ವಚನಕಾರರಿಗೆ ಜಾಗತಿಕ ಮಟ್ಟದಲ್ಲಿ; ಅವರ ವಚನಗಳಿಗೆ ಜಾಗತಿಕ ಸಾಹಿತ್ಯದಲ್ಲಿ ಮಹತ್ವದ ಸ್ಥಾನವಿದೆ. ವಚನ ಚಳುವಳಿ ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಅದರಾಚೆಗಿನ ಸಾಮಾಜಿಕ ಆಂದೋಲನವಾಗಿ ಪರಿಣಮಿಸಿತು. ಇದರಿಂದ ‘ಸಮಗ್ರ ಸಮಾಜ ಪರಿವರ್ತನೆ’ ವಚನಗಳ ಆಶಯವಾಯಿತು. ಇಂಥ ಉದಾತ್ತ ಆಶಯಗಳಿಂದಾಗಿ ವಚನ ಹಾಗೂ ವಚನಕಾರರನ್ನು ಕುರಿತು ತದನಂತರದ ಕವಿಗಳು, ಲೇಖಕರು ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ರಿಯೆಗೆ ತೊಡಗಿದರು. ಇಷ್ಟೊಂದು ವ್ಯಾಪಕ ಓದಿಗೆ ಒಳಗಾದ ವಚನಸಾಹಿತ್ಯದ ‘ನಿಜದ ನೆಲೆ’ಯನ್ನು ಪ್ರಮಾಣಬದ್ಧವಾಗಿ ಶೋಧಿಸುವ, ಅಧ್ಯಯನ ಮಾಡುವ ಹೊಣೆ ಯನ್ನು ನಾಡಿನ ಅನೇಕ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ಪೂರೈಸಿವೆ. ಆದರೆ ಇಂಥವುಗಳಿಗಿಂತ ಭಿನ್ನವಾದ, ಹೆಚ್ಚು ವ್ಯಾಪಕವಾದ, ಸಮಾಜ ಸಂಸ್ಕೃತಿಯ ಪರಿಪ್ರೇಕ್ಷೆಯುಳ್ಳ ಅಧ್ಯಯನಕ್ಕಾಗಿಯೇ ಸ್ವತಂತ್ರ ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪಿಸಿದ ಉದಾಹರಣೆಗಳೇ ಇಲ್ಲ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಇದಕ್ಕಾಗಿಯೇ ಪ್ರತ್ಯೇಕವಾದ ‘ಅಂತಾ ರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ’ವನ್ನು ಕೂಡಲಸಂಗಮದಲ್ಲಿ ಸ್ಥಾಪಿಸಿರುವುದು ಐತಿಹಾಸಿಕ ಸಂಗತಿಯಾಗಿದೆ.

ಕೇಂದ್ರದ ಉದ್ದೇಶಗಳು

ನಾಡಿನ ವಿಶ್ವವಿದ್ಯಾಲಯಗಳು, ವಿದ್ವಾಂಸರು ಮತ್ತು ಮಠಮಾನ್ಯಗಳಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಸಕ್ತ ಚಿಂತಕರೊಂದಿಗೆ ರಚನಾತ್ಮಕ ಸಂಬಂಧವನ್ನಿಟ್ಟುಕೊಂಡು ಹಲವಾರು ಯೋಜನೆಗಳನ್ನು ಕೇಂದ್ರವು ರೂಪಿಸಿಕೊಂಡಿದೆ.

