ಕಾಲಮದಮರ್ದನಂ ಮಿಗೆ
ಲೀಲೆಯೊಳಾ ನೀಲನಕ್ಕರಂ ಧರೆಯರಿಯಲ್ |
ಕೈಲಾಸಗಿರಿಯೊಳಿರಿಸುತೆ
ಲಾಲಾಸುರವೈರಿ ಹಂಪೆಯಾಳ್ದಂ ಮೆರೆದಂ ||

ಶ್ರೀ ಕಾವೇರಿ ನದಿಯೊಂದೊಪ್ಪುವ
ಲೋಕಾನಂದೈಶ್ವರ್ಯದಿನೊಪ್ಪುವ
ಚೋಳರಾಜ್ಯಭೂಷಣಮೆನಿಸುತ್ತಂ
ಭಾಳಲೋಚನ ನಿಧಿಯೆನಿಸುತ್ತಂ
ಫುಲ್ಲಾಂಬುಜದೊಳ್ ನಿದ್ರೆಗೆಯ್ವುತುಂ
ಸಲ್ಲೀಲೆಯೊಳಂ ವಿಶ್ರಮಿಸುತ್ತುಂ
ಸುಖದಿನಿರ್ಪ ಮೀಂಗಳಿನಿರದೊಪ್ಪುವ
ಮುಖದಿಂ ಬಂಧಿಪವೊಲು ತಾನೊಪ್ಪುವ
ಫಲಿತ ವಿಚಿತ್ರ ಪವಿತ್ರ ವಿರಾಜಿತ
ನಳಿನಕ್ಷೇತ್ರ ಸಹಸ್ರವಿಶೋಭಿತ ೧೦

ಶಾಸ್ತ್ರ ಮಂಗಳಾಭಿದಪುರವಿಪ್ಪುದು
ಶಾಸ್ತ್ರರತ್ನ ನಿಕಷೋಪಲಮಿಪ್ಪುದು
ಸಲಿಲಕ್ರೀಡಾರತ ಯುವತೀಜನ
ಲಲಿತ ಸುಗತಿಗಳನೊಡಗೂಡಿಯೆ ಘನ
ಫುಲ್ಲಕಳಸ್ವನ ಹಂಸಾಂಗನೆಯರು
ಸಲ್ಲಲಿತ ಸರೋವರಕಿಳಿತಪ್ಪರು
ಅಲ್ಲಿ ವೀಧಿವೀಧಿಗಳೊಳಗೊಪ್ಪುವ
ಮಲ್ಲಿಗೆದುರುಬಿನ ಮಡದಿಯರೊಪ್ಪುವ
ಭೂಸುರಪುತ್ರರ ಕೂಡೆ ಸುಖಂಗಳು
ಭಾಸುರ ಬಹುಸಾಮಂಗಳನಾಗಳು  ೨೦

ಓದುವರದರೊಳು ಸದ್ವಿಜಕಾಂತೆಯ
ರಾದರದಿಂ ಬೇಳಿದ ಮೂರಗ್ನಿಯ
ನೋವುತೆ ಪಾತಿವ್ರತ್ಯದ ತೇಜಮ
ನೀವುತೆ ಪಾಲಿಸುತಿಪ್ಪರ್ ನೇಮಮ
ನಲ್ಲಿಪ್ಪಂ ಶಂಕರ ಸದ್ಭೃತ್ಯಂ
ಸಲ್ಲಲಿತಂ ಭೂತಳದೊಳು ಸತ್ಯಂ
ವೇದಂಗಳಿಗುರು ದರ್ಪಣಮೆನಿಪಂ
ವಾದಂಗಳು ಪೊರ್ದದ ಗುಣಿಯೆನಿಪಂ
ನೀಲನಕ್ಕ ಪೆಸರಿಂ ತಾನಿಪ್ಪಂ
ಭಾಳಲೋಚನನ ಭಕ್ತನೆನಿಪ್ಪಂ           ೩೦

ಭೂಸುರರಿಗೆ ತಾನಗ್ರಣಿಯೆನಿಸುವ
ಭಾಸುರದಿಂ ಕುಲಭೂಷಣನೆನಿಸುವ
ನಾತಂ ನೆರೆ ಗಂಗಾಧರಪೂಜೆಯ
ನೋತು ಸದಾಶಿವಭಕ್ತರ ಪೂಜೆಯ
ನಾಗಳುಮೆರಡನೆ ಚಾತುರ್ವೇದದ
ಯೋಗಜೀವಕಳೆಯೆಂದೇ ಬಗೆದದ
ನಾತನಧಿಕ ಸತ್ಯಾಗಮ ನಿಗಮದ
ಪೂತವೇದಮಾರ್ಗದ ಕಾರಣಪದ
ವೆನಿಸುತ್ತೊಪ್ಪುವ ಶಿವನಂ ಪೂಜಿಸಿ
ತನುಮನಧನದಿಂ ಭಕ್ತರನರ್ಚಿಸಿ     ೪೦

