ಸಕಲ ಜನಂ ಕಾಣುತೆ ಕೌ
ತುಕವೆನಲಾ ಕಾರಿಕಾಲೊಳಿರ್ಪಮ್ಮೆಯರಂ |
ಸುಕರವೆನೆ ಮೆರೆದನಾನಂ
ದಕರಂ ಕರುಣಾಬ್ಧಿ ಹಂಪೆಯ ವಿರೂಪಾಕ್ಷ ||

ಧರೆಗೆಸೆವ ಚೋಳದೇಶದೊಳೊಂದು ಸುಖಕರಂ
ಕರಮೊಪ್ಪುವುದು ಕಾರಿಕಾಲೆಂಬ ಶಿವಪುರಂ
ಅಲ್ಲಿರ್ಪಳೊರ್ವಳು ಶಿವಜ್ಞಾನಸಂಪನ್ನೆ
ಸಲ್ಲಲಿತ ಸತ್ಯಭಕ್ತ್ಯಾಗಮಪ್ರತಿಪನ್ನೆ
ತನ್ನ ನಾಮಂ ಕಾರಿಕಾಲಮ್ಮೆಯೆಂಬುದದು
ಪನ್ನಗಾಭರಣಂಗತಿಪ್ರೇಮ ಹರುಷವದು
ತನಗೆ ಪತಿಯೆಂದೆನಿಪನಲ್ಲಿ ಮಾಣಿಕಸೆಟ್ಟಿ
ಧನದಂಗೆ ಹುರುಡಿಪ ಸದರ್ಥತ್ವಮಂ ಮುಟ್ಟಿ
ಆತಂಗೆ ಸತಿಯಾಗಿ ಸಮಸುಖದೊಳೊಪ್ಪುತಂ
ನೂತನದ ಶಿವಭಕ್ತಿಯಂಮನದೊಳಪ್ಪುತಂ     ೧೦

ಗುಪ್ತಮಾಹೇಶ್ವರಿ ಪರಾಧೀನೆ ಪತಿಭಕ್ತೆ
ಆಪ್ತೆ ಶರ್ವಂಗೆ ಭಕ್ತ್ಯವಲೋಕನಾಯುಕ್ತೆ
ಇರ್ಪಳಾರುಂ ಭಕ್ತೆಯೆಂದರಿಯರಾಕೆಯಂ
ಸರ್ಪಭೂಷಣಚರಿತಾವಲೋಕೆಯಂ
ಅತ್ತೆಮಾವಂ ಗಂಡನರಿಯರಾ ಭಕ್ತೆಯಂ
ಮತ್ತೆ ಮನೆಯೊಳಗುಳ್ಳರರಿಯರಾ ಭಕ್ತೆಯಂ
ಬೋನಮಂ ಮಾಡುವೆಡೆ ದೇವಾರ್ಚನಾ ಸ್ಥಳಂ
ಏನೆಂಬೆನಲ್ಲಿ ಸಿಂಹಾಸನಂ ಕರತಳಂ
ನೆನೆವ ಘನಚಿಂತೆ ಸಕಲ ಸ್ತೋತ್ರವಭವಂಗೆ
ಮನದ ನಿರ್ಮಳವಗ್ಘವಣಿ ಮಹಾದೇವಂಗೆ       ೨೦

ಕೆಯ್ಯ ಕೀರೆಯೆ ಪರಿಮಳದ ಪುಷ್ಪವೀಶಂಗೆ
ಸುಯ್ಯ ಕಂಪೇ ಗುಗ್ಗುಲದ ಧೂಪವಭವಂಗೆ
ನೋಟವೇ ಬೆಳಗಿದಾರತಿ ಶಂಕರಂಗಲ್ಲಿ
ಮಾಟವಲ್ಲಿಯೆ ಸೆವೆದ ಬೋನದೋಗರವಲ್ಲಿ
ಇಂತಾರುವರಿಯದಂದದೆ ಶಿವನನರ್ಚಿಪಳು
ಇಂತು ಶಿವಭಕ್ತಿಯಂ ಮನದೊಳಗೆ ಪೆರ್ಚಿಪಳು
ಓವಿ ಸಾಗಿಸಿ ಬೆಳೆಯಿಸುವಲ್ಲಿ ಭಕ್ತಿಯಿಂ
ತೀವಿ ತುಳ್ಕಾಡಿ ಮುಚ್ಚುವಳಂಜಿ ಭಕ್ತಿಯಿಂ
ರುದ್ರಲೋಕವೆ ಹುಟ್ಟಿದೂರೆಂದು ಭಾವಿಪಳು
ರುದ್ರನೇ ತಂದೆಯುಮೆ ತಾಯೆಂದು ಭಾವಿಪಳು      ೩೦

ಕೈಲಾಸವೇ ತವರ್ಮನೆಯೆಂದು ನಂಬುವಳು
ಶೂಲಿಯಣುಗರು ಸೋದರಂಗಳೆಂದುರ್ಬುವಳು
ಆಸರಂ ಬೇಸರಂ ಶಂಕರಂಗರುಪುವಳು
ಆಸುರದ ಸಂಸಾರಮಂ ಗಿರಿಜೆಗರುಪುವಳು
ಮನದೊಳಗೆ ಮನ್ನಿಸುವಳರ್ಚಿಸುವಳಾಡುವಳು
ಮನದೊಳಗೆ ನೋಡುವಳು ಮನದೊಳಗೆ ಹಾಡುವಳು
ಮನದೊಳಗೆ ದೇವಂಗೆ ಬಿನ್ನಪಂ ಮಾಡುವಳು
ಮನದೊಳಗೆ ಸಂಸಾರದಿರವಿಂಗೆ ಹೇಸುವಳು
ಅನವರತ ಪರಮ ಶಿವಮೂರ್ತಿ ಚಿಂತಾಮೌನಿ
ಅನಸೂಯೆ ಭಕ್ತೆಯಭಿಮಾನಿ ಲಿಂಗಧ್ಯಾನಿ          ೪೦

ಮಾಡುವುದು ಕೆಲಸವದು ಪೂಜೆ ಸರ್ವೇಶಂಗೆ
ನೋಡುವುದು ಮನೆವಾರ್ತೆ ದರುಶನವದೀಶಂಗೆ
ತಾನರಿವಳಿಂದುಧರನರಿವನರಿವವರಿಲ್ಲ
ಏನೆಂಬೆನೀ ಪೂಜೆಯಂ ಶಂಕರನೆ ಬಲ್ಲ
ಇಂತು ಗುಪ್ತಾರಾಧನಾನಂದೆಯಿರ್ಪುದಂ
ಕಂತುಹರನೆಂತುವಕ್ಕಿಸಲಾರದಿಂತಿದಂ
ಪ್ರಕಟಿಸುವೆನೆಂಬ ಭರದಿಂ ಚಂದ್ರಶೇಖರಂ
ಸಕಲಲೋಕಕ್ಕರುಪಲೆಂದು ಸರ್ವೇಶ್ವರಂ
ಸಾಧುಭಕ್ತನ ವೇಷಮಂ ತಳೆದನೊಲಿದಿತ್ತ
ವೇಧೆಯಿಂದಿರ್ದರಾ ಕಾರಿಕಾಲೊಳಗತ್ತ  ೫೦