ಸಂಶೋಧನೆ

ವಚನ ಸಂಸ್ಕೃತಿ ಕುರಿತಂತೆ ತಲಸ್ಪರ್ಶಿ ಹಾಗೂ ಬಹುಶಿಸ್ತೀಯ ಅಧ್ಯಯನ ನಡೆಸುವುದು. ವಚನ, ವಚನಕಾವ್ಯ, ಕಾಲಜ್ಞಾನ, ಸ್ವರವಚನ, ಶಾಸನ, ಶಿಲ್ಪ, ದೇವಾಲಯ, ಸ್ಥಳಮಹಾತ್ಮ್ಯೆ, ಆಚರಣೆ, ನಂಬಿಕೆ, ಸಂಪ್ರದಾಯಗಳನ್ನು ಕುರಿತು ಅಧ್ಯಯನ ಮಾಡುವುದು. ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರಿಂದ ಆರಂಭಗೊಂಡ ವಚನ ಅಧ್ಯಯನದ ಮುಂದಿನ ಮಜಲುಗಳಾಗಿ ಸಮಕಾಲೀನ ಬೌದ್ದಿಕ, ಶೈಕ್ಷಣಿಕ ಹಾಗೂ ವಿದ್ವತ್ ಅಗತ್ಯಗಳ ಹಿನ್ನೆಲೆಯಲ್ಲಿ ವಚನ ಅಧ್ಯಯನಕ್ಕೆ ಹೊಸದಿಕ್ಕನ್ನು ಕಂಡುಕೊಳ್ಳುವುದು. ಐತಿಹಾಸಿಕ ಆಲೋಚನೆಗಳ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಚನಗಳಲ್ಲಿ ವ್ಯಕ್ತವಾಗಿರುವ ಚಿಂತನೆಗಳ ಮೂಲ, ಬೆಳವಣಿಗೆ ಹಾಗೂ ಪರಿವರ್ತನೆಗಳನ್ನು ಕುರಿತು ಸೈದ್ಧಾಂತಿಕ ಹಾಗೂ ವೈಚಾರಿಕ ನೆಲೆಯಲ್ಲಿ ಅಧ್ಯಯನ ಮಾಡುವುದು. ಅನ್ಯಭಾಷಾ ಸಾಹಿತ್ಯದಿಂದ ವಚನಗಳು ಹೇಗೆ, ಯಾವ ವಿಚಾರಗಳನ್ನು ತೆಗೆದುಕೊಂಡು ತಮ್ಮ ವೈಚಾರಿಕ ಲೋಕವನ್ನು ನಿರ್ಮಿಸಿ ಕೊಂಡವು. ಈ ವೈಚಾರಿಕ ಲೋಕ ಜಾಗತಿಕ ಚಿಂತನೆಯ ಹಿನ್ನೆಲೆಯಲ್ಲಿ  ಎಂತಹ ಮಹತ್ವ ಪಡೆದಿದೆ ಎಂಬ ಗುರಿಯನ್ನಿಟ್ಟುಕೊಂಡು ಅಧ್ಯಯನ ಕೈಗೊಳ್ಳುವುದು. ಅಂದರೆ ವಚನ ಮತ್ತು ಭಾರತೀಯ ಭಾಷೆ, ವಚನ ಮತ್ತು ಜಾಗತಿಕ ಭಾಷಾ ಚಿಂತನೆಗಳ ಕೊಡುಕೊಳ್ಳು ವಿಕೆಯನ್ನು ತಳಹದಿ ಮಾಡಿಕೊಂಡು ಅಧ್ಯಯನ ಮಾಡುವುದು. ವಚನಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ದುಡಿದ ಪ್ರಾಚೀನ ಕವಿಗಳ, ಟೀಕಾಕಾರರ, ಸಂಯೋಜನಕಾರರ ಹಾಗೂ ಆಧುನಿಕ ವಿದ್ವಾಂಸರ, ನಾಟಕಕಾರರ, ಚಿಂತಕರ ಕುರಿತು ಅಧ್ಯಯನ ಕೈಗೊಳ್ಳುವುದು. ವಚನಾಧ್ಯಯನ ದಲ್ಲಿ ಪಿಎಚ್.ಡಿ ಹಾಗೂ ಎಂ.ಫಿಲ್ ಅಧ್ಯಯನಗಳಿಗೆ ಕೇಂದ್ರದಲ್ಲಿ ಅವಕಾಶ ಕಲ್ಪಿಸಿ ಕೊಡುವುದು.

