ಹರಿಹರ

ಹರಿಹರ ಒಬ್ಬ ಭಕ್ತ ಕವಿ. ಆತನು ಭಕ್ತರನ್ನು ಕುರಿತು ಅನೇಕ ಕಾವ್ಯಗಳನ್ನು ಬರೆದಿದ್ದಾನೆ. ಅವುಗಳಲೆಲ್ಲ ಭಕ್ತಿಭಾವ ಅಲೆಅಲೆಯಾಗಿ ಹೊಮ್ಮುತ್ತ, ಚಿಮ್ಮುತ್ತ ವ್ಯಾಪಿಸಿಕೊಂಡಿದೆ. ಭಕ್ತಿ ಎಂದರೇನು? ನಾವೆಲ್ಲ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಸ್ನೇಹ, ವಾತ್ಸಲ್ಯ, ಮಮತೆ ತೋರುತ್ತೇವೆ, ಪಡೆಯುತ್ತೇವೆ. ಇದೇ ಮಾನವರ ಐಸಿರಿ. ಇಂತಹ ಪ್ರೀತಿ ವಿಶ್ವಾಸಗಳನ್ನು ಭಕ್ತರು ಭಗವಂತನಲ್ಲಿ ತೋರುತ್ತಾರೆ. ಕೊನೆಮೊದಲಿಲ್ಲದ ಅವರ ಪ್ರೀತಿಗೆ ಯಾವ ಫಲದ ಬಯಕೆಯೂ ಇಲ್ಲ. ಹರಿಹರ ಅಂತಹ ಶ್ರೇಷ್ಠ ಭಕ್ತ.

ರಾಜನ ಕರಣಿಕ

ಹರಿಹರನ ಜೀವನದ ವಿವರಗಳು ಖಚಿತವಾಗಿ ತಿಳಿದು ಬಂದಿಲ್ಲ. ಹಲವು ವಿಷಯಗಳಲ್ಲಿ ಚರ್ಚೆ ಇದೆ. ಒಟ್ಟಿನಲ್ಲಿ ಅವನ ಜೀವನದ ಕಥೆ ಹೀಗೆ ಎನ್ನಬಹುದು;

ಹದಿಮೂರನೆಯ ಶತಮಾನದ ಪ್ರಾರಂಭ ಕಾಲದಲ್ಲಿ ಆತ ಬದುಕಿದ್ದ. ಅವನ ತಂದೆ ಹಂಪೆಯ ಮಹಾದೇವ. ತಾಯಿ ಶರ‍್ವಾಣಿ. ರಾಘವಾಂಕ ಕನ್ನಡದ ಮತ್ತೊಬ್ಬ ಪ್ರಸಿದ್ಧ ಕವಿ. ಅವನ ತಾಯಿ ರುದ್ರಾಣಿ ಹರಿಹರನ ಅಕ್ಕ ಎಂದು ಕಾಣುತ್ತದೆ.

 

ಹರಿಹರ ವೀರಬಲ್ಲಾಳನ ಕರಣಿಕನಾಗಿದ್ದ.

ಕನ್ನಡ ಸೀಮೆಯಲ್ಲಿ ಆಗ ಹೊಯ್ಸಳರ ಆಳ್ವಿಕೆ ನಡೆದಿತ್ತು. ಇಂದಿಗಿಂತ ಹೆಚ್ಚಾಗಿ ಆಗಿನ ಕಾಲದಲ್ಲಿ ನಾಡಿನ ತುಂಬ ಭಕ್ತ ಜನರು ಸುಳಿದಾಡುತ್ತಿದ್ದರು. ಸುಂದರ ದೇವಾಲಯಗಳನ್ನು ಕಟ್ಟಿ ದೇವರನ್ನು ಪೂಜಿಸುತ್ತಿದ್ದರು. ದೇವರ ಮಹಿಮೆಯನ್ನು ಹಾಡಿ, ಆಡಿ ಆನಂದಿಸುತ್ತಿದ್ದರು. ಆನಂದದಲ್ಲಿಯೇ ಸಂಸಾರವೂ ಸಾಗಿರುತ್ತಿತ್ತು. ದ್ವಾರಸಮುದ್ರ ಎಂದರೆ ಈಗಿನ ಹಳೆಯ ಬೀಡಿನಲ್ಲಿ ಹೊಯ್ಸಳರ ವೀರಬಲ್ಲಾಳನು ರಾಜನಾಗಿ ಆಳುತ್ತಿದ್ದಾಗ ಹರಿಹರನು ಅವನ ಕರಣಿಕನಾಗಿದ್ದನು. ಎಂದರೆ ರಾಜಭಂಡಾರದ ಆದಾಯ ವೆಚ್ಚಗಳನ್ನು ಲೆಕ್ಕ ಮಾಡುವವ.

ವೀರಬಲ್ಲಾಳನಲ್ಲಿ ಹರಿಹರನು ಕರಣಿಕನಾಗಿದ್ದಾಗ ಒಂದು ಆಶ್ಚರ್ಯಕರವಾದ ಪ್ರಸಂಗ ನಡೆಯಿತು ಎಂದು ಪ್ರತೀತಿ. ಆತನು ಅರಸನ ಬಳಿಯಲ್ಲೆ ತನ್ನ ಲೆಕ್ಕಪತ್ರಗಳನ್ನು ಒಪ್ಪಿಸಿ ಆತನ ಮಂತ್ರಿಗೆ ವಿವರಗಳನ್ನು ಹೇಳುತ್ತಿರುವಾಗ ಇದ್ದಕ್ಕಿದ್ದಂತೆ ತನ್ನ ಅಂಗೈಗಳಿಂದ ಏನನ್ನೋ ಉಜ್ಜುತ್ತ ಅಹ ಅಹ ಎಂದು ಬೆಂಕಿಯಾರಿಸುವವರಂತೆ ಹರಿಹರನು ಕುಣಿದಾಡಿದನು. ಇಂತಹ ನಡವಳಿಕೆಯಿಂದ ಸೋಜಿಗಪಟ್ಟ ಅರಸನು, “ಇದೇಕೆ ಹೀಗೆ?” ಎಂದು ಪ್ರಶ್ನಿಸಿದಾಗ ಹರಿಹರನು, “ಹಂಪೆಯ ವಿರೂಪಾಕ್ಷನ ದೇವಾಲಯದಲ್ಲಿ ಗರ್ಭಗುಡಿಗೆ ಹಾಕಿದ ಪಂಚವರ್ಣದ ತೆರೆ ಮಂಗಳಾರತಿಯ ಜ್ವಾಲೆ ತಗುಲಿ ಹತ್ತಿಕೊಂಡಿತ್ತು. ಅದನ್ನು ಆರಿಸಿದೆ!” ಎಂದು ವಿನಯದಿಂದ ವಿಜ್ಞಾಪಿಸಿ ಕೊಂಡನು.

ಆಗ ಅರಸನು, “ಇದನ್ನು ಪರೀಕ್ಷಿಸಬಹುದೆ?” ಎಂದು ಕೇಳಿದಾಗ ಹರಿಹರನು ತುಂಬ ಆತ್ಮವಿಶ್ವಾಸದಿಂದ ಒಪ್ಪಿಕೊಂಡನು.

ಅರಸನು ಆ ಗಳಿಗೆ, ದಿವಸ, ನಕ್ಷತ್ರ, ವಾರಗಳನ್ನು ಗುರುತಿಸಿಕೊಂಡು ತನ್ನ ಚರರನ್ನು ಹಂಪೆಯ ದೇವಾಲಯಕ್ಕೆ ಕಳುಹಿಸಿ ಅಂತಹ ಗಳಿಗೆ, ದಿವಸ, ನಕ್ಷತ್ರಗಳಲ್ಲಿ ಪಂಚವರ್ಣದ ತೆರೆ ಹತ್ತಿಕೊಂಡುದು ಉಂಟೇ ಎಂದು ವಿಚಾರಿಸಿದನು. ಅಲ್ಲಿನ ಅರ್ಚಕರು ಅದೇ ಹೊತ್ತಿನಲ್ಲಿ ತೆರೆ ಹತ್ತಿಕೊಂಡುದು ಉಂಟೆಂದೂ ಯಾರೋ ಒತ್ತಿ ಆರಿಸಿದಂತೆ ಆ ಬೆಂಕಿ ಕೂಡಲೇ ನಂದಿತೆಂದೂ ಒಪ್ಪಿಕೊಂಡರು. ಇದರಿಂದ ಪ್ರಭಾವಿತ ನಾದ ಅರಸ ಹರಿಹರನ ಮಹಿಮೆಯಲ್ಲಿ, ಭಕ್ತಿಯಲ್ಲಿ ಶ್ರದ್ಧೆಯುಳ್ಳವನಾದನು ಎಂದು ಹೇಳುತ್ತಾರೆ.

ಏನಾದರೇನು, ಮಾನವರ ಮೆಚ್ಚುಗೆಗೆ ಮನಸೋಲದವನು ಹರಿಹರ. ಅವರು ಕೊಡುವ ಐಸಿರಿಗೆ ಬಾಯಾರಿದ್ದರೆ ತಾನೆ ಅದಕ್ಕಾಗಿ ಕಾದು ಕುಳಿತಾನು?

ಆಸ್ಥಾನ-ಸಂಸಾರ

ಹರಿಹರ ಹುಟ್ಟು ಕವಿ. ದೈವದತ್ತವಾದ ಪ್ರತಿಭೆ ಉಳ್ಳವನು. ಅದಕ್ಕೆ ತಕ್ಕಂತೆ ಅವನ ಮನಸ್ಸು ಸೂಕ್ಷ್ಮವಾದದ್ದು. ಮನೋಧರ್ಮ ಸ್ವತಂತ್ರವಾದದ್ದು. ಹಾಗಿರುವವರಿಗೆ ಅನ್ಯರ ಸೇವೆ ಕಷ್ಟಕರ. ಅದರಲ್ಲಿಯೂ ಅರಸನನ್ನು ಒಲಿಸುವುದು ಕ್ಲೇಶಕರವಾದದ್ದು. ಏಕೆಂದರೆ ಅಧಿಕಾರ, ಐಶ್ವರ್ಯ, ಯೌವನಗಳು ಮನುಷ್ಯರ ಮನಸ್ಸಿಗೆ ಅಮಲನ್ನುಂಟು ಮಾಡುತ್ತವೆ. ಇಂತಹ ಮನಸ್ಥಿತಿಯಲ್ಲಿರುವ ಅರಸನನ್ನು ಅನುಸರಿಸಿ ಸೇವಿಸುವುದು ಕವಿ ಹರಿಹರನಿಗೆ ಬಹು ಕಷ್ಟವಾಗಿ ತೋರಿರಬೇಕು. ಅರಸನ ಆಸ್ಥಾನದ ಕೆಲವರು ಹರಿಹರನ ಮೇಲೆ ರಾಜನಿಗೆ ಚಾಡಿ ಹೇಳಿದರೆಂದು ತೋರುತ್ತದೆ. ರಾಜನು ಹರಿಹರನನ್ನು ಹನ್ನೆರಡು ವರ್ಷಗಳ ಲೆಕ್ಕ ಒಪ್ಪಿಸುವಂತೆ ಕೇಳಿದ. ಹರಿಹರ ಚಾಚೂ ತಪ್ಪದೆ ಒಪ್ಪಿಸಿದ ಎಂದೂ ಕಾಣುತ್ತದೆ. ಇವೆಲ್ಲ ಅವನ ಬೇಸರವನ್ನು ಹೆಚ್ಚಿಸಿದವು.

ಹರಿಹರನಿಗೆ ಮದುವೆಯಾಗಿತ್ತು ಎಂದು ಕಾಣುತ್ತದೆ. ಮನೆ ಯಲ್ಲಿ ಕವಿಯ ಕೋಮಲ ಭಾವಗಳನ್ನು ಅರಿಯದ ಗೃಹಿಣಿ ಇದ್ದಂತೆ ತೋರುತ್ತದೆ. ಅವಳ ಒರಟಾದ ಲೌಕಿಕ ಸ್ವಭಾವಕ್ಕೂ ಅವನ ಭಕ್ತಿಭಾವಗಳಿಗೂ ಹೊಂದಿಕೆಯಿಲ್ಲ. ಅವಳಲ್ಲಿ ಲೇಶ ವಾದರೂ ಭಕ್ತಿಯಿಲ್ಲ. ಪ್ರಾಯಶಃ ಅವನ ಮಕ್ಕಳಲ್ಲೂ ಅವನು ಸುಖ ಕಾಣಲಿಲ್ಲ. ಇಂತಹ ಕೋಟಲೆಗೆ ಬೆಂದ ಮನದವನಾಗಿ ಹರಿಹರ, ಮಕ್ಕಳು ದೊಡ್ಡವರಾಗುವವರೆಗೆ ಹಾಗೂ ಹೀಗೂ ಕಾಲಹಾಕಿದ ಎಂದು ಕಾಣುತ್ತದೆ. ಕೊನೆಗೆ ಸಂಸಾರವನ್ನು ಒಂದು ದಿನ ತ್ಯಜಿಸಿದ.