ಮೆರೆದಿರ್ದಂ ಶಿವಪರಿಚರ್ಯದೊಳಂ
ನೆರೆದಿರ್ದಂ ಭಕ್ತರ ಭಕ್ತಿಯೊಳಂ
ಇಂತಿರಲೊಂದು ದಿನಂ ಸಂತಸದಿಂ
ಕಂತುಹರನನರ್ಚಿಸಿ ಸತ್ಕ್ರಮದಿಂ
ಆರ್ದ್ರೆಯೊಳವಯಂತೀಶನನರ್ಚಿಸಿ
ಆರ್ದ್ರಭಾವದಿಂ ಧೃತಿಯನೊಡರ್ಚಿಸಿ
ಅರ್ಚನೆಗೋಸುಗಮಖಿಲದ್ರವ್ಯಮ
ನೊಚ್ಚತದಿಂ ಕೂಡುತೆ ನಿಜಚಿತ್ತಮ
ನೇಕಾಗ್ರತೆಯೊಳ್ನಿಲಿಸುತ್ತುಂ ಮಿಗೆ
ಲೋಕಾರಾಧ್ಯನನರ್ಚಿಸುವಾ ಬಗೆ     ೫೦

ಪುಟ್ಟೆ ನಿಜಾಂಗನೆಯೊಡಗೂಡುತ್ತುಂ
ನೆಟ್ಟನೆ ಅವಯಂತಿಗೆ ತೆರಳುತ್ತುಂ
ಮೆಲ್ಲನಲ್ಲಿಗೆಯ್ದುತಲಾ ಶಿವನಂ
ನಿಲ್ಲದೆ ಕಾಣುತ್ತುಂ ಗುರುಭವನಂ
ಚೆನ್ನಾಗಿರಲಾಗಮದಿಂದರ್ಚಿಸಿ
ಸನ್ನುತ ಬಹಳಾರ್ಚನೆಯಂ ನಿರ್ಮಿಸಿ
ಆದರದಿಂದಾತಂ ಪೆರಪಿಂಗದೆ
ಮೋದದಿನೀಶನ ಬಲುವರುವಂದದೆ
ಮುಂದೆ ನಿಂದು ಕಯ್ಯಂ ಮುಗುವುತ್ತಂ
ಕುಂದದೆ ದೇವನನುರೆ ನೋಡುತ್ತಂ    ೬೦

ಪಂಚಾಕ್ಷರಮಂತ್ರಮ ಜಪಿಸುತ್ತಂ
ಸಂಚಿತ ಪಾಪವನುರೆ ತೆವರುತ್ತಂ
ಸಂತಸದಿಂದಿರಲಾ ಸಮಯದೊಳಂ
ಕಂತುಹರನ ಭಾಸುರದೇಹದೊಳಂ
ಸೆಲದಿಯೊಂದು ಬೀಳಲ್ಕಂಡಾತನ
ಕೆಲದೊಳಿರ್ದ ವಧು ಕಂಡಾ ದೇವನ
ಕಾಯಕಾಂತಿ ಕುಂದುಗುಮೆಂದೊಯ್ಯನೆ
ಬಾಯ ವಾಯುವಿಂದೂದಲುಮೊಯ್ಯನೆ
ಅಂತದನಾಗಳ್ ಕಾಣುತೆ ಕೋಪದಿ
ಅಂತಕಹರಭಕ್ತಂ ಘನತಾಪದಿ     ೭೦