ದಾಖಲೀಕರಣ ಮತ್ತು ವಿಶ್ಲೇಷಣೆ

ಜಾಗತಿಕ ಮಟ್ಟದಲ್ಲಿ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ವಚನ ಅಧ್ಯಯನ ಕೈಗೊಳ್ಳಲು ಮತ್ತು ಪ್ರೇರೇಪಿಸಲು ವಿದ್ಯುನ್ಮಾನ ಸೌಲಭ್ಯಗಳನ್ನು ಪಡೆಯುವುದು ಮತ್ತು ಆ ಮಾಧ್ಯಮಗಳಲ್ಲಿ ಕೇಂದ್ರದ ಚಟುವಟಿಕೆಗಳನ್ನು ದಾಖಲಿಸುವುದು. ಶಿಲ್ಪ, ದೇವಾಲಯ, ಆಚರಣೆ, ಜಾತ್ರೆ, ಉತ್ಸವ ಇತ್ಯಾದಿ ಪುರಾತತ್ತ್ವ ಆಕರಗಳ ದಾಖಲೀಕರಣ. ಹೀಗೆ ಕನ್ನಡ ಹಾಗೂ ಕನ್ನಡೇತರ ಭಾಷೆಗಳಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಅಧ್ಯಯನದ ಆಕರ ಸೂಚಿಯನ್ನು ದತ್ತಕಣಜ ರೂಪದಲ್ಲಿ ದಾಖಲೀಕರಿಸಿ ಅಧ್ಯಯನಕ್ಕೆ ಅನುವು ಮಾಡಿ ಕೊಡುವುದು.

ವಿಚಾರ ಸಂಕಿರಣಉಪನ್ಯಾಸ ಮಾಲೆಕಮ್ಮಟ

ಪ್ರತಿವರ್ಷ ವಚನಸಾಹಿತ್ಯ ಕುರಿತಾಗಿ ಎರಡು ದಿನಗಳ ಎರಡು ವಚನ ಕಮ್ಮಟಗಳನ್ನು ಏರ್ಪಡಿಸುವುದು. ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ಜನಿಸಿದ ಜುಲೈ ೨ನ್ನು ವಚನ ಅಧ್ಯಯನ ದಿನ ಎಂದು ಘೋಷಣೆ ಮಾಡಿ ಎರಡು ದಿನಗಳ ಕಾಲ ವಚನಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳುವುದು. ವಚನಕಾರರ ಕಾಯಕತತ್ತ್ವ, ದಾಸೋಹ ಸಿದ್ಧಾಂತ, ಸಾಮಾಜಿಕ ಪ್ರಜ್ಞೆ, ಸಮಾನತೆ ಮುಂತಾದುವುಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ‘ವಚನಸಾಹಿತ್ಯ ಪರಂಪರೆ ಪ್ರಚಾರ’ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಉಪನ್ಯಾಸ ಮಾಲೆ ಹಮ್ಮಿಕೊಳ್ಳುವುದು. ವಚನಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಸರ್ಟಿಫಿಕೆಟ್, ಡಿಪ್ರೋಹಾಗೂ ಅಲ್ಪಾವಧಿ ಕೋರ್ಸುಗಳನ್ನು ನಡೆಸುವುದು.