ವಿರೂಪಾಕ್ಷನ ದಾಸ

ಸಂಸಾರವನ್ನು ನಡೆಸಬೇಕು, ದೈವವನ್ನು ಭಜಿಸಬೇಕು ಎಂದು ಪ್ರಯತ್ನಿಸಿದಾಗ ಅವನ ಮನ ಯಾವುದರ ದಡವನ್ನೂ ಕಾಣಲಿಲ್ಲ. ರಾಜನ ಮೆಚ್ಚಿಗೆಯೂ ಶಾಶ್ವತವಲ್ಲ, ದೈವದ ಒಲವೂ ದೊರೆಯಲಿಲ್ಲ. ಇಬ್ಬಂದಿಯಾಯಿತು ಬದುಕು. ಏಕಕಾಲದಲ್ಲಿ ಎರಡು ದೋಣಿಗಳಲ್ಲಿ ಕಾಲಿಟ್ಟವನಂತೆ ಎತ್ತಲೂ ಹೋಗದೆ ನಿಂತಲ್ಲೇ ಹಂಬಲಿಸಿದ ಹರಿಹರ. ಕೊನೆಗೊಂದು ದಿನ ಐಹಿಕ ಜೀವನ, ರಾಜನ ಸೇವೆ ಎಲ್ಲವನ್ನೂ ಕೈಬಿಟ್ಟು ಪಂಪಾಧೀಶನನ್ನು ಹಾಡಿ ಕೊಂಡಾಡುತ್ತ ವ್ಯರ್ಥವಾಗಿ ಗತಿಸಿದ ತನ್ನ ಬದುಕನ್ನು ಮರೆತು ಹಂಪೆಯನ್ನು ಸೇರಿದ. ಕವಿಯಾಗಿ, ಭಕ್ತನಾಗಿ ತನ್ನ ಬದುಕನ್ನು ಪ್ರಾರಂಭಿಸಿದ.

ಹರಿಹರನ ಒಂದು ಪದ್ಯದ ಸಾರಾಂಶ ಹೀಗಿದೆ: “ಹೋಗು, ಎಂದರೆ ಹೋಗುವ, ಬಾರೆಲೊ ಎಂದರೆ ‘ಜೀಯ ಪ್ರಸಾದ’ ಎಂದು ನಮ್ರತೆಯಿಂದ ಬರುವ, ಎಲವೊ ಸುಮ್ಮನಿರು ಎಂದರೆ ಸುಮ್ಮನಿರುವ, ಬಗ್ಗಿಸಿದರೆ ನಡುಗಿ ಬೀಳುವ ಸೇವೆ ತುಂಬಾ ಕಷ್ಟಕರವಾದದ್ದು; ಹಂಪೆಯ ಒಡೆಯ, ನಿಮ್ಮ ದಯೆಯಿಂದ ಇದನ್ನು ಬಿಟ್ಟೆ.” ಮತ್ತೊಂದು ಪದ್ಯದಲ್ಲಿ ಮನುಷ್ಯರೇನು ಕೊಡಬಲ್ಲರು, ಬೇಡುವುದಾದರೆ ಅಸಮಾನಧಾನಿ ಈಶ್ವರನನ್ನು ಬೇಡ-ಬೇಕು ಎನ್ನುತ್ತಾನೆ: ‘ಮಣ್ಣ ಬೊಂಬೆಗಳ್ ಕೊಡುವುದೆ? ಬೇಡು ಬೇಡುದುದನೀವ ಮಹಾನಿಧಿಯಂ ಮಹೇಶನಂ ಮೃಡನನ್ ಅನೂನದಾನಿಯನ್ ಅಲಂಪಿನ ಪೆಂಪಿನ ಹಂಪೆಯಾಳ್ದನಂ.’

ಹರಿಹರ ಅಲ್ಲಿ ವಿರೂಪಾಕ್ಷನನ್ನು ದಾಸನಂತೆ ಸೇವಿಸಿ, ಸ್ನೇಹಿತನಂತೆ ಒಡನಾಡಿ, ತಂದೆಯಂತೆ ಪ್ರೀತಿಸಿ, ಕಂದನಂತೆ ಅವಲಂಬಿಸಿ, ಗುರುವಿನಂತೆ ಭಜಿಸಿ ಆನಂದದಲ್ಲಿ ಈಜಾಡುತ್ತಿದ್ದ. ಹಗಲು, ಇರುಳು, ಮಧ್ಯಾಹ್ನ, ಸಂಜೆಗಳಲ್ಲಿ ವಿರೂಪಾಕ್ಷನ ಹಂಬಲವೇ ಹಂಬಲ. ಕನಸು ಮನಸಿನಲ್ಲಿ ಅವನದೇ ನೆನಪು.

ದಿನಚರಿ

ಮುಂಜಾವಿನಲ್ಲಿ ಸೂರ್ಯನ ಬೆಳಕು ಕಾಣುವುದಕ್ಕೆ ಇನ್ನೂ ಮಾರ್ಗವಿಲ್ಲ. ಆಗಲೇ ಹರಿಹರ ಎಚ್ಚರಗೊಂಡು, “ಒಹೋ ನಮ್ಮ ತಂದೆ, ಸ್ವಾಮಿ ವಿರೂಪಾಕ್ಷ ಮಲಗಿದ್ದಾನೆ. ಅವನು ಏಳುವುದರಲ್ಲಿ ಅಭಿಷೇಕ ಅಲಂಕಾರಗಳಿಗೆ ಅಣಿಯಾಗಬೇಕು. ಪ್ರಜೆ ಆರೋಗಣೆಗಳು ತಡವಾದರೆ ನನ್ನಪ್ಪ ಹಸಿದು ನೊಂದಾನು” ಎಂದು ಆತಂಕಪಡುತ್ತಾ ಹೊರಡುವನು. ದೇವಾಲಯದ ತೋಟವನ್ನು ಹಾಯ್ದು ತುಂಗಭದ್ರೆಯ ನಿರ್ಮಲ ಸಲಿಲದಲ್ಲಿ ಮಿಂದು ಮಡಿಯುಟ್ಟು ಹೂ ಬುಟ್ಟಿ ಹಿಡಿದು ಹೊರಟಿದ್ದಾನೆ. ಮುಂಜಾವಿನ ನೀರವ ಧ್ಯಾನಮಯವಾದ ಆವರಣದಲ್ಲಿ ಹೂದೋಟವಿನ್ನೂ ನಿಶ್ಚಲವಾಗಿದೆ. ತಂಗಾಳಿ ಇನ್ನೂ ಸುಳಿದಿಲ್ಲ. ಸುಗಂಧದ ಮೊಗ್ಗುಗಳಿನ್ನೂ ದಳವರಳಿ ಕಂಪು ಸೂಸಿಲ್ಲ. ಆಗಲೇ ಹರಿಹರ ಅವನ್ನು ವಿನಯದಿಂದ ನುಡಿಸಿ ಆಯ್ದು ಬುಟ್ಟಿಯಲ್ಲಿ ಸೇರಿಸಿಕೊಳ್ಳುತ್ತಾನೆ. ಹರಿಹರನ ಪಾಲಿಗೆ ಹೂದೋಟದ ಗಿಡಗಳು ನೂರಾರು ಕೈಗಳಿಂದ ಹೂಪತ್ರೆಗಳನ್ನೂ ಸಲ್ಲಿಸಿ ಈಶ್ವರನನ್ನು ಅರ್ಚಿಸುವ ಭಕ್ತೆಯರು. ಹರಿಹರ ಒಂದೊಂದು ಹೂಬಳ್ಳಿಯನ್ನೂ ವೃಕ್ಷವನ್ನೂ ಸ್ನೇಹ ವಿನಯಗಳಿಂದ ನುಡಿಸುತ್ತಾನೆ.

ಏನವ್ವ ಸಂಪಿಗೆಯೆ ಶಿವನ ಸಿರಿಮುಡಿಗಿಂದು
ನೀನೀವ ಹೊಸ ಕುಸುಮವಂ ನೀಡು ನೀಡೆಂದು |

ನುಡಿಸುತ್ತ ಮುಮ್ಮಾಗಿಯ ಕುಳಿರಿನಲ್ಲಿ ಎಣೆಯಿಲ್ಲದೆ ಸುಗಂಧ ಬೀರುವ ಸಂಪಿಗೆಯನ್ನು ಬಿಡಿಸುತ್ತಾನೆ. ಸೇವಂತಿಗೆ ಗಳನ್ನು ‘ಅಹಾ, ಕುಂಕುಮದ ತಾರೆಗಳು’ ಎಂದು ಸನ್ಮಾನಿಸುತ್ತಾನೆ.

ಕೇದಿಗೆಗೆ ಹೊರಗೆ ಮುಳ್ಳು, ಒಳಗೆ ಕಂಪು. ಗುಪ್ತ ಭಕ್ತರ ಹಾಗೆ. ಮೇಲೆ ನೋಡಲು ಒರಟರು, ವಿಪರೀತ ಚರಿತರು, ಒಳಗೆ ಭಕ್ತಿಯ ಸೂರೆ. ದಶದಿಕ್ಕುಗಳಿಗೆ ಸುಗಂಧ ಬೀರುವ ಕೇದಿಗೆಯ ರೂಪವೋ ಆಹ! ಪರಿಮಳಕ್ಕೆ ಗರಿಮೂಡಿ ಸುಳಿಸುಳಿಯಾಗಿ ಬೆಳೆದು ಕವಲಾಯಿತೋ ಎಂದು ಅಚ್ಚರಿಪಡುತ್ತಾನೆ ಹರಿಹರ.

ದವನವೇ ಶಿವನ ಪರಿಮಳದ ಹಬ್ಬವೇ ಬಾರ
ಭುವನದೊಳಗೆ ನಿನಗೆ ಸರಿಯಿಲ್ಲ ಸೌರಭಸಾರ |

ಎಂದು ದವನವನ್ನು ಕೊಂಡಾಡುತ್ತಾನೆ. ಹೀಗೆ ಜಗದ ತುಂಬ ಬಗೆಬಗೆಯ ರೂಪದಲ್ಲಿ ತುಂಬಿ ತುಳುಕುವ ಶಿವ ಸೌಂದರ್ಯಕ್ಕೆ ಹರಿಹರ ಜಾಗೃತನಾಗಿದ್ದಾನೆ. ಕವಿಯ ಮನವೇ ಹಾಗೆ ಸೌಂದರ್ಯದಲ್ಲಿ ಭಗವಂತನನ್ನು ಕಾಣುತ್ತದೆ.

ಆಹಾ, ಏನು ಭಾಗ್ಯ ನನ್ನದು, ಶಿವನನ್ನು ಇದರಲ್ಲಿ ಅರ್ಚಿಸುವ ಸಂತೋಷ ದೊರೆಯಿತು ಎಂದು ಹಿಗ್ಗುತ್ತ ತಂಪಾದ ಮಾಮರದ ನೆರಳಲ್ಲಿ ಕುಳಿತು ಸುಳಿಬಾಳೆಲೆಗಳನ್ನು ಹರಡಿಕೊಂಡು ಹಗುರವಾಗಿ ಅದರ ಮೇಲೆ ಬುಟ್ಟಿಯ ಹೂ ಗಳನ್ನು ಸುರಿದುಕೊಂಡು ಪರಶಿವನಿಗೆ ಅದರಲ್ಲಿ ಬಗೆ ಬಗೆಯ ಅಲಂಕಾರಗಳನ್ನು ಸಿದ್ಧಮಾಡತೊಡಗುತ್ತಾನೆ. ಅದರ ಪರಿಮಳವೂ ಚೆಲುವೂ ಅವನಿಗೆ ಮೀಸಲೆಂದು ಕ್ಷಣಕ್ಷಣಕ್ಕೂ ವಿರೂಪಾಕ್ಷನಿಗೆ ಮನದಲ್ಲಿ ಅವನ್ನು ನಿವೇದಿಸುತ್ತ ಕಣ್ಮುಚ್ಚಿ ಧ್ಯಾನಿಸುತ್ತಾನೆ.