ಎಲೆ ಪಾತಕಿ ಇಂತೇತಕೆ ಮಾಡಿದೆ
ನೆಲೆಯರಿಯದೆ ಶಿವನಿರವಂ ನೋಡದೆ
ಎಂದೆನಲಾ ವಧು ನುಡಿದಳ್ ಭಯದಿಂ
ಮುಂದೆ ಶಿವಂ ಮೆಚ್ಚಲ್ಕಾದರದಿಂ
ಒಂದು ಸೆಲದಿ ಶಿವನಂಗದೊಳಿರಲದ
ನೊಂದಿರದಾಂ ಮುಖಫೂತ್ಕಾರದೊಳದ
ನೀಗಳೆ ಬಿಡಿಸಿದೆನೆನೆ ಘುಡುಘುಡಿಸುತ
ಲಾಗ ನೇಹಮಂ ನೋಡದೆ ಕಿನಿಸುತ
ನುಡಿದನೀಗಳೆಲೆ ನಿನಗನುಚಿತಮಂ
ತಡೆಯದೆ ಮಾಡಿದೆಯೆಂದೊಕತನಮಂ     ೮೦

ಬಿಡಲು ನೆನೆದು ಮತ್ತಂ ಕೋಪಿಸುತಂ
ಸುಡುವ ತೊರದೊಳಾಕೆಯನೀಕ್ಷಿಸುತಂ
ಪುರ್ಬುಗಳಂ ಗಂಟಿಕ್ಕುತೆ ಗಜರುತೆ
ಉರ್ಬುವ ರೌದ್ರಾದಿನಾಗಳೆ ಜರೆವುತೆ
ಎಲೆಲೆ ಸೆಲದಿಯಂ ತೊಲಗಿಸಲೀಗಳು
ಪಲವು ತೆರದ ಸುಕರೋಪಾಯಂಗಳು
ಪುಟ್ಟವೆ ಮುಖಫೂತ್ಕಾರದಿನುಣ್ಮುವ
ಕೆಟ್ಟಿಹ ಲಾಲಂಬುಗಳಿಂದೊಪ್ಪುವ
ಶಿವನ ಶರೀರನವೆಂಜಲಿಸಿದೆ ನೀಂ
ತವೆ ಪಾತಕಿಯಿಲ್ಲಿಂ ಪೊರಮಡು ನೀಂ         ೯೦

ನಿನ್ನಂ ಬಿಟ್ಟೆಂ ಪೋಗೆನಲಾ ವಧು
ಮನ್ನಿಪ ಪತಿವಚನದಲಂತಾ ವಧು
ಚಿಂತಿಸುತುಂ ಪೊರಮಟ್ಟಳು ಜಸಯುತೆ
ಮುಂತೆ ಪಶ್ಚಿಮಾದ್ರಿಗೆ ರವಿ ಪೋಗುತೆ
ಮುದ್ರಿಸಿದವೊಲಬ್ಜಂಗಳ್ಮುಗಿಯಲು
ರುದ್ರನ ಭಕ್ತಂ ಚಿತ್ತಂ ದಣಿಯಲು
ಶಿವನು ಪೂಜಿಸಿ ಮನೆಗೆಳ್ತಂದಂ
ಭವಭಯಮಂ ಬಿಟ್ಟಿರದೆಳ್ತಂದಂ
ಅಂತೆಳ್ತರಲಿತ್ತಲು ಘನಭಯದಿಂ
ಚಿಂತಿಸುತಂ ವಧು ಶಿವನಂ ಮನದಿಂ   ೧೦೦

ಜಾನಿಸುತಂ ಶಿವಭವನದೊಳಿರುಘಿರೆ
ತಾನಿರುತಂ ಕತ್ತಲೆ ಪರ್ಬುತ್ತಿರೆ
ನೀಲನಕ್ಕರುಂ ನಿಶಿಯೊಳ್ ಮುದದಿಂ
ಭಾಳಾಂಬಕನಂ ನೆನದಾದರದಿಂ
ಹಂಸತೂಳಮಯ ತಳ್ಪದೊಳಾಗಳು
ವಂಶಶಿಖಾಮಣಿ ಪಟ್ಟಿರುತಾಗಳು
ನಿದ್ರಾಮುದ್ರಿತಲೋಚನನಾಗಳು
ರುದ್ರಂ ತಾನೇ ಕನಸಿನೊಳಾಗಲು
ಬಂದು ನುಡಿದನೆಲೆ ಇಂತಾ ವಧುವಿನ
ಸಂದಾ ಫೂತ್ಕೃತ ಮುಟ್ಟದ ತನುವಿನ            ೧೧೦