ಪ್ರಕಟಣೆಗಳು

ವಚನಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನದ ಫಲಿತಗಳನ್ನು, ವಿಚಾರಸಂಕಿರಣ ಮತ್ತು ವಿಶೇಷ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು. ಕನ್ನಡ ಹಾಗೂ ಇಂಗ್ಲಿಶ್‌ನಲ್ಲಿ ಶೈಕ್ಷಣಿಕ ಮತ್ತು ವೈಚಾರಿಕ ನಿಯತಕಾಲಿಕೆಯನ್ನು ಹೊರಡಿಸುವುದು. ವಿಶೇಷವಾಗಿ ವಚನ ಸಂಪುಟಗಳಿಂದ ಸಮಾಜೋಸಾಂಸ್ಕೃತಿಕ ವಚನಗಳನ್ನು ಆಯ್ಕೆ ಮಾಡಿ ‘ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಪಠ್ಯ’ವನ್ನು ಸಿದ್ಧಪಡಿಸುವುದು. ಭಾರತೀಯ ಹಾಗೂ ಜಾಗತಿಕ ಇತರೆ ಭಾಷೆಗಳಿಗೆ ಈ ಪಠ್ಯವನ್ನೇ ಅನುವಾದ ಮಾಡಿಸುವ ಯೋಜನೆ ಯನ್ನು ರೂಪಿಸಿಕೊಳ್ಳಲಾಗಿದೆ.

ಹೀಗೆ, ವಚನಗಳ ಅಧ್ಯಯನ, ದಾಖಲೀಕರಣ, ವಿಚಾರಸಂಕಿರಣ, ಅನುವಾದ, ಪ್ರಸಾರ-ಪ್ರಕಟಣೆಗಳನ್ನು ಉದ್ದೇಶವಾಗಿಟ್ಟುಕೊಂಡು ಸ್ಥಾಪಿತವಾದ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ ಮಾಲೆಯ ಪುಸ್ತಕವಾಗಿ ಪ್ರಕಟಗೊಳ್ಳುತ್ತಲಿದೆ; ‘ಹರಿಹರನ ಲಿಂಗಭೇದ ನಿರಸನ ರಗಳೆಗಳು’.

ಈ ಕೃತಿ ಸಂಡೂರಿನ ದಿವಂಗತ ಶ್ರೀ ಕೆ.ಎಸ್. ವೀರಭದ್ರಪ್ಪ ದತ್ತಿನಿಧಿಯಿಂದ ಪ್ರಕಟ ಗೊಳ್ಳುತ್ತಲಿದೆ. ಶ್ರೀ ಕೆ.ಎಸ್. ವೀರಭದ್ರಪ್ಪನವರು ಓದಿದ್ದು ತುಂಬಾ ಕಡಿಮೆ. ಓದುವ ಹಂಬಲವುಳ್ಳವರಿಗೆ ಸಹಾಯ ಮಾಡಿದ್ದು ಹೆಚ್ಚು. ಜನಪರ ಆಶಯವನ್ನು ಹೊತ್ತ ಶ್ರೀಯುತರು ಸಂಡೂರು ಪಂಚಾಯತಿ ಬೋರ್ಡ್ ಹಾಗೂ ತಾಲ್ಲೂಕು ಬೋರ್ಡ್‌ನ ಅಧ್ಯಕ್ಷರಾಗಿ, ಬಳ್ಳಾರಿ ಲೋಕಸಭಾ ಸದಸ್ಯರಾಗಿ ನಿರ್ವಹಿಸಿದ ಪಾತ್ರ ಆದರಣೀಯವಾದದ್ದು. ಸಹಕಾರಿ ತತ್ವದಲ್ಲಿ ನಂಬಿಕೆ ಇರಿಸಿಕೊಂಡಿದ್ದ ಕೆ.ಎಸ್. ವೀರಭದ್ರಪ್ಪನವರು ನೂರಾರು ಸಂಸ್ಥೆಗಳಿಗೆ ದಾನ-ದತ್ತಿ ನೀಡಿದ್ದಾರೆ. ಅವರಿಗಿದ್ದ ಔದಾರ್ಯದ ಮುಂದುವರಿಕೆ ಎಂಬಂತೆ ಮಗ ಶ್ರೀ ಕೆ.ಎಸ್. ನಾಗರಾಜ ಅವರು ತಂದೆಯ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರಕ್ಕೆ ಐದು ಲಕ್ಷ ರೂ.ಗಳ ದತ್ತಿನಿಧಿ ಸ್ಥಾಪಿಸಿದ್ದಾರೆ. ಈ ದತ್ತಿಯಿಂದ ಪ್ರತಿವರ್ಷ ವಿಚಾರ ಸಂಕಿರಣ ಹಾಗೂ ಪುಸ್ತಕ ಪ್ರಕಟಣೆ ಯೋಜನೆಗಳನ್ನು ರೂಪಿಸಿಕೊಂಡಿ ದ್ದೇವೆ. ಕನ್ನಡ ವಿಶ್ವವಿದ್ಯಾಲಯ ಪುಸ್ತಕ ಪ್ರಕಟಣೆಗೆ ಆರ್ಥಿಕ ನೆರವು ನೀಡಿದ ಶ್ರೀ ಕೆ.ಎಸ್. ನಾಗರಾಜ ಹಾಗೂ ಶ್ರೀಮತಿ ಕೆ.ಎಸ್. ಸುಮಂಗಲ ದಂಪತಿಗಳಿಗೆ ನಾನು ಉಪಕೃತನಾಗಿದ್ದೇನೆ.

