್ಫುರಿಸುವ ಸಾವಿರ ಸಾವಿರ ಅರ್ಥ, ಆಶಯ, ಸೂಚನೆಗಳಲ್ಲಿ ಒಂದಾದರೂ ಇಂದಿನ ಬದುಕಿಗೆ ಬೆಳಕು ಬೀರುವಂತಿದ್ದರೆ ಅಂತಹ ಕಾವ್ಯ ಸಾರ್ಥಕವಾಗುತ್ತದೆ. ಆ ಕವಿ ಪ್ರಸ್ತುತನಾಗುತ್ತಾನೆ. ಹರಿಹರನ ಕೃತಿಗಳು ಹಾಗೆ ಸಾರ್ಥಕವಾಗಿವೆ. ಆತ ಪ್ರಸ್ತುತನಾಗಿದ್ದಾನೆ. ಎಲ್ಲ ಭಾಷೆಯ ಸಾಹಿತ್ಯಗಳಲ್ಲಿ ಈ ಬಗೆಯ ಕವಿ ಕಂಡುಬರುತ್ತಾನೆ ಎಂದು ಹೇಳುವಂತಿಲ್ಲ.

ಈ ಕೃತಿಯನ್ನು ಹರಿಹರನ ವಿಶೇಷ ಅಧ್ಯಯನದ ಮೂರನೆಯ ಭಾಗವಾಗಿ ಪ್ರಕಟ ಪಡಿಸಲು ಸಂತೋಷವಾಗುತ್ತಿದೆ. ಐದು ವರ್ಷದ ಕೆಳಗೆ ಹರಿಹರನ ರಗಳೆಗಳಲ್ಲಿ ಬರುವ ಮೂರು ಅಂಶಗಳ ಮೇಲೆ ಬೆಳಕು ಚೆಲ್ಲುವ ಅಧ್ಯಯನದ ಹೊಳಹು ಹಾಕಿದ್ದೆ;

೧. ಮಹಾಕವಿ ಹರಿಹರನ ಜಾತಿಭೇದ ನಿರಸನ ರಗಳೆಗಳು.

೨. ಮಹಾಕವಿ ಹರಿಹರನ ವರ್ಣಭೇದ ನಿರಸನ ರಗಳೆಗಳು

೩. ಮಹಾಕವಿ ಹರಿಹರನ ಲಿಂಗಭೇದ ನಿರಸನ ರಗಳೆಗಳು

ಈಗಾಗಲೇ ಮೊದಲಿನ ಎರಡು ಕೃತಿಗಳು ಪ್ರಕಟವಾಗಿದ್ದು, ಈಗ ಹೊರಬರುತ್ತಿರುವ ಪ್ರಸ್ತುತ ಕೃತಿಯೊಂದಿಗೆ ಈ ಯೋಜನೆ ಪೂರ್ಣಗೊಳ್ಳುತ್ತಿದೆ. ಈ ಅಧ್ಯಯನಕ್ಕೆ ಸೂಚನೆ ನೀಡಿ ಅಲ್ಲಲ್ಲಿ ಮಾರ್ಗದರ್ಶನ ಮಾಡಿ ಈ ಕೃತಿಗಳು ಹೊರಬರುವುದಕ್ಕೆ ಕಾರಣರಾದವರು ನಾಡಿನ ಖ್ಯಾತ ಸಂಶೋಧಕರಾದ ಡಾ. ಎಂ. ಎಂ. ಕಲಬುರ್ಗಿಯವರು. ಅವರ ಸಾಂಸ್ಕೃತಿಕ, ಸಾಹಿತ್ಯಿಕ ಪ್ರೀತಿಗೆ ಅನಂತ ಧನ್ಯವಾದ ಅರ್ಪಿಸುತ್ತೇನೆ.

ಈ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದ ಮೂಲಕ ಪ್ರಕಟಿಸಲು ಒಪ್ಪಿಗೆ ನೀಡಿದ ಮಾನ್ಯಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಮಾನ್ಯಕುಲಸಚಿವರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೆ ನನ್ನ ಅನಂತ ಕೃತಜ್ಞತೆಗಳು. ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ ಅವರನ್ನು, ದಿವಂಗತ ಕೆ.ಎಸ್. ವೀರಭದ್ರಪ್ಪ ದತ್ತಿನಿಧಿ ಅಡಿಯಲ್ಲಿ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಮಾಲೆಯಾಗಿ ಕೃತಿ ಹೊರಬರಲು ಕಾರಣರಾದ ಕೇಂದ್ರದ ಮುಖ್ಯಸ್ಥ ಡಾ. ಕೆ. ರವೀಂದ್ರನಾಥ ಅವರನ್ನು ಸ್ಮರಿಸುತ್ತೇನೆ. ಪುಟ ವಿನ್ಯಾಸದಲ್ಲಿ ನೆರವು ನೀಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಹೊದಿಕೆ ಚಿತ್ರ ರಚಿಸಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ವಿದ್ಯಾರಣ್ಯ ಗಣಕಕೇಂದ್ರದ  ಶ್ರೀ ಜೆ. ಶಿವಕುಮಾರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಹರಿಹರ ಕವಿಯ ಬಗ್ಗೆ ನನ್ನೊಳಗೆ ಇದೀಗ ಮತ್ತೆ ಹೊಸ ಚಿಂತನೆಗಳು ಆರಂಭಗೊಂಡಿವೆ; ಇನ್ನೊಂದು ಕೃತಿಯ ಮುಖೇನ ಬಹುಶಃ ಅವು ಹೊರಬರಬಹುದು. ಕನ್ನಡ ಓದುಗರ, ಅಧ್ಯಯನ ಶೀಲರ ಸಹೃದಯತೆಯ ಬೆಂಬಲವಿರಲಿ, ಎಲ್ಲರಿಗೂ ನಮಸ್ಕಾರ.

ಡಾ. ಗುರುಪಾದ ಮರಿಗುದ್ದಿ
೨೦೦೮