ಒಂದುದಿನಮಿರುತಮಿರಲಲ್ಲಿ ಮಾಣಿಕಸೆಟ್ಟಿ
ಗೆಂದು ತಂದರು ಕಾಣ್ಕೆಗಳುಮಂ ಮನಂ ಮುಟ್ಟಿ
ಈಳದಿಂದಂ ಕೆಲವಕಾಲದ ಫಳಂಗಳಂ
ಬಾಳಚೂತದ ನೂತ್ನಕಲ್ಪಫಲತತಿಗಳಂ
ಅಮ್ಮೆಗಭವಾಚಲದ ಪಯಣಮಂ ತಪ್ಪಂತೆ
ಅಮ್ಮೆಗೆ ದಿಟಂ ದೃಷ್ಟಫಳಮುಮಂ ತಪ್ಪಂತೆ
ತಂದು ಕಾಣ್ಕೆಯನೀಯೆ ಕಂಡು ನೆರೆ ಕೊಂಡಾಡಿ
ತಂದವರ್ಗುಡಕೊಟ್ಟು ಕಳುಹಿ ಹಣ್ಣಂ ನೋಡಿ
ಹಾರೈಸಿ ಪೊಸ ಫಲವಿದೆಂದು ಹರುಷಂಬಟ್ಟು
ಕಾರಿಕಾಲಮ್ಮೆಯರ ಕೈಯ್ಯಲೊಲವಿಂ ಕೊಟ್ಟು    ೬೦

ಅತಿ ಸುರಕ್ಷಿತದಿಂದೆ ಬಯ್ತಿಡೆನುತಂ ಪೇಳ್ದು
ಪತಿ ಹೋದನತ್ತಲಾ ವ್ಯವಹಾರಮಂ ತಾಳ್ದು
ಹೋಗೆ ಕಂಡಳು ಫಲಂಗಳನಪೂರ್ವಂಗಳಂ
ರಾಗದಿಂ ಕೊಂಡುಬಂದಳು ನೂತನಂಗಳಂ
ಆಹಾ ಶಿವಂಗೆ ಶಿವಭಕ್ತರ್ಗೆ ಯೋಗ್ಯವಿದು
ಆಹಾ ಮಹಾದೇವ ಮರ್ತ್ಯರ್ಗಯೋಗ್ಯವಿದು
ಎಂದವಂ ಬಯ್ತಿಟ್ಟು ಕೆಲಸದ ಶಿವಾರ್ಚನೆಗೆ
ಬಂದಳಾ ಗುಪ್ತಮಾಹೇಶ್ವರಿಯಡುವ ಮನೆಗೆ
ಎಂದಿನಂದದೆ ನಿತ್ಯ ನೇಮಂಗಳಂ ಮಾಡಿ
ತಂದು ಬೋನಕ್ಕೆ ಮೇಲೋಗರಮುಮಂ ಕೂಡಿ      ೭೦

ಆರೋಗಿಸಲ್ಕಿಕ್ಕಲನುವಾಗುತಿರಲಲ್ಲಿ
ಹಾರೈಸಿ ಶಂಕರಂ ರೂಪುದೋರಿದನಲ್ಲಿ
ಏಕಮುಖವೆಳಲ್ವ ಜೆಡೆ ಪುಲಿದೊವಲ ವಿಸ್ತರಂ
ಲೋಕದೊಳು ಸುಳಿವ ತಪಸಿಗಳಂತಿರಲ್ಕರಂ
ಇದ್ದಿದ್ದು ಈಯೆಡೆಗೆ ಬಂದ ಪರಿಯೆಂತಯ್ಯ
ಇದ್ದಿದ್ದು ಭವಿಗಳ ಮನೆಗಿದೇಕೆ ಬಂದಯ್ಯ
ಏಕೆ ಬಂದಿರಿ ಮನೆಯಂ ಕರಂ ಪೊಲ್ಲೆನಲು
ಏಕೆ ಬಂದಿರಿ ಭಕ್ತರಿಲ್ಲಿಯುಂಟೇಯೆನಲು
ಭಕ್ತೆ ಎನಲಮ್ಮೆನರಿದಡೆ ಕಂದಿದಪಳೆಂದು
ಯುಕ್ತಿಯಿಂದಂ ಸುಮ್ಮನಿಪ್ಪುದನುಚಿತವೆಂದು        ೮೦

ಭಕ್ತರೆಂದರಿಯೆನಾರೆಂದರಿಯೆವೆಲೆಯಮ್ಮೆ
ಭಕ್ತಿಗಷ್ಟೋಗರವನಿಕ್ಕೆ ಪೋದಪೆವಮ್ಮೆ
ಎನೆ ಗುಪ್ತತನದೊಳಿರಲಾರದುಕ್ಕುಲು ಭಕ್ತಿ
ಮನದೊಳಕ್ಕಾಡಿ ನಾಲಗೆಗೆ ಬರುತಿರೆ ಭಕ್ತಿ
ಮನದ ಗರ್ಭಿಣಿ ಜಿಹ್ವೆಯಿಂದ ಬೆಸಲಪ್ಪಂತೆ
ತನುವಿಡಿದ ಭಕ್ತಿಯಂ ನಾಂಚುತುಸುರಿದಳಿಂತೆ
ಆರುವುಂ ಕಾಣ್ಬುದಕೆ ಮುನ್ನವಾಗಿರೋಗಿಪುದು
ಆರುವರಿಯದ ತೆರದೆ ತುರಿತದಿಂ ಕರುಣಿಪುದು
ದೇವ ಕಂಡಡೆ ಭಕ್ತೆಯೆಂದರಿಪುದಂತಕ್ಕು
ದೇವ ಬಳಕಾಂ ಬದುಕೆನರಿದಡಿರಿದಂತಕ್ಕು          ೯೦