ವಿರೂಪಾಕ್ಷನಿಗೆ ಮಲ್ಲಿಗೆಯ ಪದಕವನ್ನು ರಚಿಸಿದ್ದಾಯಿತು. ಸೇವಂತಿಗೆಯ ತೋಳಬಂದಿ, ಕಾಲ್ಗಳಿಗೆ ಸಂಪಿಗೆಯ ಗೆಜ್ಜೆ, ಗಡಗ ಜಾಜಿಯ ಹಾರ, ದವನದ ನಡುಪಟ್ಟಿ, ಕೇದಿಗೆಯ ಕಿರೀಟ, ಹೀಗೆ ತನ್ನ ಮನಕ್ಕೆ ಚೆಲುವುದೋರಿದಂತೆ ಅಂದವಾದ ತೊಡುಗೆಗಳನ್ನು ತಯಾರಿಸಿಕೊಳ್ಳುವನು. ಎಂತಹ ಅಮೂಲ್ಯ ವಾದ ಅಲಂಕಾರಗಳು! ಹೊನ್ನು ರನ್ನದೊಡವೆಗಳಿಗೆ ಇಂತಹ ಚೆಲುವೂ ಸುಗಂಧವೂ ಕೋಮಲತೆಯೂ ಇರಬಲ್ಲದೆ? ಇವುಗಳನ್ನು ಧರಿಸಿ ನನ್ನ ಸ್ವಾಮಿ ಹೇಗೆ ಕಾಣಬಹುದು ಎಂದು ಊಹಿಸಿ ಹಿಗ್ಗುತ್ತ, ಅವನ್ನೆಲ್ಲ ನಲುಗದಂತೆ ಹಿಡಿದು ದೇವಾಲಯಕ್ಕೆ ಓಡೋಡಿ ಬರುತ್ತಾನೆ. ತಂದೆ, ಎದ್ದೆಯಾ? ನಾನು ಬಂದುದು ತಡವಾಯಿತೆ? ಎಂದು ಮರುಗುತ್ತ, ತನ್ನ ಸ್ವಾಮಿಗೆ ಹೂವಿನ ಪನ್ನೀರಿನಿಂದ ಮುಖ ತೊಳೆಸಿ, ಪರಾಗದಿಂದ ವಿಭೂತಿಯಿಟ್ಟು, ಮಲ್ಲಿಗೆ, ಇರುವಂತಿಕೆಗಳನ್ನು ಮುಡಿಸಿ ತಾನು ಮಾಡಿ ತಂದ ಕಿರೀಟ, ಕುಂಡಲ, ಹಾರಪದಕ, ತೋಳಬಂದಿ, ನಡುಪಟ್ಟಿ, ಗೆಜ್ಜೆಗಳನ್ನು ತೊಡಿಸಿ ಸಿಂಗಾರಮಾಡಿ ದೃಷ್ಟಿಯಾದೀತೆಂದು ಮನದಲ್ಲಿ ನಿವಾಳಿಸುವನು; ಚಾಮರ ಬೀಸುವನು, ಆರತಿ ಎತ್ತುವನು, ನೈವೇದ್ಯ ಸಮರ್ಪಿಸಿ ತಾಂಬೂಲವಿತ್ತು ದೂರ ನಿಂತು ತನ್ನಿಂದ ಅಲಂಕರಿಸಿಕೊಂಡ ವಿರೂಪಾಕ್ಷನ ದಿವ್ಯ ಮೂರ್ತಿಯನ್ನು ನೋಡಿ ಮೈಮರೆಯುವನು. ಆಹ, ಮೂರು ಲೋಕದ ದೊರೆಯೆ! ನಿನ್ನನ್ನು ಅರ್ಚಿಸುವ ಭಾಗ್ಯ ಪಡೆದೆನಲ್ಲ ಎಂದು ಹಿಗ್ಗಿ ಭಕ್ತಿಯ ಪೂರದಲ್ಲಿ ಕಣ್ಮುಚ್ಚಿ, ಧ್ಯಾನಿಸಿ, ಮೈಮರೆಯುವನು. ಭಕ್ತಿಸುಖಕ್ಕಿಂತ ಎತ್ತರ ಪದವಿಯೇಕೆ? ಎನ್ನಿಸಿ ಪರಮ ಭಕ್ತಿಯ ಸುಖದಲ್ಲಿ ಗದ್ಗದಿತನಾಗಿ ವಿರೂಪಾಕ್ಷ….ವಿರೂಪಾಕ್ಷ… ಎನ್ನಲೂ ಆಗದೆ ತೊದಲುವನು. ಹೀಗೆ ಧ್ಯಾನದಲ್ಲಿ ಮೈಮರೆತ ಹರಿಹರನಿಗೆ ತನ್ನೊಳಗೂ ಹೊರಗೂ ಶಿವನೇ ಆಗಿ ಸುಳಿಯುತ್ತಾನೆ.

ಮಧ್ಯಾಹ್ನದ ವೇಳೆ ವಿರೂಪಾಕ್ಷನಿಗೆ ವಿಶ್ರಾಂತಿ ಯಾಗಲೆಂದು ಹರಿಹರ ಶಿವಭಕ್ತರ ಮಹಿಮೆಗಳನ್ನೂ ಕಥೆಗಳನ್ನೂ ಹಾಡಿಕೊಳ್ಳುತ್ತ ದೇವಾಲಯದ ಕೈಸಾಲೆಯಲ್ಲಿ ಕುಳಿತಿರುವನು. ಅಲ್ಲಿಯೂ ಅವನದು ಮಹೇಶ್ವರ ವ್ರತ. ಶಿವನನ್ನಲ್ಲದೆ, ಶಿವನ ಭಕ್ತರನ್ನಲ್ಲದೆ ಇತರರನ್ನು ಹೊಗಳುವುದಿಲ್ಲ ಎಂಬುದು ಅವನ ಪ್ರತಿಜ್ಞೆ. ಇಂದು ಇದ್ದು ನಾಳೆ ಸಾಯುವ ಮನುಷ್ಯರನ್ನು ಇಂದ್ರ ಚಂದ್ರ ದೇವೇಂದ್ರರೆಂದು ಹೊಗಳಿ ಹೊಟ್ಟೆ ಹೊರೆಯುವುದು ಹೀನವೃತ್ತಿ. ಹಾಗೆ ಮಾಡೆ ನಾನು. ನನ್ನ ನಾಲಿಗೆಯನ್ನು ವಿರೂಪಾಕ್ಷನಿಗೆ ಮಾರಿಕೊಂಡಿದ್ದೇನೆ ಎಂಬುದು ಅವನ ವೀರವ್ರತ. ಅಲ್ಲದೆ ಅವನ ಸ್ವತಂತ್ರ ಮನೋಧರ್ಮ ಅವನನ್ನು ನೂತನ ಕಾವ್ಯಗಳನ್ನು ರಚಿಸುವಂತೆ ಪ್ರೇರೇಪಿಸಿತು. ತಮಿಳಿನ ಪೆರಿಯ ಪುರಾಣದಲ್ಲಿರುವ ಶಿವಭಕ್ತರ ಕಥೆಗಳನ್ನು ಆಯ್ದುಕೊಂಡು ಹೊಸ ಪರಿಯ ರಗಳೆಯ ಛಂದಸ್ಸಿನಲ್ಲಿ ಕಾವ್ಯಗಳನ್ನು ಬರೆದನು. ನಮ್ಮ ಪಾಲಿಗೆ ಅದೊಂದು ಐಶ್ವರ್ಯವಾಯಿತು.

ಗಿರಿಜಾ ಕಲ್ಯಾಣ

ಸ್ವಲ್ಪ ಕಾಲ ಸಂಸಾರದಲ್ಲಿ ತೊಳಲಾಡಿ ಅನಂತರ ವಿರಕ್ತ ಜೀವನಕ್ಕೆ ಹೇಗೆ ಬಂದನೋ ಹಾಗೆಯೇ ಹರಿಹರ ಸಾಂಪ್ರದಾಯಿಕ ಕಾವ್ಯ, ಪಂಡಿತರ ಮನ್ನಣೆ ಅಭಿರುಚಿಗಳಲ್ಲಿ ಸ್ವಲ್ಪ ಕಾಲ ತೊಳಲಾಡಿದನು. ‘ಗಿರಿಜಾ ಕಲ್ಯಾಣ’ ಎಂಬ ತನ್ನ ಮೊದಲ ಕೃತಿಯಲ್ಲಿ ಅಂದಿನ ಸಂಪ್ರದಾಯದಂತೆ ಗದ್ಯಪದ್ಯ ಮಿಶ್ರವಾದ ಚಂಪೂಕಾವ್ಯವನ್ನು ಪ್ರೌಢವಾಗಿ, ವಿದ್ವಾಂಸರು ಮೆಚ್ಚುವಂತೆ ಬರೆದನು. ಈ ಕಾವ್ಯದಲ್ಲಿ ಗಿರಿಜೆ ಬಾಲ್ಯದಿಂದಲೇ ಶಿವಭಕ್ತಳಾಗಿರುತ್ತಾಳೆ. ಆದರೆ ತಪೋನಿರತನಾದ ಈಶ್ವರ ಕಣ್ಣುಬಿಟ್ಟು ಈಕೆಯತ್ತ ನೋಡಲೇ ಇಲ್ಲ. ಇದರ ನಡುವೆ ದೇವತೆಗಳಿಂದ ಪ್ರೇರೇಪಿತನಾದ ಮನ್ಮಥ ಶಿವನ ತಪೋಭಂಗ ಮಾಡಲು ಅವನ ಮೇಲೆ ಹೂಬಾಣಗಳನ್ನು ಕರೆದನು. ಕೋಪಗೊಂಡ ಶಿವನು ತನ್ನ ಹಣೆಗಣ್ಣ ನೋಟದಿಂದ ಮನ್ಮಥನನ್ನು ಸುಟ್ಟು ವಿನೀತಳಾಗಿ ನಿಂತಿದ್ದ ಉಮೆಯನ್ನು ನೋಡದೆ ಬೇರೊಂದೆಡೆಗೆ ಹೋಗಿ ತಪಸ್ಸಿನಲ್ಲಿ ನಿರತನಾದನು. ಮನ್ಮಥನ ಹೆಂಡತಿಯಾದ ರತಿ ದುಃಖದಲ್ಲಿ ಮುಳುಗಿ ಹೋದಳು. ನೊಂದ ಉಮೆ ತಾನಿರುವಲ್ಲಿಗೆ ಶಿವನನ್ನು ಬರಮಾಡುವೆನೆಂದು ನಿಶ್ಚಯಿಸಿ ತಪೋನಿರತಳಾದಳು. ಭಯಂಕರ ತಪದಿಂದ ಶಿವನನ್ನು ಮೆಚ್ಚಿಸಿದಳು. ಬ್ರಹ್ಮಚಾರಿಯ ವೇಷದಿಂದ ಶಿವ ಬಂದು ಗಿರಿಜೆಯ ಮನವನ್ನು ಪರೀಕ್ಷಿಸಲು ಬಯಸಿ ಶಿವನಿಂದೆ ಮಾಡಿದನು. ಕುಪಿತಳಾದ ಉಮೆ ವಿಭೂತಿಯ ಉಂಡೆಯನ್ನು ಬ್ರಹ್ಮಚಾರಿಯ ಮೇಲೆ ಎಸೆದಳು. ಅದರ ಮಹಿಮೆಯಿಂದ ಅವನ ಕಪಟವೇಷ ತೊಲಗಿ ನಿಜವೇಷ ಉಂಟಾಯಿತು. ನಾಚಿ ನಿಂತಳು ಉಮೆ. ಈಶ್ವರ ಅವಳನ್ನು ವಿವಾಹವಾಗಬಯಸಿ ಅವಳ ತಂದೆಯಾದ ಹಿಮವಂತನ ಬಳಿಗೆ ಸಪ್ತರ್ಷಿಗಳನ್ನು ಕಳುಹಿಸಿದ. ಅಲ್ಲಿಂದ ಮುಂದೆ ಜಗದ ಜನನೀಜನಕರ ವಿವಾಹ ಸಾಂಗವಾಗಿ ನೆರವೇರಿತು. ಪಾರ್ವತಿ ಆಗ ಪರಶಿವನನ್ನು ಬೇಡಿ ಮನ್ಮಥನನ್ನು ಬದುಕಿಸಿ ರತಿಯ ಕಣ್ಣೀರನ್ನು ಒರೆಸಿದಳು.

ತಿರುನೀಲಕಂಠರ ರಗಳೆ

ಇಲ್ಲಿಂದ ಮುಂದೆ ಹರಿಹರ ಭಕ್ತರ ಕಥೆಗಳನ್ನು ಕೈಗೆತ್ತಿಕೊಂಡ. ಕಥೆ ಹೇಳುವುದಕ್ಕೆ ರಗಳೆಯ ಮಟ್ಟು ಅನುಕೂಲವೆಂದು ಭಾವಿಸಿದ ಹರಿಹರ ಹೊಸ ಪರಿಯ ಶಿವಭಕ್ತರ ರಗಳೆಗಳನ್ನು ರಚಿಸಿದ. ಅವುಗಳಲ್ಲಿ ತಿರುನೀಲಕಂಠರ ರಗಳೆ ತುಂಬಾ ಸ್ವಾರಸ್ಯವಾದುದು. (ರಗಳೆ ಎಂಬುದು ಒಂದು ಬಗೆಯ ಛಂದಸ್ಸು-ಕಾವ್ಯವನ್ನು ರಚಿಸುವ ರೀತಿ. ಕನ್ನಡ ಸಾಹಿತ್ಯದಲ್ಲಿಯೇ ಇದು ಬಹು ಮಟ್ಟಿಗೆ ಕಾಣುವುದು).