ಬೊಕ್ಕೆಗಳಂ ನೋಡೆನುತುಂ ತೋರಲು
ಬೆಕ್ಕಸ ಬೆರಗಾಗುತೆ ತಿಳಿದೇಳಲು
ಕನಸಂ ದಿಟಮಾಗಿಯೆ ನೆನೆವುತ್ತಂ
ವಿನಯದಿನೀಶನ ಪದಕೆರಗುತ್ತಂ
ಕೊಂಡಾಡುತೆ ಕುಣಿದಾಡುತೆ ಮುದದಿಂ
ದಂಡಧರಾರಿಯ ಕೃಪೆಯಿಂ ಮನದಿಂ
ನೆನವುತ್ತಂ ಪಾಡುತ್ತಂ ನಗುತಂ
ಘನಸಂತಸದಿಂ ಪಾರುತಲಳುತಂ
ಇಂತಿರುತಿರೆ ಬೆಳಗಾಗಲ್ಮುದದಿಂ
ಕಂತುಹರಾಲಯಕೆಯ್ದುತೆ ಜಸದಿಂ     ೧೨೦

ದೇವನನರ್ಚಿಸಿ ವಂದಿಸುತಾತಂ
ಭಾವದೊಳಾ ವಧುವಿರೆ ಕಂಡಾತಂ
ಶಿವಶಾಸನದಿಂ ಕೂಡಿಕೊಳುತ್ತ
ಭವಸಾಗರಮಂ ತವೆ ದಾಂಟುತ್ತಂ
ಮಂಗಳಮಯ ನಿಜಗೇಹವನೆಯ್ದಲು
ಅಂಗಜಹರಭಕ್ತರು ಸುಖಮೆಯ್ದಲು
ಅಲ್ಲಿ ಮುನ್ನಿನಿಂದಧಿಕ ಪ್ರೇಮದಿ
ನೆಲ್ಲಂದದಿನರಿವರೆ ಸದ್ಭಾವದೆ
ಈಶನುಮಂ ಭಕ್ತರಮಂ ಪೂಜಿಸಿ
ಕ್ಲೇಶ ವಿವರ್ಜಿತರಾಗುತಲರ್ಚಿಸಿ        ೧೩೦

ಸಂತಸದಿಂದಿಂತಿರಲಾ ದಿನದೊಳು
ಕಂತುಹರನ ಪುತ್ರನನತಿಮುದದೊಳು
ಕೇಳುತ್ತಂ ಕಾಣ್ಬತಿಭರದಿಂದಂ
ಭಾಳಂಬಕಭಕ್ತಂ ನೆನಹಿದಂ
ಕಾಲಂಗಳ ಕಳಿವುತ್ತಲಾಗಳು
ಶೂಲಧರನ ಭಕ್ತರನಿರದಾಗಳು
ಕೂಡಿಕೊಳ್ಳುತ್ತುಂ ಜ್ಞಾನಾಚಾರ್ಯಂ
ನೋಡಿ ಶಿವಸ್ಥಾನಂಗಳನಾರ್ಯಂ
ನೀಲನಕ್ಕನಿಹ ಪುರಕೆಳ್ತರುತಿರೆ
ನೀಲಕಂಠಪಾಣರು ಮೊದಲಾಗಿರೆ           ೧೪೦

ಶೂಲಧರನ ಸದ್ಭಕ್ತರ ಗಡಣದಿ
ನೀಲಗಳನ ಪುತ್ರಂ ಘನವಿಭವದಿ
ನಿರದೆ ಬಂದುದಂ ಕೇಳುತ್ತಾಗಳು
ಭರದಿಂ ಹರುಷದಿನುರ್ಬುತ್ತಾಗಳು
ಪುರಮನಲಂಕರಿಸುತ್ತುಂ ಬೇಗದಿ
ನುರುವಿಭವದಿನಿದಿರ್ಗೊಳುತುಂ ರಾಗದಿ
ಆಗಳ್ ಜ್ಞಾನಮುನೀಂದ್ರನ ಪದದೊಳು
ವಾಗತೀತಮಾಗಿಹ ಸಂತಸದೊಳು
ಮುಳುಗುತ್ತುಂ ಪೊಡಮಡುತುಂ ಕುಣಿವುತೆ
ಅಳವಲ್ಲದ ತೃಪ್ತಿಯೊಳುರೆ ಪಾಡುತೆ       ೧೫೦