ಎನುತಲ್ಲಿಯಾರೋಗಣೆಗೆ ಕೊಟ್ಟು ಬೇಗದಿಂ
ಘನಮಹಿಮ ಹದುಳವಾರೈಸೆಂದು ರಾಗದಿಂ
ಮನೆಯವರ್ಕೊಂದಡಂ ಕೊಲುಗೆನ್ನನೆನುತಲ್ಲಿ
ತನಿವಣ್ಣಿನೆರಡರೊಳಗೊಂದನಿಕ್ಕಿದಳಲ್ಲಿ
ಇಕ್ಕೆ ನಲಿದಾರೋಗಿಸುತ್ತಿರ್ಪ ಸಮಯದೊಳು
ದಿಕ್ಕನೆ ಮನೆಯ ಸೆಟ್ಟಿ ಬಂದನಾ ಹೊತ್ತಿನೊಳು
ಬರಲವಂ ನಸುಗಾಣದಂತೆ ಭಕ್ತಂ ಹೋದ
ಉರವಣಿಸುತಾ ಸೆಟ್ಟಿ ಸಂದೇಹಿಸಲು ಹೋದ
ಇತ್ತಲಾ ಸೆಟ್ಟಗೆಡೆಮಾಡಿದಳು ಶಿವಭಕ್ತೆ
ಚಿತ್ತದೊಳಗಂಜುತ್ತವಂಜೆನೆನುತಂ ಭಕ್ತೆ     ೧೦೦

ಎಡೆಮಾಡಿಯಗಲಿಕ್ಕಿ ಹೆರಸಾರ್ದು ನಿಂದಿರಲು
ಕಡು ಹಸಿದು ಸೆಟ್ಟಿ ಹಣ್ಣಲ್ಲಿ ತಾಯೆನುತಿರಲು
ಇಕ್ಕಿದಳು ತಂದೊಂದು ಹಣ್ಣನೆಡೆಯೊತ್ತಿಂಗೆ
ಮಿಕ್ಕ ಸಂದೇಹದಿಂ ಶಂಕಿಸುತೆ ಗಂಡಂಗೆ
ತಂದಿಕ್ಕಲಿನ್ನೊಂದು ಹಣ್ಣೆಲ್ಲಿ ತೋರೆನಲು
ಬಂದಳು ಪರಿಚ್ಛೇದಿಸುತ್ತಲ್ಲಿ ಭೋಂಕೆನಲು
ಕೈಯೊಡನೆ ಹರಣಮಂ ಬೆರೆಸಿ ಕೈಯಿಕ್ಕದಳು
ಕೈಯ ಮೇಲೆ ತೋರ್ಪೆನೆನ್ನನೆನುತಿರಿಸಿದಳು
ಇಂದುಧರನಲ್ಲಿಂದೆ ಮುನ್ನವಂಜುತ್ತೊಂದು
ತಂದಮೃತಫಲವನೊಲಿದಿರಿಸೆ ನೇಹದೊಳಂದು           ೧೧೦

ಕಂಡಾಗಳಾ ಹಣ್ಣ ಬಸುರೊಳಗೆ ಬಂದಂತೆ
ಕಂಡು ಪರಮನ ಪರಮ ಹರುಷದೊಳಗದ್ದಂತೆ
ಭಾವಿಸುತೆ ತೆಗೆದಳಾನಂದಮಂ ತೆಗೆವಂತೆ
ದೇವಲೋಕದ ಪರಸ್ಥಾನಮಂ ತೆಗೆವಂತೆ
ತೆಗೆದು ತಂದಿಕ್ಕಿದಳು ಪತಿಯಗಲೊಳೊಲಿದಲ್ಲಿ
ಬಗೆಯೊಳಂ ಕೌತುಕಂಬಟ್ಟು ನೋಡುತ್ತಲ್ಲಿ
ಸೆಟ್ಟಿ ಕೈಮುಟ್ಟಿ ಮಿಗೆ ರೋಮಾಂಚಮಾಗುತಿರೆ
ದಿಟ್ಟಿಸಲು ಕಂಗಳಿಗೆ ಸವಿಗಳಂ ಸಲಿಸುತಿರೆ
ಎಲ್ಲಯದು ಪೇಳೆನಗೆ ಕಾರಣಿಕೆ ಈ ಫಲಂ
ಎಲ್ಲಿಯದು ಪೇಳಾ ಮಹಾಪುರುಷೆ ಈ ಫಲಂ     ೧೨೦

ಎಂದು ನಡುನಡುಗಿಯಾತಂ ಮುಟ್ಟಲಂಜುತ್ತೆ
ಇಂದುಮುಖಿಯರಿದನೆಂದಿತ್ತ ನಡನಡಗುತ್ತೆ
ಇರೆ ಸುಮ್ಮನಿರದೆ ಪೇಳೆನಗಿದೆಲ್ಲಿಯ ಫಲಂ
ಹರಕರುಣವಲ್ಲದೀ ನೆಲದೊಳಿಲ್ಲೀ ಫಲಂ
ಎನೆ ಪೇಳಲುಂ ಪೇಳದಿರಬಾರದಿನ್ನೆಂದು
ಮನದೊಳಗೆ ಸಿಡಿಮಿಡಿಗೊಳುತ್ತಲುಸುರ್ದಳು ನಿಂದು
ಹರಭಕ್ತನೊರ್ವನಾನಂದದಿಂದಂ ಬರಲು
ಹರುಷದಿಂದೊಂದು ಹಣ್ಣಂ ಕೊಟ್ಟೆನಿಂತಿರಲು
ನೀವೀಗಳಾ ಹಣ್ಣನಾರ್ತದಿಂದಂ ಬೇಡೆ
ದೇವರಿರಿಸಿದ ಅಮೃತಫಳವನೊಲವಿಂ ನೋಡೆ ೧೩೦

ಆ ಹಣ್ಣಿದೆಂದು ಪೇಳ್ದಡೆ ಸೆಟ್ಟಿ ನಡುಗಿದಂ
ಆ ಹೊತ್ತೆ ಸತಿಯೆಂಬ ಭಾವಮುಮನುಡುಗಿದಂ
ಮುನ್ನವೇ ಸಂದೇಹಿಸುತ್ತಿರ್ದೆನೆಲೆ ತಾಯೆ
ಇನ್ನೆನ್ನ ಸತಿಯೆಂದು ನುಡಿಯೆಂ ಮಹಾಮಾಯೆ
ಇಂತು ಕರುಣಿಸಿ ಹರಂ ಪ್ರತ್ಯಕ್ಷನಪ್ಪನೇ
ಇಂತಪ್ಪ ಸತಿಯರುಂಟೇ ಶಿವಂ ಬರ್ಪನೇ
ತಾಯೆ ನೀವೇ ಕೊಂಬುದೀ ಹಣ್ಣಿದೆನಗರಿದು
ತಾಯೆ ನಿಮ್ಮ ಮರೆಯಿಸಿರ್ದ ಪರಿ ಧರೆಗರಿದು
ಇನಿತು ದೆವಸಂ ನಿಮ್ಮನಂತಿಂತು ನುಡಿದುದಕೆ
ಇನಿತು ಕಾಲದೊಳುದಾಸೀನಮಂ ಮಾಡಿತಕೆ    ೧೪೦