ಪೊನ್ನಾಂಬಲವೆಂಬ ಸಣ್ಣ ಊರು. ಭಕ್ತರಿಂದ, ದೇವಾಲಯಗಳಿಂದ ಅದಕ್ಕೆ ವಿಶೇಷವಾದ ಮಹಿಮೆ ಯುಂಟಾಗಿದೆ. ಹದಿನಾರು ವರ್ಷದ ಯುವಕ ತಿರುನೀಲಕಂಠರು ಭಕ್ತಿಯಿಂದ ಪೊನ್ನಾಂಬಲನ (ಈಶ್ವರನ) ಸೇವೆ ಮಾಡಿಕೊಂಡು ಬರುವಾಗ ಎಂದಿನಂತೆ ನಟ್ಟಿರುಳಾಯಿತು. ದಾರಿಯ ಎರಡು ಕಡೆಗಳಲ್ಲೂ ಉಪ್ಪರಿಗೆಯ ಮನೆಗಳಿವೆ. ಅಲ್ಲೊಬ್ಬ ವೇಶ್ಯೆ ಊಟಮಾಡಿ ಕೈತೊಳೆದ ತಟ್ಟೆಯನ್ನು ದಾಸಿ ಬೀದಿಗೆ ಸುರಿದಳು. ಅದು ತಿರುನೀಲಕಂಠರಿಗೆ ತಗುಲಿತು. ಅವರು ನೊಂದು ‘ತಿರುನೀಲಕಂಠ……ಸ್ವಾಮಿ, ಎಂದು ನೋವನ್ನು ಸೈರಿಸುವ ಸನ್ನಾಹದಲ್ಲಿದ್ದರು. ಆ ನುಡಿಗೇಳಿ ದಾಸಿ ಬೆಚ್ಚಿದಳು. ಒಡತಿ ನೊಂದಳು. ಇಬ್ಬರೂ ಮೆಟ್ಟಿಲಿಳಿದು ಬಂದು ಭಕ್ತಶ್ರೇಷ್ಠರನ್ನು ವಂದಿಸಿ ಅಪಚಾರವನ್ನು ಕ್ಷಮಿಸಿರೆಂದೂ ಉಪಚರಿಸಲು ಅವಕಾಶವನ್ನೀಯಬೇಕೆಂದೂ ಪ್ರಾರ್ಥಿಸಿದರು. ಒಳಬಂದ ತಿರುನೀಲಕಂಠರಿಗೆ ಗಂಧದ ನೀರಿನಲ್ಲಿ ಸ್ನಾನಮಾಡಿಸಿ, ಮೈಗೆ ಸುಗಂಧ ಲೇಪಿಸಿ, ಹೂವಿನ ಹಾರವನ್ನು ಹಾಕಿ, ಕರ್ಪೂರ ವೀಳ್ಯವನ್ನಿತ್ತು ಬೀಳ್ಕೊಂಡರು ತಿರುನೀಲಕಂಠರು ಮನೆಗೆ ಬಂದಾಗ ತುಂಬಾ ಹೊತ್ತಾಗಿತ್ತು. ಅಲ್ಲದೆ ಸುಗಂಧವನ್ನು ಲೇಪಿಸಿಕೊಂಡು ಹಾರ ಧರಿಸಿ ಬಂದಿದ್ದರು. ಅವರಿಗಾಗಿ ಕಾಯುತ್ತಿದ್ದ ಅವರ ಹೆಂಡತಿಗೆ ಬಹಳ ಸಿಟ್ಟು ಬಂದಿತು. ಯೋಚನೆಯನ್ನೇ ಮಾಡದೆ, “ನನ್ನನ್ನು ಮುಟ್ಟಿದರೆ ಶಿವನಾಣೆ” ಎಂದುಬಿಟ್ಟರು. ಇಬ್ಬರಿಗೂ ಆಗ ಚಿಕ್ಕ ವಯಸ್ಸು. ಆದರೆ ಹೆಂಡತಿ ಶಿವನಾಣೆ ಇಟ್ಟುದರಿಂದ ದೂರವಾಗಿಯೇ ಇರಬೇಕಾಯಿತು. ಇಬ್ಬರಿಗೂ ನೋವು. ಏನಾದರೂ ಬಿಡದೆ ಇತರರು ಅರಿಯದಂತೆ ಶಿವನ ಪೂಜೆಯೇ ಬದುಕಾಗಿ ಕಾಲ ಕಳೆದು ಎಂಬತ್ತರ ಮುಪ್ಪಿನವರಾದರು. ಹೊಸ ಹರೆಯದಿಂದ ಕೊನೆಯವರೆಗೆ ನಡೆಸಿದ ತಪಸ್ಸಿನಂತಹ ಬಾಳ್ವೆಗೆ ಶಿವ ಮನಕರಗಿದ, ಇವರ ನಿಷ್ಠೆಗೆ ಮೆಚ್ಚಿದ. ಇವರ ಮಹಿಮೆಯನ್ನು ಪ್ರಚುರಪಡಿಸಲೆಂದೇ ಜಂಗಮನ ವೇಷದಲ್ಲಿ ಧರೆಗಿಳಿದ. ತಿರುನೀಲಕಂಠರ ಮನೆಯ ಮುಂದೆ ನಿಂತು, “ಸ್ವಾಮಿ ಭಕ್ತರೇ, ಒಂದು ಸಹಾಯ ಮಾಡುತ್ತೀರಾ? ನೆರೆಯೂರಿಗೆ ಹೋಗಬೇಕು, ಇಲ್ಲಿ ಯಾರನ್ನೂ ನಾನರಿಯೆ, ನನ್ನ ಇದೊಂದು ಪಾತ್ರೆಯನ್ನು ನಾಳೆಯವರೆಗೆ ಜೋಪಾನಮಾಡಿ” ಎಂದು ಕೇಳಿದನು. ಒಂದು ಪಾತ್ರೆ ತಾನೆ, ಆಗಲಿ, ಏನು ಕಷ್ಟ ಎಂದೊಪ್ಪಿಕೊಂಡ ಭಕ್ತರನ್ನು, “ಅಂತಿಂತಹ ಪಾತ್ರೆಯಲ್ಲ, ಕೇಳಿದ್ದನ್ನೆಲ್ಲ ಕೊಡುವ ಅಕ್ಷಯ ಪಾತ್ರೆ ಇದು” ಎಂದೆಚ್ಚರಿಸಿ ದನು. ತಿರುನೀಲಕಂಠರು ಒಪ್ಪಿ ಅದನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದರು. ಏನು ತೋರಿತೋ ಗಂಡಹೆಂಡಿರು ಅತ್ತಿತ್ತ ಕುಳಿತು ಕಾವಲಾದರು.

ಮರುದಿನವೇ ಬಂದ ಜಂಗಮನು, “ಎಲ್ಲಿ, ನನ್ನ ಪಾತ್ರೆ ಕೊಡು, ಕೊಡು” ಎಂದು ಆತುರಪಟ್ಟನು. ತಿರುನೀಲಕಂಠರು ಪೆಟ್ಟಿಗೆ ತೆರೆದರು. ಅಲ್ಲೇನಿದೆ! ಪಾತ್ರೆಯೇ ಕಾಣದು, ಏನಾಯಿತು ಪಾತ್ರೆ! ದುಃಖಿತರಾಗಿ ಭೀತಿಯಿಂದ, ನಾಚಿಕೆ ಯಿಂದ ದಿಕ್ಕುತೋಚದೆ ನಿಂತರು ತಿರುನೀಲಕಂಠರು. ಜಂಗಮನ ಆಕ್ರೋಶ ಮುಗಿಲು ಮುಟ್ಟಿತು. “ಏನು ಮೋಸ! ಎಲ್ಲಿ ಪೆಟ್ಟಿಗೆ ತೋರಿಸಿ. ಭಕ್ತರೆಂದು ನಂಬಿದರೆ ಹೀಗೆ ಗಂಟಲು ಕೊಯ್ಯುವುದೇ? ಹೀಗಾಗುತ್ತದೆಂದು ಗೊತ್ತಾಗಲಿಲ್ಲವಲ್ಲ, ಏನು ಮಾಡಲಿ, ಯಾರೂ ಸಾಕ್ಷಿಯಿಲ್ಲವೆ?” ಎಂದು ಮರುಗುತ್ತಾನೆ, ರೇಗಾಡುತ್ತಾನೆ; ಅವರ ನಿಷ್ಕಪಟ ಮುಖಭಾವವನ್ನು ಕಂಡು ಒಳಗೊಳಗೆ ಕರಗುತ್ತಾನೆ. ಬಹಿರಂಗವಾಗಿ ಎಗರಾಡುತ್ತಾನೆ. ಊರಿನವರ ಬಳಿ ದೂರುತ್ತ ಚಾವಡಿಗೆ ಕರೆದೊಯ್ಯುತ್ತಾನೆ. ಅವರ ಘನತೆಯನ್ನು ಬಲ್ಲವರು ಚಾವಡಿಯಲ್ಲಿ ಅವರನ್ನು ಕಂಡು ಬೆರಗಾಗುತ್ತಾರೆ. ತಿರುನೀಲಕಂಠರು ಕಣ್ಣೀರುದುಂಬಿ ತಲೆಬಾಗಿ ನಿಂತಿದ್ದಾರೆ, ಮಾತಿಲ್ಲ.

 

ವಿರೂಪಾಕ್ಷನ ದಿವ್ಯ ಮೂರ್ತಿಯನ್ನು ನೋಡಿ ಮೈಮರೆಯುವನು.

ಅಲ್ಲಿಯೂ ಜಂಗಮನದೇ ಅಬ್ಬರ. “ಈ ಹಿರಿಯರು ನನ್ನ ಪಾತ್ರೆ ನುಂಗಿಹಾಕಿದ್ದಾರೆ. ಇದೇನು ನಿಮ್ಮ ಭಕ್ತರ ಪರಿ? ಎಂತಹ ನಿಸ್ಸೀಮರಿದ್ದಾರೋ ನಿಮ್ಮ ಬಳಿ! ನೋಡುವಾಗ ದೊಡ್ಡ ಭಕ್ತರ ವೇಷ” ಎಂದೆಲ್ಲ ಸಭೆಯಲ್ಲಿ ಮಾನ ಕಳೆದ.

ತಿರುನೀಲಕಂಠರು ಕಣ್ಣೀರು ಮಿಡಿಯುತ್ತ, “ಪಾತ್ರೆ ಇರಿಸಿಕೊಂಡಿದ್ದುಂಟು, ಅದು ಕಳೆದುಹೋಗಿರುವುದು ನಿಜ.

ನಾವು ತೆಗೆದುಕೊಂಡವರಲ್ಲ, ಆದರೇನು, ನೋಡೋಣ ಇದಕ್ಕೇನು ಪರಿಹಾರವಿಲ್ಲ, ಅವರ ಕರುಣೆ ಇದ್ದಂತಾಗಲಿ. ಅವರೆಂದಂತೆ ಮಾಡುತ್ತೇನೆ” ಎಂದರು.

ಈ ಮಾತಿಗೆ ಸಭೆ ಮರುಗಿತು. ಪಂಚಾಯಿತಿ ಮಾಡತೊಡಗಿತು. “ಅಯ್ಯ, ಆ ಪಾತ್ರೆಗೆ ಬದಲು ಚಿನ್ನದ ಪಾತ್ರೆ ಕೊಡಿಸುತ್ತೇವೆ ತೆಗೆದುಕೋ. ಇವರನ್ನು ಪೀಡಿಸಿ ಏನು ಪ್ರಯೋಜನ? ದಯೆ ತೋರು” – ಜನರೆಂದಾಗ ಜಂಗಮನು ಕೋಪ ಮಿತಿಮೀರಿತು. ಇಲ್ಲಿ ಬಿದ್ದು ಅಲ್ಲಿ ಹಾರಿ ಸಭೆಯಲ್ಲೆಲ್ಲಾ ಹಾಯುತ್ತ ಹೊಟ್ಟೆಯನ್ನು ಹಿಸುಕಿಕೊಳ್ಳುತ್ತ, “ಅಯ್ಯಯ್ಯೋ, ನಿಮಗೆ ಪಾಪ ಪುಣ್ಯ ಏನೂ ಗೊತ್ತಿಲ್ಲವೆ? ನನಗೆ ಆ ಪಾತ್ರೆಯೇ ಜೀವ. ಅದು ತವನಿಧಿ. ಹೊನ್ನಿರಲಿ, ಸ್ಪರ್ಶ ಮಣಿಗೂ ಮಿಗಿಲು. ಪಾಪಿಗಳಾ, ಬಾಯಿಗೆ ಬಂದದ್ದೆಲ್ಲಾ ಆಡುತ್ತೀರಾ?” ಎಂದು ಕೂಗಾಡಿಕೊಂಡು ತಿರುನೀಲಕಂಠರನ್ನು ತಿವಿಯುವಂತೆ, ಒದೆಯುವಂತೆ ಆಡುತ್ತ, ದುರುಗುಟ್ಟಿ ನೋಡುತ್ತ ಪಾತ್ರೇ ಪಾತ್ರೇ ಎಂದು ಹಂಬಲಿಸಿ ಸ್ವಲ್ಪ ಕಾಲ ಕಳೆದ. ಅವನೇನು ಮಾಡಿದರೂ ತಿರುನೀಲಕಂಠರ ಅಂತಃಕರಣ ಹಿಗ್ಗುತ್ತದೆಯೇ ವಿನಾ ಕಳವಳಿಸದು. ಶಿವನೇ ಕೊನೆಗೆ ಈ ಭಕ್ತರು ಸೋಲುವವರಲ್ಲವೆಂದು ಮನಗಂಡು, “ಇವರು ಏನಕ್ಕೂ ಸೋಲದ ಹಟಮಾರಿಗಳು. ಇವರು ಕೈಕೈ ಹಿಡಿದು ಕೊಂಡು ಇಲ್ಲಿ ಸೇರಿದವರ ಮುಂದೆ ಪ್ರಮಾಣ ಮಾಡಿ ಈ ಹೊಂಡದಲ್ಲಿ ಮುಳುಗಿದರೆ ಸಾಕು, ಹೊರಟುಹೋಗುತ್ತೇನೆ” ಎಂದೊಂದು ಇತ್ಯರ್ಥಕ್ಕೆ ಬಂದನು.