ಅಸವಸದಿಂ ಕೊಂಡಾಡುತೆ ಮೆಚ್ಚತೆ
ಜಸಯುತನಾ ಜಾನೇಶಂ ಮೆಚ್ಚುತೆ
ಗುಡಿತೋರಣ ಸಂಕುಳದಿಂದೊಪ್ಪುವ
ಮೃಡಭಕ್ತರ ವೈಭವದಿಂದೊಪ್ಪುವ
ಪುರಮಂ ಪೋಗುತುಂ ಸಂತಸದಿಂದಂ
ಪರಮಮಂಗಳಾಂಕಿತ ಗುಣದಿಂದಂ
ಮೆರೆವ ನೀಲನಕ್ಕರವರ ಗೃಹಮಂ
ನೆರೆ ಪೊಗಲದರೊಳಗಾತಂ ಮುದಮಂ
ತಳೆದಾ ಗುರುವಿಂಗಂ ಭಕ್ತರ್ಗಂ
ತಳುವಿಲ್ಲದ ಭರ್ಗನ ಭೃತ್ಯರ್ಗಂ ೧೬೦

ಸಂತಸಮೀವುತೆ ಉಪಚಾರಗಳಿಂ
ಅಂತಂತವರಿಗೆ ಭೋಜನಸುಖಗಳಿ
ನೊಪ್ಪದಿಂದೆ ತೃಪ್ತಿಯನೆಯ್ದಿಸುತಿರೆ
ಸರ್ಪಭೂಷಣನ ಕಿಂಕರನಿರುತಿರೆ
ಶ್ರೀ ಜ್ಞಾನಮುನೀಂದ್ರಂ ಸಂತಸದಿಂ
ಸುಜ್ಞಾನದಲಿರುತಿರಲತಿ ಜಸದಿಂ
ದಪರವಾರ್ಧಿಯೊಳು ರವಿ ವಿಶ್ರಮಿಸಲು
ವಿಪುಳಪೂರ್ವಗಿರಿಯಂ ವಿಧುವೇರಲು
ಲೇಸಾಗೀ ಕ್ಷಣವಾಗಮವಾಗಲು
ವಾಸವ ವಂದಿತ ಪೂಜೆಯ ಮಾಡಲು            ೧೮೦

ನೀಲನಕ್ಕನಖಿಳದ್ರವ್ಯಂಗಳ
ನಾಲಯದೊಳಳ್ಕೂಡುತಲಂತವರ್ಗಳ
ನೋಳಿಯಿಂದೆ ಕುಳ್ಳಿರಿಸಲ್ಕಾಗಳು
ಭಾಳವಿಲೋಚನಪುತ್ರನದಾಗಳು
ಭಕ್ತನ ಮೇಲದೊಳಾರೋಗಿಸುತಂ
ಯುಕ್ತಹರುಷದಿಂ ಪರಿಣಾಮಿಸುತಂ
ನೀಲನಕ್ಕರಂ ಕರೆಯಲ್ಕಾಗಳು
ಲಾಲಿಸುತಾತಂ ಗುರುಪದಕಾಗಳು
ವಂದಿಸಲೊಡನಾತಂಗಿಂತೆಂದಂ
ಸಂದ ಜ್ಞಾನೇಶ್ವಂ ಮುದದಿಂದಂ       ೧೮೦

ನೀಲಕಂಠಪಾಣರಿಗೊಲಿದಾಗಳು
ನೀಲನಕ್ಕ ನಿಮ್ಮೀ ಘನಗೃಹದೊಳು
ಬೀಡಾರಮನೀಮೀವುದೆನಲ್ಮಿಗೆ
ರೂಢಬುದ್ದಿಯಿಂ ದೇಶಿಕನಾಜ್ಞೆಗೆ
ತಳುವಿಲ್ಲದೆ ಗೃಹದೊಳಗಣ ವೇದಿಯ
ಕಳಮೆಯೊಳಿಂಬಂ ಕೊಡಲಾ ವೇದಿಯ
ಮೇಲನೇರಿ ಪಟ್ಟಿರಲಂತದರೊಳು
ಲೀಲೆಯೊಳಂ ತ್ರೇತಾಗ್ನಿಗಳದರೊಳು
ಭಕ್ತನ ಸುತ್ತಲುಮುಜ್ವಲಿಸುತ್ತಿರೆ
ಶಕ್ತಿಸಮೇತಂ ತಾನೊಪ್ಪುತ್ತಿರೆ           ೧೯೦