ಕರುಣಿಪುದು ಕಾವುದೆನ್ನಂ ಕಾರಿಕಾಲಮ್ಮೆ
ಉರವಣಿಪ ಮಾಯೆಯಿಂ ತೆಗೆವುದೆನ್ನುವನಮ್ಮೆ
ಇನ್ನೆನಗೆ ನೀವೇ ಗುರುಸ್ಥಾನವೆಲೆ ತಾಯೆ
ಇನ್ನೆನ್ನ ಭವಬಂಧನವನುಡಿಗಿಸೆಲೆ ತಾಯೆ
ಕರುಣಿಸುವುದುಪದೇಶಮಂ ಮಾಳ್ಪುದಿನ್ನೆನಗೆ
ಪರಮಾರ್ಥಮೂರ್ತಿ ಕಾರುಣ್ಯದಿಂ ನೀವೆನಗೆ
ಎಂದು ಹಣ್ಣಂ ಕೊಟ್ಟು ಮೈಯಿಕ್ಕಿ ಬಿದ್ದಿರಲು
ಮಂದೈಪ ಭಕ್ತಿಯಿಂ ಪರವಸದೆ ಪಟ್ಟಿರಲು
ಕಂಡು ಶಿವಭಕ್ತೆಯಭಿಮಾನಿ ನೆರೆ ಕಂದಿದಳು
ಗಂಡನಿಂತರಿದನಿನ್ನೇನೆಂದು ಕೊರಗಿದಳು        ೧೫೦

ದೇವ ಭಕ್ತಿಯನಿಂತು ಗಾರುಮಾಡಿದೆ ತಂದೆ
ದೇವ ವಿಸಲ ಮೋಹಮಂ ಸೂಸಿದೈ ತಂದೆ
ಭಕ್ತಿ ಬೀಸರವಾಯಿತಿನ್ನೆಂತು ಸೈರಿಪೆಂ
ಭಕ್ತಿ ಹರಿಹಂಚಾಯಿತಿನ್ನೆಂತು ಸೈರಿಪೆಂ
ಕೆಲರರಿಯೆ ಭಕ್ತಿಯಂ ತೋರಿ ಬೀರಿದರುಂಟೆ
ಪಲರರಿಯೆ ಭಕ್ತಿಯಂ ಸಾರಿ ಮಾರಿದರುಂಟೆ
ಎಂದಲ್ಲಿ ಬಾಡುತಂ ಕೋಡುತಂ ನಡೆನೋಡಿ
ಮುಂದಿರ್ದ ಸೆಟ್ಟಿಗಂದುಪುದೇಶಮಂ ಮಾಡಿ
ದೇವನಿತ್ತ ಪ್ರಸಾದದ ಫಲಮುಮಂ ಕೊಟ್ಟು
ದೇವಭಾಮಿನಿ ಮನದ ನಿಷ್ಠೆಗಂದೆಡೆಗೊಟ್ಟು    ೧೬೦

ಇರೆನಿನ್ನಿರೆ ಜಗಕ್ಕೆನ್ನುವಂ ತೋರಿದಂ
ಹರಭಕ್ತೆಯೆಂದರುಹಿ ಹರಿಹಂಚಮಾಡಿದಂ
ಇನ್ನಂಜಲೇಕೆನುತೆ ಭಸಿತಮಂ ಪೂಸಿದಳು
ಇನ್ನರಿಯಲಕ್ಕೆಂದು ರುದ್ರಾಕ್ಷಿಯಿಕ್ಕಿದಳು
ನಡೆವೆ ನಾನಿಲ್ಲಿರೆಂ ಕೈಲಾಸಪುರಕೆನುತೆ
ಮೃಡನೆ ಶರಣೆಂದೆನುತೆ ಕಲಿಯೇರಿ ಮೀರುತ್ತೆ
ಪೊರಮಟ್ಟಳಮ್ಮಮ್ಮ ಪುರಜನಂ ನೋಡುತಿರೆ
ಪೊರಮಟ್ಟಳಲ್ಲಲ್ಲಿ ಬಂಧುಜನ ಮರುಗುತಿರೆ
ಪುರದ ಪರಮಾಯಷ್ಯವಿರದೆ ಪೊರಮಡುವಂತೆ
ಪುರದ ಪುಣ್ಯವ್ರಜಂ ನೆರೆದು ಪೊರಮಡುವಂತೆ   ೧೭೦

ಬಿಸಿಲನರಿಯದ ರಮಣಿ ಬಿಸುಪಿಂಗೆ ಮೈಗೊಟ್ಟು
ಮಿಸುಕಲರಿಯದ ಮಾನಿ ಅಡಿಯಮೇಲಡಿಯಿಟ್ಟು
ಉತ್ತರದಿಶಾಭಿಮುಖಿಯಾದಳಾ ಶಿವಭಕ್ತೆ
ಚಿತ್ತದೊಳು ಪುರಹರನನಿರಿಸುತಂ ಶಿವಭಕ್ತೆ
ಬಂದಳಾನಂದಭರದಿಂ ಕಾರಿಕಾಲಮ್ಮೆ
ಬಂದಳ್ಪರಿಚ್ಛೇದದಿಂ ಕಾರಿಕಾಲಮ್ಮೆ
ಸಕಲ ಸುಖಮಂ ಬಿಸುಡುತಂ ಕಾರಿಕಾಲಮ್ಮೆ
ಸಕಳಮಂ ಲೆಕ್ಕಿಸದೆ ಕಲಿ ಕಾರಿಕಾಲಮ್ಮೆ
ಬರೆ ನಿಂದುದಲ್ಲಿ ಬಾಂಧವಜನಂ ಪುರಜನಂ
ಬರವರಲ್ ಬಂದರಲ್ಲಲ್ಲಿರ್ದ ಪರಿಜನಂ    ೧೮೦

ಕಾಣಲ್ಕೆ ಬರುತಿರ್ದರೇನೆಂಬೆನಮ್ಮೆಯಂ
ಜಾಣರರಿವರು ರೂಪು ಯೌವನದ ಪೆರ್ಮೆಯಂ
ಪಾಪವುಳ್ಳರ್ಗೆ ಸಿಂಗರದಂತೆ ತೋರುತಂ
ಪಾಪವಿಲ್ಲದ ಜನಕೆ ತಾಯಂತೆ ತೋರುತಂ
ಮಲ್ಲಿಕಾಲತೆಗೆ ಶಿವಭಕ್ತಿಯೊದವಿದ ತೆರದೆ
ಸಲ್ಲಲಿತ ಶಶಿಕಳೆಗೆ ನಿಷ್ಠೆಯೊದವಿದ ತೆರದೆ
ಭಕ್ತಿಲತೆ ನಡೆವಂತೆ ನಡೆವುತಿರ್ದಳ್ ನೋಡ
ಭಕ್ತಿವನಿತಾಗಮನದಂತೆ ನಡೆದಳ್ ನೋಡ
ಎಂಬೊಂದು ಪಾವನತ್ವಂ ರೂಪುದೋರುತಿರೆ
ಇಂಬಿನಿಂ ನಡೆತಂದಳೊಡನೆ ಜನವೆಯ್ದುತಿರೆ    ೧೯೦