ತಿರುನೀಲಕಂಠರು ಬೆಚ್ಚಿದರು, ‘ಏನು ಬೇಕಾದರೂ ಮಾಡಬಹುದು ಹೆಂಡತಿಯನ್ನು ಮುಟ್ಟುವುದಿಲ್ಲ. ಶಿವನಾಣೆಗೆ ಬೆಲೆಯಿಲ್ಲವೆ? ಇವನೆಂತಹ ಭಕ್ತ, ಅಷ್ಟುಕಾಲದಿಂದ ಕಾಪಾಡಿಕೊಂಡಿದ್ದ ರಹಸ್ಯವನ್ನು ಬಯಲು ಮಾಡುತ್ತಾನಲ್ಲ, ಹೇಳುವುದು ಹೇಗೆ? ಹೇಳಿದರೆ ಡಾಂಭಿಕ, ಸುಳ್ಳುಗಾರ ಎನ್ನರೆ? ಅಯ್ಯೋ ಇದಕ್ಕಿಂತ ಭೂಮಿ ಬಾಯ್ಬಿಟ್ಟು ನನ್ನನ್ನು ನುಂಗಲಿ, ನಾನಿಲ್ಲೆ ಸುಟ್ಟು ಭಸ್ಮವಾದೇನು; ಯಾರ ಕಣ್ಣಿಗೂ ಕಾಣದಂತೆ ಕರಗಿಹೋದೇನು; ಪರಮಾತ್ಮ ಇಷ್ಟು ದಿನ ಈ ಅವಮಾನಕ್ಕಾಗಿ ಸಾಯದಂತೆ ಇರಿಸಿದ್ದೆಯಲ್ಲ’ ಎಂದು ಧರ್ಮಸಂಕಟದಲ್ಲಿ ಬೆಂದರು. ಕೊನೆಗೆ ಬಹು ಕಷ್ಟದಿಂದ “ಇಲ್ಲೇ ಸತ್ತರೂ ಭೂಮಿಯೇ ಎದ್ದು ಮೈ ಮೇಲೆ ಬಿದ್ದರೂ ನಾನು ಸತಿಯ ಕೈ ಹಿಡಿವವನಲ್ಲ” ಎಂದು ನಿರ್ಧಾರವಾಗಿ ಹೇಳಿಬಿಟ್ಟರು. ಈ ಮಾತನ್ನೇ ಕಾದಿದ್ದವನಂತೆ ಜಂಗಮ ಹೋ ಹೋ ಎಂದು ನಗತೊಡಗಿದ. “ಕೇಳಿದಿರಾ, ಯಾರಾದರೂ ನಂಬುವ ಮಾತೆ?” ಎಂದು ಸಭೆಯಲ್ಲೆಲ್ಲ ಕೂಗುತ್ತ, ಕುಣಿಯುತ್ತ, “ಆ ಏನಂದಿರಿ? ಕೈ ಹಿಡಿಯುವುದೇ ಇಲ್ಲವೇ? ಅಲ್ಲ, ಇಷ್ಟು ವಯಸ್ಸಾಗಿ ಅಷ್ಟು ಸುಳ್ಳು ಹೇಳುವುದೆ? ಭೂಮಿ ಮೇಲಿದ್ದವರು ಆಡುವ ಮಾತೇ ಇದು? ಎಷ್ಟು ನಿಜವಯ್ಯ! ಕೈ ಹಿಡಿಯುವುದಿಲ್ಲ ಎನ್ನುವುದು ಎಷ್ಟು ನಿಜವೋ ಪಾತ್ರೆ ತೆಗೆದುಕೊಂಡಿಲ್ಲ ಎನ್ನುವುದೂ ಅಷ್ಟೇ ನಿಜ. ಅಯ್ಯಯ್ಯಾ, ನಿಮ್ಮ ವೇಷವೇನು, ನಡವಳಿಕೆ ಏನು? ಹಸುವಿನಾಕಾರದ ಹುಲಿಗಳೇ ಸರಿ. ಆದರೆ ನನ್ನ ಪಾತ್ರೆ ನಿಮ್ಮ ಗಂಟಲಲ್ಲಿ ಹೇಗೆ ಇಳಿಯುತ್ತದೋ ನೋಡುತ್ತೇನೆ” ಎಂದು ಕೂಗಾಡಿದ.

ಕೊನೆಗೆ ಶಂಕರನಿಗೆ ಸಾಕಾಗಿ, “ನಿಮ್ಮ ಸುಳ್ಳು ಕಪಟವೆಲ್ಲ ಹಾಗಿರಲಿ, ನನ್ನ ಈ ಲಾತಕೋಲಿನ ಎರಡು ತುದಿಗಳನ್ನು ಹಿಡಿದು, ಕೊಂಡದಲ್ಲಿ ಮುಳುಗೆದ್ದು ಪ್ರತಿಜ್ಞೆ ಮಾಡಿ” ಎಂದಾಗ ಆ ಭಕ್ತರು ಒಪ್ಪಿದರು. ಪ್ರತಿಜ್ಞೆ ಮಾಡಿ ಕೊಂಡದಲ್ಲಿ ಮುಳುಗಿದರು. ಸಭೆ ಬೆರಗುಪಟ್ಟು ನೋಡುವಂತೆ ಅವರು ಹರೆಯದವರಾಗಿ ಎದ್ದುಬಂದರು. ಎಂಬತ್ತು ವರ್ಷಗಳ ಕಾಲ ಅವರ ತಪಸ್ಸಿಗೆ ಕೇಂದ್ರವಾಗಿದ್ದ ಶಿವನಾಣೆಯ ಸಾಕ್ಷಾತ್ಕಾರ ಇಂದು ಆಯಿತು. ಜಗಳದ ಗುರುಗಳು ನಿಜರೂಪ ತೋರಿದರು. ತಿರುನೀಲಕಂಠರು ಓಡಿ ಬಂದು ಶಿವನ ಪಾದಗಳಲ್ಲಿ ತಲೆಯಿಟ್ಟು, “ಸ್ವಾಮಿ, ಅಲ್ಲಿಂದ ನನ್ನಂತಹ ಅಲ್ಪನಿಗಾಗಿ ಬಂದೆಯಾ? ನಿಷ್ಠುರದ ವೇಷ ತಾಳಿ ಈ ಸುಕುಮಾರ ದೇಹವನ್ನು ದಂಡಿಸಿದೆಯಲ್ಲ, ಹೊಡೆದು, ಬಡಿದು ಕೈನೊಂದಿತೇ ಸ್ವಾಮಿ” ಎಂದು ಮರುಗಿ ಮೊರೆಯಿಟ್ಟನು.

ಶಿವನು ಕರುಣೆ ಪ್ರೀತಿಗಳಿಂದ, “ಆಣೆ ಬಿಟ್ಟಿತು, ನೀವಿನ್ನು ಎಂಬತ್ತು ವರ್ಷಗಳ ಕಾಲ ಭೂಮಿಯಲ್ಲಿ ಸುಖವಾಗಿ ಬಾಳಿ, ಬಳಿಕ ನನ್ನ ಬಳಿಗೆ ಬನ್ನಿರಿ” ಎಂದು ಹರಿಸಿ, ಅಷ್ಟು ಕಾಲ ಕಳೆದಮೇಲೆ ಉತ್ಸವದಿಂದ ಅವರನ್ನು ಕೈಲಾಸಕ್ಕೆ ಒಯ್ದು ಗಣಪದವಿಯನ್ನಿತ್ತು ಪಾಲಿಸಿದನು.

ಅಮರ ನೀತಿಗಳ ರಗಳೆ

ಅಮರ ನೀತಿಗಳ ರಗಳೆಯಲ್ಲಿ ಇನ್ನೊಂದು ಸ್ವಾರಸ್ಯ ನಡೆಯುತ್ತದೆ. ಅಮರ ನೀತಿಗಳು ಬಟ್ಟೆಯ ವ್ಯಾಪಾರಿಗಳು. ಜಂಗಮರಿಗೆ, ಭಕ್ತಿಗೆ ಅವರು ಭುವಿಯಲ್ಲಿ ಮಾಡುವ ದಾನ ಕೈಲಾಸದ ಶಿವಗಣಗಳ ಒಡಲಿನಲ್ಲಿ ಕಾಣುತ್ತದೆ. ಎಷ್ಟೋ ವಿಧವಾದ ನೂತನ ವಸ್ತ್ರಗಳು ದಿನ ದಿನವೂ ಬಂದು ಗಣಗಳ ಒಡಲನ್ನು ಆಶ್ರಯಿಸಿವೆ. ಶಿವನು ಆಗ ಅಮರ ನೀತಿಗಳ ಭಕ್ತಿಯನ್ನು ಪರೀಕ್ಷಿಸಲು ಧರೆಗಿಳಿದನು. ಜಂಗಮನ ವೇಷ ತೊಟ್ಟು, ಈ ಸಲ ಕೈಯಲ್ಲಿ ಹಿಡಿದ ಕೋಲಿಗೆ ಒಂದು ಕೌಪೀನವನ್ನು ಕಟ್ಟಿದನು. ಅಮರ ನೀತಿಗಳ ಮಳಿಗೆಯ ಮುಂದೆ ನಿಂತು ಅವರ ದಾನದ ವಿತರಣೆಯನ್ನು ಕಂಡು ತಲೆದೂಗಿದರೂ “ನಾನು ಬೇಡುವವನಲ್ಲ, ನನ್ನ ಈ ಕಚ್ಚುಟದ ಕೋಲನ್ನು ಒಂದು ದಿನ ಇಟ್ಟುಕೊಂಡಿರಿ. ಪರವೂರಿನಲ್ಲಿ ನಡೆದ ಸಮಾರಾಧನೆಗೆ ಹೊರಟಿದ್ದೇನೆ. ಆದರೆ ನನ್ನ ಕೋಲನ್ನು ಜೋಕೆಯಾಗಿ ಇಟ್ಟುಕೊಳ್ಳಬೇಕು” ಎಂದು ಕೂಗಿ ಎಚ್ಚರಿಸುತ್ತ ನಡೆದ. ಅಮರ ನೀತಿಗಳ ಮಳಿಗೆಯಲ್ಲಿ ಅಮೂಲ್ಯವಾದ ಬಟ್ಟೆಯ ಥಾನುಗಳ ಮಧ್ಯೆ ಅದೊಂದು ಮೂಲೆಯಲ್ಲಿ ಒರಗಿತ್ತು.

ಮರುದಿನ ಜಂಗಮವೇಷೀ ಈಶ್ವರ ಬಂದು ಕೇಳಿದಾಗ ಅಮರ ನೀತಿಗಳು ಕೋಲನ್ನು ಹುಡುಕಿ ಕಾಣರು. ಭಕ್ತ ನೋಯುತ್ತಾನಲ್ಲ ಎಂದು ಮರುಗಿದರು. ಪುನಃ ಪುನಃ ಅಂಗಡಿಯ ಮೂಲೆಗಳನ್ನು ಅರಸಿದರು. ಕಚ್ಚುಟದ ಕೋಲು ಕಾಣದು. ಶುರುವಾಯಿತು ಜಂಗಮನ ಗಲಾಟೆ. “ನೋಡಿದಿರಾ, ಭಕ್ತರ ವೇಷ ಧರಿಸಿದ ಇವರ ಠಕ್ಕು? ನನ್ನದು ಕಲ್ಪವೃಕ್ಷದ ಕೋಲು, ತವನಿಧಿಯ ಕೋಲು, ಅದನ್ನು ನುಂಗಿದುದು ಸರಿಯೆ? ಈ ಊರಿನ ತುಂಬ ನಿಮ್ಮ ಕೀರ್ತಿ-ನಿಮ್ಮ ವಂಚನೆಯನ್ನು ಯಾರೂ ಅರಿಯರು.”