ನೀಲನಕ್ಕನದಕಚ್ಚರಿವಡುತಿರೆ
ಲೀಲೆಯಿಂದೆ ಹರುಷದಿ ನೋಡುತ್ತಿರೆ
ದಂಪತಿಗಳ್ ನಿದ್ರಾವಶರಾಗಲು
ಸೊಂಪಿಂದಾ ಕ್ಷಣದೊಳ್ಬೆಳಗಾಗಲು
ಜ್ಞಾನಮುನೀಶಂ ಶಿವನಂ ಪೊಗಳಲು
ನಾನಾ ಹರುಷಾಶ್ರುಗಳಿಂ ಪೊಗಳಲು
ಅಲ್ಲಿ ನೀಲನಕ್ಕರನಾಮಾಂಕಿತ
ಸಲ್ಲಲಿತ ವಚನಾಮೃತಪರಿಶೋಭಿತ
ತಿರುಪಾಡುಗಳಿಂ ಶಿವನಂ ಪಾಡುತೆ
ವರಭಕ್ತಿಯೊಳತಿಕೃಪೆಯಂ ಮಾಡುತೆ           ೨೦೦

ಬಹುವಿಧ ಶಿವಧಾಮಂಗಳ ನೋಡುತೆ
ಬಹಳಮಹಿಮೆಯಿಂ ಶಿವನಂ ಪೊಗಳುತೆ
ಪೋಗುತ್ತಿರಲೆಳ್ತಪ್ಪಾ ಭಕ್ತನ
ನಾಗಳೆ ತಿರುಗಿಸಲಂತಾ ಯುಕ್ತನ
ನಾತಂ ದೇಶಿಕನೊಡನೆ ಸುಚಿತ್ತಮ
ನೋತು ಕಳುಪುತುಂ ತನುಮನವಿತ್ತಮ
ನಾ ದೇಶಿಕಶಾಸನದಿಂ ಸಮೆಸುತೆ
ನಾದಾತ್ಮಕನಂ ಪೂಜಿಸಿ ನಮಿಸುತೆ
ಈಶನಣುಗನಂಘ್ರಿಗಳಂ ನೆನೆವುತೆ
ಕಾಶಧವಲಯಶನಂ ಕೊಂಡಾಡುತೆ  ೨೧೦

ಅತಿ ಸಂತಸದಿಂದಲ್ಲಿಗೆ ಪೋಗುತೆ
ಮತಿಮಿಗಲಾತನ ಕಿಂಕರನಾಗುತೆ
ಇಂತು ಪಲವು ದಿವಸಂಗಳ್ಬೋಗಲು
ಸಂತಸದಿಂದಾತ್ಮೇಶಂ ಬೀಗಲು
ಮದುವೆಯ ನಿಬ್ಬಣದೊಡಗೂಡುತ್ತುಂ
ಸದಮಲಭಕ್ತಂ ಹೊರೆಯೇರುತ್ತುಂ
ಜ್ಞಾನಮುನೀಂದ್ರನ ಬಳಿವಿಡಿದಾಗಳು
ಧ್ಯಾನಗಮ್ಯಶಿವನಗ್ರದೊಳಾಗಳು
ನಿಂದು ಮೆರೆದನತಿ ಕೌತಕದಿಂದಂ
ಸಂದ ನೀಲನಕ್ಕಂ ಮುದದಿಂದಂ ೨೨೦

ಮೆರೆವುತಿರಲ್ಕೀಶಂ ದಯೆಯಿಂದಂ
ಕರೆವುತೆ ಕರುಣಮನತಿಮುದದಿಂದಂ
ರುದ್ರಪದಮನೀವುತ್ತಾತಂಗಂ
ಭದ್ರಭಸಿತವಿಲಸಿತಸರ್ವಾಂಗಂ
ಮೆರೆದಿರ್ದಂ ರಜತಾದ್ರಿಯ ಸಭೆಯೊಳು
ಮೆರೆದಿರ್ದಂ ಪಂಪಾಪುರದೆಡೆಯೊಳು
ಕಾಲಹರಂ ಪಂಪಾಪತಿ ಮೆರೆದಂ
ನೀಲಗಳಂ ಪೆಂಪಿದಂ ಮೆರೆದಂ
ಪಂಪಾಕ್ಷೇತ್ರನಿವಾಸಂ ಮೆರೆದಂ
ಹಂಪೆಯ ವಿರುಪಂ ತಾಂ ಸಲೆ ಮೆರೆದಂ           ೨೩೦

ಧರೆಯ ಜನಂ ಪೊಗಳುತ್ತಿರೆ
ಭರದಿಂದಾ ನೀಲನಕ್ಕ ಭಕ್ತಗೆ ಮೆರೆವು |
ತ್ತುರಗಧರ ಹಂಪೆಯಾಳ್ದಂ
ಪರಮಾನಂದದೊಳೆ ವರಮನಿತ್ತುರೆ ಮೆರೆದಂ ||