ಎಳೆಯಸುಗೆದಳಿರನುರದುಗುಳ್ವ ಪದತಳದೊಳಗೆ
ಬೆಳೆದು ಪ್ರದಕ್ಷಿಣಂ ನಳನಳಿಸಿ ತೊಳತೊಳಗೆ
ಕಾಮನಾ ಡೊಣೆಗೆ ತೊಣೆಯೆನಿಪ ಕಿರುದೊಡೆ ಕರಂ
ಕಾಮಹರನಲ್ಲಿಗೊಯ್ವುದಕೆ ನೆರನೆನೆ ಕರಂ
ಕದಳಿಯಂ ಹಳಿವುತಿರ್ಪೂರುದಂಡಂ ನೋಡ
ಮದನವೈರಿಯ ನಮಸ್ಕಾರದಂಡಂ ನೋಡೆ
ಮದನಕೃತಕಾಚಲನಿತಂಬಬಿಂಬಂ ತಾನೆ
ಒದವಿ ಪದ್ಮಾಸನದ ತಳವೃತ್ತವುಂ ತಾನೆ
ಸರಸಿಯಂ ಪಳಿಕೈವ ನಾಭಿಮಂಡಲವಲ್ಲಿ
ಹರಭಕ್ತಿರಸದ ಮಡುವಿನ ತೆರದೊಳಿರಲಲ್ಲಿ       ೨೦೦

ಮುಗಿದ ಸರಸಿಜವನೇಳಿಸುವ ಕುಚವೊಪ್ಪಿರಲು
ಮಿಗೆ ಭಕ್ತಿರಸದ ಕಳಸದ ಮುಚ್ಚುಳಂತಿರಲು
ಪಂಚಸರಳಂ ಪಳಿವ ನುಣ್ಬೆರಲ ಬಿತ್ತರಂ
ಪಂಚಮುಖಪರಿಚಾರಕರ ತೆರದೊಳಿರೆ ಕರಂ
ಪದ ಕೊರಲು ಕೇಳಿಸುವ ಕಂಬುವಿನ ತೆರದೊಳಿರೆ
ಕದಪು ಶರ್ವಂ ನೋಳ್ಪ ದರ್ಪಣದ ತೆರದೊಳಿರೆ
ಕಣ್ಣೆರಡು ಚೆಲ್ವಿಂಗೆ ಕಣ್ಮೂಡಿದಂತೆಯಿರೆ
ತಿಣ್ಣವೆನಿಸುವ ಭಕ್ತಿ ಕಣ್ದೆರೆದ ಪರಿಯೊಳಿರೆ
ಅಳಿಕುಳದ ಬಣ್ಣಮಂ ಬರಿಕೆಯ್ವ ಕುಂತಳಂ
ತಲೆಯೂರಿ ನಡೆವಲ್ಲಿಗಾಧಾರ ವರ್ತುಳಂ ೨೧೦

ಇಂತು ಸೌಂದರ್ಯಮಂ ಪಾವನತ್ವವನೀವ
ಸಂತತಂ ಶೃಂಗಾರರಸದ ಲಹರಿಯನೀವ
ಕಾರಿಕಾಲಮ್ಮೆಯರ ರೂಪಿಂಗೆ ಬಹುಜನಂ
ಸಾರುತಂ ಬೆಂಬಿಡದೆ ಬರೆ ಕಷ್ಟತರಜನಂ
ಕಂಡಲ್ಲಿ ಕಾರಿಕಾಲಮ್ಮೆ ಮನದೊಳು ನೊಂದು
ಖಂಡದಿಂಡೆಗೆ ಮರುಳ್ಗೊಂಡಿರಯ್ಯೋಯೆಂದು
ಅವಿಚಾರರಿವದಿರೇನೆಂದರಿಯರಕ್ಕಟಾ
ಸುವಿಚಾರವೆಳ್ಳನಿತ್ತಿಲ್ಲ ನಿಮಗಕ್ಕಟಾ
ಒಳಗು ಹೊರಗಾಗಿ ನೋಡಿರೆಯೆನ್ನ ದೇಹಮಂ
ಬಳಿಕ ಹೇಸಲ್ವೇಳ್ಕುಮರಿಯಿರೇ ಚೋಹಮಂ ೨೨೦

ಪಂಚಭೂತಂ ನೆರೆಯೆ ಕಾಯಂ ಪರಿಯೆ ವಾಯ
ಇಂಚೆಯೋದಿರೆ ಎನ್ನ ರೂಪಿದೆಲ್ಲಂ ಹೇಯ
ಎಂಬ ಬೋಧೆಗೆ ಹೋಗದೊಡನೊಡನೆ ಬರುತಮಿರೆ
ನಂಬದುನ್ಮತ್ತಜನವಳುಪಿಂದೆ ಬರುತಮಿರೆ
ಬೇಸತ್ತು ಪುರಹರಾ ಮಾಯಾತಮೋಹರಾ
ವೇಷವೆನ್ನಂ ಕೊಂದಪುದು ಪಂಚಶರಹರಾ
ಎಂದು ಮೊರೆಯಿಡೆ ಹರಂ ಶಕ್ತಿಯಂ ಕುಡಲಲ್ಲಿ
ನಿಂದು ನಿಶ್ಚಯಿಸಿದಳು ದೇಹಮಂ ಬಿಡಲಿಲ್ಲ
ಸೈರಿಸದೆ ಬೆಂಬತ್ತುವಜ್ಞಜನಮಂ ನೋಡಿ
ವೈರಾಗ್ಯಶಸ್ತ್ರದಿಂ ಛೇದಿಸಿಕೊಳಲ್ವೇಡಿ  ೨೩೦

ಕಾಮಮಂ ಕ್ರೋಧಮಂ ಲೋಭಮಂ ಬಿದಿರ್ವಂತೆ
ಪ್ರೇಮಮಂ ಮದಮತ್ಸರಂಗಳಂ ಬಿದಿರ್ವಂತೆ
ಮಾಯೆಯಂ ಬಿದಿರ್ವಂತೆ ಮೋಹಮಂ ಬಿದಿರ್ವಂತೆ
ಛಾಯೆಯಂ ಬಿದಿರ್ವಂತೆ ಚೆಂದಮಂ ಬಿದಿರ್ವಂತೆ
ಅವಯವಂಗಳನೆಲ್ಲ ಚೆಲ್ಲಿದಳು ಛಲದಿಂದೆ
ತವತವಗೆಯೋಡಿತ್ತು ಮೂರ್ಖಜನ ಭಯದಿಂದೆ
ಸ್ಥೂಲತನುವಂ ಬಿಟ್ಟು ಸೂಕ್ಷ್ಮತನುವಿಂ ನಿಲಲು
ಕೇಳು ಭೃಂಗೀಶಸೋದರದಂದದೊಳು ನಿಲಲು
ಕಣ್ಣುಳಿಯೆ ಮೆಯೆಲ್ಲ ಎಲುವಾಗಿ ನಿಲಲಲ್ಲಿ
ಬಣ್ಣವಳಿಯಲ್ ನೋಡುತೆಲ್ಲ ಲಘುಜನವಲ್ಲಿ       ೨೪೦