ನೆರೆದ ಜನ ಗುಜು ಗುಜು ಮಾಡುತ್ತ ಅಮರ ನೀತಿಗಳನ್ನೊಮ್ಮೆ ಜಂಗಮನನ್ನೊಮ್ಮೆ ಸಂದೇಹಿಸುತ್ತ ನಿಂತರು. “ಅಯ್ಯಾ, ಅದೆತ್ತ ಹೋಯಿತೋ ನಾನರಿಯೆ, ಅದಕ್ಕೆ ಬದಲಾಗಿ ಪೀತಾಂಬರಗಳನ್ನು ಕೊಡಲೆ, ಹೊನ್ನಿನ ಕೋಲನ್ನು ಕೊಡಲೆ?” ಎಂದು ಅಂಗಲಾಚಿದರು. ಯಾವುದಕ್ಕೂ ಜಗ್ಗದೆ ಕೂಗಾಡಿ ಕೊನೆಗೆ, “ನನ್ನ ಬಳಿ ಇನ್ನೊಂದು ಕಚ್ಚುಟದ ಕೋಲಿದೆ, ಅದರ ತೂಕದ ಹೊನ್ನು ಕೊಡು” ಎಂದು ಇತ್ಯರ್ಥಕ್ಕೆ ಬಂದನು ಜಗಳದ ಈಶ್ವರ. ತಕ್ಕಡಿ ತರಿಸಿ ಒಂದು ಬಟ್ಟಲಲ್ಲಿ ಅವನ ಕೌಪೀನದಿಂದ ಕೂಡಿದ ಕೋಲನ್ನಿಟ್ಟ. ಕೂಡಲೇ ತಕ್ಕಡಿ ಚೂರುಚೂರಾಗಿ ಮುರಿದುಬಿದ್ದಿತು. ಬೆಚ್ಚಿದ ಅಮರ ನೀತಿಗಳು ಭೂಮ್ಯಾಕಾಶಕ್ಕೆ ಅಳತೆ ಹಿಡಿವುದೋ ಎಂಬ ಒಂದು ಸ್ತಂಭವನ್ನು ನಿಲ್ಲಿಸಿದರು. ಭೂಮಿಯನ್ನೇ ಇಬ್ಭಾಗ ಮಾಡಿದರೋ ಎಂಬಂತೆ ಎರಡು ಬಟ್ಟಲು ತಯಾರು ಮಾಡಿಸಿದರು. ಬಟ್ಟಲಲ್ಲಿ ಕಚ್ಚುಟದ ಕೋಲನ್ನಿಟ್ಟ. ಕೂಡಲೇ ಅದು ನೆಲವನ್ನು ಕಚ್ಚಿತು. ಇನ್ನೊಂದು ಬರಿದಾದ ಬಟ್ಟಲು ಆಕಾಶಕ್ಕೆ ನೆಗೆದು ತೂಗಾಡತೊಡಗಿತು. ಊರೆಲ್ಲಾ ಬೆರಗಾಗಿ ನೋಡುತ್ತಿರುವಂತೆ ಅಮರ ನೀತಿಗಳು ಅದಕ್ಕೊಂದು ಏಣಿ ಇಡಿಸಿ ತಮ್ಮ ಸಮಸ್ತ ಐಶ್ವರ್ಯವನ್ನೂ ಅದರಲ್ಲಿ ಪೇರಿಸಿದರು. ಜುಂ ಎನ್ನಲಿಲ್ಲ ತಕ್ಕಡಿಯ ಹೋಳು. ಅಮರ ನೀತಿಗಳು ಎದೆಗೆಡದೆ ಶಿವನನ್ನು ಭಜಿಸುತ್ತ ತಮ್ಮ ಪತ್ನಿಯನ್ನು ಎತ್ತಿ ಕೊಂಡೊಯ್ದು ತಕ್ಕಡಿಯಲ್ಲಿಟ್ಟರು. ಸ್ವಲ್ಪ ಕೆಳಮುಖವಾಯಿತು ಬಟ್ಟಲು. ಹದಿನಾರು ವರ್ಷಗಳ ತಮ್ಮ ಸುಕುಮಾರನನ್ನು ಕೂಡಿಸಿದರು; ಇನ್ನೂ ಕೆಳಕ್ಕೆ ಬಂದಿತು ಬಟ್ಟಲು. ಹರನಾಮ ಸ್ಮರಣೆಮಾಡುತ್ತಾ ತಾವೇ ಏರಿ ಕುಳಿತರು. ಶಿವಾರ್ಪಣ ಮಸ್ತು ಎಂದರು. ನನ್ನ ಸಮಸ್ತ ಆಸ್ತಿಪಾಸ್ತಿ, ಪತ್ನಿ, ಪುತ್ರನೊಡನೆ ಈ ಭಕ್ತನಿಗೆ ಅಧೀನನಾದೆನೆಂದರು. ಕಚ್ಚುಟದ ಬಟ್ಟಲು ಮೇಲೇರಿ ಅಮರ ನೀತಿಗಳ ಬಟ್ಟಲು ಕೆಳಗಾಯಿತು. ಆದರೀಗ ಆನಂದಪರವಶನಾದ ಜಂಗಮ ಎಲ್ಲರೂ ನೋಡುವಂತೆ ಪರಶಿವನಾಗಿಬಿಟ್ಟ. ಹಣೆಗಣ್ಣು, ಜಟಾಜೂಟ, ಚಂದ್ರಬಿಂಬ, ಎಡಭಾಗದಲ್ಲಿ ಗಿರಿಜೆ, ಮುಂದೆ ನಂದೀಶ ಎಲ್ಲರೊಡನೆ ನಿಂತಿದ್ದಾನೆ. “ನಿನ್ನ ಭಕ್ತಿಯ ತೂಕ ಮಿಗಿಲಾಯಿತಲ್ಲ ಮಗುವೆ? ಭಕ್ತಿಯಿಂದ ನನ್ನನ್ನು ತೂಗಿಕೊಂಡು ಕೊಂಡೆಯಲ್ಲ, ಬಾರ ನನ್ನ ಕಂದಯ್ಯ, ನಿನ್ನ ಹಾಗೆ ನನ್ನನ್ನು ತಕ್ಕಡಿಯಲ್ಲಿ ತೂಗಿದವರನ್ನು ಕಾಣೆ” ಎಂದು ಪ್ರಶಂಸೆ ಮಾಡುತ್ತ ಅವನ ಹಿರಿಮೆಯನ್ನು ತನ್ನ ಗಿರಿಜೆಗೂ ಗಣಗಳಿಗೂ ಹೇಳಿ ಬಣ್ಣಿಸಿ ಹಿಗ್ಗಿದನು. ಕೈಲಾಸಕ್ಕೆ ಕರೆದೊಯ್ದನು.

ನಂಬಿಯಣ್ಣನ ರಗಳೆ

ನಂಬಿಯಣ್ಣನ ರಗಳೆಯಲ್ಲಿ ಕವಿ ಹಾಸ್ಯಶಕ್ತಿಯನ್ನೂ ಲೋಕಾನುಭವವನ್ನೂ ಕಾಣಬಹುದು.

ಕೈಲಾಸದಲ್ಲಿ ಈಶ್ವರನ ಸೇವೆಯಲ್ಲಿದ್ದ ಪುಷ್ಪದತ್ತನು ಪಾರ್ವತಿಯ ಇಬ್ಬರು ಸಖಿಯರಿಗೆ ಮನಸೋತನು. ಇದರಿಂದ ಈಶ್ವರನು ಅವರು ಮೂವರನ್ನೂ ಭೂಲೋಕಕ್ಕೆ ಕಳುಹಿಸಿ ಅಲ್ಲಿ ಹುಟ್ಟಿ ಬಾಳುತ್ತ ನಿಮ್ಮ ಆಸೆಗಳು ನೆರವೇರಿದ ಮೇಲೆ ಇತ್ತ ಬನ್ನಿರಿ ಎಂದು ಹೇಳಿ ಕರುಣೆಯಿಂದ ಕಳಿಹಿಸಿದನು. ಅವರು ಭಯಪಟ್ಟು, “ಲೋಕದಲ್ಲಿ ಹುಟ್ಟಿದ ಮೇಲೆ ಅಜ್ಞಾನವಶರಾಗಿ ನಿನ್ನನ್ನೇ ಮರೆತರೇನು ಗತಿ ತಂದೆಯೇ” ಎಂದು ಕೊರಗಿದಾಗ, “ಭಯ ಪಡಬೇಡಿ, ನಾನು ಬಂದು ಎಚ್ಚರಿಸಿ ಕರೆತರುತ್ತೇನೆ” ಎಂದು ಅಭಯವಿತ್ತನು.

ಇತ್ತ ಪುಷ್ಪದತ್ತ ನಂಬಿಯಣ್ಣನಾಗಿ ತಿರುನಾವಲೂರಿನಲ್ಲಿ ಹುಟ್ಟಿದನು. ತನ್ನ ಲೋಕೋತ್ತರವಾದ ಸೊಬಗಿನಿಂದ ತಿರುನಾವಲೂರಿನ ರಾಜನಾದ ನರಸಿಂಗ ಮೊನೆಯವರ ಸಾಕುಮಗನಾಗಿ ಸೌಂದರ ಪೆರುಮಾಳ್ ಎಂಬ ಹೆಸರಿನಿಂದ ಬೆಳೆದನು. ಅವನ ಸುಖ-ಸಂತೋಷಗಳಿಗೆ ಎಣೆಯಿಲ್ಲವೆಂದಾಯಿತು. ಆತನು ಹದಿನಾರು ವರ್ಷದ ಯುವಕನಾದಾಗ ಇಬ್ಬರು ರಾಜಕುಮಾರಿಯರೊಡನೆ ಅವನ ವಿವಾಹ ನಿಶ್ವಿತವಾಯಿತು.

ಸೌಂದರ ಪೆರುಮಾಳ್ ಸಹ ಮದುವಣಿಗನಾಗಿ ಅಲಂಕೃತ ನಾಗಿ ಉತ್ಸುಕತೆಯಿಂದ ಊರ ಹೊರಗಿನ ಉದ್ಯಾನದಲ್ಲಿ ದಿಬ್ಬಣ ಹೊರಡಲು ಸಿದ್ಧವಾಗಿದ್ದನು. ಆದರೆ ಪರಮೇಶ್ವರನ ಇಚ್ಛೆಯೇ ಬೇರೆ. ಅವನು ಕಳುಹಿಸಿದ ಪಾರ್ವತಿಯ ಸಖಿಯರು ಪರವೆ, ಶಂಕಿಲೆ ಎಂಬ ಹೆಸರಿನ ಶಿವಭಕ್ತೆಯರಾಗಿ, ಬೆಳೆಯುತ್ತಿರುವರು. ಅವರೊಡನೆ ವಿವಾಹವಾಗಿ ಶಿವಧ್ಯಾನದಲ್ಲಿ ಶೈವಧರ್ಮಾನುಸರಣೆಯಲ್ಲಿ ಬಾಳಬೇಕಾದ ನಂಬಿಯಣ್ಣನು ರಾಜಕುವರಿಯರನ್ನು ಮದುವೆಯಾಗಿ ಲೌಕಿಕನಾಗುವುದೆ?

ಆದ್ದರಿಂದ ಪರಮೇಶ್ವರನು ನೂರರ ಮುದುಕನಂತೆ ಮುಪ್ಪಿನಿಂದ ಕುಗ್ಗಿ ಕೆಮ್ಮುತ್ತ, ಹಿಡಿದವರ ಕೈ ಬಾಯೊಳೆ ಜೀವ ಹೋಗುವುದೆಂಬಂತೆ ನಟಿಸುತ್ತ ವಿವಾಹ ಮಂಟಪಕ್ಕೆ ಬಂದನು. ಶಿವಶಿವ ಎನ್ನುತ್ತ ತೋರಣವನ್ನು ಹರಿದನು. ಇವನಾರು ಅಪಶಕುನಕಾರನೆಂದು ಹಿಡಿಯಬಂದರೆ ಓಡಾಡುತ್ತ ತುಪ್ಪದ ಕೊಡಗಳ ಮೇಲೆ ಬಿದ್ದು ಅವನ್ನೊಡೆದು ಚೆಲ್ಲಿದನು. ಅತ್ತಿತ್ತ ಕುಳಿತ ಸರ್ವಾಲಂಕೃತರಾದ ಪೌರರು ತಮ್ಮ ರೇಶಿಮೆಯ ವಸ್ತ್ರಕ್ಕೆ ಹನಿದ ತುಪ್ಪವನ್ನು ಕೊಡವಿ ಸಿಡಿಮಿಡಿಗೊಂಡರು. ಇನ್ನೇನು ಈ ಮದುವೆ ಹಸನಾಗದೆಂದು ಕಳವಳಗೊಂಡರು. ಆದರೂ ಅರಸನ ಮದುವೆಯಲ್ಲಿ ಈ ಪೀಡೆಯನ್ನು ಪ್ರವೇಶಿಸಲು ಬಿಟ್ಟವರಾರು ಎನ್ನುತ್ತ ಅವನನ್ನು ಹೊತ್ತೊಯ್ದು ಸಭಾಮಂಟಪದಿಂದ ದೂರ ಒಯ್ದುಬಿಟ್ಟು ಬಾಗಿಲು ಹಾಕಿಕೊಂಡು ಬರುವ ವೇಳೆಗೆ ಅವರಿಗಿಂತ ಮುಂದಾಗಿ ಈ ಮುದುಕ ಒಳಗಿದ್ದಾನೆ! ಇದೇನು ಕಾಟ, ಈ ವಿಚಿತ್ರವೇಕೆ ಎಂಥವರು ವಿಚಾರಿಸಿದಾಗ ಕೆಮ್ಮುತ್ತ, “ನಂಬಿಯಣ್ಣನದು ತೊತ್ತಿನ ವಂಶ. ತಮ್ಮ ಸೇವಕ ಅವನು, ಅವನಿಗೆ ಹೆಣ್ಣು ಕೊಟ್ಟು ನಿಮ್ಮ ರಾಜಕುಲವನ್ನು ಹಾಳುಮಾಡಿಕೊಳ್ಳಬೇಡಿ” ಎಂದು ಸಾರಿ ಹೇಳಿದನು.