ಕೇಂದ್ರದ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ; ಮಾನ್ಯಕುಲಸಚಿವರಾದ ಡಾ. ಹಿ.ಚಿ. ಬೋರಲಿಂಗಯ್ಯ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ಕೃತಜ್ಞತೆಗಳು.

ಡಾ. ಗುರುಪಾದ ಮರಿಗುದ್ದಿ ಅವರು ನಮ್ಮ ತಲೆಮಾರಿನ ಶ್ರೇಷ್ಠ ವಿಮರ್ಶಕರು. ಈಗಾಗಲೇ ಉತ್ತರಕರ್ನಾಟಕ ಭಾಗದಲ್ಲಿ ಪ್ರೊ. ಕೀರ್ತಿನಾಥ ಕುರ್ತುಕೋಟಿ, ಪ್ರೊ. ಜಿ.ಎಸ್. ಆಮೂರ, ಡಾ. ಗಿರಡ್ಡಿ ಗೋವಿಂದರಾಜು ಅವರುಗಳು ಗಟ್ಟಿಯಾದ ಸಾಂಸ್ಕೃತಿಕ ವಿಮರ್ಶ ನೆಲೆಯೊಂದನ್ನು ರೂಪಿಸಿದ್ದಾರೆ. ಹೊಸಪೀಳಿಗೆಯ ವಿಮರ್ಶಕರಲ್ಲಿ ಆ ಮಾದರಿಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುವವರಲ್ಲಿ ಡಾ. ಮರಿಗುದ್ದಿ ಅವರು ಒಬ್ಬರು.  ಹರಿಹರನಂಥ ದೇಸಿ ಕವಿಗಳ ಕೃತಿಗಳನ್ನು ವಿಮರ್ಶಿಸುವುದೆಂದರೆ ಆ ಕಾಲದ ಸಾಂಸ್ಕೃತಿಕ ಶೋಧವೇ ಆಗುತ್ತದೆ. ವಿಶೇಷವಾಗಿ ಶೈವಸಂಪ್ರದಾಯದ ಹರಿಹರನಲ್ಲಿ ಶರಣ ಸಂಪ್ರದಾಯ ವನ್ನು ಈ ಕೃತಿಯ ಮೂಲಕ ಡಾ. ಗುರುಪಾದ ಮರಿಗುದ್ದಿ ಅವರು ಶೋಧಿಸಿ ಕೊಟ್ಟಿದ್ದಾರೆ ಅವರಿಗೆ ನಮ್ಮ ಅಭಿನಂದನೆಗಳು.

ಡಾ. ಕೆ. ರವೀಂದ್ರನಾಥ
ಮುಖ್ಯಸ್ಥರು