ಮರುಳೋ ಪಿಶಾಚಿಯೋ ಓಡೋಡೆನುತ್ತಲ್ಲಿ
ಮರಳಿ ನೋಡಲ್ಕಮ್ಮದೋಡಿತ್ತು ಜನವಲ್ಲಿ
ಇಂತು ಮೈಯಂ ಬಿದಿರ್ದು ತಾನೋರ್ವಳೇ ನಿಂದು
ಸಂತಸುಖದಿಂ ಶಂಭುವಂ ನೆನೆವುತಂ ಬಂದು
ತಲೆಯುಳಿಯೆ ಮೈಯೆಲ್ಲವೆಲುವಾಗಿ ನಿಲಲಂತೆ
ಕಲಿಯುಗದ ಹೊಲೆಗೆಟ್ಟು ಪುಣ್ಯವೇಳ್ತಪ್ಪಂತೆ
ನಡೆತಂದಳಪ್ರತಿಮ ವೈರಾಗ್ಯಸಂಯುಕ್ತೆ
ನಡೆತಂದಳೇಕನಿಷ್ಠಾಭಕ್ತಿಯನುರಕ್ತೆ
ಹರುಷದಿಂ ಹಾಡುತಂ ಹಿಗ್ಗುತಂ ಬರವರಲು
ಪರಮ ಸಂತೋಷಿಯಾನಂದದಿಂ ಬರವರಲು ೨೫೦

ಕಂಚಿಗೆ ಬಡಗಲಿರ್ಪ ತಿರುವಾನಕಾಡೊಳಗೆ
ಪಂಚಮುಖನಿರೆ ಕಂಡಳಲ್ಲಿ ಕಾನನದೊಳಗೆ
ಆಹಾ ಶಿವನೆ ನಿನ್ನ ನಾಟ್ಯವಂ ತೋರೆನಗೆ
ಆಹಾ ಮಹಾನಾಟ್ಯವಂ ಕರುಣಿಸುವುದೆನಗೆ
ತೋರಯ್ಯ ಘನತಾಂಡವಾಡಂಬರವನೆನಗೆ
ತೋರಯ್ಯ ಮೈಯೆಲ್ಲ ಕಣ್ಣಾಗಿ ನೋಳ್ಪೆನಗೆ
ಎಂದು ಬಿನ್ನೈಸೆ ಶಂಕರನಲ್ಲಿ ತೋರಿದಂ
ನಿಂದು ನೋಡಲು ಕೂಡೆ ಗಗನಮಂ ಮೀರಿದಂ
ಜೆಡೆ ನಭವನೆಡೆಗೊಂಡು ಪರ್ಬಿ ಪಲ್ಲವಿಸುತಿರೆ
ಹೆಡಗಳಂ ಬಿಚ್ಚಿ ಉರಗಂಗಳಾಡುತ್ತಮಿರೆ          ೨೬೦

ಹಸ್ತಂಗಳೆಣ್ದೆಸೆಗೆ ನಟನೆಯಿಂ ನಲಿವುತಿರೆ
ವಿಸ್ತರದ ಚರಣಪಲ್ಲವವೆತ್ತಿ ಮರೆವುತಿರೆ
ಮೇಲೆ ವಿಶ್ವಕ್ಸೇನನಲ್ಲಿ ತಿರ್ರನೆ ತಿರುಗೆ
ಕಾಲನೇವುರವಲ್ಲಿ ಝಣಝಣಿಸುತಂ ತಿರುಗೆ
ಡಮರುಗದ ನಾದಮುಂ ಢಣಢಣಮೆನುತ್ತಿರಲು
ಅಮಮ ಘಂಟಾನಾದವಲ್ಲಿ ಠಣಠಣಮೆನಲು
ಪುಲಿದೊವಲ ಪೊಂಗೆಜ್ಜೆಗಳ್ಘುಲ್ಘುಲೆಲೆನಲು
ತಲಿಸುವಂದುಗೆಯ ದನಿ ಘುಲುಘುಲುಕು ಘುಲುಕೆನಲು
ಕೈಯ ಬೊಮ್ಮನ ಶಿರಮರರೆಯರರೇಯೆನಲು
ಮೈಯ ದೇವರ ಹಿಂಡು ತಲೆಮಾಲೆ ಕುಬುಬೆನಲು        ೨೭೦

ಗಜಚರ್ಮವಲ್ಲಿ ಝಂಪಿಸಿ ಝಾಡಿಮಾಡುತಿರೆ
ಭುಜ ಹತ್ತುದೆಸೆಗಳಂ ಕಂಕುಳೊಲಿರುಂಕುತಿರೆ
ಪದತಳದ ಹರಿನಯನವೆವೆದೆರೆದು ಹಳಹಳಿಸೆ
ಬಿದಿರ್ದೆತ್ತಿ ಖಟ್ವಾಂಗವಂಬರಕ್ಕವ್ವಳಿಸೆ
ಕೋಟಿರವಿಕಾಂತಿಯಂ ಪದನಖಂ ಸೂಸುತಿರೆ
ಕೋಟಾನುಕೋಟಿನಾಟ್ಯಂಗಳಂ ಚೆಲ್ಲುತಿರೆ
ಬ್ರಹ್ಮವಿಷ್ಣ್ವಾದಿಗಳು ಜಯಜೀಯ ಎನುತಮಿರೆ
ಬ್ರಹ್ಮಾಂಡಭಾಂಡವಾ ತಾಂಡವಕೆ ಬಿರಿವುತಿರೆ
ತಾನಾಡೆಯುಮೆಯಾಡೆ ಹರಿಯಜರ್ ಸುರರಾಡೆ
ತಾನಾಡೆ ಜಗವಾಡೆ ಜೀವರಾಶಿಗಳಾಡೆ          ೨೮೦

ಆಡುತಿರ್ದಂ ವಿರೂಪಾಕ್ಷ ಶಿವನಮ್ಮಮ್ಮ
ಆಡುತಿರ್ದರ್ ಗಣಂಗಳ್ ನೋಡಲಮ್ಮಮ್ಮ
ಇಂತಾಡೆ ನೋಡಲಂಜಿದಳಮ್ಮೆ ಶರಣೆನುತೆ
ಕಂತುಹರ ಸಾಲ್ಗು ಸಾಲ್ಗಮ್ಮೆ ನಾನೆಂದೆನುತೆ
ಕಣ್ಮುಚ್ಚಿ ನಡುಗುತಿರ್ದಳು ಕಾರಿಕಾಲಮ್ಮೆ
ಅಣ್ಮುಗೆಟ್ಟರಿವುಗೆಟ್ಟಾ ಕಾರಿಕಾಲಮ್ಮೆ
ಇರೆ ಹರಂ ಕರುಣದಿಂದಂ ನಾಟ್ಯಮಂ ಮಾಣ್ದು
ಸುರರೆಲ್ಲ ಚೋದ್ಯಮೆನೆ ಕಾರುಣ್ಯದಿಂ ಮಾಣ್ದು
ಕಂಡವ್ವ ಕಾರಿಕಾಲಮ್ಮೆಯರೆ ನಾಟ್ಯಮಂ
ಕಂಡಿರೇ ಅಮ್ಮೆಯರೆ ಎನ್ನ ಚೆಲ್ವಾಟಮಂ            ೨೯೦