ನಂಬಿಯಣ್ಣ ಇಳಿದುಕೊಂಡಿದ್ದ ಉದ್ಯಾನಕ್ಕೆ ಬಂದನು. ಆತನನ್ನು ಕರೆದು, “ಅಯ್ಯಾ, ನೀನು ಸೌಂದರ ಪೆರುಮಾಳೆಯಾದರೂ ರಾಜಪುತ್ರನಲ್ಲ, ನಮ್ಮ ವಂಶಕ್ಕೆ ತೊತ್ತಾಗಿ ಸಲ್ಲುವವನು. ಹಾಗೆಂದು ನನ್ನ ಹತ್ತಿರ ಪತ್ರವುಂಟು. ನನಗೆ ತಿರುವಗೆನಲ್ಲೂರಿನಲ್ಲಿ ಮನೆಯಿದೆ. ನೀನು ನಂಬು. ನಿಮ್ಮ ತಂದೆ ಬರೆದುಕೊಟ್ಟ ಪತ್ರವಿದೆ. ಊರ ಜನರ ಸಾಕ್ಷಿಯಿದೆ” ಎನ್ನುತ್ತ ಕಾಡಿದ. ಸಿಡಿಮಿಡಿಗೊಂಡ ನಂಬಿಯಣ್ಣ ರಾಜನ ಅಪ್ಪಣೆಯಂತೆ ಇದನ್ನು ಪರೀಕ್ಷಿಸಲು ಹೊರಟನು. ಆನೆಯ ಮೇಲೇರಿಕೊಂಡು ಕಂದಿದ ಮುಖದವನಾಗಿ, ಮುನಿದು ನುಡಿಯದೆ ಬಂದ ರಾಜಕುಮಾರನನ್ನು ತಿರುವಗೆನಲ್ಲೂರಿನಲ್ಲಿ ಪುರಪ್ರಮುಖರು ಬಂದು ಇದಿರುಗೊಂಡರು. ರಾಜಕುಮಾರನಿಗೆ ಮುನಿಸು. ಅದನ್ನು ಕಂಡ ಊರ ಜನರಿಗೆ ಭಯ, ಆತಂಕಗಳು. “ಏಕೆ ಸ್ವಾಮಿ, ನಮ್ಮ ತಪ್ಪಿಲ್ಲವಲ್ಲ” ಎಂದು ಅವರು ಬಿನ್ನವಿಸಿಕೊಂಡಾಗ, “ನಿಮ್ಮೂರಿನ ಒಬ್ಬ ಹಾಳು ಮುದುಕ ಬಂದು ನನ್ನನ್ನು ತೊತ್ತೆನ್ನುತ್ತಾನೆ, ಅದಕ್ಕೆ ನೀವೆಲ್ಲ ಸಾಕ್ಷಿಯಿದ್ದೀರಂತೆ, ಈಗ ವಿನಯದ ಸೋಗು ಹಾಕುತ್ತೀರಾ?” ಎಂದು ಗದರಿದ. ಬೆಚ್ಚಿ ಮುಖಮುಖ ನೋಡುತ್ತಾ ಒಂದನ್ನೂ ಅರಿಯದೆ ಭ್ರಮಿಸಿ ನಿಂತ ಜನರ ನಡುವೆ ಗಡ್ಡನರೆದಲೆಯ ಈಶ್ವರ ಶತವೃದ್ಧನಾಗಿ ಕೊಡೆ ಕಮಂಡಲಗಳನ್ನು ಹಿಡಿದು ಪ್ರತ್ಯಕ್ಷನಾದ. ಅವನನ್ನು ಅರಸುಕುಮಾರ ಊರವರಿಗೆ ತೋರಿಸಿದಾಗ ಅವರು ಈತನನ್ನು ಅರಿಯರು. ಶಿವ ಸುಮ್ಮನೆ ಬಿಟ್ಟಾನೆ? ತನ್ನ ನಾಟಕವನ್ನು ಪ್ರಾರಂಭಿಸಿದ.

“ಏನಿರಿ ಪಶುಪತಿ ಭಟ್ಟರೆ, ಏನಿರಿ ಈಶಾನ ಭಟ್ಟರೆ, ನನ್ನನ್ನು ಅರಿಯರೆ? ನಿಮ್ಮ ತಂದೆಯ ಗೆಳೆಯನಲ್ಲವೆ ನಾನು? ಸ್ಮಶಾನ ಶಯನ ಭಟ್ಟನೆಂದು ನನ್ನ ಹೆಸರು” ಎನ್ನುತ್ತ ಅಳಿದುಹೋದ ಅವರ ತಂದೆಯರನ್ನು ಕುರಿತಾಡುತ್ತ ಬದುಕಿರುವ ಇವರ ರಹಸ್ಯಗಳನ್ನು, ಕುರುಹುಗಳನ್ನು ಎತ್ತಿ ಆಡಿದ. ಇವರೆಲ್ಲ ಸೋಜಿಗದಿಂದ ಇವನ ಮಾತನ್ನು ಒಪ್ಪಿದರು. ಆದರೆ ಇವನನ್ನು ಅರಿಯರು. ಅಲ್ಲಿಗೆ ಬಿಡದ ಶಿವ, “ಬನ್ನಿ, ನಿಮ್ಮೂರಿನ ಗಣಕಗಳು ನನ್ನ ಬಳಿಯಿರುವ ಪತ್ರವನ್ನು ನೋಡಲಿ” ಎಂದು ಪತ್ರವನ್ನು ಹಿಡಿದಾಗ ಆ ಊರಿನ ಗಣಕ ಬಂದು, “ಆಹಾ! ಇದು ನನ್ನ ತಂದೆಯ ಅಕ್ಷರ” ಎನ್ನುತ್ತ ಗುರುತಿಸಿ ಅಳತೊಡಗಿದ. ಅದರಲ್ಲಿ ನಂಬಿಯಣ್ಣ ಈ ಬ್ರಾಹ್ಮಣ ವಂಶಕ್ಕೆ ತೊತ್ತೆಂದು ಬರೆದಿದ್ದಿತು. ನೋಡು ನೋಡೆಂದು ರಾಜಕುಮಾರನಿಗೆ ಹೇಳಿದಾಗ ಅವನು ಕುತೂಹಲಗೊಂಡು ಪತ್ರ ಕೈಗೆ ತೆಗೆದುಕೊಂಡು ಓದಿ ಕೋಪದಿಂದ ಅದನ್ನು ನೂರಾರು ಚೂರಾಗಿ ಹರಿದು ಗಾಳಿಗೆ ತೂರಿ ನಕ್ಕನು.

ಆದರೆ ಚತುರನಾದ ಬ್ರಾಹ್ಮಣ ತಲೆದೂಗುತ್ತ, “ಹೀಗಾಗುವುದೆಂದು ಜಾಣೆಯಾದ ನನ್ನ ಪತ್ನಿ ಹೇಳಿದ್ದಳು. ಇದು ಪತ್ರದ ನಕಲು. ಮೂಲಪತ್ರ ನನ್ನ ಮನೆಯಲ್ಲಿದೆ. ಬಾ ಹೋಗೋಣ” ಎಂದು ನಿಂತ. ಹೇಗೆ ಮಾಡಿಯೂ ಮುದುಕನನ್ನು ನಿವಾರಿಸಲರಿಯದೆ ತನ್ನ ರಾಜಪರಿವಾರವನ್ನು ತೊರೆದು ಈ ಮುದುಕನನ್ನು ಹಿಂಬಾಲಿಸಿದಾಗ ಅವನು ಊರ ದೇವಾಲಯವನ್ನು ಹೊಕ್ಕನು. ಏನಾಶ್ಚರ್ಯ! ಕೆರೆಗಳನ್ನು ಕಳೆಯದೆ ಒಳಹೊಕ್ಕು ಮುದುಕನನ್ನು, ಶನಿಯನ್ನು ನಿವಾರಿಸಿಬಿಡುವೆನೆಂದು ನಂಬಿಯಣ್ಣನು ಖಡ್ಗವನ್ನು ಹೀರಿದ! ಆದರೆ ಒಳಹೊಕ್ಕ ಮುದುಕ ಶಿವಲಿಂಗದಲ್ಲಿ ಸೇರಿಹೋದ.

ನಂಬಿಯಣ್ಣನ ಮನಸ್ಸಿಗೆ ಫಕ್ಕನೆ ಬೆಳಗಾಯಿತು. ಆಹಾ, ಎಂತಹ ಭಾಗ್ಯ ತಪ್ಪಿಹೋಗುವುದರಲ್ಲಿತ್ತು, ಈಗ ಒದಗಿತು. ನನ್ನ ಒಡೆಯನನ್ನು, ಸ್ವಾಮಿಯನ್ನು ಮರೆತೇ ಬಿಟ್ಟಿದ್ದೆನಲ್ಲ ಎನ್ನುತ್ತ ಈಶ್ವರನನ್ನು ಹಾಡಿ ಭಜಿಸಿದ. ಅವನ ಅದುವರೆಗಿನ ಕಳವಳವೆಲ್ಲ ಕರಗಿ ನೀರಾಯಿತು. ಮನಕ್ಕೆ ತುದಿಮೊದಲಿಲ್ಲದ ನೆಮ್ಮದಿ ದೊರಕಿತು. ಪ್ರತ್ಯಕ್ಷನಾದ ಶಿವ, “ಮಗು, ನನ್ನನ್ನು ಕುರಿತು ಹಾಡಯ್ಯ” ಎಂದನು. “ನಾನ್ಯಾವ ಹಾಡನ್ನು ಬಲ್ಲೆ ತಂದೆಯೇ?” ಎಂಬುದಕ್ಕೆ, “ಹುಚ್ಚನೆಂದು ನನ್ನನ್ನು ನಿನ್ನ ಬಾಲಭಾವದಲ್ಲಿ ಮುಗ್ಧನಾಗಿ ಬೈದೆಯಲ್ಲ, ಅದನ್ನೇ ಹಾಡು” ಎಂದು ಪುತ್ರಮೋಹದಿಂದ ಕೇಳಿಕೊಂಡ.

ಮುಂದಿನದು ಸೋಜಿಗಕರವಾದ ಕಥೆ. ನಂಬಿಯಣ್ಣ ಏನು ಬೇಕೆಂದರೆ ಶಿವ ಅದನ್ನು ಕೊಡುವನು. ಶಿವಭಕ್ತರಿಗೆ ಸಮಾರಾಧನೆಯೋ ದಾನವೋ ಮಾಡಬೇಕಾದರೆ ನಂಬಿಯಣ್ಣನ ಇಚ್ಛೆಯಂತೆ ಶಿವನು ಸಿದ್ಧ. ಅವನ ವಿವಾಹಕ್ಕಾಗಿ ಪರವೆ, ಸಂಕಿಲೆಯಲ್ಲಿ ಈಶ್ವರ ದೂತನೆಂದು ಓಡಾಡಿದ. ಶೈವಧರ್ಮ ಪ್ರಚಾರಕ್ಕೆ ನಂಬಿಯಣ್ಣ ನಿಂತರೆ ಅವನ ಬಲಗೈ ಬಂಟನಾಗಿ ಶಿವ ನಿಂತ. ಅಲ್ಲದಿದ್ದರೆ, “ನೀನೆಂತಹ ಯಜಮಾನ? ನನ್ನನ್ನು ಅಳಲಾರದ ನೀನೆಂತಹ ಸ್ವಾಮಿ? ಕೊಡು ನನ್ನ ಪತ್ರವನ್ನು, ಬಿಡು ನನ್ನ” ಎಂದೆಲ್ಲ ನಂಬಿಯಣ್ಣ ಕೂಗಾಡಿಬಿಡುವನು. ಶಿವನು ಓಡೋಡುತ್ತ ಬಂದು, “ಮಗುವೆ, ಏನಾಗಬೇಕಯ್ಯ?” ಎಂದು ಕೇಳಿ ನಲಿಸುವನು. ಆಹಾ, ಭಕ್ತಪರಾಧೀನನಾದ ಸ್ವಾಮಿಯೇ, ನಿನ್ನ ಕಾಟದ ಹುಯಿಲೇನು, ನಿನ್ನ ಆಟದ ಸವಿಯೇನು! ಎಂದು ಹರಿಹರ ತಲೆದೂಗುವನು. ಭಕ್ತನನ್ನು ಅಳಲು ಹೋಗಿ ಅವನನ್ನೇ ಮಗನಂತೆ ಪಾಲಿಸಿದವರುಂಟೆ? ಅವನು ಸಂಸಾರದಲ್ಲಿ ಮುಳುಗಿ ಹೋದಾನೆಂದು ಭಯಪಟ್ಟು ಮುಪ್ಪಿನ ಮುದುಕನಾಗಿ ಸುಳಿಯುತ್ತ, ಸಾಯುವವನಂತೆ ಅಭಿನಯಿಸುತ್ತ, ಗುಂಪು ಸೇರಿದ ಜನರಲ್ಲಿ ಚಾತುರ್ಯವನ್ನು ತೋರುತ್ತ ಊರತುಂಬೆಲ್ಲ ಸುಳಿದಾಡುವ ಪರಮೇಶ್ವರನನ್ನು ಕಂಡು ಮೈಮರೆಯದ ಭಕ್ತರಾರು?