ಎನೆ ಕಂಡೆ ನಾಂ ಕಂಡೆನೆನ್ನಳವೆ ಬರ್ದುಕಿದೆಂ
ಎನಗೆ ತೋರಿದೆ ದಯಾಪರತೆಯಿಂ ಬರ್ದುಕಿದೆಂ
ಹರಿಯಜರು ಕಾಣ್ಬರೇ ನಿಮ್ಮ ಹೊಸ ನಾಟ್ಯಮಂ
ವರ ವೇದವರಿವವೇ ನಿಮ್ಮ ಕಾಲಾಟಮಂ
ಎಲೆ ದೇವ ಎನ್ನ ಪುಣ್ಯದ ಫಳಕೆ ಸರಿಯುಂಟೆ
ಎಲೆ ದೇವ ನಿಮ್ಮ ನಾಟ್ಯಕ್ಕಿನ್ನು ಸರಿಯುಂಟೆ
ಎಂದು ಕುಣಿದಾಡುತ್ತಲಿಪ್ಪಮ್ಮೆಯಂ ಕಂಡು
ಇಂದುಶೇಖರನಲ್ಲಿ ಹರುಷಮಂ ಕೈಕೊಂಡು
ನಡೆತಾಯೆ ಕೈಲಾಸಪುರಕೆನುತ್ತಂ ಪೇಳ್ದು

ಮೃಡನಲ್ಲಿ ಲಿಂಗದೊಳ್ಪೊಕ್ಕನೊಲವಂ ತಾಳ್ದು          ೩೦೦
ಪುಗೆ ಕಾರಿಕಾಲಮ್ಮೆ ಮಿಗೆ ಕೌತುಕಂಗೊಂಡು
ಸೊಗಯಿಸುವ ಶರಣರಡಿವಜ್ಜೆಗಳುಮಂ ಕಂಡು
ಆಹಾ ಶರಣರೆಲ್ಲ ನಡೆದ ಹಾದಿಯ ಹೆಜ್ಜೆ
ಆಹ ಎನ್ನೊಡೆಯರೊಲವಿಂ ನಡೆದ ಹೊಸ ಹೆಜ್ಜೆ
ಇಂತಿವೆನ್ನಯ ಶಿರದ ಮೇಲಿರಲ್ವೇಳ್ಕೆಂದು
ಚಿಂತಿಸಿದಳೊಂದು ತೆರನಂ ಚಿತ್ತದೊಳಗಂದು
ಅವರೆಲ್ಲ ನಡೆದಂತೆ ಆಂ ನಡೆಯಬಲ್ಲೆನೆ?
ಅವರಂತೆ ಸಾಮರ್ಥ್ಯವುಳೊಡಾನೊಲ್ಲೆನೇ
ಎನ್ನ ಕೈ ಕಾಲಾಗಿ ನಡೆವೆ ನಾನಿಂತಿಲ್ಲಿ
ಎನ್ನ ತಲೆಯಡಿಯಾಗಿ ನಡೆದು ತೋರುವೆನಿಲ್ಲಿ            ೩೧೦

ಎಲೆ ಶರಣರಡಿಗಳಿರ ಶಿವನಲ್ಲಿಗೊಯ್ಯಿರೇ
ಎಲೆ ಹಜ್ಜೆಗಳಿರ ಕೈಲಾಸಕ್ಕೆ ಕಳುಹಿರೇ
ಎಂದು ಶರಣರ ಹಜ್ಜೆಯೊಳ್ ನಂಬಿ ತಲೆಯಿಟ್ಟು
ಬಂದಳೊಂದೊಂದು ಗಳಿಗೆಗದೊಂದಡಿಯನಿಟ್ಟು
ಶಿವಭಕ್ತಿಯುಕ್ತಿ ತಲೆ ಕೆಳಕಾದ ಚೆಂದದಿಂ
ಶಿವನಿಷ್ಠೆ ಸೊರ್ಕಿ ತಲೆಯೂರಿತೆಂಬಂದದಿಂ
ಎಲ್ಲಾ ನರಾಳಿ ಬೇರ್ಮೇಲಾಗಿ ನಡೆವುತಿರೆ
ಇಲ್ಲಿ ಬೇರ್ಕೆಳಗಾಗಿ ಸಸಿನದೊಳು ನಡೆವುತಿರೆ
ಇತ್ತ ಕೈಲಾಸಪಥದೊಳು ನಂಬಿ ಚೇರಮರು
ಮತ್ತಗಜ ತುರಗಂಗಳೇರಿ ಬರುತುತ್ತಮರು ೩೨೦

ಕಂಡಿದೆಂದಿಂಗೆ ಬರ್ಪಿರೆಯಮ್ಮೆಯೆಂದೆನುತೆ
ಖಂಡೇಂದುಮೌಳಿಯ ಪುರಕ್ಕೆ ನೀವೆಂದೆನುತೆ
ಪೋಗೆ ಲಜ್ಜಿತೆಯಾದಳಾ ಕಾರಿಕಾಲಮ್ಮೆ
ನಾಗಭೂಷಣಗೆ ಮೊರೆಯಿಟ್ಟತ್ತಳೆಮ್ಮಮ್ಮೆ
ಇಲ್ಲಿಯಳಲಲ್ಲಿ ಸಿಂಹಾಸನಂ ನೆನೆಯಿತ್ತು
ಇಲ್ಲಿ ಮೊರೆಯಿಡಲಲ್ಲಿ ಶಿವನ ಕಿವಿದಾಗಿತ್ತು
ಅರಿದು ಶರ್ವಂ ತನ್ನ ಮನದ ಕೈಯಂ ನೀಡಿ
ತೆರಹರಿದು ತೆಗೆದುಕೊಂಡಂ ಮಹಿಮೆಯಿಂ ಕೂಡಿ
ತೆಗೆದುಕೊಳವರಿಂದೆ ಮುನ್ನವೈತಂದಲ್ಲಿ
ಮಿಗೆ ರಜತಗಿರಿಯ ಸೋಪಾನವೇರುತ್ತಲ್ಲಿ          ೩೩೦