ಬಸವರಾಜದೇವ ರಗಳೆ

ಈ ಪರಿಯಲ್ಲಿ ಬಗೆಬಗೆಯ ಸೊಗಸುಳ್ಳ ಪುರಾತನ ಭಕ್ತರ ಕಥೆಗಳು ಹರಿಹರನ ಲೇಖನಿಯಲ್ಲಿ ಜೀವತಾಳಿ ನಿಂತವು. ಭಕ್ತ, ಅವನ ಭಕ್ತಿಯ ಪರೀಕ್ಷೆ, ಶಿವನ ಪ್ರತ್ಯಕ್ಷ ಎಂಬ ಮೂರು ಸಾಮಾನ್ಯಾಂಶಗಳ ನಡುವೆ ಕವಿಯ ಪ್ರತಿಭೆ ಚಿರನೂತನವಾದ ಭಾವಭಂಗಿಗಳನ್ನು, ಸನ್ನಿವೇಶಗಳನ್ನು ಕಟ್ಟಿದೆ. ಬಸವರಾಜದೇವ ರಗಳೆಯಲ್ಲಿ ಆತನ ಭಕ್ತಿ, ಭಾವಪೂರ್ಣವಾದ ವ್ಯಕ್ತಿತ್ವವನ್ನೂ ಕ್ರಾಂತಿಕಾರ ಮನೋಭಾವವನ್ನೂ ವೀರಶೈವಧರ್ಮದಲ್ಲಿ ಆತನಿಗಿದ್ದ ಶ್ರದ್ಧೆಯನ್ನೂ ಹರಿಹರ ಸುಂದರವಾಗಿ ಚಿತ್ರಿಸಿದ್ದಾನೆ. ಅವನು ಯುವಕನಾಗಿ, ಸುಂದರನಾಗಿ, ಶಕ್ತನಾಗಿ ಬೆಳೆದಂತೆ ಅವನ ಮನದಲ್ಲಿ ಭಕ್ತಿ, ವಿಚಾರಶೀಲತೆ, ವೈರಾಗ್ಯಗಳು ಹಬ್ಬಿಕೊಂಡುದುದನ್ನು ಹರಿಹರ ಸುಂದರವಾಗಿ ಬಣ್ಣಿಸಿದ್ದಾನೆ. ತನ್ನ ಸಮಾಜವನ್ನು ಅದರ ಅಜ್ಞಾನದಿಂದ ಬಿಡುಗಡೆ ಮಾಡಲು ಆತನ ಮನಹಾತೊರೆದು ಅನುಕಂಪ ತೋರಿತು. ಮನುಜರ ಬಾಳುವೆ ಹೇಗಿರಬೇಕು? ಎಂಬ ಪ್ರಶ್ನೆಗೆ ಹರಿಹರ (ಅಥವಾ ಬಸವಣ್ಣನವರ) ಉತ್ತರ ಅಮೋಘ. ಪೂಜೆ ದೇವರಮನೆಯಲ್ಲಿ ಮಾತ್ರವಲ್ಲ. ವೃತ್ತಿಜೀವನ ಎಲ್ಲವೂ ಪೂಜೆಯೇ. ತನ್ನ ಅಂತರಂಗ ಬಹಿರಂಗದ ನಡವಳಿಕೆಗಳನ್ನು ಶುದ್ಧವಾಗಿಟ್ಟುಕೊಳ್ಳುವುದೇ ಭಕ್ತಿ. ಹರಿಹರ ಇದನ್ನು  ಬಸವಣ್ಣನವರ ಜೀವನದಲ್ಲಿ ಚಿತ್ರಿಸಿ ತೋರಿಸುವುದಷ್ಟೇ ಅಲ್ಲ, ತನ್ನ ಜೀವನದಲ್ಲಿ ಮಾಡಿಯೂ ತೋರಿಸಿದನು.

 

ನಂಬಿಯಣ್ಣನಿಗೆ ಶಿವ ಪ್ರತ್ಯಕ್ಷನಾದ.

ಕುಂಬಾರ ಗುಂಡಯ್ಯನ ರಗಳೆ

ಕುಂಬಾರ ಗುಂಡಯ್ಯನ ರಗಳೆಯಲ್ಲಿ ಇನ್ನೊಂದು ಸೊಗಸು ಕಾಣುವುದು. ಭಕ್ತನಾದ ಕುಂಬಾರ ಗುಂಡಯ್ಯನು ಮಡಕೆ ತಟ್ಟುತ್ತ, ಶಿವನನ್ನು ನೆನೆದು ಧ್ಯಾನಿಸುತ್ತಿದ್ದ. ಆನಂದದ ಭಾವಕ್ಕೆ ಅದೊಂದು ತಾಳವಾಯಿತು. ಆ ತಾಳಕ್ಕೆ ಮನಸೋತು ಶಿವ  ಕುಣಿಯತೊಡಗಿದ. ಕುಣಿತವನ್ನು ಕಂಡು ಆನಂದಿಸಿ ಗುಮಡಯ್ಯನೂ ತಾಳ ಕುಟ್ಟಿಕೊಂಡು ಕುಣಿದ. ಪ್ರಕೃತಿ ಎಲ್ಲಾ ಪರಮಾತ್ಮನ ಆನಂದದಲ್ಲಿ ಮುಳುಗಿ ಕರಗಿತು. ಗಂಗೆ ಜಟಾಜೂಟವನ್ನು ಮೀರಿ ಹರಿದಳು. ತಾರೆಗಳು ಫಳಫಳನೆ ಉದುರಿದವು. ಹತ್ತು ದಿಕ್ಕುಗಳಲ್ಲೂ ಅವನ ಕೋಮಲವಾದ ಬಾಹುಗಳು ಸುಳಿದಾಡಿದವು. ಮುಂಗುರುಳ ಕುಣಿದಾಟದೊಡನೆ ಅವನ ಭೂಷಣಗಳೂ ಹೆಡೆ ಎತ್ತಿ ತೂಗಾಡಿದವು. ಪಾತಾಳ ಬ್ರಹ್ಮಾಂಡಗಳನ್ನು ಒತ್ತಿ ಕುಣಿಯುವ ಅವನ ಪಾದಗಳಲ್ಲಿ ಹೊಂಗೆಜ್ಜೆಗಳ ಸರ ಘಲುಘಲುರೆನುವಂತೆ ಅಪೂರ್ವವಾದ ಶಿವನ ನಾಟ್ಯ ಬೆಳೆಯಿತು. ಆಹಾ! ಗುಂಡಯ್ಯನ ಪುಣ್ಯವೆ….

ದೊಡ್ಡ ಪವಾಡ

ಒಬ್ಬೊಬ್ಬ ಭಕ್ತನ ಜೀವನವನ್ನು ಬಣ್ಣಿಸುವಾಗಲೂ ಹರಿಹರ ಪುನಃಪುನಃ ಭಕ್ತಿಭಾವಗಳಲ್ಲಿ ಮಿಂದು ಆನಂದಿಸುತ್ತಾನೆ. ಭಕ್ತರೊಡನೆ ಪೂಜಿಸುತ್ತ ಅವನಂತೆಯೇ ಶಿವನಿಗಾಗಿ ಹಂಬಲಿಸುತ್ತಾನೆ. ಹರ ಪರೀಕ್ಷಿಸಲು ಬಂದಾಗ, ಪ್ರತ್ಯಕ್ಷ ನಾದಾಗ, ತಾನೂ ಭಕ್ತನಲ್ಲಿ ತಾದಾತ್ಮ್ಯ ಹೊಂದಿ, ನೊಂದು ಆನಂದಿಸಿ ಕುಣಿದಾಡುತ್ತಾನೆ. ಹರಿಹರನ ಕಾವ್ಯಗಳನ್ನು ಓದಿದ ಮೇಲೆ ನಾವು ಹೊಸಬರಾಗುತ್ತೇವೆ. ಈಶ್ವರನನ್ನು ಹೇಗೆ, ಏಕೆ ಪ್ರಾರ್ಥಿಸಬೇಕು ಎಂಬುದು ಅರಿವಾಗುತ್ತದೆ. ಈಶ್ವರನಲ್ಲಿ ನಮಗೆ ಪ್ರೀತಿಯುಂಟಾಗಲಿ ಎಂದು ನಾವು ಅವನನ್ನು ಪ್ರಾರ್ಥಿಸಬೇಕು. ನಮ್ಮ ಮನಸ್ಸು ಚಂಚಲವಾಗಿ ಅತ್ತಿತ್ತ ಹರಿದು ಲೋಕದ ತಾಪತ್ರಯಗಳಲ್ಲಿ ನೋಯದೆ ಭಕ್ತಿಯನ್ನು ಪಡೆಯಲಿ ಎಂದು ಆದೇಶಿಸಬೇಕು. ಆಗ ನಮಗೆ ಲೋಕದ ಸುಖದುಃಖಗಳಲ್ಲಿ ಆಸೆ ಬಿಟ್ಟುಹೋಗುತ್ತದೆ. ನಾವು ವಿರಕ್ತರೂ ಭಕ್ತರೂ ಆದಂತೆ ನಮ್ಮ ಮನಸ್ಸು ಸ್ಥಿರವಾಗಿ ಪ್ರಚಂಚದಲ್ಲಿ ಯಾವುದಕ್ಕೆ ಎಷ್ಟು ಬೆಲೆಕೊಡಬೇಕೆಂಬ ಯಥಾರ್ಥ ಜ್ಞಾನ ಉಂಟಾಗುತ್ತದೆ. ಆಗ ಬುದ್ಧಿಯಲ್ಲಿ ಸ್ಥಿಮಿತ ಉಂಟಾಗಿ ನಮ್ಮನ್ನು ಕಾಡುವ ಸಣ್ಣಪುಟ್ಟ ಆಸೆಗಳು ಬತ್ತುವವು. ಆಗ ವ್ಯಸನವಿಲ್ಲದೆ ಅಹಂಕಾರ ಕರಗಿ ವಿನೀತರಾಗುತ್ತ ನಾವು ಪರರನ್ನು ಕುರಿತ ದುಶ್ಚಿಂತೆಯನ್ನು ಬಿಟ್ಟುಬಿಡುತ್ತೇವೆ. ಶಿವಪೂಜೆ, ಧ್ಯಾನ, ಭಕ್ತರ ಕಥಾ ಸಂಕೀರ್ತನ, ಶಿವಸ್ತುತಿಗಳಿಂದ ಮನಸ್ಸು ತುಂಬಿಹೋಗಿ ಅದು ಪರಿಶುದ್ಧವಾಗುತ್ತದೆ. ಅಲ್ಲಿ ಭಗವಂತ ಬಂದು ನೆಲಸುತ್ತಾನೆ. ನಮ್ಮ ಜೀವನವೇ ದೇವಾಲಯ ವಾಗುತ್ತದೆ. ಇಂತಹ ಸಾಧನೆಯ ಮಾರ್ಗವನ್ನು ಹರಿಹರ ನಂಬಿ ನಡೆದನು! ದೇವರಿಗೆ ಸಮೀಪದವನಾದನು. ದೇವನನ್ನರಸಿ ಸ್ವಲ್ಪ ನಡೆದರೂ ಸಾಕು ಅವನ ಪರಮಾನಂದದಿಂದ ಬಂದು ಪರೀಕ್ಷಿಸಿ ಕುಣಿಯುತ್ತ ಕರೆದೊಯ್ಯುತ್ತಾನೆ. ಇದು ಹರಿಹರನು ನಂಬಿ ಕಣ್ಣಾರೆ ಕಂಡ ಸತ್ಯ. ತನ್ನ ಕಾಲದ ಜನರನ್ನು ಅವರು ತನ್ನನ್ನೂ ಪರೀಕ್ಷಿಸಲು ಬಂದಾಗ ಒಂದೆರಡು ಪವಾಡಗಳನ್ನು ಮಾಡಿ, ಹರಿಹರನು ಅಚ್ಚರಿಗೊಳಿಸಿದುದುಂಟು. ಆದರೆ ಎಲ್ಲಕ್ಕಿಂತ ದೊಡ್ಡ ಪವಾಡವೆಂದರೆ ಅವನ ಪರಮನಿಷ್ಠವಾದ ಭಕ್ತ ಜೀವನ, ವಿರಕ್ತ ಜೀವನ. ಕೊನೆಗೆ ಹರಿಹರನು ಹಂಪೆಯ ಮಠದಲ್ಲಿ ಯತಿಯಾಗಿ ದೀಕ್ಷೆ ಕೈಗೊಂಡನು. ತನ್ನ ಶಿಷ್ಯನೂ ಸೋದರಳಿಯನೂ ಆದ ರಾಘವಾಂಕನನ್ನು ಶಿವನ ಮಹಿಮೆಯನ್ನು ಕೊಂಡಾಡುವಂತೆ ಪ್ರೋತ್ಸಾಹಿಸಿದನು. ಶಿವನ ಸಂಗದಲ್ಲಿ ಪೂಜೆ, ಪ್ರಾರ್ಥನೆ, ಧ್ಯಾನಗಳಲ್ಲಿ ಕೊನೆಯುಸಿರನ್ನೆಳೆದನು.