ಇರೆ ನಂಬಿ ಚೇರಮರ್ ಕಾಣುತಂ ಬೆರಗಾಗಿ
ಹರಭಕ್ತೆಯಂ ಬೇಡಿಕೊಳುತಿರಲು ಸಿಗ್ಗಾಗಿ
ಕರುಣಿಸುತೆ ನಡೆತಂದಳಪ್ರತಿಮ ಶಿವಭಕ್ತೆ
ಪರಮ ನಂದೀಶ್ವರನ ಬಾಗಿಲ್ಗೆ ಹರಭಕ್ತೆ
ನಂದೀಶ್ವರಂ ಕಂಡು ಕೈಗಳಂ ಮುಗಿವುತಿರೆ
ಬಂದಳೀಶ್ವರನ ಸಭೆ ಕಂಡು ಬೆರಗಾಗುತಿರೆ
ಅಲ್ಲಿ ಮೈಯೆಲ್ಲ ಎಲ್ವಾಗಿ ತಲೆಯೂರಿ ನಿಲೆ
ಅಲ್ಲಿ ಪಾರ್ವತಿ ನೋಡಿ ನಡನಡನೆ ನಡುಗುತೆಲೆ
ದೇವಾ ಇದೊಂದು ಮರುಳೆ ಬಂದುದೆಲೆ ದೇವ
ದೇವ ನಾನಂಜಿದಪೆನಿರಲಮ್ಮೆನೆಲೆ ದೇವ ೩೪೦

ಎನುತೆ ಹಿಂದಂ ಪೊಕ್ಕು ಶಂಕರನ ಬಿಗಿದಪ್ಪೆ
ಮನಸಿಜಹರನನಲ್ಲಿ ಭಯದಿಂದೆ ಬಿಗಿದಪ್ಪೆ
ಅಲ್ಲಲ್ಲ ಎಲೆ ಗಿರಿಜೆ ಕಾರಿಕಾಲಮ್ಮೆಯರು
ಅಲ್ಲಲ್ಲ ಗೌರಿ ನಿಮ್ಮತ್ತೆ ನಮ್ಮವ್ವೆಯರು
ಎನ್ನಯ ಜನನಿಯೆನಗೆ ಹಣ್ಣಿತ್ತ ಹಿತವೆಯರು
ಎನ್ನವ್ವೆ ನಿಮ್ಮತ್ತೆ ಕಾರಿಕಾಲಮ್ಮೆಯರು
ಮರುಳುಂಬರೇ ವಿಚಾರಂ ನಿನಗೆ ತೋರದೆನೆ
ಮರುಳೆನಲ್ಕಾಗದೆಲೆ ದೇವಿ ಪೊಡಮಡುವುದೆನೆ
ಕೇಳ್ದಲ್ಲಿ ಕಾರಿಕಾಲಮ್ಮೆ ಮನದೊಳ್ ನೊಂದು
ಆಳ್ದ ಇಂತೆಂಬರೇ ನಿಮ್ಮ ತೊಳ್ತಾನೆಂದು         ೩೫೦

ಎನಗೆ ನೀಂ ತಂದೆ ಪಾರ್ವತಿ ತಾಯಿಯೆಲೆ ದೇವ
ಎನಗೆ ನೀವಿರ್ವರುಂ ಜೀವದುನ್ನತಿ ದೇವ
ಎನುತಲ್ಲಿ ಶಂಕರನ ಚರಣತಳದೊಳ್ಬೀಳೆ
ಅನುನಯದೊಳೆತ್ತಿದಂ ಸಭೆ ಕೌತುಕದೊಳಾಳೆ
ಎತ್ತಿ ಮೈಯಂ ತಡವಿ ನೋಡೆಲೆಯುಮಾದೇವಿ
ಚಿತ್ತದ ವಿರಕ್ತಿಯಂ ಕಂಡಾ ಮಹಾದೇವಿ
ಮೈಯೆಲ್ಲವದಿರ್ದುಬಿಡೆ ಬಿದಿರ್ದು ನಿಂದವರುಂಟೆ
ಕೈಯೆ ಕಾಲಾಗಿ ತಲೆಯೂರಿ ಬಂದವರುಂಟೆ
ಭಾಪುರೇ ಜಗದ ತಾಯಾಗಿ ಸಲೆ ಸಂದಮ್ಮೆ
ಭಾಪು ಮಠ ಭಾಪುರೇಯೆಲೆ ಕಾರಿಕಾಲಮ್ಮೆ            ೩೬೦

ಎಂದಲ್ಲಿ ಗಣಕುಲಕೆ ತೋರುತಂ ಬೀರುತಂ
ಸಂದ ಹರಿಬೊಮ್ಮರ್ಗೆ ಹೇಳುತಂ ಹಿಗ್ಗುತಂ
ಗಣಪದವಿಯಂ ಕಾರಿಕಾಲಮ್ಮೆಗೊಲಿದಿತ್ತು
ಗಣನಿವಹದೊಳು ಸಲಿಸಿ ಪರಮಸುಖಮಂ ಪೊತ್ತು
ಮೇರುಚಾಪಂ ಮಂತ್ರಮೂರ್ತಿ ಶಿವನೊಪ್ಪಿದಂ
ತಾರಾದ್ರಿಯರಮನೆಯೊಳಿಂದುಧರನೊಪ್ಪಿದಂ
ದೇವಭೂಷಣನೊಪ್ಪಿದಂ ಶಂಭುವೊಪ್ಪಿದಂ
ದೇವಶಿರಯಜ್ಞೋಪವೀತನಿಂತೊಪ್ಪಿದಂ
ಬ್ರಹ್ಮಶಿರಕೇಶದರ್ಭಾಂಕುರಕರಾಂಗುಲಂ
ಅಮ್ಮಮ್ಮ ಪುಲಿದೊವಲದೋವತಿಯ ನಿರ್ಮಲಂ          ೩೭೦

ಗಜಚರ್ಮದುತ್ತರೀಯದ ಮಹಾಬ್ರಾಹ್ಮಣಂ
ಅಜನುಂ ತ್ರಿಶೂಲದಂಡದ ನಿತ್ಯನಿರ್ಗುಣಂ
ಭಕ್ತಜನಹೃದಯಸರಸಿಜಹಂಸನೊಪ್ಪಿದಂ
ಭಕ್ತಿನಿಧಿ ಹಂಪೆಯ ವಿರೂಪಾಕ್ಷನೊಪ್ಪಿದಂ ೩೭೪

ತಲೆಯೂರಿ ನಡೆದು ಹೇಮಾ
ಚಲಮಂ ನೆರೆ ಪೊಕ್ಕ ಕಾರಿಕಾಲಮ್ಮೆಯ ನಿ |
ರ್ಮಲಸುತನೆಂದೊಲವಿಂದಂ
ಸಲಹೆನ್ನಂ ದೇವ ಹಂಪೆಯ ವಿರೂಪಾಕ್ಷಾ ||